Powered By Blogger

ಗುರುವಾರ, ಮೇ 15, 2014

ಸಹೃದಯಕಾಲ-೧೨: ಕರ್ಣಾಟಕ ಕಾದಂಬರಿ


ಬಾಣನ ಕಾದಂಬರಿಯ ಬಗ್ಗೆ "ಕಾದಂಬರೀರಸಜ್ಞಾನಾಂ ಆಹಾರೋಪಿ ನ ರೋಚತೇ" ಎಂದು ಹೇಳಿದ್ದನ್ನು ಕೇಳಿದರೇ ಅದರ ಸ್ವಾದ ಗೊತ್ತಾಗುತ್ತದೆ. ಬಾಣನ ಶೈಲಿಯಂತೆ ಈ ಮಾತಿನಲ್ಲಿಯೂ ಶ್ಲೇಷವಿರುವುದೂ ಒಂದು ಸ್ವಾರಸ್ಯ. ಕಾದಂಬರಿ ಎಂದರೆ ಬಾಣನ ಕೃತಿಯಾದ ಕಾದಂಬರಿಯಷ್ಟೇ ಅಲ್ಲದೇ 'ಸಾರಾಯಿ' ಎಂಬ ಅರ್ಥದಲ್ಲಿಯೂ ಬಳಕೆಯಲ್ಲಿದೆ. ಹಾಗಾಗಿ ಯಾವ ಕಾದಂಬರಿಯ ರಸವನ್ನು ಅರಿತರೂ ಆಹಾರ ರುಚಿಸುವುದಿಲ್ಲ ಎಂಬುದಂತೂ ಸತ್ಯ. ಅಲ್ಲದೇ ಬಾಣಭಟ್ಟನ ಕಾದಂಬರಿ ಓದುಗನಲ್ಲಿ ಹುಟ್ಟಿಸುವ ಕುತುಕ ಅದರ ಶೈಲಿಯ ಸ್ವಾರಸ್ಯ ಇವುಗಳೆಲ್ಲದರಿಂದ ಸಂಸ್ಕೃತದ ಇತಿಹಾಸದಲ್ಲೇ ಅದೊಂದು ಅಪೂರ್ವಕೃತಿಯಾಗಿದೆ. ಹಾಗಾಗಿಯೇ "ಗದ್ಯಂ ಕವೀನಾಂ ನಿಕಷಂ ವದಂತಿ" ಎಂಬ ಮಾತೂ ಹುಟ್ಟಿಕೊಂಡಿತು. ಏಕೆಂದರೆ ಪದ್ಯವೊಂದನ್ನು ಯಾರು ಬೇಕಾದರೂ ಬರೆದುಬಿಡಬಹುದು.(ಆಧುನಿಕ ಕವಿತೆಗಳನ್ನೂ ಸೇರಿಸಿಕೊಂಡು!! ನಾ.ಕಸ್ತೂರಿಯವರ ಅನರ್ಥಕೋಶದ ಮಾತನ್ನೂ ಸೇರಿಸಬಹುದು: "ಗದ್ಯ ಬರೆಯಲಾರದವ ಪದ್ಯ ಬರೆದು ಸೇಡು ತೀರಿಸಿಕೊಂಡ" ಎಂದು) ಅದು ನೀರಸವಾಗಿದ್ದರೂ ಅದರ ಛಂದೋಬಂಧವೇ(ನವ್ಯಕವಿತೆಗಳನ್ನು ಬಿಟ್ಟು) ಅದಕ್ಕೊಂದು ಗಟ್ಟಿತನವನ್ನು ಕೊಟ್ಟುಬಿಡುತ್ತದೆ. ಆದರೆ ಗದ್ಯವೆಂದಾದ ಮೇಲೆ ಅದರಲ್ಲಿ ತನ್ನದೇ ಆದ ಬಿಗಿ ಸಾರ್ಥಕಪದಬಂಧಗಳ ಮಧುರವಾಗುವ ಶೈಲಿ ಓದುಗರಿಗೆ ಬೇಸರ ತರಿಸದಿರುವಂತಹ ಕಥಾ ವಿಸ್ತಾರ ಇತ್ಯಾದಿಗಳೆಲ್ಲವೂ ಇರಬೇಕಲ್ಲದೇ ಸೂಕ್ತರೀತಿಯಲ್ಲಿ ಹೆಣೆದುಕೊಂಡಿರಬೇಕು. ಅದಕ್ಕೇ ಅನೇಕ ಕವಿಗಳು ಗದ್ಯದಲ್ಲಿಯೂ ಚಂಪುವಿನಲ್ಲಿಯೂ ಕಾವ್ಯವನ್ನು ರಚಿಸಲು ಹಿಂಜರಿದರಿರಬೇಕು.
PC:Internet
  

ಇಂತಹ ಬಾಣನ ಕಾದಂಬರಿಯನ್ನು ನಾಗವರ್ಮ ಕನ್ನಡಕ್ಕೆ ಅನುವಾದಿಸುವಾಗ ಒಂದು ಉತ್ತಮ ಬದಲಾವಣೇ ಮಾಡಿಕೊಂಡಿದ್ದೇನೆಂದರೆ ಅದನ್ನು ಚಂಪುವಿನಲ್ಲಿ ಅನುವಾದಿಸಲು ಹೊರಟಿದ್ದು. ಅಲ್ಲದೇ ಬೇಕಾದಷ್ಟು ಸ್ವಾತಂತ್ರ್ಯವನ್ನು ತೆಗೆದುಕೊಂಡು ಕೆಲವಷ್ಟು ಸ್ವಾರಸ್ಯಗಳನ್ನು ಮಾತ್ರವೇ ಉಳಿಸಿಕೊಂಡು ಹಲವಾರು ವರ್ಣನೆಗಳ ಗದ್ಯಭಾಗವನ್ನು ಬಿಟ್ಟು ಅನುವಾದ ಮಾಡಿರುವುದು ಇವುಗಳಿಂದ ಸಂಸ್ಕೃತಕಾದಂಬರಿಯ ಕನ್ನಡರೂಪದ ಸಾರಸಂಗ್ರಹವಿದೆಂದರೆ ತಪ್ಪಾಗಲಾರದೇನೋ!
ಬಾಣಭಟ್ಟನ ಸಂಸ್ಕೃತ ಕಾದಂಬರಿಯನ್ನು ಸಶಕ್ತವಾಗಿ ಸಾಲಂಕಾರವಾಗಿ ಕನ್ನಡದಲ್ಲಿ ಅನುವಾದ ಮಾಡಿದ ನಾಗವರ್ಮನ ಪದ್ಯಶೈಲಿ  ಹಾಗೆಯೇ ಸುಲಭವೇದ್ಯವಾಗುವ ಪದಪ್ರಯೋಗಗಳು ಉಳಿದ ಹಳಗನ್ನಡಕವಿಗಳಂತೆ ಅರ್ಥಮಾಡಿಕೊಳ್ಳಲು ಕ್ಲೇಶವಾಗುವುದಿಲ್ಲ.  ಏಕೆಂದರೆ ಅವನ ಪದ್ಯಗಳಲ್ಲಿ ಕನ್ನಡಪದಗಳ ಜೊತೆ ರೂಢಿಯ ಸರ್ವಜನವೇದ್ಯವಾಗುವ ಸಮಸಂಸ್ಕೃತಪದಗಳೇ ಹೆಚ್ಚಾಗಿ ಬಳಸಲ್ಪಟ್ಟಿರುವುದು. ಅವನ ಕಾವ್ಯದ ಮೋಡಿಗೆ ಭೋಜರಾಜನು ಅನೇಕ ಜಾತ್ಯಶ್ವಗಳನ್ನು ನೀಡಿ ಗೌರವಿಸಿದ್ದನೆಂದು ಅವನ ಪದ್ಯಗಳಲ್ಲಿಯೇ ತಿಳಿಯುತ್ತದೆ.

ನಾಗವರ್ಮನ ಪದ್ಯಗಳ ಶೈಲಿಯನ್ನು ಅವಲೋಕಿಸಲು ಒಂದೆರಡು ಪದ್ಯಗಳನ್ನು ನೋಡಬಹುದು:-
ಶಾರ್ದೂಲವಿಕ್ರೀಡಿತ||
ಬಾಣಂ ವಲ್ಲಭನಕ್ಕುಮೆಂದು ಪಡೆದಾ ವಾಗ್ದೇವಿಗಬ್ಜೋಧ್ಭವಂ
ಜಾಣಿಂ ಬಾಣಿಯೆನಿಪ್ಪದೊಂದು ಪೆಸರಂ ಮುನ್ನಿತ್ತನೆಂದಂದು ಪೋ
ಮಾಣಿನ್ನನ್ಯ ಕವಿಸ್ತುತಿವ್ಯಸನಮಂ ವಾಗ್ಜಾತಚಾತುರ್ಯಗೀ
ರ್ವಾಣಂ ತಾನೆನೆ ಸಂದ ಬಾಣನೆ ವಲಂ ವಂದ್ಯಂ ಪೆರರ್ವಂದ್ಯರೇ||

("ಬಾಣನು ಮುಂದೆ ಇವಳ ವಲ್ಲಭನಾಗುತ್ತಾನೆ" ಎಂದು ವಾಗ್ದೇವಿಯನ್ನು ಹುಟ್ಟಿಸಿದಾಗ ಬ್ರಹ್ಮನು ಅವಳಿಗೆ 'ಬಾಣಿ'(ವಾಣಿ) ಎಂಬ ಹೆಸರನ್ನು ಇಟ್ಟ. ಹೀಗಿರಲು ಬೇರೆ ಕವಿಗಳ ಸ್ತುತಿಯನ್ನು ಮಾಡುವ ವ್ಯಸನ ನಮಗೇತಕ್ಕೆ! ಹೋ.. ಬೇಡ!  ಬ್ರಹ್ಮನ ಚಾತುರ್ಯದ ಗೀರ್ವಾಣನೇ ತಾನೆನುವಂತೆ ಸಲ್ಲುತ್ತಿರುವ ಬಾಣನೇ ವಂದ್ಯ. ಬೇರೆಯ ಕವಿಗಳು ವಂದ್ಯರೇ!? )

ಅಷ್ಟಾದ ಬಳಿಕ ಕಥಾಮುಖದಲ್ಲಿ ಶೂದ್ರಕನೆಂಬ ರಾಜನಿದ್ದನೆಂಬುದನ್ನು ಹೇಳಲು ಪ್ರಾರಂಭಿಸುತ್ತಾ ಬಾಣನ "ಆಸೀದಶೇಷ ನರಪತಿಶಿರಸಮಭ್ಯರ್ಚಿತ ಶಾಸನಃ ಪಾಕಶಾಸನ ಇವಾಪರಃ ಚತುರುಧಧಿ ಮಾಲಾಮೇಖಲಾ ಭುವೋ ಭರ್ತಾ, ಪ್ರತಾಪಾನುರಾಗಾವನತ ಸಮಸ್ತಸಾಮಂತಚಕ್ರಃ ಚಕ್ರವರ್ತಿ ಲಕ್ಷಣೋಪೇತಃ......" ಇತ್ಯಾದಿ ಪುಂಖಾನುಪುಂಖವಾಗಿ ಸಾಗುವ ಉಲ್ಲೇಖ ಪರಿಸಂಖ್ಯಾಶ್ಲೇಷಾದ್ಯಂಕಾರಯುತವಾದ ಮಾತನ್ನು ಒಂದು ಚಂಪಕಮಾಲೆಯಲ್ಲಿ ಹೀಗೆ ಸೆರೆಹಿಡಿಯುತ್ತಾನೆ

ಇಳೆಯೊಳದೊರ್ವನಿಂದ್ರನೆನೆ ಸಂದ ಸಮೃದ್ಧಿಯೊಳೊಂದಿ ಕೂಡಿ ತ
ನ್ನೊಳೆ ನೃಪಲಕ್ಷಣಂ ನೆಗೞೆ ದೋರ್ವಲದಿಂ ಚತುರಬ್ಧಿ ಮೇಖಲಾ
ವಳಯಿತ ಭೂಮಿಗಾದನೆಱೆಯಂ ನೃಪತಿಪ್ರಭುಲೋಕಮಂ ನಿಜೋ
ಜ್ವಳತರಕೀರ್ತಿಯಿಂ ನೆಱೆಯೆ ಮುದ್ರಿಸಿ ಶೂದ್ರಕನೆಂಬ ಭೂಭುಜಂ||
(ಭೂಮಿಯಲ್ಲಿ ಒಬ್ಬ ಇಂದ್ರನೆನುವಂತೆ ಸಮೃದ್ಧಿಯಲ್ಲಿ ಒಂದುಕೂಡಿ, ತನ್ನಲ್ಲಿ ನೃಪಲಕ್ಷಣಗಳೆಲ್ಲ ಕೂಡಿರಲು ತೋಳಬಲದಿಂದ ನಾಲ್ಕು ಸಮುದ್ರಗಳಿಂದಾದ ಭೂಮಿಗೆ ಪತಿಯಾಗಿ ರಾಜರಸಮೂಹವನ್ನು ಆವರಿಸಿದ ತನ್ನ ಉಜ್ಜ್ವಲವಾದ ಕೀರ್ತಿಯಿಂದ ಮುದ್ರಿಸಿ ಶೂದ್ರಕನೆಂಬ ರಾಜನಿದ್ದನು)
ಇಲ್ಲಿ 'ಮುದ್ರಿಸಿ ಶೂದ್ರಕ' ಎಂಬಲ್ಲಿ ಅನುಪ್ರಾಸವನ್ನೂ ಮಾಡಿ ಹೆಚ್ಚು ಸಮಾಸಭೂಯಿಷ್ಟ ಪದಪ್ರಯೋಗಗಳಿಲ್ಲದೇ ಸುಲಭವೇದ್ಯವಾಗುವಂತಹ ಸುಲಲಿತ ಪದ್ಯಸೃಷ್ಟಿಯನ್ನು ಮಾಡಿರುವುದು ನಾಗವರ್ಮನ ಶೈಲಿಗೆ ಕರಮುಕುರದಂತೆ ಕಾಣುತ್ತದೆ. ಅವನು ಆಯ್ದುಕೊಂಡ ಚಂಪಕಮಾಲೆಯೂ ಸಂದರ್ಭಕ್ಕೆ ತಕ್ಕಂತೆ ರಸಪೋಷಕವಾದ ಲಲಿತವಾದ ಇಂತಹ ಕೋಮಲಭಾವನೆಗಳಿಗೇ ಯುಕ್ತವಾದ ಛಂದಸ್ಸೂ ಆದಕಾರಣ ಛಂದಸ್ಸಿನಲ್ಲೂ ಸೊಗಸನ್ನೂ ಔಚಿತ್ಯವನ್ನೂ ಇಟ್ಟುಕೊಂಡಿರುವುದೂ ಸ್ವಾರಸ್ಯವಾಗಿದೆ. 

2 ಕಾಮೆಂಟ್‌ಗಳು: