ಪಂಪನ ವಿಕ್ರಮಾರ್ಜುನವಿಜಯವು ಕನ್ನಡದಲ್ಲಿ ಬಹಳಷ್ಟು ಕಾರಣಗಳಿಂದ ಒಂದು ವಿಶಿಷ್ಟಕೃತಿಯಾಗಿದೆ. ಅದರಲ್ಲಿ ಬರುವಂತಹ ಹಳಗನ್ನಡ ನುಡಿಗಟ್ಟುಗಳು ಅಚ್ಚಗನ್ನಡ ಶಬ್ದಗಳು ಇವೆಲ್ಲವೂ ಭಾಷಾಭ್ಯಾಸಿಗಳಿಗೆ ತುಂಬಾ ಉಪಯುಕ್ತವಾಗಿವೆ.
PC: Internet |
ಪಂಪನ ಭಾರತಕಥೆಯಲ್ಲಿ ಹಲವು ಕಡೆಗಳಲ್ಲಿ ರಸಾಭಾಸಕ್ಕೆ ಕಾರಣವಾಗುವಂತಹ ಘಟ್ಟಗಳಿದ್ದರೂ, ಮೂಲ ಕಥೆಯಲ್ಲಿ ಬದಲಾವಣೆಗಳನ್ನು ಅದೇಷ್ಟೋ ಮಾಡಿಕೊಂಡು ತನ್ನ ಕೊರಳಿಗೆ ತಾನೇ ಉರುಳು ಹಾಕಿಕೊಂಡಂತೆ ಮಾಡಿಕೊಂಡಿದ್ದರೂ ಕೆಲವೊಂದು ವರ್ಣನೆಗಳನ್ನು ಅವಶ್ಯವಾಗಿ ನೋಡಲೇ ಬೇಕು. (ಬಲ್ಲವರು ಅದಕ್ಕೂ ಬೇರೆ ಮೂಲವನ್ನು ತೋರಿಸಿದರೆ ಪಂಪ ತುಂಬಾ ಬಡವನಾಗಿಬಿಡಬಹುದು :-) )
ರಸಮಯವಾದ ಒಂದು ಪದ್ಯ ಕರ್ಣನ ಜನನದ ನಂತರದ ಸಂದರ್ಭದಲ್ಲಿ ಬರುವಂತಹದು: ದೂರ್ವಾಸ ಮಹರ್ಷಿಯ ಮಂತ್ರದ ಫಲವಾಗಿ ಸೂರ್ಯನಿಂದ ಒಂದು ಮಗುವನ್ನು ಪಡೆದ ಕುಂತಿ ಲೋಕಾಪವಾದಕ್ಕೆ ಅಳುಕಿ ಗಂಗೆಯಲ್ಲಿ ತನ್ನ ಮಗುವನ್ನು ಹಾಕಿ ಜಲದೇವತೆಗಳೇ ಕಾಪಾಡಬೇಕೆಂದು ಹೊರಡುತ್ತಾಳೆ. ಅಂತಹ ಸುಂದರ ಸುಕುಮಾರಶರೀರದ ಹಸುಗೂಸನ್ನು ಗಂಗೆ ತನ್ನ ತೆರೆಗಳೆಂಬ ಕೈಗಳಿಂದ ಮುಳುಗಲೀಯದೆ ತರುತ್ತಿರುವಾಗ ಆ ಮಗುವನ್ನು ಸೂತನೊಬ್ಬನು ಕಾಣುತ್ತಾನೆ.
ಉತ್ಪಲಮಾಲೆ||
ಬಾಳದಿನೇಶ ಬಿಂಬದ ನೆೞಲ್ ಜಲದೊಳ್ ನೆಲೆಸಿತ್ತೊ ಮೇಣ್ ಫಣೀಂ
ದ್ರಾಳಯದಿಂದಮುರ್ಚಿದ ಫಣಾಮಣಿ ಮಂಗಳರಶ್ಮಿಯೋ ಕರಂ |
ಮೇಳಿಸಿದಪ್ಪುದೆನ್ನೆರ್ದೆಯನೆಂದು ಬೊದಿಲ್ಲನೆ ಪಾಯ್ದು ನೀರೊಳಾ
ಬಾಳನನಾದಮಾದರದೆ ಕಂಡೊಸೆದಂ ನಿಧಿಗಂಡನಂತೆವೊಲ್|| (೧-೯೬)
("ಎಳೆಯ ಸೂರ್ಯನ ಬಿಂಬದ ನೆರಳು ನೀರಿನಲ್ಲಿ ನೆಲೆಸಿರುವುದೋ ಅಥವಾ ನಾಗಗಳ ಪಾತಾಲ ಲೋಕದಿಂದ ಹೊರಬಂದ ಸರ್ಪದ ಹೆಡೆಯ ಮಣಿಯ ಮಂಗಳ ಕಿರಣಗಳೋ, ನನ್ನ ಎದೆಯನ್ನು ಸೆಳೆಯುತ್ತಿದೆ" ಎಂದು ಸೂತನು ಆದರದಿಂದ 'ಬೊದಿಲ್ಲನೆ' ನೀರಿಗೆ ಹಾರಿ ನಿಧಿಯನ್ನು ಕಂಡವರಂತೆ ಹಿಗ್ಗಿದನು)
ಇಲ್ಲಿ ಬಳಸಿರುವ ರೂಪಕೋಪಮೆಗಳಲ್ಲಿ ಪದ್ಯದ ಸ್ವಾರಸ್ಯವಿರುವುದು. 'ಬಾಲಸೂರ್ಯನ ಬಿಂಬದ ನೆರಳು' ಎಂಬುದು ಆ ಶಿಶುವಿನ ರೂಪವನ್ನು ಕಲ್ಪಿಸಿಕೊಡುತ್ತದೆ. ಸೂರ್ಯನ ಮಗನ ಕಾಂತಿ ಸೂರ್ಯನ ನೆರಳಂತಿತ್ತು. ಫಣೀಂದ್ರನ ಫಣಾಮಣಿಯ ಮಂಗಳ ರಶ್ಮಿ ಎಂಬುದೂ ಸಹ ಕರ್ಣನ ಸೊಬಗನ್ನು ವರ್ಣಿಸುವುದು. ಆ ಮಗುವನ್ನು ಕಂಡು ದೊಡ್ದ 'ನಿಧಿ ಸಿಕ್ಕವರಂತೆ' ಸೂತ ಹಿಗ್ಗಿ ನದಿಗೆ ಹಾರುವುದನ್ನೂ 'ಬೊದಿಲ್ಲನೆ' ಎಂದು ಶಬ್ದಸಹಿತವಾಗಿ ತಂದಿರುವುದೂ ಮತ್ತೊಂದು ಸ್ವಾರಸ್ಯ..
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ