(ಕದ್ರುವಿನ ಮೊಟ್ಟೆಗಳಿಂದ ಸಾವಿರ ಸರ್ಪಗಳು ಹುಟ್ಟುವುದು, ವಿನತೆಯ ಮೊಟ್ಟೆಯಿಂದ ಅರುಣ ಹುಟ್ಟುವುದು ಹಾಗೂ ಅವನು ಸೂರ್ಯನ ಸಾರಥಿಯಾದ ಕಥೆ)
ವ॥ ಆ ಪೊೞ್ತೊಳ್ ಕದ್ರುವಿಟ್ಟ ಮೊಟ್ಟೆಗಳಿಂ ಕಾದ್ರವೇಯರೆನಿಸಿರ್ಪ ಸರ್ಪಂಗಳ್ ಜನ್ಮಂದಾಳ್ದುವದೆಂತೆನೆ-
(ಟೀ-ಆ ಪೊೞ್ತೊಳ್- ಆ ಹೊತ್ತಿನಲ್ಲಿ, ಕದ್ರುವು-ಕದ್ರುವು, ಇಟ್ಟ-ಇಟ್ಟಿರುವ, ಮೊಟ್ಟೆಗಳಿಂ- ಮೊಟ್ಟೆಗಳಿಂದ/ಅಂಡಗಳಿಂದ, ಕಾದ್ರವೇಯರ್- ಕದ್ರುವಿನ ಮಕ್ಕಳು ಎನಿಸಿರ್ಪ-ಎನಿಸಿರುವ, ಸರ್ಪಂಗಳ್-ಸರ್ಪಗಳು, ಜನ್ಮಂದಾಳ್ದುವು(ಜನ್ಮಂ+ತಾಳ್ದುವು)-ಜನ್ಮವನ್ನು ಪಡೆದವು, ಅದೆಂತೆನೆ-ಅದು ಹೇಗೆಂದರೆ-)
ಪೃ॥ ಪೊಗೞ್ದ ಬಿಳಿಮೊಟ್ಟೆಯೊಂದೊಡೆಯೆ ಕಾಯುತುಂ ಕಾಲದೊಳ್
ಜಗುಳ್ದು ಸಿತಕೋಶದಿಂ ಪೊಳೆದು ಮೌಕ್ತಿಕಂ ಕರ್ಪಿನಿಂ
ತಗುಳ್ದ ತೆಱದಿಂದೆ ಮೇಣ್ ನಯನಯುಗ್ಮಮುಂ ಮಿಳ್ಮಿಳಂ
ನೆಗೞ್ದು ಸಲುತಿರ್ದೊಡಂ ಭುಜಗರಾಜನೇ ಪುಟ್ಟಿದಂ ॥೪೩॥
(ಟೀ-ಪೊಗೞ್ದ-ಹೊಗಳಲ್ಪಟ್ಟ, ಬಿಳಿಮೊಟ್ಟೆಯು+ಒಂದು-ಒಂದು ಬಿಳಿಯ ಮೊಟ್ಟೆಯು, ಒಡೆಯೆ-ಒಡೆಯಲು, ಕಾಲದೊಳ್-ಕಾಲದಲ್ಲಿ, ಕಾಯುತುಂ-ಕಾಯುತ್ತಾ, ಜಗುಳ್ದು- ಸರಿದು/ಹೊರಗೆಬಂದು, ಸಿತಕೋಶದಿಂ-ಬಿಳಿಯ ಕೋಶದಿಂದ/ಚಿಪ್ಪಿನಿಂದ, ಪೊಳೆದು-ಹೊಳೆಯುತ್ತಾ, ಮೌಕ್ತಿಕಂ-ಮುತ್ತು, ಕರ್ಪಿನಿಂ-ಕಪ್ಪಿನಿಂದ, ತಗುಳ್ದ-ಹತ್ತಿಕೊಂಡ, ತೆಱದಿಂದೆ ಮೇಣ್-ರೀತಿಯಂದ ಮತ್ತೆ, ನಯನಯುಗ್ಮಮುಂ-ಕಣ್ಣುಗಳೆರಡೂ, ಮಿಳ್ಮಿಳಂ-ಮಿಳಮಿಳನೆ ನೆಗೞ್ದು-ಚೆನ್ನಾಗಿ, ಸಲುತಿರ್ದೊಡಂ-ಸಲ್ಲುತ್ತಿರಲು, ಭುಜಗರಾಜನೇ-ಸರ್ಪರಾಜನೇ, ಪುಟ್ಟಿದಂ-ಹುಟ್ಟಿದನು, ಪೃಥ್ವೀವೃತ್ತ)
ಭು॥ ಸದಾ ಚಿಂತಿಸಿರ್ಪಳ್ ಸುತಾಕಾಂಕ್ಷೆಯಿಂದಂ
ಮುದಂಬೆತ್ತವಳ್ ಕದ್ರು ಬೀಜಸ್ವರೂಪಂ
ತದೀಯಾಶೆಯೇನಂಕುರಂಗೊಂಡ ಪಾಂಗಿಂ
ದದೋ ಪುಟ್ಟಿತಿನ್ನೊಂದುರೋಗಾಮಿಪೋತಂ ॥೪೪॥
(ಟೀ-ಮುದಂಬೆತ್ತವಳ್-(ಮುದಂ+ಪೆತ್ತವಳ್) ಸಂತೋವನ್ನು ಪಡೆದವಳು, ಕದ್ರು-ಕದ್ರುವು, ಸುತಾಕಾಂಕ್ಷೆಯಿಂದಂ-(ಸುತ+ಆಕಾಂಕ್ಷೆಯಿಂದಂ) ಮಕ್ಕಳು ಬೇಕೆಂಬ ಬಯಕೆಯಿಂದ, ಸದಾ-ಯಾವತ್ತೂ, ಚಿಂತಿಸಿರ್ಪಳ್-ಚಿಂತಿಸುತ್ತಿದ್ದಳು. ತದೀಯಾಶೆ-(ತದೀಯ+ಆಶೆ)ಅವಳ ಆಶೆ, ಏಂ-ಏನು, ಬೀಜಸ್ವರೂಪಂ- ಬೀಜದ ರೂಪದಲ್ಲಿ ಇದ್ದುದು, ಅಂಕುರಂಗೊಂಡ-ಮೊಳಕೆಯೊಡೆದ, ಪಾಂಗಿಂದ-ಹಾಗೆಯೇ, ಅದೋ-ಅದೋ ಅಲ್ಲಿ, ಇನ್ನೊಂದು-ಮತ್ತೊಂದು, ಉರೋಗಾಮಿಪೋತಂ-ಸರ್ಪದ ಮರಿಯು, ಪುಟ್ಟಿತು-ಹುಟ್ಟಿತು.
ಸರ್ಪದ ಮರಿಯು ಮೊಟ್ಟೆಯನ್ನು ಒಡೆದುಕೊಂಡು ಹೊರಬರುತ್ತಿರುವುದು, ಅವಳ ಆಶೆಯೆಂಬ ಬೀಜ ಮೊಳಕೆಯೊಡೆದಿರುವುದಕ್ಕೆ ಹೋಲಿಸಲ್ಪಟ್ಟಿದೆ. ಭುಜಂಗಪ್ರಯಾತವೃತ್ತ.)
ತೇ॥ ಅಂತು ಪಲವಾರು ಪಾವುಗಳ್ ಪುಟ್ಟಿ ಬರುತುಂ
ಪಿಂತೆ ಕದ್ರು ಪಡೆದಿರ್ಪ ವರದೊಂದು ಬಲದಿಂ
ಸಂತಸಂ ನೀೞ್ದುವಾಕೆಗಂ ಬಳೆಯುವಾಗಳ್
ನೋಂತ ನೋಂಪಿ ಫಲಮಿತ್ತಿರಲ್ ಸೊಗಮೆ ಸಲ್ಗುಂ ॥೪೫॥
(ಟೀ- ಪಿಂತೆ-ಹಿಂದೆ, ಕದ್ರು-ಕದ್ರುವು, ಪಡೆದಿರ್ಪ-(ಕಶ್ಯಪನಿಂದ) ಪಡೆದಿದ್ದ, ವರದೊಂದು- ವರದ ಒಂದು, ಬಲದಿಂ- ಶಕ್ತಿಯಿಂದ, ಅಂತು-ಹಾಗೆ, ಪಲವಾರು-ಹಲವಾರು, ಪಾವುಗಳ್-ಹಾವುಗಳು, ಪುಟ್ಟಿ ಬರುತುಂ- ಹುಟ್ಟಿ ಬರುತ್ತಾ, ಬಳೆಯುವಾಗಳ್-ಬೆಳೆಯುತ್ತಿರುವಾಗ, ಆಕೆಗಂ-ಕದ್ರುವಿಗೆ, ಸಂತಸಂ-ಸಂತೋಷವನ್ನು, ನೀೞ್ದುವು-ಕೊಟ್ಟವು, ನೋಂತ-ತೊಟ್ಟಂತಹ, ನೋಂಪಿ-ವ್ರತವು, ಫಲಮಿತ್ತಿರಲ್-ಸಫಲವಾದಾಗ, ಸೊಗಮೆ-ಸುಖವೇ, ಸಲ್ಗುಂ-ಸಲ್ಲುತ್ತದೆ. ತೇಟಗೀತಿ, ಅರ್ಥಾಂತರನ್ಯಾಸಾಲಂಕಾರ.)
ವ॥ ಅಂತು ಕಾಲಂ ಕೞೆಯುತ್ತಿರಲ್ಕೆ ಕದ್ರುವಿನ ಸಹಸ್ರಾಂಡಂಗಳುಂ ಸಹಸ್ರನಾಗಂಗಳಾಗಿ ಬಲಮಂ ಪಡೆದು ಬಳೆಯುತ್ತುಮಿರಲ್
(ಅಂತು-ಹಾಗೆ, ಕಾಲಂ-ಕಾಲವು, ಕೞೆಯುತ್ತಿರಲ್ಕೆ-ಕಳೆಯುತ್ತಿರಲು, ಕದ್ರುವಿನ-ಕದ್ರುವಿನ, ಸಹಸ್ರಾಂಡಂಗಳುಂ-ಸಾವಿರ ಮೊಟ್ಟೆಗಳೂ, ಸಹಸ್ರನಾಗಂಗಳಾಗಿ-ಸಾವಿರ ಸರ್ಪಗಳಾಗಿ, ಬಲಮಂ-ಬಲವನ್ನು, ಪಡೆದು-ಪಡೆದುಕೊಂಡು, ಬಳೆಯುತ್ತುಮಿರಲ್-ಬೆಳೆಯುತ್ತಿರಲು-)
ಕಂ॥ ತನ್ನಯ ತತ್ತಿಗಳೆರಡುಂ
ಮುನ್ನಂ ತೋರಿರ್ಪ ತೆಱದೊಳೇ ಸಲ್ವುದೆನು-
ತ್ತನ್ನೆಗಮಿರ್ದ ತಿತಿಕ್ಷೆಯೆ
ಬನ್ನಮೆನುತ್ತಲ್ಲಿ ವಿನತೆ ದುಡುಕಿದಳಲ್ತೇ ॥೪೬॥
(ಟೀ-ತನ್ನಯ- ನನ್ನ ಎರಡುಂ ತತ್ತಿಗಳ್-ಎರಡೂ ಮೊಟ್ಟೆಗಳು, ಮುನ್ನಂ-ಈ ಹಿಂದೆ, ತೋರಿರ್ಪ-ತೋರಿಕೊಂಡ/ಕಾಣುವ, ತೆಱದೊಳೇ-ಹಾಗೆಯೇ, ಸಲ್ವುದು- ಇವೆ, ಎನುತ್ತ-ಎಂದುಕೊಂಡು, ಅನ್ನೆಗಂ- ಅಲ್ಲಿಯ ತನಕ, ಇರ್ದ-ಇದ್ದ, ತಿತಿಕ್ಷೆಯೆ-ತಾಳ್ಮೆಯೆ, ಬನ್ನಂ- ಕಷ್ಟವಾದದುದು,ಎನುತ್ತ-ಎಂದು, ಅಲ್ಲಿ-ಆ ಸಂದರ್ಭದಲ್ಲಿ, ವಿನತೆ-ವಿನತೆಯು, ದುಡುಕಿದಳಲ್ತೇ-ದುಡುಕಿದಳಲ್ಲವೇ! ಕಂದಪದ್ಯ)
ಚಂ॥ ಮೊದಲೊಳಗಿಟ್ಟ ಮೊಟ್ಟೆಯನೆ ನೋೞ್ಪೆನೆನುತ್ತೆ ವಿಚಿಂತಿಸುತ್ತೆ ಮ-
ತ್ತದಱೊಳಗಿರ್ಪ ಬಾಲಕನನೀಕ್ಷಿಪ ಕಾತರದೊಳ್ ಜಗುೞ್ದು ತಾಂ
ಸೊದೆಗದಿರಂಗೆ ಪೋಲ್ವದನೆ ತನ್ನ ನಖಾಗ್ರದೆ ಗೀರ್ದು ಬೇಧಿಸ-
ಲ್ಕದಱೊಳೆ ಕಂಡುದೋ ಹೃದಯವೇಧಕಮಾದಪ ದೃಶ್ಯಮಾಗಳೇ ॥೪೭॥
(ಟೀ-ಮೊದಲ್-ಮೊದಲು, ಒಳಗಿಟ್ಟ-ಒಳಗೆ ಇ್ಟಿರುವಂತಹ, ಮೊಟ್ಟೆಯನೆ-ಮೊಟ್ಟೆಯನ್ನೇ, ನೋೞ್ಪೆಂ-ನೋಡುತ್ತೇನೆ, ಎನುತ್ತೆ-ಎಂದುಕೊಂಡು, ವಿಚಿಂತಿಸುತ್ತೆ-ಆಲೋಚಿಸುತ್ತಾ, ಮತ್ತೆ-ಮತ್ತೆ, ಅದಽಱೊಳಗಿರ್ಪ-ಅದರಲ್ಲಿರುವ, ಬಾಲಕನಂ-ಬಾಲಕನನ್ನು, ಈಕ್ಷಿಪ-ನೋಡುವ, ಕಾತರದೊಳ್-ತವಕದಲ್ಲಿ, ಜಗುೞ್ದು-ಹೋಗಿ, ತಾಂ-ತಾನು, ಸೊದೆಗದಿರಂಗೆ-(ಸುಧಾಕಿರಣ)ಚಂದ್ರನಿಗೆ, ಪೋಲ್ವ-ಹೋಲುವ, ಅದನೆ-ಅದನ್ನು, ತನ್ನ-ತನ್ನ, ನಖಾಗ್ರದೆ-ಉಗುರಿನ ತುದಿಯಿಂದ, ಗೀರ್ದು-ಗೀರಿ/ಗೆರೆಯೆಳೆದು, ಬೇಧಿಸಲ್ಕೆ-ಒಡೆದಾಗ, ಅದಱೊಳೆ-ಅದರಲ್ಲಿ, ಓ ಹೃದಯವೇಧಕಮಾದಪ-ಓ, ಎದೆಯನ್ನೇ ಒಡೆಯುವಂತಹ, ದೃಶ್ಯಂ- ದೃಶ್ಯವು, ಆಗಳೇ-ಆ ಕ್ಷಣದಲ್ಲಿ, ಕಂಡುದು- ಕಂಡಿತ್ತು. ಚಂಪಕಮಾಲಾವೃತ್ತ)
ಕಂ॥ ಮೊಳೆಯದ ಕಾಲ್ಗಳ ಬಾಲಕ-
-ನಳಲಿಂದಂ ಕೋಪದಿಂದಮಾವೇಗದೊಳೇ
ಕಳವಳಿಸುತೆ ತೊಳತೊಳಗುತೆ
ತಳಮಳಗೊಂಡಿರ್ಪ ತಾಯ್ಗೆ ನುಡಿದಂ ಜಡಿದಂ ॥೪೮॥
(ಟೀ-ಮೊಳೆಯದ-ಹುಟ್ಟದ/ಚಿಗುರದ, ಕಾಲ್ಗಳ-ಕಾಲುಗಳು ಉಳ್ಳ, ಬಾಲಕಂ-ಬಾಲಕನು, ಅಳಲಿಂದಂ-ದುಃಖದಿಂದ, ಕೋಪದಿಂದಂ-ಸಿಟ್ಟಿನಿಂದ, ಆವೇಗದೊಳೇ-ಆವೇಗದಲ್ಲಿ, ಕಳವಳಿಸುತೆ-ಕಳವಳಗೊಳ್ಳುತ್ತಾ, ತೊಳತೊಳಗುತೆ-ತೊಳಲಾಡುತ್ತಾ ತಳಮಳಗೊಂಡಿರ್ಪ-ತಳಮಳಗೊಂಡಿದ್ದ, ತಾಯ್ಗೆ-ತನ್ನ ತಾಯಿಗೆ, ನುಡಿದಂ-ಹೇಳಿದನು, ಜಡಿದಂ-ಬಯ್ದನು. ಕಂದಪದ್ಯ)
ಶಾ॥ ಮುನ್ನಂ ತಾಳ್ಮೆಯನಾಂತವಳ್ ಮನದೆ ತಾಳುತ್ತೆಂತೊ ಮಾತ್ಸರ್ಯಮಂ
ಬನ್ನಂ ನೀಳ್ದಪೆಯಲ್ತೆ ತಾಯೆ! ಪರಿಪೂರ್ಣಂ ದೇಹದಿಂದಿಂತು ಸ
ಲ್ವನ್ನಂ ತಾಳದೆ ಕೊಂದೆಯೌ! ನಿನಗಿದಕ್ಕಂ ಶಾಪಮೆಂಬಂದದಿಂ
ದಿನ್ನಕ್ಕುಂ ಗಡ ದಾಸ್ಯಮೆಂತೊ ಸಹಿಸಲ್ವೇಳ್ಕುಂ ಸ್ವಯಂ ಸರ್ವಮಂ॥೪೯॥
(ಟೀ-ಮುನ್ನಂ-ಮೊದಲು, ತಾಳ್ಮೆಯಂ-ತಾಳ್ಮೆಯನ್ನು, ಆಂತವಳ್-ಹೊಂದಿದ್ದವಳು, ಮನದೆ-ಮನಸ್ಸಿನಲ್ಲಿ, ಎಂತೊ-ಹೇಗೋ, ಮಾತ್ಸರ್ಯಮಂ-ಹೊಟ್ಟೆಕಿಚ್ಚನ್ನು, ತಾಳುತ್ತೆ-ತಳೆಯುತ್ತಾ, ಬನ್ನಂ-ಕಷ್ಟವನ್ನು, ನೀಳ್ದಪೆಯಲ್ತೆ-ಕೊಟ್ಟೆಯಲ್ಲವೇ, ತಾಯೆ!-ತಾಯಿಯೇ/ಮಾತೆಯೇ! ಪರಿಪೂರ್ಣಂ-ಎಲ್ಲವೂ ತುಂಬಿಕೊಂಡು, ದೇಹದಿಂದ-ಶರೀರದಿಂದ, ಇಂತು-ಹೀಗೆ, ಸಲ್ವನ್ನಂ-ಸಲ್ಲುವ ತನಕ, ತಾಳದೆ-ತಾಳಿಕೊಳ್ಳದೇ, ಕೊಂದೆಯೌ!-ಕೊಂದುಬಿಟ್ಟೆ, ನಿನಗೆ-ನಿನಗೆ, ಇದಕ್ಕಂ-ಇದಕ್ಕೆ, ಶಾಪಂ-ಶಾಪವು ಎಂಬಂದದಿಂದ-ಎನ್ನುವಂತೆ, ದಾಸ್ಯಂ-ದಾಸ್ಯವು, ಇನ್ನಕ್ಕುಂ ಗಡ-ಇನ್ನಾಗುತ್ತದೆ, ಎಂತೊ-ಹೇಗೋ, ಸ್ವಯಂ-ಸ್ವತಃ ಸರ್ವಮಂ-ಎಲ್ಲವನ್ನೂ, ಸಹಿಸಲ್ವೇಳ್ಕುಂ-ಸಹಿಸಬೇಕಾಗುತ್ತದೆ. ಶಾರ್ದೂಲವಿಕ್ರೀಡಿತವೃತ್ತ)
ಮ॥ ಎನಗಿಂತಾದುದು! ತಮ್ಮನಂ ಕೊಲೆದೆ ಕಾಯೌ! ಪುಟ್ಟುವಂ ಕಾಲದೊಳ್
ಜನನೀ! ನಿನ್ನಯ ದಾಸ್ಯಮಂ ಪರಿಹರಿಪ್ಪಂ ಶಕ್ತನಾತಂ ವಲಂ!
ಮುನಿದೆನ್ನಂ ಕ್ಷಮಿಸೌ!ಸಮಸ್ತ ಜಗದೊಳ್ ತಾಯ್ ಕೆಟ್ಟವಳ್ ಸಲ್ಲಳೆಂ-
ದೆನುವರ್ ನನ್ನಿಯದಕ್ಕೆ! ಕಾರ್ಯಮೆನಗಂ ಪೇೞೆಂದನಾ ಪುತ್ರಕಂ ॥೫೦॥
(ಟೀ- ಆ ಪುತ್ರಕಂ-ಆ ಮಗನು, ಎನಗೆ-ನನಗೆ, ಇಂತಾದುದು-ಹೀಗಾಯ್ತು, ತಮ್ಮನಂ-ನನ್ನ ತಮ್ಮನನ್ನು, ಕೊಲೆದೆ-ಕೊಲ್ಲದೇ, ಕಾಯೌ-ಕಾಪಾಡು.ಕಾಲದೊಳ್- ಕಾಲ ಕಳೆಯುತ್ತಿರುವಾಗ, ಪುಟ್ಟುವಂ-ಹುಟ್ಟುತ್ತಾನೆ. ಜನನೀ!-ತಾಯೇ, ನಿನ್ನಯ ದಾಸ್ಯಮಂ-ನಿನಗೆ ಶಾಪದಿಂದ ಬಂದಿರುವಂತಹ ದಾಸ್ಯವನ್ನು, ಪರಿಹರಿಪ್ಪಂ-ಪರಿಹರಿಸುತ್ತಾನೆ. ಆತಂ-ಅವನು, ಶಕ್ತಂ ವಲಂ- ಖಂಡಿತವಾಗಿಯೂ ಸಮರ್ಥನಾಗಿದ್ದಾನೆ, ಮುನಿದ-ಸಿಟ್ಟಾದ, ಎನ್ನಂ-ನನ್ನನ್ನು, ಕ್ಷಮಿಸೌ-ಕ್ಷಮಿಸು! ಸಮಸ್ತಜಗದೊಳ್-ಎಲ್ಲಾ ಜಗತ್ತಿನಲ್ಲಿ, ತಾಯ್-ಮಾತೆಯು, ಕೆಟ್ಟವಳ್-ಕೆಟ್ಟವಳಾದವಳು, ಸಲ್ಲಳ್-ಸಲ್ಲುವುದಿಲ್ಲ, ಎಂದೆನುವರ್-ಎಂದು ಹೇಳುತ್ತಾರೆ, ಅದು- ಆ ಮಾತು, ನನ್ನಿಯು-ಸತ್ಯವು ಅಕ್ಕೆ-ಆಗಲಿ! ಕಾರ್ಯಂ+ಎನಗಂ-ನನಗೆ ಕಾರ್ಯವನ್ನು, ಪೇೞ್-ಹೇಳು, ಎಂದಂ-ಎಂದನು, ಮತ್ತೇಭವಿಕ್ರೀಡಿತವೃತ್ತ)
ವ॥ ಅವನಂತೆನಲ್ಕೆ ಏನೊಂದುಮಂ ನುಡಿಯಲಾಱದೆ ವಿನತೆ ಖಿನ್ನಮನಸ್ಕೆಯಾಗಿ ಕುಳಿತಿರ್ದಾಗಳ್
(ಅವಂ-ಅವನು, ಅಂತೆನಲ್ಕೆ-ಹಾಗೆನ್ನಲು, ಏನೊಂದುಮಂ-ಏನೊಂದನ್ನೂ, ನುಡಿಯಲಾಱದೆ-ಹೇಳಲಾರದೇ, ವಿನತೆ-ವಿನತೆಯು, ಖಿನ್ನಮನಸ್ಕೆಯಾಗಿ-ಖಿನ್ನತೆಯಲ್ಲಿ, ಕುಳಿತಿರ್ದಾಗಳ್-ಕುಳಿತಿರುವಾಗ)
ಶಾ॥ ತೇಜಃಪುಂಜಮೆ ಕಂಡುದೊಂದು ನಭದೊಳ್ ಕಲ್ಯಾಣರೂಪಂಗಳಿಂ
ದೋಜಸ್ಸಿಂದದು ಗೋಳದಾಕೃತಿಯನಾಂತಾಗಳ್ ಸುಶೋಭಿಪ್ಪೊಡಂ
ರಾಜಿಕ್ಕುಂ ಬಹುರಮ್ಯಮಾದ ತೆಱದಿಂ ದ್ಯೌಲೋಕದಾ ದ್ವಾರಮೇ
ಸಾಜಂ ತಾನೆನುವಾಗಳಲ್ಲಿ ಸುರಪಾದ್ಯಾಶಾಧರರ್ ಸಾರ್ದಪರ್ ॥೫೧॥
(ಟೀ- ಒಂದು-ಒಂದು, ತೇಜಃಪುಂಜಮೆ-ತೇಜಸ್ಸಿನ/ಪ್ರಕಾಶದ ರಾಶಿ/ಗುಂಪು, ನಭದೊಳ್-ಆಕಾಶದಲ್ಲಿ, ಕಲ್ಯಾಣರೂಪಂಗಳಿಂದ-ಮಂಗಳಕರವಾದ ರೂಪಗಳಿಂದ, ಕಂಡುದು-ಕಾಣಿಸಿತು. ಅದು-ಆ ತೇಜಸ್ಸಿನ ಪುಂಜವು, ಓಜಸ್ಸಿಂದ-ಹೊಳಪಿನಿಂದ/ಕಾಂತಿಯಿಂದ, ಗೋಳದ+ಆಕೃತಿಯಂ+ಆಂತು-ಗೋಳಾಕಾರವನ್ನು ಪಡೆದುಕೊಂಡು, ಆಗಳ್-ಆಗ, ಸುಶೋಭಿಪ್ಪೊಡಂ-ಸುಶೋಭಿಸುತ್ತಿರಲು, ಬಹುರಮ್ಯಮಾದ-ಬಹಳ ಸುಂದರವಾದ, ತೆಱದಿಂ-ರೀತಿಯಲ್ಲಿ, ರಾಜಿಕ್ಕುಂ-ರಾಜಿಸುತ್ತಿತ್ತು. ಸಾಜಂ-ಸಹಜವಾದ, ದ್ಯೌಲೋಕದಾ-ಸ್ವರ್ಗಲೋಕದ, ದ್ವಾರಮೇ-ಬಾಗಿಲೇ, ತಾಂ+ಎನುವಾಗಳ್- ತಾನೆಂಬಂತಿರಲು, ಅಲ್ಲಿ-ಆ ಸ್ಥಳದಲ್ಲಿ, ಸುರಪಾದಿ-ದೇವೇಂದ್ರನೇ ಮೊದಲಾದ, ಆಶಾಧರರ್-ದಿಕ್ಕುಗಳನ್ನು ಧರಿಸಿದವರು/ದಿಕ್ಪಾಲಕರು, ಸಾರ್ದಪರ್-ಬಂದರು. ಶಾರ್ದೂಲವಿಕ್ರೀಡಿತ ವೃತ್ತ)
ವ॥ ಅಂತು ದಿಕ್ಪಾಲಕರ್ ಸಕಲರ್ ಅಲ್ಲಿಗೈತಂದು ವಿನತಾಪುತ್ರಂಗೆ ವಿನತರಾಗಿ ಅವನಂ ಸ್ತುತಿಸಿದರ್ ಅದೆಂತೆನೆ-
(ಅಂತು-ಹೀಗೆ, ದಿಕ್ಪಾಲಕರ್-ದಿಕ್ಕುಗಳ ಒಡೆಯರು ಸಕಲರ್-ಎಲ್ಲರೂ, ಅಲ್ಲಿಗೆ- ಆ ಸ್ಥಳಕ್ಕೆ, ಐತಂದು- ಬಂದು, ವಿನತಾಪುತ್ರಂಗೆ- ಆ ವಿನತೆಯ ಮಗನಿಗೆ, ವಿನತರಾಗಿ- ನಮಸ್ಕರಿಸಿ, ಅವನಂ-ಅವನನ್ನು, ಸ್ತುತಿಸಿದರ್-ಸ್ತುತಿ ಮಾಡಿದರು, ಅದೆಂತೆನೆ- ಅದು ಹೇಗೆಂದರೆ-)
ತ॥ ಅರುಣವರ್ಣದೆ ಕಾಂತಿಯಾಂತನೆ ರಾಜಿಪಂಗದ ಕಾಶ್ಯಪಾ
ತರುಣವಕ್ತ್ರದೆ ಶಾಂತಿಯಾಂತನೆ ರಾಗಪರ್ಣದ ವಶ್ಯವಾಕ್
ವರಮೆ ಶಾಪಮಿದಾಯ್ತೆ ನಿನ್ನದು ಶಕ್ತಿಯೇ ಜಗಕಿರ್ಕೆ ತಾಂ
ನರದಶಾಹಮಿದಾಯ್ತೆ ಮುನ್ನಮೆ ಶಂಕೆಯೇ ಸೊಗಮಕ್ಕೆ ಪೇೞ್॥೫೨॥
(ಇದು ಗೋಮೂತ್ರಿಕಮುಂ ಯಮಲನಾಗಬಂಧಮುಮಕ್ಕುಂ)
(ಟೀ-ಅರುಣವರ್ಣದೆ- ಕೆಂಪುಬಣ್ಣದಲ್ಲಿ, ಕಾಂತಿ+ಆಂತನೆ-ಪ್ರಕಾಶವನ್ನು ಹೊಂದಿದವನೇ! ರಾಜಿಪ-ಶೋಭಿಸುತ್ತಿರುವ, ಅಂಗದ-ಮೈಯುಳ್ಳ/ದೇಹವುಳ್ಳ, ಕಾಶ್ಯಪಾ-ಕಶ್ಯಪನ ಮಗನೇ! ತರುಣವಕ್ತ್ರದೆ-ಎಳೆಯ ಮುಖದ, ಶಾಂತಿ+ಆಂತನೆ-ಶಾಂತಿಯನ್ನು ಹೊಂದಿದವನೇ! ರಾಗಪರ್ಣದ-ಕೆಂಪು ರೆಕ್ಕೆಯ, ವಶ್ಯವಾಕ್-ಮಾತನ್ನು ವಶದಲ್ಲಿಟ್ಟುಕೊಂಡಿರುವವನೇ! ಶಾಪಂ- ಈ ಶಾಪವು, ವರಮೆ-ವರವೇ, ಇದಾಯ್ತೆ-ಇದಾಗಿಬಿಟ್ಟಿತೆ, ನಿನ್ನದು- ನಿನ್ನಯ, ಶಕ್ತಿಯೇ-ಬಲವು, ತಾಂ-ತಾನು ಜಗಕೆ+ಇರ್ಕೆ-ಜಗತ್ತಿಗೆ ಇರಲಿ, ನರದಶಾಹಂ-ಮನುಷ್ಯರ ದೆಸೆಯನ್ನು ನಿವಾರಿಸುವುದು, ಇದು+ಆಯ್ತೆ-ಇದಾಯಿತೇ! ಮುನ್ನಮೆ-ಮೊದಲೇ, ಶಂಕೆಯೇ-ಅನುಮಾನವೇ! ಸೊಗಂ+ಅಕ್ಕೆ-ಸುಖವಾಗಲಿ, ಪೇೞ್-ಹೇಳು
-ಇದರಲ್ಲಿ ಮೊದಲೆರಡು ಪಾದಗಳಲ್ಲಿ ವಿನತೆಯ ಮಗನಾದ ಅರುಣನನ್ನು ಹೊಗಳಿರುವುದೂ, ಆಮೇಲೆ ಅವನ ಶಾಪವೇ ವರವಾಯಿತೆಂದೂ, ಅವನಿಂದ ಜನರ ಉದ್ಧಾರ ಆಗಬೇಕೆಂದೂ ಕೇಳಿಕೊಳ್ಳುವುದರ ಮೂಲಕ, ದೇವತೆಗಳು ಅವನನ್ನು ಲೋಕೋಪಕಾರಕ್ಕೆ ಒಡಂಬಡಿಸುವುದಕ್ಕೆ ತೊಡಗಿದರು ಎಂದು ತಾತ್ಪರ್ಯ. ತರಳ ವೃತ್ತ, ಇದು ಚಿತ್ರಬಂಧದ ಪ್ರಕಾರಗಳಾದ ಗೋಮೂತ್ರಿಕವೂ, ಯಮಲನಾಗಬಂಧವೂ ಆಗುತ್ತದೆ.)
ಕಂ॥ ಜಗಮಿದು ತಾಳದೆಯೞಿಗುಂ
ಖಗಪತಿ! ಖಗನಾದ ಸೂರ್ಯನಾ ಬಿಸುಪಂ ಕೇಳ್
ಸೊಗದಿಂ ಸಾರಥಿಯಾಗಲ್
ಮಿಗೆಯುೞಿಗುಂ ನಿನ್ನ ಛಾಯೆಯೊಳಗಿಳೆಯೇಗಳ್ ॥೫೩॥
(ಟೀ-ಖಗಪತಿ!- ಪಕ್ಷಿರಾಜನೇ, ಖಗನಾದ-ಆಕಾಶಗಾಮಿಯಾದ, ಸೂರ್ಯನಾ- ಸೂರ್ಯನ ಆ, ಬಿಸುಪಂ-ಬಿಸಿಯನ್ನು, ತಾಳದೆ-ತಾಳಿಕೊಳ್ಳಲಾರದೇ, ಜಗಂ+ಇದು- ಈ ಜಗತ್ತು, ಅೞಿಗುಂ-ನಾಶವಾಗುತ್ತದೆ, ಕೇಳ್-ಕೇಳು, ಸೊಗದಿಂ-ಸೊಗದಿಂದ, (ನೀನು) ಸಾರಥಿಯಾಗಲ್-ಸೂರ್ಯನ ರಥಕ್ಕೆ ಸಾರಥಿಯಾಗಲು, ನಿನ್ನ-ನಿನ್ನ, ಛಾಯೆಯೊಳಗೆ-ನೆರಳಿನಲ್ಲಿ, ಇಳೆಯು-ಭೂಮಿಯು, ಏಗಳ್-ಯಾವತ್ತೂ, ಮಿಗೆ-ಹೆಚ್ಚಾಗಿ, ಉೞಿಗುಂ-ಉಳಿಯುತ್ತದೆ. ಕಂದಪದ್ಯ )
ವ॥ ಅಂತು ಸಂಸ್ತುತಿಸಿ ಅರುಣವರ್ಣದಿಂದರುಣನೆಂಬ ಪೆಸರಾಂತನನಾತನಂ ಸೂರ್ಯಂಗಡ್ಡಮಾಗಿ ಕಣ್ಗೆಡ್ಡಮಾಗಿ ಚಲಿಸಲ್ಕೊಡಂಬಡಿಸಲ್ಕರುಣನಿಂತೆಂದಂ-
(ಅಂತು-ಹೀಗೆ, ಸಂಸ್ತುತಿಸಿ- ಸ್ತುತಿ ಮಾಡಿ, ಅರುಣವರ್ಣದಿಂದ-ಕೆಂಪಾದ ಬಣ್ಣದಿಂದ, ಅರುಣನೆಂಬ-ಅರುಣ ಎನ್ನುವ, ಪೆಸರಾಂತನಂ-ಹೆಸರನ್ನು ಹೊಂದಿದವನಾದ, ಆತನಂ-ಅವನನ್ನು, ಸೂರ್ಯಂಗೆ-ಸೂರ್ಯನಿಗೆ, ಅಡ್ಡಮಾಗಿ-ಅಡ್ಡವಾಗಿ, ಕಣ್ಗೆ+ಎಡ್ಡಮಾಗಿ-ಕಣ್ಣುಗಳಿಗೆ ಸುಂದರವಾಗಿ ಕಾಣುವಂತೆ, ಚಲಿಸಲ್ಕೆ-ನಡೆಯುವುದಕ್ಕೆ, ಒಡಂಬಡಿಸಲ್ಕೆ-ಒಪ್ಪಿಸಲು, ಅರುಣಂ- ಅರುಣನು ಇಂತೆಂದಂ-ಹೀಗೆ ಹೇಳಿದ)
ಚಂ॥ ಸುರರೆ ದಿಶಾಧಿಪರ್ಕಳೆ ವಿಚಾರಿಸೆ ನಿಮ್ಮಯ ವಾಕ್ಯದಿಂದಮಾ-
ನುರುತರಮೋದಮಾಂತೆನೆನೆ ಬರ್ಪೆನಿದೀಗಳೆ ದೇವವಾಕ್ಯಮಂ
ಧರೆಯೊಳೆ ಮೀರಲಾರ್ದಪರದಾರ್ ಗಡ!ಬಾೞ್ತೆಗೆ ಕಂಡುದೊಂದು ಸಂ-
ಬರಮೊದವಿರ್ಪಮಾರ್ಗಮೆನಲುತ್ಸುಕರಾದಪರಲ್ತೆ ಸರ್ವರುಂ ॥೫೪॥
(ಟೀ-ಸುರರೆ-ದೇವತೆಗಳೆ! ದಿಶಾಧಿಪರ್ಕಳೆ-ದಿಕ್ಪತಿಗಳೇ! ವಿಚಾರಿಸೆ-ವಿಚಾರಿಸಲು, ನಿಮ್ಮಯ-ನಿಮ್ಮ, ವಾಕ್ಯದಿಂದಂ- ಮಾತುಗಳಿಂದ, ಆಂ-ನಾನು, ಉರುತರ- ಅತಿಶಯವಾದ, ಮೋದಂ+ಆಂತೆಂ-ಸಂತೋಷವನ್ನು ಹೊಂದಿದೆ, ಎನೆ-ಎನ್ನಲು, ಇದೀಗಳೆ-ಇದೋ ಈಗಳೇ, ಬರ್ಪೆಂ-ಬರುತ್ತೇನೆ. ದೇವವಾಕ್ಯಮಂ-ದೇವತೆಗಳ ಮಾತನ್ನು, ಧರೆಯೊಳೆ-ಭೂಮಿಯಲ್ಲಿ, ಮೀರಲ್-ಮೀರುವುದಕ್ಕೆ, ಆರ್ದಪರ್- ಸಮರ್ಥರಾದವರು, ಅದಾರ್ ಗಡ!-ಅದುಯಾರು ಅಲ್ಲವೇ! ಬಾೞ್ತೆಗೆ-ಬದುಕಿಗೆ, ಅದೊಂದು-ಅದೊಂದು ಸಂಬರಂ-ಸಂಭ್ರಮವು, ಒದವಿರ್ಪ-ಒದಗಿರುವ, ಮಾರ್ಗಂ-ದಾರಿಯು, ಕಂಡುದು-ಕಾಣಿಸಿದೆ, ಎನಲ್-ಎಂದೆನ್ನಲು, ಸರ್ವರುಂ-ಎಲ್ಲರೂ, ಉತ್ಸುಕರ್-ಉತ್ಸಾಹಭರಿತರು, ಆದಪರಲ್ತೆ-ಆಗುತ್ತಾರಲ್ಲವೇ! ಚಂಪಕಮಾಲಾವೃತ್ತ)
ವ॥ ಎಂದು ಮೋದದಿಂದೊಪ್ಪಲ್ ವಿನತೆ ದೇವರ್ಕಳೊಳ್ ಕೇಳ್ದಪಳ್
(ಎಂದು-ಹೀಗೆಂದು, ಮೋದದಿಂದ-ಸಂತೋಷದಿಂದ,ಒಪ್ಪಲ್-ಒಪ್ಪಿಕೊಳ್ಳಲು, ವಿನತೆ-ಅವನ ತಾಯಿ ವಿನತೆಯು, ದೇವರ್ಕಳೊಳ್-ದೇವತೆಗಳಲ್ಲಿ, ಕೇಳ್ದಪಳ್-ಕೇಳಿದಳು)
ಕಂ॥ ಅಕಟ! ಮದೀಯಸುತಂಗಂ
ವಿಕಲತೆಯೊದಗಿರ್ದೊಡೆಂತು ಕಜ್ಜಂಗೆಯ್ವಂ
ಸಕಲಧರಿತ್ರಿಯೊಳಾರುಂ
ವಿಕಟರ್ ಮೇಣ್ ಕಲಿಗಳಿಲ್ಲಮೇಂ ಕಾರ್ಯಕ್ಕಂ ॥೫೫॥
(ಟೀ-ಅಕಟ!-ಅಯ್ಯೋ! ಮದೀಯಸುತಂಗಂ-ನನ್ನ ಮಗನಿಗೆ, ವಿಕಲತೆಯು- ಅಂಗವೈಕಲ್ಯವು, ಒದಗಿರ್ದೊಡೆ-ಬಂದಿರುವುದರಿಂದ, ಎಂತು-ಹೇಗೆ, ಕಜ್ಜಂಗೆಯ್ವಂ-ಕೆಲಸವನ್ನು ಮಾಡುತ್ತಾನೆ. ಸಕಲಧರಿತ್ರಿಯೊಳ್-ಇಡಿಯ ಭೂಮಿಯಲ್ಲಿ, ಆರುಂ-ಯಾರೂ, ವಿಕಟರ್-ವಿಗಡರಾದವರು/ಸಮರ್ಥರಾದವರು, ಮೇಣ್-ಮತ್ತು, ಕಲಿಗಳ್-ಪರಾಕ್ರಮಿಗಳಾದವರು, ಕಾರ್ಯಕ್ಕಂ-ಈ ಕಾರ್ಯಕ್ಕೆ, ಇಲ್ಲಮೇಂ-ಇಲ್ಲವೇ! ಕಂದಪದ್ಯ)
ಕಂ।। ಎಂದೆನೆ ಸುರರಿಂತೆಂದರ್
ಸಂದುದು ನಿನ್ನೆಲ್ಲ ಮಾತು ತಾಯ್ತನದಿಂದಂ
ಸಂದೆಗಮೇಂ ಪೇೞ್ ತವಸುತ-
ನಿಂದನ್ಯರ್ ಸಲ್ಲರಿಹದೆ ಕಲಿಯುಂ ಬಲಿಯುಂ ॥೫೬॥
(ಟೀ-ಎಂದೆನೆ-ಎಂದೆನ್ನಲು, ಸುರರ್-ದೇವತೆಗಳು, ಇಂತೆಂದರ್-ಹೀಗೆಂದರು, "ನಿನ್ನೆಲ್ಲ ಮಾತು-ನಿನ್ನ ಈ ಎಲ್ಲ ಮಾತುಗಳೂ, ತಾಯ್ತನದಿಂದಂ-ತಾಯ್ತನದಿಂದ/ಮಾತೃಸಹಜವಾದ ಭಾವದಿಂದ, ಸಂದುದು-ಸಲ್ಲುತ್ತಿವೆ, ಸಂದೆಗಮೇಂ-ಸಂದೇಹವೇನು? ಪೇೞ್- ಹೇಳು, ತವಸುತನಿಂದ-ನಿನ್ನ ಮಗನಿಂದ, ಅನ್ಯರ್-ಬೇರೆಯಾದವರು, ಇಹದೆ-ಈ ಲೋಕದಲ್ಲಿ, ಕಲಿಯುಂ-ಪರಾಕ್ರಮಿಗಳಾದವರು, ಬಲಿಯುಂ-ಶಕ್ತಿಶಾಲಿಗಳಾದವರೂ, ಸಲ್ಲರ್-ಸಲ್ಲುವುದಿಲ್ಲ. ಕಂದಪದ್ಯ)
ವ॥ ಅಂತಲ್ಲದೆಯುಂ
(ಹಾಗಲ್ಲದೇ)
ಕಂ॥ ದಿನಮುಂ ರವಿಯಾಗಮಿಸಲ್
ತನುಜಂ ಮೇಣ್ ಬರ್ಪನವನ ಪೂರ್ವದೊಳಿದನೇ
ಮನನೀಯಮೆಂದು ನುತಿಪರ್
ಜನರರುಣೋದಯಮೆನುತ್ತೆ ನಿಚ್ಚಂ ಕಾಣೌ ॥೫೭॥
(ಟೀ-ದಿನಮುಂ-ಪ್ರತಿದಿನವೂ, ರವಿಯು-ಸೂರ್ಯನು, ಆಗಮಿಸಲ್-ಬರಲು, ತನುಜಂ ಮೇಣ್-ಮಗನೂ ಕೂಡ,ಅವನ-ಸೂರ್ಯನ, ಪೂರ್ವದೊಳ್-ಮೊದಲು, ಬರ್ಪಂ- ಬರುತ್ತಾನೆ, ಇದನೇ-ಇದನ್ನೇ, ಮನನೀಯಂ-ಮನನ ಮಾಡುವುದು/ಚೆನ್ನಾಗಿರುವುದು, ಎಂದು-ಎನ್ನುತ್ತಾ, ಜನರು-ಎಲ್ಲ ಮನುಷ್ಯರೂ, ಅರುಣೋದಯಂ-ಅರುಣೋದಯವು, ಎನುತ್ತೆ-ಎನ್ನುತ್ತಾ ನಿಚ್ಚಂ-ನಿತ್ಯವೂ ನುತಿಪರ್-ಹೊಗಳುತ್ತಾರೆ ಕಾಣೌ-ನೋಡು. ಕಂದಪದ್ಯ)
ವ॥ ಅವರಂತೆನೆ ವಿನತೆಯುಂ ಸಂತಸದಿಂದಂ ಮಗನಂ ಬೀಳ್ಕೊಟ್ಟಳತ್ತಣಿಂ ನೇಸಱ ತೇರ್ ಕಂಡುದು
(ಅವರ್- ಅವರು, ಅಂತೆನೆ-ಹಾಗೆನ್ನಲು, ವಿನತೆಯುಂ-ವಿನತೆಯೂ, ಸಂತಸದಿಂದಂ-ಸಂತೋಷದಿಂದ, ಮಗನಂ-ಮಗನನ್ನು, ಬೀಳ್ಕೊಟ್ಟಳ್-ಬೀಳ್ಕೊಟ್ಟಳು, ಅತ್ತಣಿಂ-ಆ ದಿಕ್ಕಿನಿಂದ, ನೇಸಱ-ಸೂರ್ಯನ, ತೇರ್-ರಥವು, ಕಂಡುದು-ಕಂಡಿತ್ತು)
ರಥೋದ್ಧತಾ॥
ಬೆಂಕೆಯುಂಡೆಗದೊ ಗಾಲಿಯೊಂದೆನಲ್
ಕೊಂಕ ಕತ್ತಿನೊಳಗೇಳು ವಾಜಿಗಳ್
ಬಿಂಕದಿಂದೆಳೆದು ಸಾರುತಿರ್ಪುದ-
ಕ್ಕಂಕವಾವುದತಿ ರಮ್ಯಮಾದುದೋ!॥೫೮॥
(ಟೀ-ಅದೊ-ಅದೋ! ಬೆಂಕೆಯುಂಡೆಗೆ-ಬೆಂಕಿಯ ಉಂಡೆಗೆ, ಗಾಲಿಯು+ಒಂದು+ಎನಲ್-ಒಂದೇ ಚಕ್ರವೆನ್ನುವಂತೆ, ಕೊಂಕ-ವಕ್ರವಾಗಿಸಿದ, ಕತ್ತಿನೊಳಗೆ-ಕುತ್ತಿಗೆಯಲ್ಲಿ ಏಳು ವಾಜಿಗಳ್-ಏಳು ಸಂಖ್ಯೆಯ ಕುದುರೆಗಳು, ಬಿಂಕದಿಂದ-ವಿಲಾಸದಿಂದ/ಗರ್ವದಿಂದ, ಎಳೆದು-ಎಳೆದುಕೊಂಡು, ಸಾರುತಿರ್ಪುದಕ್ಕೆ- ಬರುತ್ತಿರುವುದಕ್ಕೆ, ಅಂಕವು-ಸ್ಪರ್ಧಿಯಾದದ್ದು, ಆವುದು- ಯಾವುದಿದೆ? ಅತಿರಮ್ಯಮಾದುದೋ!-ಇದು ಬಹಳ ಸುಂದರವಾದದ್ದು. ರಥೋದ್ಧತಾ ವೃತ್ತ.)
ಸ್ವಾಗತಾ॥
ಚಾರುವಾಜಿಗಳೊ ಕಾಮನಬಿಲ್ಲಂ
ತೋರುವಂತೆ ಸಲೆ ಬಣ್ಣಮನಾಂತುಂ
ಪಾರುತುಂ ಕಿಡಿಯನುಣ್ಮಿಸುತಾಗಳ್
ತೇರನಲ್ಲಿಗೆಳೆತಂದುವು ಬೇಗಂ ॥೫೯॥
(ಟೀ-ಚಾರುವಾಜಿಗಳೊ-ಸುಂದರವಾದ ಕುದುರೆಗಳು, ಕಾಮನಬಿಲ್ಲಂ-ಕಾಮನ ಬಿಲ್ಲನ್ನು, ತೋರುವಂತೆ-ತೋರಿಸುತ್ತಿರುವಂತೆ, ಸಲೆ-ಸಲ್ಲುತ್ತಾ, ಬಣ್ಣಮಂ+ಆಂತುಂ-ಬಣ್ಣವನ್ನು ಹೊಂದಿ, ಪಾರುತುಂ-ಹಾರುತ್ತಾ, ಕಿಡಿಯಂ-ಬೆಂಕಿಯ ಕಿಡಿಯನ್ನು, ಉಣ್ಮಿಸುತ-ಉಕ್ಕಿಸುತ್ತಾ, ಆಗಳ್-ಆ ಹೊತ್ತಿನಲ್ಲಿ, ತೇರಂ- ರಥವನ್ನು, ಅಲ್ಲಿಗೆ-ಆ ಸ್ಥಳಕ್ಕೆ, ಬೇಗಂ-ವೇಗವಾಗಿ, ಎಳೆತಂದುವು- ಎಳೆದುಕೊಂಡು ಬಂದುವು. ಸ್ವಾಗತಾವೃತ್ತ.)
ವ॥ ಅಂತಲ್ಲಿ ಸೂರ್ಯನಂ ಕಂಡು ಅರುಣಂ ಸಂಸ್ತುತಿಸುತುಂ
(ಅಂತಲ್ಲಿ-ಹಾಗೆ ಅಲ್ಲಿ, ಸೂರ್ಯನಂ-ಸೂರ್ಯನನ್ನು, ಕಂಡು-ನೋಡಿ, ಅರುಣಂ-ಅರುಣನು, ಸಂಸ್ತುತಿಸುತುಂ-ಸ್ತುತಿಯನ್ನು ಮಾಡುತ್ತಾ-)
ಅಶ್ವಧಾಟೀ॥ ನೋಟಂ ವಿಶಾಲಮೆನೆ ಕೂಟಂ ಮಹಾಗ್ನಿಯೆನಲೂಟಕ್ಕೆ ತುಯ್ಯಲೆಸೆಯಲ್
ಪೇಟೀಕೃತಾಂಬುಕಣವಾಟೀಸ್ಥಲನ್ಯಸನಮಾಟಂ ಗಡಲ್ತೆ ನಿನಗಂ
ಚಾಟುಸ್ಫುರನ್ನಯನಘೋಟಪ್ರತಾಪಯುತಧಾಟೀಕ ಧೀರ ರವಿ ನೀಂ
ವೀಟೀಕೃತಾಗಮಕರೋಟೀವಿರಾಜಿತನೆ ಚೇಟತ್ವಮೀವುದೆನಗಂ ॥೬೦॥
(ಟೀ-ನೋಟಂ-ನಿನ್ನ ದೃಷ್ಟಿಯು, ವಿಶಾಲಂ-ವಿಶಾಲವಾದದ್ದು, ಎನೆ-ಎನ್ನಲು, ಕೂಟಂ-ನಿನ್ನ ಜೊತೆ ಮಹಾಗ್ನಿಯು-ದೊಡ್ಡದಾದ ಬೆಂಕಿಯು, ಎನಲ್-ಎಂದೆನ್ನಲು, ಊಟಕ್ಕೆ-ನಿನ್ನ ಊಟಕ್ಕೆ, ತುಯ್ಯಲ್- ಪಾಯಸವು, ಎಸೆಯಲ್-ಸಲ್ಲುತ್ತಿರಲು, ಪೇಟೀಕೃತ+ಅಂಬುಕಣ-ವಾಟೀಸ್ಥಲನ್ಯಸನಂ-ಮೂಟೆಯನ್ನಾಗಿಸಿ ಮಾಡಿದ ನೀರಿನ ಹನಿಗಳನ್ನು ಉದ್ಯಾನವನಗಳಲ್ಲಿ ಸುರಿಸುವುದು, ಆಟಂ-ಆಟವು/ಕ್ರೀಡೆಯು ಗಡಲ್ತೆ-ಅಲ್ಲವೇ ನಿನಗಂ-ನಿನಗೆ! ಚಾಟುಸ್ಫುರತ್+ನಯನಘೋಟಪ್ರತಾಪಯುತಧಾಟೀಕ-ಚಟುವಟಿಕೆಯಿಂದ ಸ್ಫುರಿಸುತ್ತಿರುವ ಕಣ್ಣುಗಳ ಕುದುರೆಗಳ ಪ್ರತಾಪದಿಂದ ಕೂಡಿದ ಗತಿಯುಳ್ಳವನು, ಧೀರ-ಧೀರನಾದ, ರವಿ-ಸೂರ್ಯನು, ನೀಂ-ನೀನು! ವೀಟೀಕೃತ+ಆಗಮಕರೋಟೀವಿರಾಜಿತನೆ-ಆಗಮಗಳ ಉನ್ನತಭಾಗವನ್ನು ವೀಳೆಯವನ್ನಾಗಿಸಿಕೊಂಡು ವಿರಾಜಮಾನನಾಗಿರವವನೇ, ಎನಗಂ-ನನಗೆ, ಚೇಟತ್ವಂ+ಈವುದು-ನಿನ್ನ ಸೇವಕನ ಕೆಲಸವನ್ನು ಕೊಡುವುದು. ಇದು ಕನ್ನಡದಲ್ಲಿ ವಿರಳವಾಗಿರುವ ಅಶ್ವಧಾಟೀ ಎಂಬ ವೃತ್ತ. ಇದರಲ್ಲಿ ಪ್ರತಿಸಾಲಿನಲ್ಲೂ ಮೂರು ಆಂತರಿಕಪ್ರಾಸಗಳು ಇರಬೇಕು ಎಂಬುದು ನಿಯಮ)
ವ॥ ಎಂದೆನೆ ಸೂರ್ಯಂ ಪ್ರಸನ್ನನಾಗುತ್ತುಂ ಅರುಣನಂ ಸಾರಥಿಯನಾಗಿಸಿ ಪೊರಮಟ್ಟನಾಗಳ್
(ಎಂದೆನೆ-ಎಂದೆನ್ನಲು, ಸೂರ್ಯಂ-ಸುರ್ಯದೇವನು, ಪ್ರಸನ್ನಂ-ಸಂತುಷ್ಟನು ಆಗುತ್ತುಂ-ಆಗುತ್ತಾ, ಅರುಣನಂ-ಅರುಣನನ್ನು, ಸಾರಥಿಯಂ-ಸಾರಥಿಯನ್ನು ಆಗಿಸಿ-ಮಾಡಿಕೊಂಡು, ಪೊರಮಟ್ಟಂ-ಹೊರಟನು, ಆಗಳ್-ಆಗ-)
ಕಂ॥ ಕ್ರಮದಿಂ ವಿರಿಂಚಿ ಚಿತ್ರಮ
ನಮಮ! ಧರಿತ್ರಿಯೊಳದೆಂತುಟೆಸಗಿದನೆನೆ ವಿ
ಭ್ರಮಿಸಿದರೆಲ್ಲರ್ ನೋಡುತೆ
ಕ್ರಮಿಸಲ್ಕರುಣಂ ಜಗುಳ್ದು ನೇಸಱ ತೇರೊಳ್ ॥೬೧॥
(ಟೀ-ಅರುಣಂ-ಅರುಣನು, ಜಗುಳ್ದು-ಹೊರಟು, ನೇಸಱ-ಸೂರ್ಯದೇವನ, ತೇರೊಳ್-ರಥದಲ್ಲಿ, ಕ್ರಮಿಸಲ್ಕೆ-ಸಾಗಲು,ಎಲ್ಲರ್-ಎಲ್ಲರೂ, ನೋಡುತೆ-ನೋಡುತ್ತಾ, "ಅಮಮ!-ಅಬ್ಬಬ್ಬ! ಕ್ರಮದಿಂ-ಈ ರೀತಿಯಲ್ಲಿ, ವಿರಿಂಚಿ-ಬ್ರಹ್ಮನು, ಚಿತ್ರಮಂ-ಚಿತ್ರವನ್ನು/ಆಶ್ಚರ್ಯನ್ನು ಧರಿತ್ರಿಯೊಳ್-ಭೂಮಿಯಲ್ಲಿ, ಅದೆಂತುಟು-ಅದು ಹೇಗೆ, ಎಸಗಿದನೆನೆ-ರಚಿಸಿದ್ದಾನೋ!" ಎಂದು, ವಿಭ್ರಮಿಸಿದರ್-ಆಶ್ಚರ್ಯವನ್ನು ಪಟ್ಟಿದ್ದರು. ಕಂದಪದ್ಯ)
ಕಂ।। ವಿನತೆಯುಮಾನಂದದಿನೇ
ತನುಜಂ ಚೆಂಬೆಳಕನೀಯುತುಂ ಸಾರ್ದಪನೆಂ-
ದೆನುತುಂ ಸಂಭ್ರಮಮಾಂತಳ್
ಜನನಿಗೆ ಪುತ್ರಾಭ್ಯುದಯಕೆ ಮಿಗಿಲಾವುದು ದಲ್ ॥೬೨॥
(ಟೀ-ವಿನತೆಯುಂ-ವಿನತೆಯೂ, ಆನಂದದಿನೇ-ಸಂತೋಷದಲ್ಲಿಯೇ, ತನುಜಂ-ಮಗನು, ಚೆಂಬೆಳಕಂ-ಕೆಂಪಾದ ಬೆಳಕನ್ನು, ಈಯುತುಂ-ಕೊಡುತ್ತಾ, ಸಾರ್ದಪಂ- ಬಂದನು, ಎಂದೆನುತುಂ-ಎಂದೆನ್ನುತ್ತಾ ಸಂಭ್ರಮಮಾಂತಳ್-ಸಂಭ್ರಮವನ್ನು ತಳೆದಳು. ಜನನಿಗೆ-ತಾಯಿಗೆ, ಪುತ್ರಾಭ್ಯುದಯಕೆ-ಮಕ್ಕಳ ಅಭ್ಯುದಯಕ್ಕೆ, ಮಿಗಿಲ್-ಹೆಚ್ಚಾಗಿರುವುದು, ಆವುದು ದಲ್-ಯಾವುದು ತಾನೇ ಇದೆ. ಕಂದಪದ್ಯ, ಅರ್ಥಾಂತರನ್ಯಾಸಾಲಂಕಾರ)
ಕಂ।। ಸುತನ ವಚೋವಿನ್ಯಾಸದ
ಕೃತಿಯಂ ಮನದೊಳಗೆ ನೆನೆಯುತುಂ ಮತ್ತೇಗಳ್
ತನಗಿನ್ನೊರ್ವಂ ಮಗನೇ
ಜನಿಸುವನೆಂದಾಕೆ ಕಾಯುತಿರ್ದಳ್ ನಿರುತಂ ॥೬೩॥
(ಟೀ-ಸುತನ-ಮಗನ, ವಚೋವಿನ್ಯಾಸದ-ಮಾತುಗಳ ವಿನ್ಯಾಸದ, ಕೃತಿಯಂ-ಕೃತಿಯನ್ನು, ಮನದೊಳಗೆ-ಮನಸ್ಸಿನಲ್ಲಿಯೇ, ನೆನೆಯುತುಂ-ನೆನೆಸಿಕೊಳ್ಳುತ್ತಾ, ಮತ್ತೆ- ಮತ್ತೆ ಏಗಳ್-ಯಾವತ್ತೂ, ತನಗೆ-ನನಗೆ ಇನ್ನೊರ್ವಂ-ಇನ್ನೊಬ್ಬನು, ಮಗನೇ-ಮಗನೇ ಜನಿಸುವಂ-ಹುಟ್ಟುತ್ತಾನೆ, ಎಂದು-ಎಂದುಕೊಂಡು, ಆಕೆ-ಅವಳು/ವಿನತೆ, ನಿರುತಂ-ಸತತವಾಗಿ, ಕಾಯುತಿರ್ದಳ್-ಕಾಯುತ್ತಿದ್ದಳು)
--
(ಮುಂದೆ- ಸಮುದ್ರಮಥನದ ಕಥೆ, ಕದ್ರುವಿನತೆಯರ ನಡುವೆ ಸ್ಪರ್ಧೆನಡೆಯುವ ಕಥೆ)
೫೨ನೇ ಪದ್ಯದ ಚಿತ್ರಬಂಧದಲ್ಲಿ ಗೋಮೂತ್ರಿಕವು ಪ್ರಸಿದ್ಧವೇ ಆದ ಕಾರಣ ಯಮಲನಾಗಬಂಧದ ಪ್ರಸ್ತಾರವನ್ನು ಮಾತ್ರ ಇಲ್ಲಿ ತೋರಿಸಲಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ