Powered By Blogger

ಶುಕ್ರವಾರ, ನವೆಂಬರ್ 18, 2011

ನಮ್ಮ ಪ್ರಾಥಮಿಕ ಶಾಲಾ ಗುರುಗಳಾದ ಶ್ರೀ ಕೆ.ಪಿ ಹೆಗಡೆಯವರ ನೆನಪಿನಲ್ಲಿ...

    ಇತ್ತೀಚೆಗೆ ನಮ್ಮ ಆತ್ಮೀಯ ಗುರುಗಳಾದ ಶ್ರೀ ಕೆ.ಪಿ ಹೆಗಡೆಯವರು ನಿಧನರಾದರೆಂಬ ವಿಷಯ ಕೇಳಿ ಬಹಳ ಖೇದವಾಯಿತು. ನಾವೆಲ್ಲ ಈವರೆಗೆ ಕಲಿತ ವಿದ್ಯೆಗಳಿಗೆಲ್ಲ ತಳಹದಿಯಾಗಿ ಅವರು ಕಲಿಸಿದ ಆ ಪ್ರಾಥಮಿಕ ಶಾಲಾ ಶಿಕ್ಷಣದ ಮಹತ್ವ ನಮಗೆ ಆಗ ಗೊತ್ತಿರಲಿಲ್ಲ. ಬಹುಶಃ ಈಗ ಅದು ಗೊತ್ತಾಗುತ್ತಿದೆ. ತಳಹದಿ ಗಟ್ಟಿಯಾಗಿದ್ದರೆ ಅದರ ಮೇಲೆ ಎಂತಹ ಬೃಹತ್ ಕಟ್ಟಡವನ್ನು ಬೇಕಾದರೂ ಕಟ್ಟಬಹುದೆಂದು ಲೋಕೋಕ್ತಿ. ಗುರವಃ ಬಹವಃ ಸನ್ತಿ ಶಿಷ್ಯವಿತ್ತಾಪಹಾರಕಾಃ| ಗುರವಃ ವಿರಲಾಃ ಸನ್ತಿ ಶಿಷ್ಯ ಚಿತ್ತಾಪಹಾರಕಾಃ || ಎಂಬಂತೆ ಅವರು ನಮ್ಮಲ್ಲರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿದ್ದಾರೆ.
   ಬಹುಕಾಲದ ಅನಾರೋಗ್ಯಕ್ಕೆ ತುತ್ತಾಗಿ ಅಕಾಲದಲ್ಲಿ ನಮ್ಮನ್ನಗಲಿದ ಅವರ ಆತ್ಮಕ್ಕೆ ದೇವರು  ಚಿರಶಾಂತಿಯನ್ನು ದಯಪಾಲಿಸಲಿ ಎಂದು ಆಶಿಸುತ್ತೇನೆ.

ಅವರ ನೆನಪಿನಲ್ಲಿ ಕೆಲವು ಕವಿತೆಗಳು..

ಕಂ||
ಗುರುವರ್ಯರೆ ಸತ್ಪಾದ-
ಕ್ಕೆರಗುವೆನಾಂ ನಿಜ ಸರೋಜಸಮ ಮೃದುಲ ಮನ-
ಸ್ಕರು ನೀವಶ್ಮವದಿಹ ಶಿ-
ಷ್ಯರ ಸುಂದರ ಶಿಲ್ಪವಾಗಿಸಿರ್ಪವರಲ್ತೇ||1||

ನರರೊಳ್ ವಿದ್ಯಾ ದಾತಂ
ಸುರರೊಳ್ ಶಂಭುವು ವಿರಿಂಚಿ ಪದವಿ ಸಮಾನಂ|
ಪುರದೊಳ್ ಪಾರ್ವಂ ಪೋಲಿಂ
ಸರದೋಳ್ ಕೋದಿರ್ಪ ಪವಳದೋಲ್ ಶೋಭಿಸುವಂ||2||

ಕಮಲಾಕರನೆಂತೆಂಬಾ 
ವಿಮಳಂ ನಾಮದಿ ಸುಶೋಭ್ಯರಾಗಿರ್ದಿರಯ್|
ಕಮಲೋಪಮ ಮೃದು ಶಿಷ್ಯರ್
ಸುಮನಂ ಪೋಲೆ ಕಮಲಾಕರ ಗುರೂದ್ಭವರಯ್||3||


ನೀವಿತ್ತಿರ್ಪ ಪ್ರಾಥಮಿ-
ಕಂ ವಿಷಯಂಗಳು ಸಮಾಜ ವಿಜ್ಞಾನಗಳ್|
ಕೋವಿದರಿಂ ಪಡೆದ ಗಣಿತ
ದೀವಿಟಿಯಾಯ್ತೈ ದಿನಂಪ್ರತಿಯ ಕಲ್ಕೆಗಳಲ್||4||


ಜವರಂಗಿರ್ಪ ಕರುಣೆಯೇ 
ಬವರದಿ ಹತ್ಯಾ ನಿಷೇಧ ನಿಯಮಂ ಪೋಲಲ್ |
ಸವರಿರ್ಪರೆ ವಿಧಿಗೆ ಗಡಂ
ಕವಿಲೇಖನಮಂ ಲಲಾಟದಿಂದಳಿಸುವರಾರ್||5||


ಹೀರೋ ಹೊಂಡವ ನಿತ್ಯವು 
ಏರಿಂ ಬರುತಿರ್ದಿರಲ್ತೆ ಶಾಲೆಗೆ ದಿನದಿಂ |
ದಾರಿಯು ಬಾಳೇಗದ್ದೆಯ 
ಸೇರಿಂ ಕಾಲದಲಿ ಕಬ್ಬಿನ ಮನೆಯ ಗೃಹಮಂ ||6||


ಆಪತ್ತಂ ನೀವೆದುರಿಸು-
ತಾ  ಪರಕಾರ್ಯಕೆ ಸಹಿಷ್ಣುವಾಗಿಸಿದಿರೆಲಾ |
ಕೋಪಂಗೊಂಡರೆ ದೂರ್ವಾ-
ಸಂ ಪೋಲ್ತಿರ್ದಿರಿ ಮಹಾನುಭಾವಿಗಳೈ ನೀವ್ ||7||


ಸಮಯೋಚಿತಮಂ ಗೆಯ್ಯುತ 
ಕಮಲಾಕರದೋಲ್ ಸುಹೃನ್ಮನಸ್ಕರು ನೀವುಂ|
ಮಮಶಿಕ್ಷಕರೆಂಬಭಿಮಾ-
ನಮಂ ಮನಸಿಂದ ತೊರೆಯಲಹುದೇ ಪೇಳಿಂ||8||


ಮ||
ಕೃತಪಾಠಂಗಳ ಸತ್ಫಲಂ ಗಡ ಭವದ್ವಾಕ್ಯಂಗಳಿಂ ಹೃದ್ಗತಂ
ಧೃತವಿದ್ಯಾಬಲ ನಿಲ್ಲಿಸಿರ್ದು ಯಶವಂ ಸಂಪ್ರಾಪ್ತರಂ ಲೋಕದೋ
ಳತಿಯಾಗಿರ್ಪುದ ದುರ್ಗುಣಕ್ಕೆ ಖತಿಯಾಗಾರಾಧ್ಯರಾಗಿರ್ದಿರೈ
ಮಿತವಾಗಿರ್ದೊಡೆ ಸರ್ವವೂ ಶುಭಮಿರಲ್ ನೀವೇಕೆ ಮೀರಿರ್ಪಿರಿ||9||


ಶನಿವಾರ, ನವೆಂಬರ್ 5, 2011

ಭಿಂಗಿ ಕುಣಿತ
ಶಿರಸಿ ಸುತ್ತಮುತ್ತ ಕೆಲವು ಹಳ್ಳಿಗಳಲ್ಲಿ ದೀಪಾವಳಿಯ ದಿನಗಳಲ್ಲಿ ಮಾಡುವ ನೃತ್ಯ ಭಿಂಗಿ ಕುಣಿತ.
ಇದು ಒಂದು ಜಾನಪದ ಕಲೆ.. ದೀಪಾವಳಿಯ ಸಮಯದಲ್ಲಿ ಇದನ್ನು ಮಾಡುತ್ತಾರೆ.. ಇದರ ಕುರಿತ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಿ ಶೀಘ್ರದಲ್ಲೇ ಕಥಾಕಾಲದ ಮೂಲಕ ಬರುತ್ತೇನೆ.