Powered By Blogger

ಗುರುವಾರ, ಡಿಸೆಂಬರ್ 15, 2011

ಸಮಯದ ಸರ್ಕಲ್ ಪ್ರಕಟವಾದ ಕಥೆ

 ಪ್ರಸನ್ನಣ್ಣ ಮೊದಲು "ಭಟ್ಟ... ನಿನ್ನದೊಂದು ಪುಸ್ತಕವನ್ನು ಈ ಬಾರಿ ಚೈತ್ರ ಪ್ರೋಗ್ರಾಮಿಗೆ ಬಿಡುಗಡೆ ಮಾಡಲೇಬೇಕು" ಅಂದಾಗ ನಾನೂ ಸರಿ ಎಂದೆ, ಆದರೆ ಪುಸ್ತಕ ಹೇಗೆ ಬಿಡುಗಡೆ ಮಾಡುವುದು,ಯಾರು ಹಣ ಹಾಕುವವರು ಎಂದೆಲ್ಲ ಕೇಳಿದಾಗ "ಯಾರಾದರೂ ಪ್ರಕಾಶಕರನ್ನು ಹುಡುಕೋಣ ಇನ್ನೂ ಕಾಲ ಇದೆ" ಎಂದು ಸುಮ್ಮನಾದರು. ನಾನೂ ಸುಮ್ಮನಾದೆ. ನಾನು ಪುಸ್ತಕ ಬರೆದದ್ದು ಯಾರು ಹೇಳಿದರು ಎಂದು ಸಂದೇಹ ಬಂತು. ಬಹುಶಃ ಇದೆಲ್ಲ ನನ್ನ ಆಪ್ತಮಿತ್ರ ಶ್ರವಣನದೇ ಕೆಲಸ ವಾಗಿರಬೇಕು ಎಂದುಕೊಂಡೆ. ಯಾಕೆಂದರೆ ನನ್ನ ಅಲ್ಪ ಕಾರ್ಯಗಳನ್ನೆಲ್ಲ ದೊಡ್ಡದು ಮಾಡಿ ಹೇಳುವವನು ಅವನೊಬ್ಬ ಮಾತ್ರ..(ಪರಗುಣ ಪರಮಾಣೂನ್ ಪರ್ವತೀಕೃತ್ಯ ನಿತ್ಯಂ.. ಎಂದು ಸನ್ಮಿತ್ರಲಕ್ಷಣವನ್ನು ಮನೀಷಿಗಳು ಹೇಳಿದ್ದಾರಷ್ಟೆ!) ನನ್ನ ಅನುಮಾನ ಸುಳ್ಳಾಗಿರಲಿಲ್ಲ. ನನಗೆ ಪ್ರಸನ್ನಣ್ಣನ ಪರಿಚಯ ಮಾಡಿಕೊಟ್ಟಿದ್ದೂ ಅವನೇ.. ಅದನ್ನು ಹೇಳ ಹೊರಟರೆ ಇನ್ನೊಂದು ದೊಡ್ಡ ಕಥೆಯೇ ಆಗುತ್ತದೆ. ಅಂತೂ ಪ್ರಸನ್ನಣ್ಣನ ಬಳಿ ಕೇಳಿದ್ದಾಯ್ತು" ಅಣ್ಣಾ ನಾನು ಕಾದಂಬರಿ ಬರೆದದ್ದು ನಿಮಗೆ ಹೇಳಿದವರು ಯಾರು??" ನಿರೀಕ್ಷಿಸಿದಂತೆಯೇ "ಶ್ರವಣ" ಎಂಬ ಉತ್ತರ ಬಂತು. ಸರಿ, ನನ್ನ ಪಾಡಿಗೆ ನಾನಿದ್ದೆ.
      ಕಾದಂಬರಿ ಬರೆದದ್ದೇನೋ ಹೌದು ಆದರೆ ಅದರಲ್ಲಿ ವಿಪರೀತ ದೋಷಗಳಿದ್ದವು (ಆಲಂಕಾರಿಕರು ಹೇಳುವ ಪುನರುಕ್ತಿ, ವಾಚ್ಯರ್ಥಾಸ್ಪಷ್ಟತೆ,ಒಮ್ಮುಖ ಕಥೆಯ ಬೆಳವಣಿಗೆ ಇತ್ಯಾದಿ ದೋಷಗಳು) ಅದು ನನ್ನ ಮೊದಲ ಕಾದಂಬರಿ "ಹೊನ್ನಿನವಾಸನೆ"ಎಂದು. ಅದಾದ ನಂತರ ಇನ್ನೊಂದು ನೀಳ್ಗತೆಯನ್ನೂ ಬರೆದಿದ್ದೆ "ಸ್ಪಂದನ" ಎಂದು. ಅವೆರಡನ್ನು ಬರೆದು ಸ್ವಲ್ಪ ಕಾಲದ ನಂತರ ಇನ್ನೊಂದು ಕಾದಂಬರಿಯನ್ನೂ ಬರೆದು ಹಾಗೇ ಇಟ್ಟಿದ್ದೆ. ಅದರಲ್ಲಿ ಹೊನ್ನಿನ ವಾಸನೆಯನ್ನು ಮಿತ್ರ ಸುನೀಲನಿಗೆ ಮೊದಲು ಓದಿಸಿದ್ದೆ. ನನಗಾಗ ಅವನ ಪರಿಚಯವಿನ್ನೂ ಹೊಸದು. ಅವನಿಗೂ ನನಗೂ ಸಮಾನ ಆಸಕ್ತಿಗಳಿದ್ದುದು ಮಾತ್ರ ನಮ್ಮ ಸ್ನೇಹಕ್ಕೆ ಅಡಿಗಲ್ಲಾಗಿತ್ತು. ಅವನೂ ಕಾದಂಬರಿ ಓದಿ ಅವನಿಗೆ ಹಿಡಿಸದ ಅಂಶಗಳನ್ನು ತಿಳಿಸದೇ ಹಾಗೇ ಕೊಟ್ಟ. ನಾನೂ ಕೇಳಲು ಹೋಗಲಿಲ್ಲ.!! ತನ್ಮಧ್ಯೆ ಶ್ರವಣನಿಗೆ ನನ್ನ ಕಾದಂಬರಿ ಕೊಟ್ಟಿದ್ದೆ ಅವನು ಓದಲಿಲ್ಲ.. ತಿಂಗಳುಗಟ್ಟಲೆ ಅವನ ರೂಮಿನಲ್ಲಿ ಒಂದು ಮೂಲೆಯಲ್ಲಿ ಬಿದ್ದಿತ್ತು ನನ್ನ ಹಾಗೇ!(ನಾನಾದರೆ ಆಗಾಗ  ಎದ್ದು ನನ್ನ ರೂಮಿಗೂ ಓಡಾಡುತ್ತಿದ್ದೆ ಎಂಬುದು ನನ್ನ ಜೀವಂತಿಕೆಗೆ ಪ್ರಮಾಣ!!) ಅವನು "ನಮ್ಮ ಇಲೆಕ್ಟ್ರಿಕಲ್ ವಿಭಾಗದ ಮಾಲಿನಿ ಮೇಡಂ ಅವರಿಗೆ ಒಮ್ಮೆ ಓದಲು ಕೊಡು" ಎಂದು ಹೇಳಿದ್ದ.(ಅವರೇ ನಮ್ಮ ಕಾಲೇಜಿನ ಸಾಂಸಕೃತಿಕ ನಿರ್ದೇಶಕರಾಗಿದ್ದರು. ನಮ್ಮನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹಿಸಿ ಕಳುಹಿಸುತ್ತಿದ್ದುದು ಹಾಗೂ ಸರಿಯಾಗಿ ನಿರ್ದೇಶಿಸುವವರೂ ಅವರೇ.) ನಾನು ಆ ಪ್ರಯತ್ನಕ್ಕೆ ಹೋಗಲಿಲ್ಲ. ನಮ್ಮ ಊರಿನ ಸಮೀಪದವರೇ ಆದ ಯುವಕವಿ "ಗಣೇಶ ಹೊಸ್ಮನೆ" ಅವರನ್ನು ಭೇಟಿಯಾದ ಸಂದರ್ಭದಲ್ಲಿ (ನಾನು ಬರೆಯುವ ವಿಚಾರ ಅವರಿಗೆ ಗೊತ್ತಿರಲಿಲ್ಲ. ಗೊತ್ತಿದ್ದರೂ ಸಣ್ಣ ಪುಟ್ಟ ಕವಿತೆಗಳನ್ನು ಬರೆಯುವವನು ಎಂದಷ್ಟೇ!) "ಡಾ||ಆನಂದ ಋಗ್ವೇದಿ" ಎಂದು ದಾವಣಗೆರೆಯಲ್ಲೇ ಇರುವ ಬರಹಗಾರರ ವಿಚಾರವಾಗಿ ತಿಳಿಸಿ ಭೆಟ್ಟಿಯಾಗಲು ಹೇಳಿದ್ದರು. ನಾನು ಅವರನ್ನು ಭೆಟ್ಟಿಯಾಗಿ ಔಪಚಾರಿಕವಾಗಿ ಮಾತನಾಡಿದೆ ಕೂಡ. ಆಮೇಲೆ ಒಂದು ದಿನ ನಾನು ಬರೆದ ಹೊನ್ನಿನ ವಾಸನೆ ಕಾದಂಬರಿಯನ್ನು ಹೊತ್ತುಕೊಂಡು ಹೋಗಿ ಅವರಮನೆಯ ಕದ ತಟ್ಟುವ ಧೈರ್ಯ ಮಾಡಿದೆ. ಅವರೂ ಅದನ್ನು ಓದಿ ವಿಮರ್ಶಿಸಿ "ನಮ್ಮ ದೃಷ್ಟಿಕೋನ ವಿಶಾಲವಾಗಬೇಕು ಹಾಗಾದರೆ ಮಾತ್ರ ನಾವು ಜಗತ್ತನ್ನು ಒಂದು ಮುಖದಲ್ಲಿ ಮಾತ್ರವಲ್ಲ ಎಲ್ಲಾ ದಿಶೆಗಳಿಂದಲೂ ನೋಡಲು ಶಕ್ಯರಾಗುತ್ತೇವೆ. ಬರವಣಿಗೆಯೂ ನಿಷ್ಪಕ್ಷಪಾತವಾಗಿ ಪರಿಪೂರ್ಣವಾಗುತ್ತದೆ" ಎಂದು ಹೇಳಿದರು.. ಆಳವಾಗಿ ವಿಮರ್ಶಿಸಲಿಲ್ಲ, ಬಹುಶಃ ಅದು ನನ್ನ ಮನಸ್ಸಿನ ಮೇಲೆ ಪರಿಣಾಮ ಬೀರಬಹುದೆಂದು ಸುಮ್ಮನಾದರಿರಬೇಕು. ಅದೆಲ್ಲ ಕಳೆದು ತುಂಬಾ ದಿನಗಳ ನಂತರ ನನ್ನ ಈ "ಸಮಯದ ಸರ್ಕಲ್" ಕಾದಂಬರಿ ಹುಟ್ಟಿದ್ದು. ಅದಕ್ಕೆ ಹೆಸರೂ ಬೇರೆಯದೇ ಆಗಿತ್ತು. ಅದನ್ನು ಓದಿದವರಿಗೆ ಗೊತ್ತಾಗಿರಬಹುದು.
ಪ್ರಸನ್ನಣ್ಣ ಇದನ್ನು ಪ್ರಕಟಮಾಡಲು ಯೋಚಿಸುವ ವೇಳೆಗೆ ಇದನ್ನೂ ಆನಂದ ಋಗ್ವೇದಿಯವರಿಗೆ ಕೊಟ್ಟಿದ್ದೆನಾದರೂ ಅವರಿಗೆ ಸಮಯಾವಕಾಶವಾಗದಿದ್ದ ಕಾರಣ ಇನ್ನೂ ಓದಿರಲಿಲ್ಲ.  ಕಾಲೇಜು ವಾರ್ಷಿಕೋತ್ಸವ ಚೈತ್ರ ಹತ್ತಿರಕ್ಕೆ ಬರುತ್ತಿತ್ತು. ಪ್ರಕಾಶಕರು ಯಾರೂ ಸಿಕ್ಕಿರಲಿಲ್ಲ. "ಪ್ರಸನ್ನಣ್ಣ... ನನ್ನ ಕಾದಂಬರಿ ಪ್ರಕಟಿಸಿ ಯಾವ ಪ್ರಕಾಶಕರೂ ಬಲಿಯಾಗುವುದಿಲ್ಲ " ನಾನು ಹೇಳಿದೆ. ನನ್ನ ಪ್ರಕಾರ ಪುಸ್ತಕ ಪ್ರಕಾಶಕ ಒಂದು ರೀತಿಯಲ್ಲಿ ಬಲಿಪಶುವೇ! ಯಾಕೆಂದರೆ ಪ್ರಕಟಿಸಿದ್ದು ಅಷ್ಟೂ ಖರೀದಿಯಾಗುವವರೆಗೆ ಅವನು ಹಾಕಿದ್ದ ಬಂಡವಾಳದ ಮೇಲೆ ಆಸೆ ಬಿಟ್ಟು ಕೂರಬೇಕಷ್ಟೇ!! ಸುಮ್ಮನೇ ಹಣ ಹಾಕಲು ಯಾರೂ ಮುಂದೆ ಬರುವುದಿಲ್ಲ. ಅದಾಗಲೇ ಪ್ರಸಿದ್ಧರಾದ ಬರಹಗಾರರ ಪುಸ್ತಕವೆಂದರೆ ಧೈರ್ಯ ಮಾಡುತ್ತಾರೆ. ನಾನು ಒಬ್ಬ ಪ್ರಕಾಶಕರ ಬಳಿ ಕೇಳಿಯೂ ಆಗಿತ್ತು. ಅವರೂ ಅದನ್ನೇ ಹೇಳಿದ್ದರೂ ಕೂಡ. ಸರಿ.. ನಾನು ಸುಮ್ಮನಿದ್ದೆ. ನನ್ನದೇ ಪುಸ್ತಕ ಪ್ರಕಟವಾಗಬೇಕು, ನಾನು ಮಾತ್ರ ಅದರಿಂದ ನಿರ್ಲಿಪ್ತನೇನೋ ಎಂಬಂತೆ ಇದ್ದೆ. ನನ್ನ ಧೋರಣೆ ನನಗೇ ಯಾಕೋ ಸರಿಯೆನಿಸಲಲಿಲ್ಲ. ಪ್ರಸನ್ನಣ್ಣನ ಬಳಿ ಇನ್ನೊಮ್ಮೆ ಕೇಳೋಣ. ಅಕಸ್ಮಾತ್ ಯಾರೂ ಪ್ರಕಾಶಕರು ಸಿಗಲಿಲ್ಲ ಎಂದಾದರೆ ಮುಂದಿನ ಚೈತ್ರ ಸಮ್ಮೇಳನದವರೆಗೂ ಮುಂದೂಡುವುದಷ್ಟೇ ನನ್ನ ಉಪಾಯವಾಗಿತ್ತು. ಏತನ್ಮಧ್ಯೆ ನಮ್ಮ ಕಾಲೇಜಿನಲ್ಲಿ ನಾವು ಸ್ಥಾಪಿಸಿದ್ದ ಮಂಥನ ಸಾಂಸ್ಕೃತಿಕ ಸಂಘದ ಒಂದು ಸ್ಮರಣ ಸಂಚಿಕೆ ಅಥವಾ ನಿಯತಕಾಲಿಕೆ(magazine) ಹೊರತರಬೇಕೆಂಬುದೂ ಯೋಚನೆಯಿತ್ತು. ಅದಕ್ಕೂ ನಮಗೆ ವೇದಿಕೆಯಾಗಬೇಕಾಗಿದ್ದು ಚೈತ್ರವೇ!! ಸರಿ.. ಅದರ ಸಂಪಾದಕರಾಗಿ ಈರಣ್ಣ ಗೌಡ ಪಾಟೀಲ ನಿಯುಕ್ತಿಗೊಂಡು ಅದರ ಕೆಲಸವೂ ಸಾಗುತ್ತಿತ್ತು. ಅದಕ್ಕೂ ಪ್ರಕಾಶನ ಮಾಡಲು ಹಣದ ವ್ಯವಸ್ಥೆಯಾಗಬೇಕಿತ್ತು. ಜಾಹೀರಾತು ಕೊಡುವವರ ಮೂಲಕ ಮಾತ್ರ ಹಣ ಸಂಗ್ರಹ ಮಾಡಲು ಸಾಧ್ಯ.. ಅದಕ್ಕೆ ಪ್ರಕಾಶಕರೆಂದು ಬೇರೆ ಯಾರೂ ಬರಲು ಸಾಧ್ಯವಿಲ್ಲವಲ್ಲ!! ಸರಿ. ಅದನ್ನೂ ಹೆಗಲಿಗೆ ಹೊತ್ತುಕೊಂಡ ಪ್ರಸನ್ನಣ್ಣ "ನಾನಿದ್ದೆನೆ ಹೆದರಬೇಡಿ" ಎಂದು ಸೂಚಿಸುವಂತಹ ಸಣ್ಣ ಮುಗುಳ್ನಗೆಯ ಉತ್ತರವನ್ನಷ್ಟೇ ಕೊಡುತ್ತಿದ್ದರು. ನಾನು ಸ್ವಲ್ಪ ವ್ಯಂಗ್ಯವಾಗಿಯೇ ಕೇಳಿದೆ" ಅಣ್ಣಾ ಬಲಿಯಾಗಲು ಪ್ರಕಾಶಕರು ಯಾರಾದರೂ ಸಿಕ್ಕಿದರಾ??" ಅದಕ್ಕೆ ಪ್ರಸನ್ನಣ್ಣ " ಯಾರೂ ಸಿಕ್ಕಿಲ್ಲ.. ನಮ್ಮ ಫೌಂಡೇಶನ್ ಹೆಸರಿನಲ್ಲೇ ಆಗಲಿ, ನಾನಿದ್ದೇನೆ." ನಮ್ಮ ಫೌಂಡೇಶನ್ ಎಂದರೆ "ಯುವ ಅವನಿ ಗ್ರೀನ್ ಪೌಂಡೇಶನ್" ಎಂಬ ಸಂಘ ಅದರ ಸ್ಥಾಪಕರೂ ಸಂಚಾಲಕರೂ ಪ್ರಸನ್ನಣ್ಣ ಅವರೇ ಆಗಿದ್ದರು. "ಅಣ್ಣಾ ಯಾರಾದರೂ ಬಲಿಪಶು ಸಿಗುತ್ತಾರಾ ಎಂದು ಕೇಳಿದ್ದಕ್ಕೆ ನಾನೇ ಬಲಿಪಶು ಆಗ್ತೀನಿ ಅಂತ ಹೇಳಿದ್ದವರನ್ನ ಇವತ್ತೇ  ಮೊದಲ ಬಾರಿ ನೋಡ್ತಾ ಇರೋದು!!!" ಎಂದೆ. ಅದಕ್ಕೆ ಅವರ ದೊಡ್ಡ ನಗುವೇ ಉತ್ತರವಾಗಿತ್ತು!! ಇಂತಹ ಕಷ್ಟದ ಕೆಲಸಕ್ಕೆ ಕೈ ಹಾಕಲು ಅವರಿಗೆ ನನ್ನ ಮೇಲಿನ ಆತ್ಮೀಯ ಸ್ನೇಹವಲ್ಲದೇ ಇನ್ನೇನು ಕಾರಣವಾದೀತು!!!
ಒಂದು ವಾರ ಮಾತ್ರ ಮಿಕ್ಕಿತ್ತು ಚೈತ್ರ ಕಾರ್ಯಕ್ರಮಕ್ಕೆ!! ನನ್ನ ಕಾದಂಬರಿಯಿನ್ನೂ ಡಿ.ಟಿ.ಪಿಗೂ ಹೋಗಿರಲಿಲ್ಲ. ಅದನ್ನು ಡಿ.ಟಿ.ಪಿ ಮಾಡುವವರನ್ನು ಹುಡುಕಿಕೊಂಡು ಅವರು ದಾವಣಗೆರೆಯನ್ನೆಲ್ಲ ಅಲೆದಾಡಿಬಿಟ್ಟರು. ನನ್ನ ಬಳಿ "ನೀನು ಬಹುಶಃ ಗದಗಕ್ಕೆ ಹೋಗಬೇಕಾಗುತ್ತದೆ. ಅಲ್ಲಿ ಒಂದು ಪ್ರೆಸ್ ನವರು ಡಿ.ಟಿ.ಪಿ ಮಾಡಿಕೊಟ್ಟರೆ ಮೂರು ದಿನದಲ್ಲಿ ಪ್ರಿಂಟ್ ಮಾಡಿ ಕಳುಹಿಸುತ್ತೇವೆ ಎಂದು ಹೇಳಿದ್ದಾರೆ" ಎಂದರು. ನಾನು ಸರಿ ಎಂದೆ ಅಷ್ಟೇ!.ಅವರ ಜೊತೆ ಡಿ.ಟಿ.ಪಿಯವರನ್ನು ಹುಡುಕಿಕೊಂಡು ಹೋದವನು ಈರಣ್ಣ. ನಾನು ಪುಸ್ತಕದ ಹಸ್ತಪ್ರತಿಯನ್ನು ಆನಂದ ಋಗ್ವೇದಿಯವರ ಬಳಿಯಿಂದ ವಾಪಸ್ ತಂದು ಡಿ.ಟಿ.ಪಿಯವರಿಗೆ ಕೊಡಲು ಅಣ್ಣನ ಕೈಗಿತ್ತೆ. ಅದರ ಒಂದು ಜೆರಾಕ್ಸ ಪ್ರತಿ ಇಟ್ಟುಕೊಂಡೇ ಅವರು ಓಡಾಡಿದ್ದರು. ಆಮೇಲೆ "ವರ್ಷ ಕಂಪ್ಯೂಟರ್ಸ್" ಎಂಬ ಅವರ ಮಿತ್ರರ ಒಂದು ಕಂಪ್ಯೂಟರ್ ಸರ್ವೀಸ್ ನ ರೋಹಿತಣ್ಣ ಎಂಬವರ ಬಳಿ ವಿಚಾರಿಸಿದಾಗ ಅವರ ಬಳಿ ಒಬ್ಬ ಡಿ.ಟಿ.ಪಿ ಮಾಡುವವನಿದ್ದಾನೆ ಎಂದು ಹೇಳಿದರು. ಅವನು ಎರಡು ದಿನದಲ್ಲಿ ಈ 175 ಪುಟಗಳನ್ನೂ ಮಾಡಿಕೊಡುತ್ತೇನೆ ಎಂದಾಗ ನನ್ನ ಕಾದಂಬರಿ ಪ್ರಕಟ ಆಗೇಬಿಟ್ಟಿತು ಎಂಬಷ್ಟು ಸಂತಸವಾಯಿತು. ಆದರೆ ಎರಡು ದಿನ ಕಳೆದರೂ ಇನ್ನೂ ಸ್ವಲ್ಪ ಇದೆ ಎಂಬ ಮಾತುಗಳು  ಮಾತ್ರ ನಮಗೆ ಸಿಗುತ್ತಿದ್ದವು. ಮತ್ತೆ ಕೇಳಿದರೆ ಕೈಕೊಟ್ಟು ಹೋದರೆ ಆ ಗಡಿಬಿಡಿಗೆ ಯಾರೂ ಸಿಗುವಂತಿಲ್ಲ. ಸರಿ ಆದದ್ದಾಗಲಿ ಕುಳಿತು ನೋಡಿದೆವು ಬಹುಶಃ ನಾಲ್ಕುದಿನದೊಳಗೆ ನನ್ನ ಕಾದಂಬರಿಯ ಡಿ.ಟಿ.ಪಿ ಪ್ರತಿ ಸಿಕ್ಕಿತು. ಅದನ್ನ ರಾತ್ರಿ ಎರಡು ಮೂರು ಗಂಟೆಯವರೆಗೆ ಕುಳಿತು ಕಂಪ್ಯೂಟರಿನಲ್ಲೇ ತಿದ್ದುಪಡಿ ಮಾಡಿದ್ದು ಮಾತ್ರ ನಾನೇ!! (ಅದಕ್ಕೇ ಅಷ್ಟೊಂದು ಮುದ್ರಣದೋಷಗಳೂ ಇವೆ ಎನ್ನಿ ಬೇಕಾದರೆ!!) ಕೊನೇ ಕ್ಷಣದಲ್ಲಿ ಒಂದೈದಾರು ಪುಸ್ತಕಗಳನ್ನಾದರೂ ಸಾಂಕೇತಿಕವಾಗಿ ಬಿಡುಗಡೆ ಮಾಡಿದರೆ ಸಾಕೆಂಬಷ್ಟಾಗಿತ್ತು ನನಗೆ. ಆಮೇಲೆ ಅದನ್ನು ದಾವಣಗೆರೆಯಲ್ಲೇ ಮುದ್ರಿಸಲು ಸಾಧ್ಯವಾಗುತ್ತದೆಯಾ ಎಂದೂ ಪ್ರಸನ್ನಣ್ಣ ವಿಚಾರಿಸಿದರು. "ಎರಡು ಮೂರು ದಿನದಲ್ಲಿ ಅಂದರೆ ಸಾಧ್ಯವಿಲ್ಲ. "ಬೆಂಗಳೂರಿನಲ್ಲಿಯಾದರೆ ಆಗಬಹುದು" ಎಂದೊಬ್ಬರು ಪ್ರೆಸ್ ನ ಮಾಲೀಕರು ಹೇಳಿದರು. ಆಗ ಪ್ರಸನ್ನಣ್ಣನವರಗೆ ಬೆಂಗಳೂರಿನಲ್ಲಿರುವ ಕವಿಮಿತ್ರ "ಜಗನ್ನಾಥ" ನಮ್ಮ ಪ್ರೀತಿಯ ಜಗ್ಗಣ್ಣನವರ ಸಹಾಯ ಕಾದಿತ್ತು. ಈ ಸಂದರ್ಭಗಳನ್ನೆಲ್ಲ ನೆನೆದರೆ ನನಗೆ ಈಗಲೂ ಕಣ್ಣು ತುಂಬಿ ಬರುತ್ತದೆ. ಅವರು ಹಗಲೂ ರಾತ್ರಿ ಕುಳಿತು ಅದರಲ್ಲಿ ತಪ್ಪಾಗಿದ್ದ ಮಾರ್ಜಿನ್ ಗಳನ್ನೆಲ್ಲ ಸರಿಪಡಿಸಿ ಎಕ್ಸಲೆಂಟ್ ಮುದ್ರಣದವರಿಗೆ ಒಪ್ಪಿಸಿದರು. ಮುಖಪುಟವನ್ನೂ ಹನುಮಂತಾಚಾರ್ ಎಂಬ MFA ಕಲಿಯುತ್ತಿರುವ ಮಿತ್ರರು ಮಾಡಿಕೊಟ್ಟರು. ಇನ್ನೂ ತೆರೆಮರೆಯ ಹಿಂದೆ ಅದೆಷ್ಟು ಜನ ನಿಂತು ಸಹಕರಿಸಿದ್ದಾರೋ ಗೊತ್ತಿಲ್ಲ... ಏತನ್ಮಧ್ಯೆ ನಮ್ಮ ಅಂಡಲೆದಾಟ ಬಹಳವೇ ಇತ್ತು. ಡಿ.ಟಿ.ಪಿ ಯವರಿಂದ ಸಾಪ್ಟಕಾಪಿ ತರುವುದು ತಿದ್ದುವುದೂ, ಮಂಥನ ನಿಯತಕಾಲಿಕೆಗೆ ಜಾಹೀರಾತುದಾರರನ್ನು ಹುಡುಕುವುದೂ ಇತ್ಯಾದಿ ಇತ್ಯಾದಿ.. ದಿನಾ ರಾತ್ರಿ ಎರಡುಗಂಟೆಯ ನಂತರ ನಾನು ಹಾಸ್ಟೇಲಿಗೆ ಹಿಂತಿರುಗುತ್ತಿದ್ದೆ. ಅಲ್ಲಿಯವರೆಗೆ ನಂದಿನಿ,ಪವಾರ್ ಕ್ಯಾಂಟೀನುಗಳ ಬಳಿ ಅಥವಾ ಈರಣ್ಣನ ರೂಮಿನಲ್ಲಿ ನಮ್ಮ ಕೆಲಸ ಸಾಗುತ್ತಿತ್ತು. ಆ ನಂತರ ಹೊರಟು ನಿದ್ದೆ ಮಾಡುತ್ತಿದ್ದ ಮಿತ್ರರನ್ನು ಎಬ್ಬಿಸಿ ಗೇಟು ತೆರೆಸಿಕೊಳ್ಳುತ್ತಿದ್ದೆ. ನನ್ನ ಪಾಲಿಗೆ ರಾತ್ರಿ ಹತ್ತುಗಂಟೆಗೇ ಮುಚ್ಚಬೇಕಾಗಿದ್ದ ಶ್ರೀಕೃಷ್ಣವಿದ್ಯಾರ್ಥಿ ನಿಲಯದ ಬಾಗಿಲು ಎಷ್ಟೊತ್ತಿಗೆ ಬೇಕಾದರೂ ತೆರೆದುಕೊಳ್ಳುತ್ತಿತ್ತು. ಇವರಿಗೆಲ್ಲಾ ನಾನು ಅದೆಷ್ಟು ಋಣಿಯಾಗಿರಬೇಕೋ!
ಅದಕ್ಕೆ ಮುನ್ನುಡಿ ಬೆನ್ನುಡಿಗಳನ್ನು ಬರೆಸಿದ್ದನ್ನೂ ಹೇಳಲೇಬೇಕಲ್ಲ! ಹಾಗೇ ಕಾದಂಬರಿಗೆ ನಾಮಕರಣವಾದದ್ದೂ ಒಂದು ಹೊಸ ಕಥೆ.. ಅವಿಸ್ಮರಣೀಯ..ಅದೊಂದು ರೀತಿಯ ವಿಭಿನ್ನ ಕಥೆ..
ಮುನ್ನುಡಿಯನ್ನು ಆನಂದ ಋಗ್ವೇದಿಯವರಿಗೆ ಬರೆದುಕೊಡಲು ಕೇಳಿಕೊಂಡೆ. ಅವರು "ತುರ್ತಾಗಿ ಬರೆದು ಕೊಡಬೇಕೆಂದರೆ ಕಷ್ಟ, ಗಣೇಶ ಹೊಸ್ಮನೆಯವರಿಗೆ ಕೇಳಿನೋಡು ಒಂದು ಆತ್ಮೀಯ ಪತ್ರ ಎಂಬಂತೆ ಬರೆದು ಕೊಡಲು ಕೇಳು" ಎಂದರು. ಗಣೇಶ ಅವರಿಗೆ ಕರೆ ಮಾಡಿದಾಗ " ಓದದೇ ಮುನ್ನುಡಿ ಬರೆಯಲು ಸರಿಯಾಗುವುದಿಲ್ಲ ನಿಮ್ಮ ಲೆಕ್ಚರ್ ಯಾರಿಗಾದರೂ ಕೇಳು" ಎಂದರು. ಆನಂದ ಋಗ್ವೇದಿಯವರೂ ಹಾಗೇ ಹೇಳಿದರು. ಬಳಿಕ ನಮ್ಮ ಭೌತಶಾಸ್ತ್ರ ವಿಭಾಗಾಧ್ಯಕ್ಷರಾದ ಶ್ರೀ ದಿವಾಕರ್ ಸರ್ ಬಳಿ ನಾನೂ ಪ್ರಸನ್ನಣ್ಣ ಹೋದೆವು. ಅವರು ಅವರಿಗೆ ಆತ್ಮೀಯರಾದ ದಾವಣಗೆರೆಯ ವಿಜಯ ಕರ್ನಾಟಕ  ದಿನಪತ್ರಿಕೆ ಸಂಪಾದಕರಾದ ಶ್ರೀ ರವಿ ಆರುಂಡಿ ಅವರಿಗೆ ಫೋನು ಮಾಡಿ ಹೇಳಿದರು. ರವಿಯವರು ಪುಸ್ತಕದ ಹಸ್ತಪ್ರತಿಯನ್ನು ಒಯ್ದು ಮರುದಿನ ಬರೆದಿಡುವುದಾಗಿ ಹೇಳಿದರಾದರೂ ಅವಿಷ್ಟನ್ನೂ ಓದಲು ಸಾಧ್ಯವಾಗದೇ ಹಾಗೇಯೇ ಬರೆದುಕೊಟ್ಟರು. ಅದೊಂದು ಪ್ರೀತಿಯ ಪತ್ರದಂತೆ..ಅದನ್ನು ಪುಸ್ತಕದಲ್ಲಿ ನೋಡಬಹುದು.
ಬೆನ್ನುಡಿ ಯಾರಬಳಿ ಬರೆಸೋಣ ಎಂದು ನಾನು ಯೋಚಿಸುತ್ತಿರುವಾಗಲೇ 'ಜಿ ಎಂ ಐ ಟಿ ಕಾಲೇಜು' ವಾರ್ಷಿಕೋತ್ಸವಕ್ಕೆ  ನಾಗತಿಹಳ್ಳಿ ಚಂದ್ರಶೇಖರ್ ಅವರು ಬರುತ್ತಾರೆ ಎಂದು ಸುದ್ದಿ ಸಿಕ್ಕಿತ್ತು. ಆದರೆ ನಮಗೆ ಸುದ್ದಿ ಸಿಗುವಾಗ ನಾಗತಿಹಳ್ಳಿಯವರು ಬಂದು ಹೋಗಿಯಾಗಿತ್ತು. ಆ ವೇಳೆ ನಾವು ಜಗತ್ತಿನ ಕಾಲಮಾನಕ್ಕಿಂತ ತೀರ ಹಿಂದಿದ್ದೇವೆ ಎಂದು ಅನಿಸಿತು.. "ಅಪ್ ಡೇಟ್ ಆಗಬೇಕು" ನಮ್ಮ ಆರ್ಟಿ ಸರ್ ಹೇಳಿದರು. ಅವರು ನಾಗತಿಹಳ್ಳಿ ಚಂದ್ರಶೇಖರ್ ಅವರ ಆತ್ಮೀಯರು. ಹಾಗೇ ನಮ್ಮ ಗುರುಗಳು. ಪ್ರತಿಭಾವಂತ ಮಿಮಿಕ್ರಿಪಟು,ನಟ ಹಾಡುಗಾರ..ಇನ್ನೂ ಏನು ಹೇಳಿದರೂ ಕಡಿಮೆಯೇ.. ಸಕಲಕಲಾ ವಲ್ಲಭರೆಂದೇ ಹೇಳಬಹುದು. ನಾವು ಅವರ ಹುಟ್ಟುಹಬ್ಬದ ದಿನ ಅವರ ಮನೆಗೆ ಹೋಗಿದ್ದೆವು. ಪೂರ್ವನಿಯೋಜಿತವಾದಂತೆ ಕೇಕುಗಳನ್ನೂ ಮೋಂಬತ್ತಿಗಳನ್ನೂ ಒಯ್ದಿದ್ದೆವು. ಅದೇ ದಿನ ನಾಗತಿಹಳ್ಳೀ ಅಲ್ಲಿಗೆ ಬರುತ್ತಾರೆ ಎಂದು ನಮ್ಮ ಯೋಚನೆ. ಆದರೆ ಅದಾಗಲೇ ಆರ್ಟಿ ಸರ್ ಅನ್ನು ಮಾತನಾಡಿಸಿ ಅವರು ಹೋಗಿಬಿಟ್ಟಿದ್ದರು. ಕೊನೆಗೆ ಅವರೇ ಬರೆದುಕೊಡಲು ನಿಶ್ಚಯಿಸಿ ಕೇವಲ ಐದೇ ನಿಮಿಷದಲ್ಲಿ ಒಂದು ಅರ್ಥಪೂರ್ಣ ಹಾಗೇ ಅಪೂರ್ವ ಮೌಲಿಕವಾದ ಮಾತುಗಳನ್ನು ಬರೆದುಕೊಟ್ಟರು.  ಕೊನೆಗೆ "ಆರ್. ಟಿ. ಅರುಣಕುಮಾರ್" ಎಂದು ಸಹಿಹಾಕಿ ನನ್ನ ಕೈಗಿತ್ತು  ಓದಲು ಹೇಳಿದರು. ನಾನು ಓದಿದೆ. "ಸಾಕೇನಪ್ಪ!" ಎಂದೊಂದು ಮುಗುಳ್ನಗೆ ಸೂಸಿದರು. ಅವರ ಸಹಿಯನ್ನು ಸ್ಕ್ಯಾನ್ ಮಾಡಿಸಿ ಹಾಗೇ ಬೆನ್ನುಡಿಗೆ ಹಾಕಿಕೊಳ್ಳಲು ಯೋಚಿಸಿದ ಪ್ರಸನ್ನಣ್ಣನಿಗೆ ಅವರು ಬೇರೆ ರೀತಿಯಲ್ಲಿ 'ಮಾರ್ಕರ್'ಪೆನ್ನಿನಲ್ಲಿ ಸಹಿಮಾಡಿ ಕೊಟ್ಟರು.
ಆ ವೇಳೆಗಾಗಲೇ ಅವರು ನನ್ನ ಕಾದಂಬರಿಗೆ ಹೊಸ ಹೆಸರನ್ನೂ ಸೂಚಿಸಿದ್ದರು. ಅದೊಂದು ಉಪಕಥೆ. ನಾನು ಕಾದಂಬರಿ ಬರೆದಿದ್ದೇನೆ ಎಂದ ಕೂಡಲೇ ಅವರಿಗೆ ಆಶ್ಚರ್ಯವಾಗಿ ಕೇಳಿದರು "ಕಾದಂಬರಿಯ ಹೆಸರೇನು?" ಎಂದು. ನಾನು ಇಟ್ಟ ಹೆಸರು "ಕ್ಷಿಪ್ರೋಧ್ಭವ" ಎಂದಾಗಿತ್ತು. ನನಗೆ ಆ ಹೆಸರಿನ ಮೇಲೆ ಮೋಹವೇನೂ ಇರದಿದ್ದರೂ ಕಾದಂಬರಿಯ ಎರಡು ಭಾಗಗಳಿಗೆ ಅನುಸಾರವಾಗಿ "ಕ್ಷಿಪ್ರ+ಉದ್ಭವ"ಎಂದು ಸೇರಿಸಿ ಆ ಹೆಸರಿಟ್ಟಿದ್ದೆ ಅಷ್ಟೆ! ಅವರು ಅದನ್ನು ಕೇಳಿ ಮನೆಯ ಮಕ್ಕಳನ್ನು ಕರೆದರು. ಅವರಲ್ಲಿ ಒಬ್ಬಳು ಹೈಸ್ಕೂಲಿಗೆ ಹೋಗುವವಳು ಇನ್ನೊಬ್ಬಳು ಇಂಜನಿಯರಿಂಗ ಕಲಿಯುತ್ತಿರುವವಳು ಹಾಗೇ ಇನ್ನೊಬ್ಬಳೂ ಕಾಲೇಜಿಗೆ ಹೋಗುವವಳೇ ಆಗಿದ್ದಳು. ಅವರ ಬಳಿ "ಕ್ಷಿಪ್ರೋದ್ಭವ ಎಂದರೆ ಅರ್ಥವೇನು?" ಎಂದು ಕೇಳಿದರು. ಅವರೆಲ್ಲರೂ ಗೊತ್ತಿಲ್ಲ ಎಂದರು. ಆಮೇಲೆ ಅವರನ್ನು ಕಳಿಸಿ ನನಗೆ "ಎಲ್ಲಾ ಜನರಿಗೆ ಅರ್ಥವಾಗುವಂತಹ ಹೆಸರಿಡಬೇಕು. ಈಗ ನೋಡು" ಎಂದು ಅಲ್ಲೇ ತಮ್ಮ ಹಾಸಿಗೆಯ ಮೇಲಿದ್ದ ತೇಜಸ್ವಿಯವರ ಕೆಲವು ಪುಸ್ತಕಗಳನ್ನು ತೋರಿಸಿ ಅದಕ್ಕೆ ಹೇಗೆ ಹೆಸರಿಡುವ ಸಾಧ್ಯತೆಗಳಿದ್ದರೂ ಹೀಗೇಕೆ ಇಟ್ಟಿದ್ದಾರೆ ಎಂದು ವಿಶ್ಲೇಶಿಸಿ ಹೇಳಿದರು.(ಉದಾ- "ಪ್ಲೈಯಿಂಗ್ ಸಾಸರ್ಸ ಎಂಬುದರ ಬದಲು  ಹಾರುವ ತಟ್ಟೆಗಳು ಎಂದು ಇಡಬಹುದಿತ್ತು") ಆದರೆ ಲೋಕರೂಢಿಯ ಶಬ್ದಗಳು ಮಾತ್ರ ಜನರಿಗೆ ಅರ್ಥವಾಗುತ್ತವೆ, ನೀನಿಟ್ಟ ಈ ಹೆಸರಿಗೆ ಯಾರೂ ಪುಸ್ತಕ ಖರೀದಿಸಿ ಓದುವುದಿಲ್ಲ.. ನಿನಗೆ ಇಷ್ಟ ಇದ್ದರೆ ಬದಲಾಯಿಸು' ಎಂದರು. ನಾನು ಏನೇನೋ ಹೆಸರು ಹೇಳಿದೆ ಅವರು ಅದೆಲ್ಲವನ್ನೂ ಕೇಳಿ ನನ್ನ ಆಶಯವನ್ನು ಅರಿತವರಂತೆ "ಸಮಯದ ಸರ್ಕಲ್" ಎಂದು ಆದಿಪ್ರಾಸ ಸಹಿತವಾದ ನಾಮಕರಣ ಮಾಡಿದರು. ಅಂದಿಗೆ ನನ್ನ ಕಾದಂಬರಿ ಸಮಯದ ಸರ್ಕಲ್ ಆಗಿ ಬದಲಾಯಿತು.ಕಾದಂಬರಿ ಮುದ್ರಣಕ್ಕೆ ಹೋಗಿದ್ದರ ಜೊತೆ ಮುನ್ನುಡಿ ಬೆನ್ನುಡಿಗಳನ್ನೂ ಕಳಿಸಿದೆ. ಅರ್ಪಣೆಯೂ ಹೋಯಿತು ಎಲ್ಲಾ ಆಗಿ ಚೈತ್ರದ ಹಿಂದಿನದಿನ ಕಾದಂಬರಿಗಳ ಕಟ್ಟು ಈರಣ್ಣನ ರೂಮಿಗೆ ಬಂದು ಸೇರಿದಾಗ ನಾನು ಗದ್ಗದಿತಕಂಠನಾದೆ. ಆಗಲೇ ದಿವಾಕರ್ ಸರ್ ಬಳಿ ಹೋಗಿ ಅವರಿಗೆ ಗೌರವ ಪ್ರತಿ ಸಲ್ಲಿಸಿದೆವು. ಮಾರನೇ ದಿನ ಶ್ರೀ ಜಯಪ್ರಕಾಶ್ ಕೊಂಡಜ್ಜಿಯವರು ಪುಸ್ತಕ ಬಿಡುಗಡೆ ಮಾಡಿದರು, ಅವರು ಕುವೆಂಪು ವಿ.ವಿ.ಯ ಸಿಂಡಿಕೇಟ್ ಸದಸ್ಯರಾದರೂ ನಮ್ಮ ಪಾಲಿಗೆ ಮೆಚ್ಚಿನ 'ಜೆ.ಪಿಅಣ್ಣ' ನಾನು ಒಮದು ನಿಮಿಷ ವೇದಿಕೆಯ ಮೇಲೆ ಮಾತನಾಡಿದೆ. ಅದಾಗಲೇ ನನಗೆ ಬೇಗ ಮಾತುಮುಗಿಸಲು ಕರೆ ಬಂದಿತ್ತು ಕೂಡ!! ನಮ್ಮ ಪುಸ್ತಕ ಬಿಡುಗಡೆಯ ವಿಚಾರವಾಗಿ ಕಾಲೇಜಿನಲ್ಲಿ ಪ್ರಾಂಶುಪಾಲರ ಒಪ್ಪಿಗೆ ಪಡೆಯುವುದೂ ಕಷ್ಟವೇ ಆಗಿತ್ತು. ಆದರೂ ನಮ್ಮ ಅನೇಕ ಪ್ರೊಫೆಸರ್ ಗಳ ಸಹಕಾರದಿಂದ ಅದೇನೂ ತೊಂದರೆಯಾಗಲಿಲ್ಲ. ನಮ್ಮ ಜಗ್ಗಣ್ಣ ಅವರ ಕವನಸಂಕಲನವೂ ಹೀಗೇ ಕಾಲೇಜು ವಾರ್ಷಿಕೋತ್ಸವಕ್ಕೇ ಬಿಡುಗಡೆಯಾಗಿತ್ತಂತೆ. ಅದರ ನಂತರ ನಮ್ಮ 'ಯುಬಿಡಿಟಿ ಕಾಲೇಜಿನ ಇತಿಹಾಸದಲ್ಲಿ ಪುಸ್ತಕ ಬಿಡುಗಡೆ ಆದದ್ದು ನನ್ನದೇ ಇರಬೇಕು' ಎಂಬ ಹೆಗ್ಗಳಿಕೆ ನನ್ನದು. ಕಾದಂಬರಿ ಬಿಡುಗಡೆ ಆಗಿದ್ದಂತೂ ನನ್ನದೇ ಮೊದಲಿಗೆ ಎಂಬ ಹೆಗ್ಗಳಿಕೆ (ಕುಮಾರವ್ಯಾಸನಂತಹ ಮಹಾಕವಿಗಳೇ ಹೆಗ್ಗಳಿಕೆಗಳನ್ನ ಹೇಳಿಕೊಂಡರೆಂದ ಮೇಲೆ ನಾವು ಹೇಳಿಕೊಳ್ಳುವುದು ತಪ್ಪೇನಲ್ಲ!!!)

ಪುಸ್ತಕ ಬಿಡುಗಡೆ-ಸಮಯದ ಸರ್ಕಲ್ ಎಡದಿಂದ-ಗಣೇಶ ಕೊಪ್ಪಲತೋಟ, ಶ್ರೀ ಸುದರ್ಶನ ರೆಡ್ಡಿ, ಶ್ರೀ ರೇವಣಸಿದ್ದಪ್ಪ, ಶ್ರೀ ಜಯಪ್ರಕಾಶ ಕೊಂಡಜ್ಜಿ,ಶ್ರೀ ಎಸ್ ಐ ಕೋರೆ,ಶ್ರೀ ಅಬ್ದುಲ್ ಬುಡಾನ್. ಶ್ರೀಮತಿ ಮಾಲಿನಿ
ಚೈತ್ರದ ಎರಡನೇ ದಿನ "ಮಂಥನ"ದ ಪತ್ರಿಕೆಯೂ ಬಿಡುಗಡೆಯಾಯಿತು. ನಾವು ಸಾಧಿಸಬೇಕಾದುದ್ದನ್ನೆಲ್ಲ ಸಾಧಿಸಿ ಆಗಿತ್ತು. ಇಷ್ಟೆಲ್ಲ ಸಾಧಿಸಿದರೂ ಪ್ರಸನ್ನಣ್ಣ ಮಾತ್ರ ಮೊದಲಿದ್ದಂತೆಯೇ ಇದ್ದಾರೆ. (ಸಂಪೂರ್ಣ ಕುಂಭೋ ನ ಕರೋತಿ ಶಬ್ದಂ ಎಂಬಂತೆ) ಶ್ರವಣನೂ ದೂರದಿಂದಲೇ ಶುಭಾಶಯ ತಿಳಿಸಿದ. ಮುಖತಃ ಸಿಕ್ಕಾಗ ನಾನಾಗೇ ಗೌರವಪ್ರತಿ ಕೊಡಲು ಹೋದರೂ ಹಣಕೊಟ್ಟೇ ತೀರುತ್ತೇನೆಂದು ಹಠಕ್ಕೆ ಬಿದ್ದು ಖರೀದಿಸಿದ. ಅನೇಕ ಗುರುವೃಂದದವರೂ ವಿದ್ಯಾರ್ಥಿ  ಮಿತ್ರರೂ ಬಿಡುಗಡೆಯಾದ ದಿನವೇ ಖರೀದಿಸಿದರು. ಅಲ್ಲದೇ ಮಿತ್ರರಾದ ಕಿರಣ , ಸತ್ಯ ,ದೀಪಕ್ ಗೋರೆ, ಹಾಲೇಶ  ಸಚಿನ ಮನೋಜ ಸಚಿನ್ ಎಸ್ ಕೆ ಇವರೆಲ್ಲ ತಮ್ಮ "ಮ್ಯಾಡ್ ಆಡ್ಸ" ನಲ್ಲಿ ನನ್ನ ಕಾದಂಬರಿಯ ಬಗ್ಗೆ ಜಾಹೀರಾತನ್ನೂ ನೀಡಿದರು..(ಅದು ತಮಾಷೆಗಾಗಿ ಮಾಡುವ ಜಾಹೀರಾತಾದರೂ ನನ್ನ ಕಾದಂಬರಿಯ ವಿಚಾರವನ್ನೂ ಸೇರಿಸಿಕೊಂಡಿದ್ದರು) ನನ್ನ ಪಾಲಿಗೆ ಮೇ 11 ಎಂಬುದೊಂದು ಅವಿಸ್ಮರಣೀಯ ದಿನವೇ ಸರಿ...ಪ್ರತಿಯೊಬ್ಬ ಕವಿ, ಲೇಖಕ, ಬರಹಗಾರರ, ಮೊದಲ ಪುಸ್ತಕ ಬಿಡುಗಡೆಯಾಗುವ ತೆರೆಯ ಹಿಂದೆ ಇಂತಹ ಅದೆಷ್ಟೋ ಕಥೆಗಳಿರುತ್ತವೆ. ಪುಸ್ತಕನ್ನು ಸ್ವಂತದ್ದೆಂಬಂತೇ ಜವಾಬ್ದಾರಿ ಹೊತ್ತು ಪ್ರಕಟಿಸಿದ ಪ್ರಸನ್ನಣ್ಣ ಹಾಗೂ ಜಗ್ಗಣ್ಣ ಅವರನ್ನೂ ಕಥೆಗೆ ಮೂಲ ವಸ್ತುವಿಚಾರ ಹೇಳಿದ ಎಚ್.ಬಿ ಮಂಜುನಾಥ ಅವರನ್ನೂ ಹಾಗೇ ನನ್ನ ಬರವಣಿಗೆಯ ಉತ್ಸಾಹಕ್ಕೇ ಅಷ್ಟೇ ಖುಶಿಯಿಂದ ಪ್ರೋತ್ಸಾಹಿಸಿ ಹಿತವಚನಗಳನ್ನು ಹೇಳುವ ಶ್ರೀ ಶತಾವಧಾನಿ ಆರ್ ಗಣೇಶ್ ಅವರನ್ನೂ ನಾನು ಎಷ್ಟು ನೆನೆದರೂ ಕಡಿಮೆಯೇ!! (ನನ್ನನ್ನು ಬಿಟ್ಟರೆ ಮೊಟ್ಟಮೊದಲು ಕಾದಂಬರಿಯನ್ನು ಸಂಪೂರ್ಣವಾಗಿ ಓದಿದವರೂ ಶತಾವಧಾನಿ ಗಣೇಶ ಅವರೇ!! ಏಕೆಂದರೆ ಬೆನ್ನುಡಿಮುನ್ನುಡಿಕಾರರು, ಡಿ.ಟಿ.ಪಿಕಾರರು ಪ್ರಕಾಶಕರು ಯಾರೊಬ್ಬರೂ ಕಾದಂಬರಿಯನ್ನು ಸಂಪೂರ್ಣವಾಗಿ ಓದಿರಲಿಲ್ಲವೆಂಬುದೊಂದು ವಿಪರ್ಯಾಸವೇ ಸರಿ!!)

ಪುಸ್ತಕದ ಅರ್ಪಣೆ ಹೀಗಿದೆ.

ಮೊದಮೊದಲ ತೊದಲ ನುಡಿಯನ್ನೂ ಸೊಟ್ಟಪಟ್ಟ ಅಕ್ಷರಗಳನ್ನೂ ನೆಟ್ಟಗೆ ತಿದ್ದಿ ಕಲಿಸಿದ ಮೊದಲ ಗುರು 'ಆಯಿ'ಗೆ
ಅಪ್ಪಾ ಕಥೆ ಹೇಳು ಎಂದಾಗಲೆಲ್ಲ ಲೆಕ್ಕವಿಡಲಾಗದಷ್ಟು ಮೌಲ್ಯಯುತ ಕಥೆಗಳನ್ನು ಹೇಳಿದ 'ಅಪ್ಪಂ'ಗೆ
ಓದು ಬರಹದ ಅಭಿರುಚಿ ಹುಟ್ಟಿಸಿದ ಎಲ್ಲಾ ಬಂಧು ಮಿತ್ರರಿಗೆ.
ಆರಂಭಿಕ ಚುಟುಕುಗಳ ಪ್ರಯೋಗಕ್ಕೆ ಒಳಪಟ್ಟು, ಸಲಹೆ ಸೂಚನೆ ಕೊಟ್ಟ ಮಿತ್ರ ಚನ್ನಸರದ 'ಶ್ರೀರಂಗ'ನಿಗೆ
ಅನೇಕಬಾರಿ ಕಥೆ,ಕವಿತೆ,ಕಾದಂಬರಿಗಳ ಕುರಿತ ನನ್ನ ವಾಕ್ಪ್ರವಾಹವನ್ನು ನಿರಂತರವಾಗಿ ಸಹಿಸಿಕೊಂಡ ಆಪ್ತಮಿತ್ರ 'ಶ್ರವಣಂ'ಗೆ
ಚೊಚ್ಚಲ ಹೆರಿಗೆಯ ಜವಾಬ್ದಾರಿ ಹೊತ್ತ "ಪ್ರಸನ್ನಣ್ಣಂ"ಗೆ
ಹಾಗೂ 
ಓದುತ್ತಿರುವ ಸನ್ಮನಸ್ಕರಿಗೆ
ಪ್ರೀತಿಯಿಂದ
ಗಣೇಶ ಕೊಪ್ಪಲತೋಟ..

ವಿ.ಸೂ.
(ಆಯಿ- ಅಮ್ಮ.)
(ಹೆಸರಿನ ಲಿಂಕ್ ಗಳನ್ನು ಕ್ಲಿಕ್ಕಿಸುತ್ತಾ ಹೋದರೆ ಅವರವರ ಪರಿಚಯ ಪುಟಕ್ಕೆ ಹೋಗುತ್ತದೆ)

11 ಕಾಮೆಂಟ್‌ಗಳು:

 1. ನಾನು ಏನು ಮಾಡಿಲ್ಲ ..ಆದ್ರೂ ತುಂಬಾ ದೊಡ್ಡ ಸಹಾಯ ಮಾಡಿರುವವರ ತರಹ ಬರೆದಿದ್ಯ...ಎಲ್ಲ ಕ್ರೆಡಿಟ್ ಪ್ರಸನ್ನ ಅಣ್ಣ ನಿಗೆ ಹೋಗ್ಬೇಕು...ಇದೆಲ್ಲದಕ್ಕೂ ಮಿಗಿಲಾಗಿ ನಿನ್ನ ಕ್ರಿಯಾಶೀಲತೆ ನಿನ್ನನು ಕಾಪಾಡುತ್ತಿದೆ
  ನಿನ್ನ ಕನ್ನಡ ತಾಯಿಯ ಸೇವೆ ಹೀಗೆ ಮುಂದುವರೆಯಲಿ...ನೆನಪಿರಲಿ ಜನರಿಗೆ ಅರ್ಥ ಆಗದೆ ಇರೋ ವೇದ ದೂರ ಅದೇ ಅರ್ಥ ಆಗೋ ವಚನ ಹತ್ತಿರ..
  ಆ ಕನ್ನಡ ತಾಯಿಯ ಅಆಶಿರ್ವಾದ ನಿನ್ನ ಮೇಲೆ ಸದಾ ಇರಲಿ..

  ಪ್ರತ್ಯುತ್ತರಅಳಿಸಿ
 2. @Shravan..U r also a reason for this. U supported me from my 1st yr. I think u remember that u only intriduced me to Anna. I should thank ful to u, of course PrasannaAnna has a great talent. He only getsthe credit of all this.:-)

  ಪ್ರತ್ಯುತ್ತರಅಳಿಸಿ
 3. ನಿಮ್ಮೀ ಅನುಭವ ಕಥನ ಓದಿ ಸಂತೋಷವಾಯಿತು. ಅಂತಹ ಮಿತ್ರರು , ಗುರುಗಳು ಸಿಕ್ಕಿರುವುದು ನಿಮ್ಮ ಪುಣ್ಯವೂ ಇರಬಹುದೇನೋ :-) ಗೆಲುವಿನಲ್ಲಿ ಎಲ್ಲಾ ತಮ್ಮದೆಂದು ಬೀಗುವ ಜನರ ಮಧ್ಯೆ ಕಾರಣೀಕತೃಗಳ ನೆನೆಯುವ ನೀವು ವಿಭಿನ್ನವಾಗಿ ನಿಲ್ಲುತ್ತೀರ. .ಶ್ರವಣ ಅವರು ಹೇಳಿದ ಕಷ್ಟವಾದ ವೇದ ಜನಮಾನಸದಿಂದ ದೂರಾಗುತ್ತದೆ, ವಚನ ಹತ್ತಿರವಾಗುತ್ತದೆ ಎಂಬ ಮಾತೂ ಇಷ್ಟವಾಯಿತು. ನಿಮಗೆ, ನಿಮ್ಮ ಮಿತ್ರವೃಂದಕ್ಕೆ ಶುಭವಾಗಲಿ :-)

  ಪ್ರತ್ಯುತ್ತರಅಳಿಸಿ