ಕನ್ನಡದ ಚಲನಚಿತ್ರ ಲೋಕ ಕಂಡ ಮೇರು ನಟ.. ಅವರು ನಮ್ಮನ್ನಗಲಿ ಸರಿಯಾಗಿ ಎರಡು ವರ್ಷಗಳಾದರೂ ನಮ್ಮೆಲ್ಲರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿದ್ದಾರೆ. ಅವರಿಗೆ ಅರ್ಪಿತವೀ ಆಶವ ರಚನೆಗಳ ಪದ್ಯಮಾಲಿಕೆ.
ಚೌಪದಿ||
ಕನ್ನಡದ ಕುವರರೇ ನಮ್ಮಗಲಿ ಹೋದಿರೌ
ಮುನ್ನತೀರಿರಲುಮಾಯುಷ್ಯವುಂ ನೀಂ|
ತನ್ನತನ ತೋರಿಮೀ ಚಲನಚಿತ್ರಗಳಲ್ಲಿ
ಹೊನ್ನಗಣಿಯಾಗಿಜೀವನದಿ ದಿಟದಿ||1||
ಕಂ||
ಸಂಪತ್ಕುಮಾರನೆಂದುಂ
ಸಂಪತ್ತಿಗೆ ನೀವು ದಾಸರಾಗದೆ ನಿಂತುಂ|
ತಂಪಾಗಿ ಕಳೆದು ಚಿತ್ರಗ
ಳಿಂಪಿಂ ಜನಮಾನಸಾಂತರಂಗಸ್ಥರು ನೀಂ||2||
ಭಾಮಿನಿ||
ನಿಜದಮೋಹವ ತೊರೆದುಮಾದಿರಿ
ವಿಜಯಿ ಕಲೆಯಲಿ ಕೋವಿದರು ಮಿಗೆ
ಸೃಜಿಸಿ ಪೂರ್ಣತೆಯನ್ನು ನಟನೆಯಲಿಂತು ಚಿತ್ರದಲಿ|
ಗಜಸುಗಂಭೀರ ಖಳನಾಯಕ
ರಜನಿಕಾರಕನೋಲು ಸುಂದರ
ಸುಜನ ನಾಯಕಪಾತ್ರಗಳಲೈತಂದು ತೆರೆಯಲ್ಲಿ||3||
ಆಹ ಕಳೆಯೇನದುವೆ ಮೊಗದಲಿ
ಆಹ ನಿಮ್ಮಯ ನೋಟವೇನಿದು
ಆಹ ಪ್ರತಿಭಾಸಂಪನರು ನೀವಲ್ತೆ ನಟನೆಯಲಿ|
ದೇಹಸೌಷ್ಠವವೆಂತು ನಿಮ್ಮದು
ಬಾಹುಬಲಿಯುಂ ಕಂಠಸಿರಿಯುಂ
ಮೋಹಿಸದೆ ಪ್ರೇಕ್ಷಕರ ಕನ್ನಡ ಭಕ್ತರನು ಸೊಗದಿ||4||
ಚೌಪದಿ||
ನಾಗರಹಾವೊಳು ದುರ್ಗದ ತರುಣಂ
ವೇಗದ ಚೋರಂ ಮತ್ತೊರ್ಮೆ|
ಭೋಗಿಯರಸನಂತಿನ್ನೊರ್ಮೆಗೆ ದಲ್
ಸಾಗಿತು ನಿಮ್ಮೀ ಚಿತ್ರಂಗಳ್||5||
ಭೂಮಿಪನಾದಿರಿ ರಕ್ಷಕನಾದಿರಿ
ನಾಮದಿ ಖ್ಯಾತರು ನೀವಾಗಿ|
ಈ ಮಾನವತೆಯ ತೋರುತ ಚಿತ್ರದಿ
ಹೋಮಂಗೈದಿರಿ ಜೀವನವಂ||6||
ಸಿರಿವಂತ ನೀವಾಗಿ ಕುಳ್ಳನಾ ಜೊತೆಯಾಗಿ
ಮರೆಯಲಾರದ ಚಿತ್ರ ನೀಡಿ ನಮಗೆ||
ತೊರೆದು ಹೋದಿರಿ ಜಗವನೇಕಿಂತು ಮಾಡಿದಿರಿ
ತಿರೆಗೆ ಭಾರವೆ ನೀವು? ಮೇಣು ಕಾಲಂ||7||
ಮನವೆಂಬ ದೇಗುಲದಿ ಮನೆ ಕಟ್ಟಿ ಮರೆಯಾಗಿ
ತನುವಿಂದ ದೂರ ನೀವಾದರೂ ನಾವ್|
ದಿನದಿನವು ಚಿತ್ರಗಳಲೀಕ್ಷಿಸುತ ನಿಮ್ಮನ್ನೆ
ಕೊನೆವರೆಗು ನೆನಪಿಟ್ಟು ಸ್ಮರಿಸುತಿರುವೆಂ||8||
ನಮಿಪೆನೀ ಪದ್ಯಗಳ ಮಾಲಿಕೆಯನರ್ಪಿಸಿಂ
ನಮಿಪೆನಿಮ್ಮಾ ನಿತ್ಯತೃಪ್ತಾತ್ಮಕೆ||
ನಮಿಸಿಮೀ ಕನ್ನಡದ ತೇರನೆಳೆಯುವೆನಿಂತು
ನಮಿಸುವೆಂ ವಿಷ್ಣುವರ್ಧನನಡಿಗೆ ನಾಂ||9||
-ಗಣೇಶ ಕೊಪ್ಪಲತೋಟ
:) chennagide
ಪ್ರತ್ಯುತ್ತರಅಳಿಸಿಧನ್ಯವಾದಗಳು:-)
ಪ್ರತ್ಯುತ್ತರಅಳಿಸಿವಿಷ್ಣುವರ್ಧನನ ಬಗ್ಗೆ ನಿಮ್ಮ ನಮನ-ಕವನ ತುಂಬಾ ಚೆನ್ನಾಗಿದೆ.
ಪ್ರತ್ಯುತ್ತರಅಳಿಸಿನಿಜಕ್ಕೂ ಪದಗಳು ಸಾಲದು ಅವರ ಸರಳ ವ್ಯಕ್ತಿತ್ವವನ್ನು ಹೊಗಳಲು. ನೆಚ್ಚಿನ ಕಲಾವಿದನ ಬಗ್ಗೆ ಓದಿ ತುಂಬಾ ಸಂತೋಷವಾಯಿತು.
Dhanyavadagalu:-)
ಪ್ರತ್ಯುತ್ತರಅಳಿಸಿthaNKS
ಪ್ರತ್ಯುತ್ತರಅಳಿಸಿNice lines.
ಪ್ರತ್ಯುತ್ತರಅಳಿಸಿSwarna