Powered By Blogger

ಶನಿವಾರ, ಆಗಸ್ಟ್ 1, 2020

ವೈನತೇಯವಿಜಯಂ- ಗರುಡನ ಕಥೆ- ೧


    (ಅಗಸ್ತ್ಯ ಚರಿತೆಯ ಪ್ರಾರಂಭದಲ್ಲಿ ಹೇಳಿದಂತೆಯೇ) ಹಿಂದಿನ ಕವಿಗಳಿಗೆಲ್ಲ ಇಲ್ಲದ ಈ ತಂತ್ರಜ್ಞಾನದ ಅನುಕೂಲ ನಮಗೆ ಇರುವ ಕಾರಣ ಈ ವೈನತೇಯವಿಜಯವೆಂಬ ಕಾವ್ಯವನ್ನು ಅಂತರ್ಜಾಲದಲ್ಲಿ ಹೀಗೆ ಪ್ರಸ್ತುತಪಡಿಸುತ್ತಿದ್ದೇನೆ. ಇಂದಿನ ಕಾಲದಲ್ಲಿ ಈ ಪುಸ್ತಕವನ್ನು ಮುದ್ರಿಸುವುದೂ ಪ್ರಕಟಿಸುವುದೂ ದೊಡ್ಡ ಭಾರವಾಗುವುದಲ್ಲದೇ ಹಳಗನ್ನಡವನ್ನು ಓದುವವರೂ ಬರೆಯುವವರೂ ತುಂಬಾ ಕಡಿಮೆ ಸಂಖ್ಯೆಯಲ್ಲಿ ಇರುವ ಕಾರಣ, ಮುದ್ರಣದಲ್ಲಿ ಇದನ್ನು ತರುವುದು ವ್ಯರ್ಥಪ್ರಯಾಸವಾದೀತು ಎಂದೆನಿಸಿತು. ಅಲ್ಲದೇ ಎಂತೆಂತಹ ಕವಿಗಳ ಕಾವ್ಯಗಳನ್ನೇ ಕೊಂಡು ಒದುವವರಿಲ್ಲದಿರುವಾಗ ನನ್ನ ಈ ಸಣ್ಣ ಕಾವ್ಯವನ್ನು (ಪುಕ್ಕಟೆಯಾಗಿ ಕೊಟ್ಟರೂ) ಓದುವರು ಯಾರಿದ್ದಾರು ಎಂಬ ಭಾವನೆಯೂ ಜೊತೆಗೆ ಸೇರಿಕೊಂಡಿತು. ಸಂಸ್ಖೃತದ ಕವಿ-ನಾಟಕಕಾರ ಭವಭೂತಿ "ಎಂದಾದರೊಂದು ದಿನ ಯಾರೋ ಒಬ್ಬ ನನಗೆ ಸಮಾನವಾದ ಮನೋಭಾವವುಳ್ಳವನು ಹುಟ್ಟುತ್ತಾನೆ. ಅವನಿಗೋಸ್ಕರ ಬರೆಯುತ್ತಿದ್ದೇನೆ, ಈ ಕಾಲವೂ ಅನಂತವಾದದ್ದು ಹಾಗೂ ಭೂಮಿಯೂ ವಿಪುಲವಾದದ್ದು" ಎಂದು ಹೇಳಿದಂತೆ, ಇಲ್ಲಿ ಬರೆದಿಡುತ್ತಿರುವುದು ಈ ಹಳಗನ್ನಡದ ಕಾವ್ಯದಲ್ಲಿ ದಿಟವಾದ ಆಸಕ್ತಿ ಇರುವ ರಸಿಕರು ಇಂದಲ್ಲ ನಾಳೆ ಓದಬಹದು ಎಂದಲ್ಲದೇ ಅನಂತವಾದ ಕಾಲಪ್ರವಾಹದಲ್ಲಿ ಬರುವ ಯಾರೋ ಒಬ್ಬ  ಸಹೃದಯನ ಕಣ್ಣಿಗೆ ನನ್ನ ಕಾವ್ಯ ಬೀಳದೇ ಹೋಗಬಾರದು ಎಂಬ ಸ್ವಾರ್ಥವೂ ಕೂಡ.
    ಕಾವ್ಯವನ್ನು ಯಶಸ್ಸಿಗೆ, ದುಡ್ಡಿಗೆ ಇತ್ಯಾದಿ ಹಲವಾರು ಕಾರಣಗಳಿಗೆ ಬರೆಯುತ್ತಾರೆ ಎಂದು ಮಮ್ಮಟನು ಕಾವ್ಯಪ್ರಕಾಶವೆಂಬ ಗ್ರಂಥದಲ್ಲಿ ಹೇಳಿದ್ದಾನೆ. ಕಾಳಿದಾಸನೇ ತನಗೆ "ಮಂದಃ ಕವಿಯಶಃಪ್ರಾರ್ಥೀ" ಎಂದು ಹೇಳಿಕೊಂಡಿದ್ದಾನೆ. ಅಂತಹ ಮಹಾಕವಿಯೇ ಹಾಗೆ ಹೇಳಿಕೊಂಡ ಮೇಲೆ ನಾವೆಲ್ಲ ಯಶಸ್ಸನ್ನು ಆಶಿಸುತ್ತೇವೆ ಎಂದು ಹೇಳುವುದೂ ಅಪಹಾಸ್ಯಕ್ಕೆ ಗುರಿಯಾಗಬಹುದು. ಆದರೂ ಇದನ್ನು ಬರೆಯುವಾಗ ಆತ್ಮತೃಪ್ತಿಯೊಂದೇ ಮನಸ್ಸಿನಲ್ಲಿ ಇದ್ದದ್ದು ಎಂದೇನೂ ಅಲ್ಲ. ಇದನ್ನು ಬರೆಯುವುದಕ್ಕೆ ಒಂದು ರೀತಿಯಲ್ಲಿ ಸ್ನೇಹಿತರ ಜೊತೆಯಲ್ಲಿನ ಸ್ಪರ್ಧೆಯೂ ಒಂದು ಕಾರಣ. ಅದೆಲ್ಲವನ್ನೂ ಕಾವ್ಯದ ಆರಂಭದಲ್ಲಿ ಉಲ್ಲೇಖಿಸಿದ್ದೇನೆ. ಹಾಗಾಗಿ ಹೆಚ್ಚು ವಿಸ್ತರಿಸುವುದಿಲ್ಲ.
ಇದೊಂದು ಪ್ರೌಢವಾದ ಹಳಗನ್ನಡದ ಚಂಪೂ ಶೈಲಿಯ ನಾಲ್ಕು ಆಶ್ವಾಸಗಳ ಖಂಡಕಾವ್ಯ. ಹಾಗಾಗಿ ಇಲ್ಲಿನ ಪದ್ಯಗಳ ಪ್ರತಿಯೊಂದು ಶಬ್ದವನ್ನೂ ಬಿಡಿಸಿ ಅರ್ಥಸಹಿತವಾಗಿ (ಕಾಲಕ್ರಮದಲ್ಲಿ) ಬರೆಯುತ್ತಿದ್ದೇನೆ.  ಒಂದೊಂದು ಕಂತಿನಲ್ಲಿಯೂ ಹದಿನೈದರಿಂದ ಇಪ್ಪತ್ತು ಪದ್ಯಗಳನ್ನು ಅಥವಾ ಕಥೆಯಲ್ಲಿ ಒಂದು ಘಟನೆಯ ಅಂತ್ಯವಾಗುವ ತನಕ ಬರುವ ಪದ್ಯಗಳನ್ನು ಹಾಕುತ್ತೇನೆ. ಹಳಗನ್ನಡವನ್ನು ಅಭ್ಯಾಸ ಮಾಡುವವರಿಗೂ ಕಾವ್ಯವನ್ನು ಆಸ್ವಾದ ಮಾಡುವವರಿಗೂ ಇಲ್ಲಿ ಅವಕಾಶವಿದೆ.


~: *ವೈನತೇಯವಿಜಯಂ* :~

॥ಪ್ರಥಮಾಶ್ವಾಸಂ॥
ಕಂ॥
ವಿನತಾನಂದನನೆನಿಪಂ
ಧನದಪತಿಪ್ರೀತನೀತನೀಗೊಳ್ಳಿತ್ತಂ
ಘನನುಂ ದ್ವಿಜಸಂಸ್ತುತನುಂ
ಮನನೀಯಂ ದಲ್ ವಿನಾಯಕಂ ಸತ್ಪಕ್ಷಂ ॥೧॥ 
(ಟೀ-ಈ ಪದ್ಯದಲ್ಲಿ ಶ್ಲೇಷಾಲಂಕಾರದಿಂದ ಕವಿಯ ಇಷ್ಟದೈವವಾದ ಗಣಪತಿಯನ್ನೂ ಗರುಡನನ್ನೂ ಸ್ತುತಿಮಾಡಲಾಗಿದೆ.ಛಂದಸ್ಸು ಕಂದಪದ್ಯ. 
*ಗಣಪತಿಯ ಪರವಾದ ಅರ್ಥವು- ವಿನತ+ಆನಂದನಂ- ನಮಸ್ಕರಿಸುತ್ತಿರುವವರಿಗೆ ಆನಂದವನ್ನು ಕೊಡುವವನು, ಧನದ- ಕುಬೇರ, ಧನದಪತಿ-ಶಿವನು, ಧನದಪತಿಪ್ರೀತಂ- ಶಿವನಿಂದ ಪ್ರೀತಿಸಲ್ಪಡುತ್ತಿರುವವನು, ಈತಂ- ಇವನು, ಘನನುಂ- ಘನನಾದವನೂ/ಶ್ರೇಷ್ಠನಾದವನೂ, ದ್ವಿಜಸಂಸ್ತುತನುಂ- ಬ್ರಾಹ್ಮಣರಿಂದ ಸ್ತುತಿಸಲ್ಪಟ್ಟವನೂ, ಮನನೀಯಂ- ಮನನವನ್ನು ಮಾಡಬೇಕಾದವನು, ವಿನಾಯಕಂ- ವಿನಾಯಕನಾದ ಗಣಪತಿಯು, ಸತ್ಪಕ್ಷಂ- ಸಜ್ಜನಪಕ್ಷಪಾತಿಯಾದವನು ದಲ್- ನಿಶ್ಚಯವಾಗಿ ಒಳ್ಳಿತ್ತಂ- ಒಳ್ಳೆಯದನ್ನು ಈಗೆ- ಕೊಡಲಿ
*ಗರುಡನ ಪರವಾದ ಅರ್ಥವು- ವಿನತಾ+ಆನಂದನಂ- ತಾಯಿಯಾದ ವಿನತೆಗೆ ಆನಂದವನ್ನು ಕೊಡುವವನು, ಧನದ- ಸಂಪತ್ತಿನ, ಧನದ ಪತಿ-ವಿಷ್ಣು, ಧನದಪತಿಪ್ರೀತಂ- ವಿಷ್ಣುವಿನಿಂದ ಪ್ರೀತಿಸಲ್ಪಡುತ್ತಿರುವವನು, ಈತಂ- ಇವನು ಘನನುಂ- ಘನನಾದವನೂ/ಶ್ರೇಷ್ಠನಾದವನೂ, ದ್ವಿಜಸಂಸ್ತುತನುಂ- ಎಲ್ಲ ಪಕ್ಷಿಗಳಿಂದ ಸ್ತುತಿಸಲ್ಪಟ್ಟವನೂ, ಮನನೀಯಂ- ಮನನವನ್ನು ಮಾಡಬೇಕಾದವನು, ವಿನಾಯಕಂ- ಪಕ್ಷಿಗಳ ನಾಯಕನಾದ ಗರುಡನು, ಸತ್ಪಕ್ಷಂ- ಒಳ್ಳೆಯ ರೆಕ್ಕೆಗಳುಳ್ಳವನು, ದಲ್- ನಿಶ್ಚಯವಾಗಿ ಒಳ್ಳಿತ್ತಂ- ಒಳ್ಳೆಯದನ್ನು ಈಗೆ- ಕೊಡಲಿ )

ಉ॥
ವ್ಯಾಸಮುನೀಂದ್ರರುಂದ್ರವಚನಂಗಳನಾಲಿಸಿ ಲೇಖಿಪಾಗಳೇ
ಭಾಸುರಶೂರ್ಪಕರ್ಣನೆನಿಸಿರ್ಪ ಗಣೇಶನೆ ಕಾಯ್ಗೆ ಕಬ್ಬಮಂ 
ಹಾಸದ ಮೂರ್ತಿ ರಾಗರಸದೀಪ್ತನಿಜಾಕೃತಿ ಹಸ್ತಿಮಸ್ತಕಂ
ಬೀಸುತೆ ಸೊಂಡಿಲಂ ನಗುತೆ ಮೆಚ್ಚುಗೆ ಕಾವ್ಯಮನೊಲ್ದು ಕೇಳುತುಂ ॥೨॥
(ಟೀ-ಪಂಪನ ಪದ್ಯವನ್ನು ಅನುಕರಿಸುತ್ತಿರುವ ಈ ಪದ್ಯದದಲ್ಲಿ ಗಣಪತಿಯ ಸ್ತುತಿಯಿದೆ.ಛಂದಸ್ಸು ಉತ್ಪಲಮಾಲಾವೃತ್ತ.
ವ್ಯಾಸಮುನೀಂದ್ರ-ವ್ಯಾಸಮಹರ್ಷಿಗಳ, ರುಂದ್ರ- ವಿಸ್ತಾರವಾದ, ವಚನಂಗಳಂ- ಮಾತುಗಳನ್ನು, ಆಲಿಸಿ- ಕೇಳಿ, ಲೇಖಿಪಾಗಳೇ- ಬರೆಯುತ್ತಿರುವಾಗಳೇ, ಭಾಸುರ- ಸುಂದರವಾದ, ಶೂರ್ಪಕರ್ಣಂ- ಅಗಲವಾದ ಮೊರದಂತಹ ಕಿವಿಯುಳ್ಳವನು, ಎನಿಸಿರ್ಪ- ಎಂದೆನಿಸಿರುವ, ಗಣೇಶನೆ- ಗಣಪತಿಯೆ, ಕಬ್ಬಮಂ-ಕಾವ್ಯವನ್ನು ಕಾಯ್ಗೆ-ಕಾಪಾಡಲಿ, ಹಾಸದ- ನಗೆಯ, ಮೂರ್ತಿ- ಮೂರ್ತಿಮತ್ತಾದ ರೂಪವಾದವನು, ರಾಗ- ಕೆಂಪಾದ/ಪ್ರೀತಿಯ, ರಸದೀಪ್ತ- ರಸದಿಂ ಕಾಂತಿಯುಳ್ಳ ನಿಜಾಕೃತಿ-ದೇಹವನ್ನು ಹೊಂದಿದವನು, ಹಸ್ತಿಮಸ್ತಕಂ- ಆನೆಯ ತಲೆಯನ್ನು ಹೊಂದಿರುವವನು, ಸೊಂಡಿಲಂ- ಸೊಂಡಿಲನ್ನು ಬೀಸುತೆ- ಬೀಸುತ್ತಾ, ನಗುತೆ- ನಗುತ್ತಾ, ಕಾವ್ಯಮಂ- ಈ ಕಾವ್ಯವನ್ನು, ಒಲ್ದು- ಒಲಿದು, ಕೇಳುತುಂ- ಕೇಳುತ್ತಾ ಮೆಚ್ಚುಗೆ- ಮೆಚ್ಚಿಕೊಳ್ಳಲಿ. ವ್ಯಾಸರು ಹೇಳುವಾಗ ಮಹಾಭಾರತವನ್ನು ಕೇಳುತ್ತಾ ಬರೆಯುವಾಗ ಗಣಪತಿಯ ಕಿವಿ ದೊಡ್ಡದಾಯಿತು ಎಂದು ಹೇಳುವ ಮೂಲಕ ಕಾವ್ಯಲಿಂಗಾಲಂಕಾರವಿದೆ.)

ಉ॥ ಆವಳ ಮಾಲೆಯಕ್ಷರಮೊ ಹಸ್ತದೆ ಪುಸ್ತಕಮಿರ್ಪುದೋ ನೆಗ-
ೞ್ದಾವಳ ತಾಣಮಾದಿಕವಿಯಿರ್ಪೆಡೆಯೋ ರಸಮಕ್ಷಿಯುಗ್ಮಮೋ
ಆವಳ ದೃಷ್ಟಿಪಾತಮದೆ ಚಿತ್ರಮೊ ಸೊಲ್ಗಳೆ ಕಾವ್ಯಮಾದುದೋ
ಭಾವಿಸಿ ತೋರ್ಕೆ ಆಕೆ ಪದಪದ್ಧತಿಯಂ ಕವಿ ಮಾರ್ಗಗಾಮಿಗಂ ॥೩॥
(ಟೀ-ಈ ಪದ್ಯದಲ್ಲಿ ಸರಸ್ವತಿಯ ಸ್ತುತಿಯಿದೆ. ಉತ್ಪಲಮಾಲಾವೃತ್ತ
ಆವಳ- ಯಾರ, ಮಾಲೆಯು- ಕೊರಳಲ್ಲಿ ತೊಟ್ಟ ಹಾರವು, ಅಕ್ಷರಮೊ- ನಾಶವಾಗದ್ದೋ/ ಅಕ್ಷರಗಳೋ, ಹಸ್ತದೆ- ಕೈಯಲ್ಲಿ, ಪುಸ್ತಕಂ- ಪುಸ್ತಕವು, ಇರ್ಪುದೋ- ಇರುವುದೋ, ನೆಗೞ್ದ- ಪ್ರಸಿದ್ಧಳಾದ, ಆವಳ- ಯಾರ ತಾಣಂ- ಇರುವ ಸ್ಥಾನವು, ಆದಿಕವಿ- ಆದಿಕವಿಗಳು/ಬ್ರಹ್ಮನು ಇರ್ಪ- ಇರುವ ಎಡೆಯೋ-ಸ್ಥಳವೋ, ರಸಂ- ನವರಸಗಳು/ನೀರು, ಅಕ್ಷಿಯುಗ್ಮಮೋ- ಎರಡು ಕಣ್ಣುಗಳೋ, ಆವಳ- ಯಾರ, ದೃಷ್ಟಿಪಾತಂ- ಕಣ್ಣೋಟವು, ಅದೆ-ಅದುವೇ ಚಿತ್ರಮೊ- ಚಿತ್ರವಾದುದೋ/ ಆಶ್ಚರ್ಯವನ್ನು ಕೊಡುವುದೋ, ಸೊಲ್ಗಳೆ- ಮಾತುಗಳೆ, ಕಾವ್ಯಂ- ಕವಿತೆಯು/ಮಹಾಕಾವ್ಯಗಳು ಆದುದೋ- ಆಗಿವೆಯೋ, ಭಾವಿಸಿ- ಯೋಚಿಸಿ, ಆಕೆ- ಅವಳು, ಪದಪದ್ಧತಿಯಂ- ಹೆಜ್ಜೆಯನ್ನಿಡುವ ಮಾರ್ಗವನ್ನು/ ಶಬ್ದಗಳನ್ನು ಇಡುವ ರೀತಿಯನ್ನು ಕವಿಮಾರ್ಗಗಾಮಿಗಂ- ಕವಿಗಳ ಮಾರ್ಗದಲ್ಲಿ ಹೋಗುತ್ತಿರುವವನಿಗೆ(ಈ ಕವಿಗೆ) ತೋರ್ಕೆ- ತೋರಿಸಲಿ)

ಕಂ॥ ಕಮನೀಯಾಲಂಕಾರ
ಕ್ರಮದಿಂದಂ ಮೆರೆಯುತಿರ್ಪ ತ್ರಿಗುಣದಿನೇಗಳ್
ದ್ಯುಮಣಿಪ್ರಭೆಯನೊಡರ್ಚುತೆ 
ಸುಮನಃಪ್ರಿಯಮಕ್ಕೆ ಪದ್ಯನಿಕರಂ ಸುಕರಂ ॥೪॥
(ಟೀ- ಕಮನೀಯ- ಸುಂದರವಾದ, ಅಲಂಕಾರಕ್ರಮದಿಂದಂ- ಉಪಮಾ ಮೊದಲಾದ ಅಲಂಕಾರಗಳಿಂದ ಮೆರೆಯುತಿರ್ಪ- ಮೆರೆಯುತ್ತಿರುವ, ತ್ರಿಗುಣದಿಂ- ಓಜಃಪ್ರಸಾದಮಾಧುರ್ಯ ಎಂಬ ಕಾವ್ಯದ ಮೂರು ಗುಣಗಳಿಂದ ಕೂಡಿರುವ ಏಗಳ್- ಯಾವತ್ತೂ, ದ್ಯುಮಣಿಪ್ರಭೆ- ಸೂರ್ಯನ ಕಾಂತಿಯನ್ನು ಒಡರ್ಚುತೆ- ಹೊಮ್ಮಿಸುತ್ತ/ನೀಡುತ್ತ, ಸುಕರಂ- ಸುಲಭವಾದ, ಪದ್ಯನಿಕರಂ- ಈ ಪದ್ಯಗಳ ಗುಂಪು, ಸುಮನಃಪ್ರಿಯಂ- ಒಳ್ಳೆಯ ಮನಸ್ಸುಳ್ಳ ರಸಿಕರಿಗೆ/ದೇವತೆಗಳಿಗೆ ಪ್ರಿಯಂ- ಪ್ರಿಯವಾದುದ್ದು ಅಕ್ಕೆ- ಆಗಲಿ. ಛಂದಸ್ಸು ಕಂದಪದ್ಯ)

ಮ॥ ಮುನಿವಂ ಶಾಸ್ತ್ರಿಗೆ ಶಾಸ್ತ್ರಿಯಂತೆ ಮುನಿಗಂ ಮೌನೀಂದ್ರನೆಂಬರ್ ಮಗುಳ್
ಮುನಿವರ್ ಮತ್ಸರದಿಂ ಕಲಾವಿದರುಮಂತೇಗಳ್ ಪೆರರ್ ಪೆರ್ಚಿರಲ್
ಮನನೀಯಂ ಕವಿಯಂತೆಯಲ್ತೆ!ಪೆರತಾಗಿರ್ಕುಂ ಮದೀಯಂ ಕ್ರಮಂ
ಘನಕಾವ್ಯಂ ರಚಿಸಲ್ಕೆ ನೇಹದೊಳಗೇ ಸಂದಿರ್ಪುದೋ ಸ್ಪರ್ಧೆಯೇ! ॥೫॥
(ಟೀ-ಶಾಸ್ತ್ರಿಗೆ-ಶಾಸ್ತ್ರವನ್ನು ಬಲ್ಲವನನ್ನು ಕಂಡು ಶಾಸ್ತ್ರಿಯು- ಇನ್ನೊಬ್ಬ ಶಾಸ್ತ್ರವನ್ನು ಬಲ್ಲವನು ಮುನಿವಂ- ಮುನಿಸಿಕೊಳ್ಳುತ್ತಾನೆ,ಅಂತೆ-ಹಾಗೆಯೇ, ಮುನಿಗಂ- ಋಷಿಯನ್ನು ಕಂಡು, ಮೌನೀಂದ್ರಂ- ಇನ್ನೊಬ್ಬ ಮುನೀಂದ್ರನು (ಮುನಿವಂ- ಮುನಿಸಿಕೊಳ್ಳುತ್ತಾನೆ) ಎಂಬರ್- ಎನ್ನುತ್ತಾರೆ. ಮಗಳ್- ಮತ್ತೆ, ಮತ್ಸರದಿಂ- ಮತ್ಸರದಿಂದ, ಕಲಾವಿದರುಂ- ಕಲಾವಿದರೂ ಕೂಡ ಅಂತೆ- ಹಾಗೆಯೇ ಏಗಳ್- ಯಾವಾಗಳೂ ಮುನಿವರ್- ಮುನಿಸಿಕೊಳ್ಳುತ್ತಾರೆ. ಪೆರರ್- ಬೇರೆಯವರು, ಪೆರ್ಚಿರಲ್- ಹೆಚ್ಚಾಗಿರುವಾಗ,ಮನನೀಯಂ- ಮನನಕ್ಕೆ ಯೋಗ್ಯನಾದ, ಕವಿಯು-ಸಾಹಿತಿಯು/ಕಾವ್ಯವನ್ನು ರಚಿಸುವವನು, ಅಂತೆ- ಹಾಗೆಯೇ ಅಲ್ತೆ- ಅಲ್ಲವೇ? ಮದೀಯಂ- ನನ್ನದಾದ ಕ್ರಮಂ- ಈ ವಿಧವು, ಪೆರತು- ಬೇರೆಯದೇ, ಆಗಿರ್ಕುಂ- ಆಗಿದೆ. ಘನಕಾವ್ಯಂ+ರಚಿಸಲ್ಕೆ- ಘನವಾದ ಕಾವ್ಯವನ್ನು(ಕ್ರಿಯಾ ಸಮಾಸದಿಂದ ವಿಭಕ್ತಿಪಲ್ಲಟವಾಗಿದೆ) ರಚಿಸಲು, ನೇಹದೊಳಗೇ- ಸ್ನೇಹದಲ್ಲಿಯೇ ಸ್ಪರ್ಧೆಯೇ- ಪಂದ್ಯವೇ, ಸಂದಿರ್ಪುದೋ- ಸಂದಿರುವುದೋ! ಬಂದಿದೆಯೋ!
ಒಬ್ಬ ಕವಿಯನ್ನು ಕಂಡು ಇನ್ನೊಬ್ಬ ಕವಿಯು ಮಾತ್ಸರ್ಯದಿಂದ ಮುನಿಸಿಕೊಳ್ಳುತ್ತಾನೆ ಎಂಬುದು ಲೋಕರೂಢಿಯಾದರೆ ನನ್ನ ವಿಷಯದಲ್ಲಿ ಸ್ನೇಹದಿಂದಲೇ ಈ ಕಾವ್ಯರಚನೆಗೆ ಸ್ಪರ್ಧೆಯು ಸಂದಿರುವುದು ವಿಶೇಷವಾಗಿದೆ- ಎಂಬುದು ಪದ್ಯದ ತಾತ್ಪರ್ಯ, ಮತ್ತೇಭವಿಕ್ರೀಡಿತವೃತ್ತ)

ಮ॥ ಬೆರೆಯುತ್ತಾಶುಕವಿತ್ವಗೋಷ್ಠಿಯೊಳಗಂ ಸಪ್ತಾಹದೊಳ್ ಸರ್ವರುಂ
ವರಮಿತ್ರರ್ ಸಲೆ ರಾಮಚಂದ್ರರ ಗೃಹಂ ತಾನಾಶ್ರಯಂ ಸಂದಿರಲ್
ದೊರೆಕೊಂಡಿರ್ಪ ಶತಾವಧಾನಿಗಳುಮಂತನ್ಯರ್ಕಳಲ್ಲಿರ್ದೊಡಂ
ಪರಮೋತ್ಸಾಹದೆ ಪದ್ಯಪಾನಮೆನಿಸಿರ್ಕುಂ ಭವ್ಯಕಾವ್ಯೋತ್ಸವಂ ॥೬॥
(ಟೀ- ಸಪ್ತಾಹದೊಳ್- ವಾರದಲ್ಲಿ ಒಮ್ಮೆ, ಸರ್ವರುಂ- ಎಲ್ಲರೂ, ವರಮಿತ್ರರ್- ಆಪ್ತರಾದ ಮಿತ್ರರು, ಆಶುಕವಿತ್ವಗೋಷ್ಠಿಯೊಳಗಂ- ಆಶುಕವಿತಾಗೋಷ್ಠಿಯಲ್ಲಿ, ಬೆರೆಯುತ್ತ- ಸೇರಿಕೊಳ್ಳುತ್ತ, ಸಲೆ- ಸಲ್ಲುತ್ತಿರಲು, ರಾಮಚಂದ್ರರ ಗೃಹಂ- ಕೆ.ಬಿ.ಎಸ್ ರಾಮಚಂದ್ರ ಎಂಬುವವರ ಮನೆಯು,  ತಾಂ- ತಾನು, ಆಶ್ರಯಂ- ಆಶ್ರಯವಾಗಿ, ಸಂದಿರಲ್- ಸಂದಿರುವಾಗ, ದೊರೆಕೊಂಡಿರ್ಪ- ಪ್ರಸಿದ್ಧರಾದ, ಶತಾವಧಾನಿಗಳುಂ- ಶತಾವಧಾನಿ ಡಾ। ಆರ್ ಗಣೇಶರೂ, ಅಂತು- ಹಾಗೆ, ಅನ್ಯರ್ಕಳುಂ- ಅನ್ಯರೂ, ಅಲ್ಲಿ-ಅವರ ಮನೆಯಲ್ಲಿ ಇರ್ದೊಡಂ- ಇದ್ದಿರಲು,ಪರಮೋತ್ಸಾಹದೆ- ಬಹಳ ಉತ್ಸಾಹದಲ್ಲಿ, ಭವ್ಯಕಾವ್ಯೋತ್ಸವಂ- ಭವ್ಯವಾದ ಕವಿತೆಯ ಹಬ್ಬವೇ ಆಗಿ, ಪದ್ಯಪಾನಂ- ಪದ್ಯಪಾನ(ಪದ್ಯವನ್ನು ಕುಡಿಯುವುದು) ಎನಿಸಿರ್ಕುಂ- ಎಂದೆನಿಸಿದೆ. ಮತ್ತೇಭವಿಕ್ರೀಡಿತವೃತ್ತ.
    ಪದ್ಯಪಾನ ಎಂಬ ಕಬ್ಬಿಗರ ಗೋಷ್ಠಿಯು ಭವ್ಯವಾದ ಕಾವ್ಯೋತ್ಸವವೇ ಆಗಿದೆ. ವಿಜಯನಗರದ ಶ್ರೀಕೃಷ್ಣದೇವರಾಯನ ಆಸ್ಥಾನದಲ್ಲಿತ್ತು ಎನ್ನಲಾದ ಭುವನವಿಜಯವೇ ಮೊದಲಾದ ಐತಿಹಾಸಿಕವಾಗಿ ಮಹತ್ತ್ವವುಳ್ಳ, ರಾಜಾಸ್ಥಾನಗಳಲ್ಲಿ ನಡೆಯುತ್ತಿದ್ದ ಕವಿಗೋಷ್ಠಿಗಳಿಗೆ ಸಾಟಿಯಾಗುವಂತೆ ಪದ್ಯಪಾನದ ಕವಿಗೋಷ್ಠಿಯೂ ನಡೆಯುತ್ತಿರುವುದು ವಿಶೇಷ. ಕೆ.ಬಿ.ಎಸ್ ರಾಮಚಂದ್ರ ಅವರ ಮನೆಯಲ್ಲಿ ಇದು ನಿರಂತರವಾಗಿ ಪ್ರತಿ ವಾರವೂ ನಡೆಯುತ್ತ ಸುಮಾರು ಮುನ್ನೂರು ಗೋಷ್ಠಿಗಳನ್ನು ಸಮೀಪಿಸಿದೆ. ಇಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಆಶುವಾಗಿಯೇ ಕೊಟ್ಟ ವಸ್ತುವಿಗೆ ಪದ್ಯಗಳನ್ನು ಹೇಳುತ್ತಾ ಪ್ರತಿಯೊಬ್ಬರೂ ಕನಿಷ್ಠ ಸಾವಿರ ಪದ್ಯಗಳ ಹತ್ತಿರ ಆಶುವಾಗಿಯೇ ಹೇಳಿರುವುದೂ ಅಲ್ಲದೇ ಉಳಿದ ವಿದ್ಯಾವಿನೋದಗಳೂ ಅಸಾಮಾನ್ಯವಾಗಿ ನಡೆಯುತ್ತಿರುತ್ತದೆ. ಒಂದೊಂದು ವಸ್ತುವಿಗೇ ಅನೇಕ ಪದ್ಯಗಳನ್ನು ವಿವಿಧಚ್ಛಂದಸ್ಸುಗಳಲ್ಲಿ ನಿರ್ಮಾಣ ಮಾಡುವ ಈ ಆಪ್ತವಾದ ಮಿತ್ರರಿಂದಲೇ ಕೂಡಿರುವ ಕವಿಗೋಷ್ಠಿಯ ವೈಭವವು ಯಾವುದೇ ಕವಿಗೋಷ್ಠಿಗಳನ್ನೂ ಮೀರಿಸುವುದು ಅತಿಶಯವೇನಲ್ಲ. ಕನ್ನಡದಲ್ಲಿ ದಾಖಲೆಯಲ್ಲಿ ಸಿಗಬಹುದಾದ ಮೊದಲ ಗೋಷ್ಠಿಯೂ ಇದೇ ಎಂದೆನ್ನಬಹುದು. ಅಲ್ಲದೇ ಇಲ್ಲಿ ಸೇರುವ ಸ್ನೇಹಿತರಲ್ಲಿ ಅನೇಕರು ಗೋಷ್ಠಿಯ ಪದ್ಯಗಳಿಗಷ್ಟೇ ಮೀಸಲಾಗದೇ ವಿವಿಧ ವಿಷಯಗಳನ್ನು ಕುರಿತು ಸಕ್ರಿಯರಾಗಿ ಗದ್ಯಪದ್ಯಲೇಖನಕಾರ್ಯಗಳಲ್ಲಿಯೂ ತತ್ಪರರಾಗಿದ್ದಾರೆ)

ಮ॥ ಅದಱೊಳ್ ಸನ್ನುತನೀಲಕಂಠಕುಲಕರ್ಣಿಪ್ರಖ್ಯರೊಂದೊರ್ಮೆಗಂ
ಪದಪಿಂ ನೂತನಕಾವ್ಯಮಂ ವಿರಚಿಸಲ್ ಕೇಳ್ದರ್ ಗಡಾ ವಸ್ತುವಂ
ಮುದದಿಂ ಯೋಚಿಸಿ ವೈನತೇಯಕಥೆಯಂ ಪೇೞ್ದೆಂ ಬೞಿಕ್ಕಂ ಸ್ವಯಂ
ಹೃದಯಂಬೊಕ್ಕುದು ಪೇೞ್ವ ವಾಂಛೆಯದಱಿಂ ಚಿಂತಿಪ್ಪೊಡಂ ಚರ್ಚಿಸಲ್ ॥೭॥
ಮುದದಿಂದಿರ್ವರೊಳಾದುದಿಂತುಟೆನೆ ಪಂದ್ಯಂ ಪೇೞ್ವೊಡಂ ಕಬ್ಬಮಂ
ಸೊದೆವಾತಿಂದೆಸೆಯುತ್ತೆ ಲೇಖಿಪುದು ಮೇಣಿರ್ವರ್ ಬೞಿಕ್ಕಂ ನೆಗ
ೞ್ದೊದವಿರ್ಪಾ ಪಿರಿಯರ್ಗೆ ತೋರಿಪುದುಮೆಂದಿಂತಾಗಿರಲ್ಕಿಂತು  ನೋಂ
ತುದುಮಾದತ್ತು ವಿಚಿತ್ರಮಾದ ತೆಱದಿಂ ಕಾವ್ಯಪ್ರಿಯರ್ಗೊಪ್ಪುಗುಂ ॥೮॥ (ಯುಗ್ಮಕಂ)
(ಟೀ- ಅದಽಱೊಳ್-ಅದರಲ್ಲಿ/ ಪದ್ಯಪಾನ ಗೋಷ್ಠಿಯಲ್ಲಿ,  ಸನ್ನುತ-ಸನ್ನುತರಾದ/ ನುತಿಸಲು ಯೋಗ್ಯರಾದ ನೀಲಕಂಠ ಕುಲಕರ್ಣಿ ಪ್ರಖ್ಯರ್- ನೀಲಕಂಠ ಕುಲಕರ್ಣಿ ಎಂಬ ಹೆಸರಿನವರು,  ಒಂದೊರ್ಮೆಗಂ-ಒಂದೊಮ್ಮೆಗೆ, ಪದಪಿಂ-ಚೆನ್ನಾಗಿ, ನೂತನಕಾವ್ಯಮಂ-ಹೊಸದಾದ ಕಾವ್ಯವನ್ನು, ವಿರಚಿಸಲ್- ಬರೆಯುವುದಕ್ಕೆ, ವಸ್ತುವಂ- ವಸ್ತುವನ್ನು, ಕೇಳ್ದರ್ ಗಡಾ- ಕೇಳಿದರು, ಮುದದಿಂ- ಸಂತೋಷದಿಂದ, ಯೋಚಿಸಿ- ಆಲೋಚಿಸಿ ವೈನತೇಯಕಥೆಯಂ- ಗರುಡನ ಕಥೆಯನ್ನು, ಪೇೞ್ದೆಂ- ಹೇಳಿದೆನು,  ಬೞಿಕ್ಕಂ- ಆ ಬಳಿಕ, ಸ್ವಯಂ- ಸ್ವತಃ/ನಾನೇ, ಪೇೞ್ವ-ಹೇಳುವ, ವಾಂಛೆ-ಆಸೆಯು, ಹೃದಯಂಬೊಕ್ಕುದು(ಹೃದಯಂ+ಪೊಕ್ಕುದು-ಕ್ರಿಯಾಸಮಾಸ)- ಹೃದಯವನ್ನು ಹೊಕ್ಕಿತ್ತು. ಅದಱಿಂ- ಆ ಕಾರಣದಿಂದ, ಚಿಂತಿಪ್ಪೊಡಂ-ಚಿಂತಿಸುತ್ತಿರಲು, ಚರ್ಚಿಸಲ್-ಚರ್ಚಿಸಲು, ಮುದದಿಂದೆ- ಸಂತೋಷದಿಂದ, ಇರ್ವರೊಳ್-ಇಬ್ಬರಲ್ಲೂ, ಇಂತುಟು-ಹೀಗೆ, ಪಂದ್ಯಂ- ಸ್ಪರ್ಧೆಯು, ಆದುದು-ಆಗಿದೆ, ಎನೆ-ಎನ್ನಲು (ಅದನ್ನು) ಪೇೞ್ವೊಡಂ-ಹೇಳುವುದಾದರೆ, ಕಬ್ಬಮಂ- ಕಾವ್ಯವನ್ನು, ಸೊದೆವಾತಿಂದೆ-ಅಮೃತಸಮಾನವಾದ ಮಾತಿನಿಂದ, ಎಸೆಯುತ್ತೆ-ಶೋಭಿಸುತ್ತಾ, ಲೇಖಿಪುದು- ಬರೆಯುವುದು, ಮೇಣ್-ಮತ್ತೆ, ಇರ್ವರ್-ಇಬ್ಬರೂ, ಬೞಿಕ್ಕಂ-ಬಳಿಕದಲ್ಲಿ ನೆಗೞ್ದು ಒದವಿರ್ಪ-ಪ್ರಸಿದ್ಧರಾಗಿ ಒದಗಿರುವ, ಪಿರಿಯರ್ಗೆ-ಹಿರಿಯರಿಗೆ, ತೋರಿಪುದುಂ-ತೋರಿಸುವುದೂ, ಎಂದು-ಎಂದು, ಇಂತು-ಹೀಗೆ, ಆಗಿರಲ್-ಆಗಿರಲು, ಇಂತು-ಹೀಗೆ, ನೋಂತುದುಂ- ವ್ರತತೊಟ್ಟಿರುವುದೂ, ಆದತ್ತು-ಆಗಿತ್ತು. ವಿಚಿತ್ರಂ ಆದ- ವಿಚಿತ್ರವಾದ ತೆಱದಿಂ- ರೀತಿಯಲ್ಲಿ, ಕಾವ್ಯಪ್ರಿಯರ್ಗೆ- ಕಾವ್ಯವನ್ನು ಪ್ರೀತಿಸುವವರಿಗೆ ಒಪ್ಪುಗುಂ- ಒಪ್ಪುತ್ತದೆ.
ಯುಗ್ಮಕವು ಎರಡು ಪದ್ಯಗಳೂ ಸೇರಿ ಒಂದು ಸಂಪೂರ್ಣವಾದ ಅರ್ಥವನ್ನು ಕೊಡುವ ಪದ್ಯಗುಚ್ಛವು. ಇದು ಮತ್ತೇಭವಿಕ್ರೀಡಿತ ವೃತ್ತ.)

ಕಂ॥ ಕೞೆದುದು ವರ್ಷಮೆ ಬೞಿಕದೊ
ಳೞಿದುದುಮೀ ಕಾವ್ಯರಚನೆಯಾಯೋಜನೆಯುಂ 
ಮೊಳೆತುದು ಮಂಜಂ ದೊರೆಕೊಳೆ
ಕೆಳೆಯರ್ ಜತೆಯಾಗಲಸದಳಂ ಮೇಣೊಳವೇ ॥೯॥
(ಟೀ- ವರ್ಷಮೆ-ಒಂದು ವರ್ಷವೇ, ಕೞೆದುದು-ಕಳೆದಿತ್ತು, ಬೞಿಕದೊಳ್- ಆ ಬಳಿಕ, ಈ ಕಾವ್ಯರಚನೆಯ- ಈ ಕಾವ್ಯವನ್ನು ಬರೆಯುವ, ಆಯೋಜನೆಯುಂ- ಆಯೋಜನೆಯೂ, ಅೞಿದುದುಂ- ನಾಶವಾಗಿರುವುದೂ, ಮಂಜಂ- ಇನ್ನೊಬ್ಬ ಸ್ನೇಹಿತನಾದ ಮಂಜನು, ದೊರೆಕೊಳೆ- ದೊರೆಯಲು, ಮೊಳೆತುದು- ಚಿಗುರಿತು. ಕೆಳೆಯರ್- ಗೆಳೆಯರು, ಜತೆಯಾಗಲ್- ಜೊತೆಗೆ ಸೇರಲು, ಅಸದಳಂ- ಅಸಾಧ್ಯವಾದದ್ದು, ಮೇಣ್- ಮತ್ತೆ, ಒಳವೇ- ಇದೆಯೇ! ಕಂದಪದ್ಯ, ಅರ್ಥಾಂತರನ್ಯಾಸಾಲಂಕಾರ.)

ಕಂ॥ ಇರ್ವರುಮುತ್ತಮಕವಿಗಳ್
ಚಾರ್ವಾಖ್ಯಾನಪ್ರಪಂಚಸಂಕ್ರಮಣಾಧ್ವ-
ಕ್ಕುರ್ವೀತಳದೊಳ್ ನೇಹಿಗ-
ರಿರ್ವರಿಗಿಂ ಲೇಸು ಮೂವರೆನೆ ದೊರೆಕೊಂಡರ್॥೧೦॥
(ಟೀ- ಇರ್ವರುಂ-ಇಬ್ಬರೂ ಉತ್ತಮಕವಿಗಳ್-ಒಳ್ಳೆಯ ಕವಿಗಳು, ಚಾರ್ವಾಖ್ಯಾನಪ್ರಪಂಚಸಂಕ್ರಮಣಾಧ್ವಕ್ಕೆ-(ಚಾರು+ಆಖ್ಯಾನ-ಸುಂದರವಾದ ಕಥೆಯ- ಪ್ರಪಂಚ-ವಿಸ್ತಾರದಲ್ಲಿ/ಜಗತ್ತಿನಲ್ಲಿ, ಸಂಕ್ರಮಣ- ಚಲಿಸುವ- ಅಧ್ವಕ್ಕೆ- ದಾರಿಗೆ) ಒಳ್ಳೆಯ ಕಥೆಯನ್ನು ಹೇಳುವ ವಿಸ್ತಾರವಾದ ಜಗತ್ತಿನಲ್ಲಿ ನಡೆಯುವ ದಾರಿಯಲ್ಲಿ,  ಉರ್ವೀತಳದೊಳ್-ಭೂಮಿಯಲ್ಲಿ, ನೇಹಿಗರ್-ಸ್ನೇಹಿತರು, ಇರ್ವರಿಗಿಂ-ಇಬ್ಬರಿಗಿಂತ, ಮೂವರ್-ಮೂವರು ಲೇಸು-ಲೇಸು/ಮೇಲು, ಎನೆ-ಎನ್ನಲು/ಎಂಬಂತೆ, ದೊರೆಕೊಂಡರ್- ದೊರಕಿದ್ದರು. ಕಂದಪದ್ಯ)

ಕಂ॥ ಬರೆದರ್ ಕಬ್ಬಂಗಳನಿವ-
ರೊರೆದರ್ ಬಹುವಿಧದೆ ರುಚಿರಭಾಷೆಯೊಳೀಗಳ್
ದೊರೆಕೊಳೆ ಸ್ಪರ್ಧಾರುಚಿಯಿಂ
ತರುಣತೆವೆತ್ತಿರ್ಪ ಮನಕೆ ಸಾಜಮಿದಲ್ತೇ ॥೧೧॥
(ಟೀ- ಇವರ್-ಇವರು, ಕಬ್ಬಂಗಳಂ-ಕಾವ್ಯಗಳನ್ನು ಬರೆದರ್-ಬರೆದವರು, ಬಹುವಿಧದೆ- ಬಹಳ ರೀತಿಯಲ್ಲಿ ರುಚಿರಭಾಷೆಯೊಳ್- ಸುಂದರವಾದ ಭಾಷೆಯಲ್ಲಿ ಒರೆದರ್- ಹೇಳಿದವರು, ಈಗಳ್- ಈಗ ಸ್ಪರ್ಧಾರುಚಿಯಿಂ- ಸ್ಪರ್ಧಿಸುವ ಆಸಕ್ತಿಯಿಂದ ದೊರೆಕೊಳೆ- ದೊರೆತಿರಲು, ತರುಣತೆವೆತ್ತಿರ್ಪ(ತರುಣತೆ+ಪೆತ್ತಿರ್ಪ)- ಯೌವನವನ್ನು ಹೊಂದಿರುವ,  ಮನಕೆ- ಮನಸ್ಸಿಗೆ, ಸಾಜಂ- ಸಹಜವಾದದ್ದು, ಇದು+ಅಲ್ತೇ- ಇದಲ್ಲವೇ! ಕಂದಪದ್ಯ)

ಕಂ॥ ಪಾತ್ರಪ್ರಪಂಚವಿಸ್ತರ-
ಸೂತ್ರಮುಮಂ ಪೇೞ್ದನಲ್ತೆ ಮಂಜಂ ನೋಡಲ್
ಮೈತ್ರಿಯ ಕೊಳುಗುಳದೊಳಗಡೆ
ವೇತ್ರಮುಮಂ ನೀೞ್ದು ಕಾದುವರ್ಕಳುಮೊಳರೇ ॥೧೨॥
(ಟೀ- ಪಾತ್ರ-ಪ್ರಪಂಚ-ವಿಸ್ತರ-ಸೂತ್ರಮುಮಂ- ಪಾತ್ರಗಳ ಪ್ರಪಂಚವನ್ನು ವಿಸ್ತರಿಸುವ ಕಥೆಯ ಸೂತ್ರವನ್ನು ಮಂಜಂ-ಮಂಜನು, ಪೇೞ್ದಂ+ಅಲ್ತೆ-ಹೇಳಿದನಲ್ಲವೇ!  ನೋಡಲ್-ನೋಡಿದರೆ, ಮೈತ್ರಿಯ-ಗೆಳೆತನದ/ಸ್ನೇಹದ ಕೊಳುಗುಳದೊಳಗಡೆ-ಯುದ್ಧದೊಳಗೆ/ಕಲದದೊಳಗೆ ವೇತ್ರಮುಮಂ-ಬೆತ್ತವನ್ನೂ(ಆಯುಧವನ್ನೂ) ನೀೞ್ದು-ಕೊಟ್ಟು ಕಾದುವರ್ಕಳುಂ-ಹೋರಾಡುವವರೂ, ಒಳರೇ-ಇದ್ದಾರೆಯೇ! ಕಂದಪದ್ಯ)

ಮ.ಸ್ರ॥ ಕೃತಿಯಂ ಪೇೞಲ್ಕೆನುತ್ತುಂ ನುಡಿಸಲೆನುತೆ ಮೇಣ್ ನೋಂತರೆಂತೋ ಸ್ವಯಂ ಭೂ
ಪತಿಗಳ್ ಪಿಂತಂತುಟೇ ದಲ್ ಕವಿಗಳುಮವರಂ ಕಾಣೆನಾಂ ಕಂಡೆನೀಗಳ್
ಹಿತದಿಂದಂ ಮೇಣ್ ವಿನೋದಂಬುಗುವ ನುಡಿಯೊಳೀ ಪದ್ಯಪಾನಕ್ಕೆ ನಿಚ್ಚಂ
ಸ್ತುತರಾಗಿರ್ಪರ್ ಗೃಹಸ್ಥರ್ ಮೆಱೆದಪರಿವರೇ ಕಾಂಚನಾರಾಮಚಂದ್ರರ್ ॥೧೩॥
(ಟೀ-ಪಿಂತೆ- ಹಿಂದೆ, ಎಂತೋ-ಹೇಗೋ, ಕೃತಿಯಂ-ಕಾವ್ಯವನ್ನು, ಪೇೞಲ್ಕೆ- ಹೇಳುವುದಕ್ಕೆ, ಎನುತ್ತುಂ- ಎಂದು, ಮೇಣ್-ಮತ್ತೂ ನುಡಿಸಲ್- ಹೇಳಿಸುವುದಕ್ಕೆ, ಎನುತೆ-ಎಂದು,  ಸ್ವಯಂ- ಸ್ವತಃ, ಭೂಪತಿಗಳ್ - ರಾಜರು, ಅಂತುಟೇ- ಹಾಗೆಯೇ ದಲ್- ನಿಶ್ಚಯವಾಗಿ ಕವಿಗಳುಂ- ಕವಿಗಳೂ ನೋಂತರ್- ವ್ರತತೊಟ್ಟರು, ಅವರಂ-ಅಂತಹ ಅವರನ್ನು,ಆಂ-ನಾನು, ಕಾಣೆಂ- ಕಾಣಲಿಲ್ಲ, ಈಗಳ್- ಈಗ, ಕಂಡೆಂ-ನೋಡಿದೆ. ಹಿತದಿಂದಂ- ಹಿತವಾಗಿಯೂ, ಮೇಣ್-ಹಾಗೂ, ವಿನೋದಂಬುಗುವ(ವಿನೋದಂ+ಪುಗುವ)- ವಿನೋದವನ್ನು ಉಕ್ಕಿಸುವ, ನುಡಿಯೊಳ್-ಮಾತಿನಲ್ಲಿ, ಈ ಪದ್ಯಪಾನಕ್ಕೆ- ಪದ್ಯಪಾನವೆಂಬ ನಮ್ಮ ಈ ಗೋಷ್ಠಿಗೆ, ನಿಚ್ಚಂ-ನಿತ್ಯವೂ, ಸ್ತುತರ್- ಸ್ತುತಿಸಲು ಅರ್ಹರಾದವರು, ಆಗಿರ್ಪರ್- ಆಗಿದ್ದಾರೆ, ಗೃಹಸ್ಥರ್-ಗೃಹಸ್ಥರಾಗಿ, ಮೆಱೆದಪರ್- ಮೆರೆಯುತ್ತಿರುವ, ಇವರೇ-ಇವರೇ, ಕಾಂಚನಾರಾಮಚಂದ್ರರ್- ಶ್ರೀಮತಿ ಕಾಂಚನಾ ಹಾಗೂ ಕೆ.ಬಿ.ಎಸ್ ರಾಮಚಂದ್ರ ದಂಪತಿಗಳು. ಮಹಾಸ್ರಗ್ಧರಾವೃತ್ತ)

ಕಂ॥ ಎನಗಂ ವಾತ್ಸಲ್ಯಮನಿ-
ತ್ತನುದಿನಮುಂ ಕಾವ್ಯಪಥದೆ ಬಳೆಸಿದರವರಂ
ನೆನೆವೆಂ ಕಾವ್ಯಕ್ರಮದೊಳ-
ಗಿನಿತಾನುಂ ಋಣದ ಮುಕ್ತಿ ದೊರಕುಗೆ ಬಾೞೊಳ್॥೧೪॥
(ಟೀ-ಎನಗಂ- ನನಗೆ, ವಾತ್ಸಲ್ಯಮಂ- ವಾತ್ಸಲ್ಯವನ್ನು/ ವತ್ಸನೆಂಬಂತೆ ಆದರವನ್ನು, ಇತ್ತು-ನೀಡಿ,  ಅನುದಿನಮುಂ-ಪ್ರತಿದಿನವೂ, ಕಾವ್ಯಪಥದೆ-ಕಾವ್ಯವೆಂಬ ಮಾರ್ಗದಲ್ಲಿ, ಬಳೆಸಿದರ್-ಬೆಳೆಸಿದವರಾದ, ಅವರಂ- ಈ ದಂಪತಿಗಳನ್ನು, ಕಾವ್ಯಕ್ರಮದೊಳಗೆ-ಈ ಪದ್ಯದಲ್ಲಿ, ನೆನೆವೆಂ-ನೆನೆಸಿಕೊಳ್ಳುತ್ತೇನೆ, ಬಾೞೊಳ್-ಬದುಕಿನಲ್ಲಿ ಇನಿತಾನುಂ-ಇಷ್ಟಾದರೂ, ಋಣದ-ಋಣದಿಂದ/ಸಾಲದಿಂದ ಮುಕ್ತಿ- ಬಿಡುಗಡೆ, ದೊರಕುಗೆ-ಸಿಗಲಿ. ಕಂದಪದ್ಯ)

ಔ॥ ಅವಿಲಂಬಸರಸ್ವತೀವಧೂಟೀ
ಸ್ತವನೀಯಾಕೃತಿ ಪುಂಸ್ತ್ವರೂಪಮಾನಲ್
ಕವಿರಾಗರೆನಿಪ್ಪರಲ್ತೆ ವಂದ್ಯರ್
ತವೆ ಸರ್ವಸ್ವಕಲಾವಿಶೇಷವಿಜ್ಞರ್ ॥೧೫॥
(ಟೀ-ಅವಿಲಂಬಸರಸ್ವತೀವಧೂಟೀಸ್ತವನೀಯಾಕೃತಿ- (ಅವಿಲಂಬ- ವಿಳಂಬವಿಲ್ಲದ/ ತಡವಿಲ್ಲದ ಸರಸ್ವತೀವಧೂಟೀ- ಶಾರದಾ ದೇವಿಯ/ ವಾಗ್ದೇವಿಯ, ಸ್ತವನೀಯ+ಆಕೃತಿ-ಸ್ತುತ್ಯರ್ಹವಾದ ಆಕೃತಿ) ತಡವಿಲ್ಲದೇ ಆಶುವಾಗಿ ಪದ್ಯರಚನಾಕೌಶಲವಿರುವ ಸರಸ್ವತಿಯ ಸ್ತುತ್ಯರ್ಹವಾದ ಆಕೃತಿಯು,  ಪುಂಸ್ತ್ವರೂಪಂ- ಪುರುಷನ ರೂಪವನ್ನು, ಆನಲ್- ಹೊಂದಲು, ಕವಿ ರಾಗರ್- ಕವಿಗಳಾದ ಶತಾವಧಾನಿ (ರಾ.ಗ) ರಾ ಗಣೇಶರು, ಎನಿಪ್ಪರ್- ಎನಿಸುತ್ತಾರೆ ಅಲ್ತೆ-ಅಲ್ಲವೇ! ವಂದ್ಯರ್- ವಂದ್ಯರಾದ ಇವರು, ತವೆ- ಲೋಪವಿಲ್ಲದೇ, ಸರ್ವಸ್ವಕಲಾವಿಶೇಷವಿಜ್ಞರ್- ಎಲ್ಲ ಕಲೆಗಳ ವಿಶೇಷತೆಯನ್ನು ಬಲ್ಲವರಾಗಿದ್ದಾರೆ. ಇದು ಕನ್ನಡದಲ್ಲಿ ವಿರಳವಾಗಿರುವ ಔಪಚ್ಛಂದಸಿಕ ಎಂಬ ಅರ್ಧಸಮವೃತ್ತ )

ವಿ॥ ಅವರಾದ್ಯರಿರಲ್ಕೆ ಗೊಟ್ಟಿಯೊಳ್
ಕವನಂಗಳ್ ಮಿಗೆ ಬರ್ಪುದೆಲ್ಲರಿಂ
ಜವದಿಂದುಲಿಯಲ್ಕೆ ಸಲ್ಲದೇ
ನವೆದಿರ್ದೆಂ ಬಹುಕಾಲದಿಂದಮಾಂ ॥೧೬॥
(ಟೀ-ಅವರ್-ಅವರು, ಗೊಟ್ಟಿಯೊಳ್- ಪದ್ಯಪಾನದ ಗೋಷ್ಠಿಯಲ್ಲಿ, ಆದ್ಯರ್-ಮೊದಲಿಗರಾಗಿ, ಇರಲ್ಕೆ- ಇದ್ದಿರುವಾಗ,  ಕವನಂಗಳ್- ಕವಿತೆಗಳು, ಎಲ್ಲರಿಂ-ಎಲ್ಲರಿಂದಲೂ, ಮಿಗೆ- ಹೆಚ್ಚಾಗಿ, ಬರ್ಪುದು- ಬರುತ್ತದೆ. ಜವದಿಂದ- ವೇಗವಾಗಿ, ಉಲಿಯಲ್ಕೆ-ಹೇಳುವುದಕ್ಕೆ, ಸಲ್ಲದೇ-ಆಗದೇ, ಬಹುಕಾಲದಿಂದಂ- ಬಹಳಕಾಲದಿಂದ, ಆಂ-ನಾನು,  ನವೆದಿರ್ದೆಂ-ಕಷ್ಟಪಟ್ಟಿದ್ದೆ. ಇದು ವಿಯೋಗಿನೀ ಎಂಬ ಕನ್ನಡದಲ್ಲಿ ಅಷ್ಟಾಗಿ ಪ್ರಸಿದ್ಧವಾಗಿಲ್ಲದ ವೃತ್ತ)

ವ.ತಿ॥ ಅಂತಿರ್ಪ ಗೋಷ್ಠಿಯದು ಪೇೞ್ವೊಡೆ ಚೋದಿಸಿರ್ಕುಂ
ನೋಂತಿಂತು ರಸ್ಯಕವಿತಾಕರಣಕ್ಕಮೇಗಳ್
ಸ್ವಾಂತರ್ಯತೋಷಜನಕಂ ಕವಿಗಾಗೆ ಕಬ್ಬಂ
ಸಂತೋಷಮೀಗುಮನಿತೇ ಸಲೆ ಲೋಕಕೆಲ್ಲಂ ॥೧೭॥
(ಟೀ- ಪೇೞ್ವೊಡೆ-ಹೇಳುವುದಿದ್ದರೆ ಅಂತಿರ್ಪ-ಹಾಗಿರುವ, ಗೋಷ್ಠಿಯದು- ಈ ಗೋಷ್ಠಿಯು,   ನೋಂತು- ವ್ರತತೊಟ್ಟು ಇಂತು-ಹೀಗೆ ರಸ್ಯಕವಿತಾಕರಣಕ್ಕಂ-ರಸ್ಯವಾದ ಕವಿತೆಯನ್ನು ಬರೆಯುವುದಕ್ಕೆ, ಚೋದಿಸಿರ್ಕುಂ- ಪ್ರಚೋದಿಸಿದೆ. ಏಗಳ್-ಯಾವತ್ತೂ ಕವಿಗೆ- ಕಬ್ಬಿಗನಿಗೆ, ಕಬ್ಬಂ-ಕಾವ್ಯವು, ಸ್ವಾಂತರ್ಯತೋಷಜನಕಂ- ತನ್ನ ಮನಸ್ಸಿಗೆ ಸಂತೊಷವನ್ನು ಹುಟ್ಟಿಸುವುದು,  ಆಗೆ- ಆಗಲು, ಅನಿತೇ-ಅಷ್ಟೇ/ಹಾಗೆಯೇ, ಲೋಕಕೆಲ್ಲಂ-ಲೋಕಕ್ಕೆಲ್ಲಕೂ, ಸಲೆ-ಸಲ್ಲುತ್ತ, ಸಂತೋಷಂ-ಸಂತೋಷವನ್ನು, ಈಗುಂ-ಕೊಡುತ್ತದೆ. ಇದು ವಸಂತತಿಲಕಾವೃತ್ತ )

ಮ॥ ಇನಿತೀ ಕಾವ್ಯಮನೊಲ್ದು ಪೇೞ್ವಕವಿಯೋ ಕರ್ಣಾಟಕಾವ್ಯದ್ರುಮ-
ಕ್ಕೆನಿತೋ ಸಂದಪ ತೋಂಟನೆಂದೆನಿಸೆ ಕಾವ್ಯಾರಾಮಚೈತ್ರಪ್ರಭರ್
ಮನನೀಯಾದ್ಯಶತಾವಧಾನಿಗಳೆ ತಿರ್ದಲ್ ಮಂಜನುಂ ನೀಲಕಂ
ಠನೆನಿಪ್ಪರ್ಕಳೆ ಸ್ಪರ್ಧಿಯಾಗಿರಲಿದೇಂ ಕಾವ್ಯಂ ಕೃಶಂ ಸಲ್ವುದೇ ॥೧೮॥
(ಟೀ-ಇನಿತು- ಹೀಗೆ, ಈ ಕಾವ್ಯಮಂ- ಈ ಕಾವ್ಯವನ್ನು, ಒಲ್ದು-ಒಲಿದು, ಪೇೞ್ವ-ಹೇಳುವ ಕವಿಯೋ-ಕವಿಯು, ಕರ್ಣಾಟಕಾವ್ಯದ್ರುಮಕ್ಕೆ- ಕನ್ನಡದ ಕಾವ್ಯವೆಂಬ ಮರಕ್ಕೆ, ಎನಿತೋ-ಹೇಗೋ ಸಂದಪ-ಸಂದಿರುವ, ತೋಂಟಂ-ತೋಟ/ವನ (ತೋಟ ಎಂಬುದು ಆಪ್ತಗೋಷ್ಠಿಯಲ್ಲಿ ಕವಿಯಕಾವ್ಯನಾಮವೂ ಹೌದು) ಎಂದು+ಎನಿಸೆ- ಎಂದೆನ್ನಿಸಿರಲು, ಕಾವ್ಯಾರಾಮಚೈತ್ರಪ್ರಭರ್- ಕಾವ್ಯದ ಈ ತೋಟಕ್ಕೆ ಚೈತ್ರಮಾಸದಂತಿರುವ, ಮನನೀಯ+ಆದ್ಯ-ಮನನೀಯರೂ ಆದ್ಯರೂ ಆದ ಶತಾವಧಾನಿಗಳೆ-ಶತಾವಧಾನಿ ಗಣೇಶರೇ, ತಿರ್ದಲ್-ತಿದ್ದುಪಡಿಯನ್ನು ಮಾಡಿರಲು, ಮಂಜನುಂ-ಮಂಜನೂ, ನೀಲಕಂಠಂ-ನೀಲಕಂಠನೂ, ಎನಿಪ್ಪರ್ಕಳೆ-ಎಂದೆನ್ನುವವರೇ, ಸ್ಪರ್ಧಿಯಾಗಿರಲ್- ಇವನ ಜೊತೆ ಸ್ಪರ್ಧಿಸಿರುವವರಾಗಿರಲು, ಇದೇಂ-ಇದೇನು, ಕಾವ್ಯಂ- ಈ ಕಾವ್ಯವು, ಕೃಶಂ-ಬಡಕಲಾಗಿ, ಸಲ್ವುದೇ-ಸಲ್ಲುವುದೇ! ಮತ್ತೇಭವಿಕ್ರೀಡಿತವೃತ್ತ. ಷಡಕ್ಷರಿಯ- “ಇಂತೀಕಾವ್ಯಮನೊಲ್ದು..” ಪದ್ಯದಂತೆಯೇ ಆರಂಭವನ್ನು ನೋಡಬಹುದು)

ಶಾ॥ ಶ್ರೀಮತ್ಕೊಪ್ಪಲತೋಟವಂಶಜಕವೀಂದ್ರಂ ತಾಂ ಗಣೇಶಂ ಬುಧ
ಸ್ತೋಮಂ ಮೆಚ್ಚುವ ಪಾಂಗಿನಿಂದೆ ಬರೆವಂ ವಿದ್ವತ್ ಪ್ರಪಂಚಂ ಸದಾ
ಕಾಮಿಪ್ಪಂತುಟು ಕಾವ್ಯಪುಷ್ಪಫಲಮೀವಂ ತೋಟಕಂ ಬಣ್ಣಿಸಲ್
ಪ್ರೇಮಂದೋರರೆ ಸರ್ವಕಾವ್ಯರಸಿಕರ್ ತತ್ಕಾವ್ಯದೊಳ್ ಸೇವ್ಯದೊಳ್ ॥೧೯॥
(ಟೀ-ಶ್ರೀಮತ್-ಕೊಪ್ಪಲತೋಟ-ವಂಶಜ-ಕವೀಂದ್ರಂ- ಶ್ರೀಯುತವಾದ ಕೊಪ್ಪಲತೋಟದ ವಂಶದಲ್ಲಿ ಜನಿಸಿದ ಕವೀಂದ್ರನು, ಗಣೇಶಂ-ಗಣೇಶ ಎಂಬ ಹೆಸರಿನ, ತಾಂ-ತಾನು, ಬುಧಸ್ತೋಮಂ- ವಿಬುಧರ/ವಿದ್ವಾಂಸರ ಗುಂಪು, ಮೆಚ್ಚುವ-ಮೆಚ್ಚಿಕೊಳ್ಳುವ, ಪಾಂಗಿನಿಂದೆ-ರೀತಿಯಿಂದ, ಬರೆವಂ-ಬರೆಯುತ್ತಾನೆ, ವಿದ್ವತ್ ಪ್ರಪಂಚಂ- ವಿದ್ವತ್ತಿನ ಪ್ರಪಂಚವು/ವಿದ್ವಲ್ಲೋಕವು, ಸದಾ- ಯಾವತ್ತೂ, ಕಾಮಿಪ್ಪಂತುಟು- ಆಸೆ ಪಡುವಂತೆ, ಕಾವ್ಯಪುಷ್ಪಫಲಂ- ಕಾವ್ಯ ಎಂಬ ಹೂವು ಹಣ್ಣುಗಳನ್ನು, ಈವಂ- ಕೊಡುವ  ತೋಟಕಂ-ತೋಟವು ಎಂದು, ಬಣ್ಣಿಸಲ್- ಬಣ್ಣಿಸುತ್ತಿರಲು, ಸರ್ವಕಾವ್ಯರಸಿಕರ್-ಎಲ್ಲ ಕಾವ್ಯ ರಸಜ್ಞರು, ಸೇವ್ಯದೊಳ್- ಸೇವ್ಯವಾದ, ತತ್ಕಾವ್ಯದೊಳ್-ಈ ಕಾವ್ಯದಲ್ಲಿ ಪ್ರೇಮಂದೋರರೆ(ಪ್ರೇಮಂ+ತೋರರೆ)- ಪ್ರೀತಿಯನ್ನು ತೋರಿಸುವುದಿಲ್ಲವೇ! ಶಾರ್ದೂಲವಿಕ್ರೀಡಿತ ವೃತ್ತ)

ಕಂ॥ ತಗುಳ್ವೆಂ ಕಾವ್ಯಮನುಲಿಯಲ್
ಮಿಗೆ ಪೀಠಿಕೆಯಿಂತು ಪೇೞ್ವೆನಿದನಾಂ ಕೊನೆಯೊಳ್
ಸೊಗದೆ ಕಥಾನಕಮಂ ಕೇ-
ಳ್ದೊಗುಮಿಗೆಯಿಂ ಮೆಚ್ಚಲೆಲ್ಲರದೆ ದಲ್ ಪಿರಿದಯ್ ॥೨೦॥
(ಟೀ-ಕಾವ್ಯಮನುಲಿಯಲ್- ಕಾವ್ಯವ್ನು ಹೇಳುವುದಕ್ಕೆ, ತಗುಳ್ವೆಂ-ತೊಡಗುತ್ತೇನೆ, ಪೀಠಿಕೆಯು- ಈ ಪೀಠಿಕೆಯು, ಇಂತು- ಹೀಗೆ,ಮಿಗೆ- ಮಿಗಿಲಾಗೊರಲು/ ಹೆಚ್ಚಾಗಿರಲು, ಇದಂ- ಇದನ್ನು, ಆಂ- ನಾನು, ಕೊನೆಯೊಳ್- ಕಾವ್ಯದ ಕೊನೆಯಲ್ಲಿ, ಪೇೞ್ವೆಂ-ಹೇಳುತ್ತೇನೆ. ಸೊಗದೆ- ಸೊಗಸಾಗಿ, ಕಥಾನಕಮಂ- ಕಥೆಯನ್ನು, ಕೇಳ್ದು-ಕೇಳಿ, ಒಗುಮಿಗೆಯಿಂ- ಅತಿಶಯದಿಂದ, ಎಲ್ಲರ್-ಎಲ್ಲರು, ಮೆಚ್ಚಲ್-ಮೆಚ್ಚಿಕೊಳ್ಳಲು,  ಅದೆ-ಅದುವೇ ಪಿರಿದಯ್ ದಲ್- ಹಿರಿದಾದುದಲ್ಲವೇ!ಕಂದಪದ್ಯ)

ಕಂ॥ ಕನ್ನಡನುಡಿಗಂ ಸಾಜದೆ
ಚೆನ್ನೆನಿಸಿರ್ಪೊಳ್ಪ ಚಂಪು ಮಾರ್ಗದೆ  ನುಡಿವೆಂ
ರನ್ನಂಗಳನೇ ಕೋದಲ್ 
ಸನ್ನುತಗುಣಮಿರ್ಪ ತೆಱದೆ ಗದ್ಯಂ ಮೆಱೆಗುಂ ॥೨೧॥
(ಟೀ-ಕನ್ನಡನುಡಿಗಂ- ಕನ್ನಡದ ಮಾತಿಗೆ ಸಾಜದೆ- ಸಹಜವಾಗಿ, ಚೆನ್ನ-ಒಳ್ಳೆಯದು ಚೆನ್ನಾಗಿರುವುದು, ಎನಿಸಿರ್ಪ- ಎಂದೆನಿಸಿದ, ಒಳ್ಪ-ಒಳ್ಳೆಯ, ಚಂಪುಮಾರ್ಗದೆ-ಚಂಪೂಮಾರ್ಗದಲ್ಲಿ,  ನುಡಿವೆಂ-ನುಡಿಯುತ್ತೇನೆ. ರನ್ನಂಗಳನೇ- ರತ್ನಗಳನ್ನೇ, ಕೋದಲ್- ಪೋಣಿಸಲು, ಸನ್ನುತಗುಣಂ-ಒಳ್ಳೆಯ ಗುಣವು(ದಾರ) ಇರ್ಪ- ಇರುವ, ತೆಱದೆ- ರೀತಿಯಲ್ಲಿ, ಗದ್ಯಂ- ಗದ್ಯವು, ಮೆಱೆಗುಂ-ಮೆರೆಯುತ್ತದೆ.
ಕಾವ್ಯದಲ್ಲಿ, ಗದ್ಯ, ಪದ್ಯ ಹಾಗೂ ಚಂಪೂ ಎಂಬ ಮೂರು ವಿಧಗಳಲ್ಲಿ, ಹಳಗನ್ನಡದಲ್ಲಿ ಪ್ರಚುರವಾಗಿರುವುದು ಚಂಪೂ ಮಾರ್ಗ ಎಂದರೆ ಗದ್ಯ ಹಾಗೂ ಪದ್ಯಗಳೆರಡೂ ಮಿಶ್ರವಾಗಿರುವುದು. ಈ ಕಾವ್ಯವೂ ಅದೇ ಮಾರ್ಗದಲ್ಲಿರುವುದಾಗಿದೆ. ಇಲ್ಲಿನ ಪದ್ಯಗಳು ರತ್ನದಂತೆ ಇದ್ದರೆ ಅವುಗಳನ್ನು ಪೋಣಿಸುವ ದಾರದಂತೆ ಗದ್ಯಭಾಗವು ಇದೆ ಎಂದು ಆಶಯ. ಕಂದಪದ್ಯ)

ತೇ॥ ಪ್ರೌಢಿ ಪರಿಕಿಪ್ಪ ಸಂಸ್ಕೃತದ ಲೇಪಮಿರ್ಕುಂ
ಗಾಢಮಾಗಿರ್ಪ ನಲ್ನುಡಿಯ ಕನ್ನಡಕ್ಕಂ
ಮೂಢರೇನೆಂದೊಡೇಂ ಚಿಂತೆಯೆನಗೆ ಸಲ್ಗುಂ
ರೂಢಿಯಿಂದೆನ್ನ ಕವಿತೆ ಕರ್ಣಾಟಿಯಕ್ಕುಂ ॥೨೨॥
(ಟೀ- ಗಾಢಂ- ಗಾಢವಾದ, ಅಚ್ಚೊತ್ತುವಂತೆ ಇರುವ, ಆಗಿರ್ಪ-ಆಗಿರುವ, ನಲ್ನುಡಿಯ- ನಲವಾದ ಮಾತುಗಳಾದ,  ಕನ್ನಡಕ್ಕಂ- ಕನ್ನಡಭಾಷೆಗೆ, ಪ್ರೌಢಿ ಪರಿಕಿಪ್ಪ- ಪ್ರೌಢತೆಯನ್ನು ಪರೀಕ್ಷಿಸುವ, ಸಂಸ್ಕೃತದ-ಸಂಸ್ಕೃತಭಾಷೆಯ, ಲೇಪಂ-ಲೇಪನವು, ಇರ್ಕುಂ-ಇದೆ, ಮೂಢರ್-ಮೂರ್ಖರಾದವರು, ಏನೆಂದೊಡೆ- ಏನನ್ನು ಹೇಳಿದರೆ, ಏಂ ಚಿಂತೆಯು- ಯಾವ ಚಿಂತೆಯು, ಎನಗೆ- ನನಗೆ, ಸಲ್ಗುಂ-ಸಲ್ಲುತ್ತದೆ,ರೂಢಿಯಿಂದ- ರೂಢಿಯಿಂದ, ಎನ್ನ- ನನ್ನ, ಕವಿತೆ-ಪದ್ಯಗಳು/ಕಾವ್ಯವು ಎಂಬ ಹೆಣ್ಣು, ಕರ್ಣಾಟಿಯು-ಕರ್ಣಾಟಿ(ಕನ್ನಡತಿ)/ ಕಿವಿಯಲ್ಲಿ ಗುನುಗುನಿಸುವುದು,  ಅಕ್ಕುಂ-ಆಗುತ್ತದೆ. 
ಇದು ತೇಟಗೀತಿಯೆಂಬ ತೆಲುಗಿನ ಪ್ರಸಿದ್ಧವಾದ ಜಾತಿಚ್ಛಂದಸ್ಸು. ತೆಲುಗಿನ ಶ್ರೀನಾಥಕವಿಯ ಪ್ರೌಢಿ ಪರಿಕಿಂಪ.. ಪದ್ಯದ ಭಾವವನ್ನು ಅನುಕರಿಸಿದೆ)

ಸೀ॥ ಕೋಶದೊಳ್ ಪುಡುಕಿರ್ಪ ದುರ್ಬೇಧ್ಯಪದಮಿಲ್ಲ-
ಮಾಶುಫಣಿತಿಯೆ ನೋಡೆ ಮೆರೆವುದೆಲ್ಲಂ
ದೋಷಮೆಂಬಾ ಕೆಸರ್ ಸೋಂಕಿರ್ಪುದಿನಿತಿಲ್ಲ-
ಮಾಶಯಂ ಸುಸ್ಪಷ್ಟಮಿರ್ಪುದೆಲ್ಲಂ
ಹಿತಮಾದ ಗತಿಯಿಂದೆ ಶ್ರವಣಾಭಿರಾಮತೆಯ
ಸ್ತುತಮಾದ ಸದ್ವೃತ್ತಬಂಧಮೆಲ್ಲಂ
ಕೃತಿಯಿದೋ ರಸಪೇಶಲತೆಯ ಲತೆಯಾಗಿರ್ಕು-
ಮತಿಯೆನಿಪ ತೆಱದಿಂದಮೇನುಮಿಲ್ಲಂ ॥
ವೈನತೇಯವಿಜಯಂ ಕಥಾನಕಮಿದಿರ್ಕುಂ
ಶ್ಯೇನಕುಲಮಣಿಯೆ ಮೆಱೆದಿರ್ಪ ಪ್ರತಿಥಕಥೆಯೊಳ್ 
ಸಾನುರಾಗದಿಂ ಮತಿಯನಿತ್ತಿರ್ಪ ಜನಕಂ
ಮಾನಿಸುತೆ ನೀೞ್ಗೆ ಸೊಗಮನಾ ದೇವರೆಲ್ಲರ್ ॥೨೩॥
(ಟೀ-ಕೋಶದೊಳ್- ನಿಘಂಟುಗಳಲ್ಲಿ/ಶಬ್ದಕೋಶದಲ್ಲಿ, ಪುಡುಕಿರ್ಪ- ಹುಡುಕಿರುವ, ದುರ್ಬೇಧ್ಯಪದಂ- ಬೇಧಿಸಬೇಕಾಗಿರುವ ಶಬ್ದವು, ಇಲ್ಲಂ-ಇಲ್ಲ, ಆಶುಫಣಿತಿಯೆ-ಆಶುವಾಗಿ ಕವಿತೆಯನ್ನು ಹೇಳುವ ಶೈಲಿ, ನೋಡೆ- ನೋಡಲು, ಎಲ್ಲಂ-ಎಲ್ಲ ಪದ್ಯಗಳೂ, ಮೆರೆವುದು- ಮೆರೆಯುತ್ತಿರುವುದು.ದೋಷಂ- ದೋಷಗಳು,  ಎಂಬಾ-ಎನ್ನುವ ಆ, ಕೆಸರ್- ಕೆಸರು/ಕಶ್ಮಲವು, ಸೋಂಕಿರ್ಪುದು-ಸೋಕಿರುವುದು/ತಾಗಿರುವುದು, ಇನಿತು- ಇಷ್ಟು ಸ್ವಲ್ಪವೂ, ಇಲ್ಲಂ-ಇಲ್ಲ, ಆಶಯಂ-ಪದ್ಯದ ಆಶಯವು/ತಾತ್ಪರ್ಯವು, ಸುಸ್ಪಷ್ಟಂ- ಸ್ಪಷ್ಟವಾಗಿಯೇ,ಎಲ್ಲಂ-ಎಲ್ಲವೂ ಇರ್ಪುದು-ಇರುವುದು. ಹಿತಮಾದ- ಹಿತವಾದ, ಗತಿಯಿಂದೆ-ಗತಿಯಿಂದ/ನಡೆಯಿಂದ/ಧಾಟಿಯಿಂದ, ಶ್ರವಣಾಭಿರಾಮತೆಯ- ಕಿವಿಗೆ ಸೊಗಸಾದ/ಆನಂದವನ್ನು ಕೊಡುವಂತಹ, ಸ್ತುತಂ ಆದ- ಸ್ತುತಿಗೆ  ಅರ್ಹವಾದ, ಸದ್ವೃತ್ತಬಂಧಂ-ಒಳ್ಳೆಯ ವೃತ್ತಬಂಧವು ಎಲ್ಲಂ-ಎಲ್ಲವೂ (ಆಗಿವೆ) ಕೃತಿಯು ಇದೋ- ಈ ಕಾವ್ಯವು, ರಸಪೇಶಲತೆಯ-ರಸಮಯವಾದ/ನವಸಗಳಿಂದ ಕೂಡಿಕೊಂಡ, ಲತೆಯು-ಬಳ್ಳಿಯೇ ಆಗಿರ್ಕುಂ-ಆಗಿದೆ, ಅತಿ ಎನಿಪ-ಹೆಚ್ಚು ಎನ್ನುವ ತೆಱದಿಂದಂ-ಹಾಗೆ, ಏನುಂ-ಯಾವುದೂ, ಇಲ್ಲಂ-ಇಲ್ಲ. (ಇದು ಸೀಸಪದ್ಯವೆಂಬ ಛಂದಸ್ಸಿನ ಸೀಸಭಾಗ. ಇಲ್ಲಿ ತೆಲುಗಿನಂತೆ ಪ್ರಸಿದ್ಧವಾದ ಅಂಶಗಣಘಟಿತವಲ್ಲದೇ ಕನ್ನಡದಲ್ಲಿ ಪ್ರಸಿದ್ಧವಾದ ಪಂಚಮಾತ್ರಾಗಣಘಟಿತವಾದ ಬಂಧವಿದೆ.) 
ಇದು- ಇದು, ವೈನತೇಯವಿಜಯಂ- ವೈನತೇಯ ವಿಜಯವು/ ವಿನತೆಯ ಮಗನಾದ ಗರುಡನು ಗೆದ್ದಿರುವುದು, ಕಥಾನಕಂ- ಕಥೆಯು, ಇರ್ಕುಂ- ಇರುತ್ತದೆ. ಶ್ಯೇನಕುಲಮಣಿಯೆ- ಶ್ಯೇನಗಳ ಕುಲದ ಮಣಿ/ ಹದ್ದುಗಳ ಕುದಲ್ಲಿ ಶ್ರೇಷ್ಠನಾದ ಗರುಡನು, ಮೆಱೆದಿರ್ಪ- ಮೆರೆದಿರುವ, ಪ್ರತಿಥಕಥೆಯೊಳ್- ಪ್ರಸಿದ್ಧವಾದ ಕಥೆಯಲ್ಲಿ,ಸಾನುರಾಗದಿಂ- ಪ್ರೀತಿಯಿಂದ, ಮತಿಯಂ- ಮನಸ್ಸನ್ನು, ಇತ್ತಿರ್ಪ-ಕೊಟ್ಟಿರುವ, ಜನಕಂ-ಜನರಿಗೆ,
ಮಾನಿಸುತೆ- ಸಂಮಾನಿಸುತ್ತಾ, ಸೊಗಮಂ ಆ- ಸುಖವನ್ನು ಆ, ದೇವರೆಲ್ಲರ್- ದೇವರೆಲ್ಲರೂ, ನೀೞ್ಗೆ-ನೀಡಲಿ. (ಸೀಸಪದ್ಯದ ಉತ್ತರಾರ್ಧವಾಗಿ ಬರುವ ಇದು ಎತ್ತುಗೀತಿಯೆಂಬ ಭಾಗ, ತೆಲುಗಿನಲ್ಲಿ ಇಲ್ಲಿ ಆಟವೆಲದಿ ಅಥವಾ ತೇಟಗೀತಿಯೆಂಬ ಪ್ರಸಿದ್ಧವಾದ ಛಂದಸ್ಸನ್ನು ಬಳಸುವುದು ರೂಢಿ. ಕನ್ನಡದಲ್ಲಿ ಈ ಎತ್ತುಗೀತಿಯಲ್ಲಿ ಇಪ್ಪತ್ತು ಮಾತ್ರೆಗಳ ಒಂದು ಬಂಧವನ್ನೂ ಬಳಸುವ ಪದ್ಧತಿಯುಂಟು. ಪ್ರಸ್ತುತ ಇಲ್ಲಿ ತೇಟಗೀತಿ ಬಳಸಲ್ಪಟ್ಟಿದೆ))

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ