Powered By Blogger

ಭಾನುವಾರ, ಏಪ್ರಿಲ್ 27, 2014

ಸಹೃದಯಕಾಲ-೯: ಸಮುದ್ರ ವರ್ಣನೆ

PC:Internet

ಕಾವ್ಯವೊಂದನ್ನು ಮಹಾಕಾವ್ಯ ಎನ್ನಬೇಕಾದರೆ ಅದರ ಲಕ್ಷಣಗಳು ಹೀಗೆ ಹೀಗೆಯೇ ಇರಬೇಕು ಎಂದು ಆಲಂಕಾರಿಕರು ನಿರ್ದೇಶಿಸಿದ್ದಾರೆ. ಅಂತಹ ಲಕ್ಷಣಗಳಲ್ಲಿ ನಗರಾರ್ಣವಾದಿ ಅಷ್ಟಾದಶ ವರ್ಣನೆಗಳಿರಬೇಕೆಂಬುದೂ ಒಂದು. ಕೆಲವು ಆಲಂಕಾರಿಕರ ಪ್ರಕಾರ ಹದಿನೆಂಟೂ ವರ್ಣನೆಗಳಿರಬೇಕೆಂದೇನೂ ಇಲ್ಲದಿದ್ದರೂ ಕಥಾಪ್ರಸಂಗಕ್ಕೆ ಪೂರಕವಾಗಿ ಈ ವರ್ಣನೆಗಳಿರಬೇಕೆಂಬುದು ಒಪ್ಪಬಹುದಾದ ನಿಯಮ. ಹಲಕೆಲವು ಕಾವ್ಯಗಳಲ್ಲಿ ರಸಕ್ಕೆ ತೀರವಿರುದ್ಧವಾಗಿ ವರ್ಣನೆಗಳು ಬಂದಿರುವುವೂ ಇವೆ. ಆದರೆ ಕಾವ್ಯದಲ್ಲಿ ಮುಖ್ಯವಾಗಿರಬೇಕಾದದ್ದು ರಸ ಎಂಬುದು ಎಲ್ಲರಿಗೂ ತಿಳಿದಿರುವುದೇ ಆಗಿದೆ. ಇಂತಹ ರಸಕ್ಕೆ ವಿರುದ್ಧವಲ್ಲದ ವರ್ಣನೆಗಳಾದರೋ ಆಸ್ವಾದಿಸಿಯೇ ಅನುಭವಿಸಬೇಕಷ್ಟೆ! 

ಅಂತೆಯೇ ಷಡಕ್ಷರದೇವ ಕವಿಯ ಶಬರಶಂಕರವಿಳಾಸದಲ್ಲಿ ಆರಂಭದಲ್ಲಿಯೇ ಬರುವ ಸಮುದ್ರದ ವರ್ಣನೆಯ ಪದ್ಯಗಳ ಸ್ವಾರಸ್ಯವನ್ನು ಈ ಸಂಚಿಕೆಯಲ್ಲಿ ನೋಡೋಣ.

ಷಡಕ್ಷರಿ ಕ‍ವಿಯ ಶೈಲಿಯಲ್ಲಿ ಅವನ ವೈದುಷ್ಯವಷ್ಟೇ ಅಲ್ಲದೇ ಸಮಾಸಭೂಯಿಷ್ಠ ಪದಪ್ರಯೋಗಗಳೂ, ಒಳ್ಳೆಯ ಶಬ್ದಾರ್ಥಾಲಂಕಾರಭರಿತವಾದ ಪದ್ಯಗಳೂ ಹಾಗೇಯೇ ವಿಶೇಷವಾದ ಕಲ್ಪನೆಗಳೂ ನಮ್ಮನ್ನು ಸೆಳೆಯುತ್ತವೆ.
ಈ  ಪದ್ಯದ ಚಮತ್ಕಾರ ನೋಡಿ-
ಚಂಪಕಮಾಲೆ||
ಅವಿಕಳಶಕ್ತಿಯುಕ್ತರಕಳಂಕಚರಿತ್ರರನಂತಸದ್ಗುಣಾ-
ರ್ಣವರಭವಸ್ವರೂಪರಖಿಳಾಗಮವೇದಿಗಳರ್ದಿತಾನ್ಯವಾ-
ದಿವರರಮಂದಕೀರ್ತಿಯುತರರ್ಥಿಸುರೋರ್ವಿಜರಪ್ರತರ್ಕ್ಯಗೌ-
ರವರಭಿವಂದ್ಯರಕ್ಕೆಮಗಶೇಷಪುರಾತನರೀಶ್ವರಾರ್ಚಕರ್ ||  (೧-೫)
ತನ್ನ ಶೈವಂಪ್ರದಾಯದ ೬೩ ಮಂದಿ ಪುರಾತನರೂ ನಮಗೆ ಅಭಿವಂದ್ಯರು ಎಂದು ಹೇಳುವ ಪದ್ಯದಲ್ಲಿ ಅವರ ಕುರಿತ (ಅವಿಕಳಶಕ್ತಿಯುತರು, ಅಕಲಂಕಚರಿತ್ರರು, ಅನಂತ ಸದ್ಗುಣಗಳ ಸಾಗರ ಶಿವಸ್ವರೂಪ ಇತ್ಯಾದಿ) ವಿಶೇಷಣಗಳಿಂದಲೇ ತುಂಬಿ ಹೆಚ್ಚೇನೂ ಸ್ವಾರಸ್ಯವಿಲ್ಲದಿದ್ದರೂ ಮೊದಲಿನಿಂದ ಕಡೆಯವರೆಗೆ ಸಂಧಿಗಳಲ್ಲಿ ಹಾಗೂ ಸಮಾಸಗಳಲ್ಲಿ ಆ ವಿಶೇಷಣಗಳನ್ನು ಜೋಡಿಸಿ ಇಡೀ ಪದ್ಯವನ್ನು ಒಂದೇ ಶಬ್ದವನ್ನಾಗಿ ಮಾರ್ಪಡಿಸಿದ ಕವಿಯ ಪ್ರತಿಭೆ ನಿಜಕ್ಕೂ ಶ್ಲಾಘ್ಯ.

ಹಾಗೆ ದೇವಸ್ತುತಿ ಪೂರ್ವಕವಿಸ್ತುತಿ ಕುಕವಿನಿಂದೆ ಸಹೃದಯಸ್ತುತಿ ಇತ್ಯಾದಿ ಹಲವು ಗತಾನುಗತಿಕಪದ್ಯಗಳ ಹಾವಳಿಯಲ್ಲಿಯೂ ಅಲಂಕಾರಮಯ ಪದ್ಯಗಳನ್ನು ತಂದಿರುವುದಲ್ಲದೇ ಮುಂದೆ ಕಥಾರಂಭಕ್ಕೆ ಪೀಠಿಕೆಯಾಗಿ ಸಮುದ್ರವರ್ಣನೆಯಿಂದ ಪ್ರಾರಂಭಿಸುತ್ತಾನೆ-

ಮಹಾಸ್ರಗ್ಧರಾ||
ಜ್ವಲದೌರ್ವಜ್ವಾಲೆ ಫಾಲಾಂಬಕಶಿಖಿಯಹಿಭೂಷಾಹಿ ಡಿಂಡೀರಮಾ ಪಾಂ
ಡುಲಸದ್ಭಸ್ಮಂ ಪ್ರವಾಳೋತ್ಕರಮರುಣಜಟಾಮಂಡಲಂ ವಿದ್ಯುದುದ್ಯ
ಜ್ಜಲದಂ ವ್ಯಾಘ್ರಾಜಿನಂ ರಾಜಿಸೆ ಭೃತಭುವನಂ ಭೂರಿಸತ್ತ್ವಾಶ್ರಯಂ ನಿ
ಸ್ತುಲಗಾಂಭೀರ್ಯಂ ಕರಂ ಕಣ್ಗೊಳಿಸಿದನಭವಾಕಾರಮುದ್ರಂ ಸಮುದ್ರಂ|| ೩೦|| 
(ಪ್ರಜ್ವಲಿಸುವ ಲಾವಾರಸವೇ ಹಣೆಯಲ್ಲಿರುವ ಉರಿಗಣ್ಣಿನ ಬೆಂಕಿ, ಅಲ್ಲಿರುವ ಹಾವುಗಳೇ ಆಭರಣಗಳಾದ ಸರ್ಪಗಳು, ಉಕ್ಕುವ ನೀರಿನ ಬಿಳಿಯ ನೊರೆಯೇ ಭಸ್ಮ, ಹವಳದ ಸಾಲುಗಳೇ ಅರುಣ ಜಟೆ, ಮಿಂಚಿನಿಂದ ಕೂಡಿದ ಮೋಡಗಳೇ ಉಟ್ಟ ಹುಲಿಯ ಚರ್ಮವಾಗಿ ಇರುವಾಗ ಹೋಲಿಸಲಾರದ ಗಾಂಭೀರ್ಯವುಳ್ಳ ಜಲರಾಶಿಯಿಂದ ಕೂಡಿದ ಸಮುದ್ರನು ಅಭವನಾದ ಶಿವನಂತೆಯೇ ಕಣ್ಗೊಳಿಸಿದನು
ಇಲ್ಲಿ ಸಾವಯವವಾಗಿ ಶಿವನ ರೂಪಿನೊಂದಿಗೆ ಸಮುದ್ರದ ರೂಪನ್ನು ಸಮೀಕರಿಸಿ ಸಮುದ್ರ ಶಿವನಂತೆ ಇತ್ತು ಎಂಬುದೇ ಸ್ವಾರಸ್ಯ.)

ಮತ್ತೇಭವಿಕ್ರೀಡಿತ||
ಕುಡಿದಂ ಕುಂಭಜನೆನ್ನನಾತ್ಮವಧುವೊಳ್ ಕೂಡಿರ್ದನೆಂದಿಂದಿರಂ
ಕಡೆದಂ ತನ್ನಹಿತಾದ್ರಿಗಾಂ ಶರಣಮೆಂದಾ ರಾಘವಂ ಕಟ್ಟಿ ಮೇಣ್
ತಡೆದಂ ಕಾದೊಳಕೆಯ್ದನೆಂದು ಪಗೆಯಂ ಹಾಲಾಹಲಂಗೊಟ್ಟೊಡಂ
ಮೃಡನೊರ್ವಂ ಮುಳಿಯಂ ಗಡೆಂದುಲಿವವೋಲುದ್ಘೋಷಿಕುಂ ಸಾಗರಂ||೩೧||
((ಗೋದಾವರಿ ನದಿಯನ್ನು ಪತ್ನಿಯಾಗಿ ಹೊಂದಿದ್ದ) ಅಗಸ್ತ್ಯರು ಅವರ ಪತ್ನಿಯಲ್ಲಿ ಕೂಡಿದೆ ಎಂದು ನನ್ನನ್ನು ಕುಡಿದುಬಿಟ್ಟರು. ಇಂದ್ರ, ಅವನ ಶತ್ರುವಾದ ಪರ್ವತ(ಮೈನಾಕ)ಕ್ಕೆ ನಾನು ಆಶ್ರಯವನ್ನು ಕೊಟ್ಟೆ ಎಂದು ನನ್ನನ್ನು ಕಡೆದ. ರಾಮ, ತನ್ನ ಶತ್ರುವನ್ನು ಕಾಪಾಡಿದೆ ಎಂದು ಸೇತುವೆ ಕಟ್ಟಿ ತಡೆದ, ಆದರೆ ಹಾಲಾಹಲವನ್ನು ಕೊಟ್ಟರೂ ಮೃಡನು(ಶಿವ) ಮಾತ್ರ ಸಿಟ್ಟಾಗಲಿಲ್ಲ ಎಂದು ಈ ಸಾಗರ ಘೋಷಿಸುತ್ತಿದೆ.)

ಮಹಾಸ್ರಗ್ಧರೆ||
ಮಗನೊರ್ವಂ ಪುಟ್ಟಿ ದೋಷಾಕರನೆನಿಸಿದನೆನ್ನೊಳ್ಮಗಳ್ ಪಾಱುಗೆಯ್ತಂ
ಮಿಗೆ ನಿಚ್ಚಂ ಪಂಕಜಾತಾಶ್ರಿತೆಯೆನಿಸಿ ಕುಭೃದ್ವರ್ಗದೊಳ್ ಕ್ರೀಡಿಪಳ್ ನಾ
ಕಿಗಣಂ ಸರ್ವಸ್ವಮಂ ಮೇಣ್ ಕಮರ್ದುದಕಟ ಭಂಗಕ್ಕೆ ಪಕ್ಕಾದೆನೆಂದಾ
ತ್ಮಗತೌರ್ವಾಗ್ನಿಚ್ಛಲಂಬೆತ್ತೞಲುರಿಯೊಳಕೊಂಡಂತೆ ತೋರ್ಕುಂ ಸಮುದ್ರಂ||೩೨||
("ಒಬ್ಬ ಮಗ ಹುಟ್ಟಿದ(ಚಂದ್ರ), ಅವನೂ ದೋಷಾಕರ ಎನಿಸಿಕೊಂಡ. ನನ್ನ ಮಗಳು (ಲಕ್ಷ್ಮಿ) ಪಂಕಜಾತಾಶ್ರಿತೆ (ಕಮಲದಲ್ಲಿರುವವಳು)ಯಾಗಿ  ಯಾವಾಗಳೂ ಪಾಱುಗೆಯ್ತ (ಹಾದರ) ಹೆಚ್ಚಿ ರಾಜರ ಜೊತೆಯಲ್ಲಿ ಕ್ರೀಡಿಸುತ್ತಿದ್ದಾಳೆ. ಸ್ವರ್ಗದ ದೇವತೆಗಳು ನನ್ನ ಎಲ್ಲ ಸಂಪತ್ತನ್ನೂ (ಸಮುದ್ರಮಥನದಲ್ಲಿ) ದೋಚಿಕೊಂಡು ಹೋದರು. ಅಯ್ಯೋ ನಾನು ಭಂಗಕ್ಕೆ ಪಕ್ಕಾದೆ" ಎಂದು ತನ್ನಲ್ಲಿರುವ ಔರ್ವಾಗ್ನಿ ಜ್ವಾಲೆಯನ್ನು ಹೊರಹಾಕುತ್ತಾ ಅಳಲೆಂಬ ಉರಿಯನ್ನು ಒಳಕೊಂಡಿರುವಂತೆ ಸಮುದ್ರವು ಕಾಣುತ್ತಿತ್ತು )

ಚಂಪಕಮಾಲೆ||
ಪ್ರತಿಗಜಮೆಂದು ಕಾರ್ಮುಗಿಲನೀಡಿಱಿವಾನೆಗಳಿಂ ಪಯೋದಗ
ರ್ಜಿತಕಗಿದೋಡುವಂಚೆಗಳ ಬಾಯ್ಗಳಿನೊಕ್ಕುವಮೃತಂಗಳಂ ತುಡಂ
ಕುತೆ ಮಿಗೆ ನುಂಗುವಂಬುಚರದಿಂ ಬಡಬಾನಲನೆಂದು ವಿದ್ರುಮ
ಪ್ರತತಿಯನಿರ್ಕೆಲಕ್ಕೊಲೆವ ನಕ್ರದಿನದ್ಭುತಮಾಯ್ತು ಸಾಗರಂ||೩೩||
(ತನ್ನ ಶತ್ರು ಆನೆಯೆಂದು ಮೋಡಗಳನ್ನು ಇರಿಯುತ್ತಿರುವ ಆನೆಗಳಿಂದ ಮೋಡಗಳ ಘರ್ಜನೆಗೆ ಹೆದರಿ ಓಡುವ ಹಂಸಗಳ ಬಾಯಿಗಳಿಂದ ಉಕ್ಕಿ ಬರುವ ಅಮೃತವನ್ನು ತುಡುಕುತ್ತ ನುಂಗುವ ಮೀನುಗಳಿಂದ,ಜ್ವಾಲಾಮುಖಿಯೆಂದು ಹವಳದ ಸಾಲನ್ನು ಇರ್ಕೆಲಕ್ಕೆ ಒಲೆವ ಮೊಸಳೆಗಳಿಂದ ಸಾಗರವು ಅದ್ಭುತವಾಯ್ತು
ಇಲ್ಲಿ ಪ್ರತಿಯೊಂದೂ ಪ್ರಣಿ ಪಕ್ಷಿಗಳು ಭ್ರಾಂತಿಗೊಳಗಾಗುವ ವರ್ಣನೆಯಿದೆ. (ಬಹುಶಃ) ಇದು ಭ್ರಮಾಲಂಕಾರ (?) )

ಚಂಪಕಮಾಲೆ||
ಪರಿವ ಪಡಂಗು ಬಲ್ದೆರೆಯ ಸಾಲ ಬೆಡಂಗು ನವಿನವಿದ್ರುಮೋ
ತ್ಕರದ ಪೊದೞ್ಕೆ ಶುಕ್ತಿಜದಳುರ್ಕೆ ಸರೋಜದ ಗುಣ್ಪು ತೀರ ಭಾ
ಸುರತರ ತಾಳನಂದನದಲಂಪು ಪುೞಿಲ್ಗಳಡರ್ಪು ಚೆಲ್ವ ಬಿ
ತ್ತರಿಸೆ ಪೊಡರ್ಪುವೆತ್ತು ಬಗೆಗೊಂಡುದು ಪೂರ್ಣಗುಣಂ ಮಹಾರ್ಣವಂ||೩೪||
(ಹರಿಯುತ್ತಿರುವ ಹಡಗು ದೊಡ್ಡ ತೆರೆಗಳ ಬೆಡಗು ಹೊಸ ಹವಳಗಳ ಸಾಲಿನ ಕಾಂತಿ ಮುತ್ತುಗಳ ರಾಶಿ ಕಮಲಗಳ ಗುಂಪು ತೀರದಲ್ಲಿರುವ ತಾಳೆಯ ಮರಗಳ ತೋಟದ ಅಲಂಪು ಮರಳ ರಾಶಿಯ ಚೆಲುವು ಇವೆಲ್ಲವೂ ಕೂಡಿ  ಪೂರ್ಣಗುಣವಾದ ಮಹಾರ್ಣವ ಶೋಭಿಸುತ್ತಿತ್ತು.
(ಬಹುಶಃ) ಇದು ಉಲ್ಲೇಖಾಲಂಕಾರ (?))

ಇಲ್ಲಿನ ರಸಮಯ ಪದ್ಯಗಳಿಗೆ ನನ್ನ ಅನುವಾದವಾಗಲೀ ಅಥವಾ ವ್ಯಾಖ್ಯಾನವಾಗಲೀ ಅಷ್ಟೇನೂ ಸ್ವಾರಸ್ಯವಿಲ್ಲದಿದ್ದರು ಮೂಲ ಪದ್ಯಗಳ ಸ್ವಾರಸ್ಯ ಅದಕ್ಕೆ ಇದ್ದೇ ಇದೆ. ಆದರೂ  ಬೇಸಿಗೆಯ ದಿನಗಳ ಈ ಸೆಖೆಯಲ್ಲಿ ಸಮುದ್ರದ ವರ್ಣನೆಯಾದರೂ ನಮ್ಮ ಮನಸ್ಸಿಗೆ ಅಷ್ಟು ತಂಪನ್ನು ತಂದರೆ ಅದೊಂದು ರೀತಿಯ ಸಂತೋಷವಷ್ಟೇ !!

ಭಾನುವಾರ, ಏಪ್ರಿಲ್ 20, 2014

ಸಹೃದಯಕಾಲ-೮: ಗದಾಯುದ್ಧಾಂತ್ಯದಲ್ಲಿ ಅಶ್ವತ್ಥಾಮನ ಪುನರಾಗಮನ
ರನ್ನನ ಗದಾಯುದ್ಧದ ಒಂಬತ್ತನೇ ಆಶ್ವಾಸದಲ್ಲಿ ಬರುವ ರಸಮಯವಾದ ಸಂದರ್ಭವೊಂದನ್ನು ಈ ಸಂಚಿಕೆಗೆ ಆಯ್ದುಕೊಂಡಿದ್ದೇನೆ. ಯುದ್ಧದಲ್ಲಿ ದುರ್ಯೋಧನನ ತೊಡೆಮುರಿದು ಅವನ ತಲೆಯನ್ನು ಕಾಲಿನಿಂದ ತುಳಿದು ತನ್ನ ಪ್ರತಿಜ್ಞೆಯನ್ನು ಪೂರೈಸಿ ಭೀಮ ಕೃಷ್ಣ ಕೃಷ್ಣೆ ಹಾಗೂ ತನ್ನ ಸಹೋದರರೊಡನೆ ತನ್ನ ಶಿಬಿರಕ್ಕೆ ಹಿಂದಿರುಗಿದ್ದಾನೆ. ಇತ್ತ ಕುರುಕ್ಷೇತ್ರದಲ್ಲಿ ಅಶ್ವತ್ಥಾಮ, ಕೃಪ ಕೃತವರ್ಮರೊಡನೆ ದುರ್ಯೋಧನ ಇರುವ ಜಾಗವನ್ನು ಭೀಷ್ಮನಿಂದ ತಿಳಿದುಕೊಂಡು ಬರುತ್ತಿರುವಾಗ ಒಬ್ಬಳು ಸುಂದರವಾದ ಸ್ತ್ರೀ ಕಾಣುತ್ತಾಳೆ. ಆಕೆ ಯ ರೂಪು ಹೇಗಿತ್ತೆಂದರೆ
ಪೃಥ್ವಿ||
ಕನತ್ಕನಕ ಚಾಮರಂ ಧವಳಚಾಮರಂ ಕಯ್ಗಳೊಳ್
ಮನಂ ಚಲಿಸೆ ಮಾಸಿ ತಾಱಿದ ಕುರುಳ್ಗಳುಂ ತನ್ನ ಬಿ
ನ್ನನಿರ್ದ ಮೊಗದಿಂ ತವಿಲ್ದಿರೆ ವಿಲಾಸಮುಂ ಮುಂದೆ ಕಂ
ಡನಲ್ಲಿ ಕಮಳಾಕ್ಷಿಯಂ ವೃಷಭಲಕ್ಷಣಂ ಲಕ್ಷ್ಮಿಯಂ||

(ಹೊಳೆಯುತ್ತಿರುವ ಚಿನ್ನದ ಚಾಮರ ಹಾಗೂ ಬಿಳಿಯ ಚಾಮರವನ್ನು ಕಯ್ಯಲ್ಲಿ ಹಿಡಿದು, ಚಂಚಲ ಚಿತ್ತಳಾಗಿ, ಕೆದರಿದ ಮುಂಗುರುಳುಗಳನ್ನುಳ್ಳವಳಾಗಿ, ಖೇದದಿಂದ ವಿಲಾಸವನ್ನೆಲ್ಲ ಕಳೆದುಕೊಂಡ ಕಮಲಾಕ್ಷಿಯಾದ ಲಕ್ಷ್ಮಿಯನ್ನು ವೃಷಭಲಕ್ಷಣನಾದ ಅಶ್ವತ್ಥಾಮ ಕಂಡ)

ವಚನ|| ಅಂತು ಕುಂಭಸಂಭವಸಂಭವಂ ಕಮಲನಾಭನ ಹೃದಯಭವನಾಮೃತಾಬ್ಢಿಸಂಭವೆಯಂ ಕಂಡು -ನೀನಾರ್ಗೆ ಎತ್ತಣಿಂ ಬಂದೆ ಎಲ್ಲಿಗೆ ಪೋದಪೆ ಎಂದು ಬೆಸಗೊಳೆ

(ಹಾಗೆ ಕುಂಭಸಂಭವನಾದ ದ್ರೋಣನ ಮಗ ಅಶ್ವತ್ಥಾಮನು ಕಮಲನಾಭನ ಹೃದಯವನ್ನೇ ಭವನವನ್ನಾಗಿ ಮಾಡಿಕೊಂಡ ಅಮೃತಸಾಗರಸಂಭವೆ ಲಕ್ಶ್ಮಿಯನ್ನು ಕಂಡು - 'ನೀನು ಯಾರವಳು? ಎಲ್ಲಿಂದ ಬಂದೆ? ಎಲ್ಲಿಗೆ ಹೊರಟೆ? ಎಂದು ಕೇಳಿದಾಗ )

ಚಂಪಕಮಾಲೆ|| 
ಅಮೃತಪಯೋಧಿಮಂಥನದೆ ಪುಟ್ಟಿದೆನಬ್ಜವನಾಂತರಾಳದೊಳ್
ರಮಿಯಿಸಿ ಪದ್ಮನಾಭನುರದೊಳ್ ನೆಲಸಿರ್ಪ ಮಹಾನುಭಾವೆಯಾಂ
ಕಮಲೆಯನಿನ್ನೆಗಂ ಕುರುಮಹೀಪತಿಯೊಳ್ ನೆಲೆಸಿರ್ದೆನೀಗಳು
ತ್ತಮಪುರುಷೋತ್ತಮಂ ಬೆಸಸೆ ಪಾಂಡವರೊಳ್ ನೆಲೆಸಲ್ಕೆ ಪೋದಪೆಂ||೪||

(ಅಮೃತಸಾಗರವನ್ನು ಮಂಥನಮಾಡಿದಾಗ ಹುಟ್ಟಿದೆ, ಕಮಲವನದಲ್ಲಿ ರಮಿಯಿಸಿದೆ, ಪದ್ಮನಾಭನ ಎದೆಯಲ್ಲಿ ನೆಲೆಸಿದ್ದ ಮಹಾನುಭಾವೆಯಾದ ಕಮಲೆ(ಲಕ್ಷ್ಮಿ) ಇಲ್ಲಿಯವರೆಗೆ ಕುರುಮಹೀಪತಿ ದುರ್ಯೋಧನನಲ್ಲಿ ನೆಲೆಸಿದ್ದೆ. ಈಗ ಪುರುಷೋತ್ತಮನಾದ ವಿಷ್ಣುವಿನ ಆಜ್ಞೆಯಂತೆ ಪಾಂಡವರಲ್ಲಿ ನೆಲೆಸಲೆಂದು ಹೋಗುತ್ತಿದ್ದೇನೆ.)

ವ|| ಎಂಬುದುಂ ದ್ರೋಣನಂದನಂ ನಾರಾಯಣಂ ಬೆಸಸೆ ಪೋದಪೆನೆಂಬ ಮಾತನವಧಾರಿಸಿ ಮುಗುಳ್ನಗೆನಕ್ಕು-

(ಎಂದು ಹೇಳಿದಳು, ಆಗ ದ್ರೋಣನಂದನನು 'ನಾರಾಯಣ ಹೇಳಿದ್ದಕ್ಕೆ ಹೋಗುತ್ತಿದ್ದೇನೆ' ಎಂಬ ಮಾತನ್ನು ಅವಧಾರಿಸಿ ಮುಗುಳ್ನಗೆ ನಕ್ಕು)

ಚಂಪಕಮಾಲೆ||
ಚಳಮತಿಯಾದೆ ನೀಂ ಜಡಧಿಸಂಭವೆಯಪ್ಪುದಱಿಂ ಸರೋಜ ಸಂ
ಕುಳರಜದಿಂದೆ  ನೀಂ ಪೊರೆದು ರಾಜಸದೊಳ್ ನೆಲೆಸಿರ್ಪೆ ಗೋವುಗಾ
ದಳವೞಿದಿರ್ದ  ಕೃಷ್ಣನೊಡನಿರ್ದುದಱಿಂದಮೆ ಗೋವಿಯಾದೆಯ
ಗ್ಗಳದ ವಿವೇಕಮಿಲ್ಲ ನಿನಗೆತ್ತಱಿವಾ ಪುರುಷಾಂತರಂಗಳಾ ||೫||

(ಸಮುದ್ರದಲ್ಲಿ ಹುಟ್ಟಿದ ಕಾರಣ ನೀನು ಚಂಚಲೆಯಾದೆ, ಕಮಲದ ಹೂವಿನ ರಜ(ಪರಾಗ)ದಿಂದ ನೀನು ರಾಜಸದಲ್ಲಿ ನೆಲೆಸಿರುವೆ. ದನಗಾಹಿಯಾದ ಕೃಷ್ಣನ ಜೊತೆಯಲ್ಲಿದ್ದು ನೀನು ಗೊಲ್ಲೆಯಾದೆ. ನಿನಗೆ ಅಗ್ಗಳದ ವಿವೇಕವೂ ಇಲ್ಲ. ನಿನಗೆ ಹೇಗೆ ಪುರುಷರ ಅಂತರಗಳು ಗೊತ್ತಾಗಬೇಕು?)

PC: Internet
ವ|| ಅದಲ್ಲದೆಯುಮಮೃತಸಮುದ್ರ ಮಂಥನದೊಳ್ ಪುಟ್ಟುವಂದು ಐರಾವತದೊಡನೆ ಪುಟ್ಟಿದುದಱಿಂ ವಿಪರೀತವೃತ್ತಿಯುಂ ಚಂದ್ರನೊಡನೆ ಪುಟ್ಟಿದುದಱಿಂ ಕಳಂಕಸ್ವಭಾವಮುಂ ಕೌಸ್ತುಭದೊಡನೆ ಪುಟ್ಟಿದುದಱಿಂ ಕಠಿನತ್ವಮುಂ ವಾಗ್ದೇವಿಯೊಡನೆ ಪುಟ್ಟಿದುದಱಿಂ ವಾಚಾಳತೆಯುಂ ಅಮರವೈರಿಯೊಡನೆ ಪುಟ್ಟಿದುದಱಿಂ ಗ್ರಹಣಸಲ್ಲೇಖನಾಬುದ್ಧಿಯುಂ ವೈದ್ಯನೊಡನೆ ಪುಟ್ಟಿದುದಱಿಂ ವ್ರಣಶೂಲವೇದಿಯುಂ ನಾರದನೊಡನೆ ಪುಟ್ಟಿದುದಱಿಂ ಕಲಹಸ್ವಭಾವಮುಂ ಕಾಳಕೂಟದೊಡನೆ ಪುಟ್ಟಿದುದಱಿಂ ಕೊಲೆಯುಂ ಕಳ್ಳೊಡನೆ ಪುಟ್ಟಿದುದಱಿಂ ಸೊರ್ಕುಂ ಅಚ್ಚರಸಿಯರೊಡನೆ ಪುಟ್ಟಿದುದಱಿಂ ಪಾಱುಗೆಯ್ತಮುಂ ನಿನಗೆ ಸಹಜಮಾಗಿರ್ದುವು

(ಅದಲ್ಲದೆ ಅಮೃತಸಮುದ್ರವನ್ನು ಕಡೆಯುವಲ್ಲಿ ನೀನು ಹುಟ್ಟುವಾಗ ಐರಾವತದೊಡನೆ ಹುಟ್ಟಿದೆ ಹಾಗಾಗಿ ಅದಕ್ಕಿರುವ ವಿಪರೀತವೃತ್ತಿಯು ನಿನಗೂ ಬಂತು, ಚಂದ್ರನೊಡನೆ ಹುಟ್ಟಿದೆ ಹಾಗಾಗಿ ಅವನಿಗಿರುವ ಕಳಂಕ ಸ್ವಭಾವ ನಿನಗೂ ಬಂತು.ಕೌಸ್ತುಭವೆಂಬ ರತ್ನದೊಡನೆ ಹುಟ್ಟಿದೆ ಹಾಗಾಗಿ ಅದಕ್ಕಿರುವ ಕಠಿನತ್ವ ನಿನಗೂ ಬಂತು, ವಾಗ್ದೇವಿಯ ಜೊತೆ ಹುಟ್ಟಿದೆ, ಹಾಗಾಗಿ ಅವಳಿಗಿರುವ ವಾಚಾಳತೆ ನಿನಗೂ ಬಂತು, ಅಮರವೈರಿಯಾದ ರಾಕ್ಷಸರೊಡನೆ ಹುಟ್ಟಿದ ಕಾರಣ (ರಾಹು) ಗ್ರಹಣಸಲ್ಲೇಖನ ಬುದ್ಧಿ(ಹಿಡಿದಿಕೊಳ್ಳುವುದು ಹಾಗೂ ಬಿಟ್ಟಿಹೋಗುವುದು) ನಿನಗೂ ಬಂತು ವೈದ್ಯನೊಡನೆ(ಧನ್ವಂತರಿ) ಹುಟ್ಟಿದೆ ಹಾಗಾಗಿ ಅವನಿಗಿರುವ ವ್ರಣಶೂಲವೇದಿ(ಗಾಯಗಳ ನೋವನ್ನು ತಿಳಿಯದಿರುವುದು(?)ಗುಣ ನಿನಗೂ ಬಂತು. ನಾರದನೊಡನೆ ಹುಟ್ಟಿದೆ ಹಾಗಾಗಿ ನಿನಗೆ ಅವನಂತೆ ಕಲಹಸ್ವಭಾವವೂ ಬಂತು,ಕಾಳಕೂಟ ವಿಷದೊಡನೆ ಹುಟ್ಟಿದೆ ಹಾಗಾಗಿ ಅದರಂತೆ ನಿನಗೂ ಕೊಲೆ(ಕೊಲ್ಲುವ ಸ್ವಭಾವ)ಬಂತು, ವಾರುಣಿಯೆಂಬ ಮದ್ಯದೊಡನೆ ಹುಟ್ಟಿದೆ,ಹಾಗಾಗಿ ಕಳ್ಳಿನ ಸ್ವಭಾವದಂತೆ ಸೊಕ್ಕೂ ಬಂತು, ಅಪ್ಸರೆಯರೊಡನೆ ಹುಟ್ಟಿದ ಕಾರಣ ಅವರಂತೆ ವ್ಯಭಿಚಾರಿಯಾದೆ.)

ಎಂದೆಲ್ಲ ಬಯ್ದು ಅಶ್ವತ್ಥಾಮ ಆ ಲಕ್ಷ್ಮಿಯನ್ನು ಕುರುಕುಲದ ಘಟಚೇಟಿಯನ್ನು ಎಳೆದೊಯ್ಯುವ ಹಾಗೆ ಕೂದಲು ಹಿಡಿದು ಎಳೆದುಕೊಂಡು ಹೋಗಿ ದುರ್ಯೋಧನನ ಸೇವೆಗೆಂದು ನಿಯೋಜಿಸುತ್ತಾನೆ. ಆ ಬಳಿಕ ರಾತ್ರಿ ಹೊತ್ತಲ್ಲಿ ಪಾಂಡವರ ಶಿಬಿರಕ್ಕೆ ನುಗ್ಗಿ ಕಗ್ಗೊಲೆಗಯ್ಯುವುದು ಅವನ ಕ್ರೂರಮನೋಭಾವವನ್ನು ಬಿಂಬಿಸುತ್ತದೆ.
ಈ ಸಂದರ್ಭದಲ್ಲಿ ರನ್ನನು ಸಮುದ್ರದಲ್ಲಿ ಹುಟ್ಟಿದ ಎಲ್ಲಾ ವಸ್ತುಗಳ ಗುಣಗಳೊಡನೆ ಲಕ್ಷ್ಮಿಯ ಗುಣಗಳೊಡನೆ ಸಮೀಕರಿಸಿ ಬರೆಯುವುದು ಸೊಗಸಾಗಿದೆ. ಅಲ್ಲದೇ ಅವಳ ಆಗಮನವೂ ಅಶ್ವತ್ಥಾಮ ಅವಳನ್ನು ನೋಡಿ ಯಾರು ನೀನು ಎಂದೆಲ್ಲ ಕೇಳುವುದೂ ಚೆನ್ನಾಗಿ ಕೂಡಿಕೊಂಡು ಒಳ್ಳೆಯ ರಸವತ್ತಾದ ಕಾವ್ಯಭಾಗವಾಗಿದೆ.

ಬುಧವಾರ, ಏಪ್ರಿಲ್ 16, 2014

ಸಹೃದಯ ಕಾಲ-೭ :ಕರ್ಣ ಜನ್ಮ ಪ್ರಸಂಗ

ಪಂಪನ ವಿಕ್ರಮಾರ್ಜುನವಿಜಯವು ಕನ್ನಡದಲ್ಲಿ ಬಹಳಷ್ಟು ಕಾರಣಗಳಿಂದ ಒಂದು ವಿಶಿಷ್ಟಕೃತಿಯಾಗಿದೆ. ಅದರಲ್ಲಿ ಬರುವಂತಹ ಹಳಗನ್ನಡ ನುಡಿಗಟ್ಟುಗಳು ಅಚ್ಚಗನ್ನಡ ಶಬ್ದಗಳು ಇವೆಲ್ಲವೂ ಭಾಷಾಭ್ಯಾಸಿಗಳಿಗೆ ತುಂಬಾ ಉಪಯುಕ್ತವಾಗಿವೆ. 

PC: Internet 
ಪಂಪನ ಭಾರತಕಥೆಯಲ್ಲಿ ಹಲವು ಕಡೆಗಳಲ್ಲಿ ರಸಾಭಾಸಕ್ಕೆ ಕಾರಣವಾಗುವಂತಹ ಘಟ್ಟಗಳಿದ್ದರೂ, ಮೂಲ ಕಥೆಯಲ್ಲಿ ಬದಲಾವಣೆಗಳನ್ನು ಅದೇಷ್ಟೋ ಮಾಡಿಕೊಂಡು ತನ್ನ ಕೊರಳಿಗೆ ತಾನೇ ಉರುಳು ಹಾಕಿಕೊಂಡಂತೆ ಮಾಡಿಕೊಂಡಿದ್ದರೂ ಕೆಲವೊಂದು ವರ್ಣನೆಗಳನ್ನು ಅವಶ್ಯವಾಗಿ ನೋಡಲೇ ಬೇಕು. (ಬಲ್ಲವರು ಅದಕ್ಕೂ ಬೇರೆ ಮೂಲವನ್ನು ತೋರಿಸಿದರೆ ಪಂಪ ತುಂಬಾ ಬಡವನಾಗಿಬಿಡಬಹುದು :-) )

ರಸಮಯವಾದ ಒಂದು ಪದ್ಯ ಕರ್ಣನ ಜನನದ ನಂತರದ ಸಂದರ್ಭದಲ್ಲಿ ಬರುವಂತಹದು:  ದೂರ್ವಾಸ ಮಹರ್ಷಿಯ ಮಂತ್ರದ ಫಲವಾಗಿ ಸೂರ್ಯನಿಂದ ಒಂದು ಮಗುವನ್ನು ಪಡೆದ ಕುಂತಿ ಲೋಕಾಪವಾದಕ್ಕೆ ಅಳುಕಿ ಗಂಗೆಯಲ್ಲಿ ತನ್ನ ಮಗುವನ್ನು ಹಾಕಿ ಜಲದೇವತೆಗಳೇ ಕಾಪಾಡಬೇಕೆಂದು ಹೊರಡುತ್ತಾಳೆ. ಅಂತಹ ಸುಂದರ ಸುಕುಮಾರಶರೀರದ ಹಸುಗೂಸನ್ನು  ಗಂಗೆ ತನ್ನ ತೆರೆಗಳೆಂಬ ಕೈಗಳಿಂದ ಮುಳುಗಲೀಯದೆ ತರುತ್ತಿರುವಾಗ ಆ ಮಗುವನ್ನು ಸೂತನೊಬ್ಬನು ಕಾಣುತ್ತಾನೆ.

ಉತ್ಪಲಮಾಲೆ||
ಬಾಳದಿನೇಶ ಬಿಂಬದ ನೆೞಲ್ ಜಲದೊಳ್ ನೆಲೆಸಿತ್ತೊ ಮೇಣ್ ಫಣೀಂ
ದ್ರಾಳಯದಿಂದಮುರ್ಚಿದ ಫಣಾಮಣಿ ಮಂಗಳರಶ್ಮಿಯೋ ಕರಂ |
ಮೇಳಿಸಿದಪ್ಪುದೆನ್ನೆರ್ದೆಯನೆಂದು ಬೊದಿಲ್ಲನೆ ಪಾಯ್ದು ನೀರೊಳಾ
ಬಾಳನನಾದಮಾದರದೆ ಕಂಡೊಸೆದಂ ನಿಧಿಗಂಡನಂತೆವೊಲ್|| (೧-೯೬)

("ಎಳೆಯ ಸೂರ್ಯನ ಬಿಂಬದ ನೆರಳು ನೀರಿನಲ್ಲಿ ನೆಲೆಸಿರುವುದೋ ಅಥವಾ ನಾಗಗಳ ಪಾತಾಲ ಲೋಕದಿಂದ ಹೊರಬಂದ ಸರ್ಪದ ಹೆಡೆಯ ಮಣಿಯ ಮಂಗಳ ಕಿರಣಗಳೋ, ನನ್ನ ಎದೆಯನ್ನು ಸೆಳೆಯುತ್ತಿದೆ" ಎಂದು ಸೂತನು ಆದರದಿಂದ 'ಬೊದಿಲ್ಲನೆ' ನೀರಿಗೆ ಹಾರಿ ನಿಧಿಯನ್ನು ಕಂಡವರಂತೆ ಹಿಗ್ಗಿದನು)

ಇಲ್ಲಿ ಬಳಸಿರುವ ರೂಪಕೋಪಮೆಗಳಲ್ಲಿ ಪದ್ಯದ ಸ್ವಾರಸ್ಯವಿರುವುದು. 'ಬಾಲಸೂರ್ಯನ ಬಿಂಬದ ನೆರಳು' ಎಂಬುದು ಆ ಶಿಶುವಿನ ರೂಪವನ್ನು ಕಲ್ಪಿಸಿಕೊಡುತ್ತದೆ. ಸೂರ್ಯನ ಮಗನ ಕಾಂತಿ ಸೂರ್ಯನ ನೆರಳಂತಿತ್ತು. ಫಣೀಂದ್ರನ ಫಣಾಮಣಿಯ ಮಂಗಳ ರಶ್ಮಿ ಎಂಬುದೂ ಸಹ ಕರ್ಣನ ಸೊಬಗನ್ನು ವರ್ಣಿಸುವುದು. ಆ ಮಗುವನ್ನು ಕಂಡು ದೊಡ್ದ 'ನಿಧಿ ಸಿಕ್ಕವರಂತೆ' ಸೂತ ಹಿಗ್ಗಿ ನದಿಗೆ ಹಾರುವುದನ್ನೂ 'ಬೊದಿಲ್ಲನೆ' ಎಂದು ಶಬ್ದಸಹಿತವಾಗಿ ತಂದಿರುವುದೂ ಮತ್ತೊಂದು  ಸ್ವಾರಸ್ಯ..

ಶುಕ್ರವಾರ, ಏಪ್ರಿಲ್ 11, 2014

ಸಹೃದಯಕಾಲ-೬ ಮಾರಿಯ ಮನೆಯೊಳಗೆ

ಹಿಂದಿನ  (ಸಹೃದಯಕಾಲ-೩ ರನ್ನನ ಗದಾಯುದ್ಧದ ಕೆಲವು ಪದ್ಯಗಳು) ಲೇಖನದಲ್ಲಾಗಲೇ ಕವಿ ಜನ್ನನ ಹೆಸರೂ ಅವನು ಕವಿಚಕ್ರವರ್ತಿ ಹೆಸರು ಪಡೆದಿರುವುದೂ ಪ್ರಸ್ತಾಪಿಸಲ್ಪಟ್ಟಿದೆ. ಅವನ ಪದ್ಯಗಳಲ್ಲಿ ಕೆಲವನ್ನು ಈ ಸಂಚಿಕೆಯಲ್ಲಿ ನೋಡೋಣ.

 ಜನ್ನನ 'ಯಶೋಧರ ಚರಿತೆ' ಇದು ಸಂಸ್ಕೃತಮೂಲದ ಸೋಮದೇವ ಕವಿಯ 'ಯಶಸ್ತಿಲಕ ಚಂಪೂ'ಗ್ರಂಥದ ಕನ್ನಡರೂಪವೆಂದಾದರೂ ಜನ್ನನ ಕವಿತಾ ಶಕ್ತಿಯನ್ನೂ, ಲೋಕಾನುಭವವನ್ನೂ, ಅಲ್ಲದೇ ಕನ್ನಡ ನುಡಿಗಟ್ಟುಗಳನ್ನು ಅವನು ಬಳಸಿರುವ ರೀತಿಯನ್ನು ನೋಡಬೇಕು. ಒಂದು ಶಬ್ದಕ್ಕೆ ಹತ್ತುಹಲವು ಪರ್ಯಾಯಶಬ್ದಗಳನ್ನು ಬಳಸುವ ರೀತಿಯೂ ಅಲ್ಲದೇ ಅಲ್ಲಲ್ಲಿ ಲೋಕನೀತಿಯನ್ನು ಹೇಳುವುದೂ ಈ ಕಾವ್ಯದಲ್ಲಿ ಕಾಣುವ ಒಂದು ಸೊಗಸಾಗಿದೆ.

ಇದನ್ನು ನಾಲ್ಕು 'ಅವತಾರ'ಗಳೆಂಬ ಭಾಗಗಳನ್ನಾಗಿ ಮಾಡಿದ್ದಲ್ಲದೇ ಬಹುತೇಕ ಕಂದಪದ್ಯಗಳನ್ನೇ ಬಳಸಿದ್ದಾನೆ. ಸಂಸ್ಕೃತ ಮಹಾಕಾವ್ಯಗಳಲ್ಲಿ ಬರುವಂತೆಯೇ ಸರ್ಗಾರಂಭದಿಂದ ಕೊನೆಯವರೆಗೆ ಒಂದೇ ಛಂದಸ್ಸು ಬಳಸಿ ಸರ್ಗಾಂತ್ಯದಲ್ಲಿ ಬೇರೆ ಛಂದಸ್ಸನ್ನು ಬಳಸಿರುವುದೂ ವಿಶೇಷವಾಗಿದೆ. ಕನ್ನಡಕ್ಕೆ ವಿರಳವೆನ್ನಬಹುದಾದ 'ಮಂದಾಕ್ರಾಂತಾ' 'ಹರಿಣೀ' ಮೊದಲಾದ ವೃತ್ತವೈವಿಧ್ಯಗಳನ್ನೂ ಬಳಸಿದ್ದಾನೆ. ಅಷ್ಟೇ ಅಲ್ಲದೇ 'ಸರ್ಗಾಂತೇ ಮಾಲಿನೀ ಪ್ರೋಕ್ತಾ' ಎಂಬಂತೆ ಮಾಲಿನೀ ಛಂದಸ್ಸಿನಲ್ಲಿಯೂ 'ಅವತಾರ'ದ ಕೊನೆಯಲ್ಲಿ ಕಥೆಯ ಫಲಶ್ರುತಿಯನ್ನೂ ಹೇಳುತ್ತಾನೆ.

ಈ ಕೃತಿಯ ಕಥೆ ಯಶೋಧರ ಎಂಬ ರಾಜ ತನ್ನ ಪಾಪಕಾರ್ಯದಿಂದ ಜನ್ಮಜನ್ಮಾಂತರಗಳಲ್ಲಿ ಕಷ್ಟಕೋಟಲೆಗಳಿಗೆ ಒಳಗಾಗುವುದೂ ಕೊನೆಯಲ್ಲಿ ಜ್ಞಾನವನ್ನು ಹೊಂದಿ ಸದ್ಗತಿ ಹೊಂದುವುದೂ ಆಗಿದೆ.


ಸಂದರ್ಭ : (ಮೊದಲನೆಯ ಅವತಾರ)
ಆಗತಾನೇ ಬಂದ ವಸಂತ ಋತುವಿನಲ್ಲಿ ಅಯೋಧ್ಯೆಯ ಮಾರಿದತ್ತನೆಂಬ ರಾಜನೂ ನಗರದ ಜನರೂ ಚಂಡಮಾರಿ ದೇವತೆಯನ್ನು ತುಷ್ಟಿಪಡಿಸಲು ಜಾತ್ರೆಯನ್ನು ನೆರವೇರಿಸಲು ಮಾರಿಯ ದೇವಾಲಯದಲ್ಲಿ ಸೇರುತ್ತಾರೆ. ಹರಕೆಯನ್ನು ಒಪ್ಪಿಸುವುದು ಹಾಗೇ ಬಲಿಯನ್ನು ಕೊಡುವುದೂ ಜಾತ್ರೆಯ ಒಂದು ಅಂಗವಾಗಿತ್ತಷ್ಟೆ. ಮಾರಿದತ್ತನು ತನ್ನ ತಳವಾರ ಚಂಡಕರ್ಮನನ್ನು ಕರೆದು  'ನೀನು ಈಗಲೇ ಬಲಿಗೆಂದು ಮನುಷ್ಯಯುಗ್ಮವನ್ನು ಕರೆ ತಾ' ಎಂದು ಅಣತಿ ಕೊಡುತ್ತಾನೆ. ಆಗ ಅವನು 'ಅಭಯಮತಿ ಮತ್ತು ಅಭಯರುಚಿಯರನ್ನು ಹಿಡಿದುಕೊಂಡು ಬರುತ್ತಾನೆ. ಅವರು ಒಬ್ಬರನ್ನೊಬ್ಬರು ಸಂತೈಸುತ್ತಾ ಬಂದಾಗ ಕಾಣುವ ಈ ಮಾರಿಯ ದೇವಾಲಯದ ವರ್ಣನೆಯೇ ಪ್ರಸ್ತುತ ಸಂಚಿಕೆಗೆ ಆಯ್ದುಕೊಂಡ ಪದ್ಯಗಳು.

ಇಂತಿಂತೊರ್ವರನೊರ್ವರ್ 
ಸಂತೈಸುತ್ತಂ ನೃಪೇಂದ್ರತನುಜಾತರ್ ನಿ
ಶ್ಚಿಂತಂ ಪೊಕ್ಕರ್ ಪಸಿದ ಕೃ
ತಾಂತನ ಬಾಣಸುವೊಲಿರ್ದ ಮಾರಿಯ ಮನೆಯಂ||೫೩||

(ಹೀಗೆ ಒಬ್ಬರನ್ನೊಬ್ಬರು ಸಂತೈಸುತ್ತ ನೃಪೇಂದ್ರನ ಮಕ್ಕಳು(ಅಭಯಮತಿ ಮತ್ತು ಅಭಯರುಚಿ) ನಿಶ್ಚಿಂತರಾಗಿ ಹಸಿದುಕೊಂಡಿದ್ದ ಯಮನ ಅಡುಗೆಯಮನೆಯಂತಿದ್ದ ಮಾರಿಯ ಮನೆಯನ್ನು ಹೊಕ್ಕರು 
ಇಲ್ಲಿ ಯಮನ ಅಡುಗೆಯ ಮನೆ ಎಂಬ ಉಪಮಾನವನ್ನು ಕೊಟ್ಟಿರುವುದು ಮಾರಿಯ ಮನೆಯ ಭಯಂಕರ ರೂಪವನ್ನು ಪ್ರತಿನಿಧಿಸುತ್ತದೆ  )

ತಳಮನುಡಿದಿರುವ ಕಣ್ಣಂ
ಕಳೆದೇರಿಪ ಕರುಳ ತೋರಣಂಗಟ್ಟುವ ಕಾ
ಲ್ಗಳನುರಿಪಿ ನೆತ್ತರಾ ಕೂ
ೞ್ಗಳನಡುತಿಹ ವೀರರೆತ್ತ ನೋೞ್ಪೊಡಮದಱೊಳ್||೫೪||

(ಅಲ್ಲಿ ನೋಡಿದರೆ ವೀರರು ಹಲವರು (ಬಲಿಪಶುಗಳ) ಕೈಕಾಲುಗಳನ್ನು ಮುರಿದು  ಕಣ್ಣನ್ನು ಕಿತ್ತು  ದೇವಿಗೆ ಅರ್ಚನೆ ಮಾಡುತ್ತಿದ್ದರು. ಕೆಲವರು ಕರುಳ ತೋರಣವನ್ನು ಕಟ್ಟುತ್ತಿದ್ದರು. ಕೆಲವರು ರಕ್ತದಲ್ಲಿ ಅನ್ನವನ್ನು ಬೇಯಿಸುತ್ತಿದ್ದರು!!.)

ತಾಳುಗೆಯನುರ್ಚಿ ನೆತ್ತಿಯ 
ಗಾಳಂ ಗಗನದೊಳೆೞಲ್ವ ವಾರಿಯ ಬೀರರ್
ಪಾಳಿಯೊಳೆಸೆದರ್ ಪಾಪದ 
ಜೋಳದ ಬೆಳಸಿಂಗೆ ಬೆರ್ಚುಗಟ್ಟಿದ ತೆಱದಿಂ||೫೫||

(ಬಾಯಿಯನ್ನು ಬಗೆದು ನೆತ್ತಿಗೆ ಗಾಳವನ್ನು ಚುಚ್ಚಿ ಎತ್ತರದಲ್ಲಿ ತೂಗಾಡಿಸುತ್ತಿರುವ ವೀರರು ಮಾರಿಯ ದೇವಾಲಯದ ಪಾಳಿ/ಗೋಡೆಗಳ ಮೇಲೆ ಎತ್ತಿ ಕಟ್ಟಿದುದು 'ಪಾಪದ ಜೋಳದ ಬೆಳೆಯನ್ನು ಕಾಪಾಡಲು ಕಟ್ಟಿದ್ದ ಬೆರ್ಚಿನ ಹಾಗೆ ಕಾಣುತ್ತಿತ್ತು!!'
-ಇಲ್ಲಿ ಪಾಪವೆಂಬುದನ್ನೇ ಬೆಳೆಯೆಂದಿದ್ದಲ್ಲದೇ ಆ ತಲೆಗಳನ್ನು ಗಾಳ ಹಾಕಿ ಚುಚ್ಚಿ ನಿಲ್ಲಿಸುತ್ತಿದ್ದುದು ಆ ಪಾಪದ ಬೆಳೆಯ ಹೊಲದಲ್ಲಿ ನಿಲ್ಲಿಸಿದ್ದ 'ಬೆಚ್ಚು'/ಬೆರ್ಚು ಕಂಡಂತೆ ಕಾಣುತ್ತದೆಯೆಂದಿರುವುದೂ ವಿಶೇಷ. ಗದ್ದೆಗಳಲ್ಲಿ ಪಕ್ಷಿಗಳ ಹಾಗೂ ಹಲಕೆಲವು ಪ್ರಾಣಿಗಳ ಹಾವಳಿ ತಡೆಯಲು ಬೆರ್ಚನ್ನು ನಿಲ್ಲಿಸಿಡುವಂತೆ ಬಲಿಪಶುಗಳ ತಲೆಯನ್ನು ನೆಟ್ಟಿದ್ದರೆಂಬ ಚಿತ್ರಣ ಕೊಡುತ್ತಾನೆ )

ಆಡು ಕುಱಿ ಕೋೞಿ ಕೋಣನ
ಕೂಡಿದ ಪಿಂಡೊಳಱಿ ಪೆಳಱಿ ಮಾರ್ದನಿಯಿಂದಂ
ಕೂಡೆ ಬನಮೞ್ತುದುರ್ವರೆ
ಬೀಡೆಯಿನೆರ್ದೆಯೊಡೆದುದವಱ ಕೋಟಲೆಗಾಗಳ್ ||೫೬||

(ಆಡು ಕುರಿ ಕೋಳಿ ಕೋಣಗಳೆಲ್ಲ ಹೆದರಿ ಅರಚುತ್ತಿದ್ದವು. ಅವು ಕೂಗುತ್ತಿದ್ದುದು ಇಡೀ ವನವೇ ಆಳುತ್ತಿರುವಂತೆಯೂ ಅವರ ಕೋಟಲೆಯಿಂದ ಭೂಮಿಯೇ ಎದೆ ಒಡೆದುಕೊಂಡಂತಯೂ ಕಾಣುತ್ತಿತ್ತು!! )

ದೆಸೆದೆಸೆಗೆ ನರಶಿರಂ ತೆ
ತ್ತಿಸಿ ಮೆಱೆದುವು ಮದಿಲೊಳಬ್ಬೆ ಪೇರಡಗಿನ ಪೆ
ರ್ಬೆಸನದೆ ಪೊಱಗಣ ಜೀವ
ಪ್ರಸರಮುಮಂ ಪಲವು ಮುಖದಿನವಳೋಕಿಪವೊಲ್||೫೭||

(ಎಲ್ಲ ದಿಕ್ಕುಗಳಲ್ಲಿಯೂ ಬಲಿಯಾದ ಮನುಷ್ಯರ ತಲೆಗಳನ್ನು ಸಾಲಾಗಿ ಇಟ್ಟಿದ್ದರು. ಅದು ದೊಡ್ಡದಾದ ಮಾಂಸದ ಊಟ ಬೇಕೆಂಬ ಬಯಕೆಯಿಂದ ಮಾರಿಯೇ ಹಲವು ಮುಖಗಳಿಂದ ಹೊರಗಿನ ಜೀವಸಮುದಾಯವನ್ನೆಲ್ಲ ನೋಡುತ್ತಿದ್ದಾಳೇನೋ ಎಂಬಂತೆ ಭಾಸವಾಗುತ್ತಿತ್ತು ) 
ಯಶೋಧರಚರಿತೆಯಲ್ಲಿ ಕಥೆಯ ಸ್ವಾರಸ್ಯ ಅಷ್ಟೇನೂ ಇಲ್ಲದಿದ್ದರೂ ಕಾವ್ಯವ್ಯಾಸಂಗದ ದೃಷ್ಟಿಯಿಂದ, ಕವಿಯ  ಕಲ್ಪನೆಗಳನ್ನು ತಿಳಿದುಕೊಳ್ಳುವ ದೃಷ್ಟಿಯಿಂದ ಓದಬಹುದಾದ ಒಳ್ಳೆಯ ಕಾವ್ಯವಾಗಿದೆ. 

ಭಾನುವಾರ, ಏಪ್ರಿಲ್ 6, 2014

ಸಹೃದಯಕಾಲ-೫-ನಿಷಧಂ ಜನಜೀವನೌಷಧಂ

ತಮ್ಮ ೧೮ನೇ ವಯಸ್ಸಿನಲ್ಲೇ ಕವಿತ್ವಶಕ್ತಿಯನ್ನು ಪ್ರದರ್ಶಿಸಿ ಮೈಸೂರು ಮುಮ್ಮಡಿಕೃಷ್ಣರಾಜ ಒಡೆಯರ್ ಅವರ ಆಸ್ಥಾನದಲ್ಲಿ ಕವಿಯಾಗಿದ್ದರು ಬಸವಪ್ಪಶಾಸ್ತ್ರಿಗಳು. ತಮ್ಮ ಅತ್ಯಲ್ಪಜೀವಿತಕಾಲದಲ್ಲಿಯೇ(೧೮೪೩-೧೮೯೧) ಅನೇಕ ಸಂಸ್ಕೃತಕೃತಿಗಳನ್ನೂ ಆಂಗ್ಲನಾಟಕಗಳನ್ನೂ ಕನ್ನಡಕ್ಕೆ ಭಾಷಾಂತರಿಸಿದ್ದಷ್ಟೇ ಅಲ್ಲದೇ ಸ್ವತಂತ್ರವಾಗಿ  ಕನ್ನಡದಲ್ಲಿಯೂ ಸಂಸ್ಕೃತದಲ್ಲಿಯೂ ಅನೇಕ ಕೃತಿಗಳನ್ನು ರಚಿಸಿದರು. ಅಂತಹ ಒಂದು ಸ್ವತಂತ್ರ ಕೃತಿ 'ದಮಯಂತೀಸ್ವಯಂವರ'. ಇದೊಂದು ಚಂಪೂಶೈಲಿಯ ಕೃತಿಯಾಗಿದ್ದಾದರೂ ಪದ್ಯಬಾಹುಳ್ಯವೇ ಕಾಣುತ್ತದೆ. ಅಲ್ಲದೇ ಬಗೆಬಗೆಯ ಛಂದಸ್ಸುಗಳ ಪ್ರಯೋಗವೂ ಅತ್ಯಂತ ಹೃದ್ಯವಾಗುವ ವರ್ಣನೆಗಳೂ ಸೊಗಸಾಗಿ ಮೇಳೈಸಿವೆ.

PC:Internet
ನಿಷಧರಾಜ ನಲನನ್ನು ದಮಯಂತಿ ಸ್ವಯಂವರದಲ್ಲಿ ವರಿಸುವಲ್ಲಿಯವರೆಗಿನ ಕಥಾನಕವಷ್ಟೇ ಇದರ ಕಥಾನಕವಾದರೂ ಅಲ್ಲಲ್ಲಿ ಬಳಸುವ ಶ್ಲೇಷಾದಿ ಚಮತ್ಕಾರಗಳೂ ಉಪಮಾರೂಪಕಾದಿ ಅಲಂಕಾರಗಳೂ ಸೊಗಸಾಗಿ ಕಥೆಯನ್ನು ಕಟ್ಟಿಟ್ಟಿವೆ.
ಅಭಿನವಕಾಳಿದಾಸ ಎಂಬ ಬಿರುದಿಗೆ ಪಾತ್ರರಾದ ಇವರ ದಮಯಂತೀಸ್ವಯಂವರದಲ್ಲಿ ನಿಷಧದೇಶವರ್ಣನೆಯ ಸಂದರ್ಭದಲ್ಲಿ ಬರುವ ಮೊದಲ ಆಶ್ವಾಸದ ಎರಡನೇ ಪದ್ಯವನ್ನು ಈ ಸಂಚಿಕೆಗೆ ಆರಿಸಿಕೊಂಡಿದ್ದೇನೆ.

ಚಂಪಕಮಾಲೆ||
ನವಫಲಶಾಲಿ ಶಾಲಿವನದಿಂ ಜನನಂದನ ನಂದನಂಗಳಿಂ 
ಕುವಲಯಸಾರ ಸಾರಸ ವಿರಾಜಿ ವಿರಾಜಿ ನದೀನದಂಗಳಿಂ
ಸುವಿಮಲ ರೂಪಶೀಲರಮಣೀ ರಮಣೀಯ ನರರ್ಕಳಿಂ ಸವೈ
ಭವಭವನಂಗಳಿಂ ಮೆರೆಗುಮಾ ನಿಷಧಂ ಜನಜೀವನೌಷಧಂ||
(ಪ್ರಥಮಾಶ್ವಾಸ-೨)
(ಹೊಸ ಫಲವನ್ನು ಹೊತ್ತುನಿಂತ ಶಾಲಿ(ಭತ್ತ)ಯ ವನದಿಂದಲೂ, ಜನರಿಗೆ ಆನಂದವನ್ನು ಕೊಡುವಂತಹ ಉದ್ಯಾನವನಗಳಿಂದಲೂ, ಕುವಲಯ(ಕೆನ್ನಯ್ದಿಲೆ)ಹೂವಿನ ಸಾರದಿಂದಲೂ ಸಾರಸ ಪಕ್ಷಿಗಳ ಸಮೂಹದಿಂದಲೂ ವಿರಾಜಿಸುತ್ತಿರುವ ನದೀನದಗಳಿಂದಲೂ, ಸುವಿಮಲವಾದ ರೂಪಶೀಲಗಳಿಂದ ಕೂಡಿದ ರಮಣಿಯರಿರುವ ರಮಣೀಯವಾದ ಜನರಿಂದಲೂ, ವೈಭವಸಹಿತವಾದ ದೊಡ್ಡದೊಡ್ಡ ಭವನಗಳಿಂದಲೂ ಜನಜೀವನಕ್ಕೆ ಔಷಧವಾದ ನಿಷಧದೇಶ ಮೆರೆಯುತ್ತಿತ್ತು.)

ಇಲ್ಲಿರುವ ನಿಷಧದ ವರ್ಣನೆ ಸಾಧಾರಣವಾದ ಉಲ್ಲೇಖಗಳಿಂದ ಕೂಡಿದ್ದರೂ ಮೊದಲೆರಡು ಪಾದಗಳಲ್ಲಿ ಪಾದಾಂತಯತಿಸಹಿತವಾಗಿ  ಪದ್ಯದಲ್ಲಿ ಯಥೇಷ್ಟವಾಗಿ ಜೊತೆಜೊತೆಯಾಗಿ ಬರುವ  ಛೇಕಾನುಪ್ರಾಸಗಳ ಸ್ವಾರಸ್ಯ ಮೆಚ್ಚುವಂತಿದೆ. '..ಫಲಶಾಲಿ ಶಾಲಿ..', '..ಜನನಂದನ ನಂದನಂಗಳಿಂ..' '..ಸಾರ ಸಾರಸ..'..ವಿರಾಜಿ ವಿರಾಜಿ..' '..ನದೀನದಂ..' '..ರಮಣೀ ರಮಣೀಯ..' '..ಸವೈಭವಭವನಂ..' ಎಂಬೆಲ್ಲ ಕಡೆಗಳಲ್ಲಿ ಬರುವ ಈ ಪದಯುಗ್ಮಗಳ ಸೊಗಸೇ ಸೊಗಸು. ಕೊನೆಯಲ್ಲಿ 'ನಿಷಧಂ ಜನಜೀವನೌಷಧಂ' ಎಂದು ಅವುಗಳಿಗೆಲ್ಲ ಪೂರ್ಣವಿರಾಮ ಹಾಕಿದಂತೆ 'ನಿಷಧಂ' ಎಂಬ ಪದಕ್ಕೆ ಪ್ರಾಸವಾಗಿ 'ಜನಜೀವನೌಷಧಂ' ಎಂದು ತಂದು ನಿಲ್ಲಿಸುವುದೂ ಅಷ್ಟೇ ಹೃದ್ಯವಾಗಿದೆ.


ಬುಧವಾರ, ಏಪ್ರಿಲ್ 2, 2014

ಸಹೃದಯಕಾಲ-೪ :ವಸಂತನೃಪಾಲ ನಡೆದನು ಪಾಂಡುವಿನ ಮೇಲೆ

ಕುಮಾರವ್ಯಾಸ PC : Internet

ಪಂಚಾಂಗದ ಪ್ರಕಾರ ಇದೀಗ ತಾನೆ ಹೊಸ ಸಂವತ್ಸರ ಕಾಲಿಡುತ್ತಿದೆ. ಪ್ರಕೃತಿಯಲ್ಲಿ ಅದಾಗಲೇ ವಸಂತ ಋತು ಅಡರಿದೆ. 
ಕಾವ್ಯಲೋಕದಲ್ಲಿ ಕಾಳಿದಾಸ 'ಋತುಸಂಹಾರ'ಎಂಬ ಕಾವ್ಯವನ್ನೇ ರಚಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಅಷ್ಟೇ ಅಲ್ಲದೇ ಬಹಳಷ್ಟು ಕಾವ್ಯಗಳಲ್ಲಿ ಕಾವ್ಯದ ಔಚಿತ್ಯಕ್ಕೆ ತಕ್ಕಂತೆ ಅಲ್ಲಲ್ಲಿ ಋತುವರ್ಣನೆ ಯಥೇಷ್ಟವಾಗಿ ಕಂಡುಬರುತ್ತವೆ. ಇನ್ನು ಕನ್ನಡದ ಕಾವ್ಯಲೋಕದಲ್ಲಿ ವಸಂತಶೋಭೆಯನ್ನು ಮೆರೆದಂತಹ ಕವಿ ಕುಮಾರವ್ಯಾಸ. ಅವನ ಕೀರ್ತಿಯೂ ಕಾವ್ಯವೂ ನಾಡಿನ ಉದ್ದಗಲಗಳಲ್ಲೂ ಆಚಂದ್ರಾರ್ಕವಾಗಿ ನೆಲೆಯಾಗಿದೆಯಷ್ಟೆ. ಅವನ ರೂಪಕಗಳೂ ವರ್ಣನೆಗಳೂ ಭಾಮಿನಿಯ ಷಟ್ಪದಿಯಲ್ಲಿ ಮನಸ್ಸಿಗೆ ನಾಟುವಂತಹ ಜಾಣ್ನುಡಿಗಳೂ ಲೀಲಾಜಾಲವಾಗಿ ನಿರ್ವಹಿಸುವ ಕಥೆಯ ಬಿಗಿಯೂ ಅವನ ಕರ್ಣಾಟಭಾರತಕಥಾಮಂಜರಿಯನ್ನು ಆಸ್ವಾದಿಸಿದ ಸಹೃದಯರಿಗೇ ಗೊತ್ತು. ಸುಲಭವಾಗಿ ಅರ್ಥವಾಗುವಂತಹ ಕಾವ್ಯವೊಂದನ್ನು ರಚಿಸಿ ಮನೆಮನೆಯಲ್ಲೂ ನಿರಂತರವಾಗಿ ಆರಾಧಿಸಲ್ಪಟ್ಟ ಈ ಕವಿ ವರ್ಣಿಸಿದ ವಸಂತಋತುವನ್ನು  ಕುರಿತ ಪದ್ಯಗಳನ್ನು ಈ ಸಂಚಿಕೆಗೆ ಆಯ್ದುಕೊಡಿದ್ದೇನೆ (ಅರ್ಥ ಸ್ಪಷ್ಟವಾಗಿ ತಿಳಿಯದಿದ್ದ ಕಡೆಗಳಲ್ಲಿಯೂ ಸಾಂಧರ್ಭಿಕವಾಗಿ ಮಾಡಿದ ನನ್ನ ನೀರಸ ಅನುವಾದಕ್ಕೆ ಕ್ಷಮೆಯಿರಲಿ :-( )

ಸಂದರ್ಭ: 'ನಿನ್ನಯಲಲನೆಯನು ನೀ ಕೂಡಿದಾಗಲೆ ಮರಣ ನಿನಗಹುದು' ಎಂದು ಮುನಿಯಿತ್ತ ಶಾಪಗ್ರಸ್ತನಾದ ಪಾಂಡು ಮಹಾರಾಜ ಶತಶೃಂಗ ಪರ್ವತ ಪ್ರದೇಶದಲ್ಲಿ ತನ್ನ ಪತ್ನಿಯರಾದ ಕುಂತಿ ಹಾಗೂ ಮಾದ್ರಿಯರೊಡನೆ ಹಲವು ಕಾಲ ಕಳೆದು, ಕುಂತಿ ದೂರ್ವಾಸರಿಂದ ಪಡೆದ ಮಂತ್ರೋಪದೇಶದಿಂದ ದೈವಕೃಪೆಯನ್ನು ಹೊಂದಿ ಯುಧಿಷ್ಠಿರಾದಿ ಐವರು ಮಕ್ಕಳನ್ನು ಪಡೆದಿರುತ್ತಾನೆ. ಅಂತಹ ಸಂದರ್ಭದಲ್ಲಿ ವಸಂತ ಋತುವಿನ ಆಗಮನವಾಗುತ್ತದೆ. ( ಆದಿಪರ್ವ ಸಂಧಿ-೫)

ಯೋಗಿಗೆತ್ತಿದ ಖಡುಗಧಾರೆ ವಿ
ಯೋಗಿಗೆತ್ತಿದ ಸಬಳವಖಿಳ ವಿ
ರಾಗಿಗಳ ಹೆಡತಲೆಯ ದಡಿ ನೈಷ್ಠಿಕರಿಗಲಗಣಸು
ಆಗಮಿಕರದೆ ಶೂಲ ಗರ್ವಿತ
ಗೂಗೆಗಳ ನಖಸಾಳವಗ್ಗದ
ಭೋಗಿಗಳ ಕುಲದೈವವೆಸೆದುದು ಕುಸುಮಮಯ ಸಮಯ

(ಯೋಗಿಗಳಿಗೆ ಎತ್ತಿದ ಖಡ್ಗಧಾರೆ, ವಿಯೋಗಿಗಳಿಗೆ ಎತ್ತಿದ ಸಬಳ(ಒಂದು ಆಯುಧ/ಈಟಿ), ವಿರಾಗಿಗಳ ಹೆಡತಲೆಯ ದಡಿ, ನೈಷ್ಠಿಕರಿಗೆ ಅಲಗಿನ ಲೋಹದ ತುದಿ, ಆಗಮಿಕರ ಎದೆಗೆ ಶೂಲ, ಗರ್ವ ಹೊಂದಿದ ಗೂಬೆಗಳ ಉಗುರಿನ ತುದಿ, ಭೋಗಿಗಳಿಗೆ ಕುಲದೈವವಾದ ಕುಸುಮಮಯಸಮಯ (ಹೂವುಗಳಿಂದ ಕೂಡಿರುವ ಸಮಯ)ವಸಂತವು ವಿರಾಜಿಸಿತು.

ವಸಂತವು ಭೋಗಿಗಳಿಗೆ ಕುಲದೈವದಂತಿದೆ. ಅಲ್ಲದೇ ಚಿತ್ತಚಾಂಚಲ್ಯವನ್ನುಂಟುಮಾಡುವ ಕಾರಣ ಯೋಗಿಗಳಿಗೆ ಖಡ್ಗಧಾರೆ ಇತ್ಯಾದಿರೂಪಕಗಳು ಸುವೇದ್ಯ.)

ಮೊರೆವ ತುಂಬಿಯ ಗಾಯಕರ ನಯ
ಸರದ ಕೋಕಿಲ ಪಾಠಕರ ಬಂ
ಧುರದ ಗಿಳಿಗಳ ಪಂಡಿತರ ಮಾಮರದ ಕರಿಘಟೆಯ
ಅರಳಿದಂಬುಜ ಸತ್ತಿಗೆಯ ಮಂ
ಜರಿಯ ಕುಸುಮದ ಚಾಮರದ ಚಾ
ತುರ ವಸಂತನೃಪಾಲ ನಡೆದನು ಪಾಂಡುವಿನ ಮೇಲೆ

(ಇಂತಹ ವಸಂತನೆಂಬ ರಾಜ ಮೊರೆಯುವ ದುಂಬಿಗಳನ್ನೇ ಗಾಯಕರನ್ನಾಗಿ ಮಾಡಿಕೊಂಡು ಒಳ್ಳೆಯ ಧ್ವನಿಯಿರುವ ಕೋಗಿಲೆಗಳನ್ನೇ ಪಾಠಕರನ್ನಾಗಿಸಿಕೊಂಡು ಸುಂದರವಾದ ಗಿಳಿಗಳನ್ನೇ ಪಂಡಿತರನ್ನಾಗಿಸಿಕೊಂಡು ಮಾವಿನ ಮರವನ್ನೇ ಆನೆಗಳ ಹಿಂಡಾಗಿಸಿಕೊಂಡು ಅರಳಿರುವ ಕಮಲಗಳನ್ನೇ ಕೊಡೆಯಾಗಿಸಿಕೊಂಡು ಗೊಂಚಲುಗೊಂಚಲಾಗಿರುವ ಹೂವುಗಳನ್ನೇ ಚಾಮರವನ್ನಾಗಿಸಿಕೊಂಡು ಪಾಂಡುವಿನ ಮೇಲೆ ನಡೆದ

ಇಲ್ಲಿ ಸಾವಯವರೂಪಕಾಲಂಕಾರದಲ್ಲಿ ವಸಂತ ಪ್ರಕೃತಿಯಲ್ಲಿ ಬರುತ್ತಿದ್ದುದು ಒಬ್ಬ ರಾಜ ಬಂದಂತೆ ಕಾಣುತ್ತಿತ್ತೆಂಬ ಕಲ್ಪನೆ ಮಾಡಿದ್ದಲ್ಲದೇ ಅವನು ಬಂದ ಉದ್ದೇಶ ಪಾಂಡುವಿನ ಮೇಲೆ ನಡೆಯುವುದು/ಯುದ್ಧಮಾಡುವುದು ಎಂಬ ಧ್ವನಿ ಸ್ಫುರಿಸುತ್ತದೆ. ಆ ಕಾರಣದಿಂದಲೇ ಚಿತ್ತಚಾಂಚಲ್ಯವಾಗಿ ಮಾದ್ರಿಯೊಡನೆ ಸೇರಲು ಹೋಗಿ ತನ್ನ ಜೀವನದ ಅಂತ್ಯವನ್ನು ಕಂಡದ್ದೂ ವೇದ್ಯವೇ ಆಗಿದೆ. )

ಫಲಿತಚೂತದ ಬಿಣ್ಪುಗಳ ನೆರೆ
ತಳಿತಶೋಕೆಯ ಕೆಂಪುಗಳ ಪರಿ
ದಳಿತ ಕಮಲದ ಕಂಪುಗಳ ಬನಬನದ ಗುಂಪುಗಳ
ಎಳಲತೆಯ ನುಣ್ಪುಗಳ ನವ ಪರಿ
ಮಳದ ಪವನನ ಸೊಂಪುಗಳ ವೆ
ಗ್ಗಳಿಕೆ ಝಳಪಿಸಿ ಹೊಯ್ದು ಸೆಳೆದುದು ಜನದ ಕಣ್ಮನವ

(ಫಲವನ್ನು ತಳೆಯಲು ಸಿದ್ಧವಾಗುತ್ತಿರುವ ಮಾವಿನ ಬಿಣ್ಪು, ತಳಿರನ್ನು  ತಳೆದ ಅಶೋಕವೃಕ್ಷದ ಕೆಂಪು, ಅರಳಿದ ಕಮಲದ ಕಂಪು, ಎಳೆಯ ಬಳ್ಳಿಯ ನುಣ್ಪು ಹೊಸ ಪರಿಮಳವನ್ನು ಹೊತ್ತು ತರುವ ಗಾಳಿಯ ಸೊಂಪು ಇವೆಲ್ಲವೂ ಜನರ ಕಣ್ಮನವನ್ನು ಸೆಳೆಯುತ್ತಿದ್ದವು.

ಇಲ್ಲಿ ಅನುಪ್ರಾಸಕ್ಕೆ ತಂದ  'oಪು' ಎಂಬುದೂ ಹಾಗೆಯೇ ತಳಿರು ತಳೆಯುವ ವೃಕ್ಷವೈವಿಧ್ಯವನ್ನು ಉಲ್ಲೇಖಿಸುವುದೂ ಸೊಗಸಾಗಿ ವಸಂತವನ್ನು ಚಿತ್ರಿಸುತ್ತವೆ)

ಪಸರಿಸಿತು ಮಧುಮಾಸ ತಾವರೆ
ಯೆಸಳ ದೋಣಿಯಮೇಲೆ ಹಾಯ್ದವು
ಕುಸುಮರಸದುಬ್ಬರದ ತೊರೆಯನು ಕೂಡೆ ತುಂಬಿಗಳು
ಒಸರ್ವ ಮಕರಂದದ ತುಷಾರದ
ಕೆಸರೊಳದ್ದವು ಕೊಂಚೆಗಳು ಹಗ
ಲೆಸೆವ ದಂಪತಿವಕ್ಕಿ ಸಾರಸ ರಾಜ ಹಂಸಗಳು

(ಈ ಮಧುಮಾಸ ಪಸರಿಸುತ್ತಿರುವಾಗ ತಾವರೆಯ ಎಸಳುಗಳೆಂಬ ದೋಣಿಯಮೇಲೆ ದುಂಬಿಗಳು ಪುಷ್ಪಗಳ ಮಕರಂದ ರಸದ ಉಬ್ಬರದ ತೊರೆಯನ್ನು ದಾಟಿದವು. ಕ್ರೌಂಚಪಕ್ಷಿಗಳು, ಚಕ್ರವಾಕಗಳು, ಸಾರಸಗಳು,ರಾಜಹಂಸಗಳೆಲ್ಲವೂ ಒಸರುತ್ತಿರುವ ಮಕರಂದದ ತುಷಾರದ ಕೆಸರಿನಲ್ಲಿ ಅದ್ದಲ್ಪಟ್ಟವು.

 ಇಲ್ಲಿ ಹಲವು ಪಕ್ಷಿಗಳು ಮಕರಂದಭರಿತ ಕೊಳದಲ್ಲಿ ಮುಳುಗೇಳುವುದನ್ನು ಉಲ್ಲೇಖಿಸುವುದರ ಜೊತೆಗೆ ದುಂಬಿಗಳು ಮಕರಂದದ ತೊರೆಯನ್ನು ತಾವರೆಯ ಎಸಳುಗಳೆಂಬ ದೋಣಿಯ ಮೇಲೆ ಕುಳಿತು ದಾಟಿದವೆನ್ನುವ ಸುಂದರವಾದ ಕಲ್ಪನೆಯನ್ನು ಕೊಡುತ್ತಾನೆ)

ಸೊಗಸಾದ ಅಲಂಕಾರಭೂಯಿಷ್ಠ ಪದ್ಯಗಳ ಮೂಲಕ ಸಹೃದಯಸಾಮ್ರಾಜ್ಯವನ್ನು  ಕುಮಾರವ್ಯಾಸನಂತಹ ರೂಪಕಸಾಮ್ರಾಜ್ಯಚಕ್ರವರ್ತಿಗಳೇ ಗೆಲ್ಲುತ್ತಾರಷ್ಟೇ!!!