ಮೊದಲ ಸರ್ಗವನ್ನು ಇಲ್ಲಿ ನೋಡಿ- ಉರ್ವಶೀಜನನವೃತ್ತಾಂತಂ
ಎರಡನೇ ಸರ್ಗವನ್ನು ಇಲ್ಲಿ ನೋಡಿ- ಅಗಸ್ತ್ಯಜನನವೃತ್ತಾಂತಂ
ಮೂರನೇ ಸರ್ಗವನ್ನು ಇಲ್ಲಿ ನೋಡಿ- ಸಾಗರಾಗಮನವೃತ್ತಾಂತಂ
~ ಚತುರ್ಥಂ ಸರ್ಗಂ ~
೨೪-೦೫-೨೦೧೫
ವಸಂತತಿಲಕ||
ವಸಂತತಿಲಕ||
ಶ್ರೀಯೆಂಬ
ಪುತ್ರಿಯನದೋ ಹರಿ ಕೊಂಡು ಪೋದಂ
ಬಾಯೆಂದು
ಪುತ್ರ ಶಶಿಯಂ ಶಿವನಿಟ್ಟುಕೊಂಡಂ
ಹಾ!ಯೆಂದು
ದುಃಖಿಪವೊಲೀಗಳೆ ರಾವದಿಂದಂ
ಸ್ವೀಯಾಂಬುರಾಶಿಯೊಳೆ
ಸಾಗರನಿರ್ದನತ್ತಲ್ ||೧||
(ಅಲ್ಲಿ
ತನ್ನ ಮಗಳಾದ ಶ್ರೀ-
ಲಕ್ಷ್ಮಿಯನ್ನು
ಹರಿ ತೆಗೆದುಕೊಂಡು ಹೋದ,
“ಬಾ”
ಎಂದು ಮಗನಾದ ಚಂದ್ರನನ್ನು ಶಿವ
ಇಟ್ಟುಕೊಂಡ.
ಹೀಗಾಗಿ
ಮಕ್ಕಳನ್ನು ಕಳೆದುಕೊಂಡು "ಹಾ!”
ಎಂದು
ದುಃಖಿಸುವ ಹಾಗೆ ಶಬ್ದದಿಂದ ತನ್ನ
ನೀರಿನ ರಾಶಿಯಲ್ಲಿ ಸಮುದ್ರನಿದ್ದ)
ನಾನಾತಿಮಿಂಗಿಲನಿಭಾಶ್ರಯದಾತನಾದೆಂ
ಮಾನಿಪ್ಪ
ಪುಣ್ಯನದಿಯಿಂ ಮಧುರಾಪಮಂ ಕೊಂ-
ಡೀ
ನೀರಿನೊಳ್ ಬೆಱೆಸುತುಪ್ಪೆನಿಪಂತೆ
ಗೆಯ್ದೆಂ
ಮೌನಾರಿಯಾಂ
ಸುಜನದೂರನೆನುತ್ತೆ ಪೇೞ್ದಂ
||೨||
("ಹಲವಾರು
ತಿಮಿಂಗಿಲಗಳಂತಹವುಗಳಿಗೆ
ಆಶ್ರಯದಾತನಾದೆ,
ಚೆನ್ನಾಗಿರುವ
ಪುಣ್ಯನದಿಗಳಿಂದ ಸಿಹಿಯಾದ ನೀರನ್ನು
ತೆಗೆದುಕೊಂಡು ಈ ನೀರಿನಲ್ಲಿ
ಬೆರೆಸಿ ಉಪ್ಪು ಎನಿಸುವಂತೆ
ಮಾಡುತ್ತಿದ್ದೇನೆ,
ಮೌನಕ್ಕೆ
ನಾನು ಶತ್ರು,
ಸುಜನರಿಂದ
ದೂರನಾದವನು” ಎಂದು (ಸಮುದ್ರನು)
ಹೇಳುತ್ತಿದ್ದನು.)
ಪಾತಾಳಲೋಕಚರರಾಕ್ಷಸಸಂಕುಲಕ್ಕಂ
ವಾತಾಯನಂಬೊಲಥವಾ
ಪೆಱವಾಗಿಲಂದಂ
ಸ್ರೋತೋವಿಲಾಸದೊಳಗಿರ್ಪನದೊಂದು
ಚೋದ್ಯಂ
ಪೂತಾಂಬುವಾಹಿಗಳ
ಗಂಡನೆನಿಪ್ಪನೇಗಳ||೩||
(“ಪಾತಾಳಲೋಕದಲ್ಲಿರುವ
ರಾಕ್ಷಸರ ವಂಶಕ್ಕೆ ನಾನು ಕಿಟಕಿಯ
ಹಾಗೆ ಅಥವಾ ಹೊರಬಾಗಿಲಿನಂತೆ
ಇದ್ದೇನೆ.
ಹಾಗಿದ್ದರೂ
ನದಿಗಳ ವಿಲಾಸದಲ್ಲಿದ್ದುಕೊಂಡು
ಪವಿತ್ರವಾದ ನದಿಗಳಿಗೆ ಗಂಡ ಎಂದು
ಆಗಿದ್ದೇನೆ!
ಇದು
ಚೋದ್ಯವಾದದ್ದು”)
ಗರ್ವಸ್ಥನಲ್ತೆ
ನಿಜಗರ್ಭದೆ ರತ್ನಮಿರ್ಕುಂ
ಸರ್ವರ್ಗೆ
ಬೇಧಿಸಲಶಕ್ಯಮದೆಂದು ಮತ್ತಂ
ಪೂರ್ವಾಪರಾಶೆಗಳ
ವೇಲೆಯೊಳಿರ್ಪೆನೆಂದುಂ
ದುರ್ವಾಕ್ಕಿನಿಂದೆ
ನಿಜಶಂಸನೆಗೆಯ್ದಪಂ ತಾಂ||೪||
("ನನ್ನ ಒಡಲಿನಲ್ಲಿ
ರತ್ನಗಳಿವೆ ಅಷ್ಟಲ್ಲದೇ ಅದು
ಸರ್ವರಿಗೂ ಭೇದಿಸಲು ಅಶಕ್ಯವಾದದ್ದು,
ಅಲ್ಲದೇ ಪೂರ್ವ
ಹಾಗೂ ಪಶ್ಚಿಮ ದಿಕ್ಕಕುಗಳ ಸೀಮೆಯಲ್ಲಿ
ನಾನಿದ್ದೇನೆ" ಎಂದು
ಗರ್ವಿಷ್ಠನಾಗಿ ಕೆಟ್ಟ ಮಾತುಗಳಿಂದ
ಆತ್ಮಪ್ರಶಂಸೆಯನ್ನು ಮಾಡಿಕೊಳ್ಳುತ್ತಿದ್ದಾನೆ
)
ವಸಂತಕಲಿಕಾ||
ಅಚಲಂಗಳಲ್ತೆ
ದಿಟದಿಂದೆ ಮಹೀಧರಂಗಳ್
ಖಚಿತಂ
ಬುಧರ್ಕಳಿಳೆಯೊಳ್ ನಡೆದಿರ್ಪರೇಗಳ್
ರುಚಿರಾಚಲಾಂಘ್ರಿಪದಧಾವನಚರ್ಯೆಯಿಂದಂ
ಸ್ವಚಿದಾತ್ಮಶುದ್ಧಿಗೆಂದುಱೆ
ನೋಂತು ಗೆಯ್ಗುಂ ||೫||
(ಪರ್ವತಗಳು
ದಿಟವಾಗಿಯೂ ಭೂಮಿಯನ್ನು
ಹೊತ್ತವುಗಳಾಗಿವೆ. ಭೂಮಿಯಲ್ಲಿ
ಬುಧರು/ ಸಜ್ಜನರು
ನಡೆದಾಡುತ್ತಿರುವುದೂ ಖಚಿತ.
ಹಾಗಾಗಿ ಈ ಸುಂದರವಾದ
ಪರ್ವತಗಳ ಕಾಲನ್ನು ತೊಳೆಯುವುದರ
ಮೂಲಕ ತನ್ನ ಆತ್ಮಶುದ್ಧಿಗೆಂದು
ವ್ರತತೊಟ್ಟು ಮಾಡುತ್ತಿದ್ದಾನೆ)
ಮಲಯಾನಿಲಂ
ಮಧುವೊಳೆಯ್ದು ವಿಯೋಗಿಗಳ್ಗಂ
ಕುಳಿರಾಗದುಷ್ಣಮೆನಿಪಂತೆ
ಮುನೀಂದ್ರನೀಗಳ್
ಖಲರ್ಗಪ್ಪನಲ್ತೆಯೆನುತುಂ
ಮುದದಿಂ ಮರಳ್ದಿಂ-
ತಲೆಗಳ್
ನೆಗೞ್ದುಕರತಾಡನಸಕ್ತಮಾಯ್ತೇ
||೬||
(ತೆಂಕಣಗಾಳಿ
ವಸಂತಕಾಲದಲ್ಲಿ ಬೀಸುತ್ತಾ
ವಿರಹಿಗಳಿಗೆ ತಂಪನ್ನು ಕೊಡದೇ
ಬಿಸಿಯನ್ನೇ ಹೆಚ್ಚಿಸುವಂತೆ
ಮುನೀಂದ್ರನಾದ ಅಗಸ್ತ್ಯನು ಈ
ದುಷ್ಟರಿಗೆ ಆಗುತ್ತಾನೆ ಎಂದು
ಸಂತೋಷದಿಂದ ಮರಳಿ ಬರುತ್ತಾ
ಅಲೆಗಳನ್ನು ಹೆಚ್ಚಿ ಚಪ್ಪಾಳೆತಟ್ಟಲು
ತೊಡಗಿದುವೇ!)
ವಸಂತತಿಲಕಾ||
ಕಲ್ಲೋಲಲೋಲದರಹಾಸಕೃತಾರ್ಣವಂ
ತಾಂ
ಚಲ್ಲಿರ್ಪನೇ
ಪಥದೆ ಮಲ್ಲಿಗೆವೂಗಳಂ ವಿ-
ದ್ಯುಲ್ಲೇಖೆಯಂದದೊಳೆ
ಕಾಂತಿಯನೊಂದಿ ಪರ್ವು-
ತ್ತಲ್ಲಲ್ಲಿ
ಶುಕ್ತಿಪುಟಶಂಖಚಯಂಗಳಂದಂ ||೭||
(ಅಲೆಗಳಿಂದ ತನ್ನ
ನಗೆಯನ್ನು ಬೀರುತ್ತಿರುವ ಸಮುದ್ರ
ತಾನು ಮಾರ್ಗದಲ್ಲಿ ಮಲ್ಲಿಗೆಯ
ಹೂವುಗಳಂತೆಯೇ ಮಿಂಚಿನ ಕಾಂತಿಯನ್ನು
ಹೊಂದಿ ವಿಸ್ತರಿಸುತ್ತಿರುವ
ಕಪ್ಪೆಚಿಪ್ಪುಗಳನ್ನು ಅಲ್ಲಲ್ಲಿ
ಚೆಲ್ಲಿದ್ದಾನೆಯೇ!)
ವಸಂತಕಲಿಕಾ||
ಮೆಱೆದಿರ್ಪ
ನೀಳಕದ ಗೋಳಕಗಾತ್ರದಿಂದಂ
ಕರಮುರ್ಬಿ
ಮರ್ಬನೊಡಲಿಂ ತೆಗೆಯೆಂಬವೋಲೇ
ದುರುಳರ್ಕಳಿರ್ಪರೆನುತುಂ
ಸಲೆ ತೋರ್ದನೇ ದು-
ಷ್ಕರಮಲ್ತೆ
ನೀಚರಿದಿರೊಳ್ ಮಿಗೆ ಮಾತನಾಡಲ್
||೮||
(ಮೆರೆಯುತ್ತಿರುವ
ನೀಲಿಯಾದ ಗೋಳವಾದ ಗಾತ್ರದಿಂದ(ದೇಹದಿಂದ)
ಹೆಚ್ಚಾಗಿ
ಉಬ್ಬಿಕೊಂಡು ತನ್ನ ಒಡಲಿನಿಂದ
ಈ ಮಬ್ಬನ್ನು ತೆಗೆ ಎಂಬಂತೆ ದುರುಳರಾದ
ರಾಕ್ಷಸರು ಒಳಗಿರುವುದನ್ನು
ಸೂಚಿಸುತ್ತಿದ್ದಾನೆಯೇ!
ನೀಚರಾದವರ
ಎದುರಿನಲ್ಲಿ ಮಾತನಾಡುವುದೂ
ದುಷ್ಕರವಲ್ಲವೇ!)
ನೃಪರಿರ್ವರೊಳ್
ಕದನಮಾದೊಡೆ ಲೋಗರೆಲ್ಲರ್
ತಪಿಪರ್
ಧನಾದಿಚಯಹಾನಿಯಿನಂತೆಯೇ ಕ-
ಶ್ಯಪಸೂನುಗಳ್
ಕೊಳುಗುಳಕ್ಕುಱೆ ಸಂದೊಡೇನೋ
ಸ್ವಪರಿಸ್ಥಿತಿ
ಪ್ರಭುವೆ!
ಯೆಂಬವೊಲಾಯ್ತು
ರಾವಂ ||೯||
("ಎರಡು
ಜನ ರಾಜರ ನಡುವೆ ಯುದ್ಧವಾದರೆ
ಸಾಮಾನ್ಯ ಜನರೆಲ್ಲರೂ ಧನಧಾನ್ಯಗಳ
ಹಾನಿಯಿಂದ ಕಷ್ಟವನ್ನು ಹೊಂದುತ್ತಾರೆ.
ಹಾಗೆಯೇ
ಕಶ್ಯಪನ ಮಕ್ಕಳಾದ ದೈತ್ಯರು ಹಾಗೂ
ದೇವತೆಗಳು ಯುದ್ಧಕ್ಕೆ ಬಂದರೆ
ನನ್ನ ಪರಿಸ್ಥಿತಿ ಏನಾಗುತ್ತದೆಯೋ
ಪ್ರಭುವೇ!”
ಎಂಬಂತೆ
ಸಮುದ್ರದ ಶಬ್ದವಾಗುತ್ತಿತ್ತು)
ಹೃದಯಕ್ಕೆ
ಕನ್ನಡಿಯೆ ವಕ್ತ್ರಮೆನುತ್ತೆ
ಪೇೞ್ದರ್
ಮುದಮಾವಗಂ
ಮುಖದೆ ಕಾಣ್ಗೆಯೆನುತ್ತೆ ಚಿಂತಿ-
ಪ್ಪುದು
ವಾರ್ಧಿ ವೀಚಿಗಳ ಬೆಳ್ನಗೆಯಿಂದಮೇಗಳ್
ಪದಪಿಂ
ನಟಿಪ್ಪುದೆನುವಂತದೊ ಕಂಡುದಲ್ತೇ
||೧೦||
(ಮನಸ್ಸಿಗೆ
ಮುಖವೇ ಕನ್ನಡಿ ಎಂದು ಹೇಳಿದ್ದಾರೆ.
ತನ್ನ
ಮುಖದಲ್ಲಿ ಯಾವಾಗಲೂ ಸಂತೋಷವೇ
ಕಾಣಲಿ ಎಂದು ಚಿಂತಿಸುತ್ತಾ ಅಲೆಗಳ
ಬೆಳ್ನಗೆಯಿಂದ ನಟಿಸುತ್ತಿದೆಯೇನೋ
ಎಂಬಂತೆ ಕಾಣುತ್ತಿತ್ತು)
ಮತ್ತೇಭವಿಕ್ರೀಡಿತ||
ಘನದಂದಂ
ಜಲಗರ್ಭನಂಬರನದೀಧಾಮಂ ಹರಂಬೋಲ್ತು
ಜೀ-
ವನಲಾವಣ್ಯಕರಂ
ವಿರಿಂಚಿಕೃತಲೇಖಂಬೊಲ್ ಸಮುದ್ರಂ
ಸ್ವಯಂ
ಧನಮಂಜೂಷೆಯವೊಲ್
ಸದಾನವಪಥಂ ಕಾಡೆಂಬವೋಲೀ ಸುರೇಂ-
ದ್ರನವೊಲ್
ವಾರ್ಧಿಯದಾಯ್ತಧಃಕೃತಮಹಾದಿಙ್ನಾಗದಿಂದಾವಗಂ
||೧೧||
(ವಾರ್ಧಿ ಎಂದರೆ
ಸಮುದ್ರವು ಮೋಡದಂತೆ ಜಲಗರ್ಭ(ನೀರನ್ನು
ಗರ್ಭೀಕರಿಸಿಕೊಂಡಿರುವುದು)
ಹರನಂತೆಯೇ
ಅಂಬರನದೀಧಾಮ (ಗಂಗಾನದಿಯನ್ನು
ತಳೆದವನು/ ಗಂಗಾನದಿ
ಸೇರಿಕೊಳ್ಳುವ ತಾಣವಾದವನು)
ಬ್ರಹ್ಮನ ಬರೆಹದಂತೆ
ಜೀವನಲಾವಣ್ಯಕರ (ಜೀವನಕ್ಕೆ
ಲಾವಣ್ಯವನ್ನು ಕೊಡುವವನು/
ನೀರಿಗೆ ಲವಣತೆಯನ್ನು
(ಉಪ್ಪಾದ
ರುಚಿಯನ್ನು) ಕೊಡುವವನು)
ದುಡ್ಡಿನ
ಪೆಟ್ಟಿಗೆಯಮತೆ ಸಮುದ್ರ (ಬೀಗದ-ಮುದ್ರೆಯ
ಸಹಿತವಾಗಿರುವುದು) ಕಾಡಿನಂತೆ
ಸದಾನವಪಥ (ಸದಾ-ಯಾವತ್ತೂ
ನವ-ಹೊಸದಾದ
ಪಥಂ-ಹಾದಿಯುಳ್ಳದ್ದು/
ಸ-ದಾನವಪಥಂ-
ರಾಕ್ಷಸರ ಹಾದಿಯನ್ನು
ಉಳ್ಳದ್ದು ) ಸುರಲೋಕದ
ಇಂದ್ರನಂತೆ ಅಧಃಕೃತಮಹಾದಿಙ್ನಾಗ
(ದಿಗ್ಗಜವಾದ
ಐರಾವತವನ್ನು ವಾಹನವಾಗಿ ಉಳ್ಳವನು/
ದಿಗ್ಗಜವನ್ನು
ತನ್ನ ಕೆಳಗೆ ಹಾಕಿಕೊಂಡದ್ದು
(ದಿಗ್ಗಜಗಳು
ಭೂಮಿಯನ್ನು ಹೊತ್ತಿರುತ್ತವೆ
ಎಂಬ ಕಲ್ಪನೆಯಿರುವ ಕಾರಣ ಅವು
ಸಮುದ್ರಕ್ಕಿಂತ ಕೆಳಗಿರುತ್ತವೆ))
ಆಗಿತ್ತು )
ಹಿತಮಪ್ಪಂತೆಲರೊಳ್ಪ
ತಣ್ಪಿಗೆಡೆಯುಂ ಪದ್ಮಾಕರಂ ಕಾದ
ಸೈ-
ಕತದಿಂದಂ
ಬಿಸುಪೊಂದಿ ಮೇಘಚಯಮಂ ಪೋಷಿಪ್ಪುದೈ
ನೀರಿನೊಳ್
ಸಿತಮಿರ್ಕುಂ
ವನಜಾಸ್ಥಿಕಾರಿಹಿಮವದ್ದ್ವೀಪಂಗಳಿಂ
ಶೀತಲಂ
ಋತುಷಟ್ಕಕ್ಕೆಡೆಯಾಗಿ
ನಾಣ್ಚಿಸುವುದೀ ಭೂಭಾಗಮಂ ಸಾಗರಂ
||೧೨||
((ವಸಂತದಂತೆ-)
ಹಿತವಾಗುವಂತೆ
ಗಾಳಿಯ ತಂಪಿಗೆ ತಾಣವಾಗಿತ್ತು
ಪದ್ಮಗಳಿಗೆ ಆಕರವಾಗಿತ್ತು,
(ಗ್ರೀಷ್ಮದಂತೆ-)
ಕಾದಿರುವ
ಮರಳಿನಿಂದ ಬಿಸಿಯಾಗಿತ್ತು,
(ವರ್ಷಾಕಾಲದಂತೆ-)
ಮೋಡಗಳನ್ನು
ಪೋಷಿಸುತ್ತಿತ್ತು,
(ಶರತ್ಕಾಲದಂತೆ-)ನೀರಿನಲ್ಲಿ
ಬೆಳ್ಳಗಿತ್ತು,
(ಶಿಶಿರ-ಹೇಮಂತಗಳಂತೆ-)ಕಮಲಗಳ
ಅಸ್ಥಿಯನ್ನುಂಟುಮಾಡುವ ಹಿಮದ
ದ್ವೀಪಗಳಿಂದ ಶೀತಲವಾಗಿತ್ತು.
ಹೀಗೆ
ಆರೂ ಋತುಗಳಿಗೆ ಒಮ್ಮೆಲೇ ತಾಣವಾಗಿ
ಸಮುದ್ರವು ಈ ಭೂಭಾಗವನ್ನು ನಾಚುವಂತೆ
ಮಾಡುತ್ತಿತ್ತು)
ಜಲದಿಂ
ಪೊಣ್ಮುವ ಬಿಂದುವಂ ಮಣಿಯೆನುತ್ತುಂ
ನೋೞ್ಪುದಲ್ಲಪ್ಸರಾ-
ವಳಿಯಾಗಳ್
ಮುಖಚಂದ್ರನಿಂ ಭ್ರಮಿಸುತುರ್ಕೇರಲ್
ಸಮುದ್ರಂ ಪ್ರವಾ-
ಲಲತಾಗ್ರಂಗಳನೀಕ್ಷಿಸುತ್ತೆ
ಮಕರಂ ಸಾರ್ದತ್ತು ವಿಭ್ರಾಂತಿಯಿಂ
ಪಲಮೆಂದೆಂತಿದು
ಪುರ್ಚಿನಾ ವಸತಿಯೇನೆಂಬರ್ ಬುಧರ್
ನೋಡುತುಂ ||೧೩||
(ನೀರಿನಂದ
ಹೊಮ್ಮುವ ಹನಿಗಳನ್ನು ಕಂಡು
ಅಪ್ಸರೆಯರು ಮಣಿಗಳು/ರತ್ನಗಳು
ಎಂದು ಅಲ್ಲಿ ಅಪ್ಸರೆಯರು
ನೋಡುತ್ತಿದ್ದರು,
ಅವರ
ಮುಖಚಂದ್ರನಿಂದ (ಚಂದ್ರನೆಂದು)
ಭ್ರಮೆಗೊಂಡ
ಸಮುದ್ರ ಉಕ್ಕೇರುತ್ತಿತ್ತು.
ಇತ್ತ
ಹವಳಗಳ ಬಳ್ಳಿಯನ್ನು ಕಂಡು ಮೊಸಳೆಗಳು
ಮಾಂಸವೆಂದು ಭ್ರಮಿಸಿ ಬರುತ್ತಿದ್ದವು.
ಇದನ್ನೆಲ್ಲ
ನೋಡುತ್ತಿರುವವರು “ಇದೊಂದು
ಹುಚ್ಚಿನ ಮನೆ” ಎಂದು ಹೇಳುತ್ತಿದ್ದರು)
ಶಾರ್ದೂಲವಿಕ್ರೀಡಿತ||
ಕೋಪಾಟೋಪವಿಕಂಪಿತಾಂಗಚರಿತಕ್ಕುಲ್ಲೋಲಕಲ್ಲೋಲಜ-
ವ್ಯಾಪಾರಂ
ಸರಿಯಾಗೆ ಶೈವಲದೆ ಗಂಟಾಗಲ್
ಜಟಾಜೂಟಮೀ
ರೂಪಂಬೊತ್ತು
ಕಮಂಡಲೆಂಬ ತೆಱದಿಂದಂ ಶಂಖಮಂ
ಮಾಲ್ಯಮಂ
ಸೈಪಿಂ
ಮುಕ್ತಕದಿಂದೆ ಪೊತ್ತ ಮುನಿಯೀತಂ
ಮಾಗದಿರ್ಪಂ ಕಡಲ್ ||೧೪||
(ತನ್ನ
ಕೋಪಾಟೋಪದಿಂದ ಕಂಪಿಸುತ್ತಿರುವ
ಶರೀರದಂತೆ ಉಲ್ಲೋಲಕಲ್ಲೋವಾದ
ನಡತೆ ಹೊಂದುತ್ತಿರುವ ಕಾರಣ
ಶೈವಲಗಳಿಂದ ಜಟಾಜೂಟದ ಈ ರೂಪವನ್ನು
ಹೊತ್ತು,
ಕಮಂಡಲುವಿನಂತೆ
ಶಂಖವನ್ನೂ,ಮಾಲೆಯನ್ನು
ಮುತ್ತಗಳಿಂದ ಹೊತ್ತ ಈ ಕಡಲು
ಎನ್ನುವಂತಹ ಮುನಿ-
ಇನ್ನೂ
ಮಾಗದವನು)
ದಾವಾಗ್ನಿಪ್ರಭವಹ್ನಿಯಿಂ
ಯಮನ ಕೋಣಂಬೋಲ್ತ ನೀರಾನೆಯಿಂ
ಶೈವಸ್ಫಾಲಲಲಾಟನೇತ್ರಶಿಖಿಯಾ
ಕಾಂತಿಚ್ಛಟಾಶುಕ್ತಿಜ-
ಕ್ಕಾವಾಸಂ
ಮೃಗವೈರಿನಾದಕರನೀ ಕೋಲಾಹಲಧ್ವಾನದಿಂ-
ದಾವಿರ್ಭೂತಮೆನಿಕ್ಕುಮೇ
ಕಲಿಯ ವೀರ್ಯಂ ಭೀಕರಂ ಸಾಗರಂ
||೧೫||
(ದಾವಾನಲದಿಂದ
ಹುಟ್ಟಿದ ಬೆಂಕಿಯಿಂದ, ಯಮನ
ಕೋಣದಂತಿರುವ ನೀರಾನೆಯಿಂದ,
ಶಿವನ ಸ್ಫಾರವಾದ
ಹಣೆಗಣ್ಣಿನ ಬೆಂಕಿಯ ಆ ಕಾಂತಿಯ
ಮುತ್ತಿಗೆ ಆವಾಸವಾಗಿ,
ಸಿಂಹದಂತೆ
ಕೋಲಾಹಲದ ಧ್ವನಿಯಿಂದ ಕಲಿಯ
ಪರಾಕ್ರಮವೇ ಆವಿರ್ಭೂತವಾದಂತೆ
ಸಾಗರವು ಭೀಕರವಾಗಿತ್ತು )
ಗಂಭೀರಾಕೃತಿ
ಗರ್ತಕರ್ತೃಕರಮಾವರ್ತಾವತಾರಸ್ಫುರ-
ದ್ಧಂಭೋಲಿಪ್ರತಿಮಾನಮಾನನೆನಿಪಂ
ಸರ್ಪಾಶ್ರಯಂ ಶ್ರೇಯದಿಂ
ದಂಭೋಧಾರನಿವಂ
ಕರಾಳಮುಖದಿಂ ಮೇಣ್ ಮಂಗಳಾಸ್ಯಂಗಳಿಂ
ಶಂಭುಪ್ರೀತಗಣಕ್ಕೆ
ಪೋಲ್ವನನಿತೇ ನಿರ್ವ್ಯಾಜಭಕ್ತಂ
ಗಡಾ ||೧೬||
(ಗರ್ತ-ಆಳವನ್ನು
ಸೃಷ್ಟಿಸುವ ಗಂಭೀರವಾದ ಆಕೃತಿ,
ಆವರ್ತ-ಸುಳಿಗಳ
ಅವತಾರ, ಸ್ಫುರಿಸುತ್ತಿರುವ
ವಜ್ರಾಯುಧಕ್ಕೆ ಸಮಾನವಾದವನು,
ಸರ್ಪಗಳಿಗೆ
ಆಶ್ರಯವನ್ನು ಕೊಟ್ಟವನು,
ಶ್ರೇಯಸ್ಸಿನಿಂದ
ದಂಭವನ್ನು ಧರಿಸಿದವನು,
ಕರಾಳವಾದ ಹಾಗೂ
ಮಂಗಳಕರವಾದ ಮುಖಗಳಿಂದ ಇವನು
ಶಂಭುವಿನ ಭೂತಗಣಕ್ಕೆ ಹೋಲುತ್ತಿರುವವನು.
ನಿರ್ವ್ಯಾಜಭಕ್ತನೂ
ಆಗಿದ್ದಾನೆ )
ಮತ್ತೇಭವಿಕ್ರೀಡಿತ||
ಜಗಮಂ
ಸೃಷ್ಟಿಪ ಪೂರ್ವದೊಳ್ ನೆಲೆಸಿದಂ
ಬ್ರಹ್ಮಾಗ್ರಜಂ ಸೃಷ್ಟಿಯೊಳ್
ಪುಗಲೀ
ಜಂತುಗಳಿಂತುಮುಂತೆ ನೆಲನುಂ
ಕ್ಷೀಣಂಗೊಳಲ್ಕೀ ಜಲಂ
ಮಿಗೆ
ತಗ್ಗಿರ್ದೆಡೆಗಿರ್ಕೆಯೆಂದು
ಸುರಿಯಲ್ ಸೇರ್ದಾಗಳಿಂತಾದುದೀ
ಬಗೆಯಿಂ
ವಾರಿಧಿಗಂ ಕ್ಷಯಂ ಶಶಿಗಮುಂ
ವಂಶಾನ್ವಿತಂ ಸಂದುದೇ!
||೧೭||
(ಜಗತ್ತನ್ನು
ಸೃಷ್ಟಿಸುವ ಮೊದಲು, ಬ್ರಹ್ಮನಿಗೂ
ಮೊದಲು ಹುಟ್ಟಿದವನು "ಎಲ್ಲ
ಪ್ರಾಣಿಗಳೂ ಸೃಷ್ಟಿಯಲ್ಲಿ ಹೊಕ್ಕಾಗ
(ಸೃಷ್ಟಿಯಾದಾಗ)
ಜಲವೂ ಕ್ಷೀಣವಾಗುತ್ತವೆ,
ಈ ನೀರು ತಗ್ಗಿರುವ
ಕಡೆಯಲ್ಲಿ ಇರಲಿ ಎಂದು ಸುರಿದಾಗ
ಅದೆಲ್ಲವೂ ಸೇರಿಕೊಂಡಿತ್ತು ಆದರೂ
ಈ ಸಮುದ್ರದ ಕ್ಷಯವಾಗುವ ರೋಗ
ವಂಶಾನ್ವಿತವಾಗಿಯೇ ಚಂದ್ರನಿಗೂ
ಬಂದಿದೆಯೇ! )
ಶಾರ್ದೂಲವಿಕ್ರೀಡಿತ||
ಸಂದಿರ್ಕುಂ
ಬಗೆಯಂತೆ ಚಿತ್ರಕೃತಿಯಿಂ
ಮೇಣೂಹ್ಯಮಲ್ತೆಂಬವೊಲ್
ಸೌಂದರ್ಯಂ
ಮೆಱೆದಿರ್ಕುಮಂತೆ ವಿತತಕ್ಷೇತ್ರತ್ವದಿಂ
ಕೊಂಕಿನಿಂ
ನಿಂದಿಪ್ಪರ್ಗಮೆನಿತ್ತು
ಮೌನಮನಿತೇ ಸ್ತೋತ್ರಂಗಳಿಂ
ಪೇೞ್ವೊಡಂ
ಛಂದೋಮಾರ್ಗದ
ಮೂರ್ತಿ ಸಾಗರನಿವಂ ಚಾಂಚಲ್ಯದಿಂ
ಕೂಡಿಯುಂ ||೧೮||
(ಮನಸ್ಸಿನಂತೆಯೇ
ಊಹಿಸಲು ಅಸಾಧ್ಯವಾಗುವಂತಹ
ವಿಚಿತ್ರವಾದ ಕೃತಿಗಳಿಂದ ಕೂಡಿತ್ತು,
ವಿಸ್ತಾರವಾದ
ಕ್ಷೇತ್ರತ್ವವಿರುವ ಕಾರಣ ಸೌಂದರ್ಯ
ಮೆರೆದಿತ್ತು. ವಕ್ರತೆಯಿಂದ
ನಿಂದಿಸುವವರಿಗೂ, ಸ್ತೋತ್ರಗಳನ್ನು
ಮಾಡುವವರಿಗೂ ಮೌನವನ್ನೇ ತೋರುತ್ತಿತ್ತು.
ಹೇಳುವುದಾದರೆ
ಚಂಚಲತೆಯಿಂದ ಕೂಡಿದ್ದರೂ ಕೂಡ
ಈ ಸಾಗರನು ಛಂದೋಮಾರ್ಗದ/ವೇದಮಾರ್ಗದ
ಮೂರ್ತಿಯೇ ಆಗಿದ್ದನು)
ನೀಲಾಂಗಂ
ಪ್ರತಿಬಿಂಬಮೋ ಹರಿಯದಾ ಪಕ್ಷೀಶಪಕ್ಷಂಗಳಾಂ-
ದೋಲಂ
ಸಂದು ತರಂಗಭಂಗುರಮದಾದತ್ತೇಂ
ಫಣಾಮಂಡಲ-
ಶ್ರೀಲೀಲಾಯತಿಯಿಂದೆ
ರತ್ನಮೊಗೆದತ್ತೇಂ ಜೀವನಂ ಶ್ರೀಪದ-
ಜ್ವಾಲಾಭೀಲದೆ
ದಗ್ಧಮಾದುದೆ ವಲಂ ವಾರಾಶಿಯೋ
ವೇಷಿಯೋ ||೧೯||
(ನೀಲವರ್ಣದ
ಶರೀರವು ಹರಿಯ ಪ್ರತಿಬಿಂಬವೋ!
ಪಕ್ಷೀಶನಾದ
ಗರುಡನ ರೆಕ್ಕೆಗಳ ಆಂದೋಲನದಿಂದ
ಈ ತರಂಗಗಳು ಆಗಿರುವುದೇ!
ಆದಿಶೇಷನ
ಹೆಡೆಯ ಮೇಲಿರುವ ಮಣಿಗಳಿಂದಲೇ
ರತ್ನಗಳು ಹುಟ್ಟಿದವೇ!
ಲಕ್ಷ್ಮಿಯ
ಪಾದದ ಜ್ವಾಲೆಯಿಂದ ಜೀವನವು (ನೀರು)
ಸುಟ್ಟು
ಹೋಯಿತೇ!
ಇದೇನು
ನೀರಿನ ರಾಶಿಯೋ ಅಥವಾ ವೇಷಿಯೋ-ವೇಷವನ್ನು
ತೊಟ್ಟಿರುವುದೋ?)
ಮತ್ತೇಭವಿಕ್ರೀಡಿತ||
ನೆಱೆದಿರ್ಕುಂ
ಕೆಳಗಿಂದೆ ದಾವದನಲಂ ಮೇಲಿಂದಮಾ
ನೇಸಱಿಂ
ಪರಲೋಕಂಗತನಾದ
ದ್ವೀಪಪತಿಯಂ ಕುಳ್ಳಿರ್ದೊಡಂ
ಸೈಕತಂ
ಕರಮಾದತ್ತು
ತುಷಂಬೊಲಂಬುವನೆ ನೂಂಕಿರ್ದಾಗಳಾ
ಬೆಂಕಿಗಂ
ಪರಿಯಿಂ
ಬೇೞ್ವಳೆನಿಪ್ಪ ಪತ್ನಿಯವಳೆಂತಾಭಾಸಿಕುಂ
ವಾರ್ಧಿಯೊಳ್ ||೨೦||
(ಈ ಪದ್ಯದ ಅರ್ಥವು
ಗೊಂದಲವಾಗಿದೆ)
೨೫-೦೫-೨೦೧೫
ಚಂಪಕಮಾಲೆ||
ಚಂಪಕಮಾಲೆ||
ಶಿಲೆಗಳೆನಿಪ್ಪ
ವೀರಮದವಾರಣವಾರಣಮಾರಣೋತ್ಸುಕಂ-
ಗಳೆನಿಕುಮಲ್ಲಿ
ವೀಚಿಗಳುಗುತ್ತೆ ಬೃಹಚ್ಛಿಲೆಗಳ್ಗೆ
ಪೊಯ್ದು ದಾ-
ರ್ದಲೆಗಳನೇಕಕಾಲದಿನಕಾರಣಕಾ
ರಣಕಾರಣಂಗಳೆಂ-
ದುಲಿವವೊಲಿರ್ದುದಲ್ತೆ
ಮೊರೆತಂ ಜಲರಾಶಿಯಿನೆಯ್ದೆವಂದಿರಲ್
||೨೧||
(ಶಿಲೆಗಳು
ಎನ್ನುವ ವೀರಮದಗಜಗಳನ್ನು ನಿವಾರಿಸುವ
ಮಾರಣಕ್ಕೆ ಉತ್ಸುಕವಾಗಿವೆಯೆಂದೆನಿಸುವಂತೆ
ಅಲೆಗಳು ಉಕ್ಕುತ್ತ ದೊಡ್ಡ ಗಾತ್ರದ
ಶಿಲೆಗಳಿಗೆ ಹೊಡೆಯುತ್ತಿದ್ದವು.
ಆ
ಪರಾಕ್ರಮಿಯಾದ ಅಲೆಗಳು ಅನೇಕಕಾಲದಿಂದ
ಅಕಾರಣವಾಗಿ ಯುದ್ಧಕ್ಕೆ
ಕಾರಣವಾಗಿವೆಯೆಂದು ಹೇಳುವಂತೆ
ಜಲರಾಶಿಯಿಂದ ಬರುತ್ತಿರುವ ಮೊರೆತವು
ಕೇಳುತ್ತಿತ್ತು )
ಚಂಪಕಮಾಲೆ||
ಇದು
ಶಿಲೆಯಲ್ತು ಪೂರ್ವದೊಳಗಿರ್ಪ
ತಪಸ್ವಿಗಳಿಂದೆ ಪೊಂದೆ ಶಾ-
ಪದ
ಫಲದಿಂದೆ ನಿಂದುದಿನಿತಪ್ಸರೆಯರ್ಕಳ
ಕೂಟಮೆಂತುಟೋ
ಕುದಿದು
ಮರಾಳಗಾತ್ರವಿನಿತಾದುದು
ಕರ್ಪಿನೊಳಕ್ಕಟಾ!
ನಿಧಾ-
ನದೆ
ತೊಳೆಯುತ್ತೆ ಬೆಳ್ಪನರೆಗೀವೆನೆನುತ್ತಲೆಗಳ್
ಜಗುಳ್ದವೇ ||೨೨||
(ಇದು
ಕಲ್ಲಲ್ಲ,
ಹಿಂದೆ
ತಪಸ್ವಿಗಳಿಂದ ಶಾಪವನ್ನು ಹೊಂದಿ
ಅದರ ಫಲವಾಗಿ ನಿಂತಿರುವ ಅಪ್ಸರೆಯರ
ಕೂಟ. ಹೇಗೋ
ಕುದಿದು,
ಅವರ
ಹಂಸದಂತಹ ಮೃದುವಾದ ಬೆಳ್ಳನೆ
ಶರೀರ ಹೀಗೆ ಒರಟಾಗಿ ಕಪ್ಪಾಗಿಬಿಟ್ಟಿತು.
ಅಯ್ಯೋ!
ನಿಧಾನವಾಗಿ
ತೊಳೆಯುತ್ತ ಇದಕ್ಕೆ ಬೆಳ್ಪನ್ನು
ಕೊಡೋಣ ಎಂದುಕೊಂಡು ಅಲೆಗಳು
ಬರುತ್ತಿದ್ದವೇ!”
)
ಉತ್ಪಲಮಾಲೆ||
ನಿಂದಿರೆ
ತಾಪದೊಳ್!
ಬಿಸುಪಿನಿಂದಿರೆ
ತೀರಮೆ ಕಾಯ್ವುದೀ ಮರಳ್
ಬಂದಿರೆ!
ಪಾದ್ಯಮಿರ್ಕೆನುತೆ
ಬಂದಿರೆ ವೀಚಿಗಳಂತು ಸಾಗರಂ
ಕುಂದದೆ
ಸಂಪ್ರದಾಯಮೆನುವಂದದೆ ಗೆಯ್ದನೊ
ತಾಪಹಸ್ತನಿಂ
ಸಂದಪರಾಧಕಂ
ಕೃತಮೆ!
ಸಾಧುವೆ
ದುಷ್ಫಲಭೋಕ್ತನಾವಗಂ ||೨೩||
(ತಾಪದಲ್ಲಿ
ನಿಂತುಕೊಂಡಿರಾ! ತೀರವೆಲ್ಲ
ಬಿಸಿಲಿನಿಂದ ಕೂಡಿರುವ ಕಾರಣ
ಮರಳು ಕಾದಿರುತ್ತದೆ, ಬಂದಿರಾ!
ಇದೋ ಪಾದ್ಯ-
ಎನ್ನುತ್ತ
ಅಲೆಗಳು ಬಂದು ಕಾಲನ್ನು ತೊಳೆಯುತ್ತಿರಲು
ಸಾಗರನು ಸಂಪ್ರದಾಯಕ್ಕೆ ಕುಂದಾಗದ
ರೀತಿಯಲ್ಲಿ ಎಲ್ಲವನ್ನೂ ಮಾಡಿದನು.
ಸೂರ್ಯನ ಅಪರಾಧಕ್ಕೆ
ಹೀಗೆ ಮಾಡಿದರೇ! ಸಜ್ಜನರೇ
ಯಾವತ್ತೂ ದುಷ್ಫಲವನ್ನು
ಅನುಭವಿಸುವವರು!)
ದಾವಮನೊಟ್ಟಿ
ಮೂಲದೊಳಗಷ್ಟದಿಶಾಕರಿಯೆಂಬ
ಕಲ್ಗಳಂ
ಕಾವ
ಕಟಾಹದಂತಿಳೆಯನಿಟ್ಟದಱೆಲ್ಲದರೂರ್ಧ್ವಭಾಗದೊಳ್
ಭಾವಿಸೆ
ಲೋಕನಾಥನವನಂಬುಚರರ್ಕಳ ಬೇಯಿಸಲ್ಕೆ
ತಾ-
ನಾವಗಮಿಟ್ಟನೇಂ
ಜಲಮದುರ್ಕುವ ಪಾಂಗದು ಕಾಣ್ಬುದಂತುಟೇ!
||೨೪||
(ದಾವಾಗ್ನಿಯನ್ನು
ಬೆಂಕಿಯಾಗಿ ಒಟ್ಟಿ , ಅದಕ್ಕೆ
ಅಷ್ಟದಿಗ್ಗಜಗಳೆಂಬ ಕಲ್ಲುಗಳನ್ನು
ಕಾಯಿಸುವ ಬಾಣಲೆಯಂತೆ ಇಟ್ಟು,
ಲೋಕನಾಥನು
ಜಲಚರಜೀವಿಗಳನ್ನು ಅದರಲ್ಲಿ
ಬೇಯಿಸಬೇಕೆಂದು ತುಂಬಿಟ್ಟಿದ್ದಾನೆಯೋ
ಎಂಬಂತೆ ಆ ಸಮುದ್ರದ ನೀರು ಉಕ್ಕುವುದು
ಕಾಣುತ್ತಿತ್ತು)
ಚಂಪಕಮಾಲೆ||
ನೆಲನಿದು
ಮೇರೆಯಿಲ್ಲದುದು ವಿಸ್ತೃತಮಕ್ಷಿಗಗೋಚರಂ
ಗಡಾ
ಜಲಮಿದಕಾವೃತಂ
ವಸನದಂದದೊಳಂದೊದವಿರ್ಪುದೇಂ
ಗಡಾ
ಸುಲಲಿತಮಾಗಿ
ಪೋಗಿ ಸಲೆ ಮೇರೆಯನೀಕ್ಷಿಲಕ್ಕುಮೇ
ಗಡಾ
ಕೆಲದೆ
ಮರಾಳಯುಗ್ಮಮಿನಿತೆಂಬವೊಲೆಯ್ದುದು
ಕೇಳ್ವೊಡಾ ರವಂ ||೨೫||
("ಈ
ನೆಲಕ್ಕೆ ಮೇರೆ/ಸೀಮೆ/ಕೊನೆ
ಎಂಬುದಿಲ್ಲ,
ವಿಸ್ತಾರವಾಗಿ
ಕಣ್ಣಿಗೆ ಅಗೋಚರವಾಗಿದೆಯಂತೆ"
"ಇದಕ್ಕೆ
ನೀರು ಆವರಿಸಿಕೊಂಡು ವಸ್ತ್ರದಂತೆಯೇ
ಒದಗಿದೆಯೇನೋ"
"ಸುಲಭವಾಗಿ
ಹೋಗಿ ಇದರ ಕೊನೆಯನ್ನು ನೋಡುವುದಕ್ಕೆ
ಆಗುತ್ತದೆಯೇ!”
ಹೀಗೆ
ಪಕ್ಕದಲ್ಲಿಯೇ ಎರಡು ಹಂಸಗಳು
ಮಾತನಾಡುತ್ತಿದ್ದ ಹಾಗೆಯೇ ಶಬ್ದವು
ಕೇಳುತ್ತಿತ್ತು )
ಕಂಡಾಗಳ್
ಪದ್ಮಮೆಲ್ಲಂ ವಿಕಸಿತ ಸಿತದಿಂ
ಭಾನುಹಸ್ತಾವಲಗ್ನಂ-
ಗೊಂಡಿರ್ಪೀ
ಪಾಂಗಿನಿಂದಾಣ್ಮನನಿನಿಯಳಿವಳ್
ಸೇರಿರಲ್ ಗೌಪ್ಯದಿಂ ಮಾ-
ರ್ತಂಡಂಗಮ್ಮಂ
ಸದಾ ತಾಂ ತಪದೆ ನಯನಮಂ ಮುಚ್ಚಿರಲ್
ವಾರ್ಧಿಯೇ ಬ್ರ-
ಹ್ಮಾಂಡಕ್ಕಂ
ಕೇಳ್ವವೊಲ್ ತನ್ನಣುಗಿಯನೆಳೆಯಲ್
ಕೂಗುತಿರ್ಪಂತೆ ತೋರ್ಕುಂ ||೨೬||
(ನೋಡಿದರೆ
ಕಮಲಗಳೆಲ್ಲ ಅರಳುತ್ತಾ ಬೆಳುಪಿನಿಂದ
ಸೂರ್ಯನ ಕರಗಳನ್ನು ಸೇರಿಕೊಂಡು
ತನ್ನ ನಲ್ಲನನ್ನು ಅವಳು ಗುಪ್ತವಾಗಿ
ಸೇರಿರುವಾಗ ಸೂರ್ಯನ ತಂದೆ (ಕಶ್ಯಪ)
ತಪಸ್ಸಿನಲ್ಲಿ
ತನ್ನ ಕಣ್ಣನ್ನು ಮುಚ್ಚಿಕೊಂಡಿರುವಾಗ
ಸಮುದ್ರವೇ ಬ್ರಹ್ಮಾಂಡಕ್ಕೇ
ಕೇಳುವಂತೆ ತನ್ನ ಮಗಳನ್ನು (ಕಮಲ)
ಹಿಂದೆ ಎಳೆದುಕೊಳ್ಳಲು
ಕೂಗುತ್ತಿರುವಂತೆ ಕಾಣುತ್ತಿತ್ತು
)
ಹೇ!
ನೀಲಾಂಭೋಧಿರಾಜಾ!
ರಜತಗಿರಿಯ
ಮೀರಿರ್ಪುದೈ ನಿನ್ನ ಕೀರ್ತಿ!
ಸ್ಥಾನಂ
ನೀನಾದೆಯಲ್ತೇ ರವಿ ಶಶಿಗಳ
ನಿತ್ಯೋದಯಸ್ತಾದಿಗಳ್ಗಂ
ನೀನೇನೀ
ನೇಮದಿಂದಂ ವಿಚಲಿತಮತಿಯೇಂ
ನೀೞ್ದುದೇ ರಾಕ್ಷಸರ್ಗಂ
ಫೇನಾಲಂಕಾರ!
ವಾಸಂಗಳನೆನುತೆ
ಸುರಂ ಪ್ರಶ್ನಿಪಂ ಸಾಗರಕ್ಕಂ
||೨೭||
(ಹೇ!
ನೀಲಿಮವರ್ಣದ
ಸಮುದ್ರರಾಜ! ರಜತಪರ್ವತವಾದ
ಹಿಮಾಲಯವನ್ನು ನಿನ್ನ ಕೀರ್ತಿ
ಮೀರಿದ್ದಾಗಿದೆ! ನೀನೇ
ಈ ಸೂರ್ಯಚಂದ್ರರ ನಿತ್ಯದ
ಉದಯ-ಅಸ್ತಗಳಿಗೆ
ಸ್ಥಾನವಾಗಿದ್ದೀಯಾ. ನೀನೇನು
ಈ ನಿಯಮದಿಂದ ವಿಚಲಿತವಾದ ಬುದ್ಧಿಯನ್ನು
ಹೊಂದಿದೆಯೋ ಹೇಗೆ! ರಾಕ್ಷಸರಿಗೆ
ವಾಸವನ್ನು ನೀಡಿರುವುದೇ!
ಫೇನಾಲಂಕಾರನೇ!
(ನೊರೆಗಳ ಅಲಂಕಾರವನ್ನು
ಹೊಂದಿದವನೇ) ಎಂದು
ದೇವನು ಆಗ ಸಮುದ್ರಕ್ಕೆ ಪ್ರಶ್ನಿಸಿದನು
)
ಮಹಾಸ್ರಗ್ಧರಾ||
ಮಱುವಾತೆಂದಂ
ಮುನೀಶಂಗೆ ನಮಿಸುತೆ ಪಯೋ ರಾಶಿಯಿಂ
ಮೂರ್ತಿವೆತ್ತಂ-
ನರರೂಪಂಬೊತ್ತು
ಕಯ್ಯಂ ಮುಗಿಯುತೆ ವಿನಯದಿಂ
ವಂದಿಪೆಂ ಪೂಜ್ಯರೇ ಸಾ-
ಗರನೆಂಬೆನ್ನೊಂದು
ಗರ್ಭಂ ಗಹನಮೆನುತೆ ದಲ್ ರಾಕ್ಷಸರ್
ಕಂಡರಲ್ಲಿಂ
ಮೆಱೆಯುತ್ತುಂ
ಪೋಪರೇಗಳ್ ರಸೆಗತಿ ಸುಲಭಕ್ಕಾಂ
ಸದಾ ಪೀಡಿತಂ ಮೇಣ್ ||೨೮||
(ಅದಕ್ಕೆ
ಪ್ರತ್ಯುತ್ತರವನ್ನು ಕೊಡುತ್ತಾ,
ಮುನೀಂದ್ರನಿಗೆ
ನಮಿಸುತ್ತಾ ಪಯೋರಾಶಿಯಿಂದ
ಮೂರ್ತಿಮತ್ತಾಗಿ ಮನುಷ್ಯರೂಪವನ್ನು
ಹೊತ್ತು ಕೈಮುಗಿಯುತ್ತಾ ವಿನಯದಿಂದ
“ವಂದಿಸುತ್ತೇನೆ ಪೂಜ್ತರೇ!
ಸಾಗರ ಎನ್ನುವ
ನನ್ನ ಈ ಗರ್ಭ ಆಳವಾಗಿರುವುದು
ಎಂದು ರಾಕ್ಷಸರು ಕಂಡುಕೊಂಡು,
ಅಲ್ಲಿಂದ ಮರೆಯಾಗಿ
ರಸಾತಲಳಕ್ಕೆ ಯಾವತ್ತೂ ಹೋಗುತ್ತಾರೆ,
ಇದರಿಂದ ನಾನು
ಸದಾ ಕಾಲ ಪೀಡಿತನಾಗಿದ್ದೇನೆ”)
ಪೊಡೆಯಿಂದಂ
ಪೋ ಎನಲ್ಕಾಂ ಬಲರಹಿತನಲಾ ಗಾತ್ರದಿಂ
ಭೀಕರಾತ್ಮರ್
ಕಡಿದುಂ
ಕೊರ್ಚಲ್ಕಬೇಧ್ಯಂ ಜಲಮಯ ತನುವಿಂ
ಶೋಷ್ಯನಲ್ತಗ್ನಿಯಿಂದಂ
ಜಡನಾನಿರ್ಪೆಂ
ಸಮೀರಂ ನಡೆಪೊಡೆ ನಡೆಯೆಂ ಮಾರ್ಗಮೇಂ
ನೀಮುಪಾಯಂ-
ಗುಡಿಮೆಂದಾಗಳ್
ಮುನೀಂದ್ರಂ ಕುಡಿವುದೊ!
ಕುಡಿವೆಂ
ನಿನ್ನನಾನೆಂದು ಪೇೞ್ದಂ ||೨೯||
(ನನ್ನ ಹೊಟ್ಟೆಯಿಂದ
ಹೋಗಿ ಎಂದು ಹೇಳುವುದಕ್ಕೆ ನಾನು
ಬಲರಹಿತನಾಗಿದ್ದೇನೆ. ಅವರು
ಶರೀರದಿಂ ಭೀಕರವಾದವರಾಗಿದ್ದಾರೆ.
ನಾನು ಕಡಿದು
ಕೊಚ್ಚಿಹಾಕುವುದಕ್ಕೆ ಅಬೇಧ್ಯನಾಗಿದ್ದೇನೆ.
ನೀರಿನಿಂದ ಆಗಿರುವ
ಈ ಶರೀರದಿಂದ ಅಗ್ನಿಯಿಂದ ಆರಿಸಲು
ಆಗುವುದಿಲ್ಲ, ನಾನು
ಜಡ(ಜಲ)ಆಗಿದ್ದೇನೆ.
ವಾಯುದೇವನೂ
ನನ್ನನ್ನು ನಡೆಸಿದರೆ
ನಡೆಯುವುದಕ್ಕಾಗುವುದಿಲ್ಲ.
ಮುಂದೆ ಮಾರ್ಗವೇನು!
ನೀವೇ ಉಪಾಯವನ್ನು
ಕುಡಿ(ಕೊಡಿ)
ಎಂದು ಹೇಳಿದಾಗ
ಮುನೀಂದ್ರನಾದ ಅಗಸ್ತ್ಯನು
"ಕುಡಿಯುವುದೋ!
ನಿನ್ನನ್ನು
ನಾನು ಕುಡಿಯುತ್ತೇನೆ” ಎಂದು
ಹೇಳಿದನು)
ಪೃಥ್ವೀ||
ಇದೇನಿವನುಪಾಯಮಂ
ಕುಡುವನೆಂದು ಚಿಂತಿಪ್ಪೊಡಂ
ಮದೀಯವಚನಾಶ್ರುತಂ
ಪದಮನೊಳ್ಪಿನಿಂ ಶ್ಲೇಷಮೆಂ-
ದದಂ
ತಿಳಿದು ಪೇೞ್ದನೇಂ ಕುಡಿವೆನೆಂದು
ಮದ್ಗಾತ್ರಮಂ
ಮುದಂಬಡುತೆ
ಪೀರ್ದಪಂ ಘಟದಮಾನದಿಂದೊಂದನೇ
||೩೦||
(ಇದೇನು!
ಇವನು ಉಪಾಯನ್ನು
ಕೊಡುತ್ತಾನೆ ಎಂದು ಯೋಚಿಸಿದರೆ,
ನನ್ನ ಮಾತನ್ನು
ಕೇಳಲಿಲ್ಲ, "ಕುಡಿ(ಕೊಡಿ)"
ಎಂದದ್ದನ್ನು
ಶ್ಲೇಷದಿಂದ (ಕುಡಿಯುವುದು)
ಎಂದು ತಿಳಿದುಕೊಂಡು,
ಕುಡಿಯುತ್ತೇನೆ
ಎಂದು ಹೇಳಿದನೇ! ನನ್ನ
ಈ ಗಾತ್ರವನ್ನು ಸಂತೋಷದಿಂದ ಒಂದು
ಘಟದಷ್ಟು(ಕೊಡದಷ್ಟು)
ಕುಡಿಯುತ್ತಾನೆ
ಅಷ್ಟೇ! )
ಎನುತ್ತೆ
ಬಹುಗರ್ವದಿಂ ಜಲಧಿ ಚಿಂತಿಸುತ್ತಿರ್ದಪಂ
ಘನಂಗಳನದಾವಗಂ
ಜಲದೆ ಪೋಷಿಪೆಂ ನೀಡುತುಂ
ಮನಂಬುಗುವುದೀತನೆಂದುದಱಿನೆಂತುಟೋ
ಹಾಸ್ಯಮೇ
ಮುನೀಂದ್ರಜಠರಕ್ಕೆ
ಪೋಪುದದಶಕ್ಯಮೈ ಎಂದು ತಾಂ ||೩೧||
(ಹೀಗೆಂದು ಬಹಳ
ಗರ್ವದಿಂದ ಸಮುದ್ರನು "ಮೋಡಗಳಿಗೆ
ಯಾವತ್ತೂ ನೀರನ್ನು ನೀಡುತ್ತಾ
ಪೋಷಿಸುತ್ತೇನೆ, ಇವನು
ಹೇಳುವುದರಿಂದ ಹಾಸ್ಯವೇ ಮನಸ್ಸಿಗೆ
ಬರುತ್ತಿದೆ, ಈ
ಮುನೀಂದ್ರನ ಜಠರಕ್ಕೆ ಹೋಗುವುದು
ಅಶಕ್ಯವೇ ಹೌದು!” ಎಂದು
ಯೋಚಿಸುತ್ತಿದ್ದನು )
ಶಿಖರಿಣೀ||
ಘಟೋದ್ಭೂತಂ
ಯೋಗೀಶ್ವರನವನನಂತಾಗಳಱಿತಂ
ಸ್ಫುಟಂ
ಮತ್ಕಾರ್ಯಂ ಮೇಣೆನುತೆ ಜಲಮಂ
ಕೊಂಡು ಕರದೊಳ್
ವಟು
ಸ್ವಾಹಾಯೆಂದಾಚಮನಮನೆ ಗೆಯ್ವಂತೆ
ಕುಡಿದಂ
ದ್ವಿಟರ್
ಕಂಡಿರ್ದರ್ ರಾಕ್ಷಸರವರೆ
ರಾತ್ರಿಂಚರರಲಾ ||೩೨||
(ಘಟದಿಂದ ಹುಟ್ಟಿದ
ಅಗಸ್ತ್ಯನು ಸಮುದ್ರದ ಈ ಅಹಂಕಾರವನ್ನು
ತಿಳಿದನು. ನನ್ನ
ಮುಂದಿನ ಕಾರ್ಯವು ಸ್ಫುಟವಾಗಿದೆ
ಎಂದು ಕೈಯಲ್ಲಿ ನೀರನ್ನು ತೆಗೆದುಕೊಂಡು
ಒಬ್ಬ ವಟುವು "ಸ್ವಾಹಾ”
ಎಂದು ಆಚಮನ ಮಾಡುವಂತೆ ಕುಡಿದನು,
ಅಲ್ಲಿ ಅಡಗಿದ್ದ
ಶತ್ರುಗಳಾದ ರಾತ್ರಿಂಚರರಾದ
ರಾಕ್ಷಸರು ಕಂಡಿದ್ದರು)
ಜಲಂ
ಶೂನ್ಯಂಗೊಂಡಿರ್ದೆಡೆಯೊಳವರಂ
ಕಂಡು ರುಷೆಯಿಂ
ಖಲ!
ವ್ಯಾಪಾದಂ
ಗೆಯ್ದಪೆವೆನುತೆ ಪೋದರ್ ಸುರರದ-
ಕ್ಕಲಕ್ಷ್ಯಂದೋರ್ವಂತಿರ್ದಪರಸುರರೇಂ
ನಿದ್ರೆಯೊಳೊ ಮೇಣ್
ಸುಲಭ್ಯಂ
ಮಿೞ್ತಾದತ್ತವರ ಪಡೆಗಂ ಕ್ರೂರಕೃತಿಗಂ
||೩೩||
(ನೀರೆಲ್ಲವೂ
ಖಾಲಿಯಾದ ಜಾಗದಲ್ಲಿ ಅವರನ್ನು
ಕಂಡು ರೋಷದಿಂದ, ದುಷ್ಟ!
ನಿನ್ನನ್ನು
ಸಾಯಿಸುತ್ತೇವೆ ಎಂದು ಹೇಳುತ್ತಾ
ಹೋದರು. ಅದಕ್ಕೆ
ಅಲಕ್ಷ್ಯವನ್ನು ತೋರುವಂತೆ
ರಾಕ್ಷಸರು ನಿದ್ದೆಯಲ್ಲಿದ್ದರೋ
ಏನೋ! ಸುಲಭವಾಗಿ
ಅವರ ಪಡೆಗೂ ಅವರ ಕ್ರೂರಕೃತ್ಯಗಳಿಗೂ
ಮೃತ್ಯುವಾಯಿತು.)
ಪ್ರಮದಾಕ್ರಾಂತಾ||
ಮೃತರಾಗಿರ್ದರ್
ಸುರರಹಿತರಾ ಕಾಲಕೇಯಾದಿಗಳ್ ಸಂ-
ಸ್ಕೃತಮಾದತ್ತಾತ್ಮಮವರದು
ಮೇಣ್ ದೈವಲೀಲಾವಿಚಾರಂ
ಚ್ಯುತಮೆಂದಕ್ಕುಂ
ಘಟಭವನಿದಿರ್ ಧರ್ಮಮಂ ರಕ್ಷಿಪರ್ಗಂ
ಹಿತಮಂ
ಧರ್ಮಂ ಕುಡುವುದನಿಶಂ ನಿರ್ಜರರ್ಗಿತ್ತವೋಲೇ
||೩೪||
(ದೇವತೆಗಳ
ಶತ್ರುಗಳಾದ ಕಾಲಕೇಯಾದಿ ರಾಕ್ಷಸರು
ಮೃತರಾದರು.
ಅವರ
ಆತ್ಮಗಳು ಸಂಸ್ಕೃತವಾದವು/ಸಂಸ್ಕಾರವನ್ನು
ಹೊಂದಿದವು,
ದೈವಲೀಲೆಯ
ವಿಚಾರಗಳು ಅಗಸ್ತ್ಯನ ಎದುರಿನಲ್ಲಿ
ಹೇಗೆ ಚ್ಯುತವಾಗಲು ಸಾಧ್ಯ!
ದೇವತೆಗಳಿಗೆ
ಕೊಟ್ಟ ಹಾಗೆಯೇ ಧರ್ಮವನ್ನು
ರಕ್ಷಿಸುವವರಿಗೆ ಧರ್ಮವೇ ಹಿತವನ್ನು
ಕೊಡುತ್ತದೆ.
)
ನಿಜಗರ್ವಾಂಧಂ
ಜಲಧಿಗೆಱೆಯಂ ಪೇೞ್ದನಾರ್ತಾತ್ಮನಾಗಳ್
ಸೃಜಿಸೆನ್ನಂ
ನೀನೆನುತೊಡಲೊಳೇ ಕುಂಭಸಂಜಾತನಾತಂ
ವಿಜಿತಂ
ಗರ್ವಂಗಳನೆನುತೆ ತಾಂ ಮೂತ್ರದಂತೀಯಲಿತ್ತಂ
ಕುಜರಂಧ್ರಂ
ತುಂಬಿದುದದುವೆ ವಿಖ್ಯಾತಮಾ
ಸಾಗರಾಖ್ಯಂ ||೩೫||
(ತನ್ನ
ಗರ್ವದಿಂದ ಅಂಧನಾಗಿದ್ದ ಸಮುದ್ರರಾಜನು
ಆಗ ಆರ್ತನಾಗಿ “ನನ್ನನ್ನು ಸೃಜಿಸು”
ಎಂದು ಹೇಳಲು,
ಕುಂಭಸಂಭವನು
“ಇವನು ಗರ್ವವನ್ನು ಗೆದ್ದಿದ್ದಾನೆ
"
ಎನ್ನುತ್ತಾ
ಮೂತ್ರದಂತೆ ವಿಸರ್ಜಿಸಲು,
ಭೂಮಿಯ
ರಂಧ್ರಗಳು ತುಂಬಿದವು.
ಅದೇ
ವಿಖ್ಯಾತವಾದ ಸಾಗರವಾಯ್ತು)
ಹರಿಣೀ||
ಸುರರ
ಖತಿಗಳ್ ತೀರ್ದತ್ತಾಗಳ್ ಸಮುದ್ರದ
ಗರ್ವಮುಂ
ಹರಿಯ
ಬಗೆಯೊಳ್ ಸಂದಂತಾಗಲ್ಕಗಸ್ತ್ಯಮುನೀಶ್ವರಂ
ಪರಮತಪಕಂ
ಪೋದಂ ಪಿಂ ಕಾನನಕ್ಕೆನುತಾಗಳೇ
ನೆಱೆದುದಿಳೆಯೊಳ್
ಸಮ್ಯಗ್ ಜ್ಞಾನಂ ಪ್ರಶಾಂತಿಯುಮೊಳ್ಪಿನಿಂ
||೩೬||
(ದೇವತೆಗಳ
ಕೋಪವು ತೀರಿತ್ತು,
ಸಮುದ್ರದ
ಗರ್ವವೂ ತೀರಿತ್ತು.
ಹರಿಯ
ಮನಸ್ಸಿನಲ್ಲಿರುವಂತೆಯೇ ಆಯಿತೆಂದು
ಅಗಸ್ತ್ಯಮುನೀಶ್ವರನು ಪರಮತಪಸ್ಸನ್ನು
ಮಾಡಲು ಹಿಂದೆ ಕಾನನಕ್ಕೆ ಹೋದನು.
ಆಗ
ಭೂಮಿಯಲ್ಲಿ ಸರಿಯಾದ ಜ್ಞಾನ
ಶಾಂತಿಗಳು ಒಳ್ಳೆಯ ರೀತಿಯಲ್ಲಿ
ನೆಲೆಸಿದುವು)
||ಇಂತು
ಸಮುದ್ರಗರ್ವಭಂಗಮುಂ ಕಾಲಕೇಯಹನನಮುಮೆಂಬ
ಚತುರ್ಥಂ ಸರ್ಗಂ||
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ