Powered By Blogger

ಶನಿವಾರ, ಸೆಪ್ಟೆಂಬರ್ 29, 2018

ಹೊಸತಲೆಮಾರಿನ ಬರಹಗಳು

(೨೦೧೭ರಲ್ಲಿ ಹಾಕಿದ ಫೇಸ್ಬುಕ್ ಪೋಸ್ಟ)
ಅಭಿವ್ಯಕ್ತಿಮಾಧ್ಯಮವಾಗಿ ಸಾಹಿತ್ಯ ಬಹುಬೇಗ ಎಲ್ಲರಿಗೂ ಒಗ್ಗಿಬರುತ್ತದೆ ಎಂಬ ಕಾರಣಕ್ಕೇ ಇರಬಹುದೇನೋ ಇತ್ತೀಚೆಗೆ ಬಹಳಷ್ಟು ಜನ ಬರಹಗಾರರು ರೂಪುಗೊಳ್ಳುತ್ತಿದ್ದಾರೆ. ಇಂದಿನ ಸುಲಭಸಾಧ್ಯಸಂವಹನಮಾಧ್ಯಮಗಳಿಂದ ಲೇಖಕರು ಬಹಳಷ್ಟು ಜನರನ್ನು ಬೇಗ ತಲುಪಲು ಸಾಧ್ಯವಾಗುತ್ತದೆ ಎಂಬ ಸಂತಸದ ಜೊತೆಗೆ, ಪ್ರಬುದ್ಧತೆಯನ್ನು ಕಾಣುವ ಮೊದಲೇ ಅಪಕ್ವಕೃತಿಗಳು ಲೋಕಾರ್ಪಣೆಗೊಳ್ಳುತ್ತಲಿವೆ ಎಂಬುದು ಖೇದಕರ.
ಗದ್ಯಪದ್ಯಗಳಲ್ಲಿ ಮೊದಲು ಗದ್ಯವನ್ನು ಅವಲೋಕಿಸಿದರೆ-
ಗದ್ಯಕ್ಕೆ ಪದ್ಯಕ್ಕೆ ಬೇಕಾದ ಕಲಾತ್ಮಕತೆಯ ಆವಶ್ಯಕತೆ ಇಲ್ಲದಿದ್ದರೂ ಒಂದು ಹದ ಬೇಕು. ವಾಕ್ಯಗಳು ಸುಲಭವಾಗಿ ಅರ್ಥವಾಗುವಂತಿರಬೇಕು. ವ್ಯರ್ಥವಾದ ಅಸ್ಪಷ್ಟವಾದ ನಿರೂಪಣೆಗೆ ಪೂರಕವಲ್ಲದ ಪದಪುಂಜಗಳನ್ನು ತೆಗೆದು ಹಾಕಬೇಕು. ಇದೆಲ್ಲವನ್ನೂ ಸಾಮಾನ್ಯವಾಗಿ ಎಲ್ಲರೂ ಅನುಸರಿಸುವುದೇ ಹೌದು. ಆದರೆ ಹಲವು ದೋಷಗಳು ಲೇಖಕರ ಕಣ್ಣಿಗೆ ಬೀಳದೇ ಉಳಿದುಬಿಡುತ್ತದೆ. ಆ ಕಾರಣಕ್ಕಾಗಿಯೇ ಬಲ್ಲವರ ಬಳಿ ಮೊದಲು ಓದಿ ತಿದ್ದಿಸಿಕೊಳ್ಳಬೇಕು ಎಂದು ಹಿಂದಿನವರು ಹೇಳಿದ್ದಾರೆ. ಎಲ್ಲರಿಗೂ ಎಲ್ಲದೂ ತಿಳಿದಿರುವುದಿಲ್ಲ ಎಂಬ ಕಾರಣಕ್ಕೇ ತಿಳಿಸಿ ಹೇಳುವವರ ಮಾತಿಗೆ ಬೆಲೆ ಕೊಡಬೇಕಲ್ಲವೇ! ಕವಿಚಕ್ರವರ್ತಿ ರನ್ನನೂ ತನ್ನ ಕಾವ್ಯವನ್ನು ತಿದ್ದಿಸಿಕೊಂಡಿದ್ದನ್ನು ಉಲ್ಲೇಖಿಸುತ್ತಾನೆ. ಎಂದರೆ ಅದರಲ್ಲಿ ಮುಜುಗರ- ನಾಚಿಕೆಗಳನ್ನು ಹೊಂದುವಂತಹ ಅವಶ್ಯಕತೆ ಇಲ್ಲವೆಂದೇ ಅರ್ಥ.
*ಅಳವಿನ ಅರಿವು- ಎಲ್ಲಕ್ಕಿಂತ ಮುಖ್ಯವಾಗಿ ಲೇಖಕನಿಗೆ ತನ್ನ ಪರಿಮಿತಿಯ ಅರಿವಿರಬೇಕು. ಆದರೆ ಅರಿವಿಲ್ಲದುದನ್ನು ಬರೆಯುವಾಗ ಸೂಕ್ಷ್ಮವಾಗಿ ಅವಲೋಕಿಸಿ ತಿಳಿದುಕೊಳ್ಳುವ ಸ್ವಭಾವ ಇರಬೇಕು. ಆದರೆ ತಿಳಿದುಕೊಂಡದ್ದೇ ಪರಿಪೂರ್ಣ ಎಂಬ ಮನಸ್ಸ್ಥಿತಿ ಇರಬಾರದು. ಗದ್ಯವೊಂದರಲ್ಲಿ ತಾನೆಲ್ಲೋ ಕೇಳಿದ ಸಂಸ್ಕೃತದ ಯಾವುದೋ ಶ್ಲೋಕವನ್ನು ಉದ್ಧರಿಸಬೇಕು ಎಂತಾದರೆ ಸಂಸ್ಕೃತವನ್ನು ಕಲಿಯದ ಲೇಖಕ ಅದನ್ನು ಬಳಸಿದ್ದರೂ ಅದರ ಬಗ್ಗೆ ತಿಳಿದವರಿಂದ ಖಚಿತ ಪಡಿಸಿಕೊಳ್ಳಬೇಕು. ಇಲ್ಲವೆಂದರೆ ಅರ್ಥಕ್ಕೆ ಚ್ಯುತಿಯೋ ಅಪಾರ್ಥವೋ ಆಗುವ ಸಾಧ್ಯತೆ ಇರುತ್ತದೆ. ಉದಾ- "ಮನಃಕಂಪನ" ಎನ್ನುವುದಕ್ಕೂ "ಮನೋಕಂಪನ" ಎನ್ನುವುದಕ್ಕೂ ತದ್ವಿರುದ್ಧವಾದ ಅರ್ಥಗಳೇ ಇವೆ.
* ಪುನರುಕ್ತಿಯ ದೋಷ- ಒಂದೇ ಶಬ್ದವನ್ನು ಎರಡೆರಡು ಬಾರಿ ಬಳಸುವುದು. ಉದಾ- ಅಜ್ಜಿಮುದುಕಿ, ದೊಣ್ಣೆಕೋಲು, ವನಕಾನನ, ನೀರವಮೌನ ಇತ್ಯಾದಿ. ಇಲ್ಲಿ ಅಜ್ಜಿಯೂ ಮುದುಕಿಯೂ ಒಬ್ಬಳೇ, ದೊಣ್ಣೆಯೂ ಕೋಲೂ ಒಂದೇ ಅರ್ಥ, ವನವೂ ಕಾನನವೂ ಒಂದೇ ಅರ್ಥ, ನೀರವವೂ ಮೌನವೂ ಒಂದೇ ಅರ್ಥ. ಹೀಗಾದಾಗ ಪುನರುಕ್ತಿಯೆಂಬ ದೋಷವಾಗುತ್ತದೆ. ಇದು ಕೇವಲ ಶಬ್ದಗಳಿಗಷ್ಟೇ ಅಲ್ಲ. ಘಟನೆಗಳಿಗೂ ಅನ್ವಯಿಸುತ್ತದೆ. ಮತ್ತೆ ಮತ್ತೆ ಓದುಗರನ್ನು ಎಚ್ಚರಿಸಲೋ ಎಂಬಂತೆ ಬಂದ ಘಟನೆಗಳನ್ನೇ ಪುನರಪಿ ಹೇಳುವುದು ತರವಲ್ಲ. ಅಥವಾ ಪ್ರಜ್ಞಾಪ್ರವಾಹವೊಂದರ ಮಧ್ಯೆ ಮಧ್ಯೆ ವ್ಯಕ್ತಿಯ ಆಂಗಿಕವಿನ್ಯಾಸವನ್ನೋ ಅಥವಾ ಲೌಕಿಕಕಾರ್ಯವನ್ನೋ ಒಂದೆರಡು ಬಾರಿಗಿಂತ ಹೆಚ್ಚು ಹೇಳಿದರೆ ಅಷ್ಟಾಗಿ ರುಚಿಸದು. ಒಂದು ಆಳಕ್ಕೆ ಹೋಗುತ್ತಿರುವವರನ್ನು ಉಸಿರು ಕಟ್ಟಿಸಿ ಮೇಲೆಳೆದು ತಂದಂತೆ ಭಾಸವಾಗುತ್ತದೆ.
*ಕಥೆಗೆ ಪೂರಕವಲ್ಲದ ಚಿತ್ರಣ- ಮುಖ್ಯ ಕಥಾಸೂತ್ರಕ್ಕೆ ಪೂರಕವಾಗಿರದಂತೆ ಬೇರೆಯದೇನೋ ಅಸಂಬದ್ಧವನ್ನು ತಂದು ತುರುಕುವುದು ಓದುಗನಿಗೆ ರಸಾಭಾಸವನ್ನು ಉಂಟುಮಾಡುತ್ತದೆ. ಕಥೆಗೆ ಪೂರಕವಿದ್ದರೂ ನೀರಸವಾಗಿ ವಿಸ್ತರಿಸುವುದೂ ಕೂಡ ರಸಕ್ಕೆ ಮಾರಕ.
*ಶಾಸ್ತ್ರಪಾಂಡಿತ್ಯಪ್ರದರ್ಶನ- ಲೇಖಕನಿಗೆ ಯಾವುದೋ ಶಾಸ್ತ್ರದಲ್ಲಿ ಪಾಂಡಿತ್ಯವಿದೆ ಎಂದು ತನ್ನ ಕಥೆಯಲ್ಲಿಯೋ ಕಾವ್ಯದಲ್ಲಿಯೋ ಕಾದಂಬರಿಯಲ್ಲಿಯೋ ಆ ಶಾಸ್ತ್ರವನ್ನೇ ಚರ್ಚಿಸಿದರೆ ಅದು ಓದುಗರಿಗೆ ಕಬ್ಬಿಣದ ಕಡಲೆಯಾಗುತ್ತದೆ. ಸರಳವಾಗಿ ಜನರಿಗೂ ತಲುಪುವಂತೆ ಶಾಸ್ತ್ರವನ್ನು ವಿಸ್ತರಿಸಬಹುದಾದರೂ ಅದೂ ಅಷ್ಟು ಸೊಗಸೆನಿಸದು. ಕಥಾನಾಯಕ ವ್ಯಾಕರಣಪಂಡಿತನೆಂದು ಇನ್ನೊರ್ವನ ಜೊತೆ ಚರ್ಚೆ ನಡೆಸುವುದನ್ನೇ ಅರ್ಧ ಕಥೆ ತುಂಬಿಸಿಬಿಟ್ಟರೆ ಓದುಗರಿಗೆ ಕಥೆ ಎಂಬ ಇಲಿ ಹಿಡಿಯಲು ಶಾಸ್ತ್ರದ ಗುಡ್ಡವನ್ನು ಅಗೆಯೇಕಾಗುತ್ತದೆ.
*ಅಶ್ಲೀಲವರ್ಣನೆ- ಕಥೆಯಲ್ಲಿ ಶೃಂಗಾರಾದಿರಸಗಳೂ ಅದಕ್ಕೆ ಪೂರಕವಾದ ವಿಭಾವಾನುಭಾವಗಳೂ ಬರುಬೇಕು. ದಿಟವೇ. ಆದರೆ ಶೃಂಗಾರದಲ್ಲಿ ಅದರಲ್ಲೂ ಸಂಭೋಗಶೃಂಗಾರದ ವರ್ಣನೆಯಲ್ಲಿ ಅಶ್ಲೀಲತೆ ಬರುವ ಸಂಭವ ಹೆಚ್ಚು. ಆ ಒಂದು ಮರ್ಯಾದೆಯ ಸೂಕ್ಷ್ಮಸೀಮಾರೇಖೆಯನ್ನು ಅರಿಯದಿದ್ದರೆ ರಸ ಶೃಂಗಾರದಿಂದ ಬೀಭತ್ಸದ ಕಡೆಗೆ ಹೊರಳುತ್ತದೆಯಷ್ಟೆ!
*ಪ್ರದರ್ಶನತೃಷೆ- ಲೇಖಕ ತನ್ನ ಜ್ಞಾನವನ್ನು ಹಾಗೇ ಪಾಂಡಿತ್ಯವನ್ನು ಪ್ರದರ್ಶಿಸುವುದಕ್ಕೆ ಕಾವ್ಯ-ಕಥೆ-ಕಾದಂಬರಿಗಳು ಸೂಕ್ತವಲ್ಲ. ಅದಕ್ಕೆ ಸಂಶೋಧನಾಲೇಖನವನ್ನೋ ಇನ್ನಾವುದೋ ಪ್ರಬಂಧವನ್ನೋ ಮಂಡಿಸಬಹುದು. ರಸೈಕದೃಷ್ಟಿಯಿಂದ ಯಾವುದು ಸೂಕ್ತವಲ್ಲವೋ ಅದೆಲ್ಲವೂ ಹಾನಿಕಾರಕವೇ ಹೌದು. ಪ್ರದರ್ಶನತೃಷೆ- ತನಗೆ ಗೊತ್ತು ಎಂದು ತೋರಿಸಿಕೊಳ್ಳುವುದು. ಎಷ್ಟೋ ವಿಷಯಗಳಲ್ಲಿ ಜ್ಞಾನವಿಲ್ಲದಿದ್ದರೂ ತನಗೆ ಗೊತ್ತು ಎಂಬಂತೆ ತೋರಿಸಿಕೊಳ್ಳುವ ತೃಷೆ ಹಲವರಲ್ಲಿ ಕಾಣುತ್ತದೆ. ಆದರೆ ಕಥೆಯಲ್ಲಿ ಅದರ ಜೊಳ್ಳು ಗೊತ್ತಾದಾಗ ಓದುಗನಿಗೆ ಲೇಖಕನ ಬಗ್ಗೆ ಹಗುರವಾದ ಭಾವನೆ ಬರುತ್ತದೆಯಷ್ಟೇ!
*ಪ್ರಬಂಧಧ್ವನಿ- ಒಟ್ಟಾರೆಯಾಗಿ ಕೃತಿಯೊಂದು ಓದುಗನ ಮನಸ್ಸಿನ ಮೇಲೆ ಬೀರುವ ಪರಿಣಾಮ ಏನು! ಓದಿ ಎಷ್ಟು ಕಾಲ‌ದ ವರೆಗೆ ಓದುಗ ಅದನ್ನು ಆಲೋಡನೆ ಮಾಡುತ್ತಾನೆ! ಅದರಿಂದಲೇ ಕೃತಿಯ ಗುರುತ್ವ ತಿಳಿಯುತ್ತದೆ. ಪುನಃ ಪುನಃ ಓದಬೇಕೆಂದೆನಿಸುವುದು, ಓದಿದ ಬಳಿಕ ಅವ್ಯಕ್ತವಾದ ಆನಂದವನ್ನು ಕೊಡುವುದು ಸತ್ಕೃತಿಗಳ ಲಕ್ಷಣ ಎನ್ನಬಹುದು.

ಇನ್ನು ಪದ್ಯವನ್ನು ಅವಲೋಕಿಸಿದರೆ-
ಪದ್ಯಕ್ಕೆ ಬೇಕಾದ ಪ್ರಾಸಾದಿಕಗುಣಗಳು ಕಾಣೆಯಾಗುತ್ತಿವೆ. ಕಲಾತ್ಮಕತೆ ಇಲ್ಲವಾಗುತ್ತಿದೆ. ಛಂದಸ್ಸು ಅಲಂಕಾರಗಳೆಂಬುದನ್ನು ಎಂದಿಗೋ ಬಿಟ್ಟರೂ ಕನಿಷ್ಠ- ಅವಶ್ಯಕತೆಗಳಾದ ಔಚಿತ್ಯವೂ ಭಾವವೂ ಇಲ್ಲದೆ ಶುಷ್ಕವಾಗಿ ಕಾಣುತ್ತವೆ. ಇವುಗಳಲ್ಲಿಯೇ ಹಲವು ಪ್ರಭೇದಗಳನ್ನು ಹೇಳುತ್ತಾರಾದರೂ ಎಲ್ಲವನ್ನೂ ಸ್ಥೂಲವಾಗಿ ಅವಲೋಕಿಸಿದಾಗ ಎಲ್ಲವುಗಳಲ್ಲೂ ಇದೇ ಕೊರತೆ ಎದ್ದು ಕಾಣುತ್ತದೆ. ಹಳೆಯ ಸಾಂಪ್ರದಾಯಿಕ ಪದ್ಧತಿಯನ್ನು ಬಿಟ್ಟು ಹೊಸದಾದ ಪಂಥವನ್ನು ಕಂಡುಕೊಂಡ ಈ ನವ್ಯ-ಬಂಡಾಯ- ಇತ್ಯಾದಿ ಕವಿತೆಗಳು ಎಷ್ಟು ಕಾಲ ನಮಗೆ‌ ಸಂತಸವನ್ನು ಕೊಡಬಲ್ಲವು? ಎಷ್ಟು ಕಾಲ ಒಂದು ಕವಿತೆಯನ್ನು ಓದಿದಾಗ ಉಂಟಾದ ಭಾವ ಸ್ಥಿರವಾಗಿ ಇರುತ್ತದೆ? ಹಾಗಾದರೆ ಈ ಭಾವವನ್ನು ಹಿಡಿದಿಡಲು ಇಂತಹ ಕವಿತೆಗಳು ಏಕೆ ಅಸಮರ್ಥವಾಗುತ್ತಿವೆ? ಇಲ್ಲಿ ಕಾಣುವುದು ಕವಿಯ ಅಸಾಮರ್ಥ್ಯವೇ? ಇದನ್ನು ದಾಟಲು ಹೇಗೆ ಸಾಧ್ಯ ಎಂದರೆ- ಹೇಳಬೇಕಾದದ್ದನ್ನು ಸ್ಪಷ್ಟವಾಗಿ ಒಂದು ವಾಕ್ಯವನ್ನಾಗಿಸಿ ಅದನ್ನು ಸರಿಯಾದ ಹದದಲ್ಲಿ ಪದಗಳಲ್ಲಿ ಓದುವಾಗ ಕರ್ಕಶವಾಗದಂತೆ ಗತಿಸುಭಗವಾಗಿ ಇಡುವುದು. ಮಾರ್ಗಕಾವ್ಯದಲ್ಲಿ ಛಂದಸ್ಸು ಈ ಪದಗಳನ್ನು ಹದವಾಗಿ ಹಿಡಿದಿಡುವ ಕೆಲಸ ಮಾಡುತ್ತಿತ್ತು. ಆ ಭಾಷೆಗೆ ಆ ಛಂದಸ್ಸು ಎಂಬಂತೆ ಹೊಸಗನ್ನಡಕ್ಕೆ ತಕ್ಕ ಛಂದಸ್ಸೂ ರೂಪುಗೊಂಡಿತ್ತು. ಉದಾಹರಣೆಗಳನ್ನು ನಾವು ಕುವೆಂಪು, ಡಿವಿಜಿ, ಗೋವಿಂದ ಪೈ, ಸೇಡಿಯಾಪು, ಮಾಸ್ತಿ, ಬೇಂದ್ರೆ, ಬಿ.ಎಂ.ಶ್ರೀ, ಕೆ.ಎಸ್.ನ ಮೊದಲಾದವರ ಕವಿತೆಗಳಲ್ಲಿ ಕಾಣಬಹುದು. ಆ ಕಾರಣಕ್ಕೇ ಇವರೆಲ್ಲರ ಕವಿತೆಗಳು ಚಿರಯೌವನದಲ್ಲಿವೆ. ಇಂದಿನ ಕವಿತೆಗಳೆಂದರೆ ಅರ್ಥಹೀನವಾದ ವ್ಯರ್ಥವಾದ ಪದಗಳ ಗುಂಪಿನ ಅನಿಯಂತ್ರಿತವಿನ್ಯಾಸವಾಗಿದೆ. ಹಿಂದಿನ ಕವಿಗಳ ಅಧ್ಯಯನದಿಂದ ಮಾತ್ರ ಆ ಹದವನ್ನು ಕಂಡುಕೊಳ್ಳಲಾಗುತ್ತದೆ. ಹಿಂದಿನ ಯೋಗ್ಯಕವಿಗಳ ಸಾವಿರ ಪದ್ಯಗಳನ್ನು ಓದಿ ಕನಿಷ್ಠ ಐವತ್ತು ಪದ್ಯಗಳನ್ನು ಕಂಠಪಾಠ ಮಾಡಿದ್ದರೆ ಹೊಸದಾಗಿ ಪದ್ಯ ಬರೆಯುವಾಗ ಅದರಲ್ಲಿ ಕಿಂಚಿತ್ ಸೌಂದರ್ಯವನ್ನು ಕಾಣಬಹುದು. ಏವಂ ಚ ಪ್ರತಿಭೆ ಕಲ್ಪನೆ ಕವಿತ್ವಶಕ್ತಿಗಳನ್ನು ಕಲಿಸಲು ಸಾಧ್ಯವಿಲ್ಲ. ಒಂದು ಲಯದಲ್ಲಿ ಹಾಡಿಕೊಳ್ಳಬಹುದಾದ ಪದ್ಯಗಳು ಕೊಡುವ ಭಾವವನ್ನು ಈ ತರಹದ ನವ್ಯಾದಿಕವಿತೆಗಳು ಕೊಡಲು ಅಸಮರ್ಥವಾಗುವುದೇ ಅದಕ್ಕೆ. ಆ ಕಾರಣಕ್ಕೇ ಸಿನಿಮಾ ಹಾಡುಗಳು ಕೂಡ ಈ ಕವಿತೆಗಳಿಗಿಂತ ಜನರ ಮನಸ್ಸಿಗೆ ಹೆಚ್ಚು ಹತ್ತಿರವಾಗುತ್ತವೆ. ನಾವು ಆಡಿದ ಮಾತು ಇನ್ನೊಬ್ಬರಿಗೆ ಅರ್ಥವಾಗದಿದ್ದಲ್ಲಿ ನಾವು ಮಾತನಾಡುವುದೇ ವ್ಯರ್ಥವಲ್ಲವೇ! ಈ ಕವಿತೆಯ ಉದ್ದೇಶವಾದರೂ ಸಂತಸವನ್ನು ಕೊಡುವುದೇ ಅಲ್ಲವೇ? ಅಲ್ಲದೇ ಹೇಳುವುದನ್ನು ನೇರವಾಗಿ ಹೇಳದೇ ಪರ್ಯಾಯವಾಗಿ ಹೇಳಿದಾಗ ಆಗುವ ಪರಿಣಾಮ ಹೆಚ್ಚು ಆಸ್ವಾದ್ಯ. ಇದೆಲ್ಲವನ್ನೂ ನಮ್ಮ ಆಲಂಕಾರಿಕರು ಅದೆಷ್ಟೋ ಹಿಂದಿನಿಂದಲೇ ಹೇಳಿಕೊಂಡು ಬಂದಿದ್ದಾರೆ. ಆದರೆ ಇತ್ತೀಚೆಗೆ ಅವರನ್ನು ಗೌರವಿಸುವ ಸ್ವಭಾವವೇ ಇಲ್ಲವಾಗುತ್ತಿರುವ ಕಾರಣ ಅವರ ಬರಹಗಳನ್ನು ಓದುತ್ತಾರೆ ಎಂದು ನಿರೀಕ್ಷಿಸುವುದೂ ಹಾಸ್ಯಾಸ್ಪದವಾಗುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ