Powered By Blogger

ಗುರುವಾರ, ಆಗಸ್ಟ್ 2, 2018

ಮಧುವನಮರ್ದನಂ -೪


ಈ ಭಾಗವನ್ನು ಇಲ್ಲಿ ಕೇಳುತ್ತ ಓದಬಹುದು
ಹಿಂದಿನ ಭಾಗಗಳು
ಮೊದಲ ಭಾಗ- ಮಧುವನಮರ್ದನಂ-೧
ಎರಡನೆ ಭಾಗ- ಮಧುವನಮರ್ದನಂ-೨
ಮೂರನೆ ಭಾಗ- ಮಧುವನಮರ್ದನಂ-೩

~ಮಧುವನಮರ್ದನಂ -೪~
ಇತ್ತಲೀ ವನದೊಳಿರ್ದಪ ಮತ್ತಕಪಿಗಳೋ
ನಾನಾವಿಧಂಗಳಿಂ ಸರ್ವನಾಶಂಗೈದು
ಹನುಮಂತನಂದು ಪಾಳ್ಗೆಡವಿರ್ಪ ಲಂಕೆಯಾ
ರುಚಿರಮಾದಸುಗೆಬನದಂದದಿಂ ಗೈದಿರಲ್ ೩೨೦
ಮಧುವನಂ ಮಧುಹೀನಮಾದತ್ತು ಜತೆಯೊಳೇ
ವನಮುಮಿಲ್ಲದ ಪಾಂಗಿನಿಂ ಬರಿದೆ ಬಯಲಾಯ್ತು
ಚಂಡಮಾರುತಮೊಂದು ಬೀಸಿ ಪಾಳ್ಗೆಡವಿತೋ
ಚಂಡಪ್ರವಾಹಮೇನೆಲ್ಲಮಂ ನುಂಗಿತೋ
ಮದಿಸಿರ್ಪಗಜಘಟಂ ನಿಜಕೇಲಿಯಿಂದಿದೇಂ
ನುಚ್ಚುನೂರ್ ಗೆಯ್ದಿತೋ ಬನಮನೆಂಬಂದದಿಂ-
ದಿನಿತಾನುಮವಶೇಷಮಿಲ್ಲದಂದದೆ ಶತ-
ಚ್ಛಿದ್ರಮಂ ಗೆಯ್ದು ಮೇಣ್ ಮತ್ತರಾಗಿರೆ ಬಿಳ್ದು
ವಿಶ್ರಾಂತಿಯಂ ಪೊಂದಲೆಂಬಂತೆ ಮಲಗಿದರ್
ವಿವಿಧಭಂಗಿಗಳೊಳಗೆ ಹನುಮನಿಂ ರಕ್ಷಿತರ್ ೩೩೦
ಕಪಿಗಳುದ್ದಂಡವಿಕ್ರಮರಲ್ಲಿ ಮಧುವನದೆ.

ನೆಲದೆ ಕುಳಿಗಳ ಸಾಲ್ಗಳೇ ತುಂಬಿ ಕಂಡುವೈ    
ಮರನಿಲ್ಲದಂತಾಯ್ತು ಮರುಭೂಮಿಯಂದದಿಂ
“ಅಕಟ! ವನಸೃಷ್ಟಿಗಂ ಶ್ರಮಮೆಂತು ಸಂದಿರ್ಪು-
ದೆಂತುಟಾದುದು ಕುಮತಿ ಕಪಿಗಳ್ಗೆ! ಹಾ! ಹಂತ!
ಕಪಿಗಳೀ ಪ್ರಕೃತಿಯೇ ಮತ್ಸೃಷ್ಟಿ!” ಎಂದೆನುತೆ
ಬೊಮ್ಮನೇ ಕಣ್ಣೀರ್ಗಳಂ ಸುರಿಸಿದಂತಾಯ್ತು
ಅಳಿದುಳಿದ ಮಧುಪಾತ್ರದಿಂ ಸುರೆಯೆ ಚೆಲ್ಲಿರಲ್.
ಬೆಳ್ನೊರೆಯ ಪುಳಿವೆಂಡಮೆಲ್ಲೆಡೆಗೆ ಪಸರಿಸಿರೆ
ಡಿಂಡೀರಮಾಂತುದೇಂ ಕೌಮುದಿಯೆ ಎಂಬವೊಲ್ ೩೪೦
ಭ್ರಾಂತಿಯಾದುದು! ವನದ ಶಾದ್ವಲಂ ತೊಯ್ದಿರಲ್
ಮರಕತಕೆ ಪೊಗರೀಯಲುಜ್ಜುಗಿಸುತುಜ್ಜಿಟ್ಟ   
ತೆರನಾಯ್ತು! ಕೆಡೆದಿರ್ಪ ಮರಗಳಂ ನಿರುಕಿಸಲ್
ದೈತ್ಯರಾ ಬಾಣಸಿಗನೊಟ್ಟಿರ್ಪ ಸೌದೆವೊಲ್
ತೋರ್ದತ್ತು. ಮಧುವನದೆ ಮೊದಲಿರ್ದ ಸೊಗಮೆಲ್ಲ-
ಮಳಿದತ್ತು. ಲಯಕಾಲದಭ್ಯಾಸಕೆಂದೇನೊ
ರುದ್ರನೇ ಹನುಮರೂಪದೆ ಬಂದು ಗೆಯ್ಸಿದಂ-
ತೆಸೆದತ್ತು.
    ಪರಚಿರ್ಪ ಕರ್ಚಿರ್ಪ ಪೊಡೆದಿರ್ಪ
ಗಾಯಂಗಳಿಂದತ್ತ ಮೆಯ್ದುಂಬಿಕೊಂಡಿರ್ಪ
ದಧಿಮುಖಂ ಸುಗ್ರೀವನಿದಿರೊಳಗೆ ತಾಂ ನಿಂದು ೩೫೦
ಬಣ್ಣಿಸುತೆ ತನ್ನೀ ಅವಸ್ಥೆಗಳನಾಗಳೇ
ಕಪಿಗಳೆಲ್ಲರ್ ಸೇರ್ದು ಹನುಮನಾಣತಿಯಂತೆ    
ಜಾಂಬವಾಂಗದಯುಕ್ತರಾಗಿಂತು ಗೈದರೆನೆ
ಹರ್ಷದಿಂ ಸುಗ್ರೀವನೆಂದಂ ವಿಚಿಂತಿಸುತೆ-
“ಅಹಹ! ಸೀತೆಯ ಕಂಡು ಬಂದಿರ್ಪುದೇ ದಿಟಂ!
ಕಾಣದಿರ್ದೊಡೆ ಚಿತ್ತದೊಳ್ ಖೇದಮಿರ್ದೊಡಂ
ಮಧುವನಕೆ ಪುಗುವೊಂದು ಬಲ್ಮೆಯೇನವರ್ಗುಂಟೆ!
ಶ್ರೀರಾಮನೊಳ್ ಸ್ವಯಂ ಪೇಳ್ದಪೆಂ. ಶೀಘ್ರದಿಂ
ಬರವೇಳ್ ಸಮಸ್ತರಂ ವಾನರಾಗ್ರಣಿಗಳಂ.
ಬೇಗದಿಂ ಪೋ ಪೋ!” ಎನಲ್ ಚಿಮ್ಮಿ ನೆಗೆದಪಂ ೩೬೦
ದಧಿಮುಖಂ ಮಧುವನಕೆ ಭೀತಿ ಕಿಂಚಿತ್ತಿರಲ್.
ಮೇಹನದೆ ಮಗ್ನಮಾಗಿರೆ ವಾನರರ ದಂಡು,
ಮಧುಮಹೋತ್ಸವಕೆಂತೊ ಸಜ್ಜಾಗುತಿರ್ಪಂಥ  
ಮಧುವನಂ ನಿಶ್ಶೇಷಮಾಗಿರ್ಪುದಂ ಕಂಡು
ಮನದ ದುಗುಡಂ ಪೆರ್ಚಿಯುಂ ರಾಜನಾಜ್ಞೆಯಂ
ತಿಳುಪಲಾಗಮಿಸಿದಂ ಹನುಮವೆಸರಂ ಕೂಗಿ
ಪೊರಗಿರ್ಪ ವೇಲೆಯಿಂ ನುಡಿದಪಂ ಸುಗ್ರೀವ-
ನುಲಿದುದಂ. ಕೋಪಗೊಳ್ಳದೆ ಹರ್ಷಮಾಂತುದಂ!
ವಿತತವೃಕ್ಷಚ್ಛಾಯೆಯಳಿದು ತಿಂಗಳ್ ವೆಳಕೆ
ತಿಳಿಯಾಗಿ ನಳನಳಿಪ ಸಂಧ್ಯೆಯಾಗಮಿಸಿರಲ್ ೩೭೦
ತ್ರೈಲೋಕ್ಯವಂದ್ಯೆಯಂ ನಮಿಸುತ್ತೆ ನಿಂದಿರ್ಪ
ಮಾರುತಿಗೆ ದಧಿಮುಖಂ ಕರೆದಿರಲ್ ಕಣ್ಬಿಡಲ್
ನೆರೆದತ್ತು ಮುಂದೆಂತೊ ಚಂದ್ರಮಂಡಲಮಂದು
ಷೋಡಶಕಲಾಪೂರ್ಣಮದ್ಭುತಂ. ಸೀತೆಯಂ
ಕಂಡಿರ್ಪ ವಾರ್ತೆಯಂ ಕೇಳ್ದು ರಾಮನ ಮೊಗಮೆ
ಜೃಂಭಿಸಿರ್ಪಂದದಿಂದಿಂದುಮಂಡಲಮಿಂದು
ಬಂದುದೇಂ ಸುಂದರಂ ಬಂಧುರಂ ಚಂದದಿಂ-
ದೆಂದು ಬಗೆಯುತೆ ನೋಡೆ ಹನುಮಂತನತ್ತಣಿಂ-
ದೆಸೆದತ್ತು ಪೀಯೂಷಕಿರಣಪಾನೋನ್ಮತ್ತ
ವರಚಕೋರಂಗಳುಲಿವೊಲವಿಂದಮಾಲಿಸಲ್ ೩೮೦
ರಾಮಚಂದ್ರನ ವಚೋರಚನೆಗಿದು ಸಾಟಿಯೆನೆ
ಬಗೆಯೊಳಗೆ ತುಂಬಿರ್ಪುದಂ ಪ್ರಕೃತಿ ತೋರ್ಪುದೈ
ದಿಟದೆ ರಾಮನೆ ಮನದಿ ತುಂಬಿರ್ಪನೆಂದರಿತು      
ಮತ್ತೊರ್ಮೆ ಮೌನದಿಂ ಧ್ಯಾನಿಸುತೆ ಕಂಡನೈ
ಹೃದಯಮಂದಿರದೊಳಗೆ ರಾಮನಾ ಮೂರ್ತಿಯಂ
“ಜಯಜಯ ಶ್ರೀರಾಮ” ಘೋಷಮುಂ ತೀವಿರಲ್
ಮನದೊಳಗೆ ಪೂಜಿಸಿದನೊಲವಿಂದೆ ರಾಮನಂ.
ರಾಜನಾಣತಿಯಂತೆ ಸರ್ವರುಂ ಪೊರಮಟ್ಟು
ರಾಮನೊಳಗೊಲವಿಂದೆ ಸೀತೆ ದೊರಕಿರ್ಪುದಂ
ಪೇಳಲುತ್ಸುಕರಾಗಿ ಮಿಂಚಂತೆ ಪಾರ್ದಪರ್ ೩೯೦
ಬಂಡುಂಡ ಬಂಡುಣಿಗಳಾವಿಂಡು ನೆಲೆಗೆಯ್ದ
ಪಾಂಗಿಂದೆ ವಾನರರ ತಾಣಕ್ಕೆ ಸಾರ್ದಪರ್.
ಅನವರತಸೀತಾವಿಯೋಗಾಗ್ನಿಸಂತಪ್ತ
ಘನತರಶ್ರೀರಾಮಚಂದ್ರಕಾರ್ಶ್ಯೇಕ್ಷಿತರ
ಚಿತ್ತಕಂ ನೆಮ್ಮದಿಯನೀಯಲ್ಕೆ ಮಗುಳಂತೆ
ರಾಮಹೃದಯಾರಾಮವಾಸಂತದೂತಿ ತಳೆ-
ದಿರ್ಪ ಸುಮನಸ್ಸೆಂಬ ಪಾಂಗಿಂದೆ ಹನುಮಂತ-
ನವತರಿಸಿದಂ ನೆಲಕೆ “ಸೀತೆ ದೊರಕಿದಳ್” ಎಂಬ
ಸೊದೆವಾತನೇ ಸುರಿಸುತುಂ ರಾಮ ಪದಯುಗಕೆ
ನಮಿಸಿ ಚೂಡಾಮಣಿಯನಿತ್ತನಾತನ ಕರದೆ. ೪೦೦
ರಾಮನಾಲಂಗಿಸುತುಮಾನಂದಬಾಷ್ಪದಿಂ-
ದಭಿಷೇಚಿಸಿದನಾಂಜನೇಯನಾಕೃತಿಯನೇ!
ಆಗಳದನೀಕ್ಷಿಸಿದರೆಲ್ಲರುಂ ಸಂತಸದೆ
ಗದ್ಗದಿತರಾಗಿರಲ್ ರಾಮಚಂದ್ರಂ ಮತ್ತೆ
ಮಾರುತಿಯ ನುಡಿಗಳಂ ಕೇಳಲಾಸಕ್ತನಿರೆ
ಸರ್ವರುಂ ಸಮ್ಮಿಳಿತರಾಗಿರಲ್ ಹನುಮಂತ-
ನಂದು ಸೀತೆಯ ಕಂಡ ಕಥೆಯನೊರೆದಪನಲ್ಲಿ
ಆನಂದಮೊಂದೆ ಕಂಡುದು ಸರ್ವಹೃದಯದಲಿ.
~~~~~~~~~~~~~~~~~~~~~~~~~~~~~~~
~ಗಣೇಶ ಭಟ್ಟ ಕೊಪ್ಪಲತೋಟ
ಆರಂಭ:        ೦೭-೦೧-೨೦೧೮
ಮುಗಿತಾಯ:    ೧೨-೦೧-೨೦೧೮
ತಿದ್ದುಪಡಿ: ‌೨೨-೦೭-೨೦೧೮

ಬುಧವಾರ, ಆಗಸ್ಟ್ 1, 2018

ಮಧುವನಮರ್ದನಂ- ೩

ಮೊದಲ ಭಾಗ- ಮಧುವನಮರ್ದನಂ-೧
ಎರಡನೆ ಭಾಗ- ಮಧುವನಮರ್ದನಂ- ೨

ಲಿಂಕಿನಲ್ಲಿ ಈ ಭಾಗವನ್ನು ಕೇಳುತ್ತಾ ಓದಬಹುದು

~ಮಧುವನಮರ್ದನಂ -೩ ~

ಮತ್ತೆ ನಾರಿಕೇಳಾದಿ ತರು-
ಬೃಂದಂಗಳೊಳ್ ತಾಲವೃಕ್ಷಂಗಳೊಳ್ ಮಗುಳ್ ೨೧೦
ಕಿರಿದಾನುಮೆಸೆದಿರ್ಪುದೀಚಲ ಮರಂಗಳೊಳ್
ನಿಡಿದಾಗಿ ಕೊರೆಯಿಲ್ಲದಂತಿರ್ದಪುದು ನೋಡೆ   
ಮಧುಮಯಂ ಹೃದಯಮಂ ಸೊದೆಯೆ ಮೇಣ್
ತಣಿಪಂತೆ
ಫಲದಂತೆ ತೂಗಿರ್ಪ ಕುಂಭಂಗಳುಂ ಮತ್ತೆ
ಕಿರಿದಾದ ಭಾಂಡಂಗಳುಂ ನಿರುಕಿಸಲ್ಕದೇಂ
ದನುಜರಿಂ ಸುರೆಯನೇಂ ಕಳ್ದುಯ್ಯಲೆನುತೆ ತಾಂ
ಸುರಪತಿಯೆ ಕಳುಪಿರ್ಪ ಸೈನಿಕರ್ ರಕ್ಕಸರ
ಜಾದುವಿಂ ಮರವಟ್ಟು ನಿಂತಿರ್ಪರಿಂತುಟೇಂ!
ಅಲ್ತಲ್ತು! ಖಗಕುಲಕೆ ವೃಕ್ಷಸಂಕುಲಮೊಲ್ದು
ಪಾಥೇಯಮಂ ನೀಡಲೆಂದು ಕೆಯ್ ನೆಗಪಿದುವೆ! ೨೨೦
ತಂಗಾಳಿ ತೀಡಿರಲ್ ಸಂಸ್ಪರ್ಶಮಪ್ಪುದೈ
ಮಧುರಗಂಧಂ ತೀವಿ ನಾಸಿಕಕೆ ಸೊಗಸೆನಿಸೆ    
ಇಂಪೆನಿಪ ಕಲರವಂ ಕರ್ಣಕಾನಂದನಂ
ಕಂಗಳ್ಗೆ ಸುಂದರಂ ಬನದ ಸದ್ದೃಶ್ಯಮುಂ
ಸೊಗಸೆನಿಸೆ ನಾಲಗೆಗೆ ಸಂದಿರ್ಪುದೇನೆನಲ್
ರುಚಿಯಿರ್ಪ ವಾರುಣಿಯ ಕುಂಭಂಗಳಿಕೊ! ಕೊಳ್!
ಎಂದು ಪೇಳ್ವಂದದಿಂ ವೃಕ್ಷಂಗಳೊಳ್ ಸಂದ
ಸವಿಯಾದ ರಸಮಿರ್ಪ ಮಧುಪಾತ್ರದಿಂ ಕೂಡಿ
ಮಧುವನಂ ಭವ್ಯಮಾಗಿರ್ದಪುದು
ಕಪಿಕುಲಂ  ೨೩೦
ತಾಂ ಪ್ರವೇಶಂ ಗೈದುದೆನೆ ಭಾಂಡಮೆಲ್ಲಮುಂ
ಚಂಡಕಿರಣಂಗಿದಿರ್ ಸಿಲ್ಕಿರ್ಪ ಹಿಮದಂತೆ    
ಬಡಬಾಗ್ನಿಗೆದುರಾದ ನೀರಿನೊರ್ಪನಿಯಂತೆ
ಹವ್ಯವಾಹನಮುಖಕೆ ಘೃತಮಿಕ್ಕಿದಂದದಿಂ
ಶೂನ್ಯಮಾದುದು.
    ಹನುಮನಾಶ್ವಾಸನೆಯನೀಯೆ
“ಅವ್ಯಗ್ರಮನದಿಂದೆ ಮಧುವನೀಂಟಿಂ ಸಖರೆ!
ನಿಮಗಡ್ಡಿ ಗೈವರಂ ಪರಿಹರಿಪೆನಾಂ ದಿಟದೆ!”
ಎಂತೆನಲ್ ವಾಲಿಸುತನೊಲ್ದುತ್ತರಮನಿತ್ತ-
ನಿಂತು ಮಿತ್ರರೆ ಕಾರ್ಯಸಾಧಕಂ ಹನುಮನೇ
ವಚನಮಿತ್ತೊಡನವನ ಕೃತ್ಯಸಂತೋಷಕಂ  ೨೪೦
ಗೆಯ್ವುದುಚಿತಮನೆಲ್ಲರುಂ ನಾವೆ ಮಾರುತಿಯ
ನುಡಿಯನನುಸರಿಪುದೇ ಯುಕ್ತಮೀ ವೇಳೆಯೊಳ್
ಪೇಳ್ದೊಡಮಕಾರ್ಯಮಂ ಗೆಯ್ವುದೇ ಕರ್ತವ್ಯ-
ಮಿದು ವಾಯುಪುತ್ರನಾಣತಿಯೆಂದು ಬಗೆಯಿರೈ”
ಎನೆ ಮತ್ತಕಪಿಕುಲಂ ಮತ್ತೆ ದಾಳಿಯಗೈದು
ವಾರುಣಿಯ ವಾರಿಧಿಗಗಸ್ತ್ಯೋಪಮಾನರೆನೆ
ಮೇಣ್ ಪೆರ್ಚಿದುತ್ಸಾಹದಿಂದೀಂಟತೊಡಗಿದರ್
ಮಧುವನಾ ಬನದೊಳಗೆ ಸಿಲ್ಕಿರ್ಪ ಪಣ್ಗಳಂ
ಕಿಳ್ತು ತಿಂದರ್ ಪೂಗಳಂ ಪರಿದು ಬಿಸುಟರೇಂ
ಗೆಯ್ಯುತಿರ್ಪೆವೊ ಎಂದು ತಿಳಿಯದೆಯೆ ಗೆಯ್ದಿರಲ್ ೨೫೦
ನಿರ್ವಿಕಾರದಿನೆಲ್ಲಮಂ ನೋಡುತಿರ್ದಪಂ
ಶಾಂತಚಿತ್ತಂ ಹನೂಮಂತನಾ ಚಿತ್ರಮಂ    
ಜಗದಸೃಷ್ಟಿಯ ಬಳಿಕದೊಳ್ ನಡೆವ ಘಟನೆಗಳ-
ನೀಕ್ಷಿಸುತೆ ನಿರ್ಲಿಪ್ತನಾಗಿರ್ಪ ಪರಮಾತ್ಮ
ಸದೃಶನೀತಂ. ನೋಡಿ ವಾನರವಿನೋದಮಂ
ಕೊನೆಗೊಂದು ಕಿರುನಗೆಯನತ್ತ ಬೀರ್ದಪನೊಲ್ದು
ಮತ್ತರಾ ಕೇಳಿಯಂ ಕಂಡು ಪ್ಲವಂಗರೀ
ವಿಪ್ಲವಮನಿದನಂತು ಮಧುವನದ ಮರ್ದನದೆ.
ನಿಂದನೊರ್ವಂ ರಾಜಗಾಂಭಿರ್ಯದಿಂದೆ ಮೇಣ್
ಉನ್ಮತ್ತಕಪಿವೀರನವನೆಡೆಗೆ ನಡೆದಪರ್  ೨೬೦
ಮತ್ತಿರ್ವರುಂ ಮತ್ತವಾನರವರೇಣ್ಯರೇ
ಸೇವಕರ ಪಾಂಗಿನಿಂದಿನ್ನೊಂದು ಕಡೆ ನೋಡೆ     
ಕುಣಿದಪರ್ ಕೆಲರೊಲ್ದು ಮತ್ತೆ ಕೆಲವರ್ ಪಾಡೆ
ನಗುತಿರ್ಪರೊಂದೆಡೆಗೆ ದುಃಖಿಪರ್ ಮತ್ತೆ ಕೆಲ-
ರಭಿನಯಿಪ ನಟನಟಿಯರಂತಿರ್ಪರಿರ್ವರೇ-
ನೊಂದೊಂದು ಕಡೆಗೊಂದು ಚಿತ್ರಚಿತ್ರಣಮಿರಲ್
ಮರನನೇರುವನೊರ್ವನಿಳಿದು ಬೀಳುವನೊರ್ವ-
ನಳಲಿಂದೆ ಕಾಲ್ಗಳಂ ಪಿಡಿಯುವವನಿನ್ನೊರ್ವ-
ನಿಂತು ಕಂಡವರೆಡೆಗೆ ಕೈಮುಗಿದನೊರ್ವನೆನೆ
ಕೇಕೆ ಹಾಕುವನೊರ್ವನವನ ತಳ್ಳುವನೊರ್ವ-  ೨೭೦
ನಿವರೊಳಾರ್ ಮತ್ತರಲ್ಲದೆ ಬೇರೆಯಿರದಿರಲ್
ಪಣ್ಗಳಂ ತಿನುತೆ ಮೇಣ್ ಲತೆಗಳಂ ಪರಿಯುತ್ತೆ    
ವಿಧ್ವಂಸಮಂ ಗೆಯ್ಯುತಿರ್ಪರ್ ಕೆಲರ್ ಮತ್ತೆ
ಕಪಿಸಹಜಕೃತ್ಯಮಂ ತೋರ್ದಪರ್.
            ದಧಿಮುಖಂ
ತಡೆಯವೇಳ್ಕುಂ ಬನದ ನಾಶನಮನೆನ್ನುತುಂ
ಪಟುಭಟರ ಸಂಘಟನೆಯೊಡನೈದಿ ಬಂದಿರಲ್
ಶಸ್ತ್ರಸಹಿತರ್ ಭಟರ್ಗಾಣತಿಯನಿತ್ತನೈ
“ಪೊಡೆಯಿರೈ ಜಡಿಯಿರೈ ತೊಡೆಯಿರೈ ನಡೆಯಿರೈ
ಸಕಲಕಪಿಗಳನಿಕ್ಕಿ ಮೆಟ್ಟಿರೈ ಕುಟ್ಟಿರೈ
ಬಂಧಿಸಿರಿ ಮಧುವನವಿನಾಶಮಂ ತಡೆಯಿರೈ  ೨೮೦
ರಾಜಸುಗ್ರೀವನಿದಿರೊಳಗೆ ಮಾನ್ಯತೆ ನಿಮಗೆ
ದಕ್ಕುಗುಂ. ಮಧುವನಂ ರಕ್ಷಿತಮೆನಿಪ್ಪೊಡಂ   
ತ್ವರೆಯಿಂದೆ ಪೋಗಿ”ಮೆಂತೆಂದೊಡಂ ಸಾರ್ದಪರ್
ಅದಟನೇನಳೆಯಲ್ಕೆ ಶಕ್ಯಮೇ ಕಪಿಗಳಾ!
ಸೈನಿಕರನೀಕ್ಷಿಸುತೆ ಮತ್ತೆ ಕೊರ್ವುತೆ ಸಿಡಿದು
ಜಡಿದರೈ ಬಡಿದರೈ ಪೊಡೆದರೈ ಕೆಡೆದರೈ
ನಡೆದರೈ ಮೆಟ್ಟುತ್ತೆ ತೊಡೆದರೈ ಕುಟ್ಟುತ್ತೆ
ಕಾವಲಿನ ಭಟರನೇ ಕಾಲಬುಡದೊಳಗಿಕ್ಕಿ
ಪೀಡಿಸಲ್ ತೀಡಿಸಲ್ ಕಾಡಿಸಲ್ ಬೇಡಿದರ್
“ಬಿಡಿಮೆಮ್ಮನೆಲ್ಲರಂ ಕಾಪಿಡಿಂ ನೀವೆನಲ್” ೨೯೦
ಕಪಿಗಳಾ ಭಟರ್ಗಳಂ ಮೊಣಕಾಲ್ಗಳೊಳ್ ಪಿಡಿದು
ಸೆಳೆದು ಮೆಟ್ಟುತೆ ದೇವಮಾರ್ಗಮನೆ ತೋರಿರ-     
ಲ್ಕೆಂತೆಂತೊ ಅವರ್ಗಳಿಂ ತಪ್ಪಿಸಿಕೊಳುತ್ತೆ ತಾಂ
ದಧಿಮುಖನ ಬಳಿಗೋಡಿ ದೂರನಿತ್ತರ್ ಖತಿಯೊ-
“ಳಿವರ್ಗಳಂ ಪಿಡಿವೆನಾಂ ದರ್ಪಮಂ ದಹಿಸುವೆಂ
ಬನ್ನಿ”ಮೆನಲಾತನೆಲ್ಲರ್ ಮತ್ತೆ ಬಂದಪರ್
ಧೈರ್ಯದಿಂ
    ವನಪಾಲಕರ್ ವೃಕ್ಷಮಂ ಕಿಳ್ತು
ಪೊಡೆದಪರ್ ಪೀಡಿಸಿರ್ದಪ ಕಪಿಗಳಂ ವಲಂ.
ದಧಿಮುಖಂ ವೃಕ್ಷಾಯುಧಂ ಸ್ವಯಂ ಸಾರ್ದೊಡಂ
ನೋಡುತ್ತುಮಂಗದಂ ಕೋಪದಿಂದೈದಿದಂ  ೩೦೦
ದಧಿಮುಖಮುಖಚಪೇಟಮಂ ನೀಡಿ ಪೊಯ್ದಪಂ
ಮೊಸರ್ಮೊಗನೆ ಕೆಸರ್ಮೊಗಂ ಸಂದೆ ನೀನೆನ್ನುತುಂ   
ಪೂಜ್ಯತ್ವಮಂ ಮರೆತು ಮಲೆತು ನೆಲಕಿಕ್ಕಿದಂ
ಕುಕ್ಕಿದಂ ಸೊರ್ಕಿಂದಮುರ್ಕಿರ್ಪ ಕೋಪದಿಂ
ನೆಲಕೆ ದಧಿಮುಖನ ಮುಖಮಂ ತೀಡಿದಂ ಗಡಾ!
ಭೀತಿಯಿಂದವಮಾನದಿಂ ಮತ್ತೆ ಬೇಗದಿಂ-
ದೋಡಿದಂ ದಧಿಮುಖಂ ಕಪಿಮುಷ್ಟಿ ತಪ್ಪಿರಲ್
“ಬರ್ದುಕಿದೆಯ ಬಡಬಾಳೆ” ಎಂದುಸುರಿಕೊಳ್ಳುತುಂ
ವನಪಾಲಕರ್ಗಳುಳಿದವರವನ ಪಿಂ ಪೋಗೆ
“ಸುಗ್ರೀವನಿದಿರರೊಳಾನಿವರ್ಗಳಂ ನೋಡುವೆಂ. ೩೧೦
ವೃತ್ತಾಂತಮಂ ತಿಳುಪಿ ದಂಡನೆಯನಿತ್ತಪೆಂ”
ಇಂತೆಂದು ಪೊರಮಟ್ಟು ಶ್ರೀರಾಮಲಕ್ಷ್ಮಣರಿ-     
ನಾಪ್ತರಿಂ ಕೂಡಿರ್ಪ ಸುಗ್ರೀವನಿರ್ಪೆಡೆಗೆ
ಕಿಷ್ಕಿಂಧೆಗಂ ಪಾರುತುಂ ಪೋದಪಂ ಸ್ವಯಂ
ಮಧುವನಸುರಕ್ಷಾವ್ರತೈಕನಿಷ್ಠಾತ್ಮಕಂ
ದಧಿಮುಖಂ ಕಪಿವೀರಪೀಡಿತನಧೋಮುಖಂ.

ಮುಂದುವರೆಯುತ್ತದೆ....