ಮೊದಲ ಸರ್ಗವನ್ನು ಇಲ್ಲಿ ನೋಡಿ- ಉರ್ವಶೀಜನನವೃತ್ತಾಂತಂ
ಎರಡನೇ ಸರ್ಗವನ್ನು ಇಲ್ಲಿ ನೋಡಿ- ಅಗಸ್ತ್ಯಜನನವೃತ್ತಾಂತಂ
~ ತೃತೀಯಂ ಸರ್ಗಂ ~
೨೨-೦೫-೨೦೧೫
ವಿಯೋಗಿನೀ।।
ವಿಯೋಗಿನೀ।।
ಪರಮಾತ್ಮನ ಜಾನಿಸುತ್ತಿವಂ
ವರುಣಾತ್ಮೋದ್ಭವನಿರ್ದನೊರ್ಮೆಗಂ
ಸುರರಂ ನಿಜವೀರ್ಯದಿಂ ನಿಶಾ-
ಚರರಾಕ್ಷಸರೆಯ್ದು ಪೀಡಿಸಲ್ ||೧||
(ಒಮ್ಮೆ ವರುಣನ ಮಗನಾದ ಅಗಸ್ತ್ಯನು ಪರಮಾತ್ಮನನ್ನು ಧ್ಯಾನಿಸುತ್ತ ಇರುವಾಗ ದೇವತೆಗಳನ್ನು ನಿಶಾಚರರಾದ ರಾಕ್ಷಸರು ತಮ್ಮ ಶಕ್ತಿಯಿಂದ ಪೀಡಿಸುತ್ತಿರಲು)
ದೆಸೆಗೆಟ್ಟಿರೆ ಲೋಕಮೆಲ್ಲಮುಂ
ಪುಸಿಯಾಯ್ತೆಲ್ಲರ ರಕ್ಷೆಯಂತುಟೇ
ಪಸುಗಳ್ ನೆಲೆಯಿಲ್ಲದಾಗೆ ನಿ-
ಶ್ವಸನಂ ಮೇಣಪರಾಧಮಾದುದೈ ||೨||
(ಲೋಕವೆಲ್ಲ ದಿಕ್ಕುಗೆಟ್ಟಿರಲು, ಎಲ್ಲರ ರಕ್ಷೆಯೂ ಸುಳ್ಳಾಗಲು, ಹಸುಗಳೂ ನೆಲೆಯಿಲ್ಲದಾಗಿರಲು, ಉಸಿರನ್ನು ಹೊರಬಿಡುವುದೂ ಅಪರಾಧವಾಗಿತ್ತು )
ಹವಿಯಂ ಕುಡಲಾಱದಿರ್ದಪರ್
ಬುವಿಯೊಳ್ ವಿಪ್ರರಮರ್ತ್ಯಲೋಕಕಂ
ಕವಿದತ್ತವರಾತ್ಮಶಕ್ತಿಗಂ
ತವೆ ದೌರ್ಬಲ್ಯಮದಂತುಟಾದುದೋ ||೩||
(ಭೂಮಿಯಲ್ಲಿ ಬ್ರಾಹ್ಮಣರು ದೇವತೆಗಳಿಗೆ ಹವಿಸ್ಸನ್ನು ಕೊಡಲಾರದಾಗಿದ್ದರು. ಅವರ ಆತ್ಮಶಕ್ತಿಗೇ ದೌರ್ಬಲ್ಯ ಕವಿದಿತ್ತು.)
ದಿತಿಪುತ್ರರ ಕೃತ್ಯದಿಂದೆ ದೇ-
ವತೆಗಳ್ಗಂತುಟೆ ಧರ್ಮಕಂ ಸದಾ
ಚ್ಯುತಿಯಪ್ಪುದು ವೇದ್ಯಮೆಂದು ಮಾ-
ಪತಿಯುಂ ಚಿಂತಿತನಾಗದಿರ್ದಪಂ ||೪||
(ದಿತಿಯ ಪುತ್ರರ ಈ ಕೃತ್ಯದಿಂದ ದೇವತೆಗಳಿಗೆ ಹಾಗೆಯೇ ಧರ್ಮಕ್ಕೆ ಸದಾ ಕಾಲ ಚ್ಯುತಿಯಾಗುವುದು ನಿಶ್ಚಯವೆಂದು ತಿಳಿದೂ ವಿಷ್ಣುವು/ಶಿವನು ಚಿಂತಿತನಾಗದೇ ಇದ್ದನು )
ಬಲದಿಂದೆ ಸುರೇಶವೈರಿಸಂ
ಕುಲದೊಳ್ ವೃತ್ರನೆನಿಪ್ಪನಿರ್ದಪಂ
ಛಲದಿಂ ಸುರಪಾಂತ್ಯಕೆಂದು ವಿ-
ಹ್ವಲನಿಂ ತ್ವಷ್ಟೃವಿನಿಂದೆ ಪುಟ್ಟಿದಂ ||೫||
(ಸುರೇಂದ್ರನ ವೈರಿಸಂಕುಲದಲ್ಲಿ ಛಲದಿಂದ ಇಂದ್ರನ ನಾಶಕ್ಕೋಸ್ಕರವೇ ವಿಹ್ವಲನಾದ ತ್ವಷ್ಟೃವಿನಿಂದ ಹುಟ್ಟಿದ್ದ ಬಲವಂತನಾದ ವೃತ್ರನೆಂಬವನೊಬ್ಬನಿದ್ದನು.)
ಅಸುರಾಶ್ರಿತರಾಗಿ ದೋಷದೊಳ್
ಜಸಮಂ ಪೊಂದುವ ಕಾಂಕ್ಷೆಯಿಂದೆ ಮೇಣ್
ಕೆಸಱೊಳ್ ಪುೞು ಬಾೞ್ವವೊಲ್ ನೆಗ-
ೞ್ದೆದಿರ್ದರ್ ದನುಜರ್ಕಳಾವಗಂ ||೬||
(ದನುಜರು, ಕೆಸರಿನಲ್ಲಿ ಹುಳು ಬಾಳುವಂತೆ ರಾತ್ರಿಯ ಹೊತ್ತಿನಲ್ಲಿ ಅಸುರರಲ್ಲಿ ಆಶ್ರಯವನ್ನು ಪಡೆದು ಯಶಸ್ಸನ್ನು ಪಡೆಯುವ ಆಕಾಂಕ್ಷೆಯನ್ನು ಹೊಂದಿದವರಾಗಿದ್ದರು)
ಎನೆ ಕಶ್ಯಪನಿಂದೆ ಪುಟ್ಟಿದೊ-
ರ್ವನೆ ಕಾಲಾಸುತ-ಕಾಲಕೇಯನಾ-
ತನೆ ಧೂರ್ತಪನೆಂಬವೊಲ್ ಸ್ವಯಂ
ಜನರಂ ಪೀಡಿಸಿ ತೋಷಿಪಂ ಗಡಾ ||೭||
(ಹೀಗಿರಲು ಕಶ್ಯಪನಿಂದ ಹುಟ್ಟಿದ ಒಬ್ಬ ಕಾಲಾ ಎಂಬುವವಳ ಮಗನಾದ ಕಾಲಕೇಯನೆಂಬವನು ಧೂರ್ತರ ಅಧಿಪತಿಯಂತೆ ಸ್ವಯಂ ಜನರನ್ನು ಪೀಡಿಸಿ ಸಂತೋಷಪಡುತ್ತಿದ್ದನು)
ಪಗಲಾಗಿರೆ ಸಾಗರಾಂತರಂ-
ಬುಗುವಂ ರಾತ್ರಿಯೊಳೆಯ್ದು ಪೀಡಿಪಂ
ಜಗತೀತಲಯಜ್ಞಭಂಜಕಂ
ಬಗೆಯೊಳ್ ದೌಷ್ಟ್ಯಮೆ ತುಂಬಿರಲ್ಕಿವಂ ||೮||
(ಭೂಮಿಯಲ್ಲಿ ನಡೆಯುವ ಯಜ್ಞಗಳ ನಾಶವನ್ನು ಮಾಡುವವನಾದು ಇವನು, ಮನಸ್ಸಿನಲ್ಲಿ ದುಷ್ಟತನವೇ ತುಂಬಿಕೊಂಡಿರಲು ಹಗಲಾಗಿದ್ದಾಗ ಸಾಗರದ ಒಳಗೆ ಸೇರಿಕೊಳ್ಳುತ್ತಿದ್ದನು. ರಾತ್ರಿಯಲ್ಲಿ ಬಂದು ಪೀಡಿಸುತ್ತಿದ್ದನು.)
ವಿರಮಿಪ್ಪ ಜನರ್ಗೆ ಭೀತಿಯಿಂ
ಬರದಾಯ್ತಣಮುಂ ಸುನಿದ್ರೆಯೇ
ಅರುಣೋದಯಮಪ್ಪ ವೇಳೆಯೊಳ್
ಶರದಭ್ರಂಬೊಲೆ ಮಾಯಮಪ್ಪನೈ ||೯||
(ಅರುಣೋದಯವಾಗುವ ವೇಳೆಯಲ್ಲಿ ಶರತ್ಕಾಲದ ಮೋಡದಂತೆ ಮಾಯವಾಗುತ್ತಿದ್ದ ಈತನ ನೆನೆದು ವಿರಮಿಸುವ ಜನರಿಗೆ ರಾತ್ರಿಯಲ್ಲಿ ಹೆದರಿಕೆಯಿಂದ ಸ್ವಲ್ಪವೂ ನಿದ್ರೆಯೇ ಬರುತ್ತಿರಲಿಲ್ಲ. )
ಸಲೆ ಕೇಳಿಗಮಿಂದ್ರಜಾಲಿಕಂ
ನೆಲನೊಳ್ ಪಾಸಿದ ವಸ್ತುವೆಲ್ಲಮಂ
ಕಲೆಸಿಟ್ಟವೊಲಂತ್ಯದೊಳ್ ಖಲಂ
ಜಲಧಿಸ್ಥಾನದೆ ಗೌಪ್ಯಮಾಗಿಪಂ ||೧೦||
(ಆಟವನ್ನು ತೋರಿಸಲು ಇಂದ್ರಜಾಲಿಕನು ನೆಲದಲ್ಲಿ ಹಾಸಿದ ವಸ್ತುಗಳೆಲ್ಲವನ್ನೂ ಅಂತ್ಯದಲ್ಲಿ ಕಲೆಸಿಟ್ಟುಕೊಳ್ಳುವಂತೆ ಇವನೂ ಎಲ್ಲವನ್ನೂ ಸಮುದ್ರದಡಿಯಲ್ಲಿ ಗೌಪ್ಯವಾಗಿಸುತ್ತಿದ್ದ)
ಅವನೆಂತುಟು ವೀರನಿರ್ಪನೋ
ಧವನಾರೀತನ ಗುಣ್ಪಿಗೆಂಬುದಂ
ತವೆ ಕಾಣಲದೆಂತು ಶಕ್ಯಮೆಂ-
ದಿವರಿತ್ತಲ್ ಮಿಗೆ ಯೋಚಿಸಿರ್ದಪರ್ ||೧೧||
(ಅವನೆಂತು ವೀರನೋ! ಇವನ ಗುಂಪಿಗೆ ಯಾರು ನಾಯಕನಾದರು ಯಾರು! ಅವನನ್ನು ಕಾಣುವುದಾದರೂ ಹೇಗೆ? ಎಂದು ದೇವತೆಗಳೆಲ್ಲ ಇತ್ತ ಯೋಚಿಸುತ್ತಿದ್ದರು. )
ಗುರುವಿಂ ತಿಳಿಯುತ್ತುಮಿರ್ದುದಂ
ಸುರಪಂ ನಂಬುತೆ ಪಾಲಿಸುತ್ತಿರಲ್
ಶರಧಿಸ್ಥಿತಕಾಲಕೇಯನಂ
ತಱಿಯಲ್ಕಾಱದೆ ಸೋಲ್ತು ಚಿಂತಿಸಲ್ ||೧೨||
(ಗುರುವಿನಿಂದ ತಿಳಿಯುತ್ತಿರುವುದನ್ನು ಇಂದ್ರನು ನಂಬುತ್ತ ಪಾಲಿಸುತ್ತಿರುವಾಗ ಸಮುದ್ರದಲ್ಲಿ ನೆಲೆಯಾದ ಕಾಲಕೇಯನನ್ನು ತರಿಯಲಾರದೇ ಸೋತು ಚಿಂತಿಸುತ್ತಿದ್ದನು. )
ಪರಮಾತ್ಮನೊಳಕ್ಕೆ ಬಿನ್ನಪಂ
ಪರಿಹಾರಂಗಳ ಕೋಶಮಾತನೇ
ಗುರುವೀ ಜಗದೆಲ್ಲ ಸೃಷ್ಟಿಗಂ
ಚಿರದೊಳ್ ಪೋಪುದು ಯುಕ್ತಮೆದು ತಾಂ ||೧೩||
(ಪರಮಾತ್ಮನಲ್ಲಿ ಬಿನ್ನಹವಾಗಲಿ. ಪರಿಹಾರಗಳ ನಿಧಿಯಾಗಿರುವವನು ಅವನೇ ಆಗಿದ್ದಾನೆ. ಈ ಜಗತ್ತಿನ ಎಲ್ಲ ಸೃಷ್ಟಿಗೆ ಆತನೇ ಗುರುವಾಗಿದ್ದಾನೆ. ಚಿರದಲ್ಲಿಯೇ ಅಲ್ಲಿಗೆ ಹೋಗುವುದು ಯುಕ್ತ)
ಅಱಿತಂ ಸ್ವಕಲೋಕಸಾಕದಿಂ
ಸುರಪಂ ಸಾರ್ದು ವಿಹಂಗವಾಹನಂ-
ಗಱುಪಲ್ ಜಯಮಕ್ಕೆನುತ್ತೆ ಶ್ರೀ-
ಹರಿಯಿಂತೆಂದನವಂಗೆ ಲೀಲೆಯೊಳ್||೧೪||
(ಎಂದು ತಿಳಿದು,ತನ್ನ ಲೋಕದಿಂದ ಇಂದ್ರನು ಸಾಗಿ, ವಿಹಂಗವಾಹನನಾದ ಶ್ರೀವಿಷ್ಣುವಿಗೆ ಜಯವಾಗಲಿ ಎಂದು ಹೇಳುತ್ತಾ ಇದನ್ನು ಅರುಹಲು ಶ್ರೀಹರಿ ಅವನಿಗೆ ಲೀಲೆಯಲ್ಲಿ ಹೀಗೆಂದನು )
ಅಮರೇಶ್ವರ! ಪೇೞ್ ನಿದಾಘದೊಳ್
ಸುಮಮಪ್ಪಂದದ ವಕ್ತ್ರಮೇಕೆ ಮೇಣ್
ಕಮಲಾಸನಸೃಷ್ಟವಿಶ್ವದೊಳ್
ಕ್ರಮದಿಂ ಸರ್ವಮುಮಾಗುತಿಲ್ಲಮೇಂ ||೧೫||
(ಅಮರೇಶ್ವರ! ಬೇಸಿಗೆಯ ಕಾಲದಲ್ಲಿ ಹೂವು ಬಾಡುವಂತೆ ನಿನ್ನ ಮುಖವೇಕೆ ಬಾಡಿದೆ. ಕಮಲಾಸನನಾದ ಬ್ರಹ್ಮ ಸೃಷ್ಟಿಸಿದ ವಿಶ್ವದಲ್ಲಿ ಎಲ್ಲವೂ ಕ್ರಮದಿಂದ ನಡೆಯುತ್ತಿಲ್ಲವೇ ? )
ಅಥವಾ ದನುಜರ್ಕಳಿಂದೆ ಸತ್-
ಪಥಕಂ ಕಷ್ಟಮೆನಿತ್ತು ಬಂದುದೇಂ
ಪೃಥಿವೀಶ್ವರರಿರ್ಪರಲ್ಲವೇಂ
ಮಥಿತಜ್ಞಾನದೆ ಧರ್ಮದಿಂದೆ ಪೇೞ್ ||೧೬||
(ಅಥವಾ ದನುಜರಿಂದ ಒಳ್ಳೆಯ ಮಾರ್ಗಕ್ಕೆ ಕಷ್ಟಗಳೇ ಬಂದಿವೆಯೇನು! ಭೂಮಿಯ ರಾಜರೆಲ್ಲ ಧರ್ಮಪರಾಯಣರಾಗಿ ಇದ್ದಾರಲ್ಲವೇ! ಹೇಳು )
ಹಿತಮಪ್ಪವೊಲೇನಗೆಯ್ವುದೋ
ಮಿತಮೇ ಶಕ್ತಿಯುಮಿಂತು ನಿನ್ನೊಳಂ
ಕೃತಮೇನಪರಾಧಮಾದುದೊ
ಸ್ಮೃತಿಗಂ ಬಾರದು ಪೇೞೆನಲ್ಕವಂ ||೧೭||
(ಹಿತವಾಗುವಂತೆ ಏನನ್ನು ಮಾಡುವುದು! ಹೀಗೆ ನಿನ್ನ ಶಕ್ತಿಯೂ ಮಿತವಾಗಿಬಿಟ್ಟಿದೆಯೇ! ಮಾಡಿದ್ದೇನಾದರೂ ಅಪರಾಧವಾಗಿದೆಯೇ! ನೆನಪಿಗೆ ಬರುತ್ತಿಲ್ಲ. ಹೇಳು! ಎಂದು ಹೇಳಲು ಅವನು- )
ಮಧುರಧ್ವನಿಗೇಳ್ದು ತೋಷದಿಂ
ವಿಧಿಯಿಂದಾದುದೆ ವಿಸ್ಮೃತಂ ಗಡಾ!
ಮಧುಕೈಟಭಜಿನ್ಮಹೀಧರಾ
ಬುಧರೀ ಜನ್ನಕೆ ಕಷ್ಟಮಾದುದೈ ||೧೮||
(ಮಧುರವಾದ ಧ್ವನಿಯನ್ನು ಕೇಳಿ ಸಂತೋಷದಿಂದ “ಮಧುಕೈಟಭರನ್ನು ಗೆಲಿದವನೇ! ವಿಧಿಯಿಂದ ಮರೆವಾಗುವುದೇ! ಭೂಮಿಯನ್ನು ಧರಿಸಿದವನೇ! ಬುಧರ ಯಜ್ಞಕ್ಕೆ ಸಂಕಷ್ಟಗಳೊದವಿವೆ” )
೨೩-೦೫-೨೦೧೫
೨೩-೦೫-೨೦೧೫
ಹರಿ! ಮಾಧವ! ಕಷ್ಟಮೆಂಬುದಾ-
ಸುರನಂತಿಂದಿದೊ ಬಂದುದೇ! ಶುಭಂ-
ಕರ! ಯಜ್ಞದ ದೀಕ್ಷಿತರ್ಕಳಂ
ತಱಿದುಣ್ಬಂ, ಖಲಚರ್ಯೆ ದುಸ್ಸಹಂ ||೧೯||
(ಹರಿಯೇ! ಮಾಧವನೇ! ಕಷ್ಟವೆನ್ನುವುದು ಆ ರಾಕ್ಷಸನಂತೆ ಬಂದಿತೇ! ಶುಭವನ್ನೇ ಉಂಟು ಮಾಡುವವನೇ! ಯಜ್ಞದ ದೀಕ್ಷಿತರುಗಳನ್ನೇ ಆತ ಕತ್ತರಿಸಿ ತಿನ್ನುತ್ತಿದ್ದಾನೆ. ಕೆಟ್ಟವರ ಚರ್ಯೆ ದುಸ್ಸಹವಾಗಿದೆ.)
ಭಯಮಪ್ಪುದು ಭೂಸುರರ್ಕಳಂ
ನಯಹೀನರ್ಕಳೆ ಕೊಂದು ಪೀಡಿಸಲ್
ದಯೆಗಾಕರ! ದೇವಲೋಕದಿಂ
ಜಯಮೇ ದೂರಕೆ ಪೋದುದೇಂ ವಲಂ ||೨೦||
(ಭೂಸುರರಾದ ಬ್ರಾಹ್ಮಣರನ್ನು ನಯವಿಲ್ಲದ ರಾಕ್ಷಸರು ಕೊಂಡು ಪೀಡಿಸುವುದನ್ನು ನೋಡಿದರೆ ಭಯವಾಗುವುದು. ದಯೆಗೆ ಆಕರವಾದ ಹರಿಯೇ! ದೇವಲೋಕದಿಂದ ಗೆಲುವು ಎನ್ನುವುದೇ ದೂರಕ್ಕೆ ಹೋಗಿದೆಯೇ! )
ಎನುತೀ ಪರಿಯಿಂದೆ ಶಕ್ರನಾ-
ಎನುತೀ ಪರಿಯಿಂದೆ ಶಕ್ರನಾ-
ತನ ಕಷ್ಟಂಗಳನೆಂದೊಡತ್ತಣಿಂ
ಸ್ವನಮೆಯ್ದುದು ನಾಭಿಪದ್ಮಸಂ-
ಸ್ಥನ ವಾಣೀಶನ ನಾಲ್ಮೊಗಂಗಳಿಂ ||೨೧||
(ಎಂದು ಈ ಪರಿಯಿಂದ ಇಂದ್ರನು ಅವನ ಕಷ್ಟಗಳನ್ನು ಹೇಳಿದಾಗ ಅತ್ತಣಿಂದ ವಿಷ್ಣುವಿನ ನಾಭಿಯ ಕಮಲದಲ್ಲಿ ಕುಳಿತ ಬ್ರಹ್ಮನ ನಾಲ್ಕು ಮೊಗಗಳಿಂದಲೂ ಸ್ವರವೊಂದು ಹೊರ ಬಂದಿತು)
ನಡೆ! ಕುಂಭಜನಿರ್ಪನಲ್ತೆ ಕಾ-
ಪಿಡಲಾರ್ಪಂ, ಭವದೀಯದುಃಖಮಂ
ತಡೆವಂ ರಕ್ಷೆಯನೀವನಲ್ತೆ ನೋ-
ೞ್ಪೊಡೆ ನಿಶ್ಚಿಂತನೆ ಸಲ್ವೆಯೆಂದಪಂ ||೨೨||
(“ನಡೆ! ಕುಂಭದಿಂದ ಜನಿಸಿದವನಾದ ಅಗಸ್ತ್ಯನಿದ್ದಾನಲ್ಲವೇ! ನಿಮ್ಮನ್ನು ಕಾಪಾಡಲು ಸಮರ್ಥನಾದವನು, ನಿಮ್ಮ ದುಃಕವನ್ನು ತಡೆಯುವವನು, ರಕ್ಷಣೆಯನ್ನು ಕೊಡುವವನು, ನೋಡಿದರೆ ಅವನಿಂದ ನೀವು ನಿಶ್ಚಿಂತರಾಗುವಿರಿ” ಎಂದನು)
ಮಣಿದಂ ಮಘವಂ ವಿರಿಂಚಿಗಂ
ಗುಣದಿಂ ಮೀರ್ದಪ ವಿಷ್ಣುವಿಂಗೆ ತಾಂ
ಗಣಮಂ ಕರೆದೊಯ್ದನಾ ತಪೋ-
ಗ್ರಣಿಯಿರ್ಪಲ್ಲಿಗೆ ತೋಷಮೊಂದುತುಂ ||೨೩||
(ಆಗ ಇಂದ್ರನು ಬ್ರಹ್ಮನಿಗೆ ಮಣಿದನು. ತ್ರಿಗುಣಗಳೀಂದ ಮೀರಿದವನಾದ ವಿಷ್ಣುವಿಗೂ ನಮಸ್ಕರಿಸಿದನು. ಬಳಿಕ ತನ್ನ ಗಣವನ್ನು ಕರೆದುಕೊಂಡು ತಪೋಗ್ರಣಿಯಾದ ಅಗಸ್ತ್ಯನಿದ್ದಲ್ಲಿಗೆ ಬಂದನು)
ವನದೊಳ್ ಕುಟಿಯೊಳ್ ತಪಸ್ವಿ ನಿ-
ರ್ಜನದೊಳ್ ಮೌನದೊಳಾತ್ಮವೇದಮಂ
ಘನಮಂ ಸಲೆ ಚಿಂತಿಸುತ್ತಿರ-
ಲ್ಕನಿಮೇಷರ್ಕಳೆ ಸಾರ್ದರಲ್ಲಿಗಂ ||೨೪||
(ವನದಲ್ಲಿ ಕುಟೀರದಲ್ಲಿ ತಪಸ್ವಿಯು ನಿರ್ಜನಪ್ರದೇಶದಲ್ಲಿ ಮೌನದಲ್ಲಿ ಘನವಾದ ಆತ್ಮವೇದವನ್ನು ಚಿಂತಿಸುತ್ತಿದ್ದಾಗ ಅನಿಮೇಷರಾದ ದೇವತೆಗಳು ಅಲ್ಲಿಗೆ ಬಂದರು)
ಎಲೆ! ಮೌನಿ ಪರಾತ್ಮತತ್ತ್ವದೊಳ್
ನೆಲೆಯಾಗಿರ್ಪ ಮನಸ್ಸನಿತ್ತ ಚಂ-
ಚಲರೊಳ್ ಪರಿಸುತ್ತೆ ಕಾಯ್ವುದೈ
ಖಲರಿಂ ರಾಕ್ಷಸಬಾಧೆಯಿಂದೆ ನೀಂ ||೨೫||
(ಎಲೆ ಮಹರ್ಷಿಯೇ! ಪರತರವಾದ ಆತ್ಮತತ್ತ್ವದಲ್ಲಿ ನೆಲೆಯಾಗಿರುವ ಮನಸನ್ನು ಇಲ್ಲಿ ಚಂಚಲರಲ್ಲಿ ಸ್ವಲ್ಪ ಹರಿಸಿ ಖಲರಾದ ರಾಕ್ಷಸರ ಬಾಧೆಯಿಂದ ನಮ್ಮನ್ನು ನೀನು ಕಾಯಬೇಕು)
ದಿನದೊಳ್ ಜಲಗರ್ಭಸಂಸ್ಥರಿಂ-
ದೆ ನಿಶಾವೇಲೆಯೊಳಾಗುತಿರ್ಪುದೀ
ಜನಪೀಡನೆ ಸರ್ವವೇದ್ಯ! ಸಂ-
ಹನನಕ್ಕಂ ಕೃಪೆ ಮಾೞ್ಪುದೀಗಳೇ ||೨೬||
(ಹಗಲಿನಲ್ಲಿ ಸಾಗರದ ಗರ್ಭದಲ್ಲಿ ಇರುವವರಿಂದ ರಾತ್ರಿಯ ಹೊತ್ತಿನಲ್ಲಿ ಈ ಜನರ ಪೀಡನೆಯಾಗುತ್ತಿದೆ. ಸರ್ವವೇದ್ಯನೇ! ಅವನ ಸಂಹಾರಕ್ಕೆ ಕೃಪೆದೋರಬೇಕು!)
ಚಿರದಿಂ ತಪದಿಂದೆ ಸಾಧಿಸಿ-
ರ್ಪುರುತೇಜಸ್ಸಿನ ಶಕ್ತಿಯಿಂ ಪರಂ-
ಪರೆಯೀ ನಯರಕ್ಷೆಗೆಂದು ಮುನೀ
ಶ್ವರನೇ ಬಾ ಎನುತಲ್ಲಿ ಯಾಚಿಸಲ್ ||೨೭||
(ಶೀಘ್ರದಲ್ಲಿ ತಪಸ್ಸಿನಿಂದ ಸಾಧಿಸಿದ ಈ ಪ್ರಖರವಾದ ತೇಜಸ್ಸಿನ ಶಕ್ತಿಯಿಂದ ಪರಂಪರೆಯ ಈ ಧರ್ಮವನ್ನು ರಕ್ಷಿಸಲು ಬಾ ಓ ಮುನೀಶ್ವರನೇ! ಎನ್ನುತ್ತ ಅಲ್ಲಿ ಬೇಡಿಕೊಳ್ಳಲು)
ದಿವಿಜೇಂದ್ರನ ಮಾತಿನಿಂದವಂ
ಜವದಿಂ ನೋಡುತಗಸ್ತ್ಯನೆಯ್ದಿದಂ
ತವಸೈನ್ಯಸಹಾಯಕೆಂದು ತಾ-
ನವರಂ ಸೇರ್ದಪನಂತು ನೋಂತವಂ ||೨೮||
(ಇಂದ್ರನ ಮಾತಿನಿಂದ ಅಗಸ್ತ್ಯನು ತತ್ಕ್ಷಣದಲ್ಲಿಯೇ ಎದ್ದು ಅವರ ಸಹಾಯಕ್ಕೆಂದು ವ್ರತಿಯಾದವನಾಗಿ ಅವರನ್ನು ಸೇರಿಕೊಂಡ.)
ತಪದೊಳ್ ಕುಳಿತಿರ್ದು ಕಾಲದೊಳ್
ದ್ವಿಪದಂ ಜಿಡ್ಡಿನೊಳೊಂದಿ ಕರ್ಪನಂ-
ತುಪಹಾಸಿಸೆ ಕೃಷ್ಣಚರ್ಮಮಂ
ಜಪಿಪರ್ ವಂದಿಸಿದರ್ ಬೞಿಕ್ಕಮಾ ||೨೯||
(ತಪಸ್ಸಿನಿಂದ ಕುಳಿತು ಕಾಲದಲ್ಲಿ ಎರಡೂ ಕಾಲುಗಳಲ್ಲಿ ಜಿಡ್ಡುಗಟ್ಟಿ ಆದ ಕಪ್ಪು ಬಣ್ಣ ಕೃಷ್ಣಾಜಿನವನ್ನು ಉಪಹಾಸ ಮಾಡುವಂತಿತ್ತು. ಆಗ ಜಪಿಸುತ್ತಿರುವವರು ಅವನನ್ನು ವಂದಿಸಿದರು. )
೨೪-೦೫-೨೦೧೫
ಹುತಭುಙ್ನಿಭಕಾಂತಿ ಕೇಶದೊಳ್
ಹುತಭುಙ್ನಿಭಕಾಂತಿ ಕೇಶದೊಳ್
ನುತಚಂದ್ರಾರ್ಕರೆ ಚಕ್ಷುಗಳ್ ಜಗ-
ದ್ದ್ಯುತಿದಾಯಕಮೌನಿಯಂ ಸುರರ್
ಸ್ತುತಿಸಿರ್ದರ್ದರ್ ತಿಮಿರಾಂತ್ಯಕೆಂದವರ್ ||೩೦||
(ಅಗ್ನಿಯ ಕಾಂತಿಯಿಂದ ಇರುವ ಕೇಶಗಳುಳ್ಳ, ಸೂರ್ಯಚಂದ್ರರೇ ಕಣ್ಣುಗಳಾಗಿ ಉಳ್ಳ ಜಗತ್ತಿಗೇ ಬೆಳಕನ್ನು ಕೊಡುವ ಮುನಿಯನ್ನು ದೇವತೆಗಳು ತಮ್ಮ ಪಾಲಿಗೆ ಒದವಿದ ತಿಮಿರವನ್ನು ನಾಶಮಾಡಲು ಸ್ತುತಿಸುತ್ತಿದ್ದರು.)
ಮೆದುವಾತಿನ ರಸ್ಯಭಾವದಿಂ
ಪದನಿಟ್ಟಂ ಬುಧವೃಂದಮೊಪ್ಪಿರ-
ಲ್ಕಿದು ಸಾರ್ಥಕಮಾಗಿ ಕಾವ್ಯಕೋ-
ವಿದರಂ ಪೋಲ್ವನೆ ಮೌನಿ ಕಾರ್ಯದಿಂ ||೩೧||
(ಮೃದುವಾದ ಮಾತಿನಿಂದ ರಸ್ಯವಾದ ಭಾವದಿಂದ ಜ್ಞಾನಿಗಣವೂ ದೇವತೆಗಳ ಗಣವೂ ಒಪ್ಪುವಂತೆ ಸಾರ್ಥಕವಾಗಿ ಪದವನ್ನು (ಹೆಜ್ಜೆಯನ್ನು/ಶಬ್ದವನ್ನು) ಇಡುತ್ತಿರುವ ಈ ಮುನಿ ತನ್ನ ಕಾರ್ಯದಿಂದ ಕಾವ್ಯಕೋವಿದರನ್ನು ಹೋಲುತ್ತಿದ್ದನೇ!)
ಕಠಿನತ್ವಮೊ ಬಾಹ್ಯದಿಂದೆ ಕ-
ರ್ಮಠನೋ ನೋೞ್ಪೊಡೆ ಚಿತ್ತದಿಂ ಸದಾ
ಪಠಿತೋಜ್ವಲವೇದನೀತನೇ
ಪಿಠರೇಜಾತನಗಸ್ತ್ಯನಾಮಕಂ||೩೨||
(ಈ ಕರ್ಮಠನನ್ನು ನೋಡಿದರೆ ಚಿತ್ತದಲ್ಲಿ ಸದಾ ಉಜ್ವಲವಾದ ವೇದಗಳನ್ನು ಓದಿದ ಕುಂಭಸಂಭವನಾದ ಅಗಸ್ತ್ಯನೆಂಬವನು, ಅವನಲ್ಲಿ ಕಠಿನತ್ವವೆಂಬುದು ಬಾಹ್ಯದಿಂದ ಮಾತ್ರ.)
ಅಹಿತಾನ್ವಯನಾಶನೋತ್ಸುಕಂ
ಗ್ರಹಿಸಿರ್ದಂ ಮುನಿಹಸ್ತದಗ್ರಮಂ
ಮಹಿಯೊಳ್ ಖಲಕಾಲಕೇಯನಾ
ಗಹನಾಂಭೋಧಿಗೆ ದಾರಿದೋರಿಸಲ್||೩೩||
(ಶತ್ರುಗಳನ್ನು ನಾಶನ ಮಾಡುವುದರಲ್ಲಿ ಉತ್ಸುಕನಾಗಿರುವ ಇಂದ್ರನು ಖಲನಾದ ಕಾಲಕೇಯನಿದ್ದ ತಾಣವಾದ ಸಮುದ್ರವನ್ನು ತೋರಿಸಲೆಂದು ಮುನಿ ಅಗಸ್ತ್ಯನ ಕೈಯ ತುದಿಯನ್ನು ಹಿಡಿದುಕೊಂಡು ಕರೆದೊಯ್ಯುತ್ತಿದ್ದನು )
ದಿನದೊಳ್ ದಿನಪಂ ಜ್ವಲಿಪ್ಪೊಡಂ
ಘನದಾ ಬೆಳ್ಗೊಡೆಯಂ ಶಚೀಶ್ವರಂ
ಮುನಿಗಂ ಪಿಡಿದಿರ್ದನಿತ್ತ ವೀ-
ಜನಮಂ ವಾಯುವೆ ಬೀಸುತಿರ್ದಪಂ||೩೪||
(ಹಗಲಿನಲ್ಲಿ ಸೂರ್ಯನು ಪ್ರಜ್ವಲಿಸುತ್ತಿರುವಾಗ ಶಚೀಪತಿಯಾದ ಇಂದ್ರನೇ ಮುನಿಗೆ ಮೋಡಗಳ ಬೆಳ್ಗೊಡೆಯನ್ನು ಹಿಡಿದಿದ್ದನು. ಇತ್ತ ವಾಯುವೇ ಬೀಸಣಿಕೆಯನ್ನು ಬೀಸುತ್ತಿದ್ದನು)
ವರುಣಾತ್ಮಜನಾಗಿಯುಂ ಸ್ವಯಂ
ವರುಣಂ ಸಿರ್ಪನಿಯಿಂದೆ ತಣ್ಪ ನೀ-
ೞ್ದಿರೆ ಪಾಪಮದಾದುದಲ್ತು ಭೂ-
ಸುರರಾ ಶ್ರೇಷ್ಠತಪಃಪ್ರಭಾವಮೈ ||೩೫||
(ಇವನು ಸ್ವಯಂ ವರುಣನ ಮಗನಾಗಿದ್ದರೂ ವರುಣನೇ ಸೀರ್ಪನಿಗಳಿಂದ ತಂಪನ್ನು ನೀಡುತ್ತಿದ್ದನು. ಅದು ಪಾಪವಾಗಲಿಲ್ಲ. ಭೂಸುರನ ಶ್ರೇಷ್ಠವಾದ ತಪಸ್ಸಿನ ಫಲವಾಗಿತ್ತು.)
ಘಟಸಂಭವತೇಜದಿಂದೆ ಸಂ-
ಕಟಮಾದತ್ತಸುರರ್ಗೆ ಸಜ್ಜನ-
ಚ್ಛಟೆಯಿಂ ಖಲನಾಶಮಪ್ಪುದು-
ತ್ಕಟತಾಪಂ ತಿಮಿರಾಶ್ರಿತರ್ಗಲಾ ||೩೬||
(ಘಟಸಂಭವನಾದ ಅಗಸ್ತ್ಯಬ ತೇಜಸ್ಸಿನಿಂದ ಅಸುರರಿಗೆ ಸಂಕಟವಾಯ್ತು. ಸಜ್ಜನರ ಕಾಂತಿಯಿಂದ ಖಲರ ನಾಶವಾಗುವುದು. ಕತ್ತಲೆಯನ್ನು ಆಶ್ರಯಿಸಿದವರಿಗೆ ಉತ್ಕಟವಾದ ತಾಪವುಂಟಾಗುವುದು )
ಪುಷ್ಪಿತಾಗ್ರ||
ಗಗನಕೆ ವನಮಾರ್ಗದಿಂದಡರ್ದರ್
ಸೊಗದಿನಗಸ್ತ್ಯಸುರರ್ಕಳೆಲ್ಲರುಂ ಮೇಣ್
ಖಗಕುಲಮೊಲವಿಂದೆ ಕೂಗುತಾಗಳ್
ಬಗೆಯಿನೆ ಸ್ವಾಗತಮೆಂದು ಪೇೞ್ದುದಲ್ತೇ ||೩೭||
(ಕಾಡಿನಿಂದ ಸೊಗವಾಗಿ ಆಗ ಅಗಸ್ತ್ಯನೂ ಉಳಿದ ದೇವತೆಗಲೂ ಆಕಾಶಕ್ಕೆ ಏರಿದರು. ಪಕ್ಷಿಸಂಕುಲವು ಒಲವಿನಿಂದ ಕೂಗುತ್ತ ಇವರಿಗೆ ಸ್ವಾಗತ ಎಂದು ಹೇಳುತ್ತಿತ್ತು )
ಶರಧಿಯೊಳಗೆ ರಾಕ್ಷಸರ್ಕಳಿರ್ಪರ್
ಸುರರವಿರೋಧಿಗಳಂತು ರಾತ್ರಿಯಾಗಲ್
ಪೊಱಮಡುತುಱೆ ಪೀಡಿಸಲ್ಕೆ ನೋಂತರ್
ನೆಱವಿಗೆ ವೃತ್ರನ ಮಿತ್ರಕಾಲಕೇಯಂ ||೩೮||
(ಸಮುದ್ರದ ಒಳಗೆ ರಾಕ್ಷಸರುಗಳಿದ್ದಾರೆ. ದೇವತೆಗಳ ವಿರೊಧಿಗಳು ರಾತ್ರಿಯಾಗಲು ಹೊರಬಂದು ಪೀಡಿಸಲೆಂದು ಬರುತ್ತಾರೆ. ಅವರ ನೆರವಿಗೆ ವೃತ್ರನ ಗರಳರಯನಾದ ಕಾಲಕೇಯನಿದ್ದಾನೆ)
ಚಂಪಕಮಾಲೆ।।
ಎನುತಿರೆ ಶಕ್ರನಾಗಳವರೆಯ್ದಿೞಿದರ್ ತಟದೊಳ್ ಸಮುದ್ರರಾ-
ಜನವನನೀಕ್ಷಿಸುತ್ತೆ ಸಲೆ ಭಕ್ತಿಯೊಳುರ್ಕುತೆ ಸಾರ್ಚಿ ಕಯ್ಗಳಿಂ
ಮುನಿಗುಚಿತಾರ್ಘ್ಯಮಿತ್ತನೊ ನೆಗೞ್ದತಿದೈನ್ಯನೆಮೆಂದು ಕಾಪಿಡ
ಲ್ಕೆ ನಮಿಸಿ ಬೇಡುತಿರ್ಪನೊ ಎನಿಪ್ಪವೊಲೆಯ್ದಿದುವೆಲ್ಲ ವೀಚಿಗಳ್ ||೩೯||
(ಹೀಗೆ ಇಂದ್ರನು ಹೇಳುತ್ತಿರುವಾಗಲೇ ಅವರು ಸಮುದ್ರದ ತಟಕ್ಕೆ ಬಂದಿಳಿದರು, ಸಮುದ್ರರಾಜನು ಅವನನ್ನು ನೋಡುತ್ತಲೇ ಭಕ್ತಿಯಿಂದ ಉಕ್ಕಿ ಕೈಗಳನ್ನು ಸಾರ್ಚಿ ಮುನಿಗೆ ಯೋಗ್ಯವಾದ ಅರ್ಘ್ಯವನ್ನು ಕೊಡುತ್ತಿದ್ದಾನೋ, ತನ್ನ ದೈನ್ಯವನ್ನು ಹೇಳಿ ಕಾಪಿಡು ಎಂದು ನಮಿಸಿ ಬೇಡುತ್ತಿರುವನೋ ಎಂಬಂತೆ ಸಮುದ್ರದ ಅಲೆಗಳು ದಡದ ಕಡೆ ಹಾಯ್ದು ಬಂದುವು )
||ಇಂತು ಸಾಗರಾಗಮನವೃತ್ತಾಂತಮೆಂಬ ತೃತೀಯಂ ಸರ್ಗಂ||
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ