Powered By Blogger

ಭಾನುವಾರ, ಫೆಬ್ರವರಿ 26, 2012

ಪುನರುತ್ಥಾನ ಪುನರುತ್ಥಾನ!!

ಕವಿತೆ||
ಪುನರುತ್ಥಾನ ಪುನರುತ್ಥಾನ
ನಿತ್ಯವು ಜಗದಲಿ ಪುನರುತ್ಥಾನ!!

ಕಾನನಜನ ಮಾನವರಾದೊಡೆ ;
ಕಾನೀನನು ರಿಸಿ; ವೇದವನುಲಿದೊಡೆ;
ಕೌಶಿಕ ವಿಶ್ವದ ಮೈತ್ರಿಯ ಪೊಕ್ಕೊಡೆ;
ಭಾರ್ಗವ ಕೊಡಲಿಯ ರಕ್ತವ ತೊಳೆದೊಡೆ;
ಉಗ್ರರ ವ್ಯಗ್ರತೆ ನಿಗ್ರಹವಾದೊಡೆ;
ಅಗ್ರರ ವಿಗ್ರಹ ಪ್ರಗ್ರಹ ಮೀರ್ದೊಡೆ;
ಪುನರುತ್ಥಾನ ಪುನರುತ್ಥಾನ...!!

ಚೈತ್ರವು ಜಗದಲಿ ಬಣ್ಣವ ತುಂಬಿರೆ;
ಭಾವಸ್ರಾವದಿ ಕಾವ್ಯವು ಸೃಜಿಸಿರೆ;
ಮಳೆಯೂ ಚಳಿಯೂ ಹೊಸತನವೂ
ಮನದಲಿ ಆಹ್ಲಾದತೆಯನು ತಂದರೆ;
ಚಿಂತನೆ ಗಡಿಗಳ ದಾಟುತ ಹಾರಿರೆ,
ಮುಗಿದರೆ ದುಃಖದ ಅನುರಣನ,
ಕಾಲಾತೀತನ ಸಮ್ಯಗ್ ಜ್ಞಾತನ -
ಭೌತಿಕ ದೇಹಕೆ ಬಂದರೆ ಮರಣ;
ಪುನರುತ್ಥಾನ ಪುನರುತ್ಥಾನ!!

ಕಿಟಕಿಬಾಗಿಲುಗಳ ತೆರೆದೊಡನೆ
ಹೊರಜಗತ್ತಿಗೆ ಸೇರಿದೊಡನೆ ;
ಕಾಲವು ಹಿಮ್ಮುಖ ನಡೆದೊಡನೆ;
ವಿಶ್ವಶಾಂತಿ ಮೈತಳೆದೊಡನೆ;
ಜಾತಿಮತತತ್ತ್ವರಾಗದ್ವೇಷವ ಮೀರಿ
ಮಾನವೀಯತೆಯ ಸಾರಿದರೆ;
ಪುನರುತ್ಥಾನ ಪುನರುತ್ಥಾನ!!

ಪ್ರಾತಃ ಕಾಲದ ಉತ್ಥಾನ,
ಉಷೆ ಮೈದೋರಲು ದಿನದಿನವೂ ಪುನರುತ್ಥಾನ!

ನೋವಿನ ಕಷ್ಟವ ದಾಂಟಿದ ಕೂಡಲೇ
ನಲಿವಿನ ತಂತಿಯ ಮೀಂಟುವ ಬಾರೆಲೆ
ಚಣಚಣಕೂ ಆಗಲಿ ಪುನರುತ್ಥಾನ!!
ಪುನರುತ್ಥಾನ ಪುನರುತ್ಥಾನ!!


-ಗಣೇಶ ಕೊಪ್ಪಲತೋಟ                                                                                   
8-7-2011
ಕವಿತೆಗೆ ತಕ್ಕಂತೆ ಬಿಡಿಸಿದ್ದು!
















ಪದಾರ್ಥ;-)   
(ಪುನರುತ್ಥಾನ=ಪುನಃ+ಉತ್ಥಾನ-ಮತ್ತೆ ಎದ್ದೇಳುವುದು, ಕಾನನ-ಕಾಡು, ಕಾನೀನ-ಕನ್ಯೆಯಲ್ಲಿ ಜನಿಸಿದವನು;ವೇದವ್ಯಾಸ, ರಿಸಿ-ಋಷಿ, ಉಲಿ-ಹೇಳು, ಕೌಶಿಕ-ವಿಶ್ವಾಮಿತ್ರ ಋಷಿಯ ಮೊದಲಿನ ಹೆಸರು, ಭಾರ್ಗವ-ಪರಶುರಾಮ, ವ್ಯಗ್ರತೆ-ಕೋಪ, ವಿಗ್ರಹ-ಮೂರ್ತಿ/ಯುದ್ಧ, ಪ್ರಗ್ರಹ- ಬಂಧನ/ಹಗ್ಗ, ಅನುರಣನ-ಪುನಃ ಪುನಃ ಕೇಳುವಂತೆ ಭಾಸವಾಗುವುದು(?), ಕಾಲಾತೀತ-ಕಾಲ+ಅತೀತ-ಕಾಲವನ್ನು ಮೀರಿದವನು; ಸಮ್ಯಗ್- ಸರಿಯಾದ, ಪ್ರಾತಃಕಾಲ-ಮುಂಜಾನೆ, ದಾಂಟು-ದಾಟು, ಮೀಂಟು-ಮೀಟು, ಚಣ-ಕ್ಷಣ  )

5 ಕಾಮೆಂಟ್‌ಗಳು:

  1. ಭಾಷೆಯ ಲಾಲಿತ್ಯದಲ್ಲಿ ಅರ್ಧ ಗೆಲುವು ಕಂಡಿದ್ದೀರಿ. ನವೋದಯ ಶೈಲಿ. ಪುನರುತ್ಥಾನದ ಕಲ್ಪನೆಯೇ ಅಮೋಘ.

    ಶಭಾಷ್!...

    ನನ್ನ ಬ್ಲಾಗಿಗೂ ಸ್ವಾಗತ.

    ಪ್ರತ್ಯುತ್ತರಅಳಿಸಿ
  2. ಚೆಂದದ ಕವಿತೆ ಗಣೇಶ್ ಭಟ್ರೆ.. ಪುನರುತ್ಥಾನದ ಪ್ರತಿಮೆಯನ್ನು ಚೆಂದವಾಗಿ ಎತ್ತಿ ನಿಲ್ಲಿಸಿರುವ ಪರಿ ಮನೋಜ್ಞವೆನಿಸುತ್ತದೆ.. ಚಿಂತನೆಯ ಇಂಬಿನೊಳಗೆ ಹರಡಿಕೊಂಡ ಕವಿತೆ ಮನಸ್ಸಿನಾಳಕ್ಕಿಳಿದು ಮನಸ್ಸಿನಲ್ಲಿ ಹಲವಾರು ಭಾವತಂತುಗಳನ್ನು ಮೀಟಿ ಚಿಂತನೆಗಚ್ಚುತ್ತವೆ.. ಪದಪ್ರಯೋಗದ ಚೆಂದದ ವೈಭವ ಮನಸ್ಸಿಗೆ ಆಪ್ತವೆನಿಸುತ್ತದೆ..:)))

    ಪ್ರತ್ಯುತ್ತರಅಳಿಸಿ
  3. ಪುನರುತ್ಥಾನ- ಎಂದರೆ ಮತ್ತೆ ಏಳ್ಗೆಯಾಗುವುದು ಅಭಿವೃದ್ಧಿಯಾಗುವುದು ಎಂಬರ್ಥ
    ಪದ್ಯದ ಭಾವಾರ್ಥ-
    "ಕಾನನ ಜನ(ಕಾಡಿನ ಜನ-ಶಿಲಾಯುಗದ ಕಾಲದವರು) ಮಾನವರಾದಾಗ,
    ಋಷಿ ಕಾನೀನ(ವೇದವ್ಯಾಸ-ಕನ್ಯೆಯಲ್ಲಿ ಹುಟ್ಟಿದವನು)ವೇದವನ್ನು ನಾಲ್ಕುಭಾಗ ಮಾಡಿ ಜಗತ್ತಿಗೆ ಕೊಟ್ಟಾಗ, ಕೌಶಿಕ ವಿಶ್ವಾಮಿತ್ರನಾದಾಗ (ಜಗತ್ತಿಗೇ ಮಿತ್ರನಾದಾಗ)ಭಾರ್ಗವ ಅಂದರೆ ಪರಶುರಾಮನು ಕ್ಷತ್ರಿಯರನ್ನು ಕೊಲ್ಲುವ ಪಣತೊಟ್ಟವನು ತನ್ನ ಕೊಡಲಿಯ ರಕ್ತವನ್ನು ತೊಳೆದಾಗ, ಉಗ್ರಗಾಮಿಗಳ(ಉಗ್ರರು-ಸಿಟ್ಟು ಬರುವವರು ಎಂದೂ ಅರ್ಥೈಸಬಹುದು) ಸಿಟ್ಟು(ವ್ಯಗ್ರತೆ) ನಿಗ್ರಹಕ್ಕೆ ಬಂದಾಗ, ಅಗ್ರರ(ಹಿರಿಯರ) ವಿಗ್ರಹ (ಮೂರ್ತಿ/ ಹೋರಾಟ- ಒಳ್ಳೆಯದಕ್ಕೆ ಮಾಡುವುವು) ಪ್ರಗ್ರಹ(ಬಂಧನ) ಮೀರಿದಾಗ ಪುನರುತ್ಥಾನವಾಗುತ್ತದೆ.(ಇವೆಲ್ಲ ಸಾಮಾಜಿಕವಾಗಿ ಆದವು)

    ಚೈತ್ರಮಾಸ ಜಗತ್ತಿನಲ್ಲಿ ಬಣ್ಣ ತುಂಬಿದಾಗ, ಭಾವಸ್ರಾವದಿಂದ ಕಾವ್ಯವು ಸೃಜಿಸಿದಾಗ ಹಾಗೇ ಮಳೆ ಚಳಿ ಹೊಸತನಗಳಿಂದ ಮನದಲ್ಲಿ ಆಹ್ಲಾದತೆ ಹುಟ್ಟಿದಾಗ, ಚಿಂತನೆಗಳು ಎಲ್ಲ ಗಡಿಗಳನ್ನು ದಾಟಿ ಹಾರಿದಾಗ, ದುಃಕದ ಪ್ರತಿಧ್ವನಿ-ಅನುರಣನ ಮುಗಿದಾಗ, ಕಾಲಾತೀತ ಅಂದರೆ ಕಾಲಗಳಿಂದ ಮೀರಿದ ವ್ಯಕ್ತಿ, ಸಮ್ಯಗ್ ಜ್ಞಾತ- ಸರಿಯಾದುದನ್ನು ತಿಳಿದವ(ಆಧ್ಯಾತ್ಮಿಕವಿಚಾರ) ಅವನ ಭೌತಿಕ ದೇಹಕ್ಕೆ ಮರಣ ಬಂದರೆ ಮತ್ತೆ ಮತ್ತೆ ಏಳ್ಗೆ ಸಾಧ್ಯವಾಗುತ್ತದೆ (ಇವು ಅಂತರಂಗದ ವಿಚಾರಗಳು)

    ನಮ್ಮ ಮನಸ್ಸಿನ ಕಿಟಕಿ ಬಾಗಿಲುಗಳನ್ನು ತೆರೆದು ನಾವು ಜಗತ್ತಿನೊಡನೆ ಸೇರಿದಾಗ, ವಿಶ್ವ ಶಾಂತಿ ಮೈತಳೆದಾಗ ಹಾಗೇ ಕಾಲವು ಹಿಮ್ಮುಖ ಸಾಗಿದಾಗ (ನಿಜವಾಗಿ ಸಾಧ್ಯವಿಲ್ಲವಾದರೂ ಮಾನಸಿಕವಾಗಿ ಶಾಂತಿಯನ್ನು ಹೊಂದಿದ್ದ ಹಿಂದಿನ ಕಾಲಕ್ಕೆ ಸಾಗಿದಾಗ) ಜಾತಿಮತತತ್ತ್ವ ರಾಗದ್ವೇಷಗಳ ಮೀರಿ ಮಾನವೀಯತೆ ಎಂಬುದೇ ಮುಖ್ಯವಾದಾಗ, ಪುನರುತ್ಥಾನ ಸಾಧ್ಯವಾಗುತ್ತದೆ. (ಸಮಾಜದಲ್ಲಿ ಮಾನಸಿಕವಾಗಿ ಆಗಬೇಕಾದವು)

    ಬೆಳಿಗ್ಗೆ ಏಳುವುದು (ಪ್ರಾತಃ ಕಾಲದ ಉತ್ಥಾನ)ಉಷೆ ಬೆಳಕನ್ನು ತರುವುದೂ (ಉಷೆ ಮೈದೋರಲು) ದಿನದಿನವೂ ಜಗತ್ತಿನಲ್ಲಿ ಪುನರುತ್ಥಾನ ನಡೆಯುತ್ತಲೇ ಇರುತ್ತದೆ.

    ನೋವಿನ ಕಷ್ಟವ ದಾಟಿ ನಲಿವಿನ ತಂತಿಯ ಮೀಂಟೋಣ ಆಗ ಕ್ಷಣಕ್ಷಣಕ್ಕೂ ಆಗಲಿ ಪುನರುತ್ಥಾನ!"


    -ಗಣೇಶ ಕೊಪ್ಪಲತೋಟ

    ಪ್ರತ್ಯುತ್ತರಅಳಿಸಿ