Powered By Blogger

ಮಂಗಳವಾರ, ಏಪ್ರಿಲ್ 21, 2020

ಕಾವ್ಯಾವಲೋಕನ-೬ ಕಾವ್ಯದೋಷಗಳು



ಶ್ರೀ ತಾಳ್ತಜೆ ಕೇಶವ ಭಟ್ಟರ "ವಾಗ್ಭೂಷಣ" ಎಂಬ ಪುಸ್ತಕದಲ್ಲಿ (ಪ್ರಕಟಣೆ-ಕನ್ನಡ ಪುಸ್ತಕ ಪ್ರಾಧಿಕಾರ-೨೦೦೩) "ಕನ್ನಡದಲ್ಲಿ ಕಾವ್ಯದೋಷಗಳು" ಎಂಬ ಒಂದು ಲೇಖನವಿದೆ. ಅದರಲ್ಲಿ ತುಂಬ ಚೆನ್ನಾಗಿ ಕಾವ್ಯದೋಷಗಳನ್ನು ವಿಮರ್ಶಿಸಿದ್ದಾರೆ. ದೋಷಗಳು ಸಹಜ. ಯಾರೂ ದೋಷಗಳಿಗೆ ಅತೀತರಾಗಲು ಸಾಧ್ಯವೇ ಇಲ್ಲ ಎನ್ನಬಹುದು. ಆದರೆ ದೋಷಗಳನ್ನು ಕಳೆದುಕೊಂಡಷ್ಟು ಉತ್ತಮವಾದ ಕಾವ್ಯ ಸೃಷ್ಟಿಯಾಗುವುದು ಸಾಧ್ಯ! ಶ್ರೀಯುತ ಕೇಶವ ಭಟ್ಟರು ಹೇಳುವಂತೆ ಸಾಹಿತ್ಯ ಎನ್ನುವುದು ಮಾನವನಲ್ಲಿ ಮಾನವತೆಯನ್ನು ನೆಲೆಗೊಳಿಸುವ ಕಲಾತ್ಮಕವಾದ ಸಾಧನ. ಇಂತಹ ಮಾನವತೆಗೆ ಕಾರಣವಾಗಬಲ್ಲ ಸಾಧನವನ್ನು ಪರಿಪೂರ್ಣತೆಗೆ ಕೊಂಡೊಯ್ಯಬೇಕಾದರೆ ಅದರಲ್ಲಿ ದೋಷಗಳನ್ನು ಕಡಿಮೆ ಮಾಡಬೇಕಲ್ಲ! ಹಾಗಾಗಿ ಆ ದೋಷಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕೆಲವಷ್ಟನ್ನು ಕೇಶವ ಭಟ್ಟರ ಲೇಖನಕ್ಕೆ ಪೂರಕವಾಗಿ ಇಲ್ಲಿ ವಿಸ್ತರಿಸೋಣ.
ಹಿಂದಿನ ಕಾಲದಲ್ಲಿ ಕಾವ್ಯಗಳನ್ನು ತಿದ್ದಿಸಿಕೊಳ್ಳುವ ಅಭ್ಯಾಸವಿತ್ತು. ಕವಿಚಕ್ರವರ್ತಿ ಎಂಬ ಹೆಸರನ್ನು ಪಡೆದ ರನ್ನನೂ ಕೂಡ ತನ್ನ ಕಾವ್ಯವನ್ನು ತಿದ್ದಿಸಿದ್ದಾಗಿ ಬರೆಯುತ್ತಾನೆ. ಆಂಡಯ್ಯ ದುರ್ಗಸಿಂಹ ರುದ್ರಭಟ್ಟರೇ ಮೊದಲಾದ ಕವಿಗಳೂ ತಮ್ಮ ಕಾವ್ಯಗಳನ್ನು ತಿದ್ದಿಸಿದ್ದನ್ನು ಬರೆಯುತ್ತಾರೆ. ತಮ್ಮ ಶಕ್ತಿಯನ್ನು ಮೀರಿ ಯಾರೂ ಬರೆಯಲು ಸಾಧ್ಯವಿಲ್ಲ. ವೃತ್ತ-ಕಂದಗಳನ್ನು ಬರೆಯುವಾಗಳಂತೂ ಅದಕ್ಕೆ ಬೇಕಾದ ಭಾಷಾಪರಿಪಾಕ ಹಾಗೂ ಶುದ್ಧಿ ವ್ಯಾಕರಣಪರಿಶೀಲಿತತೆ ಕೋಶಗಳ ಮೇಲಿನ ಹಿಡಿತ ಇತ್ಯಾದಿಗಳೆಲ್ಲ ತುಂಬಾ ಅವಶ್ಯಕ. ಹಾಗಿದ್ದರೂ ಅರಿವಿಗೆ ನಿಲುಕದ ದೋಷ ಖಂಡಿತವಾಗಿ ಇದ್ದೇ ಇರುತ್ತದೆ. ಹಾಗೆಂದು ಬರೆಯದೇ ಇರಬೇಕೆಂದಲ್ಲ! ಕವಿಯಾದವನಿಗೆ ಬರೆಯದೇ ಇರಲು ಸಾಧ್ಯವಿಲ್ಲ! ಕೆಲವರು ಸ್ವಭಾವತಃ ಕವಿಗಳಾಗಿರುತ್ತಾರೆ. ಆ ಕಲ್ಪನಾನೈಪುಣ್ಯವಿದ್ದರೂ ಕವಿತ್ವದಲ್ಲಿ ದೋಷವಿರಲೂ ಸಾಧ್ಯವಿದೆ. ಆದರೆ ಪ್ರತಿಭಾನ್ವಿತರಾದವರಿಗೆ ಪ್ರತಿಭೆಯಿಂದ ದೋಷವನ್ನು ಮರೆಮಾಚುವ ಶಕ್ತಿಯೂ ಇದೆ ಎಂಬುದು ನಮಗೆ ಅವರ ಕಾವ್ಯಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ತಿಳಿಯುತ್ತದೆ. ಅದೆಂತೇ ಇರಲಿ. ದೋಷಗಳ ಕಿಲುಬು ಹಿಡಿದ ಕಾವ್ಯ ಎಂಬ ಪಾತ್ರೆಯನ್ನು ತಿದ್ದುವಿಕೆಯೆಂಬ ಹುಳಿಯಲ್ಲಿ ತೊಳೆದಾಗ ದೋಷಗಳನ್ನು ಕಳೆದುಕೊಳ್ಳಲು ಸಾಧ್ಯವಿದೆ. ಆದರೆ ಇಲ್ಲಿ ತಿದ್ದುವ ವ್ಯಕ್ತಿಗಳಿಗೆ ಮಾತ್ಸರ್ಯ ಇರಬಾರದು. ದೋಷವನ್ನು ಕಂಡು ತಿದ್ದುವ ಸೌಜನ್ಯವಿರಬೇಕು. ಕಾವ್ಯಪ್ರಕಾಶವನ್ನು ಬರೆದ ಮಮ್ಮಟನ ಬಳಿ ಶ್ರೀಹರ್ಷ ತನ್ನ ನೈಷಧಚರಿತಕಾವ್ಯವನ್ನು ತೆಗೆದುಕೊಂಡು ಹೋದಾಗ ಮಮ್ಮಟ "ಈ ಕಾವ್ಯ ಮೊದಲೇ ಸಿಕ್ಕಿದ್ದರೆ ಕಾವ್ಯಗಳ ದೋಷಗಳಿಗೆಲ್ಲ ಒಟ್ಟಿಗೇ ಉದಾಹರಣೆಗಳು ಸಿಗುತ್ತಿದ್ದವು" ಎಂದನಂತೆ! ಅದೆಂತೇ ಇರಲಿ ತಿದ್ದುವಿಕೆ ಎಂಬುದಂತೂ ಬೇಕಾದದ್ದೇ ಆಗಿದೆ. ಪ್ರಸ್ತುತ ಕೇಶವಭಟ್ಟರ ಲೇಖನದಲ್ಲಿ, ಅವರೂ ಕೂಡ ಇದೇ ಮಾತನ್ನೇ ಎತ್ತಿ ಹಿಡಿದಿದ್ದಾರೆ.
. ಛಂದಸ್ಸು ಮತ್ತು ಅಲಂಕಾರಗಳು:-
ಕಾವ್ಯಕ್ಕೆ ಛಂದಸ್ಸು ಅಲಂಕಾರಗಳೇ ಮುಖ್ಯವೇ? ಛಂದಸ್ಸು ಅಲಂಕಾರ ಇವುಗಳ ಉಪಯೋಗವೇನು ಎಂದು ಹಲವರು ತಿರಸ್ಕರಿಸಬಹುದು! ಸರಿಯೇ! ನವ್ಯಕವಿತೆಗಳು- ಹನಿಗವನಗಳು- ಚುಟುಕುಗಳು ಇತ್ಯಾದಿಗಳೇ ಹೆಚ್ಚಾಗಿರುವ ಇಂದಿನ ಕಾಲದಲ್ಲಿ ಕಂದವೃತ್ತಗಳನ್ನು ಉಲ್ಲೇಖಿಸುವುದೇ ಅಪರಾಧವೆಂಬಂತೆ ನೋಡಬಹುದು ನವ್ಯಕವಿಗಳು! ಬೆಳೆಯುತ್ತಿರುವ ಭಾಷೆಯೊಂದಕ್ಕೆ, ಬಳಕೆಯಲ್ಲಿರುವ ಭಾಷೆಯೊಂದಕ್ಕೆ ಇದೇ ಕೊನೆಯ ಹಂತದ ವ್ಯಾಕರಣ ಎಂದಾಗಲೀ ಇದೇ ಕೊನೆಯ ಪರಿಪೂರ್ಣ ಸ್ಥಿತಿ ಎಂದಾಗಲೀ ಹೇಳಲು ಸಾಧ್ಯವಿಲ್ಲ! ಏಕೆಂದರೆ ಪ್ರತಿದಿನವೂ ಹೊಸ ಶಬ್ದಗಳು ಸೇರ್ಪಡೆಯಾಗುತ್ತಲೇ ಇರುತ್ತವೆ! ಶಬ್ಸಗಳಿಗೆ ಭಿನ್ನವಾದ ಅರ್ಥಗಳು ರೂಢಿಗೆ ಬರುತ್ತಲೇ ಇರುತ್ತವೆ. ಹಾಗಾಗಿ ಛಂದಸ್ಸಿನ ವಿಷಯದಲ್ಲೂ ಇದನ್ನು ಒಪ್ಪಬಹುದು. ವರ್ಣವೃತ್ತಗಳು ಕಂದಪದ್ಯಗಳು ಎಲ್ಲವೂ ಹಳಗನ್ನಡದಂತಹ ಬಿಗಿಯಾದ ಭಾಷೆಯಿದ್ದರೆ ಪದ್ಯಗಳನ್ನು ಬರೆಯಲು ಅನುಕೂಲವಾಗಬಹುದು. ನಡುಗನ್ನಡಕ್ಕೆ ಷಟ್ಪದಿಗಳಂತಹವೂ ಚೌಪದಿಗಳಂತಹ ಛಂದಸ್ಸೂ ಸಾಂಗತ್ಯವೇ ಮೊದಲಾದ ದೇಶೀಚ್ಛಂದಸ್ಸುಗಳೂ ಒಗ್ಗುತ್ತವೆ. ಹೊಸಗನ್ನಡಕ್ಕೆ ಯಾವುದು ಸರಿ ಎಂದು ಯೋಚಿಸಿದರೆ ಇಲ್ಲಿ ಕೂಡ ಕಾಣುವುದು ಮಾತ್ರಾವೃತ್ತಗಳು ಚೌಪದಿಗಳು ಸಾಂಗತ್ಯವೇ ಮೊದಲಾದವು. ಕಾಮನಬಿಲ್ಲಿನ ಒಂದೇ ಕಲ್ಪನೆಯನ್ನು ನಾಲ್ಕು ಬೇರೆಯದೇ ಆದ ಭಾಷಾಪರಿಪಾಕಗಳಲ್ಲಿ ಛಂದಸ್ಸಿಲ್ಲದೆಯೇ ಹಾಗೂ ಅದಕ್ಕೆ ತಕ್ಕ ಛಂದಸ್ಸುಗಳಲ್ಲಿ ಗಮನಿಸುವುದಾದರೆ-
.ನವ್ಯಕವಿತೆಯ ಶೈಲಿಯಲ್ಲಿ-
ಭೂಮಿ ಹೆಣ್ಣಾಗಿ
ತೊಡಲು ಹೊಸ ಹಸಿರಿನ ಸೀರೆ
ಆಗಸ ಎಂಬ ಗಂಡ
ಒಲವಿಂದ ನೀಡಿದ
ಮಳೆಬಿಲ್ಲಿನ ಹಾರ!

. ಹಳಗನ್ನಡದಲ್ಲಿ- ಪಂಪರನ್ನ ಮೊದಲಾದವರ ಭಾಷೆಯ ಹದದಲ್ಲಿ-
ಇಳೆ ಧರಿಸಲ್ಕೀ ಪಸುರ್ಪಿನ
ಪೊಳೆಯುತ್ತಿರ್ಪೊಳ್ಪ ಶಾಟಿಕೆಯನಾ ಸೊಬಗಂ
ಬಳಿವಂದ ಬಾನೆಱೆಯನೇ
ಮೞೆವಿಲ್ಲಂ ಹಾರವಾಗಿ ತೋಷದೊಳಿತ್ತಂ ||

.ನಡುಗನ್ನಡ- ಕುಮಾರವ್ಯಾಸನ ಕಾವ್ಯದ ಭಾಷೆಯ ಪಾಕದಲ್ಲಿ-
ಧರಣಿಕನ್ಯೆಯು ಸೊಬಗ ಮಳೆಯಲಿ
ತರುಣಿಯಂದದೆ ಹಸಿರು ಸೀರೆಯ-
ನರರೆ! ತೊಟ್ಟಿರಲದನು ನೋಡುತ ಮುದದೊಳೊಲವಿಂದ
ಭರದೊಳಾಗಸವೆಂಬ ರಮಣನೆ
ಪರಮಕಾಂತಿಯೊಳೆಸೆಯುತಿಹ ಸುಂ-
ದರವಿಲಾಸದ ಹಾರವೆನೆ ಮಳೆಬಿಲ್ಲನಿತ್ತನಲಾ||

. ಹೊಸಗನ್ನಡ- ಇಂದಿನ ಭಾಷೆಯ ಹದದಲ್ಲಿ -
ಭೂಮಿಯೇ ಹೆಣ್ಣಾಗಿ ಹಸಿರುಸೀರೆಯನುಡಲು
ಬಾನೆಂಬ ಗಂಡನವಳನ್ನು ನೋಡಿ
ಸಂತೋಷದಿಂದ ನೀಡಿದನೊಂದು ಹಾರವನು
ಮಳೆಬಿಲ್ಲ ರೂಪದಲಿ ಪ್ರೀತಿಯಿಂದ ||
ಈ ಮೇಲಿನ ನಾಲ್ಕನ್ನೂ ಗಮನಿಸಿದರೆ, ಎರಡನೆಯ ಪದ್ಯ ಬಿಗಿಯಾದ ಹಳಗನ್ನಡದ ಕಂದಪದ್ಯ. ಅದನ್ನು ಅರ್ಥಯಿಸಿಕೊಳ್ಳಲು ಹಳಗನ್ನಡದ ವ್ಯಾಕರಣದ ಪರಿಚಯವಿರಬೇಕು. ಅಲ್ಲದೇ ಅಲ್ಲಿ ಬಳಸಲ್ಪಟ್ಟ ಕೆಲವು ಕಠಿನಶಬ್ದಗಳ ಅರ್ಥವೂ ಗೊತ್ತಿರಬೇಕು. ಉದಾಹರಣೆಗೆ- ಎಱೆಯ- ಗಂಡ ಇತ್ಯಾದಿ.
ಇನ್ನು ಮೂರನೆಯದು ನಡುಗನ್ನಡ ಶೈಲಿಯ ಭಾಮಿನಿ ಷಟ್ಪದಿಯ ಪದ್ಯ. ಇದರಲ್ಲಿ ಅಷ್ಟು ಕಾಠಿನ್ಯವಿಲ್ಲ. ಅರ್ಥ ಮಾಡಿಕೊಳ್ಳಲೂ ಸುಲಭವಿದೆ. ಒಂದಿಷ್ಟು ಶಬ್ದಗಳು ಕೇವಲ ಪಾದಪೂರಣಕ್ಕಾಗಿ ಬಂದಿದೆಯಾದರೂ ಅರ್ಥಕ್ಕೇನೂ ಬಾಧಕವಲ್ಲ.
ಇನ್ನುಳಿದ ಮೊದಲನೇಯ ಪದ್ಯವನ್ನು ಇಂದಿನ ನವ್ಯವೇ ಮೊದಲಾದ ಛಂದಸ್ಸಿಲ್ಲದ ಕವಿತೆಗಳ ಸಾಲಿಗೆ ಸೇರಿಸಬಹುದು. ಅದಕ್ಕೆ ಸಮಾನವಾದ ಭಾಷಾಪಾಕವುಳ್ಳ ನಾಲ್ಕನೆಯ ಪದ್ಯ- ಪ್ರಾಸವಿಲ್ಲದ ಪಂಚಮಾತ್ರಾಚೌಪದಿಯಾಗಿದೆ. ಅದರಲ್ಲಿ ಇರುವ ಗೇಯತೆಯ ಗುಣ ಮೊದಲ ಪದ್ಯದಲ್ಲಿ ಇಲ್ಲ. ಸರಳವಾಗಿ ಹಾಡಿಕೊಳ್ಳಬಹುದಾದ ಈ ಆಕರ್ಷಣೆ ಮೊದಲನೆಯದಕ್ಕೆ ಬರಲು ಸಾಧ್ಯವಿಲ್ಲ. ಕಾರಣ ಇದರಲ್ಲಿ ಇರುವ ಛಂದಸ್ಸು. ಛಂದಸ್ಸು ಎಂಬ ಶಬ್ದವೇ ಛದಿ-ಆಹ್ಲಾದೇ ಎಂಬ ಧಾತುವಿನಿಂದ ಬಂದದ್ದು. ಹಾಗಾಗಿ ಆಹ್ಲಾದವನ್ನು ಕೊಡುವ ಗುಣ ಯಾವುದರಿಂದ ಪದ್ಯಕ್ಕೆ ಉಂಟಾಗುತ್ತದೆಯೋ ಅದೇ ಛಂದಸ್ಸು ಎಂದು ಸ್ಪಷ್ಟವಾಗುತ್ತದೆ. ಛಂದಸ್ಸನ್ನು ಬಿಟ್ಟು ಬರೆಯುವುದರಿಂದ ಕವಿತೆಗಳು ಇಂಪನ್ನು ಕಳೆದುಕೊಳ್ಳುತ್ತವೆ. ಗೇಯತೆಯನ್ನು ಕಳೆದುಕೊಳ್ಳುತ್ತವೆ. ಆಹ್ಲಾದಕತ್ವವನ್ನು ಕಳೆದುಕೊಳ್ಳುತ್ತವೆ. ಛಂದಸ್ಸಿನಲ್ಲಿರುವ ಕವಿತೆ ಸುಲಭವಾಗಿ ನೆನಪಿನಲ್ಲುಳಿಯುತ್ತದೆ. ಆ ಕಾರಣದಿಂದಲೇ "ಕವನ ನೆನಪಿಗೆ ಸುಲಭ ಮಂಕುತಿಮ್ಮ" ಎಂದು ಡಿವಿಜಿಯವರು ಹೇಳಿರುವುದು. ನಮ್ಮ ಪರಂಪರೆಯ ವೇದಗಳು ಮತ್ತು ಎಷ್ಟೋ ಮಂತ್ರಸ್ತೋತ್ರಗಳೆಲ್ಲ ಕಂಠಪಾಠದ ಮೂಲಕ ಇಂದಿಗೂ ಉಳಿದುಕೊಂಡು ಬಂದಿರುವುದು ಈ ಛಂದಸ್ಸಿರುವುದರಿಂದ ಎಂಬುದೂ ಲಕ್ಷ್ಯವನ್ನು ಕೊಡಬೇಕಾದ ವಿಚಾರವೇ ಆಗಿದೆ. ಛಂದಸ್ಸು ಎಂದ ಕೂಡಲೇ ಮೂಗು ಮುರಿಯುವ ಎಷ್ಟೋ ಜನರು ಗಮನಿಸದಿರುವುದು ಅವರು ಯಾರನ್ನು ಆದರ್ಶವೆಂದು ಭಾವಿಸಿರುತ್ತಾರೋ ಅಂತಹ ಅನೇಕ ಕವಿಗಳು- ಕುವೆಂಪು ಬೇಂದ್ರೆ ಪುತಿನ ಕೆಎಸ್ ನರಸಿಂಹಸ್ವಾಮಿ ಮೊದಲಾದವರೆಲ್ಲ ಛಂದೋಬದ್ಧವಾಗೇ ಬರೆಯುತ್ತಿದ್ದರು ಎಂಬುದು. ಅಡಿಗರು ಮೊದಲೆಲ್ಲ ಹಲವು ಷಟ್ಪದಿಗಳನ್ನು ಬರೆದಿರುವುದೂ ಸಿಗುತ್ತದೆ. ಇನ್ನುಳಿದಂತೆ ಡಿವಿಜಿ, ಗೋವಿಂದ ಪೈ, ಮೊದಲಾದ ಹಲವರ ಪದ್ಯಗಳಂತೂ ಛಂದೋಬದ್ಧವಾಗಿಯೇ ಇರುತ್ತಿದ್ದವು. ಹೆಚ್ಚೇಕೆ- ರಾಜರತ್ನಂ ಅವರ ಹೆಂಡ್ಕುಡ್ಕ ರತ್ನನ ಪದಗಳೂ, ನಾಗನ ಪದಗಳೂ ಕೂಡ ಒಂದು ವಿಶಿಷ್ಟ ಬಗೆಯ ಅಂಶಗಣಘಟಿತವಾದ ದೇಶೀಚ್ಛಂದಸ್ಸಿನಲ್ಲೇ ಇದೆ. ಹೀಗಿರುವ ಕಾರಣಕ್ಕೇ ಅವೆಲ್ಲ ಇಂದಿಗೂ ಆಸ್ವಾದನೀಯವಾಗಿ ಆಹ್ಲಾದಕರವಾಗಿ ಇವೆಯೆಂಬುದು ನಿಸ್ಸಂಶಯ. ಸಾಮಾನ್ಯ ಜನರ ಮನಸ್ಸಿನಲ್ಲಿ ಛಂದಸ್ಸಿರುವ ಕವಿತೆಗಳು ನೆನಪಿರುವಷ್ಟು ಛಂದಸ್ಸಿಲ್ಲದ ಕವಿತೆಗಳು ನೆನಪಿರುವುದಿಲ್ಲ ಎಂಬ ಕಾರಣಕ್ಕೇ ಛಂದಸ್ಸು ನೈಸರ್ಗಿಕ ಎಂದು ಸ್ಪಷ್ಟ. ಇನ್ನೊಬ್ಬರ ಮಿತ್ರರ ವಾದ ಇದಕ್ಕೆ ಇನ್ನೂ ಪುಷ್ಟಿ ಕೊಡುತ್ತದೆ. ಅವರ ಉದಾಹರಣೆ- ಮುಷ್ಕರವೊಂದರಲ್ಲಿ ಘೋಷಣೆಯನ್ನು ಕೂಗುತ್ತಿದ್ದಾರೆ "ಬೇಕೇ ಬೇಕುs ನ್ಯಾಯs ಬೇಕುs" ಎಂಬಲ್ಲಿ ನಾಲ್ಕು ಮಾತ್ರೆಯ ನಾಲ್ಕು ಗಣಗಳು ಕಾಣುತ್ತವೆ ಅಥವಾ ವಿದ್ಯುನ್ಮಾಲಾ ಎಂಬ ಛಂದಸ್ಸಿನ ಪಾದವೊಂದು ಕಾಣುತ್ತದೆ. ಹೀಗೇ ಛಂದಸ್ಸು ಸಹಜವಾದ ಅಭಿವ್ಯಕ್ತಿಯೇ ಆಗಿದೆ. ಅಲ್ಲದೇ ಒಬ್ಬ ವ್ಯಕ್ತಿ ಛಂದೋಬದ್ಧವಾದ ಹಾಡನ್ನು ಹಾಡಿಕೊಂಡು ಹೋಗ್ತಾ ಇದ್ದರೆ ಎಲ್ಲರೂ "ಏನೋ ಭಾರೀ ಖುಷಿಯಲ್ಲಿರಬೇಕು" ಎಂದುಕೊಳ್ಳುತ್ತಾರೆ. ಅದೇ ಛಂದಸ್ಸಿನಲ್ಲದ ಪದ್ಯಾಭಾಸವಾದ ಗದ್ಯದ ಸಾಲುಗಳನ್ನು ಹೇಳುತ್ತ ಹೋದರೆ "ಪಾಪ! ಹುಚ್ಚನಿರಬೇಕು" ಎಂದು ಹೇಳುತ್ತಾರೆ.
ಹೊಸಗನ್ನಡಕ್ಕೆ ಅನುಕೂಲವಾದ ಛಂದಸ್ಸನ್ನು ಬಳಸಿ ಜನಪ್ರಿಯವಾದ ಪದ್ಯಗಳನ್ನು ಇನ್ನೂ ಉದಾಹರಣೆಗಳ ಮೂಲಕ ಹೇಳಬೇಕೆಂದರೆ ಉತ್ತಮವಾದ ಚಲನಚಿತ್ರಗೀತೆಗಳು! ಕೆಲವು ಪ್ರಸಿದ್ಧವಾದ ಗೀತೆಗಳನ್ನೇ ಅವಲೋಕಿಸಿದರೆ ಸ್ಪಷ್ಟವಾದೀತು. “ಆಡಿಸಿ ನೋಡುs ಬೀಳಿಸಿ ನೋಡುs ಉರುಳಿ ಹೋಗದು" ಎಂಬಲ್ಲಿ "ನಾಲ್ಕು ಮಾತ್ರೆಗಳ ನಾಲ್ಕು ಗಣ ಮೂರು ಮಾತ್ರೆಯ ಎರಡು ಗಣಗಳು ನಿಯಮಿತವಾಗಿ ಬೆರೆತುಕೊಂಡಿವೆ. ಹೀಗೆ ಆ ಪದ್ಯದ ಮುಂದಿನ ಆವೃತ್ತಿಯೂ ಇದೆ. ಇಲ್ಲೆಲ್ಲ ಅದಕ್ಕಿರುವ ಗೇಯಗುಣವೇ ಅದನ್ನು ಗಟ್ಟಿಯಾಗಿ ಉಳಿಸಲು ಕಾರಣ. ಇತ್ತೀಚಿನ ಹಲವು ಸಿನಿಮಾಗಳಲ್ಲಿ ಬೇಡದ ಅಕ್ಷರವನ್ನು ಎಳೆದು ಹಿಗ್ಗಿಸಿ ಕುಗ್ಗಿಸಿ ಹಾಡನ್ನು ಬರೆಯುವ ಕಾರಣ ಅಷ್ಟು ಸ್ಪಷ್ಟವಾಗಿ ಛಂದಸ್ಸಿನ ಗತಿ ತೋರುವುದಿಲ್ಲ.
ಛಂದಸ್ಸಿನ ಬಳಿಕ ನವ್ಯರು ಮೂಗು ಮುರಿಯುವುದು ಅಲಂಕಾರಗಳ ಬಗ್ಗೆ- ದಿಟವೇ! ಅಲಂಕಾರವೆಂಬುದು ನಿಜಾರ್ಥದಿಂದ ಕೂಡ ಕಾವ್ಯದ ಸೌಂದರ್ಯವನ್ನು ಹೆಚ್ಚಿಸುವ ಅಲಂಕಾರವೇ ಆಗಿದೆ. ಆದರೆ ಹಲವು ಬಾರಿ ಅಲಂಕಾರವಿಲ್ಲದೆಯೂ ಹೇಗೆ ಸುಂದರವಾಗಿ ಕಾಣಲು ಸಾಧ್ಯವಿದೆಯೋ ಹಾಗೆ ನಿರಲಂಕೃತವಾದ ಪದ್ಯವೂ ಚೆನ್ನಾಗಿಯೇ ಇರುವ ಸಾಧ್ಯತೆ ಇದೆ. ಆದರೆ ಆಲಂಕಾರಿಕರು ಯಾವುದೇ ವಿಶೇಷ ಅಲಂಕಾರವಿಲ್ಲದಿದ್ದರೂ ಕೇವಲ ವಸ್ತುಸ್ವಭಾವವನ್ನು ಮಾತ್ರ ವರ್ಣಿಸುತ್ತದೆ ಎಂದಾದರೆ ಅದಕ್ಕೂ ಸ್ವಭಾವೋಕ್ತಿ ಎಂಬ ಒಂದು ಅಲಂಕಾರತ್ವವನ್ನು ಕೊಟ್ಟಿದ್ದಾರೆ. ಆ ಸ್ವಭಾವವನ್ನು ಬಣ್ಣಿಸುವಾಗಳೂ ಕೂಡ ಯುಕ್ತಪದವಿಲ್ಲದೇ ಸರಿಯಾಗಿ ಚಿತ್ರಿಸದಿದ್ದರೆ ಅದೂ ನಿರಲಂಕೃತಿಯೇ ಆಗುತ್ತದೆ.
ಪ್ರಾಸವೆಂಬುದೂ ಕೂಡ ಒಂದು ಬಗೆಯ ಅಲಂಕಾರದ ಭಾಗವೇ ಆಗಿದೆ. ಆದರೂ ಪ್ರಾಸವನ್ನು ಬಿಟ್ಟ ಒಳ್ಳೆಯ ಕಲ್ಪನೆಯಿಂದ ಉಳಿದ ಅಲಂಕಾರಗಳಿಂದ ಕೂಡಿದ ಸೊಗಸಾದ ಎಷ್ಟೋ ಕಾವ್ಯಗಳಿವೆ. ಉದಾ- ಶ್ರೀರಾಮಾಯಣದರ್ಶನಂ, ವೈಶಾಖಿ ಗೊಲ್ಗೋಥಾ ಮೊದಲಾದವು.

. ಶಬ್ದದೋಷಗಳು ಸಂಧಿದೋಷಗಳು-
ಕಾವ್ಯದಲ್ಲಿ ಅಪಶಬ್ದಪ್ರಯೋಗವೆಂಬುದು ಒಂದು ದೋಷ. ಶುದ್ಧವಾದ ಶಬ್ದ ಬೇರೆಯದೇ ಇರುತ್ತದೆ, ವ್ಯಾಕರಣ ರೀತ್ಯಾ ಸಾಧುವಲ್ಲದ ಪ್ರಯೋಗಗಳನ್ನು ಮಾಡುವುದು ಕಾವ್ಯಗಳಲ್ಲಿ ದೋಷವಾಗುತ್ತದೆ. ಉದಾಹರಣೆಗೆ- ರೂಪಿಣಿ ಎಂಬುದು ಸಾಧುಶಬ್ದ. ಅದರ ಬದಲು "ರೂಪಸಿ" ಎಂಬ ಶಬ್ದವನ್ನು ಬಳಸುತ್ತಾರೆ. ಅದು ತಪ್ಪು. ಅಂತೆಯೇ ವಿವಿಧತೆ ಅಥವಾ ವೈವಿಧ್ಯ- ಅದರ ಬದಲಿಗೆ ವೈವಿಧ್ಯತೆ ಎಂಬುದನ್ನು ಬಳಸುವುದು ತಪ್ಪು. "ಕೂಲಂಕುಷ" ತಪ್ಪು, "ಕೂಲಂಕಷ" ಸರಿ. ಹಾಗೆಯೇ ಸಂಧಿದೋಷಗಳಿಗೆ ಉದಾಹರಣೆ- ಕೇಶವಭಟ್ಟರ ಲೇಖನದಲ್ಲಿ ಉಲ್ಲೇಖಿಸಿದಂತೆ ಅಶುದ್ಧರೂಪಗಳು (ಸರಿಯಾದ ರೂಪಗಳು ನಾಗದಂತಗಳಲ್ಲಿವೆ) - ಜಾತ್ಯಾತೀತ (ಜಾತ್ಯತೀತ) ಕೋಟ್ಯಾಧಿಪತಿ (ಕೋಟ್ಯಧಿಪತಿ) ಮನರಂಜನೆ (ಮನೋರಂಜನೆ) ಮನೋಸಾಕ್ಷಿ (ಮನಸ್ಸಾಕ್ಷಿ), ಹೇಳಲೆತ್ನಿಸು (ಹೇಳಲು ಯತ್ನಿಸು) ಕೈನಲ್ಲಿ (ಕೈಯಲ್ಲಿ ) ದುಃಖನೇ ಇಲ್ಲ (ದುಃಖವೇ ಇಲ್ಲ) ಇತ್ಯಾದಿಗಳು.
ವಿಸಂಧಿದೋಷ- ಮೇಲೆ ಉಲ್ಲೇಖಿಸಿದ ನಾಲ್ಕು ಪದ್ಯಗಳಲ್ಲಿ ಮೊದಲನೆಯದರಲ್ಲಿ ಗಮನಿಸಬಹುದು- “ಆಗಸ ಎಂಬ" ಎಂದು ಬಳಸಲ್ಪಟ್ಟಿದೆ. ಅದನ್ನು ನಿಯಮದಂತೆ "ಆಗಸವೆಂಬ" ಎಂದು ಸಂಧಿಯನ್ನಾಗಿಸಬೇಕು. ಹಾಗೆ ಮಾಡದಿದ್ದರೆ ವಿಸಂಧಿದೋಷವುಂಟಾಗುತ್ತದೆ. ಈ ದೋಷವನ್ನು ಇತ್ತೀಚೆಗೆ ತುಂಬಾ ಅವಗಣಿಸಿರುವ ಕಾರಣ ಇದು ಕಾವ್ಯದೋಷವೆಂಬ ಕಲ್ಪನೆಯೇ ಜನರ ಮನಸ್ಸಿನಿಂದ ಅಳಿಸಿ ಹೋಗುವ ಪರಿಸ್ಥಿತಿ ಒದಗಿದೆ ಎಂದು ಕೇಶವ ಭಟ್ಟರು ಅಭಿಪ್ರಾಯ ಪಡುತ್ತಾರೆ. ಅದು ಇಂದು ನಿಜವೂ ಆಗಿದೆ ಎಂಬುದು ಖೇದಕರ.

. ಅನ್ವಯದೋಷ-ಕಾರಕ(ವಿಭಕ್ತಿಪ್ರತ್ಯಯ)ದೋಷ:
ಇಂದಿನ ಕವಿತೆಗಳಲ್ಲಿ ಮುಖ್ಯವಾಗಿ ಕಾಣುವುದು ಈ ಅನ್ವಯದೋಷ. ವಾಕ್ಯವೊಂದು ಸ್ಪಷ್ಟವಾಗಿ ಅರ್ಥವಾಗಬೇಕೆಂದರೆ ಅದರಲ್ಲಿ ಕರ್ತೃಕರ್ಮಕ್ರಿಯಾಪದಗಳು ಸ್ಪಷ್ಟವಾಗಿ ವಿಭಕ್ತಿಪ್ರತ್ಯಯಗಳಿಂದ ಕೂಡಿರಬೇಕಾಗುತ್ತದೆ. ಅದಿಲ್ಲದಿದ್ದರೆ ಅದನ್ನು ಅನ್ವಯಿಸಿಕೊಳ್ಳುವುದು ಕಷ್ಟವಾಗುತ್ತದೆ. ಉದಾಹರಣೆಗೆ "ರಾವಣ ಕೊಂದ ರಾಮ ರಾಜ್ಯಕ್ಕೆ ಮರಳಿದ" ಎಂಬಲ್ಲಿ ರಾಮ ಮತ್ತು ರಾವಣ ಎರಡಕ್ಕೂ ವಿಭಕ್ತಿ ಪ್ರತ್ಯಯವಿಲ್ಲ. ಹೊಸಗನ್ನಡದ ಪ್ರಕಾರ ಎರಡನ್ನೂ ಪ್ರಥಮಾವಿಭಕ್ತಿಯೆಂದೇ ಪರಿಗಣಿಸಬಹುದು. "ರಾವಣನನ್ನು" ಎಂಬ ಸ್ವಿತೀಯಾ ವಿಭಕ್ತಿಯ ಪ್ರತ್ಯವಿಲ್ಲದಿದ್ದರೆ ರಾಮನನ್ನು ರಾವಣ ಕೊಂದನೋ ರಾವಣನನ್ನು ರಾಮ ಕೊಂದನೋ ಎಂಬುದೇ ಸ್ಪಷ್ಟವಾಗುವುದಿಲ್ಲ. ಕೆಲವೊಂದು ಕಡೆ ಕನ್ನಡದಲ್ಲಿ ವಿಭಕ್ತಿಪಲ್ಲಟಕ್ಕೆ ಅವಕಾಶವುಂಟು. ಉದಾ- “ನಾನು ನೀರು ಕುಡಿಯುವೆ" ಇಲ್ಲಿ "ನೀರನ್ನು" ಎಂಬುದಕ್ಕೆ ಬದಲಾಗಿ "ನೀರು" ಎಂದೇ ಬಳಸಿದ್ದರೂ ಅದು ತಪ್ಪಲ್ಲ. ಆದರೆ ಎಲ್ಲ ಸಂದರ್ಭದಲ್ಲೂ ವಿಭಕ್ತಿಯನ್ನು ಬಿಡುವುದು ಸಾಧುವೂ ಅಲ್ಲ!
ಇನ್ನು ಅನ್ವಯವೆಂದರೆ ವಾಕ್ಯವೊಂದರಲ್ಲಿ ಆಯಾ ಪದಗಳು ಇರಬೇಕಾದ ಸ್ಥಾನದಲ್ಲಿಯೇ ಇರುವುದು. ಇದರಲ್ಲಿ ವ್ಯತ್ಯಾಸವಾಗುವುದೆಂದರೆ ದೋಷ. ಪದ್ಯದಲ್ಲಿ ಅಲ್ಲಿಲ್ಲಿ ಬದಲಾದರೂ ಅವು ದುರೂಹ್ಯವಾಗಿಯೋ ಅನೂಹ್ಯವಾಗಿಯೋ ವ್ಯತ್ಯಾಸವಾಗಿದ್ದರೆ ಅಲ್ಲಿ ಅರ್ಥವನ್ನು ಗ್ರಹಿಸುವುದು ಕಷ್ಟವಾಗುತ್ತದೆ. ಹೊಸಬರ ಕವಿತೆಗಳಲ್ಲಿ ಕೆಲವೊಮ್ಮೆ ಇರುವ ನಾಲ್ಕು ಶಬ್ದಗಳು ಒಂದು ವಾಕ್ಯವನ್ನೇ ಪೂರ್ತಿಯಾಗಿಸಿರುವುದಿಲ್ಲ
.ನೈಘಂಟುಕಪ್ರಯೋಗ-ನೇಯಾರ್ಥದೋಷಗಳು-
ಕೆಲವೊಮ್ಮೆ ಕವಿ ಹಲವು ಅಪ್ರಸಿದ್ಧಶಬ್ದಗಳನ್ನು ಬಳಸಬಹುದು. ಅದಕ್ಕೆ ನಿಘಂಟುವಿನಲ್ಲಿ ಹುಡುಕಿದರೆ ಮಾತ್ರ ಅರ್ಥಯಿಸಲು ಸಾಧ್ಯವೆಂಬಂತೆ ಇರುತ್ತದೆ. ಇಂತಹ ಶಬ್ದಗಳು ಒಂದೋ ಎರಡೋ ಇದ್ದರೆ ಸರಿ! ಅಧಿಕವಾಗಬಾರದಷ್ಟೆ! ಕವಿತೆಯನ್ನು ಓದುವಾಗ ರಸಭಂಗವಾಗುವಷ್ಟರ ಮಟ್ಟಿಗೆ ಬರಿದೆ ಕೋಶಗಳನ್ನು ಹುಡುಕುವಂತಾಗಬಾರದಲ್ಲ! ಅಲ್ಲದೇ ಕೆಲವೊಂದು ಶಬ್ದಕ್ಕೆ ರೂಢಿಯಲ್ಲಿ ಇರುವ ಅರ್ಥವೇ ಬೇರೆ, ನಿಘಂಟುವಿನಲ್ಲಿರುವ ಅಪ್ರಸಿದ್ಧ ಅರ್ಥವೇ ಬೇರೆ. ಹಾಗಾದಾಗ ಅಪ್ರಸಿದ್ಧ ಅರ್ಥವನ್ನು ಕವಿ ಬಳಸದಿರುವುದು ಉಚಿತ. ಉದಾಹರಣೆಗೆ- ವನಜ-ಎಂದರೆ ಕಮಲ ಎಂಬ ಅರ್ಥವೇ ಪ್ರಮುಖ. ಆದರೆ ವನದಲ್ಲಿ ಹುಟ್ಟಿದ್ದು ಎಂದು ಹುಲ್ಲು ಮರಗಿಡಗಳಿಗೆಲ್ಲ ಈ ಶಬ್ದವನ್ನು ಬಳಸುವುದು ದೋಷವಾಗುತ್ತದೆ.
ನೇಯಾರ್ಥವೆಂದರೆ ಮುಖ್ಯವಾದ ಅರ್ಥವನ್ನು ಬಿಟ್ಟು ಬೇರೆಯದೇ ಅರ್ಥವನ್ನು ಧ್ವನಿಸುವ ವಾಕ್ಯರಚನೆ. ಉದಾಹರಣೆಗೆ- "ಭಾರತದಜ್ಞಾನಪರಂಪರೆ”- ಇದನ್ನು "ಭಾರತದ-ಜ್ಞಾನಪರಂಪರೆ" ಎಂದು ಹೇಳಬಹುದು, “ಭಾರತದ ಅಜ್ಞಾನಪರಂಪರೆ" ಎಂದೂ ಬಿಡಿಸಬಹುದು! ಕವಿಯ ಉದ್ದಿಷ್ಟ ಅರ್ಥ ಗೌಣವಾಗಿ ವಿಪರೀತಾರ್ಥವೇ ಬರುವ ಸಾಧ್ಯತೆಯಿರುತ್ತದೆ. ಇದು ನೇಯಾರ್ಥವೆಂಬ ದೋಷವಾಗುತ್ತದೆ.

.ಅರಿಸಮಾಸ ಮತ್ತು ಅನ್ಯಭಾಷಾಶಬ್ದಪ್ರಯೋಗ-
ಕವಿತೆಯೋದರಲ್ಲಿ ಸಂಸ್ಕೃತ ಮತ್ತು ಕನ್ನಡದ ಶಬ್ದಗಳನ್ನು ಸಮಾಸವನ್ನಾಗಿಸಬಾರದು. ಉದಾ- ಕ್ಷೀರಕಡಲು, ಹಾಲ್ಸಮುದ್ರ ಇತ್ಯಾದಿಗಳು. ಹಾಗೆಯೇ ಬೇರೆಯ ಭಾಷೆಯ ಶಬ್ದಗಳನ್ನು ಬಳಸುವಾಗ ಅದಕ್ಕೆ ತಕ್ಕ ಬಳಸಲು ಯೋಗ್ಯವಾದ ರೂಪ ಒದಗಿದೆಯೇ ಎಂಬುದನ್ನು ಯೋಚಿಬೇಕು! ಕೆಲವೊಮ್ಮೆ ಅನ್ಯಭಾಷಾಶಬ್ದಗಳನ್ನು ಬಳಸಬಹುದಾದರೂ ವಸ್ತುವಿಗೆ ಪೂರಕವಾಗಿರದಿದ್ದಲ್ಲಿ ದೋಷವೇ ಆಗುತ್ತದೆ.
. ಪುನರುಕ್ತಿದೋಷ-
ಬಳಸಿದ್ದೇ ಶಬ್ದವನ್ನು ವಿಶೇಷಾರ್ಥವಿಲ್ಲದೇ ಮತ್ತೆ ಬಳಸುವುದರಿಂದ ಪುನರುಕ್ತಿದೋಷವಾಗುತ್ತದೆ, ಹೇಳಿದ್ದನ್ನೇ ಪೌನಃಪುನ್ಯೇನ ಹೇಳುವುದನ್ನು ಪುನರುಕ್ತಿದೋಷ ಎಂದು ಕರೆದಿದ್ದಾರೆ.
ಕೆಲವೊಂದು ಶಬ್ದಗಳನ್ನು ಶುದ್ಧರೂಪದಲ್ಲಿ ಬಳಸುತ್ತಿಲ್ಲ ಎಂದು ಹಿಂದೊಮ್ಮೆ ಬರೆದಾಗ ಮಿತ್ರರೊಬ್ಬರು "ಕೆಲವಷ್ಟು ಶಬ್ದಗಳನ್ನು ಈಗಾಗಳೇ ಹಲವು ಹಿರಿಯ ಸಾಹಿತಿಗಳೂ ಬಳಸುತ್ತಿದ್ದಾರೆ. ಅಲ್ಲದೇ ಕೆಲವು ನಿಘಂಟುಗಳೂ ಅವುಗಳಿಗೆ ಅರ್ಥವನ್ನು ಕೊಟ್ಟಿವೆ. ಹೀಗಾಗಿ ಇದನ್ನು ಬಳಸಿದರೆ ತಪ್ಪೇನು?” ಎಂದು ಪ್ರಶ್ನಿಸಿದ್ದರು. ಆದರೆ ನಿಘಂಟುಗಳಲ್ಲಿ ಅರ್ಥವನ್ನು ಕೊಡುವುದು ನಿಘಂಟುಕಾರರ ಅಜ್ಞಾನವಾಗುತ್ತದೆಯಷ್ಟೇ! ಅಲ್ಲದೇ ಸಾಹಿತಿಗಳು ಬಳಸಿದರೆ ಆ ಶಬ್ದವು ಸಾಧುವೆಂದಾಗುವುದಿಲ್ಲ. ಸಾಮಾನ್ಯರು ಒಬ್ಬ ಬರೆಹಗಾರನನ್ನು ಆದರ್ಶವಾಗಿ ಸ್ವೀಕರಿಸುವ ಮೊದಲು ಅವನ ಪ್ರಾಬಲ್ಯ ಯಾವುದರಲ್ಲಿ ಎಂದು ಸ್ಪಷ್ಟ ಪಡಿಸಿಕೊಳ್ಳಬೇಕು. ಜೊತೆಗೆ ನಮ್ಮ ಹಿಂದಿನವರು ನಮಗೆ ಕೊಟ್ಟ ಸಂಪತ್ತನ್ನು ನಮ್ಮ ಮುಂದಿನವರಿಗೆ ಕೊಡುವಾಗ ಅದರಲ್ಲಿ ಯಾವುದೇ ಊನವಾಗದಂತೆ ನೋಡಿಕೊಂಡರಷ್ಟೇ ನಮ್ಮ ಬಗ್ಗೆ ಮುಂದಿನವರಿಗೆ ಮೆಚ್ಚುಗೆ ಹುಟ್ಟುವುದು. ಇಲ್ಲದಿದ್ದರೆ ಅವರು ನಮ್ಮ ಬಗ್ಗೆ ಸದಭಿಪ್ರಾಯ ಬೆಳೆಸಿಕೊಂಡಾರೇ! ಭಾಷೆಯೆಂಬುದು ಕೂಡ ಸಂಪತ್ತಿನಂತೆ! ಲೌಕಿಕ ಸಂಪತ್ತು ಕ್ಷೀಣವಾಗುತ್ತ ಹೋಗಬಹುದು. ಆದರೆ ಭಾಷೆ ವೃದ್ಧಿಯಾಗುತ್ತದೆ. ಹಾಗಾಗಿ ಅಂದಿನಿಂದ ಇರುವ ಜ್ಞಾನರಾಶಿಯನ್ನು ಕಲಾಮಾಧ್ಯಮವನ್ನು ಮುಂದಿನವರಿಗೆ ಕನಿಷ್ಠಪಕ್ಷ ಭ್ರಷ್ಟವಾಗದ ರೀತಿಯಲ್ಲಿಯಾದರೂ ತಲುಪಿಸಬೇಕಲ್ಲವೇ! ಹಾಗಾಗಿ ನಾವು ಸೂಕ್ತವಾದ ಶಬ್ದಗಳನ್ನು ಬಳಸುವುದಾಗಲೀ ವ್ಯಾಕರಣಶುದ್ಧವಾದ ಪ್ರಯೋಗವನ್ನು ಮಾಡುವುದಾಗಲೀ ಅವಶ್ಯಕ. ಅದಷ್ಟೇ ಅಲ್ಲದೇ ನಮ್ಮ ಬರೆಹವನ್ನು ಇತರರು ಓದಬೇಕು ಎಂದಾದರೆ ಅದರಲ್ಲಿ ಶುದ್ಧಿ ಇರಬೇಕಾದದ್ದು ಮೊದಲನೆಯ ಅಂಶ. ಯಾರಾದರೂ ಶುದ್ಧವಾದ ಅನ್ನವನ್ನು ಊಟ ಮಾಡಲು ಬಯಸುತ್ತಾರೋ ಅಥವಾ ಕಲ್ಲು ಕಸಗಳಿಂದ ಕೂಡಿದ ಅನ್ನವನ್ನು ಬಯಸುತ್ತಾರೋ! ಇಂತಹ ಅಪಶಬ್ದಗಳು ಕಸಕಡ್ಡಿಗಳಂತೆ, ಊಟದಲ್ಲಿ ಸಿಗುವ ಕಲ್ಲಿನಂತೆ! ಹಾಗಾಗಿ ಇಂತಹ ಸಾಧುರೂಪದ ಶಬ್ದಗಳನ್ನು ತಿಳಿದುಕೊಳ್ಳುವುದರಿಂದ ಆಗುವ ನಷ್ಟವೇನು? ಅವುಗಳನ್ನು ಶುದ್ಧರೂಪದಲ್ಲಿ ಬಳಸಬೇಕೆಂದು ನಿಶ್ಚಯಿಸಿಕೊಂಡರೆ ತಪ್ಪೇನು! ಅಲ್ಲದೇ ಒಂದೆರಡು ಬಾರಿ ಬಳಸುವಾಗ ಮನಸ್ಸಿನಲ್ಲಿ ನಿಶ್ಚಯಿಸಿಕೊಂಡರೆ ಮುಂದೆ ಆ ಶಬ್ದಗಳನ್ನು ಬಳಸುವಾಗ ನಮ್ಮ ಮನಸ್ಸೇ ಅವಧಾನದಿಂದ ಅಲ್ಲಿ ತಿದ್ದುಕೊಂಡು ಬಳಸುತ್ತದೆ. ದಿಟವೇ! ನಮಗೆ ಎಲ್ಲ ಶಬ್ದಗಳ ಸಾಧುತ್ವವೂ ಗೊತ್ತಿರಲು ಸಾಧ್ಯವಿಲ್ಲ. ಆದರೆ ಅನುಮಾನ ಇದ್ದಾಗ ಬಲ್ಲವರನ್ನು ಕೇಳಬಹುದು, ಸರಿಯಾದ ಕೋಶಗಳನ್ನು ಅವಲೋಕಿಸಬಹುದು. ಹಾಗೊಮ್ಮೆ ಹಿಂದೆ ತಪ್ಪಾಗಿ ಬಳಸಿದ್ದರೂ ಮುಂದೆ ತಿಳಿದ ಮೇಲೆ ಬಳಸುವಾಗಳಾದರೂ ಸರಿಯಾದ ಶಬ್ದವನ್ನು ಬಳಸಬಹುದು. ಇಷ್ಟಾದರೂ ನಮಗೆ ಸಾಧುರೂಪ ಗೊತ್ತಿದ್ದೂ ಅಸಾಧುರೂಪವನ್ನೇ ಬಳಸುತ್ತೇವೆ ಎಂದು ಹೇಳುವವರಿಗೆ ಏನು ಹೇಳಬಹುದು. ಇರುಳು ಕಂಡ ಬಾವಿಗೆ ಹಗಲಲ್ಲಿ ಬೀಳುವವರಿಗೆ ಏನು ಮಾಡಲು ಸಾಧ್ಯವಿದೆ!

1 ಕಾಮೆಂಟ್‌:

  1. Lucky Club Casino Site – Play Games Online
    Lucky Club is a virtual online casino that brings players from around the world to bet on the latest casino games and sports. Lucky Club is available from Live Casino Games: 100% of the Rating: 4.3 · ‎Review by luckyclub Lucky Club

    ಪ್ರತ್ಯುತ್ತರಅಳಿಸಿ