ಮೊದಲ ಸರ್ಗವನ್ನು ಇಲ್ಲಿ ನೋಡಿ- ಉರ್ವಶೀಜನನವೃತ್ತಾಂತಂ
ಎರಡನೇ ಸರ್ಗವನ್ನು ಇಲ್ಲಿ ನೋಡಿ- ಅಗಸ್ತ್ಯಜನನವೃತ್ತಾಂತಂ
ಮೂರನೇ ಸರ್ಗವನ್ನು ಇಲ್ಲಿ ನೋಡಿ- ಸಾಗರಾಗಮನವೃತ್ತಾಂತಂ
ನಾಲ್ಕನೇ ಸರ್ಗವನ್ನು ಇಲ್ಲಿ ನೋಡಿ- ಸಾಗರಗರ್ವಭಂಗ, ಕಾಲಕೇಯಹನನಂ
ಐದನೇ ಸರ್ಗವನ್ನು ಇಲ್ಲಿ ನೋಡಿ- ಅಗಸ್ತ್ಯವಿವಾಹಂ, ಇಲ್ವಲವಾತಾಪಿಹನನಂ
ಆರನೇ ಸರ್ಗವನ್ನು ಇಲ್ಲಿ ನೋಡಿ- ನಹುಷನಿಂದ್ರನಾದುದುಂ ಶಚೀವೀಕ್ಷಣೆಯುಂ
ನಾಲ್ಕನೇ ಸರ್ಗವನ್ನು ಇಲ್ಲಿ ನೋಡಿ- ಸಾಗರಗರ್ವಭಂಗ, ಕಾಲಕೇಯಹನನಂ
ಐದನೇ ಸರ್ಗವನ್ನು ಇಲ್ಲಿ ನೋಡಿ- ಅಗಸ್ತ್ಯವಿವಾಹಂ, ಇಲ್ವಲವಾತಾಪಿಹನನಂ
ಆರನೇ ಸರ್ಗವನ್ನು ಇಲ್ಲಿ ನೋಡಿ- ನಹುಷನಿಂದ್ರನಾದುದುಂ ಶಚೀವೀಕ್ಷಣೆಯುಂ
~ಸಪ್ತಮಂ
ಸರ್ಗಂ ~
೨೮/೫/೨೦೧೫
ಮಂಜುಭಾಷಿಣೀ||
ವಿರಜಾರ್ಯೆಗಂದು
ತಿಳಿದಾಗಳೀತನಾ-
ತುರಕಾರ್ಯಮುಂ
ಶಚಿಯೊಳಾದ ಕಾಮಮುಂ
ಸ್ಮರಿಸುತ್ತೆ
ದೈವಮನೆ ದುಃಖಿಸಿರ್ದಪಳ್
ಬರೆದಿರ್ಪನೆಂತು
ವಿಧಿಯೆಂದು ಪೇೞುತುಂ ||೧||
(ವಿರಜಾದೇವಿಗೆ
ಇವನ ಆತುರದ ಕಾರ್ಯವೂ ಶಚಿಯಲ್ಲಿ
ಅವನಿಗಾದ ಕಾಮವೂ ತಿಳಿದ ಮೇಲೆ
“ವಿಧಿ ಏನನ್ನು ಬರೆದಿದ್ದಾನೋ
!” ಎಂದು
ದೇವರನ್ನು ಸ್ಮರಿಸುತ್ತಾ
ದುಃಖಿಸಿದಳು)
ನರಲೋಕದೊಳ್
ನೃಪತಿಯಾದವಂ ಧವಂ
ಸುರಲೋಕಕೆಯ್ದು
ಪತಿಯಾದವಂ ಜವಂ
ಸ್ಮರಕಾರಣಕ್ಕೆ
ಕಿಡುತಿರ್ಪನೇನೊ ಮೇಣ್
ವರನಾಕಮಿಂತು
ನರಕತ್ವಕೆಯ್ದಿತೋ!
||೨||
(ಮನುಷ್ಯರ
ಲೋಕದಲ್ಲಿ ರಾಜನಾದವನು ನನ್ನ
ಗಂಡ, ವೇಗದಲ್ಲಿ
ದೇವತೆಗಳ ಲೋಕಕ್ಕೂ ಬಂದು
ರಾಜನಾಗಿದ್ದಾನೆ.
ಮನ್ಮಥನ
ಕಾರಣದಿಂದಾಗಿ ಕೆಡುತ್ತಿದ್ದಾನೆಯೋ!
ವರವಾದ
ಸ್ವರ್ಗವು ನರಕತ್ವವನ್ನು
ಹೊಂದುತ್ತಿದೆಯೋ!)
ಗತಿಯೂರ್ಧ್ವಕಾದೊಡದು
ಸಾಧಿಸಿರ್ಪುದೈ
ಪತಿಯಪ್ಪನಿಂತು
ಪತಿತಂ ಮದಾವಹಂ
ಗತಿಯಾಯ್ತೆ
ನೀಚಕೃತಿಯಿಂದೆ ನೈಚ್ಯಮೇ
ಮತಿಗೋಚರಂ
ಶಚಿ ಪವಿತ್ರಳಲ್ತೆ ತಾಂ ||೩||
(“ನಮ್ಮ
ಗತಿ ಊರ್ಧ್ವಕ್ಕಾದರೆ ಅದು
ಸಾಧಿಸಿದಂತೆ ಆಗುತ್ತದೆ.
ಮದದಿಂದ
ಕೂಡಿದ ಪತಿಯು ಪತಿತನೇ ಆಗುತ್ತಾನೆ.
ಹಾಗಾಗಿ
ನೀಚಕೃತ್ಯದಿಂದ ನೀಚವಾದ (ಅಧೋಮುಖ)ಗತಿಯೇ
ಆಗುತ್ತದೆ.
ಇದೆಲ್ಲವೂ
ಮತಿಗೆ ಗೋಚರವಾಗುತ್ತಿದೆ.
ಶಚಿ
ಪವಿತ್ರಳಾದವಳಲ್ಲವೇ!)
ಎನೆ
ಗಂಡನಂ ಕರೆದು ಕೇಳ್ದುಮಾಕೆಯಂ
ಘನಗಂಡಮಂ
ಕೞಿಯಲೆಂದು ಯಾಚಿಪಳ್
ಮನುಜರ್ಕಳಲ್ತೆ
ಕುತುಕಾನ್ವಿತರ್ಕಳಾ-
ತನ
ಕೋಪದಿಂದೆ ಸತಿ ಮೌನಿಯಾದಳೈ ||೪||
(ಹೀಗೆಂದು
ಗಂಡನನ್ನು ಕರೆದು ಕೇಳಿಯೂ ಆಕೆ
ಗಂಡಾಂತರವನ್ನು ಕಳೆಯಲು ಯಾಚನೆ
ಮಾಡಿದಳು.
ಮನುಷ್ಯರು
ಕುತೂಹಲದಿಂದ ಕೂಡಿದವರಲ್ಲವೇ!
ಆತನ
ಕೋಪದಿಂದ ಇವಳು ಮೌನಿಯಾದಳು)
ಕುತುಕಂಬಡಲ್ಕೆ
ಜನಿಕುಂ ಮದೋನ್ಮದಂ
ಮತಿಯೊಳ್
ಮದಂ ಜನಿಯಿಕುಂ ಕುಕೋಪಮಂ
ಕೃತಕೋಪದಿಂದೆ
ಸುಖನಾಶಮಪ್ಪುದೈ
ಹಿತದೂರಮಪ್ಪನಸುಖಂ
ನೆಗೞ್ದಿರಲ್ ||೫||
(ಕುತೂಹಲದಿಂದ
ಮದವೂ ಉನ್ಮದವೂ ಹುಟ್ಟುತ್ತದೆ.
ಮನಸ್ಸಿನಲ್ಲಿ
ಈ ಮದವು ಕೆಟ್ಟ ಕೋಪವನ್ನು
ಹುಟ್ಟಿಸುತ್ತದೆ.
ಮಾಡಿಕೊಂಡ
ಕೋಪದಿಂದ ಸುಖದ ನಾಶವಾಗುತ್ತದೆ.
ಈ
ಅಸುಖದಿಂದ ಮನುಷ್ಯನು ಹಿತದಿಂದ
ದೂರವಾಗುತ್ತಾನೆ )
ಜಸಮೊಂದು
ಕಾಚಕದ ನುಣ್ಪ ಗೋಳಕಂ
ಬಿಸಜಂಬೊಲಿರ್ಕುಮತಿಕೋಮಲಂ
ಸದಾ
ಕೆಸಱಕ್ಕುಮಲ್ಪಹತಿಯಿಂದಮಿರ್ಪುದುಂ
ಪುಸಿಯಕ್ಕುಮಂತೆ
ಶತಧಾವಿಭಕ್ತಿಯಿಂ ||೬||
(ಯಶಸ್ಸು ಎಂಬುದು
ಗಾಜಿನ ಒಂದು ನುಣ್ಣನೆಯ ಗೋಳ,
ಅದು ಕಮಲದ ಹಾಗೆಯೇ
ಬಹಳ ಕೋಮಲವಾದದ್ದೂ ಆಗಿದೆ.
ಹಾಗಾಗಿ ಯಾವತ್ತೂ
ಅದು ಸ್ವಲ್ಪವೇ ಹೊಡೆತ ಬಿದ್ದರೂ
ಕೆಸರಾಗುತ್ತದೆ, ಹಾಗೂ
ನೂರು ಚೂರುಗಳಾಗಿ (ಅದು
ಇರುವುದೇ) ಹುಸಿ
ಎಂಬಂತಾಗುತ್ತದೆ)
ಅವನಂತು
ಕಯ್ಗೆ ಸಿಗಲಾಱನಾಗಿರ-
ಲ್ಕವಳಿರ್ದಳೈ
ಸುಕೃತಿ ದೈವಪೂಜೆಯೊಳ್
ಕವಿಯಿಂದೆ
ಸಲ್ಗೆ ಸೊಗಮೆಂದು ಬೇಡುವಳ್
ತವೆ
ಭಕ್ತಿಯಿಂದೆ ದಿನದಂತ್ಯದನ್ನೆಗಂ
||೭||
(ಅವನು ಹಾಗೆ ಕೈಗೆ
ಸಿಗಲಾರದಂತೆ ಇರಲು, ಅವಳು
ಒಳ್ಳೆಯ ಕೆಲಸದಲ್ಲಿ ದೈವಪೂಜೆಯಲ್ಲಿ
ತೊಡಗಿದ್ದದಳು. ಬ್ರಹ್ಮನಿಂದ
ಸುಖವು ಸಿಗಲಿ ಎಂದು ದಿನದ ಕೊನೆ
ತನಕವೂ ಭಕ್ತಿಯಿಂದ ಬೇಡುತ್ತಿದ್ದಳು.)
ನೃಪನತ್ತ
ದೂತರನೆ ಮೌನಿಗೇಹಕಂ
ತಪದೊಳ್
ನಿರಂತರದೆ ಸಕ್ತರಾದರಂ
ವಿಪರೀತಮಪ್ಪಕೃತಿಗೆಯ್ದಿವಂದಿರೆಂ
ದಪಹೂತಿಯಿತ್ತು
ಕೞುಪಿರ್ದಪಂ ಸ್ವಯಂ ||೮||
(ಅತ್ತ
ರಾಜನು ಮುನೀಂದ್ರರ ಮನೆಗೆಳಿಗೆ
ದೂತರನ್ನು,
ತಪಸ್ಸಿನಲ್ಲಿ
ನಿರತಂತರವಾಗಿ ಆಸಕ್ತರಾದವರನ್ನು
ವಿಪರೀತವಾದ ಈ ಕೆಲಸಕ್ಕೆ ಸಾಗಿಬನ್ನಿರಿ
ಎಂದು ಸಲ್ಲದ ಆಹ್ವಾನವನ್ನು ಕೊಟ್ಟು
ತಾನೇ ಕಳುಹಿಸಿದ್ದನು)
ಮುನಿವೃಂದಕಂ
ಕರೆದುದಾದೊಡತ್ತಮಾ-
ತನೆ
ಗೇಹದೊಳ್ ಶಚಿಯ ಚಿಂತೆಗಾಂತನೈ
ಜನರೆಲ್ಲರುಂ
ಸುಖದ ಚಿಂತೆಯೊಳ್ ಸದಾ
ದಿನಮಿರ್ಪುದಂ
ಕೞೆದುಕೊಳ್ವರಿಂದಿನೊಳ್ ||೯||
(ಮುನಿಗಳಿಗೆ
ಕರೆಯುವುದು ಆದ ಮೇಲೆ ಮನೆಯಲ್ಲಿ
ಶಚಿಯ ಚಿಂತೆಯನ್ನು ಮಾಡುತ್ತ
ಇದ್ದನು.
ಎಲ್ಲ
ಜನರೂ ಮುಂದಿನ ಸುಖದ ಚಿಂತೆಯಲ್ಲಿ
ಇಂದು ಇರುವ ದಿನವನ್ನು ಕಳೆದುಕೊಳ್ಳುತ್ತಾರೆ)
ಸುಮರಾಜಿಯಿಂದೊಸರೆ
ಸೌರಭಂ ನೃಪಂ
ಕಮನೀಯಮೆಂದು
ಮಱೆಯುತ್ತೆ ಲೋಕಮಂ
ಭ್ರ,ಮರಂಬೊಲತ್ತ
ಮಧುಮತ್ತನಪ್ಪನೈ
ಸುಮನೋವಧೂಟಿಯ
ವಿಚಿತ್ರಲೀಲೆಯೇಂ ||೧೦||
(ಹೂಗಳ ರಾಜಿಯಿಂದ
ಪರಿಮಳವು ಒಸರಿದಾಗ ಅದನ್ನು
“ಕಮನೀಯವಾದದ್ದು” ಎಂದು ಆಸ್ವಾದಿಸಿ
ಲೋಕವನ್ನೇ ಮರೆಯುತ್ತಾನೆ.
ದುಂಬಿಯ ಹಾಗೆಯೇ
ಮಧುಮತ್ತನಾಗುತ್ತಾನೆ.
ದೇವಸುಂದರಿಯ
ವಿಚಿತ್ರವಾದ ಲೀಲೆಯೇನಿದು!)
ಬಿಸಜಂಗಳಂತೆ
ದಿನಮಾಗೆ ಜೃಂಭಿತಂ
ಪೊಸೆಯುತ್ತೆ
ಕಲ್ಪನೆಯ ಸೂತ್ರಮಂ ಗಡಾ
ಸಸಿ
ಬಾನೊಳೆಯ್ದು ನಿಶೆಯಾದೊಡತ್ತಣಿಂ
ದೊಸರ್ಗಲ್ಲವೋಲೆ
ದ್ರವಮಾಗುತಿರ್ದಪಂ ||೧೧||
(ಕಮಲಗಳ ಹಾಗೆಯೇ
ದಿವಸವು ಅರಳಿದಾಗ, ಕಲ್ಪನೆಯ
ದಾರವನ್ನು ಹೊಸೆಯುತ್ತಾ ಇರುತ್ತಿದ್ದನು,
ಚಂದ್ರನು ಅತ್ತ
ಕಡೆಯಿಂದ ಬಾನಿನಲ್ಲಿ ಬಂದು
ರಾತ್ರಿಯಾದಾಗ ನೀರನ್ನು ಸ್ರವಿಸುವ
ಕಲ್ಲಿನಂತೆ ಆರ್ದ್ರನಾಗುತ್ತಿದ್ದನು.
)
ವಿರಹಾಗ್ನಿಯಿಂದೆ
ಪರಿತಾಪಮೊಂದಿದಂ
ವಿರಜಾಪ್ತನೊರ್ಮೆಗಮದೆಂತೊ
ಆಕೆಯಂ
ಸ್ಮರಿಸಿರ್ದುದಿಲ್ಲ
ಶಚಿರೂಪಮೋಹಿತಂ
ಸ್ಮರಬಾಣವಾಯ್ತು
ಸಫಲಂ ನರೇಂದ್ರನೊಳ್ ||೧೨||
(ವಿರಹಾಗ್ನಿಯಿಂದ
ತಾಪವನ್ನು ಹೊಂದುತ್ತಿದ್ದ,
ವಿರಜೆಯ
ಆಪ್ತನಾಗಿದ್ದವನು ಒಮ್ಮೆಗೂ ಅದು
ಹೇಗೋ ಆಕೆಯನ್ನು ಸ್ಮರಿಸಿದ್ದಿಲ್ಲ.
ಶಚಿಯ
ರೂಪದಿಂದ ಮೋಹಿತನಾದ ಈ ನರೇಂದ್ರನಲ್ಲಿ
ಮನ್ಮಥನ ಬಾಣವು ಸಫಲವಾಯ್ತು)
ಶತಯಜ್ಞಕಾರಸತಿಯೆಂತು
ಪೋಲ್ವಳೋ
ರತಿಯಂ
ನೆಗೞ್ದ ಸುರಪಂಗೆ ಮೌಢ್ಯಮೈ
ಕೃತಪುಣ್ಯದಿಂದಮಿವಳಿಲ್ಲಿ
ಸಿಲ್ಕಿರಲ್
ಚ್ಯುತನಾದನಲ್ತೆ
ಖಲಹತ್ಯೆಯಂ ಕೃತಂ ||೧೩||
(ನೂರು
ಯಜ್ಞಗಳನ್ನು ಮಾಡಿದವನ ಹೆಂಡತಿ
ಹೇಗೆ ರತಿಯನ್ನು ಹೋಲುತ್ತಾಳೋ!
ಆ
ಸುರೇಂದ್ರನಿಗೆ ಮೂರ್ಖತನವೇ
ಅಲ್ಲವೇ!
ತಾನು
ಮಾಡಿದ ಪುಣ್ಯದಿಂದ ಇವಳು ಇಲ್ಲಿ
ಸಿಕ್ಕಿರುವಾಗ ಖಲನಾದ ವೃತ್ರನನ್ನು
ಕೊಂದು ಈ ಪುಣ್ಯದಿಂದ ಚ್ಯುತನಾದನು
)
ಸರಸಕ್ಕೆ
ಸಲ್ವಳೊಡನೇಕೆ ಸಂದುದೋ
ವಿರಹಂ
ಗಡಾ ರಿಸಿಗಳೆಂದು ಬರ್ಪರೋ
ವರಮಪ್ಪಮೇನೆಯೊಳಗೆಂದು
ಪೋಪೆನಾ-
ನರರೇ!
ಶಚೀಂದ್ರನೆನಿಪೆಂ
ಬೞಿಕ್ಕಮೇ ||೧೪||
(ಸರಸಕ್ಕೆ
ಸಲ್ಲುವವಳೊಡನೇ ಏಕೆ ವಿರಹವಾಯಿತೋ!
ಈ
ಋಷಿಗಳು ಎಂದು ಬರುತ್ತಾರೋ!
ಆ
ಶ್ರೇಷ್ಠವಾದ ಪಲ್ಲಕ್ಕಿಯಲ್ಲಿ
ಯಾವತ್ತು ಹೋಗುತ್ತೇನೆಯೋ!
ಅರರೇ!
ಆ
ಬಳಿಕವೇ ನಾನು ಶಚೀಂದ್ರ(ಶಚಿಗೆ
ಒಡೆಯ)
ಎಂದಾಗುತ್ತೇನೆ)
ಹರಗೌರಮಸ್ತಕದ
ರತ್ನಮಾಗಿಯುಂ
ಪೆಱೆಯೇತಕಿಂದು
ಪರಿತಾಪಮೀವನೋ
ಮಱೆಯಪ್ಪುದೆಂತು
ಗುಣಮೆಯ್ದುದಾದಿಯೊಳ್
ಪರಿದತ್ತೆ
ನೀರ್ ಕೆಳಗಿನಿಂದೆ ಮೇಲೆ ತಾಂ
||೧೫||
(ಶಿವನ
ತಲೆಯ ಮೇಲಿನ ರತ್ನವಾಗಿಯೂ ಈ
ಚಂದ್ರನು ಏಕೆ ತಾಪವನ್ನು
ಕೊಡುತ್ತಿದ್ದಾನೆಯೋ!
ಮೊದಲು
ಇರುವ ಗುಣ ಹೇಗೆ ಮರೆಯಾಗುತ್ತದೆ!
ನೀರು
ಕೆಳಗಿನಿಂದ ಮೇಲೆ ಹರಿಯುವುದುಂಟೇ!)
ಸೊಗದಿಂದೆ
ಚಂದನದ ಲೇಪದಿಂದೆಯುಂ
ಪುಗುತಿರ್ದುದಲ್ತೆ
ಬಿಸುಪಂತು ದೇಹಕಂ
ನಗುತಿರ್ಪರಪ್ಸರೆಯರಿರ್ದುಮಾಗದಿ-
ರ್ದುಗುತಿರ್ದುದಾತನ
ಮನೋಭಿಲಾಷೆ ದಲ್ ||೧೬||
(ಸೊಗಸಾಗಿ
ಚಂದನದ ಲೇಪನದಿಂದಲೂ ದೇಹದೊಳಕ್ಕೆ
ಬಿಸಿಯು ಹೊಗುತ್ತಿತ್ತು.
ನಗುತ್ತಿರುವ
ಅಪ್ಸರೆಯರು ಇದ್ದರೂ ಆಗದೇ ಅವನ
ಮನಸ್ಸಿನ ಅಭಿಲಾಷೆ ಉಕ್ಕುತ್ತಿತ್ತು)
ಎದುರಿರ್ಪ
ದರ್ಪಣದೆ ಭಿತ್ತಿಚಿತ್ರದೊಳ್
ಮುದಮೀವ
ಶಿಲ್ಪದೊಳಗಲ್ಲಿ ಕಂಡಳೈ
ಮದನೋತ್ಸುಕಂಗವಳ
ಕಾಣ್ಕೆಯಿಂದಿದೇಂ
ಹೃದಯಕ್ಕೆ
ಶೂಲದಿಱಿತಂಬೊಲಾದುದೇ ||೧೭||
(ಎದುರಿನಲ್ಲಿದ್ದ
ಕನ್ನಡಿಯಲ್ಲಿ,
ಭಿತ್ತಿಚಿತ್ರಗಳಲ್ಲಿ,
ಸಂತೋಷವನ್ನು
ಕೊಡುವ ಶಿಲ್ಪಗಳಲ್ಲಿ ಮದನೋತ್ಸುಕನಾದ
ಆತನಿಗೆ ಅವಳೇ ಕಾಣುತ್ತಿದ್ದಳು.
ಅವಳ
ಕಾಣುವಿಕೆಯಿಂದ ಇದೇನು ಅವನ
ಹೃದಯಕ್ಕೆ ಶೂಲದ ಇರಿತವೆಂಬಂತೆ
ಆಗುತ್ತಿದೆಯೇ!)
ಕ್ಷಣಮೊಂದು
ತೋರ್ದುದು ಯುಗಂಬೊಲಾತನೀ-
ಕ್ಷಣೆ
ಮಂಕಿನಿಂದಿರೆ ಕೊರಂಗುತಿರ್ದಪಂ
ಗಣಿಸಲ್ಕೆ
ಶೂನ್ಯಮಿದೆನುತ್ತೆ ದುಃಖಿಪಂ
ಮಣಿದಿರ್ಪನಲ್ತೆ
ಮದನಂಗಮಾ ನೃಪಂ ||೧೮||
(ಒಂದು
ಕ್ಷಣವು ಅವನಿಗೆ ಒಂದು ಯುಗದಂತೆ
ತೋರುತ್ತಿತ್ತು.
ಅವನ
ವೀಕ್ಷಣೆಯು ಮಂಕಾಗುತ್ತ ಅವನು
ಕೊರಗುತ್ತಿದ್ದನು.
ಇದೆಲ್ಲವು
ಶೂನ್ಯವಾಗಿದೆ ಎಂದು ದುಃಖಿಸುತ್ತಿದ್ದನು.
ಆ
ನೃಪನು ಮದನನಿಗೆ ಮಣಿದಿದ್ದನು)
ಪರಿವೀಕ್ಷಿಸಲ್
ಶಚಿಯ ಪುರ್ವವಿಲ್ಲಿನಿಂ
ಸ್ಮರನೊಂದೆ
ಬಾಣದೊಳೆ ಬೇಧಿಸಿರ್ದಪಂ
ಮಱುವಾತಿನಿಂದೆ
ಪೆದೆಯಾಯ್ತು ಕರ್ಷಿತಂ
ಸ್ವರಮಾಗಲಂತದುವೆ
ಚಿತ್ತಬೇಧಕಂ||೧೯||
(ಶಚೀದೇವಿಯ
ಹುಬ್ಬುಗಳೆಂಬ ಬಿಲ್ಲಿನಿಂದ
ಮನ್ಮಥನು ಒಂದೇ ಬಾಣದಲ್ಲಿ
ಬೇಧಿಸಿದ್ದನು,
ಅವಳ
ಮರುಮಾತಿನಿಂದ ಬಿಲ್ಲಿನ ಹೆದೆ
ಎಳೆದಂತಾಯ್ತು,
ಅವಳ
ಧ್ವನಿಯೇ ಚಿತ್ತವನ್ನು ಬೇಧಕವಾಯಿತು)
ದಿನಕೆಂದು
ಕಾದು ಮರುಳಾದನಾ ನೃಪಂ
ಮುನಿಗಳ್ಗೆ
ಪೇೞ್ದ ತೆಱನೆಲ್ಲ ಬಂದೊಡಂ
ಮನದೊಳ್
ಜಗುಳ್ದ ಖಲವಾಂಛೆಯಿಂದವಂ
ಮುನಿದಿರ್ದನೆಲ್ಲರೊಳೆ
ಪುರ್ಚೆ ಬಲ್ಮೆಯೋ!
||೨೦||
(ಹಗಲಾಗುವುದನ್ನೇ
ಕಾಯುತ್ತ ಮರುಳಾಗಿದ್ದ ಆ ರಾಜ,
ಮುನಿಗಳಿಗೆ
ಹೇಳಿದಂತೆ ಅವರೆಲ್ಲ ಬಂದಾಗ ತನ್ನ
ಮನಸ್ಸಿನಲ್ಲಿ ಹುಟ್ಟಿದ ಕೆಟ್ಟ
ಆಸೆಯಿಂದ ಎಲ್ಲರ ಮೇಲೂ ಮುನಿಸು
ಮಾಡಿಕೊಂಡಿದ್ದ.
ಹುಚ್ಚೇ
ಹಿರಿತನವೋ!)
ಬೆಳಗಾದೊಡಂ
ಋಷಿಗಳೇೞ್ವರೆಯ್ದಿದರ್
ನಲವಿಂದಮಾ
ನಹುಷನೆೞ್ದು ಸಿದ್ಧನಾ-
ಗುಲಿದಂ
ಸ್ವಶಾಸನಮನೆಲ್ಲ ನಿರ್ಜರ-
ರ್ಗಳವಿಲ್ಲದಾಯ್ತು
ಮದಕಂ ಸಕಾಮನಾ ||೨೧||
(ಬೆಳಗಾಗುತ್ತಿದ್ದಮತೆಯೇ
ಏಳು ಜನ ಋಷಿಗಳೂ ಬಂದರು.
ಸಂತೋಷದಿಂದ
ನಹುಷನೂ ಸಿದ್ಧನಾಗಿ ತನ್ನ ಶಾಸನವನ್ನು
ಎಲ್ಲ ದೇವತೆಗಳಿಗೂ ಹೇಳಿದನು.
ಈ
ಕಾಮಿಯ ಮದಕ್ಕೆ ಅಳವಿಲ್ಲದಾಯಿತು.)
ಇರಲತ್ತಲಾ
ಸುರಪುರಂದರಂ ಪರಾ-
ತ್ಪರನೆಂದವೋಲೆ
ಹಯಮೇಧದಿಂದೆ ಮೇಣ್
ವರುಣಾಗ್ನಿಯರ್ಕಳ
ಸಹಾಯ್ಯದಿಂದೆ ತಾ-
ನಱಗೊಂಡು
ಪಾಪಮನೆ ನಾಶಿಸಿರ್ದಪಂ ||೨೨||
(ಹೀಗಿರಲು ಅತ್ತ
ಆ ದೇವನಾದ ಇಂದ್ರನು ಪರಾತ್ಪರನಾದ
ಬ್ರಹ್ಮ ಹೇಳಿದಂತೆಅಶ್ವಮೇಧದಿಂದಲೂ
ಅಗ್ನಿ ಹಾಗೂ ವರುಣರ ಸಹಾಯದಿಂದಲೂ
ತಾನು ಧರ್ಮವನ್ನು ಹಿಡಿದುಕೊಂಡು
(ಬ್ರಹ್ಮಹತ್ಯೆಯ)
ಪಾಪವನ್ನು
ನಾಶಮಾಡಿದ್ದನು )
೩೦/೦೫/೨೦೧೫
ಶಿಬಿಕೋತ್ಸವಕ್ಕೆ
ಸುರರೆಲ್ಲರೆಯ್ದಿದರ್
ಸಬಲರ್
ಸುರರ್ ಮುನಿಗಳಂತೆ ಲೋಕದಿಂ-
ದಬಲಾವಿಲೋಲನೃಪದರ್ಪವೀಕ್ಷೆಗೆಂ-
ದು
ಬೃಹತ್ಸಭಾಸ್ಥಲಮೆ ಸಂದುದಲ್ಲಿಯೇ
||೨೩||
(ಶಿಬಿಕೋತ್ಸವಕ್ಕೆ
ದೇವತೆಗಳೆಲ್ಲರೂ ಬಂದಿದ್ದರು.
ಬಲಶಾಲಿಗಳಾದ
ದೇವತೆಗಳು, ಮುನಿಗಳು
ಹಾಗೆಯೇ ಬಂದವರ ಲೋಕದಿಂದ ಅಬಲೆಯಲ್ಲಿ
ವಿಲೋಲನಾದ ಈ ರಾಜನನ್ನು ನೋಡಲು
ನೋಡುವುದಕ್ಕೆ ದೊಡ್ಡ ಸಭಾಸ್ಥಲವೇ
ಅಲ್ಲಿ ಆಗಿತ್ತು)
ಕನಕಾಂಚಿತಂ
ಶಿಬಿಕೆ ಪೂಜ್ಯಮೆಂಬುದಂ
ಮುನಿಗಳ್
ಸಮರ್ಚಿಸಿ ಬೞಿಕ್ಕಮಂಬುಜಾ-
ಸನನೆಂತು
ಲೇಖಿಸಿದನಂತುಟಪ್ಪುದೆಂ-
ದೆನುತೆತ್ತಿದರ್
ನಹುಷನಿಂದೆ ಸಂದುದಂ ||೨೪||
(ಬಂಗಾರದಿಂದ
ಆದ ಶಿಬಿಕೆ(ಪಲ್ಲಕ್ಕಿ)
ಪೂಜ್ಯವೆಂದು
ಮುನಿಗಳೆಲ್ಲರೂ ಅದನ್ನು ಅರ್ಚಿಸಿ
ಆ ಬಳಿಕ ಬ್ರಹ್ಮ ಬರೆದಂತೆ ಆಗುತ್ತದೆ
ಎಂದು ನಹುಷ ಕುಳಿತುಕೊಂಡ ಆ
ಪಲ್ಲಕ್ಕಿಯನ್ನು ಎತ್ತಿದನು )
ಹರಿದಶ್ವನಂತೆ
ಹಯಸಪ್ತಸಂಯುತಂ
ಚರಿಪಾಗಳಾ
ಎಸಕದಿಂದೆ ರಾಜಿತಂ
ವರಮಾ
ಸುವರ್ಣಮಯವಾಹಮಿರ್ದುದೈ
ಕರಮಾಗಿ
ಚಿತ್ರಮೆನಿಪಂತೆ ನೋೞ್ಪೊಡಂ
||೨೫||
(ಸೂರ್ಯನಂತೆ
ಏಳು ಕುದುರೆಗಳಿಂದ ಕೂಡಿದವನಂತೆ
ಚಲಿಸುತ್ತಿರುವಾಗ ಆ ಕಾಂತಿಯಿಂದ
ಶೋಭಿಸುತ್ತಿದ್ದನು.
ಬಂಗಾರದ
ಆ ವಾಹನವು ಶ್ರೇಷ್ಠವಾಗಿ ಚೆನ್ನಾಗಿ
ಶೋಭಿಸುತ್ತಾ ನೋಡಲು ಚಿತ್ರವಾಗಿತ್ತು
(ಆಶ್ಚರ್ಯಜನಕ/ವರ್ಣಚಿತ್ರ
))
ಶಚಿಯಿರ್ದಳತ್ತ
ನಹುಷೇಕ್ಷಣಕ್ಕೆ ಮೇಣ್
ಶುಚಿಯಂತ್ಯಮಪ್ಪ
ಭಯದಿಂ ಬೆಮರ್ದಪಳ್
ರುಚಿಹೀನಳಾಗಿ
ಪೆಣನಂತೆ ವಕ್ತ್ರದೊಳ್
ವಿಚಲನ್ಮನೋಭವನ
ಕೃತ್ಯಪೀಡಿತಳ್ ||೨೬||
(ಅತ್ತ
ಇದ್ದ ಶಚೀದೇವಿಯು ನಹುಷನಿಂದ
ತನ್ನ ಶುಚಿ ನಾಶವಾಗುತ್ತದೆ ಎಂಬ
ಭಯದಿಂದ ಬೆವರುತ್ತಿದ್ದಳು.
ಹೆಣದಂತೆ
ಕಾಂತಿಯನ್ನು ಕಳೆದುಕೊಂಡ ಮುಖದಿಂದ
(ನಹುಷನ
ಮೇಲೆ ಮಾಡಿದ ಈ)
ಮನ್ಮಥನ
ಕೃತ್ಯದಿಂದ ಪೀಡಿತಳಾಗಿ
ಕಾಣುತ್ತಿದ್ದಳು.)
ಅವಳೊಪ್ಪಿರಲ್ಕೆ
ವರವಾಹದಿಂದೆ ಸಂ-
ದವನಾಗಿ
ಸೇರ್ದಪನೆ ಜಾತರೂಪದಿಂ
ತವೆ
ಸಂದಲಂಕೃತಿಯ ಸಗ್ಗವೆಣ್ಣನಾಂ
ಸವಿಯಲ್ಕೆ
ಭೋಗಮಿದು ಪೂರ್ಣಮಪ್ಪುದೈ ||೨೭||
(ಅವಳು
ಒಪ್ಪಿರಲು,
ಈ
ಶ್ರೇಷ್ಠವಾದ ವಾಹನದಿಂದ ಸಾಗಿ
ಹೋಗಿ ಅವಳನ್ನು ಸೇರುತ್ತೇನೆಯೇ!
ಜಾತರೂಪದಿಂದ
(ಬಂಗಾರದಿಂದ/
ಹುಟ್ಟಿದಾಗ
ಇರುವ ರೂಪದಿಂದ)
ಅಲಂಕಾರ
ಗೊಂಡ ಆ ಸ್ವರ್ಗದ ಹೆಣ್ಣನ್ನು
ಸವಿದರೆ ಈ ಭೋಗವು ಪೂರ್ಣವಾಗುವುದು)
ಎನುತಿರ್ದನೊಳ್ಪ
ಬಗೆಯುತ್ತುಮತ್ತಣಿಂ
ಘನಮೌನಿವಾಹದೊಳಗಿತ್ತ
ಸಾಗುತುಂ
ಜನರೆಂತೊ
ಸಿಂಗರಿಸಿ ದೇವಿಗೀವರೈ
ಮುನಿದಿರ್ಪಳೆಂದೆನುತೆ
ಪೋತಮಂ ಗಡಾ ||೨೮||
(ಹೀಗೆ
ಒಳ್ಳೆಯದನ್ನು ಮನಸ್ಸಿನಲ್ಲೇ
ಯೋಚಿಸುತ್ತಾ,
ಅತ್ತಣಿಂದ
ಸಪ್ತರ್ಷಿಗಳ ವಾಹನದಲ್ಲಿ ಸಾಗುತ್ತಾ
ಎಂದುಕೊಳ್ಳುತ್ತಿದ್ದ.
ದೇವಿ
ಮುನಿದಿದ್ದಾಳೆ ಎಂದು ಹೋತವನ್ನು
ಸಿಂಗರಿಸಿಯೇ ಜನರು ದೇವಿಗೆ
ಬಲಿಯನ್ನು ಕೊಡುವುದಿಲ್ಲವೇ!)
ಇದು
ಸಂದುದಲ್ತೆ ಮಿಗೆ ಗ್ರಾಮ್ಯಮೆಂಬವೊಲ್
ಬಿದಿಯಂತಿರಲ್ಕೆ
ತಡೆಯಲ್ಕೆ ಸಾಲ್ಗುಮೇ
ಮದನೋನ್ಮದಂ
ಬಗೆಯೊಳೆಂತೊ ಪೆರ್ಚಿರಲ್
ಬೆದೆ,
ಸರ್ಪ
ಸರ್ಪ ಎನುತಿರ್ಪನಾ ನೃಪಂ ||೨೯||
(ಇದು ಗ್ರಾಮ್ಯವಾದುದ್ದಲ್ಲವೇ!
ವಿಧಿಯೇ ಹಾಗಿರುವಾಗ
ತಡೆಯಲು ಸಾಧ್ಯವೇ! ಮದನನ
ಹುಚ್ಚು ಮನಸ್ಸಿನಲ್ಲಿ ಹೇಗೋ
ಕಾವು ಹೆಚ್ಚಾಗಿರಲು “ಸರ್ಪ ಸರ್ಪ
ಎಂದು ಹೇಳುತ್ತಿದ್ದನು. )
ಪದಕಿರ್ಪುದಲ್ತೆ
ಯುಗಲಾರ್ಥಮೊಂದೆನ-
ಲ್ಕದು
ಬೇಗಮೆಂದು ಮಗದೊಂದು ಪಾವೆನಲ್
ಹೃದಯಕ್ಕೆ
ಪೊಕ್ಕ ಮದನಾಂಬುಪೀಡೆಯಿಂ-
ದದನೆಂತೊ
ತಾನಱಿಯದಂತೆ ಪೇೞ್ದಪಂ ||೩೦||
(ಈ
ಸರ್ಪ ಎಂಬ ಶಬ್ದಕ್ಕೆ ಎರಡು
ಅರ್ಥಗಳಿವೆ.
ಒಂದು
"ಬೇಗ”
ಎಂದಾದರೆ ಇನ್ನೊಂದು "ಹಾವು”
ಎಂಬರ್ಥ.
ಹೃದಯಕ್ಕೆ
ಹೊಕ್ಕ ಮದನನ ಬಾಣದ ಪೀಡೆಯಿಂದ
ಅದನ್ನು ತಿಳಿಯದೇ ತಾನು ಹೀಗೆ
ಹೇಳಿದನು )
ಅತಿಕುಬ್ಜನೀ
ಮುನಿಯಗಸ್ತ್ಯನೆಂಬುದುಂ
ಧೃತಭಾರದಿಂ
ಶಿಬಿಕೆಯೞ್ದು ಬಿೞ್ದು ಸಾ-
ರಿತೆ!
ಹೀನನೀತನೆನುತಂತು
ಮಸ್ತಕ-
ಕ್ಕೆ
ತೆ! ಸರ್ಪ
ಸರ್ಪ ಚಲಯೆಂದುಮೊದ್ದಿರಲ್ ||೩೧||
(ಈ
ಅಗಸ್ತ್ಯ ಮುನಿಯು ಅವರಲ್ಲಿ
ಕುಬ್ಜನಾಗಿದ್ದನು,
ಅಲ್ಲದೇ
ಹೊತ್ತ ಭಾರದಿಂದ ಆ ಶಿಬಿಕೆ ಎದ್ದು
ಬಿದ್ದು ಸಾಗುತ್ತಿದೆಯೇ!
ಇವನು
ಹೀನನೆಂದು ಅವನ ತಲೆಗೆ "ತೆಗೆ!
ಸರ್ಪ
ಸರ್ಪ ಚಲ(ಹೋಗು)”
ಎಂದು
ಒದ್ದಾಗ..)
ಎಲೊ!
ಸರ್ಪ
ಏವ ಭವ ಯೆಂದು ಪೇೞ್ದಪಂ
ಸಲೆ
ಶಾಪದಿಂದಮಿೞಿಬಿಟ್ಟು ಮೇನೆಯಂ
ಮಲೆಗಾಡೊಳೆಯ್ದು
ಘನಸರ್ಪದಂದದಿಂ
ನೆಲೆಸಿರ್ದನಾ
ನಹುಷನಂದು ಬಿೞ್ದಪಂ ||೩೨||
("ಎಲವೋ!
ಸರ್ಪ
ಏವ ಭವ”(ಸರ್ಪವೇ
ಆಗು) ಎಂದು
ಹೇಳಿದನು,
ಈ
ಶಾಪದಿಂದ ಮೇನೆಯನ್ನು ಇಳಿಸಿ
ಬಿಟ್ಟನು.
ಬೆಟ್ಟದ
ಕಾಡಿನಲ್ಲಿ ದೊಡ್ಡ ಸರ್ಪದಂತೆ
ಆ ನಹುಷನು ಬಿದ್ದುಕೊಂಡು ಉಳಿದನು)
ಕ್ಷಮೆಗರ್ಹನಾಂ
ಮುನಿಯೆ ತಾಳ್ದು ಶಾಂತಿಯಂ
ಕ್ಷಮಿಸಂತು
ನೀಂ ಮುನಿಯೆಯಲ್ತೆ ಕಾಮದಿಂ
ಮಮಕಾರ್ಯಮಾಯ್ತಧಮಮಿಂತು
ಬಲ್ಲೆನಾಂ
ಕ್ರಮದಿಂದೆ
ಪುಣ್ಯಚಯಕಿಂತ ಪೆರ್ಚಿತೇಂ ||೩೩||
(“ಮುನೀಂದ್ರನೇ!
ನಾನು
ಕ್ಷಮೆಗೆ ಅರ್ಹನಾದವನು,
ಶಾಂತಿಯನ್ನು
ತಾಳು, ನನ್ನನ್ನು
ಕ್ಷಮಿಸು,
ನೀನು
ಕೋಪಗೊಳ್ಳುವುದಿಲ್ಲ ಅಲ್ಲವೇ!
ಕಾಮದಿಂದ
ನನ್ನ ಕಾರ್ಯವು ಅಧಮಕಾರ್ಯವಾಯಿತು
ಎಂದು ನನಗೆ ತಿಳಿಯಿತು,
ಇದು
ಪುಣ್ಯದ ರಾಶಿಗಿಂತಲೂ ಹೆಚ್ಚಾಯಿತೇ!”)
ಫಲಮಾದುದೆನ್ನ
ರುಷೆಯೆಂಬ ವಲ್ಲಿಯೊಳ್
ಖಲಮಪ್ಪ
ಕಾಮಮದೆ ಸಾರಮಾಗಿರಲ್
ಬೆಳೆದಿರ್ದುದಲ್ತೆ
ನಿಜಜೀವನಾಶ್ರಿತಂ
ಕಳೆದಿರ್ದುದಿಂದದಕೆ
ಮೋಹಕಾಂತಿಯುಂ ||೩೪||
(ನನ್ನ
ಕೋಪವೆಂಬ ಬಳ್ಳಿಯಲ್ಲಿ ಕೆಟ್ಟ
ಕಾಮವೇ ಸಾರವಾಗಿರುವ ಫಲವು ಹುಟ್ಟಿತು.
ನನ್ನ
ಜೀವನವನ್ನು (ನೀರನ್ನು)
ಆಶ್ರಯಿಸಿ
ಇದು ಬೆಳೆಯಿತು.
ಇಂದು
ಅದಕ್ಕೆ ಮೋಹದ ಕಾಂತಿಯು ಕಳೆಯಿತು)
ಗುರುವೇ!
ಪ್ರಸನ್ನನೆನಿಸುತ್ತೆ
ಕಾವುದೈ
ಹರಿವಂಶಿಯಲ್ತೆ
ಭುಜಗಸ್ವರೂಪಕೆಂ-
ತರಿಯಕ್ಕುಮೆನ್ನ
ತಪದೆಲ್ಲ ಸತ್ಫಲಂ
ಪರಿಹಾರಮೆಂದೆನುತೆ
ಬೇಡಿರಲ್ ನೃಪಂ ||೩೫||
(ಗುರುವೇ!
ಪ್ರಸನ್ನನಾನಿಗೆ
ಕಾಪಾಡಬೇಕು.
ನಾನು
ಹರಿವಂಶಿ(ಹರಿ=ಚಂದ್ರ/ಹಾವು)
ಅಲ್ಲವೇ?
ನನ್ನ
ತಪಸ್ಸಿನ ಎಲ್ಲ ಸತ್ಫಲವು
ಹಾವಿನ ಸ್ವರೂಪಕ್ಕೆ
ಹೇಗೆ ಶತ್ರುವಾಗುತ್ತದೆ!
ಪರಿಹಾರವು
ಎಂದಾಗುತ್ತದೆ” ಎಂದು ನಹುಷನು
ಬೇಡಿದಾಗ..)
ನೃಪ!
ನಿನ್ನ
ಚಿತ್ತದೊಳಗಿರ್ಪ ದೋಷದಿಂ
ತಪಿಪಂತೆ
ಶಾಪಮೊದವಿರ್ಪುದಲ್ಲಿರಲ್
ನೃಪನೆಯ್ದಿವರ್ಪನಱನಾ
ಮಗಂ ಗಡಾ
ಅಪಭೀಪ್ಸೆಯಿಂದನುಜರೊಂದಿಗಾಗಳೇ
||೩೬||
(ನೃಪನೇ!
ನಿನ್ನ
ಮನಸ್ಸಿನಲ್ಲಿರುವ ದೋಷದಿಂದ
ನಿನಗೆ ಹೀಗೆ ಪರಿತಪಿಸುವಂತೆ
ಶಾಪವು ಒದಗಿತು.
ನೀನು
ಅಲ್ಲಿ ಇರುವಾಗ ಯಮನ ಮಗನಾದ
ಧರ್ಮರಾಜ(ಯುಧಿಷ್ಠಿರ)
ನೀರಿನ
ಅಭೀಪ್ಸೆಯಿಂದ ಅಲ್ಲಿಗೆ ಬರುತ್ತಾನೆ.
ಆಗಳೇ..)
ಪಥಮಿಂತೆನುತ್ತೆ
ಸಲೆ ಪೇೞ್ದು ನೀನವರ್
ಪ್ರಥಿತರ್ಕಳಾಗಿ
ಪೊರಮಟ್ಟೊಡಂ ಗಡಾ
ವ್ಯಥೆ
ಪೋಕುಮಂತೆ ಯಮಪುತ್ರಸದ್ಗುಣ
ಗ್ರಥನಕ್ಕೆ
ಪ್ರಶ್ನೆಗಳನೀಯೆ ಮೋಕ್ಷಮೈ ||೩೭||
("ಹೀಗೆ
ದಾರಿ” ಎಂದು ನೀನು ಹೇಳಿ,
ಅವರು
ಪ್ರಸಿದ್ಧರಾಗಿ ಹೊರಟ ಮೇಲೆ,
ನಿನ್ನ
ವ್ಯಥೆ ಹೋಗುತ್ತದೆ.
ಯಮಪುತ್ರನ
ಸದ್ಗುಣಗಳನ್ನು ಹೇಳುವಂತಹ
ಪ್ರಶ್ನೆಗಳನ್ನು ಕೊಡುವುದರಿಂದ
ನಿನಗೆ ಬಿಡುಗಡೆ ಸಿಗುತ್ತದೆ"
)
ಎನಲಾಃ
ಪ್ರಸಾದಮಿದು ಧನ್ಯನಾದಪೆಂ
ಘನಕಾರ್ಯಕಾದೆನಲ
ಸೂತ್ರದಂದದಿಂ-
ದೆನುತೆಯ್ದಿರಲ್ಕೆ
ನಹುಷಾಖ್ಯನತ್ತಣಿಂ-
ದಿನನಂತೆ
ಸಾರ್ದನೆ ಶಚೀಪನಲ್ಲಿಗಂ ||೩೮||
(ಅಗಸ್ತ್ಯರು
ಹೀಗೆನ್ನಲು “ಆಃ!
ಇದು
ಪ್ರಸಾದವು,
ನಾನು
ಧನ್ಯನಾದೆನು,
ಘನವಾದ
ಕಾರ್ಯಕ್ಕೆ ನಾನೂ ಒಂದು ಸೂತ್ರವಾದೆ.”
ಎಂದು
ಹೇಳುತ್ತ ನಹುಷನು ಹೋಗಲು ಅತ್ತಣಿಂದ
ಸೂರ್ಯನಂತೆ ಶಚಿಯ ಪತಿಯಾದ ಇಂದ್ರನು
ಬಂದನು )
ದ್ರುತವಿಲಂಬಿತ||
ಸುರಪನಾಸನಕಾತನೆ
ಬಂದೊಡಂ
ಹರಿಹರಾದಿಗಳೆಲ್ಲರೆ
ತೋಷದಿಂ
ವರಮಿದಾದುದೆನುತ್ತಿರೆ
ಬರ್ದಿಲರ್
ಪರಸಿದರ್
ನಹುಷಂಗೆ ಶುಭಂಗಳಂ ||೩೯||
(ದೇವೇಂದ್ರನ
ಆಸನಕ್ಕೆ ಆತನೇ ಬಂದಾಗ ಹರಿಹರಾದಿಗಳೆಲ್ಲರೂ
ಸಂತೋಷದಿಂದ ಇದು ಒಳ್ಳೆಯದಾಯಿತು
ಎಂದು ದೇವತೆಗಳೆಲ್ಲ ಹೇಳುತ್ತಿರುವಾಗ
ನಹುಷನಿಗೂ ಒಳ್ಳೆಯದಾಗಲಿ ಎಂದು
ಹರಸಿದರು)
ನಡೆದು
ಕಾನನಕಾ ನೆನಪಿಂದಿವರ್
ತಡೆದಗುಳ್ದು
ತಗುಳ್ದು ತಪಸ್ಸಿಗಂ
ಕುಡೆ
ವಿಚಿತ್ರದ ಚಿತ್ತದ ಬಲ್ಪ ಕಿ-
ತ್ತಡಿಗಳಾದರಲಾದರಮೊಂದುತುಂ
||೪೦||
(ಈ ನೆನಪಿನಿಂದ
ಅಗೆದು ಕಾಡಿಗೆ ನಡೆದು ತಪಸ್ಸಿಗೆ
ತೊಡಗಿ, ವಿಚಿತ್ರವಾದ
ಮನಸ್ಸಿನ ಬಲ್ಮೆಯನ್ನು ಕೊಡುತ್ತಾ
ಆದರವನ್ನು ಹೊಂದುತ್ತ ಕಿತ್ತಡಿಗಳು
(ತಪಸ್ವಿಗಳು)
ಆದರು. (ಈ
ಪದ್ಯದಲ್ಲಿ ಯಮಕವನ್ನು ಗಮನಿಸಬಹುದು-
ಕಾನನಕಾ ನೆನ..,
ಅಗುಳ್ದು ತಗುಳ್ದು
ತ...ಗಳಾದರಲಾದರ...)
)
||ಇಂತು
ನಹುಷಶಾಪಪ್ರಾಪ್ತಿಯೆಂಬ ಸಪ್ತಮಂ
ಸರ್ಗಂ||
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ