Powered By Blogger

ಶನಿವಾರ, ಆಗಸ್ಟ್ 8, 2020

ವೈನತೇಯವಿಜಯಂ- ಗರುಡನ ಕಥೆ- ೨

(ಕಥೆಯ ಪ್ರಾರಂಭ, ಕದ್ರು ಹಾಗೂ ವಿನತೆಯರು ಕಶ್ಯಪಪ್ರಜಾಪತಿಯ ವರದಿಂದ ಸಂತಾನವನ್ನು ಪಡೆಯುವ ಆಶೆಯಿಂದ ಮೊಟ್ಟೆಗಳನ್ನು ಇಟ್ಟ ಕಥೆ)

 ಪೃಥ್ವೀ॥ ಅದೊರ್ಮೆ ರವಿವಾರದೊಳ್ ದಿನದ ಕಜ್ಜಮಂ ತೀರ್ಚಿ ತಾಂ ಮುದಂಬಡುತೆ ನಲ್ಲೆಯೊಳ್ ನುಡಿಯುತಿರ್ದೊಡಂ ಪೇೞ್ದಪಳ್ ಸದಾ ಕುತುಕಮಿರ್ಪುದೈ ಕಥೆಯನಾಲಿಸಲ್ ಪೇೞಿಮೀ ಪೊದೞ್ದ ಪೊಸಗಾಥೆಯಂ ಸಲೆ ಪುರಾಣದಿಂದೊಳ್ಪಿನಿಂ ॥೨೪॥

(ಟೀ-ಅದೊರ್ಮೆ- ಅದೊಮ್ಮೆ, ರವಿವಾರದೊಳ್-ಭಾನುವಾರದಂದು, ದಿನದ-ಪ್ರತಿದಿನದ ಕಜ್ಜಮಂ-ಕೆಲಸವನ್ನು, ತೀರ್ಚಿ-ಮುಗಿಸಿ, ತಾಂ-ತಾನು, ಮುದಂಬಡುತೆ-(ಮುದಂ+ಪಡುತೆ)ಸಂತೋಷವನ್ನು ಪಡುತ್ತಾ, ನಲ್ಲೆಯೊಳ್-ಪ್ರೇಯಸಿಯಲ್ಲಿ, ನುಡಿಯುತಿರ್ದೊಡಂ-ಮಾತನಾಡುತ್ತಿರುವಾಗ, ಪೇೞ್ದಪಳ್- ಹೇಳಿದಳು, ಸದಾ-ಯಾವತ್ತೂ, ಕಥೆಯಂ-ಕಥೆಯನ್ನು ಆಲಿಸಲ್-ಕೇಳುವುದಕ್ಕೆ, ಕುತುಕಂ- ಕುತೂಹಲವು, ಇರ್ಪುದೈ-ಇರುವುದು, ಈ ಪೊದೞ್ದ-ಶೋಭಿಸುವ  ಪೊಸಗಾಥೆಯಂ-ಹೊಸ ಕಥೆಯನ್ನು, ಸಲೆ-ಸಲ್ಲಲು, ಪುರಾಣದಿಂದ-ಪುರಾಣದಲ್ಲಿರುವುದನ್ನು ಒಳ್ಪಿನಿಂ- ಒಳ್ಳೆಯ ರೀತಿಯಲ್ಲಿ ಪೇೞಿಂ- ಹೇಳಿರಿ. ಪೃಥ್ವೀವೃತ್ತ)


ವ॥ ಅಂತೆನೆ ಕಥಾನಕಮಂ ಪ್ರಾರಂಭಂಗೆಯ್ದೆನದೆಂತೆನೆ- ಪಿಂತೆ ಅದೊರ್ಮೆ ಜಗದಾದಿಮ ದಂಪತಿಗಳ್ ಶಿವಶಿವೆಯರ್ ಕೈಲಾಸದೊಳ್ ಕುಳಿತಿರೆ ಪಾರ್ವತಿ ಶಿವನೊಳ್ ತನಗೊಂದು ಕಥೆಯಂ ಪೇೞಿಮೆನೆ ಶಿವಂ ಪೇೞಲ್ ತಗುಳ್ದಂ- ಪಿಂತೆ ನೈಮಿಷಾರಣ್ಯದೊಳ್ ಯಜ್ಞಾವಭೃತಸ್ನಾನಮಾದ ಬೞಿಕ್ಕಂ ಕಾಲಕ್ಷೇಪಮಂ ಗೆಯ್ಯುತುಮಿರಲ್ಕೆ ಮುನಿಗಳ್ ಸೂತಪುರಾಣಿಕರಂ ”ನಾಗರಕ ಜೀವನದೊಳ್ ವಿಶೇಷಮಾದುದೇಂ ನಡೆದಪುದು ಬಿತ್ತರದಿಂ ಪೇೞಿಂ" ಎಂದೆನೆ ಅವರ್ 

(ಟೀ-ಅಂತು- ಹಾಗೆ ಎನೆ- ಹೇಳಲು, ಕಥಾನಕಮಂ- ಕಥೆಯನ್ನು, ಪ್ರಾರಂಭಂ- ಪ್ರಾರಂಭವನ್ನು ಗೆಯ್ದೆಂ- ಮಾಡಿದೆ, ಅದು- ಅದು  ಎಂತೆನೆ-ಹೇಗೆ ಎಂದರೆ; ಪಿಂತೆ-ಹಿಂದೆ ಅದೊರ್ಮೆ- ಅದೊಮ್ಮೆ ಜಗದಾದಿಮದಂಪತಿಗಳ್- ಜಗತ್ತಿನ ಮೊದಲ ದಂಪತಿಗಳಾದ ಶಿವಶಿವೆಯರ್-ಪರಮೇಶ್ವರಪಾರ್ವತಿಯರು, ಕೈಲಾಸದೊಳ್- ಕೈಲಾಸಪರ್ವತದಲ್ಲಿ, ಕುಳಿತಿರೆ-ಕುಳಿತಿರಲು, ಪಾರ್ವತಿ-ಪಾರ್ವತಿಯು, ಶಿವನೊಳ್- ಶಿವನಲ್ಲಿ, ತನಗೊಂದು- ತನಗೆ ಒಂದು, ಕಥೆಯಂ- ಕಥೆಯನ್ನು, ಪೇೞಿಂ- ಹೇಳಿರಿ, ಎನೆ-ಎಂದೆನ್ನಲು, ಶಿವಂ- ಶಿವನು, ಪೇೞಲ್- ಹೇಳುವುದಕ್ಕೆ, ತಗುಳ್ದಂ- ತೊಡಗಿದನು; ಪಿಂತೆ- ಹಿಂದೆ, ನೈಮಿಷಾರಣ್ಯದೊಳ್- ನೈಮಿಷಾರಣ್ಯದಲ್ಲಿ ಯಜ್ಞಾವಭೃತಸ್ನಾನಮಾದ- ಯಜ್ಞದ ಕೊನೆಯಲ್ಲಿ ಮಾಡುವ ಅವಭೃತವೆಂಬ ಸ್ನಾನವು ಆದ ಬೞಿಕ್ಕಂ- ಬಳಿಕ, ಕಾಲಕ್ಷೇಪಮಂ- ಕಾಲಕ್ಷೇಪವನ್ನು, ಗೆಯ್ಯುತುಮಿರಲ್ಕೆ- ಮಾಡುತ್ತಿರಲು, ಮುನಿಗಳ್- ಋಷಿಗಳು, ಸೂತಪುರಾಣಿಕರಂ- ಸೂತಪುರಾಣಿಕರನ್ನು, ನಾಗರಕಜೀವನದೊಳ್-ನಗರದ ಜೀವನದಲ್ಲಿ, ವಿಶೇಷಂ ಆದುದು-ವಿಶಿಷ್ಟವಾದದ್ದು,  ಏಂ-ಏನು, ನಡೆದಪುದು- ನಡೆದಿದೆ, ಬಿತ್ತರದಿಂ- ವಿಸ್ತಾರವಾಗಿ, ಪೇೞಿಂ- ಹೇಳಿ, ಎಂದೆನೆ- ಎಂದೆನ್ನಲು, ಅವರ್- ಅವರು-

ಈ ಕಥೆಯನ್ನು ಯಾರು ಯಾರಿಗೆ ಹೇಳಿದ್ದು ಎಂದು ಮಹಾಭಾರತದ ಕಥೆಯಲ್ಲಿ ಬರುವಂತಹ ವಿವರಣೆ ಈ ವಚನಭಾಗದಲ್ಲಿ ಇದೆ. ಇಲ್ಲಿ ನೈಮಿಷಾರಣ್ಯದಲ್ಲಿ ಸೂತಪುರಾಣಿಕರು ಋಷಿಗಳಿಗೆ ಹೇಳಿದ ಕಥೆಯನ್ನು ಪರಮೇಶ್ವರನು ಪಾರ್ವತಿಗೆ ಹೇಳಿದನು ಎಂದು ತಾತ್ಪರ್ಯ.)


ಕಂ॥ ಜನಮೇಜಯರಾಜಂ ನಿಜ

ಜನಕನ ಮಿೞ್ತಿಂಗೆ ನೊಂದು ಸರ್ಪಕುಲಕ್ಕಂ

ಘನತರಸಂಕಟಮೀಯಲ್

ಮುನಿನಿಕರದೆ ಕೇಳ್ದು ನಡೆಸಿದಂ ಸತ್ರಮನೇ ॥೨೫॥

(ಟೀ-ಜನಮೇಜಯರಾಜಂ- ಜನಮೇಜಯ ರಾಜನು, ನಿಜಜನಕನ- ತನ್ನ ತಂದೆಯ, ಮಿೞ್ತಿಂಗೆ- ಸಾವಿಗೆ, ನೊಂದು- ದುಃಖಿಸಿ, ಸರ್ಪಕುಲಕ್ಕಂ- ಸರ್ಪಗಳ ವಂಶಕ್ಕೆ, ಘನತರಸಂಕಟಂ+ಈಯಲ್- ದೊಡ್ಡದಾದ ಸಂಕಟವನ್ನು ಕೊಡುವುದಕ್ಕೆ,ಮುನಿನಿಕರದೆ- ಋಷಿಗಳ ಸಮೂಹದಲ್ಲಿ, ಕೇಳ್ದು-ಕೇಳಿ, ಸತ್ರಮನೇ-ಯಾಗವನ್ನು, ನಡೆಸಿದಂ- ನಡೆಸಿದನು.

ಯಾವ ದ್ವೇಷವಿಲ್ಲದಿದ್ದರೂ ಸರ್ಪವು ತನ್ನ ತಂದೆಯನ್ನು ಕೊಂದಿತು ಎಂಬ ಕಾರಣಕ್ಕೆ ಸರ್ಪಗಳ ಕುಲದ ಮೇಲೆ ಸಿಟ್ಟಾದ ಜನಮೇಜಯನು ಸರ್ಪಯಾಗವನ್ನು ಮಾಡಿ ಎಲ್ಲ ಸರ್ಪಗಳನ್ನೂ ಆಹುತಿಯಾಗಿ ಕೊಡಲು ನಿಶ್ಚಯಿಸಿದನು. ಕಂದಪದ್ಯ)


ಕಂ॥

ಸರ್ಪಂಗಳೆ ಸರ್ಪಿಸ್ಸೆನೆ

ದರ್ಪಂಗೊಂಡಿರ್ಪ ನಂಜುಣಿಗಳಂ ಜವದಿಂ

ತರ್ಪಣದಂತಾಹುತಿಯಾ-

ಗರ್ಪಿಸಿದಂ ಬೆಂಕೆಗಂತುಟೇನದ್ಭುತಮೋ ॥೨೬॥

(ಟೀ- ಸರ್ಪಂಗಳೆ- ಸರ್ಪಗಳೇ/ಹಾವುಗಳೇ, ಸರ್ಪಿಸ್ಸು ಎನೆ- ಬೆಣ್ಣೆ ಎಂಬಂತೆ, ದರ್ಪಂ+ಕೊಂಡಿರ್ಪ- ದಪರ್ವನ್ನು ಹೊಂದಿರುವ, ನಂಜುಣಿಗಳಂ- ಹಾವುಗಳನ್ನು,ಜವದಿಂ- ಬೇಗದಲ್ಲಿ, ತರ್ಪಣದಂತೆ-ತೃಪ್ತಿಯನ್ನು ಕೊಡುವಂತೆ/ ತರ್ಪಣದಂತೆ, ಆಹುತಿಯಾಗಿ- ಯಜ್ಞದಲ್ಲಿ ಬೆಂಕಿಯಲ್ಲಿ ದೇವರಿಗೆ ಕೊಡುವ ಹವಿಸ್ಸಿನಂತೆ, ಬೆಂಕೆಗೆ- ಬೆಂಕಿಗೆ/ಅಗ್ನಿಗೆ ಅಂತುಟು- ಹಾಗೆ, ಅರ್ಪಿಸಿದಂ-ಅರ್ಪಿಸಿದನು, (ಅದು)ಏಂ+ಅದ್ಭುತಮೋ- ಎಂತಹ ಅದ್ಭುತವೋ! ಕಂದಪದ್ಯ)


ವ॥ ಅಂತು ಸರ್ಪಯಾಗದೊಳ್ ಪರೀಕ್ಷಿತನ ಮರಣದ ವ್ಯಾಜದಿಂ ಅಸಂಖ್ಯಸರ್ಪಂಗಳ್ ಜನ್ನದೊಳಗಾಹುತಿಯಾದುದಂ ಸೂತಪುರಾಣಿಕರ್ ಪೇೞ್ದೊಡಂ ಮುನಿಸಂಕುಲಂ ಕೇಳ್ದತ್ತು

“ಆರ್ಯರೇ!

(ಟೀ- ಅಂತು-ಹಾಗೆ, ಸರ್ಪಯಾಗದೊಳ್-ಸರ್ಪಯಾಗದಲ್ಲಿ, ಪರೀಕ್ಷಿತನ- ಜನಮೇಜಯನ ತಂದೆಯಾದ ವಿಷ್ಣುರಾತಪರೀಕ್ಷಿತಮಹಾರಾಜನ, ಮರಣದ- ಸಾವಿನ, ವ್ಯಾಜದಿಂ-ಕಾರಣದಿಂದ, ಅಸಂಖ್ಯಸರ್ಪಂಗಳ್-ಎಣಿಕೆಗೆ ಸಿಗದ ಸರ್ಪಗಳು, ಜನ್ನದೊಳಗೆ- ಯಜ್ಞದಲ್ಲಿ ಆಹುತಿಯಾದುದಂ-ಅಗ್ನಿಗೆ ಅರ್ಪಿಸಲ್ಪಟ್ಟುದ್ದನ್ನು, ಸೂತಪುರಾಣಿಕರ್- ಸೂತಪುರಾಣಿಕರು, ಪೇೞ್ದೊಡಂ-ಹೇಳಿದೊಡನೆ, ಮುನಿಸಂಕುಲಂ-ಮುನಿಗಳ ಗುಂಪು, ಕೇಳ್ದತ್ತು- ಕೇಳಿತು; “ಆರ್ಯರೇ!- ಆರ್ಯರೇ-)


ಕಂ॥

ಕಾರಣಮಿಲ್ಲದೆ ಜಗದೊಳ

ಗಾರುಂ ತಾಂ ಕೇಡಗಾಣರೆಂಬರ್ ವಿಬುಧರ್

ನೂಱಾಱು ಭುಜಗಮಂಗಳ್ 

ದಾರುಣಮಾಗಿಂತು ಸಾಯಲೇ ಕಾರಣಮೋ ॥೨೭॥

(ಟೀ-ಕಾರಣಂ- ಕಾರಣವು, ಇಲ್ಲದೆ-ಇಲ್ಲದೆಯೇ, ಜಗದೊಳಗೆ- ಜಗತ್ತಿನಲ್ಲಿ, ಆರುಂ- ಯಾರೂ ಕೂಡ,ತಾಂ-ತಾವು, ಕೇಡಗಾಣರ್- ಕೆಟ್ಟದ್ದನ್ನು ಅನುಭವಿಸುವುದಿಲ್ಲ, ಎಂಬರ್-ಎಂದು ಹೇಳುತ್ತಾರೆ ವಿಬುಧರ್- ಜ್ಞಾನಿಗಳು,ನೂಱಾಱು-ಅಸಂಖ್ಯವಾದ, ಭುಜಗಮಂಗಳ್- ಹಾವುಗಳು, ದಾರುಣಂ+ಆಗಿ- ದಾರೂಣವಾಗಿ/ದಯನೀಯವಾಗಿ, ಇಂತು-ಹೀಗೆ, ಸಾಯಲ್- ಸಾಯುವುದಕ್ಕೆ, ಏ ಕಾರಣಮೋ-ಏನು ಕಾರಣವೋ? ಕಂದಪದ್ಯ)


ವ।।ಎಂದೆನೆ ಸೂತಪುರಾಣಿಕರ್ ನಗುತುಂ ಪೇೞ್ದರ್

(ಎಂದೆನೆ-ಎಂದೆನ್ನಲು, ಸೂತಪುರಾಣಿಕರ್-ಸೂತಪುರಾಣಿಕರು,ನಗುತುಂ-ನಗುತ್ತಾ, ಪೇೞ್ದರ್-ಹೇಳಿದರು-)


ಚಂ॥ ಮಥಿತಪುರಾಣವೀಣೆಯುಲಿಯಿಂಪನದೆಂತುಟು ಪೇೞ್ವುದೋ ಮಗುಳ್

ಪೃಥುಲಜಗದ್ವಿಲೋಕನಕೆ ಮಾರ್ಗಮೆನಿಪ್ಪುದು ಮೌನಿವೃಂದಮೇ

ಕಥೆ ಪಿರಿದಾದೊಡಂ ಕಥೆಯ ಮೆಯ್ಗೆಡಲೀಯದೆ ಪೇೞ್ವೆನಾಲಿಸಿಂ

ಕಥನಕುತೂಹಲಂ ಶ್ರವಣಕೌತುಕದಿಂ ಸಲೆ ವರ್ಧಿಸಿರ್ಪುದೈ ॥೨೮॥

(ಟೀ-ಮಥಿತ- ಕಡೆಯಲ್ಪಟ್ಟ, ಪುರಾಣವೀಣೆಯ- ಪುರಾಣವೆಂಬ ವೀಣೆಯ, ಉಲಿಯ- ಸೊಲ್ಲುಗಳ, ಇಂಪಂ- ಮಾಧುರ್ಯವನ್ನು,ಅದೆಂತುಟು- ಅದು ಹೇಗೆ,  ಪೇೞ್ವುದೋ- ಹೇಳುವುದೋ! ಮಗುಳ್- ಮತ್ತೆ,(ಅದು-ಈ ಕಥೆಯ) ಪೃಥುಲ- ವಿಸ್ತಾರವಾದ,ಜಗತ್+ವಿಲೋಕನಕೆ- ಜಗತ್ತನ್ನು/ಪ್ರಪಂಚವನ್ನು ನೋಡುವುದಕ್ಕೆ, ಮಾರ್ಗಂ- ದಾರಿ, ಎನಿಪ್ಪುದು- ಎನಿಸುವುದು, ಮೌನಿವೃಂದಮೇ- ಋಷಿಗಳ ಸಮೂಹವೇ!ಕಥೆ- ಈ ಕಥೆಯು, ಪಿರಿದು- ದೊಡ್ಡದು, ಆದೊಡಂ-ಆಗಿದ್ದರೂ,  ಕಥೆಯ- ಈ ಕಥಾನಕದ, ಮೆಯ್+ಕೆಡಲ್+ಈಯದೆ- ಮೆಯ್ಸಿರಿ, ಸೊಗಸು ಹಾಳಾಗಲು ಕೊಡದಂತೆ, ಪೇೞ್ವೆಂ- ಹೇಳುತ್ತೇನೆ. ಆಲಿಸಿಂ-ಕೇಳಿರಿ, ಕಥನಕುತೂಹಲಂ-ಕಥೆಯನ್ನು ಹೇಳುವ ಕುತೂಹಲವು,ಶ್ರವಣಕೌತುಕದಿಂ-ಕೇಳುವ ಕೌತುಕದಿಂದ, ಸಲೆ-ಸಲ್ಲಲು, ವರ್ಧಿಸಿರ್ಪುದೈ- ಬೆಳೆದಿರುವುದಲ್ಲವೇ

ಚಂಪಕಮಾಲಾವೃತ್ತ, ಕಥೆಯನ್ನು ಕೇಳುವವರು ಕುತೂಹಲದಿಂದ ಇದ್ದಾಗ ಹೇಳುವವರಿಗೂ ಉತ್ಸಾಹ ಹೆಚ್ಚುತ್ತದೆಯಲ್ಲವೇ ಎಂದು ಋಷಿಗಳು ಮಧುರವಾದ ಪುರಾಣವೆಂಬ ವೀಣೆಯ ಧ್ವನಿಯನ್ನು ನುಡಿಸುವುದಾಗಿ ಹೇಳುತ್ತಾರೆ. ಪಂಪನ "ಕತೆ ಪಿರಿದಾದೊಡಂ.. ಎಂಬ ಪದ್ಯದ ಜೊತೆ ಹೋಲಿಸಬಹುದು.)


ವ॥ ಪಿಂತೆ ಜಗತ್ತಂ ಸೃಷ್ಟಿಸಿದ ಬ್ರಹ್ಮಂ ಪ್ರಜಾಪತಿಗಳನನೇಕರಂ ಸೃಜಿಸಿ ಲೋಕದೊಳ್ ಜೀವಸಂಕುಲಂಗಳಂ ಬಳೆಯಿಪುದೆನುತಾಣತಿಯನಿತ್ತೊಡಮವರೊಳ್ ಅನೇಕ ತೆಱದೊಳ್ ಸಕಲಜೀವಸಂಕುಲಂ ಸೃಷ್ಟಿಯಾದುದಂ ತಿಳಿದಿರ್ಪಿರಲ್ಲಮೇ! ಅಂತಿರ್ಪ ಕಶ್ಯಪಪ್ರಜಾಪತಿಗಂ ಪಲವುಂ ಪತ್ನಿಯರೊಳ್  ಪ್ರಜಾಪತಿಬ್ರಹ್ಮನ ಪುತ್ರಿಯರಾದ ಕದ್ರೂವಿನತೆಯರೆಂಬರ್ ಇರ್ವರ್ ಪತ್ನಿಯರಿರ್ದರ್

(ಟೀ-ಪಿಂತೆ-ಹಿಂದೆ, ಜಗತ್ತಂ-ಜಗತ್ತನ್ನು/ವಿಶ್ವವನ್ನು, ಸೃಷ್ಟಿಸಿದ- ನಿರ್ಮಿಸಿದ, ಬ್ರಹ್ಮಂ- ಬ್ರಹ್ಮನು, ಅನೇಕರಂ-ಅನೇಕರನ್ನು, ಪ್ರಜಾಪತಿಗಳಂ- ಪ್ರಜಾಪತಿಗಳನ್ನು, ಸೃಜಿಸಿ- ಸೃಷ್ಟಿಸಿ, ಲೋಕದೊಳ್-ಜಗತ್ತಿನಲ್ಲಿ, ಜೀವಸಂಕುಲಂಗಳಂ-ಎಲ್ಲ ಜೀವಿಗಳ ವಂಶವನ್ನು/ಕುಲವನ್ನು, ಬಳೆಯಿಪುದು- ಬೆಳೆಸಬೇಕು, ಎನುತ- ಎಂದು, ಆಣತಿಯಂ- ಆಜ್ಞೆಯನ್ನು, ಇತ್ತೊಡಂ- ಕೊಡಲು, ಅವರೊಳ್-ಅವರಲ್ಲಿ, ಅನೇಕ-ಬಹಳಷ್ಟು, ತೆಱದೊಳ್-ವಿಧದಲ್ಲಿ, ಸಕಲಜೀವಸಂಕುಲಂ-ಎಲ್ಲಾ ಜೀವಿಗಳ ಸಮೂಹವು, ಸೃಷ್ಟಿಯಾದುದಂ- ಸೃಷ್ಟಿಯಾದುದ್ದನ್ನು, ತಿಳಿದಿರ್ಪಿರಿ+ಅಲ್ಲಮೇ!- ತಿಳಿದಿದ್ದೀರಾ ಅಲ್ಲವೇ! ಅಂತಿರ್ಪ- ಹಾಗಿರುವ, ಕಶ್ಯಪಪ್ರಜಾಪತಿಗಂ- ಕಶ್ಯಪನೆಂಬ ಪ್ರಜಾಪತಿಗೆ, ಪಲವುಂ- ಹಲವಾರು, ಪತ್ನಿಯರೊಳ್-ಪತ್ನಿಯರಲ್ಲಿ, ಪ್ರಜಾಪತಿಬ್ರಹ್ಮನ- ಪ್ರಜಾಪತಿಯಾದ ಬ್ರಹ್ಮನ, ಪುತ್ರಿಯರಾದ-ಮಕ್ಕಳಾದ, ಕದ್ರೂವಿನತೆಯರ್+ಎಂಬರ್- ಕದ್ರೂ ಹಾಗೂ ವಿನತೆ ಎಂಬವರು, ಇರ್ವರ್-ಇಬ್ಬರು, ಪತ್ನಿಯರ್- ಹೆಂಡತಿಯರು, ಇರ್ದರ್-ಇದ್ದರು)


ದ್ರು॥ ದಿನಪನಂದದ ತೇಜಮನಾಂತವಳ್ 

ವಿನತೆಯೀಕೆ ವಿಹಂಗಮರೂಪಿಯೈ

ತನು ನಿಶೀಥದ ಕರ್ಪೆನೆ ಕದ್ರುವೋ

ಘನಸರೀಸೃಪರೂಪಮನಾಂತವಳ್ ॥೨೯॥

(ಟೀ-ದಿನಪನ- ಸೂರ್ಯನ, ಅಂದದ-ಸೌಂದರ್ಯದ, ತೇಜಮಂ-ತೇಜಸ್ಸನ್ನು, ಆಂತವಳ್-ಹೊಂದಿರುವವಳು/ತಳೆದವಳು, ಈಕೆ-ಇವಳು, ವಿನತೆ-ವಿನತೆ ಎಂಬುವವಳು, ವಿಹಂಗಮರೂಪಿಯೈ- ಪಕ್ಷಿಯ ರೂಪದವಳು. ತನು- ಶರೀರವು, ನಿಶೀಥದ-ರಾತ್ರಿಯ, ಕರ್ಪು+ಎನೆ- ಕಪ್ಪು ಬಣ್ಣ ಎನ್ನಲು, ಕದ್ರುವೋ-ಇನ್ನೊಬ್ಬಳಾದ ಆ ಕದ್ರುವು, ಘನಸರೀಸೃಪರೂಪಮಂ- ದೊಡ್ಡ ಹಾವಿನ ರೂಪವನ್ನು,ಆಂತವಳ್- ಹೊಂದಿದ್ದವಳು. ದ್ರುತವಿಲಂಬಿತ ವೃತ್ತ. ವಿಹಂಗಮ- ಆಕಾಶದಲ್ಲಿ ಚಲಿಸುವುದು, ಸರೀಸೃಪ- ತೆವಳಿಕೊಂಡು ಹೋಗುವುದು)


ಮ॥

ಇನಿತಾ ನಾರಿಯರಿರ್ವರಿರ್ದರೊಲವಿಂ ರಾತ್ರಿಪ್ರಭಾತಂಗಳಂ-

ತನುವಾಗುತ್ತೆ ಮುನೀಂದ್ರಕಶ್ಯಪನೆ ತಾಂ ಕಾಲಸ್ವರೂಪಂ ಸಲ

ಲ್ಕಿನಿತೊಪ್ಪಿರ್ಪ ವಿಭಿನ್ನರೂಪಗುಣದಿಂದಂ ಬಳ್ಳಿ ತಾಳ್ದಿರ್ದ ಬಲ್

ನನೆಗಳ್ ಬೇರೆಯ ಬಣ್ಣಮಾಂತ ತೆಱದಿಂ ತೋರಿರ್ದಪರ್ ಪತ್ನಿಯರ್ ॥೩೦॥

(ಟೀ-ಇನಿತು+ಆ- ಹೀಗೆ ಆ, ಇರ್ವರ್ ನಾರಿಯರ್-ಇಬ್ಬರು ಹೆಂಗಸರು, ಒಲವಿಂ- ಪ್ರೀತಿಯಿಂದ, ರಾತ್ರಿಪ್ರಭಾತಂಗಳಂತೆ- ರಾತ್ರಿ ಮತ್ತು ಹಗಲುಗಳಂತೆ,ಅನುವಾಗುತ್ತೆ- ಹೊಂದಿಕೊಳ್ಳುತ್ತ, ಇರ್ದರ್-ಇದ್ದರು. ಮುನೀಂದ್ರಕಶ್ಯಪನೆ- ಋುಷಿಶ್ರೇಷ್ಠನಾದ ಕಶ್ಯಪಪ್ರಜಾಪತಿಯು, ತಾಂ-ತಾನು,  ಕಾಲಸ್ವರೂಪಂ-ಕಾಲದ ಸ್ವರೂಪವಾಗಿ ಸಲಲ್ಕೆ- ಸಲ್ಲುತ್ತಿರಲು,ಇನಿತು- ಹೀಗೆ, ಒಪ್ಪಿರ್ಪ-ಶೋಭಿಸುತ್ತಿದ್ದ, ವಿಭಿನ್ನರೂಪಗುಣದಿಂದಂ- ಬೇರೆಬೇರೆಯಾದ ರೂಪ ಹಾಗೂ ಗುಣದಿಂದ, ಬಳ್ಳಿ-ಬಳ್ಳಿಯೊಂದು ತಾಳ್ದಿರ್ದ- ತಳೆದಿದ್ದ/ಹೊಂದಿರುವ, ಬಲ್+ನನೆಗಳ್- ದೊಡ್ಡ ಮೊಗ್ಗುಗಳು, ಬೇರೆಯ- ಬೇರೆಯದಾದ, ಬಣ್ಣಂ+ಆಂತ- ಬಣ್ಣವನ್ನು ಹೊಂದಿದ, ತೆಱದಿಂ-ರೀತಿಯಲ್ಲಿ,ಪತ್ನಿಯರ್-ಹೆಂಡತಿಯರು, ತೋರಿರ್ದಪರ್- ತೋರುತ್ತಿದ್ದರು/ಕಾಣುತ್ತಿದ್ದರು. ಮತ್ತೇಭವಿಕ್ರೀಡಿತ ವೃತ್ತ, ಕಶ್ಯಪಪ್ರಜಾಪತಿಯೇ ಕಾಲಸ್ವರೂಪದಂತೆ ಇರುವಾಗ, ಅವನನ್ನು ಅನುಸರಿಸುವ ಇವರಿಬ್ಬರೂ ರಾತ್ರಿ ಹಗಲುಗಳಂತೆ ಅವನ ಹೆಂಡತಿಯರಾಗಿ ಇದ್ದರು ಎಂದು ತಾತ್ಪರ್ಯ. ಅಲ್ಲದೇ ಹಗಲು ರಾತ್ರಿಗಳ ಹಾಗೆ ಅವರಿಬ್ಬರ ಗುಣದಲ್ಲೂ, ವ್ಯಕ್ತಿತ್ವದಲ್ಲೂ ವೈಷಮ್ಯ ಇರುವುದನ್ನು ಗಮನಿಸಬಹುದು. ಈ ಪದ್ಯವೂ ಹಿಂದಿನ ಪದ್ಯದ ಕಲ್ಪನೆಯನ್ನು ಮುಂದುವರೆಸಿರುವುದೇ ಆಗಿದೆ.)


ಕಂ॥ ಅಂತಲ್ಲದೆಯುಂ ನೋಡಲ್

ಸ್ವಾಂತರ್ಯದೊಳಾಶಿಸಿರ್ಪ ರೂಪಂ ಪಡೆಯ-

ಲ್ಕಾಂತಿರ್ಪ ಬಲ್ಮೆಯಿರ್ಪವ-

ರೆಂತುಟೊ ಸಲುತಿರ್ದರೊಳ್ಪಿನಿಂದಾವಗಮುಂ ॥೩೧॥

(ಟೀ-ಅಂತಲ್ಲದೆಯುಂ- ಹಾಗಲ್ಲದೆಯೂ, ನೋಡಲ್-ನೋಡುವುದಕ್ಕೆ, ಸ್ವಾಂತರ್ಯದೊಳ್-ತಮ್ಮ ಮನಸ್ಸಿನಲ್ಲಿ,  ಆಶಿಸಿರ್ಪ-ಬಯಸಿರುವ, ರೂಪಂ-ರೂಪವನ್ನು ಪಡೆಯಲ್ಕೆ- ಪಡೆಯುವುದಕ್ಕೆ, ಆಂತಿರ್ಪ-ಹೊಂದಿರುವ, ಬಲ್ಮೆಯು- ಶಕ್ತಿಯು, ಇರ್ಪವರ್- ಇರುವಂತಹ ಇವರು,ಆವಗಮುಂ-ಯಾವತ್ತೂ, ಎಂತುಟೊ-ಎಷ್ಟೋ ಒಳ್ಪಿನಿಂದ- ಒಳ್ಳೆಯತನದಿಂದ, ಸಲುತಿರ್ದರ್-ಸಲ್ಲುತ್ತಿದ್ದರು, ಕಂದಪದ್ಯ)


ವ॥ ಅಂತಿರಲೊರ್ಮೆ ಕಶ್ಯಪರ್

(ಹಾಗಿರಲು ಒಮ್ಮೆ ಕಶ್ಯಪರು,)


ಕಂ॥

ಮಡದಿಯರಿರ್ವರ್ ಮುದದಿಂ

ನಡೆವರ್ ಮನ್ಮನಕೆ ತಕ್ಕ ತೆಱದಿಂದೆನುತುಂ

ನುಡಿದರ್ ವರಮಂ ಕೇಳಿಂ

ಕುಡುವೆಂ ನಿಮ್ಮಿಚ್ಛೆಗೊಪ್ಪುವುದನಾನೆಂದರ್ ॥೩೨॥

(ಟೀ-ಇರ್ವರ್-ಇಬ್ಬರೂ, ಮಡದಿಯರ್-ಹೆಂಡತಿಯರು, ಮುದದಿಂ-ಸಂತೋಷದಿಂದ, ಮನ್ಮನಕೆ (ಮತ್+ಮನಕೆ)- ನನ್ನ ಮನಸ್ಸಿಗೆ, ತಕ್ಕ- ಉಚಿತವಾದ/ಒಪ್ಪುವ, ತೆಱದಿಂದೆ-ರೀತಿಯಿಂದ, ನಡೆವರ್-ನಡೆಯುತ್ತಾರೆ/ನಡೆದುಕೊಳ್ಳುತ್ತಾರೆ, ಎನುತುಂ-ಎಂದು, ನುಡಿದರ್- ಹೇಳಿದರು, "ವರಮಂ-ವರವನ್ನು  ಕೇಳಿಂ-ಕೇಳಿರಿ, ನಿಮ್ಮ+ಇಚ್ಛೆಗೆ- ನಿಮ್ಮ ಬಯಕೆಗೆ, ಒಪ್ಪುವುದಂ-ಒಪ್ಪುವುದನ್ನು, ಆನ್-ನಾನು, ಕುಡುವೆಂ-ಕೊಡುತ್ತೇನೆ" ಎಂದರ್-ಎಂದರು. ಕಂದಪದ್ಯ)


ಕಂ।। ವಿತತಸಪತ್ನಿಯ ಗಣದೊಳ್

ಪತಿಯಿಂತುಟು ಮನ್ನಿಸುತ್ತೆ ನುಡಿಯಲ್ಕಿವರ್ಗಳ್

ಹೃತಮಾನಸರಾದರಲಾ

ಚತುರರ್ ತಾಮಾಪ್ತರಿಂಗಿತಮನಱಿತೆಸೆಪರ್ ॥೩೩॥

(ಟೀ- ವಿತತ-ವಿಸ್ತಾರವಾದ, ಸಪತ್ನಿಯ-ಸವತಿಯರ, ಗಣದೊಳ್-ಗುಂಪಿನಲ್ಲಿ, ಪತಿಯು-ಗಂಡನು, ಇಂತುಟು-ಹೀಗೆ, ಮನ್ನಿಸುತ್ತೆ-ಮನ್ನಿಸುತ್ತ/ಗೌರವಿಸಿ, ನುಡಿಯಲ್ಕೆ-ಹೇಳಿರಲು, ಇವರ್ಗಳ್-ಇವರುಗಳು, ಹೃತಮಾನಸರ್+ ಆದರಲಾ-ಮನಸ್ಸನ್ನು ಕಳೆದುಕೊಂಡವರಾದರು(ಗಂಡನಿಂದ ಮನಸ್ಸು  ಅಪಹರಿಸಲ್ಪಟ್ಟಂತೆ ಆಯಿತು) ಚತುರರ್-ಚತುರರಾದವರು/ಬುದ್ಧಿವಂತರು, ತಾಂ-ತಾವು, ಆಪ್ತರ-ಆಪ್ತರಾದವರ, ಇಂಗಿತಮಂ-ಮನಸ್ಸಿನಲ್ಲಿ ಇರುವುದನ್ನು, ಅಱಿತು-ತಿಳಿದುಕೊಂಡು, ಎಸೆಪರ್-ಮಾಡುತ್ತಾರೆ. ಕಂದಪದ್ಯ, ಅರ್ಥಾಂತರನ್ಯಾಸ ಅಲಂಕಾರ)


ಕಂ॥ ಮೊದಲೊಳ್ ಕದ್ರುವೆ ಸಾರ್ದಳ್

ಮುದದಿಂ ನಮಿಸುತ್ತೆ ಪತಿಗೆ ನುಡಿದಳ್ ಮನದೊಳ್

ಹೃದಯದೊಳಂದಂಕುರಿಸಿ-

ರ್ದುದನೆಂತುಟೊ ನಾಣ್ಚಿ ಸಹಜಭಾವದೊಳಾಗಳ್ ॥೩೪॥

(ಟೀ-ಮೊದಲೊಳ್-ಮೊದಲು, ಕದ್ರುವೆ-ಕದ್ರುವೇ, ಸಾರ್ದಳ್-ಹೋದಳು, ಮುದದಿಂ-ಸಂತೋಷದಿಂದ, ನಮಿಸುತ್ತೆ-ನಮಸ್ಕರಿಸುತ್ತ, ಮನದೊಳ್-ಮನಸ್ಸಿನಲ್ಲಿ, ಹೃದಯದೊಳ್-ಎದೆಯಲ್ಲಿ, ಅಂದು-ಆ ದಿನ ಅಂಕುರಿಸಿರ್ದುದಂ- ಮೊಳಕೆಯೊಡೆದುದ್ದನ್ನು/ಚಿಗುರಿದ್ದನ್ನು, ಎಂತುಟೊ-ಹೇಗೋ, ನಾಣ್ಚಿ-ನಾಚಿಕೆಯಿಂದ, ಸಹಜಭಾವದೊಳಾಗಳ್- ಸಹಜವಾದ ಭಾವದಲ್ಲಿ, ಪತಿಗೆ-ಗಂಡನಿಗೆ, ನುಡಿದಳ್-ಹೇಳಿದಳು. ಕಂದಪದ್ಯ)


ಚಂ॥ ಸ್ತುತಪತಿದೇವರೇ!ಲಲನೆ ಪುಷ್ಪಮನಾಂತಲತಾವಿತಾನಮೆಂ-

ದತಿಶಯದಿಂದೆ ಪೇೞ್ವರಲ! ಪೂಗಳನಂತರದೊಳ್ ವಿರಾಜಿಕುಂ

ಹಿತಮೆನಿಪಂತೆ ಸಲ್ವ ಫಲಮೆಂದೊಡನೆನ್ನಯ ಚಿತ್ತರಂಗಭಾ-

ವಿತಮನೆ ಕಾಣೆಯಾ! ಎನುತೆ ಕಾಲ್ವೆರಲಿಂ ನೆಲನಲ್ಲಿ ಗೀರುತುಂ

ಕೃತಬಹುಲಾಸ್ಯೆ ಹಾಸಪರಿಶೋಭಿತಳಾಗಿ ಕಟಾಕ್ಷವೀಕ್ಷಣಾ-

ಚತುರೆ ಚಕೋರನೇತ್ರೆ ನತಮಸ್ತಕಳಾಗಿ ನಿತಾಂತಮೊಪ್ಪುತುಂ

ಮಿತಮೆನಿಸಿರ್ಪ ಮಾತುಗಳಿನಿಂಗಿತದಿಂ ಸಲೆ ದಿಟ್ಟಿದುಂಬಿಯಂ

ಪತಿವದನಾಬ್ಜಕಂ ಕಳುಪಿ ಮೌನದೊಳಿರ್ದಪಳಲ್ಲಿ ಕದ್ರು ತಾಂ॥೩೫-೩೬॥(ಯುಗ್ಮಕಂ)

(ಟೀ-"ಸ್ತುತಪತಿದೇವರೇ!- ಸ್ತುತಿಸಲ್ಪಟ್ಟ ಪತಿದೇವರೇ, ಲಲನೆ-ಹೆಣ್ಣು,  ಪುಷ್ಪಮಂ- ಹೂವನ್ನು, ಆಂತ- ತಳೆದ, ಲತಾವಿತಾನಂ- ಬಳ್ಳಿಯ ಚಪ್ಪರ,ಎಂದು-ಎನ್ನುತ್ತ, ಅತಿಶಯದಿಂದೆ- ಅತಿಶಯವಾಗಿ ಪೇೞ್ವರಲ!-ಹೇಳುತ್ತಾರಲ್ಲ! ಪೂಗಳ-ಹೂವುಗಳ,ಅನಂತರದೊಳ್-ಬಳಿಕದಲ್ಲಿ, ಹಿತಂ+ಎನಿಪಂತೆ- ಹಿತಾವಗುವಂತೆ, ಸಲ್ವ-ಸಲ್ಲುವ, ಫಲಂ-ಫಲವು/ಹಣ್ಣು, ವಿರಾಜಿಕುಂ-ವಿರಾಜಿಸುತ್ತದೆ, ಎಂದೊಡನೆ- ಎಂದೆನ್ನಲು, ಎನ್ನಯ-ನನ್ನ, ಚಿತ್ತರಂಗಭಾವಿತಮನೆ- ಮನಸ್ಸಿನಲ್ಲಿ ಭಾವಿಸಿಕೊಂಡಿದ್ದನ್ನು, ಕಾಣೆಯಾ!-ಕಾಣುವುದಿಲ್ಲವೇ!” ಎನುತೆ-ಎನ್ನುತ್ತ, ಕಾಲ್ವೆರಲಿಂ-ಕಾಲ ಬೆಳುಗಳಿಂದ, ನೆಲನಲ್ಲಿ-ನೆಲದಲ್ಲಿ, ಗೀರುತುಂ-ಗೀರುತ್ತಾ, ಕೃತಬಹುಲಾಸ್ಯೆ-ಬಹಳ ಲಾಸ್ಯವನ್ನು ಮಾಡುತ್ತಾ, ಹಾಸಪರಿಶೋಭಿತಳಾಗಿ- ನಗೆಯಿಂದ ಶೋಭಿಸಲ್ಪಟ್ಟವಳಾಗಿ, ಕಟಾಕ್ಷವೀಕ್ಷಣಾಚತುರೆ-ಓರೆಗಣ್ಣೋಟದಲ್ಲಿ ಚತುರೆಯಾವಳು, ಚಕೋರನೇತ್ರೆ-ಚಕೋರದಂತಹ ಕಣ್ಣುಗಳನ್ನು ಉಳ್ಳವಳು, ನತಮಸ್ತಕಳಾಗಿ- ತಲೆತಗ್ಗಿಸುತ್ತಾ, ನಿತಾಂತಂ- ಯಾವತ್ತೂ, ಒಪ್ಪುತುಂ-ಶೋಭಿಸುತ್ತಾ, ಮಿತಂ-ಸ್ವಲ್ಪವೇ ಎನಿಸಿರ್ಪ-ಎನಿಸುವಂತಹ, ಮಾತುಗಳಿಂ- ಮಾತುಗಳಿಂದ, ಇಂಗಿತದಿಂ-ತನ್ನ ಮನಸ್ಸಿನಲ್ಲಿರುವುದರಿಂದ (ಇಂಗಿತವನ್ನು ತಿಳಿಸುವುದಕ್ಕೆ) ಸಲೆ-ಸಲ್ಲಲು, ದಿಟ್ಟಿದುಂಬಿಯಂ-ದೃಷ್ಟಿಯೆಂಬ ದುಂಬಿಯನ್ನು, ಪತಿವದನಾಬ್ಜಕಂ-ಗಂಡನ ಮುಖವೆಂಬ ಕಮಲಕ್ಕೆ, ಕಳುಪಿ-ಕಳುಹಿಸಿ,ಅಲ್ಲಿ-ಆ ಸ್ಥಳದಲ್ಲಿ, ಕದ್ರು-ಕದ್ರುವು, ತಾಂ-ತಾನು, ಮೌನದೊಳ್-ಮಾತಿಲ್ಲದೆಯೇ, ಇರ್ದಪಳ್-ಇದ್ದಳು. ಚಂಪಕಮಾಲಾವೃತ್ತ. ಯುಗ್ಮಕ-ಜೋಡಿಯಾದ ಪದ್ಯಗಳು )


ಕಂ॥ ಅವಳುಲಿದುದನಾಲಿಸುತುಂ

ರವಿಯಿಳೆಯಂ ಕಾಣ್ಬ ತೆಱದೊಳಱಿಯುತೆ ಬಗೆಯಂ

ತವಸಿ ನಸುನಕ್ಕನಾಣ್ಮಂ

ನವವಧುವಾಶಿಪುದನಿತ್ತು ತೋಷಿಪನಲ್ತೇ ॥೩೭॥

(ಟೀ- ಅವಳು-ಕದ್ರುವು, ಉಲಿದುದಂ-ಹೇಳಿದ್ದನ್ನು, ಆಲಿಸುತುಂ-ಕೇಳುತ್ತಾ, ರವಿ- ಸೂರ್ಯನು,ಇಳೆಯಂ-ಭೂಮಿಯನ್ನು, ಕಾಣ್ಬ-ಕಾಣುವ, ತೆಱದೊಳ್-ರೀತಿಯಲ್ಲಿ, ಬಗೆಯಂ-(ಅವಳ)ಮನಸ್ಸನ್ನು, ಅಱಿಯುತೆ-ತಿಳಿಯುತ್ತಾ, ತವಸಿ-ತಪಸ್ವಿಯಾದ ಕಶ್ಯಪನು, ನಸುನಕ್ಕಂ- ನಸುನಕ್ಕನು, ಆಣ್ಮಂ-ಪ್ರಿಯನಾದವನು/ಗಂಡನು, ನವವಧುವು- ಹೊಸ ಹೆಂಡತಿಯು, ಆಶಿಪುದಂ- ಆಶಿಸುವುದನ್ನು/ಬಯಸಿದ್ದನ್ನು,ಇತ್ತು-ಕೊಟ್ಟು, ತೋಷಿಪನಲ್ತೇ- ಸಂತೋಷಪಡಿಸುವುದಿಲ್ಲವೇ! ಕಂದಪದ್ಯ, ಅರ್ಥಾಂತರನ್ಯಾಸ)


ವ॥ ಅಂತು ಅವಳ ಬಯಕೆಯಂ ಪೂರಯಿಸಲುದ್ಯುಕ್ತನಾಗಿ

(ಅಂತು-ಹೀಗೆ, ಅವಳ -ಕದ್ರುವಿನ,ಬಯಕೆಯಂ-ಆಸೆಯನ್ನು/ಬಯಕೆಯನ್ನು, ಪೂರಯಿಸಲು-ಪೂರ್ಣಗೊಳಿಸಲು, ಉದ್ಯುಕ್ತನಾಗಿ-ತೊಡಗಿಕೊಂಡು)


ಕಂ॥

ಎಂತಪ್ಪ ಪುತ್ರರಂ ನೀಂ

ಕಾಂತೆಯೆ! ಬಯಸಿರ್ಪೆ ಪೇೞೆನಲ್ ಕದ್ರುವವಳ್

ಚಿಂತಿಸಿ ಸಾವಿರ ಮಕ್ಕಳ-

ನಿಂತೀಯೈ ಬೀರರಾದವರನೆಂತೆಂದಳ್ ॥೩೮॥

(ಟೀ-"ಕಾಂತೆಯೆ!-ಪ್ರಿಯೇ, ಎಂತಪ್ಪ-ಎಂತಹ/ಹೇಗಿರುವ, ಪುತ್ರರಂ-ಮಕ್ಕಳನ್ನು, ನೀಂ-ನೀನು,  ಬಯಸಿರ್ಪೆ-ಆಶಿಸುತ್ತಿದ್ದೀಯಾ, ಪೇೞ್-ಹೇಳು" ಎನಲ್-ಎನ್ನಲು, ಕದ್ರುವವಳ್-ಆ ಕದ್ರುವು, ಚಿಂತಿಸಿ- ಯೋಚನೆ ಮಾಡಿ, "ಸಾವಿರ ಮಕ್ಕಳಂ-ಒಂದು ಸಾವಿರ ಸಂಖ್ಯೆಯ ಮಕ್ಕಳನ್ನು,  ಬೀರರ್-ವೀರರು/ಪರಾಕ್ರಮಿಗಳು, ಆದವರಂ-ಆಗಿರುವವರನ್ನು, ಇಂತೀಯೈ-ಹೀಗೆ ಕೊಡು" ಎಂತೆಂದಳ್-ಎಂದು ಹೇಳಿದಳು. ಕಂದಪದ್ಯ)


ವ॥ ಅಂತೆನೆ ಕಶ್ಯಪಮುನೀಂದ್ರಂ "ತಥಾಸ್ತು" ಎಂದುಲಿಯಲ್ ಕದ್ರುವು ಗರ್ಭಮಂ ಧರಿಯಿಸಿದಳ್

(ಅಂತೆನೆ-ಹಾಗೆಂದು ಹೇಳಲು, ಕಶ್ಯಪಮುನೀಂದ್ರಂ-ಕಶ್ಯಪಮುನಿಯು, "ತಥಾಸ್ತು"-ಹಾಗೇ ಆಗಲಿ, ಎಂದು+ಉಲಿಯಲ್-ಎಂದು ಹೇಳಲು, ಕದ್ರುವು-ಕದ್ರುವು, ಗರ್ಭಮಂ-ಗರ್ಭವನ್ನು ಧರಿಯಿಸಿದಳ್-ಹೊತ್ತಳು/ತಾಳಿದಳು)


ಕಂ॥ ಮೞೆಯಂ ಕರೆಯುವ ಮೋಡಮೊ

ಘೞಿಲನೆ ಕಾಯ್ಗಳನೆ ತಳೆದ ಲತೆಯೋ ಎನ್ನಲ್

ತಳೆದಳ್ ಗರ್ಭದ ಭಾರಮ-

ನಳಲಂ ಮೇಣ್ ತಾಳ್ದಳೊಲವಿನೌಷಧದಿಂದಂ ॥೩೯॥

(ಟೀ-ಮೞೆಯಂ-ಮಳೆಯನ್ನು, ಕರೆಯುವ-ಕೊಡುವ, ಮೋಡಮೊ-ಮೋಡವೋ, ಘೞಿಲನೆ-ಬೇಗದಲ್ಲಿ, ಕಾಯ್ಗಳನೆ-ಕಾಯಿಗಳನ್ನೇ, ತಳೆದ-ಹೊತ್ತ, ಲತೆಯೋ-ಬಳ್ಳಿಯೋ, ಎನ್ನಲ್-ಎಂಬಂತೆ,ಗರ್ಭದ ಭಾರಮಂ-ಬಸಿರಿನ ಭಾರವನ್ನು, ತಳೆದಳ್-ಹೊತ್ತಳು, ಅಳಲಂ-ನೋವನ್ನೂ ಮೇಣ್-ಮತ್ತೆ, ಒಲವಿನ-ಪ್ರೀತಿಯೆಂಬ, ಔಷಧದಿಂದಂ-ಔಷಧದಿಂದ, ತಾಳ್ದಳ್-ತಾಳಿಕೊಂಡಳು. ಕಂದಪದ್ಯ)


ಮ॥ ಕಳೆಯಲ್ ಕಾಲದೊಳಾಕೆ ಮೊಟ್ಟೆಗಳನಿಟ್ಟಳ್ ಮೋದದಿಂ ಪಂಕ್ತಿಯೊಳ್

ಪೊಳೆಯುತ್ತಿರ್ದ ಸಹಸ್ರಸಂಖ್ಯೆಗೆ ಸಮಂ ಸಂದಿರ್ಪ ಬೆಳ್ಪಾಂತ ನಿ-

ರ್ಮಳಗೋಳಂಗಳಜಾಂಡಮೇ ಪ್ರಲಯದೊಳ್ ಕೋದಿಟ್ಟವೊಲ್ ಕಂಡುದೈ

ನೆಲೆಯಾಗಿರ್ದುದು ಕದ್ರುವೆಲ್ಲಮುಮನೇ ಸುತ್ತಿರ್ದು ಕಾಪಿಟ್ಟಿರಲ್ ॥೪೦॥

(ಟೀ-ಕಳೆಯಲ್-ಕಳೆಯುತ್ತಿರಲು, ಕಾಲದೊಳ್-ಕಾಲದಲ್ಲಿ, ಆಕೆ-ಅವಳು, ಮೊಟ್ಟೆಗಳಂ-ಮೊಟ್ಟೆಗಳನ್ನು/ತತ್ತಿಗಳನ್ನು,  ಇಟ್ಟಳ್-ಇಟ್ಟಳು. ಕದ್ರುವು-ಆಕೆಯು, ಎಲ್ಲಮುಮನೇ-ಎಲ್ಲವನ್ನೂ, ಸುತ್ತಿರ್ದು-ಸುತಿಕೊಂಡು, ಕಾಪಿಟ್ಟಿರಲ್-ಕಾಪಾಡುತ್ತಿರಲು/ಕಾವನ್ನು ಕೊಟ್ಟಿರಲು,(ಹಾವುಗಳು ಮೊಟ್ಟೆಗಳನ್ನು ಸುತ್ತಿಟ್ಟುಕೊಂಡು ಕಾಪಿಡುತ್ತವೆ) ಮೋದದಿಂ-ಸಂತೋಷದಿಂದ, ಪಂಕ್ತಿಯೊಳ್-ಸಾಲಿನಲ್ಲಿ, ಪೊಳೆಯುತ್ತಿರ್ದ-ಹೊಳೆಯುತ್ತಿದ್ದ, ಸಹಸ್ರಸಂಖ್ಯೆಗೆ-ಸಾವಿರ ಸಂಖ್ಯೆಗೆ, ಸಮಂ-ಸಮವಾಗಿದ್ದು ನೆಲೆಯಾಗಿರ್ದುದು-ಒಂದು ಕಡೆ ಸೇರಿರುವುದು, ಸಂದಿರ್ಪ-ಸಂದಿರುವ, ಬೆಳ್ಪು+ಆಂತ- ಬಿಳಿಯ ಬಣ್ಣವನ್ನು ಹೊಂದಿರುವ, ನಿರ್ಮಳಗೋಳಂಗಳ್-ಶುಭ್ರವಾದ ಗೋಳಗಳು, ಅಜಾಂಡಮೇ-ಬ್ರಹ್ಮಾಂಡವೇ, ಪ್ರಲಯದೊಳ್-ಪ್ರಳಯಕಾಲದಲ್ಲಿ, ಕೋದಿಟ್ಟವೊಲ್-ಪೋಣಿಸಿಟ್ಟ ಹಾಗೆ, ಕಂಡುದೈ-ಕಾಣುತ್ತಿತ್ತು. ಮತ್ತೇಭವಿಕ್ರೀಡಿತವೃತ್ತ )


ಕಂ॥

ಅತ್ತಲ್ ವಿನತೆಯೆ ಪತಿಯಿಂ

ಪೊತ್ತಳ್ ತಾಂ ಕಾದ್ರವೇಯರೆಲ್ಲರಿಗಿಂ ಮೇಣ್

ಮತ್ತನಯರ್ ಮಿಗಿಲೆನಿಪಂ-

ತುತ್ತಮರಾಗಿರ್ಕೆಯೆಂದು ವರದಿಂ ಬಸಿಱಂ ॥೪೧॥

(ಟೀ-ಅತ್ತಲ್-ಅತ್ತ ಕಡೆ, ವಿನತೆಯೆ-ವಿನತೆಯು, ಪತಿಯಿಂ-ಗಂಡನಿಂದ/ಕಶ್ಯಪನಿಂದ, ತಾಂ-ತಾನು,  "ಕಾದ್ರವೇಯರ-ಕದ್ರುವಿನ ಮಕ್ಕಳಾದವರ, ಎಲ್ಲರಿಗಿಂ ಮೇಣ್-ಎಲ್ಲರಿಗಿಂತಲೂ ಕೂಡ, ಮತ್ತನಯರ್ (ಮತ್+ತನಯರ್)- ನನ್ನ ಮಕ್ಕಳು, ಮಿಗಿಲ್-ಹೆಚ್ಚು, ಎನಿಪಂತೆ-ಎನ್ನಿಸುವಂತೆ, ಉತ್ತಮರಾಗಿ-ಶ್ರೇಷ್ಠರಾಗಿ ಇರ್ಕೆ-ಇರಲಿ, ಎಂದು-ಎಂದು ವರದಿಂ-ಕಶ್ಯಪನು ಕೊಟ್ಟ ವರದಿಂದ, ಬಸಿಱಂ-ಗರ್ಭವನ್ನು, ಪೊತ್ತಳ್- ಹೊತ್ತಳು/ಧರಿಸಿದಳು. ಕಂದಪದ್ಯ)


ಶಿ॥ ಸಿತಂ ಯುಗ್ಮಂ ಲೋಕಾಂಬಕಶಶಿದಿನೇಶರ್ಕಳವೊಲೇ

ಸ್ತುತಾಂಡಂಗಳ್ ಕಾಣ್ಗುಂ ಛವಿಯೊಳೆಸೆಯುತ್ತಾಕೆ ನ್ಯಸಿಸಲ್

ಸತೃಪ್ತಾತ್ಮಳ್ ಕಾಯ್ದಳ್ ಸಮಯಮಳಿಯಲ್ ಬೇಸರಿಸದೆ

ಚ್ಯುತಂ ಸಂದತ್ತೆಂತೋ ವಿನತೆಯೊಳಗೀ ತಾಳ್ಮೆ ಬೞಿಕಂ ॥೪೨॥

(ಟೀ- ಆಕೆ-ಅವಳು, ನ್ಯಸಿಸಲ್-ಇಟ್ಟಾಗ, ಸಿತಂ-ಬಿಳಿಯ, ಯುಗ್ಮಂ-ಎರಡು, ಲೋಕಾಂಬಕ-ಶಶಿ-ದಿನೇಶರ್ಕಳವೊಲೇ- ಜಗತ್ತಿನ ಕಣ್ಣುಗಳಂತೆ ಇರುವ ಚಂದ್ರ ಹಾಗೂ ಸೂರ್ಯರ ಹಾಗೆಯೇ, ಸ್ತುತಾಂಡಂಗಳ್(ಸ್ತುತ+ಅಂಡಂಗಳ್)-ಸ್ತುತ್ಯರ್ಹವಾದ ಮೊಟ್ಟೆಗಳು, ಛವಿಯೊಳ್-ಕಾಂತಿಯಿಂದ, ಎಸೆಯುತ್ತ-ಶೋಭಿಸುತ್ತ, ಕಾಣ್ಗುಂ-ಕಾಣುತ್ತಿವೆ. ಸತೃಪ್ತಾತ್ಮಳ್(ಸ+ತೃಪ್ತ+ಆತ್ಮಳ್)- ತೃಪ್ತಿಯನ್ನು ಹೊಂದಿದವಳಾಗಿ,  ಸಮಯಂ- ಕಾಲವು ಅಳಿಯಲ್-ಅಳಿಯುತ್ತಿರಲು/ಕಳೆಯುತ್ತಿರಲು, ಬೇಸರಿಸದೆ-ಯಾವುದೇ ಬೇಸರವಿಲ್ಲದೇ,ಕಾಯ್ದಳ್-ಕಾಪಾಡಿದಳು/ಕಾದಳು,ವಿನತೆಯೊಳಗೆ-ವಿನತೆಯಲ್ಲಿ, ಈ ತಾಳ್ಮೆ- ಈ ತಾಳುವಿಕೆ, ಬೞಿಕಂ- ಆ ಬಳಿಕದಲ್ಲಿ, ಎಂತೋ-ಹೇಗೋ, ಚ್ಯುತಂ ಸಂದತ್ತು-ಚ್ಯುತವು/ನಾಶವು ಆಯಿತು. ಶಿಖರಿಣಿ ವೃತ್ತ.)

--

(ಮುಂದೆ ಕಾದ್ರವೇಯರ ಜನನ, ಅರುಣನ ಜನನ,)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ