Powered By Blogger

ಮಂಗಳವಾರ, ಏಪ್ರಿಲ್ 21, 2020

ಕಾವ್ಯಾವಲೋಕನ-೨ ಕುಮಾರವ್ಯಾಸನ ಕ್ಯಾಮರಾದಲ್ಲಿ ದ್ರೌಪದಿಯ ಮದುವೆಯ ಪೂರ್ವರಂಗಕನ್ನಡದಲ್ಲಿ ಕುಮಾರವ್ಯಾಸನ ಪದ್ಯಗಳನ್ನು ಕೇಳದ ಜನರು ಇರಲು ಸಾಧ್ಯವೇ ಇಲ್ಲ. ಕೇಳಿದವರು ಮೆಚ್ಚದಿರಲು ಸಾಧ್ಯವಿಲ್ಲ! ಅಷ್ಟು ಜನಜನಿತವಾಗಿರುವ ಕುಮಾರವ್ಯಾಸನ ಕಾವ್ಯದಲ್ಲಿ ಎದ್ದು ತೋರುವುದು ಅವನ ದೈತ್ಯ ಪ್ರತಿಭೆ . ಅದೆಷ್ಟು ಬಗೆಯ ಸೂಕ್ಷ್ಮತೆಗಳನ್ನು ಹುಡುಕಿ ಹುಡುಕಿ ತೆಗೆತೆಗೆದಿಡುತ್ತಾನೋ ಊಹಿಸಲೂ ಸಾಧ್ಯವಿಲ್ಲ. ನುರಿತ ಛಾಯಾಚಿತ್ರಗ್ರಾಹಕನೊಬ್ಬ ಹೇಗೆ ಯಾವುದೋ ಒಂದು ಕೋನದಲ್ಲಿ ಯಾವುದೋ ಒಂದು ಮೂಲೆಯಲ್ಲಿ ಕಾಣುವ ರಸವತ್ತಾದ ದೃಶ್ಯವನ್ನು ಸೆರೆಹಿಡಿದಿಡಬಲ್ಲನೋ ಹಾಗೇ ಕುಮಾರವ್ಯಾಸ ಕೂಡ ಮುಖ್ಯಕಥಾನಕಕ್ಕೆ ಪೂರಕವಾಗುವಂತೆಯೇ ಯಾವುದೋ ದೃಶ್ಯಗಳನ್ನೆಲ್ಲ ಸೆರೆಹಿಡಿದು ಕೊಡುತ್ತಾನೆ. ಆತ ತೋರಿಸುವ ದ್ರೌಪದಿಯ ಸ್ವಯಂವರದ ಚಿತ್ರಣವನ್ನು ಸ್ಥೂಲವಾಗಿ ಅವಲೋಕಿಸೋಣ.
ಪಾಂಡವರು ಐವರೂ ಪಾಂಚಾಲನಗರಿಗೆ ಬಂದು ಕುಂಬಾರನೊಬ್ಬನ ಮನೆಯಲ್ಲಿ ಉಳಿದಿರುತ್ತಾರೆ. ಆ ನಗರಕ್ಕೆ ಹಲವು ರಾಜರು ಚತುರಂಗ ಬಲಸಹಿತರಾಗಿ ಬರುತ್ತಿರುವಾಗ ಅವರ ಸೈನ್ಯದ ನಡಿಗೆಯಿಂದ ಧೂಳೆದ್ದು ಜಗತ್ತೆಲ್ಲವೂ ಧೂಳಿನಿಂದ ತುಂಬಿ ಕೆಂಪು ಬಣ್ಣವಾಗಿರುವುದು ದ್ರೌಪದಿಯನ್ನು ನೆನೆದು ಸಕಲ ಚರಾಚರ ವಸ್ತುಗಳಲ್ಲೂ ಅನುರಾಗ ಹುಟ್ಟಿದಂತೆ ಕಾಣುತ್ತಿತ್ತು. ಆ ರಾಜರ ಪಲ್ಲಕ್ಕಿ ಛತ್ರಚಾಮರಗಳ ನಡುವೆ ಸೂರ್ಯನಿಗೆ ನೋಡಲಾಗುತ್ತಿರಲಿಲ್ಲವಂತೆ. ಗಾಳಿಗೂ ಜಾಗವನ್ನು ಕೊಡುತ್ತಿರಲಿಲ್ಲವಂತೆ. ಬಂಗಾರದ ಕೆಲಸದಲ್ಲಿ ಹೊಸ ಹೊಸ ಚಿತ್ರಗಳನ್ನು ರಚಿಸಿ ದ್ರುಪದನ ನಗರದ ಗೋಡೆಗಳನ್ನು ಅಲಂಕರಿಸುತ್ತಿದ್ದರಂತೆ. ಹೂವಿನ ಹಾಗೂ ರತ್ನಗಳ ಮಾಲೆಗಳು ರಾರಾಜಿಸುತ್ತಿದ್ದವು. ಅಗರು ಧೂಪಗಳಿಂದ ಮೋಡಗಳು ಕೂಡ ಘಮಘಮಿಸುತ್ತಿದ್ದವು. ಅಲ್ಲಿ ಬಳಸುತ್ತಿದ್ದ ಕುಂಕುಮದಿಂದ ಕರ್ಪೂರದ ದೂಳಿನಿಂದ ಪನ್ನೀರಿನಿಂದ, ಕಸ್ತೂರಿಯಿಂದ ಪರಿಮಳವು ತುಂಬಿಕೊಂಡು ಗಾಳಿಯೂ ಕೂಡ ಭಾರವಾಗಿ ಕುಸಿಯುತ್ತಿತ್ತು.
ಹೊಳೆಯುತ್ತಿರುವ ಸಾಲಭಂಜಿಕೆಗಳಲ್ಲಿ ಮುತ್ತು ವಜ್ರಮಣಿಗಳಿಂದ ಕೂಡಿದ ರಚನೆಯಲ್ಲಿ ಸೂರ್ಯನ ರಥವೋ ಅಥವಾ ಪುಷ್ಪಕವಿಮಾನವೋ ಅಥವಾ ಶ್ರೀಮನ್ನಾರಾಯಣನ ಶಯ್ಯಾಗೃಹವೋ ಎಂದು ಅನುಮಾನವುಂಟಾಗುತ್ತಿತ್ತು. ಒಂದು ಕಡೆ ಸುಂದರಿಯರ ಯಂತ್ರಮಯ ವಿಗ್ರಹಗಳನ್ನು ಮಾಡಿಟ್ಟಿದ್ದರು. ಆ ವಿಗ್ರಹಗಳೇ ಕೇಳಿದವರಿಗೆ ಬೇಕಾದದ್ದನ್ನು ಕೊಡುತ್ತಿದ್ದವು. ಒಂದೆಡೆ ವಿವಿಧವೀಣಾವಾದ್ಯದ ಮೃದಂಗದ ಮೊದಲಾದ ಸಂಗೀತದ ಹಾಗೂ ವೈತಾಳಿಕರ ಮೇಳ ಚಪ್ಪರದಲ್ಲಿ ಇತ್ತು. ಹೊರ ವಲಯದಲ್ಲಿ ನಾನಾವಿಧಧ ನಾಟಕಗಳ ಪ್ರದರ್ಶನ ಗಾಯನಗಳೆಲ್ಲ ನಡೆಯುತ್ತಿದ್ದವು. ಮಲ್ಲರು ಚಿತ್ರವನ್ನು ರಚಿಸುವವರು ಮೊದಲಾದವರೆಲ್ಲ ಒಂದೆಡೆ ನೆರೆದಿದ್ದರು. ಹಲವು ದಿಕ್ಕುಗಳಿಂದ ಬಂದ ಮೂಕರು ಅಂಧರು ಕಿವುಡರು, ಕುಳ್ಳರು ಮೊದಲಾದವರೆಲ್ಲ ಅಲ್ಲಿ ಸೇರಿದ್ದರು.
ಅತ್ತ ಬಂದ ರಾಜರನ್ನೆಲ್ಲ ದ್ರುಪದ ಸ್ವಾಗತಿಸುತ್ತಾ ಉಪಚರಿಸುತ್ತಿದ್ದ. ಆಗ “ಪ್ರಚುರ ಮಣಿಯಿದೆ ಪದ್ಮರಾಗದ ರುಚಿರ ರತ್ನವು ಜಾತರೂಪದಿ ಖಚಿತವಾದೊಡೆ ಪುಣ್ಯವೆನುತಾ ದ್ರುಪದ ಚಿಂತಿಸಿದ" (ದ್ರೌಪದಿ ಎಂಬ ಪದ್ಮರಾಗದ ಮಣಿಯಿದೆ, ಅದಕ್ಕೆ ತಕ್ಕ ರಾಜಕುಮಾರ ಎಂಬ ಚಿನ್ನ ಸಿಕ್ಕಿದರೆ ಪುಣ್ಯ ಎಂದು ಯೋಚಿಸಿದ)
ಮಾರನೆಯ ದಿನ ಕಮಲಮುಖಿ ದ್ರೌಪದಿ ಸ್ವಯಂವರಕ್ಕೆ ನಡೆತಂದಳು. ದ್ರುಪದ ಬಿಲ್ಲನ್ನೂ ಮತ್ಸ್ಯಯಂತ್ರವನ್ನೂ ತರಿಸಿಟ್ಟ. ಹತ್ತಿರದಲ್ಲೇ ಲಗ್ನವಿದೆ, ರಾಜರಿಗೆಲ್ಲ ಇದನ್ನು ತೋರಿಸು. ಗೆದ್ದವರು ದ್ರೌಪದಿಯನ್ನು ಮದುವೆಯಾಗಬಹುದು ಎಂದು ಸ್ವಯಂವರದ ನಿಯಮವನ್ನೂ ಸೂಚಿಸಿದ. ಆಗ ಬಂದ ದ್ರೌಪದಿ ಹೇಗಿದ್ದಳೆಂದರೆ-
ಹೊರೆಯ ಸಖಿಯರ ನೋಟ ಮೈಯಲಿ ಹರಿದು ಬಳಲದು ಚಿತ್ತವೀಕೆಯ
ಧರಿಸಿ ಕುಸಿಯದು ಕಿವಿಗಳಿಗೆ ಮೆಲ್ನುಡಿಯ ಸವಿಸವಿದು
ಅರುಚಿಯಾಗದು ನಾಸಿಕವು ಮೈ ಪರಿಮಳದ ಪೂರದಲಿ ಗಂಧಾಂ-
ತರಕೆ ನೆರೆಯದು ರೂಪನೇನೆಂಬೆನು ನಿತಂಬಿನಿಯ||”
(ಈಕೆಯ ಸಖಿಯರನ್ನೂ ಇವಳನ್ನೂ ಎಷ್ಟು ನೋಡಿದರೂ- ಅವರ ಮೈಯಲ್ಲಿ ಹರಿಯುವ ನೋಟದಿಂದ ಕಣ್ಣಿಗೆ ಬಳಲಿಕೆ ಆಗುತ್ತಿರಲಿಲ್ಲ. ಇವಳನ್ನು ಧರಿಸಿ ಮನಸ್ಸಿಗೆ ಭಾರವಾಗಿ ಕುಸಿಯುತ್ತಿರಲಿಲ್ಲ. ಇವಳ ಮೆಲ್ನುಡಿಯನ್ನು ಸವಿಸವಿದು ಕಿವಿಗಳಿಗೆ ಅರುಚಿಯಾಗುತ್ತಿರಲಿಲ್ಲ. ಇವಳ ಮೈಯ ಪರಿಮಳವನ್ನು ಆಘ್ರಾಣಿಸಿದ ಬಳಿಕ ಬೇರೆ ಪರಿಮಳವನ್ನು ಆಸ್ವಾದಿಸಲು ನಾಸಿಕವು ಒಪ್ಪುತ್ತಿರಲಿಲ್ಲ. ಇಂತಹ ಸುಂದರಿಯ ರೂಪವನ್ನು ಏನೆಂದು ವರ್ಣಿಸಲಿ)
"ಪರಿಮಳದ ಪರಮಾಣುಗಳ ಸಂವರಿಸಿ ಮುಕ್ತಾಫಲದ ಕೆಂದಾ-
ವರೆಯ ಮರಿದುಂಬಿಗಳ ವರ್ಣಾಂತರವನಳವಡಿಸಿ
ಸರಸವೀಣಾಧ್ವನಿಯ ಹಂಸೆಯ ಗರುವ ಗತಿಗಳನಾಯ್ದು ಮನ್ಮಥ-
ವರವಿರಿಂಚಿಯೆ ಸೃಜಿಸಿದನು ಪಾಂಚಾಲ ನಂದನೆಯ||”
(ಪರಿಮಳದ ಪರಮಾಣುಗಳನ್ನು ಆರಿಸಿ ಆರಿಸಿ ಸಂಗ್ರಹಿಸಿ, ಮುತ್ತಿನ, ಕಮಲದ ಹೂವಿನ, ಮರಿದುಂಬಿಗಳ ಬೇರೆ ಬೇರೆ ಬಣ್ಣಗಳನ್ನು ಅಳವಡಿಸಿ ಸರಸವಾದ ವೀಣೆಯ ಧ್ವನಿಯನ್ನು ಹಾಗೂ ಹಂಸದ ನಡಿಗೆಯನ್ನೂ ಆಯ್ದು ಇವಳನ್ನು ಸೃಷ್ಟಿಸಿದ್ದಾನೆ. ಆ ವೇದಾಭಬ್ಯಾಸಜಡನಾದ ಬ್ರಹ್ಮ ಅಲ್ಲ. ಈಕೆಯನ್ನು ಸೃಷ್ಟಿಸಿದವನು ಮನ್ಮಥ ಎಂಬ ಬ್ರಹ್ಮ)
ಈಕೆ ಮನಸಿಜನ ಮದದಾನೆ. ಮನ್ಮಥನ ರತ್ನಾಗಾರ. ಅಂಗಜನ ಮಂತ್ರಸೂತ್ರಗಳ ಟಿಪ್ಪಣಿ. ಮಾನಿನಿಯರ ಅಧಿದೇವತೆ. ಮೂರು ಲೋಕವನ್ನೂ ಮೋಹನಗೊಳಿಸುವ ಚಿತ್ರ.
ಸುವಾಸಿನಿಯರು ಆಕೆಗೆ ಆರತಿಯನ್ನು ಎತ್ತಿದರು. ಬಳಿಕ ದೃಷ್ಟಿಯನ್ನು ತೆಗೆಯಲು ಉಪ್ಪಾರತಿಯನ್ನು ಮಾಡಿದರು. ಶೇಷಾಕ್ಷತೆ ಹಾಕಿ ಹರಸಿದರು. ಆಮೇಲೆ ಅವಳು ಕನ್ನಡಿಯನ್ನು ನೋಡಿಕೊಂಡಳು. ಮಂತ್ರಗಳನ್ನು ಹೇಳುತ್ತಿರುವಾಗ ಲಿಂಬೆಯ ಹಣ್ಣನ್ನು ತೆಗೆದುಕೊಂಡಳು. ದುಂದುಭಿಗಳು ಮೊಳಗುತ್ತಿರುವಾಗ ಕಮಲಕ್ಕೆ ಲಕ್ಷ್ಮಿ ಬರುವ ಹಾಗೆ ದ್ರೌಪದಿ ದಂಡಿಗೆಗೆ ಬಂದಳು. ಕೀಲ ಕಡಗ, ವಜ್ರಲಹರಿಯ ಜೋಲೆಯದ ಕಂಕಣದ ರವೆಯದ ತೋಳಬಂದಿಯ, ಕತ್ತಿನಲ್ಲಿ ತ್ರಿಸರದ, ಬೆರಳಿನ ಉಂಗುರಗಳ, ನೀಲರತ್ನದ ಪದಕದ, ಮಾಣಿಕ್ಯದ ಓಲೆಗಳ, ಮುತ್ತಿನ ಮೂಗುತಿಯ, ಹಾಗೆಯೇ ಏಕಾವಳಿಯ, ಮುತ್ತಿನ ತಿಲಕದ, ತಾರಕಾವಳಿಯ, ಕಾಂಚಿಯ, ಕಿಂಕಿಣಿಗಳಿರುವ ಗೆಜ್ಜೆಯ ವೀರಮುದ್ರಾವಳಿ ಇರುವ ಕಾಲಿನ ಆಭರಣದಲ್ಲಿ ಆಕೆ ಶೃಂಗಾರವನ್ನು ಮಾಡಿಕೊಂಡಿದ್ದಳು.
ಯತಿಗಳಿಗೆ ತಮ್ಮ ಕಣ್ಣೋಟದ ಹರಿತ ಮೊನೆಯನ್ನು ತೋರಿ, ವ್ರತಿಗಳನ್ನು ತಣಿಸದೆಯೇ ,ಸಮಾಧಿಸ್ಥಿತರಾದ ಯೋಗಿಗಳ ಮೂಗಿನ ಮೇಲೆ ಆಯುಧದ ಧಾರೆಯನ್ನು ಎಳೆದು, ವೇದವಿಹಿತ ಕರ್ಮಗಳ ದೀಕ್ಷಿತರ ಮನಸ್ಸಿನಲ್ಲಿ ಮುದ್ರೆಯನ್ನು ಒತ್ತುತ್ತ ಈ ಯುವತಿಯರು ನಡೆತಂದರು. "ಈಕೆಯ ಎದುರು ಯಾರು ನಿಲ್ಲಬಲ್ಲರು! ಮದನಾರಿಯೆನಿಸಿದ ಶಿವನೇ ಅರ್ಧದೇಹದಲ್ಲಿ ನಾರಿಯಿದ್ದಾಳೆ, ವಿಷ್ಣುವೇ ಸ್ವತಃ ಹೆಂಗಸಾದ, ಬ್ರಹ್ಮ ಮಗಳನ್ನು ಸೇರಿದ, ಇಂದ್ರನ ಕಥೆಯಂತೂ ಘೋರ, (ಅಹಲ್ಯಾಪ್ರಸಂಗದಲ್ಲಿ ಗೌತಮನ ಶಾಪದಿಂದ) ಮೈಯಾರೆ ಮದನನ ಮುದ್ರೆಗಳನ್ನು ಹೊತ್ತ!”ಎಂದು ಸಾರುತ್ತಿರುವಂತೆ ಕಹಳೆಗಳ ಧ್ವನಿ ಕೇಳುತ್ತಿತ್ತು.
ತಂಗಾಳಿ ಪಸರಿಸುತ್ತಿತ್ತು. ಬಿಸಿಲಿನ ಬಿಂಕ ಬೀತುಹೋಯಿತು, ಕಮಲಗಳು ಬಾಡಿಹೋದವು, ತಾರೆಗಳು ಮೆರೆದವು, ಶಶಿಕಾಂತ ಶಿಲೆಗಳು ನೀರನ್ನು ಒಸರಿಸಿದವು, ನೈದಿಲೆಯ ಹೂ ಅರಳತೊಡಗಿತು, ಚಕ್ರವಾಕ ಪಕ್ಷಿಗಳಿಗೆ ವಿರಹವುಂಟಾಯಿತು, ಇವೆಲ್ಲ ಆಗುತ್ತಿದ್ದುದು ಸಂಜೆಯಾಯಿತೆಂದಲ್ಲ! ಈ ಚಂದ್ಮುಖಿಯರ ಆಗಮನದಿಂದ ಹೀಗಾಯಿತು! ಈಕೆಯ ಹೊಳೆಯುವ ಕಣ್ಣುಗಳ ಬೆಳಕಿನಲ್ಲಿ ಕಾಮುಕರ ಮುಖ ಕತ್ತಲಿಸಿದವು. ಅವಳ ದೇಹದ ಕಾಂತಿಗಳಲ್ಲಿ ಇವರ ಬುದ್ಧಿ ಬಾಡಿಹೋಯಿತು. ಅವಳ ಲಾಲಿತ್ಯದ ವಿಭ್ರಮದಿಂದ ಇವರ ಅಹಂಕಾರವೆಂಬ ಶಿಲೆಗಳು ಒಡೆದುಹೋದವು.ಮಹಾಮಹೀಶ್ವರರ ಮನಸ್ಸು ಇವಳ ಮೋಹನಾಕೃತಿಯಲ್ಲಿ ಹೊಳೆದು ಅಡಗಿದವು. ಇವಳನ್ನು ಕಂಡು ಒಳಗೊಳಗೇ ಧಗೆ ಹೆಚ್ಚುತ್ತಿದ್ದರೂ ಹೊರಗೆ ಬಿಮ್ಮನೆ ನಗುತ್ತಿದ್ದ ರಾಜರನ್ನು ಏನೆಂದು ವರ್ಣಿಸೋಣ!
ಈಕೆಯಂದುದಿಸಿರೆ ಮದನಂಗೇಕೆ ದೇಹತ್ಯಾಗವಹುದು ಪಿ
-ನಾಕಿ ತಾ ವೈರಾಗ್ಯದಲಿ ಹೊಗುವನೆ ತಪೋವನವ!
ಸಾಕು ಗೌತಮ ಮುನಿಯ ಮುಳಿಸಿನ ಕಾಕು ನುಡಿ ಫಲಿಸುವುದೆಯೆನುತಾ
ನಾಕಪತಿ ರಂಭಾದಿ ಸತಿಯರ ನೋಡಿದನು ನಗುತ!”
"ಇವಳು ಅಂದೇ ಹುಟ್ಟಿದ್ದರೆ ಶಿವನ ತಪೋಭಂಗಕ್ಕೆ ಹೊರಟ ಮನ್ಮಥನಿಗೇಕೆ ದೇಹತ್ಯಾಗವಾಗುತ್ತಿತ್ತು. ಪಿನಾಕಿಯಾದ ಶಿವ ವೈರಾಗ್ಯವನ್ನು ಹೊಂದುತ್ತಲೇ ಇರಲಿಲ್ಲ. ಸಾಕು! ಗೌತಮಮುನಿಯ ಶಾಪದ ನುಡಿ ಹೇಗೆ ಫಲಿಸುತ್ತಿತ್ತು! (ಅಹಲ್ಯೆಯನ್ನು ತಾನು ಕಾಮಿಸುವ ಪ್ರಸಂಗವೇ ಬರುತ್ತಿರಲಿಲ್ಲವೇನೋ!)”ಎಂದು ಸ್ವರ್ಗದಲ್ಲಿ ಇಂದ್ರ ರಂಭೆಯರೇ ಮೊದಲಾದ ಸತಿಯರನ್ನು ನೋಡಿ ನಗುತ್ತ ಹೇಳಿದ.
ಆಮೇಲೆ ಬಂಗಾರದ ಪಲ್ಲಕ್ಕಿಯಲ್ಲಿ ಆಕೆಯನ್ನು ರಾಜರುಗಳೆಲ್ಲ ಕುಳಿತ ಸಿಂಹಾಸನಗಳ ಸಾಲಿಗೆ ಕರೆತರುತ್ತಾರೆ. ಧೃಷ್ಟದ್ಯುಮ್ನನು ಆಗ ಅವಳ ಸನಿಹಕ್ಕೆ ಬಂದು ಯಾರು ಯಾರು ಯಾವ ರಾಜ್ಯದ ರಾಜರೆಂದು ಪರಿಚಯವನ್ನು ಹೇಳತೊಡಗಿದ. ಮೊದಲು ದುರ್ಯೋಧನ ದುಶ್ಶಾಸನಾದಿ ಧೃತರಾಷ್ಟ್ರನ ಮಕ್ಕಳನ್ನು ತೋರಿಸಿದ. ಅವರನ್ನು ದ್ರೌಪದಿ ನೋಡಲೂ ಇಲ್ಲ! ಆ ಬಳಿಕ ವಿರಾಟನನ್ನು ಕೀಚಕನನ್ನು ಶ್ರುತಾಯುಧ ಮೊದಲಾದ ಪೂರ್ವದ ರಾಜರನ್ನು ರವಿಧ್ವಜ ರೋಚಮಾನಕರನ್ನು ನೀಲಚಿತ್ರಾಯುಧರನ್ನು, ದಕ್ಷಿಣದ ಚೋಳರನ್ನು, ಕೇರಳದ ರಾಜರನ್ನು ಪಾಂಡ್ಯರನ್ನು, ಚಂದ್ರಸೇನ ಸಮುದ್ರಸೇನರನ್ನು, ಕಳಿಂಗದ ರಾಜನನ್ನು ಚೇಕಿತಾನ ಭಾನುದತ್ತರನ್ನು ತೋರಿಸಿದ. ಆಮೇಲೆ ಪೌಂಡ್ರಕ ಭಗದತ್ತರನ್ನು ಕಾಂಭೋಜನನ್ನು, ಹರದತ್ತ, ವರಹಂಸ ಡಿಂಬಕ ಮದ್ರರಾಜ, ಜರಾಸಂಧ, ಮಣಿಮಂತ, ಬೃಹದ್ರಥ, ದಂಡಧಾರಕ ಮೊದಲಾದವರನ್ನು, ಭೂರಿಶ್ರವ, ವೀರಬಾಹ್ಲಿಕ, ಜಯದ್ರಥ ಶಿಬಿ, ಶ್ರುತಾಯುಧ, ವೃದ್ಧಕ್ಷತ್ರ, ಸೃಂಜಯ, ಸೋಮದತ್ತ, ಶಿಶುಪಾಲ ರುಕ್ಮಾಂಗದಅಶ್ವತ್ಥಾಮ ಸೌಬಲ ಮೊದಲಾದವರನ್ನು ತೋರಿಸಿದ. ಹೀಗೆ ಇವರೆಲ್ಲರ ಪರಿಚಯ ಮಾಡಿಕೊಡುತ್ತಾ ಬಂದಾಗ ಕರ್ಣನನ್ನು ಅವನ ಮಕ್ಕಳಾದ ವೃಷಸೇನ ಚಿತ್ರಸೇನರನ್ನು ತೋರಿಸಿದ. “ಇವರು ಆಗುವರೇ" ಎಂದು ಕೇಳಲು ದ್ರೌಪದಿ ಒಮ್ಮೆ ನೋಡಿ ಮುಖವನ್ನು ತಿರುಗಿಸಿಕೊಂಡು ಬಂದಳು.
ಆಮೇಲೆ ಕೃಷ್ಞನನ್ನು ಪರಿಚಯಿಸಿದಾಗ ಭಕ್ತಿಭಾವದಿಂದ ರೋಮಾಂಚಿತಳಾಗಿ ದ್ರೌಪದಿ ಮನಸ್ಸಿನಲ್ಲಿಯೇ ವಂದಿಸಿ "ಇವನಲ್ಲಿ ನನಗೆ ಗುರುಭಾವನೆಯು ಬರುತ್ತಿದೆ. ಏನೆಂದು ತಿಳಿಯುತ್ತಿಲ್ಲ!" ಎಂದು ನಸುನಕ್ಕು ಹೇಳಿದಳು. ಆ ಬಳಿಕ ಉಳಿದ ಯಾದವರನ್ನೂ ಬಲರಾಮನನ್ನೂ ತೋರಿಸಿದನು.
ಕೆಲರು ಮಧುರಾಪಾಂಗದಲಿ ಕಂಗಳ ಮರೀಚಿಯ ಬೆಳಗಿನಲಿ ಕೆಲ-
ರೆಳನಗೆಯ ಮಿಂಚಿನಲಿ ಸಖಿಯರ ಮೇಳವಾತಿನಲಿ
ಲಲನೆ ನೋಡಿದಳೆಂದು ಸೊಗಸಿನಲೊಲಿವ ಸಖಿಯರಿಗೆಂದಳೆಂದೊಳ-
ಗೊಳಗೆ ಬೆರೆತರು ಬಯಲು ಮಧುವಿನ ಬಾಯ ಸವಿಗಳಲಿ||”
ಕೆಲವರು ದ್ರೌಪದಿಯು ಮಧುರವಾದ ಓರೆನೋಟವನ್ನು ಬೀರಿದಳೆಂದು, ಇನ್ನು ಕೆಲವರು ಕಣ್ಣ ಕಾಂತಿಯನ್ನು ಕಂಡೆವೆಂದು ಕೆಲವರು ತಮ್ಮ ಕಡೆ ಎಳನಗೆಯ ಮಿಂಚನ್ನು ಬೀರಿದಳೆಂದು, ಸಖಿಯರ ಜೊತೆ ಮಾತನಾಡುತ್ತ ತಮ್ಮನ್ನು ನೋಡಿದಳೆಂದು ಕೆಲವರು, ಕೆಲವರು ತಮ್ಮ ಕುರಿತು ಸಖಿಯರ ಬಳಿ ಏನೋ ಹೇಳಿದಳೆಂದು ಸಂತೋಷವನ್ನು ಪಡುತ್ತಾ ಮಧುಪಾನವನ್ನು ಮಾಡುತ್ತಿದ್ದರು.
ಮಡಿಸಿದೆಲೆ ಬೆರಳೊಳಗೆ ಬಾಯೊಳಗಡಸಿದೆಲೆ ಬಾಯೊಳಗೆ ಸಚಿವರ
ನುಡಿಯ ಕೇಳರು ಸುಳಿಯ ಕಾಣರು ಲೋಚನಾಗ್ರದಲಿ
ಕಡುಮುಳಿದ ಕಂದರ್ಪಶರವವಘಡಿಸಿ ಕೈಗಳ ನೋಡಿ ನೃಪರೆವೆ
ಮಿಡುಕದಿರ್ದರು ಬೆರಳ ಮೂಗಿನ ಹೊತ್ತ ದುಗುಡದಲಿ"
ಎಲೆಯಡಿಕೆಯನ್ನು ಹಾಕಿಕೊಳ್ಳಬೇಕೆಂದು ಮಡಿಸಿಕೊಂಡ ಎಲೆ ಬೆರಳಲ್ಲಿಯೇ ಉಳಿದಿತ್ತು. ಬಾಯಿಗೆ ಹಾಕಿಕೊಂಡ ಎಲೆ ಬಾಯಲ್ಲಿಯೇ ಉಳಿದಿತ್ತು! ಮಂತ್ರಿಗಳು ಹೇಳುವ ಮಾತನ್ನು ಕೇಳುತ್ತಿರಲಿಲ್ಲ! ಕಣ್ಣ ಮುಂದೆ ಯಾರಾದರೂ ನಡೆದರೂ ಗೊತ್ತಾಗುತ್ತಿರಲಿಲ್ಲ! ಬಹಳ ಸಿಟ್ಟಾದ ಮನ್ಮಥನ ಬಾಣವೇ(ಹೂಗಳೇ) ಅವಘಡಿಸಿದ್ದ ಕೈಗಳನ್ನು ನೋಡಿ (ಮಾಲೆಯನ್ನು ಹಿಡಿದ ದ್ರೌಪದಿಯ ಕೈಗಳನ್ನು ನೋಡಿ) ನಮ್ಮನ್ನು ಈಕೆ ವರಿಸುತ್ತಾಳೋ ಇಲ್ಲವೋ ಎಂಬ ದುಗುಡದಲ್ಲಿ ಮೂಗಿನ ಮೇಲೆ ಬೆರಳಿಟ್ಟುಕೊಂಡು ಕಣ್ಣೆವೆಯನ್ನೂ ಮಿಡುಕದೇ ರಾಜರೆಲ್ಲ ಕುಳಿತಿದ್ದರು.
"ಯಾರೊಬ್ಬರನ್ನೂ ಈಕೆಯು ಮೆಚ್ಚಲಿಲ್ಲವಲ್ಲಾ! ಅರ್ಜುನನ್ನು ಮದುವೆಯಾಗುತ್ತಾಳೆ ಎಂದು ಹೇಳಿದವರ ಮಾತು ಸುಳ್ಳಾಗುವುದೇ! ಅವನನ್ನು ಯಾರೂ ತೋರಿಸುತ್ತಿಲ್ಲವಲ್ಲಾ!”ಎಂದು ದ್ರುಪದ ಚಿಂತಿತನಾಗಿದ್ದ.
ಹೀಗೆ ಆದ ಬಳಿಕ ಮತ್ಸ್ಯಯಂತ್ರವನ್ನು ತಂದಿಟ್ಟು ಅದನ್ನು ಭೇದಿಸಿದವರು ದ್ರೌಪದಿಯನ್ನು ಗೆದ್ದಂತೆ ಎಂಬ ಪಂದ್ಯವನ್ನು ಇಡುತ್ತಾನೆ. ಆಗ ಆ ಮಹಾಧನುಸ್ಸು ಎಲ್ಲ ರಾಜರನ್ನೂ ಸೋಲಿಸಿಬಿಡುತ್ತದೆ. ಹಾಗೂ ಅರ್ಜುನ ಅದನ್ನು ಗೆಲ್ಲುತ್ತಾನೆ. ಆ ಕಥಾನಕವನ್ನು ಮುಂದೆ ನೋಡೋಣ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ