Powered By Blogger

ಬುಧವಾರ, ಮಾರ್ಚ್ 23, 2011

ಸಮಸ್ಯಾ ಪೂರಣ


   ಕಾವ್ಯ ಪ್ರಕಾರದಲ್ಲಿ ಒಂದು ವಿಶಿಷ್ಟ ಪರಂಪರೆ  ಈ ಸಮಸ್ಯಾ ಪೂರಣಕ್ಕೆ ಇದೆ. ಭೋಜ ಕಾಳಿದಾಸರ ಪ್ರಸಂಗಗಳಿಂದ ಆದಿಯಾಗಿ ಇಂತಹ ಅನೇಕ ಸಮಸ್ಯಾ ಪೂರ್ತಿ ಘಟನಾವಳಿಗಳು ಕೇಳಲ್ಪಡುತ್ತವೆ. ಸಮಸ್ಯಾ ಪೂರಣವೆಂದರೆ ಪದ್ಯವೊಂದರ ಒಂದು  ಸಾಲನ್ನು ಕೇಳುಗ/ ಪೃಚ್ಚಕ ಕೇಳುತ್ತಾನೆ. ಪರಿಹಾರ ಕೊಡುವವನು ಅದರ ಉಳಿದ ಮೂರು ಸಾಲುಗಳನ್ನು ಹೇಳಿ ಪೂರ್ತಿ ಮಾಡಬೇಕು. ಅವಧಾನ ಒಂದು ಅದ್ಭುತ ಕಲೆ ಲೇಖನದಲ್ಲಿ ಅದಾಗಲೇ ಅಲ್ಪ ಮಾಹಿತಿಯನ್ನು ಕೊಟ್ಟಿದ್ದೇನೆ. ಆದರೂ ಅದರ ಬಗ್ಗೆ ಸ್ವಲ್ಪ ವಿಸ್ತಾರದ ಕಥಾನಕಗಳ ಸಹಿತ ಈ ಲೇಖನವನ್ನು ನಿಮ್ಮ ಎದುರು ಇಡಲು ಸಂತೋಷ ಪಡುತ್ತಿದ್ದೇನೆ.
ಕಾಳಿದಾಸನ ಕಥೆಗಳನ್ನು ಕೇಳಿದವರಿಗೆ, ಓದಿದವರಿಗೆ ಇಂತಹ ಅನೇಕ ಆಖ್ಯಾನಗಳು ತಿಳಿದಿರುತ್ತವೆ. "ಕವಿರತ್ನ ಕಾಳಿದಾಸ" ಚಲನಚಿತ್ರದಲ್ಲೂ ಇವನನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಡಾ.ರಾಜಕುಮಾರ್ ಅವರು ಸಮರ್ಥವಾಗಿ ಉಚಿತ ರೀತಿಯ ಭಾವನೆಗಳೊಂದಿಗೆ ಅಭಿನಯಿಸಿದ್ದಾರೆ ಕೂಡ.
ಇಂತಹ ಕೆಲವೊಂದು ಘಟನೆಗಳನ್ನು ಇಲ್ಲಿ ನೋಡೋಣ.
೧. ಭೋಜರಾಜ ಕಾಳಿದಾಸನಿಗೆ ಒಮ್ಮೆ ಹೀಗೆ ಕೇಳಿದ
 "ಟಂ ಟಂ ಟ ಟಂ ಟಂ ಟ  ಟ ಟಂ ಟ ಟಂ ಟಃ"
 ಇದೆಂತಹ ಸೋಜಿಗದ ಪ್ರಶ್ನೆ ಎಂದು ಎಲ್ಲರು ಬೆರಗಾಗಿರುವಾಗ ಕಾಳಿದಾಸ ಹೀಗೆ ಹೇಳುತ್ತಾನೆ.
"ರಾಜಾಭಿಷೇಕೇ ಮದವಿಹ್ವಲಾಯಾಃ
ಹಸ್ತಾತ್ ಚ್ಯುತೋ ಹೇಮ ಘಟಸ್ತರುಣ್ಯಾಃ
ಸೋಪಾನ ಮಾರ್ಗೇ ಪತಿತಃ ಕರೋತಿ
ಟಂ ಟಂ ಟ ಟಂ ಟಂ ಟ  ಟ ಟಂ ಟ ಟಂ ಟಃ"
ಅದರ ಅರ್ಥ :- "ರಾಜನಿಗೆ ಅಭಿಷೇಕ(ಸ್ನಾನ) ಮಾಡಲು(ಮಾಡಿಸಲು) ಬಂಗಾರದ ಕೊಡವನ್ನು ಹಿಡಿದುಕೊಂಡು ಹೋಗುತ್ತಿರುವ ತರುಣಿಯು(ಸೇವಕಿ) ಸೋಪಾನ ಮಾರ್ಗದಲ್ಲಿ ಹೋಗುತ್ತಿರುವಾಗ ಮದ ವಿಹ್ವಲಳಾಗುತ್ತಾಳೆ. ಆಗ ಅವಳ ಕೈಯಿಂದ ಜಾರಿ ಬಿದ್ದ ಆ ಕಲಶ "ಟಂ ಟಂ ಟ ಟಂ ಟಂ ಟ  ಟ ಟಂ ಟ ಟಂ ಟಃ" ಎಂದು ಶಬ್ದ ಮಾಡುತ್ತದೆ"
ಇದಕ್ಕೆ ಇನ್ನೂ ಒಂದೆರಡು ಬೇರೆ ಪಾಠಗಳೂ ಇವೆ.
"ಭೋಜಸ್ಯ ಭಾರ್ಯಾ ಮದ ವಿಹ್ವಲಾಯಾಃ
ಹಸ್ತೇ ದಧನ್ ಹೇಮ ಘಟೇ ನಿಪಾತೇ
ಸೋಪಾನ ಮಾರ್ಗೇ ಕರೋತಿ ಶಬ್ದಂ
ಟಂ ಟಂ ಟ ಟಂ ಟಂ ಟ  ಟ ಟಂ ಟ ಟಂ ಟಃ"
(ಇದರ ಅರ್ಥವೂ ಹಾಗೇ ಆಗುತ್ತದೆಯಾದರೂ ಅಲ್ಲಿ ಬರುವ ತರುಣಿ ಸೇವಕಿಯ ಬದಲು ಇಲ್ಲಿ ರಾಣಿ ಇದ್ದಾಳೆ.)
೨. ಇನ್ನೊಂದು ಪ್ರಸಂಗದಲ್ಲಿ  ಕಾಳಿದಾಸನಿಗೆ ಕೇಳಲ್ಪಟ್ಟ ಪ್ರಶ್ನೆ ಎಂದರೆ
"ಕುಂತೀ ಸುತೋ ರಾವಣ ಕುಂಭ ಕರ್ಣಃ"
ಎಂದು. ಇದನ್ನು ಸಾಮಾನ್ಯವಾಗಿ ಅರ್ಥೈಸಿದರೆ "ಕುಂತಿಯ ಮಗ ರಾವಣ ಕುಂಭಕರ್ಣ" ಎಂದಾಗುತ್ತದೆ. ಎಲ್ಲಿಯ ಕುಂತಿ? ಎಲ್ಲಿಯ ರಾವಣಕುಂಭಕರ್ಣರು? ಆದರೆ ಕಾಳಿದಾಸ ಇದನ್ನು ಪರಿಹರಿಸಿದ ರೀತಿ ತುಂಬಾ ಚೆನ್ನಾಗಿದೆ.
ಅದೆಂದರೆ:-
"ಕಾ ಪಾಂಡು ಪತ್ನೀ? ಗೃಹ ಭೂಷಣಂ ಕಿಂ?
ಕೋ ರಾಮ ಶತ್ರು?ಕಿಮಗಸ್ತ್ಯ ಜನ್ಮಾ?
ಕಃ ಸೂರ್ಯ ಪುತ್ರೋ ವಿಪರೀತ ಪೃಚ್ಚೇ 
ಕುಂತೀ ಸುತೋ ರಾವಣ ಕುಂಭ ಕರ್ಣಃ"
 ಅಂದರೆ -" ಪಾಂಡುವಿನ ಪತ್ನಿ ಯಾರು? ಮನೆಗೆ ಭೂಷಣ ಯಾರು? ರಾಮನ ಶತ್ರು ಯಾರು? ಅಗಸ್ತ್ಯರ ಜನ್ಮ ಕಾರಣ ಯಾವುದು? ಸೂರ್ಯನ ಮಗ ಯಾರು? ಇವೆಲ್ಲದರ ಉತ್ತರಗಳನ್ನು ವಿಪರೀತವಾಗಿ ಹೇಳಿದರೆ "ಕುಂತೀ ಸುತೋ ರಾವಣ ಕುಂಭ ಕರ್ಣಃ"

೩. ಕವಿರತ್ನ ಕಾಳಿದಾಸ ಚಲನ ಚಿತ್ರದಲ್ಲಿ ತೋರಿಸಿದಂತೆ ಇನ್ನೊಂದು ಪ್ರಶ್ನೆ " ಕಮಲೇ ಕಮಲೋತ್ಪತ್ತಿ:"ಎಂದು.
ಅರ್ಥ-"ಕಮಲದಲ್ಲಿ ಕಮಲ ಹುಟ್ಟುವುದು." ಎಂದು. ಕಾಳಿದಾಸ ಭೋಜನಿಂದ ದೂರವಾದ ಸಂದರ್ಭದಲ್ಲಿ ಒಬ್ಬ ಪಂಡಿತ ಈ ಪ್ರಶ್ನೆ ಕೇಳುತ್ತಾನೆ. ಭೋಜ ರಾಜ ಯಾರು ಬಗೆ ಹರಿಸುತ್ತಾರೋ ಅವರಿಗೆ ಬಹುಮಾನಗಳನ್ನು ಕೊಡುವುದಾಗಿ ಘೋಷಿಸುತ್ತಾನೆ. ಭೋಜನ ಪ್ರಕಾರ 'ಉತ್ತರ ತಂದವರಿಗೆ ಕಾಳಿದಾಸನ ಇರುವು ಗೊತ್ತಿರುತ್ತದೆ' ಎಂದು. ಇಂತಹ ಪ್ರಶ್ನೆಗಳನ್ನು ಕಾಳಿದಾಸ ಮಾತ್ರ ಸರಿಯಾಗಿ ಉತ್ತರಿಸಬಲ್ಲ ಎಂದು ಅವನಿಗೂ ಆ ಪಂಡಿತನಿಗೂ ತಿಳಿದಿತ್ತು. ಆ ಸಂದರ್ಭದಲ್ಲಿ ಒಬ್ಬ ವೇಶ್ಯೆ ಅದಕ್ಕೆ ಉತ್ತರವನ್ನು ತರುತ್ತಾಳೆ. ಅವಳಾದರೋ ಕಾಳಿದಾಸನ ಬಳಿಯಲ್ಲೇ ಉತ್ತರ ಹೇಳಿಸಿಕೊಂಡವಳು. ಉತ್ತರವೆಂದರೆ
"ಕಮಲೇ ಕಮಲೋತ್ಪತ್ತಿ: ಶ್ರೂಯತೇ ನ ಚ ದೃಶ್ಯತೇ
ಬಾಲೇ ತವ ಮುಖಾಂಭೋಜೇ ದೃಶ್ಯಾಮಿಂದೀವರ ದ್ವಯಂ"
ಅರ್ಥ- ಕಮಲದಲ್ಲಿ ಕಮಲ ಹುಟ್ಟುವುದು ಎಲ್ಲಿಯೂ ಕೇಳಲ್ಪಟ್ಟಿಲ್ಲ, ಯಾರಿಂದಲೂ ನೋಡಲ್ಪಟ್ಟಿಲ್ಲ. ಆದರೆ ಎಲೈ ಬಾಲೇ ನಿನ್ನ ಮುಖವೆಂಬ ಕಮಲದಲ್ಲಿ ಈ ಕಣ್ಣುಗಳೆಂಬ ಕಮಲಗಳೆರಡು  ಕಾಣುತ್ತಿವೆಯಲ್ಲ! ಎಂದು
ಇಂತಹ ಕಲ್ಪನೆಗಳೂ ವರ್ಣನೆಗಳೂ ಕಾಲಿದಾಸನಿಗಲ್ಲದೆ ಇನ್ನಾರಿಗೆ ಬರಲು ಸಾಧ್ಯ? ಅದರಲ್ಲಿ "ಬಾಲೆ" ಎಂಬ ಶಬ್ದವನ್ನು ಕೇಳಿ ಆ ಪಂಡಿತ ಇದನ್ನು ಪುರುಷನೋರ್ವನು ರಚಿಸಿದ್ದಾನೆ ಎಂದು ಗುರುತಿಸುತ್ತಾನೆ. ಅವಳು ತಾನು ತನ್ನ ಸಖಿಯನ್ನು ನೋಡಿ ಹೇಳಿದ್ದೇನೆ ಎಂದು ವಾದ ಮಾಡುತ್ತಾಳೆ. ಅವಳ ಮನೆಗೆ ಹೋಗಿ ನೋಡಿದಾಗ ಕಾಳಿದಾಸನಿಗೆ ವಿಷ ಹಾಕಿ ಕೊಂಡಿದ್ದು ತಿಳಿಯುತ್ತದೆ. ಭೋಜ ರಾಜ ಕೊನೆಗೆ ಅವನ ದೇಹವನ್ನು ತಂದು ದೇವಿ ಸರಸ್ವತಿಯಲ್ಲಿ ಬೇಡಿ ಬದುಕಿಸಿಕೊಲ್ಲುತ್ತಾನೆ. ಇತ್ಯಾದಿಯಾಗಿ ಕಥೆ ಸಾಗುತ್ತದೆ.
  ಈ ಸಮಸ್ಯೆಗೆ ನಾನೊಂದು ಉತ್ತರ ಬರೆದಿದ್ದೇನೆ. ಅದೆಂದರೆ:-
ಕಮಲೇ ಕಮಲೋತ್ಪತ್ತಿ: ಭೂಯತೇ ನ ತು ಸಂಶಯಃ
ಯತಸ್ತದೀಶ್ವರೇಚ್ಚೈವ ಪ್ರಬಲಾಸ್ತಿ ನು ಭೂತಲೇ"
ಅಂದರೆ- ಕಮಲದಲ್ಲಿ ಕಮಲ ಹುಟ್ಟುವುದರಲ್ಲಿ ಯಾವ ಸಂಶಯವೂ ಇಲ್ಲ ಏಕೆಂದರೆ ಈ ಭೂಮಿಯಲ್ಲಿ ಆ ಈಶ್ವರನ ಇಚ್ಛೆಯೇ ಪ್ರಬಲವಾದದ್ದು ಅಲ್ಲವೇ? ಎಂದು. ಇದರಲ್ಲಿ ವ್ಯಾಕರಣ ದೋಷಗಳು ಇರಬಹುದು. ಆದರೂ ಒಂದು ಸಮಸ್ಯೆಗೆ ಹಲವಾರು ಉತ್ತರಗಳು ಸಾಧ್ಯವಿದೆ ಎಂಬುದನ್ನು ತಿಳಿಸಲೋಸುಗ ಇದನ್ನು ಇಲ್ಲಿ ಹೇಳಿದೆ. ಶತಾವಧಾನಿ ಆರ್ ಗಣೇಶ್ ಅವರು ಒಮ್ಮೆ ಅವರ ಅವಧಾನದಲ್ಲಿ ಕೀ.ಶೇ.ಲಂಕಾಕೃಷ್ಣ ಮೂರ್ತಿಯವರು ಕೇಳಿದ  "ಶವ ಲೀಲಾಕೃತಿಯೆಂತು ರಮ್ಯಮಲ್ತೆ" ಎಂಬ ಸಮಸ್ಯೆಗೆ ಎಂಟು ರೀತಿಯ ಉತ್ತರಗಳನ್ನು  ಹೇಳಿದ್ದರಂತೆ. ( ೮ ಉತ್ತರಗಳನ್ನು ಹೇಳಲು ಲಂಕಾ ಕೃಷ್ಣಾ ಮೂರ್ತಿಯವರೇ ಆಗ್ರಹಿಸಿದ್ದರಂತೆ) ಅವಧಾನಿಯೋರ್ವನ ಇತಿ ಮಿತಿಗಳನ್ನು ನೋಡಿಕೊಂಡು ಪೃಚ್ಚಕರು  ಕೇಳುತ್ತಾರೆ ಎಂಬುದು ಗಮನೀಯ.

ಇನ್ನು ಹಲವಾರು ಸಮಸ್ಯಾ ಪೂರಣದ ಪದ್ಯಗಳು ಲಭ್ಯವಿದ್ದರೂ ಅದನ್ನೆಲ್ಲ ಒಂದೇ ಬಾರಿಗೆ ಪ್ರಕಟ ಮಾಡಲು ಹೋಗುವುದಿಲ್ಲ. ಏಕೆಂದರೆ  ಎಲ್ಲರೂ "ನೀರಿಳಿಯದ ಗಂಟಲೊಳ್ ಕಡಬಂ ತುರುಕಿದಂತಾಯ್ತು" ಎಂದರೆ ಕಷ್ಟ. ಅಲ್ಲದೇ ಅರ್ಥ ಮಾಡಿಕೊಳ್ಳಬಲ್ಲವರಿಗಾದರೂ ಒಂದೇ ಬಾರಿಗೆ ತುಂಬಾ ದೀರ್ಘವಾದ ವಿವರಗಳನ್ನು ತಂದಿಟ್ಟರೆ 'ಅಜೀರ್ಣ'ವಾಗುವ ಸಾಧ್ಯತೆಗಳಿರುತ್ತವೆ.

1 ಕಾಮೆಂಟ್‌:

  1. Sir "ಕುಂತೀ ಸುತೋ ರಾವಣ ಕುಂಭ ಕರ್ಣಃ" ಇದರ ಕುರಿತು ಮತ್ತಷ್ಟು ವಿವರಣೆಗಳನ್ನು ಕೊಡಬಹುದೆ..
    ಸಮಸ್ಯಾ ಪೂರಣದ ಬಗ್ಗೆ ಬಹಳ ಸುಂದರವಾದ ಅರ್ಥ ವಿವರಣೆ ನೀಡಿದ್ದೀರಿ.ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ