ದ್ರೌಪದಿಯ
ಸೌಂದರ್ಯವನ್ನು ಕಂಡು ಎಲ್ಲರೂ
ಮಂತ್ರಮುಗ್ಧರಾಗಿ ಕುಳಿತಿದ್ದಾಗ
ದ್ರುಪದರಾಜ ಒಂದು ಬಿಲ್ಲನ್ನೂ
ಮತ್ಸ್ಯಯಂತ್ರವನ್ನೂ ತಂದಿರಿಸಿ
ಆ ಬಿಲ್ಲಿನಲ್ಲಿ ಬಾಣವನ್ನು ಹೂಡಿ
ತಮ್ಮ ಬಾಹುವಿಕ್ರಮದಿಂದ ಯಂತ್ರವನ್ನು
ಭೇದಿಸಿದರೆ ಆತ ದ್ರೌಪದಿಯನ್ನು
ಗೆದ್ದಂತೆ ಎಂದು ಸೂಚಿಸಿದ.
ಆ ಬಿಲ್ಲೇ
ಕಬ್ಬಿನ ಬಿಲ್ಲು. ಅಲ್ಲಿರುವ
ಬಾಣಗಳೇ ಹೂವಿನ ಬಾಣಗಳು.
ಯಂತ್ರವೇ
ದ್ರೌಪದಿಯ ಹೃದಯ. ಅದನ್ನು
ಗೆಲ್ಲುವವನೇ ದ್ರೌಪದಿಗೆ
ಮನ್ಮಥನಾಗುತ್ತಾನೆ ಎಂದು ಸಾರಿ
ಹೇಳಿ ಆ ಧನುಸ್ಸನ್ನೂ ಅದರ ಬಾಣಗಳನ್ನೂ
ಯಂತ್ರವನ್ನೂ ಅಲ್ಲಿ ಇಟ್ಟು
ಅದಕ್ಕೆ ಗಂಧಾಕ್ಷತೆಗಳಿಂದ
ಪೂಜಿಸಿದರು. ಆಗ
ಮಂಗಳವಾದ್ಯಗಳೆಲ್ಲ ಮೊಳಗಿದವು.
ಆ ಬಳಿಕ ನಾನಾದಿಗಂತದ
ಧರಣೀಶ್ವರರೆಲ್ಲ ತಮ್ಮ ಹಮ್ಮು
ಬಿಮ್ಮುಗಳಿಂದ ಬಹುಸುಲಭವಾಗಿ
ಗೆದ್ದುಬಿಡುತ್ತೇವೆಂಬ ಉತ್ಸಾಹದಲ್ಲಿ
ಬಂದು ಬಿಲ್ಲನ್ನು ಎತ್ತಲು
ಪ್ರಯತ್ನಿಸಿದ್ದಾಯಿತು.
ಆದರೆ ಆ ಬಿಲ್ಲು
ನೆಲವನ್ನು ಬಿಡಲೇ ಇಲ್ಲ.
ಅವರಿಗೆಲ್ಲ
ಕೈಲಾಸಪರ್ವತವನ್ನು ಎತ್ತಲು ಹೋದ
ರಾವಣನ ಪರಿಸ್ಥಿತಿಯಾಯಿತು.
ಕೆಲವರ ಹಾರ
ಹರಿದು ಹೋಯಿತು. ಕೆಲವರ
ಕಿವಿಗಳ ಆಭರಣದ ಮಣಿಗಳು ಕಳಚಿ
ಬಿದ್ದವು. ಕೆಲವರ
ಕಾಲಿನ ನೇವುರ ತುಂಡಾಯಿತು.
ಅವರ ನೆನಪುಗಳೆಲ್ಲ
ಕುಗ್ಗಿದವು. ಅತ್ತ
ಅಂತಃಪುರದ ನಾರಿಯರು ಚಪ್ಪಾಳೆ
ತಟ್ಟಿಕೊಂಡು ನಗುತ್ತಿರುವುದನ್ನು
ಕಂಡು ನಾಚಿ ಮುಖಕ್ಕೆ ಮುಸುಕುಹಾಕಿಕೊಂಡು
ತಮ್ಮ ತಮ್ಮ ಸಿಂಹಾಸನಕ್ಕೆ ಬಂದು
ಕುಳಿತರು.
ಇಲ್ಲೆಲ್ಲ
ಕುಮಾರವ್ಯಾಸ ಬಹುಸೂಕ್ಷ್ಮವಾಗಿ
ಚಿತ್ರಿಸಿ ರಾಜರ ಪರಿಸ್ಥಿತಿ
ಏನಾಯಿತು ಎಂಬುದನ್ನು ಅವರ ಆಭರಣಗಳು
ಹರಿದುಹೋದದ್ದರಿಂದ ಬಣ್ಣಿಸುತ್ತಾನೆ.
ಆತನ ಕಣ್ಣು
ಪ್ರತಿಯೊಂದು ಸನ್ನಿವೇಶದಲ್ಲೂ
ಇಷ್ಟೇ ಸೂಕ್ಷ್ಮವಾಗಿ ಅವಲೋಕಿಸುತ್ತ
ಹೋಗುವ ಚಾತುರ್ಯವನ್ನು ಹೊಂದಿದೆ.
ಆತನ ಮಾತು
ಅದನ್ನೆಲ್ಲ ಬಣ್ಣಿಸುವ ಶಕ್ತಿಯನ್ನು
ಹೊಂದಿದೆ. ಹಾಗೇ
ಮುಂದಿನ ಕಥೆಯನ್ನು ಅವಲೋಕಿಸಿದರೆ
ಅಲ್ಲಿ ಸೋತ ರಾಜರು ಮಾತನಾಡಿಕೊಳ್ಳುವುದನ್ನು
ಹೀಗೆ ಹೇಳುತ್ತಾನೆ-
“ಮಿಡುಕದೀ ಧನು
ನಮ್ಮ ಝಾಡಿಸಿ ಕೆಡಹಿತಿದನಿನ್ನಾರು
ಕೊರಳಲಿ
ತೊಡಿಸಿ ತಿರುವನು
ಸೆಳೆದು ಬಿಡುವರೊ ಯಂತ್ರದಲಿ ಶರವ
ಕಡುಹಿನಣ್ಣನ
ಕಾಂಬೆವೈಸಲೆ ನುಡಿದು ಮಾಡುವುದೇನೆನುತ
ಸಿರಿ-
ಮುಡಿಯ ಮುಸುಕಿನ
ರಾಯರಿದ್ದರು ಬಯಲ ಬಿಂಕದಲಿ"
ಈ ಬಿಲ್ಲು
ನಮ್ಮನ್ನು ಝಾಡಿಸಿ ಕೆಡವಿತು.
ಇದನ್ನು ಇನ್ನು
ಯಾರು ಬಾಗಿಸಿ ಹೆದೆಯನ್ನು ಕಟ್ಟಿ
ಬಾಣವನ್ನು ಬಿಡುತ್ತಾರೋ ಆ ಕಡುಹಿನ
ಅಣ್ಣನನ್ನು ನೋಡೋಣ! ನುಡಿದು
ಮಾಡುವುದೇನು" ಎಂದು
ತಮ್ಮ ಸಿರಿಮುಡಿಯ ಮುಸುಕಿನಲ್ಲಿ
ರಾಜರೆಲ್ಲ ಬಿಂಕ ತೋರಿಸಿಕೊಂಡು
ಕುಳಿತಿದ್ದರು.
ಆಗ ಮಗಧದ ಜರಾಸಂಧ
ಬಂದ; ಅವನು
ಬಿಲ್ಲನ್ನು ಎತ್ತಿದರೆ ಬಿಲ್ಲು
ಅವನ ಮೈಗೇ ಒರಗಿತು. ಅವನು
ಒತ್ತಿಹಿಡಿದ. ಬಿಲ್ಲಿಗೆ
ಇವನು ಯಾರು ಎಂದು ಗೊತ್ತಿಲ್ಲ.
ಇವನು ಹಲ್ಲು
ಕಚ್ಚಿಕೊಂಡು ಹಿಡಿದುಕೊಂಡು
ಬಳಲಿದ. ಅಷ್ಟಕ್ಕೇ
ಅವನ ಅಳ್ಳೆಗಳೆಲ್ಲ ಅಲ್ಲಾಡಿದವು
ನೋಯತೊಡಗಿದವು. ಬೆವರನ್ನು
ಆರಿಸಿಕೊಂಡು ಶ್ರಮವನ್ನು ಕಳೆದು
ಮೊಣಕಾಲನ್ನು ಇಟ್ಟು ಎದೆಯನ್ನು
ಒತ್ತಿ ಒಂದು ದಂಡೆಯಲ್ಲಿ ಸರಿಯಾಗಿ
ಹಿಡಿದುಕೊಂಡು ಎತ್ತಲು ಪ್ರಯತ್ನಿಸಿದರೆ
ಒಂದು ಜವೆಯಷ್ಟು ನೆಲವನ್ನು
ಬಿಟ್ಟಿತು! ಅವನ
ಪರಾಕ್ರಮಗರ್ವವಿಭ್ರಮವನ್ನೆಲ್ಲ
ಸದೆದು ಹಾಕಿತು! ಹೆಂಗಳೆಯರೆಲ್ಲ
ಘೊಳ್ಳನೆ ನಗುವಾಗ ಮುಸುಕು ಹಾಕಿಕೊಂಡು
ಬಂದು ಕುಳಿತುಕೊಂಡ. ಆಗ
ಚೇದಿಯ ರಾಜ ಶಿಶುಪಾಲ ಹೋಗಿ ನಗುವ
ಹೆಂಗಸರ ತುರುಬನ್ನು ಕೊಯ್ಯಿಸುವೆ
ಎಂದು ಗರ್ವದ ನುಡಿಗಳನ್ನಾಡುತ್ತಾ
ಬಿಲ್ಲನ್ನು ಎತ್ತಲು ಪ್ರಯತ್ನಿಸಿ
ವಿಫಲನಾಗಿ ಅವಮಾನಿತನಾಗಿ ಬಂದ.
ಮಗಧರಾಜನೂ
ಚೇದಿರಾಜನೂ "ಇದೆಲ್ಲ
ನಮಗೇಕೆ! ಭಂಡರಾದ
ಪಾಂಚಾಲ ರಾಜರೂ ಉಳಿದವರೂ ಹೆಂಗಸರ
ನಗೆಯನ್ನೇ ತಲೆಯ ಮೇಲೆ ಹೊತ್ತುಕೊಳ್ಳಲಿ
"ಎಂದು
ತಮ್ಮ ಪಟ್ಟಣಕ್ಕೆ ಹೋದರು.
ಶಲ್ಯರಾಜ ಬಂದು
ವಿಫಲನಾಗಿ ಹೋದ. ಕರ್ಣನೂ
ಬಂದು ಬಿಲ್ಲನ್ನೆತ್ತಲಾರದೇ
ಹೋದದ್ದು ಕಂಡು ಉಳಿದ ರಾಜರು "
ಶ್ರೀಗಂಧದ
ಮರಕ್ಕೆ ಹಾವು ಸುತ್ತಿಕೊಂಡಿರುತ್ತದೆ
ಎನ್ನುತ್ತಾರೆ. ಇದು
ದ್ರೌಪದಿ ಎಂಬ ಶ್ರೀಗಂಧವನ್ನು
ಸುತ್ತಿಕೊಂಡ ಹಾವು" ಎಂದು
ದುಗುಡದಲ್ಲಿದ್ದರು. ಆಗ
ಬಲರಾಮ ತಾನೂ ಒಮ್ಮೆ ನೋಡಿಯೇಬಿಡುವೆ
ಎಂದು ಯೋಚಿಸಿ ಎದ್ದದ್ದನ್ನು
ಕಂಡು ಕೃಷ್ಣ- “ದ್ರೌಪದಿ
ನಮಗೆ ಎಷ್ಟೆಂದರೂ ತಂಗಿಗೆ ಸಮಾನ.
ಆಕೆ ಪಾಂಡವರಿಗೇ
ಪತ್ನಿಯಾಗುತ್ತಾಳೆ"
ಎಂದು ಹೇಳಿ
ಅವನನ್ನು ಕುಳ್ಳಿರಿಸಿದ.
ಆಗ ಬಲರಾಮ-
“ಪಾಂಡವರು
ಅಂದೇ ಬೆಂಕಿಯಲ್ಲಿ ಸುಟ್ಟುಹೋದರೆಂದು
ಲೋಕವೆಲ್ಲಾ ತಿಳಿದಿದೆ.
ಆದರೂ ಶಠಾಗಮಿಕ!
ನಿನಗೆ ಅಂಜುತ್ತೇನೆ
(ನೀನೇನೋ
ಮೋಸವನ್ನು ಮಾಡುತ್ತೀಯಾ!)"
ಎಂದು ಸುಮ್ಮನೆ
ಕುಳಿತ.
ಕ್ಷತ್ರಿಯರೆಲ್ಲಾ
ಈಕೆಯನ್ನು ಗೆಲ್ಲಲಾರದೇ ಸೋತಿದ್ದಾರೆ,
ಬ್ರಾಹ್ಮಣರು
ಯಾರಾದರೂ ಇದ್ದಾರೋ ಕೇಳಿ ಎಂದು
ಡಂಗುರವನ್ನು ಹೊಡೆಸಿದರು.
"ಶಾಸ್ತ್ರದಂತೆ
ಕ್ಷತ್ರಿಯಕನ್ಯೆಯನ್ನು ಬ್ರಾಹ್ಮಣರಿಗೆ
ಕೊಡಬಹುದು" ಎಂದು
ಶಾಸ್ತ್ರವನ್ನೂ ಹೇಳಿ ಡಂಗುರ
ಸಾರಿದ್ದನ್ನು ಕೇಳಿ "ನಮಗೇಕೆ
ಈ ಸುಂದರಿಯ ತೊಡಕು! ಬಿಡು!
ನಾವೆಲ್ಲಿ
ಬಿಲ್ಲೆಲ್ಲಿ! ನಮಗೆ
ಇದೆಲ್ಲಾ ಆಗುವುದಲ್ಲ!”
ಎಂದು ಹೇಳಿದರು.
“ಬಂದ ದಕ್ಷಿಣೆ
ಮೃಷ್ಟಭೋಜನದಿಂದ ತುಷ್ಟರು ನಾವು
ನಮಗಿದ-
ರಿಂದ ಬಹುದುಷ್ಕೀರ್ತಿ
ಬರಲೆಂದುದು ಬುಧವ್ರಾತ"
"ನಾವು ಬಂದ
ದಕ್ಷಿಣೆ ಹಾಗೂ ಭೋಜನದಿಂದಲೇ
ತೃಪ್ತರಾಗಿದ್ದೇವೆ. ನಮಗೆ
ಯಾಕೆ ಈ ದುಷ್ಕೀರ್ತಿ"
ಎಂದು ಕೆಲವರು
ಹೇಳಿದರು.
“ವಚನಶೂರರು
ನಾವು ಪಾರ್ಥಿವ ನಿಚಯವೇ ಭುಜಶೂರರನಿಬರ-
ನಚಲಧನು ಭಂಗಿಸಿತು
ನಮಗೀ ವಿದ್ಯೆ ವೈದಿಕವೆ!
ಉಚಿತವಲ್ಲಿದು
ನಮ್ಮ ಸಾಹಸರಚನೆಯನು ನೋಡುವರೆ
ಪಂಡಿತ
ನಿಚಯವಿದಿರಲಿ
ನಿಲಲಿ ತೋರುವೆವಲ್ಲಿ ವಿಸ್ಮಯವ"
ನಾವು ಮಾತಿನಲ್ಲಷ್ಟೇ
ಶೂರರು, ಕ್ಷತ್ರಿಯರು
ಭುಜಲದಲ್ಲಿ ಶೂರರು. ಈ
ಧನು ಅವರನ್ನೇ ಭಂಗಿಸಿತು.
ನಮಗೆ ಈ ವಿದ್ಯೆ
ಏನು ವೈದಿಕವೇ! ಇದು
ಯೋಗ್ಯವಾದದ್ದಲ್ಲ! ನಮ್ಮ
ಸಾಹಸವನ್ನು ನೋಡಬೇಕೆಂದರೆ ಪಂಡಿತರ
ಗುಂಪು ಎದುರಿಗೆ ನಿಲ್ಲಲಿ.
ಆಗ ವಿಸ್ಮಯವನ್ನು
ತೋರಿಸುತ್ತೇವೆ"
ವೇದವೇದಾಂಗಗಳಲ್ಲಿ
ಪದಕ್ರಮದಲ್ಲಿ ಸರ್ವಾಂಗವಿಷಯದಲ್ಲಿ
ಸಕಲಪುರಾಣಗಳಲ್ಲಿ ಮೀಮಾಂಸೆಯಲ್ಲಿ
ಸ್ಮೃತಿ ತರ್ಕಶಾಸ್ತ್ರಗಳಲ್ಲಿ
ಕಾಮಶಾಸ್ತ್ರವೇ ಮೊದಲಾದ
ಉಪಾಂಗವಿದ್ಯೆಗಳಲ್ಲಿ ನಮ್ಮನ್ನು
ಪರೀಕ್ಷಿಸಲಿ ಬೇಕಾದರೆ ಎಂದು
ಬುಧರು ಹೇಳತೊಡಗಿದರು.
ಇನ್ನು ಕೆಲವು
ಬ್ರಾಹ್ಮಣರು- “ಭರತನ
ನಾಟ್ಯಶಾಸ್ತ್ರದಲ್ಲಿ,
ವೈದ್ಯದಲ್ಲಿ,
ಕಾವ್ಯದಲ್ಲಿ,
ಅಲಂಕಾರಶಾಸ್ತ್ರದಲ್ಲಿ
ಗಜಲಕ್ಷಣ, ಅಶ್ವಲಕ್ಷಣಗಳಲ್ಲಿ,
ಅಥವಾ
ಮಂತ್ರತಂತ್ರಗಳಲ್ಲಿ ಅಥವಾ ಸರಸವಾದ
ಕವಿತಾರಚನೆಯಲ್ಲಿ ವಿಸ್ತಾರವಾದ
ಉಪನ್ಯಾಸದಲ್ಲಿ ಭೂಪತಿ ನಮ್ಮನ್ನು
ಕರೆಸಿ ನೋಡಲಿ" ಎಂದು
ಮಾತನಾಡಿಕೊಳ್ಳತೊಡಗಿದರು.
ಆಗ ಕೆಲವು ಪುಂಡು
ಹುಡುಗರು-
“ಅಲ್ಲದಿರ್ದರೆ
ಶೋಧಿಸಿದ ತನಿಬೆಲ್ಲವಿಕ್ಕಿದ
ಹೂರಿಗೆಯ ಮೆದೆ-
ಯಲ್ಲಿ ಪರಡಿಯ
ಶಾವಿಗೆಯ ಪರಿಪರಿಯ ಪಾಯಸದ
ಪುಲ್ಲಿಗೆಯ
ತತ್ಸವಿಯ ಮಂಡಿಗೆಯಲ್ಲಿ ನವಘೃತಸೂಪದಂಶಕ-
ದಲ್ಲಿ ನೋಡಲಿ
ನಮ್ಮನೆಂದುದು ಧೂರ್ತವಟುನಿಕರ"
"ಚೆನ್ನಾಗಿ
ಶೋಧಿಸಿದ ತನಿಬೆಲ್ಲವನ್ನು ಹಾಕಿದ
ಹೂರಿಗೆಯಲ್ಲಿ, ಪರಡಿಯ
ಶಾವಿಗೆಯ ಪರಿಪರಿಯ ಪಾಯಸದಲ್ಲಿ,
ಮಂಡಿಗೆಯಲ್ಲಿ
ತುಪ್ಪ ಹಾಕಿದ ಸೂಪದಂಶಕಗಳಲ್ಲಿ
ನಮ್ಮ ಪರಾಕ್ರಮವನ್ನು ನೋಡಲಿ"
ಎಂದು ಹೇಳಿದರು.
ಕುಮಾರವ್ಯಾಸನ
ಸೂಕ್ಷ್ಮಾವಲೋಕನಪ್ರಜ್ಞೆಯನ್ನು
ಇಲ್ಲಿ ಗಮನಿಸಬಹುದು.
ಸಾವಿರಾರು ಜನ
ಬಂದು ಸೇರಿದ ಮದುವೆಯ ಮನೆ,
ಒಬ್ಬೊಬ್ಬರು
ಒಂದೊಂದು ಮಾತನಾಡುತ್ತಿರುತ್ತಾರೆ.
ಇಲ್ಲಿ ವರಿಸಬೇಕಾದ
ಗಂಡು ಪಂಥದಲ್ಲಿ ಗೆದ್ದು
ರಾಜಕುಮಾರಿಯನ್ನು ಪಡೆಯಬೇಕು.
ಆಗ ಯಾರುಯಾರು
ಹೇಗೆ ಮಾತನಾಡಬಹುದು ಎಂಬುದನ್ನು
ಹೀಗೆ ವಿಸ್ತರಿಸಿ ಬಣ್ಣಿಸುತ್ತಾನೆ.
ಹಿರಿಯ ಪಂಡಿತರೆಲ್ಲಾ
ಗಂಭೀರವಾಗಿ ತಮಗೆ ಗೊತ್ತಿರುವ
ಶಾಸ್ತ್ರಗಳಲ್ಲಿ ಪಾಂಡಿತ್ಯದಲ್ಲಿ
ಪರೀಕ್ಷಿಸಲಿ ಎಂದರೆ ಪುಂಡು
ಹುಡುಗರು ಊಟದಲ್ಲಿ ನಮ್ಮನ್ನು
ಗೆಲ್ಲುವವರು ಯಾರೂ ಇಲ್ಲ ಎಂದು
ಅದರ ಪರೀಕ್ಷೆಯೊಡ್ಡಲಿ ಎಂದು
ಮಾತನಾಡಿಕೊಳ್ಳುತ್ತಾರೆ!
ಆಮೇಲೆ ಬ್ರಾಹ್ಮಣರ
ವೇಷದಲ್ಲಿದ್ದ ಅರ್ಜುನ ಎದ್ದು
ಅಣ್ಣನ ಅನುಮತಿಯನ್ನು ಪಡೆದು
ಹೊರಡುತ್ತಾನೆ. ಆಗ
ಇವರ ಮಾತುಗಳನ್ನು ಕೇಳಿ-
ಏನು
ಸಿದ್ಧಿಯುಪಾಧ್ಯರೆದ್ದಿರಿದೇನು
ಧನುವಿಂಗಲ್ಲಲೇ ತಾ-
ನೇನು ಮನದಂಘವಣೆ!
ಬಯಸಿದಿರೇ
ನಿತಂಬಿನಿಯ!
ವೈನತೇಯನ
ವಿಗಡಿಸಿದ ವಿಷವೇನು ಸದರವೊ
ಹಾವಡಿಗರಿಗಿ-
ದೇನು
ನಿಮ್ಮುತ್ಸಾಹವೆಂದುದು ಧೂರ್ತವಟುನಿಕರ"
“ಓಹೋ!
ಏನು ಉಪಾಧ್ಯರು
ಎದ್ದುಬಿಟ್ಟಿರಿ! ಇದೇನು!
ಬಿಲ್ಲಿಗೋ!
ಅಥವಾ
ಮನಸ್ಸಿನಲ್ಲೇನಿದೆ! ಚಂದದ
ಹುಡುಗಿಯನ್ನು ಬಯಸಿಬಿಟ್ಟಿರೋ!
ಗರುಡನನ್ನೇ
ಗಲಿಬಿಲಿಗೊಳಿಸುವ ಹಾವಿನ ವಿಷದಲ್ಲಿ
ಹಾವಾಡಿಗರಿಗೆ ಏನು ಸದರವೋ!
ಇದೇನು ನಿಮ್ಮ
ಉತ್ಸಾಹ!” ಎಂದೆಲ್ಲ
ಹೇಳಿದರು ಆ ಧೂರ್ತವಟುಗಳು!
ನೀವು
ಮದುವೆಯಾಗುವುದಿದ್ದರೆ ಬ್ರಾಹ್ಮಣರಲ್ಲಿ
ಕನ್ಯೆಯರಿರಲಿಲ್ಲವೇ! ಈ
ಕ್ಷತ್ರಿಯ ಕನ್ಯೆಯನ್ನು ವರಿಸುವುದು
ಭಗೀರಥಯತ್ನವಾಗುತ್ತದೆಯಷ್ಟೆ!
ಎಂದು ಕೆಲವರು
ಹೇಳಿದರು. ಕೆಲವರು
ಹೋಗದಿರು ಎಂದು ಜರೆದರು,
ಕೆಲವರು ನಮಗೆ
ಗೊತ್ತಿಲ್ಲವೇ ಎಂದರು,
ಕೆಲವರು ಇದು
ವಿಪ್ರಸಭೆಗೇ ಅಪಹಾಸ್ಯವಾಗುತ್ತದೆ
ಎಂದರು. ಕೆಲವರು
ಇದರಲ್ಲಿ ತಪ್ಪೇನಿದೆ ಎಂದರು,
ಕೆಲವರು
ಭಾಗ್ಯಮುಖನಾದ ಇವನಿಗೆ ಖಂಡಿತವಾಗಿಯೂ
ಬಿಲ್ಲು ಸೋಲುತ್ತದೆ ಎಂದರು.
ಅವನು ತೊಟ್ಟ
ಹೊಸ ಯಜ್ಞೋಪವೀತದಿಂದ ಹಣೆಯಲ್ಲಿ
ಮಟ್ಟಿಯ ಗಂಧದಿಂದ ದರ್ಭೆಯಿಂದ
ಕರಡಿಗೆಯಿಂದ, ಕೈಯಲ್ಲಿ
ಸಿಕ್ಕಿಸಿಕೊಂಡ ದರ್ಭೆಗಳಿಂದ,
ಉಟ್ಟುಕೊಂಡ
ಬಳಲುಗಚ್ಚೆಯಿಂದ ಅರ್ಜುನ
ಬರುತ್ತಿರುವುದನ್ನು ಕಂಡು ಅಲ್ಲಿದ
ರಾಜರುಗಳೆಲ್ಲ ಗಹಗಹಿಸಿ ನಗತೊಡಗಿದರು.
“ಬಿಲ್ಲನ್ನು
ಎತ್ತುವುದಕ್ಕೆ ಅದೇನು ಕೃಷ್ಣಾಜಿನವೋ!
ಅಥವಾ
ಸಾಲಗ್ರಾಮದೇವರೋ!ಅಥವಾ
ತುಳಸಿ ನೀರಿನ ಕಲಶವೋ! ಅಥವಾ
ಧರ್ಭೆ ಸಮಿಧಗಳ ಹೊರೆಯೋ!
ನೆನೆಸಿಟ್ಟ
ಎಳ್ಳೋ! ಅಥವಾ
ಉಪಾಸನೆಯ ಕೊಳವಿಯೋ! ಆಹಾ!
ದ್ರೌಪದಿಯ
ಸೌಭಾಗ್ಯವೇ "ಎಂದು
ಅವರೆಲ್ಲ ನಗತೊಡಗಿದ್ದರೆ,
ಇತ್ತ ದ್ರೌಪದಿಯ
ಸಖಿಯರು
ಎಲವೊ ಮಟ್ಟಿಯ
ಮದನ! ದರ್ಭೆಯ
ತಿಲದ ಮನ್ಮಥ! ವಿಮಲ
ಧೋತ್ರದ
ತಳಿರುಗಾಸೆಯ
ಕಾಮ! ಕೃಷ್ಣಾಜಿನದ
ಕಂದರ್ಪ!
ನಳಿನಮುಖಿಯನು
ವರಿಸು ಬಾ ನಿನಗಳವಡುವನೆಲೆಯಕ್ಕ
ಕೇಳೌ
ತಲೆವಿಡಿವೆವಾವ್ನೋಡುಯೆಂದರು
ನಗುತ ಚಪಲೆಯರು"
ನಳಿನಮುಖಿಯನ್ನು
ವರಿಸು ಬಾ!ಅಕ್ಕ!
ಇಔನು ನಿನಗೆ
ಅಳವಡುತ್ತಾನೆ! ನಾವು
ತಲೆಯನ್ನು ಹಿಡಿದುಕೊಳ್ಳುತ್ತೇವೆ
ಎಂದು ನಗತೊಡಗಿದರು!
ಆ ಬಳಿಕ ಅರ್ಜುನ
ಲೀಲಾಜಾಲವಾಗಿ ಧನುಸ್ಸಿನ ಹೆದೆಯನ್ನು
ಏರಿಸಿ ಬಾಣವನ್ನು ಬಿಟ್ಟು
ಗೆದ್ದುಬಿಡುತ್ತಾನೆ.
ಅದನ್ನು ಕಂಡು
ಅಷ್ಟು ಹೊತ್ತು ಏನೇನೋ ಮಾತನಾಡುತ್ತ
ಅವನಿಗೆ ಬಯ್ಯುತ್ತಿದ್ದ ಬ್ರಾಹ್ಮಣರೆಲ್ಲ
ಒಮ್ಮೆಗೇ "ಹೋ"
ಎಂದು ಕೂಗುತ್ತಾ
ಹಾರುವನಿಗೇ ಸಿಕ್ಕಿದಳು ಎಂದು
ಉತ್ಸಾಹದಲ್ಲಿ ಎದ್ದು ಕುಣಿಯತೊಡಗಿದರು.
ಉಳಿದ ರಾಜರೆಲ್ಲ
ಇದೇನಾಯ್ತು ಹೀಗೆ ಎಂದು ಆಶ್ಚರ್ಯದಲ್ಲಿ
ಮೂಗಿನ ಮೇಲೆ ಬೆರಳನ್ನು ಹೊತ್ತು
ಕುಳಿತಿದ್ದರು! ಹಲವು
ರಾಜರು ತಮ್ಮನ್ನೆಲ್ಲ ಕರೆಸಿ
ದ್ರುಪದ ಅವಮಾನ ಮಾಡಿದ ಎಂದು
ಸಿಟ್ಟಿಗೆದ್ದು ಅವನ ವಿರುದ್ಧ
ಶಸ್ತ್ರ ಹಿಡಿದು ನಿಂತರು.
ಆಗ ಪಾಂಡವರೂ
ದ್ರುಪದನ ಕಡೆಯವರೂ ಸೇರಿ ಅವರನ್ನೆಲ್ಲ
ಹಿಮ್ಮೆಟ್ಟಿಸುತ್ತಾರೆ.
ಆ ಬಳಿಕ
ಸಂಜೆಯಾಗುತ್ತದೆ. ಕುಂತಿಯ
ಬಳಿ ಅರ್ಜುನ "ಅಮ್ಮಾ!
ಇಂದು ಎಲ್ಲಾ
ಧರಣೀಶ್ವರರನ್ನು ಗೆದ್ದು ತಂದ
ಮುತ್ತನ್ನು ನೋಡು!” ಎಂದು
ಹೇಳಿದಾಗ ಕುಂತಿ "ಲೇಸಾಯ್ತು!
ಐವರೂ ಕೂಡಿ
ಭೋಗಿಸಿ" ಎಂದು
ಹೇಳಿದಳು. ಅದರಂತೆ
ಐವರೂ ಮದುವೆಯಾಗುವುದೆಂದು
ನಿಶ್ಚಯಿಸಿದರು. ಆ
ಸಂದರ್ಭದಲ್ಲಿ ಸಂಜೆಯಾಗುತ್ತ
ಬಂತು. ಧೃಷ್ಟದ್ಯುಮ್ನ
ಇವರು ಯಾರೆಂದು ತಿಳಿಯಲು ಮಾರುವೇಷದಲ್ಲಿ
ಅವರನ್ನು ಹಿಂಬಾಲಿಸಿಕೊಂಡು
ಬಂದಿದ್ದ.
ಸಿಲುಕಿದುದು
ಜನದೃಷ್ಟಿ ಬಲುಗತ್ತಲೆಯ ಬಂಧದೊಳಂಧಕಾರದ
ಜಲಧಿಯಲಿ
ಜಗವದ್ದುದೇನೆಂಬೆನು ಮಹಾದ್ಭುತವ
ನಳಿನ ಮಿತ್ರನ
ಬೇಹುಕಾರರ ಸುಳಿವೊ ತಿಮಿರದ
ಪಾಳೆಯದೊಳೆನೆ
ನಿಳಯದೊಳಗಡೆ
ಸೊಡರು ತಳಿತುದು ಕೂಡೆ ನಗರಿಯಲಿ"
ಆಗ ಜನರ ದೃಷ್ಟಿಯೆಲ್ಲ
ಕತ್ತಲೆಯೆಂಬ ಅಂಧಕಾರದ ಸಮುದ್ರದಲ್ಲಿ
ಮುಳುಗಿತು. ಅದೇನು
ಅದ್ಭುತವೆನ್ನುವುದು!
ಸೂರ್ಯನ ಬೇಹುಕಾರರು
ಎಲ್ಲಾ ಕತ್ತಲೆಯ ಪಾಳೆಯದ ಒಳಗೆ
ಬಂದು ಸೇರಿಕೊಂಡಿದ್ದಾರೇನೋ
ಎಂಬಂತೆ ಎಲ್ಲರ ಮನೆಯಲ್ಲೂ ದೀಪಗಳು
ಬೆಳಗಿದ್ದವು.
ಹೀಗೆ ಬಂದ ಅವನು
ಈ ಐವರೂ ಕುದುರೆಯನ್ನು ನಡೆಸುವುದು,
ಗಜಶಾಸ್ತ್ರ,
ರಥವನ್ನು
ನಡೆಸುವುದು ಇತ್ಯಾದಿ ವಿಷಯಗಳನ್ನೇ
ಚರ್ಚಿಸುವುದನ್ನು ಕೇಳಿದ.
ಬ್ರಾಹ್ಮಣರಾದರೆ
ಸರಸವಾದ ಭೋಜನದ ಕುರಿತೋ ವೇದಾಂಗ
ವೇದ ತರ್ಕಗಳ ಮಾತುಗಳಲ್ಲಿಯೋ
ರಾತ್ರಿಯನ್ನು ಕಳೆಯುತ್ತಾರೆ,
ಕ್ಷತ್ರಿಯರಾದ
ಕಾರಣ ಗಜಶಾಸ್ತ್ರವೇ ಮೊದಲಾದ
ವಿಷಯಗಳನ್ನು ಚರ್ಚಿಸುತ್ತಿದ್ದರು
ಎಂದು ಸಂತೋಷಪಟ್ಟು ಹೊರಡುತ್ತಾನೆ.
ಮುಂದೆ ವೇದವ್ಯಾಸರು
ಬಂದು ಅವರ ಕಥೆಯನ್ನೆಲ್ಲ ವಿಸ್ತರಿಸಿದ
ಮೇಲೆ ದ್ರುಪದರಾಜನೂ ನಿಶ್ಚಿಂತನಾಗಿ
ದ್ರೌಪದಿಯನ್ನು ಐವರಿಗೂ ಮದುವೆ
ಮಾಡಿಕೊಡುತ್ತಾನೆ.
ಇಲ್ಲಿ ಸಣ್ಣ
ದೀಪಗಳು ಬೆಳಗಿದ್ದನ್ನು ಅಸ್ತವಾದ
ಸೂರ್ಯನ ಬೇಹುಕಾರರಿಗೆ ಕಲ್ಪಿಸುವ
ಕವಿಯ ಚಾತುರ್ಯವನ್ನು ಗಮನಿಸಬಹಬುದು.
ಅದೇ ಸಂದರ್ಭದಲ್ಲಿ
ದ್ರೌಪದಿಯನ್ನು ಮದುವೆಯಾದವರು
ಯಾರೆಂದು ತಿಳಿದುಕೊಳ್ಳಲು ಅವಳ
ಸಹೋದರನೂ ಬೇಹುಕಾರನಾಗಿ ಬಂದಿರುವುದು
ಈ ಕಲ್ಪನೆಗೆ ಇನ್ನಷ್ಟು ಮೆರುಗನ್ನು
ಕೊಡುತ್ತದೆ. ಅಲ್ಲದೇ
ಕುಮಾರವ್ಯಾಸ ಆ ಸಂಭಾಷಣೆಗಳಲ್ಲಿ
ಸಹಜವಾದ ಸೂಕ್ಷ್ಮತೆಯನ್ನು
ತಂದಿರುವುದೂ ಕೂಡ ಆಸ್ವಾದನೀಯ.
ಪ್ರತಿಭಾನ್ವಿತನಾದ
ಕವಿಯ ಚಿತ್ರಣವೆಂದರೇ ಹಾಗೆ!
ಸಾವಿರಾರು
ಪದ್ಯಗಳನ್ನು ಬರೆದರೂ ಅಲ್ಲಿ ಆ
ಕುಸುರಿಯ ಕೆಲಸವನ್ನು ಮಾಡಬೇಕು.
ಸಂದರ್ಭಕ್ಕೆ
ತಕ್ಕ ಇಂತಹ ಸಹಜವಾದ ಸಂಭಾಷಣೆಗಳು
ಆ ಕಾಲಕ್ಕೇ ಕೊಂಡೊಯ್ಯುವುದಲ್ಲವೇ!
ಅದಕ್ಕೇ ಕುವೆಂಪು
ಅವರು ಹೇಳಿದ್ದು- “ಕುಮಾರವ್ಯಾಸನು
ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು!
ಭಾರತ ಕಣ್ಣಲಿ
ಕುಣಿವುದು ಮೈಯಲಿ ಮಿಂಚಿನ ಹೊಳೆ
ತುಳುಕಾಡುವುದು"
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ