ಮೊದಲ ಸರ್ಗವನ್ನು ಇಲ್ಲಿ ನೋಡಿ- ಉರ್ವಶೀಜನನವೃತ್ತಾಂತಂ
ಎರಡನೇ ಸರ್ಗವನ್ನು ಇಲ್ಲಿ ನೋಡಿ- ಅಗಸ್ತ್ಯಜನನವೃತ್ತಾಂತಂ
~
ಪಂಚಮಂ
ಸರ್ಗಂ ~
ಸ್ವಧರ್ಮಸಂಪಾಲಕರಾಜನಿಂದಂ
ವಿಧೇಯರಾಗಿರ್ಪ
ಜನರ್ಕಳಿಂದಂ
ಬುಧರ್ಗಮಂತಾಯ್ತು
ವಿದರ್ಭದೇಶಂ
ಸುಧಾಕರಂಬೋಲ್ತು
ಶುಭಂಕರಂ ತಾಂ ||೧||
(ತನ್ನ
ಧರ್ಮವನ್ನು ಪರಿಪಾಲಿಸುತ್ತಿರುವ
ರಾಜನಿಂದ,
ಪ್ರಭುತ್ವಕ್ಕೆ
ವಿಧೇಯರಾಗಿರುವ ಜನರಿಂದ ಬುಧರಿಗೆ/
ವಿದ್ವಾಂಸರಿಗೆ
ವಿದರ್ಭದೇಶವು ಸುಧಾಕರನಂತೆ
ಶುಭಕರವಾಗಿತ್ತು )
ಇಂದ್ರವಜ್ರಾ||
ಮುದ್ರಾಂಕಿತಳ್
ತಾಳ್ಮೆಯ ಮೂರ್ತಿಯಿಂದಂ
ಛಿದ್ರೀಕೃತಳ್
ಮೋಹದ ಛಾಯೆಯಂ ತಾಂ
ಸದ್ರೂಪದಿಂದಂ
ನೃಪಪುತ್ರಿ ಲೋಪಾ-
ಮುದ್ರಾಖ್ಯೆಯಿರ್ದಳ್
ನವಯೌವನಸ್ಥಳ್ ||೨||
(ತಾಳ್ಮೆಯ ಮೂರ್ತಿಯ
ಮುದ್ರೆಯನ್ನು ಹೊತ್ತವಳು,
ಮೋಹದ ನೆರಳನ್ನೂ
ಛಿದ್ರಗೊಳಿಸಿದವಳು,
ಸುಂದರರೂಪದವಳಾದ
ಲೋಪಾಮುದ್ರೆ ಎಂಬವಳು ಆ ರಾಜನ
ಮಗಳು ಹೊಸಜವ್ವನವನ್ನು ಪಡೆದವಳಾಗಿದ್ದಳು)
ನಾಮಾಂತರಂ
ಸತ್ಯವತಿ ಪ್ರಕೀರ್ತಿ-
ಪ್ಪಾ
ಮಾನ್ಯೆಗಿರ್ದತ್ತು,
ವಿವಾಹಕಾಮರ್
ಸಾಮಾನ್ಯರಾಜರ್ಕಳೆ
ಕಂಡು ಪೋಪರ್
ಶ್ರೀಮಂತರುಂ
ಮೆಚ್ಚದೆ ಪೋದರತ್ತಂ ||೩||
(ಕೀರ್ತಿಸಲ್ಪಡುತ್ತಿರುವ
ಆ ಮಾನ್ಯಳಾದವಳಿಗೆ ಸತ್ಯವತಿ ಎಂಬ
ಇನ್ನೊಂದು ಹೆಸರಿತ್ತು.
ವಿವಾಹದ
ಆಸೆಯಿಂದ ಬಂದ ಅನೇಕ ರಾಜರು ಅವಳನ್ನು
ನೋಡಿಕೊಂಡು ಹೋಗುತ್ತಿದ್ದರು.
ಶ್ರೀಮಂತರೂ
ಅವಳನ್ನು ಮೆಚ್ಚಿಕೊಳ್ಳಲಿಲ್ಲ.)
ಉಪೇಂದ್ರವಜ್ರಾ||
ವಿಲಾಸದೊಳ್
ವಾಂಛೆಯದಿಲ್ಲದಿರ್ಪಳ್
ಕುಲಕ್ಕೆ
ಕೀರ್ತಿಚ್ಛಟೆಯೀವಳೆಂಬರ್
ಲಲಾಟಲೇಖಂ
ಬರೆದಿರ್ಪುದೆಂತೋ
ವಿಲಾಪಿಪಂ
ತಂದೆಯಿನಿತ್ತು ನಿಚ್ಚಂ ||೪||
(ಇವಳಿಗೆ ವಿಲಾಸಗಳಲ್ಲಿ
ಆಸಕ್ತಿಯಿಲ್ಲ, ಇವಳು
ಕುಲಕ್ಕೆ ಕೀರ್ತಿಯ ಪ್ರಕಾಶವನ್ನು
ಕೊಡುತ್ತಾಳೆ ಎಂದು ಹೇಳುತ್ತಾರೆ.
ಹಣೆಬರೆಹವು
ಹೇಗೆ ಬರೆದಿದೆಯೋ ಏನೋ ಎಂದು
ಅವಳನ್ನು ಕಂಡು ಅವಳ ತಂದೆ ನಿತ್ಯವೂ
ಕೊರಗುತ್ತಿದ್ದ)
ಅದೊರ್ಮೆಗಂ
ರಾಜನ ಚಿತ್ತಕಂ ಮೇಣ್
ವಿದರ್ಭಕಂ
ಸೌಖ್ಯದಮೆಂಬವೊಲ್ ಕೋ-
ವಿದರ್ಕಳೆಂಬಾ
ಶುಭಸೂಚನಾಳಿ
ಪ್ರದತ್ತಮಾದತ್ತು
ವಿಧಾತೃವಿಂದಂ ||೫||
(ಅದೊಮ್ಮೆ,
ರಾಜನ ಮನಸ್ಸಿಗೆ
ವಿದರ್ಭಕ್ಕೆ ಸೌಖ್ಯವನ್ನು
ಕೊಡುವಂತಹದ್ದು ಎಂದು ವಿದ್ವಾಂಸರು
ಹೇಳುತ್ತಿರುವ ಶುಭಸೂಚನಾವಳಿಯು
ವಿಧಾತನಿಂದ ಕೊಡಲ್ಪಟ್ಟಿತು )
ವಿಕಂಪಿತಂ
ದಕ್ಷಿಣಬಾಹುಮೂಲಂ
ಸಕಾಂಚನಂ
ಪೂರ್ಣಘಟಂಗಳಂ ಕಂ-
ಡು
ಕಂಜಹಾರಂ ಸ್ವಕಪುತ್ರಿಕಂಠ-
ಪ್ರಕಾಶಿತಂಬೊಲ್
ನೃಪನೀಕ್ಷಿಸಿರ್ದಂ ||೬||
(ಅವನ ಬಲಭುಜವು
ಕಂಪಿಸಿತು. ಬಂಗಾರದ
ತುಂಬಿದ ಕೊಡಗಳು ಕಂಡು,
ಕಮಲದ ಹಾರವು
ತನ್ನ ಮಗಳ ಕೊರಳಲ್ಲಿ ಪ್ರಕಾಶಿಸುತ್ತಿರುವಂತೆ
ರಾಜನು ಕಂಡಿದ್ದನು)
ಅಗಸ್ತ್ಯನಾಗಳ್
ಪದನಿಟ್ಟು ಸಾರ್ದಂ
ಸೊಗಂಬಡುತ್ತುಂ
ಧರೆ ತಣ್ಪನೊಂದಲ್
ತಗಲ್
ಮಹಾವರ್ಷಮೆ ಬಂದುದುಂ ಮೇಣ್
ನೆಗೞ್ತೆವೆತ್ತರ್
ಬರಲೊಳ್ಪದಕ್ಕುಂ ||೭||
(ಅಗಸ್ತ್ಯ
ಆಗ ತನ್ನ ಪದವನ್ನು ಇಡುತ್ತಾ
ಅಲ್ಲಿಗೆ ಬಂದನು.
ಆಗ
ಸೊಗಸಾಗಿ ಭೂಮಿಯೇ ತಂಪನ್ನು ಹೊಂದಲು
ದೊಡ್ಡ ಮಳೆಯೇ ಬಂದುದೂ ಆಯ್ತು.
ಪ್ರಸಿದ್ಧರಾದವರು
ಬಂದಾಗ ಒಳ್ಲೆಯದೇ ಆಗುತ್ತದೆ)
ಪ್ರವೇಶಮಂ
ಗೆಯ್ಸಿದನಾತನಂ ರಾ-
ಜವೇಶ್ಮಕಾಗಳ್
ವರಭಕ್ತಿಯಿಂದಂ
ತವಪ್ರಸಾದಂ
ಮುನಿ ಸರ್ವಮಿಂತಾ-
ವ
ವೃತ್ತಿಯಂ ಗೆಯ್ವುದು ಸೇವೆಗಂ
ಪೇೞ್ ||೮||
(ಅವನನ್ನು ರಾಜನು
ಅರಮನೆಗೆ ಪ್ರವೇಶವನ್ನು ಮಾಡಿಸಿದನು.
ಸದ್ಭಕ್ತಿಯಿಂದ
“ಮುನಿವರ್ಯ! ಇವೆಲ್ಲವೂ
ನಿಮ್ಮ ಪ್ರಸಾದವೇ ಆಗಿದೆ,
ನಿಮ್ಮ ಸೇವೆಗೆ
ಯಾವ ಕೆಲಸವನ್ನು ಮಾಡಬೇಕು ಹೇಳಿ”--)
ಎನುತ್ತೆ
ಬಿನ್ನೈಸಿರೆ ಭೂಭುಜಂ ತ-
ನ್ಮುನೀಂದ್ರನೊಳ್
ಕುಂಭಜನೆಂದನಾತಂ-
ಗೆ
ನಿನ್ನ ಸತ್ಪುತ್ರಿಯನಿತ್ತೊಡಕ್ಕುಂ
ಘನತ್ವಗಾರ್ಹಸ್ಥ್ಯಕೆ
ಪೋಪೆನಾನುಂ ||೯||
(ಎನ್ನುತ್ತಾ
ರಾಜನು ಆ ಮುನೀಂದ್ರನಲ್ಲಿ
ಬಿನ್ನವಿಸಿದಾಗ ಕುಂಭಜನಾದ
ಅಗಸ್ತ್ಯನು ಆತನಿಗೆ “ನಿನ್ನ
ಸತ್ಪುತ್ರಿಯನ್ನು ನನಗೆ ಕೊಟ್ಟರೆ
ನಾನು ಮಹತ್ತರವಾದ ಗೃಹಸ್ಥಾಶ್ರಮಕ್ಕೆ
ಹೋಗುತ್ತೇನೆ” )
ಇಂದ್ರವಜ್ರಾ||
ಎಂದಾ
ಮುನೀಂದ್ರಾಶಯದಿಂದೆ ತುಷ್ಟಂ
ಸಂದಂತು
ಕೇಳ್ದಂ ನಿಜಪುತ್ರಿಯಂ ತಾ-
ನಂದೇ
ವಿವಾಹಕ್ಕೆ ಸುಲಗ್ನಮಿಟ್ಟಂ
ಕುಂದಾಗದಂತೆಲ್ಲಮೆ
ಪೂರ್ಣಮಾಯ್ತೈ ||೧೦||
(ಎಂದು
ಹೇಳಿದ ಆ ಮುನೀಂದ್ರನ ಆಶಯದಿಂದ
ಸಂತೋಷವನ್ನು ಹೊಂದಿ ರಾಜನು ತನ್ನ
ಪುತ್ರಿಯನ್ನು ಕೇಳಿದನು.
ಅಂದೇ
ವಿವಾಹಕ್ಕೆ ಲಗ್ನವನ್ನು ನಿಶ್ಚಯಿಸಿದನು.
ಕುಂದಿಲ್ಲದಂತೆ
ಎಲ್ಲವೂ ಪೂರ್ಣವಾಯಿತು)
ಉಪಜಾತಿ||
ನೃಪಾತ್ಮಜಾಯುಕ್ತನಗಸ್ತ್ಯನಲ್ಲಿಂ-
ದೆ
ಪರ್ಣಶಾಲಾಶ್ರಿತಗೇಹಕಂ ದಲ್
ಶ್ರೀಪಂಬೊಲೆಯ್ದಂ
ವಿಪಿನಪ್ರದೇಶ-
ಕ್ಕೋಪಳ್ಗೆ
ವಕ್ಷಸ್ಥಲವಾಸವಿತ್ತಂ ||೧೧||
(ರಾಜನ ಮಗಳ
ಜೊತೆಯಲ್ಲಿ ಅಗಸ್ತ್ಯನು ಅಲ್ಲಿಂದ
ಕಾಡಿನ ಪ್ರದೇಶದ ತನ್ನ ಪರ್ಣಶಾಲೆಯಿಂದ
ಕೂಡಿದ ಮನೆಗೆ (ಆಶ್ರಮಕ್ಕೆ
) ಶ್ರೀಪತಿಯಂತೆ
ಬಂದನು. (ವಿಷ್ಣು
ಹೃದಯದಲ್ಲಿ ಲಕ್ಷ್ಮಿಗೆ ಆಶ್ರಯವನ್ನು
ಕೊಟ್ಟಂತೆ) ತನ್ನ
ಪ್ರಿಯೆಗೆ ಹೃದಯದಲ್ಲಿ ವಾಸವನ್ನು
ಕೊಟ್ಟನು.)
ಕಾಲಂ
ಸಲಲ್ ದೈನಿಕಕರ್ಮಸಕ್ತಂ
ಶ್ರೀಲೀಲೆಯಂ
ಕಾಣದ ಮುಗ್ಧನಾಗಳ್
ಪ್ರಲಾಪಿಪಂತಾದುದು
ಶೂನ್ಯಹಸ್ತಂ
ಕೊಳಲ್ಕೆ
ಕಿಂಚಿತ್ತನುಮಂತಿರಲ್ಕೆ ||೧೨||
(ಕಾಲವು
ಕಳೆಯುತ್ತಿರಲು,
ದೈನಿಕಕರ್ಮವನ್ನು
ಮಾಡುವವನು ಸಂಪತ್ತಿನ ಲೀಲೆಯನ್ನೇ
ಕಾಣದ ಮುಗ್ಧನು,
ಕಿಂಚಿತ್ತನ್ನು-
ಸ್ವಲ್ಪವನ್ನು
ಕೊಳ್ಳುವುದಕ್ಕೂ ಕೂಡ ಶೂನ್ಯಹಸ್ತನಾದ
ಕಾರಣ ವಿಲಾಪಿಸುವಂತಾಯ್ತು!
ಹಾಗಿರುವಾಗ-
)
ಉಪೇಂದ್ರವಜ್ರಾ||
ಗೃಹಸ್ಥನಾಂ
ವಿತ್ತಕೆ ಕಾಮಿಸಲ್ ನಿ-
ಸ್ಪೃಹಂಬೊಲಿರ್ದಂತಿದು
ಸಲ್ವುದಲ್ತು
ವಿಹಾರಕೇಳೀಮಯಕಲ್ತು
ಪೇೞಲ್
ಸಹಾಯಮಂ
ಗೆಯ್ವರದಾರೊ ನೋೞ್ಪೆಂ ||೧೩||
(ಗೃಹಸ್ಥನಾದ
ಕಾರಣ ನಾನು ಹಣಕ್ಕೆ ಕಾಮಿಸಲು,
ಹಿಂದೆ
ನಿಸ್ಪೃಹನಂತೆ ಇದ್ದಂತೆ ಈಗ
ಸಲ್ಲುವುದಲ್ಲ.
ಆದರೆ
ಇದು ಲೌಕಿಕವಾದ ವಿಹಾರಕ್ಕಲ್ಲ,
(ನಿತ್ಯಕರ್ಮಕ್ಕೆ)
ನನಗೆ
ಸಹಾಯವನ್ನು ಮಾಡುವವರು ಯಾರು
ಎಂದು ನೋಡುತ್ತೇನೆ)
ಉಪಜಾತಿ||
ಎನುತ್ತೆ
ಚಿಂತಿಪ್ಪೊಡನೊರ್ಮೆ ಕೇಳ್ದಂ
ಧನಾತ್ಮರಿರ್ಪರ್
ಪ್ರಜೆಗಳ್ ಸದಾ ತಾಂ
ದಾನಕ್ಕೆ
ನೀೞ್ವರ್ ಪೃಥಿವೀಸುರರ್ಗಂ
ಬಾ!
ನೀನುಮೆಂಬರ್ಕಳ
ಮಾತನಂದು ||೧೪||
(ಹೀಗೆಂದು
ಚಿಂತಿಸುತ್ತಿರುವಾಗ ಒಮ್ಮೆ
“ಧನವನ್ನು ಹೊಂದಿದ ಪ್ರಜೆಗಳಿದ್ದಾರೆ.
ಭೂಸುರರಾದ
ಬ್ರಾಹ್ಮಣರಿಗೆ ದಾನವನ್ನು
ಕೊಡುತ್ತಾರೆ,
ನೀನೂ
ಬಾ” ಎಂದು ಹೇಳುವವರ ಮಾತನ್ನು
ಕೇಳಿದನು)
ಇಂದ್ರವಜ್ರಾ||
ಅಂತೆಲ್ಲ
ವಿಪ್ರರ್ ಕರೆದಲ್ಲಿ ಪೋಪರ್
ನೋಂತಿರ್ಪರೊಂದಿರ್ಪ
ಸದಿಚ್ಛೆಯೆಲ್ಲಂ
ಮುಂತಕ್ಕೆ
ಸಾಫಲ್ಯಮೆನುತ್ತೆ ಪೇೞ್ದರ್
ಶಾಂತಾಂತರಂಗರ್
ಪಡೆಯುತ್ತೆ ಪೊನ್ನಂ ||೧೫||
(ಹಾಗೆ
ಆ ವಿಪ್ರರೆಲ್ಲ ಕರೆದಲ್ಲಿ ಹೋಗುವವರು,
“ಈ
ವ್ರತವನ್ನು ಮಾಡುತ್ತಿರುವವರು
ಹೊಂದುವ ಒಳ್ಳೆಯ ಇಚ್ಛೆಯಲ್ಲವೂ
ಮುಂದೆ ಸಫಲವಾಗುತ್ತದೆ"
ಎಂದು
ಪ್ರಶಾಂತವಾದ ಅಂತರಂಗವನ್ನು
ಹೊಂದಿರುವವರು ಅವರು ಕೊಡುವ
ಹೊನ್ನನ್ನು ಪಡೆಯುತ್ತಾ ಹೇಳಿದರು.)
ಆರೇನನಿತ್ತಿರ್ದೊಡಮುಂ
ವರಂ ನೀ-
ೞ್ದಾಱೆಂಬುದಾಶೀರ್ವಚನಪ್ರದಾತರ್
ಸಾರಿರ್ಪರಾ
ವಿತ್ತದೆ ನಿತ್ಯಕಾರ್ಯ-
ಕ್ಕೋರಂತೆ
ಯೋಜಿಪ್ಪರಚಿಂತ್ಯಮೆಂಬರ್ ||೧೬||
(ಯಾರು
ಏನನ್ನು ಕೊಟ್ಟರೂ ವರವನ್ನು ನೀಡಿ
“ಆಱ್-ಸಮರ್ಥನಾಗು”
ಎಂದು ಆಶೀರ್ವಚನವನ್ನು ಕೊಟ್ಟು
ಬರುತ್ತಿದ್ದರು,
ಆ
ಹಣದಿಂದ ನಿತ್ಯಕಾರ್ಯಕ್ಕೆ
ಕ್ರಮವಾಗಿ ಯೋಜಿಸುತ್ತಿದ್ದರು.
ಹಾಗೂ
ಇದು ಚಿಂತನೀಯವಲ್ಲ-
ಎನ್ನುತ್ತಿದ್ದರು)
ಉಪೇಂದ್ರವಜ್ರಾ||
ಸ್ವದೇಹಮಂ
ಪೋಷಿಪ ವೀಪ್ಸೆಯಿಲ್ಲಂ
ಸ್ವದೇಹಮಂ
ದಂಡಿಪ ಕ್ರೂರಮಲ್ಲಂ
ಸ್ವದೇಹಮಂ
ಸಾಧನಮೆಂದು ನಂಬಿ
ಸ್ವದುಃಖಮಂ
ನೀಗಿಸಿಕೊಳ್ವರೇಗಳ್ ||೧೭||
(ತಮ್ಮ ದೇಹವನ್ನು
ಪೋಷಣೆ ಮಾಡುವ ವೀಪ್ಸೆ ಇಲ್ಲ,
ತಮ್ಮ ದೇಹವನ್ನೇ
ದಂಡಿಸುವ ಕ್ರೂರತೆಯೂ ಅಲ್ಲ,
ತಮ್ಮ ದೇಹವೇ
ಧ್ಯೇಯವನ್ನು ಸಾಧಿಸುವ ಸಾಧನವೆಂದು
ನಂಬಿಕೊಂಡು, ತಮ್ಮ
ದುಃಖವನ್ನು ನೀಗಿಸಿಕೊಳ್ಳುತ್ತಿದ್ದರು.
)
ಪರಾತ್ಪರಂ
ಬ್ರಹ್ಮಮೆನುತ್ತೆ ನಿತ್ಯಂ
ಪರಾಙ್ಮುಖರ್
ಲೌಕಿಕವಾರ್ತೆಯಿಂದಂ
ನರರ್ಗೆ
ಪೋಲ್ತರ್ ತಪದಿಂದಮಿರ್ದುಂ
ವರಪ್ರದಾನಕ್ಷಮೆಯಿಂ
ಮುನೀಂದ್ರರ್ ||೧೮||
(ಎಲ್ಲಕ್ಕೂ
ಶ್ರೇಷ್ಠವಾದದ್ದು ಯಾವತ್ತೂ
ಬ್ರಹ್ಮವೇ ಆಗಿದೆ ಎಂದು ಲೌಕಿಕವಾರ್ತೆಯಿಂದ
ಪರಾಙ್ಮುಖರಾಗಿ ತಪಸ್ಸಿನಲ್ಲಿದ್ದರೂ
ಮನುಷ್ಯರಂತೆಯೇ ಇದ್ದರು.
ವರವನ್ನು ಕೊಡುವ
ಕ್ಷಮತೆಯನ್ನೂ ಹೊಂದಿದ್ದರು ಈ
ಮುನೀಂದ್ರರು)
ಎನಿತ್ತೆನಿತ್ತಾ
ಸರಳತ್ವಮಿರ್ಕುಂ
ಘನತ್ವಮಂತುರ್ಕುವುದಲ್ತೆ
ಪೇೞ-
ಲ್ಕೆನಿತ್ತೆನಿತ್ತುರ್ಕದು
ನೇರಮಿರ್ಕುಂ
ಘನತ್ವದಿಂ
ಯುಜ್ಯಮೆನಿಕ್ಕುಮಲ್ತೇ ||೧೯||
(ಎಷ್ಟೆಷ್ಟು
ಸರಳತೆಯಿರುತ್ತದೆಯೋ ಅಷ್ಟಷ್ಟು
ಘನತೆ ಉಕ್ಕುವುದು,
ಎಷ್ಟೆಷ್ಟು
ಘನತೆ ಉಕ್ಕುವುದಿಲ್ಲವೋ
ನೇರವಾಗಿರುತ್ತದೆಯೋ ಆಗ ಘನತೆಯಿಂದ
ಯುಜ್ಯವಾಗಬೇಕಾಗುತ್ತದೆಯಲ್ಲವೇ)
ಇಂದ್ರವಜ್ರಾ||
ಅಂದೊರ್ಮೆಗಂ
ಭಾಸ್ಕರನೇೞ್ವ ಪೊೞ್ತೊಳ್
ಸಂದಿರ್ಪಸಂಧ್ಯಾಕ್ರಮದಿಂದಗಸ್ತ್ಯಂ
ವಂದಿಪ್ಪನೀಕ್ಷಿಪ್ಪನುಷಃಪ್ರವೇಶ-
ಸ್ಪಂದಿಪ್ಪುದೆಂತಂದಮೆನುತ್ತೆ
ಮತ್ತಂ ||೨೦||
(ಅಂದು
ಒಮ್ಮೆ ಸೂರ್ಯದೇವನು ಏಳುವ ಹೊತ್ತಿಗೆ,
ತನ್ನ
ಸಂಧ್ಯಾವಿಧಿಯ ಕ್ರಮದಿಂದ ಅಗಸ್ತ್ಯನು
ವಂದಿಸುತ್ತಾ ಉಷೆಯ ಪ್ರವೇಶವು
ಎಷ್ಟು ಅಂದವಾದುದು ಎಂದು ನೋಡಿದನು)
ಉಪೇಂದ್ರವಜ್ರಾ||
ಸರಾಗದಿಂದಂ
ವಿನತಾತ್ಮಜಂ ತಾಂ
ವರೂಥಮಂ
ಸಾಗಿಸೆವಂದು ಬಾನೊಳ್
ಪರಾಗಮಂ
ದುಂಬಿಯೆ ಚೆಲ್ಲಿದಂದಂ
ಕರಂಗಳಿಂ
ಗೆಯ್ದನದದ್ಭುತಂ ದಲ್||೨೧||
(ಸರಾಗವಾಗಿ/
ಕೆಂಬಣ್ಣದಿಂದ
ವಿನತೆಯ ಮಗನಾದ ಅರುಣನು ರಥವನ್ನು
ಸಾಗಿಸುತ್ತಾ ಬಾನಿನಲ್ಲಿ ಬರುತ್ತಾ,
ದುಂಬಿಯೊಂದು
ಪರಾಗವನ್ನು ಚೆಲ್ಲಿದ ಹಾಗೆಯೇ
ಕಿರಣಗಳಿಂದ ಕೆಂಬಣ್ಣವನ್ನು
ಚೆಲ್ಲಿದುದು ಅದ್ಭುತವಾಗಿತ್ತು)
ಇಂದ್ರವಜ್ರಾ||
ಮಂದೇಹರಕ್ತಾನ್ವಿತಮೀ
ಪೊನಲ್ ಮೇಣ್
ಸಂದೇಹಮಿಲ್ಲಂ
ಹರಿದಶ್ವಹಸ್ತಂ
ಮುಂದೆಯ್ದು
ಕೆಂಪಾಗುತೆ ತೋರುತಿರ್ಕುಂ
ಮುಂದಿರ್ಪುಷಃಸೇವಿಕೆ
ಗೆಯ್ವಳೊಪ್ಪಂ ||೨೨||
(ಮಂದೇಹ ಎಂಬ
ರಾಕ್ಷಸನ ರಕ್ತವೇ ಈ ಪ್ರವಾಹವಾಗಿದೆ,
ಹರಿದಶ್ವನಾದ
ಸೂರ್ಯನ ಕರಗಳು(ಕಿರಣಗಳು)
ಮುಂದೆ ಬರುತ್ತಾ
ಕೆಂಪಾಗಿ ಕಾಣುತ್ತಿವೆ.
ಅವನ ಉಷೆಯೆಂಬ
ಸೇವಕಿ ಅದನ್ನು ಒಪ್ಪವಾಗಿಸುತ್ತಿದ್ದಾಳೆ)
ಉಪೇಂದ್ರವಜ್ರಾ||
ವಿಯೋಗದಿಂ
ಶರ್ವರಿ ಧುಃಖಿಪಾಗಳ್
ಪಯಃಕಣಂಗಳ್
ಸಲೆ ಬಿೞ್ದುವಲ್ತೇ
ಸ್ವಯಂ
ಬರುತ್ತಿರ್ದೊಡನಾಣ್ಮನೀಗಳ್
ಸುಯೋಗದಿಂದಾಸ್ಯಮೆ
ರಾಗಮಾಯ್ತೇ ||೨೩||
(ಪತಿಯ ವಿಯೋಗದಿಂದ
ರಾತ್ರಿಯೆಂಬ ಹೆಣ್ಣು ದುಃಖಿಸುತ್ತಿರುವಾಗ
ಕಣ್ಣೀರಿನಂತೆ ನೀರಿನ ಹನಿಗಳು
ಬಿದ್ದಿವೆ. ಈಗ
ಪತಿಯೇ ಬರುತ್ತಿರುವಾಗ ಸುಯೋಗದಿಂದ
ಅವಳ ಮುಖವೇ ಕೆಂಪಾಯಿತೇ/ಅನುರಾಗವನ್ನು
ಹೊಂದಿತೇ?)
ಬರುತ್ತುಮುಷ್ಣಂಕರನುಷ್ಣಮಂ
ತಾಂ
ವಿರಾಗಿಗಳ್ಗಂತುಟೆ
ಪೆರ್ಚಿಸುತ್ತುಂ
ಸರಾಗರಂ
ಮಾೞ್ದಪನಂತೆ ಪೂವಂ
ಸ್ಮರಾಸ್ತ್ರಮಂ
ಬಾಡಿಸುತಿರ್ಪನಲ್ತೇ ||೨೪||
(ಬರುತ್ತಾ
ಉಷ್ಣಂಕರನಾದ ಸೂರನು ಉಷ್ಣವನ್ನು
ವಿರಾಗಿಗಳಿಗೆ ಹೆಚ್ಚಿಸುತ್ತಾ
ಅವರನ್ನು ಸರಾಗರನ್ನಾಗಿ ಮಾಡಿದನು.
ಹಾಗೆಯೇ ಮನ್ಮಥನ
ಅಸ್ತ್ರವಾದ ಹೂವನ್ನು ಕೂಡ ಬಾಡಿಸಲು
ಪ್ರಾರಂಭಿಸಿದನು )
ವಿಚಿತ್ರಮೀ
ಸೃಷ್ಟಿಯೆನುತ್ತೆ ನಿಂತಿ-
ರ್ದು
ಚಿತ್ರಪಾತ್ರಂಬೊಲೆ ಸಂದನಂ ಕಂ-
ಡು
ಚಿತ್ರಮಪ್ಪೊಂದುರುಗಾಥೆಯಂ ಪೇ-
ೞ್ದು
ಚಿತ್ರಿಸಿರ್ಪಂ ಮುನಿಶಿಷ್ಯನೊರ್ವಂ
||೨೫||
(ಈ ಸೃಷ್ಟಿಯೇ
ವಿಚಿತ್ರವೆಂದು ನಿಂತುಕೊಂಡು
ಚಿತ್ರವೇ ಆದಂತಿದ್ದ ಅಗಸ್ತ್ಯನನ್ನು
ಕಂಡು ಅವನ ಶಿಷ್ಯನೊಬ್ಬನು
ವಿಚಿತ್ರವಾದದ್ದೊಂದು ಕಥೆಯನ್ನು
ಅವನಿಗೆ ಚಿತ್ರಿಸಿ ಹೇಳಿದ )
ಅದೆಂತೆನಲ್
ರಾಕ್ಷಸರಿರ್ವರಿರ್ಪರ್
ಪ್ರದಾತರಂದಂ
ಕರೆವರ್ ನೆಗೞ್ದರ್
ಸದಾ
ಬುಧರ್ಗಿಲ್ವಲನೆಂಬನಾತಂ
ತದೀಯವಾತಾಪಿಯೆ
ಸೋದರಂ ಕೇಳ್ ||೨೬||
(ಅದು ಹೇಗೆಂದರೆ
ಇಬ್ಬ್ರು ರಾಕ್ಷಸರು ಇದ್ದಾರೆ.
ದಾನವನ್ನು
ಕೊಡುವವರಂತೆ ಬುಧರಿಗೆ ಅವರು
ಆಹ್ವಾನವನ್ನು ಕೊಡುತ್ತಾರೆ.
ಅವನು ಇಲ್ವಲ
ಎಂಬಾತನು. ಅವನ
ಸೋದರನು ವಾತಾಪಿ ಎಂಬವನು )
ಅಜಂಬೊಲಿರ್ಪಾತನಸುಂಗೊಳುತ್ತುಂ
ದ್ವಿಜರ್ಗೆನುತ್ತಿಲ್ವಲನೇ
ಸ್ವಬುದ್ಧಿ-
ಪ್ರಜಾತದಿಂ
ಬಾಣಸುಗೆಯ್ದು ನೀೞ್ವಂ
ಭುಜಿಪ್ಪರಂ
ತೋಷಿಪನಾ ಬೞಿಕ್ಕಂ ||೨೭||
(ಆಡಿನಂತೆಯೇ
ಇರುವ ಅವನ ಪ್ರಾಣವನ್ನು ತೆಗೆದು,
ಅದರಿಂದ
ಬ್ರಾಹ್ಮಣರಿಗೆಂದು ಇಲ್ವಲನು
ತನ್ನ ಬುದ್ಧಿಯಲ್ಲಿ ಉದ್ಭವಿಸಿದಂತೆ
ಅಡುಗೆ ಮಾಡಿ ನೀಡುತ್ತಾನೆ.
ಊಟವನ್ನು
ಮಾಡುವವರಿಗೆ ಹೀಗೆ (ಆಡಿನ
ಮಾಂಸದಿಂದ) ಸಂತೋಷವನ್ನು
ಕೊಡುತ್ತಾನೆ. )
ಉಪಜಾತಿ||
ವಾತಾಪಿ
ನೀಂ ಬಾ ಪೊಱಗೆಂದು ಪೇೞ್ವಂ
ವಾತಾಪಿಯಾಗಳ್
ಜಠರಸ್ಥನಿರ್ಪಂ
ಪ್ರತಾಪದಿಂ
ಬೇಧಿಸಿ ಬರ್ಪನೆಂತೋ
ಕೃತಾಶನರ್
ಸಾಯ್ವರಲಾ ವಿಚಿತ್ರಂ||೨೮||
(ಆಮೇಲೆ,
"ವಾತಾಪಿ ನೀನು
ಹೊರಗೆ ಬಾ” ಎಂದು ಹೇಳುತ್ತಾನೆ.
ಅವರ ಜಠರದಲ್ಲಿ
ಇರುವ ವಾತಾಪಿ ತನ್ನ ಪ್ರತಾಪದಿಂದ
ಬೇಧಿಸಿ ಬರುತ್ತಾನೆ. ಆಗ
ಊಟ ಮಾಡಿದವರು ಸಾಯುತ್ತಿದ್ದರು.
ಇದು ವಿಚಿತ್ರವಲಾ!
)
ಉಪೇಂದ್ರವಜ್ರಾ||
ಬೞಿಕ್ಕಮಿರ್ವರ್
ಧನಕಾಮರಾಗಳ್
ಸ್ವಲಾಭಕಂ
ಕೊಲ್ಲುತುಮಿರ್ಪರಿಂತು
ಖಲರ್
ಧನಂಗೊಂಡು ಪುನಃ ಕೃತಾಂತಂ-
ಬೊಲಿರ್ಪರಾಹ್ವಾನಮನೀವರಲ್ತೇ
||೨೯||
(ಬಳಿಕ ಈ ಇಬ್ಬರೂ
ಧನವನ್ನು ಆಶಿಸುತ್ತಿರುವವರು
ತಮ್ಮ ಲಾಭಕ್ಕೆಂದು ಹೀಗೆ ಕೊಲ್ಲುತ್ತಾ
ಇದ್ದಾರೆ. ಹೀಗೆ
ಧನವನ್ನು ಕೊಂಡು, ಮತ್ತೆ
ಯಮನಂತೆ ಇರುವ ಇವರು ಆಹ್ವಾನವನ್ನು
ಕೊಡುತ್ತಾರೆ. )
ಉಪಜಾತಿ||
ಅಗಸ್ತ್ಯರೇ
ನಾಶನಗೆಯ್ದು ಕಾಯಿಂ
ಜಗತ್ತನೀ
ನೀಚರಿನೆಂದೆನುತ್ತುಂ
ಪೊಗೞ್ದು
ಶಿಷ್ಯಂ ನಿಜಭಕ್ತಿಯೊಳ್ ಪೇ
ೞ್ದಾಗಳ್
ಮುನೀಂದ್ರಂ ಸಲೆ ನೋಂತನಲ್ತೇ
||೩೦||
(ಅಗಸ್ತ್ಯರೇ,
ಇವರನ್ನು ನಾಶ
ಮಾಡಿ ಈ ನೀಚರಿಂದ ಜಗತ್ತನ್ನು
ಕಾಪಾಡಿ, ಎಂದು
ಹೊಗಳಿ ಶಿಷ್ಯನು ತನ್ನ ಭಕ್ತಿಯಲ್ಲಿ
ಹೇಳಿದನು. ಆಗ
ಮುನೀಂದ್ರನು ಅದಕ್ಕೆ ನಿಶ್ಚಯಿಸಿದನು.
)
ಅವರ್ಗಳಿರ್ವರ್
ಕರೆಯಲ್ಕೆ ಪೋದರ್
ಸುವಿಪ್ರರೆಲ್ಲರ್
ಘಟಜನ್ಮನುಂ ಮೇಣ್
ನವೀನಭೋಜ್ಯಂಗಳನೀವನೆಂದಂ-
ತವಿಪ್ರಭೂತಾನ್ನಮನಿತ್ತನಾಗಳ್
||೩೧||
(ಅವರಿಬ್ಬರೂ
ಕರೆದಾಗ ಎಲ್ಲ ಬ್ರಾಹ್ಮಣರೂ
ಅಗಸ್ತ್ಯರೂ ಹೋದರು. ಹೊಸದಾದ
ಭೋಜ್ಯಗಳನ್ನು ಕೊಡುತ್ತೇನೆ ಎಂದು
ಆಡಿನ ಮಾಂಸದಿಂದ ಮಾಡಿದ ಅನ್ನವನ್ನು
ಆಗ ಎಲ್ಲರಿಗೂ ಕೊಟ್ಟನು )
ಅದಲ್ತೆ
ವಾತಾಪಿಯ ದೇಹದಿಂದಂ
ಮೊದಲ್
ನೆಗೞ್ದಾತನಜಂಬೊಲಿರ್ಪಂ-
ದೆ
ದಗ್ಧಮಂ ಗೆಯ್ದು ರಸಾನ್ವಿತಂ
ಮೇಣ್
ಸದುಗ್ಧಪಾಕಂ
ಬುಧವರ್ಗಮೊಪ್ಪಲ್ ||೩೨||
(ಅದು ವಾತಾಪಿಯ
ದೇಹದಿಂದ ಆದದ್ದಲ್ಲವೇ,ಮೊದಲು
ಅವನು ಆಡಿನ ರೂಪವನ್ನು ಧರಿಸಿದ್ದ,
ಅದನ್ನು ಸುಟ್ಟು
ರಸಾನ್ವಿತವನ್ನಾಗಿ ಮಾಡಿ,
ದುಗ್ಧಸಹಿತವಾದ
ಪಾಕವನ್ನು ಬಂದ ಬ್ರಾಹ್ಮಣರೆಲ್ಲರೂ
ಒಪ್ಪುವಂತೆ ಮಾಡಿದನು.)
ಇಂದ್ರವಜ್ರಾ||
ಉಂಡಾದೊಡಂದಿಲ್ವಲನಾಗಿ
ತುಷ್ಟಂ
ಕಂಡಂ
ವಿದಗ್ಧರ್ಕಳ ಮೌಢ್ಯಮೆಂದುಂ
ಕೊಂಡಾಡುತುಂ
ಸರ್ವರನಲ್ಲಿಗೆಯ್ದಂ
ಖಂಡಿಪ್ಪವೊಲ್
ಗರ್ಜಿಸುತೆಂದನಿಂತು
||೩೩||
(ಎಲ್ಲರದ್ದೂ
ಊಟವಾದ ಮೇಲೆ ಇಲ್ವಲನು ಸಂತುಷ್ಟನಾದನು.
ವಿದ್ವಾಂಸರ
ಮೌಢ್ಯವಿದೆಂದು ಕಂಡನು.
ಎಲ್ಲರನ್ನೂ
ಕೊಂಡಾಡುತ್ತಾ ಅಲ್ಲಿಗೆ ಬಂದು
ಖಂಡಿಸುವಂತೆ ಗರ್ಜಿಸುತ್ತ ಹೀಗೆ
ಹೇಳಿದನು-)
ವಾತಾಪಿ
ನೀಂ ಬಾ ಪೊಱಗೆಂದು ಪೇೞ್ದಂ
ವಾತಾಪಿ
ಜೀರ್ಣೋ ಭವ ಎಂದಗಸ್ತ್ಯಂ
ಪೂತೋದರಕ್ಕಂ
ಕರದಿಂ ಪಳಂಚಲ್
ವಾತಾಪಿಯಾದಂ
ಮೃತನಂತುಟಲ್ಲಿ ||೩೪||
(“ವಾತಾಪಿ,
ನೀನು ಹೊರಗೆ
ಬಾ” ಎಂದು ಹೇಳಿದನು. ಅಗಸ್ತ್ಯರು
“ವಾತಾಪಿ ಜೀರ್ಣೋ ಭವ"(ವಾತಾಪಿ,
ನೀನು ಜೀರ್ಣವಾಗು)
ಎಂದು ಅಗಸ್ತ್ಯರು
ತನ್ನ ಹೊಟ್ಟೆಗೆ ಕೈಯಿಂದ ಸವರಿದಾಗ
ವಾತಾಪಿಯು ಅಲ್ಲಿಯೇ ಹಾಗೆಯೇ
ಮೃತನಾದನು)
ಉಪೇಂದ್ರವಜ್ರಾ||
ಕದನ್ನಮಂ
ನೀೞ್ದಪೆಯಲ್ತೆ ದುಷ್ಟಾ
ಮದೀಯಶಾಪಪ್ರಭವಾಗ್ನಿಯಿಂದಂ
ತ್ವದೀಯದೇಹಕ್ಕವಸಾನಮಕ್ಕೆ
ಇದೋ
ಕೊಳೆಂದಾಗಳಗಸ್ತ್ಯನೆಂದಂ ||೩೫||
(ಕದನ್ನವನ್ನು(ಕೆಟ್ಟ
ಭೋಜನವನ್ನು) ಕೊಡುವೆಯಲ್ಲವೇ
ದುಷ್ಟಾ! ನನ್ನ
ಶಾಪದ ಅಗ್ನಿಯಿಂದ ನಿನ್ನ ದೇಹಕ್ಕೆ
ಈಗಲೇ ಅವಸಾನವಾಗಲಿ, ಇದೋ
ತಗೋ!” ಎಂದು
ಅಗಸ್ತ್ಯನು ಹೇಳಿದನು )
ಇಂದ್ರವಜ್ರಾ||
ಆ
ಶಾಪದಿಂದಿಲ್ವಲನಂತ್ಯಮಾಗ-
ಲ್ಕಾಶಾಪರರ್ಗಪ್ಪುದೆ
ದುಃಖಮೆಂದಂ-
ತಾಶಾಪರೀತಂ
ಪಸರಿಪ್ಪವೊಲ್ ಮೌ
ನೀಶೋಪದೇಶಂ
ಕಥೆಯಿಂದೆ ಕೇಳ್ಗುಂ ||೩೬||
(ಆ ಶಾಪದಿಂದ
ಇಲ್ವಲನ ಅಂತ್ಯವಾಗಲು,
ಆಶಾಪರರಾದವರಿಗೆ-
ಅತಿಯಾದ ಆಸೆಯನ್ನು
ಮಾಡುವವರಿಗೆ ದುಃಖವಾಗುತ್ತದೆ
ಎಂದು ದಿಗಂತಗಳ ವರೆಗೆ ಪ್ರಸಾರವಾಗುವಂತೆ
ಮುನೀಂದ್ರನ ಉಪದೇಶವು ಈ ಕಥೆಯಿಂದ
ಕೇಳುತ್ತದೆ)
ಪೊಂದಿರ್ಪನತ್ತಲ್
ಮುನಿಪತ್ನಿಯೊಳ್ ತಾಂ
ಸೌಂದರ್ಯದಿಂ
ಮನ್ಮಥನಂದಮಿರ್ಪಾ
ನಂದಿಪ್ಪ
ಸತ್ಪುತ್ರನನಾತನಾದಂ
ಸಂದಂ
ದೃಢಸ್ಯುಪ್ರತಿಕೀರ್ತಿತಾತ್ಮಂ
||೩೭||
(ಅತ್ತ ಪತ್ನಿ
ಲೋಪಾಮುದ್ರೆಯಲ್ಲಿ,
ಸೌಂದರ್ಯದಿಂದ
ಮನ್ಮಥನ ರೂಪದವನಾದ, ಸಂತೋಷವನ್ನು
ಕೊಡುವ ಸತ್ಪುತ್ರನನ್ನು ಪಡೆದನು.
ಅವನು ದೃಢಸ್ಯು
ಎಂಬ ಹೆಸರಿನಿಂದ ಅತಿಶಯವಾಗಿ
ಖ್ಯಾತನಾದನು. )
ಶಾರ್ದೂಲವಿಕ್ರೀಡಿತ||
ಇತ್ತಲ್
ಸಂದಿರೆ ಕಾಲಕೇಯ ಹನನಂ ವಾತಾಪಿಯಾ
ಮೃತ್ಯುವುಂ
ಮತ್ತಂ
ರಾಕ್ಷಸರಿಲ್ವಲಾದಿಗಳ ಸಂಹಾರಂ
ವಿಹಾರಂ ಸದಾ
ಸತ್ತಿಂ
ಧರ್ಮಕಮಾದುದಂತೆ ಮುನಿಗಳ್ ತಾಂ
ನೋಂಪಿಯೊಳ್ ನಿಂತಿರಲ್
ಕತ್ತೆತ್ತಿರ್ದಳೆ
ಭೂಮಿ ಭಾರಮಿೞಿಯಲ್ ಚಿಂತಾವಿಹೀನಾತ್ಮಕಳ್
||೩೮||
(ಇತ್ತ ಕಾಲಕೇಯನ
ನಾಶವೂ, ವಾತಾಪಿಯ
ಮೃತ್ಯುವೂ, ಇಲ್ವಲನೇ
ಮೊದಲಾದ ರಾಕ್ಷಸರ ಸಂಹಾರವೂ
ಆಗಿರಲು, ಒಳ್ಳೆಯತನದಿಂದ
ಧರ್ಮಕ್ಕೆ ವಿಹಾರವಾಯಿತು.
ಮುನಿಗಳೂ ಸಹ
ತಮ್ಮ ವ್ತತಗಳಲ್ಲಿ ನಿಂತಿದ್ದರು.
ಭೂಮಿಯೂ ಭಾರವನ್ನು
ಕಳೆದು ಚಿಂತಾವಿಹೀನಳಾದವಳಾಗಿ
ಕತ್ತೆತ್ತಿದ್ದಳು )
ದೇವೇಂದ್ರಂ
ನಿಜಶೌರ್ಯದಿಂ ಬೞಿಕಮಾ ವೃತ್ರಾಖ್ಯನಂ
ಕೊಂದಿರಲ್
ನೋವಿಂ
ಭೂಸುರಹತ್ಯೆಯೆಂಬಗದಿನಂತಿರ್ದಂ
ವಲಂ ಕಾಣದೇ
ಈ
ವಿಶ್ವಕ್ಕವನಾದನಲ್ತೆ ಕೊನೆಯೆಂದೆಲ್ಲರ್
ವಿಚಾರಿಪ್ಪೊಡಂ
ದೈವೀ
ಲೋಕಕದಾರ್ ಪುರಂದರನ ಸತ್ ಸ್ಥಾನಕ್ಕೆ
ಮುಂ ಬರ್ಪರೋ ||೩೯||
(ಅತ್ತ ಆ ಬಳಿಕ,
ದೇವೇಂದ್ರನು
ತನ್ನ ಶೌರ್ಯದಿಂದ ವೃತ್ರ ಎಂಬ
ಹೆಸರಿನ ರಾಕ್ಷಸನನ್ನು ಕೊಂದು
ಹಾಕಿ ಅದರಿಂದ ಆದ ಬ್ರಹ್ಮಹತ್ಯಾದೋಷದಿಂದ
ನೋವಿನಿಂದ ಕಾಣದಂತೆ ಅಡಗಿಕೊಂಡನು.
ಈ ವಿಶ್ವಕ್ಕೆ
ಅವನ ಕೊನೆಯಾಯಿತು ಎಮದು ಎಲ್ಲರೂ
ವಿಚಾರಿಸಿ “ದೇವಲೋಕದಲ್ಲಿ
ಇಂದ್ರಪದವಿಗೆ ಮುಂದೆ ಯಾರು
ಬರುತ್ತಾರೋ” ಎಂದರು. )
ಮತ್ತೇಭವಿಕ್ರೀಡಿತಂ||
ಜಗದೊಳ್
ಶಕ್ರನ ತಾಣಮಾದುದಕಟಾ!
ಶೂನ್ಯಂ
ಸಕಾಲಂ ಗಡಾ
ಪುಗುವಂ
ಪೋಪಮೆನುತ್ತೆ ರಕ್ಕಸರೆ ಮೇಣ್
ಸಾರ್ವರ್ ಸದಾ ಯುದ್ಧಕಂ
ಸೊಗಮೇನಿಂತಿರೆ
ಸಲ್ವನೊರ್ವನಿರಲೀ ಸ್ಥಾನಕ್ಕೆ
ಸಲ್ಗುಂ ಬಲಂ
ಬಗೆಯಲ್ಕಾರೆನುತೆಲ್ಲ
ನಿರ್ಜರರೆ ಚಿಂತಿಪ್ಪಾಗಳಿಂತಾದುದೈ
||೪೦||
(ಅಯ್ಯೋ!
ಜಗತ್ತಿನಲ್ಲಿ
ಇಂದ್ರನ ಸ್ಥಾನವು ಶೂನ್ಯವಾಯಿತು,
ಇದೇ ಸಕಾಲ,
ಹೋಗೋಣ ಎಂದು
ರಾಕ್ಷಸರು ಸದಾ ಯುದ್ಧಕ್ಕೆ
ಬರುತ್ತಾರೆ, ಹೋಗಾದರೆ
ಸುಖವೆಲ್ಲಿದೆ, ಈ
ಸ್ಥಾನಕ್ಕೆ ಸಲ್ಲುವವನು ಒಬ್ಬನು
ಇರಲು ಬಲವು ಬರುತ್ತದೆ,
ಯಾರಿದ್ದಾರೆ
ಅಂತಹವರು" ಎಂದು
ಎಲ್ಲ ದೇವತೆಗಳೂ ಚಿಂತಿಸುತ್ತಿರುವಾಗ
ಹೋಗೆ ಆಯಿತು- )
ಮನುಜರ್ಗೊಳ್ಪಿನೊಳಾದನಲ್ತೆ
ನಹುಷಂ ಸತ್ಕೀರ್ತಿತಂ ಸರ್ವದಾ
ಜನರೊಳ್ಪಂ
ಬಗೆದಿರ್ಪನನ್ಯನೃಪರೊಳ್
ಸಲ್ವರ್ಕಳಾರೀತನಂ-
ತನಿಮೇಷರ್ಗಿವನಕ್ಕೆ
ರಾಜನದಱಿಂದಕ್ಕುಂ ಭವಿಷ್ಯಂ ಸೊಗಂ
ಪುನರಪ್ಯುತ್ತಮಧರ್ಮಮಿರ್ಕುಮಿಹದೊಳ್
ಕೇಳೆಂದನಾ ಬ್ರಹ್ಮನೇ ||೪೧||
(ಮನುಷ್ಯರಲ್ಲಿ
ಒಳ್ಳೆಯ ತನದಿಂದ ನಹುಷನೆಂಬ
ಕೀರ್ತಿವಂತನಾದ ರಾಜನಿದ್ದಾನೆ.
ಜನರಿಗೆ ಒಳ್ಳೆಯದನ್ನೇ
ಮಾಡುತ್ತಾನೆ. ಅವನಿಂದ
ಬೇರೆ ಯಾವ ನೃಪರಲ್ಲಿಯೂ ಇವನಂತೆ
ಸಲ್ಲುವವರು ಯಾರಿದ್ದಾರೆ!
ಅನಿಮೇಷರಾದ
ದೇವತೆಗಳಿಗೆ ಇವನೇ ರಾಜನಾಗಲಿ.
ಅದರಿಂದ ಭವಿಷ್ಯವು
ಚೆನ್ನಾಗುತ್ತದೆ, ಮತ್ತೆ
ಧರ್ಮವೂ ಉತ್ತಮರೀತಿಯಿಂದ ಇಹದಲ್ಲಿ
ನೆಲೆಸುತ್ತದೆ” ಎಂದು ಬ್ರಹ್ಮನೇ
ಹೇಳಿದನು)
ಪೃಥ್ವೀ||
ವಿರಿಂಚಿಯಿನಿತೆಂದು
ತಾನಮರಲೋಕಕಂ ರಾಜನಾ
ನರರ್ಕಳೊಡೆಯಂ
ಸಲಲ್ ನಹುಷನೆಂಬನಿಂದೊಳ್ಪಲಾ
ಪುರಂದರನ
ಕಂಡೊಡಂ ಮರಳಿ ಪೋಪನೀತಂ ಗಡಾ
ವರಂ
ಪುಡುಕಲೆಂದು ಪೋಗಿರಿಯೆನುತ್ತೆ
ಪೇಳಿರ್ದಪಂ ||೪೨||
(ಹೀಗೆ ವಿರಿಂಚಿಯು
ಹೇಳಿ, ಅಮರ
ಲೋಕಕ್ಕೆ ನರಲೋಕದ ಒಡೆಯನಾದ ನಹುಷ
ಎಂಬವನು ರಾಜನಾಗಿ ಸಲ್ಲುತ್ತಿರಲು,
ಒಳ್ಳೆಯತನದಿಂದ
"ಹಿಂದಿದ್ದ
ಪುರಂದರನು ಕಂಡ ಬಳಿಕ ತಾನು ಮರಳಿ
ಹೋಗುತ್ತಾನೆ, ಈಗ
ಅವನನ್ನು ಹುಡುಕಲು ಹೋಗಿರಿ"
ಎಂದೂ ಹೇಳಿದನು)
||ಇಂತಗಸ್ತ್ಯವಿವಾಹಮುಂ
ಇಲ್ವಲವಾತಾಪಿವಧೆಯುಮೆಂಬ ಪಂಚಮಂ
ಸರ್ಗಂ||
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ