PC:Internet |
ಕುಮಾರವ್ಯಾಸನ ಬಗ್ಗೆ ಕೇಳದವರಾರು? ಅವನ ಪದ್ಯವನ್ನು ಮೆಚ್ಚದಿರುವರಾರು? "ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು! ಭಾರತ ಕಣ್ಣಲಿ ಕುಣಿವುದು! ಮೆಯ್ಯಲಿ ಮಿಂಚಿನ ಹೊಳೆ ತುಳುಕಾಡುವುದು!" ಎಂದು ಕುವೆಂಪು ಅವರೇ ತೋರಣನಾಂದಿಯಲ್ಲಿ ಹೇಳುತ್ತಾರೆ.(ಪ್ರಕಾಶನ:ಪ್ರಸಾರಾಂಗ ಮೈಸೂರು ವಿ.ವಿ)
ಕುಮಾರವ್ಯಾಸ ತನ್ನಕಾವ್ಯ ತೊಳಸಿಯವುದಕ(ಬರಿಯ ತುಳಸಿ ನೀರು)ಎಂದು ಹೇಳಿಕೊಂಡರೂ ಅದೊಂದು ರಸಾಮೃತಸರಸ್ಸೇ ಸರಿ! ಹಿಂದೆ ಪಂಪನ ಭಾರತದಲ್ಲಾದ ಅನೇಕ ಲೋಪದೋಷಗಳನ್ನು ತೊಡೆದು ತನ್ನದೇ ಆದ ಅದ್ಭುತವಾದ ಕಾವ್ಯಪ್ರಪಂಚವೊಂದನ್ನು ಸೃಷ್ಟಿಸಿದ್ದಾನೆ ಕುಮಾರವ್ಯಾಸ. ಅವನ ಕುರಿತು ಅದೆಷ್ಟು ದಂತಕಥೆಗಳೋ! ಅದೆಷ್ಟು ಸತ್ಯ ಕಥೆಗಳೋ! ಕುಮಾರವ್ಯಾಸನ ಭಾರತವೊಂದನ್ನೇ ಕುರಿತು ಅದೆಷ್ಟು ಲೇಖನಗಳು, ಸಂಶೋಧನಪ್ರಬಂಧಗಳೂ ಅಲ್ಲದೇ ವ್ಯಾಖ್ಯಾನಗಳೂ ಬಂದಿವೆಯೋ ದೇವರಿಗೇ ಗೊತ್ತು! ಇಂತಹ ಅಪೂರ್ವವಾದ ಕಾವ್ಯಸೃಷ್ಟಿಯಲ್ಲಿ ಕುಮಾರವ್ಯಾಸ ತನ್ನ ಕವಿಪ್ರತಿಭೆಯನ್ನು ತೋರಿಸುತ್ತಾ ಅದೆಷ್ಟೋ ರಸಮಯ ಪದ್ಯಗಳನ್ನು ಕಟ್ಟಿದ್ದಾನೆ. ಹಿಂದ್ದೆ ವಸಂತದ ವರ್ಣನೆಯನ್ನು ನೋಡಿಯಾಗಿದೆ ಕೂಡ. ಇಂತಹ ಅನೇಕ ಕಡೆಗಳಲ್ಲಿ ಅವನ ವರ್ಣನೆಗೆ ಅವನೇ ಸಾಟಿ.
(ರಸಭರಿತ ಪದ್ಯಗಳ ಗದ್ಯಾನುವಾದ ಮಾಡುವಲ್ಲಿ ನನ್ನಿಂದ ಆದ ಪ್ರಮಾದಗಳನ್ನು ಸಹೃದಯರು ತಿದ್ದಬೇಕು)
ಕುಮಾರವ್ಯಾಸನ ಕರ್ಣಾಟಭಾರತಕಥಾಮಂಜರಿಯ ಆದಿಪರ್ವದ ಹದಿಮೂರನೆಯ ಸಂಧಿಯಲ್ಲಿ ಪರಿಪರಿಯಾಗಿ ದ್ರೌಪದಿಯ ವರ್ಣನೆ ಮಾಡುತ್ತಾನೆ. ಸೂಚನೆಯ ಪದ್ಯವನ್ನೇ -"ಕಮಲಮುಖಿ ನಡೆತಂದಳಂದಿನ ಕಮಲೆಯೆನೆ ಪಾಂಚಾಲಸುತೆ ನಿಜರಮಣರನು ನೋಡಿದಳು ಪೃಥ್ವೀಪಾಲ ಪಂಕ್ತಿಯಲಿ" ಎಂದು ಪ್ರಾರಂಭಿಸುತ್ತಾನೆ.ಇಲ್ಲಿ ಬರುವ ದ್ರೌಪದಿಯ ಅನೇಕಾನೇಕ ವರ್ಣನೆಗಳ ಪದ್ಯಗಳಲ್ಲಿ ಒಂದೊಂದೂ ಮುಕ್ತಕಗಳೇ ಸರಿ. ದ್ರೌಪದಿಯ ಸ್ವಯಂವರಕ್ಕೆಂದು ಅನೇಕಾನೇಕ ರಾಜರು ನೆರೆದಿದ್ದಾರೆ. ಪಾಂಡವರೂ ತಮ್ಮ ಬ್ರಾಹ್ಮಣವೇಷದಲ್ಲಿ ಅಲ್ಲಿಗೆ ಬಂದಿದ್ದಾರೆ. ದ್ರುಪದರಾಜ ದೃಷ್ಟದ್ಯುಮ್ನನಿಗೆ ಹೇಳಿ ಮತ್ಸ್ಯಯಂತ್ರವನ್ನು ತರಿಸಿ ಅದರೊಡನೆಯೇ ಬಾಣ ಬಿಲ್ಲುಗಳನ್ನು ತರಿಸಿ ನೆರೆದವರಿದಿರು ನಿಯಮವನ್ನು ಘೋಷಿಸಿದ್ದಾನೆ. ಅವನ ಆಜ್ಞೆಯ ಮೇರೆಗೆ ಕೋಮಲಾಂಗಿಯಾದ ದ್ರೌಪದಿ ಒಳ್ಳೆಯ ರೇಶಿಮೆಯ ಉಡುಗೆಯನ್ನುಟ್ಟು ತನ್ನ ಸಖಿಯರ ಜೊತೆಯಲ್ಲಿ ಬರುತ್ತಿದ್ದಾಳೆ. ಆಗ-
ಹೊರೆಯ ಸಖಿಯರ ನೋಟ ಮೈಯಲಿ
ಹರಿದು ಬಳಲದು ಚಿತ್ತವೀಕೆಯ
ಧರಿಸಿ ಕುಸಿಯದು ಕಿವಿಗಳಿಗೆ ಮೆಲ್ನುಡಿಯ ಸವಿ ಸವಿದು
ಅರುಚಿಯಾಗದು ನಾಸಿಕವು ಮೈ
ಪರಿಮಳದ ಪೂರದಲಿ ಗಂಧಾಂ
ತರಕೆ ನೆರೆಯದು ರೂಪನೇನೆಂಬೆನು ನಿತಂಬಿನಿಯ||೧೦||
(ಅವಳ ಹೊರೆಯ ಸಖಿಯರ ನೋಟ ಮೈಯಲ್ಲಿ ಹರಿದು ಬಳಲುತ್ತಿರಲಿಲ್ಲ. ಇವಳನ್ನು ಧರಿಸಿ ಮನಸ್ಸು ಕುಸಿಯುತ್ತಿರಲಿಲ್ಲ.ಅವಳ ಮೆಲ್ನುಡಿಗಳನ್ನು ಕೇಳಿ ಕಿವಿಗಳಿಗೆ ಬೇಸರವಾಗುವುದಿಲ್ಲ. ಅವಳ ಮೈ ಪರಿಮಳದ ಪೂರದಲ್ಲಿ ಬೇರೆಯ ಗಂಧಕ್ಕೆ ನಾಸಿಕವು ನೆರೆಯುತ್ತಿರಲಿಲ್ಲ. ಅಂತಹ ಸುಂದರಿಯ ರೂಪವನ್ನು ಏನೆನ್ನುವುದು.)
ಮುಂದೆ-
ಪರಿಮಳದ ಪರಮಾಣುಗಳ ಸಂ
ವರಿಸಿ ಮುಕ್ತಾಫಲದ ಕೆಂದಾ
ವರೆಯ ಮರಿದುಂಬಿಗಳ ವರ್ಣಾಂತರವನಳವಡಿಸಿ
ಸರಸ ವೀಣಾ ಧ್ವನಿಯ ಹಂಸೆಯ
ಗರುವಗತಿಗಳನಾಯ್ದು ಮನ್ಮಥ
ವರವಿರಿಂಚಿಯೆ ಸೃಜಿಸಿದನು ಪಾಂಚಾಲನಂದನೆಯ||೧೭||
(ದ್ರೌಪದಿಯನ್ನು ಪರಿಮಳದ ಪರಮಾಣುಗಳನ್ನು ಸೇರಿಸಿ, ಮುತ್ತುಗಳ, ಕೆಂಪಾದ ತಾವರೆಗಳ ಮತ್ತು ಮರಿದುಂಬಿಗಳ ವರ್ಣಗಳನ್ನು ಸೇರಿಸಿ ಸರಸವಾದ ವೀಣೆಯ ಧ್ವನಿಯನ್ನೂ ಹಂಸದ ಗರ್ವದ ನಡಿಗೆಯನ್ನೂ ಆಯ್ದು ಮನ್ಮಥ ಎಂಬ ಬ್ರಹ್ಮನೇ ಸೃಷ್ಟಿಸಿದನು.)
ಇವಲ್ಲದೇ ಈ ಸಂಧಿಯಲ್ಲಿ ದ್ರೌಪದಿಯ ತನುವಿನ ಸೌಂದರ್ಯ ಬಿಂಕ ಬಿನ್ನಾಣಗಳನ್ನು ವರ್ಣಿಸುವ ಅನೇಕಾನೇಕ ಪದ್ಯಗಳ ರಸಾಸ್ವಾದ ಮಾಡಬಹುದು.
ಅದೆಲ್ಲದರ ಬಳಿಕ ಅವಳಿಗೆ ಅವಳಣ್ಣ ಬಂದ ನೃಪಾಲರ ಪರಿಚಯವನ್ನು ಮಾಡಿಕೊಟ್ಟು ಇವನು ಇಂತಹ ದೇಶದ ರಾಜ. ಇವನು ಇಂತಹವನು ಎಂದೆಲ್ಲ ಹೇಳುತ್ತಾನೆ.ಆ ನಂತರ ಅವಳ ಸೌಂದರ್ಯಾತಿಶಯವನ್ನು ನೊಡಿದ ನೃಪರ ಪರಿಸ್ಥಿತಿ ಹೇಗಿತ್ತೆಂಬುದನ್ನೂ ಹೇಳುತ್ತಾನೆ.
ಕೆಲರು ಮಧುರಾಪಾಂಗದಲಿ ಕಂ
ಗಳ ಮರೀಚಿಯ ಬೆಳಗಿನಲಿ ಕೆಲ
ರೆಳೆನಗೆಯ ಮಿಂಚಿನಲಿ ಸಖಿಯರ ಮೇಳವಾತಿನಲಿ
ಲಲನೆ ನೋಡಿದಳೆಂದು ಸೊಗಸಿನ
ಲೊಲಿವ ಸಖಿಯರಿಗೆಂದಳೆಂದೊಳ
ಗೊಳಗೆ ಬೆರೆತರು ಬಯಲು ಮಧುವಿನ ಬಾಯ ಸವಿಗಳಲಿ||೬೫||
(ರಾಜರು ಕೆಲವರು ಮಧುರವಾದ ಕಣ್ಣ ನೋಟದಲ್ಲಿ, ಕೆಲವರು ಕಣ್ಣಿನ ಬೆಳಕಿನ ಕಿರಣಗಳಲ್ಲಿ, ಕೆಲವರು ಎಳನಗೆಯ ಮಿಂಚಿನಲ್ಲಿ, ಕೆಲವರು ಸಖಿಯರ ಮೇಳದ ಮಾತಿನಲ್ಲಿ, ದ್ರೌಪದಿ 'ನನ್ನನ್ನು ನೋಡಿದಳು' ಎಂದು ಕೆಲವರು , ಸೊಗಸಿನಲ್ಲಿ ಒಲಿವ ಸಖಿಯರ ಬಳಿ 'ತನ್ನ ಬಗ್ಗೆ ಹೇಳಿದಳೆಂದು' ಕೆಲವರು ಹೀಗೆ ಆ ರಾಜರುಗಳೆಲ್ಲ ಸಂತಸ ಪಡುತ್ತಿದ್ದರು. )
ಮಡಿಸಿದೆಲೆ ಬೆರಳೊಳಗೆ ಬಾಯೊಳ
ಗಡಿಸಿದೆಲೆ ಬಾಯೊಳಗೆ ಸಚಿವರ
ನುಡಿಯ ಕೇಳರು ಸುಳಿಯ ಕಾಣರು ಲೋಚನಾಗ್ರದಲಿ
ಕಡುಮುಳಿದ ಕಂದರ್ಪ ಶರವವ
ಘಡಿಸಿ ಕೈಗಳ ನೋಡಿ ನೃಪರೆವೆ
ಮಿಡುಕದಿರ್ದರು ಬೆರಳ ಮೂಗಿನ ಹೊತ್ತ ದುಗುಡದಲಿ||೬೭||
(ದ್ರೌಪದಿಯ ರೂಪು ಲಾವಣ್ಯಗಳು ರಾಜರ ಮೇಲೆ ಹೇಗೆ ಪರಿಣಾಮ ಬೀರಿತ್ತೆಂದರೆ ಮಡಿಸಿದ ವೀಳ್ಯದೆಲೆ ಬೆರಳಲ್ಲಿಯೇ ಇತ್ತು, ಬಾಯೊಳಗೆ ಇಟ್ಟುಕೊಂಡ ಎಲೆ ಬಾಯೊಳಗೇ ಇತ್ತು. ಸಚಿವರ ಮಾತುಗಳು ಕೇಳುತ್ತಲೇ ಇರಲಿಲ್ಲ. ಕಣ್ಣಿನ ತುದಿಯಲ್ಲಿ ಸುಳಿಯ ಕಾಣದಾದರು. ಬಹಳ ಸಿಟ್ಟಾದ ಮನ್ಮಥನ ಬಾಣದಂತಿರುವ ಕೈಗಳ ನೋಡಿ ಆ ರಾಜರು ಕಣ್ಣೆವೆ ಮಿಡುಕದೆ ಮೂಗಿನ ಮೇಲೆ ಬೆರಳಿಟ್ಟುಕೊಂಡು ದುಗುಡವನ್ನು ಹೊತ್ತಂತೆ ಇದ್ದರು.)
ಬಹಳ ರಮ್ಯ ಮತ್ತು ಅತೀ ಉತ್ತಮ ಕವಿತ್ವ.
ಪ್ರತ್ಯುತ್ತರಅಳಿಸಿ