Powered By Blogger

ಮಂಗಳವಾರ, ಏಪ್ರಿಲ್ 21, 2020

ಕಾವ್ಯಾವಲೋಕನ-೧೦ ಕರ್ಣಾಟ-ಕಾದಂಬರೀಪ್ರಪಂಚ



ಸಂಸ್ಕೃತದಲ್ಲಿ ಬಾಣಭಟ್ಟ ಬರೆದ ಕಾದಂಬರಿ ಎಂಬುದು ಒಂದು ಗದ್ಯಕಾವ್ಯ! ಅದರಲ್ಲಿ ಬರುವ ವರ್ಣನೆಗಳೇ ಅಸಂಖ್ಯ, ಅದ್ಭುತ! ಅದಕ್ಕೆ ಮೂಲ ಕತೆ ಬೃಹತ್ಕಥೆಯಿಂದ ಆರಿಸಿಕೊಂಡಿದ್ದು ಎನ್ನುತ್ತಾರೆ! ಗುಣಾಢ್ಯ ಪೈಶಾಚೀಭಾಷೆಯಲ್ಲಿ ಬರೆದ ಬೃಹತ್ಕಥೆ ಲಭ್ಯವಿಲ್ಲ! ಅದನ್ನು ಆಧರಿಸಿ ಬರೆದ ಕಥಾಸರಿತ್ಸಾಗರವೇ ಮೊದಲಾದ ಕಡೆಗಳಲ್ಲಿ ಸೂಕ್ಷ್ಮವಾಗಿ ಬಾಣಭಟ್ಟನ ಕಾದಂಬರಿಗೆ ಆಕರವಾಗಿರವಾದ ಕಥೆಯ ಎಳೆ ಕಾಣುತ್ತದೆ. ಆದರೆ ಬಾಣನ ಪ್ರತಿಭೆಯಿಂದ ಅದಾವುದೂ ಗೋಚರಿಸದಂತೆ ಮಾಡಿಬಿಡುತ್ತಾನೆ. ವಸ್ತುತಃ ಬಾಣನ ಕಾದಂಬರಿ ಗದ್ಯದಲ್ಲೇ ಶ್ರೇಷ್ಠವಾದ ಕೃತಿಯಾದ ಕಾರಣದಿಂದ ಇಂದಿನ ಗದ್ಯಕಥಾನಕಕ್ಕೆಲ್ಲ "ಕಾದಂಬರಿ" ಎಂಬುದೇ ಹೆಸರಾಗಿಬಿಟ್ಟಿದೆ. ಅದೊಂದು ಜನ್ಮಜನ್ಮಾಂತರದ ಪ್ರೇಮಕಥೆ! ಕಾದಂಬರಿ ಎಂಬುದು ಅಲ್ಲಿಯ ಕಥಾನಾಯಕಿಯ ಹೆಸರು!
ಬಾಣಭಟ್ಟನ ಕಾದಂಬರಿಯಲ್ಲಿ ಪೂರ್ವಭಾಗವನ್ನು ಮಾತ್ರ ಆತ ಬರೆದನೆಂದೂ ಉತ್ತರ ಭಾಗವನ್ನು ಅವನ ಮಗ ಬರೆದನೆಂದೂ ಅದರಲ್ಲಿಯೇ ತಿಳಿಯುತ್ತದೆ. ಅದರ ಹಿಂದೊಂದು ಕಥಾನಕವೂ ಇದೆ. ಕಾದಂಬರಿಯ ಪೂರ್ವಭಾಗವನ್ನು ಬರೆದ ಬಾಣಭಟ್ಟ ಮೃತನಾದ. ಆ ಬಳಿಕ ಅವನ ಮಕ್ಕಳಿಬ್ಬರು ಅದನ್ನು ಪೂರೈಸಲು ನಿಶ್ಚಯಿಸಿ ಗುರುವಿನ ಬಳಿ ತೆರಳಿದರಂತೆ. ಆಗ ಗುರು ಅವರನ್ನು ಪರೀಕ್ಷಿಸಲು ಮನೆಯೆದುರಿಗೆ ಇರುವ ಒಂದು ಮರದ ತುಂಡನ್ನು ತೋರಿಸಿ ಅದನ್ನು ವರ್ಣಿಸಲು ಹೇಳುತ್ತಾನೆ. ಆಗ ಒಬ್ಬ "ಶುಷ್ಕೋವೃಕ್ಷಸ್ತಿಷ್ಠತ್ಯಗ್ರೇ| ತದುಪರಿ ಕಶ್ಚಿತ್ ಸರ್ಪೋsಪ್ಯಸ್ತಿ" ಎಂದು ಹೇಳುತ್ತಾನೆ!ಶುಷ್ಕವಾದ ಒಂದು ಮರವಿದೆ, ಅದರ ಮೇಲೊಂದು ಸರ್ಪವೂ ಇದೆ ಎಂದು ತಾತ್ಪರ್ಯ. ಅದನ್ನೇ ಇನ್ನೊಬ್ಬ ಮಗನಿಗೆ ಕೇಳಿದಾಗ ಅವನು "ನೀರಸ ತರುರಿಹ ವಿಲಸತಿ ನಿಕಟೇ|ತದುಪತಿ ಮಣಿಮಯಕುಟಿಲಭುಜಂಗಃ||” ಎಂದು ಹೇಳುತ್ತಾನೆ. ಹೇಳಿದ್ದು ಅದೇ ವಾಕ್ಯವನ್ನೇ ಆದರೂ ಹೇಳುವ ರಿತಿಯಲ್ಲಿ ವ್ಯತ್ಯಾಸವಿದೆಯಲ್ಲ! ಅಲ್ಲಿರುವ ಪದಪದ್ಧತಿಯನ್ನು ಗಮನಿಸಿ ಆ ಎರಡನೇ ಮಗನಿಗೇ ಕಾದಂಬರಿಯನ್ನು ಪೂರ್ತಿ ಮಾಡಲು ಗುರು ಹೇಳುತ್ತಾನೆ. ಅವನೇ ಕಾದಂಬರಿಯನ್ನು ಪೂರ್ತಿ ಮಾಡಿದ ಭೂಷಣಭಟ್ಟ.
ಈ ಕಾದಂಬರಿ ತುಂಬಾ ವಿಸ್ತಾರವಾದ ವರ್ಣನೆಯ ಕಥೆ ಎಂದು ಹೇಳಿದೆನಷ್ಟೆ. ಸೂಕ್ಷ್ಮ ಸೂಕ್ಷ್ಮವಾದ ಘಟನೆಗಳನ್ನು ವಿಸ್ತಾರವಾಗಿ ವರ್ಣಿಸುತ್ತ ಒಂದು ಪ್ರಸಂಗ ನಮ್ಮ ಕಣ್ಣಿಗೆ ಕಟ್ಟುವಂತೆ ವಿವರಿಸಿಡುತ್ತಾ ಹೋಗುತ್ತಾನೆ ಕವಿ.ಹೀಗಾಗಿ ಒಳ್ಳೆಯ ವರ್ಣನೆಯ ಕಾವ್ಯಗಳು ಸಮಯದ ವೇಗವನ್ನು ಕಡಿಮೆ ಮಾಡುತ್ತವೆ ಎಂದು ಹೇಳಬಹುದು. ಒಬ್ಬರು ಮಿತ್ರರೊಡನೆ ಬಾಣನ ವರ್ಣನೆಗಳ ಬಗ್ಗೆ ಚರ್ಚಿಸುತ್ತಿದ್ದಾಗ ಅವರು- “ಬಾಣಭಟ್ಟನು ಆನೆಯೊಂದು ಬರುತ್ತಿರುವುದನ್ನು ವರ್ಣಿಸತೊಡಗಿದ ಎಂದರೆ- ಅದು ಬಾಲವನ್ನು ಅಲ್ಲಾಡಿಸುವುದನ್ನು ವರ್ಣಿಸಿ ಮುಗಿಸುವಷ್ಟರಲ್ಲಿ ಆನೆ ಸರ್ವನಾಶ ಮಾಡಿ ಹೊರಟು ಹೋಗಿರುತ್ತದೆ- ಅಷ್ಟು ವರ್ಣನೆ ಇರುತ್ತದೆ" ಎಂದು ಹೇಳಿದ್ದರು. ದಿಟ! ಆದರೆ ಅದರ ಸೊಗಸೇ ಬೇರೆ! ಅದಕ್ಕೇ ಅಲ್ಲವೇ "ಕಾದಂಬರೀರಸಜ್ಞಾನಾಂ ಆಹಾರೋಪಿ ನ ರೋಚತೇ" ಎಂದು ಹೇಳಿರುವುದು. ಕಾದಂಬರಿಯ ರಸ ಬಲ್ಲವರಿಗೆ ಊಟವೂ ರುಚಿಸುವುದಿಲ್ಲ ಎಂದು! ಕಾದಂಬರಿ ಎಂದರೆ ಮದ್ಯ ಎಂಬ ಅರ್ಥವೂ ಇದೆ! ಶ್ಲೇಷಪ್ರಿಯನಾದ ಬಾಣನಿಗೆ ಬಾಣನದೇ ಶೈಲಿಯಲ್ಲಿ ವಾಗ್ಬಾಣವನ್ನು ಬಿಟ್ಟ ಈ ಕವಿಯನ್ನು ಮೆಚ್ಚಲೇ ಬೇಕು!
ಈ ಬಾಣಭಟ್ಟನ ಕಾದಂಬರಿಯನ್ನು ಕನ್ನಡಕ್ಕೆ ನಾಗವರ್ಮ ಅನುವಾದಿಸಿದ್ದಾನೆ. ಬಾಣನ ಗದ್ಯದ ಕಾದಂಬರಿಯನ್ನು ಇವನು ಪದ್ಯಗದ್ಯಗಳಿಂದ ಕೂಡಿದ ಚಂಪೂಶೈಲಿಯಲ್ಲಿ ಅನುವಾದಿಸಿದ್ದಾನೆ. ಒಳ್ಳೆಯ ಹಳಗನ್ನಡದ ಪ್ರೌಢವಾದ ಶೈಲಿಯಲ್ಲಿ ಹಿತವಾದ ಶಬ್ದಗುಂಫನದಲ್ಲಿ ರಸವುಕ್ಕುವಂತಿರುವ ಇವನ ಕವಿತ್ವಕ್ಕೆ ಮೆಚ್ಚಿ ಭೋಜರಾಜನು ಅನೇಕ ಜಾತ್ಯಶ್ವಗಳನ್ನು ಕೊಟ್ಟಿದ್ದಾಗಿ ಹೇಳುತ್ತಾನೆ!
ನಾಗವರ್ಮನ ಕರ್ಣಾಟಕಾದಂಬರಿಯನ್ನು ಮೊದಲು ಶ್ರೀಮನ್ಮಹಾರಾಜರವರ ಕನ್ನಡ ಸ್ಕೂಲ್ ಮುಖ್ಯಾಧ್ಯಾಪಕರಾಗಿದ್ದ ಶ್ರೀ ಬಿ ಮಲ್ಲಪ್ಪನವರು ೧೮೯೨ರಲ್ಲಿ ಮೊದಲು ಮುದ್ರಿಸಿ ಪ್ರಕಟಿಸಿದರು. ಆ ಕಾದಂಬರಿಯ ತಾಳೆಗರಿಗಳು ಕೇವಲ ಎರಡೇ ಪ್ರತಿಗಳು ಲಭ್ಯವಾಗಿದ್ದವಂತೆ! ಆ ಎರಡೇ ಪ್ರತಿಗಳನ್ನು ಇಟ್ಟುಕೊಂಡು ಸಂಪಾದನೆ ಮಾಡಿ ಕನ್ನಡಿಗರ ಪಾಲಿಗೆ ಇಂದು ಕಾದಂಬರಿ ದೊರೆಯುವಂತೆ ಮಾಡಿದ ಕೀರ್ತಿ ಮಲ್ಲಪ್ಪನವರಿಗೆ ಸಲ್ಲಬೇಕು! ಕಾವ್ಯಾಸಕ್ತರೆಲ್ಲರೂ ಅವರಿಗೆ ಚಿರಋಣಿಯಾಗಿರಲೇಬೇಕು! ಅವರು ಅಲ್ಲಲ್ಲಿ ತ್ರುಟಿತವಾದ ಗ್ರಂಥಪಾತಗಳನ್ನು ಪೂರ್ಣಗೊಳಿಸಲು ಆ ಕಾಲದ ಶ್ರೇಷ್ಠಕವಿಗಳಾದ ಬಸವಪ್ಪ ಶಾಸ್ತ್ರಿಗಳಿಂದ ಅಯ್ಯಾಶಾಸ್ತ್ರಿಗಳಿಂದ ಹಾಗೂ ಕರಿಬಸವಪ್ಪ ಶಾಸ್ತ್ರಿಗಳಿಂದ ಕೆಲವಷ್ಟು ಪದ್ಯಗಳನ್ನು ಬರೆಸಿದ್ದಾಗಿ ಉಲ್ಲೇಖಿಸಿದ್ದಾರೆ. ಮುದ್ರಣಮಾಧ್ಯಮವೆಲ್ಲ ಇಷ್ಟು ಸುಲಭವಾಗಿರುವ ಇಂದಿನವರಿಗೆ ಆಗಿನ ಕಾಲದಲ್ಲಿ ಗ್ರಂಥವನ್ನು ಬರೆದಿದ್ದನ್ನು ಉಳಿಸಿಕೊಳ್ಳುವ ತಾಳಪತ್ರಗಳಲ್ಲಿ ಬರೆದು ಅದು ಹುಳುಹಿಡಿಯದಂತೆ ಸಂರಕ್ಷಿಸಿಕೊಳ್ಳಬೇಕಾದ ಪರಿಸ್ಥಿತಿಯ ಅರಿವೂ ಇರಲಾರದು. ಒಂದು ಗ್ರಂಥವು ಬೇಕು ಎಂದಾದರೆ ಇಂದಿನಂತೆ ಪ್ರಿಂಟ್ ಇಲ್ಲ! ಯಾರ ಬಳಿಯಲ್ಲಿಯೋ ಇರುವ ಆ ಪುಸ್ತಕವನ್ನು ತೆಗೆದುಕೊಂಡು ಅದನ್ನು ತಾಳೆಯ ಗರಿಗಳಲ್ಲಿ ಬರೆದುಕೊಳ್ಳಬೇಕು! ಅದಕ್ಕೆ ಕುಶಲರಾದ ಲಿಪಿಕಾರರಿರಬೇಕು! ಅದನ್ನು ಕಂಟದ ಮೂಲಕ ತಾಳಪತ್ರದಲ್ಲಿ ಬರೆಯುವುದೂ ಒಂದು ಸಾಹಸ! ಹೆಚ್ಚು ಒತ್ತಿ ಬರೆದರೆ ಪತ್ರ ಹರಿದುಹೋಗುತ್ತದೆ ! ಸರಿಯಾಗಿ ಉದ್ದುದ್ದವಾದ ಸಾಲಿನಲ್ಲಿ ಏರುಪೇರಾಗದಂತೆ ಬರೆದುಕೊಂಡು ಹೋಗಬೇಕು! ಅದಕ್ಕೆ ಎಷ್ಟು ಕಾಲ ಹಿಡಿಯುತ್ತದೆ! ಅದಕ್ಕೆ ಎಷ್ಟು ಶ್ರಮಪಡಬೇಕು! ಇವುಗಳೆಲ್ಲವುಗಳ ಕಲ್ಪನೆಯೊಂದು ನಮಗೆ ಬಂದರೆ ಆಗಿನ ಕಾಲದಲ್ಲಿ ಬರೆದ ಕವಿಗಳಿಗೆ, ಅದನ್ನು ಸಂಗ್ರಹಿಸಿ ಇಟ್ಟುಕೊಂಡವರಿಗೆ ಹಾಗೂ ಅಂತಹ ಸಂಗ್ರಹಕ್ಕಾಗಿ ಅನವರತಶ್ರಮ ವಹಿಸಿದ ಲಿಪಿಕಾರರಿಗೆ ನಾವೆಷ್ಟು ಕೃತಜ್ಞರಾಗಿರಬೇಕೆಂಬುದು ನಮ್ಮ ಅರಿವಿಗೆ ಬರುತ್ತದೆ.
ಹೀಗೆ ಸಂಗ್ರಹಿಸಲ್ಪಟ್ಟ ಕರ್ಣಾಟಕಾದಂಬರಿಯ ಮೊದಲ ನಾಂದಿಯ ಪದ್ಯಗಳನ್ನು ಹಾಗೂ ಬಾಣನ ಸ್ತುತಿಯ ಪದ್ಯಗಳನ್ನು ಈಗ ಅವಲೋಕಿಸೋಣ.
ಶ್ರೀಮನ್ನಾಗೇಂದ್ರಭೋಗಸ್ಫುರದರುಣಮಣಿದ್ಯೋತಿಸಂಧ್ಯಾನಿಬದ್ಧ
ಪ್ರೇಮಂ ಪ್ರೋದ್ಯತ್ತರಂಗೋಚ್ಚರದಮರನದೀ ಶೀಕರೋದಾರತಾರಾ
ರಾಮಂ ಹೇಮಪ್ರಭಾಪ್ರಸ್ಫುರಿತ ಗಿರಿಶಚಂಚಜ್ಜಟಾಜಾಲಜೂಟ
ವ್ಯೋಮಪ್ರೋದ್ಭಾಸಿಚಂದ್ರಂ ತ್ರಿಭುವನಜನಕಾನಂದಮಂ ಮಾಡುಗೆಂದುಂ ||
ನಾರಿಕೇಳಪಾಕದಂತೆ ಕಾಣುವ ಈ ಪದ್ಯದಲ್ಲಿ ಮಾಡುಗೆ ಎಂದುಂ ಎಂಬರಡು ಶಬ್ದಗಲನ್ನು ಬಿಟ್ಟು ಉಳಿದವೆಲ್ಲ ಸಂಸ್ಕೃತದ ಶಬ್ದಗಳೇ ಆಗಿವೆ! ಶ್ರೀಮತ್- ಶ್ರೀಯುತನಾದ (ಮಂಗಳವೆಂಬ ಅರ್ಥದಲ್ಲಿ ಶ್ರೀ) ನಾಗೇಂದ್ರಭೋಗ- ಸರ್ಪದ ಹೆಡೆಯ ಸ್ಫುರದರುಣಮಣಿ- ಸ್ಫುರಿಸುತ್ತಿರುವ ಕೆಂಪಾದ ಮಣಿಯ ದ್ಯೋತಿಸಂಧ್ಯಾ- ಕಾಂತಿಯೇ ಸಂಜೆಯಾಗಿರಲು ನಿಬದ್ಧಪ್ರೇಮಂ- ಅದರಲ್ಲಿ ಪ್ರೇಮವುಳ್ಳವನಾಗಿ- (ಶಿವನ ಕೊರಳಲ್ಲಿರುವ ಸರ್ಪದ ಹೆಡೆಯ ಅರುಣಮಣಿಯ ಕಾಂತಿಯಲ್ಲಿ ಪ್ರೇಮವುಳ್ಳವನಾಗಿ) ಪ್ರೋದ್ಯತ್ತರಂಗ- ಉಕ್ಕುತ್ತಿರುವ ಅಲೆಗಳ ಅಮರನದೀ-ಗಂಗೆಯ ಶೀಕರ- ತುಂತುರುವಿನ ಉದಾರತಾರಾರಾಮಂ- ನಕ್ಷತ್ರಗಳಲ್ಲಿ ರಮಿಸುತ್ತಿರುವ (ಶಿವನ ತಲೆಯಿಂದ ಅಲೆಯಲೆಯಾಗಿ ಉಕ್ಕುತ್ತಿರುವ ಗಂಗಾನದಿಯ ತುಂತುರುವಿನ ಹನಿಗಳೇ ನಕ್ಷತ್ರಗಳಾಗಿ ಅವುಗಳ ನಡುವೆ ರಮಿಸುತ್ತಿರುವ) ಹೇಮಪ್ರಭಾ- ಬಂಗಾರದ ಪ್ರಭೆಯನ್ನು ಪ್ರಸ್ಫುರಿತ- ಸ್ಫುರಿಸುತ್ತಿರುವ ಗಿರಿಶ- ಗಿರಿಶನಾದ ಶಿವನ ಚಂಚಜ್ಜಟಾ- ಚಂಚಲವಾದ ಜಟೆಯ ಜಾಲಜೂಟವ್ಯೋಮ- ಜಾಲದ ಶಿಖರವೆಂಬ ಆಗಸದಲ್ಲಿ ಪ್ರೋದ್ಭಾಸಿ- ಭಾಸಿಸುತ್ತಿರುವ ಚಂದ್ರಂ- ಚಂದ್ರನು ತ್ರಿಭುವನಜನಕೆ- ಮೂರು ಲೋಕದ ಜನಕ್ಕೆ ಆನಂದಮಂ-ಆನಂದವನ್ನು ಎಂದುಂ- ಯಾವಾಗಳೂ ಮಾಡುಗೆ- ಮಾಡಲಿ. ಇಲ್ಲಿ ಮೊದಲ ಮೂರು ಕಲ್ಪನೆಗಳೂ ಚಂದ್ರನನ್ನು ವರ್ಣಿಸುತ್ತಿವೆ. ಶಿವನ ಜಟೆಯೆಂಬ ಬಂಗಾರದ ಬಣ್ಣದ ಆಗಸದಲ್ಲಿ ಸೊಗಸಾಗಿ ಕಾಣುತ್ತಿರುವ, ಗಂಗಾನದಿಯ ತುಂತುರು ಹನಿಗಳೇ ನಕ್ಷತ್ರಗಳಾಗಿರುವಾಗ ಅದರ ಜೊತೆ ರಮಿಸುತ್ತಿರುವ, ಶಿವನ ಕಂಠದ ಸರ್ಪದ ಹೆಡೆಯ ಮಣಿಯ ಕೆಂಪು ಕಾಂತಿಯೇ ಸಂಜೆಯ ಕೆಂಪಾಗಿರುವಾಗ ಅದರಲ್ಲಿ ಪ್ರೇಮವುಳ್ಳವನಾದ ಚಂದ್ರನು ಮೂರುಲೋಕಕ್ಕೂ ಆನಂದವನ್ನು ಉಂಟು ಮಾಡಲಿ! ನಾಗವರ್ಮನಿಗೆ ಆಶ್ರಯವನ್ನು ಕೊಟ್ಟ ರಾಜನ ಹೆಸರೂ ಚಂದ್ರ ಎಂಬುದು ಇಲ್ಲಿ ಸ್ಮರಣೀಯ!
ಬಾಣಂ ವಲ್ಲಭನಕ್ಕುಮೆಂದು ಪಡೆದಾ ವಾಗ್ದೇವಿಗಬ್ಜೋದ್ಭವಂ
ಜಾಣಿಂ ಬಾಣಿಯೆನಿಪ್ಪುದೊಂದು ಪೆಸರಂ ಮುನ್ನಿತ್ತನೆಂದಂದು ಪೋ
ಮಾಣಿನ್ನನ್ಯಕವಿಸ್ತುತಿವ್ಯಸನಮಂ ವಾಗ್ಜಾತಚಾತುರ್ಯಗೀ-
ರ್ವಾಣಂ ತಾನೆನೆ ಸಂದ ಬಾಣನೆ ವಲಂ ವಂದ್ಯಂ ಪೆರರ್ ವಂದ್ಯರೇ||
ಬಾಣನೇ ಮುಂದೆ ವಲ್ಲಭನಾಗುತ್ತಾನೆ ಎಂದು ಅಂದು ವಾಗ್ದೇವಿ ಹುಟ್ಟಿದಾಗ ಜಾಣ್ಮೆಯಿಂದ "ಬಾಣಿ" (ವಾಣಿ) ಎಂಬ ಹೆಸರನ್ನು ಇಟ್ಟ ಎಂದಾದ ಮೇಲೆ ಹೋಗು! ಬೇರೆಯ ಕವಿಗಳ ಸ್ತುತಿಯೆಂಬ ವ್ಯಸನವನ್ನು ಸಾಕು ಮಾಡು! ಮಾತಿನಲ್ಲಿ ಹುಟ್ಟಿದ ಚಾತುರ್ಯದ ಗೀರ್ವಾಣನೇ ಆದ ಬಾಣನೇ ವಂದ್ಯನಲ್ಲದೇ ಬೇರೆಯವರು ವಂದ್ಯರಾಗುತ್ತಾರೆಯೇ!
ಇಲ್ಲಿ ಸಂಸ್ಕೃತದಲ್ಲಿನ ಸೂಕ್ಷ್ಮವಾದ ವ-ಬಯೋರಭೇದಃ ಎಂಬ ಸೂತ್ರದಂತೆ ವಾಣಿ- ಎಂಬ ಶಬ್ದ ಬಾಣಿ ಎಂದಾಗುತ್ತದೆ. ಹಾಗಾಗಿ ಬಾಣಿ ಎಂಬವಳು ಬಾಣನ ಪ್ರೀತಿಪಾತ್ರಳೇ ಆಗುತ್ತಾಳಲ್ಲವೇ ಎಂದು ಕವಿ ಹೇಳುತ್ತಾನೆ!
ಇನ್ನು ಕತೆಯ ಉಪಕ್ರಮವನ್ನು ಬಾಣನ ಗದ್ಯದಲ್ಲಿಯೂ ನಾಗವರ್ಮನ ಪದ್ಯದಲ್ಲಿಯೂ ಅವಲೋಕಿಸೋಣ.
ಬಾಣಭಟ್ಟನ ಮೂಲ ಕಾದಂಬರಿಯಲ್ಲಿ-
"ಆಸೀದಶೇಷ-ನರಪತಿ-ಶಿರಃಸಮಭ್ಯರ್ಚಿತ ಶಾಸನಃ ಪಾಕಶಾಸನ ಇವಾಪರಃ, ಚತುರುದಧಿಮಾಲಾಮೇಖಲಾಯಾ ಭುವೋ ಭರ್ತಾ, ಪ್ರತಾಪಾನುರಾಗಾವನ-ತಸಮಸ್ತ-ಸಾಮಂತಚಕ್ರಃ, ಚಕ್ರವರ್ತಿಲಕ್ಷಣೋಪೇತಃಃ, ಚಕ್ರಧರ ಇವ ಕರಕಮಲೋಪಲಕ್ಷ್ಯಮಾಣ-ಶಂಖಚಕ್ರಲಾಂಛನಃ, ಹರ ಇವ ಜಿತಮನ್ಮಥಃ, ಗುಹ ಇವ ಅಪ್ರತಿಹತಶಕ್ತಿಃ, ಕಮಲಯೋನಿರಿವ ವಿಮಾನೀಕೃತರಾಜಹಂಸಮಂಡಲಃ, ಜಲಧಿರಿವ ಲಕ್ಷ್ಮೀಪ್ರಸೂತಿಃ, ಗಂಗಾಪ್ರವಾಹ ಇವ ಭಗೀರಥಪಥಪ್ರವೃತ್ತಃ, ರವಿರಿವ ಪ್ರತಿದಿವಸೋಪಜಾಯಮಾನೋದಯಃ, ಮೇರುರಿವ ಸಕಲೋಪಜೀವ್ಯಮಾನಪಾದಚ್ಛಾಯಃ,ದಿಗ್ಗಜ ಇವಾನವರತಪ್ರವೃತ್ತದಾನಾರ್ದ್ರೀಕೃತಕರಃ, ಕರ್ತಾ ಮಹಾಶ್ಚರ್ಯಾಣಾಂ, ಆಹರ್ತಾ ಕ್ರತೂನಾಂ, ಆದರ್ಶಃ ಸರ್ವಶಾಸ್ತ್ರಾಣಾಂ, ಉತ್ಪತ್ತಿಃ ಕಲಾನಾಂ, ಕುಲಭವನಂ ಗುಣಾನಾಂ, ಆಗಮಃ ಕಾವ್ಯಾಮೃತರಸಾನಾಂ,ಉದಯಶೈಲೋ ಮಿತ್ರಮಂಡಲಸ್ಯ, ಉತ್ಪಾತಕೇತುರಹಿತಜನಸ್ಯ, ಪ್ರವರ್ತಯಿತಾ ಗೋಷ್ಠೀಬಂಧಾನಾಂ, ಆಶ್ರಯೋ ರಸಿಕಾನಾಂ, ಪ್ರತ್ಯಾದೇಶೋ ಧನುಷ್ಮತಾಂ, ಧೌರೇಯಃ ಸಾಹಸಿಕಾನಾಂ, ಅಗ್ರಣೀರ್ವಿದಗ್ಧಾನಾಂ, ವೈನತೇಯ ಇವ ವಿನತಾನಂದಜನನಃ, ವೈನ್ಯ ಇವ ಚಾಪಕೋಟಿಸಮುತ್ಸಾರಿತಸಕಲಾರಾತಿಕುಲಾಚಲೋ ರಾಜಾ ಶೂದ್ರಕೋ ನಾಮ|” (ಬಾಣಭಟ್ಟನ ಈ ಗದ್ಯಖಂಡವನ್ನು ಪ್ರತಿಪದಾರ್ಥವಾಗಿ ವಿಸ್ತಾರವಾಗಿ ವಿವರಿಸುವುದಾಗಲೀ ಅಲ್ಲಿರುವ ಸೂಕ್ಷ್ಮಗಳನ್ನು ಪರಿಚಯಿಸುವುದಾಗಲೀ ಬಹುಶ್ರಮಾವಹ ಮತ್ತು ಕಾಲಾಪೇಕ್ಷಕವಾದ ಕಾರಣ ಪರಿಚಯೈಕೋದ್ದೇಶದಿಂದ ಇಲ್ಲಿ ಉಲ್ಲೇಖಿಸಲಾಗಿದೆ)
ನಾಗವರ್ಮ ಇಷ್ಟು ವಿಸ್ತಾರವಾಗಿ ಹೇಳದೇ ಒಂದೇ ಚಂಪಕಮಾಲೆಯೆಂಬ ವೃತ್ತದಲ್ಲಿ ಹೀಗೆ ಹೇಳುತ್ತಾನೆ-
ಇಳೆಯೊಳದೊರ್ವನಿಂದ್ರನೆನ ಸಂದಸಮೃದ್ಧಿಯೊಳೊಂದಿ ಕೂಡಿ ತ
ನ್ನೊಳೆ ನೃಪಲಕ್ಷಣಂ ನೆಗೞೆ ದೊರ್ವಲದಿಂ ಚತುರಬ್ಧಿ ಮೇಖಲಾ
ವಳಯಿತಭೂಮಿಗಾದನೆಱೆಯಂ ನೃಪತಿಪ್ರಭುಲೋಕಮಂ ನಿಜೋ
ಜ್ವಳತರಕೀರ್ತಿಯಿಂ ನೆಱೆಯೆ ಮುದ್ರಿಸಿ ಶೂದ್ರಕನೆಂಬ ಭೂಭುಜಂ||
ಇಲ್ಲಿ ಕಾದಂಬರಿಯನ್ನು ಸಂಗ್ರಹಿಸಿ ಹೇಳುವ ನಾಗವರ್ಮನ ಚಾತುರ್ಯವೂ ಕಾಣುತ್ತದೆ. ಅಲ್ಲದೇ ಮೂಲದಲ್ಲಿರುವ ಶ್ಲೇಷಾದಿಗಳನ್ನು ಉಳಿಸಿಕೊಳ್ಳಲು ಯಥಾವತ್ತಾಗಿ ಅದೇ ಶಬ್ದಗಳನ್ನೇ ಇಡುವಂತಹ ಪರಿಸ್ಥಿತಿಯೊದಗಿಬಿಡುವ ಕಾರಣದಿಂದ (ಉದಾಹರಣೆಗೆ- "ಹರ ಇವ ಜಿತಮನ್ಮಥಃ”- ಎಂಬುದಕ್ಕೆ "ಹರನಂತೆ ಜಿತಮನ್ಮಥನು” ಎಂದೇ ಹೇಳಬೇಕಾಗುತ್ತದೆಯಷ್ಟೇ!) ಅದನ್ನು ಹೆಚ್ಚಾಗಿ ಆಶ್ರಯಿಸದೇ ಶೂದ್ರಕನ ಗುಣವನ್ನು ಸಂಕ್ಷಿಪ್ತವಾಗಿ ಹೇಳುವಂತೆ ಈ ವೃತ್ತವನ್ನು ಬಳಸಿಕೊಂಡಿದ್ದಾನೆ. ಅಲ್ಲದೇ ಮುಂದಿನ ಕೆಲವು ಕಂದಗಳಲ್ಲಿ ಬಾಣಭಟ್ಟನದೇ ಮುಂದಿನ ಶೂದ್ರಕನ ವಿಕ್ರಮವನ್ನು ವರ್ಣಿಸುವ ಸಾಲುಗಳನ್ನೂ ಬರೆದಿದ್ದಾನೆ.
ಹೀಗೆ ಕಾದಂಬರಿಗೆ ಇದೊಂದು ಪ್ರವೇಶದಂತಷ್ಟೇ. ಪರಿಚಯಕ್ಕೆಂದು ಕೆಲವು ಪದ್ಯಗಳನ್ನು ಉಲ್ಲೇಖಿಸಿದ್ದಷ್ಟೇ ಆಗಿದೆ. ಇನ್ನೂ ವಿಸ್ತಾರವಾದ ಕಥೆಯನ್ನು ಆ ಕಾದಂಬರೀಪ್ರಪಂಚಕ್ಕೆ ಹೋಗಿಯೇ ನೋಡಬೇಕು. ಈ ಸ್ವಾರಸ್ಯಗಳನ್ನು ಅರಿಯುವ ಕುತೂಹಲ ಉಳ್ಳವರಿಗೆ, ಆಸಕ್ತರಿಗೆ ಕಾದಂಬರಿಯನ್ನು ಆಸ್ವಾದಿಸಲಾದರೂ ಹಳಗನ್ನಡವನ್ನು ಸಂಸ್ಕೃತವನ್ನೂ ಕಲಿಯುವ ಆಸಕ್ತಿ ಮೂಡಲಿ!