Powered By Blogger

ಭಾನುವಾರ, ಏಪ್ರಿಲ್ 6, 2014

ಸಹೃದಯಕಾಲ-೫-ನಿಷಧಂ ಜನಜೀವನೌಷಧಂ

ತಮ್ಮ ೧೮ನೇ ವಯಸ್ಸಿನಲ್ಲೇ ಕವಿತ್ವಶಕ್ತಿಯನ್ನು ಪ್ರದರ್ಶಿಸಿ ಮೈಸೂರು ಮುಮ್ಮಡಿಕೃಷ್ಣರಾಜ ಒಡೆಯರ್ ಅವರ ಆಸ್ಥಾನದಲ್ಲಿ ಕವಿಯಾಗಿದ್ದರು ಬಸವಪ್ಪಶಾಸ್ತ್ರಿಗಳು. ತಮ್ಮ ಅತ್ಯಲ್ಪಜೀವಿತಕಾಲದಲ್ಲಿಯೇ(೧೮೪೩-೧೮೯೧) ಅನೇಕ ಸಂಸ್ಕೃತಕೃತಿಗಳನ್ನೂ ಆಂಗ್ಲನಾಟಕಗಳನ್ನೂ ಕನ್ನಡಕ್ಕೆ ಭಾಷಾಂತರಿಸಿದ್ದಷ್ಟೇ ಅಲ್ಲದೇ ಸ್ವತಂತ್ರವಾಗಿ  ಕನ್ನಡದಲ್ಲಿಯೂ ಸಂಸ್ಕೃತದಲ್ಲಿಯೂ ಅನೇಕ ಕೃತಿಗಳನ್ನು ರಚಿಸಿದರು. ಅಂತಹ ಒಂದು ಸ್ವತಂತ್ರ ಕೃತಿ 'ದಮಯಂತೀಸ್ವಯಂವರ'. ಇದೊಂದು ಚಂಪೂಶೈಲಿಯ ಕೃತಿಯಾಗಿದ್ದಾದರೂ ಪದ್ಯಬಾಹುಳ್ಯವೇ ಕಾಣುತ್ತದೆ. ಅಲ್ಲದೇ ಬಗೆಬಗೆಯ ಛಂದಸ್ಸುಗಳ ಪ್ರಯೋಗವೂ ಅತ್ಯಂತ ಹೃದ್ಯವಾಗುವ ವರ್ಣನೆಗಳೂ ಸೊಗಸಾಗಿ ಮೇಳೈಸಿವೆ.

PC:Internet
ನಿಷಧರಾಜ ನಲನನ್ನು ದಮಯಂತಿ ಸ್ವಯಂವರದಲ್ಲಿ ವರಿಸುವಲ್ಲಿಯವರೆಗಿನ ಕಥಾನಕವಷ್ಟೇ ಇದರ ಕಥಾನಕವಾದರೂ ಅಲ್ಲಲ್ಲಿ ಬಳಸುವ ಶ್ಲೇಷಾದಿ ಚಮತ್ಕಾರಗಳೂ ಉಪಮಾರೂಪಕಾದಿ ಅಲಂಕಾರಗಳೂ ಸೊಗಸಾಗಿ ಕಥೆಯನ್ನು ಕಟ್ಟಿಟ್ಟಿವೆ.
ಅಭಿನವಕಾಳಿದಾಸ ಎಂಬ ಬಿರುದಿಗೆ ಪಾತ್ರರಾದ ಇವರ ದಮಯಂತೀಸ್ವಯಂವರದಲ್ಲಿ ನಿಷಧದೇಶವರ್ಣನೆಯ ಸಂದರ್ಭದಲ್ಲಿ ಬರುವ ಮೊದಲ ಆಶ್ವಾಸದ ಎರಡನೇ ಪದ್ಯವನ್ನು ಈ ಸಂಚಿಕೆಗೆ ಆರಿಸಿಕೊಂಡಿದ್ದೇನೆ.

ಚಂಪಕಮಾಲೆ||
ನವಫಲಶಾಲಿ ಶಾಲಿವನದಿಂ ಜನನಂದನ ನಂದನಂಗಳಿಂ 
ಕುವಲಯಸಾರ ಸಾರಸ ವಿರಾಜಿ ವಿರಾಜಿ ನದೀನದಂಗಳಿಂ
ಸುವಿಮಲ ರೂಪಶೀಲರಮಣೀ ರಮಣೀಯ ನರರ್ಕಳಿಂ ಸವೈ
ಭವಭವನಂಗಳಿಂ ಮೆರೆಗುಮಾ ನಿಷಧಂ ಜನಜೀವನೌಷಧಂ||
(ಪ್ರಥಮಾಶ್ವಾಸ-೨)
(ಹೊಸ ಫಲವನ್ನು ಹೊತ್ತುನಿಂತ ಶಾಲಿ(ಭತ್ತ)ಯ ವನದಿಂದಲೂ, ಜನರಿಗೆ ಆನಂದವನ್ನು ಕೊಡುವಂತಹ ಉದ್ಯಾನವನಗಳಿಂದಲೂ, ಕುವಲಯ(ಕೆನ್ನಯ್ದಿಲೆ)ಹೂವಿನ ಸಾರದಿಂದಲೂ ಸಾರಸ ಪಕ್ಷಿಗಳ ಸಮೂಹದಿಂದಲೂ ವಿರಾಜಿಸುತ್ತಿರುವ ನದೀನದಗಳಿಂದಲೂ, ಸುವಿಮಲವಾದ ರೂಪಶೀಲಗಳಿಂದ ಕೂಡಿದ ರಮಣಿಯರಿರುವ ರಮಣೀಯವಾದ ಜನರಿಂದಲೂ, ವೈಭವಸಹಿತವಾದ ದೊಡ್ಡದೊಡ್ಡ ಭವನಗಳಿಂದಲೂ ಜನಜೀವನಕ್ಕೆ ಔಷಧವಾದ ನಿಷಧದೇಶ ಮೆರೆಯುತ್ತಿತ್ತು.)

ಇಲ್ಲಿರುವ ನಿಷಧದ ವರ್ಣನೆ ಸಾಧಾರಣವಾದ ಉಲ್ಲೇಖಗಳಿಂದ ಕೂಡಿದ್ದರೂ ಮೊದಲೆರಡು ಪಾದಗಳಲ್ಲಿ ಪಾದಾಂತಯತಿಸಹಿತವಾಗಿ  ಪದ್ಯದಲ್ಲಿ ಯಥೇಷ್ಟವಾಗಿ ಜೊತೆಜೊತೆಯಾಗಿ ಬರುವ  ಛೇಕಾನುಪ್ರಾಸಗಳ ಸ್ವಾರಸ್ಯ ಮೆಚ್ಚುವಂತಿದೆ. '..ಫಲಶಾಲಿ ಶಾಲಿ..', '..ಜನನಂದನ ನಂದನಂಗಳಿಂ..' '..ಸಾರ ಸಾರಸ..'..ವಿರಾಜಿ ವಿರಾಜಿ..' '..ನದೀನದಂ..' '..ರಮಣೀ ರಮಣೀಯ..' '..ಸವೈಭವಭವನಂ..' ಎಂಬೆಲ್ಲ ಕಡೆಗಳಲ್ಲಿ ಬರುವ ಈ ಪದಯುಗ್ಮಗಳ ಸೊಗಸೇ ಸೊಗಸು. ಕೊನೆಯಲ್ಲಿ 'ನಿಷಧಂ ಜನಜೀವನೌಷಧಂ' ಎಂದು ಅವುಗಳಿಗೆಲ್ಲ ಪೂರ್ಣವಿರಾಮ ಹಾಕಿದಂತೆ 'ನಿಷಧಂ' ಎಂಬ ಪದಕ್ಕೆ ಪ್ರಾಸವಾಗಿ 'ಜನಜೀವನೌಷಧಂ' ಎಂದು ತಂದು ನಿಲ್ಲಿಸುವುದೂ ಅಷ್ಟೇ ಹೃದ್ಯವಾಗಿದೆ.


ಬುಧವಾರ, ಏಪ್ರಿಲ್ 2, 2014

ಸಹೃದಯಕಾಲ-೪ :ವಸಂತನೃಪಾಲ ನಡೆದನು ಪಾಂಡುವಿನ ಮೇಲೆ

ಕುಮಾರವ್ಯಾಸ PC : Internet

ಪಂಚಾಂಗದ ಪ್ರಕಾರ ಇದೀಗ ತಾನೆ ಹೊಸ ಸಂವತ್ಸರ ಕಾಲಿಡುತ್ತಿದೆ. ಪ್ರಕೃತಿಯಲ್ಲಿ ಅದಾಗಲೇ ವಸಂತ ಋತು ಅಡರಿದೆ. 
ಕಾವ್ಯಲೋಕದಲ್ಲಿ ಕಾಳಿದಾಸ 'ಋತುಸಂಹಾರ'ಎಂಬ ಕಾವ್ಯವನ್ನೇ ರಚಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಅಷ್ಟೇ ಅಲ್ಲದೇ ಬಹಳಷ್ಟು ಕಾವ್ಯಗಳಲ್ಲಿ ಕಾವ್ಯದ ಔಚಿತ್ಯಕ್ಕೆ ತಕ್ಕಂತೆ ಅಲ್ಲಲ್ಲಿ ಋತುವರ್ಣನೆ ಯಥೇಷ್ಟವಾಗಿ ಕಂಡುಬರುತ್ತವೆ. ಇನ್ನು ಕನ್ನಡದ ಕಾವ್ಯಲೋಕದಲ್ಲಿ ವಸಂತಶೋಭೆಯನ್ನು ಮೆರೆದಂತಹ ಕವಿ ಕುಮಾರವ್ಯಾಸ. ಅವನ ಕೀರ್ತಿಯೂ ಕಾವ್ಯವೂ ನಾಡಿನ ಉದ್ದಗಲಗಳಲ್ಲೂ ಆಚಂದ್ರಾರ್ಕವಾಗಿ ನೆಲೆಯಾಗಿದೆಯಷ್ಟೆ. ಅವನ ರೂಪಕಗಳೂ ವರ್ಣನೆಗಳೂ ಭಾಮಿನಿಯ ಷಟ್ಪದಿಯಲ್ಲಿ ಮನಸ್ಸಿಗೆ ನಾಟುವಂತಹ ಜಾಣ್ನುಡಿಗಳೂ ಲೀಲಾಜಾಲವಾಗಿ ನಿರ್ವಹಿಸುವ ಕಥೆಯ ಬಿಗಿಯೂ ಅವನ ಕರ್ಣಾಟಭಾರತಕಥಾಮಂಜರಿಯನ್ನು ಆಸ್ವಾದಿಸಿದ ಸಹೃದಯರಿಗೇ ಗೊತ್ತು. ಸುಲಭವಾಗಿ ಅರ್ಥವಾಗುವಂತಹ ಕಾವ್ಯವೊಂದನ್ನು ರಚಿಸಿ ಮನೆಮನೆಯಲ್ಲೂ ನಿರಂತರವಾಗಿ ಆರಾಧಿಸಲ್ಪಟ್ಟ ಈ ಕವಿ ವರ್ಣಿಸಿದ ವಸಂತಋತುವನ್ನು  ಕುರಿತ ಪದ್ಯಗಳನ್ನು ಈ ಸಂಚಿಕೆಗೆ ಆಯ್ದುಕೊಡಿದ್ದೇನೆ (ಅರ್ಥ ಸ್ಪಷ್ಟವಾಗಿ ತಿಳಿಯದಿದ್ದ ಕಡೆಗಳಲ್ಲಿಯೂ ಸಾಂಧರ್ಭಿಕವಾಗಿ ಮಾಡಿದ ನನ್ನ ನೀರಸ ಅನುವಾದಕ್ಕೆ ಕ್ಷಮೆಯಿರಲಿ :-( )

ಸಂದರ್ಭ: 'ನಿನ್ನಯಲಲನೆಯನು ನೀ ಕೂಡಿದಾಗಲೆ ಮರಣ ನಿನಗಹುದು' ಎಂದು ಮುನಿಯಿತ್ತ ಶಾಪಗ್ರಸ್ತನಾದ ಪಾಂಡು ಮಹಾರಾಜ ಶತಶೃಂಗ ಪರ್ವತ ಪ್ರದೇಶದಲ್ಲಿ ತನ್ನ ಪತ್ನಿಯರಾದ ಕುಂತಿ ಹಾಗೂ ಮಾದ್ರಿಯರೊಡನೆ ಹಲವು ಕಾಲ ಕಳೆದು, ಕುಂತಿ ದೂರ್ವಾಸರಿಂದ ಪಡೆದ ಮಂತ್ರೋಪದೇಶದಿಂದ ದೈವಕೃಪೆಯನ್ನು ಹೊಂದಿ ಯುಧಿಷ್ಠಿರಾದಿ ಐವರು ಮಕ್ಕಳನ್ನು ಪಡೆದಿರುತ್ತಾನೆ. ಅಂತಹ ಸಂದರ್ಭದಲ್ಲಿ ವಸಂತ ಋತುವಿನ ಆಗಮನವಾಗುತ್ತದೆ. ( ಆದಿಪರ್ವ ಸಂಧಿ-೫)

ಯೋಗಿಗೆತ್ತಿದ ಖಡುಗಧಾರೆ ವಿ
ಯೋಗಿಗೆತ್ತಿದ ಸಬಳವಖಿಳ ವಿ
ರಾಗಿಗಳ ಹೆಡತಲೆಯ ದಡಿ ನೈಷ್ಠಿಕರಿಗಲಗಣಸು
ಆಗಮಿಕರದೆ ಶೂಲ ಗರ್ವಿತ
ಗೂಗೆಗಳ ನಖಸಾಳವಗ್ಗದ
ಭೋಗಿಗಳ ಕುಲದೈವವೆಸೆದುದು ಕುಸುಮಮಯ ಸಮಯ

(ಯೋಗಿಗಳಿಗೆ ಎತ್ತಿದ ಖಡ್ಗಧಾರೆ, ವಿಯೋಗಿಗಳಿಗೆ ಎತ್ತಿದ ಸಬಳ(ಒಂದು ಆಯುಧ/ಈಟಿ), ವಿರಾಗಿಗಳ ಹೆಡತಲೆಯ ದಡಿ, ನೈಷ್ಠಿಕರಿಗೆ ಅಲಗಿನ ಲೋಹದ ತುದಿ, ಆಗಮಿಕರ ಎದೆಗೆ ಶೂಲ, ಗರ್ವ ಹೊಂದಿದ ಗೂಬೆಗಳ ಉಗುರಿನ ತುದಿ, ಭೋಗಿಗಳಿಗೆ ಕುಲದೈವವಾದ ಕುಸುಮಮಯಸಮಯ (ಹೂವುಗಳಿಂದ ಕೂಡಿರುವ ಸಮಯ)ವಸಂತವು ವಿರಾಜಿಸಿತು.

ವಸಂತವು ಭೋಗಿಗಳಿಗೆ ಕುಲದೈವದಂತಿದೆ. ಅಲ್ಲದೇ ಚಿತ್ತಚಾಂಚಲ್ಯವನ್ನುಂಟುಮಾಡುವ ಕಾರಣ ಯೋಗಿಗಳಿಗೆ ಖಡ್ಗಧಾರೆ ಇತ್ಯಾದಿರೂಪಕಗಳು ಸುವೇದ್ಯ.)

ಮೊರೆವ ತುಂಬಿಯ ಗಾಯಕರ ನಯ
ಸರದ ಕೋಕಿಲ ಪಾಠಕರ ಬಂ
ಧುರದ ಗಿಳಿಗಳ ಪಂಡಿತರ ಮಾಮರದ ಕರಿಘಟೆಯ
ಅರಳಿದಂಬುಜ ಸತ್ತಿಗೆಯ ಮಂ
ಜರಿಯ ಕುಸುಮದ ಚಾಮರದ ಚಾ
ತುರ ವಸಂತನೃಪಾಲ ನಡೆದನು ಪಾಂಡುವಿನ ಮೇಲೆ

(ಇಂತಹ ವಸಂತನೆಂಬ ರಾಜ ಮೊರೆಯುವ ದುಂಬಿಗಳನ್ನೇ ಗಾಯಕರನ್ನಾಗಿ ಮಾಡಿಕೊಂಡು ಒಳ್ಳೆಯ ಧ್ವನಿಯಿರುವ ಕೋಗಿಲೆಗಳನ್ನೇ ಪಾಠಕರನ್ನಾಗಿಸಿಕೊಂಡು ಸುಂದರವಾದ ಗಿಳಿಗಳನ್ನೇ ಪಂಡಿತರನ್ನಾಗಿಸಿಕೊಂಡು ಮಾವಿನ ಮರವನ್ನೇ ಆನೆಗಳ ಹಿಂಡಾಗಿಸಿಕೊಂಡು ಅರಳಿರುವ ಕಮಲಗಳನ್ನೇ ಕೊಡೆಯಾಗಿಸಿಕೊಂಡು ಗೊಂಚಲುಗೊಂಚಲಾಗಿರುವ ಹೂವುಗಳನ್ನೇ ಚಾಮರವನ್ನಾಗಿಸಿಕೊಂಡು ಪಾಂಡುವಿನ ಮೇಲೆ ನಡೆದ

ಇಲ್ಲಿ ಸಾವಯವರೂಪಕಾಲಂಕಾರದಲ್ಲಿ ವಸಂತ ಪ್ರಕೃತಿಯಲ್ಲಿ ಬರುತ್ತಿದ್ದುದು ಒಬ್ಬ ರಾಜ ಬಂದಂತೆ ಕಾಣುತ್ತಿತ್ತೆಂಬ ಕಲ್ಪನೆ ಮಾಡಿದ್ದಲ್ಲದೇ ಅವನು ಬಂದ ಉದ್ದೇಶ ಪಾಂಡುವಿನ ಮೇಲೆ ನಡೆಯುವುದು/ಯುದ್ಧಮಾಡುವುದು ಎಂಬ ಧ್ವನಿ ಸ್ಫುರಿಸುತ್ತದೆ. ಆ ಕಾರಣದಿಂದಲೇ ಚಿತ್ತಚಾಂಚಲ್ಯವಾಗಿ ಮಾದ್ರಿಯೊಡನೆ ಸೇರಲು ಹೋಗಿ ತನ್ನ ಜೀವನದ ಅಂತ್ಯವನ್ನು ಕಂಡದ್ದೂ ವೇದ್ಯವೇ ಆಗಿದೆ. )

ಫಲಿತಚೂತದ ಬಿಣ್ಪುಗಳ ನೆರೆ
ತಳಿತಶೋಕೆಯ ಕೆಂಪುಗಳ ಪರಿ
ದಳಿತ ಕಮಲದ ಕಂಪುಗಳ ಬನಬನದ ಗುಂಪುಗಳ
ಎಳಲತೆಯ ನುಣ್ಪುಗಳ ನವ ಪರಿ
ಮಳದ ಪವನನ ಸೊಂಪುಗಳ ವೆ
ಗ್ಗಳಿಕೆ ಝಳಪಿಸಿ ಹೊಯ್ದು ಸೆಳೆದುದು ಜನದ ಕಣ್ಮನವ

(ಫಲವನ್ನು ತಳೆಯಲು ಸಿದ್ಧವಾಗುತ್ತಿರುವ ಮಾವಿನ ಬಿಣ್ಪು, ತಳಿರನ್ನು  ತಳೆದ ಅಶೋಕವೃಕ್ಷದ ಕೆಂಪು, ಅರಳಿದ ಕಮಲದ ಕಂಪು, ಎಳೆಯ ಬಳ್ಳಿಯ ನುಣ್ಪು ಹೊಸ ಪರಿಮಳವನ್ನು ಹೊತ್ತು ತರುವ ಗಾಳಿಯ ಸೊಂಪು ಇವೆಲ್ಲವೂ ಜನರ ಕಣ್ಮನವನ್ನು ಸೆಳೆಯುತ್ತಿದ್ದವು.

ಇಲ್ಲಿ ಅನುಪ್ರಾಸಕ್ಕೆ ತಂದ  'oಪು' ಎಂಬುದೂ ಹಾಗೆಯೇ ತಳಿರು ತಳೆಯುವ ವೃಕ್ಷವೈವಿಧ್ಯವನ್ನು ಉಲ್ಲೇಖಿಸುವುದೂ ಸೊಗಸಾಗಿ ವಸಂತವನ್ನು ಚಿತ್ರಿಸುತ್ತವೆ)

ಪಸರಿಸಿತು ಮಧುಮಾಸ ತಾವರೆ
ಯೆಸಳ ದೋಣಿಯಮೇಲೆ ಹಾಯ್ದವು
ಕುಸುಮರಸದುಬ್ಬರದ ತೊರೆಯನು ಕೂಡೆ ತುಂಬಿಗಳು
ಒಸರ್ವ ಮಕರಂದದ ತುಷಾರದ
ಕೆಸರೊಳದ್ದವು ಕೊಂಚೆಗಳು ಹಗ
ಲೆಸೆವ ದಂಪತಿವಕ್ಕಿ ಸಾರಸ ರಾಜ ಹಂಸಗಳು

(ಈ ಮಧುಮಾಸ ಪಸರಿಸುತ್ತಿರುವಾಗ ತಾವರೆಯ ಎಸಳುಗಳೆಂಬ ದೋಣಿಯಮೇಲೆ ದುಂಬಿಗಳು ಪುಷ್ಪಗಳ ಮಕರಂದ ರಸದ ಉಬ್ಬರದ ತೊರೆಯನ್ನು ದಾಟಿದವು. ಕ್ರೌಂಚಪಕ್ಷಿಗಳು, ಚಕ್ರವಾಕಗಳು, ಸಾರಸಗಳು,ರಾಜಹಂಸಗಳೆಲ್ಲವೂ ಒಸರುತ್ತಿರುವ ಮಕರಂದದ ತುಷಾರದ ಕೆಸರಿನಲ್ಲಿ ಅದ್ದಲ್ಪಟ್ಟವು.

 ಇಲ್ಲಿ ಹಲವು ಪಕ್ಷಿಗಳು ಮಕರಂದಭರಿತ ಕೊಳದಲ್ಲಿ ಮುಳುಗೇಳುವುದನ್ನು ಉಲ್ಲೇಖಿಸುವುದರ ಜೊತೆಗೆ ದುಂಬಿಗಳು ಮಕರಂದದ ತೊರೆಯನ್ನು ತಾವರೆಯ ಎಸಳುಗಳೆಂಬ ದೋಣಿಯ ಮೇಲೆ ಕುಳಿತು ದಾಟಿದವೆನ್ನುವ ಸುಂದರವಾದ ಕಲ್ಪನೆಯನ್ನು ಕೊಡುತ್ತಾನೆ)

ಸೊಗಸಾದ ಅಲಂಕಾರಭೂಯಿಷ್ಠ ಪದ್ಯಗಳ ಮೂಲಕ ಸಹೃದಯಸಾಮ್ರಾಜ್ಯವನ್ನು  ಕುಮಾರವ್ಯಾಸನಂತಹ ರೂಪಕಸಾಮ್ರಾಜ್ಯಚಕ್ರವರ್ತಿಗಳೇ ಗೆಲ್ಲುತ್ತಾರಷ್ಟೇ!!!

ಶನಿವಾರ, ಮಾರ್ಚ್ 29, 2014

ಸಹೃದಯಕಾಲ-೩ ರನ್ನನ ಗದಾಯುದ್ಧದ ಕೆಲವು ಪದ್ಯಗಳು

ಜನ್ನನು ತನ್ನ 'ಯಶೋಧರಚರಿತೆ'ಯಲ್ಲಿ 

ಕನ್ನರನಾದರದಿಂ ಕುಡೆ
ಹೊನ್ನಂ ಮನಮೊಸೆದು ತೈಲಪಂ ಕುಡೆ ರನ್ನಂ
ಮನ್ನಿಸಿ ಬಲ್ಲಾಳಂ ಕುಡೆ
ಜನ್ನಂ ಕವಿಚಕ್ರವರ್ತಿವೆಸರಂ ಪಡೆದರ್ || (೧-೨೧)

"ಕನ್ನರನು  ಆದರದಿಂದ ಕೊಡಲು 'ಪೊನ್ನ'(ಹೊನ್ನ) ತೈಲಪನು ಮೆಚ್ಚಿ ಕೊಡಲು 'ರನ್ನ' ಹಾಗೂ ಬಲ್ಲಾಳನು ಕೊಡಲು 'ಜನ್ನ' ಈ ಮೂವರು 'ಕವಿಚಕ್ರವರ್ತಿ' ಎಂಬ ಬಿರುದನ್ನು ಪಡೆದರು" ಎಂದು ಹೇಳುತ್ತಾನೆ. 

ಅಂತಹ ಕನ್ನಡದ ರತ್ನತ್ರಯದಲ್ಲಿ ಒಬ್ಬನಾದ 'ರನ್ನ'ನ 'ಸಾಹಸಭೀಮವಿಜಯಂ' ಕಾವ್ಯವನ್ನು ಅವಲೋಕಿಸಿದರೆ ಅವನೇಕೆ ಕವಿಚಕ್ರವರ್ತಿಯೆಂಬ ಬಿರುದನ್ನು ಪಡೆದ ಎಂದು ಗೊತ್ತಾಗುತ್ತದೆ. ಅಂತಹ ವೈಶಿಷ್ಟ್ಯಪೂರ್ಣವಾದ ಶೈಲಿ, ಕಥೆಯ ನಿರೂಪಣೆಯನ್ನು ಮಾಡುವ ರೀತಿ, ವರ್ಣನೆ ಇವುಗಳೆಲ್ಲವನ್ನೂ ನೋಡಿದರೆ ಸಾರಸ್ವತಾಸಕ್ತರ ಮನಸ್ಸಿಗೆ ಆಗುವ ಆನಂದ ಅವರ್ಣನೀಯವೇ ಸರಿ.

ರತ್ನಪರೀಕ್ಷಕನಾಂ ಕೃತಿ
ರತ್ನಪರೀಕ್ಷಕನೆನೆಂದು ಫಣಿಪತಿಯ ಫಣಾ
ರತ್ನಮುಮಂ ರನ್ನನ ಕೃತಿ
ರತ್ನಮುಮಂ ಪೇೞ್ ಪರೀಕ್ಷಿಪರ್ಗೆಂಟೆರ್ದೆಯೇ ।। (೧-೪೪)

"ನಾನು ರತ್ನಪರೀಕ್ಷಕ ಅಥವಾ ಕೃತಿರತ್ನವನ್ನು ಪರೀಕ್ಷಿಸುವವನು(ವಿಮರ್ಶಕ) ಎಂದು ಫಣಿಪತಿಯ(ವಾಸುಕಿಯ) ಹೆಡೆಯ ಮೇಲಿರುವ ರತ್ನವನ್ನೂ ರನ್ನನ ಕೃತಿರತ್ನ(ಸಾಹಸಭೀಮವಿಜಯ)ವನ್ನೂ ಪರೀಕ್ಷಿಸುವುದಕ್ಕೆ ಹೊರಟವನಿಗೆ ಎಂಟೆದೆಯೇ!" ಎಂದು ಕೇಳುತ್ತಾ ತನ್ನ ಕವಿತ್ವವನ್ನು ಪರೀಕ್ಷಿಸಬೇಕೆಂದರೆ ಅಂತಹ ಧೈರ್ಯವಿರಬೇಕೆಂದು ಹೇಳುತ್ತಾ ಆರಂಭಿಸುವ ಕಾವ್ಯದಲ್ಲಿ 
 ತನ್ನ ಕಾವ್ಯಶಕ್ತಿಯ ಬಗ್ಗೆ ಹೀಗೆ ಹೇಳಿಕೊಳ್ಳುತ್ತಾನೆ :-

ಆರಾತೀಯ ಕವೀಶ್ವರ
ರಾರುಂ ಮುನ್ನಾರ್ತರಿಲ್ಲ ವಾಗ್ದೇವಿಯ ಭಂ
ಡಾರದ ಮುದ್ರೆಯನೊಡೆದಂ
ಸಾರಸ್ವತಮೆನಿಪ ಕವಿತೆಯೊಳ್ ಕವಿರತ್ನಂ।। (೧-೧೩)
ರನ್ನನ ಹಸ್ತಾಕ್ಷರ (Photo courtesy : Internet)

"ಹಿಂದಣ ಕವಿಗಳು ಯಾರೂ ಸಮರ್ಥರಾಗಲಿಲ್ಲ. ಆದರೆ ಈ ರತ್ನನು ಮಾತ್ರ ಸಾರಸ್ವತವೆನ್ನುವ ಕವಿತೆಯಲ್ಲಿ ವಾಗ್ದೇವಿಯ ಭಂಡಾರದ ಮುದ್ರೆ(ಬೀಗ)ವನ್ನು ಒಡೆದ" ಎಂದು. ವಾಗ್ದೇವಿಯಾದ ಸರಸ್ವತಿಯ ಭಂಡಾರದ ಬೀಗವನ್ನು ಒಡೆಯುವುದೆಂದರೆ ಅದು ಸುಲಭದ ಮಾತಲ್ಲ. ಹಿಂದಣ ಕವಿಗಳಿಗೆ ಯಾರಿಗೂ ಆಗಲಿಲ್ಲ ಎಂಬಂತಹ ಧ್ವನಿ ಈ ಪದ್ಯದಲ್ಲಿ ಕೇಳುತ್ತದೆ.. 


ರನ್ನನ ಕಾವ್ಯಪ್ರತಿಭೆಯನ್ನು ಪ್ರತಿನಿಧಿಸುವಂತೆ ಅವನ ಪದ್ಯಗಳಲ್ಲಿ ಯಾವುದಾದರೂ ಒಂದೆರಡನ್ನು ಆಯ್ಕೆಮಾಡಿಕೊಳ್ಳಲು ಹೋದರೆ ಬಹುಸಂಖ್ಯೆಯ ಪದ್ಯಗಳು 'ತಾಮುಂದೆ ತಾಮುಂದೆ' ಎನ್ನುತ್ತಾ ಬರುತ್ತವೆ. 
ಅಂತಹ ಒಂದು ಪದ್ಯ ಹೀಗಿದೆ:-

ಕುರುಭೂಭೃದ್ಬಲತೂಲಕಾಲಪವನಂ ಕೌರವ್ಯಗಂಧೇಭಕೇ
ಸರಿ  ದುಶ್ಶಾಸನರಕ್ತರಕ್ತವದನಂ ದುರ್ಯೋಧನೋರುಕ್ಷಮಾ
ಧರವಜ್ರಂ ಕುರುರಾಜರತ್ನಮಕುಟೋತ್ಕೂಟಾಂಘ್ರಿಸಂಘಟ್ಟಸಂ
ಗರನೆಂದೆಂದಭಿವರ್ಣಿಪೆಂ ರಣಯಶಶ್ರೀರಾಮನಂ ಭೀಮನಂ ।। (೧-೫೨)

"ಕುರುಕುಲದ ರಾಜರ ಬಲವೆಂಬುದನ್ನು ಹತ್ತಿಯಂತೆ ಹಾರಿಸಿಕೊಂಡು ಹೋಗುವ ಬಿರುಗಾಳಿಯಾದ, ಕೌರವನೆಂಬ ಮದವೇರಿದ ಆನೆಗೆ ಸಿಂಹವಾದ, ದುಶ್ಶಾಸನನ ರಕ್ತಕ್ಕೆ ಜಿಗಳೆಯಾದ, ದುರ್ಯೋಧನನ ತೊಡೆಯೆಂಬ ಪರ್ವತಕ್ಕೆ ವಜ್ರಾಯುಧವಾದ*, ಕುರುರಾಜನ ರತ್ನಕಿರೀಟವನ್ನು ಮೆಟ್ಟಿದ ರಣರಂಗದ ಯಶಸ್ಸೆಂಬ ಸಿರಿಗೆ ರಾಮನಾದ ಭೀಮನನ್ನು ವರ್ಣಿಸುವೆನು" ಎಂದು ಕಥೆಯನ್ನು ಆರಂಭಿಸುತ್ತಾನೆ. 
(*ಪರ್ವತಗಳಿಗೆ ರೆಕ್ಕೆಯಿತ್ತೆಂದೂ ಅದನ್ನು ಇಂದ್ರ ತನ್ನ ವಜ್ರಾಯುಧದಿಂದ ಕತ್ತರಿಸಿದನೆಂದೂ ಕಥೆ)

ಮತ್ತೇಭವಿಕ್ರೀಡಿತ ಛಂದಸ್ಸಿನಲ್ಲಿ ಭೀಮನ ಸಾಹಸದವರ್ಣನೆ ಒಂದು ಮತ್ತೇಭವಿಕ್ರೀಡಿತವೇ (ಮದವೇರಿದ ಆನೆಯ ಆಟ) ಎಂಬಂತೆ ಭಾಸವಾಗುತ್ತದೆ. ಮೊದಲ ಸಾಲಿನಲ್ಲಿ '...ಬಲತೂಲಕಾಲಪವನಂ..' ಎಂಬಲ್ಲಿ (ಲಕಾರ-ಅನುಪ್ರಾಸ) ಎರಡನೇ ಸಾಲಿನ '..ರಕ್ತರಕ್ತವದನಂ..'ಎಂಬಲ್ಲಿ (ಯಮಕ) ಮೂರನೇ ಸಾಲಿನ '..ಕುರುರಾಜರತ್ನಮಕುಟೋತ್ಕೂಟಾಂಘ್ರಿಸಂಘಟ್ಟ..' ('ರ'ಮತ್ತು'ಟ'ಕಾರಗಳ ಅನುಪ್ರಾಸ) ಕೊನೆಯ ಸಾಲಿನ 'ಶ್ರೀರಾಮನಂ ಭೀಮನಂ'(ಛೇಕಾನುಪ್ರಾಸ) ಎಂಬಲ್ಲೆಲ್ಲ ಶಬ್ದಾಲಂಕಾರಗಳು ಹಿತವಾಗಿ ಕಿವಿಗೆ ಬಡಿಯುತ್ತವೆ. 
ಅಲ್ಲದೇ ಅರ್ಥಾಲಂಕಾರಕ್ಕೆ ರೂಪಕಗಳ ರತ್ನಮಾಲೆಯನ್ನೇ ತೆಗೆತೆಗೆದಿಡುತ್ತಾನೆ;  ಕುರುಕುಲದ ರಾಜರ ಬಲವೆಂಬುದೊಂದು ಹತ್ತಿ. ಅದನ್ನು ಹಾರಿಸಿಕೊಂಡು ಹೋಗುವಂತಹ ಪ್ರಳಯಕಾಲದ ಗಾಳಿ ಭೀಮ. ಕೌರವರೆಂಬ ಮದವೇರಿದ ಆನೆಯ ನೆತ್ತಿಯನ್ನು ಸೀಳುವಂತಹ ಕೇಸರಿ (ಸಿಂಹ) ಭೀಮ. ದುಶ್ಶಾಸನನ ರಕ್ತವನ್ನು ಒಂದಿನಿತೂ ಬಿಡದೆ ಹೀರಿದ ಜಿಗಳೆ/ಉಂಬಳ ಭೀಮ. ದುರ್ಯೋಧನನ ತೊಡೆಯೆಂಬ ಬೆಟ್ಟವನ್ನು ಕಡಿದುಹಾಕಿದ ವಜ್ರಾಯುಧ ಭೀಮ. ಸುಯೋಧನನ ರತ್ನ ಕಿರೀಟವನ್ನು ಮೆಟ್ಟಿ ಧೂಳಿನಲ್ಲಿ ಹೊರಳಾಡಿಸುವಂತಹ ಯೋಧ ಭೀಮ, ರಣರಂಗದ ಯಶಸ್ಸೆಂಬ ಶ್ರೀಗೆ ರಾಮನಾದ ಭೀಮನನ್ನು ವರ್ಣಿಸುತ್ತೇನೆ ಎಂದು ಹೇಳುವಾಗಲೇ ಸಾಹಸಭೀಮನ ಸಾಹಸಗಳು ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತವೆ. 
ಎಂತಹ ಸೊಗಸಾದ ಪದ್ಯ.
ರನ್ನ ನಿಜಕ್ಕೂ ಸರಸ್ವತಿಯ ಭಂಡಾರದ ಒಡೆದಾಗ ಹೊರಬಂದ ರನ್ನವೇ ಸರಿ!

ಮಂಗಳವಾರ, ಮಾರ್ಚ್ 25, 2014

ಸಹೃದಯಕಾಲ-೨ ಲಕ್ಷ್ಮೀಶನ ಜೈಮಿನಿ ಭಾರತದಿಂದ ಒಂದು ಪದ್ಯ

ಚಿತ್ರ:ಅಂತರ್ಜಾಲಕೃಪೆ

      ಕನ್ನಡಕಾವ್ಯಪರಂಪರೆಯಲ್ಲಿ ಷಟ್ಪದಿಗಳದ್ದೇ ವಿಶೇಷ ಘಟ್ಟವಾಗಿ ರೂಪುಗೊಂಡಿತು. ಬಹಳಷ್ಟು ಕವಿಗಳ ಮೆಚ್ಚುಗೆಗೆ ಪಾತ್ರವಾದ ಷಟ್ಪದಿಗಳಲ್ಲೇ ಅನೇಕ ಮಹಾಕಾವ್ಯಗಳೂ ರಚನೆಯಾದವು. ಇಂತಹ ಹಲವು ಕವಿಗಳಲ್ಲಿ ಲಕ್ಷ್ಮೀಶ ತನ್ನದೇ ಆದ ಯಮಕ ಶ್ಲೇಷಾದಿ ಚಮತ್ಕಾರಗಳ ಮೂಲಕ ಪ್ರೌಢ ಶೈಲಿಯಮೂಲಕ ವಿಶಿಷ್ಟನಾಗಿದ್ದಾನೆ. ಇವನ ಕೃತಿ 'ಜೈಮಿನಿ ಭಾರತ' ಇದು ಪಾಂಡವರು ಅಶ್ವಮೇಧ ಯಾಗ ಮಾಡುವ ಕಥೆಯನ್ನೊಳಗೊಂಡಿದ್ದು ಮೂಲ ಸಂಸ್ಕೃತದ ಜೈಮಿನಿ ಮಹರ್ಷಿ ರಚಿಸಿದ್ದೆನ್ನಲಾದ 'ಅಶ್ವಮೇಧಿಕ ಪರ್ವ'ದ ಕಥೆಯಾಗಿದೆ. 
     ಪ್ರತಿಪದ್ಯದಲ್ಲೂ ಯಮಕವನ್ನೋ  ಅನುಪ್ರಾಸವನ್ನೋ ಅಥವಾ ಶ್ಲೇಷದಂತಹ ಚಮತ್ಕಾರವನ್ನೋ ಅಥವಾ ಒಂದು ದೃಷ್ಟಾಂತವನ್ನೋ ಕಟ್ಟಿಕೊಡುವ ಮೂಲಕ ಕಲ್ಪನೆಯ ಮಹಾಸಾಗರದ ಮಧ್ಯಕ್ಕೆಲ್ಲೋ ನಮ್ಮನ್ನು ಕರೆದೊಯ್ಯುವ ಲಕ್ಷ್ಮೀಶನ ಪದ್ಯಗಳು ವಾರ್ಧಕ ಷಟ್ಪದಿಯಾದರೂ ನಮ್ಮ ಮನಸ್ಸಿಗೆ ಹೊಸ ಉತ್ಸಾಹ ಮೂಡಿಸುತ್ತವೆಯೆಂಬುದರಲ್ಲಿ ಸಂದೇಹವಿಲ್ಲ!!

ಜೈಮಿನಿ ಭಾರತದಲ್ಲಿ ಬರುವ ಒಂದು ಸೊಗಸಾದ ವರ್ಣನೆ ಹೀಗಿದೆ-
ಸಂದರ್ಭ-ಭದ್ರಾವತಿಯೆಂಬ ನಗರದಲ್ಲಿ ಯೌವನಾಶ್ವನೆಂಬ ರಾಜ ಆಡಳಿತ ನಡೆಸುತ್ತಿರಲು ಅಶ್ವಮೇಧ ಯಾಗಕ್ಕೆ ಸೂಕ್ತವಾದ ಕುದುರೆ ಅಲ್ಲಿರುವುದನ್ನು ತಿಳಿದು ಕೃಷ್ಣನ ಅಣತಿಯ ಮೇರೆಗೆ ಭೀಮ, ಘಟೋತ್ಕಚನ ಮಗ ಹಾಗೂ ಕರ್ಣನ ಮಗ ವೃಷಸೇನ ಈ ಮೂವರೂ ಕುದುರೆಯನ್ನು ಅಪಹರಿಸಿಕೊಂಡು ತರಲು ಅಲ್ಲಿಗೆ ಹೋಗುತ್ತಾರೆ. ಆಗ ಕಾಣುವ ಭದ್ರಾವತೀ ನಗರದ ವರ್ಣನೆಯನ್ನು ಮಾಡುತ್ತಾ ಕವಿ ಹೇಳುವ ಈ ಪದ್ಯ  ಸಹೃದಯರು ಆಸ್ವಾದಿಸಲೇ ಬೇಕಾದಂತಹ ಒಂದು ಪದ್ಯ (ಮೂರನೆಯ ಸಂಧಿಯ ೧೯ನೆಯ ಪದ್ಯ)
ಕುಸಿದು ಪಾತಾಳದೊಳಗಿರ್ದು ಪಲಕಾಲಮಂ
ದ್ವಿಸಹಸ್ರ ನಯನಂಗಳಿಂದ ನೋಡಿದೊಡೆ ಕಾ
ಣಿಸಿಕೊಳ್ಳದೀ ಪುರದಗಳ ಘಾತಮಿದನಜಂ ಬಲ್ಲನೋ ಕೇಳ್ವೆನೆಂದು 
ಬಿಸಜ ಸಂಭವನ ಪೊರೆಗೆಂದಿಳೆಯನುಗಿದುಚ್ಚ
ಳಿಸಿ ಬಳೆದ ಫಣಿಪತಿಯ ಮಣಿವಡೆಯ ಸಾಲಿವೆನ
ಲೆಸೆವುವಾಗಸದೊಳೀ ಪೊಳಲ ಕೋಟೆಯ ರನ್ನದೆನೆಗಳೆಲ್ಲಾದೆಸೆಯೊಳು||

"ಕುಸಿದು ಪಾತಾಳಲೋಕದಲ್ಲಿ ಹಲವು ಕಾಲಗಳಿಂದ ವಾಸವಾಗಿದ್ದ ವಾಸುಕಿ "ತನ್ನ ಎರಡು ಸಾವಿರ ಕಣ್ಣುಗಳಿಂದ ನೋಡಿದರೆ ಈ ನಗರದ ವಿಸ್ತೀರ್ಣ ಕಾಣಿಸುತ್ತಿಲ್ಲ, ಬ್ರಹ್ಮನಿಗೇನಾದರೂ ಗೊತ್ತಿದೆಯೋ ಕೇಳಿನೋಡೋಣ" ಎಂದುಕೊಳ್ಳುತ್ತಾ ಬಿಸಜಸಂಭವನಾದ ಬ್ರಹ್ಮನ ಬಳಿಗೆ ಹೋಗಲು ಭೂಮಿಯನ್ನು ಉಗಿದು ದೊಡ್ಡದಾಗಿ ಬೆಳೆದ ಫಣಿಪತಿಯ ಹೆಡೆಯ ಮಣಿಗಳ ಸಾಲುಗಳೋ ಎಂಬಂತೆ  ಆಕಾಶದೆತ್ತರಕ್ಕಿದ್ದ ಭದ್ರಾವತಿಯೆಂಬ ಪಟ್ಟಣದ ಕೋಟೆಯ ರತ್ನಮಯವಾದ ಶಿಖರಗಳು ಎಲ್ಲಾ ದಿಕ್ಕಿನಲ್ಲೂ ಕಂಡವು." 

ನಗರದ ಕೋಟೆಯ ರನ್ನದೆನೆಗಳು ಸಾವಿರಾರು ರತ್ನಗಳಿಂದ ಕೂಡಿರುವುದು ಕವಿಯ ಕಣ್ಣಿಗೆ ನಾಗರಾಜನ ಸಾವಿರ ಹೆಡೆಗಳ ಮೇಲಿರುವ ಮಣಿಗಳಂತೆ ಕಂಡಿತು. ಅದನ್ನು ಅಷ್ಟೇ ಹೇಳದೇ ವಿವರಿಸುತ್ತಾ "ತನ್ನ ಎರಡು ಸಾವಿರ ಕಣ್ಣುಗಳಿಗೆ ಕಾಣದ ಈ ನಗರದ ಅಗಲ ಬ್ರಹ್ಮನಿಗೇನಾದರೂ ಗೊತ್ತಿರಬಹುದೇ ಕೇಳಿ ನೋಡೋಣ' ಎಂದುಕೊಂಡು ಬಂದ ಫಣಿಪತಿಯ ಮಣಿವೆಡೆಯ ರತ್ನಗಳ ಸಾಲಿನಂತೆ ಕಂಡಿತು" ಎಂದು ಹೇಳುವ ರೀತಿ ಅಲ್ಲಿರುವ ವಕ್ರತೆ ಇವುಗಳ ಸ್ವಾದವನ್ನು ವರ್ಣಿಸಲು ಸಾಧ್ಯವೇ?

ಶುಕ್ರವಾರ, ಮಾರ್ಚ್ 21, 2014

ಸಹೃದಯಕಾಲ-೧

'ಸಹೃದಯಕಾಲ'
ಕವಿಯ ಕಾವ್ಯದ ಸ್ವಾರಸ್ಯವನ್ನು ಅರಿಯಬಲ್ಲವನೇ ಸಹೃದಯ. ಹಲಕೆಲವು ಹಳೆಗನ್ನಡ ಕಾವ್ಯಗಳ ಸ್ವಾರಸ್ಯಕರ ಪದ್ಯಗಳನ್ನು 'ಸಹೃದಯಕಾಲ'ದಲ್ಲಿ ಚುಟುಕಾಗಿ ನೋಡೋಣ.
ಹಳಗನ್ನಡ ಕಾವ್ಯದಲ್ಲಿ ನನಗೆ ಚೆನ್ನಾಗಿ ಕಂಡ ಪದ್ಯಗಳಿಗೆ ಹಾಗೆಯೇ ಬೇರೆಯವರು 'ಈ ಪದ್ಯ ಚೆನ್ನಾಗಿದೆ' ಎಂದು ಹೇಳಿದ ಪದ್ಯಗಳಿಗೆ ನನ್ನದೇ ಆದ ಅಡಿಟಿಪ್ಪಣಿಯೊಂದಿಗೆ ಯಥಾಮತಿ ವಿಮರ್ಶಿಸಿ ಇಲ್ಲಿ ಹಾಕುತ್ತೇನೆ. ಒಟ್ಟಾರೆ ಸಹೃದಯರಿಗೆ ಸಂತೋಷವಾದರೆ ನಾನಷ್ಟು ಕೃತಾರ್ಥನಾದಂತೆ.

ಸಾಂದರ್ಭಿಕ ಚಿತ್ರ-ಅಂತರ್ಜಾಲಕೃಪೆ
ಆದಿಕವಿ ಪಂಪನ ಎರಡು ಕೃತಿಗಳೆಂದರೆ 'ವಿಕ್ರಮಾರ್ಜುನವಿಜಯ' ಹಾಗೂ 'ಆದಿಪುರಾಣ'. ವಿಕ್ರಮಾರ್ಜುನವಿಜಯದಲ್ಲಿ ಮಹಾಭಾರತ ಕಥೆಯನ್ನು ಹಲವು ಬದಲಾವಣೆಗಳೊಂದಿಗೆ ಕನ್ನಡದಲ್ಲಿ ಚಂಪೂ(ಗದ್ಯಪದ್ಯಮಿಶ್ರಿತ)ಶೈಲಿಯಲ್ಲಿ ಬರೆದಿದ್ದಾನೆ. ಇದರಲ್ಲಿ ತನಗೆ ಆಶ್ರಯವನ್ನು ಕೊಟ್ಟ ಚಾಲುಕ್ಯರಾಜ ಅರಿಕೇಸರಿಯನ್ನು ಮಹಾಭಾರತದ ಅರ್ಜುನನೊಡನೆ ಸಮೀಕರಿಸಿ ವರ್ಣಿಸುತ್ತಾನೆ. ಕೆಲವುಕಡೆಗಳಲ್ಲಿ ಇದು ರಸಾಭಾಸಕ್ಕೆ ಕಾರಣವಾದರೂ ಕೆಲವು ಅರಿಕೇಸರಿಯನ್ನು ವರ್ಣಿಸುವ ಪದ್ಯಗಳಲ್ಲಿ ಒಳ್ಳೆಯ ಕಲ್ಪನೆಯನ್ನು ಕಾಣಬಹುದಾಗಿದೆ. ಅಂತಹ ಒಂದು ಪದ್ಯ ಮೊದಲ ಆಶ್ವಾಸದ ೪೬ನೆಯದು-

ಕಂದಪದ್ಯ
ಉಡೆವಣಿ ಪಱಿಯದ ಮುನ್ನಮೆ
ತೊಡಗಿ ಚಲಂ ನೆಗೞೆ ರಿಪುಬಲಂಗಳನೆ ಪಡ
ಲ್ವಡಿಸಿ ಪರಬಲದ ನೆತ್ತರ
ಕಡಲೊಳಗಣ ಜಿಗುಳೆ ಬಳೆವ ತೆಱದೊಳೆ ಬಳೆದಂ||

ಈ ಪದ್ಯದಲ್ಲಿ ಪಂಪನು ಅರಿಕೇಸರಿಯ ಬಗ್ಗೆ ಹೀಗೆ ಹೇಳುತ್ತಾನೆ :- "ಅರಿಕೇಸರಿ ರಾಜನು ಹುಟ್ಟಿ ಇನ್ನೂ ಉಡುದಾರ ಹರಿದುಹೋಗುವ ಮುನ್ನವೇ( ಅಂಬೆಗಾಲಿಕ್ಕುವ ಕಾಲದಲ್ಲಿ)  ಅವನ ಸಾಹಸವು ಬೆಳೆದು ಶತ್ರುಗಳ ಬಲವನ್ನು ನಾಶಮಾಡಿ ಶತ್ರುಬಲದ ರಕ್ತವೆಂಬ ಸಮುದ್ರದಲ್ಲಿ ಜಿಗಳೆ(ಜಿಗಣೆ/ಜಿಗುಳೆ/leach) ಬೆಳೆಯುವಂತೆ (ಅಂಬೆಗಾಲಿಕ್ಕುತ್ತಾ/ತೆವಳುತ್ತಾ) ಬೆಳೆದ"
ಇಲ್ಲಿ 'ಶತ್ರುಗಳ ಬಲದ ರಕ್ತಸಮುದ್ರದ ಜಿಗಳೆ' ಎಂಬ ಒಂದು ರೂಪಕವನ್ನು ಕೊಡುವುದರ ಮೂಲಕ ತನ್ನ ರಾಜನು ಹುಟ್ಟುವಾಗಳೇ ಶತ್ರುರಾಜರು (ಅರಿಕೇಸರಿಯ ತಂದೆಯಿಂದಲೋ ತಾತನಿಂದಲೋ-ಇರಬಹುದು-) ನಾಶವಾದದ್ದನ್ನೂ ರಿಪುಗಳ ಬಲದ ರಕ್ತವೇ ಸಮುದ್ರದಂತಿತ್ತೆಂಬುದನ್ನೂ ಅರಿಕೇಸರಿ ಅಂಬೆಗಾಲಿಕ್ಕುವುದು ಜಿಗಳೆ ಹೋದಂತಿತ್ತೆಂಬ ಅತಿಶಯೋಕ್ತಿಯ ಭಾವವನ್ನೂ ಅತಿಚಿಕ್ಕ ಛಂದಸ್ಸಾದ ಕಂದಪದ್ಯದಲ್ಲಿ ತಂದು ಸೊಗಸಾದ ಪದ್ಯ ರಚಿಸಿದ್ದಾನೆ.

ಸೋಮವಾರ, ಜನವರಿ 28, 2013

ಶತಾವಧಾನಿ ಆರ್ ಗಣೇಶ ಅವರ 968ನೇ ಅಷ್ಟಾವಧಾನ

ಶತಾವಧಾನಿ ಆರ್ ಗಣೇಶ ಅವರ 968ನೇ ಅಷ್ಟಾವಧಾನದ ಪದ್ಯಗಳ ಸಂಗ್ರಹ ಈ ಲೇಖನ.
ಅವಧಾನದ ಸ್ವರೂಪವನ್ನು ತಿಳಿದಿದ್ದರೆ ಈ ಲೇಖನವನ್ನು ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ. ಅವಧಾನದ ಕುರಿತ ಕಿರು ಲೇಖನಕ್ಕಾಗಿ ಈ ಲಿಂಕಿಗೆ ಹೋಗಿ. http://kathaakaala.blogspot.in/2011/03/blog-post.html 
ಅಥವಾ ವಿಕಿಪೀಡಿಯದ ಈ ಪುಟವನ್ನು ನೋಡಬಹುದು. http://kn.wikipedia.org/wiki/%E0%B2%85%E0%B2%B5%E0%B2%A7%E0%B2%BE%E0%B2%A8



ಅಪ್ರಸ್ತುತ ಪ್ರಸಂಗ- ಶ್ರೀ ಮಹಮ್ಮದ ಅನ್ವರ್
ಸಂಖ್ಯಾಬಂಧ- ಶ್ರೀ ಗೌತಮ್ ರಾಮಮೂರ್ತಿ (ಸಂಖ್ಯೆ 271, 5x5 ಚೌಕದಲ್ಲಿ)

ಕಾವ್ಯವಾಚನ- ಶ್ರೀಮತಿ ರಂಜನಿ ವಾಸುಕಿ
ನಿಷೇಧಾಕ್ಷರ- ಡಾ|| ರಂಗನಾಥ
ವಸ್ತು- ಸಮೀಪದ ಪಾರ್ಕ್ ನಲ್ಲಿ ಭೈರಪ್ಪನವರ ಮೂರ್ತಿ ಪ್ರತಿಷ್ಠಾಪಿಸಿದ್ದರ ಕುರಿತು ;ಅಭಿನವ' ಶಬ್ದ ಬರುವಂತೆ
ಛಂದಸ್ಸು- ಅನುಷ್ಟುಪ್  ಭಾಷೆ-ಸಂಸ್ಕೃತ
ಮೊದಲ ಸುತ್ತು--
ನಿಷೇಧ- ಅ
ಅವಧಾನಿ- ಶ್ವಾ
ನಿ-ಸ
ಅವ-ಶ್ವಾ
ನಿ-___
ಅವ-ಖ್ಯ
ನಿ-ಸ
ಅವ-ವಿ
ನಿ-ರ
ಅ-ತ್ಕ
ನಿ-ನ
ಅವ-ವೀ
ನಿ-ಶ
ಅವ- ಜ್ಯಾ
ನಿ-ಯ
ಅವ-ರ್ಥಂ
ಹೀಗೇ ಸಾಗಿದ ನಿಷೇಧಾಕ್ಷರ ಉಳಿದ ಸುತ್ತುಗಳಲ್ಲಿಯೂ ಅವಧಾನಿಗಳಿಂದ ಅವಲೀಲೆಯಾಗಿ ನಿರ್ವಹಿಸಲ್ಪಟ್ಟಿತು.
ಕೊನೆಗೆ ಅವಧಾನಿಗಳ ಉತ್ತರ- =
ಶ್ವಾಶ್ವಾಖ್ಯವಿತ್ಕವೀಜ್ಯಾರ್ಥಂ ನ್ಯಸ್ತಂ ಮೂರ್ತಿವಶಂ ಯಶಃ|
ತೂರ್ಯಾಶಮಸಂನ್ಯಕಾ ವಾಟ್ಯಾಂ ಅಭಿರಾಮಂ ನವೋನವಂ||


ಸಮಸ್ಯೆ- ಶ್ರೀ ಸೋಮಶೇಖರ ಶರ್ಮ
ಭರತಮುನಿಗಾಂಪನೆನೆ ನೃತ್ಯವನರಿವರೇ ಪೇಳ್ವರ್
ಛಂದಸ್ಸು- ಭಾಮಿನಿ
ಅವಧಾನಿಗಳ ಉತ್ತರ ಎಲ್ಲಾ ಸುತ್ತುಗಳಿಂದಲೂ ಸೇರಿ
- ಕರಣದಾವಿಷ್ಕರಣದಿಂ ವಿ
ಸ್ಫುರಣದಿಂ ಮೇಣಂಗಹಾರಾ-
ಕ್ಷರಣದಿಂ ರಸಭಾವಸಂವಿದ್ವರಣದಿಂ ರಣದಿಂ|
ಹರಣಗೊಂಡಿರೆ ನಾಟ್ಯವೇದಾ
ಚರಣವಿದು ಚರಣವಿದು ಗೆಜ್ಜೆಯ
ಭರತಮುನಿಗಾಂಪನೆನೆ ನೃತ್ಯವನರಿವರೇ ಪೇಳ್ವರ್||

ದತ್ತಪದಿ-ಗಣೇಶ ಕೊಪ್ಪಲತೋಟ
ವಸ್ತು- ರಾಮ ಸಮುದ್ರರಾಜನನ್ನು ಸ್ತುತಿಸುವುದು
ಪದಗಳು- ಪೋಲಿ, ಲೋಪರ್. ಷ್ಟುಪಿಡ್, ಕಮಾನ್
ಛಂದಸ್ಸು- ಶಾರ್ದೂಲವಿಕ್ರೀಡಿತ
ಅವಧಾನಿಗಳ ಪದ್ಯ-
ಸ್ರೋತೋನಾಯಕ ನಿರ್ಭರಾನೃತರಿಪೋ ಲಿಪ್ಸಾ ವಿದೂರ ಸ್ಥಿರ
ಪ್ರೀತಿಸ್ಫೋರಕ ಸೇತುವಾಗಲಿದೆಲೋ ಪರ್ಯಂತ ಚಿಂತಾಕುಲಂ|
ಸೀತಾನ್ವೇಷಣಕಾರ್ಯಕಿಷ್ಟು ಪಿಡುಗೇಂ ನಿನ್ನಿಂದೆ ಯಾದೋಧವ
ಸ್ಫೀತಾಂಬು ಪ್ರಸರಕ್ಕಮಾನುಷಬಲಂ ಕೊರ್ವಿರ್ಪುದಂ ಕಾಣೇಯೇಂ||

ಚಿತ್ರಕವಿತೆ- ಡಾ|| ಆರ್ ಶಂಕರ
ಗೋಮೂತ್ರಿಕ ಬಂಧ (http://goo.gl/piwd5) ಇಲ್ಲಿ ಉದಾಹರಣೆಯ ಚಿತ್ರ ಕಾಣುತ್ತದೆ.1ಮತ್ತು 3ನೇ ಸಾಲು ಹಾಗೇ 2 ಮತ್ತು 4ನೇ ಸಾಲುಗಳನ್ನು ಗಮನಿಸಿ. ಇದರಂತೆಯೇ ಅವಧಾನಿಗಳ ಪದ್ಯದಲ್ಲಿಯೂ ವಿನ್ಯಾಸವಿದೆ.

ವಸ್ತು-ವಧು ಮದುವೆಗೆ ಸಜ್ಜಾಗುವುದು
ಛಂದಸ್ಸು-ರಥೋದ್ಧತಾ
ಅವಧಾನಿಗಳ ಪದ್ಯ-
ಕಾಂತೆಕಂದಲಿತ ಕಾಮೆ ಕಾದಲಂ
ಗಿಂತು ಸೊಂಪೆಸೆಯೆ ಮಾತೆಯಾಂತಿದೋ
ಶಾಂತೆ ಕೋದ ಹಿತ ಸೋಮೆ ಸಂದಳೈ
ನಿಂತು ಪೆಂಪೆಸೆಯೆ ಬಾಲೆಯೋತಿರಲ್||

ಆಶುಕವಿತೆಗಳು- ಶ್ರೀ ಸುಧೀರ್ ಕೃಷ್ಣಸ್ವಾಮಿ
ಮೊದಲ ಸುತ್ತಿನ ವಿಷಯ- ನಿಶಾಮುಖ ವರ್ಣನೆ- (ಸಂಜೆಯಾಗುತ್ತಿರುವುದು)
ಅವಧಾನಿಗಳ ಪದ್ಯ
ಕಂದ||
ಅಮಮಾ  ನಿಶೆಯ ಮುಖಂ ವಿ-
ಭ್ರಮಿಸಿರ್ಪುದು ಸೂರ್ಯಕುಂಕುಮಂ ಜಗುಳುತಿರಲ್ |
ಕಮಲಾರಿಯ ಭಸ್ಮಾಂಕಮ
ನಮಿತವಿಷಾದದೆ ದಿನಾಂತ್ಯದೊಳ್ ತಾಳ್ದಪಳೇಂ?

ಎರಡನೇ ಸುತ್ತಿನ ವಿಷಯ-ಮುಪ್ಪು ಬಂದಿರುವ ವ್ಯಕ್ತಿಯ ವರ್ಣನೆ
ಅವಧಾನಿಗಳ ಪದ್ಯ-
ಚೌಪದಿ||
 ಹೊಸೆದ ಬತ್ತಿಗಳಂತೆ ಮೈಯೆಲ್ಲ ಸುಕ್ಕಾಗೆ
ಮಸುಳಿಸದೆ ತುಂಬಿರಲ್ ಸ್ನೇಹಮೊಡಲೊಳ್|
ಪಸೆಯಾರದೆ ಸ್ಫುರಿಸೆ ನೈಜಾನುಭವಿಕಾರ್ಚಿ
ಸುಸಿಲೆ ವಾರ್ಧಕದೀಪಕಡ್ಡಿಯೆನಿಕುಂ||

ಮೂರನೇ ಸುತ್ತಿನ ವಿಷಯ- ಮೋಹಿನಿ ರಾಕ್ಷಸರನ್ನು ಕುರಿತು ಹೇಳುವ ಐಟಂ ಸಾಂಗ್!!
ಅವಧಾನಿಗಳ ಹಾಡು (ಸಂಪೂರ್ಣವಾಗಿ ಬರೆದುಕೊಳ್ಳಲಾಗಲಿಲ್ಲ. ಕ್ಷಮಿಸಿ, ಅರೆಬರೆ ಪದ್ಯವನ್ನೇ ಹಾಕಿದ್ದೇನೆ)
 ಇದು ಸುರೆ ಬನ್ನಿರಿ ಅಸುರರೆ
ಬಿಗುಮಾನವೇಕೆ ಸಾಕೆ ನಾನೋ!!
ನೂಕೆ____ ಚಿತ್ತ ಇತ್ತ
ಕರೆದತ್ತ _ ಸುತ್ತ ಮುತ್ತ
ಆಕಾಶದಂತ ಸೊಂಟ
ಅವಕಾಶ ನಿನಗೆ ಉಂಟ
ನೀನಾಗು ನನ್ನ ಬಂಟ
ಕುಂದಿತ್ತು ಕವಿಯ ಕಂಠ!!

ನಾಲ್ಕನೇ ಸುತ್ತಿನ ವಿಷಯ- ಇಷ್ಟವಾದ ಜಾತಿಯ ಮರ (ಮೇಪಲ್ ಮರ)
ಚಾಪದಿ||
ಸಕ್ಕರೆ ಮರನೇ ಶಿಶಿರಸಮಯದೊಳ್
ದುಕ್ಕದೆ ತರುಗಳ್ ತರಗನೆ ನೀಳ್ಗುಂ
ಅಕ್ಕಜಮೆನಿತೈ ಚರಮಾಂಕದೊಳೇಂ
ಸೊಕ್ಕಿಸಿ ಮೈವರ್ಣಂಗಳ ಬೆಡಗಿಂ||

ಅಪ್ರಸ್ತುತ ಪ್ರಸಂಗದಲ್ಲಿ ಗಂಡಹೆಂಡಿರು ಹೇಗಿರಬೇಕೆಂದು ಕೇಳಿದಾಗ ಹೇಳಿದ ಪದ್ಯ
ಸಾಂಗತ್ಯ ||
ದುಡಿಯುವ ಹೊತ್ತಲ್ಲಿ ಗಂಧದ ಕೊರಡಾಗಿ
ಮಿಡಿವಾಗ ಮನವಾಗಿ ಸಾಣೆ|
ಮಡದಿಯುಮಾಣ್ಮನುಮೊಪ್ಪಿರೆ ಮನದಲ್ಲಿ
ಪಡಿಯಾಗದೇನು ಸೌರಭವು||

ಭಾನುವಾರ, ಜನವರಿ 20, 2013

ಅವಧಾದಲ್ಲಿ ಚಿತ್ರಕವಿತೆ- ಸುದರ್ಶನಚಕ್ರ ಬಂಧ



ನಿನ್ನೆ ದಿನಾಂಕ 19-1-2013ರ ಸಂಜೆ  ಹೆಬ್ಬಾಳದ ಜಿಕೆವಿಕೆ ಕಾಲೇಜಿನಲ್ಲಿ ನಡೆದ ಶತಾವಧಾನಿ ಡಾ|| ಆರ್ ಗಣೇಶ ಅವರ ಅಷ್ಟಾವಧಾನದಲ್ಲಿ ನಾನು ಚಿತ್ರಕವಿತೆಗೆ ಕೇಳಿದ ಪ್ರಶ್ನೆ- ವಿಷ್ಣುಸ್ತುತಿಯನ್ನು ಸುದರ್ಶನಚಕ್ರ ಬಂಧದಲ್ಲಿ ಮಾಡಬೇಕೆಂದು. ಅದಕ್ಕೆ ಅವರು ರಚಿಸಿದ ಪದ್ಯ ಹೀಗಿದೆ-
ಅನುಷ್ಟುಪ್||
ಸದಾಹ್ಲಾದಾ ಚಿದಾಸ್ವಾದಾ
ಸದಾನಂದಾ ಮದಾನುದಾ|
ಸದಾರಾ ದಾನದಾಮೋದಾ
ಸದಾರ್ಢ್ಯಾದಾಲ್ಬ್ಯಾದಾಮದಾ ||

ಬಂಧದ ಗತಿಯನ್ನು ಕೆಳಗಣ ಚಿತ್ರದಲ್ಲಿ ಕಾಣಬಹುದು-

ಅವಧಾನಿಗಳ ಪದ್ಯದ ಚಿತ್ರ  
























ನನ್ನ ಪದ್ಯ ಹೀಗಿತ್ತು-
ಮಾಪಭೂಪನೆ ಪದ್ಯಕ್ಕ-
ಮಾಪಗೋಪಮ ಪಙ್ಕ್ತಿಯಂ|
ಮಾಪಾರ್ಶ್ವಪಾನ್ಥಪಾರಮ್ಯ
ಮಾಪೊಳ್ಳಂ ಪೊಯ್ದು ಪೊಣ್ಮಿಸೈ||




ನನ್ನ ಪದ್ಯದ ಚಿತ್ರ