Powered By Blogger

ಮಂಗಳವಾರ, ಏಪ್ರಿಲ್ 21, 2020

ಕಾವ್ಯಾವಲೋಕನ-೯ ಚಂದ್ರಹಾಸನ ಕಥೆ ಮುಂದುವರೆದುದು



ಲಕ್ಷ್ಮೀಶನ ಜೈಮಿನಿ ಭಾರತದ ಪದ್ಯಗಳನ್ನು ಅನುಸರಿಸಿ ಚಂದ್ರಹಾಸನ ಕಥೆಯನ್ನು ಹಿಂದಿನ ಸಂಚಿಕೆಯಲ್ಲಿ ಅವಲೋಕಿಸಲಾಗಿತ್ತು.ಅದರ ಮುಂದಿನ ಕಥಾನಕವನ್ನು ಇಲ್ಲಿ ನೋಡೋಣ. ಚಂದನಾವತಿಯ ರಾಜ ಕುಳಿಂದಕ ಚಂದ್ರಹಾಸನನ್ನು ಕರೆತಂದು ತನ್ನ ಮಗನಂತೆ ಸಾಕಿಕೊಂಡು ಆಡಳಿತವನ್ನು ಅವನಿಗೆ ಕಲಿಸುತ್ತಿರುತ್ತಾನೆ. ಆ ಸಂದರ್ಭದಲ್ಲಿ ಚಂದ್ರಹಾಸ ಹೇಗಿದ್ದ ಎಂದು ಈ ಪದ್ಯದಲ್ಲಿ ವರ್ಣಿಸುತ್ತಾನೆ
ರೂಪಿಂದೆ ಮದನನುಂ ನಾರಿಯರುಮಮಿತಪ್ರ-
ತಾಪದಿಂದಿನಪನುಂ ಪರಮಹೀಪಾಲರುಂ
ವ್ಯಾಪಿಸಿದ ಕೀರ್ತಿಯಿಂ ಪೀಯೂಷಕಿರಣನುಂ ತಾರೆಗಳುಮಭಿವರ್ಧಿಪ
ಶ್ರೀಪತಿಯ ಭಕ್ತಿಯಿಂ ಗರುಡನುಂ ಸನಕಾದಿ
ತಾಪಸರುಮೈದೆ ಸೋಲ್ದಪರೆಂದೊಡಿನ್ನುಳಿದ
ಕಾಪುರುಷರೀ ಚಂದ್ರಹಾಸನಂ ಪೋಲ್ದಪರೆ ಪೇಳೆಂದು ಮುನಿ ನುಡಿದನು
ರೂಪದಿಂದ ಮನ್ಮಥನೂ ನಾರಿಯರೂ ಸೋಲುತ್ತಿದ್ದರು, ಇವನ ಅಮಿತಪ್ರತಾಪದಿಂದ ಸೂರ್ಯನೂ ಶತ್ರುರಾಜರೂ ಸೋಲುತ್ತಿದ್ದರು. ವ್ಯಾಪಿಸುತ್ತಿದ್ದ ಕೀರ್ತಿಯಿಂದ ಚಂದ್ರನೂ ನಕ್ಷತ್ರಗಳೂ ಸೋಲುತ್ತಿದ್ದವು! ವರ್ಧಿಸುತ್ತಿರುವ ಶ್ರೀಪತಿಯ ಭಕ್ತಿಯಿಂದ ಗರುಡನೂ ಸನಕಾದಿ ತಪಸ್ವಿಗಳೂ ಸೋಲುತ್ತಿದ್ದರು ಎಂತಾದರೆ ಇನ್ನು ಯಾವ ಸಾಧಾರಣ ಜನರು ಈ ಚಂದ್ರಹಾಸನನ್ನು ಹೋಲುತ್ತಾರೆ ಎಂದು ನಾರದ ಮುನಿ ಹೇಳಿದನು.
ಹೀಗಿರುವ ಚಂದ್ರಹಾಸನ ಹೆಸರಿನಲ್ಲಿ ಕುಳಿಂದಕ ಕುಂತಳನಗರಿಗೆ ತನ್ನ ಕಾಣಿಕೆಗಳನ್ನು ಕಳುಹಿಸಿದ. ಅಲ್ಲಿ ಮಂತ್ರಿಯಾಗಿರುವ ದುಷ್ಟಬುದ್ಧಿಗೆ ಮಕ್ಕಳಿಲ್ಲದ ಕುಳಿಂಕನಿಗೆ ಯಾವಾಗ ಮಗ ಹುಟ್ಟಿದ ಎಂದು ಆಶ್ಚರ್ಯವಾಗಿ ತಿಳಿದುಕೊಳ್ಳಲು ತಾನು ಕಟುಕರ ಕೈಯಲ್ಲಿ ಒಪ್ಪಿಸಿದ ಮಗುವೇ ಈ ಚಂದ್ರಹಾಸ ಎಂಬುದು ಸ್ಪಷ್ಟವಾಗುತ್ತದೆ. ಹಾಗಾಗಿ ಅವನನ್ನು ಪರೀಕ್ಷಿಸಿ ಮುಂದಿನ ಕಾರ್ಯವನ್ನು ನಿಶ್ಚಯಿಸಬೇಕೆಂದು ನಿರ್ಧರಿಸಿ ತಾನೇ ಯಾವುದೋ ರಾಜಕಾರ್ಯದ ನಿಮಿತ್ತವಾಗಿ ಚಂದನಾವತಿಯ ಕಡೆಗೆ ಪ್ರಯಾಣವನ್ನು ಬೆಳೆಸಲುದ್ಯುಕ್ತನಾಗುತ್ತಾನೆ. ಆ ಸಂದರ್ಭದಲ್ಲಿ ಆತನ ಮಗಳು ಪ್ರಾಪ್ತಯೌವನೆಯಾದ ವಿಷಯೆ ಅವನ ಬಳಿ ಬರುತ್ತಾಳೆ-
ಎಸಳುಗಂಗಳ ದಿಟ್ಟಿ ಮನ್ಮಥನ ಕರದಿಟ್ಟಿ
ಮಿಸುಪ ಪುರ್ಬಿನ ಗಾಡಿ ದರ್ಪಕನ ಸಿಂಗಾಡಿ
ಲಸಿತ ಮಂದಸ್ಮಿತಂ ಮುನಿಜನದ ವಿಸ್ಮಿತಂ ಕುರುಳು ವಿಟನಿಕರದುರುಳು
ಅಸಿಯ ಕೋಮಲ ಕಾಯಮಂಗಜೋತ್ಸವ ಕಾಯ
ಮೆಸೆವ ನವಯೌವನಂ ಸ್ಮರನ ಕೇಳೀವನಂ
ಪೊಸತಿದೆನಲಾ ವಿಷಯೆ ಜನಿತಮೋಹನವಿಷಯೆ ಪಿತನೆಡೆಗೆ ನಡೆತಂದಳು
ಅವಳ ಹೂವಿನೆಸಳಿನಂತಹ ಕಣ್ಣುಗಳ ದೃಷ್ಟಿ ಮನ್ಮಥನ ಈಟಿಯೇ ಸರಿ! ಹೊಳೆಯುವ ಹುಬ್ಬು ಕಾಮನ ಕೈಯಲ್ಲಿರುವ ಕಬ್ಬಿನ ಬಿಲ್ಲು, ಅವಳ ಲಲಿತವಾದ ನಗು ಮುನಿಜನಗಳಿಗೆ ಆಶ್ಚರ್ಯವನ್ನುಂಟು ಮಾಡುವುದು, ಮುಂಗುರುಳು ವಿಟರನ್ನು ಸಾಯಿಸುವ ಉರುಳು! ತೆಳುವಾದ ಕೋಮಲವಾದ ಅವಳ ದೇಹ ಕಾಮನ ಹಬ್ಬದ ಮನೆ, ಶೋಭಿಸುತ್ತಿರುವ ಅವಳ ಹೊಸಜವ್ವನ ಮನ್ಮಥನ ಆಟದ ವನ, ಇದೆಲ್ಲ ಹೊಸತನವನ್ನು ತಳೆದ ಮೋಹಕವಾದ ವಿಷಯವಾದ ವಿಷಯೆ ತಂದೆಯ ಹತ್ತಿರ ಬಂದಳು.
ತಾತ ನಂದನದೊಳಾಂ ನೀರ್ವೊಯ್ದು ಬೆಳೆಯಿಸಿದ
ಚೂತಲತೆ ಕಾತುದಿನ್ನುದ್ಯಾಪನಂಗೈಸ-
ದೇತಕಿರ್ದಪೆ ರಾಜಕಾರ್ಯಮೇನೆಂದು ತಲೆವಾಗಿ ನಸುಲಜ್ಜೆಯಿಂದ...
"ಅಪ್ಪ! ನಂದನವನದಲ್ಲಿ ನಾನು ನೀರು ಹಾಕಿ ಬೆಳೆಸಿದ ಚೂತಲತೆ ಬೆಳೆದಿದೆ. ಅದನ್ನು ಉದ್ಯಾಪನ ಮಾಡಿಸದೇ ಏನು ರಾಜಕಾರ್ಯಕ್ಕೆ ಹೊರಟಿರುವೆ!” ಎಂದು ಕೇಳುತ್ತಾಳೆ! ತಾನು ಬೆಳೆಸಿದ ಬಳ್ಳಿಗೆ ಮದುವೆ ಮಾಡಿಸಲು ಕೇಳುತ್ತಿದ್ದಾಳೆ ಎಂದು ಅರಿವಾದಾಗ ಅವಳ ತಂದೆಗೆ "ಇವಳು ಮದುವೆಯ ವಯಸ್ಸಿಗೆ ಬಂದಿದ್ದಾಳೆ" ಎಂಬುದು ಸ್ಪಷ್ಟವಾಗುತ್ತದೆ. ತನ್ನ ಮಗ ಮದನನನ್ನು ಕರೆದು ರಾಜಕಾರ್ಯದ ನಿಮಿತ್ತವಾಗಿ ಹೋಗುತ್ತಿರುವುದನ್ನೂ ಮಗಳ ಬಯಕೆಯನ್ನೂ ತಿಳಿಸಿ ಹೊರಡುತ್ತಾನೆ.
ಆತ ಅಲ್ಲಿಂದ ಕುಳಿಂದಕನ ಅರಮನೆಗೆ ಬಂದು ಕೆಲಕಾಲ ಕಳೆದು ಚಂದ್ರಹಾಸನನ್ನು ಕರೆದು "ಶ್ರೀಮತ್ಸಚಿವಶಿರೋಮಣಿ.....” ಇತ್ಯಾದಿ ಬರೆಹವಿರುವ ಪತ್ರವನ್ನು ಕೊಟ್ಟು ತನ್ನ ಮಗ ಮದನನಿಗೆ ತಲುಪಿಸುವಂತೆ ಹೇಳುತ್ತಾನೆ. ಚಂದ್ರಹಾಸ ಅಲ್ಲಿಂದ ಹೊರಟು ಬರುವಾಗ ಪಟ್ಟಣದ ಹೊರವಲಯದ ನಂದನೋದ್ಯಾನದಲ್ಲಿ ವಿಶ್ರಾಂತಿಗೆಂದು ಮರವೊಂದರ ಅಡಿಯಲ್ಲಿ ಮಲಗುತ್ತಾನೆ! ಅಲ್ಲಿ ವಿಷಯೆ ತನ್ನ ಗೆಳತಿಯರ ಜೊತೆ ಜಲಕೇಳಿಯಾಡಲು ಬರುತ್ತಾಳೆ! ಅಲ್ಲಿ ಸಾಕಷ್ಟು ಶೃಂಗಾರಸ್ಯಂದಿಯಾದ ಪದ್ಯಗಳಿವೆ. ಅವರೆಲ್ಲರ ವರ್ಣನೆಯ ಪದ್ಯವೊಂದನ್ನು ನೋಡಬಹುದು-
ಕಲಕೀರವಾಣಿಯರ್ ಕಾಳಾಹಿವೇಣಿಯರ್
ಕಲಭಮದಯಾನೆಯರ್ ಕಾಯಜನಿಧಾನೆಯರ್
ಕಲಧೌತಗಾತ್ರೆಯರ್ ಕಂಜದಳನೇತ್ರೆಯರ್ ಕಳೆವೆತ್ತ ಕಾಮಿನಿಯರು
ಕಲಶಕುಚಯುಗಳೆಯರ್ ಕನಕಮಣಿನಿಗಳೆಯರ್
ಕಳಕಳಿಪ ವದನೆಯರ್ ಕುಲಿಶಾಭರದನೆಯರ್
ಕಳೆದುಳಿದ ರನ್ನೆಯರ್ ಕಾಂತಿಸಂಪನ್ನೆಯರ್ ನಂದನಕೆ ನಡೆತಂದರು
ಅವರ ಧ್ವನಿ ಅರಗಿಳಿಗಳ ದನಿಯಂತೆ ಇದ್ದ ಕಾರಣ- ಕಲಕೀರವಾಣಿಯರ್, ಕಪ್ಪು ಹಾವಿನಂತಹ ಜಡೆಯನ್ನು ಹೊಂದಿದ್ದ ಕಾರಣ ಕಾಳಾಹಿವೇಣಿಯರ್, ಆನೆಯಂತೆ ನಿಧಾನಕ್ಕೆ ನಡೆಯುವವರು ಮನ್ಮಥನ ಆಶ್ರಯವಾದವರು ಶುಭ್ರವಾದ ದೇಹವುಳ್ಳವರು, ಕಮಲಲೋಚನೆಯರು ಕಲಶದಂತಹ ಕುಚವುಳ್ಳವರು, ಕಳಕಳಿಸುವ ಮುಖದವರು ಇತ್ಯಾದಿಯಾಗಿ ಹಲವು ಬಗೆಯಲ್ಲಿ ಅವರನ್ನು ಬಣ್ಣಿಸುತ್ತಾನೆ ಕವಿ.
ಹೀಗೆ ಬಂದವರ ಜಲಕೇಳಿಯನ್ನೂ ಮುಂದೆ ವರ್ಣಿಸುತ್ತಾನೆ. ಕೊನೆಗೆ ನೀರಾಟವಾಡಿ ಬರುವಾಗ ವಿಷಯೆ ಚಂದ್ರಹಾಸನನ್ನು ನೋಡುತ್ತಾಳೆ.
ಲೋಕತ್ರಯಂ ತನಗೆ ವಶವರ್ತಿಯಾದುದಿ
ನ್ನೇಕೆ ಧಾವತಿಯೆಂದು ಸುಖದಿಂದ ಪವಡಿಸಿದ
ನೋ ಕಬ್ಬುವಿಲ್ಲನೆನೆ ಬೇಸರದೆ ಬಾಂದಳದೊಳಾವಗಂ ನಡೆವ ಬವಣಿ
ಸಾಕೆಂದು ನಿದ್ರೆಗೈದನೊ ಸೋಮನೆನೆ ವನ
ಶ್ರೀಕಾಮಿನಿಯ ರತಿಶ್ರಮದೊಳೊರಗಿದನೊ ಕುಸು
ಮಾಕರನೆನಲ್ಕೆ ಮಲಗಿಹ ಚಂದ್ರಹಾಸನಂ ಕಂಡು ವಿಸ್ಮಿತೆಯಾದಳು||
ಮೂರುಲೋಕವೂ ತನಗೆ ವಶವಾಗಿದೆ, ಇನ್ನೇಕೆ ನನಗೆ ಅವಸರ ಎಂದು ಸುಖದಿಂದ ನಿದ್ರಿಸಿದ ಕಬ್ಬಿನ ಬಿಲ್ಲನ್ನು ಹಿಡಿದ ಮನ್ಮಥನೇನೋ! ಬಾನಿನಲ್ಲಿ ಯಾವಾಗಳೂ ಇದ್ದ ಬವಣೆ ಸಾಕೆಂದು ಬೇಸರದಿಂದ ಭೂಮಿಗೆ ಬಂದು ನಿದ್ರೆಗೈದ ಚಂದ್ರನೋ! ಅಥವಾ ವನದೇವಿಯರ ರತಿಶ್ರಮದಿಂದ ಒರಗಿರುವ ಕುಸುಮಾಕರನೋ ಎಂಬಂತೆ ಚಂದ್ರಹಾಸನನ್ನು ಕಂಡು ವಿಸ್ಮಿತೆಯಾದಳು!
ಸುತ್ತ ನೋಡುವಳೊಮ್ಮೆ ನೂಪುರವಲುಗದಂತೆ
ಹತ್ತೆ ಸಾರುವಳೊಮ್ಮೆ ಸೋಂಕಲೆಂತಹುದೆಂದು
ಮತ್ತೆ ಮುರಿದಪಳೊಮ್ಮೆ ಹೆಜ್ಜೆ ಹೆಜ್ಜೆಯ ಮೇಲೆ ಸಲ್ವಳಮ್ಮದೆ ನಿಲ್ವಳು
ಚಿತ್ತದೊಳ್ ನಿಶ್ಚೈಸಿ ನೆರೆಯಲೆಳಸುವಳೊಮ್ಮೆ
ಹೊತ್ತಲ್ಲದನುಚಿತಕೆ ಬೆದರಿ ಹಿಂಗುವಳೊಮ್ಮೆ
ತತ್ತಳದ ಬೇಟದೊಳ್ ಬೆಂಡಾಗಿ ವಿಷಯೆ ನಿಂದಿರ್ದಳಾತನ ಪೊರೆಯೊಳು||
ಒಮ್ಮೆ ಸುತ್ತಲೂ ನೋಡುತ್ತಾಳೆ. ತನ್ನ ಗೆಜ್ಜೆ ಸದ್ದು ಮಾಡದಂತೆ ಸಮೀಪಕ್ಕೆ ಬರುತ್ತಾಳೆ. ಒಮ್ಮೆ ಸೋಂಕಿದರೆ ಏನಾಗಬಹುದು ಎಂದು ಯೋಚಿಸುತ್ತಾಳೆ! ಹೆಜ್ಜೆ ಹೆಜ್ಜೆಯ ಮೇಳೆ ಹೊರಡಲೂ ಆರದೇ ನಿಲ್ಲಲೂ ಆರದೇ ಚಡಪಡಿಸುತ್ತಿರುತ್ತಾಳೆ! ಮನಸ್ಸಿನಲ್ಲಿಯೇ ನಿಶ್ಚಯಿಸಿ ಅವನನ್ನು ಎಬ್ಬಿಸಿ ಮಾತನಾಡಿಸಿಬಿಡಬೇಕೆಂದುಕೊಳ್ಳುವಳು! ಆದರೆ ಹೆದರಿ ಹಿಂದೆಗೆಯುತ್ತಾಳೆ! ಅವನಲ್ಲಿ ಅನುರಾಗ ಉಂಟಾಗಿ ಇವಳು ಬೆಂಡಾಗಿ ಅವನ ಸನಿಹದಲ್ಲೇ ನಿಂತಿದ್ದಳು!
ಆ ಬಳಿಕ ಅವನ ಸೆರಗಿನಲ್ಲಿ ಕಟ್ಟಿದ್ದ ಪತ್ರವನ್ನು ನೋಡಿ ಅವನು ಯಾರೆಂದು ತಿಳಿಯುವ ಕುತೂಹಲದಿಂದ ಅದನ್ನು ತೆಗೆದು ಓದುತ್ತಾಳೆ. ಅದರಲ್ಲಿ ತನ್ನ ಅಣ್ಣ ಮದನನಿಗೆ ತಂದೆ ದುಷ್ಟಬುದ್ಧಿಯೇ ಬರೆದ ಪತ್ರ ಎಂದು ಗೊತ್ತಾಗಿ ಸಂತಸ ಪಡುತ್ತಾಳೆ. ಅದರಲ್ಲಿ "ವಿಷವ ಮೋಹಿಸುವಂತೆ ಕೊಡುವುದು" ಎಂಬ ಸಾಲನ್ನು ಓದಿ- ವಿಷವನ್ನೇಕೆ ಕೊಡಲು ಹೇಳಿದ್ದಾನೆ! ಬಹುಶಃ "ವಿಷಯೆ ಮೋಹಿಸುವಂತೆ ಕೊಡುವುದು" ಎಂದಾಗಬೇಕು ಎಂದುಕೊಂಡು ತನ್ನ ಕಾಡಿಗೆಯಿಂದ ಒಂದು ಅಕ್ಷರವನ್ನು ತಿದ್ದಿ "ವಿಷಯೆ ಮೋಹಿಸುವಂತೆ" ಎಂದು ಮಾಡಿಬಿಡುತ್ತಾಳೆ. ಆ ಬಳಿಕ ಪತ್ರವನ್ನು ಅವನ ಸೆರಗಿಗೇ ಕಟ್ಟಿ ಹೊರಡುತ್ತಾಳೆ.


ದಿಟ್ಟಿ ಮುರಿಯದು ಕಾಲ್ಗಳಿತ್ತ ಬಾರವು ಮನಂ
ನಟ್ಟು ಬೇರೂರಿಹುದು ಕಾಮನಂಬಿನ ಗಾಯ
ವಿಟ್ಟಣಿಸಿತಂಗಲತೆ ಕಾಹೇರಿತೊಡಲೊಳಗೆ ವಿರಹದುರಿ ತಲೆದೋರಿತು
ಬಟ್ಟೆವಿಡಿದೊಡನೊಡನೆ ತಿರುತಿರುಗಿ ನೋಡುತಡಿ
ಯಿಟ್ಟಳೀಚೆಗೆ ಬಳಿಕ ಬೆರಸಿದಳ್ ಕೆಳದಿಯರ
ತಟ್ಟಿನೊಳ್ ಸಂಭ್ರಮದ ಸಂತಾಪದೆಡೆಯಾಟದಂತರಂಗದ ಬಾಲಕಿ ||
ದೃಷ್ಟಿ ಅಲ್ಲಿಂದ ಮುರಿಯುತ್ತಿಲ್ಲ, ಕಾಲುಗಳನ್ನು ಅಲ್ಲಿಂದ ತೆಗೆಯಲಾಗುತ್ತಿಲ್ಲ. ಮನಸ್ಸು ಅಲ್ಲಿಯೇ ನಟ್ಟು ಬೇರೂರಿದೆ! ಮನ್ಮಥನ ಬಾಣದ ಗಾಯ ದೊಡ್ಡದಾಗಿದೆ. ದೇಹವೆಂಬ ಬಳ್ಳಿಯಲ್ಲಿ ಬಿಸಿಯೇರುತ್ತಿದೆ. ವಿರಹದ ಉರಿ ಹೆಚ್ಚಾಗುತ್ತಿದೆ. ದಾರಿಯಲ್ಲಿ ಹೊರಟು ಮತ್ತೆ ಮತ್ತೆ ತಿರುತಿರುಗಿ ನೋಡುತ್ತಾಳೆ!ಬಳಿಕ ಗೆಳತಿಯರ ಗುಂಪನ್ನು ಸೇರಿಕೊಂಡವಳು ಸಂಬ್ರಮದ ಸಂತಾಪದ ಎಡೆಯಾಟದ ಅಂತರಂಗವುಳ್ಳವಳಾದಳು!
ಹೀಗೆ ಬಂದ ಮೇಲೆ ಮದನನ ಬಳಿ ಬಂದು ಚಂದ್ರಹಾಸ ಆ ಪತ್ರವನ್ನು ಕೊಡುತ್ತಾನೆ. ಆಗ ಮದನ ಅದರಲ್ಲಿರುವಂತೆ ವಿಲಂಬ ಮಾಡದೇ ವಿಷಯೆಯನ್ನು ವಿವಾಹ ಮಾಡಿಕೊಡುತ್ತಾನೆ! ದುಷ್ಟಬುದ್ಧಿ ಹಿಂತಿರುಗಿ ಬಂದಾಗ ಇಲ್ಲಿಯ ಸಂಭ್ರಮಗಳನ್ನೆಲ್ಲ ನೋಡಿ ಆಶ್ಚರ್ಯಪಟ್ಟುಕೊಳ್ಳುತ್ತಾನೆ! ಇಲ್ಲಾದುದನ್ನು ತಿಳಿದು ದುಃಖಿತನಾಗಿ ಪತ್ರವನ್ನು ತರಿಸಿ ನೋಡಿದರೆ "ವಿಷಯೆ" ಎಂದಿದೆ! ತಾನೇ ಬರೆಯುವಾಗ ತಪ್ಪಿರಬೇಕು ಎಂದುಕೊಳ್ಳುತ್ತಾನೆ. ಆಮೇಲೆ ಮತ್ತೆ ಯೋಚಿಸಿ ಚಂದ್ರಹಾಸನನ್ನು ಸಾಯಿಸಲು ಕೆಲವು ಕಟುಕರಿಗೆ ಹೇಳುತ್ತಾನೆ. ನಗರದ ಹೊರಗಿರುವ ಚಂಡಿಕಾಲಯಕ್ಕೆ ನಿಶ್ಚಿತ ಸಮಯಕ್ಕೆ ಬಂದ ವ್ಯಕ್ತಿಯನ್ನು ನೀವು ಸಾಯಿಸಬೇಕೆಂದು ಹೇಳಿ ಕಳುಹಿಸುತ್ತಾನೆ. ಇತ್ತ ಚಂದ್ರಹಾಸನನ್ನು ತಮ್ಮ ಕುಲದ ಸಂಪ್ರದಾಯದಂತೆ ಚಂಡಿಕಾಪೂಜೆಗೆ ಹೋಗಲು ಹೇಳುತ್ತಾನೆ. ಅವನು ಹೊರಡುವ ಹೊತ್ತಿಗೆ ಅರಮನೆಯಿಂದ ಚಂದ್ರಹಾಸನಿಗೆ ಕರೆ ಬಂದಿರುತ್ತದೆ. ಕುಂತಳದ ರಾಜ ತನ್ನ ಮಗಳನ್ನು ಚಂದ್ರಹಾಸನಿಗೇ ಮದುವೆ ಮಾಡಿಕೊಡಲು ನಿಶ್ಚಯಿಸಿರುತ್ತಾನೆ! ಆಗ ಕುಲಾಚಾರಕ್ಕನುಗುಣವಾಗಿ ಚಂಡಿಕಾಲಯಕ್ಕೆ ಹೋಗಲಾಗುವುದಿಲ್ಲವಲ್ಲ ಎಂದು ಚಿಂತಿಸುತ್ತಿರುವಾಗ ಮಂತ್ರಿಯ ಮಗ ಮದನ "ತಾನೇ ಅಲ್ಲಿಗೆ ಹೋಗಿ ಪೂಜೆಯ ಕೆಲಸ ನೋಡಿಕೊಳ್ಳುವೆ ನೀನು ರಾಜನಲ್ಲಿಗೆ ಹೋಗು!” ಎಂದು ಕಳಿಸುತ್ತಾನೆ. ಕಟುಕರು ಮದನನ್ನು ಸಾಯಿಸುತ್ತಾರೆ. ಮಂತ್ರಿಗೆ ಗೊತ್ತಾಗಿ ಅವನು ಆ ಚಂಡಿಕಾಲಯದೆಡೆಗೆ ಹೋಗುತ್ತಾನೆ.
ಪರಿವ ಪೂಮಾಲೆಗಳ ಬಣ್ಣಗೂಳ್ಗಳ ಬಲಿಯ
ಮೊರದ ಪಳಗೊಳ್ಳಿಗಳ ಭಸ್ಮದೊಡೆದೋಡುಗಳ
ಮುರಿದ ಗೂಡಂಗಳ ಕಳಲ್ದ ಶಿಬಿಕೆಗಳ ಚಿತೆಯೊಳ್ ಬೇವ ಕುಣಪಂಗಳ
ತುರುಗಿದೆಲುವಿನ ಜಂಬಿಕಾವಳಿಯ ಗೂಗೆಗಳ
ಬಿರುದನಿಯ ಭೂತಬೇತಾಳ ಸಂಕುಲದಡಗಿ
ನರಕೆಗಳ ಸುಡುಗಾಡೊಳಾ ಮಂತ್ರಿ ಚಂಡಿಕಾಲಯದೆಡೆಗೆ ಬರುತಿರ್ದನು||
ಹರಿಯುವ ಹೂಮಾಲೆಗಳ, ಬಣ್ಣಬಣ್ಣದ ಅನ್ನವನ್ನು ಬಲಿಯಾಗಿ ಇಟ್ಟ, ಮೊರ ಕೊಳ್ಳಿ ಭಸ್ಮದ ಮಡಿಕೆಯ ಒಡೆದ ಚೂರುಗಳು, ಮುರಿದ ಗೂಡಿನ ಚಟ್ಟದ, ಚಿತೆಯಲ್ಲಿ ಬೇಯುತ್ತಿರುವ ಹೆಣಗಳ ತುರುಗಿದ ಮೂಳೆಗಳ, ಗೂಗೆ ಕಾಗೆಗಳಿಂದ ತುಂಬಿದ ಭೂತಬೇತಾಳಗಳ ಬಿರುದನಿಯಿಂದ ಹೆದರಿಕೆಯಾಗುತ್ತಿರುವಂತಹ ಸುಡುಗಾಡಿನ ಒಳಗೆ ಆ ಮಂತ್ರಿ ಚಮಡಿಕಾಲಯಕ್ಕೆ ಬರುತ್ತಿದ್ದ. ಅಲ್ಲಿ ಮಗನ ಮೃತಕಳೇವರವನ್ನು ಕಂಡು -
ಕಂಬನಿಗಳರುಣಾಂಬುವಂ ತೊಳೆಯೆ ಮುಂಡಾಡಿ
ಹಂಬಲಿಸಿ ಹಲುಬಿದಂ ಮರುಗಿ ತನ್ನಿಂದಳಿದ
ನೆಂಬಳಲ್ ಮಿಗೆ ಮಂತ್ರಿ ಸೈರಿಸದೆ ಕೆಲಬಲದ ಕಂಬಂಗಳಂ ಪಾಯಲು
ಕುಂಬಳದ ಕಾಯಂತೆ ಚಿಪ್ಪಾಗಿ ನಿಜಮಸ್ತ
ಕಂ ಬಿರಿದು ಬಿದ್ದನುರ್ವಿಗೆ ಪೋದುದಸು ಕಾಯ
ದಿಂ ಬಳಿಕ ನಂದಿದ ಸೊಡರ್ಗಳೆನೆ ಮೃತರಾಗಿ ಸುತತಾತರಿರುತಿರ್ದರು||
ಕಣ್ಣೀರಿನಿಂದಲೇ ಅವನ ರಕ್ತವನ್ನು ತೊಳೆಯುತ್ತಿದ್ದ, ಅಪ್ಪಿಕೊಂಡು ಹಂಬಲಿಸು ಹಲುಬುತ್ತಿದ್ದ. ತನ್ನಿಂದಲೇ ಇವನು ಸತ್ತ ಎಂದು ಅಳಲುತ್ತಿದ್ದ. ಕಡೆಗೆ ಸಮೀಪದಲ್ಲಿದ್ದ ಕಂಬಕ್ಕೆ ಹಾಯ್ದು ತಲೆಯನ್ನು ಚಚ್ಚಿಕೊಂಡ. ತಲೆ ಕುಂಬಳದ ಕಾಯಿಯಂತೆ ಹೋಳಾಗಿ ಜೀವ ಹೋದ ಶರೀರದವನಾಗಿ ಬಿದ್ದ. ನಂದಿದ ದೀಪಗಳಂತೆ ಮಗ ಮತ್ತು ತಂದೆ ಅಲ್ಲಿ ಬಿದ್ದಿದ್ದರು.
ಆಮೇಲೆ ಅಲ್ಲಿಗೆ ಬಂದ ಚಂದ್ರಹಾಸ ಇಔರ ಮೃತ್ಯುವನ್ನು ಕಂಡು ದೇವಿಯನ್ನು ಸ್ತುತಿಸಿ ಅವರನ್ನು ಮತ್ತೆ ಬದುಕಿಸಿಕೊಂಡ. ಚಂದ್ರಹಾಸನೇ ರಾಜನಾಗಿ ಸುಖವಾಗಿದ್ದ. ಹೀಗೇ ಬೇರೆಯವರಿಗೆ ಕೆಟ್ಟದ್ದನ್ನು ಬಯಸಿದ ದುಷ್ಟಬುದ್ಧಿಗೆ ಬಂದ ಪರಿಸ್ಥಿತಿಯ ಕಥೆ, ದೇವರ ಲೀಲೆ ಎಲ್ಲಿ ಹೇಗೆ ನಡೆಯುತ್ತದೆ ಎಂಬುದು, ಹಾಗೆಯೇ ಯಾವುದು ನಡೆಯಬೇಕು ಎಂದು ದೈವನಿಶ್ಚಯವಾಗಿರುತ್ತದೆಯೋ ಅದನ್ನು ತಪ್ಪಿಸಲು ಮನುಷ್ಯಯತ್ನಕ್ಕೆ ಸಾಧ್ಯವಿಲ್ಲ ಎಂಬುದನ್ನು ಹಾಗೆಯೇ ಚಂದ್ರಹಾಸನ ಭಕ್ತಿ ಅವನನ್ನು ಹೇಗೆ ಕಾಪಾಡಿತು ಎಂದೆಲ್ಲವನ್ನೂ ಲಕ್ಷ್ಮೀಶಕವಿ ಈ ಕಥಾನಕದಲ್ಲಿ ವಿಸ್ತರಿಸಿದ್ದಾನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ