(ಸಮುದ್ರಮಥನ ಆದಾಗ ಹುಟ್ಟಿದ ಉಚ್ಚೈಶ್ರವಸ್ಸು ಎಂಬ ಕುದುರೆಯ ವಿಷಯದಲ್ಲಿ ಕದ್ರು ಹಾಗೂ ವಿನತೆಯರು ಪಂದ್ಯ ಕಟ್ಟಿಕೊಂಡ ಕಥೆ. ಕದ್ರು ಮಕ್ಕಳಿಗೆ ಶಾಪ ಕೊಟ್ಟ ಕಥೆ)
ವ॥ ಅಂತಿರಲತ್ತಲ್ ದೇವದಾನವರ್ಕಳ್ ಕ್ಷೀರಸಾಗರಮಂ ಮಥಿಸೆ ಐರಾವತಮುಂ ಉಚ್ಛೈಶ್ರವಸ್ಸುಂ ಸಕಲಸಂಪತ್ತಿಯುಂ ಲಕ್ಷ್ಮಿಯುಂ ಪೆಱೆಯುಂ ಬಹುವಿಧದ ಜೀವಜಂತುಗಳುಂ ಕಲ್ಪವೃಕ್ಷಮುಂ ಕಾಮಧೇನುವುಂ ದೊರೆತುದುಂ ತನ್ಮಧ್ಯದೊಳ್ ಕಾಲಕೂಟಮೆಂಬ ವಿಷಮುಂ ದೊರೆಕೊಂಡುದುಂ ಶಿವನಾ ಕಾಲಕೂಟಮಂ ಕುಡಿಯಲ್ ತಗುಳ್ದು ಪಾರ್ವತಿಯು ಕೊರಳೊಳೆ ತಡೆದುದುಂ ಸರ್ಪದಿಂ ಪಾರ್ವತಿ ಗರಳಮಂ ಶಿವನ ಕಂಠದೊಳೆ ಬಂಧಿಸೆ ಶಿವಂ ಸರ್ಪಾಭರಣನಾದುದುಂ ನೀಲಕಂಠನಾದುದುಂ ಅಂತ್ಯದೊಳ್ ಅಮೃತಮುಂ ದೊರೆತುದುಂ ಮೋಹಿನಿಯ ರೂಪಿಂ ಮಹಾವಿಷ್ಣುವು ದಾನವರ್ಕಳಂ ಬಂಚಿಸಿ ದೇವರ್ಕಳದಂ ಪಡೆದು ಕುಡಿದು ಬರ್ದಿಲರಾದುದುಂ ದುರದೃಷ್ಟವಶಾತ್ ಅಮರ್ದಂ ರಕ್ಕಸನೊರ್ವಂ ಕುಡಿಯಲ್ ವಿಷ್ಣುವಿನ ಚಕ್ರಾಯುಧದಿಂದವನ ಕೊರಳ್ ಕಳ್ತರಿಸಿ ರಾಹುಕೇತುವೆಂಬೆರಡು ಗರಂಗಳಾಗಿ ಆತಂ ಚಲಿಸುತ್ತುಮಿರ್ಪುದುಂ ಐರಾವತಮೆಂಬಾನೆಯಂ ಉಚ್ಛೈಶ್ರವಸ್ಸೆಂಬ ಕುದುರೆಯಂ ಸಂಪತ್ತಿಯಂ ಕಲ್ಪವೃಕ್ಷಕಾಮಧೇನುಗಳಂ ಸಕಲಮಂ ಇಂದ್ರಂ ಕೊಂಡುದುಂ ಬೞಿಕಂ ಮತ್ತೆ ದೇವದಾನವರ್ಕಳೊಳ್ ಯುದ್ಧಮಾದುದುಂ ದಾನವರ್ಕಳ್ ಸೋಲ್ತುದುಂ ಅಮರ್ದಂ ಸುರೇಂದ್ರಂ ಕಾಪಿಟ್ಟುದುಂ ಸಂದತ್ತು ಅಂತಲ್ಲದೆಯುಂ
(ಅಂತಿರಲ್-ಹೀಗಿರಲು, ಅತ್ತಲ್-ಅತ್ತ, ದೇವದಾನವರ್ಕಳ್-ದೇವತೆಗಳೂ ರಾಕ್ಷಸರೂ, ಕ್ಷೀರಸಾಗರಮಂ-ಕ್ಷೀರಸಾಗರವನ್ನು/ಹಾಲ್ಗಡಲನ್ನು, ಮಥಿಸೆ-ಕಡೆಯಲು, ಐರಾವತಮುಂ-ಐರಾವತವೆಂಬ ಆನೆಯೂ, ಉಚ್ಛೈಶ್ರವಸ್ಸುಂ-ಉಚ್ಛೈಶ್ರವಸ್ಸೆಂಬ ಕುದುರೆಯೂ, ಸಕಲಸಂಪತ್ತಿಯುಂ-ಎಲ್ಲಾ ಸಂಪತ್ತುಗಳೂ, ಲಕ್ಷ್ಮಿಯುಂ-ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯೂ, ಪೆಱೆಯುಂ-ಚಂದ್ರನೂ, ಬಹುವಿಧದ- ಹಲವು ಬಗೆಯಾದ, ಜೀವಜಂತುಗಳುಂ-ಜೀವಜಂತುಗಳೂ, ಕಲ್ಪವೃಕ್ಷಮುಂ-ಕೇಳಿದ್ದನ್ನು ಕೊಡುವ ಕಲ್ಪವೃಕ್ಷವೆಂಬ ಮರವೂ, ಕಾಮಧೇನುವುಂ-ಬಯಸಿದ್ದನ್ನು ನೀಡುವ ಕಾಮಧೇನುವೆಂಬ ಹಸುವೂ, ದೊರೆತುದುಂ-ಸಿಕ್ಕಿರುವುದೂ, ತನ್ಮಧ್ಯದೊಳ್-ಅದರ ಮಧ್ಯದಲ್ಲಿ, ಕಾಲಕೂಟಮೆಂಬ-ಕಾಲಕೂಟವೆಂಬ, ವಿಷಮುಂ-ವಿಷವೂ ದೊರೆಕೊಂಡುದುಂ-ದೊರೆತಿರುವುದೂ, ಶಿವನಾ(ಶಿವಂ+ಆ)-ಮಹಾಶಿವನು ಆ, ಕಾಲಕೂಟಮಂ-ಕಾಲಕೂಟವೆಂಬ ವಿಷವ್ನು, ಕುಡಿಯಲ್-ಕುಡಿಯುವುದಕ್ಕೆ, ತಗುಳ್ದು-ತೊಡಗಿ, ಪಾರ್ವತಿಯು-ಶಿವನ ಪತ್ನಿಯಾದ ಗಿರಿಜೆಯು, ಕೊರಳೊಳೆ-ಶಿವನ ಗಂಟಲಲ್ಲಿಯೇ, ತಡೆದುದುಂ-ವಿಷವನ್ನು ತಡೆಹಿಡಿದುದೂ, ಸರ್ಪದಿಂ-ಹಾವಿನಿಂದ, ಪಾರ್ವತಿ-ಪರಮೇಶ್ವರಿಯು, ಗರಳಮಂ-ವಿಷವನ್ನು, ಶಿವನ-ಶಿವನ, ಕಂಠದೊಳೆ-ಗಂಟಲಿನಲ್ಲಿಯೆ, ಬಂಧಿಸೆ-ಕಟ್ಟಿರಲು, ಶಿವಂ-ಪರಮೇಶ್ವರನು, ಸರ್ಪಾಭರಣನಾದುದುಂ-ಹಾವನ್ನೇ ಆಭರಣವಾಗಿ ಧರಿಸಿದವನಾದದ್ದೂ, ನೀಲಕಂಠನಾದುದುಂ-ಕಪ್ಪಾದ ಗಂಟಲನ್ನು ಹೊಂದಿದವನಾದುದೂ, ಅಂತ್ಯದೊಳ್-ಕೊನೆಯಲ್ಲಿ, ಅಮೃತಮುಂ-ಅಮೃತವೂ, ದೊರೆತುದುಂ-ದೊರೆತದ್ದೂ, ಮೋಹಿನಿಯ ರೂಪಿಂ-ಮೋಹಿನಿಯೆಂಬ ಸ್ತ್ರೀಯ ಅವತಾರದಲ್ಲಿ, ಮಹಾವಿಷ್ಣುವು-ಶ್ರೀಮನ್ನಾರಾಯಣನು, ದಾನವರ್ಕಳಂ-ರಾಕ್ಷಸರಿಗೆ, ಬಂಚಿಸಿ-ವಂಚನೆ ಮಾಡಿ, ದೇವರ್ಕಳ್-ದೇವತೆಗಳು, ಅದಂ-ಅದನ್ನು, ಪಡೆದು-ಹೊಂದಿ, ಕುಡಿದು-ಕುಡಿದು, ಬರ್ದಿಲರ್-ಮುಪ್ಪಿಲ್ಲದವರು, ಆದುದುಂ-ಆದದ್ದೂ, ದುರದೃಷ್ಟವಶಾತ್-ದುರದೃಷ್ಟದಿಂದ, ಅಮರ್ದಂ-ಅಮೃತವನ್ನು, ರಕ್ಕಸನೊರ್ವಂ(ರಕ್ಕಸಂ+ಒರ್ವಂ)-ರಾಕ್ಷಸನೊಬ್ಬನು, ಕುಡಿಯಲ್-ಕುಡಿದುಬಿಡಲು, ವಿಷ್ಣುವಿನ-ಶ್ರೀಹರಿಯ, ಚಕ್ರಾಯುಧದಿಂದ-ಚಕ್ರವೆಂಬ ಆಯುಧದಿಂದ, ಅವನ-ಆ ರಾಕ್ಷಸನ, ಕೊರಳ್-ಕುತ್ತಿಗೆಯು, ಕಳ್ತರಿಸಿ-ಕತ್ತರಿಸಲ್ಪಟ್ಟು, ರಾಹುಕೇತುವೆಂಬೆರಡು-ರಾಹು ಮತ್ತು ಕೇತು ಎಂಬ ಎರಡು, ಗರಂಗಳಾಗಿ-ಗ್ರಹಗಳಾಗಿ, ಆತಂ-ಆ ರಾಕ್ಷಸನು, ಚಲಿಸುತ್ತುಂ-ಚಲಿಸುತ್ತಾ, ಇರ್ಪುದುಂ-ಇರುವುದೂ, ಐರಾವತಮೆಂಬಾನೆಯಂ-ಐರಾವತವೆಂಬ ಆನೆಯನ್ನು, ಉಚ್ಛೈಶ್ರವಸ್ಸೆಂಬ-ಉಚ್ಚೈಶ್ರವಸ್ಸು ಎಂಬ, ಕುದುರೆಯಂ-ಕುದುರೆಯನ್ನು,, ಸಂಪತ್ತಿಯಂ-ಸಂಪತ್ತುಗಳೆಲ್ಲವನ್ನು, ಕಲ್ಪವೃಕ್ಷಕಾಮಧೇನುಗಳಂ-ಕಲ್ಪವೃಕ್ಷಕಾಮಧೇನುಗಳನ್ನು, ಸಕಲಮಂ-ಎಲ್ಲವನ್ನೂ, ಇಂದ್ರಂ-ಇಂದ್ರನು, ಕೊಂಡುದುಂ-ತೆಗೆದುಕೊಂಡದ್ದೂ, ಬೞಿಕಂ-ಆ ಬಳಿಕ, ಮತ್ತೆ-ಇನ್ನೊಮ್ಮೆ, ದೇವದಾನವರ್ಕಳೊಳ್-ದೇವತೆಗಳು ಹಾಗೂ ದಾನವರ ಮಧ್ಯೆ, ಯುದ್ಧಮಾದುದುಂ-ಯುದ್ಧವಾದದ್ದೂ, ದಾನವರ್ಕಳ್-ದಾನವರು, ಸೋಲ್ತುದುಂ-ಸೋತುಹೋದದ್ದೂ, ಅಮರ್ದಂ-ಅಮೃತವನ್ನು, ಸುರೇಂದ್ರಂ-ದೇವೇಂದ್ರನು, ಕಾಪಿಟ್ಟುದುಂ-ಕಾಪಾಡಿಕೊಂಡು ಇಟ್ಟಿರುವುದೂ, ಸಂದತ್ತು-ಆಗಿತ್ತು, ಅಂತಲ್ಲದೆಯುಂ-ಹಾಗಲ್ಲದೇ-)
ವಿನುತಸಹಸ್ರಪುತ್ರಪರಿಪಾಲನಕರ್ಮದೆ ನೋಂತು ನಿಂತಿರಲ್
ಘನತರಮಾದುವೆಲ್ಲಮಿವು ಗಾಥೆಗಳಾದುವು ಕಾಲಯಂತ್ರದಿಂ
ದೆನೆ ಮನೆವಾೞ್ತೆಯೊಳ್ ತಗುಳಲಾರ್ ಕುತುಕರ್ ಗಡ ಲೋಕವಾರ್ತೆಯೊಳ್ ॥೬೪॥
(ಟೀ-ವಿನತೆಯೊ-ವಿನತೆಯಾದರೋ, ತನ್ನ ಪುತ್ರರನೆ- ತನ್ನ ಮಕ್ಕಳನ್ನು, ಕಾಣುವ-ನೋಡುವ, ವಾಂಛೆಯೊಳ್-ಬಯಕೆಯಲ್ಲಿ, ಇರ್ಕೆ-ಇರಲಿ, ಕದ್ರುವುಂ-ಕದ್ರುವೂ, ವಿನುತ-ಸಹಸ್ರ-ಪುತ್ರ-ಪರಿಪಾಲನ-ಕರ್ಮದೆ-ವಿನುತರಾದ ಸಾವಿರ ಮಕ್ಕಳನ್ನು ಪರಿಪಾಲಿಸುವ ಕೆಲಸದಲ್ಲಿ, ನೋಂತು-ವ್ರತಳಾಗಿ, ನಿಂತಿರಲ್-ನಿಂತಿರಲು, ಘನತರಮಾದುವು-ದೊಡ್ಡದು ಎಂದೆನಿಸಿರುವ, ಎಲ್ಲಂ+ಇವು-ಈ ಘಟನೆಗಳೆಲ್ಲವೂ, ಕಾಲಯಂತ್ರದಿಂದ-ಕಾಲವೆಂಬ ಯಂತ್ರದಿಂದ, ಗಾಥೆಗಳಾದುವು-(ಕೇವಲ)ಕಥೆಗಳಾದವು, ಎನೆ-ಎನ್ನಲು, ಮನೆವಾೞ್ತೆಯೊಳ್-ಮನವಾರ್ತೆಯಲ್ಲಿ/ಮನೆಯ ಕೆಲಸದಲ್ಲಿ, ತಗುಳಲ್ -ತೊಡಗಿಕೊಳ್ಳಲು, ಆರ್ ಗಡ-ಯಾರು ತಾನೇ, ಲೋಕವಾರ್ತೆಯೊಳ್-ಜಗತ್ತಿನಲ್ಲಿ ನಡೆಯುವ ಘಟನೆಗಳ ಕುರಿತು/ಲೋಕವ್ಯಾಪಾರದಲ್ಲಿ, ಕುತುಕರ್-ಕುತೂಹಲವುಳ್ಳವರಾಗುತ್ತಾರೆ?
ಚಂಪಕಮಾಲಾವೃತ್ತ, ಸಮುದ್ರಮಥನ, ದೇವದಾನವರ ಯುದ್ಧ ಇವೆಲ್ಲವೂ ಜಗತ್ತಿನ ದೃಷ್ಟಿಯಲ್ಲಿ ದೊಡ್ಡ ಘಟನೆಗಳಾದರೂ, ವಿನತೆ ಹಾಗೂ ಕದ್ರುವಿಗೆ ತಮ್ಮ ಮಕ್ಕಳನಿರೀಕ್ಷೆ ಹಾಗೂ ಪರಿಪಾಲನೆಯ ಕರ್ಮದಲ್ಲಿ ತೊಡಗಿಕೊಂಡ ಕಾರಣ ಕುತೂಹಲವನ್ನು ಉಂಟು ಮಾಡದೇ ಹೋಯಿತು. ಅವೆಲ್ಲವೂ ಕೇವಲ ಕಥೆಗಳಾಗಿ ಕೇಳಲ್ಪಟ್ಟವು ಅಷ್ಟೇ ಎಂದು ತಾತ್ಪರ್ಯ. "ಮನೆವಾಳ್ತೆಯಲ್ಲಿ ಮುಳುಗಿದವರಿಗೆ ಯಾರಿಗೆ ತಾನೇ ಲೋಕವಾರ್ತೆಯಲ್ಲಿ ಕುತೂಹಲವಿರುತ್ತದೆ" ಎಂಬಲ್ಲಿ ಅರ್ಥಾಂತರ ನ್ಯಾಸಾಲಂಕಾರವೂ ಇದೆ.)
ವ॥ ಅಂತಾದೊಡಂ ಆಪ್ತರುಂ ಸಖಿಯರುಂ ಪುನಃಪುನರಪಿ ಪೇೞುತ್ತಿರಲ್ಕೆ ಕುತೂಹಲಂದಾಳ್ದು ಕೇಳುತ್ತುಂ ಸಮುದ್ರಮಥನಕಥಾನಕಮಂ ತಿಳಿದರ್ ಅದೆಂತೆನೆ-
(ಅಂತಾದೊಡಂ-ಹಾಗಿರಲು, ಆಪ್ತರುಂ-ಆಪ್ತರಾದವರೂ, ಸಖಿಯರುಂ-ಗೆಳತಿಯರೂ, ಪುನಃಪುನರಪಿ-ಮತ್ತೆ ಮತ್ತೆ, ಪೇೞುತ್ತಿರಲ್ಕೆ-ಹೇಳುತ್ತಿರುವಾಗ, ಕುತೂಹಲಂದಾಳ್ದು(ಕುತೂಹಲಂ+ತಾಳ್ದು)-ಕುತೂಹಲವನ್ನು ಹೊಂದಿ, ಕೇಳುತ್ತುಂ-ಕೇಳುತ್ತಾ, ಸಮುದ್ರಮಥನಕಥಾನಕಮಂ-ಸಮುದ್ರಮಥನದ ಕಥೆಯನ್ನು, ತಿಳಿದರ್-ತಿಳಿದುಕೊಂಡರು, ಅದೆಂತೆನೆ-ಅದು ಹೇಗೆಂದರೆ-)
ಕಂ॥ ಮರನೊಳ್ ಬೇರ್ಗಳ್ ಕುಡಿಯಲ್
ಭರದಿಂದಂ ನೀರನಂತು ಚಿಗುರೆಲೆಗಳ್ ತಾಂ
ಸೊರಗದೆ ಪಡೆವವೊಲೆಲ್ಲರ್
ನಿರುತಂ ತಮ್ಮಾಪ್ತರಿಂದೆ ತಿಳಿವರ್ ಜಗಮಂ ॥೬೫॥
(ಟೀ-ಮರನೊಳ್-ಮರದಲ್ಲಿ, ಬೇರ್ಗಳ್-ಬೇರುಗಳು, ಭರದಿಂದಂ-ಭರದಲ್ಲಿ/ವೇಗವಾಗಿ, ನೀರಂ-ನೀರನ್ನು, ಕುಡಿಯಲ್-ಕುಡಿಯಲು, ಅಂತು-ಹಾಗೆ, ಚಿಗುರೆಲೆಗಳ್-ಚಿಗುರು ಹಾಗೂ ಎಲೆಗಳು, ತಾಂ-ತಾವು, ಸೊರಗದೆ-ಸೊರಗದೇ, ಪಡೆವವೊಲ್- (ನೀರನ್ನು) ಪಡೆಯುವಂತೆ, ಎಲ್ಲರ್-ಎಲ್ಲರೂ, ನಿರುತಂ-ಸದಾಕಾಲ, ತಮ್ಮ+ಆಪ್ತರಿಂದೆ-ತಮಗೆ ಆಪ್ತರಾದವರಿಂದ/ಪ್ರೀತಿಪಾತ್ರರಿಂದ,ಜಗಮಂ-ಜಗತ್ತನ್ನು, ತಿಳಿವರ್-ತಿಳಿಯುತ್ತಾರೆ. ಕಂದಪದ್ಯ.)
ವ॥ ಅಂತು ಕೇಳ್ದು ತಿಳಿದ ಕಥೆಗಳಂ ಕದ್ರೂವಿನತೆಯರ್ ಗೞಪುತ್ತುಮಿರಲ್ಕೆ ವಿನತೆಯೆಂದಳ್
(ಅಂತು-ಹಾಗೆ, ಕೇಳ್ದು-ಕೇಳಿಕೊಂಡು, ತಿಳಿದ-ತಿಳಿದ, ಕಥೆಗಳಂ-ಕಥೆಗಳನ್ನು, ಕದ್ರುೂವಿನತೆಯರ್-ಕದ್ರು ಹಾಗೂ ವಿನತೆಯರಿಬ್ಬರೂ, ಗೞಪುತ್ತುಂ- ಮಾತನಾಡುತ್ತ,ಇರಲ್ಕೆ- ಇರುವಾಗ, ವಿನತೆಯೆಂದಳ್- ವಿನತೆ ಹೇಳಿದಳು-)
ಪೃ॥ ಸಮುದ್ರಮಥನಕ್ಕೆನಲ್ ಸುರರೆ ದಾನವರ್ಕಳ್ ಗಡಾ
ಸಮಂತು ಬೆರೆತೆಂತುಟೋ ಕಡೆಯೆ ಪುಟ್ಟಿತೆಲ್ಲಂ ಗಡಾ
ದ್ರುಮಂ ಸಕಲವಾಂಛೆಯಂ ಕುಡುವುದುಂ ಬೞಿಕ್ಕಂ ಗಡಾ
ಕ್ರಮೇಣ ಗಜವಾಜಿಗಳ್ ಪೆಱೆಯ ಬಣ್ಣಮೆಂಬರ್ ಗಡಾ ॥೬೬॥
(ಟೀ-ಸಮುದ್ರಮಥನಕ್ಕೆ-ಸಮುದ್ರವನ್ನು ಕಡೆಯುವುದಕ್ಕೆ, ಎನಲ್-ಎನ್ನಲು, ಸುರರೆ-ದಾನವರ್ಕಳ್ ಗಡಾ-ದೇವತೆಗಳು ರಾಕ್ಷಸರೂ ಅಂತೆ, ಸಮಂತು-ಚೆನ್ನಾಗಿ, ಬೆರೆತು- ಸೇರಿಕೊಂಡು, ಎಂತುಟೋ-ಹೇಗೋ, ಕಡೆಯೆ-ಕಡೆಯಲು, ಎಲ್ಲಂ- ಎಲ್ಲವೂ, ಪುಟ್ಟಿತು ಗಡಾ-ಹುಟ್ಟಿತಂತೆ, ಸಕಲವಾಂಛೆಯಂ-ಬಯಸಿದ್ದು ಎಲ್ಲವನ್ನೂ, ಕುಡುವುದುಂ-ಕೊಡುವುದೂ (ಆದ) ದ್ರುಮಂ-ಮರವು, ಬೞಿಕ್ಕಂ ಗಡಾ-ಆಮೇಲೆ ಅಂತೆ, ಕ್ರಮೇಣ-ಕ್ರಮದಲ್ಲಿ, ಗಜವಾಜಿಗಳ್-ಆನೆ ಕುದುರೆಗಳು, ಪೆಱೆಯ-ಚಂದ್ರನ, ಬಣ್ಣಂ- ವರ್ಣದವು,ಎಂಬರ್ ಗಡಾ-ಎನ್ನುತ್ತಾರಂತೆ. ಪೃಥ್ವಿ ವೃತ್ತ. ತಾತ್ಪರ್ಯದಲ್ಲಿ ವಿನತೆಯು “ದೇವತೆಗಳೂ ದಾನವರೂ ಸೇರಿಕೊಂಡರಂತೆ, ಸಮುದ್ರವನ್ನು ಕಡೆದರಂತೆ, ಕಲ್ಪವೃಕ್ಷವು,ಐರಾವತವು ಎಲ್ಲ ಹುಟ್ಟಿತಂತೆ.."ಎಂದು ಪರೋಕ್ಷದಲ್ಲಿ ನಡೆದ ಘಟನೆಯನ್ನು ಹೇಳುತ್ತಿರುವುದು ಇಲ್ಲಿಯ ವಿಶೇಷ. ಹಳಗನ್ನಡದಲ್ಲಿ ವ್ಯರ್ಥಪದಗಳು/ಪಾದಪೂರಣಗಳು ಎಂದು ಹೇಳುವ ದಲ್, ಗಡಾ, ವಲಂ ಮೊದಲಾದ ಶಬ್ದಗಳನ್ನು ಈ ರೀತಿಯಲ್ಲಿ “ಹಾಗಂತೆ ಹೀಗಂತೆ” ಎಂದು ಹೇಳುವ ನುಡಿಗಟ್ಟಿನಂತೆ ಬಳಸುವುದನ್ನು ಕಾಣಬಹುದು. ಉಾಹರಣೆಗೆ ರನ್ನನ “ಓಜಂ ಗಡ! ಚಿಃ ಭಾರದ್ವಾಜಂ ಗಡ!..” ಎಂಬ ಪದ್ಯವನ್ನು ನೋಡಬಹುದು.)
ಕಂ॥ ಮೊಸರಂ ಕಡೆಯಲ್ ಪುಟ್ಟಿದ
ಪೊಸತೆನಲಾ ಬೆಣ್ಣೆಯಂತೆ ಕಡಲಂ ಕಡೆಯಲ್
ಜಸದಿಂ ಪೂರ್ಣಂ ಬೆಳ್ಪಾಂ-
ತೆಸೆಗುಂ ಗಡಮೆಂಬರಲ್ತೆ ವಾಜಿಗಜಂಗಳ್ ॥೬೭॥
(ಟೀ-ಮೊಸರಂ-ಮೊಸರನ್ನು, ಕಡೆಯಲ್-ಕಡೆಯಲು, ಪೊಸತೆನಲ್-ಹೊಸದು ಎಂಬಂತೆ, ಪುಟ್ಟಿದ-ಹುಟ್ಟಿದ, ಆ ಬೆಣ್ಣೆಯಂತೆ-ಆ ಬೆಣ್ಣೆಯ ಹಾಗೆ, ಕಡಲಂ-ಸಾಗರವನ್ನು, ಕಡೆಯಲ್-ಕಡೆಯುತ್ತಿರಲು, ಜಸದಿಂ-ಯಶಸ್ಸಿನಿಂದ, ವಾಜಿಗಜಂಗಳ್-ಕುದುರೆ ಹಾಗೂ ಆನೆಗಳು/ಉಚ್ಚೈಶ್ರವಸ್ಸು ಹಾಗೂ ಐರಾವತಗಳು, ಪೂರ್ಣಂ-ಸಂಪೂರ್ಣವಾಗಿ, ಬೆಳ್ಪಾಂತು (ಬೆಳ್ಪು+ಆಂತು)-ಬಿಳಿಯ ಬಣ್ಣವನ್ನು ಹೊಂದಿ, ಎಸೆಗುಂ ಗಡಂ-ಶೋಭಿಸುತ್ತದೆಯಂತೆ, ಎಂಬರಲ್ತೆ-ಎನ್ನುತ್ತಾರಲ್ಲವೇ! ಕಂದಪದ್ಯ)
ವ॥ ಅಂತೆನೆ ಕದ್ರುವು ಸಹೋದರಿಯೊಳ್ ಸಾಪತ್ನಮಿರ್ಪುದರಿಂದಂ ಮೇಣ್ ತಾನೇ ಪೆರ್ಚಂ ತಿಳಿದಿರ್ಪೆನೆಂದು ಮಿಗೆ ತೋರಿಸಲ್ವೇಳ್ಕುಮೆಂದುಂ ಯೋಚಿಸಿ ಪೇೞ್ದಪಳ್
(ಅಂತೆನೆ-ಹಾಗೆನ್ನಲು, ಕದ್ರುವು-ಕದ್ರುವು, ಸಹೋದರಿಯೊಳ್-ಸಹೋದರಿಯಾದ ವಿನತೆಯಲ್ಲಿ, ಸಾಪತ್ನಂ-ದ್ವೇಷ/ಸವತಿಯ ಮತ್ಸರ, ಇರ್ಪುದರಿಂದಂ-ಇರುವುದರಿಂದಲೂ, ಮೇಣ್-ಹಾಗೂ, ತಾನೇ-ತಾನೇ, ಪೆರ್ಚಂ-ಹೆಚ್ಚನ್ನು, ತಿಳಿದಿರ್ಪೆನೆಂದು-ತಿಳಿದಿದ್ದೇನೆಂದು, ಮಿಗೆ-ಅತಿಶಯವಾಗಿ, ತೋರಿಸಲ್+ವೇಳ್ಕುಂ- ತೋರಿಸಬೇಕು, ಎಂದುಂ-ಎಂದೂ, ಯೋಚಿಸಿ-ಆಲೋಚಿಸಿ, ಪೇೞ್ದಪಳ್-ಹೇಳಿದಳು)
ಕಂ॥ ಅಲ್ತಲ್ತು ವಾಜಿ ಬೆಣ್ಣೆಯ
ವೊಲ್, ತಾಳ್ದುರು ಕಾಂತಿಯೊಳ್ ಕಲಂಕದ ಪಾಂಗಿಂ
ಮೇಲ್ ತಗುಳ್ದು ನೋಡೆ ಪೆಱೆಯಂ
ಪೋಲ್ತಿರ್ಕುಂ ಬಾಲಮೊಂದೆ ಕರ್ಪೆನಿಸಿರ್ಕುಂ ॥೬೮॥
(ಟೀ- ವಾಜಿ-ಕುದುರೆಯು, ಬೆಣ್ಣೆಯವೊಲ್-ಬೆಣ್ಣೆಯಂತೆ, ಅಲ್ತಲ್ತು-ಅಲ್ಲ ಅಲ್ಲ (ಅಲ್ಲವೇ ಅಲ್ಲ), ತಾಳ್ದ-ಹೊಂದಿದ, ಉರುಕಾಂತಿಯೊಳ್-ಅತಿಶಯವಾದ ಕಾಂತಿಯಲ್ಲಿ, ಮೇಲ್-ಮೇಲೆ, ಕಲಂಕದ-ದೋಷದ/ಕಳಂಕದ, ಪಾಂಗಿಂ-ಹಾಗೆ ತಗುಳ್ದು-ಹತ್ತಿಕೊಂಡು, ನೋಡೆ-ನೋಡಲು, ಪೆಱೆಯಂ-ಚಂದ್ರನನ್ನು, ಪೋಲ್ತಿರ್ಕುಂ-ಹೋಲುತ್ತಿರುವುದು, ಬಾಲಮೊಂದೆ-ಬಾಲವೊಂದೇ, ಕರ್ಪೆನಿಸಿರ್ಕುಂ-ಕಪ್ಪು ಎನ್ನಿಸಿದೆ. ಕಂದಪದ್ಯ)
ವ॥ ಅಂತೆನೆ ವಿನತೆಗೆ ಕದ್ರು ಪುಸಿಯನಾಡುತ್ತಿರ್ಪಳೆಂದು ತಿಳಿದು ಸಪತ್ನೀಮತ್ಸರಂಬೆರಸು ಚಿಂತಿಸಿ ಅವಳಂ ಗೆಲಲ್ಕೆ ಅವಕಾಶಂ ದೊರೆತುದೆನುತೆ ಪರಿಣಾಮಮಂ ಚಿಂತಿಸದೆ ಪೇೞ್ದಪಳ್
(ಅಂತೆನೆ-ಹಾಗೆನ್ನಲು, ವಿನತೆಗೆ-ವಿನತೆಗೆ, ಕದ್ರು-ಕದ್ರುವು, ಪುಸಿಯಂ-ಸುಳ್ಳನ್ನು, ಆಡುತ್ತಿರ್ಪಳ್-ಹೇಳುತ್ತಿದ್ದಾಳೆ, ಎಂದು-ಎಂದು, ತಿಳಿದು-ತಿಳಿದು, ಸಪತ್ನೀಮತ್ಸರಂಬೆರಸು-(ಸಪತ್ನೀ+ಮತ್ಸರಂ+ಬೆರೆಸು)-ಸವತಿಯ ಮತ್ಸರವನ್ನು ಬೆರೆಸಿ, ಚಿಂತಿಸಿ-ಯೋಚಿಸಿ, ಅವಳಂ-ಅವಳನ್ನು, ಗೆಲಲ್ಕೆ-ಗೆಲ್ಲುವುದಕ್ಕೆ, ಅವಕಾಶಂ-ಅವಕಾಶವು/ಸಂದರ್ಭವು, ದೊರೆತುದು- ದೊರಕಿದೆ/ಸಿಕ್ಕಿದೆ, ಎನುತೆ-ಎಂದು, ಪರಿಣಾಮಮಂ-ಮುಂದೆ ಆಗುವುದನ್ನು/ ಫಲವನ್ನು, ಚಿಂತಿಸದೆ-ಯೋಚಿಸದೇ, ಪೇೞ್ದಪಳ್-ಹೇಳಿದಳು-)
ಚಂ॥ ಎಲಗೆ ವಿಚಿತ್ರಮಾಯ್ತು ಭವದೀಯವಚೋವಿಭವಂ ತುರಂಗಮಂ
ಸುಲಲಿತಮಾಗಿ ಪಾಂಡುಮಯಮಾದುದೆನುತ್ತಿರಲುಚ್ಚಕೋಟಿಯಂ
ಕಲಿತಕಲಂಕಮೆಂದು ಪುಸಿಯಾಡಿದೆಯೌ ಪುಸಿಯಲ್ಲದಿರ್ದೊಡಂ
ನೆಲಸೆುವೆನೊಪ್ಪಿ ದಾಸಿ ನಿನಗಾಗುತೆ ನೀಂ ನನಗೇನನೀವೆಯೌ ॥೬೯॥
(ಟೀ- ಎಲಗೆ-ಎಲೌ! ಭವದೀಯ-ವಚೋ-ವಿಭವಂ-ನಿನ್ನ ಮಾತುಗಳ ವೈಭವವು, ವಿಚಿತ್ರಂ-ಆಶ್ಚರ್ಯಕರವಾದುದು, ಆಯ್ತು-ಆಗಿದೆ, ತುರಂಗಮಂ-ಉಚ್ಚೈಶ್ರವಸ್ಸೆಂಬ ಕುದುರೆಯು, ಸುಲಲಿತಮಾಗಿ (ಸುಲಲಿತಂ+ಆಗಿ)-ಚೆನ್ನಾಗಿ/ಲಾಲಿತ್ಯದಿಂದ ಕೂಡಿ, ಪಾಂಡುಮಯಂ-ಬಿಳಿಯ ಬಣ್ಣದಿಂದ ಕೂಡಿದ್ದು, ಆದುದೆನುತ್ತಿರಲ್-ಆಗಿರುವುದು ಎಂದು ಹೇಳುತ್ತಿರಲು, ಉಚ್ಚಕೋಟಿಯಂ-ಶ್ರೇಷ್ಠವಾದುದ್ದನ್ನು, ಕಲಿತ-ಕಲಂಕಂ-ಕಳಂಕದಿಂದ ಕೂಡಿದ್ದು/ದೋಷವುಳ್ಳದ್ದು, ಎಂದು-ಎನ್ನುತ್ತ, ಪುಸಿ+ಆಡಿದೆಯೌ-ಸುಳ್ಳುಹೇಳುತ್ತಿದ್ದೀಯಾ! ಪುಸಿಯು+ಅಲ್ಲದಿರ್ದೊಡಂ-ಅದು ಸುಳ್ಳಲ್ಲದಿದ್ದರೆ/(ನೀನು ಹೇಳಿದ್ದು) ಸತ್ಯವಾಗಿದ್ದರೆ ಒಪ್ಪಿ-ಒಪ್ಪಿಕೊಂಡು, ನಿನಗೆ ದಾಸಿ-ಆಗುತೆ-ನಿನ್ನ ತೊತ್ತಾಗಿ/ನಿನ್ನ ದಾಸಿಯಾಗಿ, ನೆಲಸೆುವೆಂ-ನೆಲೆಸುತ್ತೇನೆ/ಬದುಕುತ್ತೇನೆ, ನೀಂ-ನೀನು, ನನಗೆ+ಏನಂ+ಈವೆಯೌ-ಏನನ್ನು ಕೊಡುತ್ತೀಯಾ! ಚಂಪಕಮಾಲಾವೃತ್ತ.
ಮಗ ಅರುಣನು ಕೊಟ್ಟ ಶಾಪವನ್ನು ಮರೆತ ವಿನತೆ, ಕದ್ರುವಿನ ಜೊತೆ ಮತ್ಸರದಿಂದ, ಅವಳು ಹೇಳಿದಂತೆ ಉಚ್ಚೈಶ್ರವಸ್ಸಿನ ಬಾಲವೊಂದೇ ಕಪ್ಪಾಗಿಲ್ಲದಿದ್ದರೆ ನಿನಗೆ ದಾಸಿಯಾಗುತ್ತೇನೆ ಎಂದು ಪಣವನ್ನು ಒಡ್ಡಿದಳು. ಅವಳ ಬಳಿ ಅಕಸ್ಮಾತ್ ಕುದುರೆ ಪುರ್ತಿಯಾಗಿ ಬೆಳ್ಳಗೇ ಇದ್ದರೆ ನೀನು ನನಗೆ ಏನನ್ನು ಕೊಡುತ್ತೀಯಾ ಎಂದೂ ಕೇಳಿದಳು. ಪರಿಣಾಮದ ಅರಿವಿದಲ್ಲದೇ ಸ್ಪರ್ಧೆಗೆ ಒಡ್ಡಿಕೊಂಡಳು)
ವ॥ ಎಂತೆನೆ ಕದ್ರುವಿಂತೆಂದಳ್
(ಎಂತೆನೆ-ಹೀಗೆನ್ನಲು, ಕದ್ರುವು+ಇಂತೆಂದಳ್-ಕದ್ರುವು ಹೀಗೆಂದಳು)
ಉ॥ ದಾಸಿಯ ಪಟ್ಟಮಂ ಪಣಮನಾಗಿಸುತೊಡ್ಡಿದೆ ಬಾೞ್ತೆಯೆಂಬುದೇ
ಪಾಸೆನೆ, ದಾಳಮಾಯ್ತೆ ಕಡಲಿಂದೊಗೆತಂದುದು ವಾಜಿಯೆಂದೆನಲ್
ದೂಸಱದಿಲ್ಲಮೆನ್ನ ನುಡಿ ತಪ್ಪದು ತಪ್ಪಿರೆ ನಿನ್ನ ಕಾಲ್ಗಳೊಳ್
ದಾಸಿಯೆ ಸಲ್ವೆನಾನೆಸಗುತೂಳಿಗಮಂ ನಿಜಜೀವನಂಬರಂ ॥೭೦॥
(ಟೀ-ದಾಸಿಯ-ಸೇವಕಿಯ, ಪಟ್ಟಮಂ-ಸ್ಥಾನವನ್ನು, ಪಣಮಂ-ಪಣವನ್ನು ಆಗಿಸುತೆ-ಮಾಡುತ್ತಾ, ಒಡ್ಡಿದೆ-ಎದುರಿಗೆ ಇಟ್ಟೆ,, ಬಾೞ್ತೆಯೆಂಬುದೇ-ಜೀವನವೆಂಬುದೇ, ಪಾಸು+ಎನೆ-ಹಾಸು ಎಂದಾಗಲು, ಕಡಲಿಂದೆ-ಸಮುದ್ರದಿಂದ, ಒಗೆತಂದುದು-ಹುಟ್ಟಿಬಂದುದು, ವಾಜಿಯು-ಉಚ್ಚೈಶ್ರವಸ್ಸು, ದಾಳ-ಜೂಜಿನ ದಾಳವು, ಆಯ್ತೆ-ಆಗಿದೆಯೇ, ಎಂದೆನಲ್-ಹೀಗೆಂದು ಹೇಳಲು,ಅದು-ಅದು, ದೂಸಽಱ್-ಅಪವಾದವು, ಇಲ್ಲಂ-ಇಲ್ಲ, ಎನ್ನ-ನನ್ನ, ನುಡಿ-ಮಾತು, ತಪ್ಪದು-ತಪ್ಪುವುದಿಲ್ಲ, ತಪ್ಪಿರೆ-ಒಂದು ವೇಳೆ ತಪ್ಪಿದರೆ, ನಿನ್ನ-ನಿನ್ನ, ಕಾಲ್ಗಳೊಳ್-ಕಾಲುಗಳಲ್ಲಿ,ನಿಜಜೀವನಂಬರಂ-ನನ್ನ ಜೀವಮಾನದ ಕೊನೆಯ ತನಕ, ಊಳಿಗಮಂ-ಸೇವೆಯನ್ನು,ಎಸಗುತೆ-ಮಾಡುತ್ತಾ ದಾಸಿಯೆ-ದಾಸಿಯೇ/ಸೇವಕಿಯೇ, ಆಂ-ನಾನು, ಸಲ್ವೆಂ-ಸಲ್ಲುತ್ತೇನೆ ಉತ್ಪಲಮಾಲಾವೃತ್ತ
ಈ ಜೂಜಿನಲ್ಲಿ ಅವರ ಜೀವನವೇ ಪಗಡೆಯ ಹಾಸಾಗಿದೆ, ಉಚ್ಚೈಶ್ರವಸ್ಸೇ ದಾಳವಾಗಿದೆ, ದಾಸಿಯ ಪಟ್ಟವೇ ಪಣವಾಗಿದೆ ಎಂದು ಹೇಳಿ ತನ್ನ ಮಾತು ತಪ್ಪಿದರೆ ತಾನೂ ಜೀವನಪೂರ್ತಿ ವಿನತೆಯ ದಾಸಿಯಾಗಿರುತ್ತೇನೆ ಎಂದು ಕದ್ರುವೂ ಪಂತವನ್ನು ಒಡ್ಡುತ್ತಾಳೆ)
ವ॥ ಇಂತೆಂದು ಕದ್ರುವುಂ ನುಡಿಯಲ್ಕೆ ಮಱುದೆವಸಂ ಇರ್ವರುಂ ಉಚ್ಛೈಶ್ರವಸ್ಸೆಂಬ ಪೆಸರಿನ ಬೆಳ್ಗುದುರೆಯಂ ನೋಡಲ್ಕೆ ಪೋಪುದೆಂದು ನಿಶ್ಚಯಿಸಿದರ್
(ಇಂತೆಂದು-ಹೀಗೆಂದು, ಕದ್ರುವುಂ-ಕದ್ರುವೂ, ನುಡಿಯಲ್ಕೆ-ಹೇಳಲು, ಮಱುದೆವಸಂ-ಮಾರನೆಯ ದಿನ, ಇರ್ವರುಂ-ಇಬ್ಬರೂ, ಉಚ್ಛೈಶ್ರವಸ್ಸೆಂಬ-ಉಚ್ಚೈಶ್ರವಸ್ಸು ಎಂಬ, ಪೆಸರಿನ-ಹೆಸರಿನ, ಬೆಳ್ಗುದುರೆಯಂ-ಬಿಳಿಯ ಕುದುರೆಯನ್ನು, ನೋಡಲ್ಕೆ-ನೋಡುವುದಕ್ಕೆ, ಪೋಪುದೆಂದು-ಹೋಗುವುದು ಎಂದು, ನಿಶ್ಚಯಿಸಿದರ್-ನಿಶ್ಚಯವನ್ನು ಮಾಡಿದರು)
ಕಂ॥ ಸದ್ರುಮಖಂಡಪರಶುವಿಂ
ಛಿದ್ರಂ ಮೇಣ್ ಕಾನನಂಗಳಾಗುವ ತೆಱದಿಂ
ಕದ್ರುವು ತನ್ನಯ ಮಾತಿಂ
ವಿದ್ರೋಹಂ ತನಗಿದಾಯ್ತೆನುತ್ತುಂ ಬಗೆದಳ್॥೭೧॥
(ಟೀ- ಸ-ದ್ರುಮ-ಖಂಡ-ಪರಶುವಿಂ-ಮರದ ತುಂಡಿನಿಂದ ಕೂಡಿದ ಕೊಡಲಿಯಿಂದಲೇ, ಮೇಣ್ ಕಾನನಂಗಳ್-ಮತ್ತೆ ಕಾಡುಗಳೆಲ್ಲ, ಛಿದ್ರಂ-ಆಗುವ-ಛಿದ್ರ/ನಾಶವಾಗುವ, ತೆಱದಿಂ-ಹಾಗೆಯೇ, ಕದ್ರುವು-ಕದ್ರುವು, ತನ್ನಯ ಮಾತಿಂ- ತಾನು ಆಡಿದ ಮಾತಿನಿಂದಲೇ, ತನಗೆ-ವಿದ್ರೋಹಂ- ತನೆಗೇ ಮೋಸವು ಆಯ್ತು- ಆಯಿತು, ಎನುತ್ತುಂ-ಎಂದು, ಬಗೆದಳ್-ಯೋಚಿಸಿದಳು. ಕಂದಪದ್ಯ)
ಹರಿಣೀ॥ ಮನದೆ ತಿಳಿದಳ್ ಕಷ್ಟಂ ನಷ್ಟಂ ಭವಿಷ್ಯದೆ ಬರ್ಪುದಂ
ತನಗೆ ಜಯಮೆಂತಕ್ಕುಂ ಕರ್ಪಿಂದೆ ಬಾಲಮದಿಲ್ಲದೇ
ವಿನತೆ ಗೆಲಲಾಂ ಬಾೞೆಂ ಸೋಲ್ತುಂ ಬರ್ದುಂಕುವುದೆಂತುಟೆಂ-
ದೆನುತೆ ಕಪಟಂಗೆಯ್ಯಲ್ ನೋಂತಳ್ ಭುಜಂಗಮಮಾತೆ ತಾಂ॥೭೨॥
(ಟೀ-ಭುಜಂಗಮಮಾತೆ-ಸರ್ಪಗಳ ಜನನಿಯಾದ ಕದ್ರುವು, ತಾಂ-ತಾನು, ಮನದೆ-ಮನಸ್ಸಿನಲ್ಲಿಯೇ, ಕಷ್ಟಂ-ಕಷ್ಟವೂ, ನಷ್ಟಂ-ನಷ್ಟವೂ, ಭವಿಷ್ಯದೆ-ಮುಂದಿನ ಕಾಲದಲ್ಲಿ, ಬರ್ಪುದಂ-ಬರುವುದನ್ನು, ತಿಳಿದಳ್-ತಿಳಿದಳು. ತನಗೆ-ತನಗೆ(ಕದ್ರುವಿಗೆ) ಕರ್ಪಿಂದೆ-ಕಪ್ಪುಬಣ್ಣದಿಂದ, ಬಾಲಂ- ಕುದುರೆಯ ಬಾಲವು, ಅದು ಇಲ್ಲದೇ- ಅದು ಇಲ್ಲದಿರಲು, ಜಯಂ-ಗೆಲುವು, ಎಂತಕ್ಕುಂ-ಹೇಗೆ ತಾನೇ ಆಗುತ್ತದೆ! ವಿನತೆ-ಸವತಿಯಾದ ವಿನತೆಯು ಗೆಲಲ್- ಜಯವನ್ನು ಹೊಂದಲು, ಆಂ-ನಾನು, ಬಾೞೆಂ-ಬಾಳುವುದಿಲ್ಲ. ಸೋಲ್ತುಂ-ಸೋತರೂ, ಬರ್ದುಂಕುವುದು-ಬದುಕುವುದು, ಎಂತುಟು-ಹೇಗೆ! ಎಂದೆನುತೆ-ಎಂದೆನ್ನುತ್ತ, ಕಪಟಂಗೆಯ್ಯಲ್-ಕಪಟವನ್ನು ಮಾಡಲು/ಮೋಸವನ್ನು ಮಾಡಲು, ನೋಂತಳ್-ಸಿದ್ಧಳಾದಳು/ನಿಶ್ಚಯಿಸಿದಳು. ಹರಿಣೀವೃತ್ತ)
ಅನವದ್ಯ॥ ಕರೆದು ಮಕ್ಕಳನಾಕೆಯೆ ಕಟ್ಟೇಕಾಂತದೆ ಪೇೞುತೆ ಸಂದುದಂ
ಭರದೆ ಸೂಚಿಸಿದಳ್ ಸುತರೆಲ್ಲರ್ ತಾಯಿಯೊ ದಾಸ್ಯಕೆ ಸಲ್ಲದಂ-
ತರರೆ! ಕಾಯ್ವುದು ನಿಮ್ಮಯ ಕರ್ತವ್ಯಂ ಜವದಿಂ ಹಯಪುಚ್ಛಕಂ
ನೆರೆದೊಡಪ್ಪುದು ಬಾಲಮೆ ಕರ್ಪಿಂದೊಪ್ಪುತೆ ಗೆಲ್ವೆನದಾಗಳಾಂ ॥೭೩॥
(ಟೀ-ಆಕೆಯೆ-ಕದ್ರುವು, ಮಕ್ಕಳಂ-ತನ್ನ ಮಕ್ಕಳಾದ ಸಾವಿರ ಸರ್ಪಗಳನ್ನು/ಕಾದ್ರವೇಯರನ್ನು, ಕಟ್ಟೇಕಾಂತದೆ-ಬಹಳ ಏಕಾಂತದಲ್ಲಿ, ಕರೆದು-ಕರೆದು, ಸಂದುದಂ-ಆಗಿದ್ದೆಲ್ಲವನ್ನೂ, ಪೇೞುತೆ-ಹೇಳುತ್ತ, ಭರದೆ-ಬೇಗನೇ, ಸೂಚಿಸಿದಳ್- ಸೂಚಿಸಿದಳು, ಅರರೆ!-ಅರರೇ! ಸುತರೆಲ್ಲರ್-ಮಕ್ಕಳೆಲ್ಲರೂ ತಾಯಿಯೊ-ತಾಯಿಯು, ದಾಸ್ಯಕೆ ಸಲ್ಲದಂತೆ-ದಾಸ್ಯವೆಂಬ ಕೆಲಸಕ್ಕೆ ಇನ್ನೊಬ್ಬಬರ ಸೇವಕಿಯಾಗದಂತೆ/ತೊತ್ತಾಗದಂತೆ, ಕಾಯ್ವುದು-ಕಾಪಾಡುವುದು, ನಿಮ್ಮಯ-ನಿಮ್ಮೆಲ್ಲರ, ಕರ್ತವ್ಯಂ-ಕರ್ತವ್ಯ/ಮಾಡಲೇಬೇಕಾದ ಕೆಲಸ. ಜವದಿಂ-ಬೇಗದಲ್ಲಿ, ಹಯಪುಚ್ಛಕಂ-ಉಚ್ಚೈಶ್ರವಸ್ಸೆಂಬ ಆ ಕುದುರೆಯ ಬಾಲಕ್ಕೆ, ನೆರೆದೊಡೆ-ಸೇರಿಕೊಳ್ಳಲು/ನೆರೆಯಲು, ಬಾಲಮೆ-ಬಾಲವೇ, ಕರ್ಪಿಂದೆ-ಕಪ್ಪುಬಣ್ಣದಿಂದ, ಅಪ್ಪುದು-ಆಗುವುದು, ಅದಾಗಳ್-ಅದು ಆದಾಗ, ಒಪ್ಪುತೆ-ಒಪ್ಪುತ್ತ/ಶೋಭಿಸುತ್ತ, ಆಂ-ನಾನು, ಗೆಲ್ವೆಂ-ಗೆಲ್ಲುತ್ತೇನೆ. ಇದು ಕನ್ನಡದಲ್ಲಿ ವಿರಳವಾಗಿ ಕಾಣುವ ಅನವದ್ಯ ಎಂಬ ವೃತ್ತ.)
ಚಂ॥ ಚಿರದಿನೆ ಮಕ್ಕಳಂ ಕುದುರೆಬಾಲದೊಳಂಟಿಕೊಳಲ್ಕೆ ಪೇ-
ೞ್ದರಸುತೆ ಸುಳ್ಳುದಾರಿಯೊಳೆ ಮೋಸದ ಮಂಟಪಕೆಂದು ಸಾರ್ದು ಮೇಣ್
ಪಿರಿದಭಿಸಾರಮಂ ನಡೆಸಿದಳ್ ಗಡ ದುರ್ಯಶದಾ ಬೊಜಂಗನೊಳ್
ತರಮೆನೆ ನಾಮದಿಂ ಭುಜಗಮಾತೆಯೆ ಸಂದಪಳಲ್ತೆ ಕದ್ರುವೇ ॥೭೪॥
(ಟೀ-ಚಿರದಿನೆ-ಶೀಘ್ರದಲ್ಲಿ, ಮಕ್ಕಳಂ-ಮಕ್ಕಳನ್ನು, ಕುದುರೆಬಾಲದೊಳ್-ಕುದುರೆಯ ಬಾಲದಲ್ಲಿ, ಅಂಟಿಕೊಳಲ್ಕೆ-ಅಂಟಿಕೊಳ್ಳಲು, ಪೇೞ್ದು-ಹೇಳಿ, ಅರಸುತೆ-ಹುಡುಕುತ್ತಾ, ಸುಳ್ಳುದಾರಿಯೊಳೆ-ಸುಳ್ಳಿನ ದಾರಿಯಲ್ಲಿ, ಮೋಸದ ಮಂಟಪಕೆಂದು-ಮೋಸದ ಮಂಟಪಕ್ಕೆ ಎಂದು, ಸಾರ್ದು-ಹೋಗಿ, ಮೇಣ್-ಮತ್ತೆ, ಪಿರಿದು-ದೊಡ್ಡ, ಅಭಿಸಾರಮಂ-ಅಭಿಸಾರವನ್ನು, ದುರ್ಯಶದಾ-ದುರ್ಯಶ/ಕೆಟ್ಟ ಯಶಸ್ಸು ಎಂಬ, ಬೊಜಂಗನೊಳ್-ಬೊಜಂಗನಲ್ಲಿ/ಭುಜಂಗನಲ್ಲಿ/ಜಾರನಲ್ಲಿ, ನಡೆಸಿದಳ್ ಗಡ- ನಡೆಸಿದಳಲ್ಲವೇ! ತರಮೆನೆ(ತರಂ+ಎನೆ)-ಮೇಲಾಗಿ, ಕದ್ರುವೇ-ಕದ್ರುವು, ನಾಮದಿಂ-ಹೆಸರಿನಿಂದ, ಭುಜಗಮಾತೆಯೆ-ಭುಜಗಮಾತೆ/ಹಾವುಗಳ ತಾಯಿಯೇ, ಸಂದಪಳ್+ಅಲ್ತೆ-ಅಲ್ಲವೇ! ಚಂಪಕಮಾಲಾವೃತ್ತ.
ಅಭಿಸಾರಿಕೆ ಎಂದರೆ ಗುಟ್ಟಿನಲ್ಲಿ ಪ್ರಿಯತಮನನ್ನು ಸೇರುವುದಕ್ಕೆ ಹೋಗುವವಳು. ಅಭಿಸಾರವೆಂದರೆ ಗುಟ್ಟಾಗಿ ಪ್ರಿಯರನ್ನು ಸೇರುವುದು. ಈ ಪದ್ಯದಲ್ಲಿ- ಕದ್ರು ಸುಳ್ಳಿನ ದಾರಿಯಲ್ಲಿ ಮೋಸದ ಮಂಟಪದಲ್ಲಿ ದುರ್ಯಶವೆನ್ನುವ ಜಾರನನ್ನು ಸೇರಿದಳು ಎಂದು ಮೊದಲ ಮೂರು ಸಾಲಿನಲ್ಲಿ ತಾತ್ಪರ್ಯ. ಹಳಗನ್ನಡದಲ್ಲಿ ಬೊಜಂಗ ಎಂದರೆ ಜಾರ-ವಿಟ ಎನ್ನುವಂತಹ ಅರ್ಥವಿದೆ.ಅದು ಸಂಸ್ಕೃತದ ಜಾರ-ವಿಟ ಎಂಬರ್ಥದ ಭುಜಂಗ ಎಂಬ ಶಬ್ದದ ತದ್ಭವ. ಭುಜಂಗ ಎಂದರೆ ಭುಜದಲ್ಲಿ ಸಾಗುವ ಸರ್ಪಗಳು ಎಂಬ ಅರ್ಥವೂ ಇದೆ. ಹಾಗಾಗಿ ಕದ್ರು ದುರ್ಯಶವೆನ್ನುವ ಭುಜಂಗನಲ್ಲಿ ಸೇರಿದಳು, ಎಷ್ಟಂದರೂ ಹೆಸರಿನಿಂದಲೇ ಅವಳು ಭುಜಂಗಮಾತೆಯೇ ಅಲ್ಲವೇ- ಎಂದು ಹೇಳುವಲ್ಲಿ ಶ್ಲೇಷವಿದೆ.)
ವ॥ ಅವಳಿಂತೆನೆ ಸಹಸ್ರಪುತ್ರರ್ಕಳೊಳ್ ಪಂಚಶತಪುತ್ರರ್ ತಾಯ ಮಾತಿಂಗೆ ಬೆಸನಂಬಟ್ಟು ಪುಸಿಯಿಂ ಕಿತವದಿಂ ಗೆಲ್ವುದುಚಿತಮಲ್ಲಮೆಂದು ಚಿಂತಿಸಿ
(ಅವಳ್-ಅವಳು, ಇಂತೆನೆ-ಹೀಗೆನ್ನಲು, ಸಹಸ್ರಪುತ್ರರ್ಕಳೊಳ್-ಸಾವಿರ ಜನ ಮಕ್ಕಳಲ್ಲಿ, ಪಂಚಶತಪುತ್ರರ್-ಐದು ನೂರು ಜನ ಮಕ್ಕಳು, ತಾಯ-ತಾಯಿಯಾದ ಕದ್ರುವಿನ, ಮಾತಿಂಗೆ-ಮಾತಿಗೆ, ಬೆಸನಂಬಟ್ಟು-ವ್ಯಸನವನ್ನು ಹೊಂದಿ, ಪುಸಿಯಿಂ-ಸುಳ್ಳಿನಿಂದ, ಕಿತವದಿಂ-ಮೋಸದಿಂದ, ಗೆಲ್ವುದು-ಗೆಲ್ಲುವುದು, ಉಚಿತಂ-ಯೋಗ್ಯವಾದದ್ದು, ಅಲ್ಲಂ-ಅಲ್ಲ, ಎಂದು-ಎಂದು, ಚಿಂತಿಸಿ-ಯೋಚಿಸಿ)
ಮ॥ ಜನನೀ ನಿನ್ನಯ ವಾಕ್ಯಮಾಯ್ತನುಚಿತಂ ಪಾಪಂಗಳಂ ನೀೞ್ವುದುಂ
ತನುಜರ್ಗಂಬೆಯೊ ನೋಡೆ ಸತ್ಯದೆಡೆಗಂ ಕೊಂಡೊಯ್ಯವೇಳ್ಕುಂ ಸ್ವಯಂ
ಮನುಜರ್ ಕಷ್ಟದೆ ದುಷ್ಟರಪ್ಪರೆನುವಂತಾದತ್ತು ನಿನ್ನಾಜ್ಞೆಯುಂ
ಜನಕಂ ನೆಟ್ಟ ಮರಕ್ಕೆ ನೇಣ ಬಿಗಿವರ್ ಮೂಢರ್ಕಳೇ ಸಲ್ವರೌ॥೭೫॥
(ಟೀ-ಜನನೀ-ತಾಯಿಯೇ! ನಿನ್ನಯ-ನೀನು ಹೇಳಿದ, ವಾಕ್ಯಂ-ಮಾತುಗಳು,ಅನುಚಿತಂ-ಅಯೋಗ್ಯವಾದದ್ದು/ಉಚಿತವಲ್ಲದವು, ಆಯ್ತು- ಆದವು, ಪಾಪಂಗಳಂ-ಪಾಪಗಳನ್ನೂ, ನೀೞ್ವುದುಂ-ಕೊಡುತ್ತದೆ, ನೋಡೆ-ನೋಡಿದರೆ, ತನುಜರ್ಗೆ-ಮಕ್ಕಳಿಗೆ, ಅಂಬೆಯೊ-ತಾಯಿಯೋ, ಸತ್ಯದೆಡೆಗಂ-ಸತ್ಯದ ಕಡೆಗೆ, ಕೊಂಡೊಯ್ಯವೇಳ್ಕುಂ-ಕರೆದುಕೊಂಡು ಹೋಗಬೇಕು. ಸ್ವಯಂ-ಸ್ವತಃ, ಮನುಜರ್-ಮನುಷ್ಯರು, ಕಷ್ಟದೆ-ಕಷ್ಟದಲ್ಲಿ, ದುಷ್ಟರ್- ದುಷ್ಟರು,ಅಪ್ಪರ್-ಆಗುತ್ತಾರೆ, ಎನುವಂತೆ-ಎನ್ನುವಂತೆ, ನಿನ್ನ+ಆಜ್ಞೆಯುಂ-ನೀನು ಆಜ್ಞೆ ಮಾಡಿರುವುದೂ, ಆದತ್ತು-ಆಗಿದೆ, ಜನಕಂ-ತಂದೆಯಾದವನು, ನೆಟ್ಟ-ನೆಟ್ಟಿರುವ, ಮರಕ್ಕೆ-ಮರಕ್ಕೆ, ನೇಣ-ನೇಣುಹಗ್ಗವನ್ನು, ಬಿಗಿವರ್-ಕಟ್ಟುವವರು, ಮೂಢರ್ಕಳೇ-ಮೂರ್ಖರೇ, ಸಲ್ವರೌ-ಆಗುತ್ತಾರೆ. ಮತ್ತೇಭವಿಕ್ರೀಡಿತವೃತ್ತ.
ನಿನ್ನ ಮಾತುಗಳು ಅನುಸರಿಸಲು ತಕ್ಕದಲ್ಲ. ಪಾಪವೂ ಬರುವಂತಹ ಕೆಲಸ, ತಾಯಿಯಾದವಳು ಮಕ್ಕಳನ್ನು ಸತ್ಯದ ಮಾರ್ಗದಲ್ಲಿ ಕರೆದುಕೊಂಡು ಹೋಗಬೇಕು,ಮನುಷ್ಯರು ಕಷ್ಟದಲ್ಲಿ ದುಷ್ಟರಾಗುತ್ತಾರೆ ಎಂಬಂತೆ ನಿನ್ನ ಆಜ್ಞೆಯೂ ಆಯ್ತು, ಅಪ್ಪ ನೆಟ್ಟ ಆಲದ ಮರಕ್ಕೆ ನೇಣು ಹಾಕಿಕೊಳ್ಳುವುದು ಮೂರ್ಖತನ ಎಂದು ಹೇಳುವ ಲೋಕೋಕ್ತಿಯಂತೆ ತಾಯಿಯಾದರೂ ಅವಳು ಹೇಳಿದ್ದು ಕೆಟ್ಟದ್ದಾದ ಕಾರಣ ಅದನ್ನು ಆಚರಿಸುವುದು ಸರಿಯಲ್ಲ ಎಂದು ಕದ್ರುವಿನ ಐನೂರು ಮಕ್ಕಳು ಆಲೋಚಿಸಿ ಹಾಗೆಯೇ ಅವಳಿಗೆ ಹೇಳಿದರು. )
ವ॥ ಎಂದು ತಾಯಂ ಮೂದಲಿಸೆ ಕೋಪದಿಂದಾಕೆ
(ಎಂದು-ಹೀಗೆಂದು, ತಾಯಂ-ತಾಯಿಯನ್ನು, ಮೂದಲಿಸೆ-ಮೂದಲಿಸಲು/ಬಯ್ಯಲು, ಕೋಪದಿಂದ-ಸಿಟ್ಟಿನಿಂದ, ಆಕೆ-ಅವಳು/ಕದ್ರುವು)
ಮ॥ ಸುತರೇ! ನೀವುಗಳೆನ್ನ ಬಾೞ್ತೆಸೆಱಗೊಳ್ ಸ್ಫಾರಸ್ಫುಲಿಂಗಂಗಳೇ
ಹಿತರೇ! ಕೊಳ್ಳಿಗಳಾದಿರೇ! ಬರ್ದುಕಿರಲ್ ತಾಯ್ಗಿಂತು ಕಿರ್ಚೀವರೇ
ಮೃತಿಯಕ್ಕುಂ ನಿಮಗೆನ್ನ ಮಾತನದಟಿಂ ಮೀರಿರ್ಪುದರ್ಕಿಂತುಟೇ
ಹುತಭುಗ್ಜ್ವಾಲೆಗಳೊಳ್ ಕಱುಂಕೆಗಳವೊಳ್ ನೀಂ ಸಲ್ವುದುಂ ನಿಶ್ಚಿತಂ ॥೭೬॥
(ಟೀ-ಸುತರೇ!-ಮಕ್ಕಳೇ! ನೀವುಗಳ್-ನೀವೆಲ್ಲರೂ, ಎನ್ನ-ನನ್ನ, ಬಾೞ್ತೆಸೆಱಗೊಳ್-ಬದುಕೆಂಬ ಸೆರಗಿನಲ್ಲಿ, ಸ್ಫಾರಸ್ಫುಲಿಂಗಂಗಳೇ-(ಕಟ್ಟಿಕೊಂಡಿರುವ)ಉಣ್ಮುತ್ತಿರುವ ಬೆಂಕಿಯ ಕಿಡಿಗಳು, ಹಿತರೇ!-ಹಿತಕಾರಿಗಳೇ!/ಒಳ್ಳೆಯದನ್ನು ಮಾಡುವವರೇ! ಕೊಳ್ಳಿಗಳಾದಿರೇ-ಕೊಳ್ಳಿಗಳೇ ಆದಿರೇ-ಬೆಂಕಿಯ ಸೂಡಿಗಳೇ ಆದಿರೇ! ಬರ್ದುಕಿರಲ್-ಬದುಕಿರುವಾಗಳೇ, ತಾಯ್ಗೆ-ತಾಯಿಗೆ/ಹೆತ್ತವಳಿಗೆ, ಕಿರ್ಚೀವರೇ-ಬೆಂಕಿಯನ್ನು ಕೊಡುವವರೇ/ಬೆಂಕಿ ಹಾಕುವವರೇ! ಎನ್ನ-ನನ್ನ, ಮಾತಂ-ಮಾತನ್ನು, ಅದಟಿಂ-ಸೊಕ್ಕಿನಿಂದ/ಪರಾಕ್ರಮದಿಂದ, ಮೀರಿರ್ಪುದರ್ಕೆ-ಮೀರಿರುವುದಕ್ಕೆ, ಇಂತುಟೇ-ಹೀಗೆಯೇ, ನಿಮಗೆ-ನಿಮಗೆ ಮೃತಿಯಕ್ಕುಂ-ಸಾವು ಉಂಟಾಗುತ್ತದೆ, ಹುತಭುಗ್ಜ್ವಾಲೆಗಳೊಳ್-ಬೆಂಕಿಯ ಜ್ವಾಲೆಗಳಲ್ಲಿ, ಕಱುಂಕೆಗಳವೊಳ್-ಗರಿಕೆ ಹುಲ್ಲಿನ ಹಾಗೆ, ನೀಂ-ನೀವುಗಳು, ಸಲ್ವುದುಂ-ಸಲ್ಲುವುದು, ನಿಶ್ಚಿತಂ-ನಿಶ್ಚಿತವಾದದ್ದು. ಮತ್ತೇಭವಿಕ್ರೀಡಿತವೃತ್ತ)
ವ॥ ಇಂತೆಂದು ಕದ್ರು ಕೋಪದಿಂ ಶಪಿಸಲ್ ಪುತ್ರರ್ಕಳ್ ಖಿನ್ನಮಾನಸರಾಗಿ ಪೊರಮಟ್ಟರ್
(ಇಂತೆಂದು-ಹೀಗೆಂದು, ಕದ್ರು-ಕದ್ರುವು, ಕೋಪದಿಂ-ಸಿಟ್ಟಿನಿಂದ, ಶಪಿಸಲ್-ಶಾಪವನ್ನು ಕೊಡಲು, ಪುತ್ರರ್ಕಳ್-ಮಕ್ಕಳು, ಖಿನ್ನಮಾನಸರಾಗಿ-ದುಃಖವನ್ನು ಹೊಂದಿದ ಮನಸ್ಸಿನಿಂದ, ಪೊರಮಟ್ಟರ್-ಹೊರಟರು.)
ಕಂ॥ ನವೆಯುತೆ ಮನದೊಳ್ ಚಿಂತಿಸು-
ತವಿಲಂಬದೆ ದಾಸ್ಯಮಪ್ಪುದೆನುತುಂ ಖತಿಯೊಳ್
ತವೆ ಕದ್ರು ದುಃಖಿಸಿರ್ದಳ್
ಭವಿತವ್ಯದ ಚಿಂತೆ ಸಾಜಮೈ ಸರ್ವರ್ಗಂ ॥೭೭॥
(ಟೀ-ನವೆಯುತೆ-ನವೆಯುತ್ತಾ/ಕಷ್ಟಪಡುತ್ತಾ, ಮನದೊಳ್-ಮನಸ್ಸಿನಲ್ಲಿಯೇ, ಚಿಂತಿಸುತೆ- ಆಲೋಚಿಸುತ್ತಾ, ಅವಿಲಂಬದೆ-ವಿಳಂಬವಿಲ್ಲದೇ, ದಾಸ್ಯಂ-ದಾಸ್ಯವು/ವಿನತೆಗೆ ದಾಸಿಯಾಗುವ ಸಂದರ್ಭವು, ಅಪ್ಪುದು-ಆಗುತ್ತದೆ, ಎನುತುಂ- ಎಂದು, ಖತಿಯೊಳ್-ಕೋಪದಲ್ಲಿ, ತವೆ-ಅತಿಶಯವಾಗಿ, ಕದ್ರು-ಕದ್ರುವು, ದುಃಖಿಸಿರ್ದಳ್-ದುಃಖಿಸಿದಳು. ಭವಿತವ್ಯದ-ಭವಿಷ್ಯದ/ಮುಂದೆ ಆಗುವುದರ, ಚಿಂತೆ-ಚಿಂತೆಯು, ಸರ್ವರ್ಗಂ-ಎಲ್ಲರಿಗೂ, ಸಾಜಮೈ-ಸಹಜವಾದದ್ದೇ ಆಗಿದೆ. ಕಂದಪದ್ಯ, ಭವಿಷ್ಯದ ಚಿಂತೆ ಎಲ್ಲರಿಗೂ ಇರುವುದೇ ಆಗುತ್ತದೆ ಎಂದು ಹೇಳುವಲ್ಲಿ ಲೋಕಸಾಮಾನ್ಯವ್ಯವಹಾರಕ್ಕೆ ಸಮೀಕರಿಸಿದ ಕಾರಣ ಅರ್ಥಾಂತರನ್ಯಾಸಾಲಂಕಾರವೂ ಆಗುತ್ತದೆ)
ವ॥ ಅಂತಲ್ಲದೆಯುಂ
(ಹಾಗಲ್ಲದೆಯೂ)
ಕಂ॥ ಭರದಿಂ ಕೋಪಂಗೊಳುತುಂ
ವರಪುತ್ರರನಿಂತು ಶಪಿಸಿದೆಂ ಲೋಕದೊಳಂ
ಸುರಸಾಸೂನುಗಳಂದದೊ-
ಳುರಗಿಯು ಮಕ್ಕಳನೆ ತಿಂಬಳೆಂಬಂತಾಯ್ತೇ ॥೭೮॥
(ಟೀ-ಭರದಿಂ-ಬೇಗದಲ್ಲಿ, ಕೋಪಂಗೊಳುತುಂ(ಕೋಪಂ+ಕೊಳುತುಂ)-ಕೋಪವನ್ನು ಹೊಂದುತ್ತಾ, ವರಪುತ್ರರಂ-ಒಳ್ಳೆಯ ಮಕ್ಕಳನ್ನು, ಇಂತು-ಹೀಗೆ, ಶಪಿಸಿದೆಂ-ಶಪಿಸಿದೆ/ಶಾಪವನ್ನು ಕೊಟ್ಟೆ, ಲೋಕದೊಳಂ-ಜಗತ್ತಿನಲ್ಲಿ, ಸುರಸಾಸೂನುಗಳಂದದೊಳ್-ಸುರಸೆಯ ಮಕ್ಕಳ ಹಾಗೆ, ಉರಗಿಯು-ಹಾವುಗಳ ತಾಯಿ/ಹೆಣ್ಣು ಹಾವು, ಮಕ್ಕಳನೆ-ತನ್ನ ಮಕ್ಕಳನ್ನೇ, ತಿಂಬಳ್-ತಿನ್ನುತ್ತಾಳೆ, ಎಂಬಂತಾಯ್ತೇ-ಎನ್ನುವ ಹಾಗೆ ಆಯಿತೇ!
ಕಂದಪದ್ಯ, ಸುರಸೆ ಎಂಬುವವಳೂ ಕಶ್ಯಪನ ಹೆಂಡತಿಯರಲ್ಲಿ ಇನ್ನೊಬ್ಬಳು. ಅವಳೂ ಕೂಡ ಸರ್ಪಗಳ ತಾಯಿ ಎಂದು ಪುರಾಣಪ್ರಸಿದ್ಧ. ಹಾವುಗಳು ತಮ್ಮ ಮೊಟ್ಟೆಗಳಲ್ಲೇ ಕೆಲವನ್ನು ತಿಂದುಬಿಡುತ್ತವೆ ಎಂಬುದೂ ಲೋಕದಲ್ಲಿ ಕಂಡುಬರುವುದೇ ಆಗಿದೆ. ಹಾಗಾಗಿ ಹಾವುಗಳ ತಾಯಿ ಹಾವನ್ನು ತಿನ್ನುತ್ತಾಳೆ ಎಂಬಂತೆ ತನ್ನ ಮಕ್ಕಳಿಗೆ ತಾನೇ ಸಾಯುವಂತೆ ಶಾಪಕೊಟ್ಟೆ ಎಂದು ಪರಿತಪಿಸಿದಳು ಎಂದು ಪದ್ಯದ ತಾತ್ಪರ್ಯ.)
ಕಂ।। ಕೋಪದಿನಾಂತರ್ಯದೊಳೀ
ತಾಪಂ ತಾಪದಿನೆ ಶಾಪಮಿತ್ತುದುಮಂತೇ
ಶಾಪದಿನನ್ವಯನಾಶಂ
ಕೋಪಂ ತಾಂ ಸರ್ವನಾಶಕಂ ಸಂದುದಲಾ ॥೭೯॥
(ಟೀ-ಕೋಪದಿಂ-ಕೋಪದಿಂದ/ಸಿಟ್ಟಿನಿಂದ, ಆಂತರ್ಯದೊಳೀ-ಮನಸ್ಸಿನಲ್ಲಿ, ತಾಪಂ-ಬಿಸಿ/ತಾಪವು, ತಾಪದಿನೆ-ತಾಪದಿಂದಲೇ/ಆ ಬಿಸಿಯಿಂದಲೇ, ಶಾಪಮಿತ್ತುದುಂ(ಶಾಪಂ+ಇತ್ತುದು)-ಶಾಪವಿತ್ತುದೂ, ಅಂತೇ-ಹಾಗೆಯೇ, ಶಾಪದಿಂ-ಶಾಪವನ್ನು ಕೊಟ್ಟಿದ್ದರಿಂದ, ಅನ್ವಯನಾಶಂ-ವಂಶದ ನಾಶವು(ಆಗುತ್ತದೆ) ಕೋಪಂ-ಸಿಟ್ಟು ಎಂಬುದು, ತಾಂ-ತಾನು, ಸರ್ವನಾಶಕಂ-ಎಲ್ಲವನ್ನೂ ನಾಶವನ್ನು ಮಾಡುವುದು, ಸಂದುದಲಾ-ಆಯಿತಲ್ಲವೇ! ಕಂದಪದ್ಯ,ಕಾರಣಮಾಲಾ ಎಂಬ ಅಲಂಕಾರ)
ಕಂ।। ವೇದನೆಯಾದೊಡೆ ಪಡೆವೊಡೆ
ಮೋದದೆ ತಳೆದಿರ್ದ ಮಕ್ಕಳಂ ಶಪಿಸಿರ್ಪೆಂ
ಛೇದಿಸಿಕೊಂಡೆಂ ಮೂಗಂ
ಖೇದಂಬಡೆ ಮತ್ತೆ ಮೊಳೆವುದೇ ಎಂದೞಲ್ದಳ್॥೮೦॥
(ಟೀ-ಪಡೆವೊಡೆ-ಪಡೆಯುವಾಗ/ಹಡೆಯುವಾಗ, ವೇದನೆಯಾದೊಡೆ-ನೋವಾದರೂ, ಮೋದದೆ-ಸಂತೋಷದಿಂದ, ತಳೆದಿರ್ದ-ಹೊಂದಿದ್ದ, ಮಕ್ಕಳಂ-ಮಕ್ಕಳನ್ನು, ಶಪಿಸಿರ್ಪೆಂ-ಶಪಿಸಿದೆ, ಮೂಗಂ-ಮೂಗನ್ನು, ಛೇದಿಸಿಕೊಂಡೆಂ-ಕತ್ತರಿಸಿಕೊಂಡೆ,ಖೇದಂಬಡೆ-ದುಃಖವನ್ನು ಪಟ್ಟರೆ, ಮತ್ತೆ-ಇನ್ನೊಮ್ಮೆ, ಮೊಳೆವುದೇ-ಮೊಳಕೆಯೊಡೆಯುತ್ತದೆಯೇ/ಹುಟ್ಟುತ್ತದೆಯೇ/ಚಿಗುರುತ್ತದೆಯೇ, ಎಂದೞಲ್ದಳ್-ಎಂದು ದುಃಖಿಸಿದಳು.)
ವ॥ ಎಂದು ಪಲವುಂ ತೆಱದಿಂದೆ ಅೞಲುತ್ತುಮಿರಲಿತ್ತಲ್
(ಎಂದು-ಹೀಗೆಂದು, ಪಲವುಂ-ಹಲವು, ತೆಱದಿಂದೆ-ವಿಧದಿಂದ, ಅೞಲುತ್ತುಂ-ದುಃಖಿಸುತ್ತ, ಇರಲ್-ಇರಲು, ಇತ್ತಲ್-ಇತ್ತ ಕಡೆಯಲ್ಲಿ)
ತೋಟಕ॥ ಘಟಿತಂ ಘಟಿತಂ ಭವಿತವ್ಯದೊಳಾಂ
ಸ್ಫುಟದಿಂ ಚಟುಲಾಗ್ನಿಗೆ ಬಿಳ್ದಪೆವೈ
ತ್ರುಟಿಯಾಗದವೊಲ್ ಬರ್ದುಕಲ್ಕೆನೆ ನಿ
ಚ್ಚಟದಿಂ ಘನಮಾರ್ಗಮೆ ದಲ್ ದೊರೆಗುಂ॥೮೧॥
(ಟೀ-ಘಟಿತಂ-ಆಗಿರುವುದು, ಘಟಿತಂ-ಆಯ್ತು, ಭವಿತವ್ಯದೊಳ್- ಭವಿಷ್ಯದಲ್ಲಿ/ಮುಂದಿನ ಕಾಲದಲ್ಲಿ, ಆಂ-ನಾವು, ಸ್ಫುಟದಿಂ-ಸ್ಪಷ್ಟವಾಗಿ, ಚಟುಲಾಗ್ನಿಗೆ-ತೀಕ್ಷ್ಣವಾದ ಅಗ್ನಿಯಲ್ಲಿ/ಬೆಂಕಿಯಲ್ಲಿ, ಬಿಳ್ದಪೆವೈ-ಬೀಳುತ್ತೇವೆ, ತ್ರುಟಿಯಾಗದವೊಲ್-ತ್ರುಟಿ-ತೊಂದರೆಯಾಗದಂತೆ, ಬರ್ದುಕಲ್ಕೆ+ಎನೆ-ಬದುಕುವುದಕ್ಕೆನ್ನಲು, ನಿಚ್ಚಟದಿಂ-ನಿಶ್ಚಯದಿಂದ, ಘನಮಾರ್ಗಮೆ-ಗಟ್ಟಿಯಾದ/ದೊಡ್ಡದಾದ ದಾರಿಯು, ದಲ್ ದೊರೆಗುಂ-ದೊರೆಯುವುದಲ್ಲವೇ! ತೋಟಕವೃತ್ತ.)
ದ್ರು॥ ಜನನಿ ಕಷ್ಟಮನಾಂತೊಡೆ ಖೇದಮೆಂ-
ದೆನುತೆ ಮಕ್ಕಳೆ ಚಿಂತಿಸಿ ಸರ್ವರುಂ
ಘನವಟಕ್ಕೆ ಬಿಳಲ್ಗಳವೋಲೆ ಶ-
ಕ್ರನ ಸದಶ್ವದ ಬಾಲಕೆ ಜೋಲ್ದುವೈ ॥೮೨॥
(ಟೀ-ಜನನಿ-ತಾಯಿಯು, ಕಷ್ಟಮಂ-ಕಷ್ಟವನ್ನು,ಆಂತೊಡೆ-ತಳೆದರೆ/ಹೊಂದಿದರೆ, ಖೇದಂ-ದುಃಖವು, ಎಂದೆನುತೆ-ಎಂದೆನ್ನುತ್ತಾ, ಮಕ್ಕಳೆ-ಸರ್ಪಗಳೆಲ್ಲವೂ, ಚಿಂತಿಸಿ-ಯೋಚನೆ ಮಾಡಿ, ಸರ್ವರುಂ-ಎಲ್ಲರೂ, ಘನವಟಕ್ಕೆ-ದೊಡ್ಡ ಆಲದ ಮರಕ್ಕೆ, ಬಿಳಲ್ಗಳವೋಲೆ-ಬಿಳಲುಗಳು ಇರುವಂತೆ, ಶಕ್ರನ-ಇಂದ್ರನ, ಸದಶ್ವದ-ಒಳ್ಳೆಯ ಕುದುರೆಯ, ಬಾಲಕೆ-ಬಾಲಕ್ಕೆ, ಜೋಲ್ದುವೈ-ಜೋತವು/ನೇತಾಡಿದವು. ದ್ರುತವಿಲಂಬಿತವೃತ್ತ)
ವ॥ ಅಂತು ಕಾದ್ರವೇಯರ್ ತಾಯ್ಗೆ ಸಲ್ವ ಕಷ್ಟಮಂ ಕಳೆಯಲೆಂದು ನೋಂತು ಉಚ್ಛೈಶ್ರವಸ್ಸಿನ ಬಾಲಕ್ಕೆ ಅಂಟಿಕೊಂಡುಂ ತಾಯ ಶಾಪದಿಂ ಮೋಕ್ಷಮಂ ಪಡೆಯಲಾಱದಾದುವು. ಅಂತೆನೆ ತಾಯ ಶಾಪದ ಕಾರಣದಿಂ ಜನಮೇಜಯಂ ಗೆಯ್ದ ಸರ್ಪಸತ್ರದೊಳ್ ಸರ್ಪಂಗಳ್ ಕ್ರಮದಿಂ ಅಗ್ನಿಗಾಹುತಿಯಾದುದುಂ ಸಂದತ್ತು ಎಂದು ಸೂತಪುರಾಣಿಕರ್ ಕಥಾನಕಮಂ ಮುಗಿಸಲ್ ತಗುಳೆ ಶೌನಕಾದಿ ಮುನಿಗಳ್ ಕೇಳ್ದಪರ್
(ಅಂತು-ಹೀಗೆ, ಕಾದ್ರವೇಯರ್-ಕದ್ರುವಿನ ಮಕ್ಕಳು, ತಾಯ್ಗೆ-ತಾಯಿಗೆ/ಕದ್ರುವಿಗೆ, ಸಲ್ವ-ಸಲ್ಲುವ, ಕಷ್ಟಮಂ-ಕಷ್ಟವನ್ನು, ಕಳೆಯಲೆಂದು-ಕಳೆಯಬೇಕೆಂದುಕೊಂಡು, ನೋಂತು-ನಿರ್ಧರಿಸಿ, ಉಚ್ಛೈಶ್ರವಸ್ಸಿನ-ಸಮುದ್ರಮಥನದಲ್ಲಿ ಬಂದ ಉಚ್ಚೈಶ್ರವಸ್ಸೆಂಬ ಬಿಳಿಯ ಕುದುರೆಯ, ಬಾಲಕ್ಕೆ-ಬಾಲಕ್ಕೆ/ಪುಚ್ಛಕ್ಕೆ, ಅಂಟಿಕೊಂಡುಂ-ಅಂಟಿಕೊಂಡರೂ, ತಾಯ-ಜನನಿಯ, ಶಾಪದಿಂ-ಶಾಪದಿಂದ, ಮೋಕ್ಷಮಂ-ಬಿಡುಗಡೆಯನ್ನು, ಪಡೆಯಲಾಱದಾದುವು-ಪಡೆಯಲಾರದವು ಆದವು. ಅಂತೆನೆ-ಹಾಗೆನ್ನಲು, ತಾಯ-ತಾಯಿಯ, ಶಾಪದ-ಶಾಪದ, ಕಾರಣದಿಂ-ಕಾರಣದಿಂದ, ಜನಮೇಜಯಂ-ಜನಮೇಜಯನು, ಗೆಯ್ದ-ಮಾಡಿದ, ಸರ್ಪಸತ್ರದೊಳ್-ಸರ್ಪಯಾಗದಲ್ಲಿ, ಸರ್ಪಂಗಳ್-ಈ ಸರ್ಪಗಳು/ಹಾವುಗಳು, ಕ್ರಮದಿಂ-ಕ್ರಮವಾಗಿ, ಅಗ್ನಿಗೆ-ಯಜ್ಞದ ಅಗ್ನಿಯಲ್ಲಿ, ಆಹುತಿಯಾದುದುಂ-ಆಹುತಿಯಾದದ್ದೂ/ಸತ್ತು ಹೋದದ್ದೂ, ಸಂದತ್ತು-ಆಯಿತು, ಎಂದು-ಎಂದು, ಸೂತಪುರಾಣಿಕರ್-ಸೂತಪುರಾಣಿಕರು, ಕಥಾನಕಮಂ-ತಾವು ಹೇಳುತ್ತಿರುವ ಕಥೆಯನ್ನು, ಮುಗಿಸಲ್-ಮುಗಿಸಲು/ಕೊನೆಗೊಳಿಸಲು, ತಗುಳೆ-ಹತ್ತಲು/ನಿಶ್ಚಯಿಸಲು, ಶೌನಕಾದಿ ಮುನಿಗಳ್-ಶೌನಕರೇ ಮೊದಲಾದ ಮುನಿಗಳು, ಕೇಳ್ದಪರ್-ಕೇಳಿದರು)
ಚಂ॥ ಅರರೆ! ಪುರಾಣವಿನ್ಮುನಿಪರೇ ಕಥನಕ್ರಮಮದ್ಭುತಂ ಮಗುಳ್
ಸುರುಚಿರಕೌತುಕಾನ್ವಿತವಿಶೇಷವಿಶಾಲವಿನೋದಘಟ್ಟದೊಳ್
ಭರದೆ ಸಮಾಪ್ತಿಗೆಯ್ದೊಡಿದು ಸಲ್ಲದು ಸಲ್ಲದು ಪೇೞಿಮಿನ್ನುಮಿಂ-
ತುರಗಕುಲಕ್ಕೆ ಮೇಣ್ ವಿನತೆಗಾದುದನೆಲ್ಲಮನೆಂದು ಪೇೞ್ದಪರ್ ॥೮೩॥
(ಟೀ-ಅರರೆ!-ಅರರೇ, ಪುರಾಣವಿನ್ಮುನಿಪರೇ(ಪುರಾಣವಿತ್+ಮುನಿಪರೇ)-ಪುರಾಣವನ್ನು ತಿಳಿದುಕೊಂಡ ಮುನೀಂದ್ರರೇ, ಕಥನಕ್ರಮಂ-ಕಥೆಯನ್ನು ಹೇಳುವ ಕ್ರಮವು, ಅದ್ಭುತಂ-ಅದ್ಭುತವಾದದ್ದು, ಮಗುಳ್-ಮತ್ತೆ, ಸುರುಚಿರ-ಕೌತುಕಾನ್ವಿತ-ವಿಶೇಷ-ವಿಶಾಲ-ವಿನೋದ-ಘಟ್ಟದೊಳ್-ಸುಂದರವಾದ ಕುತೂಹಲವುಳ್ಳ ವಿಶೇಷವಾದ ವಿಶಾಲವಾದ ವಿನೋದದ ಘಟ್ಟದಲ್ಲಿ, ಭರದೆ-ಬೇಗನೇ, ಸಮಾಪ್ತಿಗೆಯ್ದೊಡೆ-ಮುಗಿಸಿಬಿಟ್ಟರೆ, ಇದು-ಈ ಕ್ರಮವು, ಸಲ್ಲದು ಸಲ್ಲದು-ಸಲ್ಲುವುದಿಲ್ಲ ಸಲ್ಲುವುದಿಲ್ಲ. ಇನ್ನುಂ-ಇನ್ನೂ, ಇಂತು-ಹೀಗೆ, ಉರಗಕುಲಕ್ಕೆ-ಸರ್ಪಕುಲಕ್ಕೆ, ಮೇಣ್-ಮತ್ತೆ, ವಿನತೆಗೆ-ವಿನತೆಗೆ, ಆದುದಂ- ಆದದ್ದನ್ನು ಎಲ್ಲಮಂ-ಎಲ್ಲವನ್ನೂ ಪೇೞಿಂ-ಹೇಳಿರಿ, ಎಂದು-ಎಂದು ಪೇೞ್ದಪರ್-ಹೇಳಿದರು ಚಂಪಕಮಾಲಾವೃತ್ತ.)
ವ॥ಅಂತಲ್ಲದೆಯುಂ
(ಹಾಗಲ್ಲದೆಯೂ)
ಕಂ॥ ಮುಗಿಯದೆ ಕುತುಕಂ ಕಥೆಯೊಳ್
ತಗದಿಂತುಟು ನಿಲ್ಲಿಸಲ್ಕೆ ಮುನಿಪರೆ ಮುನಿವರ್
ಸೊಗದೆ ರಸಘಟ್ಟಿ ಬಾರದೆ
ಜಗುೞಲ್ ಮೇಣ್ ಸಲ್ಲದಲ್ತೆ ಕತೆಯೊಳ್ ರತದೊಳ್ ॥೮೪॥
(ಟೀ-ಕಥೆಯೊಳ್-ಕಥೆಯಲ್ಲಿ, ಕುತುಕಂ-ಕುತೂಹಲವು, ಮುಗಿಯದೆ-ಮುಗಿಯದೇ ಇದ್ದಾಗ, ಇಂತುಟು-ಹೀಗೆ, ನಿಲ್ಲಿಸಲ್ಕೆ-ನಿಲ್ಲಿಸುವುದಕ್ಕೆ ತಗದು-ಯೋಗ್ಯವಾಗುವುದಿಲ್ಲ. ಮುನಿಪರೆ-ಋಷಿಗಳೇ, ಮುನಿವರ್-ಸಿಟ್ಟಾಗುತ್ತಾರೆ. ಸೊಗದೆ-ಚೆನ್ನಾಗಿ, ರಸಘಟ್ಟಿ-ರಸಘಟ್ಟಿ/ರಸಸ್ಥಾನವು, ಬಾರದೆ-ಬರದಿರುವಾಗ, ಜಗುೞಲ್-ದೂರ ಹೋಗಲು, ಮೇಣ್-ಮತ್ತೆ, ಕತೆಯೊಳ್-ಕಥೆಯಲ್ಲಿಯೂ, ರತದೊಳ್-ರತಿಕ್ರೀಡೆಯಲ್ಲಿಯೂ, ಸಲ್ಲದಲ್ತೆ-ಸಲ್ಲುವುದಿಲ್ಲ ಅಲ್ಲವೇ! ಕಂದಪದ್ಯ)
ಕಂ।। ಮುಂದಿನ ದಿನದೊಳ್ ಪಂದ್ಯದೆ
ಸಂದುದದೇಂ ಕದ್ರುವಾ ವಿನತೆಯುಮದೆಂತಾ
ನಂದದೆ ಪೋದರ್ ನೋಡಲ್
ಬೃಂದಾರಕಕುಲಪವಾಜಿಯೆಂತೆಸೆದಿರ್ಕುಂ ॥೮೫॥
(ಟೀ-ಮುಂದಿನ-ಮಾರನೆಯ, ದಿನದೊಳ್-ದಿನದಲ್ಲಿ, ಪಂದ್ಯದೆ-ಸ್ಪರ್ಧೆಯಲ್ಲಿ, ಅದೇಂ-ಅದೇನು, ಸಂದುದು- ಆಯಿತು. ಕದ್ರುವು-ಕದ್ರುವು, ಆ ವಿನತೆಯುಂ-ಆ ವಿನತೆಯೂ, ಅದೆಂತು-ಅದ ಹೇಗೆ, ಆನಂದದೆ-ಸಂತೋಷದಿಂದ, ನೋಡಲ್-ನೋಡಲು, ಪೋದರ್-ಹೋದರು, ಬೃಂದಾರಕ-ಕುಲಪ-ವಾಜಿಯು- ದೇವತೆಗಳ ಕುಲದ ಒಡೆಯನಾದ ಇಂದ್ರನ ಕುದುರೆಯು, ಎಂತು-ಹೇಗೆ, ಎಸೆದಿರ್ಕುಂ-ಶೋಭಿಸಿತ್ತು. ಕಂದಪದ್ಯ)
ಕಂ।। ದೊರೆತೊಡೆ ಶಾಪಂ ಬರ್ದುಕುವು
ದರಿದೆನುತೇಂ ಬಾೞ್ವ ಬಯಕೆಯಂ ಬಿಟ್ಟವೆ ಮೇಣ್
ಮರಣಂ ಸಾರ್ದೊಡೆ ಜಗದೊಳ
ಗಿಱುಂಪೆಯುಂ ಪೋರ್ವುದೈ ಜಿಜೀವಿಷೆಯಿಂದಂ॥೮೬॥
(ಟೀ-(ಕದ್ರುವಿನ ಮಕ್ಕಳು)ಶಾಪಂ-ಶಾಪವು, ದೊರೆತೊಡೆ-ಬಂದಾಗ, ಬರ್ದುಕುವುದು-ಬದುಕುವುದು, ಅರಿದು+ಎನುತೆ-ಕಷ್ಟವೆನ್ನುತ್ತ, ಬಾೞ್ವ-ಬದುಕುವ, ಬಯಕೆಯಂ-ಆಸೆಯನ್ನೇ ಬಿಟ್ಟವೆ ಏಂ-ಬಿಟ್ಟವೇನು? ಮೇಣ್-ಮತ್ತೆ, ಮರಣಂ-ಮೃತ್ಯುವು, ಸಾರ್ದೊಡೆ-ಸನಿಹಕ್ಕೆ ಬಂದಾಗ, ಜಗದೊಳಗೆ-ಜಗತ್ತಿನಲ್ಲಿ, ಇಱುಂಪೆಯುಂ-ಇರುವೆಯೂ ಕೂಡ, ಜಿಜೀವಿಷೆಯಿಂದಂ-ಬದುಕುವ ಇಚ್ಛೆಯಿಂದ, ಪೋರ್ವುದೈ-ಹೋರಾಡುವುದು! ಕಂದಪದ್ಯ)
ಕಂ।। ವಿನತೆಗೆ ಪುಟ್ಟಿದ ಮಕ್ಕಳೊ
ಳೆನಿತೋ ವೀರತ್ವಮಿರ್ಪನಿನ್ನೊರ್ವ ಸುತಂ
ಮುನಿದಣ್ಣನಿತ್ತ ಶಾಪಮ
ನೆನಿತೇಂ ಪರಿಹರಿಸಿ ಕಾಯ್ದನೋ ಪೇೞಿಮಲಾ! ॥೮೭॥
(ಟೀ- ವಿನತೆಗೆ-ವಿನತೆಗೆ, ಪುಟ್ಟಿದ-ಹುಟ್ಟಿದ, ಮಕ್ಕಳೊಳ್-ಮಕ್ಕಳಲ್ಲಿ, ಎನಿತೋ-ಎಷ್ಟೋ, ವೀರತ್ವಂ-ವೀರತ್ವ/ಪರಾಕ್ರಮವು, ಇರ್ಪಂ-ಇರುವವನು, ಇನ್ನೊರ್ವ-ಇನ್ನೊಬ್ಬ, ಸುತಂ-ಮಗನು,ಮುನಿದು-ಸಿಟ್ಟಾಗಿ, ಅಣ್ಣಂ-ಅಣ್ಣನಾದ ಅರುಣನು, ಇತ್ತ-ಕೊಟ್ಟ, ಶಾಪಮಂ-ಶಾಪವನ್ನು, ಎನಿತೇಂ-ಹೇಗೆ ಏನು, ಪರಿಹರಿಸಿ-ಪರಿಹಾರ ಮಾಡಿ/ನಿವಾರಿಸಿ, ಕಾಯ್ದನೋ-ಕಾಪಾಡಿದನೋ, ಪೇೞಿಮಲಾ!-ಹೇಳಿರಿ. ಕಂದಪದ್ಯ)
ಕಂ।। ಅವನಾರ್ ಬೀರದೆ ಗೆಲ್ದಂ
ಸವತಿಯದೆಂತೊಪ್ಪಿದಳ್ ಬಿಡಲ್ ದಾಸ್ಯಮನೇ
ಜವದಿಂ ಕುತುಕಮನೞುಪಲ್
ಕವನಿಸಿ ನೀಮಿಂತು ಪೇೞಿಮುಳಿದುದನೀಗಳ್ ॥೮೮॥
(ಟೀ-ಅವನಾರ್-ಅವನು ಯಾರು, ಬೀರದೆ-ಪರಾಕ್ರಮದಿಂದ, ಗೆಲ್ದಂ-ಗೆದ್ದವನು? ಸವತಿಯು- ಸವತಿಯಾದ ಕದ್ರುವು, ಅದೆಂತು-ಅದು ಹೇಗೆ, ದಾಸ್ಯಮನೇ-(ವಿನತೆಯ)ದಾಸ್ಯವನ್ನೇ, ಬಿಡಲ್-ಬಿಡುವುದಕ್ಕೆ, ಒಪ್ಪಿದಳ್-ಒಪ್ಪಿದಳು? ಜವದಿಂ-ಬೇಗದಿಂದ, ಕುತುಕಮಂ-ಕುತೂಹಲವನ್ನು, ಅೞುಪಲ್-ಅಳಿಸಲು/ಕಳೆಯಲು, ಈಗಳ್-ಈಗ, ಕವನಿಸಿ-ಕವಿತೆಗಳನ್ನು ರಚಿಸಿ, ನೀಂ ಇಂತು-ನೀವು ಹೀಗೆ, ಉಳಿದುದಂ-ಉಳಿದಿರುವುದನ್ನು, ಪೇೞಿಂ-ಹೇಳಿರಿ. ಕಂದಪದ್ಯ)
ವ॥ ಎಂದು ಸಮಸ್ತಮುನಿಕುಲಂ ಕೇಳ್ದೊಡಂ ಸೂತಪುರಾಣಿಕರ್ ಸಂತಸಂದಾಳ್ದು
(ಎಂದು-ಹೀಗೆಂದು, ಸಮಸ್ತ-ಮುನಿಕುಲಂ-ಸಂಪೂರ್ಣವಾದ ಮುನಿಗಳ ಗುಂಪು, ಕೇಳ್ದೊಡಂ-ಕೇಳಿದೊಡನೆ, ಸೂತಪುರಾಣಿಕರ್-ಸೂತಪುರಾಣಿಕರು, ಸಂತಸಂದಾಳ್ದು-(ಸಂತಸಂ+ತಾಳ್ದು)-ಸಂತೋಷವನ್ನು ಹೊಂದುತ್ತಾ- )
ಕಂ॥ ಉತ್ತರಿಪೆಂ ಸಕಲಮನಾಂ
ಬಿತ್ತರಿಪೆಂ ಕಥೆಯನಿಂತು ತ್ವತ್ಕೌತುಕದಿಂ
ಚಿತ್ತಂ ಪಕ್ವಮೆ ಎನುತುಂ
ಸತ್ತಮರೆ ಪರೀಕ್ಷಿಸಲ್ಕೆ ನಿಲಿಸಿದೆನೆಂದರ್॥೮೯॥
(ಟೀ-ಸತ್ತಮರೆ-ಸತ್ತ್ವಶಾಲಿಗಳೇ!/ಸಜ್ಜನರೇ! ಸಕಲಮಂ-ಎಲ್ಲವನ್ನೂ, ಆಂ-ನಾನು, ಉತ್ತರಿಪೆಂ-ಉತ್ತರಿಸುತ್ತೇನೆ. ಕಥೆಯಂ-ಕಥೆಯನ್ನು, ಇಂತು-ಹೀಗೆ, ಬಿತ್ತರಿಪೆಂ-ವಿಸ್ತರಿಸುತ್ತೇನೆ/ವಿಸ್ತಾರವಾಗಿ ಹೇಳುತ್ತೇನೆ. ತ್ವತ್ಕೌತುಕದಿಂ(ತ್ವತ್+ಕೌತುಕದಿಂ)-ನಿಮ್ಮ ಕುತೂಹಲದಿಂದ, ಚಿತ್ತಂ-ಮನಸ್ಸು, ಪಕ್ವಮೆ-ಪಕ್ವವಾಗಿದೆಯಾ, ಎನುತುಂ- ಎನ್ನುತ್ತ, ಪರೀಕ್ಷಿಸಲ್ಕೆ-ಪರೀಕ್ಷಿಸುವುದಕ್ಕೆ, ನಿಲಿಸಿದೆಂ-ನಿಲ್ಲಿಸಿದೆ, ಎಂದರ್-ಎಂದರು. ಕಂದಪದ್ಯ)
ವ॥ ಬೞಿಕಂ ವೈನತೇಯನ ಕಥೆಯಂ ಮುಂದುವರೆಸಲ್ ಗರುತ್ಮಂತನಂ ಸ್ತುತಿಸಿದರ್ ಅದೆಂತೆನೆ-
(ಬೞಿಕಂ-ಆಮೇಲೆ, ವೈನತೇಯನ-ಗರುಡನ, ಕಥೆಯಂ-ಕಥೆಯನ್ನು, ಮುಂದುವರೆಸಲ್-ಮುಂದುವರೆಸಲು, ಗರುತ್ಮಂತನಂ-ಗರುತ್ಮಂತನನ್ನು/ಗರುಡನನ್ನು, ಸ್ತುತಿಸಿದರ್-ಸ್ತುತಿ ಮಾಡಿದರು, ಅದೆಂತೆನೆ-ಅದು ಹೇಗೆಂದರೆ-)
ಖಚರಪ್ಲುತ॥
ಪಕ್ಷಚಾಲನವೇಗದೆ ಜಂಝಾವಾತಮೆ ಬಂದುದೊ ನೋಡೆ ಸ
ಲ್ಲಕ್ಷಣಾನ್ವಿತರೂಪದೆ ನೇಸರ್ ಮೇಣಿಳೆಗೆಯ್ದವೊಲೆಯ್ದಿರ
ಲ್ಕೀ ಕ್ಷಮಾತಳಭಾರಮೆ ಬಲ್ಪಿಂದಂ ಪರಮಾಣುವೆನಿಪ್ಪೊಡಂ
ದಕ್ಷಖೇಚರರಾಜನೆ ನಿನ್ನೀ ಮೈಮೆಯನೇವೊಗಳ್ವೆಂ ವಲಂ ॥೯೦॥
(ಟೀ- ಪಕ್ಷ-ಚಾಲನ-ವೇಗದೆ-ರೆಕ್ಕೆಯನ್ನು ಬೀಸುವ ವೇಗದಲ್ಲಿ, ಜಂಝಾವಾತಮೆ-ಚಂಡಮಾರುತವೇ/ಬಿರುಗಾಳಿಯೇ, ಬಂದುದೊ-ಬಂದಿದೆಯೋ, ನೋಡೆ-ನೋಡಲು, ಸಲ್ಲಕ್ಷಣಾನ್ವಿತರೂಪದೆ-(ಸತ್+ಲಕ್ಷಣಾನ್ವಿತ-ರೂಪದೆ)-ಒಳ್ಳೆಯ ಲಕ್ಷಣದಿಂದ ಕೂಡಿದ ರೂಪದಿಂದ, ನೇಸರ್-ಸೂರ್ಯನೇ, ಮೇಣ್-ಮತ್ತೆ, ಇಳೆಗೆ-ಭೂಮಿಗೆ, ಎಯ್ದವೊಲ್-ಬಂದ ಹಾಗೆಯೇ, ಎಯ್ದಿರಲ್ಕೆ ಈ- ಬಂದಿರಲು ಈ, ಕ್ಷಮಾತಳ-ಭಾರಮೆ-ಭೂತಳದ ಭಾರವೇ, ಬಲ್ಪಿಂದಂ-ಬಲ್ಮೆಯಿಂದ, ಪರಮಾಣು-ಪರಮಾಣು/ಅತಿಸೂಕ್ಷ್ಮವಾದ ವಸ್ತು, ಎನಿಪ್ಪೊಡಂ-ಎಂದೆನ್ನಿಸುತ್ತಿರಲು, ದಕ್ಷ-ಖೇಚರ-ರಾಜನೆ-ಸಮರ್ಥನಾದ ಪಕ್ಷಿಸಂಕುಲದ ರಾಜನೇ, ನಿನ್ನೀ-ನಿನ್ನ ಈ, ಮೈಮೆಯಂ-ಮಹಿಮೆಯನ್ನು, ಏವೊಗಳ್ವೆಂ ವಲಂ-ಏನು ತಾನೇ ಹೊಗಳಬಲ್ಲೆ!
ಇದು ಖಚರಪ್ಲುತ ಎಂಬ ವಿರಳವಾಗಿ ಬಳಕೆಯಲ್ಲಿರುವ ವೃತ್ತ. ಖಚರ-ಪಕ್ಷಿಯ/ಗರುಡನ, ಪ್ಲುತ-ನೆಗೆತ ಎಂಬ ಅರ್ಥವೂ ಬರುವುದರಿಂದ ಗರುಡನ ಸ್ತುತಿಗೆ ತಕ್ಕದ್ದಾಗಿದೆ.)
ಇಂತು ಸಮಸ್ತಬುಧಜನರೋಮಹರ್ಷಣತತ್ಪರವೈಚಿತ್ರವಿಲಾಸೋಚಿತವಕ್ರೋಕ್ತಿಧ್ವನಿಮಯಮರಂದಮಾಧುರ್ಯಪರಿವೇಷ್ಟಿತರಸನಿರ್ಭರೌಜಃಪೂರ್ಣಪ್ರಸನ್ನಕವಿತಾವನಿತಾವಿಭ್ರಮವಿಷಯಲೋಲುಪವಾವದೂಕ ಚತುರ್ವಿಧಕವಿತ್ವಸತ್ರಚತುರ್ಮುಖ ಕರ್ಣಾಟಾವಧಾನೀ ಕೇಶದ್ವಯಮಾತ್ರಾವರಕೇಶವರಾಜೇತ್ಯಾದಿ ಬಿರುದಾಲಂಕೃತ ಕೊಪ್ಪಲತೋಟ ಗಣೇಶಭಟ್ಟವಿರಚಿತ ವೈನತೇಯವಿಜಯಮೆಂಬ ಲಘುಪ್ರಬಂಧಕಾವ್ಯದೊಳ್ ಪೀಠಿಕಾಪ್ರಕರಣಮೆಂಬ
ಪ್ರಥಮಾಶ್ವಾಸಂ ॥
(ಹೀಗೆ ಎಲ್ಲ ವಿದ್ವಾಂಸರಾದವರ ರೋಮಾಂಚನವನ್ನುಂಟು ಮಾಡುವುದರಲ್ಲಿ ತತ್ಪರವಾದ ವೈಚಿತ್ರ್ಯವುಳ್ಳ, ವಿಲಾಸದ ಔಚಿತ್ಯವಕ್ರೋಕ್ತಿಧ್ವನಿಗಳೆಲ್ಲ ಕೂಡಿಕೊಂಡಿರುವ, ಮಕರಂದದ ಮಾಧುರ್ಯದಿಂದ ಸುತ್ತುವರೆಯಲ್ಪಟ್ಟ, ರಸನಿರ್ಭರವಾದ, ಓಜಸ್ಸಿನಿಂದ ಕೂಡಿದ, ಪ್ರಸನ್ನವಾದ ಕವಿತೆಯೆಂಬ ವನಿತೆಯ ವಿಭ್ರಮದ ವಿಷಯದಲ್ಲಿ ಲೋಲುಪನಾದ, ವಾಚಾಳಿಯಾದ, ಚತುರ್ವಿಧಕವಿತ್ವವೆಂಬ ಯಜ್ಞಕ್ಕೆ ಚತುರ್ಮುಖನಾದ, ಕನ್ನಡದ ಅವಧಾನಿಯಾದ, ಕೇಶದ್ವಯಮಾತ್ರಾವರಕೇಶವರಾಜ (ಕೇಶಿರಾಜನಿಗೆ ಎರಡು ಕೂದಲಷ್ಟು ಕಡಿಮೆ) ಎಂಬುದೇ ಮೊದಲಾದ ಬಿರುದುಗಳಿಂದ ಅಲಂಕರಿಸಲ್ಪಟ್ಟ, ಕೊಪ್ಪಲತೋಟದ ಗಣೇಶಭಟ್ಟನು ಬರೆದ "ವೈನತೇಯವಿಜಯವು" ಎಂಬ ಲಘುಪ್ರಬಂಧಕಾವ್ಯದಲ್ಲಿ ಪೀಠಿಕಾಪ್ರಕರಣವೆಂಬ ಮೊದಲ ಆಶ್ವಾಸವು)
ಮೀಱು ಹೞಗನ್ನಡದಲ್ಲಿ. ಕೆಲವೆಡೆ ಮೀರು ಎಂಬುದನ್ನು ಕಂಡೆ
ಪ್ರತ್ಯುತ್ತರಅಳಿಸಿನಮಸ್ಕಾರ, ನೀವು ಹೇಳಿದ್ದು ನಿಜ. ಮೀಱು- ಎಂಬುದೇ ಸರಿಯಾದ ರೂಪ. ಹಲವು ಕಡೆಗಳಲ್ಲಿ ನಿಘಂಟುವನ್ನು ನೋಡಿಯೇ ಈ ಱೞ-ಶಕಟರೇಫಗಳನ್ನು ತಿಳಿದುಕೊಳ್ಳಬೇಕಾದ ಕಾರಣ ಕೆಲವು ಕಡೆ ಶಕಟರೇಫ-ಱೞಗಳ ವ್ಯತ್ಯಾಸ ಆಗಿರುತ್ತವೆ. ಮುಂದೆ ತಿದ್ದುಪಡಿ ಮಾಡುತ್ತೇನೆ. (ತಡವಾಗಿ ಉತ್ತರಿಸುತ್ತಿರುವುದಕ್ಕೆ ಕ್ಷಮೆ ಇರಲಿ)
ಅಳಿಸಿ