Powered By Blogger

ಭಾನುವಾರ, ಏಪ್ರಿಲ್ 6, 2014

ಸಹೃದಯಕಾಲ-೫-ನಿಷಧಂ ಜನಜೀವನೌಷಧಂ

ತಮ್ಮ ೧೮ನೇ ವಯಸ್ಸಿನಲ್ಲೇ ಕವಿತ್ವಶಕ್ತಿಯನ್ನು ಪ್ರದರ್ಶಿಸಿ ಮೈಸೂರು ಮುಮ್ಮಡಿಕೃಷ್ಣರಾಜ ಒಡೆಯರ್ ಅವರ ಆಸ್ಥಾನದಲ್ಲಿ ಕವಿಯಾಗಿದ್ದರು ಬಸವಪ್ಪಶಾಸ್ತ್ರಿಗಳು. ತಮ್ಮ ಅತ್ಯಲ್ಪಜೀವಿತಕಾಲದಲ್ಲಿಯೇ(೧೮೪೩-೧೮೯೧) ಅನೇಕ ಸಂಸ್ಕೃತಕೃತಿಗಳನ್ನೂ ಆಂಗ್ಲನಾಟಕಗಳನ್ನೂ ಕನ್ನಡಕ್ಕೆ ಭಾಷಾಂತರಿಸಿದ್ದಷ್ಟೇ ಅಲ್ಲದೇ ಸ್ವತಂತ್ರವಾಗಿ  ಕನ್ನಡದಲ್ಲಿಯೂ ಸಂಸ್ಕೃತದಲ್ಲಿಯೂ ಅನೇಕ ಕೃತಿಗಳನ್ನು ರಚಿಸಿದರು. ಅಂತಹ ಒಂದು ಸ್ವತಂತ್ರ ಕೃತಿ 'ದಮಯಂತೀಸ್ವಯಂವರ'. ಇದೊಂದು ಚಂಪೂಶೈಲಿಯ ಕೃತಿಯಾಗಿದ್ದಾದರೂ ಪದ್ಯಬಾಹುಳ್ಯವೇ ಕಾಣುತ್ತದೆ. ಅಲ್ಲದೇ ಬಗೆಬಗೆಯ ಛಂದಸ್ಸುಗಳ ಪ್ರಯೋಗವೂ ಅತ್ಯಂತ ಹೃದ್ಯವಾಗುವ ವರ್ಣನೆಗಳೂ ಸೊಗಸಾಗಿ ಮೇಳೈಸಿವೆ.

PC:Internet
ನಿಷಧರಾಜ ನಲನನ್ನು ದಮಯಂತಿ ಸ್ವಯಂವರದಲ್ಲಿ ವರಿಸುವಲ್ಲಿಯವರೆಗಿನ ಕಥಾನಕವಷ್ಟೇ ಇದರ ಕಥಾನಕವಾದರೂ ಅಲ್ಲಲ್ಲಿ ಬಳಸುವ ಶ್ಲೇಷಾದಿ ಚಮತ್ಕಾರಗಳೂ ಉಪಮಾರೂಪಕಾದಿ ಅಲಂಕಾರಗಳೂ ಸೊಗಸಾಗಿ ಕಥೆಯನ್ನು ಕಟ್ಟಿಟ್ಟಿವೆ.
ಅಭಿನವಕಾಳಿದಾಸ ಎಂಬ ಬಿರುದಿಗೆ ಪಾತ್ರರಾದ ಇವರ ದಮಯಂತೀಸ್ವಯಂವರದಲ್ಲಿ ನಿಷಧದೇಶವರ್ಣನೆಯ ಸಂದರ್ಭದಲ್ಲಿ ಬರುವ ಮೊದಲ ಆಶ್ವಾಸದ ಎರಡನೇ ಪದ್ಯವನ್ನು ಈ ಸಂಚಿಕೆಗೆ ಆರಿಸಿಕೊಂಡಿದ್ದೇನೆ.

ಚಂಪಕಮಾಲೆ||
ನವಫಲಶಾಲಿ ಶಾಲಿವನದಿಂ ಜನನಂದನ ನಂದನಂಗಳಿಂ 
ಕುವಲಯಸಾರ ಸಾರಸ ವಿರಾಜಿ ವಿರಾಜಿ ನದೀನದಂಗಳಿಂ
ಸುವಿಮಲ ರೂಪಶೀಲರಮಣೀ ರಮಣೀಯ ನರರ್ಕಳಿಂ ಸವೈ
ಭವಭವನಂಗಳಿಂ ಮೆರೆಗುಮಾ ನಿಷಧಂ ಜನಜೀವನೌಷಧಂ||
(ಪ್ರಥಮಾಶ್ವಾಸ-೨)
(ಹೊಸ ಫಲವನ್ನು ಹೊತ್ತುನಿಂತ ಶಾಲಿ(ಭತ್ತ)ಯ ವನದಿಂದಲೂ, ಜನರಿಗೆ ಆನಂದವನ್ನು ಕೊಡುವಂತಹ ಉದ್ಯಾನವನಗಳಿಂದಲೂ, ಕುವಲಯ(ಕೆನ್ನಯ್ದಿಲೆ)ಹೂವಿನ ಸಾರದಿಂದಲೂ ಸಾರಸ ಪಕ್ಷಿಗಳ ಸಮೂಹದಿಂದಲೂ ವಿರಾಜಿಸುತ್ತಿರುವ ನದೀನದಗಳಿಂದಲೂ, ಸುವಿಮಲವಾದ ರೂಪಶೀಲಗಳಿಂದ ಕೂಡಿದ ರಮಣಿಯರಿರುವ ರಮಣೀಯವಾದ ಜನರಿಂದಲೂ, ವೈಭವಸಹಿತವಾದ ದೊಡ್ಡದೊಡ್ಡ ಭವನಗಳಿಂದಲೂ ಜನಜೀವನಕ್ಕೆ ಔಷಧವಾದ ನಿಷಧದೇಶ ಮೆರೆಯುತ್ತಿತ್ತು.)

ಇಲ್ಲಿರುವ ನಿಷಧದ ವರ್ಣನೆ ಸಾಧಾರಣವಾದ ಉಲ್ಲೇಖಗಳಿಂದ ಕೂಡಿದ್ದರೂ ಮೊದಲೆರಡು ಪಾದಗಳಲ್ಲಿ ಪಾದಾಂತಯತಿಸಹಿತವಾಗಿ  ಪದ್ಯದಲ್ಲಿ ಯಥೇಷ್ಟವಾಗಿ ಜೊತೆಜೊತೆಯಾಗಿ ಬರುವ  ಛೇಕಾನುಪ್ರಾಸಗಳ ಸ್ವಾರಸ್ಯ ಮೆಚ್ಚುವಂತಿದೆ. '..ಫಲಶಾಲಿ ಶಾಲಿ..', '..ಜನನಂದನ ನಂದನಂಗಳಿಂ..' '..ಸಾರ ಸಾರಸ..'..ವಿರಾಜಿ ವಿರಾಜಿ..' '..ನದೀನದಂ..' '..ರಮಣೀ ರಮಣೀಯ..' '..ಸವೈಭವಭವನಂ..' ಎಂಬೆಲ್ಲ ಕಡೆಗಳಲ್ಲಿ ಬರುವ ಈ ಪದಯುಗ್ಮಗಳ ಸೊಗಸೇ ಸೊಗಸು. ಕೊನೆಯಲ್ಲಿ 'ನಿಷಧಂ ಜನಜೀವನೌಷಧಂ' ಎಂದು ಅವುಗಳಿಗೆಲ್ಲ ಪೂರ್ಣವಿರಾಮ ಹಾಕಿದಂತೆ 'ನಿಷಧಂ' ಎಂಬ ಪದಕ್ಕೆ ಪ್ರಾಸವಾಗಿ 'ಜನಜೀವನೌಷಧಂ' ಎಂದು ತಂದು ನಿಲ್ಲಿಸುವುದೂ ಅಷ್ಟೇ ಹೃದ್ಯವಾಗಿದೆ.


5 ಕಾಮೆಂಟ್‌ಗಳು:

  1. ಮೇಲಿನ ಪದ್ಯದಲ್ಲಿ ಇರುವ ಪದಗಳ ಪುನರುಕ್ತಿ ಯಮಕಕ್ಕೆ ಉದಾಹರಣೆಯೇ ?

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಅವು ಪುನರುಕ್ತಿ ಅಲ್ಲ. ಪುನರುಕ್ತಿ ಎಂದರೆ ಒಂದೇ ಅರ್ಥವನ್ನು ಎರಡು ಅಥವಾ ಹೆಚ್ಚು ಬಾರಿ ಹೇಳುವುದಾಗುತ್ತದೆ. ಇದು ಛೇಕಾನುಪ್ರಾಸ ಎಂಬ ಪ್ರಕಾರಕ್ಕೆ ಬರುತ್ತವೆ. ಯಮಕದಲ್ಲಿಯೂ ಹಲವು ತೆರನಾಗಿದ್ದು ಇದು ಯಮಕಕ್ಕೂ ಉದಾಹರಣೆಯಾಗಬಹುದೋ ಗೊತ್ತಿಲ್ಲ :-(
      ಯಮಕ ಎಂದರೆ ಒಂದೇ ಶಬ್ದ / ಅಕ್ಷರಗಳ ಗುಂಪು ವಿಭಿನ್ನಾರ್ಥದಲ್ಲಿ ಪುನಃಪುನಃ ಬಳಸಲ್ಪಡುವುದಾಗಿದೆ.
      ಯಮಕಕ್ಕೆ ಉದಾಹರಣೆಗೆ ಬಸವಪ್ಪಶಾಸ್ತ್ರಿಗಳದ್ದೇ ಒಂದು ಪದ್ಯ (ಪ್ರತಿಸಾಲಿನಲ್ಲಿಯೂ ಆರಂಭದಲ್ಲಿ 'ಯಾದವ' ಎಂಬ ಬಳಕೆ ನೋಡಿ)
      ಯಾದವ ವಂಶದೆ ಹರಿಗೆಣೆ
      ಯಾದವನೆನೆ ಸಕಲ ಗುಣದೆ ನೆಗಳ್ದಂ ನಿರ್ದಾ
      ಯಾದ ವಸುಧಾಧಿನಾಥಂ
      ಯಾದವನಡಿಗೈದ ವನಧಿವೊಲ್ ಗಂಭೀರಂ||

      ಅಳಿಸಿ
  2. ಜೈಮಿನಿಯಲ್ಲಿ ಒಂದು ಒಳ್ಳೆಯ ಯಮಕಪದ್ಯವಿದೆ. ಐಹಿಕ ಸುಖವನ್ನು ಬಯಸಿ ಸದ್ಗತಿಯನ್ನು ಕಾಯ್ದುಕೊಳ್ಳಲಿಲ್ಲ, ಹೆಚ್ಚಾದ ವೈರದಿಂದ ಬಾಂಧವರನ್ನು ಕೊಂದ ಪಾಪವೃಕ್ಷವು ನಮ್ಮನ್ನು ಕಾಯಿಸದಿರದು, ಇಷ್ಟಾಗಿಯೂ ಭೂಮಿಯನ್ನು ಆಳಿದರೆ ಯಶಸ್ಸು ಸಿಗದು, ಇತಿಹಾಸವು(ಉರೆ) ಸಮರ್ಥಿಸದು, ಹಾಗಾಗಿ ಅರಸುತನವು ಸಾಕು, ಕಾಡಿಗೆ ಹೋಗಿ ಚಿತ್ತಶುದ್ಧಿಯಿಂದ ಆ ಕೃಷ್ಣನನ್ನು ಭಜಿಸುವೆನು - ಧರ್ಮರಾಯನ ಪ್ರಲಾಪ:
    ಕಾಯದುಪಭೋಗಸಿರಿಯಂ ಬಯಸಿ ಸುಗತಿಯಂ
    ಕಾಯದೆ,+ಉರುತರವೈರದಿಂದಖಿಳಬಾಂಧವನಿ-
    ಕಾಯದುಪಹತಿಯನೆಸಗಿದ ಪಾತಕದ್ರುಮಂ ತನಗೆ ವಿಷಮಾಗಿ ಮುಂದೆ-
    ಕಾಯದುಳಿಯದು, ಮಹಿಯನಿನ್ನಾಳ್ದೊಡಂ ಜಸಂ
    ಕಾಯದು,+ಉರೆ ಮಾಣದು,+ಅದರಿಂದರಸುತನವೆ ಸಾ-
    ಕಾ, ಯದುಕುಲೇಂದ್ರನಂ ಭಜಿಸುವೆಂ ಚಿತ್ತಶುದ್ಧಿಯೊಳರಣ್ಯದೊಳೆಂದನು||

    ಪ್ರತ್ಯುತ್ತರಅಳಿಸಿ