Powered By Blogger

ಭಾನುವಾರ, ಜೂನ್ 21, 2020

ಕುಂಭಸಂಭವೀಯಮೆಂಬ ಅಗಸ್ತ್ಯಚರಿತೆ- ನಹುಷನಿಂದ್ರನಾದುದುಂ ಶಚೀವೀಕ್ಷಣೆಯುಂ


ಮೊದಲ ಸರ್ಗವನ್ನು ಇಲ್ಲಿ ನೋಡಿ- ಉರ್ವಶೀಜನನವೃತ್ತಾಂತಂ
ಎರಡನೇ ಸರ್ಗವನ್ನು ಇಲ್ಲಿ ನೋಡಿ- ಅಗಸ್ತ್ಯಜನನವೃತ್ತಾಂತಂ
ಮೂರನೇ ಸರ್ಗವನ್ನು ಇಲ್ಲಿ ನೋಡಿ- ಸಾಗರಾಗಮನವೃತ್ತಾಂತಂ 
ನಾಲ್ಕನೇ ಸರ್ಗವನ್ನು ಇಲ್ಲಿ ನೋಡಿ- ಸಾಗರಗರ್ವಭಂಗ, ಕಾಲಕೇಯಹನನಂ
ಐದನೇ ಸರ್ಗವನ್ನು ಇಲ್ಲಿ ನೋಡಿ- ಅಗಸ್ತ್ಯವಿವಾಹಂ, ಇಲ್ವಲವಾತಾಪಿಹನನಂ 

~ ಷಷ್ಠಂ ಸರ್ಗಂ ~
೨೭।೫।೨೦೧೫
ರಥೋದ್ಧತಾ||
ಗರ್ವದಿಂದೆ ಶಶಿವಂಶಸಂಭವಂ
ಸರ್ವರೊಪ್ಪಿ ಪೊಗಳುತ್ತಿರಲ್ಕೆ ತಾಂ
ಪೂರ್ವದಿಂದ ಪದಕೆಯ್ದಿದಂ ಮಹಾ
ಪರ್ವಮಾಯ್ತು ನಹುಷಾಖ್ಯನಿಂದೆ ಮೇಣ್ ||||
(ಗರ್ವದಿಂದ ಚಂದ್ರವಂಶದವನಾದ ನಹುಷನು ಎಲ್ಲರೂ ಒಪ್ಪಿಕೊಂಡು ಹೊಗಳುತ್ತಿರುವಾಗ ಪುರ್ವದಿಂದ ಇಂದ್ರಪದಕ್ಕೆ ಬಂದನು. ಅವನಿಂದ ದೊಡ್ಡ ಉತ್ಸವವೇ ಆಯಿತು)
ಮಾನಿತಂ ನಹುಷನಾತನಲ್ತೆ ಸ್ವ-
ರ್ಭಾನವೀಸುತನವಂಗೆ ತಂದೆಯೋ
ದಾನವಾರಿನುತನಾಯುನಾಮಕಂ
ಮೌನಿವೃಂದಪರಿಸೇವನೋತ್ಸುಕಂ ||||
(ಮಾನಿತನಾದ ಆ ನಹುಷನು ಸ್ವರ್ಭಾನವೀ ಎಂಬುವವಳಲ್ಲಿ ಹುಟ್ಟಿದವನು. ಅವನ ತಂದೆಯಾದರೋ ದಾನವಾರಿಯಾದ ವಿಷ್ಣುವಿನಿಂದಲೇ ಹೊಗಳಲ್ಪಟ್ಟ, ಮುನೀಂದ್ರರ ಸೇವೆಯನ್ನು ಮಾಡುವುದರಲ್ಲಿ ಉತ್ಸುಕನಾಗಿದ್ದ "ಆಯು" ಎಂಬ ಹೆಸರಿನವನು. )
ತಂದೆಯಂತೆ ಪದಪಿಂದಮೀತನುಂ
ಸಂದನಲ್ತೆ ನಿಜಕೀರ್ತಿಕಾಂತಿಯಿಂ-
ದಿಂದುವಂಶಭವರೆಲ್ಲರೊಳ್ ಮಹಾ-
ನಂದಕಾರಣನೆನಿಪ್ಪವೊಲ್ ಗಡಾ ||||
(ತಂದೆಯಂತೆಯೇ ಇವನೂ ಚೆನ್ನಾಗಿ ತನ್ನ ಕೀರ್ತಿಯ ಕಾಂತಿಯಿಂದ ಸಲ್ಲುತ್ತಿದ್ದನು. ಚಂದ್ರವಂಶದವರಲ್ಲಿ ಬಹಳ ಆನಂದವನ್ನು ಉಂಟುಮಾಡುವಂತಿದ್ದನು)
ದೇವಲೋಕದೊಳಗೊರ್ವ ಭೂಮಿಪಂ
ಸಾವನಪ್ಪದೆ ಸುರೇಂದ್ರನಾದಪಂ
ಕಾವಿನೊಳ್ ಕನಕನಷ್ಟಮಾಗದಂ-
ತಾವಗಂ ಪೊಳೆವವೊಲ್ ನರೇಂದ್ರನುಂ ||||
(ದೇವಲೋಕದಲ್ಲಿ ಒಬ್ಬ ಭೂಮಿಯ ರಾಜ, ಸಾಯದೇ ಹೋಗಿ ದೇವೇಂದ್ರನಾಗಿರುವುದು, ಕಾಯಿಸಿದಾಗ ಬಂಗಾರವು ನಷ್ಟವಾಗದೇ ಹೆಚ್ಚು ಹೊಳೆಯುವಂತೆ ಆಯಿತು. )
ವೃತ್ರನಂ ಕೊಲುತೆ ಪಾಪಭೀತಿಯಿಂ-
ದೆ ತ್ರಿಲೋಕದೊಳಗೆಲ್ಲಿಯುಂ ಗಡಾ
ನೇತ್ರಗೋಚರಕೆ ಬಾರದಿರ್ದಪಂ
ಸತ್ರದೊಳ್ ಶತಕಸಾಧಕಂ ಸ್ವಯಂ ||||
(ನೂರು ಅಶ್ವಮೇಧಗಳನ್ನು ಮಾಡಿದ್ದ (ಹಿಂದೆ ಇದ್ದ) ಇಂದ್ರ ವೃತ್ರಾಸುರನನ್ನು ಕೊಂಡು ಪಾಪಭೀತಿಯಿಂದ ತ್ರಿಲೋಕದಲ್ಲಿ ಎಲ್ಲಿಯೂ ಕಣ್ಣಿಗೆ ಕಾಣದಂತೆ ಆಗಿದ್ದನು)
ಪ್ರಿಯಂವದಾ||
ಕಳುಪಿದಂ ಪುಡುಕಲೆಂದು ಶಕ್ರನಂ
ಬೞಿಕಮಿಲ್ಲಿ ನಹುಷಂ ಸುರರ್ಕಳಂ
ಕಳೆದು ಪೋದಪನ ವಾರ್ತೆಯಿಲ್ಲದಾ-
ಗಲೆಯುತಿರ್ದರಮರರ್ಕಳೆಲ್ಲಿಯುಂ ||||
(ಬಳಿಕ ಇಲ್ಲಿ ಆ ಇಂದ್ರನನ್ನು ಹುಡುಕಲು ನಹುಷನು ದೇವತೆಗಳನ್ನು ಕಳುಹಿಸಿದನು. ಕಳೆದು ಹೋದವನ ಸುದ್ದಿಯಿಲ್ಲದೇ ದೇವತೆಗಳೆಲ್ಲ ಎಲ್ಲೆಲ್ಲೂ ಅಲೆಯುತ್ತಿದ್ದರು)
ವಿರಜೆಯೆಂಬ ಪಿತೃಪುತ್ರಿಯಂ ನರಂ
ವರಿಸಿ ಪಿಂತೆ ನೆಱೆದಿರ್ದನೀ ನೃಪಂ
ಸುರರ ಲೋಕದೊಳಗೆಲ್ಲ ವೈಭವಂ
ಪರಿದು ಸಾರ್ದುದವರ್ಗೆಂದು ಭೋಗಕಂ ||||
(ಹಿಂದೆ ವಿರಜೆ ಎಂಬ ಹೆಸರಿನ ಪಿತೃದೇವತೆಗಳ ಮಗಳನ್ನು ವರಿಸಿದ್ದ ನಹುಷನು ವರಿಸಿದ್ದನು. ಈಗ ಸ್ವರ್ಗ ಲೋಕದ ಎಲ್ಲ ವೈಭವವೂ ಅವರ ಭೋಗಕ್ಕೆಂದು ಹರಿದು ಸಾಗಿ ಬರುತ್ತಿತ್ತು)
ಬಹಳಕಾಲದೊಳಗಿರ್ಪ ಸಕ್ತಿಯಿಂ
ಮಹಿಯೊಳಿಲ್ಲದ ಮಹಾ ಸುಭೋಗದಿಂ
ನಹುಷನಿರ್ದನಮರರ್ಕಳೊಂದಿಗಂ
ಬಹುವಿಧಂ ತಣಿದು ಪತ್ನಿಯೊಂದಿಗಂ ||||
(ಬಹಳ ಕಾಲದಿಂದ ಇದ್ದ ಆಸಕ್ತಿಯಿಂದ, ಹಾಗೂ ಭೂಲೋಕದಲ್ಲಿ ಇಲ್ಲದ ಮಹಾಭೋಗದಿಂದ ನಹುಷನು ಅಮರರ ಲೋಕದಲ್ಲಿ ತನ್ನ ಪತ್ನಿಯೊಂದಿಗೆ ತಣಿದು ಇದ್ದ.)
ರಥೋದ್ಧತಾ||
ಸಾರಮೆಂದು ವಿಷಯಂಗಳಂ ಜನರ್
ದೂರದಿರ್ಪರದಱೊಳ್ ವಿಹಾರದಿಂ
ಸಾರಮಿಲ್ಲಮೆನುವರ್ ಮುನೀಶ್ವರರ್
ದೂರುತಿರ್ಪರದಱಿಂದೆ ದೂರದೊಳ್ ||||
(ಜನರು ವಿಷಯಸುಖವನ್ನೇ ಸಾರವೆಂದು ತಿಳಿದು ಅದರಲ್ಲಿಯೇ ವಿಹಾರ ಮಾಡುತ್ತಿದ್ದರು. ಮುನೀಶ್ವರರು ಇದರಲ್ಲಿ ಸಾರವಿಲ್ಲ ಎಂದು ದೂರದಿಂದಲೇ ದೂರುತ್ತಿದ್ದರು.)
ಕಾಣದಾದನಿವನಿಂತು ಸತ್ಯಮಂ
ಜಾಣನೆಂದು ಪೆಸರಾದ ಭೂಮಿಪಂ
ನಾಣೆ ಮೇಣ್ ಸುರರೊಳಿಲ್ಲದಾವಗಂ
ಕೋಣೆ ಕೋಣೆಗಳೊಳಿರ್ಪ ಕೇಳಿಯೊಳ್ ||೧೦||
(ಈ ಜಾಣನಾದ ಭೂಮಿಪತಿ ಸತ್ಯವನ್ನು ಕಾಣದಾದ. ದೇವಲೋಕದಲ್ಲಿ ಕೋಣೆಕೋಣೆಗಳ ಕೇಳಿಯಲ್ಲಿ ನಾಚಿಕೆ ಎನ್ನುವುದೇ ಇರಲಿಲ್ಲವಾಗಿತ್ತು)
ಮುಕ್ತಮೆಂದು ಬಗೆಯುತ್ತಮೆಲ್ಲಮಂ
ಸಕ್ತರಾಗಿ ವಿಷಯಂಗಳೊಳ್ ಸದಾ
ಭೋಕ್ತರಿರ್ದರದೆ ಸ್ವರ್ಗಮೆಂಬುದೇ
ತ್ಯಕ್ತಮೆಂಬರಿದನೆಲ್ಲ ಯೋಗಿಗಳ್ ||೧೧||
(ಮುಕ್ತವಾದುದು ಎಂದು ತಿಳಿದು ಎಲ್ಲವನ್ನೂ ವಿಷಯಾಸಕ್ತರಾಗಿ ಭೋಗಿಸುವ ಭೋಕ್ತರಿದ್ದರು. ಅದೇ ಸ್ವರ್ಗ ಎಂಬುದನ್ನು ಎಲ್ಲ ಯೋಗಿಗಳೂ ತ್ಯಕ್ತ- ಬಿಡಲ್ಪಟ್ಟದದ್ದು ಎಂದು ಹೇಳುತ್ತಿದ್ದರು.)
ಪ್ರಿಯಂವದಾ||
ಸಮಯಮಿಲ್ಲಿ ಬಹುವೇಗದಿಂದೆ ಪೋ-
ಕುಮದಱಂತೆ ಕೃತಪುಣ್ಯಮೆಲ್ಲಮುಂ
ವಿಮಲಲೋಕಮಿದು ಸಗ್ಗಮಲ್ಲಮೈ
ಯಮಪುರಂಬೊಲಿದೆಯೆಂಬರೈ ವಿದರ್ ||೧೨||
(ಇಲ್ಲಿ ಸಮಯವು ಬಹಳ ಬೇಗದಿಂದ ಕಳೆಯುವುದು, ಹಾಗೆಯೇ ಮಾಡಿದ ಪುಣ್ಯವೂ ಕೂಡ ಬಹಳ ಬೇಗದಿಂದ ಕಳೆಯುತ್ತದೆ, ಇದು ವಿಮಲವಾದ ಲೋಕವಾದರೂ ಸ್ವರ್ಗವಲ್ಲ, ಇದು ಯಮಪುರದಂತೆಯೇ ಇದೆ- ಎಂದು ತಿಳಿದವರು ಹೇಳುತ್ತಿದ್ದರು. )
ಕ್ರಮದೆ ಸಂದುದುಪಭೋಗಮೆಂದು ತಾ-
ನಮಲ ಕೀರ್ತಿತನರೇಶನೆಲ್ಲಮಂ
ಕ್ರಮದೆ ಭೋಗಿಸಿದನೆಂತು ಪೇೞ್ವುದೋ
ಅಮಮ! ಚಿತ್ತದೊಳಗಾಯ್ತೆ ಕಲ್ಮಶಂ ||೧೩||
(ಕ್ರಮದಲ್ಲಿ ಎಲ್ಲ ಉಪಭೋಗಗಳು ಸಿಕ್ಕಿದೆ ಎಂದು ನಿಷ್ಕಲ್ಮಶವಾದ ಕೀರ್ತಿಯನ್ನು ಹೊಂದಿದ್ದ ನಹುಷ, ಎಲ್ಲವನ್ನೂ ಕ್ರಮದಲ್ಲಿ ಭೋಗಿಸುತ್ತಿದ್ದನು. ಅದನ್ನು ಹೇಳುವುದು ಹೇಗೆ! ಅಬ್ಬಬ್ಬ! ಅವನ ಮನಸ್ಸಿನಲ್ಲಿ ಕಲ್ಮಶವಾಯಿತೇ!)
ಭೋಗಕೆಂದೆ ಸುರೆಯೊಂದು ಹಸ್ತದೊಳ್
ಬೇಗದಿಂ ಬಗೆಯ ಬಲ್ಲ ಪತ್ನಿಯುಂ
ರಾಗದಿಂ ಜತೆಯೊಳಿರ್ಪಳಾವಗಂ
ತ್ಯಾಗಕಾಯ್ತು ಧೃತಲೋಕಪಾಲನಂ ||೧೪||
(ಭೋಗಕ್ಕೆಂದು ಒಂದು ಕೈಯಲ್ಲಿ ಸುರೆ, ಬೇಗದಲ್ಲಿ ತನ್ನ ಮನಸ್ಸನ್ನು ತಿಳದಿ ಪತ್ನಿಯೂ ಅನುರಾಗದಿಂದ ಜೊತೆಯಲ್ಲಿ ಇರುತ್ತಿದ್ದಳು. ಲೋಕಪಾಲನವನ್ನು ಧರಿಸಿರುವುದು ತ್ಯಾಗಕ್ಕಾಯ್ತು!)
ಪ್ರಿಯಂವದಾ||
ಸರಸದಿಂದೆ ಸುರವಾರಯೋಷೆಯರ್
ಸುರೆಯ ಧಾರೆಯನೆ ನೀೞ್ದರತ್ತಣಿಂ
ಸುರಪನಿರ್ಪ ಗೃಹಮಿರ್ಪುದೀತನಾ
ಸುರತಕೇಳಿಗದು ನಿರ್ಣಿಬಂಧದಿಂ ||೧೫||
(ಸರಸದಿಂದ ದೇವಗಣಿಕೆಯರು ಸುರೆಯ ಧಾರೆಯನ್ನೇ ಕೊಡುತ್ತಿದ್ದರು. ಈ ಸುರೇಂದ್ರನು (ನಹುಷ) ಇರುವ ಮನೆಯಲ್ಲಿ ಇವನ ಸುರತಕೇಳಿ ಯಾವುದೇ ನಿಬಂಧವಿಲ್ಲದೇ ಇದ್ದಿತ್ತು )
ರಥೋದ್ಧತಾ||
ರತ್ನಕುಟ್ಟಿಮತಲಂ ನೆಲಂ ವಲಂ
ಯತ್ನಮಿಲ್ಲದ ಸೊಗಂ ಜಗಂ ನಗಂ
ನೂತ್ನಮಾದುವು ಸರಂ ವರಂ ಚಿರಂ
ಪ್ರತ್ನಮಿರ್ದುಮವು ನಂದನಂ ವನಂ ||೧೬||
(ಅಲ್ಲಿನ ನೆಲವೆಲ್ಲವೂ ರತ್ನದಿಂದ ಆಗಿತ್ತು, ಯಾವ ಪ್ರಯತ್ನವೂ ಇಲ್ಲದೇ ಜಗತ್ತೂ ಪರ್ವತಗಳೂ ಸೊಗಸಾಗಿದ್ದವು. ಹಳೆಯದಾಗಿಯೇ ಇದ್ದ ನಂದನವನವು, ಸರೋವರಗಳು ಉತ್ತಮವಾಗಿ ಶೀಘ್ರದಲ್ಲೇ ಹೊಸದಾದವು. )
ಪಾಲಕರ್ಕಳಿರೆ ಸರ್ವಕಾರ್ಯಕಂ
ಕೇಳುವರ್ಕಳಿರದಿರ್ದೊಡೀತನುಂ
ಲೋಲನಾಗಿ ವಿಷಯಾನುಭೋಗದೊಳ್
ಪೇೞುತಿರ್ದಪನಿನಿತ್ತು ಮೋದದಿಂ ||೧೭||
(ಎಲ್ಲ ಕಾರ್ಯಗಳಿಗೂ ಪಾಲಕರು ಇ್ದದರು. ಇವನನ್ನು ಪ್ರಶ್ನಿಸುವವರು ಇಲ್ಲದೇ ಇವನು ವಿಷಯಾನುಭೋಗದಲ್ಲಿ ಲೋಲನಾಗಿ ಸಂತೋಷದಿಂದ ಹೀಗೆ ಹೇಳುತ್ತಿದ್ದನು)
ಕಾಮಧೇನುವಿದೆ ಕಲ್ಪವೃಕ್ಷಮುಂ
ಭೂಮಿತರ್ಜಕಮೆನಿಪ್ಪವೋಲೆ ಚಿಂ-
ತಾಮಣಿಪ್ರಭವಮಿರ್ದೊಡೂನಮೇ -
ನೀ ಮಹೇಂದ್ರಗೃಹದೊಳ್ ವಿಚಾರಿಸಲ್ ||೧೮||
(ಕೇಳಿದ್ದನ್ನು ಕೊಡುವ ಕಾಮಧೇನು ಇದೆ, ಕಲ್ಪನೆ ಮಾಡಿಕೊಂಡದ್ದನ್ನು ಕೊಡುವ ಕಲ್ಪವೃಕ್ಷ ಇದೆ. ಈ ಮಹೇಂದ್ರನ ಗೃಹದಲ್ಲಿ ವಿಚಾರಿಸಿದರೆ, ಭೂಮಿಯನ್ನೇ ತರ್ಜಿಸುವಂತೆ ಚಿಂತಿಸಿದ್ದನ್ನು ಕೊಡುವ ಚಿಂತಾಮಣಿಯಿಂದ ಎಲ್ಲವೂ ಇಲ್ಲಿ ಸಿಗುತ್ತದೆ. )
ನಾಕಮೆಂದೊಡಿದು ಮೀರ್ದುದೆಂತುಟೋ
ಲೋಕಮೆಲ್ಲಮನೆ ಸಂದುದಿಲ್ಲಿದೋ
ಶ್ರೀಕರಂ ವಿಕಟಮಲ್ತೆ ಚಂಚಲಳ್
ಪ್ರಾಕಟಂಗೊಳುತೆ ನಿಂದಳಾವಗಂ ||೧೯||
(ಸ್ವರ್ಗ ಎಂದರೆ ಇದು ಎಲ್ಲ ಲೋಕವನ್ನೂ ಮೀರಿದ್ದಾಗಿದೆ. ಯಾವತ್ತೂ ಚಂಚಲೆಯಾದ ಸಂಪತ್ತು ಇಲ್ಲಿ ಸ್ಥಿರವಾಗಿ ಪ್ರಕಟವಾಗಿ ನಿಂತಿದ್ದಾಳೆ.)
ಪೊನ್ನೆ ಮೃತ್ತಿಕೆಯು ಗಂಗೆ ಪೇಯಳೈ
ಜೊನ್ನದಣ್ಪು ಮಲಯಾಚಲಾನಿಲಂ
ಮುನ್ನಮೆಯ್ದಿವರೆ ಪಾರಿಜಾತದಾ
ಚೆನ್ನು ಕಂಪನೆ ಪಳಂಚಿ ತಂದುದೋ ||೨೦||
(ಇಲ್ಲಿನ ಮಣ್ಣು ಬಂಗಾರದ್ದು, ಕುಡಿಯುವ ನೀರು ಗಂಗಾಜಲ, ಬೆಳದಿಂಗಳಿನ ತಂಪೂ, ಮಲಯ ಪರ್ವತದಿಂದ ಬೀಸುವ ಗಾಳಿಯೂ ಇದೆ, ಅದು ಮೊದಲು ಬರುತ್ತಾ ಪಾರಿಜಾತದ ಪರಿಮಳವನ್ನೂ ಹೊತ್ತು ತಂದಿದೆಯೇನೋ! )
ಪ್ರಿಯಂವದಾ||
ಗಗನ ಮಾರ್ಗಮಿದು ಬನ್ನಮಿಲ್ಲದೈ
ನಗುತೆ ನಿಂದ ತರುವಂತೆ ಪೂಗಳಿಂ-
ದುಗುವ ಚೆಲ್ವು ಪ್ರತಿನಿತ್ಯಮಿರ್ಪುದೈ
ಸೊಗದೊಳಾವುದಿದಱಿಂದೆ ಪೆರ್ಚೊ ಪೇೞ್ ||೨೧||
(ಇಲ್ಲಿ ಓಡಾಡುವ ಮಾರ್ಗ ಎಂದರೆ ಆಕಾಶ, ನಗುತ್ತ ನಿಂತಂತೆ ಕಾಣುವ ಮರಗಳು ಸದಾ ಹೂವುಗಳಿಂದ ತುಂಬಿದ ಚೆಲುವಿನಿಂದ ಕೂಡಿ ನಿತ್ಯವೂ ಕಾಣುತ್ತಿರುತ್ತದೆ. ಸುಖದಲ್ಲಿ ಇದಕ್ಕಿಂತ ಹೆಚ್ಚಿನದು ಯಾವುದಿದೆ ಹೇಳು!)
ವರುಣಸೋಮಗುರು ಮಾರುತರ್ಕಳುಂ
ಸ್ಫುರಿಪ ವಹ್ನಿಯಮಸೂರ್ಯರುಂ ಸದಾ
ನಿರತರಾಗಿ ನಿಜ ಕರ್ಮದೊಳ್ ಸಲಲ್
ವರದಮಲ್ತೆ ಸುಖಕಿರ್ಕೆ ಕಾಲಮೇ||೨೨||
(ವರುಣ, ಸೋಮ, ಗುರು, ಮಾರುತ, ಸ್ಫುರಿಸುತ್ತಿರುವ ಅಗ್ನಿ, ಯಮ, ಸೂರ್ಯ ಇವರೆಲ್ಲ ಸದಾ ತಮ್ಮ ಕರ್ತವ್ಯದಲ್ಲಿ ನಿರತರಾಗಿರುವಾಗ ನನ್ನ ಕಾಲವೆಲ್ಲವೂ ಸುಖಕ್ಕೇ ಮೀಸಲಾಗಿರಲಿ)
ಸಕಲಭೋಗಚಯಮಾಯ್ತು ಭುಕ್ತಮೀ
ಸ್ವಕಶರೀರದಿನದಲ್ತೆ ಭಾಗ್ಯಮೇ!
ಮುಕುಟಮಿರ್ಪವರೆಗೆಲ್ಲಮಂ ಸ್ವಯಂ
ಪ್ರಕಟಮಾಗಿಸುವೆನಿಂದ್ರಲೋಕದೊಳ್ ||೨೩||
(ಇಲ್ಲಿ ಎಲ್ಲ ಭೋಗಗಳನ್ನು ಉಂಡದ್ದಾಯಿತು. ಅದೂ ನನ್ನ ಈ ಶರೀರದಿಂದಲೇ ಎಂಬುದು ಭಾಗ್ಯವೇ ಅಲ್ಲವೇ! ಇಲ್ಲಿ ನನ್ನ ಕಿರೀಟ ಇರುವ ತನಕ ಇಂದ್ರಲೋಕದಲ್ಲಿ ಎಲ್ಲವನ್ನೂ ಪ್ರಕಟವಾಗಿಸುವೆ)
ಸುರೆಯೆ ಸಾಲ್ಗುಮೆನಿಕುಂ ಸುಧರ್ಮದ-
ಪ್ಸರೆಯರಾಂಗಿಕದ ನಾಟ್ಯಮಂ ಸುರರ್
ಚರಿಪ ನಂದನದ ಚೆಲ್ವಿನೀಕ್ಷೆಯುಂ
ಸುರತಕೇಳಿಯದು ಸಾಲ್ಗುಮೆಂಬೆನಾಂ ||೨೪||
(ಸುರೆಯೂ ಸಾಕು ಎನಿಸುತ್ತದೆ. ಸುಧರ್ಮ ಎಂಬ ಸಭೆಯಲ್ಲಿ ಅಪ್ಸರೆಯರು ಮಾಡುವ ಆಂಗಿಕದ ನೃತ್ಯವನ್ನು ನೋಡುವುದೂ ದೇವತೆಗಳು ಸಂಚರಿಸುವ ನಂದನವನದ ಚೆಲುವನ್ನು ನೋಡುವುದೂ, ಸುರತಕೇಳಿಯೂ ಸಾಕು ಎಂದೆನಿಸುತ್ತದೆ)
ರಥೋದ್ಧತಾ||
ಅಲ್ಪಕಾಲಮಿದೆ ಕಾಣ್ಬುದೆಲ್ಲಮಂ
ಕಲ್ಪಿಸುತ್ತೆ ಸಲೆ ಕಂಡೆನೀಗಳಾಂ
ಸ್ವಲ್ಪಮುಂ ಬಿಡದೆ ಸಂದಿರಲ್ಕಿದೇಂ
ತಲ್ಪಮುಂ ಸೊಗಮನೀಯಲಾರದೇ ||೨೫||
(ಅಲ್ಪ ಕಾಲವಿದೆ, ಕಾಣುವುದೆಲ್ಲವನ್ನೂ ಕಲ್ಪಿಸಿಕೊಳ್ಳುತ್ತ ಈಗ ಕಂಡು ಆಯ್ತು. ಸ್ವಲ್ಪವನ್ನೂ ಬಿಡದೇ ಎಲ್ಲವೂ ಸಂದ ಬಳಿಕ ನನ್ನ ಹಾಸಿಗೆಯೂ ಸುಖವನ್ನು ಕೊಡುವುದಿಲ್ಲವೇ! )
ಎಂದುಕೊಂಡು ವಿರಜಾಖ್ಯೆಯೊಂದಿಗಿ-
ರ್ದಂದು ಯೋಚಿಸುತೆ ಕೇಳ್ದನಾಕೆಗಂ
ಮಂದಹಾಸದೊಳಗಾಕೆ ಪೇೞ್ದಪಳ್
ಚಂದಮಪ್ಪ ತೆಱದಿಂದೆ ಕೇಳ್ದಿರೈ ||೨೬||
(ಹೀಗೆಂದುಕೊಂಡು ವಿರಜೆಯೊಂದಿಗೆ ಇದ್ದ ಆ ದಿನ ಯೋಚಿಸುತ್ತಾ ಅವಳಿಗೆ ಕೇಳಿದನು, ಅವಳು ಮಂದಹಾಸದಿಂದ “ನೀವು ಚೆನ್ನಾಗಿ ಕೇಳಿದಿರಿ” ಎಂದಳು)
ನಿಮ್ಮೊಡಂ ಬರುತೆ ಕಂಡನಿಂತಿದಂ
ಕಮ್ಮಗಿರ್ದಪಳೆನಿತ್ತು ಬಲ್ಲೆನಾಂ
ತಮ್ಮ ಕೇಳ್ಮೆಗೆ ಸುರರ್ಕಳೆಂಬರೈ
ದಮ್ಮದುತ್ತರಮನಂತು ಕೇಳಿರೈ ||೨೭||
(ನಿಮ್ಮ ಜೊತೆ ಬರುತ್ತಾ ಹೀಗೆ ಎಲ್ಲವನ್ನೂ ಕಂಡಿದ್ದೇನೆ ಅಷ್ಟೆ, ಸುಮ್ಮನೆ ಇರುವ ನಾನು ಹೇಗೆ ಇವನ್ನೆಲ್ಲ ತಿಳಿದುಕೊಳ್ಳುವುದಕ್ಕಾಗುತ್ತದೆ. ನಿಮ್ಮ ಪ್ರಶ್ನೆಗೆ ಧರ್ಮದ ಉತ್ತರವನ್ನು ದೇವತೆಗಳು ಕೊಡುತ್ತಾರೆ ಕೇಳಿ)
ಪ್ರಿಯಂವದಾ||
ಎನುತೆ ಪೇೞ್ದೊಡೆ ನೃಪಂ ವಿಚಾರಿಸಲ್
ಮುನಿಯವೊಲ್ ಸಲೆ ಬೃಹಸ್ಪತಿ ಸ್ವಯಂ
ಮುನಿಯಲಾಱನವನಲ್ತೆ ನೀೞ್ದಪಂ
ಮನಕೆ ಮೆಚ್ಚುವವೊಲುತ್ತರಂಗಳಂ ||೨೮||
(ಹೀಗೆ ಹೇಳಿದಾಗ ನಹುಷನು ವಿಚಾರಿಸಿ ಕೋಪಗೊಳ್ಳದ ದೇವಗುರು ಬೃಹಸ್ಪತಿಯು ಮನಸ್ಸಿಗೆ ಮೆಚ್ಚುಂತಹ ಉತ್ತರಗಳನ್ನು ಕೊಟ್ಟನು)
ಗುರುವೆ ಬರ್ಪುದೆನುತೊರ್ಮೆ ಚಿತ್ತದೊಳ್
ಸ್ಮರಿಸಿ ಪೇೞ್ದೊಡಿದಿರಿರ್ದನಾ ಕ್ಷಣಂ
ಮರೆಯದಂತೆ ವಿವರಿಪ್ಪನೆಲ್ಲಮಂ
ಕುಱಿತು ಕೇಳ್ದನುೞಿದಿರ್ಪುದೇನೆನಲ್ ||೨೯||
("ಗುರುವೇ! ಬರಬೇಕು” ಎಂದು ಮನಸ್ಸಿನಲ್ಲಿ ಒಮ್ಮೆ ಸ್ಮರಣೆ ಮಾಡಿದ ತತ್ಕ್ಷಣವೇ ಎದುರಿಗೆ ಬಂದಿದ್ದನು. ಮರೆಯದ ಹಾಗೆ ಎಲ್ಲವನ್ನೂ ವಿವರಿಸುವವನು ಎಲ್ಲವನ್ನೂ ಕುರಿತು ಕೇಳಿದನು, ಇನ್ನೇನು ಉಳಿದಿದೆ ಎಂದು ಹೇಳಲು)
ನೃಪನೆ ಸರ್ವಮುಮದಿರ್ಕುಮಲ್ತೆ ನಿ-
ನ್ನುಪಕರಂಗಳೆನುವಂತೆ ಭೋಗಿಸಲ್
ವಿಪದಮೇನಿನಿತೊ ಕೇಳ್ವೆಯೀಗಳಾಂ
ತಪಿಸುತಿರ್ಪೆನಕಟಾ! ವಿಕರ್ಮದಿಂ ||೩೦||
(ನೃಪನೇ, ಎಲ್ಲವೂ ನಿನ್ನ ಉಪಕರಣಗಳ ಹಾಗೆ ಭೋಗಿಸಲು ಇದೆ. ಈಗ ಹೀಗೆ ನಿನ್ನ ಕೇಳುವಿಕೆಯು ಏನು ವಿಪತ್ತು ಎಂದು ಅಯ್ಯೋ! ನಾನು ವಿಕರ್ಮದಿಂದ ಪರಿತಪಿಸುತ್ತಿದ್ದೇನೆ. )
ರಥೋದ್ಧತಾ||
ಚಿತ್ತಕಾವ ತೆಱನಾದ ಕೇಳ್ಮೆಯೈ
ಮತ್ತೆ ಸಾರ್ದುದಿದು ದೇವಲೋಕದೊಳ್
ಸತ್ತೆನಿಪ್ಪವೊಲೆ ಸಲ್ವಗೂಢಮಂ
ಪುತ್ತೊಳಿರ್ಪ ವಿಷಸರ್ಪಮೆಂಬೆನಾಂ ||೩೧||
(ನಿನ್ನ ಮನಸ್ಸಿಗೆ ಯಾವ ಪ್ರಶ್ನೆ ಮತ್ತೆ ಬಂದಿದೆ. ದೇವಲೋಕದಲ್ಲಿ ಒಳ್ಳೆಯದೆಂದು ಉಳಿದ ರಹಸ್ಯಗಳು ಹುತ್ತದೊಳಗಿರುವ ವಿಷಸರ್ಪದಂತೆಯೇ! )
ಪ್ರಿಯಂವದಾ||
ಕೆದಕಿರಲ್ಕೆ ಪರಿತೋಷಮಾಗದೈ
ಮೃದುಲಕಾಯನರರಲ್ತೆ ನೀವಿದೇ-
ಕಿದಱ ಚಿಂತೆಯೊ ಬರ್ದುಂಕಿರಲ್ಕೆ ಮೇ-
ಣೊದವಿ ಬರ್ಕುಮುಱೆ ಕಷ್ಟಮೆಂದಪಂ ||೩೨||
(ಇದನ್ನು ಕೆದಕಿದರೆ ಸಂತೋಷವಾಗುವುದಿಲ್ಲ, ನೀವು ಮೃದುವಾದ ಶರೀರವುಳ್ಳ ಮನುಷ್ಯರು. ಬದುಕು ಇರುವಾಗ ನಿಮಗೇಕೆ ಇದರ ಚಿಂತೆ, ಇದರಿಂದ ಕಷ್ಟಗಳು ಒದವಿ ಬರುತ್ತವೆ ಎಂದನು)
ಗುರುವು ಪೇೞ್ದ ನುಡಿಗೇಳ್ದು ಭೂಮಿಪಂ
ವರಮನಿತ್ತಿರೆನಗಂದು ಕೇಳಿಮಾಂ
ನೆಱೆ ವಿಚಾರಿಪೊಡೆ ಪೇೞಲೊಪ್ಪಿ ನೀಂ
ತ್ವರೆಯಿನೆಂತು ಮರೆತಿರ್ಪಿರಾರ್ಯರೇ ? ||೩೩||
(ಗುರು ಹೇಳಿದ ಮಾತನ್ನು ಕೇಳಿ ನಹುಷನು “ಕೇಳಿರಿ, ನೀವು ಅಂದು ನಾನು ವಿಚಾರಿಸಿದ್ದನ್ನು ಎಲ್ಲವನ್ನೂ ಹೇಳುವುದಕ್ಕೆ ಒಪ್ಪಿ ನನಗೆ ವರವನ್ನು ಕೊಟ್ಟಿದ್ದೀರಾ, ಈಷ್ಟು ಬೇಗ ಮರೆತುಬಿಟ್ಟಿರೇ ಆರ್ಯರೇ!”)
ಬೞಿಕಮಲ್ತೆ ಸುರರಿಂದ್ರನಾದೆನಾಂ
ಕಳೆದ ಶಕ್ರನವನಿತ್ತ ಬರ್ಪಿನಂ
ಗೆಲಮದಾಯ್ತು ಭವದೀಯಕಾರ್ಯಕಂ
ಸಲುತೆ ಪೇೞದಿರೆ ಭಾಷೆಗೆಟ್ಟಿರೇ ||೩೪||
(ಅದಾದ ಬಳಿಕವಷ್ಟೇ ಕಳೆದುಹೋದ ಇಂದ್ರ ಇಲ್ಲಿಗೆ ಬರುವ ತನಕ ನಾನು ದೇವಲೋಕದ ಇಂದ್ರಪದವಿಗೆ ಬಂದದ್ದು, ನಿಮ್ಮ ಕಾರ್ಯಕ್ಕೆ ಗೆಲುವಾಯಿತು. ಈಗ ಹೇಳದಿದ್ದರೆ ಮಾತನ್ನು ತಪ್ಪಿದಂತೆ ಆಗುತ್ತದೆ)
ರಥೋದ್ಧತಾ||
ಎಂದೊಡಂ ನಹುಷವಾಕ್ಯದಿಂದವಂ
ಕುಂದಿರಲ್ಕೆ ಮನಕಿರ್ಪ ಶಕ್ತಿಯುಂ
ಸ್ಪಂದಿಸಿರ್ದನಸುಹೀನನಂದದಿಂ
ಮುಂದೆ ಬರ್ಪುದನೆ ಬಲ್ಲವಂ ಗುರು ||೩೫||
(ಹೀಗೆ ನಹುಷನು ಹೇಳಿದಾಗ ಅವನ ಮಾತಿನಿಂದ ಮನಸ್ಸಿನ ಶಕ್ತಿಯೂ ಕುಂದಿಹೋಗಿ, ಮುಂದೆ ಬರುವುದೆಲ್ಲವನ್ನೂ ತಿಳಿದ ಗುರು ಜೀವವಿಲ್ಲದವನ ಹಾಗೆ ಸ್ಪಂದಿಸಿದನು. )
ರಾಜ! ಕೇಳ್ ಸುರಪನಾಗಿ ನೀಂ ಸದಾ
ತೇಜದಿಂದೆ ಮೆಱೆದಿರ್ದೆಯಂತುಟೇ
ಸಾಜಮೀ ಕುತುಕಮೆಲ್ಲರಂದದಿಂ
ಸೋಜಿಗಂಬಡದೆ ಕೇಳ್ವುದೀಗಳೇ ||೩೬||
(ರಾಜನೇ! ಕೇಳು, ಸುರೇಂದ್ರನಾಗಿ ನೀನು ಸದಾ ತೇಜಸ್ಸಿನಿಂದ ಮೆರೆಯುತ್ತಿದ್ದೆ. ಹಾಗೆಯೇ ಈ ಕುತೂಹಲವು ಎಲ್ಲರಿಗೂ ಸಹಜವೇ ಆಗಿದೆ. ಇದನ್ನು ಆಶ್ಚರ್ಯ ಹೊಂದದೇ ಕೇಳು)
ರಾಜ್ಞಿಯಾ ವಿರಜೆ ಸಂದಿರಲ್ಕೆ ನೀಂ
ತಜ್ಞನಲ್ತೆ ಸುಖಿಸಿರ್ಪೆಯಾವಗಂ
ರಾಜ್ಞಿಯರ್ಕಳಿರುವೆಲ್ಲ ಸೌಧಕೆಂ-
ದಾಜ್ಞೆಗೆಯ್ದು ಪರಿವೀಕ್ಷಿಸಿರ್ಪೆಯೈ ||೩೭||
(ನಿನ್ನ ರಾಜ್ಣಿಯಾಗಿ ವಿರಜಾದೇವಿ ಇರುವ ಕಾರಣ ತಜ್ಞನಾದ ನೀನು ಯಾವಾಗಳೂ ಸುಖಿಸಿದ್ದೀಯಾ. ರಾಣಿಯರು ಇರುವ ಎಲ್ಲ ಸೌಧಗಳಿಗೂ ಎಂದು ಆಜ್ಞೆ ಮಾಡಿ ವೀಕ್ಷಿಸಿದ್ದೀಯಾ?)
ಪ್ರಿಯಂವದಾ||
ಎನೆ ಸುರಾರ್ಯನ ವಚಂಗಳಿಂದವಂ
ಮನದೆ ಮುಂದಿರುವ ಕಾರ್ಯಮಂ ಸ್ವಯಂ
ಘನಮೆನಿಪ್ಪವೊಲೆ ಚಿಂತಿಸಿರ್ದಪಂ
ಮನುಜಚಿತ್ತಮದು ಚಂಚಲಾತ್ಮಕಂ ||೩೮||
(ಹೀಗೆ ಹೇಳಿದ ದೇವಗುರುವಿನ ಮಾತನ್ನು ಕೇಳಿ ಅವನ ಮನಸ್ಸಿನಲ್ಲಿ ಮುಂದಿರುವ ಕಾರ್ಯನವನ್ನು ಘನವಾಗಿ ಚಿಂತಿಸಿದನು. ಮನುಷ್ಯರ ಮನಸ್ಸೇ ಚಂಲವಾದದ್ದು )
ರಚಿತಮಾಯ್ತು ನಹುಷಂಗೆ ಪೋಗಲಂ-
ತುಚಿತಮಪ್ಪ ತೆಱನಾದ ಮಾರ್ಗಮುಂ
ಸಚಿವನಂತೆ ಗುರುವಿರ್ದನತ್ತಣಿಂ
ಖಚಿತಮಾಯ್ತು ಗುರು ಯೋಚಿಸಿರ್ಪುದುಂ ||೩೯||
(ನಹುಷನಿಗೆ ಹೋಗಲು ಯೋಗ್ಯವಾದ ಮಾರ್ಗವು ರಚನಿತವಾಯಿತು. ಅವನಿಗೆ ಮಂತ್ರಿಯಂತೆ ಗುರು ಇದ್ದನು. ಅತ್ತ ಗುರುವು ಯೋಚಿಸಿದ್ದುದೂ ಖಚಿತವಾಯಿತು)
ರಥೋದ್ಧತಾ||
ಆ ವಿಮಾನಗಳನಾ ಭವಂಗಳಂ
ಪೂವಿನಿಂದೆ ಶುಭಮಪ್ಪುದಂ ಕರಂ
ಕಾವಲಿರ್ಪ ಸುರವೀರರಿಂದೆ ಮೇಣ್
ದೈವಸೌಧಮನೆ ಕಾಣುತಿರ್ದಪಂ ||೪೦||
(ಆ ವಿಮಾನಗಳನ್ನೂ, ಆ ಮನೆಗಳನ್ನೂ, ಹೂವಿನಿಂದ ಶುಭವಾಗಿರುವುದನ್ನೂ, ಸುರಲೋಕದ ವೀರರಿಂದ ಕಾವಲಿಗಿರುವ ಆ ದೇವಲೋಕದ ದೊಡ್ಡ ದೊಡ್ಡ ಮನೆಗಳನ್ನು ಕಾಣುತ್ತಿದ್ದನು)
ಪೂರ್ವದೊಳ್ ಭವನಮೊಂದು ರಾಜಿಸಲ್
ಪರ್ವುತಿರ್ದುದವನಂತರಂಗಮಂ
ಸಾರ್ವೊಡಂ ಸುರರ ವೀರನಂತು ತಾ-
ನೊರ್ವನಿರ್ದನಿವನಲ್ಲಿ ಪೋದಪಂ ||೪೧||
(ಪೂರ್ವದಲ್ಲಿ ಒಂದು ಭವನವು ರಾಜಿಸುತ್ತ ಇದ್ದುದು, ಅಲ್ಲಿಗೆ ಅವನ ಅಂತರಂಗವೂ ಹಬ್ಬುತ್ತಿತ್ತು. ಅಲ್ಲಿ ಸಾಗಿದಾಗ ಅಲ್ಲೊಬ್ಬ ದೇವವೀರನು ಕಾವಲಿದ್ದನು. ಇವನು ಅಲ್ಲಿಗೆ ಹೋದನು)
ಆರ ಸೌಧಮಿದು ನೋೞ್ಪೆನೆಂದು ಮೇಣ್
ವೀರನೀತನದಱತ್ತ ಬಂದಿರಲ್
ದಾರಿಗಡ್ಡಮೆನುವಂತೆ ಪಾಲಕಂ
ಸಾರೆ ಕೇಳ್ದನಿವನೇಕೆ ಬಂದೆಯೈ ||೪೨||
(ಇದು ಯಾರ ಸೌಧವೆಂದು ನೋಡುತ್ತೇನೆ ಎಂದು ಈ ವೀರನಾದ ನಹುಷನು ಅಲ್ಲಿಗೆ ಬಂದಿರಲು, ಅವನ ದಾರಿಗಡ್ಡವಾಗಿ ಆ ಕಾವಲಿನವನು ಬಂದನು, ಅದಕ್ಕೆ ಇವನು ಕೇಳಿದನು "ಏಕೆ ಬಂದೆ" )
ಆನೆ ರಾಯನಿರೆ ಸೇವೆಗಿರ್ಪನೇ
ಹೀನಕೃತ್ಯಮಿದು ತ್ವತ್ಕೃತಂ ಗಡಾ
ಮೌನದಿಂದ ಸರಿದತ್ತ ನಿಲ್ಲು ನೀ-
ನೇನ ಗೆಯ್ವೆಯೆನುವೆೞ್ಚರಿರ್ಪುದೇ ||೪೩||
(ನಾನೇ ಸ್ವರ್ಗದ ರಾಜನಾಗಿದ್ದೇನೆ. ಸೇವೆಯನ್ನು ಮಾಡುವವನು ನೀನು, ನೀನು ಮಾಡುತ್ತಿರುವುದು ಹೀನಕೃತ್ಯ! ಮೌನದಿಂದ ಅತ್ತ ಸರಿದು ನಿಲ್ಲು. ನೀನು ಏನು ಮಾಡುತ್ತಿದ್ದೀಯಾ ಎನ್ನುವ ಎಚ್ಚರಿಕೆ ಇದೆಯೇ?)
ಪ್ರಿಯಂವದಾ||
ಅದಕೆ ಸೇವಕನೆ ಪೇೞ್ದನಿಂತು ತಾಂ
ಪದಕೆ ವಂದಿಸುತೆ ದೇವ! ಪೂರ್ವದಾ
ಸದಯನಾ ಸುರಪಪತ್ನಿಯಿರ್ಪಳೀ
ಸದನದೊಳ್ ಪುಗಲವಳ್ ಬಿಡಳ್ ಸದಾ ||೪೪||
(ಅದಕ್ಕೆ ಆ ಸೇವಕನು ಹೀಗೆ ಅವನ ಪದಗಳಿಗೆ ವಂದಿಸುತ್ತಾ ಹೇಳಿದನು “ದೇವ! ಹಿಂದಿನ ದಯಾವಂತನಾದ ಸುರೇಂದ್ರನ ಪತ್ನಿ ಈ ಸದನದಲ್ಲಿ ಇದ್ದಾಳೆ. ಸದಾ ಯಾರಿಗೂ ಅವಳು ಒಳಗೆ ಬರಲು ಬಿಡುವುದಿಲ್ಲ.)
ಅಣತಿಯಿಲ್ಲದೆಯೆ ಬಿಟ್ಟೆನಾದೊಡಂ
ಗುಣಿಯದೆಂದಿವನೆ ಸಲ್ವನಲ್ತೆ ಪೇ-
ೞಣಮುಮಿಲ್ಲದಿರೆ ದೋಷಮೆನ್ನೊಳಾಂ
ಗಣಿಪೆನೇಂ ತಡೆಯುವಾಗಳನ್ಯರಂ ||೪೫||
(ಅಣತಿಯಿಲ್ಲದೇ ಒಳಗೆ ಬಿಟ್ಟೆ ಎಂದಾದರೆ, ನಾನು ಗುಣವಿಲ್ಲದವನು ಎಂದಾಗುತ್ತೇನಲ್ಲವೇ! ಹೇಳು, ನನ್ನಲ್ಲಿ ಸ್ವಲ್ಪವೂ ದೋಷವಿಲ್ಲದಿರುವಾಗ, ಒಳಗೆ ಹೋಗುವವರನ್ನು ತಡೆಯುವಾಗ ಯಾರು ಎಂದು ಲೆಕ್ಕಿಸುತ್ತೇನೆಯೇ! )
ರಥೋದ್ಧತಾ||
ಆರಿವಳ್ ಸುರಪಪತ್ನಿಯೆಂದೊಡಂ
ಮಾರಮಂದಿರಮಿದೆಂಬವೋಲಿರ-
ಲ್ಕಾಱನೇಂ ಪುಗಲೆನುತ್ತೆ ಕೋಪದಿಂ
ತಾರಕಧ್ವನಿಯೊಳೆಂದನಾತನೊಳ್ ||೪೬||
(ಯಾರಿವಳು! ದೇವೇಂದ್ರನ ಪತ್ನಿ ಎಂದಾದರೆಮನ್ಮಥನ ಮಂದಿರವೇ ಇದು ಎಂಬಂತೆ ಇದೆ. ಇದನ್ನು ನಾನು ಪ್ರವೇಶಿಲು ಸಾಧ್ವವಿಲ್ಲ ಎಂದು ಕೋಪದಿಂದ ತಾರಕಧ್ವನಿಯಲ್ಲಿ ಅವನಿಗೆ ಹೇಳಿದನು-)
ಪ್ರಿಯಂವದಾ||
ಅದಟೆ! ಮೂಢನೆ ಮದೀಯ ವೀರ್ಯದಿಂ
ಸದೆವೆನಾಂ! ಸರಿದು ಪೋ! ಬೞಿಕ್ಕಮೀ
ಸದನಮಂ ನಿರುಕಿಸಲ್ಕೆ ಬಂದಿವಂ-
ಗಿದುಮಶಕ್ಯಮೆನಿತಕ್ಕುಮಲ್ತೆ ಪೇೞ್ ||೪೭||
(ನಿನಗೇನು ಪರಾಕ್ರಮವೇ ಮೂಢನೇ! ನನ್ನ ವೀರತನದಿಂದ ನಾನು ನಿನ್ನನ್ನು ಸದೆಯುತ್ತೇನೆ! ಸರಿದು ಹೋಗು! ಈ ಮನೆಯನ್ನು ನೋಡಲು ಬಂದವನಿಗೆ ಇದು ಅಶಕ್ಯ ಹೇಗಾಗುತ್ತದೆ ಅಲ್ಲವೇ!)
ನೃಪನ ಕೋಪವಚನಂಗಳಿಂದವಳ್
ಚಪಲಚಕ್ಷು ಶಚಿ ಚಾರುಚರ್ಯೆ ತಾ-
ನುಪವಿಮಾನದೊಳಗಿಂದ ಕೇಳ್ದಪಳ್
ನೃಪನೆ ಕಂಡನವಳಾಸ್ಯಮಂ ಸ್ವಯಂ ||೪೮||
(ಈ ನಹುಷನ ಕೋಪದ ಮಾತುಗಳಿಂದ, ಸುಂದರವಾದ ನಡೆಯುಳ್ಳ ಚಪಲವಾದ ಚಕ್ಷುಗಳನ್ನು ಉಳ್ಳ ಶಚೀದೇವಿ, ತನ್ನ ಉಪವಿಮಾನದಲ್ಲಿದ್ದುಕೊಂಡೇ ಕೇಳುತ್ತಿದ್ದಳು. ಅವಳ ಮುಖವನ್ನು ನೃಪನೂ ಕಂಡನು )
ಎಲವೊ ಸೇವಕನೆ! ನೊ ಮಾತದೋ!
ಕೆಳಕೆ ಬಂದೆನಿದೊ ತಾಳೆನುತ್ತೆ ತಾ-
ನಿಳಿದಳಾಸ್ಥಳಕೆ ಸಾರ್ದು ಬಂದಳೈ
ನಳಿನಮಿರ್ಪೆಡೆಗೆ ಚಂದ್ರನೆಯ್ದವೊಲ್ ||೪೯||
(ಎಲವೋ ಸೇವಕನೆ! ಏನು ಮಾತು ಅದು! ಇದೋ ಕೆಳಗೆ ಬಂದೆ, ತಾಳು, ಎಂದು ಹೇಳುತ್ತ, ಆ ಸ್ಥಳಕ್ಕೆ ನೆಯ್ದಿಲೆ ಹೂವುಗಳಿರುವ ಕಡೆ ಚಂದ್ರನೇ ಬಂದಂತೆ ಸಾರಿ ಬಂದಳು. )
ರಥೋದ್ಧತಾ||
ಸಾಂದ್ರಮಾಯ್ತು ನಹುಷಂಗೆ ಚಿತ್ತದೊಳ್
ಚಂದ್ರವಕ್ತ್ರೆಯನೆ ಸೇರುವಾಸೆಯುಂ
ಮಂದ್ರಮಪ್ಪ ರವದಿಂದೆ ಕೇಳ್ದನಾ-
ನಿಂದ್ರನಿರ್ಪೆ ಶಚಿ ತೋರು ನಲ್ಮೆಯಂ ||೫೦||
(ಈ ಚಂದ್ರಮುಖಿಯನ್ನು ಸೇರುವ ಆಸೆಯಿಂದ, ನಹುಷನ ಮನಸ್ಸು ಸಾಂದ್ರವಾಯಿತು. , ಮಂದ್ರವಾದ ಧ್ವನಿಯಿಂದ ಅವನು "ನಾನು ಇಂದ್ರನಾಗಿದ್ದೇನೆ, ಶಚೀದೇವಿ, ನನ್ನಲ್ಲಿ ನಲ್ಮೆಯನ್ನು ತೋರು" ಎಂದು ಹೇಳಿದನು )
ಪ್ರಿಯಂವದಾ||
ಸಕಲಮಿಂದ್ರಪದಕಿರ್ಪ ಭೋಗಮಂ
ವಿಕಳಮಾಗಿಸಿದೆ ನಿನ್ನದಂದಮಿಂ-
ತು ಕಳೆಗುಂದದಿರು ಸೇರ್ವೊಡೆನ್ನನೇ
ಚಕಿತಳಪ್ಪೆಯಲ ಕೋಮಲಾಂಗಿಯೇ ||೫೧||
(ಇಂದ್ರಪದವಿಗಿರುವ ಎಲ್ಲ ಭೋಗಗಳನ್ನೂ ನಿನ್ನ ಸೌಂದರ್ಯ ವಿಕಳವಾಗಿಸಿದೆ/ ಊನವಾಗಿಸಿದೆ. ಹೀಗೆ ಕಳೆಗುಂದಬೇಡ, ಕೋಮಲಾಂಗಿಯೇ! ನನ್ನನ್ನು ಸೇರಿದರೆ ನೀನು ಚಕಿತಳಾಗುತ್ತೀಯಾ!”)
ಬರಡು ಸಗ್ಗಮೆನುವಂತೆ ಕಂಡಿರಲ್
ಮರುವಿನೊಳ್ ಸೊದೆಯ ಕುಂಭದಂದದಿಂ
ನಿರುಕಿಸಿರ್ಪೆನಿದೊ ನಿನ್ನನಿಂದು ಕೇಳ್
ನಿರುತಮಾನಿರುವೆನಿಲ್ಲಿ ಸೇವಿಸಲ್ ||೫೨||
(ಸ್ವರ್ಗ ಬರಡು ಎನುವಂತೆ ಕಂಡಿರುವಾಗ, ಮರುಭೂಮಿಯಲ್ಲಿ ಅಮೃತದ ಕೊಡಗಳಂತೆಯೇ ನಿನ್ನನ್ನು ಇದೋ ಕಾಣುತ್ತಿದ್ದೇನೆ. ಇಲ್ಲಿ ನಿನ್ನ ಸೇವೆಗೆ ನಾನು ಯಾವತ್ತೂ ಇರುತ್ತೇನೆ)
ನುಡಿ ಮನೋಜಶರರೂಪೆ ಅಕ್ಕುಮೆಂ-
ದೊಡನೆ ಕರ್ಣಕಮರ್ದಂ ಪ್ರಿಯಂವದೇ!
ಮಡಿವೆನಾಂ ಸಿಗದೆ ನೀನೆನಲ್ಕವಳ್
ನುಡಿದಳಿಂತು ರುಷೆಯಿಂದೆ ತಪ್ತಳುಂ ||೫೩||
(ಮನ್ಮಥನ ಬಾಣಗಳ ರೂಪದವಳೇ “ಆಗಲಿ” ಎಂದು ಕಿವಿಗೆ ಅಮೃತವಾದುದನ್ನು ಹೇಳು. ಪ್ರಿಯವಾದ ಮಾತನ್ನಾಡುವವಳೇ! ನೀನು ಸಿಗದೇ ನಾನು ಸತ್ತು ಹೋಗುತ್ತೇನೆ!” ಎಂದು ಹೇಳಲು ಅವಳು ಕೋಪದಿಂದ ತಪ್ತಳಾಗಿ ಹೇಳಿದಳು-)
ಎಲೆ ಮದಾಂಧನೆ ಪುರಂದಂಗೆ ಸ-
ಲ್ವಳಿವಳಲ್ತೆ ಶಚಿ! ಮತ್ತಮಾರ್ಗಮುಂ
ಕೆಳದಿಯಾಗಳಿದಕೊಪ್ಪದಿರ್ದೊಡಂ
ಛಲದೆ ನೀಂ ಪತಿತನಪ್ಪೆಯಾಗಳೇ ||೫೪||
(ಎಲೈ! ಮದಾಂಧನೇ! ಈ ಶಚಿ ಪುರಂದರನಿಗೆ ಸಲ್ಲುವವಳು! ಮತ್ತೆ ಯಾರಿಗೂ ಗೆಳತಿಯಾಗುವವಳಲ್ಲ. ಇದಕ್ಕೆ ಒಪ್ಪದಿದ್ದರೆ ನೀನು ಪತಿತನಾಗುತ್ತೀಯಾ!)
ಎನೆ ವಿಚಾರಿಸಿ ಸುರೇಂದ್ರನಲ್ತೆ ನಾ-
ನಿನಿತುಮೀ ಪದವಿಯೊಳ್ ಸಲುತ್ತಿರಲ್
ಘನತೆಗಿರ್ಕೆಯವನೆಲ್ಲ ವೈಭವಂ
ವಿನುತಮಾಗಿ ಶಚಿಯುಂ ಪ್ರದೀಯಳೇ ||೫೫||
(ಹೀಗೆ ವಿಚಾರಿಸಿ, “ನಾನೂ ಸುರೇಂದ್ರನೇ ಅಲ್ಲವೇ! ಈ ಪದವಿಯಲ್ಲಿ ಸಲ್ಲುತ್ತಿರುವಾಗ ಘನತೆಗೆ ಅವನೆಲ್ಲ ವೈಭವಗಳೂ ಇರಲಿ. ಹಾಗೆ ಸ್ತುತ್ಯರ್ಹಳಾದ ಶಚಿಯೂ ಕೂಡ ಕೊಡಲ್ಪಡಬೇಕು )
ರಥೋದ್ಧತಾ||
ಆ ಪುರಂದರನ ಪತ್ನಿಯಾದರೇ-
ನೋಪಳಾದರದಱಿಂದೆ ಕೇಳ್ವುದೇಂ
ಕೋಪಮಿಲ್ಲಮೆನಗಿಂತು ನಿನ್ನೊಳಂ
ಭೂಪನೌ ಸುರಪಸಂಪದಾರ್ಯೆಯೇ! ||೫೬||
(ಆ ಪುರಂದರನ ಪತ್ನಿಯಾದರೇನು! ಪ್ರೀತಿಸುವವಳಾದರೆ ಅದರಿಂದ ಕೇಳುವುದೇನು! ದೇವೇಂದ್ರನ ಸಂಪತ್ತಿನ ಪ್ರತೀಕವಾದ ಆರ್ಯೆಯೇ! ನಾನು ಭೂಮಿಪತಿ, ನಿನ್ನಲ್ಲಿ ಸ್ವಲ್ಪವೂ ಕೋಪವಿಲ್ಲ.)
ಎಂದು ಶಕ್ರಪದಕಾಕೆ ಸಲ್ವುದುಂ
ಮುಂದೆ ಸೇರಲವಳೊಪ್ಪೆ ವೇಳ್ಕುಮೆಂ-
ದಂದು ಪೇೞ್ದನಲೆ ಭ್ರಾಂತಿಯಿಂದಿರ-
ಲ್ಕಿಂದು ಸೂರ್ಯರನಿಲಾದಿಗಳ್ ಗಡಾ ||೫೭||
(ಹೀಗೆಂದು ಇಂದ್ರಪದವಿಗೆ ಆಕೆ ಸಲ್ಲುವುದು, ಮುಂದೆ ಸೇರಲು ಅವಳು ಒಪ್ಪಲೇಬೇಕು ಎಂದೂ ಸೂರ್ಯಚಂದ್ರವಾಯುವೇ ಮೊದಲಾದವರು ಭ್ರಾಂತಿಯಿಂದ ಇರುವಾಗ ಅವನು ಹೇಳಿದನು)
ಪ್ರಿಯಂವದಾ||
ಶಚಿಯೆ ಪೇೞ್ದಳವಳೊಂದು ಮಾತಿನೊಳ್
ಖಚಿತದಿಂ ನಿಯಮಮೆಂದು ಸೂಚಿಸ
ಲ್ಕುಚಿತಮಪ್ಪ ಪೊಸತಾದ ಯಾನಮಂ
ರುಚಿರಮಂ ರಚಿಸಿ ಬರ್ಪೊಡೊಪ್ಪುವೆಂ ||೫೮||
(ಶಚಿ ಅವಳ ಒಂದು ಮಾತಿನಲ್ಲಿ ಹೇಳಿದಳು "ಇದಕ್ಕೆ ಖಚಿತವಾದ ನಿಯಮವೊಂದು ಇದೆ. ಯೋಗ್ಯವಾದ ಹೊಸದಾದ ಒಂದು ಸುಂದರವಾದ ಯಾನವನ್ನು ರಚಿಸಿಕೊಂಡು ಬಂದರೆ ಒಪ್ಪುತ್ತೇನೆ”)
ರಥೋದ್ಧತಾ||
ಶಕ್ರಪತ್ನಿಯವಳೊಪ್ಪಿದಳ್ ಗಡಾ
ಸಕ್ರಮಂ ಸಮಯಮೊಂದಿರಲ್ಕೆ ನಾಂ
ಚಕ್ರವಾಕಮೆನುವಂತೆ ಬರ್ಪೆನೌ
ವಿಕ್ರಮಂ ನಹುಷನೆಂದನಿಂತು ತಾಂ ||೫೯||
("ಇಂದ್ರಪತ್ನಿಯಾದ ಶಚೀದೇವಯು ಒಪ್ಪಿದಳು! ಕ್ರಮವಾದ ಸರಿಯಾದ ಸಮಯ ಹೊಂದಿದೆ, ನಾನು ಚಕ್ರವಾಕದಂತೆ ಬರುತ್ತೇನೆ!” ಎಂದು ವಿಕ್ರಮಿಯಾದ ನಹುಷನು ಹೇಳಿದನು)
ಸಂತುಲಿತಮಧ್ಯಾವರ್ತಗತಿ||
ಬೞಿಕಮಿಲ್ಲಿ ಕೇಳುತ್ತೆ ಗುರುವಿನೊಳ್ ಯಾನಮಾವುದಕ್ಕುಂ
ಕೆಳದಿಯಾಕೆಯಂ ಸೇರಲೆಂದೊಡನೆ ಶಿಬಿಕೆಯೊಂದು ಸಲ್ಗುಂ
ಸಲೆ ಮಹರ್ಷಿಗಳ ಗಣಮದಂ ಪೊತ್ತು ಸಾಗುವಾಗಳಕ್ಕುಂ
ಉಳಿದವರ್ಕಳಾರಿದನ ಮಾೞ್ದುದಿಲ್ಲೆನುತೆ ಪೇೞ್ದನದಕಂ ||೬೦||
( ಆ ಬಳಿಕ ಇಲ್ಲಿ ದೇವಗುರುವಿನಲ್ಲಿ “ಕೆಳದಿಯಾದ ಆಕೆಯನ್ನು ಸೇರುವುದಕ್ಕೆ ಯಾವ ಯಾನವು ಆಗಬಹುದು” ಎಂದು ಕೇಳಿದಾಗ ಗುರುವು ಅದಕ್ಕೆ “ಒಂದು ಶಿಬಿಕೆ(ಪಲ್ಲಕ್ಕಿ) ಆಗಬಹುದು. ಅದನ್ನು ಮಹರ್ಷಿಗಳ ಗುಂಪು ಹೊತ್ತು ಸಾಗುವಾಗ ಆಗುತ್ತದೆ. ಉಳಿದವರು ಯಾರೂ ಇದನ್ನು ಇಲ್ಲಿಯ ತನಕ ಮಾಡಿಲ್ಲ" ಎಂದು ಹೇಳಿದನು )
||ಇಂತು ನಹುಷನಿಂದ್ರನಾದುದುಂ ಶಚೀವೀಕ್ಷಣೆಯುಮೆಂಬ ಷಷ್ಠಂ ಸರ್ಗಂ||

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ