Powered By Blogger

ಬುಧವಾರ, ಮೇ 28, 2014

ಸಹೃದಯಕಾಲ-೧೩: ಮತ್ತೆ ಸಾಗರ

ಕುವೆಂಪು ಅವರ "ಚಿತ್ರಾಂಗದಾ" ಖಂಡಕಾವ್ಯ ಅವರ 'ಶ್ರೀರಾಮಾಯಣದರ್ಶನಂ' ಮಹಾಕಾವ್ಯದ ಛಂದಸ್ಸಿನಲ್ಲಿಯೇ ಇರುವ ಇನ್ನೊಂದು ಕಾವ್ಯವಾಗಿದೆ. ಇಲ್ಲಿನ ಕಥೆ ಜೈಮಿನಿ ಭಾರತದಲ್ಲಿ ಬರುವ ಬಭ್ರುವಾಹನನ ಕಥೆಯ ಆಶ್ರಯವನ್ನೇ ಪಡೆದಿದ್ದರೂ  ಅಲ್ಲಿರುವ ಅತಿಮಾನುಷಘಟನೆಗಳಾವುವೂ ಇಲ್ಲಿಲ್ಲ. ಕೊನೆಯಲ್ಲಿ ಅರ್ಜುನ ಸತ್ತು ಬದುಕುವ ಬದಲು ನಾಟಕೀಯವಾಗಿ ಚಿತ್ರಾಂಗದೆಯೇ ತನ್ನ ಪ್ರಾಣವನ್ನು ಅರ್ಪಿಸುತ್ತಾಳೆ.
ಇಲ್ಲಿನ ಛಂದಸ್ಸಿನಲ್ಲಿ ಕೂಡ ಐದು ಮಾತ್ರಗಳ ಸಹಜವಾದ ಗತಿಯಿದ್ದರೂ ಎಲ್ಲೋ ಒಂದೆರಡು ಕಡೆ ಅದಕ್ಕೆ ಹೊಂದಿಕೊಳ್ಳದಂತೆ ಏಳು ಮಾತ್ರಗಳಾಗಿ ಹೆಚ್ಚಾಗುವುದೂ ಅಲ್ಲದೇ ಗಣಮಧ್ಯದಲ್ಲಿ ಪಾದ ಮುಗಿದು ಬೇರೆಯ ಪಾದ ಪ್ರಾರಂಭವಾಗಿ ಆ ಗಣವನ್ನೂ ಪಾದದ ಮಾತ್ರೆಗಳ ಲೆಕ್ಕವನ್ನೂ ಪೂರ್ಣಗೊಳಿಸಿಕೊಂಡು ಹೋಗುತ್ತದೆ. ಆದಿಪ್ರಾಸದ ನಿಯಮವನ್ನೇನೂ ಇಟ್ಟುಕೊಳ್ಳದ  ಲಲಿತರಗಳೆಯ ಮತ್ತೊಂದು ರೂಪವೇ ಇದು ಎಂದರೆ ತಪ್ಪೇನೂ ಆಗಲಾರದು. ಇಲ್ಲದಿದ್ದರೆ ಸರಳರಗಳೆ (-ಕವಿನಿರ್ದೇಶಿತ ಹೆಸರು) ಎನ್ನಬಹುದು. ಮಹಾಛಂದಸ್ಸೆಂಬುದೂ ಅಷ್ಟೇ. (ಚಿತ್ರಾಂಗದಾ ಕಾವ್ಯವನ್ನೂ ಮಹಾಛಂದಸ್ಸಿಗೆ ತಿದ್ದಿದ್ದಾಗಿ ಹೇಳಿದ್ದಾರೆ. ಎರಡೂ ಒಂದೇ ; ಆದರೂ 'ಅಳಿಯ ಅಲ್ಲ ಮಗಳ ಗಂಡ' ಎಂಬಂತೆ ಎನ್ನಬಹುದು.) ಅದರಲ್ಲಿ ಕೂಡ ಮತ್ತೆ ಯಾವ ಮಹತ್ತೂ ಇಲ್ಲ.
ಕುವೆಂಪು ಅವರ ಕಾವ್ಯದ ಭಾಷೆ; ಅರ್ಥವಾಗದಂತಹ ಪಂಪನ ಕಠಿನ ಹಳೆಗನ್ನಡವೂ ಅಲ್ಲ!! ಅರ್ಥವಿಲ್ಲದಂತಹ ಇತ್ತೀಚಿನ ಕುಕವಿಗಳ (ಸ್ವಯಂಘೋಷಿತ ಸತ್ಕವಿಗಳ) ಹೊಸಗನ್ನಡದ ಭಾಷೆಯೂ ಅಲ್ಲ!!! ಕೆಲವೊಂದು ಕಡೆಗಳಲ್ಲಿ ಕೋಶಗತವಾದ ಶಬ್ದಗಳೇ ಹೆಚ್ಚು ಬಳಸಲ್ಪಟ್ಟರೂ ನಿರಂತರ ಕೋಶದ ಮೊರೆಹೋಗುವಂತಹ ಪೀಡನೆಯೂ ಇಲ್ಲ. ಅಲ್ಲದೇ ಅಲ್ಲಲ್ಲಿ ಹಳಗನ್ನಡವ್ಯಾಕರಣರೂಪಕ್ಕೆ ವಿರುದ್ಧವಾಗ ಪದಪ್ರಯೋಗಗಳೂ,  ವಿಸಂಧಿ ದೋಷಗಳೂ ಬೇಕಾದಷ್ಟು ಸಿಗುತ್ತವೆ.
ಈ ಚಿತ್ರಾಂಗದ ಕಾವ್ಯದಲ್ಲಿ ಆರು ಪರ್ವಗಳಿವೆ. ಅದರಲ್ಲಿ ಅಲ್ಲಲ್ಲಿ ದೃಷ್ಟಾಂತ ಉಪಮಾ ಇತ್ಯಾದಿ ಅಲಂಕಾರಗಳನ್ನು  ಯಥೇಷ್ಟವಾಗಿ ಸವಿಯಬಹುದು. ಅಲ್ಲದೇ ಅನುಪ್ರಾಸಾದಿ ಶಬ್ದ ಚಮತ್ಕಾರವೂ ಇದೆ.
 
ಅಲ್ಲಿ ಕಾಣುವ ಒಂದು ಸಾಗರದ ವರ್ಣನೆಯನ್ನು ಅವಲೋಕಿಸುವುದಾದರೆ-
ಉರುಳುರುಳು ಸಾಗರವೆ ಮುನ್ನೀರಿನಾಗರವೆ
ತೆರೆತೋಳ್ಗಳಿಂದೆಯಾಲಂಗಿಸಿ ಧರಿತ್ರಿಯಂ
ವರುಷಶತಗತವಾದರಳಿಯದನುರಾಗದಲಿ         ೧೭೬೦
ಹರುಷ ಭೋಗದಲಿ! ಸುರನೀಲ ಸುಂದರಮೂರ್ತಿ
ಗಂಭೀರವಿಸ್ತಾರ ಸುಗಭೀರನೀರನಿಧಿ
ನೇಸರಿಂ ಕೆಲಸಿಡಿದು ನಮ್ಮೀ ಧರಾದೇವಿ
ಬೆಂಕಿ ಮೀಹದೊಳಂದು ಮಿಂದೆದ್ದ ಮೊದಲಲ್ಲಿ
ಹೆತ್ತ ಬಾಳ್ಗಿಂಬಿತ್ತ ದಾತೃವೆ ನಮೋ ನಮಃ!
ಗಡಿಮೀರಿ ನಿಡುಬೆಳೆದ ನಿನ್ನ ತಡಿಗುಂಟೆ ಗುಡಿ?
ಅಲ್ಲಿಯಾತ್ಮದ ಬಯಕೆವಳ್ಳಿ ದಾಂಗುಡಿ ದಾಂಟಿ
ಕಾಲದೇಶಾಂಡವನೊಡೆದು ಮೀಂಟಿ ಬ್ರಹ್ಮಮಂ
ತಬ್ಬುವುದಂತತೆಯನೀಂಟಿ! ಮಾನವನೆದೆಗೆ 
ಧೀರತೆಯ ಕಿಡಿಗರೆದು ಸಾಹಸಕ್ಕೆಳದೊಯ್ವ
ಕರೆ ನಿನ್ನ ಮೊರೆ, ನಿರಂತರ ಚೇತಸ ಜಲಧಿ!
ನರನ ನಾಗರಿಕತೆಯ ತೀರ್ಥಯಾತ್ರೆಯ ಮಹಾ
ವಿಸ್ತೃತ ಸಲಿಲ ಪಥವೆ ಮೊರೆದುರುಳು ರತ್ನಧಿಯೆ
ಉಲ್ಲೋಲಕಲ್ಲೋಲ ರುದ್ರಾಟ್ಟಹಾಸದಿಂ
ಶಂಕರಭಯಂಕರದ ಮೋಹವನೆರಚಿ ಬೀಸಿ 

ಸಮುದ್ರಕ್ಕೆ ತೆರೆಗಳೇ ತೋಳುಗಳು. ಆ ತೋಳ್ಗಳಿಂದ ಧರೆಯನ್ನು ಆಲಂಗಿಸುತ್ತಿರುವುದೆಂಬ ಕಲ್ಪನೆ ಸೊಗಸಾಗಿದೆಯಷ್ಟೆ! 
"ಸೂರ್ಯನಿಂದ ಸಿಡಿದ ಈ ಧರಾದೇವಿ ಬೆಂಕಿಯ ಸ್ನಾನದಲ್ಲಿ ಮಿಂದೆದ್ದ ಮೊದಲಲ್ಲಿ ತಣ್ಪನ್ನು ಕೊಟ್ಟು ಹೆತ್ತ ಬಾಳ್ಗೆ ಒಳ್ಳೆಯದನ್ನು ಮಾಡಿದ ದಾತೃವೇ  ನಿನಗೆ ನಮಸ್ಕಾರ" ಎಂಬುದೂ ಅಷ್ಟೆ.
"ಗಡಿಮೀರಿ ಬೆಳೆದು ನಿಂತ ನಿನ್ನ ತಡಿಗೆ ಗುಡಿಯುಂಟೇ? ಅಲ್ಲಿ ಬಯಕೆಯ ಬಳ್ಳಿ ದಾಟುತ್ತಾ ಕಾಲದೇಶಗಳ ಗರ್ಭವನ್ನು ಬೇಧಿಸಿ ಬ್ರಹ್ಮವನ್ನು ತಬ್ಬಿ ಅನಂತತೆಯನ್ನು ಸವಿಯುವುದು.. ಮಾನವನ ಮನಸಿನಲ್ಲಿ ಧೀರತೆಯ ಕಿಚ್ಚನ್ನು ಹಚ್ಚುವುದು, ಸಾಹಸವನ್ನು ಮಾಡಲು ಎಳೆದೊಯ್ಯುವುದು ಅದೇ ನಿನ್ನ ಕರೆ ನಿನ್ನ ಮೊರೆ(>ಮೊರೆತ=ಧ್ವನಿ) ನಿರಂತರ ಚೇತಸ ಜಲಧಿಯೇ! ನರನ ನಾಗರಿಕತೆಯೆಂಬ ತೀರ್ಥಯಾತ್ರೆಯ ನೀರಿನ ಹೆದ್ದಾರಿ.. ಧ್ವನಿಗಯ್ಯುತ್ತಾ ಉರುಳು.. ರತ್ನಗಳಿಗಾಗರವಾದ ಸಮುದ್ರವೇ ಉಲ್ಲೋಲಕಲ್ಲೋಲದ ರುದ್ರಾಟ್ಟಹಾಸ್ಸದಿಂದ ಭಯಂಕರವಾದರೂ ಶಂಕರ(ಒಳ್ಳೆಯದನ್ನು ಮಾಡುವ)ಮೋಹವನ್ನು ಬೀಸು!" ಎಂದು ಸಾಗರವನ್ನು ಸಂಬೋಧಿಸುತ್ತಾರೆ. ಇಲ್ಲಿ ಹಿಂದೆ ಷಡಕ್ಷರಿಯ ವರ್ಣನೆಗಳಲ್ಲಿ ಬರುವಂತೆ ಶ್ಲೇಷಾದಿ ಚಮತ್ಕಾರಗಳಿಲ್ಲದಿದ್ದರೂ ಸಾಗರದ ಗಂಭೀರತೆಯೂ ನಿರಂತರ ಮೊರೆತವೂ ವಿಸ್ತಾರವೂ ಅಲ್ಲದೇ ಅದರ ರುದ್ರಾಟ್ಟಹಾಸವೂ ಚಿತ್ರಿತವಾಗಿದೆ.ಅಲ್ಲದೇ ಮಾನವನ ಮನಸ್ಸಿಗೆ ಧೀರತೆ ಹುಟ್ಟೂವುದು, ಸಾಹಸವನ್ನು ಮಾಡುವ ಪ್ರವೃತ್ತಿ ಬೆಳೆಯುವುದು ಇವುಗಳನ್ನೆಲ್ಲ ಸಾಗರದ ಗುಣಗಾತ್ರಗಳ ಜೊತೆಗೆ ತಂದಿರುವುದು ಇಲ್ಲಿ ಒಂದು ವಿಶೇಷ. 

ಗುರುವಾರ, ಮೇ 15, 2014

ಸಹೃದಯಕಾಲ-೧೨: ಕರ್ಣಾಟಕ ಕಾದಂಬರಿ


ಬಾಣನ ಕಾದಂಬರಿಯ ಬಗ್ಗೆ "ಕಾದಂಬರೀರಸಜ್ಞಾನಾಂ ಆಹಾರೋಪಿ ನ ರೋಚತೇ" ಎಂದು ಹೇಳಿದ್ದನ್ನು ಕೇಳಿದರೇ ಅದರ ಸ್ವಾದ ಗೊತ್ತಾಗುತ್ತದೆ. ಬಾಣನ ಶೈಲಿಯಂತೆ ಈ ಮಾತಿನಲ್ಲಿಯೂ ಶ್ಲೇಷವಿರುವುದೂ ಒಂದು ಸ್ವಾರಸ್ಯ. ಕಾದಂಬರಿ ಎಂದರೆ ಬಾಣನ ಕೃತಿಯಾದ ಕಾದಂಬರಿಯಷ್ಟೇ ಅಲ್ಲದೇ 'ಸಾರಾಯಿ' ಎಂಬ ಅರ್ಥದಲ್ಲಿಯೂ ಬಳಕೆಯಲ್ಲಿದೆ. ಹಾಗಾಗಿ ಯಾವ ಕಾದಂಬರಿಯ ರಸವನ್ನು ಅರಿತರೂ ಆಹಾರ ರುಚಿಸುವುದಿಲ್ಲ ಎಂಬುದಂತೂ ಸತ್ಯ. ಅಲ್ಲದೇ ಬಾಣಭಟ್ಟನ ಕಾದಂಬರಿ ಓದುಗನಲ್ಲಿ ಹುಟ್ಟಿಸುವ ಕುತುಕ ಅದರ ಶೈಲಿಯ ಸ್ವಾರಸ್ಯ ಇವುಗಳೆಲ್ಲದರಿಂದ ಸಂಸ್ಕೃತದ ಇತಿಹಾಸದಲ್ಲೇ ಅದೊಂದು ಅಪೂರ್ವಕೃತಿಯಾಗಿದೆ. ಹಾಗಾಗಿಯೇ "ಗದ್ಯಂ ಕವೀನಾಂ ನಿಕಷಂ ವದಂತಿ" ಎಂಬ ಮಾತೂ ಹುಟ್ಟಿಕೊಂಡಿತು. ಏಕೆಂದರೆ ಪದ್ಯವೊಂದನ್ನು ಯಾರು ಬೇಕಾದರೂ ಬರೆದುಬಿಡಬಹುದು.(ಆಧುನಿಕ ಕವಿತೆಗಳನ್ನೂ ಸೇರಿಸಿಕೊಂಡು!! ನಾ.ಕಸ್ತೂರಿಯವರ ಅನರ್ಥಕೋಶದ ಮಾತನ್ನೂ ಸೇರಿಸಬಹುದು: "ಗದ್ಯ ಬರೆಯಲಾರದವ ಪದ್ಯ ಬರೆದು ಸೇಡು ತೀರಿಸಿಕೊಂಡ" ಎಂದು) ಅದು ನೀರಸವಾಗಿದ್ದರೂ ಅದರ ಛಂದೋಬಂಧವೇ(ನವ್ಯಕವಿತೆಗಳನ್ನು ಬಿಟ್ಟು) ಅದಕ್ಕೊಂದು ಗಟ್ಟಿತನವನ್ನು ಕೊಟ್ಟುಬಿಡುತ್ತದೆ. ಆದರೆ ಗದ್ಯವೆಂದಾದ ಮೇಲೆ ಅದರಲ್ಲಿ ತನ್ನದೇ ಆದ ಬಿಗಿ ಸಾರ್ಥಕಪದಬಂಧಗಳ ಮಧುರವಾಗುವ ಶೈಲಿ ಓದುಗರಿಗೆ ಬೇಸರ ತರಿಸದಿರುವಂತಹ ಕಥಾ ವಿಸ್ತಾರ ಇತ್ಯಾದಿಗಳೆಲ್ಲವೂ ಇರಬೇಕಲ್ಲದೇ ಸೂಕ್ತರೀತಿಯಲ್ಲಿ ಹೆಣೆದುಕೊಂಡಿರಬೇಕು. ಅದಕ್ಕೇ ಅನೇಕ ಕವಿಗಳು ಗದ್ಯದಲ್ಲಿಯೂ ಚಂಪುವಿನಲ್ಲಿಯೂ ಕಾವ್ಯವನ್ನು ರಚಿಸಲು ಹಿಂಜರಿದರಿರಬೇಕು.
PC:Internet
  

ಇಂತಹ ಬಾಣನ ಕಾದಂಬರಿಯನ್ನು ನಾಗವರ್ಮ ಕನ್ನಡಕ್ಕೆ ಅನುವಾದಿಸುವಾಗ ಒಂದು ಉತ್ತಮ ಬದಲಾವಣೇ ಮಾಡಿಕೊಂಡಿದ್ದೇನೆಂದರೆ ಅದನ್ನು ಚಂಪುವಿನಲ್ಲಿ ಅನುವಾದಿಸಲು ಹೊರಟಿದ್ದು. ಅಲ್ಲದೇ ಬೇಕಾದಷ್ಟು ಸ್ವಾತಂತ್ರ್ಯವನ್ನು ತೆಗೆದುಕೊಂಡು ಕೆಲವಷ್ಟು ಸ್ವಾರಸ್ಯಗಳನ್ನು ಮಾತ್ರವೇ ಉಳಿಸಿಕೊಂಡು ಹಲವಾರು ವರ್ಣನೆಗಳ ಗದ್ಯಭಾಗವನ್ನು ಬಿಟ್ಟು ಅನುವಾದ ಮಾಡಿರುವುದು ಇವುಗಳಿಂದ ಸಂಸ್ಕೃತಕಾದಂಬರಿಯ ಕನ್ನಡರೂಪದ ಸಾರಸಂಗ್ರಹವಿದೆಂದರೆ ತಪ್ಪಾಗಲಾರದೇನೋ!
ಬಾಣಭಟ್ಟನ ಸಂಸ್ಕೃತ ಕಾದಂಬರಿಯನ್ನು ಸಶಕ್ತವಾಗಿ ಸಾಲಂಕಾರವಾಗಿ ಕನ್ನಡದಲ್ಲಿ ಅನುವಾದ ಮಾಡಿದ ನಾಗವರ್ಮನ ಪದ್ಯಶೈಲಿ  ಹಾಗೆಯೇ ಸುಲಭವೇದ್ಯವಾಗುವ ಪದಪ್ರಯೋಗಗಳು ಉಳಿದ ಹಳಗನ್ನಡಕವಿಗಳಂತೆ ಅರ್ಥಮಾಡಿಕೊಳ್ಳಲು ಕ್ಲೇಶವಾಗುವುದಿಲ್ಲ.  ಏಕೆಂದರೆ ಅವನ ಪದ್ಯಗಳಲ್ಲಿ ಕನ್ನಡಪದಗಳ ಜೊತೆ ರೂಢಿಯ ಸರ್ವಜನವೇದ್ಯವಾಗುವ ಸಮಸಂಸ್ಕೃತಪದಗಳೇ ಹೆಚ್ಚಾಗಿ ಬಳಸಲ್ಪಟ್ಟಿರುವುದು. ಅವನ ಕಾವ್ಯದ ಮೋಡಿಗೆ ಭೋಜರಾಜನು ಅನೇಕ ಜಾತ್ಯಶ್ವಗಳನ್ನು ನೀಡಿ ಗೌರವಿಸಿದ್ದನೆಂದು ಅವನ ಪದ್ಯಗಳಲ್ಲಿಯೇ ತಿಳಿಯುತ್ತದೆ.

ನಾಗವರ್ಮನ ಪದ್ಯಗಳ ಶೈಲಿಯನ್ನು ಅವಲೋಕಿಸಲು ಒಂದೆರಡು ಪದ್ಯಗಳನ್ನು ನೋಡಬಹುದು:-
ಶಾರ್ದೂಲವಿಕ್ರೀಡಿತ||
ಬಾಣಂ ವಲ್ಲಭನಕ್ಕುಮೆಂದು ಪಡೆದಾ ವಾಗ್ದೇವಿಗಬ್ಜೋಧ್ಭವಂ
ಜಾಣಿಂ ಬಾಣಿಯೆನಿಪ್ಪದೊಂದು ಪೆಸರಂ ಮುನ್ನಿತ್ತನೆಂದಂದು ಪೋ
ಮಾಣಿನ್ನನ್ಯ ಕವಿಸ್ತುತಿವ್ಯಸನಮಂ ವಾಗ್ಜಾತಚಾತುರ್ಯಗೀ
ರ್ವಾಣಂ ತಾನೆನೆ ಸಂದ ಬಾಣನೆ ವಲಂ ವಂದ್ಯಂ ಪೆರರ್ವಂದ್ಯರೇ||

("ಬಾಣನು ಮುಂದೆ ಇವಳ ವಲ್ಲಭನಾಗುತ್ತಾನೆ" ಎಂದು ವಾಗ್ದೇವಿಯನ್ನು ಹುಟ್ಟಿಸಿದಾಗ ಬ್ರಹ್ಮನು ಅವಳಿಗೆ 'ಬಾಣಿ'(ವಾಣಿ) ಎಂಬ ಹೆಸರನ್ನು ಇಟ್ಟ. ಹೀಗಿರಲು ಬೇರೆ ಕವಿಗಳ ಸ್ತುತಿಯನ್ನು ಮಾಡುವ ವ್ಯಸನ ನಮಗೇತಕ್ಕೆ! ಹೋ.. ಬೇಡ!  ಬ್ರಹ್ಮನ ಚಾತುರ್ಯದ ಗೀರ್ವಾಣನೇ ತಾನೆನುವಂತೆ ಸಲ್ಲುತ್ತಿರುವ ಬಾಣನೇ ವಂದ್ಯ. ಬೇರೆಯ ಕವಿಗಳು ವಂದ್ಯರೇ!? )

ಅಷ್ಟಾದ ಬಳಿಕ ಕಥಾಮುಖದಲ್ಲಿ ಶೂದ್ರಕನೆಂಬ ರಾಜನಿದ್ದನೆಂಬುದನ್ನು ಹೇಳಲು ಪ್ರಾರಂಭಿಸುತ್ತಾ ಬಾಣನ "ಆಸೀದಶೇಷ ನರಪತಿಶಿರಸಮಭ್ಯರ್ಚಿತ ಶಾಸನಃ ಪಾಕಶಾಸನ ಇವಾಪರಃ ಚತುರುಧಧಿ ಮಾಲಾಮೇಖಲಾ ಭುವೋ ಭರ್ತಾ, ಪ್ರತಾಪಾನುರಾಗಾವನತ ಸಮಸ್ತಸಾಮಂತಚಕ್ರಃ ಚಕ್ರವರ್ತಿ ಲಕ್ಷಣೋಪೇತಃ......" ಇತ್ಯಾದಿ ಪುಂಖಾನುಪುಂಖವಾಗಿ ಸಾಗುವ ಉಲ್ಲೇಖ ಪರಿಸಂಖ್ಯಾಶ್ಲೇಷಾದ್ಯಂಕಾರಯುತವಾದ ಮಾತನ್ನು ಒಂದು ಚಂಪಕಮಾಲೆಯಲ್ಲಿ ಹೀಗೆ ಸೆರೆಹಿಡಿಯುತ್ತಾನೆ

ಇಳೆಯೊಳದೊರ್ವನಿಂದ್ರನೆನೆ ಸಂದ ಸಮೃದ್ಧಿಯೊಳೊಂದಿ ಕೂಡಿ ತ
ನ್ನೊಳೆ ನೃಪಲಕ್ಷಣಂ ನೆಗೞೆ ದೋರ್ವಲದಿಂ ಚತುರಬ್ಧಿ ಮೇಖಲಾ
ವಳಯಿತ ಭೂಮಿಗಾದನೆಱೆಯಂ ನೃಪತಿಪ್ರಭುಲೋಕಮಂ ನಿಜೋ
ಜ್ವಳತರಕೀರ್ತಿಯಿಂ ನೆಱೆಯೆ ಮುದ್ರಿಸಿ ಶೂದ್ರಕನೆಂಬ ಭೂಭುಜಂ||
(ಭೂಮಿಯಲ್ಲಿ ಒಬ್ಬ ಇಂದ್ರನೆನುವಂತೆ ಸಮೃದ್ಧಿಯಲ್ಲಿ ಒಂದುಕೂಡಿ, ತನ್ನಲ್ಲಿ ನೃಪಲಕ್ಷಣಗಳೆಲ್ಲ ಕೂಡಿರಲು ತೋಳಬಲದಿಂದ ನಾಲ್ಕು ಸಮುದ್ರಗಳಿಂದಾದ ಭೂಮಿಗೆ ಪತಿಯಾಗಿ ರಾಜರಸಮೂಹವನ್ನು ಆವರಿಸಿದ ತನ್ನ ಉಜ್ಜ್ವಲವಾದ ಕೀರ್ತಿಯಿಂದ ಮುದ್ರಿಸಿ ಶೂದ್ರಕನೆಂಬ ರಾಜನಿದ್ದನು)
ಇಲ್ಲಿ 'ಮುದ್ರಿಸಿ ಶೂದ್ರಕ' ಎಂಬಲ್ಲಿ ಅನುಪ್ರಾಸವನ್ನೂ ಮಾಡಿ ಹೆಚ್ಚು ಸಮಾಸಭೂಯಿಷ್ಟ ಪದಪ್ರಯೋಗಗಳಿಲ್ಲದೇ ಸುಲಭವೇದ್ಯವಾಗುವಂತಹ ಸುಲಲಿತ ಪದ್ಯಸೃಷ್ಟಿಯನ್ನು ಮಾಡಿರುವುದು ನಾಗವರ್ಮನ ಶೈಲಿಗೆ ಕರಮುಕುರದಂತೆ ಕಾಣುತ್ತದೆ. ಅವನು ಆಯ್ದುಕೊಂಡ ಚಂಪಕಮಾಲೆಯೂ ಸಂದರ್ಭಕ್ಕೆ ತಕ್ಕಂತೆ ರಸಪೋಷಕವಾದ ಲಲಿತವಾದ ಇಂತಹ ಕೋಮಲಭಾವನೆಗಳಿಗೇ ಯುಕ್ತವಾದ ಛಂದಸ್ಸೂ ಆದಕಾರಣ ಛಂದಸ್ಸಿನಲ್ಲೂ ಸೊಗಸನ್ನೂ ಔಚಿತ್ಯವನ್ನೂ ಇಟ್ಟುಕೊಂಡಿರುವುದೂ ಸ್ವಾರಸ್ಯವಾಗಿದೆ. 

ಗುರುವಾರ, ಮೇ 8, 2014

ಸಹೃದಯಕಾಲ-೧೧:ದ್ರೌಪದಿಯ ವರ್ಣನೆ

PC:Internet

ಕುಮಾರವ್ಯಾಸನ ಬಗ್ಗೆ ಕೇಳದವರಾರು? ಅವನ ಪದ್ಯವನ್ನು ಮೆಚ್ಚದಿರುವರಾರು? "ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು! ಭಾರತ ಕಣ್ಣಲಿ ಕುಣಿವುದು! ಮೆಯ್ಯಲಿ ಮಿಂಚಿನ ಹೊಳೆ ತುಳುಕಾಡುವುದು!" ಎಂದು ಕುವೆಂಪು ಅವರೇ ತೋರಣನಾಂದಿಯಲ್ಲಿ ಹೇಳುತ್ತಾರೆ.(ಪ್ರಕಾಶನ:ಪ್ರಸಾರಾಂಗ ಮೈಸೂರು ವಿ.ವಿ) 

ಕುಮಾರವ್ಯಾಸ ತನ್ನಕಾವ್ಯ ತೊಳಸಿಯವುದಕ(ಬರಿಯ ತುಳಸಿ ನೀರು)ಎಂದು ಹೇಳಿಕೊಂಡರೂ ಅದೊಂದು ರಸಾಮೃತಸರಸ್ಸೇ ಸರಿ! ಹಿಂದೆ ಪಂಪನ ಭಾರತದಲ್ಲಾದ ಅನೇಕ ಲೋಪದೋಷಗಳನ್ನು ತೊಡೆದು ತನ್ನದೇ ಆದ ಅದ್ಭುತವಾದ ಕಾವ್ಯಪ್ರಪಂಚವೊಂದನ್ನು ಸೃಷ್ಟಿಸಿದ್ದಾನೆ ಕುಮಾರವ್ಯಾಸ. ಅವನ ಕುರಿತು ಅದೆಷ್ಟು ದಂತಕಥೆಗಳೋ! ಅದೆಷ್ಟು ಸತ್ಯ ಕಥೆಗಳೋ! ಕುಮಾರವ್ಯಾಸನ ಭಾರತವೊಂದನ್ನೇ ಕುರಿತು ಅದೆಷ್ಟು ಲೇಖನಗಳು, ಸಂಶೋಧನಪ್ರಬಂಧಗಳೂ ಅಲ್ಲದೇ ವ್ಯಾಖ್ಯಾನಗಳೂ ಬಂದಿವೆಯೋ ದೇವರಿಗೇ ಗೊತ್ತು! ಇಂತಹ ಅಪೂರ್ವವಾದ ಕಾವ್ಯಸೃಷ್ಟಿಯಲ್ಲಿ ಕುಮಾರವ್ಯಾಸ ತನ್ನ ಕವಿಪ್ರತಿಭೆಯನ್ನು ತೋರಿಸುತ್ತಾ ಅದೆಷ್ಟೋ ರಸಮಯ ಪದ್ಯಗಳನ್ನು ಕಟ್ಟಿದ್ದಾನೆ. ಹಿಂದ್ದೆ ವಸಂತದ ವರ್ಣನೆಯನ್ನು ನೋಡಿಯಾಗಿದೆ ಕೂಡ. ಇಂತಹ ಅನೇಕ ಕಡೆಗಳಲ್ಲಿ ಅವನ ವರ್ಣನೆಗೆ ಅವನೇ ಸಾಟಿ.
(ರಸಭರಿತ ಪದ್ಯಗಳ ಗದ್ಯಾನುವಾದ ಮಾಡುವಲ್ಲಿ ನನ್ನಿಂದ ಆದ ಪ್ರಮಾದಗಳನ್ನು ಸಹೃದಯರು ತಿದ್ದಬೇಕು)
ಕುಮಾರವ್ಯಾಸನ ಕರ್ಣಾಟಭಾರತಕಥಾಮಂಜರಿಯ ಆದಿಪರ್ವದ ಹದಿಮೂರನೆಯ ಸಂಧಿಯಲ್ಲಿ ಪರಿಪರಿಯಾಗಿ ದ್ರೌಪದಿಯ ವರ್ಣನೆ ಮಾಡುತ್ತಾನೆ. ಸೂಚನೆಯ ಪದ್ಯವನ್ನೇ -"ಕಮಲಮುಖಿ ನಡೆತಂದಳಂದಿನ ಕಮಲೆಯೆನೆ ಪಾಂಚಾಲಸುತೆ ನಿಜರಮಣರನು ನೋಡಿದಳು ಪೃಥ್ವೀಪಾಲ ಪಂಕ್ತಿಯಲಿ" ಎಂದು ಪ್ರಾರಂಭಿಸುತ್ತಾನೆ.ಇಲ್ಲಿ ಬರುವ ದ್ರೌಪದಿಯ ಅನೇಕಾನೇಕ ವರ್ಣನೆಗಳ ಪದ್ಯಗಳಲ್ಲಿ ಒಂದೊಂದೂ ಮುಕ್ತಕಗಳೇ ಸರಿ. ದ್ರೌಪದಿಯ ಸ್ವಯಂವರಕ್ಕೆಂದು ಅನೇಕಾನೇಕ ರಾಜರು ನೆರೆದಿದ್ದಾರೆ. ಪಾಂಡವರೂ ತಮ್ಮ ಬ್ರಾಹ್ಮಣವೇಷದಲ್ಲಿ ಅಲ್ಲಿಗೆ ಬಂದಿದ್ದಾರೆ. ದ್ರುಪದರಾಜ ದೃಷ್ಟದ್ಯುಮ್ನನಿಗೆ ಹೇಳಿ ಮತ್ಸ್ಯಯಂತ್ರವನ್ನು ತರಿಸಿ ಅದರೊಡನೆಯೇ ಬಾಣ ಬಿಲ್ಲುಗಳನ್ನು ತರಿಸಿ ನೆರೆದವರಿದಿರು ನಿಯಮವನ್ನು ಘೋಷಿಸಿದ್ದಾನೆ. ಅವನ ಆಜ್ಞೆಯ ಮೇರೆಗೆ  ಕೋಮಲಾಂಗಿಯಾದ ದ್ರೌಪದಿ ಒಳ್ಳೆಯ ರೇಶಿಮೆಯ ಉಡುಗೆಯನ್ನುಟ್ಟು ತನ್ನ ಸಖಿಯರ ಜೊತೆಯಲ್ಲಿ ಬರುತ್ತಿದ್ದಾಳೆ. ಆಗ-

ಹೊರೆಯ ಸಖಿಯರ ನೋಟ ಮೈಯಲಿ
ಹರಿದು ಬಳಲದು ಚಿತ್ತವೀಕೆಯ 
ಧರಿಸಿ ಕುಸಿಯದು ಕಿವಿಗಳಿಗೆ ಮೆಲ್ನುಡಿಯ ಸವಿ ಸವಿದು
ಅರುಚಿಯಾಗದು ನಾಸಿಕವು ಮೈ 
ಪರಿಮಳದ ಪೂರದಲಿ ಗಂಧಾಂ
ತರಕೆ ನೆರೆಯದು ರೂಪನೇನೆಂಬೆನು ನಿತಂಬಿನಿಯ||೧೦||
(ಅವಳ ಹೊರೆಯ ಸಖಿಯರ ನೋಟ ಮೈಯಲ್ಲಿ ಹರಿದು ಬಳಲುತ್ತಿರಲಿಲ್ಲ. ಇವಳನ್ನು ಧರಿಸಿ ಮನಸ್ಸು ಕುಸಿಯುತ್ತಿರಲಿಲ್ಲ.ಅವಳ ಮೆಲ್ನುಡಿಗಳನ್ನು ಕೇಳಿ ಕಿವಿಗಳಿಗೆ ಬೇಸರವಾಗುವುದಿಲ್ಲ. ಅವಳ ಮೈ ಪರಿಮಳದ ಪೂರದಲ್ಲಿ ಬೇರೆಯ ಗಂಧಕ್ಕೆ ನಾಸಿಕವು ನೆರೆಯುತ್ತಿರಲಿಲ್ಲ. ಅಂತಹ ಸುಂದರಿಯ ರೂಪವನ್ನು ಏನೆನ್ನುವುದು.)

ಮುಂದೆ-
ಪರಿಮಳದ ಪರಮಾಣುಗಳ ಸಂ
ವರಿಸಿ ಮುಕ್ತಾಫಲದ ಕೆಂದಾ
ವರೆಯ ಮರಿದುಂಬಿಗಳ ವರ್ಣಾಂತರವನಳವಡಿಸಿ
ಸರಸ ವೀಣಾ ಧ್ವನಿಯ ಹಂಸೆಯ 
ಗರುವಗತಿಗಳನಾಯ್ದು ಮನ್ಮಥ
ವರವಿರಿಂಚಿಯೆ ಸೃಜಿಸಿದನು ಪಾಂಚಾಲನಂದನೆಯ||೧೭||
(ದ್ರೌಪದಿಯನ್ನು ಪರಿಮಳದ ಪರಮಾಣುಗಳನ್ನು ಸೇರಿಸಿ, ಮುತ್ತುಗಳ, ಕೆಂಪಾದ ತಾವರೆಗಳ ಮತ್ತು ಮರಿದುಂಬಿಗಳ ವರ್ಣಗಳನ್ನು ಸೇರಿಸಿ ಸರಸವಾದ ವೀಣೆಯ ಧ್ವನಿಯನ್ನೂ ಹಂಸದ ಗರ್ವದ ನಡಿಗೆಯನ್ನೂ ಆಯ್ದು ಮನ್ಮಥ ಎಂಬ ಬ್ರಹ್ಮನೇ ಸೃಷ್ಟಿಸಿದನು.)

ಇವಲ್ಲದೇ ಈ ಸಂಧಿಯಲ್ಲಿ ದ್ರೌಪದಿಯ ತನುವಿನ ಸೌಂದರ್ಯ ಬಿಂಕ ಬಿನ್ನಾಣಗಳನ್ನು ವರ್ಣಿಸುವ ಅನೇಕಾನೇಕ ಪದ್ಯಗಳ ರಸಾಸ್ವಾದ ಮಾಡಬಹುದು.
ಅದೆಲ್ಲದರ ಬಳಿಕ ಅವಳಿಗೆ ಅವಳಣ್ಣ ಬಂದ ನೃಪಾಲರ ಪರಿಚಯವನ್ನು ಮಾಡಿಕೊಟ್ಟು ಇವನು ಇಂತಹ ದೇಶದ ರಾಜ. ಇವನು ಇಂತಹವನು ಎಂದೆಲ್ಲ ಹೇಳುತ್ತಾನೆ.ಆ ನಂತರ ಅವಳ ಸೌಂದರ್ಯಾತಿಶಯವನ್ನು ನೊಡಿದ ನೃಪರ ಪರಿಸ್ಥಿತಿ ಹೇಗಿತ್ತೆಂಬುದನ್ನೂ ಹೇಳುತ್ತಾನೆ.

ಕೆಲರು ಮಧುರಾಪಾಂಗದಲಿ  ಕಂ
ಗಳ ಮರೀಚಿಯ ಬೆಳಗಿನಲಿ  ಕೆಲ
ರೆಳೆನಗೆಯ ಮಿಂಚಿನಲಿ ಸಖಿಯರ ಮೇಳವಾತಿನಲಿ
ಲಲನೆ ನೋಡಿದಳೆಂದು ಸೊಗಸಿನ
ಲೊಲಿವ ಸಖಿಯರಿಗೆಂದಳೆಂದೊಳ
ಗೊಳಗೆ ಬೆರೆತರು ಬಯಲು ಮಧುವಿನ ಬಾಯ ಸವಿಗಳಲಿ||೬೫||
(ರಾಜರು ಕೆಲವರು ಮಧುರವಾದ ಕಣ್ಣ ನೋಟದಲ್ಲಿ, ಕೆಲವರು ಕಣ್ಣಿನ ಬೆಳಕಿನ ಕಿರಣಗಳಲ್ಲಿ, ಕೆಲವರು ಎಳನಗೆಯ ಮಿಂಚಿನಲ್ಲಿ, ಕೆಲವರು ಸಖಿಯರ ಮೇಳದ ಮಾತಿನಲ್ಲಿ, ದ್ರೌಪದಿ 'ನನ್ನನ್ನು ನೋಡಿದಳು' ಎಂದು ಕೆಲವರು , ಸೊಗಸಿನಲ್ಲಿ ಒಲಿವ ಸಖಿಯರ ಬಳಿ 'ತನ್ನ ಬಗ್ಗೆ ಹೇಳಿದಳೆಂದು' ಕೆಲವರು ಹೀಗೆ ಆ ರಾಜರುಗಳೆಲ್ಲ ಸಂತಸ ಪಡುತ್ತಿದ್ದರು. )

ಮಡಿಸಿದೆಲೆ ಬೆರಳೊಳಗೆ ಬಾಯೊಳ
ಗಡಿಸಿದೆಲೆ ಬಾಯೊಳಗೆ ಸಚಿವರ 
ನುಡಿಯ ಕೇಳರು ಸುಳಿಯ ಕಾಣರು ಲೋಚನಾಗ್ರದಲಿ
ಕಡುಮುಳಿದ ಕಂದರ್ಪ ಶರವವ
ಘಡಿಸಿ ಕೈಗಳ ನೋಡಿ ನೃಪರೆವೆ
ಮಿಡುಕದಿರ್ದರು ಬೆರಳ ಮೂಗಿನ ಹೊತ್ತ ದುಗುಡದಲಿ||೬೭||
(ದ್ರೌಪದಿಯ ರೂಪು ಲಾವಣ್ಯಗಳು ರಾಜರ ಮೇಲೆ ಹೇಗೆ ಪರಿಣಾಮ ಬೀರಿತ್ತೆಂದರೆ ಮಡಿಸಿದ ವೀಳ್ಯದೆಲೆ ಬೆರಳಲ್ಲಿಯೇ ಇತ್ತು, ಬಾಯೊಳಗೆ ಇಟ್ಟುಕೊಂಡ ಎಲೆ ಬಾಯೊಳಗೇ ಇತ್ತು. ಸಚಿವರ ಮಾತುಗಳು ಕೇಳುತ್ತಲೇ ಇರಲಿಲ್ಲ. ಕಣ್ಣಿನ ತುದಿಯಲ್ಲಿ ಸುಳಿಯ ಕಾಣದಾದರು. ಬಹಳ ಸಿಟ್ಟಾದ ಮನ್ಮಥನ ಬಾಣದಂತಿರುವ ಕೈಗಳ ನೋಡಿ ಆ ರಾಜರು ಕಣ್ಣೆವೆ ಮಿಡುಕದೆ ಮೂಗಿನ ಮೇಲೆ ಬೆರಳಿಟ್ಟುಕೊಂಡು ದುಗುಡವನ್ನು ಹೊತ್ತಂತೆ ಇದ್ದರು.)

ಗುರುವಾರ, ಮೇ 1, 2014

ಸಹೃದಯಕಾಲ-೧೦:ನಾಂದೀಪದ್ಯದ ಮುಕ್ತಕ


ಅವಧಾನ ಪದ್ಯಗಳೆಲ್ಲವೂ ಮುಕ್ತಕಗಳೇ. ಮುಕ್ತಕವೆಂದರೆ ಮುಕ್ತವಾಗಿರುವುವು ಎಂಬುದೂ ಹೌದು. ಹಾಗೆಯೇ ಮುತ್ತುಗಳೆಂದೂ ಹೌದು,  ನಿಜಾರ್ಥದಲ್ಲಿ ಕೂಡ ಈ ಪದ್ಯಗಳೆಲ್ಲ ಮುತ್ತುಗಳೆಂಬುದೇ ನಿಜ. ಅಲ್ಲಿನ ಸ್ವಾರಸ್ಯವೆಂದರೆ ಪೃಚ್ಛಕರು ಕೇಳಿದ ವಸ್ತುವನ್ನಾಧರಿಸಿ ಅವಧಾನಿಗಳು ಆಶುವಾಗಿ ಪದ್ಯ ರಚನೆ ಮಾಡುತ್ತಾರೆಂಬುದು. ಬಹಳಷ್ಟು ಜನರಿಗೆ ಅವಧಾನದ ಸ್ವರೂಪ ಹಾಗೂ ವೈಶಿಷ್ಟ್ಯಗಳು ಗೊತ್ತಿರುವ ವಿಷಯವೇ ಆದ ಕಾರಣ ಅದನ್ನು ಹೆಚ್ಚು ವಿಸ್ತರಿಸಲು ಹೋಗುವುದಿಲ್ಲ. ಅಲ್ಲದೇ ಅದಾಗಲೇ ಅವಧಾನದ ಬಗ್ಗೆ ಹಿಂದೊಮ್ಮೆ ಲೇಖನವನ್ನೂ ಬರೆದಿದ್ದೆ. ಹಿಂದೆ ನಡೆದ ಅವಧಾನದ ಪದ್ಯಗಳಲ್ಲಿ ಕೆಲವನ್ನು ಇದೇ ಕಥಾಕಾಲದಲ್ಲಿ ಪ್ರಸ್ತುತಪಡಿಸಿದ್ದೆ ಕೂಡ. (ಶತಾವಧಾನಿ ಆರ್ ಗಣೇಶ ಅವರ 968ನೇ ಅಷ್ಟಾವಧಾನ)
ಇಂದು ಕೂಡ ಶತಾವಧಾನಿ ಡಾ||ಗಣೇಶ್ ಅವರ ಮೊತ್ತಮೊದಲ ತುಂಬುಗನ್ನಡದ ಶತಾವಧಾನದ ಒಂದು ಪದ್ಯವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಅದರ ಸ್ವಾರಸ್ಯವನ್ನು ಹೇಳುವ ಮೊದಲು, ಮೊತ್ತಮೊದಲ ತುಂಬುಗನ್ನಡದ ಶತಾವಧಾನದ ಸ್ವಾರಸ್ಯವನ್ನು ಹೇಳುವುದು ಯುಕ್ತವೆನ್ನಿಸುತ್ತದೆ. ಸಂಪೂರ್ಣವಾಗಿ ಕನ್ನಡದಲ್ಲೇ ಶತಾವಧಾನ ನಡೆದ ದಾಖಲೆ ಹಿಂದಾಗಿರಲಿಲ್ಲ. ಹಾಗಾಗಿ ಪದ್ಯಪಾನ ಸಂಸ್ಥೆಯವರು ಆಯೋಜಿಸಿದ್ದ ಮೊತ್ತಮೊದಲ ತುಂಬುಗನ್ನಡದ ಶತಾವಧಾನ ಕಳೆದ ೨೦೧೨ನೇ ಇಸವಿಯ ನವೆಂಬರ್ ೩೦ರ ಅಪರಾಹ್ಣದಿಂದ ಪ್ರಾರಂಭವಾಗಿ ಡಿಸೆಂಬರ್ ೨ರ ರಾತ್ರಿಯವರೆಗೆ ಮೂರುದಿನಗಳ ಕಾಲ ಬೆಂಗಳೂರಿನ ಜಯನಗರದ ಎನ್.ಎಂ.ಕೆ.ಆರ್.ವಿ ಕಾಲೇಜಿನ ಮಂಗಳಮಂಟಪದಲ್ಲಿ ನಡೆದದ್ದು ಸಹೃದಯರೆಲ್ಲರಿಗೂ ಅವಧಾನರಸಿಕರೆಲ್ಲರಿಗೂ ತಿಳಿದ ವಿಷಯವೇ ಆಗಿದೆ. ಈ ಅವಧಾನದಲ್ಲಿ ಪೃಚ್ಛಕನಾಗಿ ಪಾಲ್ಗೊಳ್ಳುವ ಸುಯೋಗವೂ ನನ್ನ ಪಾಲಿಗೆ ಒದಗಿತ್ತು. ಅಲ್ಲದೇ  ಶತಾವಧಾನಿ ಗಣೇಶ್ ಅವರನ್ನು ನಾನು ಮುಖತಃ ನೋಡಿದ್ದೂ ಇಲ್ಲೇ ಮೊತ್ತಮೊದಲಬಾರಿಗೆ !! ಅಲ್ಲದೇ ಅವಧಾನವನ್ನು ನೇರವಾಗಿ ಪೂರ್ಣಸ್ವರೂಪದಲ್ಲಿ ಮೊದಲಬಾರಿಗೆ ನೋಡಿದ್ದೂ ಇದೇ ವೇದಿಕೆಯಲ್ಲಿ ಅದೂ ಪೃಚ್ಛಕನಾಗಿ !!
"ಶತಾವಧಾನ ಶಾಶ್ವತೀ"  ಮುಖಪುಟ 
ಇನ್ನು ಅವಧಾನದ ಆದ್ಯಂತ ನಡೆದ ವಾಗ್ದೇವಿಯ ವಿಲಾಸದಲ್ಲಿ ಅದೆಷ್ಟು ರಸಮಯ ಪ್ರಸಂಗಗಳು ನಡೆದವೋ ಅವನ್ನೆಲ್ಲ ಇಲ್ಲಿ ಬರೆಯುವುದಂತೂ ಅಸಾಧ್ಯವೇ ಸರಿ!!! ಆದರೆ ಅವಧಾನ ಪದ್ಯಗಳಲ್ಲಿ ಕೆಲವನ್ನಾದರೂ ಆಗಾಗ ಹಂಚಿಕೊಳ್ಳುತ್ತೇನೆಂದು ಆಶ್ವಾಸನೆ ನೀಡಬಲ್ಲೆ.
ಈ ಅವಧಾನದ ಪದ್ಯಗಳೆಲ್ಲವೂ "ಶತಾವಧಾನಶಾಶ್ವತೀ" ಎಂಬ ಪುಸ್ತಕ ರೂಪದಲ್ಲಿ ಅದಾಗಲೇ ಪ್ರಕಟವಾಗಿವೆ. ಅಲ್ಲದೇ ಸಾಂದ್ರಮುದ್ರಿಕೆಗಳ(DVD) ರೂಪದಲ್ಲಿಯೂ ಲಭ್ಯವಿದೆ.(ಆಸಕ್ತರು ಪ್ರತಿಗಳಿಗೆ "ಪದ್ಯಪಾನ" ಇಲ್ಲಿ ಕ್ಲಿಕ್ಕಿಸಿ)

ಈ ಶತಾವಧಾನದ ಮೊದಲನೆಯ ನಾಂದಿ ಪದ್ಯ "ಖಚರಪ್ಲುತ" ಎಂಬ ವಿಭಿನ್ನವಾದ ವಿರಳಪ್ರಚುರವಾದ ಛಂದಸ್ಸಿನಲ್ಲಿದೆ. ಆ ಪದ್ಯವನ್ನೇ ಈ ಸಂಚಿಕೆಯ ಸಹೃದಯಕಾಲಕ್ಕೆ ಆರಿಸಿಕೊಂಡಿದ್ದು-

ರಕ್ತಚಂಚುಪದಂ ಚಿರನೀರಕ್ಷೀರವಿವೇಕವಿದಾಂವರಂ 
ಯುಕ್ತಸದ್ದ್ವಿಜಪಕ್ಷಮಲಾ ಕೀಲಾಲನಿವಾಸಮತಿದ್ರುತಂ
ಸಕ್ತಮಾನಸಮಾನಮೆನಲ್ ಮಜ್ಜಿಹ್ವೆ ನಿರಾಳಮರಾಳಮೆಂ-
ದುಕ್ತಿಶಕ್ತಿಶಿವೇ! ಇದನೇರುತ್ತೀ ಅವಧಾನಮನೋವುದೌ||


 ಶ್ಲೇಷದಲ್ಲಿ ಅವಧಾನಿಗಳು ತಮ್ಮ ನಾಲಗೆ ಹಾಗೂ ಹಂಸವನ್ನು ಸಮೀಕರಿಸುತ್ತಾರೆ. 
ಅನ್ವಯಾರ್ಥ: ರಕ್ತಚಂಚುಪದಂ= ರಕ್ತವರ್ಣದ ಚಂಚು ಹಾಗೂ ಪಾದವುಳ್ಳದ್ದು (ಹಂಸ)/ ಕೆಂಪಾದ ತುದಿಯನ್ನು ಹಾಗೂ ಕೆಂಪಾದ ಪದ/ಸ್ಥಾನವನ್ನು ಹೊಂದಿರುವುದು(ನಾಲಗೆ). ಚಿರನೀರಕ್ಷೀರವಿವೇಕವಿದಾಂ ವರಂ= ಯಾವತ್ತೂ ನೀರು ಹಾಗೂ ಹಾಲಿನ ವ್ಯತ್ಯಾಸವನ್ನು ಅರಿಯುವ ವಿವೇಕವುಳ್ಳವರಲ್ಲಿ ಉತ್ತಮವಾದದ್ದು.(ರಾಜಹಂಸ ಹಾಲು ಮತ್ತು ನೀರನ್ನು ಮಿಶ್ರಮಾಡಿ ಕೊಟ್ಟಾಗ ಹಾಲನ್ನು ಮಾತ್ರ ಸ್ವೀಕರಿಸಿ ನೀರನ್ನು ಬಿಡುತ್ತದೆ ಎಂದು ಕವಿಸಮಯ. ಹಾಗಾಗಿ 'ನೀರಕ್ಷೀರವಿವೇಕ'ಹೊಂದಿರುವುದಾಗಿದೆ.ನಾಲಿಗೆಗೂ ನೀರು ಹಾಗೂ ಹಾಲಿನ ವ್ಯತ್ಯಾಸ ತಿಳಿಯುವುದರಿಂದ ಅದೂ ನೀರಕ್ಷೀರವಿವೇಕ ಹೊಂದಿದೆ.)ಯುಕ್ತಸದ್ದ್ವಿಜಪಕ್ಷಮಲಾ= ಯುಕ್ತವಾದ ಸದ್ದ್ವಿಜಪಕ್ಷ ಅಂದರೆ ಒಳ್ಳೆಯ ಹಕ್ಕಿಗಳ ಜೊತೆಯಲ್ಲಿರುವುದು(ಹಂಸ), ಒಳ್ಳೆಯ ಹಲ್ಲು(ದ್ವಿಜ)ಗಳ ಪಕ್ಕದಲ್ಲಿರುವುದು(ನಾಲಗೆ), ಕೀಲಾಲನಿವಾಸಂ= ನೀರಿನಲ್ಲಿ ವಾಸಮಾಡುವುದು(ಹಂಸ), ಜೊಲ್ಲಿನಲ್ಲಿ ಇರುವುದು (ನಾಲಗೆ), ಅತಿದ್ರುತಂ=ವೇಗವಾಗಿ ಸಂಚರಿಸುವುದು, ಸಕ್ತಮಾನಸಮಾನ= ಮಾನಸ ಸರೋವರದಲ್ಲಿ ಸಕ್ತವಾಗಿರುವುದು(ಹಂಸ), ಮನಸ್ಸಿನ ಹಿಡಿತದಲ್ಲಿರುವುದು (ನಾಲಗೆ), ಮಜ್ಜಿಹ್ವೆ=ನನ್ನ ನಾಳಗೆ ನಿರಾಳಮರಾಳಮೆಂದು= ನಿರಾಳವಾದ ಹಂಸವೆಂದು ಉಕ್ತಿಶಕ್ತಿಶಿವೇ= ಸರಸ್ವತಿಯೇ, ಇದನೇರುತ್ತೀ=ಇದನ್ನು ಏರುತ್ತಾ ಈ ಅವಧಾನಮನೋವುದೌ= ಅವಧಾನವನ್ನು ನೀನು ಮೆಚ್ಚುವಂತಾಗಲಿ.

ಇಲ್ಲಿ ಅವಧಾನದ ಪ್ರಾರಂಭದಲ್ಲಿ ಸರಸ್ವತಿಯ ಸ್ತುತಿ ಮಾಡುತ್ತಾ "ಸರಸ್ವತಿಯೇ, ನೀನು ಹಂಸವನ್ನೇರಿ ಸಂಚರಿಸುವವಳು,  ರಕ್ತಚಂಚುಪದವಾದ, ನೀರಕ್ಷೀರವಿವೇಕವಿದಾಂ ವರಮಾದ, ಯುಕ್ತಸದ್ದ್ವಿಜಪಕ್ಷವಾದ, ಕೀಲಾಲನಿವಾಸನವಾದ, ಅತಿದ್ರುತವಾದ, ಸಕ್ತಮಾನಸಮಾನವಾದ ನನ್ನ ನಾಲಗೆಯನ್ನೇ ನೀನು ಹಂಸವೆಂದು ತಿಳಿದು ಇದನ್ನೇ ಏರು. ನನ್ನ ಜಿಹ್ವೆಯಲ್ಲಿ ನಲಿ" ಎಂಬ ಅರ್ಥವನ್ನು ಹೊಮ್ಮಿಸಿ ಉತ್ತಮ ರಸಮಯ ಪದ್ಯವನ್ನು ಆ ವೇದಿಕೆಯಲ್ಲಿ ಆಶುವಾಗಿ ಹೊಮ್ಮಿಸಿದ್ದಾರೆ ಶತಾವಧಾನಿಗಳು.ಇಲ್ಲಿ ಸಭಂಗ ಅಭಂಗಶ್ಲೇಶಗಳೆರಡೂ ಇವೆ. ಅಲ್ಲದೇ ಜಿಹ್ವೆಯನ್ನು ಹಂಸವೆಂದು ತಿಳಿದು ಸರಸ್ವತಿ ಏರಲಿ ಎಂಬಲ್ಲಿ ಭ್ರಮಾಲಂಕಾರದ ಛಾಯೆ ಕೂಡ ಬರುತ್ತದೆ. ಹಾಗೆಯೇ  ಛಂದಸ್ಸು "ಖಚರ ಪ್ಲುತ" ಅಂದರೆ "ಹಕ್ಕಿಯ ನೆಗೆತ". ಪದ್ಯದಲ್ಲಿ ಕೂಡ ಹಂಸದ ಕುರಿತಾಗಿರುವುದೂ ಅಲ್ಲದೇ ಸರಸ್ವತಿ ಅದನ್ನೇರುವ ಉಲ್ಲೇಖವಿರುವುದು ಇವೆಲ್ಲ ಛಂದಸ್ಸಿನ ಹೆಸರಿನ ಜೊತೆಗೆ ಬಹುವಿಧವಾಗಿ ಹೊಂದಿರುವುದೂ ಒಂದು ವಿಶೇಷ. ಅಷ್ಟೇ ಸ್ವಾರಸ್ಯ!!

ಇಂತಹ ರಸಾಸ್ವಾದವನ್ನು ಮಾಡುವ ಅವಕಾಶ ಸಿಕ್ಕಿದ್ದು ನಮ್ಮ ಅದೃಷ್ಟವಲ್ಲದೇ ಇನ್ನೇನು.?