Powered By Blogger

ಬುಧವಾರ, ಮಾರ್ಚ್ 23, 2011

ಸಮಸ್ಯಾ ಪೂರಣ


   ಕಾವ್ಯ ಪ್ರಕಾರದಲ್ಲಿ ಒಂದು ವಿಶಿಷ್ಟ ಪರಂಪರೆ  ಈ ಸಮಸ್ಯಾ ಪೂರಣಕ್ಕೆ ಇದೆ. ಭೋಜ ಕಾಳಿದಾಸರ ಪ್ರಸಂಗಗಳಿಂದ ಆದಿಯಾಗಿ ಇಂತಹ ಅನೇಕ ಸಮಸ್ಯಾ ಪೂರ್ತಿ ಘಟನಾವಳಿಗಳು ಕೇಳಲ್ಪಡುತ್ತವೆ. ಸಮಸ್ಯಾ ಪೂರಣವೆಂದರೆ ಪದ್ಯವೊಂದರ ಒಂದು  ಸಾಲನ್ನು ಕೇಳುಗ/ ಪೃಚ್ಚಕ ಕೇಳುತ್ತಾನೆ. ಪರಿಹಾರ ಕೊಡುವವನು ಅದರ ಉಳಿದ ಮೂರು ಸಾಲುಗಳನ್ನು ಹೇಳಿ ಪೂರ್ತಿ ಮಾಡಬೇಕು. ಅವಧಾನ ಒಂದು ಅದ್ಭುತ ಕಲೆ ಲೇಖನದಲ್ಲಿ ಅದಾಗಲೇ ಅಲ್ಪ ಮಾಹಿತಿಯನ್ನು ಕೊಟ್ಟಿದ್ದೇನೆ. ಆದರೂ ಅದರ ಬಗ್ಗೆ ಸ್ವಲ್ಪ ವಿಸ್ತಾರದ ಕಥಾನಕಗಳ ಸಹಿತ ಈ ಲೇಖನವನ್ನು ನಿಮ್ಮ ಎದುರು ಇಡಲು ಸಂತೋಷ ಪಡುತ್ತಿದ್ದೇನೆ.
ಕಾಳಿದಾಸನ ಕಥೆಗಳನ್ನು ಕೇಳಿದವರಿಗೆ, ಓದಿದವರಿಗೆ ಇಂತಹ ಅನೇಕ ಆಖ್ಯಾನಗಳು ತಿಳಿದಿರುತ್ತವೆ. "ಕವಿರತ್ನ ಕಾಳಿದಾಸ" ಚಲನಚಿತ್ರದಲ್ಲೂ ಇವನನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಡಾ.ರಾಜಕುಮಾರ್ ಅವರು ಸಮರ್ಥವಾಗಿ ಉಚಿತ ರೀತಿಯ ಭಾವನೆಗಳೊಂದಿಗೆ ಅಭಿನಯಿಸಿದ್ದಾರೆ ಕೂಡ.
ಇಂತಹ ಕೆಲವೊಂದು ಘಟನೆಗಳನ್ನು ಇಲ್ಲಿ ನೋಡೋಣ.
೧. ಭೋಜರಾಜ ಕಾಳಿದಾಸನಿಗೆ ಒಮ್ಮೆ ಹೀಗೆ ಕೇಳಿದ
 "ಟಂ ಟಂ ಟ ಟಂ ಟಂ ಟ  ಟ ಟಂ ಟ ಟಂ ಟಃ"
 ಇದೆಂತಹ ಸೋಜಿಗದ ಪ್ರಶ್ನೆ ಎಂದು ಎಲ್ಲರು ಬೆರಗಾಗಿರುವಾಗ ಕಾಳಿದಾಸ ಹೀಗೆ ಹೇಳುತ್ತಾನೆ.
"ರಾಜಾಭಿಷೇಕೇ ಮದವಿಹ್ವಲಾಯಾಃ
ಹಸ್ತಾತ್ ಚ್ಯುತೋ ಹೇಮ ಘಟಸ್ತರುಣ್ಯಾಃ
ಸೋಪಾನ ಮಾರ್ಗೇ ಪತಿತಃ ಕರೋತಿ
ಟಂ ಟಂ ಟ ಟಂ ಟಂ ಟ  ಟ ಟಂ ಟ ಟಂ ಟಃ"
ಅದರ ಅರ್ಥ :- "ರಾಜನಿಗೆ ಅಭಿಷೇಕ(ಸ್ನಾನ) ಮಾಡಲು(ಮಾಡಿಸಲು) ಬಂಗಾರದ ಕೊಡವನ್ನು ಹಿಡಿದುಕೊಂಡು ಹೋಗುತ್ತಿರುವ ತರುಣಿಯು(ಸೇವಕಿ) ಸೋಪಾನ ಮಾರ್ಗದಲ್ಲಿ ಹೋಗುತ್ತಿರುವಾಗ ಮದ ವಿಹ್ವಲಳಾಗುತ್ತಾಳೆ. ಆಗ ಅವಳ ಕೈಯಿಂದ ಜಾರಿ ಬಿದ್ದ ಆ ಕಲಶ "ಟಂ ಟಂ ಟ ಟಂ ಟಂ ಟ  ಟ ಟಂ ಟ ಟಂ ಟಃ" ಎಂದು ಶಬ್ದ ಮಾಡುತ್ತದೆ"
ಇದಕ್ಕೆ ಇನ್ನೂ ಒಂದೆರಡು ಬೇರೆ ಪಾಠಗಳೂ ಇವೆ.
"ಭೋಜಸ್ಯ ಭಾರ್ಯಾ ಮದ ವಿಹ್ವಲಾಯಾಃ
ಹಸ್ತೇ ದಧನ್ ಹೇಮ ಘಟೇ ನಿಪಾತೇ
ಸೋಪಾನ ಮಾರ್ಗೇ ಕರೋತಿ ಶಬ್ದಂ
ಟಂ ಟಂ ಟ ಟಂ ಟಂ ಟ  ಟ ಟಂ ಟ ಟಂ ಟಃ"
(ಇದರ ಅರ್ಥವೂ ಹಾಗೇ ಆಗುತ್ತದೆಯಾದರೂ ಅಲ್ಲಿ ಬರುವ ತರುಣಿ ಸೇವಕಿಯ ಬದಲು ಇಲ್ಲಿ ರಾಣಿ ಇದ್ದಾಳೆ.)
೨. ಇನ್ನೊಂದು ಪ್ರಸಂಗದಲ್ಲಿ  ಕಾಳಿದಾಸನಿಗೆ ಕೇಳಲ್ಪಟ್ಟ ಪ್ರಶ್ನೆ ಎಂದರೆ
"ಕುಂತೀ ಸುತೋ ರಾವಣ ಕುಂಭ ಕರ್ಣಃ"
ಎಂದು. ಇದನ್ನು ಸಾಮಾನ್ಯವಾಗಿ ಅರ್ಥೈಸಿದರೆ "ಕುಂತಿಯ ಮಗ ರಾವಣ ಕುಂಭಕರ್ಣ" ಎಂದಾಗುತ್ತದೆ. ಎಲ್ಲಿಯ ಕುಂತಿ? ಎಲ್ಲಿಯ ರಾವಣಕುಂಭಕರ್ಣರು? ಆದರೆ ಕಾಳಿದಾಸ ಇದನ್ನು ಪರಿಹರಿಸಿದ ರೀತಿ ತುಂಬಾ ಚೆನ್ನಾಗಿದೆ.
ಅದೆಂದರೆ:-
"ಕಾ ಪಾಂಡು ಪತ್ನೀ? ಗೃಹ ಭೂಷಣಂ ಕಿಂ?
ಕೋ ರಾಮ ಶತ್ರು?ಕಿಮಗಸ್ತ್ಯ ಜನ್ಮಾ?
ಕಃ ಸೂರ್ಯ ಪುತ್ರೋ ವಿಪರೀತ ಪೃಚ್ಚೇ 
ಕುಂತೀ ಸುತೋ ರಾವಣ ಕುಂಭ ಕರ್ಣಃ"
 ಅಂದರೆ -" ಪಾಂಡುವಿನ ಪತ್ನಿ ಯಾರು? ಮನೆಗೆ ಭೂಷಣ ಯಾರು? ರಾಮನ ಶತ್ರು ಯಾರು? ಅಗಸ್ತ್ಯರ ಜನ್ಮ ಕಾರಣ ಯಾವುದು? ಸೂರ್ಯನ ಮಗ ಯಾರು? ಇವೆಲ್ಲದರ ಉತ್ತರಗಳನ್ನು ವಿಪರೀತವಾಗಿ ಹೇಳಿದರೆ "ಕುಂತೀ ಸುತೋ ರಾವಣ ಕುಂಭ ಕರ್ಣಃ"

೩. ಕವಿರತ್ನ ಕಾಳಿದಾಸ ಚಲನ ಚಿತ್ರದಲ್ಲಿ ತೋರಿಸಿದಂತೆ ಇನ್ನೊಂದು ಪ್ರಶ್ನೆ " ಕಮಲೇ ಕಮಲೋತ್ಪತ್ತಿ:"ಎಂದು.
ಅರ್ಥ-"ಕಮಲದಲ್ಲಿ ಕಮಲ ಹುಟ್ಟುವುದು." ಎಂದು. ಕಾಳಿದಾಸ ಭೋಜನಿಂದ ದೂರವಾದ ಸಂದರ್ಭದಲ್ಲಿ ಒಬ್ಬ ಪಂಡಿತ ಈ ಪ್ರಶ್ನೆ ಕೇಳುತ್ತಾನೆ. ಭೋಜ ರಾಜ ಯಾರು ಬಗೆ ಹರಿಸುತ್ತಾರೋ ಅವರಿಗೆ ಬಹುಮಾನಗಳನ್ನು ಕೊಡುವುದಾಗಿ ಘೋಷಿಸುತ್ತಾನೆ. ಭೋಜನ ಪ್ರಕಾರ 'ಉತ್ತರ ತಂದವರಿಗೆ ಕಾಳಿದಾಸನ ಇರುವು ಗೊತ್ತಿರುತ್ತದೆ' ಎಂದು. ಇಂತಹ ಪ್ರಶ್ನೆಗಳನ್ನು ಕಾಳಿದಾಸ ಮಾತ್ರ ಸರಿಯಾಗಿ ಉತ್ತರಿಸಬಲ್ಲ ಎಂದು ಅವನಿಗೂ ಆ ಪಂಡಿತನಿಗೂ ತಿಳಿದಿತ್ತು. ಆ ಸಂದರ್ಭದಲ್ಲಿ ಒಬ್ಬ ವೇಶ್ಯೆ ಅದಕ್ಕೆ ಉತ್ತರವನ್ನು ತರುತ್ತಾಳೆ. ಅವಳಾದರೋ ಕಾಳಿದಾಸನ ಬಳಿಯಲ್ಲೇ ಉತ್ತರ ಹೇಳಿಸಿಕೊಂಡವಳು. ಉತ್ತರವೆಂದರೆ
"ಕಮಲೇ ಕಮಲೋತ್ಪತ್ತಿ: ಶ್ರೂಯತೇ ನ ಚ ದೃಶ್ಯತೇ
ಬಾಲೇ ತವ ಮುಖಾಂಭೋಜೇ ದೃಶ್ಯಾಮಿಂದೀವರ ದ್ವಯಂ"
ಅರ್ಥ- ಕಮಲದಲ್ಲಿ ಕಮಲ ಹುಟ್ಟುವುದು ಎಲ್ಲಿಯೂ ಕೇಳಲ್ಪಟ್ಟಿಲ್ಲ, ಯಾರಿಂದಲೂ ನೋಡಲ್ಪಟ್ಟಿಲ್ಲ. ಆದರೆ ಎಲೈ ಬಾಲೇ ನಿನ್ನ ಮುಖವೆಂಬ ಕಮಲದಲ್ಲಿ ಈ ಕಣ್ಣುಗಳೆಂಬ ಕಮಲಗಳೆರಡು  ಕಾಣುತ್ತಿವೆಯಲ್ಲ! ಎಂದು
ಇಂತಹ ಕಲ್ಪನೆಗಳೂ ವರ್ಣನೆಗಳೂ ಕಾಲಿದಾಸನಿಗಲ್ಲದೆ ಇನ್ನಾರಿಗೆ ಬರಲು ಸಾಧ್ಯ? ಅದರಲ್ಲಿ "ಬಾಲೆ" ಎಂಬ ಶಬ್ದವನ್ನು ಕೇಳಿ ಆ ಪಂಡಿತ ಇದನ್ನು ಪುರುಷನೋರ್ವನು ರಚಿಸಿದ್ದಾನೆ ಎಂದು ಗುರುತಿಸುತ್ತಾನೆ. ಅವಳು ತಾನು ತನ್ನ ಸಖಿಯನ್ನು ನೋಡಿ ಹೇಳಿದ್ದೇನೆ ಎಂದು ವಾದ ಮಾಡುತ್ತಾಳೆ. ಅವಳ ಮನೆಗೆ ಹೋಗಿ ನೋಡಿದಾಗ ಕಾಳಿದಾಸನಿಗೆ ವಿಷ ಹಾಕಿ ಕೊಂಡಿದ್ದು ತಿಳಿಯುತ್ತದೆ. ಭೋಜ ರಾಜ ಕೊನೆಗೆ ಅವನ ದೇಹವನ್ನು ತಂದು ದೇವಿ ಸರಸ್ವತಿಯಲ್ಲಿ ಬೇಡಿ ಬದುಕಿಸಿಕೊಲ್ಲುತ್ತಾನೆ. ಇತ್ಯಾದಿಯಾಗಿ ಕಥೆ ಸಾಗುತ್ತದೆ.
  ಈ ಸಮಸ್ಯೆಗೆ ನಾನೊಂದು ಉತ್ತರ ಬರೆದಿದ್ದೇನೆ. ಅದೆಂದರೆ:-
ಕಮಲೇ ಕಮಲೋತ್ಪತ್ತಿ: ಭೂಯತೇ ನ ತು ಸಂಶಯಃ
ಯತಸ್ತದೀಶ್ವರೇಚ್ಚೈವ ಪ್ರಬಲಾಸ್ತಿ ನು ಭೂತಲೇ"
ಅಂದರೆ- ಕಮಲದಲ್ಲಿ ಕಮಲ ಹುಟ್ಟುವುದರಲ್ಲಿ ಯಾವ ಸಂಶಯವೂ ಇಲ್ಲ ಏಕೆಂದರೆ ಈ ಭೂಮಿಯಲ್ಲಿ ಆ ಈಶ್ವರನ ಇಚ್ಛೆಯೇ ಪ್ರಬಲವಾದದ್ದು ಅಲ್ಲವೇ? ಎಂದು. ಇದರಲ್ಲಿ ವ್ಯಾಕರಣ ದೋಷಗಳು ಇರಬಹುದು. ಆದರೂ ಒಂದು ಸಮಸ್ಯೆಗೆ ಹಲವಾರು ಉತ್ತರಗಳು ಸಾಧ್ಯವಿದೆ ಎಂಬುದನ್ನು ತಿಳಿಸಲೋಸುಗ ಇದನ್ನು ಇಲ್ಲಿ ಹೇಳಿದೆ. ಶತಾವಧಾನಿ ಆರ್ ಗಣೇಶ್ ಅವರು ಒಮ್ಮೆ ಅವರ ಅವಧಾನದಲ್ಲಿ ಕೀ.ಶೇ.ಲಂಕಾಕೃಷ್ಣ ಮೂರ್ತಿಯವರು ಕೇಳಿದ  "ಶವ ಲೀಲಾಕೃತಿಯೆಂತು ರಮ್ಯಮಲ್ತೆ" ಎಂಬ ಸಮಸ್ಯೆಗೆ ಎಂಟು ರೀತಿಯ ಉತ್ತರಗಳನ್ನು  ಹೇಳಿದ್ದರಂತೆ. ( ೮ ಉತ್ತರಗಳನ್ನು ಹೇಳಲು ಲಂಕಾ ಕೃಷ್ಣಾ ಮೂರ್ತಿಯವರೇ ಆಗ್ರಹಿಸಿದ್ದರಂತೆ) ಅವಧಾನಿಯೋರ್ವನ ಇತಿ ಮಿತಿಗಳನ್ನು ನೋಡಿಕೊಂಡು ಪೃಚ್ಚಕರು  ಕೇಳುತ್ತಾರೆ ಎಂಬುದು ಗಮನೀಯ.

ಇನ್ನು ಹಲವಾರು ಸಮಸ್ಯಾ ಪೂರಣದ ಪದ್ಯಗಳು ಲಭ್ಯವಿದ್ದರೂ ಅದನ್ನೆಲ್ಲ ಒಂದೇ ಬಾರಿಗೆ ಪ್ರಕಟ ಮಾಡಲು ಹೋಗುವುದಿಲ್ಲ. ಏಕೆಂದರೆ  ಎಲ್ಲರೂ "ನೀರಿಳಿಯದ ಗಂಟಲೊಳ್ ಕಡಬಂ ತುರುಕಿದಂತಾಯ್ತು" ಎಂದರೆ ಕಷ್ಟ. ಅಲ್ಲದೇ ಅರ್ಥ ಮಾಡಿಕೊಳ್ಳಬಲ್ಲವರಿಗಾದರೂ ಒಂದೇ ಬಾರಿಗೆ ತುಂಬಾ ದೀರ್ಘವಾದ ವಿವರಗಳನ್ನು ತಂದಿಟ್ಟರೆ 'ಅಜೀರ್ಣ'ವಾಗುವ ಸಾಧ್ಯತೆಗಳಿರುತ್ತವೆ.

ಮಂಗಳವಾರ, ಮಾರ್ಚ್ 1, 2011

ಅವಧಾನ - ಒಂದು ಅದ್ಭುತ ಕಲೆ

ಎಲ್ಲರಿಗೂ ಶಿವರಾತ್ರಿಯ ಶುಭಾಶಯಗಳನ್ನು ತಿಳಿಸುತ್ತಾ ಈ ಲೇಖನ ಪ್ರಾರಂಭಿಸುತ್ತೇನೆ.

    ಅವಧಾನ ಕಲೆ ಒಂದು ರೀತಿಯಲ್ಲಿ ಸರಸ್ವತಿಯ ಆರಾಧನೆ. ಇದರ ಕುರಿತು ಹೇಳಿದರೆ ಹೆಚ್ಚು ಅರ್ಥವಾಗಲಿಕ್ಕಿಲ್ಲ.  ಎಲ್ಲಿಯಾದರೂ ಕಾರ್ಯಕ್ರಮ ನಡೆದಾಗ ಕೂತು ನೋಡಿಯೇ ಆಸ್ವಾದಿಸಬೇಕು.(ನಾನೂ ನೋಡಿಲ್ಲ!!!) ಆದರೆ ಅವಧಾನದ ಕುರಿತು ಒಂದಿಷ್ಟು  ಮಾಹಿತಿ ಗೊತ್ತಿದ್ದರೆ ಅದನ್ನು ಆಸ್ವಾದಿಸಲು ಸುಲಭವಾಗುತ್ತದೆ. ಇಲ್ಲಿ ನನಗೆ ಗೊತ್ತಿರುವ ಅಲ್ಪ ಸ್ವಲ್ಪ ಮಾಹಿತಿ ಸಂಗ್ರಹಿಸಿ ಕೊಡುತ್ತಿದ್ದೇನೆ.
    "ಅವಧಾನ" ಶಬ್ದಶಃ ಅರ್ಥ "ಏಕಾಗ್ರತೆ". ಅದನ್ನೊಂದು ಕಲೆಯನ್ನಾಗಿ ಅಭಿವೃದ್ಧಿ ಪಡಿಸಿದ ಕೀರ್ತಿ ಭಾರತೀಯ ಕವಿ ಪರಂಪರೆಗೆ ಸಲ್ಲಬೇಕು. ಇದು ತೆಲುಗು ಕನ್ನಡ ಹಾಗು ಸಂಸ್ಕೃತದಲ್ಲಿ ಹೆಚ್ಚಾಗಿ ಪ್ರಚಲಿತದಲ್ಲಿದೆ. ಇದರಲ್ಲಿ ಅವಧಾನಿ ಹಾಗು ಪೃಚ್ಚಕ  ಎಂಬ ಎರಡು ವ್ಯಕ್ತಿ ಸೂಚಕ ಶಬ್ದಗಳು ಬಳಸಲ್ಪಡುತ್ತವೆ. ಪೃಚ್ಚಕ  ಎಂದರೆ ಪ್ರಶ್ನೆ ಕೇಳುವವನು. ಅವಧಾನಿ ಎಂದರೆ ಏಕಾಗ್ರಚಿತ್ತನಾಗಿ ಅವನ ಪ್ರಶ್ನೆಗೆ ಉತ್ತರಿಸುವವನು. ಅವಧಾನದಲ್ಲಿ ಹಲವು ವಿಧಗಳುಂಟು. ಯಕ್ಷಗಾನ ಆಧಾರಿತ, ಸಂಗೀತ ಆಧಾರಿತ,ಚಿತ್ರಕಲೆ ಆಧಾರಿತ, ಸಾಹಿತ್ಯಾಧಾರಿತ, ಇತ್ಯಾದಿ. ಅದರಲ್ಲಿ ಪೃಚ್ಚಕರ ಸಂಖ್ಯೆಗನುಗುಣವಾಗಿ  ಅಷ್ಟಾವಧಾನ, ಶತಾವಧಾನ, ಸಹಸ್ರಾವಧಾನ ಎಂದೆಲ್ಲ ಇವೆ.
  ಅಷ್ಟಾವಧಾನವೊಂದರ  ಬಗ್ಗೆ ತಿಳಿದರೆ ಉಳಿದ ಎಲ್ಲದರ ಬಗ್ಗೆಯೂ ತಿಳಿಯುತ್ತದೆ. ಇದರಲ್ಲಿ ಅಷ್ಟ-ಅಂದರೆ ಎಂಟು ಜನ ಪೃಚ್ಚಕರಿರುತ್ತಾರೆ.  ಮೊದಲು ಎಲ್ಲ ಪೃಚ್ಚಕರೂ ಒಬ್ಬರಾದ ನಂತರ ಒಬ್ಬರು ಸರದಿಯಲ್ಲಿ ಅವಧಾನಿಗಳಿಗೆ ವಿವಿಧ ಪ್ರಶ್ನೆಗಳನ್ನು  ಕೇಳುತ್ತಾರೆ. ಎಲ್ಲ ಪ್ರಶ್ನೆಗಳನ್ನೂ ಸರಿಯಾಗಿ ನೆನಪಿನಲ್ಲಿ ಇಟ್ಟುಕೊಂಡು ಅವಧಾನಿಗಳು ನಂತರ ಒಬ್ಬೊಬ್ಬರಿಗೆ ಆಗಿ ಉತ್ತರ ಕೊಡಬೇಕು. ನಾಲ್ಕು ಸಾಲಿನ ಪದ್ಯ ರಚನೆ ಮಾಡಿ ಒಂದೊಂದು ಸುತ್ತಿನಲ್ಲಿ ಒಂದೊಂದು ಸಾಲು (ಪಾದ) ಹೇಳಿ ಕೊನೆಗೆ ಐದನೇ ಸುತ್ತಿನಲ್ಲಿ ಆ ನಾಲ್ಕೂ ಸಾಲುಗಳನ್ನು ಒಟ್ಟುಗೂಡಿಸಿ ಹೇಳಬೇಕು. ಇದಕ್ಕೆ ಧಾರಣ ಎನ್ನುತ್ತಾರೆ. ನೆನಪಿರಲಿ ಅವಧಾನಿಗಳಿಗೆ ಒಂದು ಸಣ್ಣ ಕಾಗದದ ಚೂರನ್ನೂ ಕೊಡುವುದಿಲ್ಲ. ಅವರು ಇವಿಷ್ಟನ್ನೂ ಮನಸ್ಸಿನಲ್ಲೇ ನೆನಪಿಟ್ಟುಕೊಳ್ಳಬೇಕು.
    ಪೃಚ್ಚಕರಲ್ಲಿ ಎರಡು ಪಂಗಡ. ಎಡಪಂಥೀಯ ಮತ್ತು ಬಲಪಂಥೀಯ. ೧.ಬಲಪಂಥೀಯರು- ತಮ್ಮ ಸರದಿ ಬಂದಾಗ ಮಾತ್ರ ಉತ್ತರವನ್ನು ಕೇಳುತ್ತಾರೆ (ಪ್ರಶ್ನೆಗಳು ಪುನರುಚ್ಚರಿಸಲ್ಪಡುವುದಿಲ್ಲ.) ೨.ಎಡಪಂಥೀಯರು- ಅವಧಾನಿಗಳು  ಬಲಪಂಥೀಯರೊಂದಿಗೆ ಸಂಭಾಷಿಸುತ್ತಿರುವಾಗ ಮಧ್ಯದಲ್ಲಿ ಏನಾದರೂ ಪ್ರಶ್ನೆ ಎತ್ತಿ ಕೇಳುತ್ತಿರುತ್ತಾರೆ. ಎಲ್ಲರಿಗೂ  ಮುಕುಟ ಪ್ರಾಯವಾಗಿ ಅಪ್ರಸ್ತುತ ಪ್ರಸಂಗಿ  ಎಂಬೊಬ್ಬ ಪೃಚ್ಚಕರಿರುತ್ತಾರೆ. ಮುಖ್ಯ ಎಡಪಂಥೀಯರಾದ ಇವರು ಯಾವುದೇ ಸಂಧರ್ಭದಲ್ಲಿ ಎಲ್ಲದ್ದಕ್ಕೂ ಹೊರತಾದ 'ಅಪ್ರಸ್ತುತ' ಪ್ರಶ್ನೆಗಳನ್ನು ಕೇಳುತ್ತಾರೆ. ನೋಡುಗರಿಗೆ/ಕೇಳುಗರಿಗೆ ಮನೋರಂಜನೆ ನೀಡಲು ಇವರು ಹಾಸ್ಯಪ್ರಧಾನ ಪ್ರಶ್ನೆಗಳನ್ನೇ ಕೇಳುತ್ತಾರೆ. ಅವಧಾನಿಗಳು ಬೇಸರಿಸಿಕೊಳ್ಳದೆ, ಇವರು ಎಂತಹದೇ ಕಷ್ಟದ ಪ್ರಶ್ನೆ ಕೇಳಿದರೂ  ಹಾಸ್ಯತ್ಮಕವಾಗಿ ಉತ್ತರ ನೀಡಿ ಅವರ ಸಮಸ್ಯೆ ಬಗೆಹರಿಸಬೇಕು.
  ಇನ್ನೊಬ್ಬ ಪೃಚ್ಚಕ ಒಂದು ಸಂಧರ್ಭವನ್ನು ಕೊಟ್ಟು (ಬಹುಶಃ ಛಂದಸ್ಸನ್ನೂ   ಕೊಟ್ಟು) ಪದ್ಯ ರಚಿಸಿಕೊಳ್ಳಲು ಹೇಳುತ್ತಾರೆ. ಆಮೇಲೆ ಅವಧಾನಿಗಳು ಬೇರೆಯವರ ಪ್ರಶ್ನೆಗೆ ಉತ್ತರಿಸುತ್ತಿರುವಾಗ ಮಧ್ಯದಲ್ಲಿ ಯಾವುದೊ ಒಂದು ಸಾಲಿನ ಯಾವುದಾದರೂ ಒಂದು ಅಕ್ಷರ ಕೇಳುತ್ತಾರೆ. ಉದಾಹರಣೆಗೆ; ಅನುಷ್ಟುಪ್ ಛಂದಸ್ಸಿನಲ್ಲಿ ೩೨ ಅಕ್ಷರಗಳಿರುತ್ತವೆ. ಅವಧಾನಿಗಳು ಏನೋ ಒಂದು ಉತ್ತರ ನೀಡುವಾಗ ಇವರು "ನಾಲ್ಕನೇ ಸಾಲಿನ ಮೂರನೇ ಅಕ್ಷರ ಯಾವುದು?" ಎಂದು  ಕೇಳಬಹುದು. ಅದಕ್ಕೆ ಅವಧಾನಿಗಳು ಸರಿಯಾದ ಉತ್ತರ ಹೇಳಿ ಮುಂದುವರಿಯಬೇಕು. ಕೊನೆಯಲ್ಲಿ ಎಲ್ಲಾ ಸಾಲಿನ ಎಲ್ಲ ಅಕ್ಷರಗಳನ್ನು ಕೇಳಿ ಆದ ಮೇಲೆ, ಧಾರಣ ಮಾಡುವಾಗ ಸಂಪೂರ್ಣ ಶ್ಲೋಕವನ್ನು ಯಥಾವತ್ತಾಗಿ ಹೇಳಿ ವಿವರಿಸಬೇಕು.
  ಇನ್ನೊಬ್ಬ "ಸಂಖ್ಯಾ ಬಂಧ" ಪೃಚ್ಚಕ. ಇದು ಹೇಗೆಂದರೆ ಪೃಚ್ಚಕ ಸಂಖ್ಯಾ ಬಂಧವೊಂದನ್ನು ಕೇಳುತ್ತಾನೆ. ಉದಾ:೩X೩ಚೌಕದಲ್ಲಿ ಸಂಖ್ಯೆಗಳನ್ನು ತುಂಬಬೇಕು. ಹೇಗೆ ಕೂಡಿಸಿದರೂ ಮೊತ್ತ ೧೫ ಬರಬೇಕು. ಎಂದು. ಆಗ ಅವಧಾನಿಗಳು ಮನಸ್ಸಿನಲ್ಲೇ  ಬಂಧ ರಚಿಸಿಕೊಳ್ಳಬೇಕು.

ಅವರು ಆಗಾಗ ಇತರರ ಪ್ರಶ್ನೆಗಳ ಮಧ್ಯೆ ಒಂದೊಂದೇ ಸಂಖ್ಯೆಯನ್ನು ಕೇಳುತ್ತಾರೆ.  ಮೊದಲ ಸಾಲಿನ ಮೂರನೇ ಅಕ್ಷರ ಯಾವುದು? ಎಂದು ಕೇಳಿದಾಗ ಅವಧಾನಿಗಳು 6  ಎಂದು ಉತ್ತರಿಸಬೇಕು. ಇದೆ ರೀತಿ ಅಂತ್ಯದೊಳಗೆ ಅವರು ಎಲ್ಲಾ ಸಂಖ್ಯೆಗಳನ್ನೂ ಕೇಳಿ ಮುಗಿಸುತ್ತಾರೆ. ಧಾರಣ ಮಾಡುವಾಗ ಅವಧಾನಿಗಳು ಸಂಪೂರ್ಣ ಬಂಧವನ್ನು ಇನ್ನೊಮ್ಮೆ ಹೇಳಬೇಕು.
 ಕೆಲವರು ಇದು ಕಷ್ಟಕರ ಎಂದು ಸಂಖ್ಯೆ ಹಾಗೂ ಶಬ್ದಗಳನ್ನು ಜೋಡಿಸುತ್ತಾರೆ. ಉದಾ: ೧.ಹುಲಿ. ೨.ಆನೆ. ೩.ಸಿಂಹ. ೪.ಶಾರ್ದೂಲ. ಇತ್ಯಾದಿ.. ಹದಿನೈದರಿಂದ ಇಪ್ಪತ್ತು ಇರಬಹುದು. ಒಂದು ನಿಮಿಷ ನೋಡಿಕೊಳ್ಳಲು ಅವಕಾಶ ಕೊಟ್ಟು ಆಗಾಗ ಒಂದೊಂದೇ ಸಂಖ್ಯೆ/ಶಬ್ದ ಕೇಳುತ್ತಾರೆ. ತತ್ಸಮಾನ ಶಬ್ದ/ಸಂಖ್ಯೆಯನ್ನು ಅವಧಾನಿಗಳು ಹೇಳಬೇಕು.
ಉದಾ: ಪೃಚ್ಚಕ - ೪ ? ಅವಧಾನಿ -ಶಾರ್ದೂಲ.
         ಪೃಚ್ಚಕ -  ಹುಲಿ? ಅವಧಾನಿ - ೧.. ಹೀಗೆ..
  ಇನ್ನು ಬಲ ಪಂಥೀಯ ಪೃಚ್ಚಕ ರ ಬಗ್ಗೆ ಹೇಳ ಹೊರಟರೆ,
ಆಶುಕವಿತ್ವ- ಇದರಲ್ಲಿ ಪೃಚ್ಚಕರು  ಒಂದು ಘಟನೆ ಕೊಟ್ಟು ಪದ್ಯ ರಚಿಸಲು ಹೇಳುತ್ತಾರೆ. ಅವಧಾನಿಗಳು ಇದೇನೂ ಕಷ್ಟದ್ದಲ್ಲ ಎಂದು ಇದನ್ನು ಕೈಬಿಟ್ಟು ಉಳಿದ ವಿಭಿನ್ನ ನಾಲ್ಕು ಪೃಚ್ಚಕರನ್ನು ಸಂಯೋಜಿಸಿ ಕೊಳ್ಳುತ್ತಾರೆ.
"ನ್ಯಸ್ತಾಕ್ಷರಿ"- ಅಂದರೆ ಪ್ರತಿ ಸಾಲಿಗೂ ಒಂದೊಂದು ಅಕ್ಷರ ಕೊಡುತ್ತಾರೆ.ಮತ್ತೂ ಅದರ ಸ್ಥಾನವನ್ನೂ, ಸಂದರ್ಭವನ್ನೂ ಕೊಡುತ್ತಾರೆ.
ಸರಳ ಉದಾಹರಣೆ: ಮೊದಲ ಸಾಲು-೭ನೆಯ ಅಕ್ಷರ "ನ್ನ"
                            ಎರಡನೇ ಸಾಲು-೩ನೆಯ ಅಕ್ಷರ "ಪ್ಪೆ"
                            ಮೂರನೇ ಸಾಲು-೨ನೆಯ ಅಕ್ಷರ "ಸ್ತ್ಯ"
                            ನಾಲ್ಕನೇ ಸಾಲು-೧ನೆಯ ಅಕ್ಷರ "ಗೌ"
ಸಂದರ್ಭ: ರಾವಣ ಸೀತೆಯ ಮನವೊಲಿಸುವುದಕ್ಕೆ ಹೇಳುವುದು.
ಛಂದಸ್ಸು- ಅನುಷ್ಟುಪ್ ಛಂದಸ್ಸು( ನನ್ನ ಅನುಕೂಲಕ್ಕೆ ತೆಗೆದುಕೊಂಡಿದ್ದು.)

ಮದುವೆಯಾಗೆನ್ನನ್ನೇ
ನೀನಪ್ಪೆ ರಾಣಿ ಲಂಕೆಗೇ
ಪೌಳಸ್ತ್ಯ ಪತ್ನಿ ಯೆಂಬಂಥ
ಗೌರವವನ ಹೊಂದುವೆ.
  ಅವಧಾನಿಗಳು ಮೊದಲ ಸುತ್ತಿನಲ್ಲಿ ಮೊದಲ ಸಾಲನ್ನು ಮಾತ್ರ ಹೇಳಿ ಉಳಿದವರಿಗೆಲ್ಲ ಮೊದಲ ಸಾಲಿನ ಉತ್ತರ ಕೊಟ್ಟ ನಂತರ ಇವರಿಗೆ ಪುನಃ ಎರಡನೇ ಸಾಲನ್ನು ಹೇಳುತ್ತಾರೆ. ಪ್ರಶ್ನೆಯನ್ನಾಗಲೀ ಅಕ್ಷರವನ್ನಾಗಲೀ ಪೃಚ್ಚಕರು ಪುನರಾವರ್ತಿಸುವುದಿಲ್ಲ ಎಂಬುದು ನೆನಪಿರಲಿ.
  ಇನ್ನೊಬ್ಬ ಪೃಚ್ಚಕರದು ಸಮಸ್ಯಾ ಪೂರ್ತಿ- ಇದರಲ್ಲಿ ಪದ್ಯದ ಕೊನೆ ಸಾಲನ್ನು ಕೊಡುತ್ತಾರೆ. ಅವಧಾನಿಗಳು ಉಳಿದ ಮೂರು ಸಾಲುಗಳನ್ನು ರಚಿಸಿ ಅರ್ಥವತ್ತಾದ ಪದ್ಯ ರಚನೆ ಮಾಡಿ ಉತ್ತರ ನೀಡಬೇಕು. ಇಲ್ಲಿರುವ ಪ್ರಶ್ನೆಗಳಾದರೋ ತೀರ ಅಸಂಬದ್ಧವಾಗಿರುತ್ತದೆ. ಶತಾವಧಾನಿ ಆರ್ ಗಣೇಶ್ ಅವರು ಪ್ರತಿವಾರ ಉದಯವಾಣಿ ಪತ್ರಿಕೆಯ ಸಾಪ್ತಾಹಿಕದಲ್ಲಿ "ಚಮತ್ಕಾರ ಕವಿತ್ವ" ಎಂಬ ಅಂಕಣವನ್ನು ಬರೆಯುತ್ತಾರೆ. ಅಲ್ಲಿ ಇದಕ್ಕೆಲ್ಲ ಉತ್ತಮ ಉದಾಹರಣೆಗಳು ಸಿಗುತ್ತವೆ.
ಹಿಂದೊಮ್ಮೆ ಅವರೇ ಬರೆದದ್ದು-" ಜಾರ ಪರೀಮಳಕೆ ಸಾಧ್ವಿ ಸೋಲ್ತುದು ಸಾಜಂ" ಎಂದು ಪ್ರಶ್ನೆ.(ಅರ್ಥ: ಸಾಧ್ವಿಯಾದವಳು ಜಾರ ಪರಿಮಳಕ್ಕೆ ಸೋಲುವುದು ಸಹಜ) ಅದಕ್ಕೆ ಉತ್ತರವಾಗಿ:-
ಸೀರೆಯೋ ಕೌಶೇಯಂಗಳ/ಹಾರಮೋ ಹೀರ ಪ್ರಕಾಶಮಿಂತಿರ್ದು ಕಂ/
ಪೇರಿಪ ಪೊಸ ಪುನುಗಿನ ಮಾರ್/ಜಾರ ಪರೀಮಳಕೆ ಸಾಧ್ವಿ ಸೋಲ್ತುದು ಸಾಜಂ//
"ಕಂಪೇರಿಸುವ ಹೊಸ ಪುನುಗಿನ (ಕೇದಿಗೆಯ) ಮಾರ್ಜಾರ ( ಬೆಕ್ಕು-ದಳ)ಪರಿಮಳಕ್ಕೆ ಸಾದ್ವಿ ಸೋಲುವುದು ಸಹಜ." ಎಂದು ಬಗೆಹರಿಸಿದ್ದಾರೆ.
 ಈ ರೀತಿ ಒಂದೊಂದು ಸಾಲನ್ನೂ ಒಂದೊಂದು ಸುತ್ತಿನಲ್ಲಿ ಹೇಳಿ ಧಾರಣದಲ್ಲಿ ಒಟ್ಟಿಗೆ ಹೇಳಬೇಕು.
ಇನ್ನೊಬ್ಬ ಪೃಚ್ಚಕರು ದತ್ತಪದಿ. ಪ್ರತಿ ಸಾಲಿಗೂ ಇಂತಹ ಶಬ್ದ ಇರಬೇಕೆಂದು ನಾಲ್ಕು ಶಬ್ದ ಕೊಡುತ್ತಾರೆ. ಸಂದರ್ಭವನ್ನೂ ಕೊಡುತ್ತಾರೆ. ಅವರು ಕೊಡುವ ಶಬ್ದ ಮತ್ತು ಸಂದರ್ಭಕ್ಕೆ ಯಾವ ಸಂಬಂಧವೋ ಇರುವುದಿಲ್ಲ. ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಶತಾವಧಾನಿ ಆರ್ ಗಣೇಶ ಅವರ ಅವಧಾನದಲ್ಲಿ "ಬಜಾಜ್, ಕವಾಸಾಕಿ, ಸುಜುಕಿ", ಇತ್ಯಾದಿ ಗಾಡಿಗಳ ಹೆಸರನ್ನು ಕೇಳಿದ್ದರಂತೆ. ಶಿವಮೊಗ್ಗದಲ್ಲಿ ಒಮ್ಮೆ "ಕುವೆಂಪು, ನಾಡಿಸೋಜ," ಎಂಬ ಶಬ್ದಗಳನ್ನು ಕೇಳಿದ್ದರಂತೆ. ೨೭-೨-೨೦೧೧ರ ಉದಯವಾಣಿಯಲ್ಲಿ ಅವರೇ ಬರೆಯುವ 'ಚಮತ್ಕಾರಿ ಕವಿತ್ವ' ಅಂಕಣದಲ್ಲಿ ' ಪಟಾಕಿ, ಮತಾಪು, ಗರ್ನಾಲು, ಬರ್ನಾಲು, ಈ ನಾಲ್ಕು ಶಬ್ದಗಳನ್ನು ನಾಲ್ಕು ಸಾಲಿನಲ್ಲಿರಿಸಿ ಶ್ರೀ ಕೃಷ್ಣನ ಸ್ತುತಿಯನ್ನು ಬರೆಯಲು ಕೇಳಿದ್ದರೆಂದು ತಿಳಿಸಿದ್ದಾರೆ. ನನಗೆ ಒಮ್ಮೆ ಹೀಗೇ ನನ್ನ ಮಿತ್ರ ಸುನೀಲ ' ಬ್ಲೇಡು, ಶಾರ್ಪನರ್, ಪೆನ್, ಪೆನ್ಸಿಲ್, ಎಂಬ ಶಬ್ದಗಳನ್ನು ಕೊಟ್ಟು ಯುದ್ಧದಲ್ಲಿ ಸೋತವರು ದುಃಖಿಸುವ ಸಂದರ್ಭ ಎಂದು ಕೊಟ್ಟಿದ್ದ, ಕೊನೆಗೆ ನನ್ನ ತಿಳುವಳಿಕೆಯ ಮಟ್ಟಕ್ಕೆ ನಾನು ರಚಿಸಬೇಕಾದ ಕಾರಣ ಯುದ್ಧದಲ್ಲಿ  ಗೆದ್ದ ರಾಜ(ಬೇಕಾದರೆ ಅಶೋಕ ಎಂದುಕೊಳ್ಳಬಹುದು.) ಸೋತವರ, ಸತ್ತವರನ್ನು ನೋಡಿ ದುಃಖಿಸುವ ರೀಯಿಯಲ್ಲಿ ರಚಿಸುತ್ತೇನೆ ಎಂದೆ. ಅದರಲ್ಲಿ ಬ್ಲೇಡು ಕಷ್ಟಕರವಾದ ಕಾರಣ ಅದನ್ನೂ ಬದಲಿಸಿ "ಭಾರತ"ಎಂದು ಕೊಟ್ಟ. (ಶತಾವಧಾನಿ ಆರ್ ಗಣೇಶ್ ಅವರ ಬಳಿ ಕೇಳಿದಾಗ-ಮೂರ್ಧನ್ಯವ್ಯಂಜನ ಗಳಲ್ಲಿ ಇರುವ ಶಬ್ದಗಳನ್ನು ಬಳಸಿ ಮಾಡುವುದು ಕಷ್ಟ' ಎಂದರು)
ಅದಕ್ಕೆ ಪರಿಹಾರವಾಗಿ 'ಶಾರ್ದೂಲ ವಿಕ್ರೀಡಿತ' ಛಂದಸ್ಸಿನಲ್ಲಿ ರಚನೆ ಮಾಡಿದೆ.
   ಭೂಮೀಶಾರ್ಪನ ರಾಜ್ಯವನ್ನು ಗೆಲುತಾ ಕೊಂಡಿದ್ದು ನಾನೇನನು?
   ಹೊಮಜ್ವಾಲೆಯ ರೂಪ ಕೋಪವಿನಿತಿಂಪೆನ್ನಲ್ಕೆ ತಪ್ಪಲ್ತ ದೇಂ?
   ಭೂಮಿಜರ್ ಗೆಲಿಪೆನ್ ಸಿಲಾಹೃದಯದಲ್ ಸಾಧ್ಯಲ್ತು ನಾನೊಪ್ಪುವೆನ್
   ಭೂಮೀ ಭಾರತವನ್ನಹಿಂಸೆಯಿಂದಾ ಗೆಲ್ಲುತ್ತ ನಾನಾಳುವೆನ್.
ಹೀಗೆ ಇಂತಹ ಶಬ್ದಚ್ಚಲ ರೀತಿಯನ್ನು ನೋಡಿದಾಗ ಅವಧಾನಿಗಳ ಶಬ್ದಜ್ಞಾನ ತಿಳಿಯಬಹುದು.
ಇನ್ನೊಬ್ಬ ಪೃಚ್ಚಕರು ನಿಷೇಧಾಕ್ಷರಿಗಳು. ಇವರು ಒಂದು ಘಟನೆಯ ಬಗ್ಗೆ ಪದ್ಯ ರಚಿಸಲು ಹೇಳಿ ಒಂದೊಂದೇ ಅಕ್ಷರವನ್ನು ಅವಧಾನಿಗಳಿಂದ ಹೇಳಿಸುತ್ತಾರೆ. ಮೊದಲ ಅಕ್ಷರವನ್ನು ಅವಧಾನಿಗಳು ಹೇಳುತ್ತಿದ್ದಂತೆ ಎರಡನೇ ಅಕ್ಷರ ಇಂತಹದ್ದು ಬರಬಾರದೆಂದು ನಿಷೇಧಿಸುತ್ತಾರೆ. ಉದಾಹರಣೆಗೆ- ರಾಮ ವನವಾಸಕ್ಕೆ ಹೋದದ್ದು ಘಟನೆ, ಅವಧಾನಿಗಳು ಮೊದಲ ಅಕ್ಷರ "ರಾ" ಎಂದರೆ ಪೃಚ್ಚಕರು "ಮುಂದಿನ ಅಕ್ಷರ "ಮ" ಬರಬಾರದು" ಎಂದು ನಿಷೇಧ ಹಾಕುತ್ತಾರೆ. ಅವಧಾನಿಗಳು 'ಮ' ಅಕ್ಷರ ಬಿಟ್ಟು ಬೇರೆ ಯಾವುದನ್ನಾದರೂ ತರಬಹುದು, 'ರಾಮ' ಬದಲು 'ರಾಘವ' ಎಂದು ತರೋಣ ಎಂದು ಅವಧಾನಿಗಳು 'ಘ' ಎಂದು ಮುಂದಿನ ಅಕ್ಷರ ಹೇಳಿದರೆ  ಪೃಚ್ಚಕರು 'ವ'ಕ್ಕೆ ನಿಷೇಧ ಹಾಕಬಹುದು. ಆಗ ಅವಧಾನಿಗಳು ತೋಡಕಿನಲ್ಲಿ ಸಿಕ್ಕಿಕೊಂಡಂತೆಯೆ! ಅವಧಾನಿಗಳು ಒಮ್ಮೆ ಹೇಳಿದ ಅಕ್ಷರವನ್ನು ಬದಲಾಯಿಸಲು ಅವಕಾಶವಿಲ್ಲ. ಈ ರೀತಿ ತೊಡಕಿನಲ್ಲಿ ಸಿಕ್ಕದೆ ಒಂದೊಂದು ಸಾರಿ ಒಂದೊಂದು ಸಾಲನ್ನು ಹೇಳಿ ಕೊನೆಯಲ್ಲಿ ಇಡೀ ಶ್ಲೋಕವನ್ನು ಧಾರಣೆ ಮಾಡಬೇಕು. ಹೀಗೆ ಶಬ್ದಗಳ ಸಂಗ್ರಹ ಎಷ್ಟು ಹೊಂದಿದ್ದರೆ ಅವಧಾನಿಯಾಗಬಹುದು ಎಂದು ಒಮ್ಮೆ ಯೋಚಿಸಿ.
  ಈ  ಪೃಚ್ಚಕರೆಲ್ಲರ ಪ್ರಶ್ನೆಗೆ ಉತ್ತರ ಕೊಡುತ್ತಿರುವಾಗಲೇ ಮಧ್ಯೆ ಮಧ್ಯೆ ಅಪ್ರಸ್ತುತ ಪ್ರಸಂಗಿಗಳು ಸಂಖ್ಯಾಬಂಧಿ,ಇವರೆಲ್ಲ ಅವಧಾನಿಗಳ ಏಕಾಗ್ರತೆಗೆ ಭಂಗ ತರುತ್ತಲೇ  ಇರುತ್ತಾರೆ. ಇದರ ಮಧ್ಯೆ "ಘಂಟಾ ಭಾಜಕ"ಎಂಬೊಬ್ಬರು ಆಗಾಗ ಘಂಟೆಯನ್ನು 'ಠಂ' ಎಂದು ಬಡಿದು ಅವರ ಪಾಡಿಗೆ ಸುಮ್ಮನಿರುತ್ತಾರೆ. ಎಲ್ಲ ಸುತ್ತುಗಳೂ ಮುಗಿದ ನಂತರ ಅವಧಾನಿಗಳು ಅವರು ಬಡಿದ ಘಂಟೆಯ ಲೆಕ್ಕವನ್ನೂ ತಿಳಿಸಬೇಕು. ಕೆಲವೊಮ್ಮೆ ಘಂಟಾ ಭಾಜಕರಿಗೆ ಬದಲು,  ಮಹಾಕಾವ್ಯದ ಶ್ಲೋಕವೊಂದನ್ನು ಉದ್ಧರಿಸಿ ಅದು ಯಾರು ಯಾರಿಗೆ ಹೇಳಿದ್ದು, ಯಾವ ಕಾವ್ಯದ್ದು ಎಂದೆಲ್ಲ ಕೇಳುತ್ತಾರೆ. ಇದಕ್ಕೆ ಸೇರ್ಪಡೆಯಾಗಿ 'ಬಂಧ'ಗಳಲ್ಲಿ ಪದ್ಯ ರಚಿಸಲೂ ಕೇಳುತ್ತಾರೆ. ಅವಧಾನಿಗಳು ಬಂಧಗಳ ಬಗ್ಗೆಯೂ ತಿಳಿದುಕೊಂಡಿರಬೇಕು. ಅದರಲ್ಲಿ ಪದ್ಯ ರಚಿಸುವ ಸಾಮರ್ಥ್ಯ ಇರಬೇಕು. ಅವಧಾನಗಳಲ್ಲಿ ಬಂಧಗಳನ್ನು ಪರಿಚಯಿಸಿದವರು ಶತಾವಧಾನಿ ಆರ್ ಗಣೇಶ್ ಅವರೇ ಎಂದು ಕೇಳಿದ್ದೇನೆ. ಈ ಎಲ್ಲ  ಪೃಚ್ಚಕರ ಪ್ರಶ್ನೆಗಳಿಗೆ ಸಮರ್ಥವಾಗಿ ಉತ್ತರ ನೀಡಿ ಧಾರಣೆ ಮಾಡಿದರೆ ಅವರನ್ನು "ಅಷ್ಟಾವಧಾನಿಗಳು"  ಎನ್ನುತ್ತಾರೆ.
   ತ್ರಿಗುಣಿತ ಅಷ್ಟಾವಧಾನ ;-  ಪೃಚ್ಚಕರ ಮೂರು ಇಂತಹ ಗುಂಪುಗಳನ್ನು ಇಟ್ಟುಕೊಂಡು ಅಂದರೆ 24 ಪೃಚ್ಚಕರನ್ನು ಇಟ್ಟುಕೊಂಡು ಅವಧಾನ ಮಾಡುವುದು, ಇದು ಮೂರು ಅಷ್ಟಾವಧಾನಕ್ಕೆ ಸಮ.
ಶತಾವಧಾನ ಎಂದರೆ ಇಂತಹ  ಪೃಚ್ಚಕರು ನೂರು ಜನ. ಒಂದು ಇಪ್ಪತ್ತೈದು ದತ್ತಪದಿ ಒಂದು ಇಪ್ಪತ್ತೈದು ನ್ಯಸ್ತಾಕ್ಷರಿ, ಒಂದು ಇಪ್ಪತ್ತೈದು ಸಮಸ್ಯಾ ಪೂರಣ ಇವೆಲ್ಲ ಇರುತ್ತವೆ. ಅವರೆಲ್ಲರಿಗೂ ಉತ್ತರ ನೀಡಿ ಧಾರಣೆ ಮಾಡಿದರೆ ಅವರನ್ನು ಶತಾವಧಾನಿಗಳು ಎಂದು ಕರೆಯಬಹುದು.
ಸಹಸ್ರಾವಧಾನ ಎಂದರೆ ಹೀಗೆ ಒಂದು ಸಾವಿರ ಜನ ಪೃಚ್ಚಕರಿರುತ್ತಾರೆ.
multiple concentration ಎನ್ನಬಹುದಾದಂತಹ ಇದರಲ್ಲಿ ಮನುಷ್ಯನ ಏಕಾಗ್ರತಾ ಸಾಮರ್ಥ್ಯ ಗೊತ್ತಾಗುತ್ತದೆ. ಅಷ್ಟಾವಧಾನಿಗಳು ಬಹಳಷ್ಟು ಜನ ಇದ್ದರಾದರೂ ಉಳಿದ ಅವಧಾನಿಗಳು ತುಂಬಾ ವಿರಳ. ನನಗೆ ತಿಳಿದವರು ಶತಾವಧಾನಿ ಆರ್ ಗಣೇಶ್ ಹಾಗೂ ಸಹಸ್ರಾವಧಾನಿ ಗರಿಕಪಾಟಿ ನರಸಿಂಹ ರಾವ್  . ಗಣೇಶ್ ಅವರು ಸುಮಾರು ೮೦೦ ಕ್ಕೂ ಹೆಚ್ಚು  ಅಷ್ಟಾವಧಾನ ನಡೆಸಿಕೊಟ್ಟಿದ್ದಾರೆ ಎಂದು ಕೇಳಿದ್ದೇನೆ. ಅಷ್ಟಾವಧಾನ ಮೂರು ಘಂಟೆ ನಡೆದರೆ ಶತಾವಧಾನ ಮೂರು ದಿನ ನಡೆಯುತ್ತದೆ. ಸಹಸ್ರಾವಧಾನ ಮೂವತ್ತು ದಿನ ಅಂದರೆ ಒಂದು ತಿಂಗಳ ಕಾಲ ನಡೆಯುತ್ತದೆ.
  ಅವಧಾನ ಕಲೆ ಎಂಬ ಶತಾವಧಾನಿ ಆರ್ ಗಣೇಶ್ ಅವರ ಪುಸ್ತಕ ಓದಿದರೆ ಇದರ ಬಗ್ಗೆ ಮಾಹಿತಿ ಇನ್ನು ಹೆಚ್ಚಾಗಿ ಸಿಗುತ್ತದೆ (ನಾನೂ ಓದಿಲ್ಲ!!!  ಕೇಳಿ ತಿಳಿದಷ್ಟನ್ನು ಇಲ್ಲಿ ತಿಳಿಸಿದ್ದೇನೆ.) ಅಲ್ಲದೆ ಚಮತ್ಕಾರ ಕವಿತ್ವ ಎಂಬ ಅವರ ಅಂಕಣ ತುಂಬಾ ಚೆನ್ನಾಗಿರುತ್ತದೆ.( ಇದನ್ನು ತಪ್ಪದೆ ಓದುತ್ತೇನೆ:-)) ಸಾಧ್ಯವಾದರೆ ಅವಧಾನ ಕಾರ್ಯಕ್ರಮವನ್ನು ಕೂತು ಆಸ್ವಾದಿಸಬೇಕು. ಅದಕ್ಕೆ ಈ ಮಾಹಿತಿ ಉಪಯೋಗವಾಗುತ್ತದೆಯೆಂದು ನನ್ನ ನಂಬಿಕೆ. (ಒಂದು ಮರೆತ ವಿಚಾರ :- ನನಗೆ ಸಂಪೂರ್ಣವಾಗಿ ಅವಧಾನದ ಬಗ್ಗೆ ಮಾಹಿತಿ ಕೊಟ್ಟಿದ್ದು ಮಿತ್ರ ವಿನಾಯಕ ಭಟ್ಟ ಓಡಲ ಮನೆ )
   ಇನ್ನಷ್ಟು ಸ್ವಾರಸ್ಯಕರ ಪದ್ಯ, ಕಥೆ, ಚಮತ್ಕಾರಿ ಕವಿತೆ ಎಲ್ಲವನ್ನೂ "ಕಥಾಕಾಲ" ಹೊತ್ತು ತರುತ್ತದೆ.
ಇಲ್ಲಿರುವ ಮಾಹಿತಿಯಲ್ಲಿ ದೋಷವೇನಾದರೂ ಇದ್ದರೆ ಗೊತ್ತಿದ್ದವರು ದಯವಿಟ್ಟು ತಿಳಿಸಿರಿ. ನಿಮ್ಮ ಅನಿಸಿಕೆಗಳನ್ನು ತಪ್ಪದೇ ಬರೆಯಿರಿ. ಲೇಖನದ ಮೌಲ್ಯವರ್ಧನೆಗೆ ಹಾಗೂ ನನ್ನ ಬುದ್ಧಿ ವರ್ಧನೆಗೆ ಅದು ತುಂಬಾ ಅವಶ್ಯಕ.
ನಿಮ್ಮ
ಗಣೇಶ ಭಟ್ಟ ಕೊಪ್ಪಲತೋಟ.