Powered By Blogger

ಮಂಗಳವಾರ, ಏಪ್ರಿಲ್ 21, 2020

ಕಾವ್ಯಾವಲೋಕನ-೮ ಚಂದ್ರಹಾಸನ ಕಥೆ



ಲಕ್ಷ್ಮೀಶನ ಜೈಮಿನಿ ಭಾರತದ ಕೆಲವು ಪದ್ಯಗಳನ್ನು ಹಿಂದಿನ ಸಂಚಿಕೆಯಲ್ಲಿ ಅವಲೋಕಿಸಲಾಗಿತ್ತು.ಅದರಲ್ಲಿ ಬರುವ ಚಂದ್ರಹಾಸನ ಕಥೆಯನ್ನು ಎಲ್ಲರೂ ಕೇಳಿರುತ್ತೇವೆ! ಆದರೆ ಲಕ್ಷ್ಮೀಶನ ಪದ್ಯಗಳ ಸ್ವಾರಸ್ಯವನ್ನು ಕೆಲವನ್ನು ಈ ಸಂಚಿಕೆಯಲ್ಲಿ ಅವಲೋಕಿಸೋಣ.
ಪಾಂಡವರ ಅಶ್ವಮೇಧದ ಕುದುರೆ ಚಂದ್ರಹಾಸನ ರಾಜ್ಯಕ್ಕೆ ಪ್ರವೇಶಿಸಿರುತ್ತದೆ. ಅಲ್ಲಿ ಕುದುರೆಯನ್ನು ಕಾಣದಾದಾಗ ನಾರದನು ಬಂದು ಚಂದ್ರಹಾಸನ ವಶದಲ್ಲಿದೆ ಎಂದು ಹೇಳುತ್ತಾನೆ. ಆ ಬಳಿಕ ಚಂದ್ರಹಾಸನ ಕಥೆಯನ್ನು ವಿಸ್ತಿರಸುತ್ತಾರೆ. ಇಪ್ಪತ್ತೆಂಟನೆಯ ಸಂಧಿಯ ಪ್ರಾರಂಭದಲ್ಲಿ ಕೆಲವು ಪದ್ಯಗಳಲ್ಲಿ ಶಿಶಿರರ್ತುವನ್ನು ವರ್ಣಿಸುತ್ತಾನೆ.
ಉತ್ತಮಾಂಗದ ಗಂಗೆಯಂ ಸಾಗರಕೆ ಕಳುಹಿ
ಪೊತ್ತ ಶಶಿಕಲೆಯನಂಬರಕಿಟ್ಟು ತನ್ನ ನಡು
ನೆತ್ತಿಯೊಳ್ ಕಣ್ಣ ತೆರೆದಗ್ನಿಯಂ ತಾಳ್ದುದಲ್ಲದೆ ಕಾಂತೆಗರೆಮೆಯ್ಯನು
ತೆತ್ತು ಬಿಡದಪ್ಪಿಕೊಂಡಿರ್ಪನೀಶ್ವರನೆನಲ್
ಮತ್ತಕಾಮಿನಿಯರ ಕುಚಾಲಿಂಗನಮನುಳಿದೊ
ಡೆತ್ತಣದು ಹಿಮಕೆ ಭೇಷಜಮೆಂದು ವಿರಹಿಗಳ್ ಕೂರ್ಪರನರಸುತಿರ್ದರು||
ಈಶ್ವರನು ತಲೆಯ ಮೇಲೆ ಇರುವ ಗಂಗೆಯನ್ನು ಸಾಗರಕ್ಕೆ ಕಳುಹಿಸಿ ಹೊತ್ತ ಚಂದ್ರನನ್ನು ಆಗಸಕ್ಕಿಟ್ಟು ತನ್ನ ನಡುನೆತ್ತಿಯಲ್ಲಿ ಬೆಂಕಿಯನ್ನು ತಾಳಿರುವುದಲ್ಲದೇ ಅರ್ಧ ದೇಹವನ್ನೇ ಹೆಂಡತಿಗೆ ತೆತ್ತುಕೊಟ್ಟು ಬಿಡದೇ ಅಪ್ಪಿಕೊಂಡಿರುವನು ಎಂತಾದರೆ ಚಳಿಗೆ ಮತ್ತಕಾಮಿನಿಯರ ಕುಚಗಳ ಆಲಿಂಗನವಲ್ಲದೇ ಬೇರೆ ಯಾವ ಔಷಧವಿದೆ ಎಂದು ವಿರಹಿಗಳು ತಮ್ಮ ಪ್ರಿಯರನ್ನು ಹುಡುಕುತ್ತಿದ್ದರು.
ಇಂತಹ ಚಳಿಗಾಲದಲ್ಲಿ ಸೂರ್ಯ ಚಂದ್ರನಂತೆ ಆದ, ಬಿಸಿಲು ಬೆಳದಿಂಗಳಂತಾಯಿತು. ತಾವರೆಗಳು ನಶಿಸಿದ್ದವು, ಕೋಗಿಲೆಯ ಕಂಠದ ಮಧುರವಾದ ಧ್ವನಿ ಕುಗ್ಗಿತ್ತು! ಅಂತಹ ಸಂದರ್ಭದಲ್ಲಿ ಚಂದ್ರಹಾಸನಿರುವ ಕುಂತಳಪುರಕ್ಕೆ ಬಂದಿರುತ್ತಾರೆ ಆಗ ನಾರದ ಚಂದ್ರಹಾಸನ ಕಥೆಯನ್ನು ಹೇಳುತ್ತಾ ಕೇರಳದಲ್ಲಿ ಮೇಧಾವಿ ಎಂಬ ರಾಜನೊಬ್ಬನಿದ್ದ. ಅವನಿಗೆ ಮಗುವೊಂದು ಹುಟ್ಟಿ ದ ಸಂದರ್ಭದಲ್ಲಿ ಶತ್ರುಗಳು ದಾಳಿ ಮಾಡಿ ಅವನನ್ನು ಯುದ್ಧದಲ್ಲಿ ಸಾಯಿಸಿಬಿಟ್ಟರು. ಆಗ ಅವನ ಪತ್ನಿ ಅಗ್ನಿಪ್ರವೇಶ ಮಾಡಿದಳು. ಮಗನನ್ನು ದಾದಿಯೊಬ್ಬಳು ಕದ್ದು ಸಾಗಿಸಿ ಕುಂತಳ ನಗರಕ್ಕೆ ಬಂದು ಸಾಕಿಕೊಂಡಳು. ಆ ದಾದಿ ಹೀಗೆ ದುಃಖಿಸುತ್ತಿದ್ದಳು.
ಮೊಳೆವಲ್ಲುಗುವ ಜೊಲ್ಲು ದಟ್ಟಡಿ ತೊದಲ್ವನುಡಿ
ತೊಳತೊಳಗುತಿಹ ಸೊಬಗು ಮೆರೆವ ನಗೆಮೊಗದ ಬಗೆ
ಪೊಳೆವ ಕಣ್ ಮಿಸುಪ ನುಣ್ಗದಪಿನೆಣೆ ಚೆಲ್ವ ಪಣೆ ಕುರುಳ ಜೋಲ್ವಂಬೆಗಾಲು
ಸುಳಿನಾಭಿ ಮಿಗೆ ಶೋಭಿಪದರದೆಡೆ ಬಟ್ಟದೊಡೆ
ನಳಿತೋಳಿಡಿದ ಧೂಳಿ ಸೊಗಯಿಸುವ ವರಶಿಶುವ
ನಲಿದಾಡಿಸುವ ರೂಢಿಯಿಲ್ಲೆಂದು ನೆರೆ ನೊಂದು ಮರುಗುವಳಜಸ್ರಮವಳು||
ಇಲ್ಲಿ ಮಗುವಿನ ಮೊಳೆವ ಹಲ್ಲು ಜೊಲ್ಲು ತೊದಲು ನುಡಿ ನಗೆ ಮೊಗದ ಮನಸ್ಸು ಹೊಳೆಯುವ ಕಣ್ಣು ಚೆಲುವಾದ ನುಣ್ಗದಪು ಚೆಲುವಾದ ಹಣೆ ಅದರ ಮೇಲೆ ಜೋಲುವ ಮುಂಗುರುಳು ಅಂಬೆಗಾಲು ಸುಳಿಯಂತೆ ಇರುವ ಹೊಕ್ಕುಳು ಎಳೆಯ ತೊಡೆ ನಳಿದಾದ ತೋಳು ಅದಕ್ಕೆ ಮೆತ್ತಿಕೊಂಡ ಧೂಳಿ ಇವುಗಳೆಂದೆಲ್ಲ ಸೊಗಯಿಸುವ ಎಳೆಯ ಮಗುವನ್ನು ನಲಿದಾಡಿಸುವ ರೂಢಿ ತನಗಿಲ್ಲ ಎಂದು ದುಃಖಿಸುತ್ತಿದ್ದಳಂತೆ! ಇಲ್ಲಿ ಮಕ್ಕಳ ಸ್ವಭಾವವನ್ನು ಬಿಡಿ ಬಿಡಿಯಾದ ಪದಗಳಲ್ಲಿ ಹೇಳಿರುವುದನ್ನು ಅವಲೋಕಿಸಬಹುದು. ಪ್ರತಿ ಎರಡು ಶಬ್ದಗಳಲ್ಲಿ ನಮಗೆ ಒಂದು ಚಿತ್ರಣ ಕಣ್ಣ ಮುಂದೆ ಬರುತ್ತದೆ! ಈ ಪದ್ಯದ ಕೊನೆಯ ತನಕ ಓದುವಾಗ ಮಗುವಿನ ಸುಂದರವಾದ ರೂಪು ಮೂಡಿರುತ್ತದೆ!
ಹೀಗೆ ಕೆಲವು ಕಾಲ ಮಗುವನ್ನು ಕಾಪಾಡುತ್ತಿದ್ದ ದಾದಿ ಮಗು ನಡೆನುಡಿಗಳನ್ನು ಕಲಿಯುವ ತನಕ ಮಾತ್ರ ಬದುಕಿದ್ದಳು! ಆ ಬಳಿಕ ಅನಾಥವಾದ ಆ ಶಿಶುವನ್ನು ಊರಿನವರೆಲ್ಲ ಕರುಣೆಯಿಂದ ಸಾಕಿದರು! ಚೆಲುವಾದ ಈ ಶಿಶು ಬೀದಿಯಲ್ಲಿ ದೇಸಿಗನಾಗಿ ಬಂದಾಗ ಕಂಡ ಕಂಡ ಹೆಂಗಸರೆಲ್ಲ ಕರೆಕರೆದು ಎತ್ತಿಕೊಂಡು ಪಕ್ವವಾದ ಹಣ್ಣನ್ನು ಕಜ್ಜಾಯ ಸಕ್ಕರೆಗಳನ್ನು ಕೊಡುತ್ತಿದ್ದರು. ಅವನು ಆಡುವ ಮಾತುಗಳನ್ನು ಕೇಳಿ ಮುದ್ದಿಸುತ್ತಿದ್ದರು! ಸ್ನಾನ ಮಾಡಿಸಿ ಮಡಿಬಟ್ಟೆಯನ್ನು ತೊಡಿಸಿ ಮೆದುವಾದ ಹಾಸಿಗೆಯಲ್ಲಿ ಪ್ರೀತಿಯಿಂದ ತಮ್ಮ ತಮ್ಮ ಮಕ್ಕಳ ಜೊತೆಯಲ್ಲಿಯೇ ಮಲಗಿಸುತ್ತಿದ್ದರು! ಗಣಿಕೆಯರು ತಮ್ಮ ಭವನಗಳಿಗೆ ಕರೆದೊಯ್ದು ಮೋಹದಿಂದ ಪರಿಮಳದ ಸುಗಂಧಗಳನ್ನು ಕಸ್ತೂರಿ ಚಂದನಗಳ ತಿಲಕವನ್ನಿಟ್ಟು ಪರಿಮಳದ ಹೂವನ್ನು ಮುಡಿಸಿ ಕರ್ಪೂರದ ವೀಳೆಯವನ್ನು ಕೊಟ್ಟು ಹೊಸ ಬಟ್ಟೆಗಳನ್ನು ಉಡಿಸಿ ಸಿಂಗರಿಸಿ ಕಳುಹಿಸುತ್ತಿದ್ದರು! ಭಗವಂತನು ರಕ್ಷಿಸಬೇಕೆಂದು ನಿಶ್ಚಯಿಸಿದರೆ ಹೇಗೆ ಎಲ್ಲ ಬಗೆಯ ಜನಗಳ ಸಹಾಯದಿಂದ ಚಂದ್ರಹಾಸ ಬದುಕಿದನೋ ಹಾಗೆಯೇ ಬದುಕಿಸಬಲ್ಲ! ವಿಧಿಯ ವಿಚಿತ್ರವಾದ ಗತಿಯೇ ಹಾಗಲ್ಲವೇ! ಆ ಬಾಲಕನಿಗೆ ಒಂದು ಹೊಳೆಯುವ ಸಣ್ಣ ಸಾಲಗ್ರಾಮಶಿಲೆ ಸಿಕ್ಕಿತು! ಅದನ್ನು ಆಟದ ಕಲ್ಲಿನ ಗೋಲಿಯೆಂದುಕೊಂಡು ಅಣ್ಣೆಕಲ್ಲೊಡ್ಡಿಗಳನ್ನಾಡುತ್ತ ಎಲ್ಲರನ್ನೂ ಗೆದ್ದು ನಗುತ್ತ ಸ್ನೇಹದಿಂದ ಆಟವಾಡುತ್ತ ಇದ್ದ. ಆಟ ಮುಗಿದ ಮೇಲೆ ಬೇರೆಲ್ಲಿಯೂ ಇಡಲು ಜಾಗವಿಲ್ಲದ ಕಾರಣ ತನ್ನ ಬಾಯಿಯಲ್ಲಿಯೇ ಇರಿಸಿಕೊಳ್ಳುತ್ತಿದ್ದ! ಅಲ್ಲಿ ಮಂತ್ರಿಯಾಗಿದ್ದ ದುಷ್ಟಬುದ್ಧಿ ಎಂಬವನ ಮನೆಯ ಕಾರ್ಯಕ್ರಮಕ್ಕೆ ಬಂದ ಕೆಲವರು ಜೋಯಿಸರು ಅಲ್ಲಿಯೇ ಆಡಿಕೊಂಡಿದ್ದ ಇವನ ಮುಖವನ್ನು ನೋಡಿ "ಯಾರ ಮಗ ಇವನು! ಮುಖದಲ್ಲಿ ರಾಜಲಕ್ಷಣವಿದೆ" ಎಂದು ಹೇಳಿದರು! ಯಾರೋ ಅನಾಥ ಬಾಲಕ ಎಂದಾಗ,ಇವನು ಮುಂದೆ ನಮ್ಮ ಕುಂತಳಕ್ಕೆ ರಾಜನಾಗುತ್ತಾನೆ ಇವನನ್ನು ಕಾಪಾಡಿಕೋ ಎಂದು ಹೇಳಿ ಹೋಗುತ್ತಾರೆ. ಆಗ ದುಷ್ಟಬುದ್ಧಿ ಕುಂತಳದ ರಾಜನಿಗೆ ಮಕ್ಕಳಿಲ್ಲದ ಕಾರಣ ತನಗೆ ಏಕಾಧಿಪತ್ಯವಾಗಿದೆ. ಮುಂದೆ ತನ್ನ ಮಗನಿಗೇ ಸಿಗಬೇಕು ಎಂದಾದರೆ ಇವನನ್ನು ಸಾಯಿಸಿಬಿಡುವುದೇ ಸರಿ ಎಂದು ಯೋಚಿಸಿಕೊಂಡು ಚಂಡಾಲರನ್ನು ಕರೆದು "ಯಾರೂ ತಿಳಿಯದಂತೆ ಇವನನ್ನು ಕಾಡಿಗೆ ತೆಗೆದುಕೊಂಡು ಹೋಗಿ ಕೊಂದುಹಾಕಿಬಿಡಿ ಆಮೇಲೆ ಕುರುಹನ್ನು ತಂದು ತೋರಿಸಿ" ಎಂದು ಆಜ್ಞೆ ಮಾಡಿದ! ಆಗ ಚಂಡಾಲರು ಹೊತ್ತುಕೊಂಡು ಹೋಗುತ್ತಾರೆ-
ಪಾತಕಿಗಳೊಡಲೊಳಿಹ ಪರಮಾತ್ಮನಂತೆ ಯಮ
ದೂತರೆಳೆತಂದಜಾಮಿಳನಂತೆ ಕಾಕಸಂ
ಘಾತದೊಳ್ ಸಿಕ್ಕಿರ್ದ ಕೋಗಿಲೆಯ ಮರಿಯಂತೆ ನಲುಗಿ ಕತ್ತಲೆಯೊಳಿರ್ದ
ಶೀತಲ ಮರೀಚಿಲಾಂಛನದಂತೆ ಬಹಳ ಕೋ
ಪಾತಿಶಯದೊಳಗಿಹ ವಿವೇಕದಂತಾಗ ಪಶು
ಘಾತಕಿಗಳೆತ್ತಿಕೊಂಡೊಯ್ವ ಬಾಲಕನಿರ್ದನವರೆಡೆಯೊಳಂಜುತಳುತ||
ಅವರು ಹೊತ್ತುಕೊಂಡು ಹೋಗುವ ಬಾಲಕ ಪಾತಕಿಗಳ ಒಡಲಲ್ಲಿ ಕೂಡ ಇರುವ ಪರಮಾತ್ಮನಂತೆ, ಯಮದೂತರು ಎಳೆತಂದ ಅಜಾಮಿಳನಂತೆ, ಕಾಗೆಗಳ ಗುಂಪಿನ ಮಧ್ಯೆ ಸಿಕ್ಕಿ ಬಿದ್ದ ಕೋಗಿಲೆಯ ಮರಿಯಂತೆ ಕತ್ತಲೆಯಲ್ಲಿರುವ ಶೀತಲವಾದ ಸೂರ್ಯನ ಬಿಂಬದಂತೆ ಅತಿಯಾದ ಕೋಪದ ಮಧ್ಯೆ ಇರುವ ವಿವೇಕದಂತೆ ಅವರ ಮಧ್ಯೆ ಅಂಜುತ್ತ ಅಳುತ್ತ ಇದ್ದ. ಹಾಗೆ ಕೊಂಡೊಯ್ದ ಮಗುವನ್ನು ಅವರಿಗೆ ಕೊಲ್ಲಲು ಮನಸ್ಸು ಬಾರದೇ ಕರುಣೆಯಿಂದ ಅವನನ್ನು ಕಾಡಿನಲ್ಲೇ ಬಿಟ್ಟು ಶಿಶುವಧೆಯ ಪಾಪಕ್ಕೆ ಹೆದರಿ ಅವನ ಕಾಲಿನಲ್ಲಿ ಆರು ಬೆರಳಿರುವುದನ್ನು ನೋಡಿ ಕೊನೆಯ ಒಂದು ಬೆರಳನ್ನು ಕತ್ತರಿಸಿಕೊಂಡು ದುಷ್ಟಬುದ್ಧಿಗೆ ತೋರಿಸಲು ಹೋದರು! ಇತ್ತ ರಾಹುವಿನ ಗ್ರಹಣದಿಂದ ಮುಕ್ತನಾದ ಶಶಿಯಂತೆ ಇದ್ದ ಚಂದ್ರಹಾಸ ಬಸಿಯುವ ನೆತ್ತರಿನಿಂದ ಕೂಡಿದ ಕಾಲಿನ ಗಾಯದ ವೇದನೆಗೆ ಹರಿ ಹರಿ ಎಂದು ಅಳುತ್ತಿದ್ದ. ಅವನ ಕಣ್ಣೀರನ್ನು ಕಂಡು ಮೃಗಪಕ್ಷಿಗಳೂ ನೊಂದುಕೊಂಡವು. ತಮ್ಮ ಹಸಿವು ನೀರಡಿಕೆಗಳನ್ನೂ ತೊರೆದು ಅಲ್ಲಿ ನಿಂತು ಉಪಚರಿಸುತ್ತಿದ್ದವು.
ಗರಿಗೆದರಿ ಕೊಡೆವಿಡಿದು ನಿಂದವು ಬಿಸಿಲ್ಗೆ ನವಿ-
ಲೆರಕೆಯಂ ಬೀಸಿ ಬಿಜ್ಜಣವಿಕ್ಕಿತಂಚೆ ತುಂ
ತುರನುದುರ್ಚಿತು ಸಾರಸಂ ಸಲಿಲದೊಳ್ ನೆನದ ಪಕ್ಕಂಗಳಂ ಬಿದಿರ್ಚಿ
ಮರುಗಿ ಮೆಲ್ನುಡಿಯೊಳುಪಚರಿಸಿದವು ಗಿಳಿಗಳ
ಕ್ಕರೊಳಳಿಗಳರ್ಭಕನ ರೋದನವ ಕೂಡಳುವ
ತೆರದೊಳ್ ಮೊರೆದುವಲ್ಲಿ ಕರುಬರಿದ್ದೂರಿಂದ ಕಾಡೊಳ್ಳಿತೆನಿಸುವಂತೆ ||
ಬಿಸಿಲಿಗೆ ನವಿಲು ಗರಿಗೆದರಿ ಕೊಡೆ ಹಿಡಿಯಿತು, ಸಾರಸಪಕ್ಷಿಯು ನೀರಿನಲ್ಲಿ ನೆನೆದ ಪಕ್ಕವನ್ನು ಬಿಚ್ಚಿ ಗಾಳಿ ಬೀಸಿ ತುಂತುರನ್ನು ಉದುರಿಸಿತು, ಮರುಗಿ ಮೆಲ್ನುಡಿಯಲ್ಲಿ ಗಿಳಿಗಳು ಉಪಚರಿಸಿದವು ಈ ಮಗುವಿನ ರೋದನವನ್ನು ಕೂಡಿ ಅಳುವಂತೆ ದುಂಬಿಗಳೂ ಅಲ್ಲಿ ಮೊರೆಯುತ್ತಿದ್ದವು! ಇದನ್ನು ನೋಡಿದರೆ ಕರುಬುವ ಜನರಿರುವ ಊರಿಗಿಂತ ಕಾಡೇ ಒಳ್ಳಿತು ಎಂದೆನಿಸುತ್ತಿತ್ತು!
ಅಂತಹ ಸಂದರ್ಭದಲ್ಲಿ ಅಲ್ಲಿ ಕೆಲವು ಬೇಡರ ಪಡೆ ಬರುತ್ತದೆ
ದಿನಪನುಪಟಳದಿಂದ ನೆಲೆಗೆಟ್ಟು ಪಲವು ರೂ
ಪನೆ ತಾಳ್ದು ವನವಾಸದುರುತಪದ ಸಿದ್ಧಿಯಿಂ
ಘನತೆಯಂ ಪಡೆದು ಮಿಗೆ ಪಗೆಯಾದ ಪಗಲಂ ತೊಲಗಿಪಂಧಕಾರಮೆನಲು
ಅನುಪಮದ ಬೇಡವಡೆ.......
ಅದು ಹೇಗಿತ್ತೆಂದರೆ ಸೂರ್ಯನ ಉಪಟಳವನ್ನು ತಾಳಲಾರದೇ ನೆಲೆಗೆಟ್ಟು ಬೇರೆ ಬೇರೆ ರೂಪನ್ನು ತಾಳ್ದು ವನವಾಸದ ತಪಸ್ಸಿನ ಸಿದ್ಧಿಯನ್ನು ಪಡೆದು ಹಗೆಯಾದ ಹಗಲನ್ನು ತೊಲಗಿಸುವ ಅಂಧಕಾರದಂತೆ ಇತ್ತು!ಅಂದರೆ ಬೇಡರ ಕಪ್ಪು ಬಣ್ಣವನ್ನು ಚಿತ್ರಿಸುವ ಕವಿಯ ಈ ಕಲ್ಪನೆಯ ಸೊಗಸನ್ನು ಕಾಣಬಹುದು! ಅವರು ಭೇಟೆಯಾಡುವ ಪರಿಯನ್ನು ಮುಂದಿನ ಪದ್ಯದಲ್ಲಿ ಗಮನಿಸಬಹುದು-
ಇದೆ ಪಂದಿ ಕೆದರಿದ ನೆಲಂ ನೋಡಲಿದೆ ದಂತಿ
ಕದಡಿದ ಕೊಳಂ ತೋರಲಿದೆ ಪುಲಿಯುಗಿದ ಮೃಗದ
ಮಿದುಳಿತ್ತಲಿದೆ ಸಿಂಗಮೆರಗಿದಾನೆಯ ತಲೆಯ ಮುತ್ತುದುರಿ ನೆತ್ತರೊಡನೆ
ಇದೆ ವನಮಹಿಷನುದ್ದಿಕೊಂಡ ಮರದಿಗುಡಿತ್ತ
ಲಿದೆಕೊ ಸಾರಂಗಮಿಕ್ಕಡಿಗೈದ ಪಾವಿತ್ತ
ಲಿದೆ ಪುಲ್ಲೆಗಳ ಪಕ್ಕೆ ಮರಗಳಿಕ್ಕೆಗಳೆಂದು ಪರಿದರ್ ಪುಳಿಂದರಂದು||
ಇದು ಹಂದಿ ಕೆದರಿದ ನೆಲ, ಇದು ಆನೆ ಕದಡಿದ ಕೊಳ, ಇದು ಹುಲಿ ಸೀಳಿ ಹಾಕಿದ ಜಿಂಕೆಯ ಮಿದುಳು, ಇದೋ ಇಲ್ಲಿ ಸಿಂಹ ಎರಗಿ ಆನೆಯ ತಲೆಯನ್ನು ಒಡೆದು ಮುತ್ತನ್ನು ನೆತ್ತರಿನ ಜೊತೆ ಹೊರಗೆ ಚೆಲ್ಲಿದೆ, ಇದೆ ಕಾಡೆಮ್ಮೆ ಉದ್ದಿಕೊಂಡ ಮರ, ಇದೋ ಸಾರಂಗ ಎರಡು ತುಂಡು ಮಾಡಿದ ಹಾವು, ಇಲ್ಲಿದೆ ನೋಡಿ ಜಿಂಕೆಗಳ ಗುಂಪು ಎಂದೆಲ್ಲ ಮಾತನಾಡಿಕೊಳ್ಳುತ್ತ ಅವರು ಕಾಡಿನ ಪ್ರಾಣಿಗಳ ಸುಳಿವನ್ನು ಕಂಡುಕೊಂಡು ಮುಂದುವರೆಯುತ್ತಿದ್ದರು.
ನಡೆ ಪಜ್ಜೆವಿಡಿ ಪೋಗು ತಡೆ ನಿಲ್ಲು ಜಡಿ ಬೊಬ್ಬೆ
ಗುಡು ಪೊದರೊಳಡಗು ಕೈಗೆಡದಿರೆಸು ನಿಡುಸರಳ
ತುಡು ಕೆಲಕೆ ಸಿಡಿಯದಿರ್ ಪೊಡೆ ಸಾರ್ಚು ತುಡುಕು ಮೊಗಸಡಗು ಮರಕಡರೊಡರ್ಚು
ಅಡಗಿ ಪೊಯ್ ಬಡಿಕೋಲನಿಡು ಮುಂದುಗಡೆ ನಾಯ
ಬಿಡು ಕೂಡೆ ಪಡಿತಳಿಸು ಸೆಡೆಯದಿರ್ ಕೆಡಪೆಂಬ
ನುಡಿಗಳಡಿಗಡಿಗೆ ಕಿವಿಗಿಡಿದುವೆಲ್ಲೆಡೆಯೊಳಿಂದಡವಿಯೊಳ್ ಕಡುಪೊಸತೆನೆ||
"ನಡೆ ಹೋಗು ಹೆಜ್ಜೆ ಹಿಡಿ ತಡೆ ನಿಲ್ಲು ಜಡಿ ಬೊಬ್ಬೆ ಹಾಕು ಪೊದರಲ್ಲಿ ಅಡಗು ಕೈಗೆಡಿದಬೇಡ ಬಾಣವನ್ನು ತೊಡು, ಪಕ್ಕಕ್ಕೆ ಸಿಡಿಯಬೇಡ, ಹೊಡೆ, ಮುಂದೆ ಸಾರ್ಚು, ಹಿಡಿದುಕೋ, ಮರೆಯಾಗು, ಮಾಡು, ಅಡಗಿ ಹೊಡೆ, ಬಡಿಗೋಲನ್ನು ಇಡು ನಾಯಿಯನ್ನು ಮುಂದೆ ಬಿಡು ಸೆಡೆಯಬೇಡ, ಕೆಡಹು" ಎಂಬ ಬೇಡರ ಪಡೆಯ ಮಾತುಗಳು ಅಡವಿಯಲ್ಲೆಲ್ಲ ಹೊಸರೀತಿಯಿಂದ ತುಂಬಿಕೊಂಡವು!
ಹೀಗೆ ಹೋಗುತ್ತಿರುವ ಬೇಡರ ಪಡೆಗೆ ಒಡೆಯನಾಗಿ ಅಂದು ಬಂದಿದ್ದಾತ ದುಷ್ಟಬುದ್ಧಿಯಿಂದಲೇ ಕುಂತಳದ ರಾಜನಿಗೆ ಸಾಮಂತನಾಗಿ ನಿಯೋಜಿಸಲ್ಪಟ್ಟ ಕುಳಿಂದ! ಆ ಕಾಡನ್ನೂ ಸೇರಿಸಿ ಚಂದನಾವತಿಯೆಂಬ ನಾಡಿನ ಆತ ರಾಜನಾಗಿದ್ದ! ಆತನಿಗೆ ಮಕ್ಕಳಿರಲಿಲ್ಲ. ಆತ ಒಂದು ಜಿಂಕೆಯನ್ನು ಬೆಂಬತ್ತಿ ಬಂದಾಗ ಈ ಹರಿಸ್ಮರಣೆಯಲ್ಲಿ ಇದ್ದ ಮಗುವನ್ನು ಕಾಣುತ್ತಾನೆ! ಕುದುರೆಯಿಂದ ಇಳಿದು ಸಂತೋಷದಿಂದ ಬಂದು ಮಗುವನ್ನು ಮೈದಡವಿ ಕಂಬನಿಯನ್ನು ಒರೆಸಿ ನೀರಿನಿಂದ ಕಾಲಿನ ರಕ್ತವನ್ನು ತೊಳೆದು ಮೋಹದಿಂದ ಗದ್ಗದನಾಗಿ ತನ್ನ ಸೌಭಾಗ್ಯದಿಂದಲೇ ಇವನು ದೊರೆತ ಎಂದು ನೆನೆದು ಇವನನ್ನು ತನ್ನ ಅರಮನೆಗೆ ಕರೆತಂದು ಲಾಲಿಸಿದ ಪಾಲಿಸಿದ. ತನ್ನ ನಗೆಯಿಂದ ಚಂದ್ರನನ್ನೂ ಮೀರಿಸುತ್ತಾನೆ ಎಂದು ಅವನಿಗೆ ಚಂದ್ರಹಾಸ ಎಂಬ ಹೆಸರನ್ನು ಇಟ್ಟ.
ಕತ್ತಲೆಯ ಮನೆಗೆ ಮಣಿದೀಪವಾದಂತೆ ಸಲೆ
ಬತ್ತಿದ ಸರೋವರಕೆ ನವ ಜಲಮೊದವಿದಂತೆ
ಬಿತ್ತರದ ಕಾವ್ಯರಚನೆಗೆ ದೇವತಾಸ್ತುತಿ ನೆಗಳ್ದಂತೆ ಭೂತಳದೊಳು
ಮತ್ತೆ ಸಂತಾನಮಿಲ್ಲದ ಕುಳಿಂದನ ಬಾಳ್ಕೆ-
ಗುತ್ತಮಕುಮಾರನಾದಂ ಚಂದ್ರಹಾಸನೆನ-
ಲುತ್ತರೋತ್ತರಮಪ್ಪುದಚ್ಚರಿಯೆ ಸುರಪುರದ ಲಕ್ಷ್ಮೀಶನಾಜ್ಞೆಯಿಂದ ||
ಹೀಗೆ ಮಕ್ಕಳಿಲ್ಲದ ಮನೆಗೆ ಬಂದ ಮಗ ಕತ್ತಲೆಯ ಮನೆಗೆ ಮಣಿದೀಪದಂತಾದ, ಬತ್ತಿದ ಸರೋವರಕ್ಕೆ ಹೊಸದಾಗಿ ನೀರು ತುಂಬಿಕೊಂಡಂತಾದ, ವಿಸ್ತಾರವಾದ ಕಾವ್ಯರಚನೆಗೆ ದೇವತಾಸ್ತುತಿಯಂತೆ ನಾಂದಿಯಾದ. ಸಂತಾನವಿಲ್ಲದ ಕುಳಿಂದಕನ ಜೀವನದಲ್ಲಿ ಉತ್ತಮನಾದ ಕುಮಾರನಾಗಿ ಚಂದ್ರಹಾಸ ದೊರೆತ ಮೇಲೆ ದೇವಪುರದ ಲಕ್ಷ್ಮೀಶನ ಆಜ್ಞೆಯಿಂದ ಉತ್ತರೋತ್ತರ ಅಭಿವೃದ್ಧಿಯಾಯಿತು.
ಹೀಗೆ ಚಂದ್ರಹಾಸನ ಕಥೆಯ ಮೊದಲ ಅರ್ಧ. ಇನ್ನುಳಿದ ಕಥೆಯನ್ನು ಮುಂದಿನ ಸಂಚಿಕೆಯಲ್ಲಿ ಅವಲೋಕಿಸೋಣ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ