Powered By Blogger

ಗುರುವಾರ, ಆಗಸ್ಟ್ 2, 2018

ಮಧುವನಮರ್ದನಂ -೪


ಈ ಭಾಗವನ್ನು ಇಲ್ಲಿ ಕೇಳುತ್ತ ಓದಬಹುದು
ಹಿಂದಿನ ಭಾಗಗಳು
ಮೊದಲ ಭಾಗ- ಮಧುವನಮರ್ದನಂ-೧
ಎರಡನೆ ಭಾಗ- ಮಧುವನಮರ್ದನಂ-೨
ಮೂರನೆ ಭಾಗ- ಮಧುವನಮರ್ದನಂ-೩

~ಮಧುವನಮರ್ದನಂ -೪~
ಇತ್ತಲೀ ವನದೊಳಿರ್ದಪ ಮತ್ತಕಪಿಗಳೋ
ನಾನಾವಿಧಂಗಳಿಂ ಸರ್ವನಾಶಂಗೈದು
ಹನುಮಂತನಂದು ಪಾಳ್ಗೆಡವಿರ್ಪ ಲಂಕೆಯಾ
ರುಚಿರಮಾದಸುಗೆಬನದಂದದಿಂ ಗೈದಿರಲ್ ೩೨೦
ಮಧುವನಂ ಮಧುಹೀನಮಾದತ್ತು ಜತೆಯೊಳೇ
ವನಮುಮಿಲ್ಲದ ಪಾಂಗಿನಿಂ ಬರಿದೆ ಬಯಲಾಯ್ತು
ಚಂಡಮಾರುತಮೊಂದು ಬೀಸಿ ಪಾಳ್ಗೆಡವಿತೋ
ಚಂಡಪ್ರವಾಹಮೇನೆಲ್ಲಮಂ ನುಂಗಿತೋ
ಮದಿಸಿರ್ಪಗಜಘಟಂ ನಿಜಕೇಲಿಯಿಂದಿದೇಂ
ನುಚ್ಚುನೂರ್ ಗೆಯ್ದಿತೋ ಬನಮನೆಂಬಂದದಿಂ-
ದಿನಿತಾನುಮವಶೇಷಮಿಲ್ಲದಂದದೆ ಶತ-
ಚ್ಛಿದ್ರಮಂ ಗೆಯ್ದು ಮೇಣ್ ಮತ್ತರಾಗಿರೆ ಬಿಳ್ದು
ವಿಶ್ರಾಂತಿಯಂ ಪೊಂದಲೆಂಬಂತೆ ಮಲಗಿದರ್
ವಿವಿಧಭಂಗಿಗಳೊಳಗೆ ಹನುಮನಿಂ ರಕ್ಷಿತರ್ ೩೩೦
ಕಪಿಗಳುದ್ದಂಡವಿಕ್ರಮರಲ್ಲಿ ಮಧುವನದೆ.

ನೆಲದೆ ಕುಳಿಗಳ ಸಾಲ್ಗಳೇ ತುಂಬಿ ಕಂಡುವೈ    
ಮರನಿಲ್ಲದಂತಾಯ್ತು ಮರುಭೂಮಿಯಂದದಿಂ
“ಅಕಟ! ವನಸೃಷ್ಟಿಗಂ ಶ್ರಮಮೆಂತು ಸಂದಿರ್ಪು-
ದೆಂತುಟಾದುದು ಕುಮತಿ ಕಪಿಗಳ್ಗೆ! ಹಾ! ಹಂತ!
ಕಪಿಗಳೀ ಪ್ರಕೃತಿಯೇ ಮತ್ಸೃಷ್ಟಿ!” ಎಂದೆನುತೆ
ಬೊಮ್ಮನೇ ಕಣ್ಣೀರ್ಗಳಂ ಸುರಿಸಿದಂತಾಯ್ತು
ಅಳಿದುಳಿದ ಮಧುಪಾತ್ರದಿಂ ಸುರೆಯೆ ಚೆಲ್ಲಿರಲ್.
ಬೆಳ್ನೊರೆಯ ಪುಳಿವೆಂಡಮೆಲ್ಲೆಡೆಗೆ ಪಸರಿಸಿರೆ
ಡಿಂಡೀರಮಾಂತುದೇಂ ಕೌಮುದಿಯೆ ಎಂಬವೊಲ್ ೩೪೦
ಭ್ರಾಂತಿಯಾದುದು! ವನದ ಶಾದ್ವಲಂ ತೊಯ್ದಿರಲ್
ಮರಕತಕೆ ಪೊಗರೀಯಲುಜ್ಜುಗಿಸುತುಜ್ಜಿಟ್ಟ   
ತೆರನಾಯ್ತು! ಕೆಡೆದಿರ್ಪ ಮರಗಳಂ ನಿರುಕಿಸಲ್
ದೈತ್ಯರಾ ಬಾಣಸಿಗನೊಟ್ಟಿರ್ಪ ಸೌದೆವೊಲ್
ತೋರ್ದತ್ತು. ಮಧುವನದೆ ಮೊದಲಿರ್ದ ಸೊಗಮೆಲ್ಲ-
ಮಳಿದತ್ತು. ಲಯಕಾಲದಭ್ಯಾಸಕೆಂದೇನೊ
ರುದ್ರನೇ ಹನುಮರೂಪದೆ ಬಂದು ಗೆಯ್ಸಿದಂ-
ತೆಸೆದತ್ತು.
    ಪರಚಿರ್ಪ ಕರ್ಚಿರ್ಪ ಪೊಡೆದಿರ್ಪ
ಗಾಯಂಗಳಿಂದತ್ತ ಮೆಯ್ದುಂಬಿಕೊಂಡಿರ್ಪ
ದಧಿಮುಖಂ ಸುಗ್ರೀವನಿದಿರೊಳಗೆ ತಾಂ ನಿಂದು ೩೫೦
ಬಣ್ಣಿಸುತೆ ತನ್ನೀ ಅವಸ್ಥೆಗಳನಾಗಳೇ
ಕಪಿಗಳೆಲ್ಲರ್ ಸೇರ್ದು ಹನುಮನಾಣತಿಯಂತೆ    
ಜಾಂಬವಾಂಗದಯುಕ್ತರಾಗಿಂತು ಗೈದರೆನೆ
ಹರ್ಷದಿಂ ಸುಗ್ರೀವನೆಂದಂ ವಿಚಿಂತಿಸುತೆ-
“ಅಹಹ! ಸೀತೆಯ ಕಂಡು ಬಂದಿರ್ಪುದೇ ದಿಟಂ!
ಕಾಣದಿರ್ದೊಡೆ ಚಿತ್ತದೊಳ್ ಖೇದಮಿರ್ದೊಡಂ
ಮಧುವನಕೆ ಪುಗುವೊಂದು ಬಲ್ಮೆಯೇನವರ್ಗುಂಟೆ!
ಶ್ರೀರಾಮನೊಳ್ ಸ್ವಯಂ ಪೇಳ್ದಪೆಂ. ಶೀಘ್ರದಿಂ
ಬರವೇಳ್ ಸಮಸ್ತರಂ ವಾನರಾಗ್ರಣಿಗಳಂ.
ಬೇಗದಿಂ ಪೋ ಪೋ!” ಎನಲ್ ಚಿಮ್ಮಿ ನೆಗೆದಪಂ ೩೬೦
ದಧಿಮುಖಂ ಮಧುವನಕೆ ಭೀತಿ ಕಿಂಚಿತ್ತಿರಲ್.
ಮೇಹನದೆ ಮಗ್ನಮಾಗಿರೆ ವಾನರರ ದಂಡು,
ಮಧುಮಹೋತ್ಸವಕೆಂತೊ ಸಜ್ಜಾಗುತಿರ್ಪಂಥ  
ಮಧುವನಂ ನಿಶ್ಶೇಷಮಾಗಿರ್ಪುದಂ ಕಂಡು
ಮನದ ದುಗುಡಂ ಪೆರ್ಚಿಯುಂ ರಾಜನಾಜ್ಞೆಯಂ
ತಿಳುಪಲಾಗಮಿಸಿದಂ ಹನುಮವೆಸರಂ ಕೂಗಿ
ಪೊರಗಿರ್ಪ ವೇಲೆಯಿಂ ನುಡಿದಪಂ ಸುಗ್ರೀವ-
ನುಲಿದುದಂ. ಕೋಪಗೊಳ್ಳದೆ ಹರ್ಷಮಾಂತುದಂ!
ವಿತತವೃಕ್ಷಚ್ಛಾಯೆಯಳಿದು ತಿಂಗಳ್ ವೆಳಕೆ
ತಿಳಿಯಾಗಿ ನಳನಳಿಪ ಸಂಧ್ಯೆಯಾಗಮಿಸಿರಲ್ ೩೭೦
ತ್ರೈಲೋಕ್ಯವಂದ್ಯೆಯಂ ನಮಿಸುತ್ತೆ ನಿಂದಿರ್ಪ
ಮಾರುತಿಗೆ ದಧಿಮುಖಂ ಕರೆದಿರಲ್ ಕಣ್ಬಿಡಲ್
ನೆರೆದತ್ತು ಮುಂದೆಂತೊ ಚಂದ್ರಮಂಡಲಮಂದು
ಷೋಡಶಕಲಾಪೂರ್ಣಮದ್ಭುತಂ. ಸೀತೆಯಂ
ಕಂಡಿರ್ಪ ವಾರ್ತೆಯಂ ಕೇಳ್ದು ರಾಮನ ಮೊಗಮೆ
ಜೃಂಭಿಸಿರ್ಪಂದದಿಂದಿಂದುಮಂಡಲಮಿಂದು
ಬಂದುದೇಂ ಸುಂದರಂ ಬಂಧುರಂ ಚಂದದಿಂ-
ದೆಂದು ಬಗೆಯುತೆ ನೋಡೆ ಹನುಮಂತನತ್ತಣಿಂ-
ದೆಸೆದತ್ತು ಪೀಯೂಷಕಿರಣಪಾನೋನ್ಮತ್ತ
ವರಚಕೋರಂಗಳುಲಿವೊಲವಿಂದಮಾಲಿಸಲ್ ೩೮೦
ರಾಮಚಂದ್ರನ ವಚೋರಚನೆಗಿದು ಸಾಟಿಯೆನೆ
ಬಗೆಯೊಳಗೆ ತುಂಬಿರ್ಪುದಂ ಪ್ರಕೃತಿ ತೋರ್ಪುದೈ
ದಿಟದೆ ರಾಮನೆ ಮನದಿ ತುಂಬಿರ್ಪನೆಂದರಿತು      
ಮತ್ತೊರ್ಮೆ ಮೌನದಿಂ ಧ್ಯಾನಿಸುತೆ ಕಂಡನೈ
ಹೃದಯಮಂದಿರದೊಳಗೆ ರಾಮನಾ ಮೂರ್ತಿಯಂ
“ಜಯಜಯ ಶ್ರೀರಾಮ” ಘೋಷಮುಂ ತೀವಿರಲ್
ಮನದೊಳಗೆ ಪೂಜಿಸಿದನೊಲವಿಂದೆ ರಾಮನಂ.
ರಾಜನಾಣತಿಯಂತೆ ಸರ್ವರುಂ ಪೊರಮಟ್ಟು
ರಾಮನೊಳಗೊಲವಿಂದೆ ಸೀತೆ ದೊರಕಿರ್ಪುದಂ
ಪೇಳಲುತ್ಸುಕರಾಗಿ ಮಿಂಚಂತೆ ಪಾರ್ದಪರ್ ೩೯೦
ಬಂಡುಂಡ ಬಂಡುಣಿಗಳಾವಿಂಡು ನೆಲೆಗೆಯ್ದ
ಪಾಂಗಿಂದೆ ವಾನರರ ತಾಣಕ್ಕೆ ಸಾರ್ದಪರ್.
ಅನವರತಸೀತಾವಿಯೋಗಾಗ್ನಿಸಂತಪ್ತ
ಘನತರಶ್ರೀರಾಮಚಂದ್ರಕಾರ್ಶ್ಯೇಕ್ಷಿತರ
ಚಿತ್ತಕಂ ನೆಮ್ಮದಿಯನೀಯಲ್ಕೆ ಮಗುಳಂತೆ
ರಾಮಹೃದಯಾರಾಮವಾಸಂತದೂತಿ ತಳೆ-
ದಿರ್ಪ ಸುಮನಸ್ಸೆಂಬ ಪಾಂಗಿಂದೆ ಹನುಮಂತ-
ನವತರಿಸಿದಂ ನೆಲಕೆ “ಸೀತೆ ದೊರಕಿದಳ್” ಎಂಬ
ಸೊದೆವಾತನೇ ಸುರಿಸುತುಂ ರಾಮ ಪದಯುಗಕೆ
ನಮಿಸಿ ಚೂಡಾಮಣಿಯನಿತ್ತನಾತನ ಕರದೆ. ೪೦೦
ರಾಮನಾಲಂಗಿಸುತುಮಾನಂದಬಾಷ್ಪದಿಂ-
ದಭಿಷೇಚಿಸಿದನಾಂಜನೇಯನಾಕೃತಿಯನೇ!
ಆಗಳದನೀಕ್ಷಿಸಿದರೆಲ್ಲರುಂ ಸಂತಸದೆ
ಗದ್ಗದಿತರಾಗಿರಲ್ ರಾಮಚಂದ್ರಂ ಮತ್ತೆ
ಮಾರುತಿಯ ನುಡಿಗಳಂ ಕೇಳಲಾಸಕ್ತನಿರೆ
ಸರ್ವರುಂ ಸಮ್ಮಿಳಿತರಾಗಿರಲ್ ಹನುಮಂತ-
ನಂದು ಸೀತೆಯ ಕಂಡ ಕಥೆಯನೊರೆದಪನಲ್ಲಿ
ಆನಂದಮೊಂದೆ ಕಂಡುದು ಸರ್ವಹೃದಯದಲಿ.
~~~~~~~~~~~~~~~~~~~~~~~~~~~~~~~
~ಗಣೇಶ ಭಟ್ಟ ಕೊಪ್ಪಲತೋಟ
ಆರಂಭ:        ೦೭-೦೧-೨೦೧೮
ಮುಗಿತಾಯ:    ೧೨-೦೧-೨೦೧೮
ತಿದ್ದುಪಡಿ: ‌೨೨-೦೭-೨೦೧೮

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ