Powered By Blogger

ಶನಿವಾರ, ಮಾರ್ಚ್ 29, 2014

ಸಹೃದಯಕಾಲ-೩ ರನ್ನನ ಗದಾಯುದ್ಧದ ಕೆಲವು ಪದ್ಯಗಳು

ಜನ್ನನು ತನ್ನ 'ಯಶೋಧರಚರಿತೆ'ಯಲ್ಲಿ 

ಕನ್ನರನಾದರದಿಂ ಕುಡೆ
ಹೊನ್ನಂ ಮನಮೊಸೆದು ತೈಲಪಂ ಕುಡೆ ರನ್ನಂ
ಮನ್ನಿಸಿ ಬಲ್ಲಾಳಂ ಕುಡೆ
ಜನ್ನಂ ಕವಿಚಕ್ರವರ್ತಿವೆಸರಂ ಪಡೆದರ್ || (೧-೨೧)

"ಕನ್ನರನು  ಆದರದಿಂದ ಕೊಡಲು 'ಪೊನ್ನ'(ಹೊನ್ನ) ತೈಲಪನು ಮೆಚ್ಚಿ ಕೊಡಲು 'ರನ್ನ' ಹಾಗೂ ಬಲ್ಲಾಳನು ಕೊಡಲು 'ಜನ್ನ' ಈ ಮೂವರು 'ಕವಿಚಕ್ರವರ್ತಿ' ಎಂಬ ಬಿರುದನ್ನು ಪಡೆದರು" ಎಂದು ಹೇಳುತ್ತಾನೆ. 

ಅಂತಹ ಕನ್ನಡದ ರತ್ನತ್ರಯದಲ್ಲಿ ಒಬ್ಬನಾದ 'ರನ್ನ'ನ 'ಸಾಹಸಭೀಮವಿಜಯಂ' ಕಾವ್ಯವನ್ನು ಅವಲೋಕಿಸಿದರೆ ಅವನೇಕೆ ಕವಿಚಕ್ರವರ್ತಿಯೆಂಬ ಬಿರುದನ್ನು ಪಡೆದ ಎಂದು ಗೊತ್ತಾಗುತ್ತದೆ. ಅಂತಹ ವೈಶಿಷ್ಟ್ಯಪೂರ್ಣವಾದ ಶೈಲಿ, ಕಥೆಯ ನಿರೂಪಣೆಯನ್ನು ಮಾಡುವ ರೀತಿ, ವರ್ಣನೆ ಇವುಗಳೆಲ್ಲವನ್ನೂ ನೋಡಿದರೆ ಸಾರಸ್ವತಾಸಕ್ತರ ಮನಸ್ಸಿಗೆ ಆಗುವ ಆನಂದ ಅವರ್ಣನೀಯವೇ ಸರಿ.

ರತ್ನಪರೀಕ್ಷಕನಾಂ ಕೃತಿ
ರತ್ನಪರೀಕ್ಷಕನೆನೆಂದು ಫಣಿಪತಿಯ ಫಣಾ
ರತ್ನಮುಮಂ ರನ್ನನ ಕೃತಿ
ರತ್ನಮುಮಂ ಪೇೞ್ ಪರೀಕ್ಷಿಪರ್ಗೆಂಟೆರ್ದೆಯೇ ।। (೧-೪೪)

"ನಾನು ರತ್ನಪರೀಕ್ಷಕ ಅಥವಾ ಕೃತಿರತ್ನವನ್ನು ಪರೀಕ್ಷಿಸುವವನು(ವಿಮರ್ಶಕ) ಎಂದು ಫಣಿಪತಿಯ(ವಾಸುಕಿಯ) ಹೆಡೆಯ ಮೇಲಿರುವ ರತ್ನವನ್ನೂ ರನ್ನನ ಕೃತಿರತ್ನ(ಸಾಹಸಭೀಮವಿಜಯ)ವನ್ನೂ ಪರೀಕ್ಷಿಸುವುದಕ್ಕೆ ಹೊರಟವನಿಗೆ ಎಂಟೆದೆಯೇ!" ಎಂದು ಕೇಳುತ್ತಾ ತನ್ನ ಕವಿತ್ವವನ್ನು ಪರೀಕ್ಷಿಸಬೇಕೆಂದರೆ ಅಂತಹ ಧೈರ್ಯವಿರಬೇಕೆಂದು ಹೇಳುತ್ತಾ ಆರಂಭಿಸುವ ಕಾವ್ಯದಲ್ಲಿ 
 ತನ್ನ ಕಾವ್ಯಶಕ್ತಿಯ ಬಗ್ಗೆ ಹೀಗೆ ಹೇಳಿಕೊಳ್ಳುತ್ತಾನೆ :-

ಆರಾತೀಯ ಕವೀಶ್ವರ
ರಾರುಂ ಮುನ್ನಾರ್ತರಿಲ್ಲ ವಾಗ್ದೇವಿಯ ಭಂ
ಡಾರದ ಮುದ್ರೆಯನೊಡೆದಂ
ಸಾರಸ್ವತಮೆನಿಪ ಕವಿತೆಯೊಳ್ ಕವಿರತ್ನಂ।। (೧-೧೩)
ರನ್ನನ ಹಸ್ತಾಕ್ಷರ (Photo courtesy : Internet)

"ಹಿಂದಣ ಕವಿಗಳು ಯಾರೂ ಸಮರ್ಥರಾಗಲಿಲ್ಲ. ಆದರೆ ಈ ರತ್ನನು ಮಾತ್ರ ಸಾರಸ್ವತವೆನ್ನುವ ಕವಿತೆಯಲ್ಲಿ ವಾಗ್ದೇವಿಯ ಭಂಡಾರದ ಮುದ್ರೆ(ಬೀಗ)ವನ್ನು ಒಡೆದ" ಎಂದು. ವಾಗ್ದೇವಿಯಾದ ಸರಸ್ವತಿಯ ಭಂಡಾರದ ಬೀಗವನ್ನು ಒಡೆಯುವುದೆಂದರೆ ಅದು ಸುಲಭದ ಮಾತಲ್ಲ. ಹಿಂದಣ ಕವಿಗಳಿಗೆ ಯಾರಿಗೂ ಆಗಲಿಲ್ಲ ಎಂಬಂತಹ ಧ್ವನಿ ಈ ಪದ್ಯದಲ್ಲಿ ಕೇಳುತ್ತದೆ.. 


ರನ್ನನ ಕಾವ್ಯಪ್ರತಿಭೆಯನ್ನು ಪ್ರತಿನಿಧಿಸುವಂತೆ ಅವನ ಪದ್ಯಗಳಲ್ಲಿ ಯಾವುದಾದರೂ ಒಂದೆರಡನ್ನು ಆಯ್ಕೆಮಾಡಿಕೊಳ್ಳಲು ಹೋದರೆ ಬಹುಸಂಖ್ಯೆಯ ಪದ್ಯಗಳು 'ತಾಮುಂದೆ ತಾಮುಂದೆ' ಎನ್ನುತ್ತಾ ಬರುತ್ತವೆ. 
ಅಂತಹ ಒಂದು ಪದ್ಯ ಹೀಗಿದೆ:-

ಕುರುಭೂಭೃದ್ಬಲತೂಲಕಾಲಪವನಂ ಕೌರವ್ಯಗಂಧೇಭಕೇ
ಸರಿ  ದುಶ್ಶಾಸನರಕ್ತರಕ್ತವದನಂ ದುರ್ಯೋಧನೋರುಕ್ಷಮಾ
ಧರವಜ್ರಂ ಕುರುರಾಜರತ್ನಮಕುಟೋತ್ಕೂಟಾಂಘ್ರಿಸಂಘಟ್ಟಸಂ
ಗರನೆಂದೆಂದಭಿವರ್ಣಿಪೆಂ ರಣಯಶಶ್ರೀರಾಮನಂ ಭೀಮನಂ ।। (೧-೫೨)

"ಕುರುಕುಲದ ರಾಜರ ಬಲವೆಂಬುದನ್ನು ಹತ್ತಿಯಂತೆ ಹಾರಿಸಿಕೊಂಡು ಹೋಗುವ ಬಿರುಗಾಳಿಯಾದ, ಕೌರವನೆಂಬ ಮದವೇರಿದ ಆನೆಗೆ ಸಿಂಹವಾದ, ದುಶ್ಶಾಸನನ ರಕ್ತಕ್ಕೆ ಜಿಗಳೆಯಾದ, ದುರ್ಯೋಧನನ ತೊಡೆಯೆಂಬ ಪರ್ವತಕ್ಕೆ ವಜ್ರಾಯುಧವಾದ*, ಕುರುರಾಜನ ರತ್ನಕಿರೀಟವನ್ನು ಮೆಟ್ಟಿದ ರಣರಂಗದ ಯಶಸ್ಸೆಂಬ ಸಿರಿಗೆ ರಾಮನಾದ ಭೀಮನನ್ನು ವರ್ಣಿಸುವೆನು" ಎಂದು ಕಥೆಯನ್ನು ಆರಂಭಿಸುತ್ತಾನೆ. 
(*ಪರ್ವತಗಳಿಗೆ ರೆಕ್ಕೆಯಿತ್ತೆಂದೂ ಅದನ್ನು ಇಂದ್ರ ತನ್ನ ವಜ್ರಾಯುಧದಿಂದ ಕತ್ತರಿಸಿದನೆಂದೂ ಕಥೆ)

ಮತ್ತೇಭವಿಕ್ರೀಡಿತ ಛಂದಸ್ಸಿನಲ್ಲಿ ಭೀಮನ ಸಾಹಸದವರ್ಣನೆ ಒಂದು ಮತ್ತೇಭವಿಕ್ರೀಡಿತವೇ (ಮದವೇರಿದ ಆನೆಯ ಆಟ) ಎಂಬಂತೆ ಭಾಸವಾಗುತ್ತದೆ. ಮೊದಲ ಸಾಲಿನಲ್ಲಿ '...ಬಲತೂಲಕಾಲಪವನಂ..' ಎಂಬಲ್ಲಿ (ಲಕಾರ-ಅನುಪ್ರಾಸ) ಎರಡನೇ ಸಾಲಿನ '..ರಕ್ತರಕ್ತವದನಂ..'ಎಂಬಲ್ಲಿ (ಯಮಕ) ಮೂರನೇ ಸಾಲಿನ '..ಕುರುರಾಜರತ್ನಮಕುಟೋತ್ಕೂಟಾಂಘ್ರಿಸಂಘಟ್ಟ..' ('ರ'ಮತ್ತು'ಟ'ಕಾರಗಳ ಅನುಪ್ರಾಸ) ಕೊನೆಯ ಸಾಲಿನ 'ಶ್ರೀರಾಮನಂ ಭೀಮನಂ'(ಛೇಕಾನುಪ್ರಾಸ) ಎಂಬಲ್ಲೆಲ್ಲ ಶಬ್ದಾಲಂಕಾರಗಳು ಹಿತವಾಗಿ ಕಿವಿಗೆ ಬಡಿಯುತ್ತವೆ. 
ಅಲ್ಲದೇ ಅರ್ಥಾಲಂಕಾರಕ್ಕೆ ರೂಪಕಗಳ ರತ್ನಮಾಲೆಯನ್ನೇ ತೆಗೆತೆಗೆದಿಡುತ್ತಾನೆ;  ಕುರುಕುಲದ ರಾಜರ ಬಲವೆಂಬುದೊಂದು ಹತ್ತಿ. ಅದನ್ನು ಹಾರಿಸಿಕೊಂಡು ಹೋಗುವಂತಹ ಪ್ರಳಯಕಾಲದ ಗಾಳಿ ಭೀಮ. ಕೌರವರೆಂಬ ಮದವೇರಿದ ಆನೆಯ ನೆತ್ತಿಯನ್ನು ಸೀಳುವಂತಹ ಕೇಸರಿ (ಸಿಂಹ) ಭೀಮ. ದುಶ್ಶಾಸನನ ರಕ್ತವನ್ನು ಒಂದಿನಿತೂ ಬಿಡದೆ ಹೀರಿದ ಜಿಗಳೆ/ಉಂಬಳ ಭೀಮ. ದುರ್ಯೋಧನನ ತೊಡೆಯೆಂಬ ಬೆಟ್ಟವನ್ನು ಕಡಿದುಹಾಕಿದ ವಜ್ರಾಯುಧ ಭೀಮ. ಸುಯೋಧನನ ರತ್ನ ಕಿರೀಟವನ್ನು ಮೆಟ್ಟಿ ಧೂಳಿನಲ್ಲಿ ಹೊರಳಾಡಿಸುವಂತಹ ಯೋಧ ಭೀಮ, ರಣರಂಗದ ಯಶಸ್ಸೆಂಬ ಶ್ರೀಗೆ ರಾಮನಾದ ಭೀಮನನ್ನು ವರ್ಣಿಸುತ್ತೇನೆ ಎಂದು ಹೇಳುವಾಗಲೇ ಸಾಹಸಭೀಮನ ಸಾಹಸಗಳು ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತವೆ. 
ಎಂತಹ ಸೊಗಸಾದ ಪದ್ಯ.
ರನ್ನ ನಿಜಕ್ಕೂ ಸರಸ್ವತಿಯ ಭಂಡಾರದ ಒಡೆದಾಗ ಹೊರಬಂದ ರನ್ನವೇ ಸರಿ!

ಮಂಗಳವಾರ, ಮಾರ್ಚ್ 25, 2014

ಸಹೃದಯಕಾಲ-೨ ಲಕ್ಷ್ಮೀಶನ ಜೈಮಿನಿ ಭಾರತದಿಂದ ಒಂದು ಪದ್ಯ

ಚಿತ್ರ:ಅಂತರ್ಜಾಲಕೃಪೆ

      ಕನ್ನಡಕಾವ್ಯಪರಂಪರೆಯಲ್ಲಿ ಷಟ್ಪದಿಗಳದ್ದೇ ವಿಶೇಷ ಘಟ್ಟವಾಗಿ ರೂಪುಗೊಂಡಿತು. ಬಹಳಷ್ಟು ಕವಿಗಳ ಮೆಚ್ಚುಗೆಗೆ ಪಾತ್ರವಾದ ಷಟ್ಪದಿಗಳಲ್ಲೇ ಅನೇಕ ಮಹಾಕಾವ್ಯಗಳೂ ರಚನೆಯಾದವು. ಇಂತಹ ಹಲವು ಕವಿಗಳಲ್ಲಿ ಲಕ್ಷ್ಮೀಶ ತನ್ನದೇ ಆದ ಯಮಕ ಶ್ಲೇಷಾದಿ ಚಮತ್ಕಾರಗಳ ಮೂಲಕ ಪ್ರೌಢ ಶೈಲಿಯಮೂಲಕ ವಿಶಿಷ್ಟನಾಗಿದ್ದಾನೆ. ಇವನ ಕೃತಿ 'ಜೈಮಿನಿ ಭಾರತ' ಇದು ಪಾಂಡವರು ಅಶ್ವಮೇಧ ಯಾಗ ಮಾಡುವ ಕಥೆಯನ್ನೊಳಗೊಂಡಿದ್ದು ಮೂಲ ಸಂಸ್ಕೃತದ ಜೈಮಿನಿ ಮಹರ್ಷಿ ರಚಿಸಿದ್ದೆನ್ನಲಾದ 'ಅಶ್ವಮೇಧಿಕ ಪರ್ವ'ದ ಕಥೆಯಾಗಿದೆ. 
     ಪ್ರತಿಪದ್ಯದಲ್ಲೂ ಯಮಕವನ್ನೋ  ಅನುಪ್ರಾಸವನ್ನೋ ಅಥವಾ ಶ್ಲೇಷದಂತಹ ಚಮತ್ಕಾರವನ್ನೋ ಅಥವಾ ಒಂದು ದೃಷ್ಟಾಂತವನ್ನೋ ಕಟ್ಟಿಕೊಡುವ ಮೂಲಕ ಕಲ್ಪನೆಯ ಮಹಾಸಾಗರದ ಮಧ್ಯಕ್ಕೆಲ್ಲೋ ನಮ್ಮನ್ನು ಕರೆದೊಯ್ಯುವ ಲಕ್ಷ್ಮೀಶನ ಪದ್ಯಗಳು ವಾರ್ಧಕ ಷಟ್ಪದಿಯಾದರೂ ನಮ್ಮ ಮನಸ್ಸಿಗೆ ಹೊಸ ಉತ್ಸಾಹ ಮೂಡಿಸುತ್ತವೆಯೆಂಬುದರಲ್ಲಿ ಸಂದೇಹವಿಲ್ಲ!!

ಜೈಮಿನಿ ಭಾರತದಲ್ಲಿ ಬರುವ ಒಂದು ಸೊಗಸಾದ ವರ್ಣನೆ ಹೀಗಿದೆ-
ಸಂದರ್ಭ-ಭದ್ರಾವತಿಯೆಂಬ ನಗರದಲ್ಲಿ ಯೌವನಾಶ್ವನೆಂಬ ರಾಜ ಆಡಳಿತ ನಡೆಸುತ್ತಿರಲು ಅಶ್ವಮೇಧ ಯಾಗಕ್ಕೆ ಸೂಕ್ತವಾದ ಕುದುರೆ ಅಲ್ಲಿರುವುದನ್ನು ತಿಳಿದು ಕೃಷ್ಣನ ಅಣತಿಯ ಮೇರೆಗೆ ಭೀಮ, ಘಟೋತ್ಕಚನ ಮಗ ಹಾಗೂ ಕರ್ಣನ ಮಗ ವೃಷಸೇನ ಈ ಮೂವರೂ ಕುದುರೆಯನ್ನು ಅಪಹರಿಸಿಕೊಂಡು ತರಲು ಅಲ್ಲಿಗೆ ಹೋಗುತ್ತಾರೆ. ಆಗ ಕಾಣುವ ಭದ್ರಾವತೀ ನಗರದ ವರ್ಣನೆಯನ್ನು ಮಾಡುತ್ತಾ ಕವಿ ಹೇಳುವ ಈ ಪದ್ಯ  ಸಹೃದಯರು ಆಸ್ವಾದಿಸಲೇ ಬೇಕಾದಂತಹ ಒಂದು ಪದ್ಯ (ಮೂರನೆಯ ಸಂಧಿಯ ೧೯ನೆಯ ಪದ್ಯ)
ಕುಸಿದು ಪಾತಾಳದೊಳಗಿರ್ದು ಪಲಕಾಲಮಂ
ದ್ವಿಸಹಸ್ರ ನಯನಂಗಳಿಂದ ನೋಡಿದೊಡೆ ಕಾ
ಣಿಸಿಕೊಳ್ಳದೀ ಪುರದಗಳ ಘಾತಮಿದನಜಂ ಬಲ್ಲನೋ ಕೇಳ್ವೆನೆಂದು 
ಬಿಸಜ ಸಂಭವನ ಪೊರೆಗೆಂದಿಳೆಯನುಗಿದುಚ್ಚ
ಳಿಸಿ ಬಳೆದ ಫಣಿಪತಿಯ ಮಣಿವಡೆಯ ಸಾಲಿವೆನ
ಲೆಸೆವುವಾಗಸದೊಳೀ ಪೊಳಲ ಕೋಟೆಯ ರನ್ನದೆನೆಗಳೆಲ್ಲಾದೆಸೆಯೊಳು||

"ಕುಸಿದು ಪಾತಾಳಲೋಕದಲ್ಲಿ ಹಲವು ಕಾಲಗಳಿಂದ ವಾಸವಾಗಿದ್ದ ವಾಸುಕಿ "ತನ್ನ ಎರಡು ಸಾವಿರ ಕಣ್ಣುಗಳಿಂದ ನೋಡಿದರೆ ಈ ನಗರದ ವಿಸ್ತೀರ್ಣ ಕಾಣಿಸುತ್ತಿಲ್ಲ, ಬ್ರಹ್ಮನಿಗೇನಾದರೂ ಗೊತ್ತಿದೆಯೋ ಕೇಳಿನೋಡೋಣ" ಎಂದುಕೊಳ್ಳುತ್ತಾ ಬಿಸಜಸಂಭವನಾದ ಬ್ರಹ್ಮನ ಬಳಿಗೆ ಹೋಗಲು ಭೂಮಿಯನ್ನು ಉಗಿದು ದೊಡ್ಡದಾಗಿ ಬೆಳೆದ ಫಣಿಪತಿಯ ಹೆಡೆಯ ಮಣಿಗಳ ಸಾಲುಗಳೋ ಎಂಬಂತೆ  ಆಕಾಶದೆತ್ತರಕ್ಕಿದ್ದ ಭದ್ರಾವತಿಯೆಂಬ ಪಟ್ಟಣದ ಕೋಟೆಯ ರತ್ನಮಯವಾದ ಶಿಖರಗಳು ಎಲ್ಲಾ ದಿಕ್ಕಿನಲ್ಲೂ ಕಂಡವು." 

ನಗರದ ಕೋಟೆಯ ರನ್ನದೆನೆಗಳು ಸಾವಿರಾರು ರತ್ನಗಳಿಂದ ಕೂಡಿರುವುದು ಕವಿಯ ಕಣ್ಣಿಗೆ ನಾಗರಾಜನ ಸಾವಿರ ಹೆಡೆಗಳ ಮೇಲಿರುವ ಮಣಿಗಳಂತೆ ಕಂಡಿತು. ಅದನ್ನು ಅಷ್ಟೇ ಹೇಳದೇ ವಿವರಿಸುತ್ತಾ "ತನ್ನ ಎರಡು ಸಾವಿರ ಕಣ್ಣುಗಳಿಗೆ ಕಾಣದ ಈ ನಗರದ ಅಗಲ ಬ್ರಹ್ಮನಿಗೇನಾದರೂ ಗೊತ್ತಿರಬಹುದೇ ಕೇಳಿ ನೋಡೋಣ' ಎಂದುಕೊಂಡು ಬಂದ ಫಣಿಪತಿಯ ಮಣಿವೆಡೆಯ ರತ್ನಗಳ ಸಾಲಿನಂತೆ ಕಂಡಿತು" ಎಂದು ಹೇಳುವ ರೀತಿ ಅಲ್ಲಿರುವ ವಕ್ರತೆ ಇವುಗಳ ಸ್ವಾದವನ್ನು ವರ್ಣಿಸಲು ಸಾಧ್ಯವೇ?

ಶುಕ್ರವಾರ, ಮಾರ್ಚ್ 21, 2014

ಸಹೃದಯಕಾಲ-೧

'ಸಹೃದಯಕಾಲ'
ಕವಿಯ ಕಾವ್ಯದ ಸ್ವಾರಸ್ಯವನ್ನು ಅರಿಯಬಲ್ಲವನೇ ಸಹೃದಯ. ಹಲಕೆಲವು ಹಳೆಗನ್ನಡ ಕಾವ್ಯಗಳ ಸ್ವಾರಸ್ಯಕರ ಪದ್ಯಗಳನ್ನು 'ಸಹೃದಯಕಾಲ'ದಲ್ಲಿ ಚುಟುಕಾಗಿ ನೋಡೋಣ.
ಹಳಗನ್ನಡ ಕಾವ್ಯದಲ್ಲಿ ನನಗೆ ಚೆನ್ನಾಗಿ ಕಂಡ ಪದ್ಯಗಳಿಗೆ ಹಾಗೆಯೇ ಬೇರೆಯವರು 'ಈ ಪದ್ಯ ಚೆನ್ನಾಗಿದೆ' ಎಂದು ಹೇಳಿದ ಪದ್ಯಗಳಿಗೆ ನನ್ನದೇ ಆದ ಅಡಿಟಿಪ್ಪಣಿಯೊಂದಿಗೆ ಯಥಾಮತಿ ವಿಮರ್ಶಿಸಿ ಇಲ್ಲಿ ಹಾಕುತ್ತೇನೆ. ಒಟ್ಟಾರೆ ಸಹೃದಯರಿಗೆ ಸಂತೋಷವಾದರೆ ನಾನಷ್ಟು ಕೃತಾರ್ಥನಾದಂತೆ.

ಸಾಂದರ್ಭಿಕ ಚಿತ್ರ-ಅಂತರ್ಜಾಲಕೃಪೆ
ಆದಿಕವಿ ಪಂಪನ ಎರಡು ಕೃತಿಗಳೆಂದರೆ 'ವಿಕ್ರಮಾರ್ಜುನವಿಜಯ' ಹಾಗೂ 'ಆದಿಪುರಾಣ'. ವಿಕ್ರಮಾರ್ಜುನವಿಜಯದಲ್ಲಿ ಮಹಾಭಾರತ ಕಥೆಯನ್ನು ಹಲವು ಬದಲಾವಣೆಗಳೊಂದಿಗೆ ಕನ್ನಡದಲ್ಲಿ ಚಂಪೂ(ಗದ್ಯಪದ್ಯಮಿಶ್ರಿತ)ಶೈಲಿಯಲ್ಲಿ ಬರೆದಿದ್ದಾನೆ. ಇದರಲ್ಲಿ ತನಗೆ ಆಶ್ರಯವನ್ನು ಕೊಟ್ಟ ಚಾಲುಕ್ಯರಾಜ ಅರಿಕೇಸರಿಯನ್ನು ಮಹಾಭಾರತದ ಅರ್ಜುನನೊಡನೆ ಸಮೀಕರಿಸಿ ವರ್ಣಿಸುತ್ತಾನೆ. ಕೆಲವುಕಡೆಗಳಲ್ಲಿ ಇದು ರಸಾಭಾಸಕ್ಕೆ ಕಾರಣವಾದರೂ ಕೆಲವು ಅರಿಕೇಸರಿಯನ್ನು ವರ್ಣಿಸುವ ಪದ್ಯಗಳಲ್ಲಿ ಒಳ್ಳೆಯ ಕಲ್ಪನೆಯನ್ನು ಕಾಣಬಹುದಾಗಿದೆ. ಅಂತಹ ಒಂದು ಪದ್ಯ ಮೊದಲ ಆಶ್ವಾಸದ ೪೬ನೆಯದು-

ಕಂದಪದ್ಯ
ಉಡೆವಣಿ ಪಱಿಯದ ಮುನ್ನಮೆ
ತೊಡಗಿ ಚಲಂ ನೆಗೞೆ ರಿಪುಬಲಂಗಳನೆ ಪಡ
ಲ್ವಡಿಸಿ ಪರಬಲದ ನೆತ್ತರ
ಕಡಲೊಳಗಣ ಜಿಗುಳೆ ಬಳೆವ ತೆಱದೊಳೆ ಬಳೆದಂ||

ಈ ಪದ್ಯದಲ್ಲಿ ಪಂಪನು ಅರಿಕೇಸರಿಯ ಬಗ್ಗೆ ಹೀಗೆ ಹೇಳುತ್ತಾನೆ :- "ಅರಿಕೇಸರಿ ರಾಜನು ಹುಟ್ಟಿ ಇನ್ನೂ ಉಡುದಾರ ಹರಿದುಹೋಗುವ ಮುನ್ನವೇ( ಅಂಬೆಗಾಲಿಕ್ಕುವ ಕಾಲದಲ್ಲಿ)  ಅವನ ಸಾಹಸವು ಬೆಳೆದು ಶತ್ರುಗಳ ಬಲವನ್ನು ನಾಶಮಾಡಿ ಶತ್ರುಬಲದ ರಕ್ತವೆಂಬ ಸಮುದ್ರದಲ್ಲಿ ಜಿಗಳೆ(ಜಿಗಣೆ/ಜಿಗುಳೆ/leach) ಬೆಳೆಯುವಂತೆ (ಅಂಬೆಗಾಲಿಕ್ಕುತ್ತಾ/ತೆವಳುತ್ತಾ) ಬೆಳೆದ"
ಇಲ್ಲಿ 'ಶತ್ರುಗಳ ಬಲದ ರಕ್ತಸಮುದ್ರದ ಜಿಗಳೆ' ಎಂಬ ಒಂದು ರೂಪಕವನ್ನು ಕೊಡುವುದರ ಮೂಲಕ ತನ್ನ ರಾಜನು ಹುಟ್ಟುವಾಗಳೇ ಶತ್ರುರಾಜರು (ಅರಿಕೇಸರಿಯ ತಂದೆಯಿಂದಲೋ ತಾತನಿಂದಲೋ-ಇರಬಹುದು-) ನಾಶವಾದದ್ದನ್ನೂ ರಿಪುಗಳ ಬಲದ ರಕ್ತವೇ ಸಮುದ್ರದಂತಿತ್ತೆಂಬುದನ್ನೂ ಅರಿಕೇಸರಿ ಅಂಬೆಗಾಲಿಕ್ಕುವುದು ಜಿಗಳೆ ಹೋದಂತಿತ್ತೆಂಬ ಅತಿಶಯೋಕ್ತಿಯ ಭಾವವನ್ನೂ ಅತಿಚಿಕ್ಕ ಛಂದಸ್ಸಾದ ಕಂದಪದ್ಯದಲ್ಲಿ ತಂದು ಸೊಗಸಾದ ಪದ್ಯ ರಚಿಸಿದ್ದಾನೆ.