Powered By Blogger

ಮಂಗಳವಾರ, ಸೆಪ್ಟೆಂಬರ್ 8, 2020

ವೈನತೇಯವಿಜಯಂ- ಗರುಡನ ಕಥೆ-೫

(ಸೂತಪುರಾಣಿಕರು ಕಥೆಯನ್ನು ಮುಂದುವರೆಸಿ ಹೇಳುವುದು. ಕದ್ರೂವಿನತೆಯರು ಸಮುದ್ರವನ್ನು ಕಾಣುವುದು. ಸಮುದ್ರದ ವರ್ಣನೆ, ಉಚ್ಚೈಶ್ರವಸ್ಸಿನ ದರ್ಶನ)

 ॥ದ್ವಿತೀಯಾಶ್ವಾಸಂ॥

ಕಂ॥ ಕಥನಕುತೂಹಲಚಿತ್ತೋ

ನ್ಮಥಿತರಸಜ್ಞದ್ವಿರೇಫನಿಕುರುಂಬವರ-

ಪ್ರಥಿತಸುಮಾತ್ತಮರಂದಂ

ಕಥಿಸಲ್ ತಗುಳ್ದಂ ನೆಗೞ್ದ ಸೂತಂ ಬೞಿಕಂ॥೧॥

(ಟೀ-ಕಥನಕುತೂಹಲಚಿತ್ತೋನ್ಮಥಿತರಸಜ್ಞದ್ವಿರೇಫನಿಕುರುಂಬವರಪ್ರಥಿತಸುಮಾತ್ತಮರಂದಂ-(ಕಥನ-ಕುತೂಹಲ-ಚಿತ್ತ+ಉನ್ಮಥಿತ-ರಸಜ್ಞ-ದ್ವಿರೇಫ-ನಿಕುರುಂಬ-ವರ-ಪ್ರಥಿತ-ಸುಮ+ಆತ್ತ-ಮರಂದಂ)ಕಥೆಯನ್ನು ಹೇಳುವುದರಿಂದ ಉಂಟಾದ ಕುತೂಹಲವುಳ್ಳ ಮನಸ್ಸನ್ನು ಕಡೆಯುವುದರ ಮೂಲಕ ಹುಟ್ಟಿದ ರಸವನ್ನು ತಿಳಿದ ದುಂಬಿಗಳ ಗುಂಪಿನಲ್ಲಿ ಶ್ರೇಷ್ಠವಾಗಿ ಪ್ರಸಿದ್ಧವಾದ ಹೂವಿನಿಂದ ಹೊಂದಿದ ಮಕರಂದದಂತಿರುವ, ನೆಗೞ್ದ-ಪ್ರಸಿದ್ಧನಾದ, ಸೂತಂ-ಸೂತನು (ಸೂತಪುರಾಣಿಕರು) ಕಥಿಸಲ್-ಕಥೆಯನ್ನು ಹೇಳಲು, ಬೞಿಕಂ-ಆಮೇಲೆ, ತಗುಳ್ದಂ-ತೊಡಗಿದನು, ಕಂದಪದ್ಯ

ಹಳಗನ್ನಡದಲ್ಲಿ ಹಾಗೂ ಸಂಸ್ಕೃತದಲ್ಲಿ ಹಲವು ಕಾವ್ಯಗಳಲ್ಲಿ ಪ್ರತಿಯೊಂದೂ ಆಶ್ವಾಸದ ಆರಂಭದಲ್ಲಿ ಶ್ರೀಕಾರದಿಂದ, ಅಥವಾ ಕಥಾನಾಯಕನ ಸ್ತುತಿಯಿಂದ ಪ್ರಾರಂಭವಾಗುವ ರೂಢಿಯಿದೆ. ಪ್ರಸ್ತುತ ಕಾವ್ಯದಲ್ಲಿ ಅಂತಹ ಯಾವ ಪದ್ಧತಿಯನ್ನೂ ಅನುಸರಿಸಿಲ್ಲ. ಆದರೆ ಕುಮಾರವ್ಯಾಸನು "ಕೇಳು ಜನಮೇಜಯಧರಿತ್ರೀಪಾಲ.." ಎಂದು ವೈಶಂಪಾಯನನು ಕಥೆಯನ್ನು ಹೇಳುವಂತೆ ಆರಂಭಿಸುವುದನ್ನು ಅನುಕರಿಸುವಂತೆಯೇ, ಉಳಿದ ಆಶ್ವಾಸಗಳ ಆರಂಭದಲ್ಲಿ ಕಥೆಯನ್ನು ಹೇಳುತ್ತಿರುವ ಸೂತಪುರಾಣಿಕರು ಮುಂದೆ ಹೇಳುತ್ತಿರುವಂತೆ ಉಲ್ಲೇಖಿಸಿ ಕಥೆಯನ್ನು ಮುಂದುವರೆಸಲಾಗಿದೆ.)


ವ॥ಅಂತು ಕಥಾನಕಮಂ ಮುಂದೆ ಪೇೞುತ್ತುಂ ಕದ್ರುವುಂ ವಿನತೆಯುಂ ಉಚ್ಚೈಶ್ರವಸ್ಸಂ ನೋಡಲ್ಕೆ ಪೋದುದಂ ಬಣ್ಣಿಸುತ್ತೆ-

(ಅಂತು-ಹೀಗೆ, ಕಥಾನಕಮಂ-ಕಥೆಯನ್ನು, ಮುಂದೆ-ಮುಂದಿನ ಭಾಗವನ್ನು, ಪೇೞುತ್ತುಂ-ಹೇಳುತ್ತಾ, ಕದ್ರುವುಂ-ಕದ್ರುವೂ. ವಿನತೆಯುಂ-ವಿನತೆಯೂ, ಉಚ್ಚೈಶ್ರವಸ್ಸಂ-ಉಚ್ಚೈಶ್ರವಸ್ಸನ್ನು, ನೋಡಲ್ಕೆ-ನೋಡಲು/ನೋಡುವುದಕ್ಕೋಸ್ಕರ, ಪೋದುದಂ-ಹೋದದ್ದನ್ನು, ಬಣ್ಣಿಸುತ್ತೆ-ವರ್ಣಿಸುತ್ತಾ-)


ಕಂ॥ ವಿನತೆಯೆ ಪಿಂತಾದೆಲ್ಲಮು

ಮೆನಿತೋ ಸಯ್ಪಿಂದೆ ಸಂದುದೆಂದೆನುತಾಗಳ್

ಮನದೊಳ್ ಚಿಂತಿಸುತಿರ್ದೊಡೆ

ತನಗೇ ಜಯಮೆಂದು ಮತ್ತೆ ನಸುನಗುತಿರ್ದಳ್ ॥೨॥

(ಟೀ- ವಿನತೆಯೆ-ವಿನತೆಯು, ಪಿಂತೆ-ಹಿಂದೆ, ಆದ-ಆದ, ಎಲ್ಲಮುಂ-ಎಲ್ಲವೂ, ಎನಿತೋ-ಹೇಗೋ, ಸಯ್ಪಿಂದೆ-ಪುಣ್ಯದಿಂದ, ಸಂದುದು-ಆಗಿದೆ, ಎಂದೆನುತೆ-ಎಂದುಕೊಳ್ಳುತ್ತ, ಆಗಳ್-ಆಗ, ಮನದೊಳ್-ಮನಸ್ಸಿನಲ್ಲಿ, ಚಿಂತಿಸುತೆ-ಚಿಂತಿಸುತ್ತ, ಇರ್ದೊಡೆ-ಇದ್ದಿರಲು, ತನಗೇ-ತನಗೇ, ಜಯಂ-ಗೆಲುವು, ಎಂದು-ಎಂದುಕೊಳ್ಳುತ್ತ, ಮತ್ತೆ-ಮತ್ತೆ, ನಸುನಗುತಿರ್ದಳ್-ನಸುನಗುತ್ತ ಇದ್ದಳು. ಕಂದಪದ್ಯ)


ವ.ತಿ॥

ಆಪಃಪ್ರಜಾತಘನವೀಚಿಯೆ ಲಕ್ಷ್ಮಿಯೇ ಮೇಣ್

ಸೈಪಿಂದೆ ಚಂದ್ರಮನೆ ವಾರುಣಿಯೇ ವಲಕ್ಷಂ

ಲೋಪಂ ಗಡೆಂತು ಹಯದೊಳ್! ಸಲೆ ಕದ್ರುವೀಗಳ್

ಕೂಪಕ್ಕೆ ರಾತ್ರಿಯೊಳೆ ಕಂಡು ಪಗಲ್ ಜಗುಳ್ದಳ್ ॥೩॥

(ಟೀ-ಆಪಃ-ಪ್ರಜಾತ-ಘನ-ವೀಚಿಯೆ- ನೀರಿನಿಂದ ಉಂಟಾದ ದೊಡ್ಡ ಅಲೆಗಳೇ, ಲಕ್ಷ್ಮಿಯೇ-ಸಂಪತ್ತಿನ ದೇವತೆಯಾದ ಲಕ್ಷ್ಮಿಯೇ, ಮೇಣ್-ಅಥವಾ, ಸೈಪಿಂದೆ-ಪುಣ್ಯದಿಂದ, ಚಂದ್ರಮನೆ-ಚಂದ್ರನೇ, ವಾರುಣಿಯೇ-ವಾರುಣಿಯೆಂಬ ಸುರೆಯೇ(ಮದ್ಯವೇ) ವಲಕ್ಷಂ-ಬಿಳಿಯ ಬಣ್ಣದ್ದು. ಹಯದೊಳ್- ಕುದುರೆಯಲ್ಲಿ, ಲೋಪಂ-ಲೋಪವು/ತ್ರುಟಿಯು   ಎಂತು+ಗಡ-ಹೇಗೆ! ಸಲೆ-ಸಲ್ಲುತ್ತಿರಲು, ಕದ್ರುವು-ಕದ್ರುವು, ಈಗಳ್-ಈಗ, ರಾತ್ರಿಯೊಳೆ-ರಾತ್ರಿಯಲ್ಲಿ ಕಂಡು-ನೋಡಿಕೊಂಡು, ಪಗಲ್-ಹಗಲು, ಕೂಪಕ್ಕೆ-ಬಾವಿಗೆ, ಜಗುಳ್ದಳ್-ಬಿದ್ದಳು. ವಸಂತತಿಲಕಾವೃತ್ತ.

ಸಮುದ್ರದಲ್ಲಿ ಹುಟ್ಟಿರುವ ಅಲೆಯಾಗಲೀ, ವಾರುಣಿಯಾಗಲೀ ಲಕ್ಷ್ಮಿಯಾಗಲೀ ಅಥವಾ ಚಂದ್ರಮನೇ ಆಗಲಿ, ಎಲ್ಲವೂ ಬೆಳ್ಳಗಿರುವಾಗ ಕುದುರೆಯಲ್ಲಿ ಲೋಪವಾಗುವುದಕ್ಕೆ ಹೇಗೆ ಸಾಧ್ಯ! ಕದ್ರುವು ರಾತ್ರಿ ಕಂಡ ಬಾವಿಯಲ್ಲಿ ಹಗಲು ಹೊತ್ತು ಬಿದ್ದಳು. ಎಂದು ವಿನತೆಯ ಆಲೋಚನೆಯ ಈ ಪದ್ಯವು ಸಮಸ್ಯಾಪೂರಣದ ರೀತಿಯಲ್ಲಿ ಮಾಡಲ್ಪಟ್ಟಿದೆ. ಈ ಕೊನೆಯ ಪಾದವೂ ಕೂಡ ಹಿಂದೊಮ್ಮೆ ಪದ್ಯಪಾನದ ಆಶುಕವಿತಾಗೋಷ್ಠಿಯಲ್ಲಿ ಕೊಟ್ಟ ಸಮಸ್ಯೆಯ ಪಾದವೇ ಆಗಿದೆ)


ಸ್ವೋಪಜ್ಞದಿಂ ಧವಳವರ್ಣಮನಾಂತ ಕ್ಷೀರಾ-

ಕೂಪಾರಜಾತಮಹಿತಪ್ರಥಿತಂ ಸಿತಾಂಗಂ

ಲೋಪಕ್ಕೆ ಸಲ್ವುದೆನಿತಾ ಹಯಮಿಂತು ನೋಡಲ್

ಕೂಪಕ್ಕೆ ರಾತ್ರಿಯೊಳೆ ಕಂಡು ಪಗಲ್ ಜಗುಳ್ದಳ್ ॥೪॥

(ಟೀ-ಸ್ವೋಪಜ್ಞದಿಂ-ಸ್ವೋಪಜ್ಞವಾಗಿ/ಸ್ವತಃ ತಾನಾಗಿಯೇ,  ಧವಳವರ್ಣಮನಾಂತ- ಬಿಳಿಯಬಣ್ಣವನ್ನು ಹೊಂದಿದ, ಕ್ಷೀರಾಕೂಪಾರಜಾತಮಹಿತಪ್ರಥಿತಂ (ಕ್ಷೀರ+ಅಕೂಪಾರ-ಜಾತ-ಮಹಿತ-ಪ್ರಥಿತಂ) ಕ್ಷೀರಸಾಗರದಿಂದ ಹುಟ್ಟಿದ ಮಹಾತ್ಮೆಯನ್ನುಳ್ಳ ಪ್ರಸಿದ್ಧವಾದ, ಸಿತಾಂಗಂ (ಸಿತ+ಅಂಗಂ)-ಬಿಳಿಯ ಮೈಯುಳ್ಳ,  ಆ ಹಯಂ- ಆ ಕುದುರೆಯು, ಇಂತು-ಹೀಗೆ, ನೋಡಲ್-ನೋಡಿದರೆ, ಲೋಪಕ್ಕೆ-ದೋಷಕ್ಕೆ, ಎನಿತು-ಹೇಗೆ, ಸಲ್ವುದು-ಸಲ್ಲುತ್ತದೆ, ರಾತ್ರಿಯೊಳೆ-ರಾತ್ರಿಯಲ್ಲಿ ಕಂಡು-ನೋಡಿಕೊಂಡು, ಪಗಲ್-ಹಗಲು, ಕೂಪಕ್ಕೆ-ಬಾವಿಗೆ, ಜಗುಳ್ದಳ್-ಬಿದ್ದಳು. ವಸಂತತಿಲಕಾವೃತ್ತ.

ಸ್ವಭಾವತಃ ಬಿಳಿಯದಾದ ಕ್ಷೀರಸಾಗರಲ್ಲಿ ಹುಟ್ಟಿದ ಈ ಕುದುರೆಯೂ ಬೆಳ್ಳಗಿರಲೇಬೇಕು, ಹಾಗಾಗಿ ಕದ್ರುವು ಇರುಳು ಕಂಡ ಬಾವಿಗೆ ಹಗಲು ಬಿದ್ದ ಹಾಗಾಯ್ತು- ಎಂದು ತಾತ್ಪರ್ಯ, ಇದೂ ಕೂಡ ಹಿಂದಿನ ಪದ್ಯದ ಮುಂದುವರೆದ ಕಲ್ಪನೆಯೇ ಆಗಿದೆ)


ವ.ಕ॥ ನಲವಿಂದೆ ನೋಡುವೊಡೆ ವಾಜಿಯ ಮೆಯ್ಯೆ ಬೆಳ್ಪಿಂ

ಸಲಲಂತು ಗೆಲ್ವೆನೆನುತುಂ ಮಿಗೆ ತೋಷದಿಂದಂ

ಲಲಿತಾಂಗಿಯಾ ವಿನತೆ ಸಾಗುತುಮಿರ್ದಳಲ್ತೇ

ಬಲವತ್ತರಂ ವಿಧಿಯದೆಂಬುದನಾರೊ ಬಲ್ಲರ್! ॥೫॥

(ಟೀ-ನಲವಿಂದೆ-ಸಂತೋಷದಿಂದ, ನೋಡುವೊಡೆ-ನೋಡುತ್ತಿರಲು, ವಾಜಿಯ-ಕುದುರೆಯ, ಮೆಯ್ಯೆ-ಶರೀರವೇ, ಬೆಳ್ಪಿಂ-ಬಿಳಿಯ ಬಣ್ಣದಿಂದ, ಸಲಲ್-ಸಲ್ಲುತ್ತಿರಲು, ಅಂತು-ಹಾಗೆ, ಗೆಲ್ವೆಂ-ಗೆಲ್ಲುತ್ತೇನೆ, ಎನುತುಂ-ಎಂದುಕೊಳ್ಳುತ್ತಾ, ಮಿಗೆ-ಅತಿಶಯವಾಗಿ, ತೋಷದಿಂದಂ-ಆನಂದದಿಂದ, ಲಲಿತಾಂಗಿಯು- ಕೋಮಲಾಂಗಿಯಾದ, ಆ ವಿನತೆ-ವಿನತೆಯು, ಸಾಗುತುಂ-ಹೋಗುತ್ತಾ ಇರ್ದಳಲ್ತೇ-ಇದ್ದಳಲ್ಲವೇ, ಅದು ವಿಧಿಯು- ಆ ನಿಯತಿಯು,  ಬಲವತ್ತರಂ-ಶಕ್ತಿಶಾಲಿಯು, ಎಂಬುದಂ- ಎನ್ನುವುದನ್ನು, ಆರೊ-ಯಾರೋ ಬಲ್ಲರ್-ತಿಳಿದವರು!

ವಸಂತಕಲಿಕಾವೃತ್ತ,(ನನಗೆ ತಿಳಿದಂತೆ ಈ ವೃತ್ತವನ್ನು ವಿದ್ವನ್ಮಿತ್ರರಾದ ರಾಮಕೃಷ್ಣಪೆಜತ್ತಾಯರು ಮೊದಲ ಬಾರಿಗೆ ಪದ್ಯಪಾನ ಜಾಲತಾಣದಲ್ಲಿ ಬಳಸಿದ್ದರು. ಅದಕ್ಕೆ ಶತಾವಧಾನಿ ಡಾ.ಆರ್. ಗಣೇಶರು ವಸಂತಕಲಿಕಾವೃತ್ತವೆಂದು ನಾಮಕರಣ ಮಾಡಿದರು. ವಸಂತತಿಲಕದ ಮೊದಲ ಒಂದು ಗುರು ಅಕ್ಷರದ ಬದಲಿಗೆ ಇದರಲ್ಲಿ ಎರಡು ಲಘುಗಳು ಬರುತ್ತವೆ.) ಮುಂದೆ ಆಗುವುದರ ಕಲ್ಪನೆಯಿಲ್ಲದೇ ವಿನತೆಯು ಬಹಳ ಸಂತೋಷದಿಂದ ಹೋಗುತ್ತಿದ್ದಳು. ವಿಧಿಯು ಎಲ್ಲಕ್ಕಿಂತ  ಹೆಚ್ಚು ಶಕ್ತಿಶಾಲಿ ಎಂಬುದನ್ನು ಯಾರು ತಾನೇ ಬಲ್ಲರು- ಎಂಬಲ್ಲಿ ಅರ್ಥಾಂತರನ್ಯಾಸಾಲಂಕಾರದ ಸ್ಪರ್ಶವಿದೆ)


ವ॥ ಅಂತು ಪೋಗುತ್ತುಂ ಮುಂದೆ ಸಾಗಿರೆ ಉಲ್ಲೋಲಕಲ್ಲೋಲವಿಲಾಸವಿಭ್ರಮದಿಂ ಕೂಡಿರ್ಪ ಸಮುದ್ರಮಂ ಕಂಡರ್- ಅದೆಂತಿರ್ದುದೆನೆ

(ಅಂತು-ಹೀಗೆ, ಪೋಗುತ್ತುಂ-ಹೋಗುತ್ತಾ, ಮುಂದೆ-ಮುಂದೆ, ಸಾಗಿರೆ-ಸಾಗಿರಲು, ಉಲ್ಲೋಲಕಲ್ಲೋಲವಿಲಾಸವಿಭ್ರಮದಿಂ-ಉಲ್ಲೋಲಕಲ್ಲೋಲವಾದ ವಿಲಾಸದ ವಿಭ್ರಮದಿಂದ (ಅಲೆಗಳು ಉಕ್ಕೇರುವುದರ ವಿಲಾಸದಿಂದ ಬೆಡಗಿನಿಂದ) ಕೂಡಿರ್ಪ-ಕೂಡಿರುವ, ಸಮುದ್ರಮಂ-ಸಮುದ್ರವನ್ನು, ಕಂಡರ್-ನೋಡಿದರು, ಅದೆಂತು-ಅದು ಹೇಗೆ ಇರ್ದುದೆನೆ-ಇದ್ದಿತ್ತು ಎನ್ನುವುದಾದರೆ-)


#ಸಮುದ್ರವರ್ಣನೆ#


ಮಾಲಿನಿ॥ ಒಳಗೊಳಗೆ ನೆಗೞ್ವಾವರ್ತದಿಂ ಮೇಲೆ ತೋರ್ವಾ

ಅಲೆಗಳೊಳಗೆ ಚಂಚದ್ರೋಚಿಯಿಂದಂತರಂಗಂ

ಸುಲಲಿತಮೆನಿಸಿರ್ದುಂ ಗೂಢಮಾಗಿಂತು ಕಾಣ್ಗುಂ

ಲಲನೆಯ ಮತಿಯಂದಂ ರೌದ್ರಮುದ್ರಂ ಸಮುದ್ರಂ॥೬॥

(ಟೀ- ಒಳಗೊಳಗೆ (ಒಳಗೆ+ಒಳಗೆ)-ಒಳಗೊಳಗೇ/ಅಂತರಂಗದಲ್ಲೇ,  ನೆಗೞ್ವ-ಹುಟ್ಟಿಕೊಳ್ಳುವ/ಮೇಲೇಳುವ, ಆವರ್ತದಿಂ-ಸುಳಿಗಳಿಂದ, ಮೇಲೆ-ಮೇಲುಗಡೆ, ತೋರ್ವಾ-ತೋರುವ/ಕಾಣಿಸಿಕೊಳ್ಳುವ, ಅಲೆಗಳೊಳಗೆ-ಅಲೆಗಳಲ್ಲಿ/ತರಂಗಗಳಲ್ಲಿ, ಚಂಚದ್ರೋಚಿಯಿಂದ(ಚಂಚತ್+ರೋಚಿ)-ಚಂಚಲವಾದ ರುಚಿ/ಕಾಂತಿಯಿಂದ, ಅಂತರಂಗಂ-ಅಂತರಂಗವು/ಒಳಗು/ಮನಸ್ಸು, ಸುಲಲಿತಂ-ಸರಳವಾದದ್ದು/ಲಲಿತವಾದದ್ದು, ಎನಿಸಿರ್ದುಂ-ಎಂದೆನಿಸಿದ್ದರೂ, ಗೂಢಂ+ಆಗಿ-ರಹಸ್ಯವಾಗಿ ಇಂತು-ಹೀಗೆ, ಸಮುದ್ರಂ-ಸಮುದ್ರವು, ಲಲನೆಯ-ಹೆಣ್ಣಿನ, ಮತಿಯಂದಂ-ಮನಸ್ಸಿನಂತೆಯೇ, ರೌದ್ರಮುದ್ರಂ-ರುದ್ರತೆಯನ್ನು/ರೌದ್ರವನ್ನು ಮುದ್ರಿಸಿಕೊಂಡಿರುವುದಾಗಿ/ ಭಯಂಕರೂಪವನ್ನೇ ಅಡಗಿಸಿಕೊಂಡಿರುವುದಾಗಿ,  ಕಾಣ್ಗುಂ-ಕಾಣುತ್ತದೆ. ಮಾಲಿನೀವೃತ್ತ.

ಇಲ್ಲಿ ಹೆಣ್ಣಿನ ಮನಸ್ಸನ್ನು ಸಮುದ್ರಕ್ಕೆ ಹೋಲಿಸಿದೆ. "ರೌದ್ರಮುದ್ರಂ ಸಮುದ್ರಂ" ಎಂಬ ಪದಪುಂಜವು ಕನ್ನಡದ ಚಂಪೂಕವಿಗಳಲ್ಲಿ ಬಹುಪ್ರಸಿದ್ಧವಾದದ್ದೇ ಆಗಿದೆ. ಕಾವ್ಯಾರಂಭದಲ್ಲಿಯೇ ಷಡಕ್ಷರಿಯೇ ಮೊದಲಾದವರು ಸಮುದ್ರವನ್ನು ವರ್ಣಿಸುತ್ತಾ ಸ್ರಗ್ಧರಾಮಹಾಸ್ರಗ್ಧರಾ ವೃತ್ತಗಳಲ್ಲಿ ಈ ಪದಪುಂಜವನ್ನು ಬಳಸುವುದನ್ನು ಕಾಣಬಹುದು. ಇಲ್ಲಿಯೂ ಕೂಡ ಅವರ ಪದ್ಯಗಳಿಗಿಂತ ಕಲ್ಪನೆಯಲ್ಲಿಯೂ ಛಂದಸ್ಸಿನಲ್ಲಿಯೂ ಭಿನ್ನವಾಗಿ ಮಾಲಿನೀವೃತ್ತದಲ್ಲಿ ಅದೇ ಪದಪುಂಜವು ಬಳಸಲ್ಪಟ್ಟಿದೆ)


ಶಾಲಿನಿ॥ ಪಾರಾವಾರಂ  ಪರ್ವದೊಳ್ ಲೋಗರಂ ಪೋ-

ಲ್ತೇರುತ್ತಾಡುತ್ತೇಗಳುಂ ಕಾಮಿಯಂದಂ

ಜಾರುತ್ತಿರ್ಕುಂ ಚಂಚಲಂ ಚೆಲ್ವಿನಿಂದಂ 

ಮಾರಾಂತಿರ್ಕುಂ ಬಾನ್ಗೆ ತಾಂ ಬಿಂಬದಂದಂ ॥೭॥

(ಟೀ- ಪಾರಾವಾರಂ-ಸಮುದ್ರವು, ಏಗಳುಂ-ಯಾವತ್ತೂ, ಪರ್ವದೊಳ್-ಹಬ್ಬದಲ್ಲಿ/ಪರ್ವಕಾಲದಲ್ಲಿ, ಲೋಗರಂ-ಜನರನ್ನು, ಪೋಲ್ತು-ಹೋಲುವಂತೆ, ಏರುತ್ತೆ-ಏರುತ್ತಾ, ಆಡುತ್ತೆ-ಆಡುತ್ತಾ,  ಕಾಮಿಯಂದಂ-ಕಾಮಿಗಳಂತೆ, ಚಂಚಲಂ-ಚಂಚಲವಾಗಿ, ಜಾರುತ್ತಿರ್ಕುಂ-ಜಾರುತ್ತಾ ಇದೆ, ಚೆಲ್ವಿನಿಂದಂ-ಚೆಲುವಿನಿಂದ/ಸೌಂದರರ್ಯದಿಂದ, ಬಾನ್ಗೆ-ಆಕಾಶಕ್ಕೆ, ತಾಂ-ತಾನು, ಬಿಂಬದಂದಂ-ಪ್ರತಿಬಿಂಬದಂತೆ, ಮಾರಾಂತಿರ್ಕುಂ-ಪ್ರತಿಸ್ಪರ್ಧಿಯಾಗಿದೆ/ಎದುರು ನಿಂತಿದೆ. ಶಾಲಿನೀವೃತ್ತ)


ಕಂ॥ ಸುರುಚಿರವಾರುಣಿಯಂ ತಾಂ

ಭರದಿಂದೀಂಟಿರ್ಪರಂತೆ ಪರಿಪರಿಯಿಂದಂ

ಪೊರಳಾಡುತೆ ಪುರುಳಿಲ್ಲದೆ

ನೊರೆಯಂ ಮೇಣುಗುಳಿದತ್ತು ನೋಡೆ ಸಮುದ್ರಂ ॥೮॥

(ಟೀ-ಸಮುದ್ರಂ-ಸಮುದ್ರವು, ನೋಡೆ-ನೋಡಲು,  ಸುರುಚಿರ-ವಾರುಣಿಯಂ-ಚೆನ್ನಾಗಿರುವ ಮದ್ಯವನ್ನು, ತಾಂ-ತಾನು, ಭರದಿಂದೆ-ಬೇಗದಲ್ಲಿ, ಈಂಟಿರ್ಪರಂತೆ-ಕುಡಿದಿರುವವರಂತೆ, ಪರಿಪರಿಯಿಂದಂ-ವಿಧವಿಧವಾಗಿ , ಪುರುಳಿಲ್ಲದೆ-ಅರ್ಥವಿಲ್ಲದೇ, ಪೊರಳಾಡುತೆ-ಹೊರಳಾಡುತ್ತ,  ನೊರೆಯಂ-ನೊರೆಯನ್ನು, ಮೇಣ್-ಮತ್ತೆ, ಉಗುಳಿದತ್ತು-ಉಗುಳುತ್ತಿತ್ತು. ಕಂದಪದ್ಯ)

ಸ್ರ॥ ಎನ್ನಿಂದಂ ಪುಟ್ಟಿತೆಲ್ಲಂ ಜಗದೆ ಮೆರವುದೀ ಬಲ್ಮೆವೆತ್ತಿರ್ಪ ಸಂಪ-

ತ್ತೆನ್ನಿಂದಂ ಚಂದ್ರನುಂ ವಾರುಣಿಯುಮಮೃತಮುಂ ವಾಜಿಯುಂ ಹಸ್ತಿಯುಂ ಮೇ

ಣೆನ್ನುತ್ತೇಗಳ್ ವಿಕತ್ಥಿಪ್ಪನೆ ಕುಣಿದಪನೈ ಕಾರಣಂ ಮಾಜುತಿರ್ಪಂ

ಮುನ್ನಂ ಮಂಥಾನದೊಳ್ ಮಂದರಗಿರಿಚಲಿತಕ್ಷೋಭೆಯಿರ್ಪಂ ಸಮುದ್ರಂ ॥೯॥

(ಟೀ-ಎನ್ನಿಂದಂ-ನನ್ನಿಂದಲೇ, ಜಗದೆ-ಜಗತ್ತಿನಲ್ಲಿ, ಮೆರವುದೀ-ಮೆರೆಯುತ್ತಿರುವ ಈ, ಬಲ್ಮೆವೆತ್ತಿರ್ಪ-ಬಲ್ಮೆಯನ್ನು ಹೊಂದಿರುವ/ಶಕ್ತವಾದ, ಸಂಪತ್ತು-ಲಕ್ಷ್ಮಿಯು/ಧನವು/ಐಶ್ವರ್ಯವು, ಎಲ್ಲಂ-ಎಲ್ಲವೂ, ಪುಟ್ಟಿತು-ಹುಟ್ಟಿತು,  ಎನ್ನಿಂದಂ-ನನ್ನಿಂದಲೇ, ಚಂದ್ರನುಂ-ಚಂದ್ರನೂ, ವಾರುಣಿಯುಂ-ವಾರುಣಿಯೆಂಬ ಮದ್ಯವೂ, ಅಮಮೃತಮುಂ-ಅಮೃತವೂ, ವಾಜಿಯುಂ-ಕುದುರೆಯೂ, ಹಸ್ತಿಯುಂ-ಆನೆಯೂ, ಮೇಣ್-ಮತ್ತೆ, (ಎಲ್ಲಂ ಪುಟ್ಟಿದವು-ಎಲ್ಲವೂ ಹುಟ್ಟಿದವು) ಎನ್ನುತ್ತೆ-ಎನ್ನುತ್ತಾ, ಏಗಳ್-ಯಾವಾವಗಳೂ, ವಿಕತ್ಥಿಪ್ಪನೆ-ಆತ್ಮಪ್ರಶಂಸೆಯನ್ನು ಮಾಡಿಕೊಳ್ಳುವವನು/ಬಡಾಯಿ ಕೊಚ್ಚಿಕೊಳ್ಳುವವನು,  ಕುಣಿದಪನೈ-ಕುಣಿಯುತ್ತಿದ್ದನು, ಮುನ್ನಂ-ಹಿಂದೆ, ಮಂಥಾನದೊಳ್-ಸಮುದ್ರಮಥನದಲ್ಲಿ/ಸಮುದ್ರವನ್ನು ಕಡೆದಾಗ, ಮಂದರಗಿರಿಚಲಿತಕ್ಷೋಭೆಯಿರ್ಪಂ-(ಕಡಗೋಲಾದ) ಮಂದರಗಿರಿಯು ಚಲಿಸುವಾಗ ಉಂಟಾಗಿರುವ ಕ್ಷೋಭೆ/ಚಂಚಲತೆ ಇರುವಂತಹವನು, ಸಮುದ್ರಂ-ಸಮುದ್ರನು, ಕಾರಣಂ-ನಿಜವಾದ ಕಾರಣವನ್ನು, ಮಾಜುತಿರ್ಪಂ-ಮರೆಮಾಚುತ್ತಿದ್ದಾನೆ. ಸ್ರಗ್ಧರಾ ವೃತ್ತ.

ತನ್ನಿಂದಲೇ ಚಂದ್ರನೂ, ಸಂಪತ್ತೂ, ಅಮೃತವೂ, ಅಶ್ವಹಸ್ತಿಗಳೂ ಎಲ್ಲವೂ ಹುಟ್ಟಿದವು ಎಂದು ಬಡಾಯಿಕೊಚ್ಚಿಕೊಳ್ಳುತ್ತ ಕುಣಿಯುತ್ತಿದ್ದಾನೆ ಈ ಸಮುದ್ರ, ಆದರೆ ನಿಜವಾದ ಕಾರಣ ಮಂದರಪರ್ವತ ಸಮುದ್ರವನ್ನು ಕಡೆಯುವಾಗ ಆದ ಕಲ್ಲೋಲದಿಂದ ಅವನು ಹಾಗೆ ಉಕ್ಕೇರುತ್ತಿರುವುದಷ್ಟೇ, ಅದನ್ನು ಅವನು ಮರೆಮಾಚುತ್ತಿದ್ದಾನೆ ಎಂದು ಪದ್ಯದ ತಾತ್ಪರ್ಯ.)


ರಗಳೆ॥

ತುಂಬಿ ಬರ್ಪ ತೊರೆಗಳಿಂ ನೆಗೞ್ದು ಮೊರೆವ ನೀರ್ಗಳಿಂ

ಪಲವು ಕಾಡ ಪೊಳೆಗಳಿಂ ವಿಶಾಲಮಾದ ನದಿಗಳಿಂ

ತೇಲಿ ಬರ್ಪ ಕಾಯ್ಗಳಿಂ ಮುಳುಂಗಿ ಬರ್ಪ ಮೀನ್ಗಳಿಂ

ತಟದಿನೆಯ್ದ ಮಣ್ಗಳಿಂ ಜಗುಳ್ವ ತೋರ ಕಲ್ಗಳಿಂ

ಪರಿದು ಬೀಳ್ವ ಲತೆಗಳಿಂ ಸಮೂಲಮಾದ ಮರಗಳಿಂ

ಒಡೆಯನಿರದ ಪೆಣಗಳಿಂ ಮಲರ್ದ ಚೆಲ್ವ ಪೂಗಳಿಂ

ಮೆಯ್ಯ ತುಂಬಿಕೊಳ್ಳುತುಂ ಗಭೀರಮಾಗಿ ಬೀಗುತುಂ

ತೆರೆಗಳಿಂದೆ ಮುಚ್ಚುತುಂ ಪ್ರಶಾಂತತೆಯನೆ ಕೊಲ್ಲುತುಂ

ಜಗದ ಜಡಮನೆಲ್ಲಮಂ ಸಮಸ್ತಜೀವನಿಚಯಮಂ

ತಡೆಯೆವರ್ಪ ಬನ್ನಮಂ ಕರಂಗಿಸುತ್ತೆ ಸರ್ವಮಂ

ನುಂಗಿ ನೊಣೆವ ಪಾಂಗಿನಿಂ ಭಯಂಗೊಳಿಪ್ಪ ಕೂಗಿನಿಂ

ಮೆರೆದುದಲ್ಲಿ ಬಲ್ಮೆಯಿಂ ಸಮುದ್ರಮೆಂಬ ಖ್ಯಾತಿಯಿಂ ॥೧೦॥

(ಟೀ-ತುಂಬಿಕೊಂಡು ಬರುವ ಹಳ್ಳಗಳಿಂದ, ಹೆಚ್ಚಾಗಿ ಶಬ್ದಮಾಡುತ್ತಿರುವ ನೀರುಗಳಿಂದ, ಹಲವಾರು ಕಾಡಿನ ಹೊಳೆಗಳಿಂದ, ವಿಶಾಲವಾದ ನದಿಗಳಿಂದ, ತೇಲಿಕೊಂಡು ಬರುವ ಕಾಯಿಗಳಿಂದ(ತೆಂಗು ಮೊದಲಾದ ಕಾಯಿಗಳು ಸಮುದ್ರಕ್ಕೆ ಸೇರಿಕೊಂಡು ತೇಲುತ್ತಿರುವುದು) ಮುಳುಗಿಕೊಂಡು ಬರುವ ಮೀನುಗಳಿಂದ, ದಡದಿಂದ ಕೊಚ್ಚಿಕೊಂಡು ಬರುವ ಮಣ್ಣುಗಳಿಂದ, ಜಾರಿ ಬರುತ್ತಿರುವ ಕಲ್ಲುಗಳಿಂದ, ಹರಿದು ಬೀಳುವ ಬಳ್ಳಿಗಳಿಂದ, ಬೇರಿನಿಂದ ಕೂಡಿಕೊಂಡೇ ಬರುವ ಮರಗಳಿಂದ, ಅನಾಥವಾದ ಶವಗಳಿಂದ, ಅರಳಿಕೊಂಡು ಬರುವ ಚೆಲುವಾದ ಹೂವುಗಳಿಂದ ತನ್ನ ಮೈಯನ್ನು ತುಂಬಿಕೊಳ್ಳುತ್ತಾ, ಆಳವಾಗುತ್ತ ಬೀಗುತ್ತಾ, ಅಲೆಗಳಿಂದ ಅವನ್ನೆಲ್ಲವನ್ನೂ ಮುಚ್ಚುತ್ತಾ, ಶಾಂತತೆಯನ್ನು ಕೊಲ್ಲುತ್ತಾ,ಜಗತ್ತಿನ ಎಲ್ಲ ಜಡವನ್ನೂ(ನೀರನ್ನೂ) ಸಮಸ್ತಜೀವಿಗಳ ಗುಂಪನ್ನೂ, ತಡೆಯಲು ಬರುವ ಕಷ್ಟವನ್ನೂ ಎಲ್ಲವನ್ನೂ ಕರಗಿಸುತ್ತಾ, ನುಂಗಿ ನೊಣೆಯುವ ಹಾಗೆಯೇ, ಭಯವನ್ನುಂಟು ಮಾಡುವ ಕೂಗಿನಿಂದ(ಮೊರೆತದಿಂದ) ಅಲ್ಲಿ ಸಮುದ್ರವೆಂಬ ಖ್ಯಾತಿಯನ್ನು ಹೊಂದಿರುವ ಇದು ಬಲ್ಮೆಯಿಂದ(ಹೆಚ್ಚುಗಾರಿಕೆಯಿಂದ) ಮೆರೆಯುತ್ತಿತ್ತು.

ಉತ್ಸಾಹಗತಿಯ ರಗಳೆ; ಸುಲಭವಾಗಿ ಅನ್ವಯವಾಗುವ ಕಾರಣ ಪದಪದಶಃ ಅರ್ಥವನ್ನು ವಿವರಿಸಿಲ್ಲ. ಈ ರೀತಿಯ ರಗಳೆಯಲ್ಲಿ ಪಂಪ-ನಾಗವರ್ಮ ಮೊದಲಾದ ಕವಿಗಳ ಕಾವ್ಯಗಳಲ್ಲಿ ಕೆಲವು ಕಡೆ ಅಂತ್ಯಪ್ರಾಸವು ಮಾತ್ರ ಕಾಣುತ್ತದೆ. ಅದನ್ನೇ ಇಲ್ಲೂ ಅನುಸರಿಸಿದೆ. ರಗಳೆಯ ಕವಿಯೆಂದೇ ಪ್ರಸಿದ್ಧವಾದ ಹರಿಹರನೇ ಮೊದಲಾದ ಕೆಲವು ಕವಿಗಳಲ್ಲಿ ಆದಿಪ್ರಾಸವೂ ಅಂತ್ಯಪ್ರಾಸವೂ ಇರುವುದನ್ನೂ ಕಾಣಬಹುದು.)


ಬಡಬಾಗ್ನಿಯಡಿಗಿರಲ್ ಮೇಲೆ ವಿಸ್ತಾರದಿಂ

ನೀಲಗೋಲಕಮಾದ ಪಾತ್ರೆಯಂ ಚಂದದಿಂ

ಬೋನಮಂ ಬೇಯಿಸಲ್ಕಿಟ್ಟಂತೆ ತಾನಿಟ್ಟು

ಕುದಿಯಲ್ಕೆ ಮುನ್ನಮೊಳ್ನೀರನೇ ತುಂಬಿಟ್ಟು

ಬಹುವಿಧದ ಜೀವಿಗಳನದರೊಳ್ ಮುಳುಂಗಿಪಂ

ವಿಧಿಯೆಂಬ ಬಾಣಸಿಗನೆಲ್ಲರಂ ಕೊರಗಿಪಂ

ಉರ್ಕೇರೆ ತೆರೆಗಳುಂ ಸೊರ್ಕೇರೆ ಸಾಗರಂ

ಕಡೆಗಾಲಕೆಯ್ದಿರ್ಪ ರವಿಗೆ ತಾನಾಗರಂ

ರತ್ನಾಕರಂ ನಾನೆ ವಸುಧೆ ಮೇಣೆನ್ನಿಂದೆ

ಪಡೆದುದೆಲ್ಲಮನೆಂದು ಬೀಗುತಿರೆ ಮದದಿಂದೆ

ಚಂಡಮಾರುತಮತ್ತಣಿಂ ಬೀಸಿ ಬರುತಿರಲ್

ತೊಂಡಾಗಿ ಕನಲಿ ಪಡಿಯಾಗಿ ಪೋರುತ್ತಿರಲ್

ಬಾನೆತ್ತರಕೆ ಚಿಮ್ಮಿ ಪಾತಾಳದೆಡೆಗಿಳಿದು

ಸೋಲ್ತುದೆಂಬಂದದಿಂ ಪಟಪಟನೆ ಕೈಮುಗಿದು

ಪರಿಚರಿಸುತಿರ್ಪವೊಲ್ ತೆರೆಗಯ್ಯ ಬಿತ್ತರಿಸಿ

ಪೂಗಳಂ ಸುರಿವವೊಲ್ ನೊರೆಗಳಂ ಸಲೆ ಸೃಜಿಸಿ

ಪಿಂತೆೞ್ದುವಂದಲೆಗಳುಂ ತಲೆಯ ಬಾಗಿಸುತೆ

ಎರಗಿ ಮತ್ತೆಲ್ಲಮುಂ ಪಿಂದಕಡಿಗಳನಿಡುತೆ

ಸಾಗಿದಂದದೆ ಸಾಗರಂ ತೋರುತಿರ್ಪನೈ

ಬಲಶಾಲಿಗರಿಯಾಗದೆಯೆ ಬರ್ದುಂಕಿರ್ಪನೈ॥೧೧॥

(ಟೀ-ಸಮುದ್ರದ ಅಡಿಯಲ್ಲಿ ಬಡಬಾಗ್ನಿ ಇರಲು, ಮೇಲೆ ವಿಸ್ತಾರದಿಂದ ನೀಲವಾದ ಗೋಳವಾದ ಪಾತ್ರೆಯನ್ನು ಅನ್ನವನ್ನು ಬೇಯಿಸಲೋ ಎಂಬಂತೆ ಇಟ್ಟು, ಕುದಿಸುವುದಕ್ಕೋಸ್ಕರವಾಗಿ ಮೊದಲು ಒಳ್ಳೆಯ ನೀರನ್ನೇ ತುಂಬಿಸಿಟ್ಟು, ಬಹಳಷ್ಟು ವಿಧವಾದ ಜೀವಿಗಳನ್ನು ಅದರಲ್ಲಿ ಮುಳುಗಿಸಿ, ವಿಧಿ/ಬ್ರಹ್ಮ ಎಂಬಂತಹ ಬಾಣಸಿಗ ಎಲ್ಲರನ್ನೂ ಕೊರಗಿಸುತ್ತಿದ್ದಾನೆ. ತೆರೆಗಳು ಉಕ್ಕೇರುತ್ತಿರಲು, ಸಾಗರವು ಸೊಕ್ಕಿನಿಂದ ಏರುತ್ತಿರಲು, ತನ್ನ ಅಂತ್ಯಕಾಲಕ್ಕೆ ಬಂದಿರುವ(ಸಾಯುತ್ತಿರುವ) ಸೂರ್ಯನಿಗೆ ತಾನು ಆಗರವಾಗಿ, ಎಲ್ಲ ರತ್ನಗಳನ್ನೂ ತನ್ನೊಳಗೇ ಇಟ್ಟುಕೊಂಡಿದ್ದ ರತ್ನಾಕರನು ತಾನು, ಭೂಮಿ (=ವಸುಧೆ-ವಸು/ಸಂಪತ್ತನ್ನು ಧರಸಿದವಳು) ತನ್ನಿಂದಲೇ ಎಲ್ಲವನ್ನೂ ಪಡೆದುಕೊಂಡಿರುವುದು ಎಂದು ಮದದಿಂದ ಬೀಗುತ್ತಾ, ಚಂಡಮಾರುತವು ಒಂದು ಕಡೆಯಿಂದ ಬೀಸಿ ಬರುತ್ತಿರುವಾಗ, ಉಗ್ರವಾಗಿ, ಕೂಗಿಕೊಂಡು, ಅದಕ್ಕೆ ಪ್ರತಿಯಾಗಿ ಹೋರಾಡುತ್ತಿರಲು, ಆಕಾಶದೆತ್ತರಕ್ಕೆ ಚಿಮ್ಮಿ, ಪಾತಾಳದ ಆಳಕ್ಕೆ ಇಳಿದು, ಸೋತಿದ್ದೇನೆ ಎಂದು ಪಟಪಟನೆ ಕೈಮುಗಿಯುತ್ತಾ, ಸುತ್ತ ಓಡಾಡುತ್ತಿರುವಂತೆ, ತೆರೆಗಳೆಂಬ ಕೈಗಳನ್ನು ವಿಸ್ತಾರವಾಗಿ ಮಾಡಿ, ಹೂವುಗಳನ್ನು ಸುರಿಯುತ್ತಿರುವ ಹಾಗೆಯೇ, ನೊರೆಯನ್ನು ಸೃಷ್ಟಿಸಿ, ಹಿಂದೆ ಎದ್ದು ಬಂದ ಅಲೆಗಳೂ ತಲೆಯನ್ನು ಬಾಗಿಸುತ್ತಾ, ನಮಸ್ಕರಿಸುತ್ತಾ, ಮತ್ತೆ ಎಲ್ಲವೂ ಹಿಂದಕ್ಕೆ ಹಿಂದಕ್ಕೆ ಹಜ್ಜೆಯನ್ನು ಇಡುತ್ತಾ ಸಾಗುತ್ತಿರುವಂತೆ ಸಾಗರನು ತೋರುತ್ತಿದ್ದನು. ಬಲಶಾಲಿಗಳಿಗೆ ಶತ್ರುವಾಗದೆಯೇ ಬದುಕಿದ್ದನು.

ಲಲಿತರಗಳೆ ಎಂದು ಪ್ರಸಿದ್ಧವಾದ ಪಂಚಮಾತ್ರಾಗತಿಯ ರಗಳೆ)


ವ॥ಅಂತಿರೆ

(ಹಾಗಿರಲು)


ಕಂ॥ ಕಡಲಿನ ಮೊರೆತಮನಾಲಿಸು

ತಡಿಯಿಡುತುಂ ರಮ್ಯಮಾದ ದೃಶ್ಯಂಗಳನೇ

ಪಡಿಯಾಗಿ ತೋರ್ಪ ಪರಿಯಂ

ತಡಿಯಿಂ ನೋಡುತ್ತೆ ಬಂದರಿರ್ವರ್ ಸತಿಯರ್ ॥೧೨॥

(ಟೀ- ಕಡಲಿನ-ಸಮುದ್ರದ, ಮೊರೆತಮಂ-ಶಬ್ದವನ್ನು, ಆಲಿಸುತೆ-ಕೇಳುತ್ತಾ, ಅಡಿಯಿಡುತುಂ-ಹಜ್ಜೆಯನ್ನು ಇಡುತ್ತಾ, ರಮ್ಯಮಾದ-ಸುಂದರವಾದ, ದೃಶ್ಯಂಗಳನೇ-ದೃಶ್ಯಗಳನ್ನು, ಪಡಿಯಾಗಿ-ಪ್ರತಿಯಾಗಿ, ತೋರ್ಪ-ತೋರುವ, ಪರಿಯಂ-ಪರಿಯನ್ನು/ವಿಧವನ್ನು, ತಡಿಯಿಂ-ದಡದಿಂದ, ಇರ್ವರ್-ಇಬ್ಬರೂ, ಸತಿಯರ್-ಸತಿಯರು, ನೋಡುತ್ತೆ-ನೋಡುತ್ತ, ಬಂದರ್-ಬಂದರು. ಕಂದಪದ್ಯ)


ಅಸುರರ್ಗಾಶ್ರಯಮಿತ್ತಿಂ

ದು ಸುರರ್ಗಮರ್ದಿತ್ತನೀ ತಟಸ್ಥನೆನುತ್ತುಂ

ರಸಧಿಯ ತಟಸ್ಥರೆನೆ ಬೆ

ಕ್ಕಸದಿಂ ನೋಡುತ್ತೆ ಬಂದರಿರ್ವರ್ ಸತಿಯರ್ ॥೧೩॥

(ಟೀ- ಅಸುರರ್ಗೆ-ರಾಕ್ಷಸರಿಗೆ, ಆಶ್ರಯಂ+ಇತ್ತು-ಆಶ್ರಯವನ್ನು ಕೊಟ್ಟು, ಇಂದು-ಇಂದು,  ಸುರರ್ಗೆ-ದೇವತೆಗಳಿಗೆ, ಈ ತಟಸ್ಥಂ-ಈ ತಟಸ್ಥನಾದ ಸಮುದ್ರನು (ಪಕ್ಷಪಾತವಿಲ್ಲದವನು) ಅಮರ್ದು+ಇತ್ತಂ-ಅಮೃತವನ್ನು ಕೊಟ್ಟನು,  ಎನುತ್ತುಂ-ಎನ್ನುತ್ತಾ, ರಸಧಿಯ-ಸಮುದ್ರದ, ತಟಸ್ಥರ್-ದಡದಲ್ಲಿರುವವರು, ಎನೆ-ಎನ್ನಲು, ಬೆಕ್ಕಸದಿಂ-ಆಶ್ಚರ್ಯದಿಂದ, ಇರ್ವರ್-ಇಬ್ಬರೂ, ಸತಿಯರ್-ಸತಿಯರು, ನೋಡುತ್ತೆ-ನೋಡುತ್ತ, ಬಂದರ್-ಬಂದರು. ಕಂದಪದ್ಯ)


ಅಂದು ವರಾಹದ ಸದ್ರೂ

ಪಿಂದಂ ಹರಿಯಿಳೆಯ ತರ್ಪೊಡಾದುಲ್ಲೋಲಂ

ಸಂದುದು ನಿರುತಮೆನುತ್ತುಂ

ಚಂದದೆ ನೋಡುತ್ತೆ ಬಂದರಿರ್ವರ್ ಸತಿಯರ್ ॥೧೪॥

(ಟೀ-ಅಂದು-ಆ ದಿನ, ವರಾಹದ-ವರಾಹಾವತಾರದಲ್ಲಿ, ಸದ್ರೂಪಿಂದಂ-ಒಳ್ಳೆಯ ರೂಪದಿಂದ, ಹರಿಯು-ಶ್ರೀಮನ್ನಾರಾಯಣನು, ಇಳೆಯ-ಭೂಮಿಯನ್ನು, ತರ್ಪೊಡೆ-ತರುವಾಗ, ಆದ- ಆಗಿರುವ, ಉಲ್ಲೋಲಂ-ಅಲೆಗಳು,ನಿರುತಂ-ಸದಾಕಾಲ, ಸಂದುದು-ಸಲ್ಲುತ್ತಿವೆ, ಎನುತ್ತುಂ-ಎನ್ನುತ್ತಾ, ಚಂದದೆ-ಚಂದದಿಂದ,ಇರ್ವರ್-ಇಬ್ಬರೂ, ಸತಿಯರ್-ಸತಿಯರು, ನೋಡುತ್ತೆ-ನೋಡುತ್ತ, ಬಂದರ್-ಬಂದರು. ಕಂದಪದ್ಯ )


ತಳಮಂ ಕಾಂಬೆನೆನೆ ರಸಾ

ತಳಮಂ ಕಂಡಲ್ಲಿ ವಾರ್ಧಿಯಿರ್ಪುದೆನುತ್ತುಂ

ಬಲದಿಂದತ್ರಿಯೆನಲ್ ಪಂ

ಬಲದಿಂ ನೋಡುತ್ತೆ ಬಂದರಿರ್ವರ್ ಸತಿಯರ್ ॥೧೫॥

(ಟೀ-ತಳಮಂ-(ಸಮುದ್ರದ)ತಳವನ್ನು/ಕೊನೆಯನ್ನು, ಕಾಂಬೆಂ+ಎನೆ-ನೋಡುತ್ತೇನೆ ಎಂದು, ರಸಾತಳಮಂ-ರಸಾತಳವನ್ನು, ಕಂಡು+ಅಲ್ಲಿ-ನೋಡಿ ಅಲ್ಲಿ, ವಾರ್ಧಿಯು-ಸಮುದ್ರವು, ಇರ್ಪುದು-ಇದೆ, ಎನುತ್ತುಂ-ಎನ್ನುತ್ತಾ, ಬಲದಿಂದೆ-ತನ್ನ ಬಲದಿಂದ/ಶಕ್ತಿಯಿಂದ, ಅತ್ರಿಯು-ಅತ್ರಿ ಮಹರ್ಷಿಯು, ಎನಲ್-ಹೇಳಲು, ಪಂಬಲದಿಂ-ಹಂಬಲದಿಂದ, ಇರ್ವರ್-ಇಬ್ಬರೂ, ಸತಿಯರ್-ಸತಿಯರು, ನೋಡುತ್ತೆ-ನೋಡುತ್ತ, ಬಂದರ್-ಬಂದರು. ಕಂದಪದ್ಯ. "ತಳಮಂ...ರಸಾತಳಮಂ" ಎಂಬಲ್ಲಿ ಹಾಗೂ "ಬಲದಿಂ...ಪಂಬಲದಿಂ" ಎಂಬ ಲ್ಲಿ ಪಾದದ ಆದಿಯಲ್ಲಿ ಯಮಕಾಲಂಕಾರವಿದೆ. ಮುಂದಿನ ಮೂರು ಪದ್ಯಗಳಲ್ಲೂ ಈ ಯಮಕಪ್ರಭೇದವು ಬಳಸಲ್ಪಟ್ಟಿದೆ)


ನಡುಗಡ್ಡೆಗಳೋ ಮೆರೆವವು

ನಡುಗಲ್ಕಾಶ್ರಯಮನಾಂತ ಮೈನಾಕಮೊ ಸೋ

ಲ್ತಡಿಯಿಟ್ಟನೆಂದು ನುಡಿಯುತೆ 

ತಡಿಯಿಂ ನೋಡುತ್ತೆ ಬಂದರಿರ್ವರ್ ಸತಿಯರ್ ॥೧೬॥

(ಟೀ-ಮೆರೆವವು-ಮೆರೆಯುತ್ತಿರುವವು, ನಡುಗಡ್ಡೆಗಳೋ-ದ್ವೀಪಗಳೋ, (ಅಥವಾ) ನಡುಗಲ್ಕೆ- ನಡುಗುತ್ತಿರಲು/ಕಂಪಿಸುತ್ತಿರಲು, ಆಶ್ರಯಮಂ+ಆಂತ-ಆಶ್ರಯವನ್ನು ಹೊಂದಿದ/ಮೊರೆಹೊಕ್ಕ, ಮೈನಾಕಮೊ-ಮೈನಾಕವೆಂಬ ಪರ್ವತವೋ, ಸೋಲ್ತು-ಸೋತು, ಅಡಿಯಿಟ್ಟಂ- ಕಾಲನ್ನು ಇಟ್ಟನು, ಎಂದು-ಹೀಗೆಂದು, ನುಡಿಯುತೆ-ಹೇಳುತ್ತಾ, ತಡಿಯಿಂ-ದಡದಿಂದ, ನೋಡುತ್ತೆ-ನೋಡುತ್ತ,ಇರ್ವರ್-ಇಬ್ಬರೂ, ಸತಿಯರ್-ಸತಿಯರು,ಬಂದರ್-ಬಂದರು. ಕಂದಪದ್ಯ. ನಡುಗಡ್ಡೆ.... ನಡುಗಲ್, ಸೋಲ್ತಡಿಯಿಟ್ಟ..ತಡಿಯಿಂ ಎಂಬಲ್ಲಿ ಯಮಕಾಲಂಕಾರವಿದೆ)


ನಗಮಂ ಮರೆಮಾಜಲ್ ತ-

ನ್ನಗಮಂ ಗುರುಸೇವೆಯಿಂದೆ ಕಳೆದಪೆನೆನುತಿ-

ಬ್ಬಗೆಯಿಂದಲೆಗೆಯ್ದಪನಂ

ಬಗೆಯಿಂದರಱಿಯುತ್ತೆ ಬಂದರಿರ್ವರ್ ಸತಿಯರ್ ॥೧೭॥

(ಟೀ-ನಗಮಂ-ಪರ್ವತವನ್ನು, ಮರೆಮಾಜಲ್-ಅಡಗಿಸಿಡಲು, ತನ್ನ-(ಸಮುದ್ರದ) ಅಗಮಂ-ಪಾಪವನ್ನು, ಗುರುಸೇವೆಯಿಂದೆ-ಹಿರಿಯರ ಸೇವೆಯಿಂದ, ಕಳೆದಪೆಂ-ಕಳೆದುಕೊಳ್ಳುತ್ತೇನೆ, ಎನುತೆ-ಎಂದುಕೊಳ್ಳುತ್ತಾ, ಇಬ್ಬಗೆಯಿಂದೆ- ಎರಡು ಮನಸ್ಸಿನಿಂದ, ಅಲೆಗೆಯ್ದಪನಂ- ಅಲೆಗಳನ್ನು ಉಂಟು ಮಾಡುತ್ತಿರುವವನನ್ನು, ಬಗೆಯಿಂದೆ-ಮನಸ್ಸಿನಿಂದ, ಅಱಿಯುತ್ತೆ-ತಿಳಿದುಕೊಳ್ಳುತ್ತ, ಇರ್ವರ್-ಇಬ್ಬರೂ, ಸತಿಯರ್-ಸತಿಯರು, ಬಂದರ್-ಬಂದರು. ಕಂದಪದ್ಯ. ನಗಮಂ.. ತನ್ನಗಮಂ.. ಇಬ್ಬಗೆಯಿಂ.. ಬಗೆಯಿಂ.. ಎಂಬಲ್ಲಿ ಯಮಕಾಲಂಕಾರವಿದೆ)


ಗಣಿಸಲ್ ವಿಚಿತ್ರರತ್ನದ

ಗಣಿ ಸಲ್ವಂ ವಾಹಿನೀಪನೀತನಮೂಲ್ಯಂ

ಮಣಿಯುತಗರ್ಭನೆನುತ್ತುಂ

ಮಣಿಯುತೆ ನೋಡುತ್ತೆ ಬಂದರಿರ್ವರ್ ಸತಿಯರ್ ॥೧೮॥

(ಟೀ-ಗಣಿಸಲ್-ಲೆಕ್ಕ ಹಾಕಿದರೆ/ಆಲೋಚಿಸಿದರೆ, ವಿಚಿತ್ರರತ್ನದ-ಆಶ್ಚರ್ಯಜನಕವಾದ ರತ್ನಗಳ, ಗಣಿ-ಆಗರ/ಖನಿ,  ಸಲ್ವಂ-ಸಲ್ಲುತ್ತಿರುವ, ವಾಹಿನೀಪಂ-ನದಿಗಳ ಒಡೆಯನಾದ ಸಮುದ್ರನು, ಈತಂ-ಈತನು, ಅಮೂಲ್ಯಂ-ಅಮೂಲ್ಯನಾದವನು/ಬೆಲೆಕಟ್ಟಲಾಗದವನು/ಬಹಳ ಬೆಲೆಯುಳ್ಳವನು, ಮಣಿಯುತಗರ್ಭಂ-ರತ್ನಮಣಿಗಳಿಂದ ಕೂಡಿದ ಗರ್ಭವನ್ನು ಉಳ್ಳವನು (ಗರ್ಭದಲ್ಲಿ ಮುತ್ತು ರತ್ನಗಳನ್ನು ಹೊಂದಿರುವವನು) ಎನುತ್ತುಂ-ಎನ್ನುತ್ತಾ, ಮಣಿಯುತೆ-ಅವನಿಗೆ ನಮಸ್ಕರಿಸುತ್ತಾ, ನೋಡುತ್ತೆ-ನೋಡುತ್ತಾ ಇರ್ವರ್-ಇಬ್ಬರೂ, ಸತಿಯರ್-ಸತಿಯರು, ಬಂದರ್-ಬಂದರು. ಕಂದಪದ್ಯ. ಗಣಿಸಲ್... ಗಣಿ ಸಲ್ವಂ... ಮಣಿಯುತಗರ್ಭ.. ಮಣಿಯುತೆ.. ಇಲ್ಲಿ ಯಮಕಾಲಂಕಾರವಿದೆ.)


ವ॥ ಅಂತು ಮುಂ ಬರುತಿರೆಯಿರೆ

(ಅಂತು-ಹಾಗೆ, ಮುಂ-ಮುಂದೆ, ಬರುತೆ+ಇರೆ+ಇರೆ-ಬರುತ್ತಿರಲು)


ಚಂ॥ ಕೊರಲನೆ ಕೊಂಕುಗೆಯ್ಯುತೆ ಪದಂಗಳನೆತ್ತಿ ನೆಗೞ್ದು ಚಿಮ್ಮುತುಂ

ಭರದೆ ನಿಮಿರ್ಚುತುಂ ಕಿವಿಗಳಂ ಪಸುರ್ವುಲ್ಗಳನೊಲ್ದು ತಿನ್ನುತುಂ

ಗೊರಸಿನೊಳಲ್ಲಿ ಬೇಗದೆ ಬೆಱಂಟುತೆ ಚಂಚಲಮಾದ ಚರ್ಯೆಯಿಂ

ಪೆಱೆಗೆಣೆಯಾದ ಬಣ್ಣದೊಳಗಿರ್ದುದು ವಾಜಿಯದೋ ಸುರೇಂದ್ರನಾ ॥೧೯॥

(ಟೀ- ಅದೋ-ಅದೋ, ಸುರೇಂದ್ರನಾ-ದೇವೆಂದ್ರನ ಆ, ವಾಜಿಯು-ಕುದುರೆಯು  (ಉಚ್ಚೈಶ್ರವಸ್ಸು), ಕೊರಲನೆ-ಕೊರಳನ್ನು/ಕುತ್ತಿಗೆಯನ್ನು, ಕೊಂಕುಗೆಯ್ಯುತೆ-ವಕ್ರವಾಗಿಸುತ್ತ/ಡೊಂಕಾಗಿಸುತ್ತ, ಪದಂಗಳಂ-ಕಾಲುಗಳನ್ನು, ಎತ್ತಿ ನೆಗೞ್ದು-ಮೇಲೆತ್ತಿ ಚೆನ್ನಾಗಿ, ಚಿಮ್ಮುತುಂ- ಜಿಗಿಯುತ್ತಾ, ಭರದೆ-ಬೇಗದಲ್ಲಿ, ಕಿವಿಗಳಂ-ತನ್ನ ಕಿವಿಗಳನ್ನು, ನಿಮಿರ್ಚುತುಂ-ನಿಗುರಿಸುತ್ತಾ/ನಿಮಿರಿಸಿಕೊಂಡು, ಪಸುರ್ವುಲ್ಗಳಂ-ಹಸುರು ಹುಲ್ಲುಗಳನ್ನು, ಒಲ್ದು-ಒಲಿದು, ತಿನ್ನುತುಂ-ತಿನ್ನುತ್ತಾ, ಗೊರಸಿನೊಳ್-ತನ್ನ ಕಾಲಿನ ಗೊರಸಿನಲ್ಲಿ, ಅಲ್ಲಿ-ಆ ಸ್ಥಳದಲ್ಲಿ, ಬೇಗದೆ-ವೇಗದಲ್ಲಿ, ಬೆಱಂಟುತೆ-ನೆಲವನ್ನು ಕೆದರುತ್ತಾ/ಪೆರಟುತ್ತಾ, ಚಂಚಲಂ+ಆದ-ಚಾಂಚಲ್ಯದಿಂದ ಕೂಡಿದ, ಚರ್ಯೆಯಿಂ-ನಡತೆಯಿಂದ, ಪೆಱೆಗೆ-ಚಂದ್ರನಿಗೆ, ಎಣೆಯಾದ-ಸಮಾನವಾದ, ಬಣ್ಣದೊಳಗೆ- ಬಣ್ಣದಲ್ಲಿ ಇರ್ದುದು-ಇತ್ತು, ಚಂಪಕಮಾಲಾವೃತ್ತ)


ವ॥ಅದನೀಕ್ಷಿಸಲ್ಕೆ ಕದ್ರುವುಂ ವಿನತೆಯುಂ ಸ್ತುತಿಸಿದರ್

(ಅದಂ-ಅದನ್ನು, ಈಕ್ಷಿಸಲ್ಕೆ-ನೋಡುವುದಕ್ಕೆ, ಕದ್ರುವುಂ-ಕದ್ರುವೂ, ವಿನತೆಯುಂ-ವಿನತೆಯೂ, ಸ್ತುತಿಸಿದರ್-ಸ್ತುತಿ ಮಾಡಿದರು-)

ಶ್ಲೋ॥ ವಿಶ್ವವಿಖ್ಯಾತಮಾಗಿರ್ಪೈ ಶಾಶ್ವತರ್ ಮೆಚ್ಚಿ ಕೊಂಡಿರಲ್

ಅಶ್ವ!ದರ್ಶನಮೀಯೈ ನೀಂ ನಶ್ವರರ್ಗೆ ದಯಾಪರಾ॥೨೦॥

(ಟೀ-ಶಾಶ್ವತರ್-ಶಾಶ್ವತರು/ದೇವತೆಗಳು, (ನಿನ್ನನ್ನು) ಮೆಚ್ಚಿಕೊಂಡಿರಲ್-ಮೆಚ್ಚಿಕೊಂಡಿರಲು, ವಿಶ್ವವಿಖ್ಯಾತಂ-ಜಗತ್ಪ್ರಸಿದ್ಧನು, ಆಗಿರ್ಪೈ-ಆಗಿದ್ದೀಯಾ, ಅಶ್ವ!-ಕುದುರೆಯೇ (ಉಚ್ಚೈಶ್ರವಸ್ಸೇ) ದಯಾಪರಾ-ದಯೆಯುಳ್ಳವನೇ, ನಶ್ವರರ್ಗೆ-ನಾಳೆ ಇಲ್ಲದವರಾಗುವವರಿಗೆ/ನಶ್ವರರಾದವರಿಗೆ (ನಮಗೆ) ನೀಂ-ನೀನು, ದರ್ಶನಂ+ಈಯೈ-ದರ್ಶನವನ್ನು ಕೊಡು/ಕಾಣಿಸಿಕೋ. ಅನುಷ್ಟುಪ್/ಶ್ಲೋಕಚ್ಛಂದಸ್ಸು )


ಪುಣ್ಯಶ್ಲೋಕ!ವರಾಕಾರ! ಪಣ್ಯದೂರ! ಖಗಾಮಿಯೇ

ಗಣ್ಯನೇಕಧರಾ ಸ್ಫಾರ!ಗುಣ್ಯಶ್ವಾ! ರಯಗಾಮಿಯೇ ॥೨೧॥

(ಟೀ-ಪುಣ್ಯಶ್ಲೋಕ!-ಪುಣ್ಯವಾದ ಕೀರ್ತಿಯುಳ್ಳವನೇ, ವರಾಕಾರ!-ಒಳ್ಳೆಯ ಶರೀರವನ್ನು/ಆಕಾರವನ್ನು ಹೊಂದಿರುವವನೇ,  ಪಣ್ಯದೂರ!-ದುಡ್ಡಿಗೆ ಸಿಗಲಾರದವನೇ, ಖಗಾಮಿಯೇ-ಆಕಾಶದಲ್ಲಿಯೂ ಸಂಚರಿಸುವ ಶಕ್ತಿಯುಳ್ಳವನೇ, ಗಣ್ಯಂ-ಸ್ತುತ್ಯರ್ಹನಾದವನು, ಏಕಧರಾ-ಒಬ್ಬನನ್ನೇ ಧರಿಸಿರುವವನೇ(?) ಸ್ಫಾರ!-ಕಾಂತಿಯುಳ್ಳವನೇ, ಗುಣ್ಯಶ್ವಾ!-ಗುಣವುಳ್ಳ ಕುದುರೆಯೇ, ರಯಗಾಮಿಯೇ-ವೇಗವಾಗಿ ಹೋಗುವವನೇ!

ಅನುಷ್ಟುಪ್/ಶ್ಲೋಕಚ್ಛಂದಸ್ಸು. ಈ ಪದ್ಯದಲ್ಲಿ ಎಲ್ಲವೂ ಉಚ್ಚೈಶ್ರವಸ್ಸಿಗೆ ವಿಶೇಷಣಗಳಾಗಿ ಕೇವಲ ಸಂಬೋಧನೆಯೇ ಇದೆ. ಗೋಮೂತ್ರಿಕಬಂಧವೂ ಇದೆ.)


ಚಂ॥ ಸಿರಿಯೊಡೆ ಪುಟ್ಟಿ ಮೆಯ್ಸಿರಿಯನಾಂತೆ ಸುಧಾಂಶುವೊಡಂ ನೆಗೞ್ದೊಡಂ

ಸುರುಚಿರರೂಪನಾಂತೆ ಸುಧೆಯೊಂದುತೆ ಸಂದು ಸಮಸ್ತಸೇವ್ಯನಾ

ಸುರಪತಿಯೊಲ್ಮೆಯಾಂತೆ ಸುರೆಗಾದ ಸಹೋದರಭಾವದಿಂದೆ ದಲ್

ಬರಿದೆನೆ ಚಂಚಲತ್ವಕಿದೊ ನೋಂತೆ ಹಯಾ! ಸುರಲೋಕರಾಣ್ನಯಾ ॥೨೨॥

(ಟೀ-ಸಿರಿಯೊಡೆ-ಸಂಪತ್ತಿನ ಜೊತೆಯಲ್ಲಿ/ಲಕ್ಷ್ಮಿಯ ಜೊತೆಯಲ್ಲಿ, ಪುಟ್ಟಿ-ಹುಟ್ಟಿ, ಮೆಯ್ಸಿರಿಯಂ-ಮೈಯಲ್ಲಿ ಸಿರಿಯನ್ನು, ಆಂತೆ-ಹೊಂದಿದೆ, ಸುಧಾಂಶುವೊಡಂ-ಚಂದ್ರನ ಜೊತೆಯಲ್ಲಿಯೂ, ನೆಗೞ್ದೊಡಂ-ಬಂದಿದ್ದರಿಂದಲೂ/ಪ್ರಸಿದ್ಧನಾಗಿರುವುದರಿಂದಲೂ, ಸುರುಚಿರರೂಪಂ+ಆಂತೆ-ಸುಂದರವಾದ ರೂಪವನ್ನು ಹೊಂದಿದೆ. ಸುಧೆಯ+ಒಂದುತೆ-ಅಮೃತವನ್ನು ಹೊಂದಿಕೊಂಡು, ಸಂದು-ಸಲ್ಲುವುದರಿಂದ, ಸಮಸ್ತಸೇವ್ಯನಾ-ಎಲ್ಲರಿಂದಲೂ ಸೇವಿಸಲ್ಪಡುತ್ತಿರುವ ಆ, ಸುರಪತಿಯ-ದೇವೇಂದ್ರನ, ಒಲ್ಮೆ+ಆಂತೆ-ಪ್ರೀತಿಯನ್ನು ಹೊಂದಿದೆ, ಸುರೆಗೆ-ಸುರೆ/ಸಾರಾಯಿಗೆ, ಆದ-ಆಗಿರುವ ಸಹೋದರಭಾವದಿಂದೆ-ಸಹೋದರತ್ವದಿಂದ (ಸಾರಾಯಿಯ ಜೊತೆಯಲ್ಲಿ ಹುಟ್ಟಿದ್ದರಿಂದ)  ಬರಿದೆನೆ-ಬರಿದಾಗಿ/ವ್ಯರ್ಥವಾಗಿ, ಇದೊ-ಇದೋ, ಚಂಚಲತ್ವಕೆ-ಚಾಂಚಲ್ಯಕ್ಕೆ, ನೋಂತೆ-ವ್ರತತೊಟ್ಟೆ, ದಲ್-ಅಲ್ಲವೇ! ಹಯಾ!-ಕುದುರೆಯೇ! ಸುರಲೋಕರಾಣ್ನಯಾ- (ಸುರಲೋಕ-ರಾಟ್+ನಯಾ)ದೇವಲೋಕದ ರಾಜನಾದ ಇಂದ್ರನನ್ನು ಹೊರುವವನೇ! ಚಂಪಕಮಾಲಾವೃತ್ತ)


(ಮುಂದಿನ ಭಾಗದಲ್ಲಿ ಕದ್ರೂವಿನತೆಯರ ಪಂದ್ಯದ ಫಲ, ಗರುಡನ ಜನನ)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ