Powered By Blogger

ಬುಧವಾರ, ಜುಲೈ 1, 2020

ಕುಂಭಸಂಭವೀಯಮೆಂಬ ಅಗಸ್ತ್ಯಚರಿತೆ- ವಿಂಧ್ಯಸ್ತಂಭನ

ಮೊದಲ ಸರ್ಗವನ್ನು ಇಲ್ಲಿ ನೋಡಿ- ಉರ್ವಶೀಜನನವೃತ್ತಾಂತಂ
ಎರಡನೇ ಸರ್ಗವನ್ನು ಇಲ್ಲಿ ನೋಡಿ- ಅಗಸ್ತ್ಯಜನನವೃತ್ತಾಂತಂ
ಮೂರನೇ ಸರ್ಗವನ್ನು ಇಲ್ಲಿ ನೋಡಿ- ಸಾಗರಾಗಮನವೃತ್ತಾಂತಂ 
ನಾಲ್ಕನೇ ಸರ್ಗವನ್ನು ಇಲ್ಲಿ ನೋಡಿ- ಸಾಗರಗರ್ವಭಂಗ, ಕಾಲಕೇಯಹನನಂ
ಐದನೇ ಸರ್ಗವನ್ನು ಇಲ್ಲಿ ನೋಡಿ- ಅಗಸ್ತ್ಯವಿವಾಹಂ, ಇಲ್ವಲವಾತಾಪಿಹನನಂ
ಆರನೇ ಸರ್ಗವನ್ನು ಇಲ್ಲಿ ನೋಡಿ- ನಹುಷನಿಂದ್ರನಾದುದುಂ ಶಚೀವೀಕ್ಷಣೆಯುಂ
ಏಳನೇ ಸರ್ಗವನ್ನು ಇಲ್ಲಿ ನೋಡಿ- ನಹುಷಶಾಪಪ್ರಾಪ್ತಿ 


~ಅಷ್ಟಮಂ ಸರ್ಗಂ ~
೩೧/೦೫/೨೦೧೫
ಚೌಪದಿ||
ಭೂಮಧ್ಯದೊಳಗಿರಲ್ ಭೌಮಾಕೃತಿಯ ಮೇರು
ಭೂಮಿಂಧರಂ ಚಂದ್ರರವಿಯರದನೇ
ಶ್ರೀಮಂತರಂ ಸಖರ್ ಸುತ್ತುವಂದದೆ ಸುತ್ತಿ
ಭೂಮಿಗಂ ಬೆಳಕೀಯುತಿರ್ದರೇಗಳ್ ||||
(ದೊಡ್ಡ ಆಕೃತಿಯ ಮೇರುಪರ್ವತವು ಭೂಮಿಯ ಮಧ್ಯದಲ್ಲಿರಲು, ಚಂದ್ರ ಸೂರ್ಯರು, ಶ್ರೀಮಂತರಾದವರನ್ನು ಗೆಳೆಯರು ಸುತ್ತುವಂತೆಯೇ ಸುತ್ತಿ ಭೂಮಿಗೆ ಬೆಳಕನ್ನು ಕೊಡುತ್ತಿದ್ದರು.)
ಕನಕಗಿರಿಯೆಂದೊಡೇನದಕಾವುದೈ ಸಾಟಿ
ಘನಜಲಧಿಗಂ ಜಲಧಿ ಸಾಟಿಯೆಂಬೊಲ್
ಅನಿಮೇಷಕುಲಪೂಜ್ಯಮಾಗಿರ್ದುದದನೀ ಕ-
ವನದಿಂದೆ ಬಣ್ಣಿಸಲ್ ಶಕ್ಯಮೇಂ ಮೇಣ್ ||||
(ಬಂಗಾರದ ಪರ್ವತ ಎಂದರೆ ಅದಕ್ಕೆ ಸಾಟಿ ಯಾವುದು! ದೊಡ್ಡ ಸಮುದ್ರಕ್ಕೆ ಸಮುದ್ರವೇ ಸಾಟಿ ಎಂಬಂತಿತ್ತು. ದೇವತೆಗಳಿಗೂ ಪೂಜ್ಯವಾಗಿರುವ ಆ ಪರ್ವತವನ್ನು ಈ ಕವಿತೆಯಿಂದ ಬಣ್ಣಿಸಲು ಶಕ್ಯವಾಗುವುದೇ!)
ಕವಿಯಂತೆ ತತ್ಕವನದಿಂ ನಿಬಿಡಬಂಧದಿಂ
ತವೆ ಸಲ್ವವಿಸ್ತೀರ್ಣದಿಂದಮಂತೆ
ಬುವಿಯೊಳಿರ್ದತ್ತು ಮೇರುವಿದೆಂತೊ ಚೆಲ್ವಿನಿಂ
ಕವಿದಿರ್ಪ ಕೀರ್ತಿಯೊಳ್ ಬೆಳ್ಪಿನಿಂದಂ ||||
(ಕವಿಯ ಹಾಗೆಯೇ ತತ್ಕವನದಿಂದ(ತತ್+ಕವನದಿಂದ- ಆ ಕವನದಿಂದ/ ತತ್ಕ+ವನದಿಂದ- ಅದರ ಕಾಡಿನಿಂದ) ನಿಬಿಡವಾದ ಬಂಧದಿಂದ (ಕವಿತೆಯ ಪದಗಳ ನಿಬಿಡ ಬಂಧ, ಕಾಡಿನಲ್ಲಿ ಮರಗಳ ನಿಬಿಡವಾದ ಬಂಧ) ಕುಂದಿಲ್ಲದೇ ಸಲ್ಲುವ ವಿಸ್ತೀರ್ಣದಿಂದ (ಕಾವ್ಯದ ವಿಸ್ತಾರ/ ಪ್ರದೇಶದ ವಿಸ್ತಾರ) ಈ ಮೇರುಪರ್ವತ ಚೆಲುವಿನಿಂದ ಕವಿದುಕೊಂಡು, ತನ್ನ ಕೀರ್ತಿಯಿಂದ ಬೆಳ್ಳಗಾಗಿತ್ತು.)
ಆರಣ್ಯಕಂಗಳಿಂ ಕಿಂಶುಕಾನ್ವಯದಿಂದೆ
ಗೌರವಿಪ ಸುರರಿಂದೆ ಮೌನಿಗಳಿನಾ
ರೌರವಯುತಂ ಬ್ರಹ್ಮಚಾರಿಗಳ ತೆಱದಿಂದೆ
ಮೇರುಪರ್ವತಮಂತು ಕಾಣುತಿರ್ಕುಂ ||||
(ಆರಣ್ಯಕಗಳಿಂದ(ಅರಣ್ಯಕ್ಕೆ ಸಂಬಂಧಿಸಿದ್ದು/ಬ್ರಾಹ್ಮಣಗಳ ಪರಿಶಿಷ್ಟವಾದ ಆರಣ್ಯಕಗಳೆಂಬ ವೇದದ ಭಾಗಗಳಿಂದ ) ಕಿಂಶುಕದ ಅನ್ವಯದಿಂದ(ಮುತ್ತುಗದ ಮರಗಳ ಕುಲದಿಂದ/ ಮುತ್ತುಗದ ದಂಡ ಧರಿಸಿರುವುದರಿಂದ) ಗೌರವಿಸುತ್ತಿರುವ ದೇವತೆಗಳಿಂದ ಹಾಗೂ ಮೌನಿಗಳಿಂದ (ಮುನೀಂದ್ರರಿಂದ/ ಮೌನವಾಗಿರುವವರಿಂದ), ರೌರವಯುತ(ರುರು ಎಂಬ ಜಿಂಕೆಯಿಂದ ಕೂಡಿದ/ ರುರು ಎಂಬ ಜಿಂಕೆಯ ಚರ್ಮವನ್ನು ಧರಿಸಿದ ಕಾರಣ) ಬ್ರಹ್ಮಚಾರಿಗಳ ಹಾಗೆಯೆ ಮೇರು ಪರ್ವತವು ಕಾಣುತ್ತಿತ್ತು )
ಆ ವಿರಿಂಚಿಯ ಸೃಷ್ಟಿಯೊಳಗಿರ್ಪುದೆಲ್ಲಮಂ
ಜೀವಿಗಳನೊಳಗೊಂಡುದೀ ಪರ್ವತಂ
ಆ ವಿಲಯ ಕಾಲದೊಳ್ ಮನು ಸಂಗ್ರಹಿಸಿಕೊಳ್ಳು-
ತೀ ವಸ್ತುಗಳನಿಟ್ಟ ಕುಂಭಮೇನೋ! ||||
(ಆ ಬ್ರಹ್ಮನ ಸೃಷ್ಟಿಯಲ್ಲಿ ಇರುವ ಎಲ್ಲವನ್ನೂ ಜೀವಿಗಳನ್ನೂ ಈ ಪರ್ವತವು ಒಳಗೊಂಡ ಈ ಪರ್ವತವು, ಪ್ರಳಯಕಾಲದಲ್ಲಿ ಮನುವು ಎಲ್ಲವನ್ನು ಸಂಗ್ರಹಿಸಿಕೊಳ್ಳುತ್ತ ಇಟ್ಟುಕೊಂಡ ಕೊಡವೇನೋ! )
ಶಾತಕುಂಭಗಿರೀಂದ್ರಮೇ ವಿಶ್ವದಾದಿಯೊಳ್
ಪೂತಜಲದಿಂ ಪೂರ್ಣಮಾಗಿರ್ದುದೇಂ
ನೀತಕುಂಭಮಿದೇನೊ ವಟಪತ್ರಶಾಯಿಯಂ
ಸ್ನಾತಕಂಗೊಳಿಸಲ್ಕೆ ಮಾಯೆಯಿಂದಂ ||||
(ಬಂಗಾರದ ಈ ಪರ್ವತವು ವಿಶ್ವದ ಆದಿಯಲ್ಲಿ ಪವಿತ್ರವಾದ ಜಲದಿಂದ ತುಂಬಿಕೊಂಡು ಪೂರ್ಣವಾಗಿದ್ದುದೇನೋ! ಬಹುಶಃ ವಟಪತ್ರಶಾಯಿಯಾದ ಶ್ರೀಮನ್ನಾರಾಯಣನನ್ನು ಸ್ನಾನಮಾಡಿಸಲು ಮಾಯೆಯೇ ತಂದ ಕೊಡವೇನೋ!)
ಗಾಣದೆತ್ತುಗಳಂತೆ ರವಿಚಂದ್ರರಿರ್ವರುಂ
ಕಾಣಲ್ಕೆ ಕಣೆಯ ಗೂಟಮೆ ಮೇರುವೇಂ
ಮೇಣವರ್ ತಿರುಗಲ್ಕೆ ಕಾಲಮಂ ನೊಣೆಯುತ್ತೆ
ಜಾಣಿಂ ಸ್ರವಿಸಿದತ್ತು ಜೀವನರಸಂ ||||
(ಗಾಣದ ಎತ್ತುಗಳಂತೆ ಸೂರ್ಯ ಹಾಗೂ ಚಂದ್ರರಿಬ್ಬರೂ ಕಾಣುತ್ತಿರಲು, ಮಧ್ಯದಲ್ಲಿರುವ ಕಣೆಯ ಗೂಟವೇ ಈ ಮೇರು ಪರ್ವತ. ಅವರಿಬ್ಬರೂ ತಿರುಗುತ್ತಿರಲು ಕಾಲವನ್ನು ನೊಣೆಯುತ್ತ ಜೀವನದ ರಸ ಸ್ರವಿಸುತ್ತಿತ್ತು )
ಗರ್ವಹೀನಂ ಸ್ವರ್ಣಮಯಗಾತ್ರನಾಗಿಯುಂ
ಪರ್ವತಂ ರಾಜಿಪ್ಪನೆಸಕದಿಂದಂ
ಸರ್ವತ್ರಸಂವೇದ್ಯನಾಗಿ ಕಠಿನತೆಯಿಂದ
ಪರ್ವಿರ್ಪನಲ್ತೀತನೇ ಮೇರುವೈ ||||
(ಈ ಮೇರುವು ಬಂಗಾರದ ಮೈಯವನಾಗಿದ್ದರೂ ಗರ್ವವಿಲ್ಲದವನಾಗಿದ್ದ. ಕಾಂತಿಯಿಂದ ಶೋಭಿಸುತ್ತಿದ್ದ. ಎಲ್ಲಕಡೆಯಲ್ಲಿಯೂ ಸಂವೇದನೆಯುಳ್ಳವನಾದರೂ ಕಠಿನವಾಗಿ ಹಬ್ಬಿರುವವನಾಗಿದ್ದ. ಇವನೇ ಮೇರುವು)
ಇದು ಪಕ್ಷಭಿನ್ನಮಾಗಿರ್ಪ ಪರ್ವತಮಲ್ತು
ಪೆದೆಯಾಗೆ ಪಾವದಂ ಪೊಂದಿ ಬಿಲ್ಲಾದತ್ತು
ಪದಪಿಂದೆ ಶಿವನ ಕಯ್ಯೊಳಗಂತು ಮೆಯ್ವೆತ್ತು
ಸದೆದುದಾ ದನುಜರಂ ಮೇರುಭೂಭೃತ್ತು ||||
(ಇದು ರೆಕ್ಕೆ ತುಂಡಾಗಿರುವ ಪರ್ವತವಲ್ಲ, ಹೆದೆಯಾಗಿ ಸರ್ಪವೇ ಹೊಂದಿ ಬಿಲ್ಲಾಗಿತ್ತು. ಚೆನ್ನಾಗಿ ಶಿವನ ಕೈಯಲ್ಲಿ ಬಿಲ್ಲಾಗಿ ಸಂದು ಈ ಮೇರು ಪರ್ವತವು ದನುಜರನ್ನು (ತ್ರಿಪುರಾಸುರರನ್ನು ) ಸದೆದಿತ್ತು)
ಸುಪ್ರಸಿದ್ಧಮಿದಾಗೆ ಮತ್ಸರಂಬೊಂದುತುಂ
ಸ್ವಪ್ರತಿಷ್ಠೆಯನೆಂತೊ ಮೆಱೆಯಲೆನುತುಂ
ಅಪ್ರತಿಭನಾಗಿರ್ದ ವಿಂಧ್ಯಂ ನೆಗೞ್ದೆೞ್ದು
ಸುಪ್ರತೀಕಾದಿಗಳನೊತ್ತಿ ಮೆಟ್ಟಲ್ ||೧೦||
(ಇದು ಸುಪ್ರಸಿದ್ಧವಾಗಿರುವಾಗ, ಮತ್ಸರವನ್ನು ಹೊಂದಿ ತನ್ನ ಪ್ರಸಿದ್ಧಿಯನ್ನು ಹೇಗೋ ಮರೆಸಬೇಕು ಎಂದು ಪ್ರತಿಭೆಯಿಲ್ಲದವನಾಗಿದ್ದರೂ ವಿಂಧ್ಯಪರ್ವತವು ಎದ್ದುಕೊಂಡು ಸುಪ್ರತೀಕವೇ ಮೊದಲಾದ ದಿಗ್ಗಜಗಳನ್ನು ಮೆಟ್ಟಲು..)
ರವಿಯಿದುರ್ ಸಾರ್ದು ಕೇಳ್ದಂ ಮೇರುವಂ ಸುತ್ತಿ
ದಿವಸಕರನೆನಿಸಿರ್ಪ ಹೇ ಮಿತ್ರನೇ !
ಜವದಿಂದೆ ಸುತ್ತು ನೀನೀ ವಿಂಧ್ಯನಂ ಮತ್ತೆ
ತವಪಥಂ ಬೇಱೆಯಾದೊಡನೊಳ್ಪಲಾ ||೧೧||
(ರವಿಯ ಎದುರು ಬಂದು ಕೇಳಿದನು “ಹೇ ಮಿತ್ರನೇ! ನೀನು ಮೇರು ಪರ್ವತವನ್ನು ಸುತ್ತುತ್ತಾ ಹಗಲನ್ನು ಉಂಟು ಮಾಡುವವನು ಎಂದೆನಿಸಿದ್ದೀಯಾ, ಈಗ ವಿಂಧ್ಯನನ್ನು ಸುತ್ತಿಕೊಂಡು ಹೋಗು, ನಿನ್ನ ದಾರಿಯು ಬೇರೆಯಾಗುವುದು ಒಳ್ಳೆಯದಲ್ಲವಾ! )
ಹರಿಹಯಂಗಿಂತೆಂದ ವಿಂಧ್ಯನಂ ನಿರ್ಲಕ್ಷ್ಯ-
ಝರಿಯಿಂದೆ ತೊಯ್ಸಿದಂ ನೇಸಱಾಗಳ್
ಕರದಿಂದೆ ವಂದಿಪಂದದೆ ತಾಂಕಿ ದೂರದೊಳ್
ಭರದಿಂದ ಮೇರುವನೆ ಸುತ್ತಿ ಪೋದಂ ||೧೨||
(ಹೀಗೆಂದು ಸೂರ್ಯನಿಗೆ ಹೇಳಿದ ವಿಂದ್ಯನನ್ನು ತನ್ನ ನಿರ್ಲಕ್ಷ್ಯದ ಝರಿಯಿಂದ ತೋಯಿಸಿದ ನೇಸರು, ದೂರದಿಂದಲೇ ನಮಸ್ಕರಿಸಿಕೊಂಡು ಹೋಗುವಂತೆ ತನ್ನ ಕಿರಣವನ್ನು ಬೀರಿ ಮೇರುವನ್ನೇ ಸುತ್ತಿಕೊಂಡು ಹೋದ)
ಧೃತಗರ್ವನೀ ಸಪ್ತಹಯರಥದ ಮಿಹಿರನೈ
ಖತಿಯೀವೆನೆಂತೆಂದು ಯೋಚಿಸುತ್ತುಂ
ಮೃತನಂತೆ ಪಿಂತಿರ್ದುದದು ಬಳೆಯುತೆೞ್ದಿರಲ್
ಚ್ಯುತಮಾದುದಾಗಸದ ಪದವಿಯುಂ ಮೇಣ್ ||೧೩||
(ಏಳು ಕುದುರೆಗಳ ರಥದಲ್ಲಿ ಸಾಗುವ ಈ ಸೂರ್ಯನು ಗರ್ವವನ್ನು ಧರಿಸಿದ್ದಾನೆ. ಹೇಗೆ ಇವನಿಗೆ ದುಃಖವನ್ನು ಕೊಡಲಿ ಎಂದು ಯೋಚಿಸುತ್ತ, ಸತ್ತವನಂತೆ ಹಿಂದಿದ್ದುದು ಬೆಳೆಯುತ್ತ ಎದ್ದು ಬಂದು (ಸೂರ್ಯನ) ಆಗಸದ ದಾರಿಯೂ ನಷ್ಟವಾಯಿತು.)
ದಿಗಿಭಂಗಳೆಲ್ಲಮುಂ ಭಾರದಿಂ ಬೆರ್ಚುತ್ತೆ
ಮೊಗಮನೀಕ್ಷಿಸುತನ್ಯರೆಡೆಗೆ ಮತ್ತಂ
ಜಗಮೆಲ್ಲ ವಿದ್ರವಿಪ ಬೃಂಹಿತಂಗೆಯ್ದಿರಲ್
ಬಗೆಯಾಯ್ತು ಕಂಪಿತಂ ಸೃಷ್ಟಿಕರನಾ ||೧೪||
(ಭೂಮಿಯನ್ನು ಹೊತ್ತ ದಿಗ್ಗಜಗಳೆಲ್ಲವೂ ಭಾರದಿಂದ ಹೆದರುತ್ತಾ, ಇನ್ನೊಬ್ಬರ ಮೊಗವನ್ನು ನೋಡುತ್ತ, ಜಗತ್ತೆಲ್ಲವೂ ವಿದ್ರವಿಸುವಂತಹ ಭಯಂಕರವಾದ ಬ್ರೂಂಕಾರವನ್ನು ಮಾಡಿದವು. ಆಗ ಬ್ರಹ್ಮನ ಮನಸ್ಸೂ ಕಂಪಿಸಿತು )
ಫಣಿಪತಿಯ ಫಣಮೆಂತೊ ಬಾಗುತ್ತಿರಲ್ಕೆ ಮೇಣ್
ಫಣಿಮಣಿಯ ತೇಜದಿಂದೆೞ್ದು ಹರಿಯು
ಮಣಿದಿರ್ಪುದಾರ್ಗೆ ನೀನೆಂದೊಡಂ ಪೇೞ್ದತ್ತು
ದಣಿವಾದುದಿಳೆಯ ಭಾರದಿನೆಂತುಟು ||೧೫||
(ಭೂಮಿಯನ್ನು ಧರಿಸಿದ ಆದಿಶೇಷನ ಹೆಡೆಯು ಬಾಗುತ್ತಿರುವಾಗ, ಅವನ ಮೇಲೆ ಮಲಗಿರುವ ವಿಷ್ಣುವಿಗೂ ಅದರೆ ಹೆಡೆಯ ಮಣಿಯ ಕಾಂತಿಯಿಂದ ಎಚ್ಚರವಾಗಿ "ನೀನು ಯಾರಿಗೆ ಮಣಿಯುತ್ತಿದ್ದೀಯಾ?” ಎಂದು ಕೇಳಿದಾಗ ಅದು "ಭೂಮಿಯ ಭಾರವನ್ನು ಧರಿಸಿ ಹೀಗೆ ದಣಿವಾಗಿದೆ" ಎಂದು ಹೇಳಿತು )
ಎಂದು ಭೂಭಾರಮಂ ಪೊತ್ತಿರ್ಪರೆಲ್ಲರುಂ
ತಂದೆ ಕಾಪಿಡು ದೇವ ಎಂಬ ತೆಱದಿಂ
ಮುಂದೆಯ್ದು ಗೋಳಿಡಲ್ ಬ್ರಹ್ಮಂಗೆ ಚಿಂತೆಯಿಂ-
ದಂದು ನಾಲ್ಮೊಗಮಾಯ್ತು ಪಾಂಡುವರ್ಣಂ ||೧೬||
(ಹೀಗೆ, ಭೂಮಿಯ ಭಾರವನ್ನು ಹೊತ್ತ ಎಲ್ಲರೂ “ತಂದೆಯೇ ಕಾಪಾಡು” ಎಂಬಂತೆ ಮುಂದೆ ಬಂದು ಗೋಳಿಟ್ಟಾಗ ಚಿಮತೆಯಿಂದ ಬ್ರಹ್ನನ ನಾಲ್ಕು ಮೊಗಗಳೂ ಬಿಳುಚಿಕೊಂಡಿತು)
ಅಳಿಕುಲದ ಬಾಧೆಯಿಂ ಬೆರ್ಚುವಂದದೆ ಕಮಲ-
ಮಿಳೆಯೊಳಗೆ ನಗದಿಂದೆ ನೇಸಱಿತ್ತಲ್
ಕೊಳುಗುಳಮದಪ್ಪುದೇಂ ಮೇರುವೊಡನೆಂಬವೊಲ್
ಬಳೆಯುತ್ತುಮಿರ್ದುದೀ ವಿಂಧ್ಯನಿತ್ತಲ್ ||೧೭||
(ದುಂಬಿಗಳ ಬಾಧೆಯಿಂದ ಕಮಲವು ಹೆದರುವಂತೆ, ಭೂಮಿಯಲ್ಲಿ ಈ ವಿಂದ್ಯಪರ್ವತದಿಂದ ನೇಸರೂ ಹೆದರಿತ್ತು. ಇನ್ನೇನು ಮೇರುವಿನ ಜೊತೆ ಯುದ್ಧವಾಗುತ್ತದೆ ಎಂಬ ಹಾಗೆಯೇ ವಿಂಧ್ಯನೂ ಬೆಳೆಯುತ್ತಿದ್ದನು)
ಉಸಿರನೊಳಕೊಂಡೊಡಂ ಬಳೆದಿರ್ಪ ವೃತ್ರನೇ
ಬಸಿಱೊಡೆದು ಭೂಮಿಯಿಂ ಮತ್ತೆ ಬಂದಂ
ಬೆಸನಮಂ ನೀೞ್ದಪಂ ಹಾ! ಕಷ್ಟಮೆನುತತ್ತ
ಮಿಸುಕಿ ದುಃಖಿಸುತಿರ್ದನಲ್ತೆ ಶಕ್ರಂ ||೧೮||
(ಉಸಿರನ್ನು ತೆಗೆದುಕೊಳ್ಳುತ್ತಿರುವ ಹಾಗೆಯೇ ಬೆಳೆಯುತ್ತಿರುವ ವೃತ್ರಾಸುರನೇ ಭೂಮಿಯ ಬಸಿರನ್ನು ಒಡೆದುಕೊಂಡು ಮತ್ತೆ ಬಂದು ತೊಂದರೆಯನ್ನು ಕೊಡುತ್ತಿದ್ದಾನೆ! ಅಯ್ಯೋ! ಕಷ್ಟ ಎನ್ನುತ್ತ ನಡುಗುತ್ತ ಇಂದ್ರ ದುಃಖಿಸುತ್ತಿದ್ದ.)
ಮಂದೇಹನಂ ಗೆಲ್ದೆನಿಂದೆಂತು ಕಷ್ಟಮೋ
ಸಂದೇಹಮಾದುದೀ ಬಲದೊಳೆನ್ನೊಳ್
ಕುಂದಕ್ಕುಮೀ ಕೀರ್ತಿಗಂ ದುಷ್ಟವಿಂಧ್ಯನಿಂ-
ದೆಂದು ಚಿಂತಿಸುತಿರ್ದಪಂ ಭಾಸ್ಕರಂ ||೧೯||
(ಮಂದೇಹ ಎಂಬ ರಾಕ್ಷಸರನ್ನು ಗೆದ್ದಿದ್ದೇನೆ, ಇಂದು ಇದು ಯಾವ ಕಷ್ಟವೋ! ನನ್ನ ಬಲದಲ್ಲಿಯೇ ಸಂದೇಹವಾಗುತ್ತಿದೆ. ನನ್ನ ಕೀರ್ತಿಗೇ ಈ ದುಷ್ಟನಾದ ವಿಂಧ್ಯನಿಂದ ಕುಂದಾಗುತ್ತದೆ ಎಂದು ಸೂರ್ಯನೂ ಚಿಂತಿಸುತ್ತಿದ್ದ. )
ಭಾರತದ ಮಧ್ಯದೊಳ್ ದಾರಿಯಿಲ್ಲದವೋಲೆ
ಭಾರದಿಂ ಬಿಂಜೆಯಂ ಬಳೆದನೇಕೈ
ಚಾರುತರಮಿರ್ದುದೇಂ ಕ್ರೂರಮಾದುದೊ ಕಾಣೆ-
ನೀ ರೂಕ್ಷನಿಂದೆಂಬರೆಲ್ಲ ಲೋಗರ್ ||೨೦||
(ಭಾರತದ ಮಧ್ಯದಲ್ಲಿ ದಾರಿಯೇ ಇಲ್ಲದಂತೆ ಈ ವಿಂಧ್ಯನು ಭಾರದಿಂದ ಬೆಳೆಯುತ್ತಿರುವುದೇಕೆ! ಸುಂದರವಾಗಿರುವುದು ಕ್ರೂರವಾಗುತ್ತಿರುವುದೇಕೆ! ಈ ರೂಕ್ಷನಾದ ವಿಂಧ್ಯನಿಂದ ಎಂದು ಎಲ್ಲ ಜನರೂ ಹೇಳುತ್ತಿದ್ದರು)
ಇಂಬುಕೆಯ್ವರದಾರೊ ಕೊರ್ವಿರ್ಪನೀತನಂ
ತಾಂ ಬಳೆಯದಂದದಿಂ ತಡೆವರೀಗಳ್
ನಂಬಿ ಪೇೞ್ದೊಡೆ ನಿಲ್ಲಲಾಱನೀ ವಿಂದ್ಯನೆಂ-
ತಂಬುಜಾಪ್ತನ ರಕ್ಷೆಯೆನೆ ಬೊಮ್ಮನೇ ||೨೧||
(ನಮಗೆ ಒಳ್ಳೆಯದನ್ನು ಮಾಡುವವರು ಯಾರೋ! ಕೊಬ್ಬಿರುವ ಈತನನ್ನು ಬೆಳೆಯದಂತೆಯೇ ತಡೆಯುವವರು ಯಾರೋ! ಇವನನ್ನೇ ನಂಬಿ ಹೇಳಿದರೆ ನಿಲ್ಲುವವನಲ್ಲ ಈ ವಿಂಧ್ಯ, ಅಂಬುಜಾಪ್ತನಾದ ಸೂರ್ಯನ ರಕ್ಷೆಯ ಹೇಗೆ ಎಂದು ಬ್ರಹಮ್ನೇ ಹೇಳಲು..)
ಕರೆದು ಪೇೞ್ ಸಪ್ತರ್ಷಿವರರೊಳೇ ಸಲ್ವನಂ
ವರುಣಪುತ್ರನ ಕುಂಭಸಂಭವನ ನೀಂ
ಗಿರಿಯ ವೃದ್ಧಿಯನಿೞಿಸಿ ಬರುವನಾತಂ ಸರ್ವ-
ದುರಿತಮಂ ಕೞಿವನೆಂದಂ ವಿಷ್ಣುವೇ ||೨೨||
(“ಸಪ್ತರ್ಷಿಗಳಲ್ಲಿ ವರುಣಪುತ್ರನಾದ ಕುಂಭಸಂಭವನಾದ ಅಗಸ್ತ್ಯನನ್ನು ಕರೆದು ಹೇಳು, ವಿಂಧ್ಯಗಿರಿಯ ಬೆಳವಣಿಗೆಯನ್ನು ನಿಲ್ಲಿಸಿ ಅವನು ಬರುತ್ತಾನೆ. ಎಲ್ಲಾ ದುರಿತವನ್ನೂ ಕಳೆಯುತ್ತಾನೆ" ಎಂದು ವಿಷ್ಣುವೇ ಹೇಳಿದ. (ಈ ಚೌಪದಿಯಲ್ಲಿ ಕುಸುಮಷಟ್ಪದಿಯೂ ಗರ್ಭಿತವಾಗಿದೆ))
ಹರಿಯ ಮಾತಂ ಕೇಳ್ದು ಭರದಿಂ ವಿರಿಂಚಿ ತಾಂ
ಸ್ಮರಿಸಿದೊಡನಲ್ಲಿಗಂ ಬಂದನಾತಂ
ಕರೆದುದೇತಕೆ ದೇವ! ಹರಿನಾಭಿಕಮಲಭವ!
ನೆರವೇರಿಪುದನೇನನೆಂದು ಕೇಳ್ದಂ ||೨೩||
(ಹರಿಯ ಮಾತನ್ನು ಕೇಳಿ ಭರದಿಂದ ಬ್ರಹ್ಮನು ಸ್ಮರಿಸಿದೊಡನೆಯೇ ಅಲ್ಲಿಗೆ ಅಗಸ್ತ್ಯನು ಬಂದನು. “ದೇವ! ಹರಿಯ ನಾಭಿಯ ಕಮಲದಲ್ಲಿ ಹುಟ್ಟಿದವನೇ! ನನ್ನನ್ನು ಕರೆದುದೇತಕ್ಕೆ! ನಾನು ಏನನ್ನು ನೆರವೇರಿಸಬೇಕು?” ಎಂದು ಕೇಳಿದನು (ಈ ಚೌಪದಿಯಲ್ಲಿ ಕುಸುಮಷಟ್ಪದಿಯೂ ಗರ್ಭಿತವಾಗಿದೆ))
ಕೇಳೈ ಮುನೀಂದ್ರನೇ ಏೞುತ್ತೆ ಭೂಮಿಯೊಳ್
ಕಾೞಿಂದೆ ಕಿಡಿಸಿರ್ಕುಮಾ ಪರ್ವತಂ
ನೀಳಗಗನದ ಪಥದೊಳೇಳುಗುದುರೆಯ ರಥಮ-
ನೋಲಾಡಿಸಿರ್ಪುದೈ ವಿಂಧ್ಯಮೀಗಳ್ ||೨೪||
("ಮುನೀಂದ್ರನೇ! ಕೇಳು, ಭೂಮಿಯಲ್ಲಿ ಏಳುತ್ತ ಕೆಟ್ಟತನದಿಂದ ಆ ಪರ್ವತವು ಕೆಡಿಸುತ್ತಿದೆ. ನೀಳವಾದ ಗಗನದ ಪಥದಲ್ಲಿ ಸೂರ್ಯನ ಏಳು ಕುದುರೆಗಳ ರಥವನ್ನು ಓಲಾಡಿಸುತ್ತಿದೆ ಆ ವಿಂಧ್ಯ ಪರ್ವತ” (ಈ ಚೌಪದಿಯಲ್ಲಿ ಕುಸುಮಷಟ್ಪದಿಯೂ ಗರ್ಭಿತವಾಗಿದೆ))
ಕುತ್ತಿಗೆಂದೊತ್ತುತ್ತೆ ಧುತ್ತೆಂದು ಮುತ್ತೆ ಭೂ-
ಭೃತ್ತಿದಂ ಸತ್ತಿನಿಂದತ್ತಲೊತ್ತೈ
ಚಿತ್ತಕ್ಕಮಿತ್ತೊಳ್ಪನಿತ್ತಲಿನ ವೃತ್ತಮಂ
ಮುತ್ತಾಗಿಸುತ್ತೆ ಪೋಗತ್ತಗಸ್ತ್ಯ ||೨೫||
(ಅಗಸ್ತ್ಯ! ಆಪತ್ತಿಗೆಂದು ಒತ್ತುತ್ತ, ಧುತ್ತನೆ ಮುತ್ತಿರಲು ಈ ಪರ್ವತವು, ಅದನ್ನು ನಿನ್ನ ಒಳ್ಳೆಯ ತನದಿಂದ ಅತ್ತ ತಳ್ಳು. ಮನಸ್ಸಿಗೆ ಕೊಟ್ಟ ಒಳ್ಳೆಯ ತನವನ್ನು ಇತ್ತಲಿನ ವೃತ್ತಾಂತವನ್ನು ಮುತ್ತಿನಂತೆ ಆಗಿಸುತ್ತ ಹೋಗು (ಈ ಚೌಪದಿಯಲ್ಲಿ ಕುಸುಮಷಟ್ಪದಿಯೂ ಗರ್ಭಿತವಾಗಿದೆಯಲ್ಲದೇ ಪ್ರತಿ ಗಣದಲ್ಲೂ ಆದಿಪ್ರಾಸವಿದೆ.))
ಎನೆ ವಾಣಿಯೆಱೆಯನಾ ಮುನಿ ವಂದಿಸುತ್ತೆ ತಾ-
ನಿನನೊಳ್ಪ ಸಾಧಿಪೆಂ ಪೋಪೆನೆಂದಂ
ಘನಪಥದ ಹರಿದಶ್ವನನೆ ಪೀಡಿಸಿರ್ಪುದೇಂ
ಹನನಮಾಗದೆ ವೆಟ್ಟನಟ್ಟಿ ಬರ್ಪೆಂ ||೨೬||
(ವಾಣಿಯ ಪತಿಯಾದ ಬ್ರಹ್ಮನು ಹೀಗೆನ್ನಲು, ಆ ಮುನೀಂದ್ರನು ವಂದಿಸುತ್ತಾ "ನಾನು ಸೂರ್ಯನಿಗೆ ಒಳ್ಳೆಯದನ್ನು ಸಾಧಿಸುತ್ತೇನೆ, ಹೊರಡುತ್ತೇನೆ" ಎಂದನು. “ಮೋಡಗಳ ದಾರಿಯ ಸೂರ್ಯನನ್ನೇ ಪೀಡಿಸಿದ್ದಾನೆಯೇ! ನಾಶವಾಗದೇ ಈ ಬೆಟ್ಟವನ್ನು ಅಟ್ಟಿ ಬರುತ್ತೇನೆ" )
ಇಂತಗಸ್ತ್ಯಂ ಪೇೞ್ದು ಪೊಱಮಟ್ಟನಲ್ಲಿಂದೆ
ಮುಂತೆ ವಿಂಧ್ಯಂ ಕಾಣ್ಬ ಪಥಕೆ ಬಂದಂ
ಎಂತು ಬಳೆದಿರ್ಪುದಂತಿಂತುಂತೆನಲ್ ಸುಳ್ಳು
ನೋಂತದಂ ಬಗ್ಗಿಸಲ್ಕೆಂದು ಪೇೞ್ದಂ ||೨೭||
(ಹೀಗೆ ಅಗಸ್ತ್ಯನು ಹೇಳಿ ಹೊರಟು ಅಲ್ಲಿಂದ ಮುಂದೆ ವಿಂಧ್ಯವು ಕಾಣುವ ಹಾದಿಗೆ ಬಂದನು, ಇದು ಹಾಗೆ ಹೀಗೆ ಹೀಗೆ ಬೆಳೆದಿದೆ ಎನ್ನಲು ಸುಳ್ಳನ್ನು ತೊಟ್ಟು ಅದನ್ನು ಬಗ್ಗಿಸಲು ಎಂದು ಹೇಳಿದ- )
ಎಲೆ ಗಿರಿಯೆ ಪೋಪೆನಾಂ ಮಲೆನಾಡನೀಕ್ಷಿಸಲ್
ಖಲನಂತೆ ದಕ್ಷಿಣದ ದಾರಿಯೊಳದೇಂ
ಛಲದಿಂದೆ ನಿಂತೆಯೈ ಚಲಿಸತ್ತ ಕಿಱಿದಾಗಿ
ಕೆಲಕೆ ಶಾಪಂಗುಡುವೆನಱಿತೆಯೇನೈ ||೨೮||
(ಎಲೈ ಗಿರಿಯೇ! ನಾನು ಮಲೆನಾಡನ್ನು ನೋಡಲು ಎಂದು ಹೋಗುತ್ತಿದ್ದೇನೆ! ನೀನೇನು ಖಳನಂತೆ ದಕ್ಷಿಣದ ದಾರಿಯಲ್ಲಿ ಛಲದಿಂದ ಹೀಗೆ ನಿಂತಿದ್ದೀಯಾ! ಕಿರಿದಾಗಿ ಅತ್ತ ಸರಿದು ಹೋಗು! ಇಲ್ಲದಿದ್ದರೆ ಶಾಪವನ್ನು ಕೊಡುತ್ತೇನೆ! ತಿಳಿದೆಯೇನು?)
ಮುನಿಯಿಂತು ಪೇೞ್ದುದಂ ಧ್ವನಿಯಿಂದೆ ತಿಳಿದು ತಾ-
ನನಿತು ನಮಿಸುತ್ತೆ ಬಾಗಿರ್ದುದೊರ್ಮೆ
ಮುನಿಪ ನೀನೆಯ್ದು ಬರ್ಪಿನಮಾನುಮಿರ್ಪೆನೈ
ಜನರ ದಾರಿಗೆ ಮಿತ್ರನಪ್ಪ ತೆಱದಿಂ ||೨೯||
(ಹೀಗೆ ಮುನಿಯು ಹೇಳಿದ್ದನ್ನು ಧ್ವನಿಯಿಂದ ತಿಳಿದುಕೊಂಡು ನಮಸ್ಕಾರವನ್ನು ಮಾಡುತ್ತಾ ಆ ಪರ್ವತವು ಬಾಗಿತು. “ಮುನೀಂದ್ರನೇ ನೀನು ಬರುವ ತನಕವೂ ನಾನು ಹೀಗೇ ಜನರ ದಾರಿಗೆ ಮಿತ್ರನಾಗುವಂತೆ ಬಾಗಿರುತ್ತೇನೆ” )
ನಮಿಸಿ ಪೇೞ್ದಾ ಗಿರಿ ಕ್ರಮದೆ ಕುಗ್ಗಿದೊಡತ್ತ
ಕ್ರಮಿಸಿದಂ ಮುನಿಯೆ ದಕ್ಷಿಣಮುಖಕ್ಕಂ
ಧಮಸೂರ್ಯಮಾರ್ಗಕ್ಕಮಮಾ ಸಮಸ್ಯೆ ನಿ-
ರ್ಗಮಿಸಿತೆಂದೆಲ್ಲರುಂ ಮುದದೊಳಿರ್ದರ್ ||೩೦||
(ಹೀಗೆ ನಮಿಸಿ ಹೇಳಿದ ಆ ಗಿರಿ ಕುಗ್ಗಿದಾಗ, ಮುನೀಂದ್ರನು ದಕ್ಷಿಣದಿಕ್ಕಿಗೆ ಅಲ್ಲಿಂದ ಕ್ರಮಿಸಿದ. ಅಬ್ಬಬ್ಬ! ಕಾಂತಿಯುಕ್ತನಾದ ಸೂರ್ಯನ ಮಾರ್ಗಕ್ಕೆ ಸಮಸ್ಯೆ ಕಳೆಯಿತು ಎಂದು ಎಲ್ಲರೂ ಸಂತೋಷದಿಂದ ಇದ್ದರು.)
ಅಗದ ವೃದ್ಧಿಯನಿಂತು ಸ್ತಂಭಿಸಿರ್ಪಂ ಮುನಿಪ-
ನೊಗುಮಿಗೆಯೊಳಗಗಸ್ತ್ಯನೆಂದು ಸರ್ವರ್
ಬಗೆಯಿಂದೆ ಕೊಂಡಾಡಿ ಪೇೞ್ದಪರ್ ದಕ್ಷಿಣದೆ
ಸೊಗದಿಂದೆ ತಪಕೆಂದು ಬಂದನಿತ್ತಲ್ ||೩೧||
(ಮುನೀಂದ್ರನಾದ ಅಗಸ್ತ್ಯನು ಪರ್ವತದ ವೃದ್ಧಿಯನ್ನು ಹೀಗೆ ಅತಿಶಯವಾಗಿ ಸ್ತಂಭಿಸಿದ್ದಾನೆ, ಹೀಗೆ ಮನಸ್ಸಿನಿಂದ ಅವನನ್ನು ಕೊಂಡಾಡಿ ದಕ್ಷಿಣದಲ್ಲಿ ಎಲ್ಲರೂ ಕೊಂಡಾಡಿ ಹೇಳಿದರು. ಅವನೂ ಚೆನ್ನಾಗಿ ತಪಸ್ಸಿಗೆಂದು ಇತ್ತ ಬಂದನು)
ತೆಂಕಣದೊಳಿರ್ದಪಂ ಮುನಿಕವೇರಾಖ್ಯನಂ-
ದೋಂಕಾರದ ಧ್ಯಾನಸಕ್ತನಾಗಳ್
ಱೆಂಕೆಯಂ ಪಡೆದ ನಗದಂದದಿಂ ತೋಷಿಸು-
ತ್ತುಂ ಕನ್ಯೆಯಂ ನೀೞ್ದನಂತು ಮುನಿಗಂ ||೩೨||
(ದಕ್ಷಿಣದಲ್ಲಿ ಇರುವ ಮುನಿಯಾದ ಕವೇರ ಎಂಬವನು ಓಂಕಾರದ ಧ್ಯಾನಸಕ್ತನಾಗಿದ್ದನು. ರೆಕ್ಕೆಯನ್ನು ಪಡೆದ ಪರ್ವತದಂತೆಯೇ ಸಂತೋಷವನ್ನು ಪಡುತ್ತಾ ತನ್ನ ಮಗಳನ್ನು ಅಗಸ್ತ್ಯನಿಗೆ ಕೊಟ್ಟನು.)
ಪಡೆದ ಪುತ್ರಿಯನೊಳ್ಪಿನೊಳಗಾನೆ ಸಾಕಿದೆಂ
ಕುಡುವೆನಿದೊ ನಿನಗೀಗಳಾನಗಸ್ತ್ಯ
ಜಡಳಾಗಿಯುಂ ರಸದ ಸನ್ನಿಧಿಯಿವಳ್ ಗಡಾ
ಪೊಡವಿಯೊಳ್ ಕಾವೇರಿಯೆಂದೆನಿಪ್ಪಳ್ ||೩೩||
(ಹಡೆದ ಮಗಳನ್ನು ನಾನೇ ಚೆನ್ನಾಗಿ ಸಾಕಿದೆ. ಈಗ ನಿನನಗೆ ಕೊಡುತ್ತಿದ್ದೇನೆ. ಇವಳು ಜಡಳಾಗಿದ್ದರೂ ರಸದ(ನೀರಿನ) ಸನ್ನಿಧಿ. ಭೂಮಿಯಲ್ಲಿ ಕಾವೇರಿ ಎಂದು ಖ್ಯಾತಳಾಗುತ್ತಾಳೆ )
ಚರಿಸುತ್ತೆ ಗಿರಿಗಳೊಳ್ ಭರದಿಂದೆ ನೆಱೆದಳೈ
ಸ್ಫುರಿಸಿರ್ದುದಱಿವೆನಗೆ ಜರೆಯಾದೊಡಂ
ವರಿಸಲ್ಕೆ ವರನೆಂದು ಬರೆ ನೀನೆ ವರಮೆಂದು
ಮೆಱೆವಂತೆ ಸರಿಯಾಗೆ ಕರೆದೆನಿತ್ತಂ ||೩೪||
(ಅವಳು ಪರ್ವತಗಳಲ್ಲಿ ಚಲಿಸುತ್ತಾ, ಭರದಿಂದ ನೆರೆದಿದ್ದಳು. ನನಗೆ ಮುಪ್ಪಾದರೂ ಅರಿವು ಸ್ಫುರಿಸಿತ್ತು. "ಅವಳನ್ನು ವರಿಸಲು ವರನಾಗಿ ನೀನು ಬಂದರೆ ಅದೇ ಶ್ರೇಷ್ಠವಾಗುತ್ತದೆ ಎಂದು ಮೆರೆಯುವಂತೆ ಸರಿಯಾಗಿ ಇತ್ತ ಕರೆದೆ.(ಈ ಚೌಪದಿಯಲ್ಲಿ ಕುಸುಮಷಟ್ಪದಿಯೂ ಗರ್ಭಿತವಾಗಿದೆಯಲ್ಲದೇ ಪ್ರತಿ ಗಣದಲ್ಲೂ ಆದಿಪ್ರಾಸವಿದೆ) )
ಅಟವಿಯೊಳಗಿರ್ಪಳಂ ಕಾಪಾಡಿ ಸಾಕು ನೀಂ
ಕುಟಜಕುಸುಮಂಗಳಂ ತಿಱಿವಳೀಕೆ
ವಟಪತ್ರದಿಂ ಪರ್ಣ ಶಾಲೆಯಂ ರಚಿಪಳೈ
ಸ್ಫುಟಮಪ್ಪ ಕಂದಂಗಳಂ ಪುಡುಕುವಳ್ ||೩೫||
(ಕಾಡಿನಲ್ಲಿರುವ ಇವಳನ್ನು ನೀನು ಕಾಪಾಡಿಕೊಂಡು ಸಾಕು. ಕಾಡಿನ ಹೂಗಳನ್ನು ಅವಳು ತಿರಿದು ತರುತ್ತಾಳೆ. ವಟಪತ್ರದಿಂದ ಪರ್ಣಶಾಲೆಯನ್ನು ರಚಿಸುತ್ತಾಳೆ. ತಿನ್ನಲು ಯೋಗ್ಯವಾದ ಕಂದಮೂಲಗಳನ್ನು ಹುಡುಕುತ್ತಾಳೆ)
ನಿನ್ನ ತಪಕನುವಾಗಿ ಪಿರಿಯಳ್ಗೆ ತಂಗಿಯಾ-
ಗಿನ್ನಿವಳ್ ಸಲ್ವಳೈ ಕಾಲವಶದಿಂ
ಸನ್ನುತನದೀಪಾತ್ರಮಪ್ಪಳೈ ಕಾವೇರಿ
ಚೆನ್ನೆಯೆಂದಿತ್ತಂ ಕವೇರನಾಗಳ್ ||೩೬||
("ನಿನ್ನ ತಪಸ್ಸಿಗೆ ಅನುಕೂಲವಾಗಿ ಹಿರಿಯಳಿಗೆ ತಂಗಿಯಾಗಿ ಸಲ್ಲುವ ಇವಳು ಕಾಲವಶದಿಂದ ಸ್ತುತ್ಯರ್ಹವಾದ ನದೀಪಾತ್ರವಾಗುತ್ತಾಳೆ. ಕಾವೇರಿ ಎಂಬ ಚೆನ್ನೆ” ಎಂದು ಕವೇರ ಮುನಿಯು ಅವಳನ್ನು ಕೊಟ್ಟನು.)
ಕಾವೇರಿಯಂತೆ ಲೋಪಾಮುದ್ರೆಯರ ಜೊತೆಗೆ
ಕಾವೇರನಾಶ್ರಮದೊಳಿರ್ದನಾತಂ
ಜೀವನಿಯಮದ ತೆಱದೊಳಂತ್ಯಮಂ ಕಂಡನಾ
ಕಾವೇರಿಯಾ ತಂದೆ ಕಾಲಮೊದವಲ್ ||೩೭||
(ಕಾವೇರಿಯಂತೆಯೇ, ಲೋಪಾಮುದ್ರೆಯ ಜೊತೆಗೆ ಆ ತಾಪಗೊಳ್ಳದೇ ಆಶ್ರಮದಲ್ಲಿಯೇ ಇದ್ದನು. ಜೀವನಿಯಮಾನುಸಾರವಾಗಿ ಕಾವೇರಿಯ ತಂದೆ ಕವೇರನು ಕಾಲವು ಬಂದಾಗ ಅಂತ್ಯವನ್ನು ಕಂಡನು)
ನಿರುತ ತಪದೊಳಗಿರ್ದು ಪಸುರ್ಗಾಡ ನಡುವಿನೊಳ್
ಸರಸಮೆನಿಪಂತಿರ್ಪ ಪ್ರಕೃತಿಯೊಡಲೊಳ್
ಪರಿವೀಕ್ಷಿಸುತ್ತಿರ್ಪನೈ ನಿತ್ಯಚೈತ್ರದೀ
ವರ್ಣಪರ್ಣಂಗಳಿರ್ಪ ಕಾಡೊಳ್ ||೩೮||
(ಹಸಿರಾದ ಕಾಡಿನ ನಡುವಿನಲ್ಲಿ ಸದಾ ತಪಸ್ಸಿನಲ್ಲಿ ನಿರತನಾಗಿದ್ದು, ಸರಸವಾದ ಪ್ರಕೃತಿಯ ಒಡಲಲ್ಲಿ ಸದಾ ಚೈತ್ರಮಾಸದಂತೆ ಬಣ್ಣವನ್ನು ತಳೆದ ಎಲೆಗಳಿರುವ ಕಾಡಿನಲ್ಲಿ ಸುತ್ತ ನೋಡುತ್ತ ಇದ್ದನು)
ಕಾಲದೊಳ್ ಕಾವೇರಿ ಜೀವನರಸಾನ್ವಿತಳ್
ಲೀಲೆಯಿಂ ಪರಿದಳೈ ನದಿಯರೂಪಿಂ
ಆಲಯಮದಾದುದಂದೀ ಮುನಿಗೆ ನದಿಯ ತಟ-
ಮೇಲಾಲತಾದಿಗಳನೊಂದಿರ್ಪುದು ||೩೯||
(ಕಾಲಕ್ರಮದಲ್ಲಿ ಕಾವೇರಿಯು ಜೀವನ ರಸದಿಂದ ಕೂಡಿದವಳಾಗಿ ಲೀಲೆಯಿಂದ ನದಿಯ ರೂಪವನ್ನು ತಳೆದು ಹರಿದಳು. ಅಂದಿನಿಂದ ಏಲಾಲತೆಯೇ ಮೊದಲಾದವುಗಳನ್ನು ಹೊಂದಿರುವ ಆ ನದಿಯ ದಡವೇ ಈ ಮುನಿಗೆ ಮನೆಯಾಯಿತು.)
ಸುಮದ ಪರಿಮಳಮೊರ್ಮೆ ಮಣ್ಣ ಕಂಪಂತೊರ್ಮೆ
ಕಮನೀಯಧೂಪದಿಂ ಸೌರಭಮದೊರ್ಮೆ
ಸಮಮಿರದ ಶ್ರೀಗಂಧದಿಂ ಗಂಧಮೊರ್ಮೆಗನು-
ಪಮಮೆನಿಪ ತೆಱದಿಂದೆ ಸಾರ್ದುದತ್ತಂ ||೪೦||
(ಹೂವಿನ ಪರಿಮಳವು ಒಮ್ಮೆ, ಮಣ್ಣಿನ ಕಂಪು ಒಮ್ಮೆ, ಸೊಗಸಾದ ಧೂಪದಿಂದ ಸೌರಭವು ಒಮ್ಮೆ, ಸಾಟಿಯಿಲ್ಲದ ಶ್ರೀಗಂಧದಿಂದ ಸುಗಂಧವು ಒಮ್ಮೆ, ಹೀಗೆ ಹೋಲಿಕೆಯಿಲ್ಲದೇ ಅಲ್ಲಿ ಸಾಗಿ ಬರುತ್ತಿದ್ದವು)
ತನಿನೀರ ಧಾರೆಯಿಂ ಪೊಣ್ಮಿರ್ಪ ಪನಿಗಳಿಂ-
ದಿನಕಿರಣಮೆಯ್ದಾಗಳದುವೆ ಮತ್ತೇಂ
ಖನಿಜಂ ದ್ರವಿಸುತೊರ್ಮೆ ಸೇರೆ ನೀರೊಳಗಂತು
ಮನನೀಯಮಾದತ್ತು ಬಣ್ಣದಲೆಗಳ್ ||೪೧||
(ತಿಳಿಯಾದ ನೀರಿನ ಧಾರೆಯಿಂದ, ಹೊಮ್ಮಿರುವ ಹನಿಗಳಿಂದ, ಸೂರ್ಯನ ಕಿರಣಗಳು ಬರುವಾಗ ಮತ್ತೇನು! ಖನಿಜಗಳು ದ್ವವಾಗಿ ನೀರಿನಲ್ಲಿ ಸೇುತ್ತಾ ಅಲ್ಲಿ ಬಣ್ಣದ ಅಲೆಗಳು ಮನಸ್ಸಿಗೆ ಮುಟ್ಟುವಂತೆ ಇದ್ದವು )
ಪರಿಯುತ್ತೆ ಝರಿಯಾಗಿ ಗಿರಿಯಿಂದೆ ಪೊಱಮಟ್ಟು
ಕರಮೆಸೆದ ವರನದಿಯ ಪರಿಯದೇನೋ
ಸುರನದಿಯ ತೆಱನೆ ಶೀಕರಬಿಂದು ಕರಕದಿಂ-
ದೊಱತೆಯಿಂ ಖರಕಿರಣನರಿಯಾದುದೇಂ ||೪೨||
(ಝರಿಯಾಗಿ ಹರಿಯುತ್ತ, ಗಿರಿಯಿಂದ ಹೊರಟು, ಚೆನ್ನಾಗಿ ಶೋಭಿಸುತ್ತಿರುವ ನದಿಯ ಈ ಪರಿಯನ್ನು ಏನೆನ್ನುವುದು! ದೇವನದಿಯಾದ ಗಂಗೆಯ ಹಾಗೆಯೇ ಹನಿಗಳಿಂದ, ಕರಕಗಳಿಂದ(ಮಂಜಿನಿಂದ) ನೀರಿನ ಒರತೆಗಳಿಂದ ಇದು ಖರಕಿರಣ(ಕೆಟ್ಟ ಕಿರಣಗಳನ್ನುಳ್ಳ ಸೂರ್ಯನಿಗೆ) ಶತ್ರುವಾಯಿತೇ! ((ಈ ಚೌಪದಿಯಲ್ಲಿ ಕುಸುಮಷಟ್ಪದಿಯೂ ಗರ್ಭಿತವಾಗಿದೆಯಲ್ಲದೇ ಪ್ರತಿಗಣದಲ್ಲೂ ಆದಿಪ್ರಾಸವಿದೆ))
ಆವಗಂ ಪಸುರ್ಪಿರ್ಪ ಕಾನನಕ್ಕಾನನದೊ-
ಳಾವಲುಳಿತಾಳಕಂ ಕಾಣ್ಬುದಂತೆ
ಕಾವೇರಿ ಸಂದಳೀ ಮಲಯಾಚಲಂಗಳೊಳ್
ಕಾವೇರದಂದದಿಂ ತಡೆಯುತಿರ್ದಳ್ ||೪೩||
(ಯಾವತ್ತೂ ಹಸಿರಾಗಿರುವ ಕಾನನಕ್ಕೆ ಆನನ(ಮುಖ)ದಲ್ಲಿ ಯಾವ ಮುಂಗುರುಳು ಕಾಣುತ್ತದೆಯೋ ಹಾಗೆಯೇ ಕಾವೇರಿಯು ಈ ಮಲಯಪರ್ವತಗಳಲ್ಲಿ ಸಂದಳು. ಇಲ್ಲಿ ಕಾವು ಏರದಂತೆ ತಡೆಯುತ್ತಿದ್ದಳು )
ಇದು ನೋಡೆ ಭೂಸ್ತನದ ಪರ್ವತದ ತುದಿಯಿಂದೆ
ಪದಪಿಂದೆ ಪರಿದುದೆ ಪಯೋಧಾರೆಯೇಂ
ಇದು ನಗದ ತುದಿಗಿರ್ಪ ಪೆಱೆ ಕರಂಗಾಗಿರ್ಪ
ಸೊದೆಯ ಪೊನಲಲ್ತೆ ಯೆಂಬಂತೆ ಕಾಣ್ಗುಂ ||೪೪||
(ಇದು ನೋಡಲು, ಭೂಮಿಯ ಸ್ತನವಾದ ಪರ್ವತದ ತುದಿಯಿಂದ ಚೆನ್ನಾಗಿ ಹರಿಯುತ್ತಿರುವ ಪಯೋ (ನೀರಿನ/ಹಾಲಿನ) ಧಾರೆಯೇ! ಇದು ಪರ್ವತದ ತುದಿಯಲ್ಲಿರುವ ಚಂದ್ರನು ಕರಗಿ ಆಗುತ್ತಿರುವ ಅಮೃತದ ಪ್ರವಾಹವಲ್ಲವೇ! ಎಂಬಂತೆ ಕಾಣುತ್ತಿತ್ತು)
ವನದೇವಿಯಚ್ಚರಿಯರೊಡನಾಡಿ ನಿಂದಿರಲ್
ಘನಮೆ ನೀರೀಯಲ್ಕೆ ಸಾರ್ದುದೆ ವಲಂ!
ಮುನಿಗಳಾ ತೇಜಕ್ಕಮೊಸರುತ್ತೆ ಮೊಸರಂತೆ
ನೆನೆನೆನೆಸಿ ಧರೆಯನೇ ಪರಿದುದೇನೋ ||೪೫||
(ವನದೇವಿಯು ಅಪ್ಸರೆಯರ ಒಡನಾಡಿಯು ನಿಂತುಕೊಂಡಿರಲು, ಮೋಡಗಳೇ ನೀರನ್ನು ಕೊಡಲು ಸಾಗಿದುವೇ! ಮುನೀಂದ್ರರ ತೇಜಸ್ಸಿಗೆ ಮೊಸರಿನಂತೆಯೇ ಒಸರುತ್ತಾ ಧರೆಯನ್ನೇ ನೆನೆಸಿ ನೆನೆಸಿ ಹರಿಯುತ್ತಿದೆಯೇನೋ!)
ಪಲತೆಱದ ತರುಗಳಿಂ ವನಲತಾವೃಂದದಿಂ-
ದೆಲೆವನೆಯ ನೆಲೆಯಾಗಿ ಕಾನನಂಗಳ್
ಜಲಧಾರೆಯಿರ್ಕೆಲದೆ ಕಲಿತಮಾಗಿರ್ದಪುವು
ನಲವಿಂದೆ ಧರಣಿಗಂ ತಣ್ಪೀವವೊಲ್ ||೪೬||
(ಹಲವು ಬಗೆಯ ಮರಗಳಿಂದ, ಕಾಡುಬಳ್ಳಿಯ ಗುಂಪಿನಿಂದ ಎಲೆಮನೆಯ ನೆಲೆಯಾಗಿ ಈ ಕಾಡುಗಳು ಜಲಧಾರೆಯ ಎರಡೂ ಕಡೆ ಭೂಮಿಗೆ ತಂಪನ್ನು ಕೊಡುವಂತೆ ಸಂಕಲಿತವಾಗಿದ್ದವು)
ಗುಂಪು ಗುಂಪಿನ ಶುಕದಿನಿಂಪ ಪಾಡುವ ಪಿಕದೆ
ಕೆಂಪಾದ ಪಲ್ಲವದಿನಂತೆ ಸುಮದಿಂ
ಸೊಂಪಾಗಿ ಬರ್ಪ ದ್ವಿರೇಫಂಗಳಿಂದಾಯ್ತು
ಝೊಂಪೀವ ತಣ್ಪಿಂದೆ ಕಾಡ ಬಿಣ್ಪು ||೪೭||
(ಗುಂಪು ಗುಂಪಾಗಿ ಇರುವ ಗಿಳಿಗಳಿಂದ, ಇಂಪಾಗಿ ಹಾಡುವ ಕೋಗಿಲೆಗಳಿಂದ ಕೆಂಪಾದ ಚಿಗುರುಗಳಿಂದ, ಹಾಗೆಯೇ ಹೂಗಳಿಂದ, ಸೊಂಪಾಗಿ ಬರುವ ಭ್ರಮರಗಳಿಂದ ಝೋಂಪನ್ನು ಕೊಡುವ ತಂಪಿನಿಂದ ಈ ಕಾಡಿನ ಭಾರವು ಹೆಚ್ಚುತ್ತಿತ್ತು)
ಏನೊ ಮೋಹನರೂಪಮಿಳೆ ಚೆಲ್ವಿನಾ ಕೂಪ-
ಮೇನೀ ಮಹಾದ್ಭುತಂ ಮಲಯಾಚಲಂ
ಮಾನಿನಿಯರಂದದಿಂ ಸರ್ವಜನಕರ್ಷಕಂ
ಮೌನಿಯಂದದೆ ಪುಣ್ಯಸಂದಾಯಕಂ ||೪೮||
(ಏನು ಮೋಹನವಾದ ರೂಪವು! ಭೂಮಿಯು ಸೌಂದರ್ಯದ ಬಾವಿಯಾಗಿದೆ, ಏನು ಅದ್ಭುತವಾಗಿದೆ ಈ ಮಲಯಾಚಲವು! ಸ್ತ್ರೀಯರಂತೆ ಸರ್ವಜನರನ್ನೂ ಆಕರ್ಷಿಸುತ್ತಿದೆ. ಮುನೀಂದ್ರರಂತೆ ಪುಣ್ಯವನ್ನೂ ಕೊಡುತ್ತದೆ.)
ಬಿತ್ತೆ ಬೀಜಂಗಳಂ ಕಂಡೆಡೆಗೆ ಬಳೆವುದೈ
ಚಿತ್ತಶಾಂತಿಯೆ ಮೂರ್ತಿವೆತ್ತಿರ್ಪುದೈ
ಇತ್ತಣಿಂ ಸಾಗರಂ ಪರಿಧಿಯಾಗಿರ್ದೊಡಂ
ಸತ್ತಿಗಂ ಸುಂದರತೆ ತೊೞ್ತಾದುದೈ ||೪೯||
(ಬೀಜಗಳನ್ನು ಬಿತ್ತಿದರೆ ಕಂಡ ಕಂಡಲ್ಲಿ ಬೆಳೆಯುತ್ತದೆ. ಚಿತ್ತದ ಶಾಂತಿಯೇ ಮೂರ್ತಿಮತ್ತಾಗಿರುವಂತೆ ಕಾಣುತ್ತದೆ. ಇದಕ್ಕೆ ಸಾಗರವೇ ಇತ್ತ ಕಡೆ ಪರಿಧಿಯಾಗಿ ಇದ್ದಿರಲು ಒಳ್ಳೆಯ ತನಕ್ಕೆ ಸೌಂದರ್ಯವು ಸೇವಕಿಯಾಗಿತ್ತು)
ತರ್ಜಿಸುತೆ ಸುರಲೋಕದೊಳಗಿರ್ಪ ಸೌಖ್ಯಮಂ
ರ್ಜಿಸುತೆ ಮೌನಮೇ ನೆಲೆಯಾಗಿರಲ್
ಊರ್ಜಿತಂ ವಸುಧೆಯೊಳ್ ಕೃತಯುಗದ ಸಯ್ಪೆಂದು
ವರ್ಜಿಸಿದರೆಲ್ಲರುಮಿತರ ನೆಲೆಗಳಂ ||೫೦||
(ಸುರಲೋಕದಲ್ಲಿರುವ ಸುಖವನ್ನು ತರ್ಜಿಸುತ್ತಿತ್ತು. ಮೌನವೇ ಗರ್ಜಿಸುತ್ತ ಇಲ್ಲಿ ನೆಲೆಸಿತ್ತು. ಭೂಮಿಯಲ್ಲಿ ಕೃತಯುಗ ಪುಣ್ಯವೇ ಊರ್ಜಿತವಾಗಿದೆ ಎಂದು ಎಲ್ಲರೂ ಬೇರೆಯ ನೆಲೆಗಳನ್ನೆಲ್ಲ ವರ್ಜಿಸಿದರು. )
ಕರ್ಮಯೋಗದೊಳಿರ್ಪ ಕೃಷಿಕರಿಂ ಧನಿಕರಿಂ
ಧರ್ಮಪಾಲನೆಯಪ್ಪ ನೃಪರಿಂದಮುಂ
ನರ್ಮಸಖರಪ್ಪರಿಂ ರಾಜಿಸಿರ್ದೊಡನಿದೋ
ಶರ್ಮತ್ವಮಿರ್ದುದೀ ಮಣ್ಣಿನೊಳೆ ದಲ್ ||೫೧||
(ಕರ್ಮಯೋಗದಲ್ಲಿ ನಿರತರಾದ ಕೃಷಕರಿಂದ, ಧನಿಕರಿಂದ, ಧರ್ಮವನ್ನು ಪಾಲಿಸುತ್ತಿರುವ ರಾಜರಿಂದಲೂ, ಒಳ್ಳೆಯ ಗೆಳೆಯರಾಗುವಂತಹವರಿಂದಲೂ ರಾರಾಜಿಸುತ್ತಿರಲು ಇದೋ ಈ ಮಣ್ಣಿನಲ್ಲಿಯೇ ಶಾಂತಿಯ ಭಾವವು ಇತ್ತು)
ಬಳೆಸುತಿರ್ದಪನಿಲ್ಲಿಂ ಮುನಿವರಂ ಸಂಸ್ಕೃತಿಯ
ನೆಲಮನುತ್ತುತೆ ಕಾವ್ಯಬೀಜಂಗಳಂ
ಸಲೆ ಬಿತ್ತಿ ಜೀವನಮನಿತ್ತು ಮೊಳಕೆಯನೊಡೆಸಿ
ಫಲಿತತರುವಕ್ಕೆಂಬ ಬಯಕೆಯಿಂದಂ ||೫೨||
(ಇಲ್ಲಿಂದ ಮುನೀಂದ್ರನು ಸಂಸ್ಕೃತಿಯ ನೆಲವನ್ನು ಉತ್ತಿ ಕಾವ್ಯಬೀಜಗಳನ್ನು ಬಿತ್ತಿ ಜೀವನವನ್ನು(ನೀರನ್ನು) ಕೊಟ್ಟು, ಮೊಳಕೆಯನ್ನೊಡೆಸಿ, ಫಲಭರಿತವಾದ ವೃಕ್ಷವಾಗಲಿ ಎಂದು ಬೆಳೆಸುತ್ತಿದ್ದನು)
ಕಲಿತಲಿತದಿಂದಂ ಸಂದ ಸಂಸ್ಕಾರದಿಂದಂ
ಕೞೆದಿರೆ ಖಲತಾಭಾವಂಗಳಿತ್ತಲ್ ಜನರ್ಗಂ
ನೆಲೆಸುಗೆ ನಲಮೆಂದುಂ ಸಲ್ಗೆಯೊಳ್ಪೆಂದು ನೋಂತಂ
ಕಳಶಜನವನಿರ್ದಂ ಸ್ಥಾವರಂಬೊಲ್ ನೆಗೞ್ದಂ ||೫೩||
(ಲಾಲಿತ್ಯ ಸೇರಿಕೊಂಡು, ಸಂಸ್ಕಾರವನ್ನು ಹೊಂದಿದವರಾಗಿ, ಕೆಟ್ಟತನದ ಭಾವಗಳು ಜನರಿಗೆ ದೂರವಾಗಿ, “ಇಲ್ಲಿ ಸಂತೋಷವು ಯಾವಾಗಳೂ ನೆಲೆಸಲಿ, ಒಳ್ಳೆಯದು ಸಲ್ಲಲಿ" ಎಂದು ವ್ರತತೊಟ್ಟ ಅಗಸ್ತ್ಯನು ಇಲ್ಲಿಯೇ ಸ್ಥಾವರದಂತೆ ಇದ್ದನು)
ನೆಲೆಸುಗೆ ಸಿರಿಯೇಗಳ್ ಬಾೞ್ತೆಯಿರ್ಕೊಳ್ಪ ಸಯ್ಪಿಂ
ಕಲೆಯೊಳೊಲುಮೆ ಮತ್ತಂ ಬರ್ಕೆ ಸತ್ಕಾರ್ಯದಿಂದಂ
ಕೞಿಗೆ ಕೃತಮಘಂಗಳ್ ಸರ್ವರುಂ ಜ್ಞಾನದಿಂದಂ
ಬಳೆಗೆ ಲಭಿಸಿ ಸಲ್ಗೆ ಕ್ಷಿಪ್ರದೈವಪ್ರಸಾದಂ ||೫೪||
(ಸಂಪತ್ತು ಸದಾ ಕಾಲ ನೆಲೆಸಲಿ, ಬದುಕಿನಲ್ಲಿ ಪುಣ್ಯವೂ ಒಳ್ಳೆಯತನವೂ ಇರಲಿ. ಕಲೆಗಳಲ್ಲಿ ಪ್ರೀತಿ ಹುಟ್ಟಲಿ. ಸತ್ಕಾರ್ಯದಿಂದ ಮಾಡಿರುವ ಪಾಪಗಳು ಕಳೆಯಲಿ. ಎಲ್ಲರೂ ಸುಜ್ಞಾನದಿಂದ ಬೆಳೆಯಲಿ. ಕ್ಷಿಪ್ರದಲ್ಲೇ ದೈವಪ್ರಸಾದವೂ ದೊರೆತು ಸಲ್ಲುವಂತಾಗಲಿ)
||ಇಂತು ವಿಂಧ್ಯಸ್ತಂಭನಮೆಂಬಅಷ್ಟಮಂ ಸರ್ಗಂ||
(೩೧//೨೦೧೫, ರಾತ್ರಿ ೩:೦೬ನಿಮಿಷ)

(ಹೀಗೆ ಅಗಸ್ತ್ಯಚರಿತೆಯ ಎಂಟನೇ ಸರ್ಗದ ಜೊತೆ ಕಥೆಯು ಪೂರ್ಣವಾಗಿದೆ.ಇಲ್ಲಿ ಕಥೆಯ ಮುನ್ನೆಲೆಯಲ್ಲಿ ಅಗಸ್ತ್ಯರಿಲ್ಲದಿದ್ದರೂ ಪ್ರತಿಯೊಂದೂ ಕಥೆಯಲ್ಲಿ ಅಗಸ್ತ್ಯರ ಪ್ರಭಾವದಿಂದಲೇ ಅಂತ್ಯವಾಗುತ್ತದೆ. ಹಾಗಾಗಿ ಇದು ಅಗಸ್ತ್ಯಚರಿತೆ.
ಮುಂದಿನ "ಸರ್ಗಸಂಗ್ರಹಣಸರ್ಗ”ದಲ್ಲಿ ಕಾವ್ಯದಲ್ಲಿರುವ ಛಂದಸ್ಸುಗಳು, ಹಾಗೂ ಪದ್ಯಗಳ ಸಂಖ್ಯೆ, ಬರೆಯುವ ಕಾರಣ, ಹಿನ್ನೆಲೆ, ನಮ್ಮ ಪದ್ಯಪಾನದ ಶನಿವಾರದ ಆಶುಕವಿತಾಗೋಷ್ಠಿಯ ಸ್ವಾರಸ್ಯಗಳೇ ಮೊದಲಾಗಿ ಹಲವು ವಿವರಗಳು ಬರುತ್ತವೆ. ನಿರೀಕ್ಷಿಸಿ)
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ