Powered By Blogger

ಭಾನುವಾರ, ಏಪ್ರಿಲ್ 20, 2014

ಸಹೃದಯಕಾಲ-೮: ಗದಾಯುದ್ಧಾಂತ್ಯದಲ್ಲಿ ಅಶ್ವತ್ಥಾಮನ ಪುನರಾಗಮನ
ರನ್ನನ ಗದಾಯುದ್ಧದ ಒಂಬತ್ತನೇ ಆಶ್ವಾಸದಲ್ಲಿ ಬರುವ ರಸಮಯವಾದ ಸಂದರ್ಭವೊಂದನ್ನು ಈ ಸಂಚಿಕೆಗೆ ಆಯ್ದುಕೊಂಡಿದ್ದೇನೆ. ಯುದ್ಧದಲ್ಲಿ ದುರ್ಯೋಧನನ ತೊಡೆಮುರಿದು ಅವನ ತಲೆಯನ್ನು ಕಾಲಿನಿಂದ ತುಳಿದು ತನ್ನ ಪ್ರತಿಜ್ಞೆಯನ್ನು ಪೂರೈಸಿ ಭೀಮ ಕೃಷ್ಣ ಕೃಷ್ಣೆ ಹಾಗೂ ತನ್ನ ಸಹೋದರರೊಡನೆ ತನ್ನ ಶಿಬಿರಕ್ಕೆ ಹಿಂದಿರುಗಿದ್ದಾನೆ. ಇತ್ತ ಕುರುಕ್ಷೇತ್ರದಲ್ಲಿ ಅಶ್ವತ್ಥಾಮ, ಕೃಪ ಕೃತವರ್ಮರೊಡನೆ ದುರ್ಯೋಧನ ಇರುವ ಜಾಗವನ್ನು ಭೀಷ್ಮನಿಂದ ತಿಳಿದುಕೊಂಡು ಬರುತ್ತಿರುವಾಗ ಒಬ್ಬಳು ಸುಂದರವಾದ ಸ್ತ್ರೀ ಕಾಣುತ್ತಾಳೆ. ಆಕೆ ಯ ರೂಪು ಹೇಗಿತ್ತೆಂದರೆ
ಪೃಥ್ವಿ||
ಕನತ್ಕನಕ ಚಾಮರಂ ಧವಳಚಾಮರಂ ಕಯ್ಗಳೊಳ್
ಮನಂ ಚಲಿಸೆ ಮಾಸಿ ತಾಱಿದ ಕುರುಳ್ಗಳುಂ ತನ್ನ ಬಿ
ನ್ನನಿರ್ದ ಮೊಗದಿಂ ತವಿಲ್ದಿರೆ ವಿಲಾಸಮುಂ ಮುಂದೆ ಕಂ
ಡನಲ್ಲಿ ಕಮಳಾಕ್ಷಿಯಂ ವೃಷಭಲಕ್ಷಣಂ ಲಕ್ಷ್ಮಿಯಂ||

(ಹೊಳೆಯುತ್ತಿರುವ ಚಿನ್ನದ ಚಾಮರ ಹಾಗೂ ಬಿಳಿಯ ಚಾಮರವನ್ನು ಕಯ್ಯಲ್ಲಿ ಹಿಡಿದು, ಚಂಚಲ ಚಿತ್ತಳಾಗಿ, ಕೆದರಿದ ಮುಂಗುರುಳುಗಳನ್ನುಳ್ಳವಳಾಗಿ, ಖೇದದಿಂದ ವಿಲಾಸವನ್ನೆಲ್ಲ ಕಳೆದುಕೊಂಡ ಕಮಲಾಕ್ಷಿಯಾದ ಲಕ್ಷ್ಮಿಯನ್ನು ವೃಷಭಲಕ್ಷಣನಾದ ಅಶ್ವತ್ಥಾಮ ಕಂಡ)

ವಚನ|| ಅಂತು ಕುಂಭಸಂಭವಸಂಭವಂ ಕಮಲನಾಭನ ಹೃದಯಭವನಾಮೃತಾಬ್ಢಿಸಂಭವೆಯಂ ಕಂಡು -ನೀನಾರ್ಗೆ ಎತ್ತಣಿಂ ಬಂದೆ ಎಲ್ಲಿಗೆ ಪೋದಪೆ ಎಂದು ಬೆಸಗೊಳೆ

(ಹಾಗೆ ಕುಂಭಸಂಭವನಾದ ದ್ರೋಣನ ಮಗ ಅಶ್ವತ್ಥಾಮನು ಕಮಲನಾಭನ ಹೃದಯವನ್ನೇ ಭವನವನ್ನಾಗಿ ಮಾಡಿಕೊಂಡ ಅಮೃತಸಾಗರಸಂಭವೆ ಲಕ್ಶ್ಮಿಯನ್ನು ಕಂಡು - 'ನೀನು ಯಾರವಳು? ಎಲ್ಲಿಂದ ಬಂದೆ? ಎಲ್ಲಿಗೆ ಹೊರಟೆ? ಎಂದು ಕೇಳಿದಾಗ )

ಚಂಪಕಮಾಲೆ|| 
ಅಮೃತಪಯೋಧಿಮಂಥನದೆ ಪುಟ್ಟಿದೆನಬ್ಜವನಾಂತರಾಳದೊಳ್
ರಮಿಯಿಸಿ ಪದ್ಮನಾಭನುರದೊಳ್ ನೆಲಸಿರ್ಪ ಮಹಾನುಭಾವೆಯಾಂ
ಕಮಲೆಯನಿನ್ನೆಗಂ ಕುರುಮಹೀಪತಿಯೊಳ್ ನೆಲೆಸಿರ್ದೆನೀಗಳು
ತ್ತಮಪುರುಷೋತ್ತಮಂ ಬೆಸಸೆ ಪಾಂಡವರೊಳ್ ನೆಲೆಸಲ್ಕೆ ಪೋದಪೆಂ||೪||

(ಅಮೃತಸಾಗರವನ್ನು ಮಂಥನಮಾಡಿದಾಗ ಹುಟ್ಟಿದೆ, ಕಮಲವನದಲ್ಲಿ ರಮಿಯಿಸಿದೆ, ಪದ್ಮನಾಭನ ಎದೆಯಲ್ಲಿ ನೆಲೆಸಿದ್ದ ಮಹಾನುಭಾವೆಯಾದ ಕಮಲೆ(ಲಕ್ಷ್ಮಿ) ಇಲ್ಲಿಯವರೆಗೆ ಕುರುಮಹೀಪತಿ ದುರ್ಯೋಧನನಲ್ಲಿ ನೆಲೆಸಿದ್ದೆ. ಈಗ ಪುರುಷೋತ್ತಮನಾದ ವಿಷ್ಣುವಿನ ಆಜ್ಞೆಯಂತೆ ಪಾಂಡವರಲ್ಲಿ ನೆಲೆಸಲೆಂದು ಹೋಗುತ್ತಿದ್ದೇನೆ.)

ವ|| ಎಂಬುದುಂ ದ್ರೋಣನಂದನಂ ನಾರಾಯಣಂ ಬೆಸಸೆ ಪೋದಪೆನೆಂಬ ಮಾತನವಧಾರಿಸಿ ಮುಗುಳ್ನಗೆನಕ್ಕು-

(ಎಂದು ಹೇಳಿದಳು, ಆಗ ದ್ರೋಣನಂದನನು 'ನಾರಾಯಣ ಹೇಳಿದ್ದಕ್ಕೆ ಹೋಗುತ್ತಿದ್ದೇನೆ' ಎಂಬ ಮಾತನ್ನು ಅವಧಾರಿಸಿ ಮುಗುಳ್ನಗೆ ನಕ್ಕು)

ಚಂಪಕಮಾಲೆ||
ಚಳಮತಿಯಾದೆ ನೀಂ ಜಡಧಿಸಂಭವೆಯಪ್ಪುದಱಿಂ ಸರೋಜ ಸಂ
ಕುಳರಜದಿಂದೆ  ನೀಂ ಪೊರೆದು ರಾಜಸದೊಳ್ ನೆಲೆಸಿರ್ಪೆ ಗೋವುಗಾ
ದಳವೞಿದಿರ್ದ  ಕೃಷ್ಣನೊಡನಿರ್ದುದಱಿಂದಮೆ ಗೋವಿಯಾದೆಯ
ಗ್ಗಳದ ವಿವೇಕಮಿಲ್ಲ ನಿನಗೆತ್ತಱಿವಾ ಪುರುಷಾಂತರಂಗಳಾ ||೫||

(ಸಮುದ್ರದಲ್ಲಿ ಹುಟ್ಟಿದ ಕಾರಣ ನೀನು ಚಂಚಲೆಯಾದೆ, ಕಮಲದ ಹೂವಿನ ರಜ(ಪರಾಗ)ದಿಂದ ನೀನು ರಾಜಸದಲ್ಲಿ ನೆಲೆಸಿರುವೆ. ದನಗಾಹಿಯಾದ ಕೃಷ್ಣನ ಜೊತೆಯಲ್ಲಿದ್ದು ನೀನು ಗೊಲ್ಲೆಯಾದೆ. ನಿನಗೆ ಅಗ್ಗಳದ ವಿವೇಕವೂ ಇಲ್ಲ. ನಿನಗೆ ಹೇಗೆ ಪುರುಷರ ಅಂತರಗಳು ಗೊತ್ತಾಗಬೇಕು?)

PC: Internet
ವ|| ಅದಲ್ಲದೆಯುಮಮೃತಸಮುದ್ರ ಮಂಥನದೊಳ್ ಪುಟ್ಟುವಂದು ಐರಾವತದೊಡನೆ ಪುಟ್ಟಿದುದಱಿಂ ವಿಪರೀತವೃತ್ತಿಯುಂ ಚಂದ್ರನೊಡನೆ ಪುಟ್ಟಿದುದಱಿಂ ಕಳಂಕಸ್ವಭಾವಮುಂ ಕೌಸ್ತುಭದೊಡನೆ ಪುಟ್ಟಿದುದಱಿಂ ಕಠಿನತ್ವಮುಂ ವಾಗ್ದೇವಿಯೊಡನೆ ಪುಟ್ಟಿದುದಱಿಂ ವಾಚಾಳತೆಯುಂ ಅಮರವೈರಿಯೊಡನೆ ಪುಟ್ಟಿದುದಱಿಂ ಗ್ರಹಣಸಲ್ಲೇಖನಾಬುದ್ಧಿಯುಂ ವೈದ್ಯನೊಡನೆ ಪುಟ್ಟಿದುದಱಿಂ ವ್ರಣಶೂಲವೇದಿಯುಂ ನಾರದನೊಡನೆ ಪುಟ್ಟಿದುದಱಿಂ ಕಲಹಸ್ವಭಾವಮುಂ ಕಾಳಕೂಟದೊಡನೆ ಪುಟ್ಟಿದುದಱಿಂ ಕೊಲೆಯುಂ ಕಳ್ಳೊಡನೆ ಪುಟ್ಟಿದುದಱಿಂ ಸೊರ್ಕುಂ ಅಚ್ಚರಸಿಯರೊಡನೆ ಪುಟ್ಟಿದುದಱಿಂ ಪಾಱುಗೆಯ್ತಮುಂ ನಿನಗೆ ಸಹಜಮಾಗಿರ್ದುವು

(ಅದಲ್ಲದೆ ಅಮೃತಸಮುದ್ರವನ್ನು ಕಡೆಯುವಲ್ಲಿ ನೀನು ಹುಟ್ಟುವಾಗ ಐರಾವತದೊಡನೆ ಹುಟ್ಟಿದೆ ಹಾಗಾಗಿ ಅದಕ್ಕಿರುವ ವಿಪರೀತವೃತ್ತಿಯು ನಿನಗೂ ಬಂತು, ಚಂದ್ರನೊಡನೆ ಹುಟ್ಟಿದೆ ಹಾಗಾಗಿ ಅವನಿಗಿರುವ ಕಳಂಕ ಸ್ವಭಾವ ನಿನಗೂ ಬಂತು.ಕೌಸ್ತುಭವೆಂಬ ರತ್ನದೊಡನೆ ಹುಟ್ಟಿದೆ ಹಾಗಾಗಿ ಅದಕ್ಕಿರುವ ಕಠಿನತ್ವ ನಿನಗೂ ಬಂತು, ವಾಗ್ದೇವಿಯ ಜೊತೆ ಹುಟ್ಟಿದೆ, ಹಾಗಾಗಿ ಅವಳಿಗಿರುವ ವಾಚಾಳತೆ ನಿನಗೂ ಬಂತು, ಅಮರವೈರಿಯಾದ ರಾಕ್ಷಸರೊಡನೆ ಹುಟ್ಟಿದ ಕಾರಣ (ರಾಹು) ಗ್ರಹಣಸಲ್ಲೇಖನ ಬುದ್ಧಿ(ಹಿಡಿದಿಕೊಳ್ಳುವುದು ಹಾಗೂ ಬಿಟ್ಟಿಹೋಗುವುದು) ನಿನಗೂ ಬಂತು ವೈದ್ಯನೊಡನೆ(ಧನ್ವಂತರಿ) ಹುಟ್ಟಿದೆ ಹಾಗಾಗಿ ಅವನಿಗಿರುವ ವ್ರಣಶೂಲವೇದಿ(ಗಾಯಗಳ ನೋವನ್ನು ತಿಳಿಯದಿರುವುದು(?)ಗುಣ ನಿನಗೂ ಬಂತು. ನಾರದನೊಡನೆ ಹುಟ್ಟಿದೆ ಹಾಗಾಗಿ ನಿನಗೆ ಅವನಂತೆ ಕಲಹಸ್ವಭಾವವೂ ಬಂತು,ಕಾಳಕೂಟ ವಿಷದೊಡನೆ ಹುಟ್ಟಿದೆ ಹಾಗಾಗಿ ಅದರಂತೆ ನಿನಗೂ ಕೊಲೆ(ಕೊಲ್ಲುವ ಸ್ವಭಾವ)ಬಂತು, ವಾರುಣಿಯೆಂಬ ಮದ್ಯದೊಡನೆ ಹುಟ್ಟಿದೆ,ಹಾಗಾಗಿ ಕಳ್ಳಿನ ಸ್ವಭಾವದಂತೆ ಸೊಕ್ಕೂ ಬಂತು, ಅಪ್ಸರೆಯರೊಡನೆ ಹುಟ್ಟಿದ ಕಾರಣ ಅವರಂತೆ ವ್ಯಭಿಚಾರಿಯಾದೆ.)

ಎಂದೆಲ್ಲ ಬಯ್ದು ಅಶ್ವತ್ಥಾಮ ಆ ಲಕ್ಷ್ಮಿಯನ್ನು ಕುರುಕುಲದ ಘಟಚೇಟಿಯನ್ನು ಎಳೆದೊಯ್ಯುವ ಹಾಗೆ ಕೂದಲು ಹಿಡಿದು ಎಳೆದುಕೊಂಡು ಹೋಗಿ ದುರ್ಯೋಧನನ ಸೇವೆಗೆಂದು ನಿಯೋಜಿಸುತ್ತಾನೆ. ಆ ಬಳಿಕ ರಾತ್ರಿ ಹೊತ್ತಲ್ಲಿ ಪಾಂಡವರ ಶಿಬಿರಕ್ಕೆ ನುಗ್ಗಿ ಕಗ್ಗೊಲೆಗಯ್ಯುವುದು ಅವನ ಕ್ರೂರಮನೋಭಾವವನ್ನು ಬಿಂಬಿಸುತ್ತದೆ.
ಈ ಸಂದರ್ಭದಲ್ಲಿ ರನ್ನನು ಸಮುದ್ರದಲ್ಲಿ ಹುಟ್ಟಿದ ಎಲ್ಲಾ ವಸ್ತುಗಳ ಗುಣಗಳೊಡನೆ ಲಕ್ಷ್ಮಿಯ ಗುಣಗಳೊಡನೆ ಸಮೀಕರಿಸಿ ಬರೆಯುವುದು ಸೊಗಸಾಗಿದೆ. ಅಲ್ಲದೇ ಅವಳ ಆಗಮನವೂ ಅಶ್ವತ್ಥಾಮ ಅವಳನ್ನು ನೋಡಿ ಯಾರು ನೀನು ಎಂದೆಲ್ಲ ಕೇಳುವುದೂ ಚೆನ್ನಾಗಿ ಕೂಡಿಕೊಂಡು ಒಳ್ಳೆಯ ರಸವತ್ತಾದ ಕಾವ್ಯಭಾಗವಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ