ಮೊದಲ ಸರ್ಗವನ್ನು ಇಲ್ಲಿ ನೋಡಿ-ಉರ್ವಶೀಜನನ ವೃತ್ತಾಂತಂ
~ ದ್ವಿತೀಯಂ ಸರ್ಗಂ ~
೨೦-೦೫-೨೦೧೫
ತೇಟಗೀತಿ||
ತೇಟಗೀತಿ||
ಒರ್ಮೆಗಂ ಸಾರ್ದಳುರ್ವಶಿಯೆ ಕೆಳದಿಯರೊಡಂ
ಕೂರ್ಮೆಯಿಂ ಪೃಥ್ವಿಯೊಳ್ ಸಂಚರಿಸುತೆ ನೋೞ್ಪಳ್
ಧರ್ಮಧನಕಾಮಮೋಕ್ಷಂಗಳಿಂದೆ ನಿತ್ಯಂ
ಕರ್ಮಪಥಮನೇ ಸೃಷ್ಟಿಸಿರ್ಪೆಡೆಯೆನುತ್ತುಂ||೧||
(ಒಮ್ಮೆಗೆ ಉರ್ವಶಿ ಗೆಳದಿಯರೊಡನೆ ಭೂಮಿಯಲ್ಲಿ ಧರ್ಮಾರ್ಥಕಾಮಮೋಕ್ಷಗಳಿಂದ ನಿತ್ಯವೂ ಕರ್ಮಪಥವನ್ನು ಸೃಷ್ಟಿಸಿರುವ ತಾಣ ಎಂದು ಪ್ರೀತಿಯಿಂದ ಸಂಚರಿಸುತ್ತಾ ನೋಡುತ್ತಿದ್ದಳು.)
ಸಪ್ತಸಾಗರಂ ಮೇರೆಯೆನೆ ಮೇರುವಿಂದಂ
ಕ್ಲೃಪ್ತಮಾಗಿರ್ಪ ಸುಸ್ಥಾನಮಲ್ತೆ ಪೃಥ್ವಿ
ಲುಪ್ತಮಾಗದ ಶ್ರೀಯಿಂದೆ ರಾಜಿಸುತಿರಲ್
ತಪ್ತಮಾದುದೂರ್ವಶಿಯಿಂದೆ ಜನಮನಂಗಳ್||೨||
(ಸಪ್ತಸಾಗರವೇ ಮೇರೆಯಾಗಿರುವ ಮೇರುವಿನಿಂದ ಸ್ಥಿರವಾದ ಪೃತ್ವಿ ಒಂದು ಸುಸ್ಥಾನವಲ್ಲವೇ! ಎಲ್ಲಿಯೂ ಲೋಪವಿಲ್ಲದ ಸಂಪತ್ತಿನಿಂದ ರಾರಾಜಿಸುತ್ತಿರುವಲ್ಲಿ ಉರ್ವಶಿಯಿಂದ ಜನರ ಮನಸ್ಸುಗಳು ಬೆಂದು ಹೋದವು.)
ಕ್ಷೀರಸಾಗರಕ್ಕೆಯ್ದಿದಳ್ ಸುಂದರಿಯವಳ್
ಚಾರುಗಾತ್ರಕ್ಕೆ ಬೆಂಗದಿರ್ ಸೋಂಕಿ ಸುಡುಗುಂ
ತಾರೆಗಳ ಪತಿಯೆ ಪುಟ್ಟಿರ್ಪ ತಣ್ಪಿನೆಡೆಯೊಳ್
ದೂರಮಕ್ಕುಮುಷ್ಣಮೆನುತ್ತೆ ಕೇಳಿಗಿಳಿದಳ್||೩||
(ಆ ಸುಂದರಿ ಕ್ಷೀರಸಾಗರಕ್ಕೆ ಬಂದಳು. ತನ್ನ ಕೋಮಲವಾದ ಶರೀರಕ್ಕೆ ಬಿಸಿಯಾದ ಕಿರಣಗಳು ಸುಡುತ್ತವೆ. ಹಾಗಾಗಿ ತಾರೆಗಳ ಪತಿಯಾದ ಚಂದ್ರನು ಹುಟ್ಟಿರುವ ತಂಪಿನ ಜಾಗವಿದು, ಉಷ್ಣ ದೂರವಾಗುತ್ತದೆ ಎಂದು ಆಟವಾಡಲು ಹಾಲ್ಗಡಲಿಗೆ ಇಳಿದಳು)
ಕಡಲೆ ಪಾಲಿಂದೆ ತುಂಬಿರಲ್ ನಾರಿಯರ್ಕಳ್
ಮಡುವಿನೊಳ್ ಮೀಯಲೀಸಾಡುತಿರ್ದರತ್ತಲ್
ಉಡುಪನೇಕರಂಗಿರ್ಪನೋ ಉಷ್ಣಕರದಿಂ
ಪೊಡವಿಯೊಳಗಿಂತು ಸಂದನೆಂಬಂತೆ ಕಾಣ್ಗುಂ ||೪||
(ಸಮುದ್ರವೇ ಹಾಲಿನಿಂದ ತುಂಬಿರುವಾಗ ನಾರಿಯರು ಮಡುವಿನಲ್ಲಿ ಜಲಕೇಳಿಯಾಡಲು ಈಸಾಡುತ್ತಿದ್ದರು. ಚಂದ್ರನೇ ಬಿಸಿಯ ಕಿರಣಗಳಿಂದ ಕರಗಿ ಭೂಮಿಗೆ ಸೇರಿದ್ದಾನೋ ಎಂಬಂತೆ ಕಾಣುತ್ತಿತ್ತು)
ರಜತದ ದ್ರವಂ ಸ್ವರ್ಣಕರನೆಡೆಯೊಳದು ತಾಂ
ಸೃಜಿಸಲಿಳೆಗೊಂದು ನೂಪುರಮನೆನುತುಮಿಟ್ಟರ್
ಅಜನ ಲೀಲೆಯೋ ಸೃಷ್ಟಿಯೊಳಗೆಂಬ ತೆಱದಿಂ
ರಜವಿಹೀನಮೀ ಕ್ಷೀರಾಬ್ಧಿ ರಾಜಿಸಿರ್ಕುಂ||೫||
(ಬೆಳ್ಳಿಯ ದ್ರವವು ಸ್ವರ್ಣಕಾರನಲ್ಲಿ ಹೀಗಿದ್ದುದನ್ನು ಸೃಜಿಸಿ ಭೂಮಿಗೊಂದು ಗೆಜ್ಜೆಯಂತೆ ಮಾಡಿಟ್ಟ. ಅದೇ ಕ್ಷೀರಸಾಗರ. ಸೃಷ್ಟಿಯಲ್ಲಿ ಬ್ರಹ್ಮನ ಲೀಲೆಯೋ ಎಂಬಂತೆ ರಜೋಗುಣವಿಲ್ಲದೇ ಈ ಕ್ಷೀರಸಾಗರ ರಾಜಿಸುತ್ತಿತ್ತು )
ಸಕಳನೃಪಕುಳದ ಕೀರ್ತಿನದಿ ಪರಿದು ಸೇರ್ದು
ಪ್ರಕಟಮಾಗಿರಲ್ ಕ್ಷೀರಾಬ್ಧಿಯಾದುದೋ ಮೇಣ್
ಸುಕರಮಪ್ಪಂತೆ ದಿಗ್ಗಜಂಗಳ್ಗೆ ಮೀಯಲ್
ಸುಕೃತಸರಮೆಂಬವೋಲಿರ್ಕುಮೀ ಪಯೋಧಿ||೬||
(ಎಲ್ಲಾ ರಾಜರ ಕುಲದ ಕೀರ್ತಿಯ ನದಿಯೇ ಹರಿದು ಸೇರಿ ಪ್ರಕಟವಾಗಿ ಕ್ಷೀರಸಾಗರವಾಗಿದೆಯೋ ಅಥವಾ, ಸುಕರವಾಗುವಂತೆ ದಿಗ್ಗಜಗಳಿಗೆ ಸ್ನಾನಕ್ಕಾಗಿ ಸರೋವರವನ್ನು ಮಾಡಿಟ್ಟಂತೆ ಈ ಸಮುದ್ರ ಕಾಣುತ್ತಿತ್ತು)
ಹಿತಮೆನಿಪ್ಪೊಂದು ತಣ್ಪಿನೊಡನಿರ್ಪ ಸವಿಯಿಂ
ಸತತಕೂಲಾವಸೇಚನಂಗೆಯ್ದು ಮತ್ತಂ
ವಿತತತಟದಿಂದೆ ಪಿಂ ಬಾರದಾಗಿ ಶುಷ್ಕಂ-
ಕೃತಮಿದಾಗಿಯುಂ ನೆಲನಿಂದೆ ಕ್ಷಯವಿಹೀನಂ||೭||
(ಹಿತವಾದ ಒಂದು ತಂಪಿನ ಜೊತೆಗೆ ಸಿಹಿಯಿಂದ ನಿರಂತರವಾಗಿ ದಡವನ್ನು ತೊಳೆಯುತ್ತ ಮತ್ತೆ ವಿಸ್ತಾರವಾದ ತಟದಿಂದ ಹಿಂದೆ ಬಾರದಾಗಿ ಶುಷ್ಕವಾಗುತ್ತಿದ್ದರೂ ಇದು ನೆಲದಿಂದ ಪೂರ್ಣವಾಗಿ ಕ್ಷಯವಾಗುತ್ತಿರಲಿಲ್ಲ. )
ಪದನೆಸೆವ ಪಾಕದಿಂ ರಸಧಿ ಮಧುರಮೆನಿಕುಂ
ಹೃದಯಕಂ ನೀೞ್ಗುಮಾನಂದಮಂ ನೆಗೞ್ದು
ಪದರದಿಂ ಸಾರ್ಚಿ ಕೂಲಂಕಷತ್ವದಿಂದಂ
ಸೊದೆಗಡಲ್ ಸತ್ಕವಿತೆಯಂತೆ ತೋರ್ದುದಲ್ತೆ||೮||
(ಚೆನ್ನಾಗಿ ಶೋಭಿಸುತ್ತಿರುವ ಪಾಕದಿಂದ, ರಸದಿಂದ ಮಧುರವೆನಿಸುತ್ತಿದೆ. ಹೃದಯಕ್ಕೆ ಆನಂದವನ್ನು ಕೊಡುತ್ತದೆ. ಪದರಗಳಿಂದ ಬಂದು ಬಂದು ಮತ್ತೆ ಕೂಲಂಕಷವಾಗಿ ಕ್ಷೀರಸಾಗರ ಒಂದು ಒಳ್ಳೆಯ ಕವಿತೆಯಂತೆ ಕಾಣುತ್ತಿತ್ತು.)
ವರಪಿತಂ ತಾನೆ ಸಂದಿರ್ಪ ಸಿರಿಗೆ ಪೆಱೆಗೆ
ಶರಧಿಚಯತರ್ಜನಂಕೃತಂ ಕೀರ್ತಿಯೆಂದು
ಭರದೆ ಕೈಪರೆದು ನಗುತಿರ್ಪ ತೆಱದೊಳಾಗಳ್
ಮೊರೆದು ಸಾರ್ದತ್ತು ವೀಚೀಚಯಂ ತಟಕ್ಕಂ||೯||
(ಕ್ಷೀರಸಾಗರ ತಾನೇ ಲಕ್ಷ್ಮಿಗೆ ಹಾಗೂ ಚಂದ್ರನಿಗೆ ತಂದೆಯೆಂದು, ಉಳಿದ ಸಮುದ್ರಗಳನ್ನೆಲ್ಲ ಬಯ್ಯುವ ಕೀರ್ತಿ ತನ್ನದೆಂದು ಕೈತಟ್ಟಿ ನಗುವಂತೆ ಅಲೆಗಳು ಶಬ್ದ ಮಾಡುತ್ತ ದಡಕ್ಕೆ ಬರುತ್ತಿದ್ದವು )
ಪಾಪಮಂ ಪುಣ್ಯಮಂ ಗೆಯ್ವ ಹರಿನಿವಾಸ-
ದ್ವೀಪಮಂಬೊಂದಿ ಮಧ್ಯದೊಳ್ ದಿವಿಜಪಥದಿಂ
ಸೈಪಿನೆಡೆಯಾಗುತಿರ್ಮಡಿಯೊಳಿರ್ಪುದದಱೊಳ್
ವ್ಯಾಪಿಸಿರ್ದಪರ್ ಕೇಳಿಯೊಳಗಾಗಳಿವರ್ಗಳ್||೧೦||
(ಪಾಪವನ್ನೂ ಪುಣ್ಯವನ್ನೂ ಮಾಡುವ ಹರಿಯ ನಿವಾಸವಾದ ಶ್ವೇತದ್ವೀಪವನ್ನು ಮಧ್ಯದಲ್ಲಿ ಹೊಂದಿ ಸ್ವರ್ಗಪಥದಿಂದ ಕೂಡಿ ಇಮ್ಮಡಿಯಿಂದ ಒಳ್ಳೆಯತನದ ತಾಣವಾಗಿರುವ ಅದರಲ್ಲಿ ಆಗ ಉರ್ವಶಿ ಗೆಳತಿಯರೊಡನೆ ಆಟವಾಡಲು ವ್ಯಾಪಿಸಿಕೊಂಡಿದ್ದರು )
ಇವರ ಮಂಜುಲಧ್ವನಿಯಿಂದೆ ಹಂಸವೃಂದಂ
ನವೆದು ನಾಣ್ಚಿರ್ದುದವರಾಡುತಿರ್ಪ ಪರಿಯಿಂ
ಕವಿ ವಿಹಗಚಯಂ ಸೋಲ್ತಿರಲ್ ಝಷನಿಕಾಯಂ
ತವೆ ಸುಲೋಚನಂಗಳನೀಕ್ಷಿಸುತಡಗಿರ್ಕುಂ ||೧೧||
(ಇವರ ಮಂಜುಲವಾದ ಧ್ವನಿಯಿಂದ ಹಂಸಗಳ ಗುಂಪು ದುಃಖಪಟ್ಟು ನಾಚಿಕೊಂಡಿತ್ತು. ಇವರು ಆಡುವ ರೀತಿಯಿಂದ ನೀರ್ವಕ್ಕಿಗಳು ಪಕ್ಷಿಗಳು ಸೋಲುತ್ತಿದ್ದವು. ಮೀನುಗಳು ಇವರ ಕಣ್ಣುಗಳನ್ನು ನೋಡಿ ಅಡಗಿಕೊಂಡವು)
ಅಲೆಗಳಂ ಪುಟ್ಟಿಸಲ್ಕಿವರ್ ಕಯ್ಯ ಬೀಸಲ್
ಸಲೆ ಮೃಣಾಲಂಗಳೇಂ ತೇಲ್ದುದೋಯೆನಿಕ್ಕುಂ
ಒಳಗೆ ತಾಂ ಮುೞುಂಗೇೞಲ್ಕೆ ಪೊಸತೆನಿಪ್ಪೀ
ನಳಿನಪುಷ್ಪಂ ವಿಕಸಿತಮೆಂತೆಂದು ಕಾಣ್ಗುಂ ||೧೨||
(ಅಲೆಗಳನ್ನು ಹುಟ್ಟಿಸಲು ಅವರು ಕೈಬೀಸುತ್ತಿರುವಾಗ ಮೃಣಾಲಗಳೇ ತೇಲುತ್ತಿದ್ದಂತೆ ಕಾಣುತ್ತಿತ್ತು. ಒಳಗೆ ಮುಳುಗಿ ಮತ್ತ ಏಳುವಾಗ ನಳಿನಪುಷ್ಪ ವಿಕಸಿತವಾದಂತೆ ಕಾಣುತ್ತಿತ್ತು)
ಬೊಗಸೆಯೊಳ್ ಕೊಂಡಳೊರ್ವಳಾ ಪಯಮನಾಗಳ್
ನಗುತುಮಭಿಷೇಕಮಂ ಗೆಯ್ವ ತೆಱದೆ ಶಿರಕಂ
ಸೊಗದೆ ಮೇಲಿಂದೆ ಬೀೞಿಸಲ್ ಪನಿಗಳಿಂದಂ
ಪುಗೆ ವಸಂತಂ ತುಷಾರಂ ಕರಂಗಿತೆನಿಕುಂ ||೧೩||
(ಒಬ್ಬಳು ಬೊಗಸೆಯಲ್ಲಿ ನೀರನ್ನು ಕೊಂಡಳು, ನಗುತ್ತಾ ಅಭಿಷೇಕವನ್ನು ಮಾಡುವಂತೆ ತಲೆಯ ಮೇಲಿನಿಂದ ನೀರಿನ ಹನಿಗಳನ್ನು ಬೀಳಿಸಿದಳು. ಅದು ವಸಂತ ಬಂದಾಗ ಹಿಮದ ಹನಿಗಳು ಕರಗಿ ಬಂದಂತೆ ಕಾಣುತ್ತಿತ್ತು)
ಪಿಡಿಯಲೊರ್ವಳಂ ಮತ್ತೊರ್ವಳತ್ತ ಸಾರ್ದಳ್
ಮುಡಿಗೆ ಮುಡಿಯಲ್ಕೆ ಮಾಲೆಯೊಳ್ ಪೂವನೊಂದಂ
ಇಡುತೆ ಮತ್ತೊಂದುಮಂ ಕೋದ ತೆಱದೆ ಕಾಣಲ್
ಕಡಲಿನಲೆಗಳಿಂ ಸೇಚಿಪಂತಾಯ್ತು ನೀರಂ ||೧೪||
(ಒಬ್ಬಳನ್ನು ಹಿಡಿಯಲು ಮತ್ತೊಬ್ಬಳು ಅತ್ತ ಬಂದಳು. ಮುಡಿಯಲ್ಲಿ ಒಂದು ಮಾಲೆಯನ್ನು ಮುಡಿದುಕೊಂಡಾಗ ಇನ್ನೊಂದು ಮಾಲೆಯನ್ನು ಅದರ ಜೊತೆಗೆ ಪೋಣಿಸಿದಂತೆ ಕಾಣುತ್ತಿತ್ತು. ಹೂವಿನ ಮಾಲೆಗೆ ಸಮುದ್ರದ ಅಲೆಗಳಿಂದ ನೀರನ್ನು ಸೇಚಿಸಿದಂತೆ ಕಾಣುತ್ತಿತ್ತು)
ಇದೊ ಇದೋ ದಾನವಾರಿಯೆಂದೆನುತೆ ಬಂದು
ಮುದದೆ ವಿಭ್ರಮಿಪ ಭ್ರಮರಂಗಳಂತೆ ಕಾಣ್ಗುಂ
ಚದುರೆಯರ್ಕಳೀಕ್ಷಣೆಯಿಂದ ಪರ್ವುತಿರ್ಪಾ
ಮದನಚಾಪಶಿಂಜಿನಿಯಂತೆ ತೋರ್ಪ ಕರ್ಪು||೧೫||
(“ಇದೊ ಇದೋ ಆನೆಯ ಮದದ ಧಾರೆಯೇ“ ಎಂದು ಬಂದು ಸಂತೋಷದಿಂದ ವಿಭ್ರಮಿಸುವ ದುಂಬಿಗಳ ಹಾಗೆಯೇ, ಚದುರೆಯರ ಕಣ್ಣ ನೋಟದಿಂದ ಹಬ್ಬುತ್ತಿರುವ ಮದನನ ಬಿಲ್ಲಿನ ಹೆದೆಯಂತೆ ಕಾಣುವ ಕಪ್ಪು ತೋರುತ್ತಿತ್ತು)
ಕೇಳಿಯೊಳಗಿರ್ಪಳುರ್ವಶಿಯ ಚೆಲ್ವನೆಂತೋ
ಲೀಲೆಯಿಂದೀಕ್ಷಿಸುತ್ತಲ್ಲಿ ನಿಂತು ಮನುಜರ್
ಕಾಲಪಾಶಕ್ಕೆ ಸಿಲ್ಕಿದರ್ ತಿಳಿಯದಂತೆ
ವೇಳೆಯಂ ಮುಪ್ಪು ಜಪ್ಪರಿಸುತುಣ್ಬುದುಮನೇ ||೧೬||
(ಆಟವಾಡುತ್ತಿರುವ ಉರ್ವಶಿಯ ಚೆಲುವನ್ನು ಹೇಗೋ ಲೀಲೆಯಿಂದ ನೋಡುತ್ತ ಅಲ್ಲಿ ನಿಂತ ಮನುಜರು ಕಾಲಕ್ಕೇ ಮುಪ್ಪು ಜಪ್ಪರಿಸುತ್ತ ಅದನ್ನೇ ತಿನ್ನುವುದನ್ನೂ ತಿಳಿಯದಂತೆಯೇ ಕಾಲಪಾಶಕ್ಕೆ ಸಿಕ್ಕರು.)
ಅವಳ ಚೆಲುವನಾಂ ಬಣ್ಣಿಪೆನೆನುತ್ತೆ ಬಂದು
ಕವಿಯೆ ಬರೆಯುತ್ತುಮಿರ್ಪ ಬಲ್ಗಬ್ಬದಿಂದಂ
ಛವಿಯನೊಂದಿರ್ಪ ವರ್ಣಂಗಳೆಸೆದುವೀಗಳ್
ರವಿ ಗಮಿಸುತಿರಲ್ ಸಾರ್ದ ತಾರೆಗಳ ರೂಪಿಂ||೧೭||
(ಅವಳ ಚೆಲುವನ್ನು ನಾನು ಬಣ್ಣಿಸುವೆ ಎಂದು ಬ್ರಹ್ಮನೇ ಬಂದು ಮಹಾಕಾವ್ಯದಂತೆ ಬರೆಯುತ್ತಿದ್ದಾನೆ. ಅದರಲ್ಲಿ ಸೂರ್ಯ ಹೋದ ಬಳಿಕ ಬರುವ ನಕ್ಷತ್ರಗಳಂತೆ ಕಾಂತಿಯಿಂದ ಕೂಡಿದ ಬಣ್ಣಗಳು ಹೊಳೆದವು. )
ಪೂರ್ವ ಕವಿಗಳೆಲ್ಲರ ನುಡಿಯನಂತು ಮೀರ್ದು
ಕೊರ್ವನಿೞಿಪೆನೆಂದೆನುತೆ ಮೂದಲಿಪವೋಲೇ
ಉರ್ವಶಿಯವಪುಃಕಾಂತಿಯದು ಭಾಸಿಕುಂ ತಾಂ
ಸರ್ವ ಮೌನಿಗಳ ಮೌನಕರಿ ಮೌನದಿಂದಂ||೧೮||
(ಹಿಂದಿನ ಕವಿಗಳೆಲ್ಲರ ನುಡಿಗೆ ನಿಲುಕದಂತೆ ಅವರ ಕೊಬ್ಬನ್ನು ಇಳಿಸುವೆ ಎಂದು ಮೂದಲಿಸುವಂತೆ ಉರ್ವಶಿಯ ದೇಹದ ಕಾಂತಿ ಭಾಸವಾಗುತ್ತಿತ್ತು. ಅದು ಮೌನವಾಗಿಯೇ ಮುನಿಗಳೆಲ್ಲರ ಮೌನಕ್ಕೆ ಶತ್ರುವಾದಂತೆ ಭಾಸವಾಗುತ್ತಿತ್ತು)
ಸ್ಮರನ ನಾಲ್ಕನೆಯ ಬಾಣಮೇ ಮೂರ್ತಿವೆತ್ತೀ
ವರವಧೂರೂಪದಿಂದಿರ್ಕುಮಲ್ತೆ ಪೇೞಲ್
ಹರಿಯೆ ತಾಂ ಸಿತದ್ವೀಪದೊಳ್ ನಿಂದು ಕಂಡು
ಮರೆತು ಲೋಕಮಂ ಮಲಗಿದಂ ಮೂರ್ಛೆಯಿಂದಂ||೧೯||
(ಮನ್ಮಥನ ನಾಲ್ಕನೆಯ ಬಾಣವೇ ಮೂರ್ತಿವೆತ್ತು ಈ ಸುಂದರಿಯಾದ ರೂಪವನ್ನು ಹೊಂದಿದಳೆಂದು ಹೇಳಲು ಶ್ರೀಹರಿಯೇ ಶ್ವೇತದ್ವೀಪದಲ್ಲಿ ನಿಂದು ಇವಳ ರೂಪನ್ನು ಕಂಡು ಲೋಕವನ್ನೆಲ್ಲ ಮರೆತು ಮೂರ್ಛೆಯಿಂದ ಮಲಗಿದನು)
ಕಟಿಯ ಶೂನ್ಯತ್ವದೊಳ್ ಪುರುಷಲೋಕಮೆಲ್ಲಂ
ಸ್ಫುಟಮೆನಿಪ್ಪಂತೆ ಕೞೆದು ಪೋದುದು ಬೞಿಕ್ಕಂ
ನಟಿಪರುೞಿದವರ್ ಪುರುಷರ್ಕಳಂತೆವೊಲ್ ತಾಂ
ಚಟುಲರೆಂಬಂತೆ ಘಟಿತಮುರ್ವಶಿಯ ಚೆಲ್ವು||೨೦||
(ಇವಳ ಸೊಂಟದ ಕೃಶತ್ವದಲ್ಲಿ ಪುರುಷಲೋಕವೇ ಕಳೆದುಹೋಯಿತು. ಬಳಿಕ ಉಳಿದವರು ಪುರುಷರಂತೆ ನಟಿಸುತ್ತಿದ್ದಾರೆ ಅಷ್ಟೆ. ಹೀಗೆ ಚಟುಲವಾಗಿದೆ ಉರ್ವಶಿಯ ಚೆಲ್ವು)
೨೧-೦೫-೨೦೧೫
೨೧-೦೫-೨೦೧೫
ಈಕ್ಷಿಸಲ್ ಕೇಕರಾಕ್ಷಂಗಳಿಂದಮೊರ್ಮೆ
ಲಕ್ಷಮಾದತ್ತು ಮನ್ಮಥನ ಶರದ ಹತಿಯುಂ
ಅಕ್ಷರಂಗಳಿಂ ವಿರಹಮಂ ಬಣ್ಣಿಸಲ್ಕೇಂ
ದೀಕ್ಷಿತಳ್ ನೇತ್ರಸಂಜ್ಞೆಯಿಂ ಚಿತ್ರಕವಿಯೋ||೨೧||
(ಓರೆನೋಟದಿಂದ ಒಮ್ಮೆ ಇವಳು ನೋಡಿದರೂ ಮನ್ಮಥನ ಬಾಣದ ಹೊಡೆತ ಲಕ್ಷಕ್ಕೆ ಸಮನಾಗುತ್ತಿತ್ತು. ಅಕ್ಷರಗಳಿಂದ ವಿರಹವನ್ನು ಬಣ್ಣಿಸಲೆಂದು ದೀಕ್ಷಿತಳಾದ ಇವಳೇನು ಕಣ್ಣನೋಟವನ್ನೇ ಕಾವ್ಯವನ್ನಾಗಿಸಿದ ಚಿತ್ರಕವಿಯೋ!)
ಕಡಲಿನಲೆಗಳೊಳ್ ತೇಲುತೆ ಮುೞುಂಗುತಿರ್ಪ
ಬಡನಡುವಿನವಳ ಕುಚಯುಗ್ಮಮೀಕ್ಷಿಪರ್ಗಂ
ಉಡುಪನೇ ಪುಟ್ಟಿ ಬರುತಿರ್ಪನೇನೊ ಮತ್ತೆ
ಪೊಡೆಯ ದೋಷದೂರನಿವನೆಂಬಂತೆ ತೋರ್ಕುಂ||೨೨||
(ಕಡಲಿನ ಅಲೆಗಳಲ್ಲಿ ತೇಲುತ್ತ ಮುಳುಗುತ್ತಿರುವ ಕೃಶವಾದ ಸೊಂಟವುಳ್ಳವಳ ಸ್ತನಯುಗಳವನ್ನು ನೋಡುವವರಿಗೆ, ತನ್ನ ಒಡಲಿನ ಕಪ್ಪು ಬಣ್ಣವನ್ನು ಕಳೆದುಕೊಂಡು ಮತ್ತೆ ಸಮುದ್ರದಿಂದ ಚಂದ್ರನೇ ಹುಟ್ಟಿ ಬರುತ್ತಿದ್ದಂತೆ ಕಾಣುತ್ತಿತ್ತು)
ಸ್ವಕಕರಂಗಳಿಂ ಸೋಂಕಲ್ಕೆ ಬಯಸಿ ನೇಸಱ್
ಮುಕುಳಿತಾನನೆಯ ಕಡೆಗೊರ್ಮೆ ಸಾರ್ದೊಡದಱಿಂ
ಮುಕುರದೊಳ್ ಬಿಂಬಮೇ ಕಂಡ ತೆಱದೆ ತೇಜಂ
ಪ್ರಕಟಮಾಗಿ ಪ್ರತಿಫಲಿಸಲ್ಕೆ ಬೆರ್ಚುತಿರ್ಪಂ ||೨೩||
(ತನ್ನ ಕರಗಳಿಂದ (ಕೈ/ಕಿರಣ) ಸೋಕಲು ಬಯಸಿದ ಸೂರ್ಯ ಅರಳಿದ ಮೊಗದವಳ ಕಡೆಗೆ ಬಂದ. ಅದರಿಂದ ಕನ್ನಡಿಯಲ್ಲಿ ಪ್ರತಿಬಿಂಬವನ್ನೇ ಕಂಡಂತೆ ಪ್ರತಿಫಲಿಸುತ್ತಿರುವ ಪ್ರಕಾಶವನ್ನು ಕಂಡು ಅವನೂ ಹೆದರುತ್ತಿದ್ದಾನೆ)
ಸ್ಪೃಹೆಯನಾವಗಂ ಪುಟ್ಟಿಪಳ್ ನಿಸ್ಪೃಹರ್ಗಂ
ಮಹಿಧರಂಗಳುಂ ಚಂಚಲತೆವೆತ್ತು ನಿಲ್ವರ್
ಮಹಿತ ಸುರನಿಕರಮಿವಳನೀಕ್ಷಿಸಲೆನುತ್ತುಂ
ದಹಿಸಿ ಸಾರ್ಗುಂ ಸ್ವಕರ್ಮಂಗಳನೆನಿತೊ ದಲ್||೨೪||
(ನಿಸ್ಪೃಹರಲ್ಲಿಯೂ ಸ್ಪೃಹೆಯನ್ನು ಹುಟ್ಟಿಸುವವಳು, ಸ್ಥಿರವಾದ ಪರ್ವತಗಳೂ ಚಂಚಲತೆಯಿಂದ ನಿಲ್ಲುವುವು. ಮಹನೀಯವಾದ ದೇವತಾವೃಂದವೇ ಅವಳನ್ನು ನೋಡಬೇಕೆಂದು ತಮ್ಮ ಕರ್ಮಗಳನ್ನು ಸುಡಲಿ ಎಂದು ಬಿಟ್ಟು ಸಾರುತ್ತಿತ್ತು)
ವರುಣನಂತಾಗಲೆಯ್ದಿದಂ ದಿವಿಜಪಥದೊಳ್
ಸ್ಮರಧನುಸ್ಸಾದುದುರ್ವಶಿಯ ಪುರ್ವುಗಳ್ ಮೇಣ್
ಕುರುಳೆ ಪೆದೆಯಾಗೆ ಕಡೆಗಣ್ಣ ನೋಟದಿಂದಂ
ಶರವಿಘಾತಿಯಾದುದವನೆರ್ದೆಗಂ ಮದನನಿಂ||೨೫||
(ವರುಣನೂ ಆಗ ಆಕಾಶ ಮಾರ್ಗದಲ್ಲಿ ಬಂದನು. ಉರ್ವಶಿಯ ಹುಬ್ಬುಗಳೇ ಮನ್ಮಥನ ಬಿಲ್ಲಾಯಿತು. ಅವಳ ಮುಂಗುರುಳುಗಳೇ ಬಿಲ್ಲಿನ ಹೆದೆಯಾಯಿತು. ಕಡೆಗಣ್ಣ ನೋಟದಿಂದಲೇ ಮನ್ಮಥನ ಬಾಣಗಳಿಂದ ಅವನ ಎದೆಗೆ ಗಾಯವಾಯಿತು)
ಕಾವನಿಂ ಬಗೆಯ ಬೇಗುದಿಯೆ ಪೆರ್ಚಿರಲ್ಕೆ
ಪೂವ ವಲ್ಲಿಯಂತಿರ್ಪಳವಳಂ ಕರೆಯುತುಂ
ಭಾವಿಸೆನ್ನುಮಂ ಸೇರ್ದು ನೀಂ ತಣ್ಪನೀಯೌ
ಹೇ! ವಿಲಾಸಿನಿಯೆ ಬೇಗದಿಂದೆಂದು ಪೇೞ್ದಂ ||೨೬||
(ಮನ್ಮಥನಿಂದ ಮನಸ್ಸಿನ ಬೇಗುದಿ ಹೆಚ್ಚಾಗುತ್ತಿರಲು ಹೂವಿನ ಬಳ್ಳಿಯಂತಿರುವ ಅವಳನ್ನು ಕರೆಯುತ್ತಾ “ ಹೇ ವಿಲಾಸಿನಿಯೇ! ಬೇಗದಿಂದ ಭಾವಿಸಿ ನನ್ನನ್ನೂ ಸೇರಿ ಮನ್ಮಥನ ತಾಪಕ್ಕೆ ತಂಪನ್ನು ಕೊಡು” ಎಂದು ಹೇಳಿದನು.)
ಚಾದಗೆಯು ಶರನ್ಮೇಘಮಂ ಕಂಡು ಕೂಗಿ
ರೋದಿಸಲ್ಕೆಂತು ಪಡೆವುದಂಬುವನದಂತೆ
ಮೇದಿನೀತಲದೊಳಾಡಿರ್ಪವಳ್ ಬೞಿಕ್ಕಂ
ಪೋದಪಳ್ ತಿರಸ್ಕರಿಸುತ್ತೆ ವರುಣವಚಮಂ||೨೭||
(ಚಾತಕ ಪಕ್ಷಿಯು ಶರತ್ಕಾಲದ ಮೋಡವನ್ನು ಕಂಡು ಕೂಗಿ ರೋದಿಸಿದರೆ ಮಳೆಯ ನೀರನ್ನು ಪಡೆಯುತ್ತದೆಯೇ? ಅಂತೆಯೇ ಮೇದಿನಿಯಲ್ಲಿ ಆಡುತ್ತಿದ್ದ ಉರ್ವಶಿಯೂ ಆ ವರುಣನ ಮಾತನ್ನು ತಿರಸ್ಕರಿಸಿ ಹೋದಳು)
ಮಿತ್ರನಿಂ ವಶಂ ಮದ್ವಪುವಿದದಱಿನೀಗಳ್
ಪುತ್ರವಾಂಛೆಯಿಂ ಬಂದೊಡಂ ಸೇರಲಾಱೆಂ
ಚಿತ್ರಮೆನಿಕುಂ ವರುಣನೆ ಪೋ! ಚಿಃ ನರಂಬೊಲ್
ಪಾತ್ರತೆಯನಱಿಯಲಾಱೆಯಾ! ಎಂದಳಾಗಳ್||೨೮||
(ನನ್ನ ಶರೀರ ಮಿತ್ರನ ವಶವಾದುದಾಗಿದೆ. ಅದರಿಂದ ಈಗ ನೀನು ಪುತ್ರಕಾಮದಿಂದ ಬಂದರೂ ಸೇರಲಾರೆ. ಚಿಃ! ವರುಣನೇ, ಮನುಷ್ಯರಂತೆಯೇ ನೀನೂ ಪಾತ್ರತೆಯನ್ನು ಅರಿಯಲಾರೆಯಾ? ಇದು ವಿಚಿತ್ರವೆನಿಸುತ್ತದೆ” ಎಂದಳು)
ಕೇಳ್ದು ಕೋಪದಿಂ ವರುಣನುರ್ವಶಿಗಮಿಂತು
ಪೇೞ್ದಪಂ ಶಾಪವಚನಮಂ ಕಾಂಸ್ಯರವದಿಂ
ಬಾೞ್ದು ನರರೊಡಂ ಬಾ ಬೞಿಕಮೆಂದು ಜಗದೊಳ್
ತಾೞ್ದು ಕಾಲದೊಳ್ ಸ್ಫೋಟಮಾದಗ್ನಿಯಂತೆ ||೨೯||
(ಅದನ್ನು ಕೇಳಿ ಕೋಪದಿಂದ ವರುಣನು ಉರ್ವಶಿಗೆ ಕಂಚಿನ ಶಬ್ದದಂತೆ “ಭೂಮಿಯಲ್ಲಿ ನರರ ಜೊತೆ ಬಾಳಿ ಬರುವಂತವಳಾಗು” ಎಂದು ಅಗ್ನಿ ಸ್ಫೋಟವಾಗುವಂತೆ ಶಾಪವನ್ನು ಕೊಟ್ಟನು)
ಸ್ಖಲಿತಮಾದತ್ತು ಶಾಪಾಕ್ಷರಂಗಳೊಡನೆ
ಫಲಿತಮಪ್ಪುದಾ ರೇತಸ್ಸು ವರುಣನಿಂದಂ
ಅಲಿಖತದಲೇಖಮೆಂದವಳ್ ಬಗೆದು ಮನದೊಳ್
ನೆಲಕೆ ಬೀೞ್ವಮೊದಲೇ ಪಿಡಿದಳದನದೆಂತೊ ||೩೦||
(ಶಾಪಾಕ್ಷರಗಳು ಸ್ಖಲಿತವಾಗುವಾಗಳೇ ವರುಣನಿಂದ ಫಲಿತವಾಗಬಲ್ಲಂತಹ ರೇತಸ್ಸೂ ಸ್ಖಲಿತವಾಯಿತು. ಇದೆಲ್ಲ ಹಣೆಯ ಬರೆಹ ಎಂದುಕೊಂಡು ಉರ್ವಶಿ ಆ ರೇತಸ್ಸನ್ನು ನೆಲಕ್ಕೆ ಬೀಳುವ ಮೊದಲೇ ಹೇಗೊ ಹಿಡಿದಳು)
ದಿವಿಜವೀರ್ಯವಿದು ಸತ್ಕ್ಷೇತ್ರದೊಳಗೆ ಬಳೆಯಲ್
ಭವಿಪುದಲ್ತೆ ತೇಜಸ್ವಿಯೊರ್ವನ ಶರೀರಂ
ಸವರದಾರಮೃತಬಿಂದುವಿಂ ಪುಟ್ಟುವರ್ಗಂ
ಹವಿಯನುಂಡಿರ್ಪ ಪುಣ್ಯಚಯಸಂಸ್ಕೃತನಿವಂ||೩೧||
(ದೇವತೆಗಳ ವೀರ್ಯ ಇದು. ಒಳ್ಳೆಯ ಕ್ಷೇತ್ರದಲ್ಲಿ ಬೆಳೆದರೆ ತೇಜಸ್ವಿಯೊಬ್ಬನ ಶೇಖರವಾಗಿ ಬೆಳೆಯುತ್ತದೆಯಲ್ಲವೇ! ಅಮೃತದ ಬಿಂದುವಿನಿಂದ ಹುಟ್ಟುವವರಿಗೆ ಸಮಾನರಾರು ಯಾರು? ಹವಿಸ್ಸುಗಳನ್ನುಂಡು ಪುಣ್ಯವನ್ನು ಸಂಪಾದಿಸಿದ ಸಂಸ್ಕೃತನು ಈತನು.)
ಎನುತೆ ಕೊಂಡಳೊಂದಂ ಮೃತ್ತಿಕೆಯ ಘಟಮನೆ
ಪನಿಗಳಾತನಿಂ ಸ್ಖಲಿತಮಂ ಸೇರಿಸಿಟ್ಟಳ್
ಮನುವಿನಿಂ ಪ್ರಲಯಕಾಲದೊಳ್ ಸೃಷ್ಟಸಕಲಂ
ವಿನುತಮಪ್ಪಂತೆ ಸಂಗೃಹೀತಮೆನುವವೊಲೇ||೩೨||
(ಎನ್ನುತ್ತಾ ಒಂದು ಮಣ್ಣಿನ ಮಡಕೆಯನ್ನು ತೆಗೆದುಕೊಂಡು ಮನುವಿನಿಂದ ಪ್ರಳಯದ ಕಾಲದಲ್ಲಿ ಸಕಲಸೃಷ್ಟಿಯೂ ಸಂಗೃಹೀತವಾದಂತೆ ಆತನಿಂದ ಸ್ಖಲಿತವಾದ ಹನಿಗಳನ್ನು ಸೇರಿಸಿಟ್ಟಳು. )
ಸೂರ್ಯನಲ್ತೆ ಜಗದಕ್ಷಿಯಿದನೀಕ್ಷಿಸುತ್ತುಂ
ವೀರ್ಯಮಂ ತಾನುಮಿಟ್ಟನಾ ಘಟದೊಳಾಗಳ್
ಪರ್ಯಟಿಸೆ ಕಾಲಚಕ್ರಮದ್ಭುತಮೆನಿಪವೊಲ್
ಆರ್ಯೆಯುರ್ವಶಿಯ ಕುಂಭದಿಂ ಪುತ್ರರಾದರ್||೩೩||
(ಜಗತ್ತಿನ ಕಣ್ಣಾದ ಸೂರ್ಯ ಇದನ್ನೆಲ್ಲ ನೋಡುತ್ತಾ, ತಾನೂ ವೀರ್ಯವನ್ನು ಆ ಘಟದಲ್ಲಿ ಇಟ್ಟನು. ಕಾಲಚಕ್ರವು ಪರ್ಯಟಿಸುತ್ತಾ ಅದ್ಭುತವೆನ್ನುವಂತೆ ಆರ್ಯೆಯಾದ ಉರ್ವಸಿಯ ಕುಂಭದಿಂದ ಪುತ್ರರು ಉದ್ಭವಿಸಿದರು)
ಅದು ಗಡಾ ವಿಚಿತ್ರಂ ಯುಗ್ಮಪುತ್ರರಾಗಳ್
ಸೊದೆಗಡಲ್ ಮಿಕ್ಕುದುರ್ಕಿ ಪರಿದತ್ತು ಚೆನ್ನಿಂ
ಬಿದಿಯ ಲೀಲೆಯಿಂ ವೀರ್ಯಮಂ ಮಿತ್ರವರುಣರ್
ಪುದುವಿಡಲ್ಕೆ ಮೈತ್ರಾವರುಣಿಯೆನಿಪರೆಯ್ದರ್||೩೪||
(ಅದು ವಿಚಿತ್ರವಲ್ಲವೇ! ಎರಡು ಮಕ್ಕಳು ಜನಿಸಿದರು. ಅಮೃತದ ಕಡಲು ಚೆನ್ನಾಗಿ ಉಕ್ಕಿ ಹರಿದಿತ್ತು. ವಿಧಿಯ ಲೀಲೆಯಿಂದ ಮಿತ್ರವರುಣರು ವೀರ್ಯವನ್ನು ಒಟ್ಟಾಗಿಟ್ಟ ಕಾರಣ ಮೈತ್ರಾವರುಣಿಯೆಂಬ ಇಬ್ಬರು ಹುಟ್ಟಿದರು)
ಅತಿಶಯದೆ ತೋಷಮಾದುದಿನವರುಣರಿರ್ವ-
ರ್ಗತಿವಿಶಾಲಮನದಿಂ ಪಾಲಿಸಲ್ಕವಳದಂ
ಹಿತಮೆನಿಪ್ಪಂತೆ ಲೋಕತ್ರಯಂ ಪೊಗೞಿರಲ್
ಧೃತಮತಿಗಳಿರ್ವರೊಳಗಿಂತು ಪೇೞ್ದನೊರ್ವಂ ||೩೫||
(ಸೂರ್ಯ ವರುಣ ಇಬ್ಬರಿಗೂ ಅತಿಶಯವಾದ ಸಂತೋಷವಾಯಿತು. ಅವಳು ವಿಶಾಲವಾದ ಮನಸ್ಸಿನಿಂದ ಪಾಲಿಸಿರಲು, ಹಿತವಾಗುವಂತೆ ಮೂರು ಲೋಕಗಳೂ ಹೊಗಳುತ್ತಿರಲು, ಧೃತಮತಿಗಳಾದ ಇಬ್ಬರಲ್ಲಿ ಒಬ್ಬನು ಹೀಗೆ ಹೇಳಿದನು-)
ಸೀಸಪದ್ಯ||
ಮಜ್ಜನಕನೇ ವರುಣನಿವನಮ್ಮೆ ಮಿತ್ರನೈ ವಿಜ್ಜನಕೆ ಪರಿತೋಷಮಪ್ಪ ಕತದಿಂ
ಹೃಜ್ಜಾತಭಾವದಿಂ ಬೀಜಪ್ರಭಾವದಿಂದುಜ್ಜುಗದೆ ತಪಮುಚಿತಮೆನಿಕುಮೆಮಗಂ
ಅಜ್ಜರಿರ! ಪೋಪೆವಾಂ ತಪಕೆಂದು ಕಾನನಕೆ ಬಿಜ್ಜೆಯದು ಮುಕ್ತಿಯಂ ನೀೞ್ವುದಲ್ತೆ
ಕಜ್ಜಮಿದೆ ಲೋಕಮೇ ಮೆಚ್ಚಿರಲ್ಕೊಳ್ಪಕ್ಕೆ ಸಜ್ಜನರ್ ಪೆರ್ಚುಗೆ ಮಹೀತಳದೆ ದಲ್|
ಎಂದು ವಿದ್ಯಾವಿನಯಸಂಪದಾತ್ತಯುಗ್ಮರ್
ತಂದೆಯರ್ಕಳಂ ನಮಿಸಿ ನಡೆದಿರ್ದರತ್ತಲ್
ಮುಂದೆ ಬ್ರಹ್ಮರ್ಷಿವಿಖ್ಯಾತನಾ ವಸಿಷ್ಠಂ
ಸಂದ ಮಿತ್ರಜಂ ವರುಣಸಂಭವನಗಸ್ತ್ಯಂ||೩೬||
(“ನನ್ನ ತಂದೆಯೇ ವರುಣನು. ಇವನ ಅಪ್ಪ ಮಿತ್ರ. ವಿದ್ವಾಂಸರಿಗೆಲ್ಲ ಸಂತೋಷವಾಗುವ ಕಾರ್ಯದಿಂದ, ಮನಸ್ಸಿನಲ್ಲಿ ಹುಟ್ಟಿದ ಭಾವದಿಂದ ಹುಟ್ಟಿಗೆ ಕಾರಣವಾದ ಬೀಜಪ್ರಭಾವದಿಂದ ತಪಸ್ಸಿನಲ್ಲಿ ಉದ್ಯುಕ್ತರಾಗುವುದೇ ಯೋಗ್ಯ ಎಂದು ನಮಗೆ ಅನಿಸಿತು. ಆರ್ಯರೇ! ನಾವು ತಪಸ್ಸಿಗೆಂದು ಕಾಡಿಗೆ ಹೋಗುತ್ತೇವೆ. ವಿದ್ಯೆ ಎಂದರೆ ಮುಕ್ತಿ ಕೊಡುವುದೇ ಅಲ್ಲವೇ! ಕಾರ್ಯವು ಇದೇ! ಲೋಕವೆಲ್ಲ ಮೆಚ್ಚಲು ಎಲ್ಲರಿಗೂ ಒಳ್ಳೆಯದಾಗಲಿ. ಭೂಮಿಯಲ್ಲಿ ಸಜ್ಜನರು ಹೆಚ್ಚಲಿ” ಎಂದು ವಿದ್ಯಾವಿನಯಗಳೆಂಬ ಸಂಪತ್ತಿನಿಂದ ಕೂಡಿದವರಿಬ್ಬರೂ ತಂದೆಯರಿಗೆ ನಮಸ್ಕರಿಸಿ ನಡೆದರು. ಹೀಗೆ ಮಿತ್ರನಿಂದ ಹುಟ್ಟಿದವನೇ ಮುಂದೆ ಬ್ರಹ್ಮರ್ಷಿಯಾದ ವಸಿಷ್ಠನು.ವರುಣನಿಂದ ಹುಟ್ಟಿದವನೇ ಅಗಸ್ತ್ಯನು)
||ಇಂತಗಸ್ತ್ಯಜನನವೃತ್ತಾಂತಮೆಂಬ ದ್ವಿತೀಯಂ ಸರ್ಗಂ||
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ