Powered By Blogger

ಬುಧವಾರ, ಜುಲೈ 1, 2020

ಕುಂಭಸಂಭವೀಯಮೆಂಬ ಅಗಸ್ತ್ಯಚರಿತೆ- ಕವಿಕಾವ್ಯಪರಿಚಯ

ಮೊದಲ ಸರ್ಗವನ್ನು ಇಲ್ಲಿ ನೋಡಿ- ಉರ್ವಶೀಜನನವೃತ್ತಾಂತಂ
ಎರಡನೇ ಸರ್ಗವನ್ನು ಇಲ್ಲಿ ನೋಡಿ- ಅಗಸ್ತ್ಯಜನನವೃತ್ತಾಂತಂ
ಮೂರನೇ ಸರ್ಗವನ್ನು ಇಲ್ಲಿ ನೋಡಿ- ಸಾಗರಾಗಮನವೃತ್ತಾಂತಂ 
ನಾಲ್ಕನೇ ಸರ್ಗವನ್ನು ಇಲ್ಲಿ ನೋಡಿ- ಸಾಗರಗರ್ವಭಂಗ, ಕಾಲಕೇಯಹನನಂ
ಐದನೇ ಸರ್ಗವನ್ನು ಇಲ್ಲಿ ನೋಡಿ- ಅಗಸ್ತ್ಯವಿವಾಹಂ, ಇಲ್ವಲವಾತಾಪಿಹನನಂ
ಆರನೇ ಸರ್ಗವನ್ನು ಇಲ್ಲಿ ನೋಡಿ- ನಹುಷನಿಂದ್ರನಾದುದುಂ ಶಚೀವೀಕ್ಷಣೆಯುಂ
ಏಳನೇ ಸರ್ಗವನ್ನು ಇಲ್ಲಿ ನೋಡಿ- ನಹುಷಶಾಪಪ್ರಾಪ್ತಿ
ಎಂಟನೇ ಸರ್ಗವನ್ನು ಇಲ್ಲಿ ನೋಡಿ- ವಿಂಧ್ಯಸ್ತಂಭನಂ


~ನವಮಂ ಸರ್ಗಂ ~
೦೨/೦೬/೨೦೧೫
ಸಾಂಗತ್ಯ//
ಕೋಡಖಂಡದೊಳಿರ್ಪ ಕ್ಷಿಪ್ರಪ್ರಸಾದನೇ
ನೀಡಲ್ಕೆ ವರಮನೀ ಕವಿಗಂ
ಪಾಡುಗಬ್ಬಮನಿಂತು ಪೇೞಿರ್ಪಂ ಛಂದದೊ-
ಳಾಡುತ್ತೆ ಬುಧರೆಲ್ಲರ್ ಮೆಚ್ಚಲ್ ||||
(ಕೋಡಖಂಡದಲ್ಲಿ ಇರುವ ಕ್ಷಿಪ್ರಪ್ರಸಾದನಾದ ಗಣಪತಿಯು ಈ ಕವಿಗೆ ವರವನ್ನು ಕೊಡಲು, ವಿದ್ವಾಂಸರೆಲ್ಲರೂ ಮೆಚ್ಚುವಂತೆ, ಛಂದದಲ್ಲಿ ಆಡುತ್ತ ಕವಿಯು ಈ ಪಾಡುಗಬ್ಬವನ್ನು ಹೀಗೆ ಹೇಳಿದನು)
ಪದಿನಾಲ್ಕು ದೆವಸಂಗಳೊಳಗೆಂಟು ಸರ್ಗಂಗ-
ಳೊದವಾಯ್ತಗಸ್ತ್ಯಚರಿತೆಯು
ಪದಪಿಂದೆ ನಾನ್ನೂಱಂ ಮೀರ್ದ ಪದ್ಯಂಗಳಿಂ-
ದಿದೊ ಪೆತ್ತ ಪೊಸಗಬ್ಬಮಲ್ತೆ ||||
(ಹದಿನಾಲ್ಕು ದಿವಸಗಳಲ್ಲಿ ಎಂಟು ಸರ್ಗಗಳು ಒದವಿ ಈ ಅಗಸ್ತ್ಯಚರಿತೆಯು ಆಯಿತು. ಚೆನ್ನಾಗಿ ನಾಲ್ಕು ನೂರನ್ನು ಮೀರಿ ಪದ್ಯಗಳನ್ನು ಹೆತ್ತಿರುವ ಇದು ಹೊಸಗಬ್ಬವಲ್ಲವೇ (ಹೊಸದಾದ ಕಬ್ಬ-ಕಾವ್ಯ/ ಹೊಸದಾದ ಗಬ್ಬ-ಗರ್ಭ))
ಮೊದಲ ಸರ್ಗದೊಳಿರ್ಕುಂ ಪದ್ಯಂಗಳೈವತ್ತು
ಪದಪಿಂದೆ ಕಂದಮೆ ಛಂದಂ
ಮುದದ ಮಾಲಿನಿಯೊಂದು ಸರ್ಗಾಂತ್ಯಕ್ಕಿರ್ಪುದಂ-
ತದೆಯುರ್ವಶಿಯ ಜನ್ಮವೃತ್ತಂ ||||
(ಮೊಲ ಸರ್ಗದಲ್ಲಿ ಐವತ್ತು ಪದ್ಯಗಳಿರುವುವು. ಅಲ್ಲಿ ಕಂದಪದ್ಯವೇ ಛಂದಸ್ಸು. ಸಂತೋಷದ ಮಾಲಿನಿವೃತ್ತವು ಸರ್ಗಾಂತ್ಯಕ್ಕಿದೆ. ಹಾಗೆ ಅದು ಉರ್ವಶಿಯ ಜನ್ಮವನ್ನು ಕುರಿತ ಕಥಾನಕವು )
ದೈವದ ಸ್ತುತಿಯಿರ್ಕುಂ ಪೂರ್ವಕವಿಸ್ತುತಿ-
ಯೋವುತ್ತೆ ಕಥೆಯುಪಕ್ರಮಣಂ
ಭಾವುಕರಸಿಕರ್ಗೆ ತೋಷದಮಪ್ಪಂತೆ
ಧಾವಿಸದತ್ತೆರಡು ದಿನದೊಳ್ ||||
(ಅಲ್ಲಿ ದೈವಸ್ತುತಿ, ಪೂರ್ವಕವಿಗಳ ಸ್ತುತಿ, ಹಾಗೆಯೇ ಕಥೆಯ ಉಪಕ್ರಮಣವಿದೆ. ಭಾವುಕರಾದ ರಸಿಕರಿಗೆ ಸಂತೋಷವಾಗುವಂತೆ ಅದು ಎರಡು ದಿನಗಳಲ್ಲಿಯೇ ಮುಗಿಯಿತು)
ಆಱಿಂದೆ ಪರ್ಚಿರ್ಪ ಮೂವತ್ತು ಪದ್ಯಂಗ-
ಳೋರಂತೆ ಸಂದಿರ್ಪ ಸರ್ಗಂ
ಧಾರೆಯೊಳ್ ತೇಟಗೀತಿಯಿನಿರ್ಕುಂ ಸರ್ಗಾಂತ-
ಕೀ ರಸ್ಯಮುಂ ಸೀಸಪದ್ಯಂ ||||
(ಮೂವತ್ತಾರು ಪದ್ಯಗಳಿಂದ ಸಂದಿರುವ ಮುಂದಿನ ಸರ್ಗವು, ಧಾರೆಯಾಗಿ ತೇಟಗೀತಿ ಎಂಬ ಛಂದಸ್ಸಿನಲ್ಲಿ ಇದೆ. ಸರ್ಗಾಂತದಲ್ಲಿ ರಸ್ಯವಾದ ಸೀಸಪದ್ಯವಿದೆ.)
ಇದಱೊಳಗಸ್ತ್ಯನ ಜನ್ಮವೃತ್ತಾಂತಂ ಸಂ-
ದುದು ಪಾಲ್ಗಡಲಬಣ್ಣನೆಯೊಡಂ
ಉದಕಕೇಳಿಯುಮಿರ್ಕುಂ ಶಾಪಾದಿಯದ್ಭುತಂ
ಬಿದಿಯ ಲೀಲೆಯ ಬಲ್ಮೆಯೊಡನೆ ||||
(ಇದರಲ್ಲಿ ಅಗಸ್ತ್ಯನ ಜನ್ಮವೃತ್ತಾಂತವು ಬಂದಿದೆ. ಹಾಗೆಯೇ ಕ್ಷೀರಸಾಗರದ ವರ್ಣನೆಯೂ, ಜಲಕೇಳಿಯೂ ಇದೆ. ಶಾಪವೇ ಮೊದಲಾದ ಅದ್ಭುತವೂ ವಿಧಿಯ ಲೀಲೆಯ ಬಲುಮೆಯೂ ಇವೆ )
ಸಾಗರಗಮನದ ಮೂಱನೆ ಸರ್ಗಂ ವಿ-
ಯೋಗಿನಿ ಪುಷ್ಪಿತಾಗ್ರದೊಳೆ
ಸಾಗಿ ಮೂವತ್ತೊಂಬತ್ತರೊಳೊಂದು ಪದ್ಯಮ-
ದಾಗಿರ್ಕುಂ ಚಂಪಕಮಾಲೆ ||||
(ಸಮುದ್ರಕ್ಕೆ ಹೋಗುವ ಮೂರನೇ ಸರ್ಗವು ವಿಯೋಗಿನಿ, ಪುಷ್ಪಿತಾಗ್ರವೆಂಬ ವೃತ್ತಗಳಲ್ಲಿ ಸಾಗಿ ಮೂವತ್ತೊಂಭತ್ತು ಪದ್ಯಗಳಿಂದ ಕೊನೆಯಲ್ಲಿ ಚಂಪಕಮಾಲೆಯಿಂದ ಆಗಿದೆ)
ಎರಡನೆ ಸರ್ಗಕ್ಕಮೆರಡು ದಿನಂಗಳೆ
ನೆಱೆದಾಗಿರಲ್ ಬರೆವ ಕಾಲಂ
ಚಿರದೆ ಮೂಱಾದುದು ಮೂಱನೆ ಸರ್ಗಕ್ಕೆ
ಸರಸಮಿಲ್ಲದೆ ಪೋಯ್ತು ಕಥೆಯೊಳ್ ||||
(ಎರಡನೇ ಸರ್ಗವನ್ನು ಬರೆಯಲು ಎರಡು ದಿನಗಳು, ಮೂರನೇ ಸರ್ಗವನ್ನು ಬರೆಯಲು ಮೂರು ದಿನಗಳ ಕಾಲವಾದವು. ಕಥೆಯಲ್ಲಿ ಸರಸತೆ ಇಲ್ಲದೇ ಹೋಯಿತು.)
ದಿನವೆರಡರೊಳಾದ ನಾಲ್ಕನೆ ಸರ್ಗದೆ
ಘನವಾರ್ಧಿಯಾ ಗರ್ವಭಂಗಂ
ಹನನಮಾ ಕಾಲಕೇಯನದಾಯ್ತು ಪದ್ಯಂಗ-
ಳೆನಲಾದುದಲೆ ಮೂವತ್ತಾಱು ||||
(ಎರಡು ದಿನಗಳಲ್ಲಾದ ನಾಲ್ಕನೇ ಸರ್ಗದಲ್ಲಿ ದೊಡ್ಡದಾದ ಸಮುದ್ರದ ಗರ್ವಭಂಗದ ಕಥೆಯಿದೆ. ಕಾಲಕೇಯನ ನಾಶದ ಕಥೆಯಿದೆ. ಅಲ್ಲಿ ಪದ್ಯಗಳು ಮೂವತ್ತಾರು ಆದವು)
ಅಲ್ಲಿ ವಸಂತತಿಲಕದೊಡಂ ಸಂದಿರ್ದು-
ದೆಲ್ಲಂ ವಸಂತಕಲಿಕೆಯುಂ
ಒಳ್ಳೆಯ ಖ್ಯಾತಕರ್ಣಾಟಂಗಳಾಱುಮುಂ
ಸಲ್ಲುವ ಪೃಥ್ವಿ ಹರಿಣಿಗಳ್ ||೧೦||
(ಅಲ್ಲಿ ವಸಂತತಿಲಕ, ವಸಂತಕಲಿಕಾ, ಎಂಬ ವೃತ್ತಗಳ ಜೊತೆ ಆರು ಖ್ಯಾತಕರ್ಣಾಟವೃತ್ತಗಳು (ಚಂಪಕಮಾಲೆ, ಉತ್ಪಲಮಾಲೆ, ಮತ್ತೇಭವಿಕ್ರೀಡಿತ, ಶಾರ್ದೂಲವಿಕ್ರೀಡಿತ, ಸ್ರಗ್ಧರಾ ಹಾಗೂ ಮಹಾಸ್ರಗ್ಧರಾ ವೃತ್ತಗಳು), ಪೃಥ್ವೀ, ಹರಿಣೀವೃತ್ತಗಳೂ ಇವೆ. )
ಮತ್ತಿರ್ಪ ಶಿಖರಿಣಿ ಪ್ರಮದಾಕ್ರಾಂತಮುಮಂತೆ
ಪೊತ್ತಿರ್ಪುವೀ ಸರ್ಗದಡಿಯಂ
ಚಿತ್ತಕ್ಕೆ ತೋಷಮಂ ನೀೞ್ವವರ್ಣನೆಗಳುಂ
ತೆತ್ತಾದುದಲ್ಲಲ್ಲಿ ಚಿತ್ರಂ ||೧೧||
(ಮತ್ತು ಶಿಖರಿಣಿ, ಪ್ರಮದಾಕ್ರಾಂತ ವೃತ್ತಗಳೂ ಈ ಸರ್ಗದ ಪಾದಗಳನ್ನು (ಪದ್ಯದ ಸಾಲುಗಳನ್ನು) ಹೊತ್ತುಕೊಂಡಿವೆ. ಮನಸ್ಸಿಗೆ ಸಂತೋಷವನ್ನು ಕೊಡುವ ವರ್ಣನೆಗಳು ಅಲ್ಲಲ್ಲಿ ಚಿತ್ರಗಳೂ (ಶ್ಲೇಷವೇ ಮೊದಲಾದ ಚಿತ್ರಕವಿತೆಗಳೂ ) ಇವೆ.)
ಸಾಗರವರ್ಣನೆಯಲ್ಲಾಗೆ ಮುಂದಕ್ಕೆ
ಸಾಗುತ್ತೆ ಪಂಚಮಸರ್ಗಂ
ಬೇಗದೆ ಮುಗಿದುದು ದಿನಮೊಂದರೊಳಗೆನ-
ಲ್ಕಾಗಳೋಘಂ ಬಂದ ತೆಱದೆ ||೧೨||
(ಸಾಗರವರ್ಣನೆ ಅಲ್ಲಿ ಆದ ಮೇಲೆ ಮುಂದಕ್ಕೆ ಸಾಗುತ್ತ ಐದನೇ ಸರ್ಗವು ಬೇಗದಿಂದ ಓಘವು ಬಂದಿದೆಯೋ ಎಂಬಂತೆ ಒಂದೇ ದಿನದಲ್ಲಿ ಆಯ್ತು.)
ಉಪಜಾತಿಯಿಂದ್ರವಜ್ರಮುಪೇಂದ್ರವಜ್ರಮುಂ
ಕೃಪೆಯಿಟ್ಟ ಶಾರ್ದೂಲಮಿಲ್ಲಿ
ವಿಪರೀತಮಾಗದವೋಲೇ ಮತ್ತೇಭಮು-
ಮುಪಯುಕ್ತಮಾದ ವೃತ್ತಂಗಳ್ ||೧೩||
(ಉಪಜಾತಿ, ಇಂದ್ರವಜ್ರ, ಉಪೇಂದ್ರವಜ್ರ, ಕೃಪೆಯನ್ನು ತೋರಿಸಿದ ಶಾರ್ದೂಲವಿಕ್ರೀಡಿತ, ವಿಪರೀತವಾಗದ ಹಾಗೆ ಮತ್ತೇಭವಿಕ್ರೀಡಿತವೂ ಅಲ್ಲಿ ಉಪಯೋಗಿಸಲ್ಪಟ್ಟ ವೃತ್ತಗಳು)
ನಲವತ್ತೆರಡನೆ ಪದ್ಯಂ ಪೃಥ್ವಿವೃತ್ತದಿಂ
ಸಲೆ ಸರ್ಗದಂತ್ಯವಂತಾಯ್ತು
ಖಲರಿರ್ವರಿಲ್ವಲವಾತಾಪಿಹನನದಿಂ
ಕೞೆದಿರ್ದುದಯ್ದನೆ ಸರ್ಗಂ ||೧೪||
(ನಲವತ್ತೆರಡನೆ ಪದ್ಯ ಪೃಥ್ವೀವೃತ್ತವಾಗಿ ಸರ್ಗದ ಅಂತ್ಯವಾಯ್ತು. ಖಳರಾದ ಇಲ್ವಲವಾತಾಪಿಯರ ಇಬ್ಬರ ನಾಶದಿಂದ ಐದನೇ ಸರ್ಗವು ಕಳೆಯಿತು)
ಸರ್ಗಮಾಱನೆಯದೋ ನಹುಷನ ಕಥೆಯಿಂದೆ
ಸ್ವರ್ಗದೆ ಸಂದುದು ಛಂದಂ
ವರ್ಗತ್ರಿಷ್ಟುಪ್ಪಿಂ ರಥೋದ್ಧತೆ ಜಗತಿಯ
ವರ್ಗದಿಂದೆ ಪ್ರಿಯಂವದೆಯುಂ ||೧೫||
(ಆರನೆಯ ಸರ್ಗವಾದರೋ ನಹುಷನ ಕಥೆಯಿಂದ ಸ್ವರ್ಗದಲ್ಲಿ ನಡೆದುದು. ತ್ರಿಷ್ಟುಪ್ ವರ್ಗದ ರಥೋದ್ಧತಾ ಹಾಗೂ ಜಗತೀವರ್ಗದ ಪ್ರಿಯಂವದಾ ವೃತ್ತಗಳಿಂದ ಛಂದಸ್ಸು ಕೂಡಿತ್ತು )
ಲಾಸಿನಿ ಜಾತಿಯಿಂದಾದತ್ತು ಸರ್ಗಾಂತ-
ಕ್ಕಾ ಸಂಖ್ಯೆಯಱುವತ್ತು ಸಲ್ಗುಂ
ಏಸೊಂದು ಪದ್ಯಂಗಳಂ ಲೇಖಿಸಲ್ ಕಾಲ-
ಮೇಸೆನಲೊಂದೇ ದೆವಸಮೈ ||೧೬||
(ಅಲ್ಲಿ ಸರ್ಗದ ಕೊನೆಯು ಲಾಸಿನಿ ಎಂಬ ಮಾತ್ರಾವೃತ್ತದಿಂದ (ಸಂತುಲಿತ ಮಧ್ಯಾವರ್ತಗತಿ) ಆಯಿತು. ಸಂಖ್ಯೆ ಅರವತ್ತಾಗಿತ್ತು. ಇಷ್ಟೊಂದು ಪದ್ಯಗಳನ್ನು ಬರೆಯಲು ತೆಗೆದುಕೊಂಡ ಕಾಲ ಎಷ್ಟು ಎಂದು ಕೇಳಿದರೆ ಒಂದೇ ದಿನ. )
ಏೞನೆ ಸರ್ಗದೆ ನಲವತ್ತು ಪದ್ಯಂಗ-
ಳಾಳಿರ್ಕುಮೊಲವಿಂದೆ ಛಂದಂ
ಪೇೞಲ್ಕೆ ಮಂಜುಭಾಷಿಣಿಯಿರ್ಕುಮಂತ್ಯದ
ಕಾಲದೆ ದ್ರುತವಿಲಂಬಿತಮುಂ ||೧೭||
(ಏಳನೇ ಸರ್ಗದಲ್ಲಿ ನಲವತ್ತು ಪದ್ಯಗಳು ಪ್ರೀತಿಯಿಂದ ಆಳಿದವು. ಛಂದಸ್ಸನ್ನು ಹೇಳುವುದಾದರೆ ಮಂಜುಭಾಷಿಣಿಯೂ ಸರ್ಗದ ಕೊನೆಯಲ್ಲಿ ದ್ರುತವಿಲಂಬಿತವೆಂಬ ವೃತ್ತವೂ ಇವೆ. )
ದಿನಮೆರಡಾಗಿರ್ದುವಿಲ್ಲಿರ್ಕುಂ ವಿರಹಾದಿ
ಮನನೀಯ ನಹುಷನ ಕಥೆಯು
ಮುನಿಯಿಂದೆ ಸಂದಿರ್ಪ ಕೀೞಾದ ಶಾಪತ್ರ-
ಸ್ತನಗಾಥೆಯದಱೊಳೆ ಚೆಲ್ವು ||೧೮||
(ಬರೆಯಲು- ಎರಡು ದಿನಗಳಾಗಿ ಇಲ್ಲಿ ವಿರಹವೇ ಮೊದಲಾದ ಮನನೀಯವಾದ ನಹುಷನ ಕಥೆಯಿದೆ. ಮುನೀಂದ್ರನಿಂದ ಸಂದಿರುವ ಕೆಟ್ಟದಾದ ಶಾಪತ್ರಸ್ತನ ಕಥೆಯು ಅದರಲ್ಲಿ ಚೆಲುವಾಗಿದೆ )
ಮುಂದಿನಷ್ಟಮಸರ್ಗಂ ವಿಂಧ್ಯಸ್ತಂಭನಕಿರ್ಕುಂ
ಸಂದಳಲ್ಲಂತೆ ಕಾವೇರಿ
ಒಂದೆ ದಿನದೊಳಾಯ್ತು ಸಂಪೂರ್ಣಮೀಸರ್ಗಂ
ಛಂದದಿಂ ಚೌಪದಿಯೊಳಗೆ ||೧೯||
(ಮುಂದಿನ ಎಂಟನೇ ಸರ್ಗವು ವಿಂಧ್ಯಸ್ತಂಭನಕ್ಕೆಂದು ಇರುವುದು. ಅಲ್ಲಿ ಕಾವೇರಿಯೂ ಇದ್ದಾಳೆ. ಒಂದೇ ದಿನದಲ್ಲಿ ಚೌಪದಿ ಛಂದಸ್ಸಿನಲ್ಲಿ ಈ ಸರ್ಗವು ಮುಗಿಯಿತು.)
ಮಾಲಿನಿ ವೃತ್ತದಿಂ ಸರ್ಗಾಂತಮಾದತ್ತು
ಸೋಲುತ್ತೆ ಪದ್ಯಂಗಳಿಲ್ಲಿ
ಕಾಲನ ವಶದಿಂದಮಯ್ವತ್ತನಾಲ್ಕಾಯ್ತು
ಲೀಲೆಯಿಂ ಮುಗಿದತ್ತು ಕಬ್ಬಂ ||೨೦||
(ಮಾಲಿನಿ ವೃತ್ತದಿಂದ ಈ ಸರ್ಗವು ಕೊನೆಯಾಯಿತು. ಅಲ್ಲಿ ಪದ್ಯಗಳು ಸೋಲುತ್ತ ಕಾಲನ ವಶದಿಂದ ಐವತ್ತನಾಲ್ಕು ಆದವು. ಅಲ್ಲಿಗೆ ಕಾವ್ಯದ ಕಥೆಯು ಮುಗಿಯಿತು)
ನವಮಸರ್ಗಮಿದಿರ್ಕುಂ ದೇಸೀಯಛಂದದೆ
ಕವಿವಕಾವ್ಯಪ್ರಸ್ತಾಪದಿಂದಂ
ತವೆ ಸರ್ಗಸಂಗ್ರಹಣಕ್ಕೆಂದು ಸಂದಿರ್ಪಿ-
ದುವೆ ಕಾಲಮಂ ಮೀರ್ದು ಬಳೆಗುಂ ||೨೧||
(ಒಂಭತ್ತನೇ ಸರ್ಗವಾದ ಇದು ದೇಸೀಯವಾದ ಛಂದಸ್ಸಿನಲ್ಲಿ ಕವಿಕಾವ್ಯಪ್ರಸ್ತಾಪದಿಂದ ಸರ್ಗಗಳ ಸಂಗ್ರಹಣೆಗೆಂದು ಇರುವುದು, ಕಾಲವನ್ನು ಮೀರಿ ಬೆಳೆಯುತ್ತದೆ)
ಸಂದುದಯ್ವತ್ತರಿಂ ಸಾಂಗತ್ಯದಿಂದಂತೆ
ಮುಂದಾದ ಘಟನೆಯ ನೆನಪಿಂ
ಕುಂದದೆ ನಾನೂರೇೞಾದತ್ತು ಪದ್ಯಂಗಳ್
ಛಂದೋಮಾರ್ಗದೊಳೀ ಕಾವ್ಯಕ್ಕೆ ||೨೨||
(ಐವತ್ತು ಪದ್ಯಗಳಿಂದ ಸಾಂಗತ್ಯದಲ್ಲಿ ಮೊದಲು ಆದ ಘಟನೆಯ ನೆನಪಿನಿಂದ ಸಂದುದು ಇದಾಯ್ತು. ಛಂದೋಮಾರ್ಗದ ಈ ಕಾವ್ಯಕ್ಕೆ ಕುಂದಿಲ್ಲದಂತೆ (ಒಟ್ಟಾರೆಯಾಗಿ) ನಾನೂರ ಏಳು ಪದ್ಯಗಳು ಆದವು )
ಬರೆಯುವ ಮುನ್ನಮಿರ್ಪೆಲ್ಲ ಸಾಂಗತ್ಯಮಂ
ಭರದಿಂದೆ ಪೇೞ್ದಪೆನೊಲವಿಂ
ವರಮಿತ್ರರಿಂದಿರ್ಪ ಪದ್ಯಪಾನದ ಗೋಷ್ಠಿ-
ಯರರೇ ಚೆಲ್ವಿಂದೆಂತೊ ಮೆಱೆಗುಂ ||೨೩||
(ಬರೆಯುವ ಮೊದಲು ಇರುವ ಎಲ್ಲ ಸಾಂಗತ್ಯವನ್ನು ಇಲ್ಲಿ ಭರದಿಂದ ಹೇಳುತ್ತೇನೆ. ಅರರೇ! ನಮ್ಮ ಒಳ್ಳೆಯ ಸ್ನೇಹಿತರಿಂದ ಕೂಡಿರುವ “ಪದ್ಯಪಾನ”ದ ಗೋಷ್ಠಿ ಚೆಲುವಿನಿಂದ ಮೆರೆಯುತ್ತಿದೆ)
ಮನೆಯ ಗಬ್ಬದೆ ಬ್ಬಮಂ ನೋಂತು ಬರೆವರೈ
ದಿನಮುಮಸಂಖ್ಯಕವಿಗಳು
ಅನಿತರಮಪ್ಪ ಸಭಾಕವಿತ್ವದೊಳೆಂತು
ಮನನೀಯರಾದಪರೆಲ್ಲರ್ ||೨೪||
(ಮನೆಯ ಗರ್ಭದಲ್ಲಿ ಕುಳಿತು ಕಾವ್ಯವನ್ನು ಬರೆಯುವರು ದಿನವೂ ಅಸಂಖ್ಯ ಕವಿಗಳು. ಉಳಿದವರಿಗಾಗದ ಸಭಾಕವಿತ್ವದಲ್ಲಿ ಅವರು ಹೇಗೆ ಮನನೀಯರಾಗುತ್ತಾರೆ!)
ಅತ್ಯಾಶುಗತಿಯಿಂದೆ ಪೇೞ್ವರ್ಗೆ ಗೃಹಕಾವ್ಯಂ
ನಿತ್ಯಮುಂ ಸುಲಭಮೆಂದೆನಿಕುಂ
ಇತ್ಯಾಸ್ಥೆಯಿಂದೆ ಶತಾವಧಾನಿಗಳೊರ್ಮೆ-
ಗತ್ಯಾಪ್ತರೊಳಗಿಂತು ಪೇೞ್ದರ್||೨೫||
(ಅತಿಯಾದ ಆಶುಗತಿಯಿಂದ (ವೇಗವಾಗಿ) ಹೇಳುವವರಿಗೆ ಮನೆಯಲ್ಲಿ ಕುಳಿತು ಬರೆಯುವುದು ನಿತ್ಯವೂ ಸುಲಭ ಎಂದೆನಿಸುತ್ತದೆ. ಹೀಗೆ ಆಸ್ಥೆಯಿಂದ ಶತಾವಧಾನಿ ಗಣೇಶರು ಒಮ್ಮೆ ಅತ್ಯಾಪ್ತರಾದ ಕೆಲವರಲ್ಲಿ ಹೇಳಿದರು)
ಮಿತ್ರರ ಗೊಟ್ಟಿಯೊಳ್ ಮಾೞ್ಪಮಾಂ ಪೊಸತೆಂಬೀ
ಸತ್ರಮನಾಶುಕಾವ್ಯಕ್ಕೆ
ಸೂತ್ರಿಸಿ ಚಿತ್ರಿಸಿ ಪೇೞ್ವುದು ಸರ್ವರುಂ
ಪತ್ರಲೇಖನಿಗಳಿಲ್ಲದೆಯೆ ||೨೬||
(ಮಿತ್ರರ ಗೋಷ್ಠಿಯಲ್ಲಿ ನಾವು ಆಶುಕಾವ್ಯಕ್ಕೆ ಹೊಸತಾದ ಸತ್ರವನ್ನು ನಾವು ಮಾಡೋಣ, ಎಲ್ಲರೂ ಸೂತ್ರಿಸಿ ಚಿತ್ರಿಸಿ ಪತ್ರಲೇಖನಿಗಳಿಲ್ಲದೇ ಪದ್ಯವನ್ನು ಹೇಳಬೇಕು")
ಎಂದೊಡಮೊಪ್ಪುತ್ತೆ ಪತ್ತಾರು ಮಿತ್ರರ್ಕಳ್
ಬಂದಿರ್ದರಾ ಶನಿವಾರ
ಸಂದೆಗಮಿಲ್ಲದೆ ಛಂದೋಬದ್ಧಮೆನಿಪ್ಪ
ಸುಂದರ ಕಾವ್ಯಗೋಷ್ಠಿಯೊಳು ||೨೭||
(ಹೀಗೆಂದು ಹೇಳಿದಾಗ ಹತ್ತಾರು ಮಿತ್ರರು ಒಪ್ಪುತ್ತ ಸಂದೇಹವಿಲ್ಲದೇ ಛಂದೋಬದ್ಧವಾದ ಸುಂದರವಾದ ಕಾವ್ಯಗೋಷ್ಠಿಯಲ್ಲಿ ಆ ಶನಿವಾರ ಬಂದರು)
ನುಡಿದಿರ್ದರೆಲ್ಲರುಂ ನುಡಿವೆಣ್ಣ ನುತಿಯಿಂದೆ
ಪಡೆಯುತ್ತುಮಾಶುಗತಿಗಳಂ
ನಡೆದಿರ್ಕುಂ ವತ್ಸರದಿಂದಿದು ಕೆಳೆಯರ್ಕ-
ಳೊಡನಾಡಿ ಹಾಸ್ಯದಿನೆಂತೊ ||೨೮||
(ಎಲ್ಲರೂ ಸರಸ್ವತಿಯ ಸ್ತುತಿಯಿಂದ ಆಶುಗತಿಯನ್ನು ಪಡೆಯುತ್ತ ನುಡಿದಿದ್ದರು. ಇದು ಹೀಗೆಯೇ ಗೆಳೆಯರ ಜೊತೆಯಲ್ಲಿ ಒಡನಾಟದಿಂದ ಹಾಸ್ಯದಿಂದ ಒಂದು ವರ್ಷದಿಂದ ನಡೆಯುತ್ತಿರುವುದು)
ಕೆಕ್ಕಾರು ಶ್ರೀರಾಮಚಂದ್ರರ ಮನೆಯೊಳು
ಸಿಕ್ಕುವರೆಂಟುಗಂಟೆಯೊಳು
ನಕ್ಕು ನಗಿಸುತಲ್ಲಿ ಕಾವ್ಯಮಂ ಪೇೞ್ದು ಜ-
ಲಕ್ಕನೆ ರಸಮನೀಂಟಿಸುವರ್ ||೨೯||
(ಕೆಕ್ಕಾರಿನ ಶ್ರೀ ರಾಮಚಂದ್ರರ ಮನೆಯಲ್ಲಿ ಎಲ್ಲರೂ ಎಂಟು ಗಂಟೆಯ ಹೊತ್ತಿಗೆ ಸಿಗುವರು. ನಕ್ಕು ನಗಿಸುತ್ತ ಅಲ್ಲಿ ಕಾವ್ಯವನ್ನು ಹೇಳುತ್ತ ಜಲಕ್ಕನೆ ರಸಾಸ್ವಾದವನ್ನು ಮಾಡಿಸುತ್ತಾರೆ)
ಹಿತಮಪ್ಪ ಪಾನೀಯಮಂ ನೀೞ್ದು ಕೆಲವೊರ್ಮೆ-
ಗತಿ ರುಚಿಭೋಜನದಿಂದೆ
ಅತಿಥಿಯಂದದೊಳೆ ಸತ್ಕರಿಪರೈ ಕಾಂಚನಾ
ಪತಿಯಂದದಿಂ ಕವಯಿತ್ರಿ ||೩೦||
(ಹಿತವಾದ ಪಾನೀಯವನ್ನು ಕೊಟ್ಟು, ಕೆಲವೊಮ್ಮೆ ಅತಿ ರುಚಿಯಾದ ಭೋಜನವನ್ನೂ ನೀಡಿ ಅತಿಥಿಗಳ ಹಾಗೆ ಸತ್ಕರಿಸುತ್ತಾರೆ. ರಾಮಚಂದ್ರರ ಪತ್ನಿಯಾದ ಕಾಂಚನಾ. ಅವರೂ ಕೂಡ ಕವಯಿತ್ರಿ)
ಕವಿಗಳ ಗೊಟ್ಟಿಗಾಶ್ರಯಮಿತ್ತ ದಂಪತಿ -
ಕವಿಗಳುಂ ಕವನಿಸೆ ಸಭೆಯೊಳ್
ಸವಿಯುತ್ತೆ ಸರ್ವಮಂ ಸೇರಿರ್ಪರೆಲ್ಲರ
ಕವಿಗಳ ಪರಿಚಯಮುಲಿವೆಂ ||೩೧||
(ಹೀಗೆ ಕವಿಗಳ ಗೋಷ್ಠಿಗೆ ಆಸ್ರಯವನ್ನು ಕೊಟ್ಟ ದಂಪತಿಕವಿಗಳು ಸಭೆಯಲ್ಲಿ ಕವನವನ್ನು ರಚಿಸುತ್ತಾರೆ. ಇದನ್ನೆಲ್ಲ ಸವಿಯುತ್ತ ಸೇರಿರುವ ಎಲ್ಲರ ಕವಿಗಳ ಪರಿಚಯವನ್ನು ಹೇಳುತ್ತೇನೆ)
ಅದಱೊಳ್ ಶತಾವಧಾನಿಗಳಾ ಗಣೇಶರೈ
ಪದಪಿಂದೆ ಗೋಷ್ಠಿಗಧ್ಯಕ್ಷರ್
ಮೊದಲೊಳೆ ಸೂಚಿಯಿಂ ಚುರ್ಚಿರ್ಪ ತೆಱದಿಂದೆ
ಚದುರಿಂದೆ ವಸ್ತುಮನೀವರ್ ||೩೨||
(ಅದರಲ್ಲಿ ಶತಾವಧಾನಿಳಾದ ಗಣೇಶರು ಈ ಗೋಷ್ಠಿಗೆ ಅಧ್ಯಕ್ಷರು. ಮೊದಲೇ ಸೂಜಿಯಿಂದ ಚುಚ್ಚಿದ ಹಾಗೆಯೇ ಚಾತುರ್ಯದಿಂದ ವಸ್ತುವನ್ನು ಕೊಡುತ್ತಾರೆ)
ಆಶವಗತಿಯಿಂದೆ ಪೇೞ್ವರೇ ಮೊದಲವರ್
ಪಾಶಮೇ ಪದ್ಯಮನೆಳೆಯಲ್
ನಾಶನಮಾದತ್ತಾಗಳ್ ಯೋಚಿಸಿರ್ಪುದುಂ
ಕೇಶಮಂ ಕೆದಱುವರನಿಬರ್ ||೩೩||
(ಆಶುವಾದ (ವೇಗವಾದ) ಗತಿಯಲ್ಲಿ ಮೊದಲು ಅವರೇ ಹೇಳುವರು. ಪದ್ಯವನ್ನು ಎಳೆಯುವಲ್ಲಿ ಪಾಶವೇ ಆಗಿ ನಾವು ಯೋಚಿಸಿಕೊಂಡಿರುವುದೆಲ್ಲ (ಕಲ್ಪನೆಯೆಲ್ಲ) ನಾಶನವಾಗುತ್ತದೆ. ಎಲ್ಲರೂ ಕೂದಲನ್ನು ಕೆದರಿಕೊಳ್ಳುತ್ತಾರೆ )
ಸೆಳೆಯೋಣ ಪದ್ಯಮಂ ಪೇೞಿಮೆಂದೆಂಬರೊ-
ಳುಲಿಯಲ್ಕೆ ಭಯದಿಂದ ತೊಡರಿ
ಕೆಲವೊರ್ಮೆ ಮಱೆತು ಶಬ್ದಂಗಳೇ ಬಾರದೇ
ಗಲಿಬಿಲಿಯಾದತ್ತೈ ಎಮಗೆ ||೩೪||
("(ಅರ್ಧಂಬರ್ಧ ಆಗಿರುವ ಪದ್ಯವನ್ನು ಮುಂದೆ)ಎಳೆಯೋಣ, ಪದ್ಯವನ್ನು ಹೇಳಿ” ಎಂದು ಹೇಳುವ ಅವರಲ್ಲಿ ಪದ್ಯವನ್ನು ಹೇಳಲು ತೊಡರಿ, ಕೆಲವೊಮ್ಮೆ ಮರೆತುಹೋಗಿ ಶಬ್ದಗಳೇ ಬಾಯಿಗೆ ಬರದೇ ನಮಗೆಲ್ಲ ಗಲಿಬಿಲಿಯಾಗುತ್ತದೆ)
ಶಂಕೆಯದಿಲ್ಲದೆ ಸ್ವೀಯಶೈಲಿಯೊಳೆಂತೊ
ಕೊಂಕಿನಿಂ ಪೊಂದಿಸಿ ಬೞಿಕಂ
ಝಂಕಿಸಿ ಶ್ಲೇಷದೊಳ್ ಸಂಸ್ಕೃತ ಕವಿಗಳೀ
ಶಂಕರರುಲಿವುದೆ ಛಂದಂ ||೩೫||
(ಯಾವುದೇ ಶಂಕೆಯಿಲ್ಲದೇ, ತಮ್ಮದೇ ಆದ ಶೈಲಿಯಲ್ಲಿ ವಕ್ರೋಕ್ತಿಗಳಿಂದ ಹೊಂದಿಸಿ ಬಳಿಕ ಶ್ಲೇಷವೇ ಮೊದಲಾದ ಅಲಂಕಾರಗಳಿಂದ ಝಂಕಾರದಿಂದ ಸಂಸ್ಕೃತದ ಕವಿಗಳಾದ ಶಂಕರರು ಪದ್ಯವನ್ನು ಹೇಳುವುದೇ ಛಂದ (ಸುಂದರ, ಆಹ್ಲಾದಕರ))
ನವಕಲ್ಪನೆಗಳಿಂದೆ ಕರ್ಣಾಟಭಾಷೆಯೊಳ್
ತವೆ ಪೇೞ್ವ ರಿರ್ವರ್ ಸೋದರರೇ
ಸವಿಯ ಹಾಸ್ಯದ ಮಾತಿಂ ಸೋಮಶೇಖರಶರ್ಮ-
ರವರನುಜಂ ಶ್ರೀಧರಾಖ್ಯಂ ||೩೬||
(ಹೊಸ ಕಲ್ಪನೆಗಳಿಂದ ಕನ್ನಡ ಭಾಷೆಯಲ್ಲಿ ಹೇಳುವವರು ಇಬ್ಬರು ಸೋದರಕವಿಗಳು ಅವರು ಸವಿಯಾದ ಹಾಸ್ಯದ ಮಾತಿನಿಂದ ಸೋಮಶೇಖರ ಶರ್ಮರೂ ಹಾಗೂ ಅವರ ತಮ್ಮ ಶ್ರೀಧರ ಎಂಬವರು)
ನಡುವೆ ಗಂಭೀರದ ವಿಷಯಕ್ಕೆ ಲೇಪಿಸಿ
ಪೊಡೆಪುಣ್ಣಪ್ಪಂತೆ ಹಾಸ್ಯಮನೇ
ನುಡಿಯೊಳಗಡಗಿಸಿ ರಾಮಚಂದ್ರರ್ ಬಾಣಂ-
ಬಿಡುವಂತೆ ತ್ರಿಪದಿಯಂ ಪೇೞ್ವರ್ ||೩೭||
(ನಡುವೆ ಗಂಭಿರವಾದ ವಿಷಯಕ್ಕೆ ಹೊಟ್ಟೆ ಹುಣ್ಣಾಗುವಂತೆ ಹಾಸ್ಯವನ್ನೇ ಲೇಪಿಸಿ ನುಡಿಯಲ್ಲಿ ಅಡಗಿಸಿ ರಾಮಚಂದ್ರರು ಬಾಣವನ್ನು ಬಿಡುವಂತೆ ತ್ರಿಪದಿಯನ್ನು ಹೇಳುತ್ತಾರೆ)
ಇಂತಿರೆ ನೂತ್ನಕಲ್ಪನೆಗಳಿಂ ಶ್ರೀಶಕಾ-
ರಂತರ ಪದ್ಯಂಗಳಿಂದಂ
ಸಂತೋಷಂಬಡುವರೈ ಸಮಯಂ ಮೀಱುತ್ತಿರೆ
ಚಿಂತೆಯೆ ಪೆರ್ಚಿಪುದೆಗೆ ||೩೮||
(ಹೀಗಿರಲು, ನೂತನವಾದ ಕಲ್ಪನೆಗಳಿಂದ ಶ್ರೀಶಕಾರಂತರ ಪದ್ಯಗಳಿಂದ ಎಲ್ಲರೂ ಸಂತೋಷವನ್ನು ಪಡುತ್ತಾರೆ. ಸಮಯವು ಮೀರುತ್ತಿರುವಾಗ ನನಗೆ ಚಿಂತೆಯು ಹೆಚ್ಚುತ್ತದೆ )
ಆಗಳಾ ರಾಘವೇಂದ್ರರ್ ಸಕ್ಕದದೆ ಪೇೞ್ದು
ರಾಗರಂ ಮೆಚ್ಚಿಪ ತೆಱದೆ
ಸಾಗುವರ್ ವಸ್ತುವಂ ಬಣ್ಣಿಪ ಪದ್ಯಕ್ಕಂ
ಯೋಗಮಿಲ್ಲಮೆನಗೆ ಪೇೞಲ್ ||೩೯||
(ಆಗ ಆ ರಾಘವೇಂದ್ರರು ರಾ.ಗಣೇಶರನ್ನು ಮೆಚ್ಚಿಸುವಂತೆ ಸಂಸ್ಕೃತದಲ್ಲಿ ಹೇಳಿ ಸಾಗುವರು. ವಸ್ತುವನ್ನು ಬಣ್ಣಿಸುವ ಪದ್ಯವನ್ನು ಹೇಳುವ ಯೋಗ ನನಗೆ ಇಲ್ಲ)
ವಾಸುಕಿಯೆಂಬ ಸಂಸ್ಕೃತದವಧಾನಿಗಳ್
ಭಾಸುರಪದ್ಯಂಗಳಿಂದಂ
ಬೀಸಲ್ಕೆ ಕುಳಿರ್ಗಾಳಿಯಂ ತೀಡುವಂತಕ್ಕು-
ಮೀ ಸಭೆಯೊಳ್ ಬಿಸುಪಿಂಗೆ ||೪೦||
(ವಾಸುಕಿ ಎಂಬ ಸಂಸ್ಕೃತದ ಅವಧಾನಿಗಳು, ತಮ್ಮ ಕಾಂತಿಯುಕ್ತವಾದ ಪದ್ಯಗಳಿಂದ ತಂಗಾಳಿ ಬೀಸಿದಂತೆ ಈ ಸಭೆಯ ಬಿಸಿಗೆ ತಂಪಾಗುತ್ತಿತ್ತು)
ಇವರೆಲ್ಲರಾ ಮಧ್ಯದೊಳಗೊಂದು ಪದ್ಯಮಂ
ಕಿವಿಗೊಟ್ಟು ಕೇಳದಿರಲ್ಕೆ
ಜವದಿಂದೆ ಪೇೞ್ವೆನಾಂ ಸುಲಭಚ್ಛಂದಂಗಳೊಳ್
ಕವಿಯಾಗಬೇಕೆಂಬುದಾಸೆ ||೪೧||
(ಇವರೆಲ್ಲರ ಮಧ್ಯದಲ್ಲಿ ಒಂದು ಪದ್ಯವನ್ನೂ ಕಿವಿಗೊಟ್ಟು ಕೇಳದೇ, ವೇಗದಿಂದ ಯಾವುದೋ ಸುಲಭವಾದ ಛಂದಸ್ಸಿನಲ್ಲಿ ನಾನೂ ಹೇಳುತ್ತೇನೆ! ಯಾಕೆಂದರೆ ಕವಿಯಾಗಬೇಕು ಎಂಬ ಆಸೆ ಅಷ್ಟೆ.)
ಕವನಿಪನಿವನೊಳ್ಪಿಂದೆನುತೊರ್ಮೆಗಂ ಸರ್ವ-
ರವಧಾನಮಂ ಗೆಯ್ಯಲುಲಿದರ್
ಅವರೆಂದುದಂ ಕೇಳ್ದು ಸಾಧಿಸಿದಪೆನೊರ್ಮೆ-
ಗವಧಾನಿವೆಸರಂ ಮೇಣ್ ಪಡೆದು ||೪೨||
(ಇವನು ಚೆನ್ನಾಗಿ ಕವನಿಸುತ್ತಾನೆ. ಎನ್ನುತ್ತ ಒಮ್ಮೆ ಎಲ್ಲರು ಅವಧಾನವನ್ನು ಮಾಡಲು ಹೇಳಿದರು. ಅವರು ಹೇಳಿದ್ದನ್ನು ಕೇಳಿ ಅವಧಾನವನ್ನು ಸಾಧಿಸಿ ಅವಧಾನಿ ಎಂಬ ಹೆಸರನ್ನೂ ಪಡೆದೆ.)
ಮನೆಯೊಳಗವಧಾನಮಾದಂದಿನಿಂದೆನ್ನೊ-
ಳಿನಿಸಿನಿಸೇ ಪೆರ್ಚೆ ಗರ್ವಂ
ಘನನೆಂದಹಮ್ಮಿನಿಂದೊಪ್ಪಿದ ಪೆರ್ಮೆಯಿಂ
ಮನದೊಳೆ ಬೀಗುತ್ತಲಿರ್ದೆಂ ||೪೩||
(ಹೀಗೆ ಅವರ ಮನೆಯಲ್ಲಿ ಅವಧಾನವಾದ ದಿನದಿಂದ ನನ್ನಲ್ಲಿ ಸ್ವಲ್ಪ ಸ್ವಲ್ಪವೇ ಗರ್ವವು ಹೆಚ್ಚಲು, ನಾನೂ ಘನವಾದವನು ಎಂದು ಅಹಂಕಾರದಲ್ಲಿ, ಹೆಮ್ಮೆಯಿಂದ ಮನಸ್ಸಿನಲ್ಲೇ ಬೀಗುತ್ತ ಇದ್ದೆ)
ಕಾಲದೆ ಮುಂದೊಂದು ಗೋಷ್ಠಿಯೊಳ್ ಶ್ರೀರಾಗರ್
ಕೇಳಲ್ಕೆ ನಾಲ್ಕು ವಸ್ತುಗಳೊಳ್
ಪೇೞೆ ನಾನೆರಡಕ್ಕೆ ಮತ್ತೆರಡನಱುಹದೆ
ಸೂೞಂ ತಪ್ಪಿರ್ದಪೆನಾಗಳ್ ||೪೪||
(ಕಾಲದಲ್ಲಿ ಶ್ರೀ ರಾ. ಗಣೇಶರು ಕೇಳಲು ನಾಲ್ಕು ವಸ್ತುಗಳಲ್ಲಿ, ನಾನು ಎರಡು ವಸ್ತುವಿಗೆ ಹೇಳಿ, ಉಳಿದ ಎರಡನ್ನು ಹೇಳದೇ ಸರದಿಯನ್ನು ತಪ್ಪಿದ್ದೆ)
ಸಂದನಭ್ಯಾಸದಿಂ ಪೆರ್ಚಿರ್ಪ ಗರ್ವದಿಂ
ಕುಂದಾದುದೆಂದಾನೆ ತಿಳಿದೆಂ
ಸ್ಪಂದಿಸಿ ರಾಗರುಂ ಮೊನೆವಾತನೆಂದಿರ-
ಲ್ಕಂದು ಜ್ಞಾನೋದಯಮಾಯ್ತು ||೪೫||
(ಸಂದಿರುವ ಅನಭ್ಯಾಸದಿಂದ ಹೆಚ್ಚಿರುವ ಗರ್ವದಿಂದ ಕುಂದಾಗಿದೆ ಎಂದು ನಾನೇ ತಿಳಿದುಕೊಂಡೆ. ಅದಕ್ಕೆ ತಕ್ಕ ಹಾಗೆ ರಾ.ಗಣೇಶರೂ ಮೊನಚಾದ ಮಾತನ್ನು ಹೇಳಿರಲು ಅಂದು ಜ್ಞಾನೋದಯವಾಯ್ತು)
ರಾಯರ ಕುದುರೆಯೇ ಕೞ್ತೆಯಾದಂದದಿಂ-
ದೀಯೆನ್ನ ಗತಿಯಾಯ್ತೆನಲ್ಕೆ
ಸಾಯಕಂ ಬಿಡಿದಂತೆ ಕೊಳ್ಗುಳಕ್ಕಂ ನುಡಿ
ತಾಯಡಿ ಪಿಡಿದಿಂತು ನೋಂತು ||೪೬||
("ರಾಯರ ಕುದುರೆ ಕತ್ತೆಯಾದ ಹಾಗಾಯಿತು ಈ ನನ್ನ ಗತಿ" ಎಂದು, ಯುದ್ಧಕ್ಕೆ ಬಾಣವನ್ನು ಹಿಡಿದುಕೊಂಡಂತೆ, ನುಡಿತಾಯಿಯಾದ ಸರಸ್ವತಿಯ ಪಾದವನ್ನು ಹಿಡಿದು ಹೀಗೆ ವ್ರತತೊಟ್ಟು)
ಪೊಸತೆನಿಪಂದಂದಿಂ ಕಬ್ಬಮಂ ಬರೆಯುವೆಂ
ಜಸವೀವ ಧಾರೆಯೆ ಪೆರ್ಚಲ್
ರಸದಿಂದ ಕೂಡಿರ್ಪ ಕಬ್ಬಮಂ ಬರೆಯುವೆಂ
ಸಸಿಯಿದು ಪೂರ್ಣತ್ವಮೆಯ್ದಲ್ ||೪೭||
(ಹೊಸತು ಎನಿಸುವಂತಹ ಕಾವ್ಯವನ್ನು ಬರೆಯುತ್ತೇನೆ, ಯಶಸ್ಸನ್ನು ಕೊಡುವ ಧಾರೆಯು ಹೆಚ್ಚಲು, ಈ ಗಿಡವು ಪೂರ್ಣತ್ವಕ್ಕೆ ಬರಲು ರಸದಿಂದ ಕೂಡಿರುವ ಕಾವ್ಯವನ್ನು ಬರೆಯುತ್ತೇನೆ.)
ಅಂದಿಂತು ಪೂಣ್ದುದಂ ಬರೆದಾಯ್ತು ಪೆರ್ಚಿರ್ದು-
ದಂದದಿಂ ಧಾರೆಯೀ ವೇಳೆ
ಪಿಂದಗಸ್ತ್ಯಂ ಸಾಗರಮನೆಂತು ಬಿಟ್ಟನೋ
ಮುಂದಕ್ಕೆಯಂತಾಶುಧಾರೆ ||೪೮||
(ಹೀಗೆ ಅಂದು ಈ ರೀತಿ ಪ್ರತಿಜ್ಞೆಯನ್ನು ತೊಟ್ಟ ಹಾಗೆಯೇ ಬರೆದುದೂ ಆಯಿತು. ಅಂದದಿಂದ ಧಾರೆಯೂ ಈ ಹೊತ್ತಿಗೆ ಹೆಚ್ಚಾಯಿತು. ಹಿಂದೆ ಅಗಸ್ತ್ಯನು ಹೇಗೆ ಸಾಗರವನ್ನು ಬಿಟ್ಟನೋ ಹಾಗೆಯೇ ಆಶುಧಾರೆಯೂ ಹೆಚ್ಚಿತು.)
ಗಬ್ಬದಿಂದುದಿಸಿರ್ಪುದಿನಿತುಪದ್ಯಂಗಳುಂ
ಕಬ್ಬದೊಳ್ ಕೋದಿರಲ್ಕಿದನಾಂ
ಉಬ್ಬೆಗಂ ತಣಿದತ್ತು ಮನ್ಮನೋರಂಗದೊಳ್
ಬೊಬ್ಬುಳಿಯಂತಲ್ಪಮಿದುವೆ ||೪೯||
(ಹೀಗೆ ಗರ್ಭದಿಂದ ಇಷ್ಟೂ ಪದ್ಯಗಳೂ ಉದಯಿಸಿದವು. ಇದನ್ನೆಲ್ಲ ಈ ಕಾವ್ಯದಲ್ಲಿ ಪೋಣಿಸಿದೆ. ನನ್ನ ಮನಸ್ಸಿನ ಉಬ್ಬೆಗ ತಣಿದಿತ್ತು. ಮನಸ್ಸಿನ ರಂಗದಲ್ಲಿ ಇದು ಒಂದು ಬೊಬ್ಬುಳಿ (ನೊರೆ)ಯ ಹಾಗೆ ಅಲ್ಪವಾದದ್ದು.)
ರಸಿಕರಿಂತಿದನೋದೆ ಮುಂ ಪೇೞ್ದುದಾ ದ್ರಾಕ್ಷಾ
ರಸಮಕ್ಕೆ ಬಾಯ್ಗೆ ಮೇಣ್ ಮನಕೆ
ಜಸಮೀಗೆ ಸರ್ವಶಕ್ತಂ ಸರ್ವರ್ಗಂ ಚಿತ್ತ-
ಮೆಸಕಮಂ ಸೌಖ್ಯಮಂ ಪಡೆಗೆ ||೫೦||
(ರಸಿಕರು ಹೀಗೆ ಇದನ್ನು ಓದಲು ಮೊದಲು ಹೇಳಿದ ದ್ರಾಕ್ಷಾರಸವು ಅವರ ಮನಸ್ಸಿಗೂ ಬಾಯಿಗೂ ಸಲ್ಲಲಿ. ಸರ್ವಶಕ್ತನಾದ ಭಗವಂತನು ಎಲ್ಲರಿಗೂ ಯಶಸ್ಸನ್ನು ಕೊಡಲಿ. ಮನಸ್ಸು ಕಾಂತಿಯನ್ನೂ ಸೌಖ್ಯವನ್ನೂ ಪಡೆಯಲಿ)
||ಇಂತು ಕರ್ತೃವಿಚಾರಮುಂ ಸರ್ಗಸಂಗ್ರಹಣಸರ್ಗಮುಮೆಂಬ ನವಮಂ ಸರ್ಗಂ||

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ