PC:Internet |
ಕಾವ್ಯವೊಂದನ್ನು ಮಹಾಕಾವ್ಯ ಎನ್ನಬೇಕಾದರೆ ಅದರ ಲಕ್ಷಣಗಳು ಹೀಗೆ ಹೀಗೆಯೇ ಇರಬೇಕು ಎಂದು ಆಲಂಕಾರಿಕರು ನಿರ್ದೇಶಿಸಿದ್ದಾರೆ. ಅಂತಹ ಲಕ್ಷಣಗಳಲ್ಲಿ ನಗರಾರ್ಣವಾದಿ ಅಷ್ಟಾದಶ ವರ್ಣನೆಗಳಿರಬೇಕೆಂಬುದೂ ಒಂದು. ಕೆಲವು ಆಲಂಕಾರಿಕರ ಪ್ರಕಾರ ಹದಿನೆಂಟೂ ವರ್ಣನೆಗಳಿರಬೇಕೆಂದೇನೂ ಇಲ್ಲದಿದ್ದರೂ ಕಥಾಪ್ರಸಂಗಕ್ಕೆ ಪೂರಕವಾಗಿ ಈ ವರ್ಣನೆಗಳಿರಬೇಕೆಂಬುದು ಒಪ್ಪಬಹುದಾದ ನಿಯಮ. ಹಲಕೆಲವು ಕಾವ್ಯಗಳಲ್ಲಿ ರಸಕ್ಕೆ ತೀರವಿರುದ್ಧವಾಗಿ ವರ್ಣನೆಗಳು ಬಂದಿರುವುವೂ ಇವೆ. ಆದರೆ ಕಾವ್ಯದಲ್ಲಿ ಮುಖ್ಯವಾಗಿರಬೇಕಾದದ್ದು ರಸ ಎಂಬುದು ಎಲ್ಲರಿಗೂ ತಿಳಿದಿರುವುದೇ ಆಗಿದೆ. ಇಂತಹ ರಸಕ್ಕೆ ವಿರುದ್ಧವಲ್ಲದ ವರ್ಣನೆಗಳಾದರೋ ಆಸ್ವಾದಿಸಿಯೇ ಅನುಭವಿಸಬೇಕಷ್ಟೆ!
ಅಂತೆಯೇ ಷಡಕ್ಷರದೇವ ಕವಿಯ ಶಬರಶಂಕರವಿಳಾಸದಲ್ಲಿ ಆರಂಭದಲ್ಲಿಯೇ ಬರುವ ಸಮುದ್ರದ ವರ್ಣನೆಯ ಪದ್ಯಗಳ ಸ್ವಾರಸ್ಯವನ್ನು ಈ ಸಂಚಿಕೆಯಲ್ಲಿ ನೋಡೋಣ.
ಷಡಕ್ಷರಿ ಕವಿಯ ಶೈಲಿಯಲ್ಲಿ ಅವನ ವೈದುಷ್ಯವಷ್ಟೇ ಅಲ್ಲದೇ ಸಮಾಸಭೂಯಿಷ್ಠ ಪದಪ್ರಯೋಗಗಳೂ, ಒಳ್ಳೆಯ ಶಬ್ದಾರ್ಥಾಲಂಕಾರಭರಿತವಾದ ಪದ್ಯಗಳೂ ಹಾಗೇಯೇ ವಿಶೇಷವಾದ ಕಲ್ಪನೆಗಳೂ ನಮ್ಮನ್ನು ಸೆಳೆಯುತ್ತವೆ.
ಈ ಪದ್ಯದ ಚಮತ್ಕಾರ ನೋಡಿ-
ಚಂಪಕಮಾಲೆ||
ಅವಿಕಳಶಕ್ತಿಯುಕ್ತರಕಳಂಕಚರಿತ್ರರನಂತಸದ್ಗುಣಾ-
ರ್ಣವರಭವಸ್ವರೂಪರಖಿಳಾಗಮವೇದಿಗಳರ್ದಿತಾನ್ಯವಾ-
ದಿವರರಮಂದಕೀರ್ತಿಯುತರರ್ಥಿಸುರೋರ್ವಿಜರಪ್ರತರ್ಕ್ಯಗೌ-
ರವರಭಿವಂದ್ಯರಕ್ಕೆಮಗಶೇಷಪುರಾತನರೀಶ್ವರಾರ್ಚಕರ್ || (೧-೫)
ತನ್ನ ಶೈವಂಪ್ರದಾಯದ ೬೩ ಮಂದಿ ಪುರಾತನರೂ ನಮಗೆ ಅಭಿವಂದ್ಯರು ಎಂದು ಹೇಳುವ ಪದ್ಯದಲ್ಲಿ ಅವರ ಕುರಿತ (ಅವಿಕಳಶಕ್ತಿಯುತರು, ಅಕಲಂಕಚರಿತ್ರರು, ಅನಂತ ಸದ್ಗುಣಗಳ ಸಾಗರ ಶಿವಸ್ವರೂಪ ಇತ್ಯಾದಿ) ವಿಶೇಷಣಗಳಿಂದಲೇ ತುಂಬಿ ಹೆಚ್ಚೇನೂ ಸ್ವಾರಸ್ಯವಿಲ್ಲದಿದ್ದರೂ ಮೊದಲಿನಿಂದ ಕಡೆಯವರೆಗೆ ಸಂಧಿಗಳಲ್ಲಿ ಹಾಗೂ ಸಮಾಸಗಳಲ್ಲಿ ಆ ವಿಶೇಷಣಗಳನ್ನು ಜೋಡಿಸಿ ಇಡೀ ಪದ್ಯವನ್ನು ಒಂದೇ ಶಬ್ದವನ್ನಾಗಿ ಮಾರ್ಪಡಿಸಿದ ಕವಿಯ ಪ್ರತಿಭೆ ನಿಜಕ್ಕೂ ಶ್ಲಾಘ್ಯ.
ಹಾಗೆ ದೇವಸ್ತುತಿ ಪೂರ್ವಕವಿಸ್ತುತಿ ಕುಕವಿನಿಂದೆ ಸಹೃದಯಸ್ತುತಿ ಇತ್ಯಾದಿ ಹಲವು ಗತಾನುಗತಿಕಪದ್ಯಗಳ ಹಾವಳಿಯಲ್ಲಿಯೂ ಅಲಂಕಾರಮಯ ಪದ್ಯಗಳನ್ನು ತಂದಿರುವುದಲ್ಲದೇ ಮುಂದೆ ಕಥಾರಂಭಕ್ಕೆ ಪೀಠಿಕೆಯಾಗಿ ಸಮುದ್ರವರ್ಣನೆಯಿಂದ ಪ್ರಾರಂಭಿಸುತ್ತಾನೆ-
ಮಹಾಸ್ರಗ್ಧರಾ||
ಜ್ವಲದೌರ್ವಜ್ವಾಲೆ ಫಾಲಾಂಬಕಶಿಖಿಯಹಿಭೂಷಾಹಿ ಡಿಂಡೀರಮಾ ಪಾಂ
ಡುಲಸದ್ಭಸ್ಮಂ ಪ್ರವಾಳೋತ್ಕರಮರುಣಜಟಾಮಂಡಲಂ ವಿದ್ಯುದುದ್ಯ
ಜ್ಜಲದಂ ವ್ಯಾಘ್ರಾಜಿನಂ ರಾಜಿಸೆ ಭೃತಭುವನಂ ಭೂರಿಸತ್ತ್ವಾಶ್ರಯಂ ನಿ
ಸ್ತುಲಗಾಂಭೀರ್ಯಂ ಕರಂ ಕಣ್ಗೊಳಿಸಿದನಭವಾಕಾರಮುದ್ರಂ ಸಮುದ್ರಂ|| ೩೦||
(ಪ್ರಜ್ವಲಿಸುವ ಲಾವಾರಸವೇ ಹಣೆಯಲ್ಲಿರುವ ಉರಿಗಣ್ಣಿನ ಬೆಂಕಿ, ಅಲ್ಲಿರುವ ಹಾವುಗಳೇ ಆಭರಣಗಳಾದ ಸರ್ಪಗಳು, ಉಕ್ಕುವ ನೀರಿನ ಬಿಳಿಯ ನೊರೆಯೇ ಭಸ್ಮ, ಹವಳದ ಸಾಲುಗಳೇ ಅರುಣ ಜಟೆ, ಮಿಂಚಿನಿಂದ ಕೂಡಿದ ಮೋಡಗಳೇ ಉಟ್ಟ ಹುಲಿಯ ಚರ್ಮವಾಗಿ ಇರುವಾಗ ಹೋಲಿಸಲಾರದ ಗಾಂಭೀರ್ಯವುಳ್ಳ ಜಲರಾಶಿಯಿಂದ ಕೂಡಿದ ಸಮುದ್ರನು ಅಭವನಾದ ಶಿವನಂತೆಯೇ ಕಣ್ಗೊಳಿಸಿದನು
ಇಲ್ಲಿ ಸಾವಯವವಾಗಿ ಶಿವನ ರೂಪಿನೊಂದಿಗೆ ಸಮುದ್ರದ ರೂಪನ್ನು ಸಮೀಕರಿಸಿ ಸಮುದ್ರ ಶಿವನಂತೆ ಇತ್ತು ಎಂಬುದೇ ಸ್ವಾರಸ್ಯ.)
ಮತ್ತೇಭವಿಕ್ರೀಡಿತ||
ಕುಡಿದಂ ಕುಂಭಜನೆನ್ನನಾತ್ಮವಧುವೊಳ್ ಕೂಡಿರ್ದನೆಂದಿಂದಿರಂ
ಕಡೆದಂ ತನ್ನಹಿತಾದ್ರಿಗಾಂ ಶರಣಮೆಂದಾ ರಾಘವಂ ಕಟ್ಟಿ ಮೇಣ್
ತಡೆದಂ ಕಾದೊಳಕೆಯ್ದನೆಂದು ಪಗೆಯಂ ಹಾಲಾಹಲಂಗೊಟ್ಟೊಡಂ
ಮೃಡನೊರ್ವಂ ಮುಳಿಯಂ ಗಡೆಂದುಲಿವವೋಲುದ್ಘೋಷಿಕುಂ ಸಾಗರಂ||೩೧||
((ಗೋದಾವರಿ ನದಿಯನ್ನು ಪತ್ನಿಯಾಗಿ ಹೊಂದಿದ್ದ) ಅಗಸ್ತ್ಯರು ಅವರ ಪತ್ನಿಯಲ್ಲಿ ಕೂಡಿದೆ ಎಂದು ನನ್ನನ್ನು ಕುಡಿದುಬಿಟ್ಟರು. ಇಂದ್ರ, ಅವನ ಶತ್ರುವಾದ ಪರ್ವತ(ಮೈನಾಕ)ಕ್ಕೆ ನಾನು ಆಶ್ರಯವನ್ನು ಕೊಟ್ಟೆ ಎಂದು ನನ್ನನ್ನು ಕಡೆದ. ರಾಮ, ತನ್ನ ಶತ್ರುವನ್ನು ಕಾಪಾಡಿದೆ ಎಂದು ಸೇತುವೆ ಕಟ್ಟಿ ತಡೆದ, ಆದರೆ ಹಾಲಾಹಲವನ್ನು ಕೊಟ್ಟರೂ ಮೃಡನು(ಶಿವ) ಮಾತ್ರ ಸಿಟ್ಟಾಗಲಿಲ್ಲ ಎಂದು ಈ ಸಾಗರ ಘೋಷಿಸುತ್ತಿದೆ.)
ಮಹಾಸ್ರಗ್ಧರೆ||
ಮಗನೊರ್ವಂ ಪುಟ್ಟಿ ದೋಷಾಕರನೆನಿಸಿದನೆನ್ನೊಳ್ಮಗಳ್ ಪಾಱುಗೆಯ್ತಂ
ಮಿಗೆ ನಿಚ್ಚಂ ಪಂಕಜಾತಾಶ್ರಿತೆಯೆನಿಸಿ ಕುಭೃದ್ವರ್ಗದೊಳ್ ಕ್ರೀಡಿಪಳ್ ನಾ
ಕಿಗಣಂ ಸರ್ವಸ್ವಮಂ ಮೇಣ್ ಕಮರ್ದುದಕಟ ಭಂಗಕ್ಕೆ ಪಕ್ಕಾದೆನೆಂದಾ
ತ್ಮಗತೌರ್ವಾಗ್ನಿಚ್ಛಲಂಬೆತ್ತೞಲುರಿಯೊಳಕೊಂಡಂತೆ ತೋರ್ಕುಂ ಸಮುದ್ರಂ||೩೨||
("ಒಬ್ಬ ಮಗ ಹುಟ್ಟಿದ(ಚಂದ್ರ), ಅವನೂ ದೋಷಾಕರ ಎನಿಸಿಕೊಂಡ. ನನ್ನ ಮಗಳು (ಲಕ್ಷ್ಮಿ) ಪಂಕಜಾತಾಶ್ರಿತೆ (ಕಮಲದಲ್ಲಿರುವವಳು)ಯಾಗಿ ಯಾವಾಗಳೂ ಪಾಱುಗೆಯ್ತ (ಹಾದರ) ಹೆಚ್ಚಿ ರಾಜರ ಜೊತೆಯಲ್ಲಿ ಕ್ರೀಡಿಸುತ್ತಿದ್ದಾಳೆ. ಸ್ವರ್ಗದ ದೇವತೆಗಳು ನನ್ನ ಎಲ್ಲ ಸಂಪತ್ತನ್ನೂ (ಸಮುದ್ರಮಥನದಲ್ಲಿ) ದೋಚಿಕೊಂಡು ಹೋದರು. ಅಯ್ಯೋ ನಾನು ಭಂಗಕ್ಕೆ ಪಕ್ಕಾದೆ" ಎಂದು ತನ್ನಲ್ಲಿರುವ ಔರ್ವಾಗ್ನಿ ಜ್ವಾಲೆಯನ್ನು ಹೊರಹಾಕುತ್ತಾ ಅಳಲೆಂಬ ಉರಿಯನ್ನು ಒಳಕೊಂಡಿರುವಂತೆ ಸಮುದ್ರವು ಕಾಣುತ್ತಿತ್ತು )
ಚಂಪಕಮಾಲೆ||
ಪ್ರತಿಗಜಮೆಂದು ಕಾರ್ಮುಗಿಲನೀಡಿಱಿವಾನೆಗಳಿಂ ಪಯೋದಗ
ರ್ಜಿತಕಗಿದೋಡುವಂಚೆಗಳ ಬಾಯ್ಗಳಿನೊಕ್ಕುವಮೃತಂಗಳಂ ತುಡಂ
ಕುತೆ ಮಿಗೆ ನುಂಗುವಂಬುಚರದಿಂ ಬಡಬಾನಲನೆಂದು ವಿದ್ರುಮ
ಪ್ರತತಿಯನಿರ್ಕೆಲಕ್ಕೊಲೆವ ನಕ್ರದಿನದ್ಭುತಮಾಯ್ತು ಸಾಗರಂ||೩೩||
(ತನ್ನ ಶತ್ರು ಆನೆಯೆಂದು ಮೋಡಗಳನ್ನು ಇರಿಯುತ್ತಿರುವ ಆನೆಗಳಿಂದ ಮೋಡಗಳ ಘರ್ಜನೆಗೆ ಹೆದರಿ ಓಡುವ ಹಂಸಗಳ ಬಾಯಿಗಳಿಂದ ಉಕ್ಕಿ ಬರುವ ಅಮೃತವನ್ನು ತುಡುಕುತ್ತ ನುಂಗುವ ಮೀನುಗಳಿಂದ,ಜ್ವಾಲಾಮುಖಿಯೆಂದು ಹವಳದ ಸಾಲನ್ನು ಇರ್ಕೆಲಕ್ಕೆ ಒಲೆವ ಮೊಸಳೆಗಳಿಂದ ಸಾಗರವು ಅದ್ಭುತವಾಯ್ತು
ಇಲ್ಲಿ ಪ್ರತಿಯೊಂದೂ ಪ್ರಣಿ ಪಕ್ಷಿಗಳು ಭ್ರಾಂತಿಗೊಳಗಾಗುವ ವರ್ಣನೆಯಿದೆ. (ಬಹುಶಃ) ಇದು ಭ್ರಮಾಲಂಕಾರ (?) )
ಚಂಪಕಮಾಲೆ||
ಪರಿವ ಪಡಂಗು ಬಲ್ದೆರೆಯ ಸಾಲ ಬೆಡಂಗು ನವಿನವಿದ್ರುಮೋ
ತ್ಕರದ ಪೊದೞ್ಕೆ ಶುಕ್ತಿಜದಳುರ್ಕೆ ಸರೋಜದ ಗುಣ್ಪು ತೀರ ಭಾ
ಸುರತರ ತಾಳನಂದನದಲಂಪು ಪುೞಿಲ್ಗಳಡರ್ಪು ಚೆಲ್ವ ಬಿ
ತ್ತರಿಸೆ ಪೊಡರ್ಪುವೆತ್ತು ಬಗೆಗೊಂಡುದು ಪೂರ್ಣಗುಣಂ ಮಹಾರ್ಣವಂ||೩೪||

(ಹರಿಯುತ್ತಿರುವ ಹಡಗು ದೊಡ್ಡ ತೆರೆಗಳ ಬೆಡಗು ಹೊಸ ಹವಳಗಳ ಸಾಲಿನ ಕಾಂತಿ ಮುತ್ತುಗಳ ರಾಶಿ ಕಮಲಗಳ ಗುಂಪು ತೀರದಲ್ಲಿರುವ ತಾಳೆಯ ಮರಗಳ ತೋಟದ ಅಲಂಪು ಮರಳ ರಾಶಿಯ ಚೆಲುವು ಇವೆಲ್ಲವೂ ಕೂಡಿ ಪೂರ್ಣಗುಣವಾದ ಮಹಾರ್ಣವ ಶೋಭಿಸುತ್ತಿತ್ತು.
(ಬಹುಶಃ) ಇದು ಉಲ್ಲೇಖಾಲಂಕಾರ (?))
ಇಲ್ಲಿನ ರಸಮಯ ಪದ್ಯಗಳಿಗೆ ನನ್ನ ಅನುವಾದವಾಗಲೀ ಅಥವಾ ವ್ಯಾಖ್ಯಾನವಾಗಲೀ ಅಷ್ಟೇನೂ ಸ್ವಾರಸ್ಯವಿಲ್ಲದಿದ್ದರು ಮೂಲ ಪದ್ಯಗಳ ಸ್ವಾರಸ್ಯ ಅದಕ್ಕೆ ಇದ್ದೇ ಇದೆ. ಆದರೂ ಬೇಸಿಗೆಯ ದಿನಗಳ ಈ ಸೆಖೆಯಲ್ಲಿ ಸಮುದ್ರದ ವರ್ಣನೆಯಾದರೂ ನಮ್ಮ ಮನಸ್ಸಿಗೆ ಅಷ್ಟು ತಂಪನ್ನು ತಂದರೆ ಅದೊಂದು ರೀತಿಯ ಸಂತೋಷವಷ್ಟೇ !!