Powered By Blogger

ಸೋಮವಾರ, ಜುಲೈ 27, 2020

ನೆನೆವುದೆನ್ನ ಮನಂ- ಹಳಗನ್ನಡದ ಕಥೆ

~ನೆನೆವುದೆನ್ನ ಮನಂ~
(ಹಳಗನ್ನಡದ ಕಥಾನಕ- ಹಳೆಗನ್ನಡದ ಅನುವಾದಿತ ಹೊಸಗನ್ನಡದ ಛಾಯೆ ಆವರಣದಲ್ಲಿ ಕೊಟ್ಟಿದೆ)
(ಕನ್ನಡದ ಕವಿಗಳ ಇತಿಹಾಸದಲ್ಲಿ ಮಹತ್ತರವಾದ ಸ್ಥಾನವನ್ನು ಹೊಂದಿದ ಇಬ್ಬರು ಕವಿಗಳಾದ ಪಂಪ ಹಾಗೂ ರನ್ನರ  ಕುರಿತ ಈ ಕಥೆಯು ೨೦೧೯ರ ಜನವರಿ ಹಾಗೂ ಫೆಬ್ರುವರಿಯ ತುಷಾರ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. )


PC:internet
ಬೆಳುಗೊಳದ ಗಿರಿಯ ಬಂಡೆಯ ಮೇಲೆ ತಮ್ಮ ಪೆಸರಂ ಬರೆಯಿಸುವಾಗಳ್ ಚಾವುಂಡರಾಯಂ ಕವಿರತ್ನಂಗೆ- “ಭರತೇಶಚಕ್ರವರ್ತಿಯೆ ತನ್ನ ಪೆಸರಂ ವೃಷಭಾಚಲದ ಮೇಲೆ ಕೆತ್ತಿಸಲ್ ಪೋದಾಗಳಲ್ಲಿ ಅನೇಕಕಲ್ಪಶತಕೋಟಿಗಳೊಳ್ ರಾಜರ್ ತಂತಮ್ಮ ಪೆಸರಂ ಬರೆಯಿಸಿರ್ಪುದಂ ಕಂಡು ಅದನೞುಪಲುದ್ಯುಕ್ತನಾದಂ. ಅಂತುಟೆ ಮತ್ತಾರೊ ಬಂದು ನಮ್ಮ ಪೆಸರಂ ಅೞುಪುವರ್! ಆದೊಡಂ ಏಕಿಂತು ಉತ್ಸಾಹಮೊ ನಿಮಗೆ?” ಎಂದು ಪೇೞುತ್ತುಂ ತನ್ನ ಹಸ್ತಾಕ್ಷರಮಂ ಶಿಲ್ಪಿಗಳ್ಗೆ ಕೊರೆಯಲ್ವೇೞ್ದುದುಂ, ರನ್ನಂ ಆಗಳ್ “ಶ್ರೀಕವಿರತ್ನ” ಎಂದು ಬರೆದು ನಸುನಗುತ್ತುಂ ನಿಂತಿರ್ದುದುಂ ಚಾವುಂಡರಾಯರಂ ಬೀಳ್ಕೊಂಡು ಬಂದಾಗಳ್ ಅವನ ಮನದೊಳೆ ಸುಳಿದತ್ತು. 
(ಶ್ರವಣಬೆಳುಗೊಳದ ಬಂಡೆಯ ಮೇಲೆ ತಮ್ಮ ಹೆಸರನ್ನು ಬರೆಯಿಸುವಾಗ ಚಾವುಂಡರಾಯನು ಕವಿರತ್ನನಿಗೆ- “ಭರತೇಶ ಚಕ್ರವರ್ತಿಯೇ ತನ್ನ ಹೆಸರನ್ನು ವೃಷಭಾಚಲದ ಮೇಲೆ ಕೆತ್ತಿಸಲು ಹೋದಾಗ ಅಲ್ಲಿ ಅನೇಕಶತಕೋಟಿಕಲ್ಪಗಳ ಕಾಲದಲ್ಲಿ  ರಾಜರು ತಮ್ಮ ತಮ್ಮ ಹೆಸರನ್ನು ಬರೆಸಿರುವುದನ್ನು ಕಂಡು ಅದನ್ನು ಅಳಿಸಲು ತೊಡಗಿದನು. ಹಾಗೆಯೇ ಮತ್ತೆ ಯಾರೋ ಬಂದು ನಮ್ಮ ಹೆಸರನ್ನು ಅಳಿಸುವರು!. ಹಾಗಿದ್ದರೂ ನಿಮಗೆ ಏಕೆ ಇಷ್ಟು ಉತ್ಸಾಹವೋ?” ಎಂದು ಹೇಳುತ್ತ ಶಿಲ್ಪಿಗಳಿಗೆ ತನ್ನ ಹಸ್ತಾಕ್ಷರವನ್ನು ಕೊರೆಯಲು ಹೇಳಿರುವುದೂ, ರನ್ನನು ಆಗ “ಶ್ರೀಕವಿರತ್ನ” ಎಂದು  ಬರೆದು ನಸುನಗುತ್ತ ನಿಂತಿರುವುದೂ ಚಾವುಂಡರಾಯರನ್ನು ಬೀಳ್ಕೊಂಡು ಬಂದಾಗ ಅವನ ಮನಸ್ಸಿನಲ್ಲಿ ಸುಳಿಯಿತು)
ದಿಟದಿಂ ರನ್ನಂಗಿರ್ಪ ಯಶಃಕಾಮನೆ ಚಾಮುಂಡರಾಯರ್ಗಿಲ್ಲಂ. ಸವಣರ್ಗೆ ಅನುಕೂಲಮಂ ಗೆಯ್ವುದುಂ ಅಂತೆಯೆ ಕಾವ್ಯಾಸ್ವಾದನಮಂ ಮಾೞ್ಪುದುಂ ಅವರ ಕರ್ತವ್ಯಮೆಂಬಂತೆ ನಿಚ್ಚಮುಂ ನೋಂತಿರ್ದಪರ್. ಅಂತುಟೆ ಕೇಳಿವಂದವರ್ಗೆ ಇಲ್ಲಮೆಂಬ ನುಡಿಯಂ ನುಡಿಯೆನೆಂಬ ಪೂಣ್ಕೆಗೆಯ್ದಂತೆ ಕಜ್ಜಮಂ ಗೆಯ್ದಪರ್, ದಾನಮಂ ನೀೞ್ದಪರ್. (ದಿಟದಿಂದ ರನ್ನನಿಗೆ ಇರುವ ಯಶಸ್ಸಿನ ಬಯಕೆ ಚಾವುಂಡರಾಯರಿಗಿಲ್ಲ. ಸವಣರಿಗೆ ಅನುಕೂಲವನ್ನು ಮಾಡುವುದೂ, ಹಾಗೆಯೇ ಕಾವ್ಯಾಸ್ವಾದವನ್ನು ಮಮಾಡುವುದೂ ಅವರ ಕರ್ತವ್ಯವೆನ್ನುವಂತೆ ನಿತ್ಯವೂ ನೋಂತಿದ್ದರು. ಹಾಗೆಯೇ ಕೇಳಿಕೊಂಡು ಬಂದವರಿಗೆ “ಇಲ್ಲ” ಎಂಬ ನುಡಿಯನ್ನು ನುಡಿಯಲಾರೆನೆಂದು ಪ್ರತಿಜ್ಞೆ ಮಾಡಿದಂತೆ ಕೆಲಸವನ್ನು ಮಾಡುತ್ತಿದ್ದರು, ದಾನವನ್ನು ನೀಡುತ್ತಿದ್ದರು)  ಅದು ಕಾರಣಂ ಧರ್ಮಪುರಕ್ಕಂ ಪೋಗಲಾಶಿಸಿರ್ಪ ಕವಿರತ್ನಂಗೆ ಸಂಚಾರಮನುಕೂಲಮಪ್ಪಂತೆ ದಂಡನಾಯಕರ್ ಚಾವುಂಡರಾಯರ್ ಕುದುರೆಯಂ ನೀೞ್ದು ಕಳುಪಿರ್ದಪರ್. ಚಿರಕಾಲದಿಂದೊದವಿರ್ಪ ಕಾವ್ಯಾಸ್ವಾದಸಾಹಚರ್ಯದಿಂದಂ ವಯೋವ್ಯತ್ಯಾಸಮಿರ್ದುಂ ಇರ್ವರೊಳ್ ಕೆಳೆ ಬಳೆದುದಲ್ಲದೆಯುಂ ಗುರುಗಳಾದ ಅಜಿತಸೇನಾಚಾರ್ಯರೇ ಚಾವುಂಡರಾಯರ್ಗಂ “ದಿಟದಿಂ ಭವಿತವ್ಯದೊಳ್ ಈ ರತ್ನಂ ಕಬ್ಬಿಗರ ರತ್ನನೆನಿಪ್ಪಂ. ನೀಮಾತನಂ ಪೋಷಿಪೊಡೆ ನಿಮಗಂ ಕಾವ್ಯಾಸ್ವಾದಕ್ಕಂ ಕೆಳೆಯಪ್ಪುದು, ಆತಂಗಂ ಆಶ್ರಯಮುಮಪ್ಪುದು” ಎಂದು ಪೇೞಿರ್ದಪರ್. (ಅದೆ ಕಾರಣಕ್ಕೆ ಧರ್ಮಪುರಕ್ಕೆ ಹೋಗಲು ಆಶಿಸಿದ್ದ ಕವಿರತ್ನನಿಗೆ ಸಂಚಾರಕ್ಕೆ ಅನುಕೂಲವಾಗುವಂತೆ ದಂಡನಾಯಕರಾದ ಚಾವುಂಡರಾಯರು ಕುದುರೆಯನ್ನು ಕೊಟ್ಟು ಕಳಿಸಿದ್ದರು. ಚಿರಕಾಲದಿಂದ ದೊರೆತ ಕಾವ್ಯಾಸ್ವಾದನೆಯ ಸಾಹಚರ್ಯದಿಂದ ವಯಸ್ಸಿನಲ್ಲಿ ವ್ಯತ್ಯಾಸವಿದ್ದರೂ ಇಬ್ಬರಲ್ಲಿ ಗೆಳೆತನ ಬೆಳೆದಿತ್ತು, ಅಷ್ಟಲ್ಲದೇ ಗುರುಗಳಾದ ಅಜಿತಸೇನಾಚಾರ್ಯರೇ ಚಾವುಂಡರಾಯರಿಗೆ- “ನಿಜವಾಗಿಯೂ ಭವಿಷ್ಯದಲ್ಲಿ ಈ ರತ್ನನು ಕಬ್ಬಿಗರ ರತ್ನ  ಎನಿಸುತ್ತಾನೆ.  ನೀವು ಆತನನ್ನು ಪೋಷಿಸಿದರೆ ನಿಮಗೆ ಕಾವ್ಯಾಸ್ವಾದಕ್ಕೆ ಗೆಳೆತನ ಆಗುತ್ತದೆ. ಆತನಿಗೂ ಆಶ್ರಯವಾಗುತ್ತದೆ” ಎಂದು ಹೇಳಿದ್ದರು.) ಮುದುವೊೞಲಿಂದೈತಂದು ಪಲವು ಕಾಲದಿಂ ಜೀವಿಕೆಯಂ ಕುಱಿತು ಚಿಂತಿಸುತ್ತುಮಿರ್ದ ರನ್ನಂಗೆ ಚಾವುಂಡರಾಯರ ಆಶ್ರಯಂ ದಿಟದಿಂದೆ ಬಹ್ವನುಕೂಲಕರಮಾದುದು. ಅಂತಲ್ಲದಿರ್ದೊಡಂ ಕುಲವೃತ್ತಿಯಾದ ಬಳೆಗಾಱಿಕೆಯಂ ಮಾಡಲ್ಕೆ ಆತನೊಳ್ ಮನಮಿಲ್ಲದೆ ಕವಿತ್ವಾಸಕ್ತಿಯಂ ಪೋಷಿಸಲಾಱದೆ, ಬಳೆಗಳಂ ಮಾರಲ್ಕೆ ಪೇೞುವ ತಂದೆ ಜಿನವಲ್ಲಭನ ಮಾತಂ ಮೀರಲಾಱದೆ, ರನ್ನಂ ನಿಷ್ಪ್ರಯೋಜಕನೆಂದು ದೂಸಣೆಗೆಯ್ವ ಪೆಱರ ನುಡಿಗಳಂ ಕೇಳಲಾಱದೆ ಮನೆಯಿಂದೆ ಪೊಱಮಟ್ಟು ತನ್ನ ಇಚ್ಛೆಯಂ ಸಾಧಿಪನ್ನೆಗಂ ಪಿಂದಿರುಗಿ ಬರಲಾಱೆಂ ಎಂದು ಪೂಣ್ದವಂಗೆ ಪ್ರತಿದಿನಮುಂ ನಗಭಾರಮೇ ತಲೆಯ ಮೇಲ್ ಬಿೞ್ದಂತೆ ಭಾಸಮಾಗುತ್ತಿರಲ್ಕೆ ಅಜಿತಸೇನಾಚಾರ್ಯರೊಳ್ ಸೇವೆಗೆಯ್ವ ಅವಕಾಶಂ ದೊರೆತುದು.(ಮುದುವೊಳಲಿಂದ (ಮುಧೋಳ) ಬಂದು ಹಲವು ಕಾಲದಿಂದ ಜೀವಿಕೆಯನ್ನು ಕುರಿತು ಚಿಂತಿಸುತ್ತಿದ್ದ ರನ್ನನಿಗೆ ಚಾವುಂಡರಾಯರ ಆಶ್ರಯ ದಿಟದಿಂದ ಬಹಳ ಅನುಕೂಲಕರವಾಯಿತು. ಹಾಗಲ್ಲದಿದ್ದರೆ ಕುಲವೃತ್ತಿಯಾದ ಬಳೆಗಾರಿಕೆಯನ್ನು ಮಾಡಲು ಆತನಿಗೆ ಮನಸ್ಸಿಲ್ಲದೆ, ಕವಿತ್ವಾಸಕ್ತಿಯನ್ನು ಪೋಷಿಸಲಾರದೇ, ಬಳೆಗಳನ್ನು ಮಾರಲು ಹೇಳುವ ತಂದೆ ಜಿನವಲ್ಲಭನ ಮಾತನ್ನು ಮೀರಲಾರದೇ, ರನ್ನನು ನಿಷ್ಪ್ರಯೋಜಕ ಎಂದು ದೂಷಿಸುವ ಇತರರ ನುಡಿಗಳನ್ನು ಕೇಳಲಾರದೆ, ಮನೆಯಿಂದ ಹೊರಟು ತನ್ನ ಇಚ್ಛೆಯನ್ನು ಸಾಧಿಸುವ ತನಕ ಹಿಂದಿರುಗಿ ಬರಲಾರೆ ಎಂದು ಪ್ರತಿಜ್ಞೆ ಮಾಡಿದವನಿಗೆ ಪ್ರತಿದಿನವೂ ಪರ್ವತದ ಭಾರವೇ ತಲೆಯ ಮೇಲೆ ಬಿದ್ದಂತೆ ಭಾಸವಾಗುತ್ತಿರುವಾಗ ಅಜಿತಸೇನಾಚಾರ್ಯರಲ್ಲಿ ಸೇವೆ ಮಾಡುವ ಅವಕಾಶ ದೊರೆತಿತ್ತು) ಆ ಬೞಿಕ್ಕಂ ಪಲವು ಕಾಲಂ ಅವರೊಳ್ ಶಿಷ್ಯನಾಗಿರಲ್ಕೆ ಇಂತು ಚಾವುಂಡರಾಯರ ಬೞಿಗೆ ಅವರ್ ಕಳುಪಿರ್ದಪರ್. ಇಂತುಟು ಜೀವಿಕೆಗೆ ಅನುಕೂಲಮಾಗಿರೆ ಕವಿತ್ವದೊಳ್ ಜಸಮಂ ಪಡೆಯಲ್ವೇಳ್ಕುಮೆಂದು ಬಹುಕಾಲದಿಂದಂ ಯತ್ನಿಸುತ್ತುಂ ಸಫಲತೆಯಂ ಕಾಣಲಾಱದಂತಿರ್ದಂ. ಆಗಳೀಗಳ್ ಕೆಲವೊಂದು ಮುಕ್ತಕಗಳಂ ಬರೆದು ಪೇೞ್ದು ಚಾವುಂಡರಾಯರಂ ಸಂತೋಷಿಪುದರ ಜತೆಯೊಳ್ ಭವ್ಯತರಮಾದ ಕೃತಿಯೊಂದಂ ರಚಿಸಲ್ ಚಿಂತಿಸುತ್ತಿರ್ದಪಂ ರತ್ನಂ. (ಆ ಬಳಿಕ, ಹಲವು ಕಾಲ ಅವರಲ್ಲಿ ಶಿಷ್ಯನಾಗಿರಲು ಹೀಗೆ ಚಾವುಂಡರಾಯರ ಬಳಿಗೆ ಅವರು ಕಳಿಸಿದ್ದರು. ಹೀಗೆ ಜೀವಿಕೆಗೆ ಅನುಕೂಲವಾಗಿರಲು ಕವಿತ್ವದಲ್ಲಿ ಯಶಸ್ಸನ್ನು ಪಡೆಯಬೇಕೆಂದು ಬಹುಕಾಲದಿಂದ ಯತ್ನಿಸುತ್ತ ಸಫಲತೆಯನ್ನು ಕಾಣಲಾರದಂತಿದ್ದನು. ರತ್ನನು ಆಗೀಗ ಕೆಲವೊಂದು ಮುಕ್ತಕಗಳನ್ನು ಬರೆದು ಹೇಳಿ ಚಾವುಂಡರಾಯರನ್ನು ಸಂತೋಷಿಸುವುದರ ಜೊತೆಯಲ್ಲಿ ಭವ್ಯತರವಾದ ಕೃತಿಯೊಂದನ್ನು ರಚಿಸಲು ಚಿಂತಿಸಿತ್ತಿದ್ದನು.)
ಅಂತಲ್ಲದೆಯುಂ ಚಾವುಂಡರಾಯರೇ “ರನ್ನಮಯ್ಯ! ನೀಂ ದಿಟದಿಂ ನಿಪುಣಕವಿ. “ಮುಕ್ತಕೇ ಕವಯೋsನಂತಾಃ” ಎಂಬುದಂ ಕೇಳಿರ್ಪಿರಲ್ತೇ? ಅಂತಾದೊಡಂ ಮುಕ್ತಕಂಗಳೊಳ್ ಮನಮಂ ನಿಲಿಸದೆ ಪ್ರಬಂಧಮಂ ರಚಿಸುವೆಡೆ ಚಿಂತಿಸಿಂ” ಎಂದು ಪೇೞಿರ್ದಪರ್. ಅದಱಿಂ ಕಿಂಚಿತ್ಕಾಲಂ ಮನದೊಳ್ ಬೇಸರಾವರಿಸಿರ್ದುಂ ಬೞಿಕ್ಕಂ ಅವರ ಮಾತಿನೊಳ್ ಸತ್ಯಮಂ ಸತ್ತ್ವಮುಮಂ ತಿಳಿದು ಅದಂ ಚಿಂತಿಸಿದಂ.(ಅಂತಲ್ಲದೆ ಚಾವುಂಡರಾಯರೇ “ರನ್ನಮಯ್ಯ! ನೀವು ದಿಟದಿಂದ ನಿಪುಣರಾದ ಕವಿಗಳು. “ ಮುಕ್ತಕೇ ಕವಯೋsನಂತಾಃ- ಮುಕ್ತಕದಲ್ಲಿ ಕವಿಗಳು ಲೆಕ್ಕವಿಲ್ಲದಷ್ಟು” ಎನ್ನುವುದನ್ನು ಕೇಳಿದ್ದೀರಲ್ಲವೇ? ಹಾಗಾಗಿ ಮುಕ್ತಕಗಳಲ್ಲಿ ಮನಸ್ಸನ್ನು ನಿಲ್ಲಿಸದೆ ಪ್ರಬಂಧವನ್ನು ರಚಿಸುವ ಕಡೆ ಚಿಂತಿಸಿರಿ” ಎಂದು ಹೇಳಿದ್ದರು. ಅದರಿಂದ ಸ್ವಲ್ಪ ಕಾಲ ಮನಸ್ಸಿನಲ್ಲಿ ಬೇಸರು ಆವರಿಸಿದ್ದು ಬಳಿಕ ಅವರ ಮಾತಿನಲ್ಲಿ ಸತ್ಯವನ್ನೂ ಸತ್ತ್ವವನ್ನೂ ತಿಳಿದು ಅದನ್ನು ಚಿಂತಿಸಿದನು) ಚಾವುಂಡರಾಯರೇ ಮತ್ತೊರ್ಮೆಗಂ “ನೀಂ ಇನ್ನುಂ ಇರ್ಪತ್ತಯ್ದು ಬರಿಸಂಗಳ ವಯಸ್ಸಿನ ಕಿರಿಯರ್! ಬಾೞ್ತೆಯೊಳ್ ಕಂಡಿರ್ಪುದುಂ ಅಲ್ಪಂ, ಕಾಲಂ ಕಳೆಯಲ್ವೇಳ್ಕುಂ. ಚಿಂತನೆ ಮಾಗಲ್ವೇಳ್ಕುಂ” ಎಂದಿರ್ದಪರ್. ಅದರ್ಕೆ ರನ್ನನುಂ ನಕ್ಕು “ಅಣ್ಣಯ್ಯ! ಬಾೞ್ಕೆ ಅಲ್ಪಮಲ್ತೇ! ಮೃತ್ಯುವೆಂಬುದು ಎಂದಾದೊಡಂ ಬಂದಪುದು. ಮುನ್ನಮೆ ಮನದ ಬಯಕೆಯಂ ತೀರ್ಚಲ್ವೇಳ್ಕುಂ. ಎನ್ನ ಚಿತ್ತದೊಳ್ ತೋರಿರ್ದಪುದಂ ಬರೆದಪೆಂ. ಕಾಲಂ ನಿರ್ಧರಿಪುದು ಕವಿರತ್ನನ ಕೃತಿಗಳೊಳ್ ಉತ್ಕೃಷ್ಟತೆಯಂ ಪಡೆವ ಕೃತಿಯಂ” ಎಂದು ಪೇೞಿರ್ದಪಂ. (ಮತ್ತೊಮ್ಮೆ ಚಾವುಂಡರಾಯರೇ- “ನೀವಿನ್ನೂ ಇಪ್ಪತ್ತೈದು ವರ್ಷಗಳ ವಯಸ್ಸಿನ ಕಿರಿಯರು! ಜೀವನದಲ್ಲಿ ಕಂಡಿರುವುದು ಅಲ್ಪ. ಕಾಲವು ಕಳೆಯಬೇಕು, ಚಿಂತನೆ ಮಾಗಬೇಕು” ಎಂದಿದ್ದರು. ಅದಕ್ಕೆ ರನ್ನನೂ ನಕ್ಕು- “ಅಣ್ಣಯ್ಯ! ಈ ಬಾಳಿಕೆ ಅಲ್ಪವಾದುದಲ್ಲವೇ! ಮೃತ್ಯುವೆನ್ನುವುದು ಎಂದಾದರೂ ಬರಬಹುದು. ಅದಕ್ಕಿಂತ ಮೊದಲೇ ಮನಸ್ಸಿನ ಬಯಕೆಯನ್ನು ತೀರಿಸಬೇಕು. ನನ್ನ ಚಿತ್ತದಲ್ಲಿ ತೋರಿರುವುದನ್ನು ಬರೆಯುವೆನು. ಕಾಲವು ಕವಿರತ್ನನ ಕೃತಿಗಳಲ್ಲಿ ಉತ್ಕೃಷ್ಟತೆಯನ್ನು ಪಡೆಯುವ ಕೃತಿಯನ್ನು ನಿರ್ಧರಿಸುವುದು” ಎಂದು ಹೇಳಿದ್ದನು.)
ಅಂತಿರೆ ಚಾವುಂಡರಾಯರುಂ ರತ್ನನುಂ ಒರ್ಮೆಗೆ ಪಂಪಕವಿಯ ವಿಕ್ರಮಾರ್ಜುನವಿಜಯಮಂ ಓದುತ್ತುಂ ಚರ್ಚಿಪಾಗಳ್ ಅಲ್ಲಿರ್ಪ ಸ್ವಾರಸ್ಯಂಗಳಂ ಕಂಡು ರತ್ನಂ “ಅಣ್ಣಯ್ಯ! ಪಂಪಕವಿಗಳ್ ಇನ್ನುಂ ಬರ್ದುಂಕಿರ್ಪರೇಂ? ನೀಮಾತನಂ ಕಂಡಿರ್ಪಿರೇಂ? ಅವರಂ ಕಂಡು ಕವಿತ್ವಮಂ ಕುಱಿತು ನುಡಿಸಲ್ವೇಳ್ಕುಂ. ಎನಗಂ ಅವರಂ ನೋಡಲ್ಕೆ ಸಾಹಾಯ್ಯಮಂ ಮಾೞ್ಪಿರೇಂ?” ಎಂದೆನೆ ಚಾವುಂಡರಾಯರ್ “ಲೆಂಬುಳವಾಟಕದೊಳ್ ಬಹುಕಾಲದ ಪಿಂತೆ ಕಂಡಿರ್ದಪೆಂ. ಚಾಳುಕ್ಯರ ಅರಸಂ ಅರಿಕೇಸರಿ ವಿಕ್ರಮಾರ್ಜುನವಿಜಯಮಂ ಕೇಳ್ದು ಧರ್ಮಪುರಮಂ ಇತ್ತರೆಂದು ಅವರೇ ಪೇೞಿರ್ಪರಲ್ತೆ! ಅಲ್ಲಿಗೆ ಪೋದೊಡಂ ತಿಳಿದಪುದು” ಎಂತೆನೆ “ಅದೆಲ್ಲಿರ್ಪುದು?” ಎಂದು ಪ್ರಶ್ನಿಸಿದಂ ರತ್ನಂ. “ಲೆಂಬುಳವಾಟಕಕ್ಕೆ ಪೋಗಿ ಕೇಳ್ದೊಡೆ ತಿಳಿದಪುದು” ಎಂದೆನೆ ರತ್ನನುತ್ಸುಕತೆಯಂ ಕಂಡು ಚಾವುಂಡರಾಯರ್ ಆತಂಗೆ ಪೋಗಲ್ಕೆ ಅನುಕೂಲಮಂ ಗೆಯ್ದಪರ್. ನಡೆಯಲ್ಕೆ ಬಹುದೂರಮೆಂದು ಕುದುರೆಯಂ ಕೊಟ್ಟಿರ್ದಪರ್. ಅಲ್ಲದೆ ಎರಡು ಮೂರು ದೆವಸಂಗಳಪ್ಪ ಸಂಚಾರಕಾಲದೊಳ್ ಭೋಜನಾದಿಗಳ್ಗೆ ಛತ್ರಂಗಳಿರ್ಪುವೆಂದು ಬಗೆದು ರನ್ನಂ ಬೇರೇನುಮಂ ಅಪೇಕ್ಷಿಸದೆ ವಸ್ತ್ರಂಗಳಂ ಅಂತೆಯೆ ತಾಂ ಬರೆದ ಕೆಲವು ಪದ್ಯಂಗಳಿರ್ಪ ತಾಳಪತ್ರಂಗಳುಮಂ ತನ್ನೊಡನಿರಿಸಿಕೊಂಡು ಜತೆಯೊಳ್, ಪರರಾಜ್ಯಮಂ ಪುಗಲ್ಕೆ ಅನುಕೂಲಮಪ್ಪಂತೆ ಚಾವುಂಡರಾಯರ್  ನೀೞ್ದ ಪರಿಚಯಪತ್ರಮುಮಂ ಪಿಡಿದು ಪೊರಮಟ್ಟಿರ್ದಪಂ. 
(ಹಾಗಿರುವಾಗ ಚಾವುಂಡರಾಯರೂ ರತ್ನನೂ ಒಮ್ಮೆಗೆ ಪಂಪಕವಿಯ ವಿಕ್ರಮಾರ್ಜುನವಿಜಯ- ಕಾವ್ಯವನ್ನು ಓದುತ್ತ ಚರ್ಚಿಸುತ್ತಿರುವಾಗ ಅಲ್ಲಿರುವ ಸ್ವಾರಸ್ಯಗಳನ್ನು ಕಂಡು ರತ್ನನು-” ಅಣ್ಣಯ್ಯ! ಪಂಪಕವಿಗಳು ಇನ್ನೂ ಬದುಕಿದ್ದಾರೆಯೇ? ನೀವು ಆತನನ್ನು ನೋಡಿರುವಿರೇ? ಅವರನ್ನು ಕಂಡು ಕವಿತ್ವದ ಕುರಿತು ನುಡಿಸಬೇಕು. ನನಗೆ ಅವರನ್ನು ನೋಡಲು ಸಹಾಯವನ್ನು ಮಾಡುವಿರಾ?” ಎಂದು ಹೇಳಲು ಚಾವುಂಡರಾಯರು,- “ಲೆಂಬುಳವಾಟಕದಲ್ಲಿ ಬಹಳಕಾಲದ ಹಿಂದೆ. ಕಂಡಿದ್ದೆ. ಚಾಳುಕ್ಯರ ಅರಸನಾದ ಅರಿಕೇಸರಿಯು ವಿಕ್ರಮಾರ್ಜುನವಿಜಯವನ್ನು ಕೇಳಿ ಧರ್ಮಪುರವನ್ನು ಕೊಟ್ಟರೆಂದು ಅವರೇ ಹೇಳಿರುವರಲ್ಲವೇ! ಅಲ್ಲಿಗೆ ಹೋದರೆ ತಿಳಿಯುತ್ತದೆ” ಎನಲು “ಅದೆಲ್ಲಿದೆ?” ಎಂದು ರತ್ನನು ಪ್ರಶ್ನಿಸಿದನು. “ಲೆಂಬುಳವಾಟಕಕ್ಕೆ ಹೋಗಿ ಕೇಳಿದರೆ ತಿಳಿಯುವುದು” ಎಂದು ರತ್ನನ ಉತ್ಸುಕತೆಯನ್ನು ಕಂಡು ಚಾವುಂಡರಾಯರು ಅವನಿಗೆ ಹೋಗಲು ಅನುಕೂಲವನ್ನು ಮಾಡಿದರು. ನಡೆಯುವುದಕ್ಕೆ ಬಹಳ ದೂರವೆಂದು ಕುದುರೆಯನ್ನು ಕೊಟ್ಟಿದ್ದರು. ಅಲ್ಲದೆ ಎರಡು ಮೂರು ದಿವಸಗಳ ಕಾಲದ ಸಂಚಾರಕಾಲದಲ್ಲಿ ಭೋಜನಕ್ಕೆ ಛತ್ರಗಳಿರುತ್ತವೆ ಎಂದು ಬಗೆದು ರನ್ನನು ಬೇರೆ ಏನನ್ನೂ ಅಪೇಕ್ಷಿಸದೆ ವಸ್ತ್ರಗಳನ್ನು ,ಹಾಗೆಯೇ ತಾನು ಬರೆದ ಕೆಲವು ಪದ್ಯಗಳಿರುವ ತಾಳಪತ್ರಗಳನ್ನೂ ತನ್ನೊಡನೆ ಇರಿಸಿಕೊಂಡು, ಜೊತೆಯಲ್ಲಿ ಪರರಾಜ್ಯವನ್ನು ಪ್ರವೇಶಿಸಲು ಅನುಕೂಲವಾಗುವಂತೆ ಚಾವುಂಡರಾಯರು ನೀಡಿದ ಪರಿಚಯಪತ್ರವನ್ನೂ ಹಿಡಿದುಕೊಂಡು ಹೊರಟಿದ್ದನು.)
ಮಾರ್ಗದೊಳ್ ನಿದ್ರೆಗಂ  ಅಶನಕ್ಕಂ ವಿರಮಿಸುತ್ತುಂ, ವಾಜಿಯ ನಾಗಾಲೋಟದೊಳ್ ಶೀಘ್ರದೊಳೆ ಸಾಗುತ್ತುಂ ಮಧ್ಯದೊಳ್ ಮಾನ್ಯಖೇಟಕ್ಕಮುಂ ಸಾರ್ದು ರಾಷ್ಟ್ರಕೂಟರ ದೊರೆಯೆನಿಸಿರ್ದ ಕನ್ನರನ ಆಸ್ಥಾನದೊಳಿರ್ದ ಕವಿಯಂ ಪುನ್ನಮಾರ್ಯನಂ ಕಂಡಿರ್ದಂ. ಅಂತು ಅಲ್ಲಿ ದಿನಮೊಂದಂ ಕಳೆದು ಪೊರಮಟ್ಟು ಲೆಂಬುಳವಾಟಕಮಂ ಸಾರ್ದು ವಿಚಾರಿಸೆ ಆರೋ ಒರ್ವರ್ ನಿರ್ದೇಶಿಸಿದಂತೆ ಧರ್ಮಪುರದ ಮಾರ್ಗಮಂ ತಿಳಿದುಕೊಂಡು ಆ ಮಾರ್ಗದೊಳ್ ಸಾರುತ್ತುಂ ಬರುತಿರೆ ಇರೆ ಅನತಿ ದೂರದೊಳ್ ಪೆರ್ಬಂಡೆಗಳಿಂದಿರ್ಪ ಕಿರಿದಾದ ಪರ್ವತಮೊಂದು ಕಂಡುದು. ಆ ಪರ್ವತದ ಬುಡದೊಳ್ ಕುದುರೆಯಂ ನಿಲಿಸಿ ರತ್ನಂ ಬಂಡೆಗಳ ಮೇಲಿರ್ದ ಮೆಟ್ಟಿಲ್ಗಳನೇರುತ್ತುಂ ವೆಟ್ಟನೇರ್ದಂ. ಕಿಂಚಿತ್ಕಾಲಂ ಸಂಚಾರಶ್ರಾಂತಿಯಂ ಕಳೆದುಕೊಳಲ್ಕೆ ಚಿಂತಿಸಿ ವಿಶ್ರಾಂತಿಗೆಂದು ಅಲ್ಲಿ ಕುಳಿತುಕೊಂಡಿರೆ ಎದುರಿಗಿರ್ಪ ಪೆರ್ಬಂಡೆಯ ಮೇಲೆ ಮೂಡಿಸಿರ್ದ ಚಕ್ರೇಶ್ವರಿದೇವಿಯ ಮೂರ್ತಿಯುಂ ಭರತಬಾಹುಬಲಿಗಳ ಮತ್ತೆ ಕೆಲಬರ್ ದಿಗಂಬರಸವಣರ ಮೂರ್ತಿಗಳುಂ ಕಾಣಿಸೆ ಚಿತ್ತದೊಳ್ ಜೈನರಾವಾಸಕ್ಕೆ ಸಮೀಪದೊಳೆ ತಾನಿರ್ಪೆನೆಂಬುದು ಸ್ಪಷ್ಟಮಾದುದು. ಮಧ್ಯಾಹ್ನದ ಭೋಜನಮಂ ಲೆಂಬುಳವಾಟಕದೊಳೆ ಸಮಾಪ್ತಿಗೆಯ್ದು ಪೊರಮಟ್ಟಿರ್ದಪ ರತ್ನಂಗೆ ಬಿಸಿಲೊಳ್ ಬಂದ ಕಾರಣಂ ಬೆಮರ್ ಪರಿದುದು ಅಂತಲ್ಲದೆಯುಂ ತಂದ್ರತೆಯಾದುದು. ಅಂತಿರೆ ಚಕ್ರೇಶ್ವರಿಗಂ ನಮಿಸಿ ಆ ವೆಟ್ಟಿನ ಬಂಡೆಯ ಮೇಲೆ ನೆರಳಿರ್ಪ ತಾಣದೊಳ್ ಮಲಂಗಿದಂ. ನಿದ್ರೆಯುಮಾವರಿಸಿದುದು. 
(ಮಾರ್ಗದಲ್ಲಿ ನಿದ್ರೆಗೆ ಹಾಗೂ ಊಟಕ್ಕೆ ವಿರಮಿಸುತ್ತಾ, ಕುದುರೆಯ ನಾಗಾಲೋಟದಲ್ಲಿ ಶೀಘ್ರದಲ್ಲಿಯೆ ಸಾಗುತ್ತಾ ಮಧ್ಯದಲ್ಲಿ ಮಾನ್ಯಖೇಟ ನಗರಕ್ಕೂ ಹೋಗಿ ರಾಷ್ಟ್ರಕೂಟರ ದೊರೆಯಾದ ಕನ್ನರನ ಆಸ್ಥಾನದಲ್ಲಿದ್ದ ಪುನ್ನಮಾರ್ಯನನ್ನು (ಪೊನ್ನ) ಕಂಡಿದ್ದ. ಹಾಗೆ ಅಲ್ಲಿ ಒಂದು ದಿನವನ್ನು ಕಳೆದು ಹೊರಟು ಲೆಂಬುಳವಾಟಕವನ್ನು ತಲುಪಿ ವಿಚಾರಿಸಲು ಯಾರೋ ಒಬ್ಬರು ನಿರ್ದೇಶಿಸಿದಂತೆ ಧರ್ಮಪುರದ ಮಾರ್ಗವನ್ನು ತಿಳಿದುಕೊಂಡು ಆ ಮಾರ್ಗದಲ್ಲಿಯೇ ಸಾಗುತ್ತ ಬರುತ್ತಿರಲು ಸ್ವಲ್ಪ ದೂರದಲ್ಲಿಯೇ ದೊಡ್ಡ ಬಂಡೆಗಳಿರುವ ಕಿರಿದಾದ ಪರ್ವತವೊಂದು ಕಂಡಿತು. ಆ ಪರ್ವತದ ಬುಡದಲ್ಲಿ ಕುದುರೆಯನ್ನು ನಿಲಿಸಿ ರತ್ನನು ಬಂಡೆಗಳ ಮೇಲಿದ್ದ ಮೆಟ್ಟಿಲುಗಳನ್ನು ಏರುತ್ತ ಬೆಟ್ಟವನ್ನು ಹತ್ತಿದನು. ಕೆಲವುಕಾಲ ಸಂಚಾರದಿಂದಾದ ಆಯಾಸವನ್ನು ಕಳೆಯಲು ಯೋಚಿಸಿ ವಿಶ್ರಾಂತಿಗೆಂದು ಕುಳಿತುಕೊಂಡಿರಲು ಎದುರಿಗಿರುವ ದೊಡ್ಡ ಬಂಡೆಯ ಮೇಲೆ ಮೂಡಿಸಿದ್ದ ಚಕ್ರೇಶ್ವರಿದೇವಿಯ ಮೂರ್ತಿಯೂ ಭರತಬಾಹುಬಲಿಗಳ ಮತ್ತೂ ಕೆಲವರು ದಿಗಂಬರ ಸವಣರ ಮೂರ್ತಿಗಳೂ ಕಾಣಿಸಲು ಮನಸ್ಸಿನಲ್ಲಿ ಜೈನರ ಆವಾಸಕ್ಕೆ ಸಮೀಪದಲ್ಲಿಯೇ ತಾನಿದ್ದೇನೆ ಎಂಬುದು ಸ್ಪಷ್ಟವಾಯಿತು. ಮಧ್ಯಾಹ್ನದ ಭೋಜನವನ್ನು ಲೆಂಬುಳವಾಟಕದಲ್ಲೇ ಮುಗಿಸಿಕೊಂಡು ಹೊರಟಿದ್ದ ರತ್ನನಿಗೆ ಬಿಸಿಲಿನಲ್ಲಿ ಬಂದ ಕಾರಣ ಬೆವರು ಹರಿದಿತ್ತು. ಅಂತಲ್ಲದೆ ತೂಕಡಿಕೆಯೂ ಬರುತ್ತಿತ್ತು. ಹಾಗಿರಲು ಚಕ್ರೇಶ್ವರಿಗೆ ನಮಿಸಿ ಆ ಬೆಟ್ಟದ ಬಂಡೆಯ ಮೇಲೆ ನೆರಳಿರುವ ತಾಣದಲ್ಲಿ ಮಲಗಿದನು. ನಿದ್ರೆಯೂ ಆವರಿಸಿದುದು)
ಸಿದ್ಧಶಿಲೆಯ ಮೇಲೆ ಶೈಶವದೊಳವತರಿಸಿದ ಕೇವಲಿಯಂತೆ ರತ್ನಂ ನಿದ್ರಿಸಿರಲಾತನ ರೂಪನದೇವಣ್ಣಿಪುದು! ದಿವ್ಯಾನುಭೂತಿಯಂ ಕಾಣುತಿರ್ಪ ಯೋಗಿಯಂದದೆ ಮುಚ್ಚಿರ್ಪ ಕಣ್ಗಳ್, ನಿರಾತಂಕಮಾದ ಮನದ ತಿಳಿತನವನಱುಪುವಂತಿರ್ಪ ಕನಕರುಚಿಯ ವದನಂ, ಕವಿತ್ವಕ್ಕೆ ಬಲ್ಮೆಯೀವ ವಕ್ರೋಕ್ತಿಯೇ ಮೂರ್ತೀಭವಿಸಿದಂದಂ ಕಾಣ್ಬ ಸುರುಳಿಗುರುಳ್ಗಳ್ ಸೊಗಸೆನಿಪ ಸುಕುಮಾರತನುಚ್ಛವಿಯುಂ ಅದರ್ಕೆ ತೊಟ್ಟ ದುಗುಲಮುಂ ಆತಂಗುಚಿತಮೆನಿಸಿರ್ಕುಂ. 
(ಸಿದ್ಧಶಿಲೆಯ ಮೇಲೆ ಶೈಶವದಲ್ಲಿ ಅವತರಿಸಿದ ಕೇವಲಿಯಂತೆ ರತ್ನನು ನಿದ್ರಿಸಿರಲು ಆತನ ರೂಪವನ್ನು ಅದೆಂತು ವರ್ಣಿಸುವುದು! ದಿವ್ಯಾನುಭೂತಿಯನ್ನು ಕಾಣುತ್ತಿರುವ ಯೋಗಿಯಂತೆ ಮುಚ್ಚಿರುವ ಕಣ್ಣುಗಳು, ನಿರಾತಂಕವಾದ ಮನಸ್ಸಿನ ತಿಳಿತನವನ್ನು ಅರುಹುವಂತಿರುವ ಬಂಗಾರದಕಾಂತಿಯ ಮೈಬಣ್ಣ, ಕವಿತ್ವಕ್ಕೆ ಬಲ್ಮೆಯನ್ನು ಕೊಡುವ ವಕ್ರೋಕ್ತಿಯೇ ಮೂರ್ತೀಭವಿಸಿದಂತೆ ಕಾಣುವ ಸುರುಳಿಯಾದ ಮುಂಗುರುಳುಗಳು, ಸೊಗಸಾದ ಸುಕುಮಾರ ದೇಹದ ಛವಿಯೂ ಅದಕ್ಕೆ ತೊಟ್ಟ ದುಕೂಲವೂ ಆತನಿಗೆ ಯೋಗ್ಯವೆನಿಸಿದ್ದವು)
ಸ್ವಲ್ಪಕಾಲಾನಂತರಂ ನೇಸರ್ ದೆಸೆಯಂ ಬದಲಿಸೆ ಬಿಸಿಲುಂ ಮೆಯ್ಗೆ ಸೋಂಕಿರಲೆಳ್ಚರ್ತು ಕುಳಿತಂ. ಕುದುರೆ ಕಾಣ್ಬುದೇ ಎಂದು ನಿರುಕಿಸಿ ಅದುಂ ಅಲ್ಲಿಯೆ ಪುಲ್ಲಂ ತಿನುತುಮಿರ್ಪುದಂ ಕಂಡು ನಿಶ್ಚಿಂತನಾಗಿ ಕುಳಿತಂ. ಚಕ್ರೇಶ್ವರಿಯ ಮೂರ್ತಿಯೆಡೆ ನೋಡೆ ಶಿಲಾಫಲಕದೊಳ್ ಅಕ್ಷರಂಗಳುಮಿರ್ದುದು ಕಂಡುದು. “ಅರರೆ! ಮೊದಲೊಳ್ ನೋಡಲಿಲ್ಲಂ! ಅಕ್ಕರಂಗಳೆನ್ನ ಕಣ್ಗೆ ಕಾಣದೆ ಪೋದುದು ಇದೆಂತುಟಾಶ್ಚರ್ಯಂ!” ಎಂದುಕೊಳುತ್ತುಂ ಅದನೋದತೊಡಗಿದಂ. “ಧರ್ಮ್ಮವುರದುತ್ತರ ದಿಗ್ಭಾಗದ ವೃಷಭಗಿರಿಯೆಂಬನಾದಿಸಂಸಿದ್ಧತೀರ್ಥದ….” ಎಂಬುದನೋದುತ್ತೆ- “ಅಃ! ಧರ್ಮಪುರಮಂ ತಲುಪಿದಂತಾಯ್ತು. ಇದು ದಲ್ ಧರ್ಮಪುರದ ಸೀಮೆಯೊಳಿರ್ಪ ಗಿರಿಯು” ಎಂದು ಭಾವಿಸಿ ಮುಂದೆ ಓದತೊಡಗಿದಂ. “ಕವಿತಾಗುಣಾರ್ಣವಮೆಂಬ ಕೆಱೆಯುಮಂ ಮದನವಿಳಾಸಮೆಂಬ ಬನಮುಮಂ ಮಾಡಿಸಿದಂ” ಎಂಬುದನೋದಿ “ಪಂಪದೇವರ ಸಮೀಪಮಂ ಸಾರ್ದಪೆಂ. ಕವಿತಾಗುಣಾರ್ಣವನೆಂಬ ಬಿರುದಂ ಪಡೆದಪರ ಪೆಸರೊಳೊಂದು ಕೆಱೆಯಂ ಕಟ್ಟಿಸಿರ್ಪರೆನೆ ಸೊಗಸಾದುದು” ಎಂದುಕೊಂಡಂ. ಮುಂದಣ ಸಕ್ಕದದ ವೃತ್ತಮಂ ವಾಚಿಸೆ “.ಈಕ್ಷಾಮಹೇ...... ಪಂಪಾರ್ಯ್ಯಾನುಜಮ್ ಅತ್ರ ಭೀಮತನುಜಂ ಸಮ್ಯಕ್ತ್ವರತ್ನಾಕರಂ” ಎಂಬುದನೋದಿ ಪಂಪನ ತಮ್ಮಂ ಇಲ್ಲಿರ್ಪುದು ದಿಟಮೆಂದು ಬಗೆದು ಇದು ಶಾಸನಂ ಪಂಪಂಗೆ ಅರಿಕೇಸರಿರಾಜಂ ನೀಳ್ದ ಧರ್ಮಪುರಮಂ ಕುಱಿತು ಜಿನವಲ್ಲಭನೆಂಬ ಪಂಪನ ತಮ್ಮಂ ಬರೆಸಿರ್ದಪುದು ಎಂದು ಬೆಸಂಗೊಂಡು ಆ ಸ್ಥಳದೊಳೆ ಮತ್ತೆ ಕುಳಿತಂ. ತಾನುಂ ತಂದಿರ್ದ ತಾಳಪತ್ರದೊಳ್ ಕೆಲವು ಪದ್ಯಂಗಳಂ ಬರೆದಪಂ.
(ಸ್ವಲ್ಪಕಾಲದ ಅನಂತರ ನೇಸರು ದಿಕ್ಕನ್ನು ಬದಲಿಸಲು, ಬಿಸಿಲೂ ಮೈಗೆ ಸೋಕಿರಲು ಎಚ್ಚರಾಗಿ ಕುಳಿತನು. ಕುದುರೆ ಕಾಣುವುದೇ ಎಂದು ನೋಡಿ, ಅದು ಅಲ್ಲಿಯೇ ಹುಲ್ಲನ್ನು ತಿನ್ನುತ್ತಿರುವುದನ್ನು ಕಂಡು ನಿಶ್ಚಿಂತನಾಗಿ ಕುಳಿತನು. ಚಕ್ರೇಶ್ವರಿಯ ಮೂರ್ತಿಯನ್ನು ನೋಡಲು ಶಿಲಾಫಲಕದಲ್ಲಿ ಅಕ್ಷರಗಳೂ ಇರುವುದು ಕಂಡಿತ್ತು. “ಅರರೆ! ಮೊದಲಿಗೇ ನೋಡಲಿಲ್ಲ! ಅಕ್ಷರಗಳು ನನ್ನ ಕಣ್ಣಿಗೆ ಕಾಣದೇ ಹೋದುದು  ಇದೆಂತಹ ಆಶ್ಚರ್ಯ!” ಎಂದುಕೊಳ್ಳುತ್ತ ಅದನ್ನು ಓದತೊಡಗಿದನು. “ಧರ್ಮಪುರದ ಉತ್ತರದಿಗ್ಭಾಗದ ವೃಷಭಗಿರಿಯೆಂಬ ಅನಾದಿಸಂಸಿದ್ಧತೀರ್ಥದ….” ಎಂಬುದನ್ನು ಓದುತ್ತ- “ಅಃ! ಧರ್ಮಪುರವನ್ನು ತಲುಪಿದಂತಾಯ್ತು. ಇದು ನಿಶ್ಚಯದಿಂದ ಧರ್ಮಪುರದ ಸೀಮೆಯಲ್ಲಿರುವ ಗಿರಿ” ಎಂದು ಭಾವಿಸಿ ಮುಂದೆ ಓದತೊಡಗಿದನು. “ಕವಿತಾಗುಣಾರ್ಣವ ಎಂಬ ಕೆರೆಯನ್ನೂ ಮದನವಿಳಾಸ ಎಂಬ ಬನವನ್ನೂ ಮಾಡಿಸಿದನು” ಎಂಬುದನ್ನು ಓದಿ “ಪಂಪದೇವರ ಸಮೀಪಕ್ಕೆ ತಲುಪಿದೆ. ಕವಿತಾಗುಣಾರ್ಣವ ಎಂಬ ಬಿರುದನ್ನು ಪಡೆದವರ ಹೆಸರಲ್ಲಿ ಒಂದು ಕೆರೆಯನ್ನು ಕಟ್ಟಿಸಿದ್ದಾರೆಂದರೆ ಸೊಗಸಾದುದು” ಎಂದುಕೊಂಡನು. ಮುಂದಿನ ಸಂಸ್ಕೃತದ ವೃತ್ತವನ್ನು ವಾಚಿಸಲು “ಸಮ್ಯಕ್ತ್ವರತ್ನಾಕರನಾದ ಭೀಮನ ಮಗನಾದ ಪಂಪಾರ್ಯನ ಸಹೋದರನನ್ನು ನೋಡೋಣ…” ಎಂಬುದನ್ನು ಓದಿ ಪಂಪನ ತಮ್ಮನು ಇಲ್ಲಿರುವುದು ದಿಟವೆಂದು ತಿಳಿದು ಈ ಶಾಸನವು ಪಂಪನಿಗೆ ಅರಿಕೇಸರಿ ರಾಜನು ನೀಡಿದ ಧರ್ಮಪುರವನ್ನು ಕುರಿತು ಜಿನವಲ್ಲಭನೆಂಬ ಪಂಪನ ತಮ್ಮನು ಬರೆಸಿರುವುದು ಎಂದು ತಿಳಿದುಕೊಂಡು ಆ ಸ್ಥಳದಲ್ಲಯೇ ಮತ್ತೆ ಕುಳಿತನು. ತಾನೂ ತಂದಿದ್ದ ತಾಳಪತ್ರದಲ್ಲಿ ಕೆಲವ ಪದ್ಯಗಳನ್ನು ಬರೆದನು)
ಅಂತುಟು ಬರೆಯುತ್ತುಂ ಪಂಪನ ರೂಪಮಂ ಕಲ್ಪಿಸಿಕೊಳಲ್ಕೆ ತಗುಳ್ದಂ.
“ಕದಳೀಗರ್ಭಶ್ಯಾಮಂ 
ಮೃದುಕುಟಿಲಶಿರೋರುಹಂ ಸರೋರುಹವದನಂ
ಮೃದುಮಧ್ಯಮತನು ಹಿತಮಿತ-
ಮೃದುವಚನಂ ಲಲಿತಮಧುರಸುಂದರವೇಷಂ||
ಎಂದು ಪೇೞಿರ್ಪರ್- ಅಂತೆನೆ ತನುಚ್ಛವಿ ಶ್ಯಾಮಲವರ್ಣಮಿರ್ಕುಂ, ಕುಟಿಲಕುಂತಳಮಿರ್ಕುಂ, ಅರಳಿರ್ಪ ಬಿತ್ತರದ ಮೊಗಂ. ಕೋಮಲಮಾದ ಕಾಯಮಿರ್ಕುಂ, ಸುಂದರಮಾದ ರೂಪಿರ್ಕುಂ, ಹಿತಮಿತಮಾದ ಮೃದುವಚನಮನಾಡುವರ್. ಅಂತೆಯೆ ದುಂದುಭಿಗಭೀರನಿನದಂ- ಎಂದು ಪೇೞಿರ್ಪರಲ್ತೆ! 
(ಹಾಗೆ ಬರೆಯುತ್ತಾ ಪಂಪನ ರೂಪವನ್ನು ಕಲ್ಪಿಸಿಕೊಳ್ಳಲು ಆರಂಭಿಸಿದನು.
“ಕದಳಿಯ ತಿರುಳ್ ಮೈಬಣ್ಣದ
ಮೃದು ಸುರುಳಿಯ ಕೂದಲಿರುವ ತಾವರೆಮೊಗದಾ
ಮೃದು ಮಧ್ಯಮಗಾತ್ರದ ಹಿತ-
ವೊದಗಿದ ನುಡಿ ಲಲಿತಮಧುರಸುಂದರವೇಷಂ||
ಎಂದು ಹೇಳಿದ್ದಾರೆ. ಹಾಗೆಂದರೆ ದೇಹಕಾಂತಿ ಶ್ಯಾಮಲವರ್ಣವಿದೆ. ಕುಟಿಲವಾದ ಕುಂತಳವಿದೆ. ಅರಳಿರುವ ವಿಶಾಲವಾದ ಮುಖವಿದೆ. ಕೋಮಲವಾದ ಶರೀರವಿದೆ. ಸುಂದರವಾದ ರೂಪವಿದೆ. ಹಿತಮಿತವಾದ ಮೃದುವಾದ ಮಾತುಗಳನ್ನಾಡುತ್ತಾರೆ. ಅಂತೆಯೇ ದುಂದುಭಿಯಂತೆ ಗಂಭೀರವಾದ ಸ್ವರವುಳ್ಳವನು ಎಂದೂ ಹೇಳಿದ್ದಾರಲ್ಲವೇ!)
ಅಂತಲ್ಲದೆಯುಂ ಪಲವೆಡೆಗಳೊಳ್ ಪಂಪಾರ್ಯರ್ ತಮ್ಮ ರಾಸಿಕ್ಯಮಂ ಸೂಚಿಸಿರ್ಪರ್. ಒಂದೆಡೆಯೊಳ್ “ಪಂಚಶರೈಕರೂಪಂ” ಎಂದಿರ್ಪರ್.  ಇನ್ನೊಂದೆಡೆಯೊಳ್ 
ವನಿತಾಕಟಾಕ್ಷಕುವಲಯ
ವನಚಂದ್ರಂ ಯುವತಿಜಘನಕಾಂಚೀರತ್ನಂ
ಸ್ತನಭರವಿನಮ್ರಗಣಿಕಾ
ಸ್ತನತಟಹಾರಂ ಸರಸ್ವತೀಮಣಿಹಾರಂ||
ಕೇರಳವಿಟೀಕಟೀಸೂತ್ರಾರುಣ ಮಣಿ ಮಲಯಯುವತಿದರ್ಪಣನಾಂಧ್ರೀ
ನೀರಂಧ್ರಬಂಧುರಸ್ತನಹಾರನುದಾರಂ ಸರಸ್ವತೀಮಣಿಹಾರಂ||
ಇಂತುಟು ನುಡಿದಿರ್ಪರೆನೆ ಪಲವು ಪೆಣ್ಗಳೊಡನಾಡಿದ ರತಚತುರನೆ ಸಲ್ಗುಂ. ಅಂತೆ ದಲ್ ಅರಿಕೇಸರಿಯುಂ ದಾಸಿಯರನಿತ್ತನೆಂದುಂ ಪೇೞಿರ್ಪರ್. ಅಂತುಟು ಸಂಸಾರಲೋಲುಪರಾಗಿರ್ಪರಿಂತುಟು ಕಬ್ಬಮಂ ಬರೆದಪರೆ!! ಅಂತುಟಲ್ಲದೆ ಕಾವ್ಯಮಂ ವಾಚಿಸಿದರ್ಗೆ ಫಳಂ ಇಷ್ಟಾಂಗನಾಸುರತಪ್ರಾಪ್ತಿಯೆಂದು ಪೇೞ್ವುದುಂ ಚಿತ್ರಮೆನಿಕುಂ!  ಇದನೆಲ್ಲಮಂ ಅವರೊಳ್ ಕೇಳಲಪ್ಪುದೆ?! ಕೇಳ್ದೊಡಂ ಎನ್ನ ವಯೋಮಾನಮನಱಿದು ಅವರ್ ಪೇೞ್ದಪರೆ! ಶಕ್ಯಮಿಲ್ಲಂ. ಏನಾನುಮಕ್ಕೆ! ನಿಕಟಮಾಗಿ ಪಂಪಕವಿಗಳಂ ನೋೞ್ಪುದೆ ಅದೃಷ್ಟಂ ಎಂದು ಭಾವಿಪೆಂ” ಎಂದು ಯೋಚಿಸಿದಂ.
(ಹಾಗಲ್ಲದೇ ಹಲವು ಕಡೆಗಳಲ್ಲಿ ಪಂಪಾರ್ಯರು ತಮ್ಮ ರಾಸಿಕ್ಯವನ್ನು ಸೂಚಿಸಿರುವರು. ಒಂದೆಡೆಯಲ್ಲಿ ಪಂಚಶರೈಕರೂಪಂ- ಮನ್ಮಥನರೂಪದವನು” ಎಂದಿದ್ದಾರೆ. ಇನ್ನೊಂದೆಡೆಯಲ್ಲಿ- ವನಿತೆಯರ ಕಣ್ಣ ನೋಟವೆಂಬ ನೈದಿಲೆಯವನವನ್ನು ಆಕರ್ಷಿಸುವ ಚಂದ್ರನು, ಯುವತಿಯರ ಒಡ್ಯಾಣದಲ್ಲಿ ಧರಿಸುವ ಕಾಂಚೀರತ್ನನೂ, ಭಾರವಾದ ಸ್ತನಗಳಿಂದ ವಿನಮ್ರರಾದ ವೇಶ್ಯೆಯರ ಸ್ತನತಟದಲ್ಲಿರುವ ಹಾರ, ಸರಸ್ವತಿಯ ಮಣಿಮಯವಾದ ಹಾರವೇ ತಾನು, ಕೇರಳದ ವೇಶ್ಯೆಯರ ಕಟಿಸೂತ್ರದಲ್ಲಿರುವ ಪದ್ಮರಾಗ ಮಣಿ, ಮಲಯದ ಯುವತಿಯರ ಕೈಗನ್ನಡಿ, ಆಂಧ್ರದೇಶದ ನಾರಿಯರ ಸುಂದರವಾದ ಸ್ತನಹಾರವೇ ಆಗಿದ್ದೇನೆ ಈ ಸರಸ್ವತಿಯ ಮಣಿಹಾರವಾದ ಪಂಪ” ಹೀಗೆಲ್ಲ ನುಡಿದಿದ್ದಾರೆ ಎಂದರೆ ಹಲವು ಹೆಣ್ಣುಗಳ ಒಡನಾಡಿದ ರತಚತುರನೇ ಇರಬಹುದು. ಹಾಗಯೇ ಅರಿಕೇಸರಿಯೂ ದಾಸಿಯರನ್ನು ಇತ್ತರೆಂದು ಹೇಳಿದ್ದಾರಲ್ಲ! ಅಷ್ಟು ಸಂಸಾರಲೋಲುಪರಾಗಿರುವವರು ಹೀಗೆ ಕಾವ್ಯವನ್ನು ಬರೆಯುವವರೆ! ಅಷ್ಟಲ್ಲದೇ ಕಾವ್ಯವನ್ನು ವಾಚಿಸಿದವರಿಗೆ ಫಲವು ಇಷ್ಟಾಂಗನಾಸುರತಪ್ರಾಪ್ತಿಯೆಂದು ಹೇಳುವುದೂ ವಿಚಿತ್ರವೆನಿಸುತ್ತದೆ! ಇದೆಲ್ಲವನ್ನೂ ಅವರಲ್ಲಿ ಕೇಳಲು ಸಾಧ್ಯವೇ! ಕೇಳಿದರೂ ಎನ್ನ ವಯೋಮಾನವನ್ನು ಅರಿತು ಅವರು ಹೇಳುವರೇ! ಶಕ್ಯವಿಲ್ಲ. ಏನಾದರಾಗಲಿ! ಹತ್ತಿರದಿಂದ ಪಂಪಕವಿಗಳನ್ನು ನೋಡುವುದೆ ಅದೃಷ್ಟವೆಂದು ಭಾವಿಸುವೆ” ಎಂದು ಯೋಚಿಸಿದನು.)
ಮತ್ತಂ ರತ್ನನ ಮನದೊಳ್ ಚಿಂತೆಯಾಗಿಂತು ಯೋಚಿಸತೊಡಗಿದಂ “ಪಿಂದಣ ದೆವಸಂ ಕಂಡ ಪುನ್ನಮಾರ್ಯನೊಳ್ ಮಾತನಾಡಲ್ಕಾತಂ “ಕವಿಚಕ್ರವರ್ತಿಯೆಂಬ ಪೆಸರಂ ಪಡೆದ ಪೊನ್ನಂ” ಎಂತೆಂಬ ಗರ್ವದಿಂದಮುತ್ತರಿಸಿದಂತೆ ಭಾಸಮಾದುದು. ಪೊನ್ನಂ ಮಹಾಕವಿಯೆಂಬುದಂ ಆತನ ಕಾವ್ಯಂಗಳನೋದಿ ತಿಳಿದಿರ್ದಪೆಂ. ಭುವನೈಕರಾಮಾಭ್ಯುದಯಮುಮಂ ಶಾಂತಿನಾಥಪುರಾಣಮುಮಂ ಓದಿದಾಗಳ್ ನಿಕ್ಕುವದಿಂದಾತನ ಕವಿತ್ವಂ ಸೊಗಸೆನಿಸಿದುದು. ಅಂತಾದೊಡಂ ಕಲ್ಪನಾಚಾತುರ್ಯಂ ಕಾಣದಾದುದು. ಆತಂ ತನ್ನ ಬಗೆಗೆ “ಕನ್ನಡಗವಿತೆಯೊಳ್ ಅಸಗಂಗೆ ನೂರ್ಮಡಿ ಸಕ್ಕದದೊಳ್ ಕಾಳಿದಾಸಂಗೆ ನಾಲ್ವಡಿ” ಎಂದು ಪೇೞಿಕೊಂಡಿರ್ಪಂ. ಜತೆಯೊಳ್ ಕುರುಳ್ಗಳ ಸವಣಂ ಎಂಬುದುಂ ಬೇಱೆಯಿರ್ಕುಂ. ವಿನಯಮಿರದಾದೊಡಂ ಆತನೊಳ್ ನಯಮಿರ್ಕುಂ. ಧರ್ಮಮಂ ಬಲ್ಲವಂ. ಧೈರ್ಯಮುಮುಂಟು, ಕವಿತೆಯೊಳ್ ಬಲ್ಮೆಯುಂಟು. ಚಿತ್ರಕವಿತಾಚಾತುರ್ಯಮುಂಟು. ಚತುರ್ವಿಧಕವಿತ್ವದೊಳ್ ನೆಗೞ್ತೆಯುಂಟು. ಅಂತಲ್ಲದೆ ರಾಜಾಶ್ರಯಮುಮಿರ್ಕುಂ. ರಾಷ್ಟ್ರಕೂಟನೃಪತಿ ಕನ್ನರಂ ನೀೞ್ದ ಬಿರುದುಮುಂಟು.  ಪ್ರಾಚೀನಕವಿಗಳ ಮಾರ್ಗದೊಳ್ ಸಾಗುತ್ತಿರ್ಪನಾದೊಡಂ ಕಲ್ಪನೆಯುಂ ಪ್ರಾಚೀನಮೇ ಆದೊಡಂ ಸೊಗಸೆನಿಸದು. ಪಂಪನೊಳ್ ನವೀನಕಲ್ಪನೆಗಳುಂಟು, ಪೇೞುವ ರೀತಿ ಪೊಸತೆನಿಕುಂ. ಪಂಪನ ಕುಱಿತುಂ ಪೊನ್ನಂಗೆ ಮಚ್ಚರಮಿರ್ಪುದೋ ತಿಳಿಯೆಂ. (ಮತ್ತೆ ರತ್ನನ ಮನಸ್ಸಿನಲ್ಲಿ ಚಿಂತೆಯಾಗಿ ಹೀಗೆ ಯೋಚಿಸತೊಡಗಿದನು. “ಹಿಂದಿನ ದಿವಸ ಕಂಡ ಪುನ್ನಮಾರ್ಯನಲ್ಲಿ (ಪೊನ್ನ) ಮಾತನಾಡಲು ಆತ “ಕವಿಚಕ್ರವರ್ತಿಯೆಂಬ ಹೆಸರನ್ನು ಪಡೆದ ಪೊನ್ನ” ಎಂದೆಂಬ ಗರ್ವದಿಂದಲೇ ಉತ್ತರಿಸಿದಂತೆ ಭಾಸವಾಯಿತು. ಪೊನ್ನನು ಮಹಾಕವಿಯೆಂಬುದನ್ನು ಆತನ ಕಾವ್ಯಗಳನ್ನು ಓದಿ ತಿಳಿದಿರುವೆನು. ಭುವನೈಕರಾಮಾಭ್ಯುದಯವನ್ನೂ, ಶಾಂತಿನಾಥಪುರಾಣವನ್ನೂ ಓದಿದಾಗ ನಿಶ್ಚಯವಾಗಿಯೂ ಆತನ ಕವಿತ್ವವು ಸೊಗಸೆನಿಸಿವುದು.  ಹಾಗಿದ್ದರೂ ಕಲ್ಪನಾಚಾತುರ್ಯವು ಕಾಣದಾದುದು. ಆತನು ತನ್ನ ಬಗೆಗೆ “ಕನ್ನಡದ ಕವಿತೆಯಲ್ಲಿ ಅಸಗಂಗೆ ನೂರ್ಮಡಿ ಹೆಚ್ಚು, ಸಂಸ್ಕೃತದಲ್ಲಿ ಕಾಳಿದಾಸನಿಗೆ ನಾಲ್ವಡಿ ಹೆಚ್ಚು” ಎಂದು ಹೇಳಿಕೊಂಡಿದ್ದಾನೆ. ಜೊತೆಯಲ್ಲಿ “ಕುರುಳ್ಗಳ ಸವಣ” ಕೂದಲಿರುವ ಸವಣ ಎನ್ನುವುದೂ ಬೇರೆಯಿದೆ. ವಿನಯವಿಲ್ಲದಿದ್ದರೂ ಆತನಲ್ಲಿ ನಯವಿದೆ. ಧರ್ಮವನ್ನು ಬಲ್ಲವನು. ಧೈರ್ಯವೂ ಉಂಟು. ಕವಿತೆಯಲ್ಲಿ ಬಲ್ಮೆಯಿದೆ. ಚಿತ್ರಕವಿತೆಯನ್ನು ರಚಿಸುವ ಚಾತುರ್ಯವಿದೆ. ಚತುರ್ವಿಧಕವಿತ್ವದಲ್ಲಿ ಕೂಡ ಪ್ರಸಿದ್ಧಿಯಿದೆ. ಅಷ್ಟಲ್ಲದೇ ರಾಜಾಶ್ರಯವೂ ಇದೆ. ರಾಷ್ಟ್ರಕೂಟರ ರಾಜನಾದ ಕನ್ನರನು ನೀಡಿದ ಬಿರುದೂ ಉಂಟು.  ಪ್ರಾಚೀನ ಕವಿಗಳ ಮಾರ್ಗದಲ್ಲಿ ಸಾಗುತ್ತಿರುವನಾದರೂ ಕಲ್ಪನೆಯೂ ಪ್ರಾಚೀನವೇ ಆದರೆ ಸೊಗಸೆನಿಸುವುದಿಲ್ಲ. ಪಂಪನಲ್ಲಿ ನವೀನಕಲ್ಪನೆಗಳುಂಟು. ಹೇಳುವ ರೀತಿ ಹೊಸದು ಎನಿಸುತ್ತದೆ. ಪಂಪನ ಕುರಿತು ಪೊನ್ನನಿಗೆ ಮತ್ಸರವಿರುವುದೋ ಗೊತ್ತಿಲ್ಲ) ನಾಂ ಮೊದಲೊಳ್ ಮಳಖೇಡದೊಳ್ ಪೊನ್ನಮಾರ್ಯಕವಿಗಳ ಗೇಹಮೆತ್ತಣ್ಗಿರ್ಪುದೆಂದು ಕೇಳ್ದು  ಪೋದಪೆಂ. ಅತ್ತಲ್ ಪಲವರ್ ಆತನ ಶಿಷ್ಯಂದಿರ್ ಎನ್ನಂ ವಿಚಾರಿಸಿ ಆತನೊಳ್ ಅಱುಪಿದರ್. ಮಚ್ಚರದಿಂದೇಂ ಪೇೞ್ದರೊ ತಿಳಿಯೆಂ. ಆದೊಡಂ ಎನ್ನಂ ಕಂಡಾಗಳ್ “ನೀಂ ಕಬ್ಬಿಗನೊ” ಎಂದು ಕೇಳ್ದಂ. “ಅಪ್ಪುದು ಆರ್ಯರೆ! ಬರೆದಿರ್ಪೆಂ ಕೆಲವು ಕವಿತೆಗಳಂ. ನಿಮಗೆ ಸಮಯಮಿರೆ ತೋರ್ದಪೆಂ”ಎನೆ “ಕಾವ್ಯಮೇನಾದೊಡಂ ಇರ್ದೊಡೆ ನೋೞ್ಪಂ. ಮುಕ್ತಕಂಗಳಂ ಎನ್ನ ಶಿಷ್ಯರ್ ನೋಡಿ ತಿರ್ದುವರ್”ಎಂದಂ. ಎನಗಂ ಮನದೊಳ್ ಆತನ ಶಿಷ್ಯರ್ಗಂ ತೋರಿಸಲ್ಕೆ ಇಚ್ಛೆಯಾಗದೆ “ನಿಮ್ಮ ಕಾವ್ಯಮನೋದಿರ್ಪೆಂ...” ಎನೆ ಮಧ್ಯದೊಳ್ ಮಾತಂ ತಡೆದು- “ಒಳ್ಳಿತ್ತಾದುದು. ಸತ್ಕಾವ್ಯಪಾರಾಯಣದಿಂ ಶುಭಪಲಂ ದೊರೆಗುಂ” ಎಂದಂ. ಅಂತುಟಲ್ಲದೆ ಆತನೊಡಂ ಚರ್ಚಿಪ ಬಯಕೆಯ ಕುಡಿಯಂ ಚಿವುಂಟಿದಂ! ಇರ್ಕೆ! ಕಾವ್ಯಮನೋದಿ ಆಸ್ವಾದಿಸಿದೊಡಂ ಸೊಗಂ, ಚರ್ಚಿಪ ಅವಕಾಶಮೆಲ್ಲರ್ಗಂ ದೊರೆಯದು. ದೊರೆತವರ್ ಭಾಗ್ಯವಂತರ್. ಸಾರಸ್ವತಸಂಪತ್ತಿಯಂ ಪಡೆದವರ್ಗೆ ನಿರ್ಮತ್ಸರತೆಯುಂ, ಸಂಪತ್ತಿಯಂ ಪಡೆದವರ್ಗೆ ಉದಾರತೆಯುಂ ಎಂದು ಬರ್ಪುದೊ ಕಾಣೆಂ! ಶಾಂತಿಪುರಾಣಮಂ ಬರೆದು ಆಱು ತಿಂಗಳೊಳೆ ಓದಿರ್ಪರೆಷ್ಟು ಜನರಿರ್ಪರೊ ಕಾಣೆಂ. ಆದೊಡಂ ಚಾವುಂಡರಾಯರ ದೆಸೆಯಿಂದಾನುಂ ಓದಿರ್ಪೆನದಂ. ಚಾವುಂಡರಾಯರ ಪೆಸರಂ ಪೇೞದೆ ಸಾಗಬೇಕೆಂಬುದೆನ್ನ ಮನಂ. ಚಾವುಂಡರಾಯರ್ ಕಳುಪಿರ್ಪರ್ ಎಂತೆನಲೆಲ್ಲರುಂ ಗೌರವಮನೀವರ್. ಎನಗೆ ಎನ್ನ ಸತ್ತ್ವದಿಂ ಗೌರವಮಂ ಪಡೆಯಲ್ವೇಳ್ಕುಂ. ಅದು ಕಾರಣಮಾಗೆ ಆನೀ ಪೊನ್ನನೊಳ್ ಪೆರ್ಚು ಚರ್ಚೆಯಂ ಮಾಡಲಿಲ್ಲಂ. ಆತನಂ ಮತ್ತೊರ್ಮೆ ಬಂದಾಗಳ್ ಸಮಯಾವಕಾಶದೊಳ್ ಮಾತಾಡಿಪೆಂ. ಅಥವಾ ಎನ್ನಯ ಕವಿತ್ವಕಂ ಪ್ರೌಢಿ ಬರೆ, ಆನುಂ ಜಸಂಬಡೆಯೆ, ರಾಜಾಸ್ಥಾನದೊಳೆ  ವಾದಕ್ಕೆ ಕರೆದು ಮುಟ್ಟುವೆಂ. ತಟ್ಟುವೆಂ ಆತನ ಗರ್ವಮುಮಂ ಮುರಿವೆಂ! 
(ನಾನು ಮೊದಲಲ್ಲಿ ಮಳಖೇಡದಲ್ಲಿ ಪೊನ್ನಮಾರ್ಯಕವಿಗಳ ಮನೆ ಯಾವ ಕಡೆ ಇದೆ ಎಂದು ಕೇಳಿಕೊಂಡು ಹೋದೆನು. ಅತ್ತ ಹಲವರು ಆತನಶಿಷ್ಯಂದಿರು ನನ್ನನ್ನು ವಿಚಾರಿಸಿ ಆತನಲ್ಲಿ ಅರುಹಿದರು. ಮತ್ಸರದಿಂದ ಏನು ಹೇಳಿದರೋ ಗೊತ್ತಿಲ್ಲ. ಆದರೆ ನನ್ನನ್ನು ಕಂಡಾಗ “ನೀನು ಕಬ್ಬಿಗನೋ?” ಎಂದು ಕೇಳಿದನು. “ಹೌದು ಆರ್ಯರೆ. ಕೆಲವು ಕವಿತೆಗಳನ್ನು ಬರೆದಿರುವೆನು. ನಿಮಗೆ ಸಮಯವಿದ್ದರೆ ತೋರಿಸುವೆನು” ಎನ್ನಲು “ಕಾವ್ಯವೇನಾದರೂ ಇದ್ದರೆ ನೋಡೋಣ. ಮುಕ್ತಕಗಳನ್ನು (ಬಿಡಿಪದ್ಯಗಳನ್ನು) ಎನ್ನ ಶಿಷ್ಯರು ನೋಡಿ ತಿದ್ದುವರು” ಎಮದ. ನನಗೆ ಮನಸ್ಸಿನಲ್ಲಿ ಆತನ ಶಿಷ್ಯರಿಗೆ ತೋರಿಸಲು ಇಚ್ಛೆಯಾಗದೇ “ನಿಮ್ಮ ಕಾವ್ಯವನ್ನು ಓದಿರುವೆ..” ಎಂದು ಹೇಳಲು ಮಧ್ಯದಲ್ಲಿಯೇ ಮಾತನ್ನು ತಡೆದು “ಒಳ್ಳೆಯದಾಯಿತು. ಸತ್ಕಾವ್ಯಪಾರಾಯಣದಿಂದ ಶುಭಫಲಗಳು ದೊರಕುತ್ತವೆ” ಎಂದನು. ಅಷ್ಟಲ್ಲದೇ ಆತನೊಡನೆ ಚರ್ಚಿಸುವ ಬಯಕೆಯ ಕುಡಿಯನ್ನು ಚಿವುಟಿದ. ಇರಲಿ! ಕಾವ್ಯವನ್ನು ಓದಿ ಆಸ್ವಾದಿಸಿದರೆ ಸೊಗಸು. ಚರ್ಚಿಸುವ ಅವಕಾಶವು ಎಲ್ಲರಿಗೂ ದೊರೆಯದು. ದೊರೆತವರು ಭಾಗ್ಯವಂತರು. ಸಾರಸ್ವತಸಂಪತ್ತಿಯನ್ನು ಪಡೆದವರಿಗೆ ನಿರ್ಮತ್ಸರತೆಯೂ ಸಂಪತ್ತುಳ್ಳವರಿಗೆ ಉದಾರತೆಯೂ ಯಾವಾಗ ಬರುವುದೋ ಕಾಣೆನು! ಶಾಂತಿಪುರಾಣವನ್ನು ಬರೆದ ಆರು ತಿಂಗಳಲ್ಲಿಯೇ ಓದಿದವರು ಎಷ್ಟು ಜನರಿರುವರೋ ಗೊತ್ತಿಲ್ಲ. ಆದರೆ ಚಾವುಂಡರಾಯರ ದೆಸೆಯಿಂದ ನಾನೂ ಅದನ್ನು ಓದಿದ್ದೇನೆ. ಚಾವುಂಡರಾಯರ ಹೆಸರನ್ನು ಹೇಳದೇ ಸಾಗಬೇಕೆಂಬುದು ನನ್ನ ಮನಸ್ಸು. ಚಾವುಂಡರಾಯರು ಕಳಿಸಿದ್ದಾರೆ ಎಂದರೆ ಎಲ್ಲರೂ ಗೌರವವನ್ನು ಕೊಡುತ್ತಾರೆ. ನನಗೆ ನನ್ನ ಸತ್ತ್ವದಿಂದ ಗೌರವವನ್ನು ಪಡೆಯಬೇಕು. ಆ ಕಾರಣದಿಂದ ನಾನು ಈ ಪೊನ್ನನಲ್ಲಿ ಹೆಚ್ಚು ಚರ್ಚೆಯನ್ನು ಮಾಡಲಿಲ್ಲ. ಆತನನ್ನು ಮತ್ತೊಮ್ಮೆ ಬಂದಾಗ  ಸಮಯಾವಕಾಶದಲ್ಲಿ ಮಾತನಾಡಿಸುವೆನು. ಅಥವಾ ನನ್ನ ಕವಿತ್ವಕ್ಕೂ ಪ್ರೌಢಿ ಬಂದಾಗ ನಾನೂ ಯಶಸ್ಸನ್ನು ಪಡೆದಾಗ ರಾಜನ ಆಸ್ಥಾನದಲ್ಲಿಯೇ ವಾದಕ್ಕೆ ಕರೆದು ಅವನನ್ನು ಮುಟ್ಟುತ್ತೇನೆ, ತಟ್ಟುತ್ತೇನೆ. ಆತನ ಗರ್ವವನ್ನೂ ಮುರಿಯುತ್ತೇನೆ!)
ಅದಂತಿರ್ಕೆ! ಆತನಂತೆಯೆ ಪಂಪಕವಿಗಳುಂ ಎನ್ನೊಳ್ ಮಾತನಾಡದಿರ್ದೊಡಂ ಏಂಗೆಯ್ವುದು! ಅಕಟ! ನಿಷ್ಫಲಮಾಗಿ ಪಿಂತೆ ಪೋಪುದೇ! ಚಾವುಂಡರಾಯರ್ ಕೇಳ್ವರ್- “ಪಂಪದೇವರ್ ಏನೆಂದರ್” ಎಂದು, ಏಂ ಪೇಳಲಕ್ಕುಮಾಗಳ್. ಚಾವುಂಡರಾಯರ್ಗಂ ಪಂಪಕವಿಗಳೊಳ್ ಪಿರಿದಾದ ಗೌರವಮುಂಟು. ಅವರೇಂ ಪೇೞ್ವರೊ ಅದನೆ ಪೇೞ್ವೆಂ ಚಾವುಂಡರಾಯರ್ಗಂ. ಸತ್ಯಮಂ ನುಡಿವೊಡೆ ಸೈಪಕ್ಕುಂ.  ಈಗಳ್ ಭವಿತವ್ಯಮಂ ಚಿಂತಿಪುದು ನಿಷ್ಫಲಂ. ಏನಾನುಮಕ್ಕೆ. ಮೊದಲೊಳ್ ಪಂಪಾರ್ಯರ ಮನೆಯಂ ಸಾರ್ದು ಅವರ್ಗಂ ಪೊಡಮಟ್ಟು ಎನ್ನ ಪರಿಚಯಮಂ ಪೇೞ್ವೆಂ. ಪದ್ಯದಿಂ ಸ್ತುತಿಪೊಡನೆಂತಕ್ಕುಂ - 
ಕವಿತಾಗುಣಾರ್ಣವಂಗಂ
ಸ್ತವನೀಯಂಗಂ ನೆಗೞ್ದ  ಕಲಿಗಂ ಕವಿಗಂ
ಭುವನದೆ ಕಾವ್ಯದ್ವಯಮಂ
ಜವದಿಂ ತಂದಿತ್ತ ನಿಮಗಮಭಿವಂದಿಪೆನಾಂ!! 
ಅಥವಾ ಪದ್ಯದಿಂ ನುಡಿವುದಕ್ಕಿಂ ಗದ್ಯಮೆ ವರಮಕ್ಕುಂ. ಎನ್ನ ಪರಿಚಯಮಂ ಪೇೞ್ವೆಂ. ಅನಿವಾರ್ಯಮಾದೊಡಂ ಚಾವುಂಡರಾಯರ ಪೆಸರಂ ಪೇೞ್ವೆಂ. ಬೞಿಕ್ಕಂ ಅವರ್ಗಂ ಪದ್ಯಂಗಳಂ ತೋರಿಪೆಂ. ಅವಕಾಶಮಿತ್ತಂತುಟು ಮಾತನಾಡುವೆಂ.”
(ಅದಂತಿರಲಿ! ಆತನಂತೆಯೇ ಪಂಪ ಕವಿಗಳೂ ನನ್ನಲ್ಲಿ ಮಾತನಾಡದಿದ್ದರೆ ಏನು ಮಾಡವುದು! ಅಯ್ಯೋ! ನಿಷ್ಫಲವಾಗಿ ಹಿಂದೆ ಹೋಗುವುದೇ! ಚಾವುಂಡರಾಯರು ಕೇಳುತ್ತಾರೆ- “ಪಂಪದೇವರು ಏನೆಂದರು?” ಎಂದು, ಆಗ ಏನನ್ನು ಹೇಳಲಾಗುತ್ತದೆ, ಚಾವುಂಡರಾಯರಿಗೆ ಪಂಪಕವಿಗಳಲ್ಲಿ ಹಿರಿದಾದ ಗೌರವವಿದೆ. ಅವರೇನನ್ನು ಹೇಳುತ್ತಾರೋ ಅದನ್ನೇ ಚಾವುಂಡರಾಯರಿಗೆ ಹೇಳುವೆ. ಸತ್ಯವನ್ನು ಹೇಳಿದರೆ ಸೈಪಾಗುತ್ತದೆ. ಈಗಳೇ ಭವಿಷ್ಯವನ್ನು ಚಿಂತಿಸುವುದು ನಿಷ್ಫಲವು. ಏನಾದರಾಗಲಿ, ಮೊದಲು ಪಂಪಾರ್ಯರ ಮನೆಗೆ ಸಾಗಿ ಅವರಿಗೆ ನಮಸ್ಕರಿಸಿ ಎನ್ನ ಪರಿಚಯವನ್ನು ಹೇಳುವೆನು. ಪದ್ಯದಿಂದ ಸ್ತುತಿಸಿದರೆ ಹೇಗಿರುತ್ತದೆ-
ಕವಿತಾಗುಣಾರ್ಣವನಿಗೆ
ಸ್ತವನೀಯನಿಗೆ ಪ್ರಸಿದ್ಧ ಕಲಿಗೂ ಕವಿಗೂ
ಭುವನದಿ ಕಾವ್ಯಗಳೆರಡನು
ಜವದಲಿ ತಂದಿತ್ತ ನಿಮಗೆ ನಮಿಸುತ್ತಿಹೆನಾಂ
ಅಥವಾ ಪದ್ಯದಲ್ಲಿ ಹೇಳುವುದಕ್ಕಿಂತ ಗದ್ಯವೇ ಲೇಸೆನಿಸುತ್ತದೆ. ಎನ್ನ ಪರಿಚಯವನ್ನು ಹೇಳುವೆನು. ಅನಿವಾರ್ಯವಾದರೆ ಚಾವುಂಡರಾಯರ ಹೆಸರನ್ನು ಹೇಳುವೆನು. ಬಳಿಕ ಅವರಿಗೆ ಪದ್ಯಗಳನ್ನು ತೋರಿಸುವೆ. ಅವಕಾಶವಿತ್ತಷ್ಟು ಮಾತನಾಡುವೆನು”)
ಎಂದು ಚಿಂತಿಸಿ ರತ್ನಂ ವೃಷಭಾಚಲದಿಂದಿಳಿಯತೊಡಗಿದಂ ನೇಸರ್ ಪಡುಗಡಲಿನೆಡೆಗಡಿಯಿಡುತಿರೆ ಪಶ್ಚಿಮಪರ್ವತಂಗಳೊಳ್. ಬೇಗದಿಂ ಕುದುರೆಯಂ ಏರ್ದು ಸಾಗಿರಲ್ಕೆ ಮಾರ್ಗದೊಳ್ ಸಿಲ್ಕಿದೊರ್ವರಂ ಕೇಳ್ದಪಂ “ಪಂಪಕವಿಗಳ ಮನೆ ಎಲ್ಲಿರ್ಪುದು” ಎನಲಾತಂ “ಅಕ್ಕಡ” ಎಂದು ಸೂಚಿಸಿದಪಂ. “ಅಃ! ಇಲ್ಲಿನ ಜನರ್ಗೆ ಆಂಧ್ರಭಾಷೆಯುಂ ಕನ್ನಡಮುಂ ವ್ಯವಹಾರಕ್ಕೊಳವು! ಆ ವೃಷಭಾಚಲದ ಶಾಸನದೊಳಂ ಜಿನವಲ್ಲಭಂ ಆಂಧ್ರಭಾಷಯೊಳ್ ಕಂದಂಗಳಂ ಬರೆಸಿರ್ಪನಲ್ಲಮೇ!” ಎಂದುಕೊಂಡು ರತ್ನಂ ಆ ಕಡೆಗೆ ಕುದುರೆಯಂ ನಡೆಸಿದಂ. (ಎಂದು ಚಿಂತಿಸಿ- ಪಶ್ಚಿಮಪರ್ವತಗಳಲ್ಲಿ ನೇಸರು ಪಡುಗಡಲಿನ ಕಡೆ ಅಡಿಯಿಡುತ್ತಿರಲು ರತ್ನನು ವೃಷಭಾಚಲದಿಂದ ಇಳಿಯತೊಡಗಿದನು. ಬೇಗದಿಂದ ಕುದುರೆಯನ್ನೇರಿ ಸಾಗಿರಲು ದಾರಿಯಲ್ಲಿ ಸಿಕ್ಕಿದ ಒಬ್ಬರನ್ನು ಕೇಳಿದನು- ‘ಪಂಪಕವಿಗಳ ಮನೆ ಎಲ್ಲಿರುವುದು” ಎನ್ನಲು ಆತ “ಅಕ್ಕಡ” ಎಂದು ಸೂಚಿಸಿದನು. “ಅಃ! ಇಲ್ಲಿನ ಜನರಿಗೆ ಆಂಧ್ರಭಾಷೆಯೂ ಕನ್ನಡವೂ ವ್ಯವಹಾರಕ್ಕಿವೆ! ಆ ವೃಷಭಾಚಲದ ಶಾಸನದಲ್ಲಿಯೂ ಜಿನವಲ್ಲಭನು ಆಂಧ್ರಭಾಷೆಯಲ್ಲಿ ಕಂದಪದ್ಯಗಳನ್ನು ಬರೆಸಿರುವನಲ್ಲವೇ!” ಎಂದುಕೊಂಡು ರತ್ನನು ಆ ಕಡೆಗೆ ಕುದುರೆಯನ್ನು ನಡೆಸಿದನು)
ಬಾನ್ಗೆ ಸಂಜೆಗೆಂಪಡರುತ್ತಿರಲ್ ಅತ್ತಲಾ ಮನೆಯಿದಿರ್ ಆಡುತ್ತಿರ್ಪ ಮಕ್ಕಳಂ ಮನೆಯೊಡಯಂ ಒಳಗೆ ಕರೆದಂ. ಕುದುರೆಯಿಂದಿಳಿದು ಅದಂ ಕಿರಿದಾದ ಮರನೊಂದಕ್ಕೆ ಕಟ್ಟಿ ರನ್ನಂ ಆ ಮನೆಯಿದಿರ್ ನಡೆದು ಆ ಪಿರಿಯರಂ “ಪಂಪಾರ್ಯರ ಮನೆ” ಎಂದು ಪ್ರಶ್ನಾರ್ಥಕಮಾಗಿ ಕೇಳಲ್ “ಬನ್ನಿಂ” ಎಂದು ಆಹ್ವಾನಿಸಿದರ್. ಅವರಂ ನೋಡಲ್ಕೆ ಪಂಪಕವಿಗಳೆಂದ ಪದ್ಯದಂತೆಯೆ ತೋರ್ದಪರ್. ತುಸುವೇ ಕರ್ಪಿನ ಪೊಳೆವ ಮೆಯ್ಯ ಕಾಂತಿ, ಕುಟಿಲಕುಂತಳಂ ಗಂಭೀರಮಾದ ಸ್ವರಂ, ವಯಮುಮಂ ಊಹಿಸೆ ಇವರೇ ಪಂಪಾರ್ಯರೆಂದು ಬಗೆಯೊಳ್ ಬಗೆಯುತ್ತುಂ  ರನ್ನಂ ಪೊಱವಾಗಿಲೊಳಗಿರ್ಪ ನೀರಿಂ ಪಾದಪ್ರಕ್ಷಾಳನಂಗೆಯ್ದು ಒಳಗೆ ನಡೆದಂ. ಪಾಸಿರ್ಪ ರನ್ನಗಂಬಳಿಯ ಮೇಲೆ ಕುಳ್ಳಿರಲ್ವೇೞ್ದು ಪಿರಿಯರ್- “ಪಂಪನ್ನಂ ಲೆಂಬುಳಬಾಟಕಕ್ಕೆ ಪೋಗಿರ್ಪಂ. ಸಂಜೆಗೆ ಬರ್ಪಂ. ನಿಮ್ಮದಾವ ಊರ್? ಎತ್ತಣ್ಗೆ ಪೋಪುದು? ನಿಮಿತ್ತಮೇಂ?” ಎಂದು ಪ್ರಶ್ನಿಸಿದರ್. ರನ್ನಮಯ್ಯಂ “ಎನ್ನ ಪೆಸರ್ ಕವಿರತ್ನನೆಂದು ಪಂಪಕವಿಗಳಂ ಕಾಣ್ಬ ಆಸೆಯಿಂ ಬಂದಿರ್ಪೆಂ. ಊರು ಮುದುವೊಳಲು. ಬೆಳುಗೊಳದೊಳ್ ಅಧ್ಯಯನಮಂ ನಡೆಸಿ, ತಲವನಪುರದೊಳ್ ಉದರನಿಮಿತ್ತಂ ವಾಸಿಸಿರ್ಪೆಂ” ಎನಲವರ್ “ಜಿನಮತಮೆ?” ಎಂದು ಪ್ರಶ್ನಿಸಿದರ್. ರನ್ನಂ “ಅಪ್ಪುದು. ಎನ್ನಮ್ಮನದು ವೈಶ್ಯವೃತ್ತಿಯು, ಜಿನವಲ್ಲಭನೆಂದು ಪೆಸರ್” ಎಂದಾಗಳ್ ಆ ಪಿರಿಯರ್ “ಎನ್ನ ಪೆಸರುಂ ಜಿನವಲ್ಲಭನೆಂದೆ” ಎಂದು ತುಸು ನಕ್ಕರ್. ಅಂತಿರೆ ಇವರ್ ಪಂಪಕವಿಗಳ ಸಹೋದರರೆಂದಾಯ್ತು, ರೂಪದೊಳ್ ಸಾಮ್ಯಮಿರಲ್ವೇಳ್ಕುಂ ಎಂದು ಯೋಚಿಸಿಕೊಂಡು “ಅಂತೆನೆ ಆ ವೆಟ್ಟಿನ ಕೋಡೊಳ್ ನಿಲಿಸಿರ್ಪ ಶಾಸನಂ ನಿಮ್ಮ ಬರೆಪಮೇ?” ಎಂದು ರನ್ನಮಯ್ಯನುಂ ಪ್ರಶ್ನಿಸಿದಂ. ಆತಂ “ಅಪ್ಪುದು. ಶಾಸನಮಂ ನಿಲಿಸಿ ಇರ್ಪತ್ತು ವರ್ಷಂಗಳೆ ಸಂದುವು. ಅಂತುಟೆ ನಾಮಿಲ್ಲಿಗೆ ಬಂದುದುಂ ಇರ್ಪತ್ತು ವರ್ಷಂಗಳ ಪೂರ್ವದೊಳೆ” ಎಂದಂ.  
(ಬಾನಿಗೆ ಸಂಜೆಯ ಕೆಂಪು ಅಡರುತ್ತಿರುವಾಗ ಅತ್ತ ಆ ಮನೆಯ ಎದುರು ಆಡುತ್ತಿದ್ದ ಮಕ್ಕಳನ್ನು ಮನೆಯೊಡೆಯನು  ಒಳಗೆ ಕರೆದನು. ಕುದುರೆಯಿಂದ ಇಳಿದು ಅದನ್ನು ಕಿರಿದಾದ ಮರವೊಂದಕ್ಕೆ ಕಟ್ಟಿ ರನ್ನನು ಆ ಮನೆಯ ಎದುರು ನಡೆದು ಆ ಹಿರಿಯರನ್ನು “ಪಂಪಾರ್ಯರ ಮನೆ..” ಎಂದು ಪ್ರಶ್ನಾರ್ಥಕವಾಗಿ ಕೇಳಲು “ಬನ್ನಿ” ಎಂದು ಆಹ್ವಾನಿಸಿದರು. ಅವರನ್ನು ನೋಡಲು ಪಂಪಕವಿಗಳು ಹೇಳಿದ ಪದ್ಯದ ಹಾಗೆಯೇ ತೋರುತ್ತಿದ್ದರು. ತುಸುವೇ ಕಪ್ಪಿನ ಹೊಳೆವ ಮೈಯ ಕಾಂತಿ, ಗುಂಗುರು ಕೂದಲು, ಗಂಭೀರವಾದ ಸ್ವರ ವಯಸ್ಸನ್ನೂ ಊಹಿಸಿ ಇವರೇ ಪಂಪಾರ್ಯರೆಂದು ಮನಸ್ಸಿನಲ್ಲಿ  ಬಗೆಯುತ್ತಾ ರನ್ನನು ಹೊರಬಾಗಿಲಲ್ಲಿದ್ದ ನೀರಿನಿಂದ ಕಾಲ್ಗಳನ್ನು ತೊಳೆದುಕೊಂಡು ಒಳಗೆ ನಡೆದನು. ಹಾಸಿರುವ ರನ್ನಗಂಬಳಿಯ ಮೇಲೆ ಕುಳಿತುಕೊಳ್ಳಲು ಹೇಳಿ ಹಿರಿಯರು - “ಪಂಪಣ್ಣನು ಲೆಂಬುಳಬಾಟಕಕ್ಕೆ ಹೋಗಿದ್ದಾನೆ. ಸಂಜೆಗೆ ಬರುತ್ತಾನೆ. ನಿಮ್ಮದು ಯಾವ ಊರು? ಎಲ್ಲಿಗೆ ಹೋಗುತ್ತಿರುವುದು? ಕಾರಣವೇನು” ಎಂದು ಪ್ರಶ್ನಿಸಿದರು. ರನ್ನಮಯ್ಯನು- “ನನ್ನ ಹೆಸರು ಕವಿರತ್ನನೆಂದು. ಪಂಪಕವಿಗಳನ್ನು ಕಾಣುವ ಆಸೆಯಿಂದ ಬಂದಿರುವೆನು. ಊರು ಮುದುವೊಳಲು(ಮುಧೋಳ) ಬೆಳುಗೊಳದಲ್ಲಿ ಅಧ್ಯಯನವನ್ನು ನಡೆಸಿ ತಲವನಪುರದಲ್ಲಿ ಉದರನಿಮಿತ್ತವಾಗಿ ವಾಸಿಸಿದ್ದೇನೆ.” ಎನ್ನಲು ಅವರು “ಜಿನಮತವೆ?” ಎಂದು ಪ್ರಶ್ನಿಸಿದರು. ರನ್ನನು- “ ಹೌದು. ನನ್ನ ತಂದೆಯದು ವೈಶ್ಯವೃತ್ತಿಯು. ಜಿನವಲ್ಲಭನೆಂದು ಹೆಸರು” ಎಂದಾಗ ಆ ಹಿರಿಯರು “ಎನ್ನ ಹೆಸರೂ ಜಿನವಲ್ಲಭನೆಂದೆ” ಎಂದು ತುಸುನಕ್ಕರು. ಹಾಗಿರಲು ಇವರು ಪಂಪಕವಿಗಳ ಸಹೋದರರು ಎಂದಾಯ್ತು. ರೂಪದಲ್ಲಿ ಸಾಮ್ಯವಿರಬೇಕು ಎಂದು ಯೋಚಿಸಿಕೊಂಡು “ಹಾಗಾದರೆ ಆ ಬೆಟ್ಟದ ತುದಿಯಲ್ಲಿ ನಿಲ್ಲಿಸಿರುವ ಶಾಸನವು ನಿಮ್ಮ ಬರೆಹವೇ?” ಎಂದು ರನ್ನಮಯ್ಯನು ಪ್ರಶ್ನಿಸಿದನು. ಆತನು “ಹೌದು. ಶಾಸನವನ್ನು ನಿಲ್ಲಿಸಿ ಇಪ್ಪತ್ತು ವರ್ಷಗಳೆ ಆದವು. ಹಾಗೆಯೇ ನಾವಿಲ್ಲಿಗೆ ಬಂದುದೂ ಇಪ್ಪತ್ತು ವರ್ಷಗಳ ಹಿಂದೆಯೇ” ಎಂದನು)
ರನ್ನಮಯ್ಯಂಗೆ ಪಾನೀಯಮಂ ನೀಡಲ್ವೇೞ್ದಂ ಮನೆಯ ಪೆಂಗುಸರ್ಗೆ. ಕೆಲವು ಕಾಲಂ ರತ್ನಂ ಜಿನವಲ್ಲಭನೊಡಂ ಗೞುಪುತ್ತುಮಿರೆ ಪೊರಗಣ ವೀಧಿಯೊಳ್ “ಭೋಂ ಭೋಂ” ಎಂದು ಶಂಖನಾದಂ ಕೇಳ್ದುದು. ಆಗಳ್ ಜಿನವಲ್ಲಭಂ “ಪಂಪನ್ನಂ ಬಂದಂ” ಎಂದಂ. ಕೆಲಬರ್ ಬೋಯಿಗಳ್ ಪಲ್ಲಕ್ಕಿಯಂ ಮನೆಯವಾಗಿಲೊಳ್ ನಿಲಿಸಲ್ಕೆ  ಅದಱಿಂದೆ ಇಳಿದಂ ಪಂಪಂ. “ಆರೊ ಅತಿಥಿಗಳಿರ್ಪರ್” ಎಂದಂ. ಜಿನವಲ್ಲಭಂ “ರತ್ನರೆಂಬವರ್ ಕಬ್ಬಿಗರ್ ತಲವನಪುರದಿಂದಂ ಬಂದಿರ್ಪರ್” ಎಂದಂ. ಪಂಪಂ- “ಓಹೋ! ಒಳ್ಳಿತ್ತು” ಎನುತ್ತುಂ ಕಾಲ್ಗಳಂ ತೊಳೆದು ಒಳಗೆ ಬಂದು ಕುಳಿತಂ. (ರನ್ನಮಯ್ಯನಿಗೆ ಪಾನೀಯವನ್ನು ನೀಡಲು ಮನೆಯ ಹೆಂಗಸರಿಗೆ ಹೇಳಿದನು. ಕೆಲವು ಕಾಲ ರತ್ನನು ಜಿನವಲ್ಲಭನೊಡನೆ ಮಾತನಾಡುತ್ತಿರಲು ಹೊರಗಣ ಬೀದಿಯಲ್ಲಿ “ಭೋಂ ಭೋಂ “ ಎಂಬ ಶಂಖನಾದವು ಕೇಳಿತು. ಆಗ ಜಿನವಲ್ಲಭನು “ಪಂಪಣ್ಣನು ಬಂದನು” ಎಂದನು. ಕೆಲವರು ಬೋಯಿಗಳು ಪಲ್ಲಕ್ಕಿಯನ್ನು ಮನೆಯ ಬಾಗಿಲಲ್ಲಿ ನಿಲ್ಲಿಸಲು ಪಂಪನು ಅದರಿಂದ ಇಳಿದನು. “ಯಾರೋ ಅತಿಥಿಗಳಿದ್ದಾರೆ” ಎಂದನು. ಜಿನವಲ್ಲಭನು “ರತ್ನನೆಂಬವರು ಕಬ್ಬಿಗರು ತಲವನಪುರದಿಂದ ಬಂದಿದ್ದಾರೆ” ಎಂದನು. ಪಂಪನು “ಓಹೋ! ಒಳ್ಳೆಯದು” ಎನ್ನುತ್ತಾ ಕಾಲ್ಗಳನ್ನು ತೊಳೆದು ಒಳಗೆ ಬಂದು ಕುಳಿತನು.)
ಸಂಜೆಗೞ್ತಲ್ ಪೆರ್ಚುಗುಮೆಂದು ಭೋಜನಕ್ಕೆ ಪೊರಮಡಲ್ವೇಳ್ದರ್ ಮನೆಯ ಪೆಂಗಸರ್. ಎಲ್ಲರುಂ ಭೋಜನಮಂ ಪೂರಯಿಸಿ ಬಂದರ್. (ಸಂಜೆಯ ಕತ್ತಲು ಹೆಚ್ಚುವುದೆಂದು ಮನೆಯ ಹೆಂಗಸರು ಭೋಜನಕ್ಕೆ ಹೊರಡಲು ಹೇಳಿದರು. ಎಲ್ಲರೂ ಭೋಜನವನ್ನು ಪೂರಯಿಸಿ ಬಂದರು)
ಕೞ್ತಲಾವರಿಸುತ್ತುಮಿರೆ ಒರ್ವಳ್ ಬಾಲಕಿ ದೀವಿಗೆಯಂ ಬೆಳಗಿಟ್ಟಳ್. ಪಂಪಂ ರನ್ನಮಯ್ಯನೊಡನೆ ಮಾತನಾಡಲ್ ತಗುಳ್ದಂ. “ತಲವನಪುರಮೆಂದಿರೇಂ? ಚಾವುಂಡರಾಯರ ಪರಿಚಯಮಿರಲ್ವೇಳ್ಕುಂ. ಎಂತಿರ್ಪರವರ್” ಎಂದು ಪ್ರಶ್ನಿಸಿದಂ. ರನ್ನಮಯ್ಯಂ “ಚೆನ್ನಾಗಿರ್ಪರ್. ಅವರ್ ಮಾಡಿರ್ಪ ಅನುಕೂಲದಿಂದಮೆ ಆನಿಂತು ಸಂಚರಿಸಲಾದುದು” ಎಂದಂ. ಪಂಪಂ-”ಅಂತೆನೆ ಅವರಾಶ್ರಯದೊಳೆ ಇರ್ಪಿರೆಂದಾಯ್ತು. ಸಾಧು ಸಾಧು!” ಎಂದಂ. (ಕತ್ತಲು ಆವರಿಸುತ್ತ ಇರಲು ಒಬ್ಬಳು ಬಾಲಕಿಯು ದೀವಿಗೆಯನ್ನು ಬೆಳಗಿಸಿ ಇಟ್ಟಳು. ಪಂಪನು ರನ್ನಮಯ್ಯನೊಡನೆ ಮಾತನಾಡಲು ಪ್ರಾರಂಭಿಸಿದನು. “ತಲವನಪುರ ಎಂದಿರೇ? ಚಾವುಂಡರಾಯರ ಪರಿಚಯವಿರಬೇಕು! ಹೇಗಿದ್ದಾರೆ ಅವರು” ಎಂದು ಪ್ರಶ್ನಿಸಿದನು. ರನ್ನಮಯ್ಯನು “ಚೆನ್ನಾಗಿರುವರು. ಅವರು ಮಾಡಿರುವ ಅನೂಕೂಲದಿಂದಲೇ ನಾನು ಹೀಗೆ ಸಂಚರಿಸಲು ಸಾಧ್ಯವಾದುದು” ಎಂದನು. ಪಂಪನು “ಅಂದರೆ ಅವರ ಆಶ್ರಯದಲ್ಲಿಯೇ ಇರುವಿರೆಂದಾಯ್ತು. ಸಾಧು ಸಾಧು!” ಎಂದನು
ರನ್ನಂಗೆ ಆಶ್ಚರ್ಯಮುಂ ಸಂತೋಷಮುಮಾಗಿ ಏಂ ಮಾತನಾಡುವುದೆಂದಱಿಯದೆ ದೀವಿಗೆಯ ಬೆಳಕೊಳ್ ಪಂಪನಂ ನೋಡುತುಂ ಮೌನದಿಂದಿರ್ದಂ. ಬೞಿಕ್ಕಂ ಪಂಪನೆ “ಏನಿಂತು ಜವ್ವನಿಗರಾದ ಕಬ್ಬಿಗರ್ ಮೋನಮಿರ್ಪಿರಿ?” ಎಂದೆನೆ ರನ್ನಂ “ನಿಮ್ಮ ರೂಪಂ ನಿಮ್ಮ ಪದ್ಯಕ್ಕನುಗುಣಮಾಗಿರ್ಪುದೆಂದು ಯೋಚಿಸುತ್ತಿರ್ದೆಂ” ಎಂದಂ. ಪಂಪಂ ತುಸು ನಕ್ಕು- “ಅದಂ ಬರೆದುದೇ ಕಾಲದೊಳೋ! ಆಗಳೆನ್ನ ಪ್ರಾಯಂ ನಾಲ್ವತ್ತಿರ್ದುದು. ಈಗಳ್ ಏಳ್ಪತ್ತಕ್ಕೆ ಸಮೀಪಿಸಿರ್ಕುಂ! ಸೌಂದರ್ಯಮೇಂ ಶಾಶ್ವತಮೊ!” ಎಂದು ನಿಡುಸುಯ್ದಂ. ರನ್ನಂ “ನಿಮಗೇತಕೆ ಬನವಾಸಿದೇಶದೊಳ್ ಅಂತುಟೞ್ಕರ್ತು?” ಎನೆ ಪ್ರಶ್ನಿಸೆ ಪಂಪಂ “ಆಂ ಬಾಲ್ಯದೊಳ್ ನಿಡುಗಾಲಮಂ ಕೞೆದುದಲ್ಲಿಯೆ. ಎನ್ನಬ್ಬೆಯ ಊರ್ ಪುಲಿಗೆಱೆ. ಅವರ್ಕಳಲ್ಲಿಯುಂ ಬನವಾಸಿಯೊಳಂ ಬಹುಕಾಲದಿಂದಮಿರ್ದರ್. ಆವ ಕ್ಲೇಶಂಗಳುಂ ಕಾಣದ, ಚಿಂತೆಯಿರದ ಸಂಸಾರಸಾರೋದಯಮಾದ ಬಾಲ್ಯಮೆ ಸರ್ವರ್ಗಂ ಜೀವಿತದೆ ಸುವರ್ಣಯುಗಮಲ್ತೆ! ಪರಮಾಲಿಪ್ತಿಯಿಂ ಸರ್ವಸಂಗಪರಿತ್ಯಾಗಿಗಂ ಸಮನಾಗಿರ್ಪ ಬಾಲ್ಯದ ಮನಮೆ ಏಗಳುಂ ಸಂದೊಡೆ ಬಾೞ್ ಸೊಗಮೆನಿಕುಂ. ಅಂತುಟೆ ಆ ಕಾಲದೊಳ್ ಆಡುಂಬೊಲಮಾದ ತಾಣಮೆ ನಲ್ದಾಣಂ.  ಎನ್ನ ವಿವಾಹಪರ್ಯಂತಮುಂ ಆನಲ್ಲಿಯೆ ಕಾಲಮಂ ಕಳೆದಿರ್ದಪೆಂ. ಅಂತು ಅತರ್ಕ್ಯಮಾದ ಸೊಗಮಂ ಕಂಡಿರ್ಪ ತಾಣಮೆ ಬನವಾಸಿಯೆಂದು ಮನಮಾವಗಮುಂ ನೆನೆಗುಮಾ ದೇಶಮಂ.” ಎಂದು ಪೇೞ್ದಪಂ. (ರನ್ನನಿಗೆ ಆಶ್ಚರ್ಯವೂ ಸಂತೋಷವೂ ಆಗಿ ಏನು ಮಾತನಾಡುವುದೆಂದು ಅರಿಯದೆ ದೀವಿಗೆಯ ಬೆಳಕಲ್ಲಿ ಪಂಪನನ್ನು ನೋಡುತ್ತ ಮೌನದಿಂದ ಇದ್ದನು. ಬಳಿಕ ಪಂಪನೆ- “ಏನು! ಹೀಗೆ ಜವ್ವನಿಗರಾದ ಕವಿಗಳು ಮೌನದಿಂದ ಇದ್ದೀರಿ” ಎಂದು ಹೇಳಲು ರತ್ನನು “ನಿಮ್ಮ ರೂಪವು ನಿಮ್ಮ ಪದ್ಯಕ್ಕನುಗುಣವಾಗಿರುವುದು ಎಂದು ಯೋಚಿಸುತ್ತಿದ್ದೆನು” ಎಂದನು. ಪಂಪನು ತುಸು ನಕ್ಕು- “ಅದನ್ನು ಬರೆದದ್ದು ಯಾವ ಕಾಲದಲ್ಲೋ! ಆಗ ನನ್ನ ಪ್ರಾಯ ನಲವತ್ತಿತ್ತು. ಈಗ ಎಪ್ಪತ್ತಕ್ಕೆ ಸಮೀಪಿಸಿದೆ. ಸೌಂದರ್ಯವೇನು ಶಾಶ್ವತವೋ!” ಎಂದು ನಿಟ್ಟುಸಿರು ಬಿಟ್ಟನು. ರನ್ನನು “ನಿಮಗೇಕೆ ಬನವಾಸಿದೇಶದಲ್ಲಿ ಅಷ್ಟೊಂದು ಪ್ರೀತಿ?” ಎಂದು ಪ್ರಶ್ನಿಸಲು ಪಂಪನು “ನಾನು ಬಾಲ್ಯದಲ್ಲಿ ದೀರ್ಘಕಾಲವನ್ನು ಕಳೆದದ್ದು ಅಲ್ಲಿಯೇ. ನನ್ನ ತಾಯಿಯ ಊರು ಪುಲಿಗೆರೆ(ಲಕ್ಷ್ಮೇಶ್ವರ) ಅವರು ಅಲ್ಲಿಯೂ ಬನವಾಸಿಯಲ್ಲಿಯೂ ಬಹಳಕಾಲದಿಂದ ಇದ್ದರು. ಯಾವ ಕ್ಲೇಶಗಳನ್ನೂ ಕಾಣದ, ಚಿಂತೆಯಿರದ, ಸಂಸಾರಸಾರೋದಯವಾದ ಬಾಲ್ಯವೇ ಎಲ್ಲರಿಗೂ ಜೀವಿತದ ಸುವರ್ಣಯುಗವಲ್ಲವೇ! ಪರಮ-ಅಲಿಪ್ತಿಯಿಂದ (ಅಂಟಿರದ) ಸರ್ವಸಂಗಪರಿತ್ಯಾಗಿಗೆ ಸಮನಾಗಿರುವ ಬಾಲ್ಯದ ಮನಸ್ಸೇ ಯಾವಾಗಳೂ ಸಂದರೆ ಬಾಳು ಸೊಗಸಾಗಿರುತ್ತದೆ. ಹಾಗೆಯೇ ಆ ಕಾಲದಲ್ಲಿ ಆಡುವ ಹೊಲವಾದ ತಾಣವೇ ನಲ್ದಾಣ. ನನ್ನ ವಿವಾಹದ ಪರ್ಯಂತವೂ ನಾನು ಅಲ್ಲಿಯೇ ಕಾಲವನ್ನು ಕಳೆದಿದ್ದೆನು. ಹಾಗೆ ತರ್ಕಕ್ಕೆ ಬಾರದ ಸುಖವನ್ನು ಕಂಡಿರುವ ತಾಣವೆ ಬನವಾಸಿಯೆಂದು ಮನವು ಯಾವಾಗಳೂ ಆ ದೇಶವನ್ನು ನೆನೆಯುತ್ತದೆ” ಎಂದು ಹೇಳಿದನು)
ರನ್ನಂ ಕವಿತ್ವವಿಷಯಮಂ ಪ್ರಸ್ತಾಪಿಸುತ್ತುಂ “ಕವಿತ್ವಮಂ ಕುಱಿತು ಪೇೞಿಂ. ಏಂ ಗೆಯ್ವುದರಿಂ ಪ್ರೌಢಿ ಬರ್ಕುಂ, ಏಂ ಕವಿತ್ವೋದ್ದೀಪಕಮಕ್ಕುಂ” ಎಂದೆನೆ ಪಂಪಂ- “ಕಲ್ಪನೆಯೆಲ್ಲರ್ಗೆ ಬರ್ಪುದು. ಅದಂ ಚೆನ್ನೆನಿಪ ಪದಸಂಯೋಗದಿಂ ಛಂದದ ಬಂಧದೊಳಿರಿಸೆ ಕವಿತೆಯಕ್ಕುಂ. ಇದಂ ಕಲಿಸಿ ಪೇೞಲ್ಕಾಗದು. ಆದೊಡಂ ಪರಿಶ್ರಮದಿಂ ಸಾಧಿಸಲಪ್ಪುದು. ನೀಮೇನಾನುಮಂ ತಂದಿರ್ಪಿರೋ! ನೋೞ್ಪಂ” ಎಂದಂ. ರನ್ನಂ ನಸುನಾಣ್ಚಿ- “ಕೆಲವು ಮುಕ್ತಕಂಗಳಿರ್ಕುಂ.” ಎನೆ ಪಂಪಂ- “ಮೊದಲೊಳ್ ಮುಕ್ತಕಂಗಳಿಂದಮೆ ಪ್ರಾರಂಭಂ, ಆರುಂ ನೇರಮಾಗಿ ಮಹಾಕಾವ್ಯಮಂ ಬರೆದವರಿಲ್ಲಂ. ನೀಮೆ ವಾಚಿಸಿಂ” ಎನೆ ರನ್ನಂ ತನ್ನ ಬಳಿಯಿರ್ದ ತಾಳಪತ್ರಂಗಳಿಂದೋದತೊಡಗಿದಂ (ರನ್ನನು ಕವಿತ್ವವಿಷಯವನ್ನು ಪ್ರಸ್ತಾಪಿಸುತ್ತ “ಕವಿತ್ವವನ್ನು ಕುರಿತು ಹೇಳಿ. ಏನನ್ನು ಮಾಡುವುದರಿಂದ ಪ್ರೌಢಿ ಬರುತ್ತದೆ. ಯಾವುದು ಕವಿತ್ವವನ್ನು ಉದ್ದೀಪನವಾಗುವುದು.” ಎನ್ನಲು ಪಂಪನು “ಕಲ್ಪನೆ ಎಲ್ಲರಿಗೆ ಬರುವುದು. ಅದನ್ನು ಚೆನ್ನಾಗಿರುವ ಪದಸಂಯೋಗದಿಂದ ಛಂದಸ್ಸಿನ ಬಂಧದಲ್ಲಿಟ್ಟರೆ ಕವಿತೆಯಾಗುವುದು. ಇದನ್ನು ಕಲಿಸಿ ಹೇಳಲು ಆಗುವುದಿಲ್ಲ. ಆದರೆ ಪರಿಶ್ರಮದಿಂದ ಸಾಧಿಸಲು ಸಾಧ್ಯವಿದೆ. ನೀವೇನಾದರೂ ತಂದಿದ್ದೀರೋ! ನೋಡೋಣ”ಎಂದನು. ರತ್ನನು ನಸುನಾಚಿ “ಕೆಲವು ಮುಕ್ತಕಗಳಿವೆ” ಎಂದೆನಲು ಪಂಪನು “ಮೊದಲಲ್ಲಿ ಮುಕ್ತಕಗಳಿಂದಲೇ ಪ್ರಾರಂಭ, ಯಾರೂ ನೇರವಾಗಿ ಮಹಾಕಾವ್ಯವನ್ನು ಬರೆದವರಿಲ್ಲ. ನೀವೇ ವಾಚಿಸಿ” ಎನಲು ರನ್ನನು ತನ್ನ ಬಳಿಯಿದ್ದ ತಾಳಪತ್ರಗಳಿಂದ ಓದತೊಡಗಿದನು”
“ಎನ್ನ ಗುರುಗಳಂ ಸ್ತುತಿಸುತ್ತುಂ ಬರೆದಿರ್ಪೆನಿದಂ-
ಸುರಪತಿಪೂಜಿತಂ ನೃಪತಿಸೇವಿತಮುನ್ನತಗಂಗಮಂಡಲೇ-
ಶ್ವರಮಕುಟಾರ್ಚಿತಂ ಭುವನದಿಂ ತಮಗೆಂಬ ನೆಗೞ್ತೆವೆತ್ತಲಂ
ಕರಿಸಿ ಜಗತ್ಪವಿತ್ರಮೆನೆ ಸಂದುದಱಿಂದೆಮಗಿಷ್ಟಸಿದ್ಧಿಯಂ 
ದೊರೆಕೊಳಿಸುತ್ತುಮಿರ್ಕಜಿತಸೇನಮುನೀಂದ್ರಪದಾಂಬುಜದ್ವಯಂ!!”
(“ನನ್ನ ಗುರುಗಳನ್ನು ಸ್ತುತಿಸುತ್ತ ಇದನ್ನು ಬರೆದಿದ್ದೇನೆ-
ಸುರಪತಿಗಳಿಂದ ಪೂಜಿತವಾದ, ನೃಪರಿಂದ ಸೇವಿಸಲ್ಪಟ್ಟಿರುವ, ಹಿರಿಯದಾದ
ಗಂಗಮಂಡಲಪತಿಯ ಮಕುಟದಿಂದರ್ಚಿತವು, ಲೋಕಪ್ರಸಿದ್ಧಿಯನೆ ಹೊಂದಿ ಆದ
ಜಗದೊಳು ಪವಿತ್ರವೆನೆ ಇಂತಿರುವರಜಿತಸೇನರ ಪಾದಕಮಲಗಳು ನಮಗೆ ದಿನವು
ಇಷ್ಟಸಿದ್ಧಿಗಳನ್ನು ದೊರಕಿಸುತ್ತಿರಲಿ ನಮಗವುಗಳೇ ನಿತ್ಯವೂ ಪೂಜ್ಯವಹವು || )
ಎಂದೆನೆ ಅದಂ ಕೇಳ್ದ ಜಿನವಲ್ಲಭಂ “ಆಹ! ಸೊಗಸಾಗಿರ್ಪುದು” ಎಂದಂ. ಪಂಪಂ “ಶೈಲಿಯುಂ ಪದಪದ್ಧತಿಯುಂ ಸೊಗಸೆನಿಸಿರ್ಕುಂ. ನೀಂ ಅನ್ಯಥಾಭಾವಿಸದಿರೆ ತಥ್ಯಮಂ ಪೇೞ್ವೆಂ. ಗುರುವೆಂಬ ಗೌರವಮಂ ತೋರಲ್ ಪೇೞಿರ್ಪ ಪದ್ಯಮಿದು! ಅಜಿತಸೇನಾಚಾರ್ಯರ್ ಪಿರಿಯರ್ ದಿಟಂ. ಇಲ್ಲಿ ಅವರ ನೆಗೞ್ತೆಯಂ ಪೇೞಿರ್ಪುದೊಂದಂ ಬಿಟ್ಟು ಬೇರೇಂ ವಿಶೇಷಮೆಸೆಗುಂ?” ಎನೆ ರನ್ನಂ “ದಿಟಂ” ಎಂದಂ. ಪಂಪಂ “ಅವರ ಪಾದಮಂ ಪಂಕಜಕ್ಕೆ ಪೋಲಿಸಿರ್ಪಿರಾದೊಡಂ ಅದಕ್ಕೆ ತಕ್ಕ ಪರಿಣಾಮಂಗಳ್ ಉಳಿದ ಪಾದಂಗಳೊಳ್ ಬರೆ ಸೊಗಸೆನಿಸಿರ್ದಪುದು. ಅದಂತಿರ್ಕೆ. ಬೇರೆ ಪದ್ಯಮಂ ಪೇೞಿಂ” ಎನೆ ರನ್ನಂ-
(ಎಂದು ಹೇಳಲು ಅದನ್ನು ಕೇಳಿದ ಜಿನವಲ್ಲಭನು “ಆಹ! ಸೊಗಸಾಗಿರುವುದು” ಎಂದನು. ಪಂಪನು  “ಶೈಲಿಯೂ ಪದಪದ್ಧತಿಯೂ ಸೊಗಸೆನಿಸಿರುವುದು. ನೀವು ಅನ್ಯಥಾ ಭಾವಿಸದಿದ್ದರೆ ತಥ್ಯವನ್ನು ಹೇಳುವೆನು. ಗುರುವೆಂಬ ಗೌರವವನ್ನು ತೋರಲು ಹೇಳಿರುವ ಪದ್ಯವಿದು! ಅಜಿತಸೇನಾಚಾರ್ಯರು ಹಿರಿಯರು ದಿಟವೇ. ಇಲ್ಲಿ ಅವರ ಪ್ರಸಿದ್ಧಿಯನ್ನು ಹೇಳಿರುವುದೊಂದನ್ನು ಬಿಟ್ಟರೆ ಬೇರೆ ಏನು ವಿಶೇಷವಿದೆ? ಎನಲು ರನ್ನನು “ದಿಟ” ಎಂದನು. ಪಂಪನು “ಅವರ ಪಾದವನ್ನು ಪಂಕಜಕ್ಕೆ ಹೋಲಿಸಿದ್ದೀರಾ, ಆದರೆ ಅದಕ್ಕೆ ತಕ್ಕ ಪರಿಣಾಮಗಳು ಉಳಿದ ಪಾದಗಳಲ್ಲಿಯೂ ಬರಲು ಸೊಗಸೆನಿಸುವುದು. ಅದಂತಿರಲಿ. ಬೇರೆ ಪದ್ಯವನ್ನು ಹೇಳಿ” ಎನಲು ರನ್ನನು-)
“ಪದಿನಾಱಲ್ಲವಲಂಕ್ರಿಯಾರಚನೆ ಮೂವತ್ತಾಱು ನೇರ್ಪಟ್ಟುವೊಂ-
ದಿದ ಶೃಂಗಾರಮದಲ್ಲಮೊಂದೆ ರಸಮೊಂಬತ್ತೆಯ್ದೊಡಂಬಟ್ಟುವೆಂ
ಬುದನೆಂಬನ್ನೆಗಮಂಗನೋಚಿತರಸಾಲಂಕಾರಮಂ  ತಾಳ್ದದೊ
ಪ್ಪಿದ ವಾಕ್ಸುಂದರಿ ಬಂದು ಸನ್ನಿಹಿತೆಯಕ್ಕೆನ್ನೀ ಮುಖಾಂಭೋಜದೊಳ್!”
(ಹದಿನಾರದಲ್ಲದಾ ಮೂವತ್ತ ಮೇಲಾರಲಂಕಾರರಚನೆಯನು ನೇರ್ಪಡಿಸುತ
ಹದದ ಶೃಂಗಾರವೊಂದಲ್ಲದೇ ಒಂಬತ್ತು ರಸಗಳೊಪ್ಪಿದುವೆಂದು ತೋರ್ಪಡಿಸುತ
ಸದಯದಿಂ ನಾರಿಯರಿಗೆ ಒಪ್ಪುವಂತಿರಲಿಲ್ಲಿ ಅದನೊಪ್ಪಿ ಮೆಚ್ಚುತಲಿ ನಗುತಲಿರಲಿ
ಮುದದಿಂದ ವಾಕ್ಸುಂದರಿಯೆ ಬಂದು ನನ್ನ ಮುಖಕಮಲದಲಿ ಸನ್ನಿಹಿತೆ ತಾನಾಗಲಿ)
ಎಂದು ಓದಲ್ ಪಂಪನುಂ ಜಿನವಲ್ಲಭನುಂ ಇರ್ವರುಂ ಕರತಾಡನದಿಂ ಮೆಚ್ಚುಗೆಯಂ ಸೂಚಿಸೆ ಪಂಪಂ- “ಇದಲ್ತೆ ದಿಟದಿಂ ರಸ್ಯಮಾದ ಪದ್ಯಂ. ಇಂತು ಪೇೞಲ್ವೇಳ್ಕುಂ. ಇಲ್ಲಿ ಸರಸ್ವತಿಯ ಸ್ತುತಿಯೊಡಂ ಕಲ್ಪನಾಚಾತುರ್ಯಂ ಮೇಳವಿಸಿರ್ಕುಂ. ಶುಷ್ಕವಿಶೇಷಣಸಹಿತಮಾಗಿರದೆ ಸೊಗಸೆನಿಸಿರ್ಕುಂ”  ಎಂದು ಪೇೞ್ದಪಂ. ಬೞಿಕ್ಕಂ ಇನ್ನೊಂದಂ ಸಂಜೆ ವೃಷಭಾಚಲದ ಮೇಲೆ ಕುಳಿತಾಗಳ್ ಪಂಪಂಗೆ ವಿಶೇಷಮಾಗಿ ಅನ್ವಯಿಸಿ ಬರೆದಿರ್ಪುದಂ ಪೇೞ್ದಪಂ-
(ಎಂದು ಓದಲು ಪಂಪನೂ ಜಿನವಲ್ಲಭನೂ ಇಬ್ಬರೂ ಕರತಾಡನದಿಮದ ಮೆಚ್ಚುಗೆಯನ್ನು ಸೂಚಿಸಲು ಪಂಪನು “ಇದಲ್ಲವೇ ದಿಟದಿಂದ ರಸ್ಯವಾದ ಪದ್ಯ, ಹೀಗೆ ಹೇಳಬೇಕು. ಇಲ್ಲಿ ಸರಸ್ವತಿಯ ಸ್ತುತಿಯೊಡನೆ ಕಲ್ಪನೆಯ ಚಾತುರ್ಯವೂ ಮೇಳವಿಸಿದೆ. ಶುಷ್ಕವಾದ ವಿಶೇಷಣಗಳ ಸಹಿತವಾಗಿರದೇ ಸೊಗಸಾಗಿದೆ.” ಎಂದು ಹೇಳಿದನು. ಬಳಿಕ ಇನ್ನೊಂದನ್ನು ಸಂಜೆ ವೃಷಭಾಚಲದ ಮೇಲೆ ಕುಳಿತಾಗ ಪಂಪನಿಗೆ ವಿಶೇಷವಾಗಿ ಅನ್ವಯಿಸಿ ಬರೆದಿರುವುದನ್ನು ಹೇಳಿದನು)
“ಧರಿಸುತ್ತುಂ ಕರವಾಲಮಂ ಕೊಳುಗುಳಂ ಗೆಯ್ಯುತ್ತೆ ರಾಜನ್ಯರೀ
ಧರೆಯೊಳ್ ರಾಜ್ಯಮನೊಂದುವರ್ ಪಗೆವರಿಂ ಶೌರ್ಯಂ ವಲಂ ಕಾರಣಂ
ಧರಿಸುತ್ತುಂ ಕಲಿ ಕಂಟಮಂ ಬರೆಯುತುಂ ಕಬ್ಬಂಗಳಂ ಪಂಪನೇಂ
ಧರೆಯಂ ಪೊಂದಿದನಲ್ತೆ ಮಿತ್ರನಿನಿದೇಂ ತೋರಿರ್ಪುದೋ ಬಲ್ಜಸಂ”
(ಧರಿಸುತ್ತ ಖಡ್ಗವನು ಯುದ್ಧವದಲಿ ಹಗೆಗಳಿಂ 
ಧರೆಯ ಪಡೆವರು ಶೌರ್ಯಕಾರಣದಲಿ
ಧರಿಸುತ್ತೆ ಕಂಟ*ವನು ಬರೆದು ಕಾವ್ಯವ ಪಂಪ
ಧರೆಯ ಪಡೆದನು ಮಿತ್ರನಿಂದಿದುವೆ ಯಶವು
{ಕಂಟ=ತಾಳಪತ್ರದ ಮೇಲೆ ಬರೆಯಲು ಬಳಸುವ ಮುಳ್ಳು})
ಇಂತೆನೆ ಪಂಪಂ ಮೆಚ್ಚುಗೆಯಂ ಸೂಸಿದನಾದೊಡಂ ಮುಖದೊಳ್ ಕಿಂಚಿತ್ಕ್ಲೇಶಂ ಕಂಡಿರ್ದಪುದು. ಆಗಳ್ ರನ್ನಂ ಪಂಪನೊಡನೆ ವಿಕ್ರಮಾರ್ಜುನವಿಜಯಮಂ ಕುಱಿತು ಚರ್ಚಿಸಲ್ ಯೋಚಿಸಿ - “ನಿಮ್ಮ ಕಬ್ಬಂಗಳನೋದಿರ್ಪೆಂ. ಅವುಗಳಂ ಕುಱಿತು ಪೇೞಿಂ” ಎನೆ ಪಂಪಂ- “ಅಃ! ಬರೆವಾಗಳಿರ್ಪುತ್ಸಾಹಂ ಅದಂ ಮತ್ತೆ ಚರ್ಚಿಪಾಗಳ್ ಉಳಿವುದಿಲ್ಲಂ. ನೀಮೇನಂ ಕಂಡಿರ್ಪಿರಿ, ಏಂ ಸೊಗಸೆನಿಸಿದುದು, ಪೇೞಿಂ” ಎಂದಂ. ರನ್ನಮಯ್ಯಂ- “ಆಂ ಕೂಲಂಕಷಮಾಗಿ ಓದಿರ್ಪೆಂ. ಕೆಲವು ವರ್ಣನೆಗಳ್ ಸೊಗಸೆನಿಸಿರ್ಕುಂ. ಆದಿಪುರಾಣದೊಳಿರ್ಪ ಬಲ್ಮೆ ವಿಕ್ರಮಾರ್ಜುನವಿಜಯದೊಳಿರ್ಪಂತೆ ಕಾಣೆಂ” ಎಂದಂ. ಪಂಪಂ “ಏಂ ಕಾರಣಂ?” ಎಂದು ಪ್ರಶ್ನಿಸೆ ರನ್ನಂ- “ಆದಿಪುರಾಣದೊಳ್ ಜಿನಮತಮಂ ಪೇೞ್ವ ಗಾಂಭೀರ್ಯಮುಂಟು, ವಿಕ್ರಮಾರ್ಜುನವಿಜಯದೊಳ್ ಲೌಕಿಕಲೋಲುಪತೆಗಳುಮಂ ಐಹಿಕರಾಗದ್ವೇಷಾದಿಗಳಂ ಬಣ್ಣಿಸಿರ್ಪಿರಲ್ತೆ, ಅಂತು ಅದರೊಳ್ ಆದಿಪುರಾಣದ ಔನ್ನತ್ಯಮಿಲ್ಲಂ” ಎಂದಂ. ಪಂಪಂ- “ ದಿಟಂ, ಅದು ಕಾರಣಂ ಪೇೞ್ದಪೆನಲ್ತೆ- “ಬೆಳಗುವೆನಿಲ್ಲಿ ಲೌಕಿಕಮನಲ್ಲಿ ಜಿನಾಗಮಮಂ” ಎಂದು. ಅಂತೆಯೆ ಲೌಕಿಕಜೀವನಕ್ಕಂ ತೃಪ್ತಿಯಂ ನೀೞ್ದುದು ಭಾರತಕಥಾನಕಂ, ಪಾರಲೌಕಿಕಕ್ಕೆ ಸೊಗಮಂ ಕುಡುವುದು ಜಿನಾಗಮಂ. ಆಗಳೆ ಪದ್ಯದೊಳ್ ನುಡಿದಪಿರಲ್ತೆ- ಕಂಟಮಂ ಧರಿಸಿ ಕಬ್ಬದಿಂ ಧರೆಯಂ ಕೊಂಡೆನೆಂದು, ಅದೆ ದಲ್ ಐಹಿಕಫಲಂ. ಆ ಕಬ್ಬದಿಂದಮೆ ಉದರಂಭರಣಕ್ಕೆ ಸಾಧ್ಯಮಾದುದು. ಅಂತಲ್ಲದೆಯುಂ ಕಾಣದ ಪಾರಲೌಕಿಕ್ಕಿಂತ ಕಾಣ್ಬ ಲೌಕಿಕಮೆ ಮಿಗಿಲೆನಿಪುದು. ಅರಿಕೇಸರಿಯಂತಪ್ಪ ದೊರೆಯುಂ ಮಿತ್ರನಾಗಿ ದೊರೆತಿರ್ಪನೆನೆ ಆ ಕಾವ್ಯದಿಂದಮೆ ಸಾಧ್ಯಮಾದುದು. ಪಂಪಂ ವಿಕ್ರಮಾರ್ಜುನವಿಜಯಮೆಂಬ ಪೆಸರಿಟ್ಟೊಡಂ ಜನರ್- ಪಂಪಭಾರತಂ ಎಂದು ಕರೆಯುತ್ತಿರ್ಪರ್. ನೀಮುಂ ತಲವನಪುರದಿಂ ಧರ್ಮಪುರದನ್ನೆಗಂ ಬಂದಿರ್ಪಿರೆನೆ ಪಂಪಭಾರತಮೇ ಕಾರಣಮಲ್ತೇ! ಅಂತಲ್ಲದೆ ಪಂಪನೆಂಬ ಪೆಸರ್ ಜನರ್ಗೆ ತಿಳಿದಪುದೆ. ಕೃತಿಯಿಂದಮೆ ಕವಿಯುಂ ಶಾಶ್ವತನೆನಿಪಂ.” ಎಂದಂ. ರನ್ನಂ- “ನೀಂ‌ ಮಹಾಭಾರತಮಂ ಬರೆವುದರ್ಕೆ ಮೊದಲಾದ ಕಾರಣಮಂ ಪೇೞಿಂ” ಎನೆ ಪಂಪಂ- “ಆಗಳಾಂ ಅರಿಕೇಸರಿ ಮಹಾರಾಜರ ಆಸ್ಥಾನದೊಳಗೆ ದಂಡನಾಯಕನಾಗಿರ್ದೆಂ. ಕಲಿತನದಿಂದವರ ಸಾಹಚರ್ಯಂ‌ ದೊರೆತುದು. ಪದ್ಯಂಗಳುಮಂ ಬರೆಯುತ್ತಿರ್ದೆನಾದೊಡಂ ಆರಿದಿರೊಳ್ ಪೇೞ್ವ ಧೈರ್ಯಮಿಲ್ಲದೆ ಇರ್ದೆಂ. ಒಂದು ದೆವಸಂ ಬೇಂಟೆಗೆಂದು ಪೋಗಿರ್ಪಾಗಳ್ ವಿಶ್ರಾಂತಿಯ ವೇಳೆಯೊಳ್ ಸಮಯಯಾಪನಕ್ಕಂ ಏನೋ ಪದ್ಯಮಂ ಬರೆಯುತ್ತುಮಿರ್ದೆಂ. ಆಗಳನಿರೀಕ್ಷಿತಮಾಗಿ ಅವರೆನ್ನ ಗೂಡಾರಕೆ ಬಂದರ್. ಆಂ ಬರೆಯುತ್ತುಮಿರ್ಪುದನೀಕ್ಷಿಸಿದವರ್ ಕಬ್ಬಮಂ ಓದಲ್ಕೆ ಪೇೞ್ದರ್. ಅಂದು ಮೊದಲಾಗಿ ಪಲವು ಕಾಲಂ ಅವರಿದಿರ್ ಸಭೆಯೊಳಂ ಸ್ನೇಹಕೂಟದೊಳಂ ಪದ್ಯಂಗಳಂ ಪೇೞುತ್ತುಮಿರ್ದೆಂ. ಆಸ್ಥಾನದೊಳ್ ಇರ್ದರ್ ಪಲವರ್ ಪಂಡಿತರ್ ಸಚಿವರ್ ಅಂತಾದೊಡಂ ಕಬ್ಬಿಗರಾರುಮಿರ್ದುದಿಲ್ಲಂ. ಒಂದು ದೆವಸಂ ಪರವೂರಿನಿಂದೊರ್ವರ್ ಪಂಡಿತರ್ ಬಂದರ್. ಸಂಸ್ಕೃತದ ವ್ಯಾಸಮುನೀಂದ್ರರ್ ಪೇೞ್ದ ಮಹಾಭಾರತದೊಳ್ ಕೆಲವು ಕಥಾನಕಂಗಳಂ ವಾಚಿಸಿದರ್. ಅವರ್ ರಸಮಯಮಾಗಿ ಕಥಾನಕಮಂ ಪೇೞ್ದು ಪೋದ ಬೞಿಕ್ಕಂ ಸಭೆಯೊಳ್ ಚರ್ಚೆಯಾದುದು. ಅದನಾಂ ಮೊದಲನೆಯಾಶ್ವಾಸದೊಳ್ ಮತ್ತಂ ಕೊನೆಯ ಆಶ್ವಾಸದೊಳಂ ಬರೆದಿರ್ಪೆನಲ್ತೆ. “ಆರುಂ ಭಾರತಕಥಾನಕಮಂ ಕನ್ನಡದೊಳ್ ಕೂರ್ತು ಪೇೞ್ದವರಿಲ್ಲಂ, ಪೇೞಿಸಿದ ನರೇಂದ್ರರುಮಿಲ್ಲಂ,  ಪೇೞಿಸೆ ಉದಾತ್ತಕೀರ್ತಿಯಾದ ಅರಿಕೇಸರಿಯೆ ನೀನೇ ಪೇೞಿಪೆ, ಕವಿಗಳೊಳ್ ಪೇೞ್ವೊಡೆ ಪಂಪಂ ಪೇೞ್ಗುಂ” ಎಂದರ್ ಕೆಲವರ್. ಅಂತವರ್ ಪೇೞುವ ಪೊೞ್ತೊಳಾಗಳೆ ಆದಿಪುರಾಣಮಂ ಕನ್ನಡದೆ ಬಿತ್ತರಿಸಿ ಬರೆದುದುಮಾದುದು. ಅದನೋದಿ ಮೆಚ್ಚಿರ್ದರೆಲ್ಲರುಂ. ಅಂತಾಗಿ ಸಮಸ್ತಭಾರತಮಂ ಕನ್ನಡದೆ ಕಥೆ ಮೆಯ್ಗಿಡಲೀಯದೆ ಪೇೞಲ್ಕೆ ನೋಂತೆಂ. ಅಱುದಿಂಗಳೊಳ್ ಮುಗಿಸಿದೆಂ. ಪೋಲಿಪೊಡೆ ಗುಣಾರ್ಣವನಂ ಕಿರೀಟಿಯೊಳ್ ಪೋಲಿಪೆನೆಂದು ಅಂತು ಅರಿಕೇಸರಿಯಂ ಕಥಾನಾಯಕನನಾಗಿಸಿ ಬರೆದಪೆಂ. ಬರೆದ ಬೞಿಕ್ಕಂ ಸಭೆಯೊಳ್ ವಾಚಿಸಿದುದಾಯ್ತು. ಅದನಾಲಿಸೆ ದೊರೆ ಮೆಚ್ಚೆ ಈ ಧರ್ಮಪುರಮಂ ಕುಡುವೆನೆಂದು ಘೋಷಿಸಿದಪಂ. ಅಂತು ಈ ಧರ್ಮಪುರಂ ದೊರೆತುದು. ಅದರೊಡಂ ಲೌಕಿಕಕಾವ್ಯಮಂ ಪೇೞ್ದೆನೆಂಬ ಕುಕೀರ್ತಿಯುಮಂ ಕೆಲವರಿತ್ತರ್. ಏನಾನುಮಿರ್ಕೆ. ಆಗಳೆಂತುಟೊ ಸಾಗಿದುದು ವರ್ಷಮೊಂದರೊಳ್ ಎರಡುಂ ಕಾವ್ಯಂಗಳ್. ಆ ಬೞಿಕ್ಕಂ ಮತ್ತೆ ಬರೆದುದಿಲ್ಲಂ. ಎಂತೊ ನಿಶ್ಷಯಮಾದ ಮನಮಿಲ್ಲಂ. ಬರೆವ ಉತ್ಸುಕತೆಯುಮಿಲ್ಲಂ. ಬರೆದುದನೋದುವೊಡೆ ಆಸಕ್ತಿಯುಂಟು. ಆದೊಡಂ ಮತ್ತೇನುಮಂ ಬರೆದುದಿಲ್ಲಂ. ಕೆಲವರ್ “ಮೞೆಯಂ ಕರೆದ ಮೋಡದಂತೆ ಪಂಪನೊಳ್ ಕಾವ್ಯದ್ವಯದಿಂ ಸತ್ತ್ವಂ ಬತ್ತಿದುದು” ಎಂದರ್. ಕೆಲವರ್ “ಜಿನಾಗಮದ ಆದಿಪುರಾಣಮಂ ಪೇೞ್ದ ಬೞಿಕ್ಕಂ ಲೌಕಿಕಮನೊರೆದ ಕಾರಣಂ ಕವಿತ್ವಶಕ್ತಿಯೆ ನಿಂತುದು” ಎಂಬರ್. “ಲೌಕಿಕ ಕೃತಿಯೊಳ್ ಮುನ್ನಿನ ಕಬ್ಬಮೆಲ್ಲಮನಿಕ್ಕಿ ಮೆಟ್ಟಿದವು- ಎಂದು ಅಹಂಕಾರದಿಂ ಪೇೞ್ದ ಕಾರಣಂ ಮತ್ತೆ ಬರೆಯಲಾಱಂ ಪಂಪಂ” ಎಂದು ಪೇೞ್ದರ್. ಎನಗೆ ಏನೊಂದು ಪರಿಣಾಮುಮಾದುದಿಲ್ಲಂ. ಅರಿಕೇಸರಿ ಮಹಾರಾಜರ್ ಆಗಳೀಗಳೊರ್ಮೆ ಪೇೞ್ವರ್- “ಕವಿತಾಗುಣಾರ್ಣವ! ನೀಂ ಬಸಂತ ಮಾಸದೆ ಪಾಡುವ ಕೋಗಿಲೆಯಲ್ಲಂ. ಎಲ್ಲ ಕಾಲಮಂ ಬಸಂತಮಾಗಿಪ ಕೋಗಿಲೆ. ನೀಂ ಪಾಡೆ ಬಸಂತಂ ಬರ್ಪಂ! ಇಂತುಟೇಕೆ ನಿಲ್ಲಿಸಿರ್ದಪಿರಿ ಕಬ್ಬಮಂ ಪೇೞ್ವುದಂ” ಎಂದು. ಎನಗೇನೋ ತಿಳಿಯದಾದುದು. ಜಿನಪುರಾಣಂಗಳ್ ಅಸಂಖ್ಯಮಾಗಿರ್ಪುವು. ಬರೆಯಲ್ಕೆ ಈ ಭವದೊಳಸಾಧ್ಯಂ. ಇತಿಹಾಸಮಂ ನೆಗೞ್ಚಲ್ ಮಹಾಭಾರತಮಂ ಬರೆದಾದುದು. ರಾಮಾಯಣಮಂ ಬರೆದಿರ್ಪರ್ ಪಲವರ್. ಪೊನ್ನನೆಂಬಾತಂ ಬರೆದಿರ್ಪನೆಂದು ಕೇಳಿರ್ಪೆನಾದೊಡಂ ಕಂಡುದಿಲ್ಲಂ. ಅಸಗಂ ಕುಮಾರಸಂಭವಮಂ ಕನ್ನಡದೊಳ್ ಬರೆದಿರ್ಪಂ ಅಂತುಟೆ ಪಲವರ್ ನೈಷಧಮಂ ಕಿರಾತಾರ್ಜುನೀಯಮಂ ಕನ್ನಡದೆ ಬರೆದವರಿರ್ಪರ್. ಕೆಲವಂ ಓದಿರ್ಪೆಂ ಕೆಲವಂ ನೋಡಿಲ್ಲಂ. ಸಂಸ್ಕೃತದೆ ಓದಿದ ಬೞಿಕ್ಕಂ, ಮತ್ತೆ ಕನ್ನಡದೆ ನೋೞ್ಪ ಕುತುಕಮಿಲ್ಲಂ.“ಮಹಾಕಾವ್ಯಮಂ ರಚಿಸಿದ ಬೞಿಕ್ಕಂ ಮತ್ತಾವ ಕಾವ್ಯಮಂ ಬರೆಯುವ ಬಯಕೆಯಿಲ್ಲಂ. ಪಿಱಿದಂ ಸಾಧಿಸಿದ ಬೞಿಕ್ಕಂ ಕಿರಿದರೊಳ್ ಮನಂಬುಗದಲ್ತೇ!” ಎಂದು ದೀರ್ಘತರಮಾಗಿ ನಿಡುಸುಯ್ದು ಮೋನಮಿರ್ದಂ. 
(ಎಂದುಹೇಳಲು ಪಂಪನು ಮೆಚ್ಚುಗೆಯನ್ನು ಸೂಚಿಸಿದನಾದರೂ ಮುಖದಲ್ಲಿ ಸ್ವಲ್ಪ ಕ್ಲೇಶವು ಕಂಡಿತು. ಆಗ ರನ್ನನು ಪಂಪನೊಡನೆ ವಿಕ್ರಮಾರ್ಜುನವಿಜಯವನ್ನು ಕುರಿತು ಚರ್ಚಿಸಲು ಯೋಚಿಸಿ- “ನಿಮ್ಮ ಕಾವ್ಯಗಳನ್ನು ಓದಿರುವೆ. ಅವುಗಳ ಕುರಿತು ಹೇಳಿ” ಎನಲು ಪಂಪನು “ಅಃ! ಅದನ್ನು ಬರೆಯುವಾಗ ಇರುವ ಉತ್ಸಾಹ ಮತ್ತೆ ಚರ್ಚಿಸುವಾಗ ಇರುವುದಿಲ್ಲ. ನೀವು ಏನನ್ನು ಕಂಡಿದ್ದೀರಾ, ಏನು ಸೊಗಸೆನಿಸಿತ್ತು, ಹೇಳಿ” ಎಂದನು. ರನ್ನಮಯ್ಯನು “ನಾನು ಕೂಲಂಕಷವಾಗಿ ಓದಿದ್ದೇನೆ. ಕೆಲವು ವರ್ಣನೆಗಳು ಸೊಗಸೆನಿಸಿದವು. ಆದಿಪುರಾಣದಲ್ಲಿ ಇರುವ ಬಲ್ಮೆ ವಿಕ್ರಮಾರ್ಜುನ ವಿಜಯದಲ್ಲಿ ಇರುವಂತೆ ಕಾಣುವುದಿಲ್ಲ.” ಎಂದನು. ಪಂಪನು “ಏನು ಕಾರಣ?” ಎಂದು ಪ್ರಶ್ನಿಸಲು ರನ್ನನು “ಆದಿಪುರಾಣದಲ್ಲಿ ಜಿನಮತವನ್ನು ಹೇಳುವ ಗಾಂಭೀರ್ಯವುಂಟು. ವಿಕ್ರಮಾರ್ಜುನವಿಜಯದಲ್ಲಿ ಲೌಕಿಕಲೋಲುಪತೆಗಳನ್ನೂ ಐಹಿಕರಾಗದ್ವೇಷಗಳನ್ನೂ ವರ್ಣಿಸಿದ್ದೀರಲ್ಲವೇ, ಹಾಗೆ ಅದರಲ್ಲಿ ಆದಿಪುರಾಣದ ಔನ್ನತ್ಯವಿಲ್ಲ.” ಎಂದನು. ಪಂಪನು “ದಿಟ. ಆ ಕಾರಣದಿಂದಲೇ ಹೇಳಿದೆನಲ್ಲವೇ- “ಬೆಳಗುವೆನಿಲ್ಲಿ ಲೌಕಿಕಮನಲ್ಲಿ ಜಿನಾಗಮಮಂ” ಎಂದು. ಹಾಗೆಯೇ ಲೌಕಿಕ ಜೀವನಕ್ಕೆ ತೃಪ್ತಿಯನ್ನು ನೀಡಿದುದು ಭಾರತಕಥಾನಕವು. ಪಾರಲೌಕಿಕಕ್ಕೆ ಸೊಗವನ್ನು ಕೊಡುವುದು ಜಿನಾಗಮವು.  ಆಗಳೇ ಪದ್ಯದಲ್ಲಿ ನುಡಿದಿರಲ್ಲವೇ “ಕಂಟವನ್ನು ಧರಿಸಿ ಕಾವ್ಯದಿಂದ ಧರೆಯನ್ನು ಗಳಿಸಿದೆ” ಎಂದು ಅದೇ ಐಹಿಕ ಫಲವಲ್ಲವೇ. ಆ ಕಾವ್ಯದಿಂದಲೇ ಉದರಂಭರಣಕ್ಕೆ ಸಾಧ್ಯವಾದುದು. ಅಷ್ಟಲ್ಲದೇ ಕಾಣದ ಪಾರಲೌಕಿಕಕ್ಕಿಂತ ಕಾಣುವ ಲೌಕಿಕವೇ ಮಿಗಿಲು ಎನಿಸುವುದು. ಅರಿಕೇಸರಿಯಂತಹ ದೊರೆಯೂ ಮಿತ್ರನಾಗಿ ದೊರೆತಿದ್ದಾನೆ ಎಂದರೆ ಆ ಕಾವ್ಯದಿಂದಲೇ ಸಾಧ್ಯವಾದುದು. ಪಂಪನು ವಿಕ್ರಮಾರ್ಜುನವಿಜಯವೆಂದು ಹೆಸರಿಟ್ಟರೂ ಜನರು “ಪಂಪಭಾರತವೆಂದು” ಕರೆಯುತ್ತಿದ್ದಾರೆ ನೀವೂ ತಲವನಪುರದಿಂದ ಧರ್ಮಪುರದ ತನಕ ಬಂದಿದ್ದೀರಾ ಎಂದರೆ ಪಂಪಭಾರತವೇ ಕಾರಣವಲ್ಲವೇ! ಹಾಗಲ್ಲದೇ ಪಂಪನೆಂಬ ಹೆಸರು ಜನರಿಗೆ ತಿಳಿಯುವುದೇ! ಕೃತಿಯಿಂದಲೇ ಕವಿಯೂ ಶಾಶ್ವತ ಎನಿಸುತ್ತಾನೆ.” ಎಂದನು. ರನ್ನನು “ನೀವು ಮಹಾಭಾರತವನ್ನು ಬರೆಯುವುದಕ್ಕೆ ಮೊದಲಾದ ಕಾರಣವನ್ನು ಹೇಳಿ” ಎನಲು ಪಂಪನು “ಆಗ ನಾನು ಅರಿಕೇಸರಿ ಮ ಹಾರಾಜರ ಆಸ್ಥಾನದಲ್ಲಿ ದಂಡನಾಯಕನಾಗಿದ್ದೆ. ಕಲಿತನದಿಂದ ಅವರ ಸಾಹಚರ್ಯ ದೊರೆತಿತ್ತು. ಪದ್ಯಗಳನ್ನೂ ಬರೆಯುತ್ತಿದ್ದೆನಾದರೂ ಯಾರ ಎದುರಿನಲ್ಲಿಯೂ ಹೇಳುವ ಧೈರ್ಯವಿಲ್ಲದೇ ಇದ್ದೆ. ಒಂದು ದಿನ ಬೇಟೆಗೆಂದು ಹೋದಾಗ ವಿಶ್ರಾಂತಿಯ ವೇಳೆಯಲ್ಲಿ ಸಮಯಾಯಾಪನಕ್ಕೆ ಏನೋ ಪದ್ಯವನ್ನು ಬರೆಯುತ್ತಿದ್ದೆ. ಆಗ ಅನಿರೀಕ್ಷಿತವಾಗಿ ಅವರು ನನ್ನ ಬಿಡಾರಕ್ಕೆ ಬಂದರು. ನಾನು ಬರೆಯುತ್ತಿರುವುದನ್ನು ನೋಡಿದರು. ಕಾವ್ಯವನ್ನು ಓದಲು ಹೇಳಿದರು. ಅಂದು ಮೊದಲಾಗಿ ಹಲವು ಕಾಲ ಅವರೆದುರು ಸಭೆಯಲ್ಲಿ ಸ್ನೇಹಕೂಟದಲ್ಲಿ ಪದ್ಯಗಳನ್ನು ಹೇಳುತ್ತ ಇದ್ದೆ. ಆಸ್ಥಾನದಲ್ಲಿ ಹಲವರು ಪಂಡಿತರೂ ಸಚಿವರೂ ಇದ್ದರೂ ಯಾರೂ ಕವಿಗಳಿರಲಿಲ್ಲ. ಒಂದು ದಿನ ಬೇರೆ ಊರಿನಿಂದ ಒಬ್ಬರು ಪಂಡಿತರು ಬಂದರು. ಸಂಸ್ಕೃತದವ್ಯಾಸ ಮುನೀಂದ್ರರು ಹೇಳಿದ ಮಹಾಭಾರತದಲ್ಲಿ ಕೆಲವು ಕಥಾನಕಗಳನ್ನು ವಾಚಿಸಿದರು. ಅವರು ರಸಮಯವಾಗಿ ಕಥಾನಕವನ್ನು ಹೇಳಿ ಹೋದ ಬಳಿಕ ಸಭೆಯಲ್ಲಿ ಚರ್ಚೆಯಾದುದು. ಅದನ್ನು ಮೊದಲನೇಯ ಆಶ್ವಾಸದಲ್ಲಿ ಮತ್ತು  ಕೊನೆಯ ಆಶ್ವಾಸದಲ್ಲಿ ಬರೆದಿದ್ದೇನಲ್ಲವೇ, “ಯಾರೂ ಭಾರತಕಥಾನಕವನ್ನು ಕನ್ನಡದಲ್ಲಿ ಒಲವನ್ನಿಟ್ಟು ಹೇಳಿದವರಿಲ್ಲ. ಹೇಳಿಸಿದ ರಾಜರೂ ಇಲ್ಲ. ಹೇಳಿಸುವುದಾದರೆ ಉದಾತ್ತಕೀರ್ತಿಯಾದ ಅರಿಕೇಸರಿಯೇ ನೀನೇ ಹೇಳಿಸುವೆ, ಕವಿಗಳಲ್ಲಿ ಹೇಳುವುದಾದರೆ ಪಂಪನೇ ಹೇಳುವವನು” ಎಂದು ಹಲವರು ಹೇಳಿದರು. ಹಾಗೆ ಅವರು ಹೇಳುವ ಹೊತ್ತಿಗಾಗಳೇ ಆದಿಪುರಾಣವನ್ನು ಕನ್ನಡದಲ್ಲಿ ವಿಸ್ತಿರಿಸಿ ಬರರೆದದ್ದಾಗಿತ್ತು. ಅದನ್ನು ಓದಿ ಮೆಚ್ಚಿದ್ದರೆಲ್ಲರೂ. ಹಾಗಾಗಿ ಸಮಸ್ತಭಾರತವನ್ನು ಕನ್ನಡದಲ್ಲಿ ಕಥೆ ಮೆಯ್ಗೆಡದಂತೆ ಹೇಳುವುದಕ್ಕೆ ತೊಡಗಿದೆ. ಆರು ತಿಂಗಳಲ್ಲಿ ಮುಗಿಸಿದೆ. ಹೋಲಿಸುವುದಾದರೆ ಗುಣಾರ್ಣವನನ್ನು ಅರ್ಜುನನಲ್ಲಿ ಹೋಲಿಸುತ್ತೇನೆ ಎಂದು ಅರಿಕೇಸರಿಯನ್ನು ಕಥಾನಾಯಕನನ್ನಾಗಿಸಿ ಬರೆದೆ. ಬರೆದ ಬಳಿಕ ಸಭೆಯಲ್ಲಿ ವಾಚಿಸಿದ್ದೂ ಆಯ್ತು. ಅದನ್ನು ಆಲಿಸಿ ದೊರೆ ಮೆಚ್ಚಿ ಈ ಧರ್ಮಪುರವನ್ನು ಕೊಡುತ್ತೇನೆ ಎಂದು ಘೋಷಿಸಿದನು. ಹೀಗೆ ಈ ಧರ್ಮಪುರವು ದೊರೆತುದು. ಅದರೊಡನೆ ಲೌಕಿಕಕಾವ್ಯವನ್ನು ಹೇಳಿದೆನೆಂಬ ಕುಕೀರ್ತಿಯನ್ನೂ ಕೆಲವರಿತ್ತರು. ಏನಾದರೂ ಇರಲಿ. ಆಗ ಹೇಗೋ ವರ್ಷವೊಂದರಲ್ಲಿ ಎರಡು ಕಾವ್ಯಗಳು ಸಾಗಿದವು. ಆ ಬಳಿಕ ಮತ್ತೆ ಬರೆದುದಿಲ್ಲ. ಹೇಗೋ ನಿಶ್ಚಯವಾದ ಮನಸ್ಸಿಲ್ಲ. ಬರೆವ ಉತ್ಸುಕತೆಯೂ ಇಲ್ಲ. ಬರೆದುದ್ದನ್ನು ಓದುವುದರಲ್ಲಿ ಆಸಕ್ತಿಯಿದೆ. ಆದರೆ ಮತ್ತೇನನ್ನೂ ಬರೆದುದ್ದಿಲ್ಲ. ಕೆಲವರು “ಮಳೆಯನ್ನು ಕರೆದ ಮೋಡದಂತೆ ಪಂಪನಲ್ಲಿ ಕಾವ್ಯದ್ವಯದಿಂದ ಸತ್ತ್ವ ಬತ್ತಿಹೋಯಿತು” ಎಂದರು. ಕೆಲವರು “ಜಿನಾಗಮದ ಆದಿಪುರಾಣವನ್ನು ಹೇಳಿದ ಬಳಿಕ ಲೌಕಿಕವನ್ನು ಹೇಳಿದ ಕಾರಣ ಕವಿತ್ವಶಕ್ತಿಯೆ ನಿಂತಿದೆ” ಎನ್ನುವರು. “ಲೌಕಿಕಕೃತಿಯಲ್ಲಿ ಹಿಂದಿನ ಕಾವ್ಯಗಳನೆಲ್ಲ ಇಕ್ಕಿ ಮೆಟ್ಟಿದವು ಎಂದು ಅಹಂಕಾರದಿಂದ ಹೇಳಿದ ಕಾರಣಕ್ಕೆ ಮತ್ತೆ ಪಂಪ ಬರೆಯಲಾರ” ಎಂದು ಹೇಳಿದರು. ನನಗೆ ಏನೊಂದೂ ಪರಿಣಾಮವಾದುದಿಲ್ಲ. ಅರಿಕೇಸರಿ ಮಹಾರಾಜರು ಆಗೀಗ ಒಮ್ಮೊಮ್ಮೆ ಹೇಳುತ್ತಾರೆ “ಕವಿತಾಗುಣಾರ್ಣವ! ನೀನು ವಸಂತಮಾಸದಲ್ಲಿ ಮಾತ್ರ ಹಾಡುವ ಕೋಗಿಲೆಯಲ್ಲ. ಎಲ್ಲ ಕಾಲವನ್ನೂ ವಸಂತವನ್ನಾಗಿಸುವ ಕೋಗಿಲೆ. ನೀನು ಹಾಡಿದರೆ ವಸಂತ ಬರುತ್ತಾನೆ. ಹೀಗೇಕೆ ಕಾವ್ಯವನ್ನು ಹೇಳುವುದನ್ನು ನಿಲ್ಲಿಸಿದ್ದೀರಿ” ಎಂದು. ನನಗೇನೋ ತಿಳಿಯದಾದುದು. ಜಿನಪುರಾಣಗಳು ಅಸಂಖ್ಯವಾಗಿವೆ. ಬರೆಯುವುದಕ್ಕೆ ಈ ಜನ್ಮದಲ್ಲಿ ಸಾಧ್ಯವಿಲ್ಲ. ಇತಿಹಾಸವನ್ನು ಹೇಳಲು ಮಹಾಭಾರತವನ್ನು ಬರೆದಾಯ್ತು.  ರಾಮಾಯಣವನ್ನು ಹಲವರು ಬರೆದಿದ್ದಾರೆ. ಪೊನ್ನ ಎಂಬಾತ ಬರೆದಿದ್ದಾನೆ ಎಂದು ಕೇಳಿದ್ದೇನಾದರೂ ನೋಡಿಲ್ಲ. ಅಸಗನು ಕುಮಾರಸಂಭವವನ್ನು ಕನ್ನಡದಲ್ಲಿ ಬರೆದಿದ್ದಾನೆ. ಹಾಗೆಯೇ ಹಲವರು ನೈಷಧವನ್ನೂ ಕಿರಾತಾರ್ಜುನೀಯವನ್ನೂ ಕನ್ನಡದಲ್ಲಿ ಬರೆದವರಿದ್ದಾರೆ. ಕೆಲವನ್ನು ಓದಿದ್ದೇನೆ, ಕೆಲವನ್ನು ನೋಡಿಲ್ಲ. ಸಂಸ್ಕೃತದಲ್ಲಿ ಓದಿದ ಬಳಿಕ ಮತ್ತೆ ಕನ್ನಡದಲ್ಲಿ ನೋಡುವ ಕುತೂಹಲವೂ ಇಲ್ಲ, ಮಹಾಕಾವ್ಯವನ್ನು ಬರೆದ ಬಳಿಕ ಮತ್ತಾವ ಕಾವ್ಯವನ್ನೂ ಬರೆಯುವ ಬಯಕೆಯಿಲ್ಲ. ಹಿರಿದನ್ನು ಸಾಧಿಸಿದ ಬಳಿಕ ಕಿರಿದರಲ್ಲಿ ಮನಸ್ಸು ಹೊಗುವುದಿಲ್ಲವಲ್ಲವೇ?” ಎಂದು ದೀರ್ಘತರವಾಗಿ ನಿಟ್ಟುಸಿರು ಬಿಟ್ಟು ಮೌನದಿಂದ ಇದ್ದನು.)
ಆದೊಡಂ ರನ್ನಂಗೆ ಅವನ ಮಾತಿನೊಳ್ ವಿಶ್ವಾಸಂ ಪುಟ್ಟದಾಗೆ “ಪಿಱಿದಂ ಸಾಧಿಸಿದುದು ನಿಶ್ಚಯಮೆ! ಇದರ್ಕೆ ಪಿಱಿದೆನಿಪುದು ಇರಲ್ವೇೞ್ಕುಮಲ್ಲಮೆ” ಎಂದು ಪ್ರಶ್ನಿಸೆ ಪಂಪಂ ಚಿಂತಿಸತೊಡಗಿದಂ. ಭರತಂ ತನ್ನ ಸಾಧನೆಯಂ ಮೇರುಪರ್ವತಾಗ್ರದೊಳ್ ಕೆತ್ತಿಸಲ್ ಪೋದಾಗಳ್ ತಾನೆ ಬಣ್ಣಿಸಿದ ಪದ್ಯಂ ನೆನಪಾದುದು-
ಅದಱೊಳನೇಕಕಲ್ಪಶತಕೋಟಿಗಳೊಳ್ ಸಲೆ ಸಂದ ಚಕ್ರಿವೃಂ
ದದ ಚಲದಾಯದಾಯತಿಯ ಬೀರದ ಚಾಗದ ಮಾತುಗಳ್ ಪೊದ-
ೞ್ದೊದವಿರೆ ತತ್ಪ್ರಶಸ್ತಿಗಳೊಳಂತವನೊಯ್ಯನೆ ನೋಡಿ ನೋಡಿ ಸೋ
ರ್ದುದು ಕೊಳಗೊಂಡ ಗರ್ವರಸಮಾ ಭರತೇಶ್ವರಚಕ್ರವರ್ತಿಯಾ ||
ಎಂತುಟೊ ಭರತಚಕ್ರೇಶ್ವರಂ ಭೂಮಂಡಲಮಂ ಗೆಲ್ದು ತನ್ನ ಸಾಧನೆಯಂ ಪರ್ವತಾಗ್ರದೆ ಕೆತ್ತಿಸಲ್ ಪೋದಾಗಳ್ ಅಲ್ಲಿ ಅನೇಕಶತಕೋಟಿ ಕಲ್ಪಂಗಳೊಳ್ ಸಂದ ಚಕ್ರವರ್ತಿಗಳ್ ತಮ್ಮ ತಮ್ಮ ಚಲದ ಸಾಧನೆಯ ಬೀರದ ಚಾಗದ ಮಾತುಗಳಂ ಪ್ರಶಸ್ತಿಗಳಂ ಕೆತ್ತಿಸಿರ್ಪುದಂ ಕಂಡು   ಆತನ ಕೊಳಗೊಂಡ ಗರ್ವರಸಂ ಸೋರ್ದುದು. ಅದರೊಳ್ ಕೆಲಮಂ ಅಳುಪಿ ತನ್ನ ಸಾಧನೆಯಂ ಬರೆಸಿದಪನಾತಂ. ಅಂತುಟೆ ದಲ್ ಮಾಮಕಸಾಧನಾಸಂಪತ್ತಿಯುಂ. ಪೂರ್ವದೊಳ್ ಎಂತೆಂತೊ ಪಲವರ್ ಸಾಧಿಸಿದುದೆ ನನ್ನಿಂ ಸಾಧಿತಂ. ಕಾವ್ಯಂಗಳಂ ರಚಿಸುವರ್ ಅಸಂಖ್ಯರ್. ಆದೊಡಂ ಶಾಶ್ವತಮಪ್ಪಂತೆ ಕಾವ್ಯಮಂ ರಚಿಪರ್ ವಿರಳರ್. ಶಾಶ್ವತಮೇನಿರ್ಪುದು! ದೇಹಮೆ? ಜೀವನಮೆ? ಕಬ್ಬಮೆ? ಕೀರ್ತಿಯೆ?  ಎಂತುಟೊ ಕಾಲದಿಂ ಗಳಿಸಿಕೊಂಡ ಕೃತಿದ್ವಯದ ಜಸದಿಂದಿಂತು ಶಾಶ್ವತಮಾಗಿರ್ಪ ಸೊಗಮಂ ಪಡೆದೆನೆಂದು ಭಾವಿಸಿದಪೆಂ, ಅದು ಸೆಟೆಯಾದುದು. ಸಾಧಿಸಲ್ಕಿರ್ಪುದನಂತಂ. ಇರ್ಪತ್ತು ವರ್ಷಂಗಳಿಂದೇನೊಂದುಮಂ ಬರೆದುದಿಲ್ಲಂ ಎನೆ ಕೀರ್ತಿಯಿಂ ಕಣ್ ಕವರ್ತುದು. ಮನಃಪಟಲಕ್ಕಂ ವಾಸ್ತವಕ್ಕಂ ಮಧ್ಯದೊಳ್ ತೆರೆಯೊಂದು ಸಂದುದು ಇಂದು ಜಗುಳ್ದತ್ತು. ಇಂದಾಂ ಗೆಯ್ದುದನಳಿಪಂತೆ ಬರೆದಪನಿನ್ನೊರ್ವಂ ಭವಿತವ್ಯದೊಳ್! ಅಂತೆನೆ ಪೆಱತಂ ಬರೆಯಲ್ವೇೞ್ಕುಂ ಎಂದು ಚಿಂತಿಸುತ್ತೆ ಮೌನಮಂ ಪೊಂದಿದಂ.
(ಆದರೆ ರನ್ನನಿಗೆ ಅವನ ಮಾತಿನಲ್ಲಿ ವಿಶ್ವಾಸವು ಹುಟ್ಟದಾಗಿ “ಹಿರಿದನ್ನು ಸಾಧಿಸಿದುದು ನಿಶ್ಚಯವೇ? ಇದಕ್ಕಿಂತ ಹಿರಿದೆನಿಸುವುದು ಇರಬೇಕಲ್ಲವೇ! ಎಂದು ಪ್ರಶ್ನಿಸಲು ಪಂಪನು ಚಿಂತಿಸತೊಡಗಿದನು. ಭರತಚಕ್ರವರ್ತಿಯು ತನ್ನ ಸಾಧನೆಯನ್ನು ಮೇರು ಪರ್ವತದ ತುದಿಯಲ್ಲಿ ಕೆತ್ತಿಸಲು ಹೋದಾಗ ತಾನೇ ಬಣ್ಣಿಸಿದ ಪದ್ಯ ನೆನಪಾಯ್ತು-
ಅದರೊಳಗನೇಕಕಲ್ಪಶತಕೋಟಿಗಳಷ್ಟು ಕಾಲದೊಳಗಿರ್ಪಂಥ ಚಕ್ರಿವೃಂದ
ಚದುರಿಂದ ತಮ್ಮ ಕೀರ್ತಿಯ ನುಡಿಯ ಕೆತ್ತಿಸಿಟ್ಟಿರುವ ಕಲ್ಗಳ ಕಂಡು ಬಹಳ ನೊಂದು
ಅದನೆಲ್ಲವನು ನೋಡುತೋದುತ್ತ ಭರತನಿಗೆ ತನ್ನ ಮನದೊಳಗಂದು ತಾನೊದವಿದ
ಹದವಾಗಿ ಕೊಳವಾದ ಗರ್ವರಸವೆಲ್ಲವೂ ದಿಟದಿಂದೆ ಸೋರಿಹೋದುದು ನೋಡುತ||
ಹೇಗೋ ಭರತಚಕ್ರೇಶ್ವರನು ಭೂಮಂಡಲವನ್ನು ಗೆದ್ದು ತನ್ನ ಸಾಧನೆಯ್ನು ಪರ್ವತದ ತುದಿಯಲ್ಲಿ ಕೆತ್ತಿಸಲು ಹೋದಾಗ ಅಲ್ಲಿ ಅನೇಕ ಕಲ್ಪಶತಕೋಟಿಗಳಲ್ಲಿ ಆಗಿ ಹೋದ ಚಕ್ರವರ್ತಿಗಳು ತಮ್ಮ ತಮ್ಮ ಚಲದ ಸಾಧನೆಯ  ವೀರದ ತ್ಯಾಗದ ಮಾತುಗಳನ್ನು ಪ್ರಶಸ್ತಿಗಳನ್ನು ಕೆತ್ತಿಸಿರುವುದನ್ನು ಕಂಡು ಆತನಲ್ಲಿ ಕೊಳದಂತೆ ಇದ್ದ ಗರ್ವರಸ ಸೋರಿಹೋಯಿತು. ಆತನು ಅದರಲ್ಲಿ ಕೆಲವನ್ನು ಅಳಿಸಿ ತನ್ನ ಸಾಧನೆಯನ್ನು ಬರೆಸಿದನು. ಹಾಗೆಯೇ ಅಲ್ಲವೇ ನನ್ನ ಸಾಧನೆಯ ಸಂಪತ್ತಿ ಕೂಡ! ಹಿಂದೆ ಹೇಗೆ ಹೇಗೋ ಹಲವರು ಸಾಧಿಸಿದ್ದೇ ನನ್ನಿಂದಲೂ ಸಾಧಿಸಲ್ಪಟ್ಟಿತು. ಕಾವ್ಯಗಳನ್ನು ರಚಿಸುವವರು ಅಸಂಖ್ಯರು. ಆದರೆ ಶಾಶ್ವತವಾಗುವಂತೆ ಕಾವ್ಯವನ್ನು ರಚಿಸುವವರು ವಿರಳರು. ಶಾಶ್ವತವಾಗಿ ಇರುವುದೇನು! ದೇಹವೇ! ಜೀವನವೇ! ಕಾವ್ಯವೇ! ಕೀರ್ತಿಯೇ! ಎಷ್ಟೋ ಕಾಲದಿಂದ ಗಳಿಸಿಕೊಂಡ ಎರಡು ಕೃತಿಗಳ ಯಶಸ್ಸಿನಿಂದ ಶಾಶ್ವತವಾಗಿರುವ ಸೊಗವನ್ನು ಪಡೆದೆ ಎಂದು ಭಾವಿಸಿದ್ದೆ. ಅದು ಸುಳ್ಳಾಯ್ತು. ಸಾಧಿಸಲಿಕ್ಕೆ ಇರುವುದು ಅನಂತ, ಇಪ್ಪತ್ತು ವರ್ಷಗಳಿಂದ ಏನೊಂದನ್ನೂ ಬರೆದುದ್ದಿಲ್ಲ ಎಂದರೆ ಕೀರ್ತಿಯಿಂ ಕಣ್ಣು ಕವರಿತ್ತು. ಮನಃಪಟಲಕ್ಕೂ ವಾಸ್ತವಕ್ಕೂ ಮಧ್ಯದಲ್ಲಿ ತೆರೆಯೊಂದು ಬಂದದ್ದು ಇವತ್ತು ಸರಿಯಿತು. ಇಂದು ನಾನು ಮಾಡಿರುವುದನ್ನು ಅಳಿಸುವಂತೆ ಇನ್ನೊಬ್ಬನು ಬರೆಯುತ್ತಾನೆ ಭವಿಷ್ಯದಲ್ಲಿ.  ಹಾಗಾದರೆ ಬೇರೆಯದನ್ನು ಬರೆಯಬೇಕು ಎಂದು ಚಿಂತಿಸುತ್ತ ಮೌನವನ್ನು ಹೊಂದಿದನು)
ಆಗಳ್ ನಿಶೆ ಪೆರ್ಚಿರ್ಕುಮೆಂದು ಎಲ್ಲರ್ಗೆ ನಿದ್ರಿಸಲ್ಕಣತಿಯಾಗೆ ರನ್ನಮಯ್ಯಂಗೆ ಜಿನವಲ್ಲಭಂ  ಪಾಸಂ ಬಿತ್ತರಿಸೆ ಎಲ್ಲರುಂ ನಿದ್ರಿಸಿದರ್.
(ಆಗ ರಾತ್ರಿ ಹೆಚ್ಚಾಯಿತೆಂದು ಎಲ್ಲರಿಗೂ ನಿದ್ರಿಸಲು ಅಣತಿಯಾಯಿತು. ರನ್ನಮಯ್ಯನಿಗೆ ಜಿನವಲ್ಲಭನು ಹಾಸನ್ನು ಬಿತ್ತರಿಸಲಲು ಎಲ್ಲರೂ ನಿದ್ರಿಸಿದರು)
ಬೆಳಕು ಪರಿವಾಗಳ್ ರನ್ನಮಯ್ಯಂ ಎೞ್ದು ಪಲ್ಲಂ ಸುಲಿದು ಕುದುರೆಗಂ ನೀರಂ ಕುಡಿಸಿ ಪುಲ್ಲನಿತ್ತು ಸ್ನಾನಮಂ ಮಾಡಲ್ಕೆಂದು ಕವಿತಾಗುಣಾರ್ಣವಸರೋವರಕ್ಕಂ ಪೋದಪಂ. ಪೊೞ್ತು ಮೇಲೆೞ್ತರುತಿರೆಯಿರೆ ಕವಿಪ್ರಕೃತಿಯಿಂ ನಿಂದು ಅದಂ ನೋಡುತ್ತುಂ ಕಿಂಚಿತ್ಕಾಲದ ಬೞಿಕ್ಕಂ ಪಂಪನ ಮನೆಗಂ ಪೋಗಿ ಪ್ರಾತರಶನಮಂ ಪೊಂದಿ ಪೊರಮಡಲ್ ಚಿಂತಿಸಿದಂ. ಆಗಳ್ ಜಿನವಲ್ಲಭಂ ದೂರದಿಂದಿವನಂ ಕರೆಯುತುಂ ಬರುತಿರ್ದಪಂ. ರನ್ನನುಂ ಬೇಗದಿಂ ಪೋಗೆ “ಅಯ್ಯಾ! ಪಂಪನ್ನಂ ಕಾಣುತ್ತಿಲ್ಲಂ” ಎಂದು ಪೇೞ್ದಪಂ. ರನ್ನಮಯ್ಯನುಂ ಬೇಗದಿಂ ಪೋಗೆ ಎಲ್ಲರುಂ ಖೇದದಿಂ ನಿಂತಿರ್ದಪರ್. ಪಂಪನ ಪಾಸಗೆಯ ಮೇಲೆ ತಾಳಪತ್ರಮೊಂದಿರ್ದುದು. ಅದಱೊಳ್-
ಆವುದನಾವಗಂ ಮನದೆ ಚಿಂತಿಸೆ ಚಿಂತಿಪ ಕಜ್ಜದಿಂದಮಾಂ
ನೋವನೆ ಕಾಣದಂತೆ ನಡೆದೆಂ ನಡೆಯುತ್ತೆ ಬೞಿಕ್ಕೆ ಕಾಲದೊಳ್
ತೀವಿತೊ ಚೆಲ್ವು  ಚೆಲ್ವನೊಳಕೊಂಡುದು ದೇಸಮದೊಂದೆ ದೂಸಱಿಂ
ದಾ ವನವಾಸಿಗಂ ದಿಟದೆ ವಾಸಿಸಲೆಂದುಱೆ ಪೋಪೆನೆಂಬುದುಂ||
ಎನ್ನಯ ಬಾೞ್ತೆಗಿತ್ತನರಿಕೇಸರಿಯೆಲ್ಲಮುಮಂ ವಿಲಾಸಮಂ 
ನನ್ನಿಯನಿಂದು ಕಂಡೆನೆನೆ ಸಾಧನೆಯಿರ್ಪುದನಂತಮೆಂಬುದಂ
ರನ್ನನ ಮಾತಿನಿಂ ಕವಿತೆಯಿಂದೆ ನೆಗೞ್ತೆಯನೊಂದಿ ಮುಕ್ತಿಸಂ
ಪನ್ನನೆನಿಪ್ಪೆನಾಂ ಸವಣನಪ್ಪಭಿಲಾಷೆಗೆ ಪೋಗುತಿರ್ಪೆನಾಂ||
ಎಂದಿರ್ಪುದನೋದೆ ರನ್ನಂ “ತನ್ನ ಕಿರಿದಾದ ಮಾತಿಂದಿವರ್ಗೆ ಬೆಸನಮಾದುದೆ” ಎಂದು ಕಿಂಚಿಚ್ಚಿಂತಾಕುಲನಾದಂ. ಜಿನವಲ್ಲಭಂ “ಎನಿತೊ ಬರಲ್ವೇೞ್ಕುಂ ವೈರಾಗ್ಯಮೆಲ್ಲರ್ಗೆ. ಪಂಪನ್ನಂಗೆ ನಿಮ್ಮಿಂ ಜ್ಞಾನೋದಯಮಾದುದು ಸೈಪಾಯ್ತು. ಇರ್ಕೆ. ಬನ್ನಿಂ” ಎಂದು ಪೊರಮಟ್ಟಂ. ರನ್ನನುಂ ಅವರ್ಗಮೆಲ್ಲರ್ಗೆ ವಂದಿಸಿ  ಕುದುರೆಯನೇರ್ದು ತಲವನಪುರದೆಡೆ ಪೊರಮಟ್ಟಂ. ದಾರಿಯೊಳ್ ಕೆಲಬರ್ ದಿಗಂಬರಸವಣರಂ ಕಂಡು ಶಾಶ್ವತಮಪ್ಪುದುಂ ಸುಲಭಮಿಲ್ಲಂ ಎನುತ್ತೆ ಬಗೆಯೊಳ್ ಮಿಗೆ ಚಿಂತಿಸುತ್ತಿರ್ದಂ.
(ಬೆಳಕು ಹರಿಯುವಾಗ ರನ್ನಮಯ್ಯನು ಎದ್ದು ಹಲ್ಲುಜ್ಜಿಕೊಂಡು ಕುದುರೆಗೆ ನೀರನ್ನು ಕುಡಿಸಿ ಹುಲ್ಲನ್ನಿತ್ತು ಸ್ನಾನವನ್ನು ಮಾಡಲೆಂದು ಕವಿತಾಗುಣಾರ್ಣವ ಸರೋವರಕ್ಕೆ ಹೋದನು. ಹೊತ್ತು ಮೇಲೆದ್ದು ಬರುತಿರಲು ಕವಿಯ ಸಹಜಸ್ವಭಾವದಿಂದ ನಿಂತು ಅದನ್ನು ನೋಡುತ್ತ ಸ್ವಲ್ಪ ಕಾಲದ ಬಳಿಕ ಪಂಪನ ಮನೆಗೆ ಹೋಗಿ ಬೆಳಿಗ್ಗೆಯ ಅಶನವನ್ನು ಹೊಂದಿ ಹೊರಡಲು ಚಿಂತಿಸಿದನು. ಆಗ ಜಿನವಲ್ಲಭನು ದೂರದಿಂದ ಕರೆಯುತ್ತ ಬರುತ್ತಿದ್ದನು ರನ್ನನೂ ಬೇಗದಿಂದ ಹೋಗಲು “ಅಯ್ಯಾ! ಪಂಪಣ್ಣ ಕಾಣುತ್ತಿಲ್ಲ” ಎಂದು ಹೇಳಿದನು. ರನ್ನನೂ ಬೇಗದಿಂದ ಹೋಗಲು ಎಲ್ಲರೂ ಖೇದದಿಂದ ನಿಂತಿದ್ದರು. ಪಂಪನ ಹಾಸಗೆಯ ಮೇಲೆ ಒಂದು ತಾಳಪತ್ರವಿತ್ತು. ಅದರಲ್ಲಿ-
ಆವುದನ್ನೆಂದಿಗೂ ಮನವು ನೆನೆದುದೊ ನಾನು ನೋವ ಕಾಣದ ರೀತಿ ನಡೆಯುವಾಗ
ಆವುದಾ ದೇಶವೋ ಬನವಾಸಿ ಎಂತಿಹುದೊ ಅಲ್ಲಿಗೇ ಹೋಗುವೆನು ನಾನು ಈಗ
ನನ್ನ ಬಾಳಿಗೆ ರಾಜನಿತ್ತನೆಲ್ಲವ ಸೊಗವ, ಸಾಧನೆಯನಂತವೆಂಬುದ ಕಂಡೆನಿಂದು
ರನ್ನನಾ ಮಾತಿನಲಿ ತಿಳಿದು ಮುಕ್ತಿಯ ಬಯಸಿ ಸವಣನಾಗುವೆ ನಾನು ಸಾಧ್ಯವೆಂದು||
ಎಂದಿರುವುದನ್ನು ಓದಿ ರನ್ನನು “ತನ್ನ ಕಿರಿದಾದ ಮಾತಿನಿಂದ ಇವರಿಗೆ ವ್ಯಸನವಾಯಿತೇ॑ ಎಂದು ಸ್ವಲ್ಪ ಚಿಂತಾಕುಲನಾದನು. ಜಿನವಲ್ಲಭನು “ಹೇಗೋ ವೈರಾಗ್ಯವು ಎಲ್ಲರಿಗೂ ಬರಲೇಬೇಕು. ಪಂಪಣ್ಣನಿಗೆ ನಿಮ್ಮಿಂದ ಜ್ಞಾನೋದಯವಾದುದು ಒಳ್ಳೆಯದೇ ಆಯ್ತು. ಇರಲಿ ಬನ್ನಿ” ಎಂದು ಹೊರಟ. ರನ್ನನೂ ಅವರೆಲ್ಲರಿಗೆ ವಂದಿಸಿ ಕುದುರೆಯನ್ನೇರಿ ತಲವನಪುರದ ಕಡೆಗೆ ಹೊರಟ. ದಾರಿಯಲ್ಲಿ ಕೆಲವರು ದಿಗಂಬರ ಸವಣರನ್ನು ಕಂಡು ಶಾಶ್ವತವಾಗುವುದೂ ಸುಲಭವಿಲ್ಲ ಎಂದು ಮನಸ್ಸಿನಲ್ಲಿ ಚಿಂತಿಸುತ್ತಿದ್ದನು.)
~~~~~~~~~~~


ಕಥೆಯ ಹಿನ್ನೆಲೆ-
    ನಮ್ಮ ದೇಶದಲ್ಲಿ ಹಿಂದಿನ ಕಾಲದ ಎಲ್ಲ ಕವಿಗಳೂ ತಮ್ಮ ಬಗ್ಗೆ ಹೆಚ್ಚಾಗಿ ಹೇಳಿಕೊಂಡಿಲ್ಲ. ಆದರೆ ಕನ್ನಡದಲ್ಲಿ ಆದಿಕವಿಯಾದ ಪಂಪ ತನ್ನ ಬಗ್ಗೆ ಸಾಕಷ್ಟು ವಿವರಗಳನ್ನು ಹೇಳಿದ್ದಾನೆ. ಹಾಗೆಯೇ ಕವಿಚಕ್ರವರ್ತಿ ರನ್ನ ಕೂಡ ತನ್ನ ಕುರಿತೂ ತನಗೆ ಆದರ್ಶಪ್ರಾಯರಾದ ಕವಿಗಳನ್ನು ಕುರಿತೂ ಸಾಕಷ್ಟು ಹೇಳಿದ್ದಾನೆ. ತನಗೆ ಆಶ್ರಯವನ್ನು ಕೊಟ್ಟ ಚಾವುಂಡರಾಯ ಅತ್ತಿಮಬ್ಬೆಯರ ಕುರಿತೂ ಹೇಳಿದ್ದಾನೆ. ಅದಲ್ಲದೇ ಚಾವುಂಡರಾಯನ ಹಾಗೂ ರನ್ನನ ಹಸ್ತಾಕ್ಷರಗಳು ಕೂಡ ಶ್ರವಣಬೆಳುಗೊಳದಲ್ಲಿ ಲಭ್ಯವಾಗಿವೆ. (ಇತ್ತೀಚಿನ ದಿನಗಳಲ್ಲಿ ಅಕ್ಷರಗಳು ಮಾಸಿ ಹೋಗಿವೆ) ಪಂಪರನ್ನರಿಬ್ಬರೂ ಕನ್ನಡದಲ್ಲಿ ಪಡೆದ ಪ್ರಸಿದ್ಧಿಯನ್ನೂ, ಅವರ ಕಾವ್ಯಗಳ ಸ್ವಾರಸ್ಯವನ್ನೂ ಗಮನಿಸಿದಾಗ ಸಹಜವಾಗಿಯೇ ಇವರ ಜೀವನದ ಕಥೆಯಲ್ಲಿ ಕುತೂಹಲವು ಹುಟ್ಟಿತು. ಅವರ ಕಾಲವನ್ನೂ ಗಮನಿಸಿದಾಗ ತುಂಬ ಅಂತರವೇನೂ ಇದ್ದಂತೆ  ಕಾಣಲಿಲ್ಲ. ಅಷ್ಟಲ್ಲದೇ ಶ್ರವಣಬೆಳುಗೊಳದ ಗೊಮ್ಮಟನ ಮೂರ್ತಿಯನ್ನು ಶಿಲ್ಪಿಸಿದ ಕಥಾನಕವಿರುವ ತ.ರಾ.ಸು ಅವರ ಐತಿಹಾಸಿಕ ಕಾದಂಬರಿಯಾದ "ಶಿಲ್ಪಶ್ರೀ"ಯಲ್ಲಿ ಕೂಡ ರನ್ನ ಹಾಗೂ ಚಾವುಂಡರಾಯರ ಕಥೆಯಿದೆ. ಅಲ್ಲಿ ಪಂಪನ ಪಾತ್ರ ಕೂಡ ಕಿರಿದಾಗಿ ಬಂದು ಹೋಗುತ್ತದೆ. ದಂತಕಥೆಗಳಲ್ಲದೇ ಹೀಗೆ ಕವಿಯೊಬ್ಬ ಐತಿಹಾಸಿಕಪಾತ್ರವೂ ಆಗಿ ಬರುವಂತಹ ಕಥೆಗಳು ಕನ್ನಡದಲ್ಲಿ ಕಡಿಮೆಯೇ. ತೆಲುಗಿನ ನೋರಿನರಸಿಂಹಶಾಸ್ತ್ರಿಗಳ "ಕವಿಸಾರ್ವಭೌಮುಡು" ಕಾದಂಬರಿಯಲ್ಲಿ ಶ್ರೀನಾಥಕವಿಯ ಜೀವನದ ಕಥೆಯಲ್ಲಿ ಕನ್ನಡದ ಕುಮಾರವ್ಯಾಸನ ಪಾತ್ರವೂ ಕಿರಿದಾಗಿ ಬರುವುದನ್ನು ಓದಿದಾಗ ಇತಿಹಾಸವು ಹೇಳಲಾರದ ವಿಷಯದಲ್ಲಿ ಸ್ವಾತಂತ್ರ್ಯವನ್ನು ತೆಗೆದುಕೊಂಡು ಚರಿತ್ರೆಗೆ ಅಪಚಾರವಾಗದಂತೆ ಕಲ್ಪನೆಯಿಂದ ಕಥೆಯನ್ನು ಬೆಳೆಸಬಹುದು ಎಂಬ ಯೋಚನೆ ಬಂದಿತ್ತು. ಪಂಪನು ಹೋಗಿ ನೆಲೆಸಿದ ಧರ್ಮಪುರ ಮೊದಲು ಕರ್ಣಾಟಕದಲ್ಲೇ ಇದೆ ಎಂದುಕೊಂಡಿದ್ದರೂ ಆಂಧ್ರದ (ಪ್ರಸ್ತುತ ತೆಲಂಗಾಣ) ಕುರಿಕ್ಯಾಲ (ಬೊಮ್ಮಲಮ್ಮ ಗುಟ್ಟ) ಎಂಬಲ್ಲಿ ದೊರೆತ ಜಿನವಲ್ಲಭನ ಶಾಸನ- ಪಂಪ ಅಲ್ಲಿಗೆ ಹೋಗಿ ನೆಲೆಸಿದ್ದನ್ನು ಸೂಚಿಸುತ್ತದೆ ಹಾಗೂ ಹಲವು ಐತಿಹಾಸಿಕ ವಿವರಗಳನ್ನು ತೆರೆದಿಟ್ಟಿದೆ. ಇವೆಲ್ಲವುಗಳಿಂದ ಈ ಕಥೆಯ ದೇಶಕಾಲಾದಿಗಳ ಸ್ಥೂಲರೂಪವನ್ನು ಕಂಡುಕೊಂಡು ಪಂಪನ ವಯಸ್ಸಿಗೂ ರನ್ನನ ವಯಸ್ಸಿಗೂ ಇರುವ ಅಂತರವನ್ನೂ ಅವರಿಬ್ಬರೂ ಪರಸ್ಪರ ಸಂಧಿಸುವ ಸಾಧ್ಯತೆಯನ್ನೂ ಇಟ್ಟುಕೊಂಡು ಕಲ್ಪಿಸಿ ಹೀಗೆ ಬರೆದಿದ್ದಾಯಿತು.
    ಪಂಪನ ಹಳಗನ್ನಡ ಸ್ವಲ್ಪ ಕಠಿನ, ರನ್ನನ ಹಳಗನ್ನಡ ಸುಲಭವೆನಿಸಿದರೂ ಓಜಸ್ವಿಯಾದ ಭಾಷೆ. ಇಂತಹ ಪಂಪ ರನ್ನರ ಕಾಲದ ಭಾಷೆಯಲ್ಲಿಯೇ ಅವರ ಸಂಭಾಷಣೆಗಳಿದ್ದರೆ ಸಹಜತೆಗೆ ಹತ್ತಿರವಾದೀತೆಂದು ಯೋಚಿಸಿದೆ. ಹಾಗೆಯೇ ನಿರೂಪಣೆಯಲ್ಲಿ ಕೂಡ ಅದೇ ಭಾಷೆಯನ್ನೇ ಅಳವಡಿಸಿ ಪಂಪರನ್ನರ ಶೈಲಿಯನ್ನೇ ಹೋಲುವ ಕೆಲವು ಪದ್ಯಗಳನ್ನೂ ಸೇರಿಸಿಕೊಂಡು ಹಳಗನ್ನಡದಲ್ಲಿಯೇ ಸಂಪೂರ್ಣವಾದ ಕಥೆಯನ್ನೂ ಬರೆಯುವ ಸಾಹಸವನ್ನು ಮಾಡಿದೆ. ಹೀಗೆ ಸೃಷ್ಟಿಯಾದ ಆಧುನಿಕ ಶೈಲಿಯ ಈ ಹಳಗನ್ನಡದ ಕಥೆಯನ್ನು ಓದಿ ಮೆಚ್ಚಿಕೊಂಡು ಸಲಹೆಗಳನ್ನು ನೀಡಿದ ಶತಾವಧಾನಿ ಡಾ|| ಗಣೇಶ್ ಅವರಿಗೆ ಕೃತಜ್ಞತೆಗಳು. ಈ ಹೊಸ ರುಚಿಯ ನೂತನ ಪ್ರಯೋಗ ಓದುಗರಿಗೆ ಮೆಚ್ಚುಗೆಯಾದೀತೆಂದು ಭಾವಿಸುವೆ.

-ಅವಧಾನಿ ಗಣೇಶ ಭಟ್ಟ ಕೊಪ್ಪಲತೋಟ

ಬುಧವಾರ, ಜುಲೈ 1, 2020

ಕುಂಭಸಂಭವೀಯಮೆಂಬ ಅಗಸ್ತ್ಯಚರಿತೆ- ಕವಿಕಾವ್ಯಪರಿಚಯ

ಮೊದಲ ಸರ್ಗವನ್ನು ಇಲ್ಲಿ ನೋಡಿ- ಉರ್ವಶೀಜನನವೃತ್ತಾಂತಂ
ಎರಡನೇ ಸರ್ಗವನ್ನು ಇಲ್ಲಿ ನೋಡಿ- ಅಗಸ್ತ್ಯಜನನವೃತ್ತಾಂತಂ
ಮೂರನೇ ಸರ್ಗವನ್ನು ಇಲ್ಲಿ ನೋಡಿ- ಸಾಗರಾಗಮನವೃತ್ತಾಂತಂ 
ನಾಲ್ಕನೇ ಸರ್ಗವನ್ನು ಇಲ್ಲಿ ನೋಡಿ- ಸಾಗರಗರ್ವಭಂಗ, ಕಾಲಕೇಯಹನನಂ
ಐದನೇ ಸರ್ಗವನ್ನು ಇಲ್ಲಿ ನೋಡಿ- ಅಗಸ್ತ್ಯವಿವಾಹಂ, ಇಲ್ವಲವಾತಾಪಿಹನನಂ
ಆರನೇ ಸರ್ಗವನ್ನು ಇಲ್ಲಿ ನೋಡಿ- ನಹುಷನಿಂದ್ರನಾದುದುಂ ಶಚೀವೀಕ್ಷಣೆಯುಂ
ಏಳನೇ ಸರ್ಗವನ್ನು ಇಲ್ಲಿ ನೋಡಿ- ನಹುಷಶಾಪಪ್ರಾಪ್ತಿ
ಎಂಟನೇ ಸರ್ಗವನ್ನು ಇಲ್ಲಿ ನೋಡಿ- ವಿಂಧ್ಯಸ್ತಂಭನಂ


~ನವಮಂ ಸರ್ಗಂ ~
೦೨/೦೬/೨೦೧೫
ಸಾಂಗತ್ಯ//
ಕೋಡಖಂಡದೊಳಿರ್ಪ ಕ್ಷಿಪ್ರಪ್ರಸಾದನೇ
ನೀಡಲ್ಕೆ ವರಮನೀ ಕವಿಗಂ
ಪಾಡುಗಬ್ಬಮನಿಂತು ಪೇೞಿರ್ಪಂ ಛಂದದೊ-
ಳಾಡುತ್ತೆ ಬುಧರೆಲ್ಲರ್ ಮೆಚ್ಚಲ್ ||||
(ಕೋಡಖಂಡದಲ್ಲಿ ಇರುವ ಕ್ಷಿಪ್ರಪ್ರಸಾದನಾದ ಗಣಪತಿಯು ಈ ಕವಿಗೆ ವರವನ್ನು ಕೊಡಲು, ವಿದ್ವಾಂಸರೆಲ್ಲರೂ ಮೆಚ್ಚುವಂತೆ, ಛಂದದಲ್ಲಿ ಆಡುತ್ತ ಕವಿಯು ಈ ಪಾಡುಗಬ್ಬವನ್ನು ಹೀಗೆ ಹೇಳಿದನು)
ಪದಿನಾಲ್ಕು ದೆವಸಂಗಳೊಳಗೆಂಟು ಸರ್ಗಂಗ-
ಳೊದವಾಯ್ತಗಸ್ತ್ಯಚರಿತೆಯು
ಪದಪಿಂದೆ ನಾನ್ನೂಱಂ ಮೀರ್ದ ಪದ್ಯಂಗಳಿಂ-
ದಿದೊ ಪೆತ್ತ ಪೊಸಗಬ್ಬಮಲ್ತೆ ||||
(ಹದಿನಾಲ್ಕು ದಿವಸಗಳಲ್ಲಿ ಎಂಟು ಸರ್ಗಗಳು ಒದವಿ ಈ ಅಗಸ್ತ್ಯಚರಿತೆಯು ಆಯಿತು. ಚೆನ್ನಾಗಿ ನಾಲ್ಕು ನೂರನ್ನು ಮೀರಿ ಪದ್ಯಗಳನ್ನು ಹೆತ್ತಿರುವ ಇದು ಹೊಸಗಬ್ಬವಲ್ಲವೇ (ಹೊಸದಾದ ಕಬ್ಬ-ಕಾವ್ಯ/ ಹೊಸದಾದ ಗಬ್ಬ-ಗರ್ಭ))
ಮೊದಲ ಸರ್ಗದೊಳಿರ್ಕುಂ ಪದ್ಯಂಗಳೈವತ್ತು
ಪದಪಿಂದೆ ಕಂದಮೆ ಛಂದಂ
ಮುದದ ಮಾಲಿನಿಯೊಂದು ಸರ್ಗಾಂತ್ಯಕ್ಕಿರ್ಪುದಂ-
ತದೆಯುರ್ವಶಿಯ ಜನ್ಮವೃತ್ತಂ ||||
(ಮೊಲ ಸರ್ಗದಲ್ಲಿ ಐವತ್ತು ಪದ್ಯಗಳಿರುವುವು. ಅಲ್ಲಿ ಕಂದಪದ್ಯವೇ ಛಂದಸ್ಸು. ಸಂತೋಷದ ಮಾಲಿನಿವೃತ್ತವು ಸರ್ಗಾಂತ್ಯಕ್ಕಿದೆ. ಹಾಗೆ ಅದು ಉರ್ವಶಿಯ ಜನ್ಮವನ್ನು ಕುರಿತ ಕಥಾನಕವು )
ದೈವದ ಸ್ತುತಿಯಿರ್ಕುಂ ಪೂರ್ವಕವಿಸ್ತುತಿ-
ಯೋವುತ್ತೆ ಕಥೆಯುಪಕ್ರಮಣಂ
ಭಾವುಕರಸಿಕರ್ಗೆ ತೋಷದಮಪ್ಪಂತೆ
ಧಾವಿಸದತ್ತೆರಡು ದಿನದೊಳ್ ||||
(ಅಲ್ಲಿ ದೈವಸ್ತುತಿ, ಪೂರ್ವಕವಿಗಳ ಸ್ತುತಿ, ಹಾಗೆಯೇ ಕಥೆಯ ಉಪಕ್ರಮಣವಿದೆ. ಭಾವುಕರಾದ ರಸಿಕರಿಗೆ ಸಂತೋಷವಾಗುವಂತೆ ಅದು ಎರಡು ದಿನಗಳಲ್ಲಿಯೇ ಮುಗಿಯಿತು)
ಆಱಿಂದೆ ಪರ್ಚಿರ್ಪ ಮೂವತ್ತು ಪದ್ಯಂಗ-
ಳೋರಂತೆ ಸಂದಿರ್ಪ ಸರ್ಗಂ
ಧಾರೆಯೊಳ್ ತೇಟಗೀತಿಯಿನಿರ್ಕುಂ ಸರ್ಗಾಂತ-
ಕೀ ರಸ್ಯಮುಂ ಸೀಸಪದ್ಯಂ ||||
(ಮೂವತ್ತಾರು ಪದ್ಯಗಳಿಂದ ಸಂದಿರುವ ಮುಂದಿನ ಸರ್ಗವು, ಧಾರೆಯಾಗಿ ತೇಟಗೀತಿ ಎಂಬ ಛಂದಸ್ಸಿನಲ್ಲಿ ಇದೆ. ಸರ್ಗಾಂತದಲ್ಲಿ ರಸ್ಯವಾದ ಸೀಸಪದ್ಯವಿದೆ.)
ಇದಱೊಳಗಸ್ತ್ಯನ ಜನ್ಮವೃತ್ತಾಂತಂ ಸಂ-
ದುದು ಪಾಲ್ಗಡಲಬಣ್ಣನೆಯೊಡಂ
ಉದಕಕೇಳಿಯುಮಿರ್ಕುಂ ಶಾಪಾದಿಯದ್ಭುತಂ
ಬಿದಿಯ ಲೀಲೆಯ ಬಲ್ಮೆಯೊಡನೆ ||||
(ಇದರಲ್ಲಿ ಅಗಸ್ತ್ಯನ ಜನ್ಮವೃತ್ತಾಂತವು ಬಂದಿದೆ. ಹಾಗೆಯೇ ಕ್ಷೀರಸಾಗರದ ವರ್ಣನೆಯೂ, ಜಲಕೇಳಿಯೂ ಇದೆ. ಶಾಪವೇ ಮೊದಲಾದ ಅದ್ಭುತವೂ ವಿಧಿಯ ಲೀಲೆಯ ಬಲುಮೆಯೂ ಇವೆ )
ಸಾಗರಗಮನದ ಮೂಱನೆ ಸರ್ಗಂ ವಿ-
ಯೋಗಿನಿ ಪುಷ್ಪಿತಾಗ್ರದೊಳೆ
ಸಾಗಿ ಮೂವತ್ತೊಂಬತ್ತರೊಳೊಂದು ಪದ್ಯಮ-
ದಾಗಿರ್ಕುಂ ಚಂಪಕಮಾಲೆ ||||
(ಸಮುದ್ರಕ್ಕೆ ಹೋಗುವ ಮೂರನೇ ಸರ್ಗವು ವಿಯೋಗಿನಿ, ಪುಷ್ಪಿತಾಗ್ರವೆಂಬ ವೃತ್ತಗಳಲ್ಲಿ ಸಾಗಿ ಮೂವತ್ತೊಂಭತ್ತು ಪದ್ಯಗಳಿಂದ ಕೊನೆಯಲ್ಲಿ ಚಂಪಕಮಾಲೆಯಿಂದ ಆಗಿದೆ)
ಎರಡನೆ ಸರ್ಗಕ್ಕಮೆರಡು ದಿನಂಗಳೆ
ನೆಱೆದಾಗಿರಲ್ ಬರೆವ ಕಾಲಂ
ಚಿರದೆ ಮೂಱಾದುದು ಮೂಱನೆ ಸರ್ಗಕ್ಕೆ
ಸರಸಮಿಲ್ಲದೆ ಪೋಯ್ತು ಕಥೆಯೊಳ್ ||||
(ಎರಡನೇ ಸರ್ಗವನ್ನು ಬರೆಯಲು ಎರಡು ದಿನಗಳು, ಮೂರನೇ ಸರ್ಗವನ್ನು ಬರೆಯಲು ಮೂರು ದಿನಗಳ ಕಾಲವಾದವು. ಕಥೆಯಲ್ಲಿ ಸರಸತೆ ಇಲ್ಲದೇ ಹೋಯಿತು.)
ದಿನವೆರಡರೊಳಾದ ನಾಲ್ಕನೆ ಸರ್ಗದೆ
ಘನವಾರ್ಧಿಯಾ ಗರ್ವಭಂಗಂ
ಹನನಮಾ ಕಾಲಕೇಯನದಾಯ್ತು ಪದ್ಯಂಗ-
ಳೆನಲಾದುದಲೆ ಮೂವತ್ತಾಱು ||||
(ಎರಡು ದಿನಗಳಲ್ಲಾದ ನಾಲ್ಕನೇ ಸರ್ಗದಲ್ಲಿ ದೊಡ್ಡದಾದ ಸಮುದ್ರದ ಗರ್ವಭಂಗದ ಕಥೆಯಿದೆ. ಕಾಲಕೇಯನ ನಾಶದ ಕಥೆಯಿದೆ. ಅಲ್ಲಿ ಪದ್ಯಗಳು ಮೂವತ್ತಾರು ಆದವು)
ಅಲ್ಲಿ ವಸಂತತಿಲಕದೊಡಂ ಸಂದಿರ್ದು-
ದೆಲ್ಲಂ ವಸಂತಕಲಿಕೆಯುಂ
ಒಳ್ಳೆಯ ಖ್ಯಾತಕರ್ಣಾಟಂಗಳಾಱುಮುಂ
ಸಲ್ಲುವ ಪೃಥ್ವಿ ಹರಿಣಿಗಳ್ ||೧೦||
(ಅಲ್ಲಿ ವಸಂತತಿಲಕ, ವಸಂತಕಲಿಕಾ, ಎಂಬ ವೃತ್ತಗಳ ಜೊತೆ ಆರು ಖ್ಯಾತಕರ್ಣಾಟವೃತ್ತಗಳು (ಚಂಪಕಮಾಲೆ, ಉತ್ಪಲಮಾಲೆ, ಮತ್ತೇಭವಿಕ್ರೀಡಿತ, ಶಾರ್ದೂಲವಿಕ್ರೀಡಿತ, ಸ್ರಗ್ಧರಾ ಹಾಗೂ ಮಹಾಸ್ರಗ್ಧರಾ ವೃತ್ತಗಳು), ಪೃಥ್ವೀ, ಹರಿಣೀವೃತ್ತಗಳೂ ಇವೆ. )
ಮತ್ತಿರ್ಪ ಶಿಖರಿಣಿ ಪ್ರಮದಾಕ್ರಾಂತಮುಮಂತೆ
ಪೊತ್ತಿರ್ಪುವೀ ಸರ್ಗದಡಿಯಂ
ಚಿತ್ತಕ್ಕೆ ತೋಷಮಂ ನೀೞ್ವವರ್ಣನೆಗಳುಂ
ತೆತ್ತಾದುದಲ್ಲಲ್ಲಿ ಚಿತ್ರಂ ||೧೧||
(ಮತ್ತು ಶಿಖರಿಣಿ, ಪ್ರಮದಾಕ್ರಾಂತ ವೃತ್ತಗಳೂ ಈ ಸರ್ಗದ ಪಾದಗಳನ್ನು (ಪದ್ಯದ ಸಾಲುಗಳನ್ನು) ಹೊತ್ತುಕೊಂಡಿವೆ. ಮನಸ್ಸಿಗೆ ಸಂತೋಷವನ್ನು ಕೊಡುವ ವರ್ಣನೆಗಳು ಅಲ್ಲಲ್ಲಿ ಚಿತ್ರಗಳೂ (ಶ್ಲೇಷವೇ ಮೊದಲಾದ ಚಿತ್ರಕವಿತೆಗಳೂ ) ಇವೆ.)
ಸಾಗರವರ್ಣನೆಯಲ್ಲಾಗೆ ಮುಂದಕ್ಕೆ
ಸಾಗುತ್ತೆ ಪಂಚಮಸರ್ಗಂ
ಬೇಗದೆ ಮುಗಿದುದು ದಿನಮೊಂದರೊಳಗೆನ-
ಲ್ಕಾಗಳೋಘಂ ಬಂದ ತೆಱದೆ ||೧೨||
(ಸಾಗರವರ್ಣನೆ ಅಲ್ಲಿ ಆದ ಮೇಲೆ ಮುಂದಕ್ಕೆ ಸಾಗುತ್ತ ಐದನೇ ಸರ್ಗವು ಬೇಗದಿಂದ ಓಘವು ಬಂದಿದೆಯೋ ಎಂಬಂತೆ ಒಂದೇ ದಿನದಲ್ಲಿ ಆಯ್ತು.)
ಉಪಜಾತಿಯಿಂದ್ರವಜ್ರಮುಪೇಂದ್ರವಜ್ರಮುಂ
ಕೃಪೆಯಿಟ್ಟ ಶಾರ್ದೂಲಮಿಲ್ಲಿ
ವಿಪರೀತಮಾಗದವೋಲೇ ಮತ್ತೇಭಮು-
ಮುಪಯುಕ್ತಮಾದ ವೃತ್ತಂಗಳ್ ||೧೩||
(ಉಪಜಾತಿ, ಇಂದ್ರವಜ್ರ, ಉಪೇಂದ್ರವಜ್ರ, ಕೃಪೆಯನ್ನು ತೋರಿಸಿದ ಶಾರ್ದೂಲವಿಕ್ರೀಡಿತ, ವಿಪರೀತವಾಗದ ಹಾಗೆ ಮತ್ತೇಭವಿಕ್ರೀಡಿತವೂ ಅಲ್ಲಿ ಉಪಯೋಗಿಸಲ್ಪಟ್ಟ ವೃತ್ತಗಳು)
ನಲವತ್ತೆರಡನೆ ಪದ್ಯಂ ಪೃಥ್ವಿವೃತ್ತದಿಂ
ಸಲೆ ಸರ್ಗದಂತ್ಯವಂತಾಯ್ತು
ಖಲರಿರ್ವರಿಲ್ವಲವಾತಾಪಿಹನನದಿಂ
ಕೞೆದಿರ್ದುದಯ್ದನೆ ಸರ್ಗಂ ||೧೪||
(ನಲವತ್ತೆರಡನೆ ಪದ್ಯ ಪೃಥ್ವೀವೃತ್ತವಾಗಿ ಸರ್ಗದ ಅಂತ್ಯವಾಯ್ತು. ಖಳರಾದ ಇಲ್ವಲವಾತಾಪಿಯರ ಇಬ್ಬರ ನಾಶದಿಂದ ಐದನೇ ಸರ್ಗವು ಕಳೆಯಿತು)
ಸರ್ಗಮಾಱನೆಯದೋ ನಹುಷನ ಕಥೆಯಿಂದೆ
ಸ್ವರ್ಗದೆ ಸಂದುದು ಛಂದಂ
ವರ್ಗತ್ರಿಷ್ಟುಪ್ಪಿಂ ರಥೋದ್ಧತೆ ಜಗತಿಯ
ವರ್ಗದಿಂದೆ ಪ್ರಿಯಂವದೆಯುಂ ||೧೫||
(ಆರನೆಯ ಸರ್ಗವಾದರೋ ನಹುಷನ ಕಥೆಯಿಂದ ಸ್ವರ್ಗದಲ್ಲಿ ನಡೆದುದು. ತ್ರಿಷ್ಟುಪ್ ವರ್ಗದ ರಥೋದ್ಧತಾ ಹಾಗೂ ಜಗತೀವರ್ಗದ ಪ್ರಿಯಂವದಾ ವೃತ್ತಗಳಿಂದ ಛಂದಸ್ಸು ಕೂಡಿತ್ತು )
ಲಾಸಿನಿ ಜಾತಿಯಿಂದಾದತ್ತು ಸರ್ಗಾಂತ-
ಕ್ಕಾ ಸಂಖ್ಯೆಯಱುವತ್ತು ಸಲ್ಗುಂ
ಏಸೊಂದು ಪದ್ಯಂಗಳಂ ಲೇಖಿಸಲ್ ಕಾಲ-
ಮೇಸೆನಲೊಂದೇ ದೆವಸಮೈ ||೧೬||
(ಅಲ್ಲಿ ಸರ್ಗದ ಕೊನೆಯು ಲಾಸಿನಿ ಎಂಬ ಮಾತ್ರಾವೃತ್ತದಿಂದ (ಸಂತುಲಿತ ಮಧ್ಯಾವರ್ತಗತಿ) ಆಯಿತು. ಸಂಖ್ಯೆ ಅರವತ್ತಾಗಿತ್ತು. ಇಷ್ಟೊಂದು ಪದ್ಯಗಳನ್ನು ಬರೆಯಲು ತೆಗೆದುಕೊಂಡ ಕಾಲ ಎಷ್ಟು ಎಂದು ಕೇಳಿದರೆ ಒಂದೇ ದಿನ. )
ಏೞನೆ ಸರ್ಗದೆ ನಲವತ್ತು ಪದ್ಯಂಗ-
ಳಾಳಿರ್ಕುಮೊಲವಿಂದೆ ಛಂದಂ
ಪೇೞಲ್ಕೆ ಮಂಜುಭಾಷಿಣಿಯಿರ್ಕುಮಂತ್ಯದ
ಕಾಲದೆ ದ್ರುತವಿಲಂಬಿತಮುಂ ||೧೭||
(ಏಳನೇ ಸರ್ಗದಲ್ಲಿ ನಲವತ್ತು ಪದ್ಯಗಳು ಪ್ರೀತಿಯಿಂದ ಆಳಿದವು. ಛಂದಸ್ಸನ್ನು ಹೇಳುವುದಾದರೆ ಮಂಜುಭಾಷಿಣಿಯೂ ಸರ್ಗದ ಕೊನೆಯಲ್ಲಿ ದ್ರುತವಿಲಂಬಿತವೆಂಬ ವೃತ್ತವೂ ಇವೆ. )
ದಿನಮೆರಡಾಗಿರ್ದುವಿಲ್ಲಿರ್ಕುಂ ವಿರಹಾದಿ
ಮನನೀಯ ನಹುಷನ ಕಥೆಯು
ಮುನಿಯಿಂದೆ ಸಂದಿರ್ಪ ಕೀೞಾದ ಶಾಪತ್ರ-
ಸ್ತನಗಾಥೆಯದಱೊಳೆ ಚೆಲ್ವು ||೧೮||
(ಬರೆಯಲು- ಎರಡು ದಿನಗಳಾಗಿ ಇಲ್ಲಿ ವಿರಹವೇ ಮೊದಲಾದ ಮನನೀಯವಾದ ನಹುಷನ ಕಥೆಯಿದೆ. ಮುನೀಂದ್ರನಿಂದ ಸಂದಿರುವ ಕೆಟ್ಟದಾದ ಶಾಪತ್ರಸ್ತನ ಕಥೆಯು ಅದರಲ್ಲಿ ಚೆಲುವಾಗಿದೆ )
ಮುಂದಿನಷ್ಟಮಸರ್ಗಂ ವಿಂಧ್ಯಸ್ತಂಭನಕಿರ್ಕುಂ
ಸಂದಳಲ್ಲಂತೆ ಕಾವೇರಿ
ಒಂದೆ ದಿನದೊಳಾಯ್ತು ಸಂಪೂರ್ಣಮೀಸರ್ಗಂ
ಛಂದದಿಂ ಚೌಪದಿಯೊಳಗೆ ||೧೯||
(ಮುಂದಿನ ಎಂಟನೇ ಸರ್ಗವು ವಿಂಧ್ಯಸ್ತಂಭನಕ್ಕೆಂದು ಇರುವುದು. ಅಲ್ಲಿ ಕಾವೇರಿಯೂ ಇದ್ದಾಳೆ. ಒಂದೇ ದಿನದಲ್ಲಿ ಚೌಪದಿ ಛಂದಸ್ಸಿನಲ್ಲಿ ಈ ಸರ್ಗವು ಮುಗಿಯಿತು.)
ಮಾಲಿನಿ ವೃತ್ತದಿಂ ಸರ್ಗಾಂತಮಾದತ್ತು
ಸೋಲುತ್ತೆ ಪದ್ಯಂಗಳಿಲ್ಲಿ
ಕಾಲನ ವಶದಿಂದಮಯ್ವತ್ತನಾಲ್ಕಾಯ್ತು
ಲೀಲೆಯಿಂ ಮುಗಿದತ್ತು ಕಬ್ಬಂ ||೨೦||
(ಮಾಲಿನಿ ವೃತ್ತದಿಂದ ಈ ಸರ್ಗವು ಕೊನೆಯಾಯಿತು. ಅಲ್ಲಿ ಪದ್ಯಗಳು ಸೋಲುತ್ತ ಕಾಲನ ವಶದಿಂದ ಐವತ್ತನಾಲ್ಕು ಆದವು. ಅಲ್ಲಿಗೆ ಕಾವ್ಯದ ಕಥೆಯು ಮುಗಿಯಿತು)
ನವಮಸರ್ಗಮಿದಿರ್ಕುಂ ದೇಸೀಯಛಂದದೆ
ಕವಿವಕಾವ್ಯಪ್ರಸ್ತಾಪದಿಂದಂ
ತವೆ ಸರ್ಗಸಂಗ್ರಹಣಕ್ಕೆಂದು ಸಂದಿರ್ಪಿ-
ದುವೆ ಕಾಲಮಂ ಮೀರ್ದು ಬಳೆಗುಂ ||೨೧||
(ಒಂಭತ್ತನೇ ಸರ್ಗವಾದ ಇದು ದೇಸೀಯವಾದ ಛಂದಸ್ಸಿನಲ್ಲಿ ಕವಿಕಾವ್ಯಪ್ರಸ್ತಾಪದಿಂದ ಸರ್ಗಗಳ ಸಂಗ್ರಹಣೆಗೆಂದು ಇರುವುದು, ಕಾಲವನ್ನು ಮೀರಿ ಬೆಳೆಯುತ್ತದೆ)
ಸಂದುದಯ್ವತ್ತರಿಂ ಸಾಂಗತ್ಯದಿಂದಂತೆ
ಮುಂದಾದ ಘಟನೆಯ ನೆನಪಿಂ
ಕುಂದದೆ ನಾನೂರೇೞಾದತ್ತು ಪದ್ಯಂಗಳ್
ಛಂದೋಮಾರ್ಗದೊಳೀ ಕಾವ್ಯಕ್ಕೆ ||೨೨||
(ಐವತ್ತು ಪದ್ಯಗಳಿಂದ ಸಾಂಗತ್ಯದಲ್ಲಿ ಮೊದಲು ಆದ ಘಟನೆಯ ನೆನಪಿನಿಂದ ಸಂದುದು ಇದಾಯ್ತು. ಛಂದೋಮಾರ್ಗದ ಈ ಕಾವ್ಯಕ್ಕೆ ಕುಂದಿಲ್ಲದಂತೆ (ಒಟ್ಟಾರೆಯಾಗಿ) ನಾನೂರ ಏಳು ಪದ್ಯಗಳು ಆದವು )
ಬರೆಯುವ ಮುನ್ನಮಿರ್ಪೆಲ್ಲ ಸಾಂಗತ್ಯಮಂ
ಭರದಿಂದೆ ಪೇೞ್ದಪೆನೊಲವಿಂ
ವರಮಿತ್ರರಿಂದಿರ್ಪ ಪದ್ಯಪಾನದ ಗೋಷ್ಠಿ-
ಯರರೇ ಚೆಲ್ವಿಂದೆಂತೊ ಮೆಱೆಗುಂ ||೨೩||
(ಬರೆಯುವ ಮೊದಲು ಇರುವ ಎಲ್ಲ ಸಾಂಗತ್ಯವನ್ನು ಇಲ್ಲಿ ಭರದಿಂದ ಹೇಳುತ್ತೇನೆ. ಅರರೇ! ನಮ್ಮ ಒಳ್ಳೆಯ ಸ್ನೇಹಿತರಿಂದ ಕೂಡಿರುವ “ಪದ್ಯಪಾನ”ದ ಗೋಷ್ಠಿ ಚೆಲುವಿನಿಂದ ಮೆರೆಯುತ್ತಿದೆ)
ಮನೆಯ ಗಬ್ಬದೆ ಬ್ಬಮಂ ನೋಂತು ಬರೆವರೈ
ದಿನಮುಮಸಂಖ್ಯಕವಿಗಳು
ಅನಿತರಮಪ್ಪ ಸಭಾಕವಿತ್ವದೊಳೆಂತು
ಮನನೀಯರಾದಪರೆಲ್ಲರ್ ||೨೪||
(ಮನೆಯ ಗರ್ಭದಲ್ಲಿ ಕುಳಿತು ಕಾವ್ಯವನ್ನು ಬರೆಯುವರು ದಿನವೂ ಅಸಂಖ್ಯ ಕವಿಗಳು. ಉಳಿದವರಿಗಾಗದ ಸಭಾಕವಿತ್ವದಲ್ಲಿ ಅವರು ಹೇಗೆ ಮನನೀಯರಾಗುತ್ತಾರೆ!)
ಅತ್ಯಾಶುಗತಿಯಿಂದೆ ಪೇೞ್ವರ್ಗೆ ಗೃಹಕಾವ್ಯಂ
ನಿತ್ಯಮುಂ ಸುಲಭಮೆಂದೆನಿಕುಂ
ಇತ್ಯಾಸ್ಥೆಯಿಂದೆ ಶತಾವಧಾನಿಗಳೊರ್ಮೆ-
ಗತ್ಯಾಪ್ತರೊಳಗಿಂತು ಪೇೞ್ದರ್||೨೫||
(ಅತಿಯಾದ ಆಶುಗತಿಯಿಂದ (ವೇಗವಾಗಿ) ಹೇಳುವವರಿಗೆ ಮನೆಯಲ್ಲಿ ಕುಳಿತು ಬರೆಯುವುದು ನಿತ್ಯವೂ ಸುಲಭ ಎಂದೆನಿಸುತ್ತದೆ. ಹೀಗೆ ಆಸ್ಥೆಯಿಂದ ಶತಾವಧಾನಿ ಗಣೇಶರು ಒಮ್ಮೆ ಅತ್ಯಾಪ್ತರಾದ ಕೆಲವರಲ್ಲಿ ಹೇಳಿದರು)
ಮಿತ್ರರ ಗೊಟ್ಟಿಯೊಳ್ ಮಾೞ್ಪಮಾಂ ಪೊಸತೆಂಬೀ
ಸತ್ರಮನಾಶುಕಾವ್ಯಕ್ಕೆ
ಸೂತ್ರಿಸಿ ಚಿತ್ರಿಸಿ ಪೇೞ್ವುದು ಸರ್ವರುಂ
ಪತ್ರಲೇಖನಿಗಳಿಲ್ಲದೆಯೆ ||೨೬||
(ಮಿತ್ರರ ಗೋಷ್ಠಿಯಲ್ಲಿ ನಾವು ಆಶುಕಾವ್ಯಕ್ಕೆ ಹೊಸತಾದ ಸತ್ರವನ್ನು ನಾವು ಮಾಡೋಣ, ಎಲ್ಲರೂ ಸೂತ್ರಿಸಿ ಚಿತ್ರಿಸಿ ಪತ್ರಲೇಖನಿಗಳಿಲ್ಲದೇ ಪದ್ಯವನ್ನು ಹೇಳಬೇಕು")
ಎಂದೊಡಮೊಪ್ಪುತ್ತೆ ಪತ್ತಾರು ಮಿತ್ರರ್ಕಳ್
ಬಂದಿರ್ದರಾ ಶನಿವಾರ
ಸಂದೆಗಮಿಲ್ಲದೆ ಛಂದೋಬದ್ಧಮೆನಿಪ್ಪ
ಸುಂದರ ಕಾವ್ಯಗೋಷ್ಠಿಯೊಳು ||೨೭||
(ಹೀಗೆಂದು ಹೇಳಿದಾಗ ಹತ್ತಾರು ಮಿತ್ರರು ಒಪ್ಪುತ್ತ ಸಂದೇಹವಿಲ್ಲದೇ ಛಂದೋಬದ್ಧವಾದ ಸುಂದರವಾದ ಕಾವ್ಯಗೋಷ್ಠಿಯಲ್ಲಿ ಆ ಶನಿವಾರ ಬಂದರು)
ನುಡಿದಿರ್ದರೆಲ್ಲರುಂ ನುಡಿವೆಣ್ಣ ನುತಿಯಿಂದೆ
ಪಡೆಯುತ್ತುಮಾಶುಗತಿಗಳಂ
ನಡೆದಿರ್ಕುಂ ವತ್ಸರದಿಂದಿದು ಕೆಳೆಯರ್ಕ-
ಳೊಡನಾಡಿ ಹಾಸ್ಯದಿನೆಂತೊ ||೨೮||
(ಎಲ್ಲರೂ ಸರಸ್ವತಿಯ ಸ್ತುತಿಯಿಂದ ಆಶುಗತಿಯನ್ನು ಪಡೆಯುತ್ತ ನುಡಿದಿದ್ದರು. ಇದು ಹೀಗೆಯೇ ಗೆಳೆಯರ ಜೊತೆಯಲ್ಲಿ ಒಡನಾಟದಿಂದ ಹಾಸ್ಯದಿಂದ ಒಂದು ವರ್ಷದಿಂದ ನಡೆಯುತ್ತಿರುವುದು)
ಕೆಕ್ಕಾರು ಶ್ರೀರಾಮಚಂದ್ರರ ಮನೆಯೊಳು
ಸಿಕ್ಕುವರೆಂಟುಗಂಟೆಯೊಳು
ನಕ್ಕು ನಗಿಸುತಲ್ಲಿ ಕಾವ್ಯಮಂ ಪೇೞ್ದು ಜ-
ಲಕ್ಕನೆ ರಸಮನೀಂಟಿಸುವರ್ ||೨೯||
(ಕೆಕ್ಕಾರಿನ ಶ್ರೀ ರಾಮಚಂದ್ರರ ಮನೆಯಲ್ಲಿ ಎಲ್ಲರೂ ಎಂಟು ಗಂಟೆಯ ಹೊತ್ತಿಗೆ ಸಿಗುವರು. ನಕ್ಕು ನಗಿಸುತ್ತ ಅಲ್ಲಿ ಕಾವ್ಯವನ್ನು ಹೇಳುತ್ತ ಜಲಕ್ಕನೆ ರಸಾಸ್ವಾದವನ್ನು ಮಾಡಿಸುತ್ತಾರೆ)
ಹಿತಮಪ್ಪ ಪಾನೀಯಮಂ ನೀೞ್ದು ಕೆಲವೊರ್ಮೆ-
ಗತಿ ರುಚಿಭೋಜನದಿಂದೆ
ಅತಿಥಿಯಂದದೊಳೆ ಸತ್ಕರಿಪರೈ ಕಾಂಚನಾ
ಪತಿಯಂದದಿಂ ಕವಯಿತ್ರಿ ||೩೦||
(ಹಿತವಾದ ಪಾನೀಯವನ್ನು ಕೊಟ್ಟು, ಕೆಲವೊಮ್ಮೆ ಅತಿ ರುಚಿಯಾದ ಭೋಜನವನ್ನೂ ನೀಡಿ ಅತಿಥಿಗಳ ಹಾಗೆ ಸತ್ಕರಿಸುತ್ತಾರೆ. ರಾಮಚಂದ್ರರ ಪತ್ನಿಯಾದ ಕಾಂಚನಾ. ಅವರೂ ಕೂಡ ಕವಯಿತ್ರಿ)
ಕವಿಗಳ ಗೊಟ್ಟಿಗಾಶ್ರಯಮಿತ್ತ ದಂಪತಿ -
ಕವಿಗಳುಂ ಕವನಿಸೆ ಸಭೆಯೊಳ್
ಸವಿಯುತ್ತೆ ಸರ್ವಮಂ ಸೇರಿರ್ಪರೆಲ್ಲರ
ಕವಿಗಳ ಪರಿಚಯಮುಲಿವೆಂ ||೩೧||
(ಹೀಗೆ ಕವಿಗಳ ಗೋಷ್ಠಿಗೆ ಆಸ್ರಯವನ್ನು ಕೊಟ್ಟ ದಂಪತಿಕವಿಗಳು ಸಭೆಯಲ್ಲಿ ಕವನವನ್ನು ರಚಿಸುತ್ತಾರೆ. ಇದನ್ನೆಲ್ಲ ಸವಿಯುತ್ತ ಸೇರಿರುವ ಎಲ್ಲರ ಕವಿಗಳ ಪರಿಚಯವನ್ನು ಹೇಳುತ್ತೇನೆ)
ಅದಱೊಳ್ ಶತಾವಧಾನಿಗಳಾ ಗಣೇಶರೈ
ಪದಪಿಂದೆ ಗೋಷ್ಠಿಗಧ್ಯಕ್ಷರ್
ಮೊದಲೊಳೆ ಸೂಚಿಯಿಂ ಚುರ್ಚಿರ್ಪ ತೆಱದಿಂದೆ
ಚದುರಿಂದೆ ವಸ್ತುಮನೀವರ್ ||೩೨||
(ಅದರಲ್ಲಿ ಶತಾವಧಾನಿಳಾದ ಗಣೇಶರು ಈ ಗೋಷ್ಠಿಗೆ ಅಧ್ಯಕ್ಷರು. ಮೊದಲೇ ಸೂಜಿಯಿಂದ ಚುಚ್ಚಿದ ಹಾಗೆಯೇ ಚಾತುರ್ಯದಿಂದ ವಸ್ತುವನ್ನು ಕೊಡುತ್ತಾರೆ)
ಆಶವಗತಿಯಿಂದೆ ಪೇೞ್ವರೇ ಮೊದಲವರ್
ಪಾಶಮೇ ಪದ್ಯಮನೆಳೆಯಲ್
ನಾಶನಮಾದತ್ತಾಗಳ್ ಯೋಚಿಸಿರ್ಪುದುಂ
ಕೇಶಮಂ ಕೆದಱುವರನಿಬರ್ ||೩೩||
(ಆಶುವಾದ (ವೇಗವಾದ) ಗತಿಯಲ್ಲಿ ಮೊದಲು ಅವರೇ ಹೇಳುವರು. ಪದ್ಯವನ್ನು ಎಳೆಯುವಲ್ಲಿ ಪಾಶವೇ ಆಗಿ ನಾವು ಯೋಚಿಸಿಕೊಂಡಿರುವುದೆಲ್ಲ (ಕಲ್ಪನೆಯೆಲ್ಲ) ನಾಶನವಾಗುತ್ತದೆ. ಎಲ್ಲರೂ ಕೂದಲನ್ನು ಕೆದರಿಕೊಳ್ಳುತ್ತಾರೆ )
ಸೆಳೆಯೋಣ ಪದ್ಯಮಂ ಪೇೞಿಮೆಂದೆಂಬರೊ-
ಳುಲಿಯಲ್ಕೆ ಭಯದಿಂದ ತೊಡರಿ
ಕೆಲವೊರ್ಮೆ ಮಱೆತು ಶಬ್ದಂಗಳೇ ಬಾರದೇ
ಗಲಿಬಿಲಿಯಾದತ್ತೈ ಎಮಗೆ ||೩೪||
("(ಅರ್ಧಂಬರ್ಧ ಆಗಿರುವ ಪದ್ಯವನ್ನು ಮುಂದೆ)ಎಳೆಯೋಣ, ಪದ್ಯವನ್ನು ಹೇಳಿ” ಎಂದು ಹೇಳುವ ಅವರಲ್ಲಿ ಪದ್ಯವನ್ನು ಹೇಳಲು ತೊಡರಿ, ಕೆಲವೊಮ್ಮೆ ಮರೆತುಹೋಗಿ ಶಬ್ದಗಳೇ ಬಾಯಿಗೆ ಬರದೇ ನಮಗೆಲ್ಲ ಗಲಿಬಿಲಿಯಾಗುತ್ತದೆ)
ಶಂಕೆಯದಿಲ್ಲದೆ ಸ್ವೀಯಶೈಲಿಯೊಳೆಂತೊ
ಕೊಂಕಿನಿಂ ಪೊಂದಿಸಿ ಬೞಿಕಂ
ಝಂಕಿಸಿ ಶ್ಲೇಷದೊಳ್ ಸಂಸ್ಕೃತ ಕವಿಗಳೀ
ಶಂಕರರುಲಿವುದೆ ಛಂದಂ ||೩೫||
(ಯಾವುದೇ ಶಂಕೆಯಿಲ್ಲದೇ, ತಮ್ಮದೇ ಆದ ಶೈಲಿಯಲ್ಲಿ ವಕ್ರೋಕ್ತಿಗಳಿಂದ ಹೊಂದಿಸಿ ಬಳಿಕ ಶ್ಲೇಷವೇ ಮೊದಲಾದ ಅಲಂಕಾರಗಳಿಂದ ಝಂಕಾರದಿಂದ ಸಂಸ್ಕೃತದ ಕವಿಗಳಾದ ಶಂಕರರು ಪದ್ಯವನ್ನು ಹೇಳುವುದೇ ಛಂದ (ಸುಂದರ, ಆಹ್ಲಾದಕರ))
ನವಕಲ್ಪನೆಗಳಿಂದೆ ಕರ್ಣಾಟಭಾಷೆಯೊಳ್
ತವೆ ಪೇೞ್ವ ರಿರ್ವರ್ ಸೋದರರೇ
ಸವಿಯ ಹಾಸ್ಯದ ಮಾತಿಂ ಸೋಮಶೇಖರಶರ್ಮ-
ರವರನುಜಂ ಶ್ರೀಧರಾಖ್ಯಂ ||೩೬||
(ಹೊಸ ಕಲ್ಪನೆಗಳಿಂದ ಕನ್ನಡ ಭಾಷೆಯಲ್ಲಿ ಹೇಳುವವರು ಇಬ್ಬರು ಸೋದರಕವಿಗಳು ಅವರು ಸವಿಯಾದ ಹಾಸ್ಯದ ಮಾತಿನಿಂದ ಸೋಮಶೇಖರ ಶರ್ಮರೂ ಹಾಗೂ ಅವರ ತಮ್ಮ ಶ್ರೀಧರ ಎಂಬವರು)
ನಡುವೆ ಗಂಭೀರದ ವಿಷಯಕ್ಕೆ ಲೇಪಿಸಿ
ಪೊಡೆಪುಣ್ಣಪ್ಪಂತೆ ಹಾಸ್ಯಮನೇ
ನುಡಿಯೊಳಗಡಗಿಸಿ ರಾಮಚಂದ್ರರ್ ಬಾಣಂ-
ಬಿಡುವಂತೆ ತ್ರಿಪದಿಯಂ ಪೇೞ್ವರ್ ||೩೭||
(ನಡುವೆ ಗಂಭಿರವಾದ ವಿಷಯಕ್ಕೆ ಹೊಟ್ಟೆ ಹುಣ್ಣಾಗುವಂತೆ ಹಾಸ್ಯವನ್ನೇ ಲೇಪಿಸಿ ನುಡಿಯಲ್ಲಿ ಅಡಗಿಸಿ ರಾಮಚಂದ್ರರು ಬಾಣವನ್ನು ಬಿಡುವಂತೆ ತ್ರಿಪದಿಯನ್ನು ಹೇಳುತ್ತಾರೆ)
ಇಂತಿರೆ ನೂತ್ನಕಲ್ಪನೆಗಳಿಂ ಶ್ರೀಶಕಾ-
ರಂತರ ಪದ್ಯಂಗಳಿಂದಂ
ಸಂತೋಷಂಬಡುವರೈ ಸಮಯಂ ಮೀಱುತ್ತಿರೆ
ಚಿಂತೆಯೆ ಪೆರ್ಚಿಪುದೆಗೆ ||೩೮||
(ಹೀಗಿರಲು, ನೂತನವಾದ ಕಲ್ಪನೆಗಳಿಂದ ಶ್ರೀಶಕಾರಂತರ ಪದ್ಯಗಳಿಂದ ಎಲ್ಲರೂ ಸಂತೋಷವನ್ನು ಪಡುತ್ತಾರೆ. ಸಮಯವು ಮೀರುತ್ತಿರುವಾಗ ನನಗೆ ಚಿಂತೆಯು ಹೆಚ್ಚುತ್ತದೆ )
ಆಗಳಾ ರಾಘವೇಂದ್ರರ್ ಸಕ್ಕದದೆ ಪೇೞ್ದು
ರಾಗರಂ ಮೆಚ್ಚಿಪ ತೆಱದೆ
ಸಾಗುವರ್ ವಸ್ತುವಂ ಬಣ್ಣಿಪ ಪದ್ಯಕ್ಕಂ
ಯೋಗಮಿಲ್ಲಮೆನಗೆ ಪೇೞಲ್ ||೩೯||
(ಆಗ ಆ ರಾಘವೇಂದ್ರರು ರಾ.ಗಣೇಶರನ್ನು ಮೆಚ್ಚಿಸುವಂತೆ ಸಂಸ್ಕೃತದಲ್ಲಿ ಹೇಳಿ ಸಾಗುವರು. ವಸ್ತುವನ್ನು ಬಣ್ಣಿಸುವ ಪದ್ಯವನ್ನು ಹೇಳುವ ಯೋಗ ನನಗೆ ಇಲ್ಲ)
ವಾಸುಕಿಯೆಂಬ ಸಂಸ್ಕೃತದವಧಾನಿಗಳ್
ಭಾಸುರಪದ್ಯಂಗಳಿಂದಂ
ಬೀಸಲ್ಕೆ ಕುಳಿರ್ಗಾಳಿಯಂ ತೀಡುವಂತಕ್ಕು-
ಮೀ ಸಭೆಯೊಳ್ ಬಿಸುಪಿಂಗೆ ||೪೦||
(ವಾಸುಕಿ ಎಂಬ ಸಂಸ್ಕೃತದ ಅವಧಾನಿಗಳು, ತಮ್ಮ ಕಾಂತಿಯುಕ್ತವಾದ ಪದ್ಯಗಳಿಂದ ತಂಗಾಳಿ ಬೀಸಿದಂತೆ ಈ ಸಭೆಯ ಬಿಸಿಗೆ ತಂಪಾಗುತ್ತಿತ್ತು)
ಇವರೆಲ್ಲರಾ ಮಧ್ಯದೊಳಗೊಂದು ಪದ್ಯಮಂ
ಕಿವಿಗೊಟ್ಟು ಕೇಳದಿರಲ್ಕೆ
ಜವದಿಂದೆ ಪೇೞ್ವೆನಾಂ ಸುಲಭಚ್ಛಂದಂಗಳೊಳ್
ಕವಿಯಾಗಬೇಕೆಂಬುದಾಸೆ ||೪೧||
(ಇವರೆಲ್ಲರ ಮಧ್ಯದಲ್ಲಿ ಒಂದು ಪದ್ಯವನ್ನೂ ಕಿವಿಗೊಟ್ಟು ಕೇಳದೇ, ವೇಗದಿಂದ ಯಾವುದೋ ಸುಲಭವಾದ ಛಂದಸ್ಸಿನಲ್ಲಿ ನಾನೂ ಹೇಳುತ್ತೇನೆ! ಯಾಕೆಂದರೆ ಕವಿಯಾಗಬೇಕು ಎಂಬ ಆಸೆ ಅಷ್ಟೆ.)
ಕವನಿಪನಿವನೊಳ್ಪಿಂದೆನುತೊರ್ಮೆಗಂ ಸರ್ವ-
ರವಧಾನಮಂ ಗೆಯ್ಯಲುಲಿದರ್
ಅವರೆಂದುದಂ ಕೇಳ್ದು ಸಾಧಿಸಿದಪೆನೊರ್ಮೆ-
ಗವಧಾನಿವೆಸರಂ ಮೇಣ್ ಪಡೆದು ||೪೨||
(ಇವನು ಚೆನ್ನಾಗಿ ಕವನಿಸುತ್ತಾನೆ. ಎನ್ನುತ್ತ ಒಮ್ಮೆ ಎಲ್ಲರು ಅವಧಾನವನ್ನು ಮಾಡಲು ಹೇಳಿದರು. ಅವರು ಹೇಳಿದ್ದನ್ನು ಕೇಳಿ ಅವಧಾನವನ್ನು ಸಾಧಿಸಿ ಅವಧಾನಿ ಎಂಬ ಹೆಸರನ್ನೂ ಪಡೆದೆ.)
ಮನೆಯೊಳಗವಧಾನಮಾದಂದಿನಿಂದೆನ್ನೊ-
ಳಿನಿಸಿನಿಸೇ ಪೆರ್ಚೆ ಗರ್ವಂ
ಘನನೆಂದಹಮ್ಮಿನಿಂದೊಪ್ಪಿದ ಪೆರ್ಮೆಯಿಂ
ಮನದೊಳೆ ಬೀಗುತ್ತಲಿರ್ದೆಂ ||೪೩||
(ಹೀಗೆ ಅವರ ಮನೆಯಲ್ಲಿ ಅವಧಾನವಾದ ದಿನದಿಂದ ನನ್ನಲ್ಲಿ ಸ್ವಲ್ಪ ಸ್ವಲ್ಪವೇ ಗರ್ವವು ಹೆಚ್ಚಲು, ನಾನೂ ಘನವಾದವನು ಎಂದು ಅಹಂಕಾರದಲ್ಲಿ, ಹೆಮ್ಮೆಯಿಂದ ಮನಸ್ಸಿನಲ್ಲೇ ಬೀಗುತ್ತ ಇದ್ದೆ)
ಕಾಲದೆ ಮುಂದೊಂದು ಗೋಷ್ಠಿಯೊಳ್ ಶ್ರೀರಾಗರ್
ಕೇಳಲ್ಕೆ ನಾಲ್ಕು ವಸ್ತುಗಳೊಳ್
ಪೇೞೆ ನಾನೆರಡಕ್ಕೆ ಮತ್ತೆರಡನಱುಹದೆ
ಸೂೞಂ ತಪ್ಪಿರ್ದಪೆನಾಗಳ್ ||೪೪||
(ಕಾಲದಲ್ಲಿ ಶ್ರೀ ರಾ. ಗಣೇಶರು ಕೇಳಲು ನಾಲ್ಕು ವಸ್ತುಗಳಲ್ಲಿ, ನಾನು ಎರಡು ವಸ್ತುವಿಗೆ ಹೇಳಿ, ಉಳಿದ ಎರಡನ್ನು ಹೇಳದೇ ಸರದಿಯನ್ನು ತಪ್ಪಿದ್ದೆ)
ಸಂದನಭ್ಯಾಸದಿಂ ಪೆರ್ಚಿರ್ಪ ಗರ್ವದಿಂ
ಕುಂದಾದುದೆಂದಾನೆ ತಿಳಿದೆಂ
ಸ್ಪಂದಿಸಿ ರಾಗರುಂ ಮೊನೆವಾತನೆಂದಿರ-
ಲ್ಕಂದು ಜ್ಞಾನೋದಯಮಾಯ್ತು ||೪೫||
(ಸಂದಿರುವ ಅನಭ್ಯಾಸದಿಂದ ಹೆಚ್ಚಿರುವ ಗರ್ವದಿಂದ ಕುಂದಾಗಿದೆ ಎಂದು ನಾನೇ ತಿಳಿದುಕೊಂಡೆ. ಅದಕ್ಕೆ ತಕ್ಕ ಹಾಗೆ ರಾ.ಗಣೇಶರೂ ಮೊನಚಾದ ಮಾತನ್ನು ಹೇಳಿರಲು ಅಂದು ಜ್ಞಾನೋದಯವಾಯ್ತು)
ರಾಯರ ಕುದುರೆಯೇ ಕೞ್ತೆಯಾದಂದದಿಂ-
ದೀಯೆನ್ನ ಗತಿಯಾಯ್ತೆನಲ್ಕೆ
ಸಾಯಕಂ ಬಿಡಿದಂತೆ ಕೊಳ್ಗುಳಕ್ಕಂ ನುಡಿ
ತಾಯಡಿ ಪಿಡಿದಿಂತು ನೋಂತು ||೪೬||
("ರಾಯರ ಕುದುರೆ ಕತ್ತೆಯಾದ ಹಾಗಾಯಿತು ಈ ನನ್ನ ಗತಿ" ಎಂದು, ಯುದ್ಧಕ್ಕೆ ಬಾಣವನ್ನು ಹಿಡಿದುಕೊಂಡಂತೆ, ನುಡಿತಾಯಿಯಾದ ಸರಸ್ವತಿಯ ಪಾದವನ್ನು ಹಿಡಿದು ಹೀಗೆ ವ್ರತತೊಟ್ಟು)
ಪೊಸತೆನಿಪಂದಂದಿಂ ಕಬ್ಬಮಂ ಬರೆಯುವೆಂ
ಜಸವೀವ ಧಾರೆಯೆ ಪೆರ್ಚಲ್
ರಸದಿಂದ ಕೂಡಿರ್ಪ ಕಬ್ಬಮಂ ಬರೆಯುವೆಂ
ಸಸಿಯಿದು ಪೂರ್ಣತ್ವಮೆಯ್ದಲ್ ||೪೭||
(ಹೊಸತು ಎನಿಸುವಂತಹ ಕಾವ್ಯವನ್ನು ಬರೆಯುತ್ತೇನೆ, ಯಶಸ್ಸನ್ನು ಕೊಡುವ ಧಾರೆಯು ಹೆಚ್ಚಲು, ಈ ಗಿಡವು ಪೂರ್ಣತ್ವಕ್ಕೆ ಬರಲು ರಸದಿಂದ ಕೂಡಿರುವ ಕಾವ್ಯವನ್ನು ಬರೆಯುತ್ತೇನೆ.)
ಅಂದಿಂತು ಪೂಣ್ದುದಂ ಬರೆದಾಯ್ತು ಪೆರ್ಚಿರ್ದು-
ದಂದದಿಂ ಧಾರೆಯೀ ವೇಳೆ
ಪಿಂದಗಸ್ತ್ಯಂ ಸಾಗರಮನೆಂತು ಬಿಟ್ಟನೋ
ಮುಂದಕ್ಕೆಯಂತಾಶುಧಾರೆ ||೪೮||
(ಹೀಗೆ ಅಂದು ಈ ರೀತಿ ಪ್ರತಿಜ್ಞೆಯನ್ನು ತೊಟ್ಟ ಹಾಗೆಯೇ ಬರೆದುದೂ ಆಯಿತು. ಅಂದದಿಂದ ಧಾರೆಯೂ ಈ ಹೊತ್ತಿಗೆ ಹೆಚ್ಚಾಯಿತು. ಹಿಂದೆ ಅಗಸ್ತ್ಯನು ಹೇಗೆ ಸಾಗರವನ್ನು ಬಿಟ್ಟನೋ ಹಾಗೆಯೇ ಆಶುಧಾರೆಯೂ ಹೆಚ್ಚಿತು.)
ಗಬ್ಬದಿಂದುದಿಸಿರ್ಪುದಿನಿತುಪದ್ಯಂಗಳುಂ
ಕಬ್ಬದೊಳ್ ಕೋದಿರಲ್ಕಿದನಾಂ
ಉಬ್ಬೆಗಂ ತಣಿದತ್ತು ಮನ್ಮನೋರಂಗದೊಳ್
ಬೊಬ್ಬುಳಿಯಂತಲ್ಪಮಿದುವೆ ||೪೯||
(ಹೀಗೆ ಗರ್ಭದಿಂದ ಇಷ್ಟೂ ಪದ್ಯಗಳೂ ಉದಯಿಸಿದವು. ಇದನ್ನೆಲ್ಲ ಈ ಕಾವ್ಯದಲ್ಲಿ ಪೋಣಿಸಿದೆ. ನನ್ನ ಮನಸ್ಸಿನ ಉಬ್ಬೆಗ ತಣಿದಿತ್ತು. ಮನಸ್ಸಿನ ರಂಗದಲ್ಲಿ ಇದು ಒಂದು ಬೊಬ್ಬುಳಿ (ನೊರೆ)ಯ ಹಾಗೆ ಅಲ್ಪವಾದದ್ದು.)
ರಸಿಕರಿಂತಿದನೋದೆ ಮುಂ ಪೇೞ್ದುದಾ ದ್ರಾಕ್ಷಾ
ರಸಮಕ್ಕೆ ಬಾಯ್ಗೆ ಮೇಣ್ ಮನಕೆ
ಜಸಮೀಗೆ ಸರ್ವಶಕ್ತಂ ಸರ್ವರ್ಗಂ ಚಿತ್ತ-
ಮೆಸಕಮಂ ಸೌಖ್ಯಮಂ ಪಡೆಗೆ ||೫೦||
(ರಸಿಕರು ಹೀಗೆ ಇದನ್ನು ಓದಲು ಮೊದಲು ಹೇಳಿದ ದ್ರಾಕ್ಷಾರಸವು ಅವರ ಮನಸ್ಸಿಗೂ ಬಾಯಿಗೂ ಸಲ್ಲಲಿ. ಸರ್ವಶಕ್ತನಾದ ಭಗವಂತನು ಎಲ್ಲರಿಗೂ ಯಶಸ್ಸನ್ನು ಕೊಡಲಿ. ಮನಸ್ಸು ಕಾಂತಿಯನ್ನೂ ಸೌಖ್ಯವನ್ನೂ ಪಡೆಯಲಿ)
||ಇಂತು ಕರ್ತೃವಿಚಾರಮುಂ ಸರ್ಗಸಂಗ್ರಹಣಸರ್ಗಮುಮೆಂಬ ನವಮಂ ಸರ್ಗಂ||