Powered By Blogger

ಬುಧವಾರ, ಫೆಬ್ರವರಿ 29, 2012

ನೀರಿಗಾಗಿ ಬೇಡಿಕೆ*

ಕೊಟ್ಟುಬಿಡಿ ಒಂಚೂರು ನೀರನ್ನು ನನಗಿಂದು 
ಇಟ್ಟುಕೊಳ್ಳುವೆನದರ ಕಾಪಾಡುತ |
ಹನಿಗೂಡಿಸೊಂದೆಡೆಗೆ ನಾಳೆಯಾವರೆಗೆಂದು
ವ್ಯರ್ಥವಾಗದೆ ಚೆಲ್ಲದಂತೆಂದು ನಾ  ||1||
ಬಾಯಾರಿಕೆಗೆ ತಣ್ಪನೀಯುವುದು ಎಂದಲ್ಲ
ನಾಳೆವರೆಗದನಿಡುವೆ ನಾನು ಹಾಗೇ |
ಸ್ನಾನ ಶೌಚಕ್ಕಲ್ಲ, ಅಡುಗೆ ಕೆಲಸಕ್ಕಲ್ಲ,
ಬರಿದೆ ನೀರನ್ನಿಟ್ಟುಕೊಳ್ಳುವಾಸೆ  ||2||
ಯಾರೆನ್ನ ಕೇಳಿದರು ಕೊಡಲಾರೆ ನಾನದನ
ಮಂತ್ರಿಗೂ ಮಾನ್ಯರಿಗು ಭಿಕ್ಷುಕರಿಗೂ |
ದೇವರೇ ಕೇಳಿದರು ಕೊಡದೆ ನಾನೋಡಿಸುವೆ
ಜೀವವಿರುವಾ ತನಕ ರಕ್ಷಿಸುತ್ತ  ||3||
ನನ್ನ ಮನೆ ಬದಿಯಲ್ಲಿ ಬಾವಿಯೂ ಇದ್ದಿದ್ದೆ
ಕೆರೆ ಹೊಳೆಗಳನ್ನು ಹತ್ತಿರದಿ ಕಂಡು |
ನೀರನ್ನು ಹನಿಗೂಡಿಸಿಡುವ ಬಯಕೆಯಲಿದ್ದೆ
ಬಿಂದಿಗೆಯ ತುಂಬಲ್ಲ ಲೋಟದಷ್ಟು ||4||
ಗೊತ್ತೆನಗೆ ಬರವಿಹುದು ಜಲಕಾಗಿ ಜಗದಲ್ಲಿ
ಮುಂದೊಮ್ಮೆ ನೀರೆಲ್ಲ ಖಾಲಿಯಾಗೆ |
ಸಿಹಿನೀರ ಮಾದರಿಗೆ ಜಗಕೆ ತೋರುವುದಕ್ಕೆ
ಉಪ್ಪುನೀರನ್ನೆಲ್ಲ ಕುಡಿಯುವಾಗ!! ||5||
ವನವ ಕಡಿದದ್ದನ್ನ ಮಲಿನ ಮಾಡಿದ್ದನ್ನ
ಹಸಿರಕೊಂದೆರಚಿದ್ದ ಕೆಸರ ಬಣ್ಣ |
ಸ್ವಾರ್ಥದಾ ಪರಿಣಾಮ ಆಗುತ್ತಲಿಹುದನ್ನ
ಅರಿತುಕೊಳ್ಳಲಿ ತಾವು ಮಾಡಿದುದನ ||6||
ಬುದ್ಧಿಕಲಿಸಲಿಕೆಂದು ಬೇಕೆನಗೆ ಹನಿನೀರು |
ಕೊಟ್ಟುಬಿಡಿ ಲೋಟದಷ್ಟೆನಗೆ ನೀವು ||
-ಗಣೇಶ ಕೊಪ್ಪಲತೋಟ 
                            
(*ಇದು ಪ್ರಾಸರಹಿತ ಚೌಪದಿ ಛಂದಸ್ಸಿನಲ್ಲಿದೆ. ಕೊನೆಯ ಎರಡು ಸಾಲುಗಳು ಅರ್ಧ ಚೌಪದಿ:-) ಗತಿಯ ವಿಶೇಷತೆಯಿಂದ ಗಮನಿಸಬಹುದಷ್ಟೆ!)
     



2 ಕಾಮೆಂಟ್‌ಗಳು:

  1. ನಾಳೆಯ + ವರೆಗೆಂದು = ನಾಳೆಯಾವರೆಗೆಂದು ಎಂಬುದು ಸಂಧಿಯ ಲೆಕ್ಕದಲ್ಲಿ ಸರಿಯಾದರೂ ಅರ್ಥ ಸರಿ ಕೊಡುತ್ತಿಲ್ಲ ಅನಿಸಿತು. ಪ್ರಾಸಕ್ಕಾಗಿಯೇ ಅದನ್ನು ಬಳಸಿದ್ದಾದರೆ ಅದರ ಬದಲು ಬೇರೆ ಏನಾದರೂ ಬಳಸಬಹುದಿತ್ತು ಅನಿಸಿತು..ಅದೇ ರೀತಿ "ಬಾಯಾರಿಕೆಗೆ ತಣ್ಣನೀಯುವುದು" , ." ನನ್ನ ಮನೆ ಬದಿಯಲ್ಲಿ ಬಾವಿಯೂ ಇದ್ದಿದ್ದೆ, ಕೆರೆ ಹೊಳೆಗಳನ್ನು ಹತ್ತಿರದಿ ಕಂಡು" ಎಂಬುದರ ಬದಲು ಇನ್ನೂ ಉತ್ತಮವಾಗಿ ಬರೆಯಬಹುದಿತ್ತು ಅನಿಸಿತು. ನಿಮ್ಮ ಹಿಂದಿನ ಕವನಗಳನ್ನು ಓದಿ, ಅದರಲ್ಲಿನ ಸಾರವನ್ನು ನೋದಿದ್ದರಿಂದ ಹೇಳುತ್ತಿದ್ದೇನೆ. ಆದರೆ ನಿಮ್ಮಿಂದ ಇನ್ನೂ ಹೆಚ್ಚಿನ ನಿರೀಕ್ಷೆಯಿತ್ತು :-) .. ಅದನ್ನು ಹೊರತುಪಡಿಸಿದರೆ ಕವನ ಚೆನ್ನಾಗಿದೆ.
    ಒಳ್ಳೆಯ ಪ್ರಯತ್ನಕ್ಕೆ, ಆಶಯಕ್ಕೆ ಅಭಿನಂದನೆಗಳು :-)

    ಪ್ರತ್ಯುತ್ತರಅಳಿಸಿ
  2. :-)ನಿಮ್ಮ ಹಾರೈಕೆಗೆ ಧನ್ಯವಾದಗಳು. "ನಾಳೆಯಾ ವರೆಗೆಂದು" ಇಲ್ಲಿ ನಾಳೆಯಾ ಎಂದು ದೀರ್ಘವನ್ನು ತಂದುಕೊಂಡಿದ್ದು ಕೇವಲ ಮಾತ್ರೆಗಳಲೆಕ್ಕ ಸರಿಮಾಡಲು. ಅಲ್ಲದೇ ಮಾತಿನಲ್ಲಿ ದೀರ್ಘವಾಗಿ ಕೆಲವೊಮ್ಮೆ ಎಳೆದು ಹೇಳುವ ವಾಡಿಕೆಯಿದೆಯಷ್ಟೇ! ಈ ರೀತಿಯ ಪದ್ಯರಚನೆ ಒಂದು ರೀತಿ ಕ್ಲೇಶಕರವಾದದ್ದು! ಯಾಕೆಂದರೆ ಛಂದಸ್ಸು ಹಾಗೂ ಹಳೆಗನ್ನಡದಲ್ಲಿ ತೊಡಗಿಕೊಂಡ ಬಳಿಕ ಹೊಗನ್ನಡದಲ್ಲಿ ಬರೆಯಹೊರಟರೆ ಹಳೆಕಾಲದ ಅಜ್ಜಿಯೊಬ್ಬಳು ಪಿಜ್ಜಾ ಬರ್ಗರ್ ಗಳನ್ನು ತಯಾರು ಮಾಡಿದಂತೆ!!:-)(ಉಪಮೆ- ಉತ್ಪ್ರೇಕ್ಷೆಯಾಯಿತೇನೋ!!!)ನೀವು ಹೇಳಿದಂತೆ ಅವುಗಳನ್ನು ಇನ್ನೂ ಉತ್ತಮವಾಗಿ ಮಾಡಬಹುದಿತ್ತು. ನಿಜ..

    ಪ್ರತ್ಯುತ್ತರಅಳಿಸಿ