ಸ್ರಗ್ದರೆ || (ಸಂಸ್ಕೃತ)
ವಂದೇ ಕ್ಷಿಪ್ರ ಪ್ರಸಾದಂ ಕವಿಜನ ಹೃದಯಂ ಶೃಂಗಖಂಡೇ ನಿವಾಸಂ
ಅಶ್ಮಪ್ರಾಪ್ತಸ್ವರೂಪಂ ಸಕೃದಪಿ ಚ ನಿಜಾಕಾರವದ್ ರಾಜಮಾನಂ|
ನಿತ್ಯಂ ಪುಷ್ಪೈಃಸುಪೂಜ್ಯಂ ಪರಿಮಲ ಭರಿತೈರ್ವಾಸಿತಂ ಯಜ್ಞಧೂಪೈಃ
ಪಶ್ಚಾತ್ತಪ್ತಾನ್ ಕ್ಷಮಸ್ವ ದ್ವಿಪವದನ! ಜನಾನ್ ನಿತ್ಯತೃಪ್ತಾನ್ ಕುರು ತ್ವಂ ||
(ಇದೊಂದು ಮಾತ್ರ ಆಶು ಕವಿತೆಯಲ್ಲ. ಹಿಂದೆಯೇ ಬರೆದದ್ದನ್ನು ಶತಾವಧಾನಿ ಆರ್ ಗಣೇಶ್ ಅವರ ಬಳಿ ತಿದ್ದಿಸಿ ಇಲ್ಲಿ ಹಾಕುತ್ತಿದ್ದೇನೆ. )
ಮಹಿಷಾಸುರ ಮರ್ದಿನಿ ಶಿಲ್ಪ |
ಭಾಮಿನಿ||
ಹಿಂದೆ ಮಹಿಷನ ಕೊಂದಳಂಬಿಕೆ
ಮುಂದೆ ಕಾಲದಿ ಭವದಿ ಭೂಸುರ
ವೃಂದದಲಿ ತಾ ಪೂಜ್ಯಳಾದಳು ಸತ್ತನೆಸಗುತ್ತ
ನಂದಿಪಳು ಕೃತಕಾಲದಲಿ ತಾ
ನಿಂದು ಕಲಿಗಾಲದಲಿ ಖಳರಂ
ಕೊಂದು ಸತ್ಯವ ಸ್ಥಾಪಿಸಲು ಸಂಭವಿಸಲಳ್ಕುವಳೇ!! ||1||
ಹರಸತಿಯು ಮಿಗೆ ಭವಿಸಿ ಕಲಿಯಂ
ಪರಮ ಪಾವನ ಮಾಳ್ಪಳಲ್ಲದೆ
ಧರುಮ ಸಂಸ್ಥಾಪನೆಯಗೊಳಿಸಲು ನೋಂತು ಬರುತಿಹಳು
ಜರಿವರಂ ಸಂಹರಿಸಿ ಕೊರತೆಯ
ಸರಿಪಡಿಸಿ ಲೋಗರಲಿ ನನ್ನಿಯ
ಪುರದಿ ಶಾಂತಿಯ ತುಂಬುವಳು ಗಡ ಸತ್ಯವಾಕ್ಯವಿದು ||2||
ಸಿಂಧೂ ನಾಗರೀಕತೆಯ ಅವಶೇಷಗಳು |
ಸಿಂಧೂ ನಾಗರೀಕತೆಯ ಅವಶೇಷಗಳು
ಕಂದ||
ಭಾರತದ ಸಂಸ್ಕೃತಿಗಳಿಗೆ
ಸಾರವಹುದಿದು ಗಡ ಸಿಂಧುನದಿತೀರದಲಾ-
ಕಾರಂತಳೆದಾ ಸಂಸ್ಕೃತಿ
ಭಾರತರಂ ದಲ್ ವಿಶೇಷ ನಾಗರಿಕತೆಯುಂ||
ಜೋಗ ಜಲಪಾತ |
ಜಲಪಾತಗಳು
ಪಂಚಮಾತ್ರಾ ಚೌಪದಿ||
ಗಂಗೆ ತಾ ಹರಮುಕುಟದಿಂದಿಳಿದು ಬಂದಿಹಳೊ
ಸಂಗವಂ ತ್ಯಜಿಸಿ ಹರಿಪದವ ಬಿಟ್ಟು|
ಮಂಗಳವ ತಾನೆಸಗಿ ಸಾಗರವ ಸೇರಲಾ
ವಂಗದೇಶವ ಹಾಯ್ದು ಹೋಗುತಿಹಳೋ||1||
ಪಾಲಧಾರೆಯು ಕಾಮಧೇನುವಿನ ಕೆಚ್ಚಲಿಂ
ನೀಲಸಾಲಾಗಿ ತಾ ಸುರಿಯುತಿಹುದೋ|
ಭಾಲ ನೇತ್ರನ ಶಿರದ ಮೇಲಿರ್ಪ ಚಂದಿರನು
ಕಾಲಾಗ್ನಿಯಿಂದ ತಾ ಕರಗುತಿಹನೋ||2||
ಆ ಶರಾವತಿಯು ಸಾಗರವ ಸೇರಲ್ಕೆಂದು
ನಾಶಗೆಯ್ಯುವ ಕೋಪ ತಾಳಿಹಳು ತಾನ್|
ಕ್ರೋಶ ದೂರಕೆ ಕೇಳ್ವ ಭೀಷಣ ಸ್ವರದಿಂದ
ತಾ ಶರಧಿಯೆಡೆಗೋಡಿ ಹೋಗುತಿಹಳು||3||
ಜೋಗವೆಂಬೂರಲ್ಲಿ ಪಯಧಾರೆಯೆಂಬಂತೆ
ಬಾಗಿ ಧುಮ್ಮಿಕ್ಕಿಹಳು ಮೇಲಿನಿಂದ|
ಲೋಗರಿಗೆ ತಾನುಣಿಸಿ ಸೌಂದರ್ಯ ರಸವನಂ
ಭೋಗದಾ ನಾಕವಂ ತೋರುತಿಹಳೊ||4||
ಪಂಚಮಾತ್ರಾ ಚೌಪದಿ||
ಗಂಗೆ ತಾ ಹರಮುಕುಟದಿಂದಿಳಿದು ಬಂದಿಹಳೊ
ಸಂಗವಂ ತ್ಯಜಿಸಿ ಹರಿಪದವ ಬಿಟ್ಟು|
ಮಂಗಳವ ತಾನೆಸಗಿ ಸಾಗರವ ಸೇರಲಾ
ವಂಗದೇಶವ ಹಾಯ್ದು ಹೋಗುತಿಹಳೋ||1||
ಪಾಲಧಾರೆಯು ಕಾಮಧೇನುವಿನ ಕೆಚ್ಚಲಿಂ
ನೀಲಸಾಲಾಗಿ ತಾ ಸುರಿಯುತಿಹುದೋ|
ಭಾಲ ನೇತ್ರನ ಶಿರದ ಮೇಲಿರ್ಪ ಚಂದಿರನು
ಕಾಲಾಗ್ನಿಯಿಂದ ತಾ ಕರಗುತಿಹನೋ||2||
ಆ ಶರಾವತಿಯು ಸಾಗರವ ಸೇರಲ್ಕೆಂದು
ನಾಶಗೆಯ್ಯುವ ಕೋಪ ತಾಳಿಹಳು ತಾನ್|
ಕ್ರೋಶ ದೂರಕೆ ಕೇಳ್ವ ಭೀಷಣ ಸ್ವರದಿಂದ
ತಾ ಶರಧಿಯೆಡೆಗೋಡಿ ಹೋಗುತಿಹಳು||3||
ಜೋಗವೆಂಬೂರಲ್ಲಿ ಪಯಧಾರೆಯೆಂಬಂತೆ
ಬಾಗಿ ಧುಮ್ಮಿಕ್ಕಿಹಳು ಮೇಲಿನಿಂದ|
ಲೋಗರಿಗೆ ತಾನುಣಿಸಿ ಸೌಂದರ್ಯ ರಸವನಂ
ಭೋಗದಾ ನಾಕವಂ ತೋರುತಿಹಳೊ||4||
ಹಂಪಿ ಕಲ್ಲಿನ ರಥ |
ವಿಜಯನಗರ ಸಾಮ್ರಾಜ್ಯ- ಹಂಪಿ
ಕಂದ||
ವಿಜಯಂ ಪೊಂದಲ್ ಮ್ಲೇಚ್ಛರ್
ವಿಜಯಂ ಪೊಂದಲ್ ಮ್ಲೇಚ್ಛರ್
ಧ್ವಜದೇವಾಲಯವಿನಾಶಮಾಳ್ಪುದ ನೋಡಿಂ
ವಿಜಯನಗರಕೆಂದು ಮುದದಿ
ಬಿಜಯಂಗೆಯ್ದ ರಥಮೋ ಶಿಲೆಯದಾಯ್ತಲ್ತೇ||1||
ಇನನನ್ವಯರಿಂ ಪಾಲಿತ
ಸನಾತನದ ಧರ್ಮಪಾಲನೆಗೆಪುಟ್ಟಿತ್ತಾ
ಮನುನಿಭ ವಿದ್ಯಾರಣ್ಯರ್
ಮನದೊಳ್ ವಿಜಯನಗರಂ ಮಹೋನ್ನತರಾಜ್ಯಂ ||2||
ಕಂದ||
ಛಲದೊಳ್ ದುರ್ಗದ ನಾಯಕ
ಕುಲಭವರೆಂಬುದಿತಿಹಾಸ ಕಲ್ಲಿನ ದುರ್ಗಂ
ದಲವರ ಗಾಥೆಯ ಪೇಳ್ವುದು
ಕಲಿಗಳ್ ತರ್ಪಣದಿ ತೊಯ್ದ ವೀರ ಚರಿತೆಯಂ||1||
ಮದಕರಿನಾಯಕ ನಡೆಸಿದ
ಕದನಂ ಹೈದರನೊಡಂ ಸ್ವರಾಜ್ಯವನುಳಿಸಲ-
ಲ್ಕದರೊಳ್ ವೀರಸ್ವರ್ಗಕೆ
ಪದವಿಟ್ಟ ನೃಪಾಭಿಮನ್ಯುವಂತೆಯೆ ಕಲಿ ತಾಂ||2||
ಭಗ್ನ ಶಕಟಗಳು ಹಾಗೂ ಬಯಲು ಕೆಸರು ಜಾಗ |
ಪರಿಸ್ಥಿತಿ
ಪಂಚಮಾತ್ರಾ ಚೌಪದಿ||
ಭಾರತದ ಸಂಸ್ಕೃತಿಯ ಕಥೆಯನ್ನು ಸೂಚಿಸಿಹು-
ದೀ ರಥಗಳಾಗಿರ್ದು ಭಗ್ನರೂಪಂ|
ಸಾರಗಳನರಿಯದೆಯೆ ಯುವಜನತೆ ಮೌಢ್ಯದಲಿ
ಪಾರಮಾರ್ಥವ ಬಿಟ್ಟು ನಡೆಯುತಿಹುದು||1||
ಜೀವನದ ಸದ್ಗುಣಗಳಾಗರದೊಲೀ ಧರ್ಮ
ನಾವೆಯೋಲಿಹುದಲ್ತೆ ಸಂಸಾರಕೆ|
ಕಾವುದೈ ತಾನಾಶ್ರಿತರನಿಂತು ಭಾರತದ-
ಲಾವುದೀ ಧರ್ಮವನು ಮೀರಿರ್ಪುದೈ||2||
ಶಕಟಗಳು ಭಗ್ನವಾಗಿಹವಲ್ತೆ ನಿಸ್ಸಾರ
ದ ಕೆಸರಿಂ ಪೂರಿತವು ಹೊಲಗಳೆಲ್ಲ|
ವಿಕೃತ ಮೋಹದ ಹೇತು ಪಾಶ್ಚಿಮಾತ್ಯಗಳಿಂದ
ವಿಕಲವಾಯಿತು ಕೂಳ ಕೊಡುವ ನೆಲವು||3||
ಕಾಣಲೊಲ್ಲದು ಶುದ್ಧ ನೀರಿಗಾಸರೆಯಿಂದು
ಬಾನೊಳಾ ವಿಷಗಾಳಿ ತುಂಬಿಕೊಂಡು|
ಗೌಣವಾಯ್ತಾ ಬದುಕದಾತ್ಮತೃಪ್ತಿಯು ಜನತೆ
ಮಾನಾವಮಾನಗಳ ತೊರೆದ ದಿನದಿ||4||
(ಇಲ್ಲಿ ಬರೆದವುಗಳಲ್ಲಿ ಮೊದಲನೆಯದು ಮಾತ್ರ ಆಶು ಕವಿತೆ ಅಲ್ಲ. ಉಳಿದವೆಲ್ಲ ಆಶು ಕವಿತೆಗಳು. ಆಶು ಕವಿತೆಗಳು-ಎಂದರೆ ಸ್ಥಳದಲ್ಲೇ ವಿಷಯ ಆಯ್ದುಕೊಂಡು ಅದರ ಕುರಿತು ಪದ್ಯ ರಚನೆ ಮಾಡುವುದು. ಈ ಚಿತ್ರಗಳನ್ನೆಲ್ಲ 'ಗೂಗಲ್' ನಲ್ಲಿ ಗೂಗಲಿಸಿ ಹುಡುಕಾಡಿ ಆಯ್ದುಕೊಂಡಿದ್ದು. ಹಾಗೂ ಪದ್ಯವನ್ನು ನೇರವಾಗಿ ಇಲ್ಲಿಯೇ ಟೈಪಿಸಿದ್ದು. ಮೊದಲನೆಯದು ಮಾತ್ರ ಹಿಂದೆ ಬರೆದ ಪದ್ಯಕ್ಕೆ ಚಿತ್ರ ಹುಡುಕಾಡಿ ಹಾಕಿದ್ದು. ಅವಧಾನ ಕಲೆಯಲ್ಲಿ ಆಶುಕವಿತೆ ಕೂಡ ಒಂದು ಅಂಗ)
ತುಂಬಾ ಚೆನ್ನಾಗಿದೆ. ಆಶುಕವಿತೆಯನ್ನು ನವೋದಯದ ರೂಪದಲ್ಲಿ ರಚಿಸುವುದನ್ನು ನೋಡಿದ್ದೇನೆ. ಸ್ವಲ್ಪ ಮಟ್ಟಿಗೆ ಪ್ರಯತ್ನಿಸಿದ್ದೇನೆ ಕೂಡ. . ಆದರೆ ಕಂದಪದ್ಯ, ಷಟ್ಪದಿ, ಚೌಪದಿ ಗಳ ರೂಪದಲ್ಲಿ, ಅದೂ ಹಳಗನ್ನಡದ ಮಿಶ್ರಣದ ರೂಪದಲ್ಲಿ ಬರೆದಿರುವುದನ್ನು ಓದುತ್ತಿರುವುದು ಇದೇ ಮೊದಲನೇ ಸಲ. ಇದು ಆಶುಕವಿತೆಗಳ ಬಗೆಗಿನ ನನ್ನ ಅಭಿಪ್ರಾಯವನ್ನೇ ಬದಲಿಸಿತು. ಒಳ್ಳೆಯ ಪ್ರಯತ್ನಕ್ಕೆ ಅಭಿನಂದನೆಗಳು :-)
ಪ್ರತ್ಯುತ್ತರಅಳಿಸಿಧನ್ಯವಾದಗಳು ಪ್ರಶಸ್ತಿ ಅವರೇ.. ಇದೇನೂ ಮಹತ್ತರ ಸಾಧನೆಯೇನಲ್ಲ. ಅವಧಾನಗಳಲ್ಲಿ ಇದಕ್ಕಿಂತ ಎಷ್ಟೋಪಟ್ಟು ಉತ್ತಮ ಪದ್ಯಗಳನ್ನು ಕ್ಲಿಷ್ಟಕರ ಛಂದಸ್ಸಿನಲ್ಲಿ ರಚಿಸಿ ಧಾರಣ ಮಾಡುವ ಶತಾವಧಾನಿಗಳ ರಚನೆಯನ್ನು ಓದಿನೋಡಿ. ಬಹುಶಃ ಅವರೇ ಹೇಳಿದಂತೆ ಪ್ರತಿಭೆಗೆ ಅಂತ್ಯವಿಲ್ಲ ಎಂದು ತಿಳಿಯುತ್ತದೆ..
ಪ್ರತ್ಯುತ್ತರಅಳಿಸಿಇರಬಹುದೇನೋ :-) ಶತಾವಧಾನಿ ಗಣೇಶರ ಎರಡು ಕಾರ್ಯಕ್ರಮ ನೋಡಿವ ಭಾಗ್ಯ ಸಿಕ್ಕಿದೆಯಷ್ಟೇ ಇಲ್ಲಿಯವರೆಗೆ . ಅವರನ್ನು ಭೇಟಿ ಮಾಡುವುದಾಗಲೀ , ಮಾತನಾಡಿಸುವುದಾಗಲೀ ಸಾಧ್ಯವಾಗಿಲ್ಲ. ಅದರಲ್ಲಿ ಅಪ್ರಸ್ತುತ ಪ್ರಸಂಗಿ, ಆಶುಕವಿತ್ವ, ನಾಸ್ತ್ಯಕ್ಷರಿ, ಗಾಯನ, ಸಂದರ್ಭ ವಿವರಣೆಗಳು ತುಂಬಾ ಇಷ್ಟವಾಗಿದ್ದವು. ಶತವಧಾನಿಗಳ ಬ್ಲಾಗೇನಾದರೂ ಇದ್ದರೆ ಕೊಂಡಿ ಕೊಡಿ. ಕೆಲ ತಿಂಗಳ ಹಿಂದೆ ಅಷ್ಟಾವಧಾನಿಗಳೊಬ್ಬರು Fb ಅಲ್ಲಿ ಸಿಕ್ಕಿದ್ದರು. ಅವರಲ್ಲೂ ನಾನು ಆಶುಕವಿತ್ವದ ಬಗ್ಗೆ ಕೇಳಿದ್ದೆ. ಆದರೆ ಅವರು ಅಷ್ಟಾವಧಾನದಲ್ಲಿರುವ ೮ ಅಂಶಗಳ ಬಗ್ಗೆ ಹೇಳಿದ್ದರೇ ಹೊರತು ಆಶುಕವಿತ್ವದ ಬಗ್ಗೆ ಹೇಳಿರಲಿಲ್ಲ. ಪ್ರಾಯಶ: ಅಪಾತ್ರರಿಗೆ ವಿದ್ಯಾದಾನ ಮಾಡಬಾರದೆಂಬ ಉದ್ದೇಶವೋ ಅಥವಾ ಸಮಯದ ಅಭಾವವೋ ತಿಳಿಯಲಿಲ್ಲ.
ಪ್ರತ್ಯುತ್ತರಅಳಿಸಿಅದೇನೆ ಇರಲಿ, ಇಂದಿಗೂ ನನಗೆ ಆಶುಕವಿತೆಯಂದರೆ ಅದೇನೋ ಸೆಳೆತ. ಸುಮ್ಮನೇ ಭಾಮಿನಿಯಲ್ಲಿ ಬರೆಯಲು ಪ್ರಯತ್ನಿಸಿದ ನನಗೆ ಅಂದು ಪರಿಚಯವಾದ ನಿಮ್ಮ ಮಾತುಗಳು ಹೊಸ ಹೊಳಹನ್ನೇ ತೆರೆದಿದೆ ಅನ್ನಬಹುದೇನೋ . ಕವಿತೆಯೆಂದರೆ ನವೋದಯ, ನವ್ಯ, ಬಂಡಾಯಗಳಷ್ಟೆ ಎಂದು ಕೂಪಮಂಡೂಕನಂತಿದ್ದವನ ಕಣ್ಣು ತೆರೆಸಿದೆಯೆನ್ನಬಹುದೇನೋ. .ನಿಮ್ಮ ಬ್ಲಾಗಿಂದ ದೊರೆಯುತ್ತಿರುವ ಹೊಸ ವಿಷಯಗಳಿಗೆ ಅಥವಾ ಕಾಲಗರ್ಭದಲ್ಲಿ ಕಳೆದುಹೋದ ಹಳೆಯ ವಿಚಾರಗಳ ಸುಂದರ , ಸರಳ ಪುನರುತ್ಥಾನಕ್ಕೆ ಮತ್ತೊಮ್ಮೆ ವಂದನೆಗಳು :-)
:-)ಪದ್ಯಪಾನ ತಾಣವನ್ನೊಮ್ಮೆ ನೋಡಿ.. ಅಲ್ಲಿ ಹಲವಾರು ಜನ ಇಂತಹ ಅನೇಕ ಕವಿತೆಗಳನ್ನು ಬರೆಯುವ ಆಸಕ್ತರು ಇದ್ದಾರೆ.ಅದರಲ್ಲಿರುವ ವಿಡಿಯೋ ಹಾಗೂ ಪಿಡಿಎಫ್ ಕಡತಗಳು ನಿಮಗೆ ತುಂಬಾ ಸಹಕಾರಿಯಾಗಬಲ್ಲವೆಂದು ನನ್ನ ಅನಿಸಿಕೆ:-)
ಪ್ರತ್ಯುತ್ತರಅಳಿಸಿಹೂ ನೋಡಿದ್ದೇನೆ. ಸಮಯವಾದಾಗಲೆಲ್ಲಾ ಭೇಟಿ ನೀಡುತ್ತಿರುತ್ತೇನೆ ಅಲ್ಲಿ ಕಲಿಯಲು:-)
ಪ್ರತ್ಯುತ್ತರಅಳಿಸಿ