Powered By Blogger

ಬುಧವಾರ, ಏಪ್ರಿಲ್ 2, 2014

ಸಹೃದಯಕಾಲ-೪ :ವಸಂತನೃಪಾಲ ನಡೆದನು ಪಾಂಡುವಿನ ಮೇಲೆ

ಕುಮಾರವ್ಯಾಸ PC : Internet

ಪಂಚಾಂಗದ ಪ್ರಕಾರ ಇದೀಗ ತಾನೆ ಹೊಸ ಸಂವತ್ಸರ ಕಾಲಿಡುತ್ತಿದೆ. ಪ್ರಕೃತಿಯಲ್ಲಿ ಅದಾಗಲೇ ವಸಂತ ಋತು ಅಡರಿದೆ. 
ಕಾವ್ಯಲೋಕದಲ್ಲಿ ಕಾಳಿದಾಸ 'ಋತುಸಂಹಾರ'ಎಂಬ ಕಾವ್ಯವನ್ನೇ ರಚಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಅಷ್ಟೇ ಅಲ್ಲದೇ ಬಹಳಷ್ಟು ಕಾವ್ಯಗಳಲ್ಲಿ ಕಾವ್ಯದ ಔಚಿತ್ಯಕ್ಕೆ ತಕ್ಕಂತೆ ಅಲ್ಲಲ್ಲಿ ಋತುವರ್ಣನೆ ಯಥೇಷ್ಟವಾಗಿ ಕಂಡುಬರುತ್ತವೆ. ಇನ್ನು ಕನ್ನಡದ ಕಾವ್ಯಲೋಕದಲ್ಲಿ ವಸಂತಶೋಭೆಯನ್ನು ಮೆರೆದಂತಹ ಕವಿ ಕುಮಾರವ್ಯಾಸ. ಅವನ ಕೀರ್ತಿಯೂ ಕಾವ್ಯವೂ ನಾಡಿನ ಉದ್ದಗಲಗಳಲ್ಲೂ ಆಚಂದ್ರಾರ್ಕವಾಗಿ ನೆಲೆಯಾಗಿದೆಯಷ್ಟೆ. ಅವನ ರೂಪಕಗಳೂ ವರ್ಣನೆಗಳೂ ಭಾಮಿನಿಯ ಷಟ್ಪದಿಯಲ್ಲಿ ಮನಸ್ಸಿಗೆ ನಾಟುವಂತಹ ಜಾಣ್ನುಡಿಗಳೂ ಲೀಲಾಜಾಲವಾಗಿ ನಿರ್ವಹಿಸುವ ಕಥೆಯ ಬಿಗಿಯೂ ಅವನ ಕರ್ಣಾಟಭಾರತಕಥಾಮಂಜರಿಯನ್ನು ಆಸ್ವಾದಿಸಿದ ಸಹೃದಯರಿಗೇ ಗೊತ್ತು. ಸುಲಭವಾಗಿ ಅರ್ಥವಾಗುವಂತಹ ಕಾವ್ಯವೊಂದನ್ನು ರಚಿಸಿ ಮನೆಮನೆಯಲ್ಲೂ ನಿರಂತರವಾಗಿ ಆರಾಧಿಸಲ್ಪಟ್ಟ ಈ ಕವಿ ವರ್ಣಿಸಿದ ವಸಂತಋತುವನ್ನು  ಕುರಿತ ಪದ್ಯಗಳನ್ನು ಈ ಸಂಚಿಕೆಗೆ ಆಯ್ದುಕೊಡಿದ್ದೇನೆ (ಅರ್ಥ ಸ್ಪಷ್ಟವಾಗಿ ತಿಳಿಯದಿದ್ದ ಕಡೆಗಳಲ್ಲಿಯೂ ಸಾಂಧರ್ಭಿಕವಾಗಿ ಮಾಡಿದ ನನ್ನ ನೀರಸ ಅನುವಾದಕ್ಕೆ ಕ್ಷಮೆಯಿರಲಿ :-( )

ಸಂದರ್ಭ: 'ನಿನ್ನಯಲಲನೆಯನು ನೀ ಕೂಡಿದಾಗಲೆ ಮರಣ ನಿನಗಹುದು' ಎಂದು ಮುನಿಯಿತ್ತ ಶಾಪಗ್ರಸ್ತನಾದ ಪಾಂಡು ಮಹಾರಾಜ ಶತಶೃಂಗ ಪರ್ವತ ಪ್ರದೇಶದಲ್ಲಿ ತನ್ನ ಪತ್ನಿಯರಾದ ಕುಂತಿ ಹಾಗೂ ಮಾದ್ರಿಯರೊಡನೆ ಹಲವು ಕಾಲ ಕಳೆದು, ಕುಂತಿ ದೂರ್ವಾಸರಿಂದ ಪಡೆದ ಮಂತ್ರೋಪದೇಶದಿಂದ ದೈವಕೃಪೆಯನ್ನು ಹೊಂದಿ ಯುಧಿಷ್ಠಿರಾದಿ ಐವರು ಮಕ್ಕಳನ್ನು ಪಡೆದಿರುತ್ತಾನೆ. ಅಂತಹ ಸಂದರ್ಭದಲ್ಲಿ ವಸಂತ ಋತುವಿನ ಆಗಮನವಾಗುತ್ತದೆ. ( ಆದಿಪರ್ವ ಸಂಧಿ-೫)

ಯೋಗಿಗೆತ್ತಿದ ಖಡುಗಧಾರೆ ವಿ
ಯೋಗಿಗೆತ್ತಿದ ಸಬಳವಖಿಳ ವಿ
ರಾಗಿಗಳ ಹೆಡತಲೆಯ ದಡಿ ನೈಷ್ಠಿಕರಿಗಲಗಣಸು
ಆಗಮಿಕರದೆ ಶೂಲ ಗರ್ವಿತ
ಗೂಗೆಗಳ ನಖಸಾಳವಗ್ಗದ
ಭೋಗಿಗಳ ಕುಲದೈವವೆಸೆದುದು ಕುಸುಮಮಯ ಸಮಯ

(ಯೋಗಿಗಳಿಗೆ ಎತ್ತಿದ ಖಡ್ಗಧಾರೆ, ವಿಯೋಗಿಗಳಿಗೆ ಎತ್ತಿದ ಸಬಳ(ಒಂದು ಆಯುಧ/ಈಟಿ), ವಿರಾಗಿಗಳ ಹೆಡತಲೆಯ ದಡಿ, ನೈಷ್ಠಿಕರಿಗೆ ಅಲಗಿನ ಲೋಹದ ತುದಿ, ಆಗಮಿಕರ ಎದೆಗೆ ಶೂಲ, ಗರ್ವ ಹೊಂದಿದ ಗೂಬೆಗಳ ಉಗುರಿನ ತುದಿ, ಭೋಗಿಗಳಿಗೆ ಕುಲದೈವವಾದ ಕುಸುಮಮಯಸಮಯ (ಹೂವುಗಳಿಂದ ಕೂಡಿರುವ ಸಮಯ)ವಸಂತವು ವಿರಾಜಿಸಿತು.

ವಸಂತವು ಭೋಗಿಗಳಿಗೆ ಕುಲದೈವದಂತಿದೆ. ಅಲ್ಲದೇ ಚಿತ್ತಚಾಂಚಲ್ಯವನ್ನುಂಟುಮಾಡುವ ಕಾರಣ ಯೋಗಿಗಳಿಗೆ ಖಡ್ಗಧಾರೆ ಇತ್ಯಾದಿರೂಪಕಗಳು ಸುವೇದ್ಯ.)

ಮೊರೆವ ತುಂಬಿಯ ಗಾಯಕರ ನಯ
ಸರದ ಕೋಕಿಲ ಪಾಠಕರ ಬಂ
ಧುರದ ಗಿಳಿಗಳ ಪಂಡಿತರ ಮಾಮರದ ಕರಿಘಟೆಯ
ಅರಳಿದಂಬುಜ ಸತ್ತಿಗೆಯ ಮಂ
ಜರಿಯ ಕುಸುಮದ ಚಾಮರದ ಚಾ
ತುರ ವಸಂತನೃಪಾಲ ನಡೆದನು ಪಾಂಡುವಿನ ಮೇಲೆ

(ಇಂತಹ ವಸಂತನೆಂಬ ರಾಜ ಮೊರೆಯುವ ದುಂಬಿಗಳನ್ನೇ ಗಾಯಕರನ್ನಾಗಿ ಮಾಡಿಕೊಂಡು ಒಳ್ಳೆಯ ಧ್ವನಿಯಿರುವ ಕೋಗಿಲೆಗಳನ್ನೇ ಪಾಠಕರನ್ನಾಗಿಸಿಕೊಂಡು ಸುಂದರವಾದ ಗಿಳಿಗಳನ್ನೇ ಪಂಡಿತರನ್ನಾಗಿಸಿಕೊಂಡು ಮಾವಿನ ಮರವನ್ನೇ ಆನೆಗಳ ಹಿಂಡಾಗಿಸಿಕೊಂಡು ಅರಳಿರುವ ಕಮಲಗಳನ್ನೇ ಕೊಡೆಯಾಗಿಸಿಕೊಂಡು ಗೊಂಚಲುಗೊಂಚಲಾಗಿರುವ ಹೂವುಗಳನ್ನೇ ಚಾಮರವನ್ನಾಗಿಸಿಕೊಂಡು ಪಾಂಡುವಿನ ಮೇಲೆ ನಡೆದ

ಇಲ್ಲಿ ಸಾವಯವರೂಪಕಾಲಂಕಾರದಲ್ಲಿ ವಸಂತ ಪ್ರಕೃತಿಯಲ್ಲಿ ಬರುತ್ತಿದ್ದುದು ಒಬ್ಬ ರಾಜ ಬಂದಂತೆ ಕಾಣುತ್ತಿತ್ತೆಂಬ ಕಲ್ಪನೆ ಮಾಡಿದ್ದಲ್ಲದೇ ಅವನು ಬಂದ ಉದ್ದೇಶ ಪಾಂಡುವಿನ ಮೇಲೆ ನಡೆಯುವುದು/ಯುದ್ಧಮಾಡುವುದು ಎಂಬ ಧ್ವನಿ ಸ್ಫುರಿಸುತ್ತದೆ. ಆ ಕಾರಣದಿಂದಲೇ ಚಿತ್ತಚಾಂಚಲ್ಯವಾಗಿ ಮಾದ್ರಿಯೊಡನೆ ಸೇರಲು ಹೋಗಿ ತನ್ನ ಜೀವನದ ಅಂತ್ಯವನ್ನು ಕಂಡದ್ದೂ ವೇದ್ಯವೇ ಆಗಿದೆ. )

ಫಲಿತಚೂತದ ಬಿಣ್ಪುಗಳ ನೆರೆ
ತಳಿತಶೋಕೆಯ ಕೆಂಪುಗಳ ಪರಿ
ದಳಿತ ಕಮಲದ ಕಂಪುಗಳ ಬನಬನದ ಗುಂಪುಗಳ
ಎಳಲತೆಯ ನುಣ್ಪುಗಳ ನವ ಪರಿ
ಮಳದ ಪವನನ ಸೊಂಪುಗಳ ವೆ
ಗ್ಗಳಿಕೆ ಝಳಪಿಸಿ ಹೊಯ್ದು ಸೆಳೆದುದು ಜನದ ಕಣ್ಮನವ

(ಫಲವನ್ನು ತಳೆಯಲು ಸಿದ್ಧವಾಗುತ್ತಿರುವ ಮಾವಿನ ಬಿಣ್ಪು, ತಳಿರನ್ನು  ತಳೆದ ಅಶೋಕವೃಕ್ಷದ ಕೆಂಪು, ಅರಳಿದ ಕಮಲದ ಕಂಪು, ಎಳೆಯ ಬಳ್ಳಿಯ ನುಣ್ಪು ಹೊಸ ಪರಿಮಳವನ್ನು ಹೊತ್ತು ತರುವ ಗಾಳಿಯ ಸೊಂಪು ಇವೆಲ್ಲವೂ ಜನರ ಕಣ್ಮನವನ್ನು ಸೆಳೆಯುತ್ತಿದ್ದವು.

ಇಲ್ಲಿ ಅನುಪ್ರಾಸಕ್ಕೆ ತಂದ  'oಪು' ಎಂಬುದೂ ಹಾಗೆಯೇ ತಳಿರು ತಳೆಯುವ ವೃಕ್ಷವೈವಿಧ್ಯವನ್ನು ಉಲ್ಲೇಖಿಸುವುದೂ ಸೊಗಸಾಗಿ ವಸಂತವನ್ನು ಚಿತ್ರಿಸುತ್ತವೆ)

ಪಸರಿಸಿತು ಮಧುಮಾಸ ತಾವರೆ
ಯೆಸಳ ದೋಣಿಯಮೇಲೆ ಹಾಯ್ದವು
ಕುಸುಮರಸದುಬ್ಬರದ ತೊರೆಯನು ಕೂಡೆ ತುಂಬಿಗಳು
ಒಸರ್ವ ಮಕರಂದದ ತುಷಾರದ
ಕೆಸರೊಳದ್ದವು ಕೊಂಚೆಗಳು ಹಗ
ಲೆಸೆವ ದಂಪತಿವಕ್ಕಿ ಸಾರಸ ರಾಜ ಹಂಸಗಳು

(ಈ ಮಧುಮಾಸ ಪಸರಿಸುತ್ತಿರುವಾಗ ತಾವರೆಯ ಎಸಳುಗಳೆಂಬ ದೋಣಿಯಮೇಲೆ ದುಂಬಿಗಳು ಪುಷ್ಪಗಳ ಮಕರಂದ ರಸದ ಉಬ್ಬರದ ತೊರೆಯನ್ನು ದಾಟಿದವು. ಕ್ರೌಂಚಪಕ್ಷಿಗಳು, ಚಕ್ರವಾಕಗಳು, ಸಾರಸಗಳು,ರಾಜಹಂಸಗಳೆಲ್ಲವೂ ಒಸರುತ್ತಿರುವ ಮಕರಂದದ ತುಷಾರದ ಕೆಸರಿನಲ್ಲಿ ಅದ್ದಲ್ಪಟ್ಟವು.

 ಇಲ್ಲಿ ಹಲವು ಪಕ್ಷಿಗಳು ಮಕರಂದಭರಿತ ಕೊಳದಲ್ಲಿ ಮುಳುಗೇಳುವುದನ್ನು ಉಲ್ಲೇಖಿಸುವುದರ ಜೊತೆಗೆ ದುಂಬಿಗಳು ಮಕರಂದದ ತೊರೆಯನ್ನು ತಾವರೆಯ ಎಸಳುಗಳೆಂಬ ದೋಣಿಯ ಮೇಲೆ ಕುಳಿತು ದಾಟಿದವೆನ್ನುವ ಸುಂದರವಾದ ಕಲ್ಪನೆಯನ್ನು ಕೊಡುತ್ತಾನೆ)

ಸೊಗಸಾದ ಅಲಂಕಾರಭೂಯಿಷ್ಠ ಪದ್ಯಗಳ ಮೂಲಕ ಸಹೃದಯಸಾಮ್ರಾಜ್ಯವನ್ನು  ಕುಮಾರವ್ಯಾಸನಂತಹ ರೂಪಕಸಾಮ್ರಾಜ್ಯಚಕ್ರವರ್ತಿಗಳೇ ಗೆಲ್ಲುತ್ತಾರಷ್ಟೇ!!!

2 ಕಾಮೆಂಟ್‌ಗಳು:

 1. ಚೆನ್ನಾಗಿದೆ! ಅಂದಹಾಗೆ ನೆನ್ನೆ ನಾವು ಇಲ್ಲಿ ಇದೇ ಭಾಗಕ್ಕೆ ವಾಚನ/ವ್ಯಾಖ್ಯಾನ ಮಾಡಿದ್ದೆವು!

  ಇಲ್ಲಿ ಅದರ ಮುದ್ರಿಕೆ ಇದೆ , ಆದಾಗ ಕೇಳಿ ನೋಡಿ: http://www.mixcloud.com/ramaprasad/spring-description-of-the-spring-season-from-kumara-vyaasas-bhaarata-kavya-vachana-program/

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನಿಮ್ಮ ವಾಚನ-ವ್ಯಾಖ್ಯಾನ ಚೆನ್ನಾಗಿ ಮೂಡಿಬಂದಿದೆ :-)ಆರಂಭದಲ್ಲಿ ವಾಚಿಸಿದ ನಿಮ್ಮ ಭಾಮಿನಿ ಷಟ್ಪದಿಯೂ ಕೂಡ :-)

   ಅಳಿಸಿ