Powered By Blogger

ಮಂಗಳವಾರ, ಜನವರಿ 2, 2018

-:ಗುಂಡ್ಲುಪಂಡಿತ ಶ್ರೀ ರಾಜರತ್ನ ಕೃತ ಮಹಾಕವಿ ಪುರುಷ ಸರಸ್ವತಿ ಎಂಬ ಗ್ರಂಥವು:-

Image result for g p rajaratnam
ಚಿತ್ರಕೃಪೆ: ಗೂಗಲ್

(ಇದು prekshaa.in ಅಂತರ್ಜಾಲ ಪತ್ರಿಕೆಗೆ ಬರೆದ ಲೇಖನ) 
ವಿಡಂಬನೆಯೆಂಬುದು ಸಾಹಿತ್ಯದ ಒಂದು ವಿಶಿಷ್ಟಪ್ರಕಾರವಾಗಿದೆ. ವಿಡಂಬನೆ ಅಥವಾ ಅಣಕುವಾಡು ಎಂದರೆ ಮೂಲ ಪ್ರಸಿದ್ಧವಾದ ಒಂದು ಕೃತಿಯನ್ನು ಆಶ್ರಯಿಸಿ ಅದೇ ಶೈಲಿಯನ್ನು ಅನುಕರಿಸಿಕೊಂಡು ಇನ್ನೊಂದು ಸಾಹಿತ್ಯವಿರುತ್ತದೆ. ಆದರೆ ಇಲ್ಲಿ ಯಾವುದೋ ಒಂದು ಕೃತಿಯನ್ನು ಲಘುವಾಗಿಸುವ ಉದ್ದೇಶವಿದೆ ಎಂದಲ್ಲ. ಆದರೆ ಪ್ರಸಿದ್ಧವಾದ ಮಾರ್ಗದಲ್ಲಿ ಸ್ವಲ್ಪ ಲಘುವಾದ ಹಾಸ್ಯಸಾಹಿತ್ಯವನ್ನು ತಂದಾಗ ಹುಟ್ಟುವ ಆಸ್ವಾದನೀಯತೆ ಅವರ್ಣ್ಯ! ಹೀಗೆ ಯಾವುದೋ ಒಂದು ಕೃತಿಯನ್ನು ಆಶ್ರಯಿಸಿ ಅದಕ್ಕೆ ಅಣಕುವಾಡನ್ನು ರಚಿಸುವುದು ಬಹಳ ಹಿಂದಿನಿಂದಲೂ ನಡೆದುಬಂದಿದೆ. ಕಾಳಿದಾಸನ ಮೇಘದೂತವನ್ನು ಕಂಡು ಅದರಂತೆಯೇ ಬಂದ ದೂತಕಾವ್ಯಗಳ ಪರಂಪರೆಯನ್ನು ಅವಲೋಕಿಸಿದರೆ ಸಾಕು ಅದರ ವೈಶಾಲ್ಯವನ್ನು ತಿಳಿಯಬಹುದು. ಕನ್ನಡದಲ್ಲಿ ಕೂಡ ಕ್ವಾಚಿತ್ಕವಾಗಿ ಕೆಲವೊಂದು ಬಿಡಿಯಾದ ಹಾಡುಗಳು ಕಂಡುಬರುತ್ತವೆಯಾದರೂ ಅಷ್ಟು ವಿಸ್ತೃತವಾಗಿ ರಚನೆಯಾಗಿಲ್ಲ ಎಂದೇ ಹೇಳಬಹುದು. ಆದರೆ ಜಿ.ಪಿ ರಾಜರತ್ನಂ ಅವರ "ಮಹಾಕವಿ ಪುರುಷಸರಸ್ವತಿ" ಎಂಬ ಕೃತಿ ಸಂಪೂರ್ಣವಾಗಿ ಹಲವು ಸ್ವಾರಸ್ಯವನ್ನು ಒಳಗೊಂಡ ಒಂದು ಪರಿಪೂರ್ಣವಾದ ಅಣಕುಗಬ್ಬ. ಅದರಲ್ಲಿ ಹಳಗನ್ನಡದ ಕಾವ್ಯಗಳ ಸಂಪಾದನೆಯ ವಿವಿಧ ಹಂತಗಳಿಂದ ಮೊದಲಾಗಿ ಕವಿಗಳ ಸ್ವಭಾವವನ್ನು ವರ್ಣಿಸುವ ತನಕ ಹಲವು ವಿಷಯಗಳನ್ನು ವಿಡಂಬಿಸಿ ಚಿತ್ರಿಸಿಸದ್ದಾರೆ. ಅದರಲ್ಲಿ ಮೊದಲೇ ಹೇಳುವ ಬಿನ್ನಹದ ಒಂದು ಪದ್ಯದಲ್ಲಿ ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ.
ಕನ್ನಡಿಯಂ ತೋಱಿದೊಡತ್ಯುನ್ನತಸಲ್ಲಕ್ಷಣಂಗೆ ಮುಳಿಸಾಗದು ಮ-
ತ್ತೆನ್ನದೆ ಮೂಕೊಱೆಯಂಗಾ ಕನ್ನಡಿಯಂ ತೋಱೆ ಬೈಗುಮಿಱಿಗುಂ ಕೊಲ್ಗುಂ||
ಸರಿಯಾಗಿದ್ದವರಿಗೆ ಸಲ್ಲಕ್ಷಣಗಳನ್ನು ಹೊಂದಿದವರಿಗೆ ಕನ್ನಡಿಯನ್ನು ತೋರಿಸಿದರೆ ಅವರೇನೂ ಬೇಸರಿಸಿಕೊಳ್ಳುವುದಿಲ್ಲ. ಆದರೆ ಮೂಕೊರೆಯರಿಗೆ-ಮುಖ ಸರಿಯಿಲ್ಲದವರಿಗೆ ಕನ್ನಡಿಯನ್ನು ಹಿಡಿದರೆ ಬಯ್ಯುತ್ತಾರೆ ಇರಿಯುತ್ತಾರೆ ಕೊಲ್ಲುತ್ತಾರೆ. ಹಾಗಾಗಿ ಇಂತಹ ವಿಡಂಬನಕಾವ್ಯಗಳನ್ನು ಕೇವಲ ರಸಾಸ್ವಾದನೆಯ ದೃಷ್ಟಿಯಿಂದ ನೋಡದೇ ತಮಗೇ ಅನ್ವಯಿಸಿಕೊಂಡು ಕೋಪಿಸಿಕೊಳ್ಳುವವರು ಮೂರ್ಖರಷ್ಟೇ ಆಗುತ್ತಾರೆ ಎಂಬುದು ಸ್ಪಷ್ಟ.
"ಮಹಾಕವಿಪುರುಷಸರಸ್ವತಿ"ಯಲ್ಲಿ ಆದ್ಯಂತವಾಗಿ ಮುಖಪುಟದಿಂದ ತಪ್ಪುಒಪ್ಪೋಲೆಯ ತನಕ ವಿಡಂಬನೆಯೇ ತುಂಬಿದೆ. ಮೊದಲ ಪುಟದಲ್ಲಿ "ಗುಂಡ್ಲುಪಂಡಿತ ಶ್ರೀ ರಾಜರತ್ನ ಕೃತ ಮಹಾಕವಿ ಪುರುಷಸರಸ್ವತಿ ಮಹಾಗ್ರಂಥವನ್ನು ಶ್ರೀಯುತರುಗಳಾದ................ ಇವರ ಮುನ್ನುಡಿಗಳೊಡನೆ ಬೆಂಗಳೂರಿನ ಜಿ.ಪಿ ರಾಜರತ್ನಂ ಪ್ರಕಟಿಸಿದನು" ಎಂದು ಮುನ್ನುಡಿಯನ್ನು ಬರೆದವರೆಲ್ಲರ ಹೆಸರನ್ನೂ ಸೇರಿಸಿದ್ದಾರೆ. ಇದಕ್ಕೆ ಗೋವಿಂದಪೈಗಳು. ಶಿವರಾಮ ಕಾರಂತರು ಗೋಕಾಕರು ಬೇಂದ್ರೆಯವರು ಎಸ್ ವಿ ರಂಗಣ್ಣ ಮೊದಲಾದ ಹಲವರು ಮುನ್ನುಡಿಯನ್ನು ಬರೆದಿದ್ದಾರೆ. ಆಗಿನ ಕಾಲದಲ್ಲಿ ಹಲವು ಹಿರಿಯರಿಂದ ಮುನ್ನುಡಿಯನ್ನು ಬರೆಸಿ ಅವರ ಹೆಸರನ್ನು ಮುಖಪುಟದಲ್ಲೇ ಮುದ್ರಿಸುವ ಒಂದು ಸಂಪ್ರದಾಯವನ್ನು ಇಲ್ಲಿ ಅಣಕು ಮಾಡಿದ್ದಾರೆ ಎಂಬುದು ಸ್ಪಷ್ಟ! ಒಟ್ಟಾರೆ ಕಾವ್ಯಪ್ರಪಂಚದ ಹತ್ತುಹಲವು ವಿಷಯಗಳನ್ನು ಎತ್ತಿಕೊಂಡು ಅದಕ್ಕೆ ಹಾಸ್ಯರಸದ ಲೇಪನವನ್ನು ಮಾಡಿರುವ ಜಿ.ಪಿ ರಾಜರತ್ನಂ ಅವರ ಕುಶಲತೆ ಹಾಗೂ ಸೂಕ್ಷ್ಮಚಿತ್ರಣಗಳ ಕೆಲಸವನ್ನು ಪ್ರತಿಯೊಂದು ಪದಗಳಲ್ಲಿಯೂ ಕಾಣಬಹುದು. ಈ ಕೃತಿಯು ವ್ಯರ್ಥಪದಗಳೇ ಇಲ್ಲದಂತೆ ರಚನೆಯಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ಅತಿಯಾದ ವೈಮರ್ಶಕಪ್ರಜ್ಞೆಯು ರಸಾಸ್ವಾದಕ್ಕೆ ಸಂವಾದಿಯಾಗದೇ ಹೋಗುತ್ತದೆಯೆಂಬ ಕಾರಣದಿಂದ ಪ್ರಕೃತಲೇಖನದ ಬಹುಭಾಗ ಮೂಲವನ್ನು ಅಲ್ಲಲ್ಲಿ ಪರಿಚಯಿಸುವ ಕಾರ್ಯವಷ್ಟೇ ಆಗುತ್ತದೆಯಲ್ಲದೇ ಅದರ ಕುರಿತ ಯಾವುದೇ ನಿಷ್ಠುರವೈಮರ್ಶ್ಯವ್ರತದ ಚರ್ಚೆಯಿಲ್ಲ!
ಸಂಪಾದಕ ಮಂಡಳಿ-
ಮಹಾಕವಿ ಪುರುಷಸರಸ್ವತಿಯ ಕೃತಿಗಳನ್ನು ಸಂಪಾದಿಸಿ ಪ್ರಕಟಿಸುತ್ತಿರುವವರು "ಗುಪ್ತಸಂಪಾದಕಪಂಚಕ".(ಗು.ಸಂ.ಪಂ) ಅವರು ತಮ್ಮ ಹೆಸರನ್ನು ಮರೆಮಾಚುತ್ತಿರಲು ಕಾರಣವನ್ನೂ ಹೀಗೆ ವಿವರಿಸುತ್ತಾರೆ "ದ್ರುಪದರಾಜನಂದನೆಯನ್ನು ಸಂಪಾದಿಸಲು ವಿಕ್ರಮಿಸಿದ ಪಂಚಪಾಂಡವರಂತೆ ಈ ಮಹಾಕವಿ ಪುರುಷಸರಸ್ವತಿಯ ಶತಕಾರ್ಧತ್ರಯವನ್ನು ಸಂಪಾದಿಸಲು ಸಾಹಸಗೈದಿರುವ ನಾವೈವರು ಉದ್ದೇಶಪೂರ್ವಕವಾಗಿ ನಮ್ಮ ಹೆಸರನ್ನು ಅಡಗಿಸಿದ್ದೇವೆ. “ಹೂವಿನಿಂದ ನಾರೂ ನಾರಿಯ ಮುಡಿಗೇರಿತು" ಎಂಬ ನಾಣ್ನುಡಿಯಂತೆ 'ಮಹಾಕವಿಯ ಗ್ರಂಥವನ್ನು ಸಂಪಾದಿಸುವ ವ್ಯಾಜದಿಂದ ಈ ಐವರು ಯಃಕಶ್ಚಿತುಗಳಾದ ಪಂಚಸಂಪಾದಕರು ತಾವೂ ಖ್ಯಾತರಾದರು' ಎಂಬ ಅಪವಾದಕ್ಕೆ ಪಕ್ಕಾಗಬಾರದೆಂಬುದೇ ಮೇಲೆ ನಮೂದಿಸಿದ ನಮ್ಮ ಪವಿತ್ರ ಪರಮೋದ್ದೇಶವು" ಮುಖ್ಯವಾಗಿ ನಮ್ಮದು 'ಅಳಿಲ ಸೇವೆ'; ನಾವು 'ಎಲೆಮರೆಯ ಕಾಯಿಗಳು'; 'ಬಲಗೈ ಮಾಡುವುದು ಎಡಗೈಗೆ ತಿಳಿಯಬಾರದು' ಎಂಬುದು ನಮ್ಮ ಗಾಯತ್ರಿ, ಅಲ್ಲದೇ 'ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ' ಎಂಬುದು ನಮ್ಮ ತಾರಕಮಂತ್ರ. ಅಸ್ತು ಇತ್ಯಲಂ.”
ಇಷ್ಟಾದರೂ ಗು.ಸಂ.ಪಂ.ದಲ್ಲಿ ಮಧ್ಯಮರು "ಕನ್ನಡಾಂಗ್ಲೋಭಯಭಾಷಾಚಕ್ರವರ್ತಿ" ಎಂದೆನಿಸಿದವರು ಮುಂದೆ "ಮಹಾಕವಿ ಪುರುಷಸರಸ್ವತಿಸ್ತೋತ್ರಪಂಚಕ"ವನ್ನು ರಚಿಸಿದ್ದಾರೆ ಎಂದು ಅದನ್ನೂ ಸೇರಿಸುತ್ತಾರೆ. ಹಾಗೆಯೇ ಅವರ ಪುರುಷಸರಸ್ವತಿ ಜಯಂತಿಯ ಶಾಸನಪದ್ಯವಲ್ಲರಿ ಎಂದು ಇನ್ನಷ್ಟು ಪದ್ಯಗಳೂ ಮುಂದೆ ಇವೆ. ಅವರಿಗೆ "ಬೈಲಿಂಗ್ಯುಅಲ್ ಬಿಗ್ ಭಾರತಿ" (bi- lingual big Bharati) “ಭಾಮಿನೀರಮಾರಮಣ" “ಭಾಮಿನೀ ಭಾಗ್ಯವಿಧಾತಾ" "ಅಭಿನವಾರ್ಧಪುರುಷಸರಸ್ವತಿ" ಎಂಬಂತಹ ಬಿರುದುಗಳೆಲ್ಲ ಇವೆಯಂತೆ! ಪುರುಷ ಸರಸ್ವತಿಯ ಕಾವ್ಯಗಳು ೫೦ ಪದ್ಯಗಳಿಂದ ಕೂಡಿದ್ದರೆ ಈತನದು ೨೫ಪದ್ಯಗಳಾದ ಕಾರಣ "ಅಭಿನವಾರ್ಧಪುರುಷಸರಸ್ವತಿ"ಎಂಬ ಬಿರುದು. ಆ ಬಳಿಕ ಗು.ಸಂ.ಪಂ.ದಲ್ಲಿ ಮೊದಲನೆಯವರ ಭಾಷಣವೊಂದು ಮುಂದೆ ಪ್ರಕಟವಾಗಿದೆ. ಹಾಗೆಯೇ ಪಂಚಮರ ಪರಮನವೀನ ಸ್ವಾಗತಗೀತೆಯನ್ನೂ ಸೇರಿಸಿದ್ದಾರೆ. ದ್ವಿತೀಯರ ಅದ್ವಿತೀಯ ಪ್ರಶಂಸಾಮಾಲಿಕೆಯಿದೆ. ಚತುರ್ಥರ ಚತುರ್ವಿಂಶತಿವ್ಯಾಖ್ಯಾನಮಾಲೆಯ ಪ್ರಸ್ತಾಪವೂ ಇದೆ.
ಇದೆಲ್ಲದರ ನಡುವೆ ಮೊದಲ ಕಾವ್ಯದ ಪ್ರಾರಂಭದಲ್ಲಿಯೇ ವಿಶೇಷಸೂಚನೆಯೊಂದು ಇದೆ- “ಕಾವ್ಯಕರ್ತೃವೂ ವ್ಯಾಖ್ಯಾನಕಾರನೂ "ಗುಪ್ತಸಂಪಾದಕ ಪಂಚಕ"ವೂ ಸರ್ವವೂ ಶ್ರೀಮಾನ್ ಜಿ.ಪಿ ರಾಜರತ್ನಂ ಎಂ.ಎ ಎಂಬವರೆಂದು ಈಗತಾನೆ ಈ ಕೃತಿ ಅಚ್ಚಾದ ಮೇಲೆ ತಿಳಿದುಬಂದಿದೆ" ಎಂದು. ಮುಂದೆ ಆ ಕಾವ್ಯದ ಅಂತ್ಯದಲ್ಲಿ ಗು.ಸಂ.ಪಂ.ದವರು ಈ ವಾಕ್ಯವನ್ನು ಖಂಡಿಸಿ ಲೇಖನವನ್ನೂ ಬರೆಯುತ್ತಾರೆ. ಹೀಗೆ ಸಂಪಾದಕರ ಮಂಡಳಿಯ ಒಳಹೊರಗೆ ನಡೆಯುವ ಹಲವು ವಿಷಯಗಳ ಗೊಂದಲ ಗದ್ದಲ ಚರ್ಚೆ ಭಾಷಣ ಇತ್ಯಾದಿಗಳ ಸಂಕ್ಷೇಪವಾದ ಪರಿಚಯ ನಡೆಯುತ್ತದೆ.
ಮಹಾಕವಿ ಪುರುಷಸರಸ್ವತಿಯ ಪರಿಚಯ-
ಮಹಾಕವಿ ಪುರುಷಸರಸ್ವತಿಯ ಹೆಸರು ಪುರುಷಸರಸ್ವತಿ() ಎಂದೂ ಇವನ ತವರೂರು ತಾವರೆಪುರ()ವೆಂದೂ ತಂದೆಯ ಹೆಸರು ಲಕ್ಷ್ಮೀರಮಣ()ನೆಂದೂ ಹೆಣ್ಣುಕೊಟ್ಟ ಮಾವನ ಹೆಸರು ಪರ್ವತ(ಬೆಟ್ಟದಯ್ಯ)() ಎಂದೂ ಕೆಲವು ಪದ್ಗಳಿಂದ ತಿಳಿಯುತ್ತದೆ.
ಪುರುಷನಾಗಿ ಸರಸ್ವತಿಗೆ ತಾವರೆಯ ಮನೆಯಲಿ ಜನಿಸಿ ಪಳವಾ
ತೊರೆದು ಲೋಕವ ಪೊರೆದ ಲಕ್ಷ್ಮೀರಮಣನಣುಗನೊಲು
ಪುರುಷಸರಸತಿ()ಯೆನಿಸಿ ತಾವರೆಪುರ()ದ ಬಸಿರಲಿ ಜನಿಸಿ ಪಳವಾ
ತೊರೆದು ಕಬ್ಬವ ಬರೆದ ಲಕ್ಷ್ಮೀರಮಣ() ಸುತನಾನು||
..... ಮೂರು ಹೆಸರಿನ ಮೂರು ಕಾವ್ಯದ ಆರು ಪಾದದ ಭಾಮಿನಿಯ ವಾ
ಗ್ಧಾರೆ ನುಡಿಯೊಳಗಾದ ಪರ್ವತನಳಿಯ() ನಾನಲ್ತೆ||
ಕವಿಯ ಮತ ಯಾವುದು ಎಂದೂ ತಿಳಿದು ಬಂದಿಲ್ಲ! ಏಕೆಂದರೆ ಕವಿ ತ್ರಿಮೂರ್ತಿಗಳನ್ನೂ ಒಂದೇ ಉಸುರಿನಲ್ಲಿ ಸ್ಮರಿಸುವ ಅಪೂರ್ವ ಸಂಪ್ರದಾಯವುಳ್ಳವನಾಗಿದ್ದಾನೆ. (ಈತನ ಮತವನ್ನು ನಿಶ್ಚಯಿಸಿದವರಿಗೆ ಏತನ್ಮತೀಯರು ೫೦೦೦ ರುಪಾಯಿಗಳ ಬಹುಮಾನ ಕೊಡುವುದಾಗಿ ಜಾಹೀರಾತು ಮಾಡಿದ್ದಾರೆ.)
ಈ ಕವಿಯ ಬಿರುದಗಳನ್ನು ಹೀಗೆ ವಿವರಿಸಿದ್ದಾರೆ.
.ಪ್ರಾಕ್ಕಾವ್ಯಪರಬ್ರಹ್ಮ- ಪ್ರಾಚೀನಪ್ರೌಢಪ್ರಬಂಧಪಿನಾಕಿ- ಪರಮಾಲಂಕಾರಪ್ರದರ್ಶನಪ್ರವೀಣಪದ್ಮನಾಭ- ಈ ಮೂರು ಬಿರುದುಗಳನ್ನು- ಕವಿಯು ತ್ರಿಮೂರ್ತಿಗಳನ್ನೂ ಒಟ್ಟಿಗೇ ಸ್ತುತಿಸುವುದರಿಂದ ಆಸ್ತಿಕಲೋಕವು ಕೊಟ್ಟಿರುವುದು.
.ಪುರಾತನಕವಿಕೇಸರಿ- ಪುರಾಣಕವಿತಾವಿಚಕ್ಷಣ- ಪ್ರಾಚೀನಕಾವ್ಯಶಿರೋಮಣಿ- ಪ್ರಾಕ್ಪುರಾತನಕವಿರಾಜ-ಪ್ರಪ್ರಾಚೀನಕವಿರತ್ನ- ಇವು ನಾಸ್ತಿಕಲೋಕವು ಆಸ್ತಿಕಲೋಕಕ್ಕಿಂತ ಹಿಂದುಳಿದಿಲ್ಲವೆಂದು ಜಗತೀವಳಯಕ್ಕೆ ತೋರಿಸಿಕೊಡಲು ಕೊಟ್ಟ ಬಿರುದಾವಲಿ ಪಂಚಕವು
೩ಕರ್ಣಾಟಕಕುಲಕ್ರಮಾಗತಕವಿರಾಜಮಾರ್ಗಪ್ರತಿಪನ್ನಪ್ರಚಂಡಪರಮೇಶ್ವರ- ಸಕಲಸುನಿಪುಣಸಾಹಿತ್ಯಸರ್ವಸ್ವಸಂಯುಕ್ತಸರ್ವೇಶ್ವರ- ಆತ್ಮಗೌರವಕ್ಕೆ ಮಿಗಿಲಾದುದು ಮುಗಿಲ ಕೆಳಗಿಲ್ಲ ಎಂದು ತೋರಿಸಲು ಕವಿ ತನಗೆ ತಾನೇ ಕೊಟ್ಟುಕೊಂಡ ಎರಡು ಬಿರುದುಗಳು
. ಕವಿನರಪಾಳ- ಕರ್ಣನಾಟಕಪುರಾಣದಲ್ಲಿ ಪ್ರಾಸರಕ್ಷಣೆಗೋಸ್ಕರ ಕೊಟ್ಟುಕೊಂಡ ಬಿರುದು
. ಕುಳಕಪ್ರಿಯ- ಈತನ ಕಾವ್ಯದಲ್ಲಿ ಮೇಲಿಂದ ಮೇಲೆ ತಲೆದೋರುವ ಕುಳಕವನ್ನು ಕಂಡು ಗು.ಸಂ.ಪಂ.ವು ಕೊಟ್ಟ ಬಿರುದು
. ಮಹಾಕವಿ- ನಿನ್ನೆಗಿಂತ ಹಿಂದಿನ ಕವಿಗಳೆಲ್ಲರನ್ನೂ ಮಹಾಕವಿ ಎಂದು ಕರೆಯುವ ಸಂಪ್ರದಾಯದಂತೆ ಇವನನ್ನೂ ಮಹಾಕವಿ ಎಂದು ಗು.ಸಂ.ಪಂ. ಕರೆದಿದ್ದಾರೆ.
ಈ ಕವಿಯ ಕೃತಿಗಳಿಗೆ ವ್ಯಾಖ್ಯಾನ ಬರೆದವರ ಬಗೆಗೆ ಹೀಗಿದೆ- ಶಾಸ್ತ್ರಂ ಶಸ್ತ್ರಮೆ ಶಾಸ್ತ್ರಿ ಶಸ್ತ್ರಿಕನಲಾ ರತ್ನಾಕರಾಧೀಶ್ವರಾ ಎಂಬ ಸತ್ಕವಿಯ ಸೂಕ್ತಿಯನ್ನು ಸಂಪೂರ್ಣವಾಗಿ ಸಾರ್ಥಕಗೊಳಿಸಿದ ದುಷ್ಟಬುದ್ಧಿಯೆಂಬವನ (ಈ ದುಷ್ಟಬುದ್ಧಿ ಯಾರೆಂದು ಪತ್ತೆಯಾಗಿಲ್ಲ) ದೊಡ್ಡಯ್ಯನ ದೌಹಿತ್ರನಾದ ವಿಸ್ತರವ್ಯಾಖ್ಯಾನದೊಡನೆ ಲೋಕಹಿತಾರ್ಥವಾಗಿ ಪ್ರಚುರಪಡಿಸಲ್ಪಟ್ಟಿತು.
ಪುರುಷಸರಸ್ವತಿಯ ಕಾಲನಿರ್ಣಯವನ್ನು ಕೂಡ ಒಂದು ಪದ್ಯದಿಂದ ಮಾಡಿದ್ದಾರೆ. “ಶಾಂತವಾಗಲಿ ನಮ್ಮ ಜನ..." ಎಂಬ ಪದ್ಯದಲ್ಲಿ ಶಾಂತ ಎಂದರೆ ನವರಸ- , ವಾಗಲಿ- ಮೂರಕ್ಷರ- , ನಮ್ಮ- ಎರಡಕ್ಷರ- , ಜನ- ಅನಿರ್ದಿಷ್ಟ- , ಹಾಗಾಗಿ ಶಾಂತವಾಗಲಿ ನಮ್ಮ ಜನ=೯೩೨೦, ಹೀಗೇ ಇನ್ನೊಂದು ಸಾಲಿನಿಂದ ೨೨೧೦, ಮುಂದಿನ ಸಾಲಿನಲ್ಲಿ "ಸಹ" ಎಂಬ ಶಬ್ದವಿದೆ ಅಂದರೆ ಕೂಡುವುದು ೯೩೨೦+೨೨೧೦=೧೧೫೩೦ ಹೀಗೇ ಏನೇನೋ ಲೆಕ್ಕಾಚಾರವನ್ನು ಮಾಡಿ ಕೊನೆಗೆ ೫೧೧ ಬರುತ್ತದೆ. ಹಾಗಾಗಿ ಶಕವರ್ಷ ೫೧೧ರಲ್ಲಿ ಕೃತಿ ಮುಗಿಯಿತು ಎಂದು ನಿರ್ಧಾರವಾಗುತ್ತದೆ. ಇದರಿಂದ ಒಂಭತ್ತನೇ ಶತಮಾನದ ಕವಿರಾಜಮಾರ್ಗಕ್ಕಿಂತ ಮೂರು ಶತಮಾನ ಮುಂಚಿನ ಮಹಾಕ್ಷುದ್ರಕಾವ್ಯವು ಬೆಳಕಿಗೆ ಬಂದಿದೆ, ಜೈನನಾದ ನೃಪತುಂಗನಿಗಿಂತ ಮೂರು ಶತಮಾನ ಹಿಂದಿನ ಈತ ಬೌದ್ಧನಾಗಿರಬಹುದು ಎಂಬ ಸಂಶಯವನ್ನೂ ಗು.ಸಂ.ಪಂ. ವ್ಯಕ್ತಪಡಿಸುತ್ತದೆ.
ಕೃತಿಯ ಸಂಪಾದನೆ ಹಾಗೂ ಕೃತಿಗಳ ಪರಿಚಯ-
ಈ ಕೃತಿಯನ್ನು ಸಂಪಾದಿಸುವಾಗ ಎರಡು ಪ್ರತಿಗಳನ್ನು ಆಶ್ರಯಿಸಿದ್ದಾಗಿ ಹೇಳುತ್ತಾ ಗುಪ್ತಸಂಪಾದಕ ಪಂಚಕವು ತಿಳಿಸುವುದು ಒಂದು ಪಾತಾಳದ ಪ್ರತಿ, ಇನ್ನೊಂದು ಅಟ್ಟದ ಪ್ರತಿ. ಮುಖ್ಯಪಾಠವಾಗಿ ಪಾತಾಳದ ಪ್ರತಿಯನ್ನು ಆಶ್ರಯಿಸಿದ್ದರೆ ಪಾಠಾಂತರಗಳಲ್ಲಿ ಅಟ್ಟದ ಪ್ರತಿಯನ್ನು ಕೊಡುತ್ತಾರೆ. ಹಾಗೆಯೇ ಮಹಾಕವಿ ಪುರುಷಸರಸ್ವತಿಯ ಕಾವ್ಯಗಳಿಗೆ ವಿಪರೀತಬುದ್ಧಿ ಎಂಬಾತನ ವ್ಯಾಖ್ಯಾನವೂ ಕೂಡ ಇದೆ ಎಂಬುದು ಹಿಂದೆಯೇ ಪ್ರಸ್ತಾಪಿಸಲ್ಪಟ್ಟಿತಷ್ಟೆ!
ಮಹಾಕವಿ ಪುರುಷಸರಸ್ವತಿಯ ಕೃತಿಯೆಂದರೆ "ಶತಕಾರ್ಧತ್ರಯೀ" ಎಂಬ "ತ್ರಿಲೋಕತುಲ್ಯು ಮಹಾಕ್ಷುದ್ರಕಾವ್ಯಪ್ರಪಂಚವು" ಎಂದು ಮೊದಲ ಪುಟದಲ್ಲಿ ಹೇಳುತ್ತಾ ಅದಕ್ಕೆ ಟಿಪ್ಪಣಿಯನ್ನು ಹೀಗೆ ಕೊಡುತ್ತಾರೆ. ಇವುಗಳಲ್ಲಿ ಐವತ್ತೇ ಪದ್ಯಗಳಿರುವ ಕಾರಣ ಕ್ಷುದ್ರಕಾವ್ಯಗಳಾಗಿವೆ. ಹಾಗೂ ಮಹಾಕವಿ ಬರೆದ ಕಾರಣ ಮಹಾಕ್ಷುದ್ರಕಾವ್ಯವು ಎಂದು ವಿವರಣೆಯನ್ನು ಕೊಡುತ್ತಾರೆ! ಶತಕಾರ್ಧತ್ರಯೀ ಐವತ್ತು ಪದ್ಯಗಳ ಮೂರು ಕಾವ್ಯಗಳು .
. ಕರ್ಣನಾಟಕಪುರಾಣವು ಅಥವಾ ಸಾಲಂಂಕೃತಶತಕಾರ್ಧ ಷಟ್ಪದವು- ಎಂಬ ಣತ್ವೋದ್ಧರಣಮಹಾಕ್ಷುದ್ರಕಾವ್ಯ ಪ್ರಪಂಚವು
ಈ ಐವತ್ತು ಪದ್ಯಗಳಲ್ಲಿ "ಕರ್ಣಾಟಕ"ವೇ ಅಥವಾ "ಕರ್ನಾಟಕ"ವೇ ಎಂಬ ಜಿಜ್ಞಾಸೆಯನ್ನು ಏಳು ಗತಿಗಳಲ್ಲಿ ಐವತ್ತು ಷಟ್ಪದಿಗಳಲ್ಲಿ ವಿಸ್ತರಿಸುತ್ತಾರೆ. ಸಾಮಾನ್ಯವಾಗಿ ಪುರುಷಸರಸ್ವತಿಯ ಕಾವ್ಯದ ನಾಂದಿಯ ಪದ್ಯದಲ್ಲಿ ತ್ರಿಮೂರ್ತಿಗಳ ಸ್ಮರಣೆ ಇರುತ್ತದೆ. ಆ ಬಳಿಕ ಕಾವ್ಯಕ್ಕೆ ಪೀಠಿಕೆ ಇರುತ್ತದೆ. ಅದರಲ್ಲಿ ಆತ್ಮಪ್ರಶಂಸೆ ಕುಕವಿನಿಂದೆ ಇತ್ಯಾದಿಗಳನ್ನೆಲ್ಲ ಸಾಂಪ್ರದಾಯಿಕ ಕಾವ್ಯಗಳ ಪರಂಪರೆಯಂತೆಯೇ ಮಾಡುತ್ತಾರೆ. ಅಲ್ಲಿನ ಆತ್ಮಪ್ರಶಂಸೆಯ ಒಂದು ಪದ್ಯ-
ಬೋಳುಗವಿಗಳ ಹೂಳಿಸುತೆ ಬಲುಗೋಳುಗವಿಗಳ ಸೀಳಿಸುತೆ ಮೇಣ್
ಕೋಳಿಗವಿಗಳ ಕಿರಿಚುನಾಲಿಗೆ ಹಿಡಿದು ಕೀಳಿಸುತೆ
ಹಾಳುಗವಿತೆಯ ಕುಕವಿ ಮಾರನ ಭಾಳಲೋಚನನೆನಿಸಿ ಕವಿನರ
ಪಾಳಬಿರುದಿನ ಪುರುಷಸರಸತಿ ಪೆಸರಿನವ ನಾನು||
ಇದರ ಉತ್ತರಾರ್ಧದ ಅಟ್ಟದ ಪ್ರತಿಯ ಪಾಠಾಂತರ
"ಭಾಳಲೋಚನನಂತೆ ಕುಕವಿ ಕಪಾಳವನು ಹಿಡಿದದರಲೇ ಗೋ-
ಪಾಳವೆತ್ತುವ ಪುರುಷ ಸರಸತಿ ಪೆಸರಿನವ ನಾನು||”
ವಿಪರೀತಬುದ್ಧಿಯ ವ್ಯಾಖ್ಯಾನ- ಬೋಳುಗವಿ ಎಂದರೆ ಪ್ರಾಸ ಅಲಂಕಾರ ವ್ಯಾಕರಣ ರಹಿತರಾದವರು, ಗೋಳುಗವಿಗಳು- ಕಾವ್ಯರಚನೆಯಿಂದ ದ್ರವ್ಯಸಂಪಾದನೆಯಾಗುವುದಿಲ್ಲ ಎಂದು ಗೋಳಾಡುವವರು, ಕೋಳಿಗವಿಗಳು- ಕೋಳಿಯು "ಕೊಕ್ಕೊಕ್ಕೋ ಎಂದು ಕೂಗಿದ್ದನ್ನೇ ಕೂಗುವಂತೆ ಹಾಡಿದ್ದೆ ಹಾಡೋ ಕಿಸುಬಾಯ್ದಾಸ" ಮಾಡುವವರು.
ಕರ್ಣಾಟಕಸ್ತವನವು ಎಂಬ ಎರಡನೆ ಗತಿಯಲ್ಲಿ ಒಂದು ಪದ್ಯದಲ್ಲಿ ಕರ್ಣಾಟಕ ಎಂಬ ಶಬ್ದದಲ್ಲಿ ""ತ್ವವೇ ಏಕೆ ಬರಬೇಕು ಎಂಬುದನ್ನು ತುಂಬ ಸೊಗಸಾಗಿ ಒಂದು ಭೋಗಷಟ್ಪದಿಯಲ್ಲಿ ವಿವರಿಸಿದ್ದಾರೆ.
ಪರುಷರೇಫೆ ನತ್ವ ಮುಟ್ಟಿ ಹರುಷದಿಂದ ಣತ್ವವಾಯ್ತು
ಕರುಣಿಯೋತು ಪೇಳ್ದನಲ್ತೆ ತಾತಪಾಣಿನಿ
ಮರೆತು ಮುತ್ತಿನಂಥ ಮಾತನರರೆ ನತ್ವವನ್ನು ಬಳಸಿ
ನರರು ಪಾಪಿ ಮನುಜರಯ್ಯೊ ಪೋಪರೆಲ್ಲಿಗೆ||
ಇಲ್ಲಿ ಕೇವಲ ಹಾಸ್ಯವನ್ನಷ್ಟೇ ಅಲ್ಲದೇ ಅಲ್ಲಿ ಹೇಳಿದ ವ್ಯಾಕರಣಸೂಕ್ಷ್ಮವನ್ನು ಗಮನಿಸಬಹುದು. ರೇಫವೆಂಬ ಸ್ಪರ್ಷಮಣಿಯ ಸೋಂಕಿನಿಂದ ನಕಾರವೆಂಬ ಲೋಹವು ಣಕಾರವೆಂಬ ಚಿನ್ನವಾಗುತ್ತದೆ ಎಂಬ ಸುಂದರವಾದ ರೂಪಕವನ್ನು ಕೊಡುತ್ತಾರೆ. ತಾತಪಾಣಿನಿ ಎಂದು ಪಾಣಿನಿಯನ್ನು ಉಲ್ಲೇಖಿಸಿದ್ದಕ್ಕೆ ವಿಪರೀತಬುದ್ಧಿಯು ವ್ಯಾಖ್ಯಾನದಲ್ಲಿ “ರಷಾಭ್ಯಾಂ ನೋ ಣಃ ಸಮಾನಪದೇ" ಎಂಬ ಪಾಣಿನಿಯ ಮೂಲಸೂತ್ರವನ್ನು ಉಲ್ಲೇಖಿಸುತ್ತಾನೆ.
ಹಾಗೆಯೇ ಶಾಸನಗಳಲ್ಲಿ "ಕರ್ಣ್ನಾಟಕ" “ಕರ್ಣ್ಣಾಟಕ, ಕರ್ಣಾಟಕ" ಎಂಬ ಮೂರು ರೂಪಗಳು ಕಂಡುಬರುವುದಲ್ಲದೇ "ಕರ್ನಾಟಕ" ಎಂಬ ರೂಪವಿಲ್ಲ ಎಂಬುದನ್ನೂ ಸ್ಪಷ್ಟಪಡಿಸುತ್ತಾರೆ.
ಇವುಗಳೆಲ್ಲ ಹಾಸ್ಯಮಯವಾಗಿದ್ದರೂ ಪ್ರತಿಯೊಂದು ಪದ್ಯಗಳಲ್ಲಿ ಗಂಭಿರವಾದ ವಿಷಯವೂ ಇರುವುದನ್ನು ಗಮನಿಸಬಹುದು. ಇನ್ನೊಂದು ಪದ್ಯದಲ್ಲಿ ಹೀಗಿದೆ-
ಮೀಶೆವೊತ್ತನಮೋಘವರ್ಷನರೇಶ ನೃಪತುಂಗಾಖ್ಯ ತಾನ-
ವಿನಾಶಿಯಾತನ ಮಾತಿಗೆದುರೆದ್ದಾರ್ಪರಾರುಂಟು
ಕೇಶಿರಾಜ ವ್ಯಾಕರಣದಾಕಾಶದೊಳು ಖರಕಿರಣ ಸುಡುವನು
ಲೇಶ ಸಂದೆಗವಿಲ್ಲವವನಾಡಿದುದನಲ್ಲೆನಲು||
ಇದಕ್ಕೆ ಪೂರ್ವಾರ್ಧಕ್ಕೆ ಪಾಠಾಂತರ-
"ಮೋ ಶೆವೆತ್ತನ ಮೀಘವಷ್ರನ ರೇ ಶನ ಪತಂಗಾಖ್ಯತಾನ ವಿ
ನಾಶಿಯಾತನ.......” (ಎಂದು ಅಟ್ಟದ ಪ್ರತಿ)
ವಿಪರೀತಬುದ್ಧಿಯ ವ್ಯಾಖ್ಯಾನ-(ಇದಕ್ಕೆ ಅರ್ಥವಾಗುವುದಿಲ್ಲ. ಕನ್ನಡದಂತೆ ಕಂಡರೂ ಕನ್ನಡದಂತೆ ಅರ್ಥವಾಗದ ಈ ಭಾಷೆ ಕೂಡ ಕಾವ್ಯದ ಪ್ರಾಚಿನತೆಯನ್ನು ತೋರಿಸುತ್ತದೆಯಲ್ಲವೇ?)

.ಸಂದೇಹಸಂದೋಹಸಂದೇಶವು-
ಇದೊಂದು ಸಂಪೂರ್ಣವಾದ ಅಸಂಪೂರ್ಣ ಗ್ರಂಥವೆಂದು ಟಿಪ್ಪಣಿ. ಇದರಲ್ಲಿ ಮೂರೇ ಷಟ್ಪದಿಗಳಿವೆ. ಐವತ್ತುಪದ್ಯಗಳನ್ನು ಬರೆಯುತ್ತಿದ್ದ ಕವಿಯ ಕೃತಿಯಲ್ಲಿ ಮೂರೇ ಪದ್ಯಗಳಿವೆ ಎಂದು ಎಂದು ಇದು ಅಸಂಪೂರ್ಣಗ್ರಂಥವಂತೆ! ಆದರೆ ಸಂಪೂರ್ಣ ಏಕೆಂದರೆ ಕವಿ ಮೂರನೇ ಪದ್ಯದ ಕೊನೆಯಲ್ಲಿ "ಮುಗಿಯಿತಿಲ್ಲಿಗೀ ಸಂದೇಹಸಂದೋಹಸಂದೇಶವು" ಎಂದು ಹೇಳಿದ್ದಾನೆ! ಹಾಗಾಗಿ ಇದು ಸಂಪೂರ್ಣವಾಯಿತು! ಇಲ್ಲಿ ಹಲವಾರು ಪುರಾಣದ ಕಥೆಗಳನ್ನು ಗೊಂದಲವಾಗಿಸುವಂತೆ ಉಲ್ಲೇಖಿಸಿ ಸಂದೇಹಗಳ ಸಂದೋಹವನ್ನೇ ಸೃಷ್ಟಿಸಿದ ಕಾರಣ ಇದು ಸಂದೇಹಸಂದೋಹಸಂದೇಶ!

.ಹಾರ್ಮೋನಿಯಂ ಹರಣವು (ಹಾ.)-ಅರ್ಥಾತ್ ವೆಂಕಟೇಶಹಗರಣವು-ಅಥವಾ ನಿಂಗನಿರ್ಯಾಣವು ಎಂಬ ಹಾರ್ಮೋನಿಯಮ್ಮನ್ನು ಹರಣ ಮಾಡಲು ಹೋದವನ ಹರಣವು ಹರಣವಾದ ಹ[]ರಣವು
ಇದೊಂದು ರಮಣೀಯವಾದ ಹಾಸ್ಯದ ಕಥೆ! ನಿಂಗ ಎಂಬ ವಾರಾನ್ನದ ಹುಡುಗ ಹಾರ್ಮೋನಿಯಮ್ಮನ್ನು ಕದಿಯಲು ಹೋಗಿ ಅವನ ಪ್ರಾಣವನ್ನೇ ಕಳೆದುಕೊಳ್ಳುವಂತಹ ದುರಂತಕಥೆ!. ಇದರಲ್ಲಿ ಕೂಡ ೫೦ ಭಾಮಿನಿ ಷಟ್ಪದಿಗಳಿವೆ. ಹಾಗೆಯೇ ಪ್ರಕ್ಷಿಪ್ತ ಪಾಠವಾಗಿ ಕೊನೆಯಲ್ಲಿ ಮೂರು ಪದ್ಯಗಳಿವೆ. ಈ ಕಾವ್ಯವು ಅಂತ್ಯದಲ್ಲಿ ವಿಷಾದಾಂತವಾಗಿದೆಯೆಂದು ಗು.ಸಂ.ಪಂ. ತಾವೇ ರಚಿಸಿ ಸುಖಾಂತವಾದ ಪ್ರಕ್ಷಿಪ್ತವನ್ನು ಸೇರಿಸಿದ್ದಾಗಿಯೂ ಬರೆಯುತ್ತಾರೆ! ಇದರಲ್ಲಿ ಬಹುತೇಕ ಎಲ್ಲ ಪದ್ಯಗಳೂ ಸೊಗಸಾದ ಅಲಂಕಾರಮಯವಾದ ಪದ್ಯಗಳೇ ಆಗಿವೆ. ಕವಿ ಅಲ್ಲಿ "ಪನ್ನೊಂದು ಪರಮಾಲಂಕಾರ"ಗಳನ್ನು ಪ್ರಯೋಗಿಸಿದ್ದಾಗಿ ಹೇಳುತ್ತಾರೆ. ಆ ಅಲಂಕಾರಗಳನ್ನು ಇಲ್ಲಿ ವಿವರಿಸಿದರೆ ಮುಂದೆ ಕಾವ್ಯವನ್ನು ಓದುವ ಆಸಕ್ತಿ ಬರಬಹುದು!
. ಸತಿಪತಿಸಮಾನಸ್ಥಾನಾಲಂಕಾರ- ಶಿವ ಎಂಬ ಶಬ್ದದಿಂದ ಶಿವೆ ಎಂದು ಹೇಗೆ ಪಾರ್ವತಿಗೆ ಹೆಸರು ಬರುತ್ತದೆಯೋ ಹಾಗೆಯೇ "ಗಿರಿಜೆ" ಎಂಬ ಪಾರ್ವತಿಯ ಹೆಸರಿನಿಂದ "ಗಿರಿಜ" ಎಂದು ಶಿವನ ಹೆಸರೂ ಸಿದ್ಧಿಸುತ್ತದೆ ಎಂಬುದೇ ಈ ಅಲಂಕಾರ. ಇದನ್ನು ಪಾಮರರು "ಅಮ್ಮಾವ್ರಗಂಡಾಲಂಕಾರ" ಎನ್ನುತ್ತಾರಂತೆ!
.ಟವರ್ಗಪ್ರಥಮಾಕ್ಷರದ್ವಿತ್ವಪಂಚದಶಾಲಂಕಾರ- ಟವರ್ಗದ ಪ್ರಥಮಾಕ್ಷರದ ದ್ವಿತ್ವ ಎಂದರೆ "ಟ್ಟ" ಎಂದಾಯಿತು. ಇದನ್ನು ಹದಿನೈದು ಬಾರಿ ಒಂದೇ ಪದ್ಯದಲ್ಲಿ ಬಳಸಿರುವುದೇ ಈ ಅಲಂಕಾರ "ಹುಟ್ಟಿದವಸುಳಿ ಕಟ್ಟಿ ಚಟ್ಟವ ಸುಟ್ಟರೂ ಛಟ್ಟಾಗದೆಂದವ....” ಎಂಬ ಪದ್ಯದಲ್ಲಿ ಇದನ್ನು ಗಮನಿಸಬಹುದು.
.ಸ್ತಸ್ಥಪ್ರಾಸಾಲಂಕಾರ- ಇದರಲ್ಲಿ ಸ್ತ ಮತ್ತು ಸ್ಥ ಗಳನ್ನು ಪ್ರಾಸಾಕ್ಷರವಾಗಿ ಬಳಸಿರುವುದು
. ಪರಪಂಕ್ತಿಪ್ರಾರಂಭಾಲಂಕಾರ- ಒಬ್ಬ ಕವಿಯ ಒಂದು ಪಂಕ್ತಿಯಿಂದ ಇನ್ನೊಬ್ಬ ಕವಿಯು ಪದ್ಯವನ್ನು ಪ್ರಾರಂಭಿಸುವುದು. ರಾಘವಾಂಕನ ನಡೆವರೆಡಹದೆ ಎಂಬ ಪದ್ಯದ ಪ್ರಾರಂಭದಿಂದ ಈ ಕವಿಯ ಹಾ.. ಕಾವ್ಯದಲ್ಲಿ "ನಡೆವರೆಡಹದೆ ಕುಳಿತು ಕೊಳೆವವರೆಡಹರೈ" ಎಂಬ ಪದ್ಯ ಪ್ರಾರಂಭವಾಗಿದೆ.
.ತ್ರಿತ್ರತ್ರಿತ್ರಿಪ್ರಾಸಾಲಂಕಾರ- ಇದು ಮೂರು ಪಾದಗಳಿಗೆ "ತ್ರ" ಅಕ್ಷರವನ್ನೂ ಮೂರು ಪಾದಗಳಿಗೆ "ತ್ರಿ" ಎಂಬ ಅಕ್ಷರವನ್ನೂ ಪ್ರಾಸವಾಗಿ ಬಳಸಿರುವುದು.
. ಮೌನಮಾರ್ತಾಂಡಮಹಾಲಂಕಾರ-ಕಥಾನಾಯಕಿ "ಯೆಂಕ"ಳ ತಾಯಿಯನ್ನು ಒಂದು ಪದ್ಯದಲ್ಲಿ ಮಾತ್ರ ಸ್ಮರಿಸಿ ಮುಂದೆ ಕಾವ್ಯದಲ್ಲಿ ಆಕೆಯ ವಿಷಯದಲ್ಲಿ ಮೌನವನ್ನು ಅವಲಂಬಿಸಿರುವ ಕಾರಣ ಈ ಅಲಂಕಾರ.
.ತವರ್ಗದ್ವಿತೀಯಾಕ್ಷರದ್ವಿತ್ವದಶಕಾಲಂಕಾರ- ತವರ್ಗದ್ವಿತೀಯಾಕ್ಷರ- ದಕಾರ. ದ್ವಿತ್ವ- "ದ್ದ" ಇದನ್ನು ಹತ್ತು ಬಾರಿ ಬಳಸಿದ ಕಾರಣ ಈ ಅಲಂಕಾರ-”ಮುದ್ದು ಮಗಳಿಗೆ ಕಲಿಸಬೇಕೆಂದೆದ್ದು ಪೇಟೆಯೊಳುದ್ದು ಪರಿಕಿಸಿ ಕದ್ದು ತಂದರು ಸದ್ದು ಹೆಚ್ಚಿನ ಹಾರಮೋನಿಯವ"ಎಂಬ ಪದ್ಯದಲ್ಲಿ ಗಮನಿಸಬಹುದು.
.ಏಕಜೀವದೇಹದ್ವಯನ್ಯಾಯಾಲಂಕಾರ- “ಮೈಯೆರಡು ತಾನುಸಿರೊಂದೊ" ಎಂಬಂತೆ ಗೊರಕೆ ಬಿಡುವುದು "ಏಕಜೀವ ದೇಹದ್ವಯನ್ಯಾಯ" ತನ್ನ್ಯಾಯವನ್ನು ಬಳಸಿದ ಅಲಂಕಾರವು ತನ್ನ್ಯಾಯಾಲಂಕಾರವು"
.ಊನಾಲಂಕಾರ- ಐವತ್ತು ಷಟ್ಪದಿಗಳನ್ನು ಮೀರುವುದಿಲ್ಲವೆನ್ನುವುದಕ್ಕಾಗಿ ಅದರಲ್ಲಿ ಒಂದು ಷಟ್ಪದಿಯನ್ನು ಊನ ಮಾಡಿಕೊಳ್ಳುವುದೇ ಊನಾಲಂಕಾರವು.
೧೦.ಶೂದ್ರಶ್ರೋತ್ರಿಯನ್ಯಾಯಾಲಂಕಾರ- ಅಶ್ಲೀಲವನ್ನು ಆಡಬಾರದು ಎಂದು ಬಹಿರಂಗದಲ್ಲಿ ಬೋಧಿಸುವ ಶ್ರೋತ್ರಿಯನು ಶೂದ್ರನೂ ಕೇಳಲಾರದೆ ಕಿವಿಮುಚ್ಚಿಕೊಳ್ಳುವಂತೆ ಅಶ್ಲೀಲವನ್ನು ಒಳಮನೆಯೊಳಾಡುವುದು ಶೂದ್ರಶ್ರೋತ್ರಿಯನ್ಯಾಯ. ಹಿಂದಿನಂತೆ- ತನ್ನ್ಯಾಯ>ತನ್ನ್ಯಾಯಾಲಂಕಾರ.
೧೧.ಸಂದೇಹಸಂದೋಹಾಲಂಕಾರ- ಹಿಂದಿನ ಸಂದೇಹಸಂದೋಹಸಂದೇಶದಂತೆ- ಸಂದೇಹಗಳ ಸಂದೋಹವನ್ನೇ ಇಡುವುದು ಈ ಅಲಂಕಾರ.
ಇವೆಲ್ಲವೂ ಕವಿಕಲ್ಪಿತವಾದ ಅಲಂಕಾರವಿಡಂಬನೆಗಳಾದರೆ ವಾಸ್ತವವಾಗಿ ಆಲಂಕಾರಿಕರು ಒಪ್ಪುವಂತೆ ಅಲ್ಲಲ್ಲಿ ತಕ್ಕ ರೂಪಕ-ಉಪಮೆ-ದೃಷ್ಟಾಂತಗಳು ಸಾಕಷ್ಟು ಬರುತ್ತವೆ. ಅದಕ್ಕಾಗಿ ಕೆಲವು ಉದಾಹರಣೆಗಳು- “ತಪ್ಪುಗಳಿಲಿಯ ಹುಲಿ ಮಾಡಿ" “ನಾನೆ ನಾನೆಂಬ ಬೋನು" “ಸಣ್ಣದರೊಳಗೆ ಸಿಲುಕಿದ ಬೇನೆ ಬೆನ್ನಿನ ಮುರಿಯ ಬಾಗಿದ ಗೂನು-ಜನ್ಮಾಂತರದ ಹೀನಸುಳಿ" “ಮೇವನರಸುವ ಕುರುಡುಕರುವಿನ ಗೋವಿನೋಪಾದಿಯಲಿ ಕಾಣದ ಕಾವಲನು ತಡಕಿದರು ಸಂಗೀತದ ಸಮುದ್ರದಲಿ" “ಕೀರಕಚ್ಚಿದ ಬಾಯ ಬೆಕ್ಕಿನ ಮೋರೆಗಂಡಶ್ವಾನ ತನ್ನಯ ತೋರ ಬಾಯನು ತೆರೆಯಲಾ ಸರ ಮೂರನುರೆ ಮೀರಿ ಹಾರುಮನಿಯಂ ತಂದೆ ಮಗಳುದಿರ್ ಏರು ಕೂಗಿನ ಕಿರಿಚುಗೊರಲಿನ ಸಾರಿಗಮಗಳ ಸಮರಕೋಲಾಹಲವನೇನೆಂಬೆ"
ಆದಿಶೇಷನ ಹಡೆಯ ಸಾಲಿನಲೈದನೆಯದರ ಪಕ್ಕದಲಿ ತಾ ಹಾದು ಕುಳಿತ ಫಣಾಪ್ರಪಂಚದಲಾರನೆಯದರೊಲು
ವೇದಮೂರುತಿ ವೇಂಕಟಾರ್ಯರದಾದ ಮಹಡಿಯಮನೆಯ ಬಲಭುಜ ತೇದು ನಿಂತಿತು ಸೌಧ ಗಗನಕೆ ನಿಮಿರಿ ತಲೆಯೆತ್ತಿ" “ಲಾಯದಾಳುಗಳಳೆದು ಹುರುಳಿಯ ಬೇಯಿಸುವ ವೇಳೆಯನು ಕುದುರೆ ನಿರೀಕ್ಷಿಸುವವೊಲು" “ತವಕವವನದ ನೋಡಲಾರದೆ ರವಿಯನಸ್ತಾಸುರ ಗಬಕ್ಕನೆ ಕವಳಿಸಿದ" ಎಂಬಂತಹ ಪದ್ಯಗಳ ಸಾಲುಗಳಲ್ಲಿ ತುಂಬ ಸ್ವೋಪಜ್ಞವಾದ ಕಲ್ಪನೆಯಿಂದ ಕೂಡಿದ ವಾಕ್ಯಗಳಿವೆ. ಅಲ್ಲದೇ ಸೊಗಸಾದ ಚಿತ್ರಣಗಳಿವೆ. ಲೋಕಸ್ವಭಾವವನ್ನು ಕಂಡ ಸೂಕ್ಷ್ಮದೃಷ್ಟಿಯಿದೆ. ಅದಲ್ಲದೇ ಈ ಚಿತ್ರಣಗಳು ಹಾಸ್ಯಕಾವ್ಯಕ್ಕೆ ಹೃದ್ಯವಾಗಿ ರಸಪೋಷಕವಾಗಿ ಕೋದಲ್ಪಟ್ಟಿವೆ!
. ಬೈರಿಗೇಂದ್ರಭಯನಾಕವು ಎಂಬ ಬೃಹದ್ಬೈರಿಗೇಶ್ವರ ಪುರಾಣವು-
ಈ ಕಾವ್ಯದ ಹೆಸರನ್ನು ಮಾತ್ರ ಉಲ್ಲೇಖಿಸಿದ್ದಾರೆಯಷ್ಟೇ ಅಲ್ಲದೇ ಮುಂದೆಲ್ಲೂ ಈ ಕಾವ್ಯದ ಪ್ರಸ್ತಾಪವೇ ಬರುವುದಿಲ್ಲ. ಅದಲ್ಲದೇ ಮಹಾಕವಿ ಪುರುಷಸರಸ್ವತಿಪ್ರಶಸ್ತಿ ಎಂಬ ಒಂದು ಭಾಗದಲ್ಲಿ ಪುರುಷಸರಸ್ವತಿಯ ಜಯಂತಿಯ ಕಾರ್ಯಕ್ರಮದ ಸಂಕ್ಷಿಪ್ತ ವರದಿಯನ್ನು ಕೊಡುತ್ತಾರೆ. ಅದನ್ನು "ಹಾಳೂರಿನ ಹಳದಿ ಹಾಳೆ"ಯ ಮೇಲೆ ಪ್ರಕಟಿಸಿದ್ದಾಗಿಯೂ ಹೇಳುತ್ತಾರೆ. ಅದಕ್ಕೇ "ಅಭಿನವ ಬೈರಿಗೇಂದ್ರ ಭಯಾನಕವು" ಎಂಬ ಹೆಸರನ್ನು ಕೊಡುತ್ತಾರೆ.
ಅಂದಿನ ಜಯಂತಿಯು ಐವತ್ತಾರೂ ಮುಕ್ಕಾಲು ಘಂಟೆಗಳ ಕಾಲ ಅವ್ಯಾಹತವಾಗಿ ಅವ್ಯವಚ್ಛಿನ್ನವಾಗಿ ಅಖಂಡವಾಗಿ ಅಸ್ಖಲಿತವಾಗಿ ಅನಂತರವಾಗಿ ಸಕಲ ವೈಭವ ವಿಜೃಂಭಣೆಗಳೊಡನೆ ಸಾಂಗವಾಗಿ ಜಯಪ್ರದವೆನಿಸಿ ಮುಕ್ತಾಯದೊಡನೆ ಕೊನೆಗೊಂಡಿತಂತೆ!
ಅಂದು ಶ್ರೀಯುತ ಅನಾಮಕರವರು ಹಸಿದವರಿಗೆ ಪಾನಕ ಪಣ್ಯಾರಗಳನ್ನೂ ನಿದ್ರೆಯಿಂದ ಭಾದಿತರಾದವರಿಗೆ ದಿಂಬು ಸುಪ್ಪತ್ತಿಗೆಗಳನ್ನೂ ಒದಗಿಸಿ ಪುಣ್ಯವನ್ನು ಗಳಿಸಿಕೊಂಡರಂತೆ. ಸಭೆಯು ಬರಖಾಸ್ತಾದಾಗ ಎದ್ದಲುಗಲಾರದವರಿಗೆ ಸ್ಟ್ರೆಚರುಗಳನ್ನು ಒದಗಿಸಿ ತಕ್ಕ ಸಿಬ್ಬಂದಿಯನ್ನೂ ಹೊಂದಿಸಿ ಶ್ರೀಮಾನ್ ಅನಾಮಧೇಯ ಅವರು ಮಾಡಿದ್ದ ಏರ್ಪಾಡು ಬಹುಸಮರ್ಪಕವಾಗಿತ್ತಂತೆ! ಈ ಮೂರು ಸಂಗತಿಗಳು ಪತ್ರಿಕೆಯ ವರದಿಯಲ್ಲಿ ಬಂದಿರಲಿಲ್ಲವಂತೆ!
ಆ ಬಳಿಕ ಕಾರ್ಯಕ್ರಮದ ವಿವರಣೆಗಳನ್ನು ವಿಸ್ತರಿಸುತ್ತಾರೆ. ಗುಪ್ತಸಂಪಾದಕಪಂಚಕದ(ಗು.ಸಂ.ಪಂ) ಪ್ರಥಮರ ಪ್ರಚಂಡವಾದ ಸುಪ್ರಾರಂಭದ ಭಾಷಣದ ಸಂಗ್ರಹ, ಗು.ಸಂ.ಪಂ.ದ ಪಂಚಮರ ಪರಮನವೀನ ಸ್ವಾಗತಗೀತೆ. ಗು.ಸಂ.ಪಂ.ದ ದ್ವಿತೀಯರ ಅದ್ವಿತೀಯಪ್ರಶಂಸಾಪದ್ಯಮಾಲಿಕೆ ಗು.ಸಂ.ಪಂ.ದ ಮಧ್ಯಮರ ಮಹಾಕ್ಷುದ್ರಾರ್ಥಶತಕಾರ್ಧದ ಪುರುಷಸರಸ್ವತಿಯ ಜಯಂತಿಯ ಶಾಸನಪದ್ಯವಲ್ಲರಿ ಇತ್ಯಾದಿಗಳೆಲ್ಲ ಇವೆ.
ದ್ವಿತೀಯರ ಪ್ರಶಂಸಾ ಪದ್ಯಗಳಲ್ಲಿ ಕೆಲವು-
ಪುರುಷಸರಸ್ವತಿಯನ್ನು ಪ್ರಶಂಸೆಗೆಯ್ಯುವ ಪದ್ಯಗಳಲ್ಲಿ ವಿವಿಧಚ್ಛಂದಸ್ಸುಗಳನ್ನು ಬಳಸಿದ್ದಾರೆ ಗು.ಸಂ.ಪಂ.ದ ದ್ವಿತೀಯರು. ಇದೊಂದು ಪ್ರತಿಪಾದದಲ್ಲೂ ಒಂದೇ ಅಕ್ಷರದ ಉಕ್ತೆ ಎಂಬ ವರ್ಗದ ನಾಗವರ್ಮ ಹೆಸರಿಡದ ವೃತ್ತವಂತೆ!
!
!
!
!
(ತಾತ್ಪರ್ಯ- ಪುರುಷಸರಸ್ವತಿ ಜಯಂತಿ ಬಗೆಗೆ ಕವಿ ತನ್ನ ಅಪರಿಮಿತವಾದ ಆನಂದವನ್ನು ಸೂಕ್ಷ್ಮವಾಗಿ ಸಂಕ್ಷೇಪವಾಗಿ ಹೀಗೆ ಸೂಚಿಸಿದ್ದಾನೆ!)
ಇನ್ನೊಂದು ಪದ್ಯ-
ಅದೇ ವರ್ಗದ ಶ್ರೀ ಎಂಬ ವೃತ್ತದಲ್ಲಿ
ನೀ
ನೇ
ನೀ
ನೈ
(ತಾತ್ಪರ್ಯ-ಪುರುಷಸರಸ್ವತಿಯು ಅಪ್ರತಿಮನಾದ ಕವಿಯೆಂಬುದು ಇಲ್ಲಿ ನಿರೂಪಿತವಾಗಿದೆ. ನೀನಗೆ ನೀನೇ ಸಾಟಿ ಎಂಬ ಮೂಲಕ ಅನನ್ವಯಾಲಂಕಾರವೂ ಇದೆ)
ಗು.ಸಂ.ಪಂ.ದ ಮಧ್ಯಮರ ಶಾಸನಪದ್ಯವಲ್ಲರಿಯ ಕೆಲವು ಪದ್ಯಗಳು-
ಸ್ವಸ್ತಿ ಶ್ರೀವರದಾಭಯ
ಹಸ್ತರ್ ಹರಿಯಜಪುರಾರಿಗಳ್ ದಯೆಗೆಯ್ಯಲ್
ಪುಸ್ತಕ ಗಗನಕ್ಕಾದಿ ಗ
ಭಸ್ತಿಯ ನೆರೆ ಪೊಗಳಿ ಪಾಡಿದಿನ್ಸ್ಕ್ರಿಪ್ಷನಿದಂ
(ಸ್ವಸ್ತಿ ಶ್ರೀವರದಾಭಯ ಹಸ್ತರ್ ಹರಿಯಜಪುರಾರಿಗಳ್ ದಯೆಗೆಯ್ಯಲ್ ಪುಸ್ತಕ ಗಗನಕ್ಕೆ ಆದಿ ಗಭಸ್ತಿಯ(ನ್ನು) ನೆರೆ ಪೊಗಳಿ ಪಾಡಿದ inscription ಇದಂ)
ಸ್ಟೋನ್ ಮೆಟಲಲ್ಲೀ ಶಾಸನ
ಪೇನಲ್ ಷೇಪಿನಲಿ ಕುಯ್ದು ಡಮ್ಮೈ ಪೇಪರ್
ಸ್ವಾನ್ಪೆನ್ನಿನ ಜೊತೆಯೊಳಿದ
ನ್ನಿನ್ಡಿಸ್ಟ್ರಕ್ಟಿಬಲು ಎಂದು ಸಪ್ಲೈ ಗೈದರ್||
(ಈ ಶಾಸನ stone metal ಅಲ್ಲ. Panel shape ಇನಲಿ ಕುಯ್ದ demmy paper. ಇದಂ swan pen ಇನ ಜೊತೆಯೊಳ್ indistructible ಉ ಎಂದು supply ಗೈದರ್)
ಕಳ್ಟು (cult)ಕಾವ್ಯದ ಮಸಿಯ ಕುಡಿಕೆಯ ಟಿಳ್ಟು (tilt) ಮಾಡುವ ಮೊದಲು ಹಾವಿನ
ಬೆಳ್ಟು (belt) ಹಾಕಿದ ಗಣಪನನು ಹಾಡುವುದು ನಮ್ಮವರ
ಫಾಳ್ಟು (fault) ಮೀರಿದರಿದನು ಸಿವಿಯರ್ ಜೋಳ್ಟು (sever jolt) ತಪ್ಪದು ಸತ್ಯ ಥಂಡರ್
ಬೋಳ್ಟು (thunder bolt) ಬಿದ್ದಂತೆಂದು ದೇರ್ಫೋ಼ರ್(therefore) ಗಣಪತಿಯ ನೆನೆವೆ||
ಡಸ್ಟಿನಲಿ(dust) ಗೋಲ್ಡ್ ಡಸ್ಟು (gold dust)ಮೌಂಟೆವರೆಸ್ಟು (Mount Everest)ಗಿರಿಗಳ ಗಡಣದಲಿ ಫಾ಼
ರೆಸ್ಟು (forest)ಬೀಸ್ಟು(beast)ಗಳಳೊಳಗೆ ಲಯನೆಂತಪ್ರತಿಮವಂತೆ (lion+ಎಂತು+ ಅಪ್ರತಿಮವು+ಅಂತೆ)
ವೇಸ್ಟು (waste)ಬರಿ ಮಾತೇಕೆಯೀ ಫೋ಼ರ್ ಮೋಸ್ಟು (foremost)ಪೊಯೆಟನು(poet) ನೆನೆಯೆ ತಾನೆ
ಕ್ಸಾಸ್ಟು (exhaust)ಕವಿಗಳ ಲಿಸ್ಟಿ(list)ನೊಳಗೊಬ್ಬಂಟಿ ನರವಾಣಿ(=ಪುರುಷಸರಸ್ವತಿ) ||
ಹೀಗೆ ೨೫ ಪದ್ಯಗಳು ಸಂಸ್ಕೃತ ಕನ್ನಡ ಇಂಗ್ಲಿಷ್ ಎಲ್ಲ ಭಾಷೆಗಳ ಶಬ್ದಗಳ ಮಿಶ್ರಣದೊಂದಿಗೆ ಬರುತ್ತವೆ. ಇಲ್ಲಿನ ಬಹುತೇಕ ಪದ್ಯಗಳಲ್ಲಿ ಇಂಗ್ಲಿಷ್ ಶಬ್ದಗಳನ್ನೇ ಪ್ರಾಸಾನುಪ್ರಾಸಕ್ಕಾಗಿ ಬಳಸಿಕೊಂಡಿರುವುದು ತುಂಬ ಸೊಗಸಾಗಿದೆ! ಅಷ್ಟೇ ಅಲ್ಲದೇ ರಚನೆಗೆ ತುಂಬ ಕಷ್ಟವಾಗಿಯೂ ಇದೆ ಎಂಬುದು ಸತ್ಯ! ಏಕೆಂದರೆ ಬಳಸಿದ ಛಂದಸ್ಸುಗಳು ಕನ್ನಡದ ಭಾಮಿನಿ ಷಟ್ಪದಿ ಕಂದಪದ್ಯಗಳು- ಅದರಲ್ಲಿ ಇಂಗ್ಲಿಷ್ ಪದವನ್ನು ಈ ಛಂದಸ್ಸುಗಳ ಗತಿಗೆ ಕಿಂಚಿತ್ತೂ ಲೋಪವಾಗದಂತೆ ಹಾಗೆ ಬಳಸಬೇಕು ಎಂದರೆ ಅವರಿಗೆ "ಬೈಲಿಂಗ್ಯುಅಲ್ ಭಾರತಿ/ಕನ್ನಡಾಂಗ್ಲೋಭಯ ಭಾಷಾಚಕ್ರವರ್ತಿ"ಎಂಬ ಬಿರುದುಗಳು ಸಾರ್ಥಕವೇ ಎನಿಸುತ್ತದೆ!
ಇದಾದ ಮೇಲೆ ಆ ಸಮ್ಮೇಳನದಲ್ಲಿ ನಡೆದ ಭಾಷಣಗಳ ಸಂಗ್ರಹವೆಲ್ಲ ಇದೆ. ಅದೆಷ್ಟು ಅಪ್ರಸ್ತುತವಾಗಿ ಭಾಷಣಕಾರರು ಮಾತನಾಡುತ್ತಾರೆ ಎಂಬುದನ್ನು ತೋರ್ಪಡಿಸುವಂತೆ ಈ ಭಾಷಣ ಮಾಲಿಕೆಯನ್ನು ಬರೆದಿದ್ದಾರೆ. ಅದರಲ್ಲಿ ಅಧ್ಯಕ್ಷರ ಭಾಷಣದ ಸಂಗ್ರಹವನ್ನು ನೋಡಿದರೆ ಸಾಕು. ಇದು ಪುರುಷಸರಸ್ವತಿಯ ಜಯಂತಿಯ ಕಾರ್ಯಕ್ರಮ.ಅಧ್ಯಕ್ಷರ ಭಾಷಣಗಳ ಶೀರ್ಷಿಕೆ- ಜಿರಳೆಗಳು ಜೇನುತುಪ್ಪ ಕುಡಿಯುವ ವಿಧಾನ! ಮೀಸೆ- ಮೀಶೆ-ಮೀಷೆ ಇವುಗಳ ಬೆಳವಣಿಗೆ!
ಅದಾದ ಮೇಲೆ ಕಾರ್ಯದರ್ಶಿಗಳ ಉಪಸಂಹಾರದ ಭಾಷಣ- ಅದಕ್ಕೆ ಟಿಪ್ಪಣಿ- "ಕಾರ್ಯದರ್ಶಿಗಳು ತಮ್ಮ ಸ್ವಂತ ವೆಚ್ಚದಿಂದ ತಮ್ಮ ಉಪಸಂಹಾರ ಭಾಷಣವನ್ನೂ ಕೃತಜ್ಞತೆಯ ಪಟ್ಟಿಯನ್ನೂ ಪ್ರತ್ಯೇಕವಾಗಿ ಅಚ್ಚು ಮಾಡಿಸಿ ಪುಕ್ಕಟೆಯಾಗಿ ಹಂಚಿರುವುದರಿಂದ ಅದನ್ನು ಇಲ್ಲಿ ಕೊಡುವ ಅವಶ್ಯಕತೆ ಕಂಡುಬರುವುದಿಲ್ಲ"
ಹೀಗೆ ಕೃತಿಯೊಂದರಲ್ಲಿ ಇಷ್ಟು ಹಾಸ್ಯದ ಹೂರಣವನ್ನು ಇರಿಸಿದ್ದಷ್ಟೇ ಅಲ್ಲದೇ ಕೊನೆಯಲ್ಲಿ ಒಂದು ಶುದ್ಧಾಶುದ್ಧಪತ್ರಿಕೆಯೂ ಇದೆ! ಅದರಲ್ಲಿ ಪಂಕ್ತಿಗಳನ್ನೂ ಪುಟಗಳನ್ನೂ ವಾಚಕರೇ ಹುಡುಕಿಕೊಳ್ಳಬೇಕು ಎಂದು ಸೂಚನೆ ಇದೆ. ಜೊತೆಗೆ ಅಶುದ್ಧಪದ ಮತ್ತು ಶುದ್ಧಪದಗಳನ್ನು ಕೊಟ್ಟಿದ್ದಾರೆ ಉದಾಹರಣೆಗೆ- ಸಮಸ್ತ-ಸೂರ್ಯಾಸ್ತ, ಅಂಬುಧಿ-೦ಬುಅಧಿ, ಕಬ್ಬು-ತಬ್ಬು, ಕರಿಯಣ್ಣ-ಕುರಿಯಣ್ಣ, ಕೈವಲ್ಯ-ವಾಲಖಿಲ್ಯ, ಕವಿಗಳು-ಕಪಿಗಳು, ಮಂಡೆ-ಮುಂಡೆ, ವಿಡಂಬ-ಮೊಡವೆ...ಇತ್ಯಾದಿ. ಇವುಗಳಲ್ಲಿ ಆಗಿನ ಕಾಲದಲ್ಲಿ ಮೊಳೆಯನ್ನು ಜೋಡಿಸಿ ಅಚ್ಚು ಮಾಡುವಾಗ ಆಗುತ್ತಿದ್ದ ಮುದ್ರಣದೋಷಗಳೂ ಇಂದಿನ ಕಾಲದಲ್ಲಿ ಟೈಪಿಂಗ್ ಮಾಡಿ ಆಗುವ ದೋಷಗಳೂ ನೆನಪಾಗಬಹುದು.
ಆ ಬಳಿಕ ಪು..ಮಿತ್ರ(ಪುರುಷಸರಸ್ವತಿಮಿತ್ರ)ನ ಅಪ****ಥಾವಲ್ಲರಿ (ಅಪ್ರಸಿದ್ಧಕವಿಕಥಾವಲ್ಲರಿ) ಎಂಬ ಮೊದಲನೆಯ ಮನುಸ್ಕೃಪ್ತುಗಳು. ಇದರಲ್ಲಿ ಆದ್ಯ ಆಲಂಕಾರಿಕ ಅಲ್ಲವಲ್ಲಭ, ಮಹಾಕವಿ ಕ್ಷುದ್ರಕ, ಮಹಮನೆ ಮುರುಕರು ಗುಠಾರಕುಲ ಪುಂಗವ ಘೇಂಡಾಕರ್ಣ ಘೇಂಡಾಕರ್ಣಕುಮಾರ, ನಯನಭಯಂಕರನಾಸಾಯುಧ, ಆಪ್ರಸಿದ್ಧ ಆಚಾರ್ಯ ಆರಂಭಶೂರ, ಪರಮಾನಂದಶಿಷ್ಯ ಸುರಚಾಪಮಿಶ್ರ, ಶ್ಮಶಾನಬ್ರಹ್ಮ ಹಾಲಾಹಲಯ್ಯ, ಹೃದಯಸಂಕೋಚಮತ್ತು ಮುಖೇಡಿ, ಎರಡನೆಯ ಶ್ಮಶಾನಕವಿ, ಅತ್ಯಪ್ರಸಿದ್ಧ ಅಜ್ಞಾತ ಪು..ಮಿತ್ರ ಎಂಬ ಅಪ್ರಸಿದ್ಧ ಕವಿಗಳ ಹಲವು ಕಥಾನಕಗಳಿವೆ. ಅದರಲ್ಲಿ ಕವಿಗಳ ಕುರಿತಾಗಿ ಇರುವ ದಂತಕಥೆಗಳ ವಿಡಂಬನೆಯಿದೆ. ಪ್ರತಿಯೊಬ್ಬ ಅಪ್ರಸಿದ್ಧಕವಿಗಳ ಬಗೆಗೆ ಕೂಡ ಕಥೆಗಳಿವೆ. ಅವರ ಸಾಧನೆಗಳು ಹೇಗೆ ಅವರು ಅಪ್ರಸಿದ್ಧರಾದರು ಎಂಬೆಲ್ಲ ಕಥಾನಕಗಳು.
ಅವುಗಳ ಕೊನೆಯಲ್ಲಿ ಒಂದೆರಡು ಪತ್ರವ್ಯವಹಾರ! ಇವುಗಳ ಸಂಪಾದಕರ ಜೊತೆ ನಿಜವಾದ ಸಂಪಾದಕರಾದ "ಜಿ.ಪಿ.ರಾಜರತ್ನಂ" ಅವರದ್ದು. ಗೋಬಿ ಮರುಭೂಮಿಯಿಂದ. ಇನ್ನೊಂದು "ನ್ಅನ್ ನ್ಅ - ಮ್ಉನ್ ನ್ಉಡ್ಇ". ಇಲ್ಲಿ ಕಾವ್ಯ ಸಂಪಾದಕರ ಜೊತೆ ಮೂಲ ಹಸ್ತಪ್ರತಿಗಳನ್ನು ಕಳುಹಿಸಿಕೊಟ್ಟವರ ಪತ್ರವ್ಯವಹಾರದ ವಿಡಂಬನೆಯನ್ನೂ ಕನ್ನಡ ಲಿಪಿಯನ್ನು ಸುಧಾರಿಸಬೇಕು ಎಂದು ಹೇಳಿದವರಿಗೆ ಉತ್ತರವಾಗಿ ಮಾಡಿದ ಅಣಕನ್ನೂ ಕಾಣಬಹುದು! ಇವುಗಳ ಜೊತೆ ಒಂದು ಕವಿ ಕಾವ್ಯ ಸೂಚಿ!ಕೊನೆಯಲ್ಲಿ ಅದಕ್ಕೊಂದು ತಪ್ಪು ಒಪ್ಪೋಲೆ- “ಇದೇ ಪುಸ್ತಕದ ೧೭೦ ನೇ ಪುಟವನ್ನು ನೋಡಿ" ಎಂದು ಅದರ ಕೆಳಗೆ ಅದಕ್ಕೆ ಶುದ್ಧಿ "೧೭೦ನ್ನು ೧೨೦ ಎಂದು ತಿದ್ದಿಕೊಳ್ಳಿ " ಎಂದು!
ಉಪಸಂಹಾರ-
ಕನ್ನಡದಲ್ಲಿ ಇಂತಹ ವಿಡಂಬವನೆಯ ಇಷ್ಟು ವಿಸ್ತಾರವಾದ ಕಾವ್ಯವೊಂದು ರಚನೆಯಾದದ್ದು ಇದೇ ಮೊದಲು ಅನಿಸುತ್ತದೆ. ಜಿ.ಪಿ ರಾಜರತ್ನಂ ಅವರ ಸಾಹಿತ್ಯದ ಅಧ್ಯಯನವೈಶಾಲ್ಯ ಹಾಗೂ ಹಾಸ್ಯಪ್ರಜ್ಞೆ ಎರಡೂ ಮೇಳಯಿಸಿದ ಕಾರಣವೇ ಇಂತಹ ಒಂದು ಕೃತಿ ರಚನೆಯಾಗಿದೆ. ಒಂದೆಡೆ ಗು.ಸಂ.ಪಂ ಅವರು ಇದನ್ನೆಲ್ಲ ಜಿ.ಪಿ ರಾಜರತ್ನಂ ಅವರು ಬರೆದದ್ದಲ್ಲ ಎಂದು ಸಾಧಿಸಲು ಅವರ "ರತ್ನನ ಪದಗಳು" "ಕಡಲೆ ಪುರಿ" ಮೊದಲಾದ ಕಾವ್ಯಗಳ ಕೆಲವು ಪದ್ಯಗಳನ್ನು ಉಲ್ಲೇಖಿಸಿ ಅಂತಹದ್ದನ್ನೆಲ್ಲ ಬರೆದವರಿಗೆ ಇಷ್ಟು ಉತ್ಕೃಷ್ಟವಾದ ಭಾಮಿನಿ ಷಟ್ಪದಿಗಳನ್ನೆಲ್ಲ ಬರೆಯಲು ಸಾಧ್ಯವಿದೆಯಾ ಎಂದು ಸಂಶಯದ ಮೂಲಕ ರಾಜರತ್ನಂ ಇದನ್ನು ಬರೆಯಲು ಸಾಧ್ಯವಿಲ್ಲ ಎಂದು ಸಾಧಿಸುತ್ತಾರೆ. ವಸ್ತುತಃ ಅದನ್ನೂ ಇವರೇ ಬರೆದಿದ್ದಾರಷ್ಟೇ! ಹೀಗಾಗಿ ಅವರದು ತನ್ನನ್ನೇ ತಾನು ಅಣಕು ಮಾಡಿಕೊಳ್ಳುವ ಮಟ್ಟಿಗೆ ಹಾಸ್ಯಪ್ರಜ್ಞೆ!
ಕೊನೆಯಲ್ಲಿ ಕಾವ್ಯದ ಉದ್ದೇಶವನ್ನು ಹೇಳುವ ಪುರುಷಸರಸ್ವತಿಯದೇ ಕೆಲವು ಸಾಲುಗಳಿಂದ ಲೇಖನವನ್ನು ಮುಗಿಸಬಹುದು.
ಸೋಗಿನಲಿ ಸಾಹಿತ್ಯಜೀವನದೀಗಳಿನ ವಿಕೃತಿಗಳನತಿಗಳ
ಲಾಗ ಹಾಕಿಸುವೀ ಕೃತಿಯು..... ಎಂದು ಸಾಹಿತ್ಯದ ಹೆಸರಿನಲ್ಲಿ ನಡೆಯುತ್ತಿರುವ ವಿಕೃತಿಗಳನ್ನು ವಿಡಂಬಿಸುವ ಕೆಲಸವನ್ನು ಈ ಕೃತಿಯು ಮಾಡುತ್ತದೆ ಎಂದು ಹೇಳಿದ್ದಾರೆ.
ಬಾಯ ನುಡಿಗಳ ಕೇಳಿ ಕಿವಿಯೊಳಗಾಯೆನುತ ಪರಿಣಮಿಸಿ ಹೋಹ ವಿ
ಡಾಯವಲ್ಲಿದು ಪಂಕ್ತಿ ಪಂಕ್ತಿಯ ಹಿಂದೆ ನಡುನಡುವೆ
ಕಾಯುತಿಹ ಕುಟುಕುಗಳ ನಗುವಿನುಪಾಯದುರು ಮೊಟಕುಗಳ ಸೋರುವ
ಗಾಯಕುಪ್ಪಿನ ಚಿಟಿಕೆಗಳ ತಿಳಿಯದೆಯೆ ಕಣ್ಮುಚ್ಚಿ||
ಬರಿಯ ಮಾತನ್ನು ಕೇಳಿ ಕಿವಿಯಲ್ಲಿ ಆಹಾ ಎಂದು ಪರಿಣಾಮವನ್ನು ಮಾಡಿ ಹೋಗುವ ಕೃತಿ ಇದಲ್ಲ! ಕಾಯುತ್ತಿರುವ ಕುಟುಕುಗಳಿನ, ನಗುವಿನ ಉಪಾಯದ ಮೊಟಕುಗಳ, ಸೋರುವ ಗಾಯಕೆ ಉಪ್ಪಿನ ಚಿಟಿಕೆಯಂತೆ ಈ ಕೃತಿ ಇದೆ!
ಕುರಿಗಳೋಪಾದಿಯಲಿ ಕಬ್ಬಿನ ಹಿರಿಗಣಲೆಯನು ಮೇದಕಟ ಮೆಲು
ಕಿರಿವುತಲ್ಪಸುಖಕ್ಕೆ ಸೋಲದೆ ಕಬ್ಬಿನೊಳು ರಸವ
ನೆರೆ ಸವಿವ ಗಜದಂತೆ ಚುಚ್ಚಿನ ತೆರನ ತಿಳಿದೆಚ್ಚರಲುಬೇಕೆಂ
ದರಿತವರ ಕೈಯೆಡೆಯ ಮಾಡಿದೆನೀ ವಿಡಂಬನವ
ಕಬ್ಬಿನ ಮೇಲಿನ ಹಿರಿಗಣಲೆಯನ್ನು ಕುರಿ ತಿಂದು ಮೆಲುಕು ಹಾಕುವಂತೆ ಅಲ್ಪಸುಖಕ್ಕೆ ಸೋಲದೆ ಕಬ್ಬಿನ ರಸವನ್ನೇ ಸವಿಯುವ ಆನೆಯಂತಿರಬೇಕು ಎಂದು ಸೂಚಿಸುತ್ತಾರೆ.
ಓದುವವರೋದುವರು ಸಹಿಸದೆ ಸೀದು ಸಿಡಿಮಿಡಿಗೊಂಡು ನಡುವಣ
ಬೀದಿಯಲಿ ಬೈದಿಡುವವರು ಬೈದಾಡುವರು ಬಿಡೆಲಾ.....
ಹಾಗೆಯೇ ಇದನ್ನು ಓದದೇ ಬೈದಾಡುವವರ ಬಗ್ಗೆ ದಿವ್ಯನಿರ್ಲಕ್ಷ್ಯವನ್ನು ತೋರಿಸುವಂತೆ ಹೀಗೆ ಹೇಳುತ್ತಾರೆ. ಕವಿ ಕಾವ್ಯವನ್ನು ಬರೆಯುತ್ತಾನಷ್ಟೆ1ಅದನ್ನು ಓದುವ ಜನರು ಓದಿ ಆಸ್ವಾದಿಸುತ್ತಾರೆ! ಬಯ್ಯುವವರು ಬಯ್ಯುತ್ತಾರೆ! ಅದರಿಂದ ಕವಿಗೇನೂ ತೊಂದರೆ ಇಲ್ಲವಲ್ಲ! ಕುಮಾರವ್ಯಾಸನೂ ಹೇಳಿದ್ದಾನಷ್ಟೆ -"ಚೋರ ನಿಂದಿಸಿ ಶಶಿಯ ಬೈದಡೆ, ಕ್ಷೀರವನು ಕ್ಷಯರೋಗಿ ಹಳಿದರೆ, ವಾರಣಾಸಿಯ ಹೆಳವ ನಿಂದಿಸಿ ನಕ್ಕರೇನಹುದು!”

ಶುಕ್ರವಾರ, ಡಿಸೆಂಬರ್ 29, 2017

ಕುವೆಂಪು ಅವರ ಜನ್ಮದಿನಕ್ಕೊಂದು ಪದ್ಯ-


ವ್ಯೋಮವಿಸ್ತೀರ್ಣರಮಣೀಯಸ
ಚ್ಛಾಯೆಯಾ
ಗಹನಕಾಂತಾರಗಹ್ವರಪರ್ವತಶ್ರೇಣಿ
ಮೈದುಂಬಿ ನಿಂತಿರ್ಪ ರುಂದ್ರಸಹ್ಯಾದ್ರಿಯೊಳ್
ಮಲರಿರ್ಪ ಮಲರಾಗಿ ಮೇಲ್ಮೆಯಂ ಪಡೆದಿರ್ಪ
ಕಬ್ಬಿಗರ್! ಕಬ್ಬದೀ ಬನದ ಹೆಬ್ಬುಲಿಯವೋಲಂತೆ
ಪೆರರಾರ್ಗಮಿಲ್ಲಿಗೈತರ್ಪ ದರ್ಪಕೆ ನಿಂತ
ಕಠಿನಕುಲಿಶಕ್ರಕಚವಿಕಟಗತಿಯಿಂ
ಪಂಥಮಾದಿರಿ ನೀವೆ! ಅಂತಲ್ತು! ನ್ಯಗ್ರೋಧ
ಪಾದಪವದೊಂದು ಬಿಳಲುಗಳಿಂದ ಮೆಯ್ ಚಾಚಿ
ನೆರಳಿತ್ತು ಸಕಲರ್ಗೆ ಗಂಭೀರಚರ್ಯೆಯಿಂ
ಆಶ್ಚರ್ಯದಾಕೃತಿಯಿನಂತೆ ಸರ್ವಂಕಷತೆ-
ಯೊಪ್ಪಿರಲ್ ತಿಳಿದರಾರಳವನೀ ಆಲದಾ!
ಕಿರಿದಾನುಮಿಳೆಯಿಂದ ಮೊಳೆಯುತ್ತ ಬೆಳೆಯುತ್ತ
ಬರ್ದುಂಕಲೆಂದಾಶಿಸಿಹ ಸಸ್ಯರಾಜಿಗಂ
ನೆರಳೊಳಗೆ ಬಾಳಿತ್ತು, ಬಾಳಾಗಿ, ಮೀರಿಸ-
ಲ್ಕಾಗದಂದದೆ ಬಳೆದುದಲ್ತೆ! ನೀಮಂತೆ!
ಓ ಧೀರ ಓ ವೀರ ಓ ಕಾವ್ಯಸಾರರೇ
ಓ ಕಬ್ಬಿಗರ ಕುಲದ ಕಾಜಾಣ ಜಾಣರೇ
ಓ ದಿವ್ಯಚೇತನದ ಚಿನ್ಮಹಾಮೂರ್ತಿಗಳೆ
ಓ ಕುವೆಂಪುವೆ ಇಂಪಿನುಲಿಯ ಕೋಗಿಲೆಯೆ
ನಿಮ್ಮ ಜನ್ಮದ ದಿನದೊಳಿಂತು ನಿಮ್ಮಯ ಸ್ತುತಿಯ
ಗೈದಿಹೆನ್ ಮೇಣ್ ವಂದಿಸಿಹೆನಿಂತು ಕೇಳಿಂ
ಕಾವ್ಯಪಥದೊಳ್ ಸಾಗುವಾನಂದವುಣ್ಮಲ್ಕೆ
ಪೊಣ್ಮುಗುಂ ರಸದ ರೋಮಾಂಚನವೆ ನಿಮ್ಮ ಕೃತಿಯಿಂದ
ಅವತರಿಸಿಮೀ ವಾಣಿಯಾಶ್ರಯದೊಳಿನ್ನೊರ್ಮ್ಮೆ
ಮಲೆನಾಡಿನಿಂಚರದ ಮಿಂಚ ತೋರಲ್ಕೆ!

೨೯-೧೨-೨೦೧೬

ಶುಕ್ರವಾರ, ಮೇ 5, 2017

ಸಹೃದಯಕಾಲ-೨೪ ಅವಧಾನ

ಅವಧಾನ  ಒಂದು ಅದ್ಭುತಕಲೆ ಎಂಬ ಲೇಖನವನ್ನು ಹಿಂದೆ ೨೦೧೧ರಲ್ಲಿ ಬರೆದಿದ್ದೆ. ಅಂದು ನನ್ನ ಬುದ್ಧಿಗೆ ಅರ್ಥವಾದಂತೆ ಅದನ್ನು ಬರೆದಿದ್ದೆ. ಅದರಲ್ಲಿ ಹಲವಾರು ಮಾಹಿತಿಗಳು- ಸ್ವಕೃತಪದ್ಯಗಳು ಅಪರಿಪೂರ್ಣವಾಗಿಯೂ ದೋಷಪೂರ್ಣವಾಗಿಯೂ ಇದ್ದವೆಂಬುದು ಆಗಳೇ ಅರಿವಿಗೆ ಬಂದಿದ್ದರೂ ಅವನ್ನು ತಿದ್ದುವಷ್ಟು ಅರಿವು ನನಗೇ ಇರಲಿಲ್ಲ. ಇಂದು ಕೂಡ ಅದನ್ನು ತಿದ್ದದೇ ಹೊಸದಾಗಿಯೇ ಬರೆಯುತ್ತಿರುವುದಕ್ಕೂ ಕಾರಣವೆಂದರೆ- ಆಗಿನ ನನ್ನ ಬರವಣಿಗೆಯೂ ಹಾಗೆಯೇ ಇರಲಿ, ತುಲನಾತ್ಮಕವಾಗಿ ಪರಿಶೀಲಿಸುವವರಿಗೆ ಅವಕಾಶವಾಗಲಿ ಎಂದಷ್ಟೆ!
"ಕನ್ನಡದಲ್ಲಿ ಅವಧಾನ ಕಲೆ" ಎಂಬ ಶತಾವಧಾನಿ ಡಾ।। ಆರ್ ಗಣೇಶ್ ಅವರ ಪುಸ್ತಕದಲ್ಲಿ ಕೂಲಂಕಷವಾಗಿ ಅವಧಾನಕಲೆಯ ಇತಿಹಾಸ ಸ್ವರೂಪ ಆಯೋಜನೆ ನಿರ್ವಹಣೆ ಮೊದಲಾದ ಪೂರಕವಾದ ಹಲವಾರು ಮಾಹಿತಿಗಳು ಬರೆಯಲ್ಪಟ್ಟಿವೆ. ಒಬ್ಬ ಕೃತಪರಿಶ್ರಮನಾದ ಪ್ರತಿಭಾನ್ವಿತ ಕವಿಯು ಆ ಕೃತಿಯನ್ನು ಅಧ್ಯಯನ ಮಾಡುವ ಮೂಲಕ ಅವಧಾನ ಕಲೆಯನ್ನು ಪ್ರವೇಶಿಸುವುದು ಸಾಧ್ಯ ಎಂಬುದಂತೂ ನಿಜ. ದಿಟವೇ! ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಬಹುತೇಕ ಜನರಿಗೆ ಪರಿಚಿತವೇ ಆಗಿರುವ ಕಾರಣ, ಕನ್ನಡದಲ್ಲಿ ಇಂದು ಇದಂಪ್ರಥಮವೆಂಬಂತೆ ಅವಧಾನದ ಕುರಿತು ಹೇಳಬೇಕಾದ ಅವಶ್ಯಕತೆ ಇಲ್ಲ. ಆದರೆ ಈ ಲೇಖನವಾದರೂ ಅವಧಾನದ ಪರಿಚಯವನ್ನು ಕೊಡುವ ಜೊತೆಗೆ ಅವಧಾನವನ್ನು ಆಸ್ವಾದಿಸಲು ಬೇಕಾದ ಪೂರ್ವಸಿದ್ಧತೆಯನ್ನೂ ಕೊಡುತ್ತದೆ.  ಈ ಪರಿಚಯವಿಲ್ಲದಿದ್ದರೂ ಕೂಡ  ಅವಧಾನವನ್ನು ಆಸ್ವಾದಿಸಬಹುದು. ಆದರೆ ಈ ಪರಿಚಯ ಸೂಕ್ಷ್ಮವಿವರಗಳನ್ನು ಆಸ್ವಾದಿಸಲು ಅನುಕೂಲವಾಗುವುದು. 
ಅವಧಾನದ ಪರಿಭಾಷೆಯಲ್ಲಿ ಅವಧಾನಿ ಎಂದರೆ- ಅವಧಾನವನ್ನು ಮಾಡುವವನು- ಏಕಾಗ್ರತೆಯಿಂದ ಯಾವುದೇ ಲೇಖನದ ಸಲಕರಣೆಗಳ ಸಹಾಯವಿಲ್ಲದೇ ಪ್ರಶ್ನೆಗಳಿಗೆ ಸೂಕ್ತವಾದ ಉತ್ತರಗಳನ್ನು ಕೊಡುತ್ತಾ ಸಮಸ್ಯೆಗಳನ್ನು ಬಗೆಹರಿಸುತ್ತಾ ಹಲವು ಅಂಗಗಳನ್ನು ಏಕಕಾಲದಲ್ಲಿ ನಿರ್ವಹಿಸಬಲ್ಲವನು
ಪೃಚ್ಛಕ ಎಂದರೆ- ಪ್ರಶ್ನೆಗಳನ್ನು ಕೇಳುವವನು.ಅವಧಾನದಲ್ಲಿ ಚಿತ್ರ-ಗೀತ-ನೃತ್ಯ-ಸಾಹಿತ್ಯ-ಯಕ್ಷಗಾನ-ಗಣಿತ  ಇತ್ಯಾದಿ ಹಲವು ವಿಧಗಳು ಪ್ರಚಲಿತವಾಗಿವೆ.  ಇಲ್ಲಿ ಮುಖ್ಯವಾಗಿ ಸಾಹಿತ್ಯಾವಧಾನವನ್ನು ಕೇಂದ್ರೀಕರಿಸಿ ವಿಸ್ತರಿಸುವೆ. 
ಪೃಚ್ಛಕರ ಸಂಖ್ಯೆಗನುಗುಣವಾಗಿ ಅವಧಾನ ಅಷ್ಟಾವಧಾನ, ಗುಣಿತಾವಧಾನ, ದಶಾವಧಾನ, ಶತಾವಧಾನ, ಸಹಸ್ರಾವಧಾನ ಎಂದೆಲ್ಲ ವಿಧಗಳಿವೆಯಾದರೂ ಅವೆಲ್ಲವುಗಳ ಮೂಲಮಾತೃಕೆಯಾದ ಅಷ್ಟಾವಧಾನವೊಂದನ್ನು ತಿಳಿದುಕೊಂಡರೆ ಉಳಿದವುಗಳನ್ನೂ  ಕಲ್ಪಿಸಿಕೊಳ್ಳಬಹುದು. 
ಅಷ್ಟಾವಧಾನವೆಂದರೆ ಎಂಟು ಜನ ಪೃಚ್ಛಕರಿರುತ್ತಾರೆ. ಅದರಲ್ಲಿ ಎಂಟು ವಿಭಾಗಗಳು ನಿರ್ಧರಿಸಲ್ಪಟ್ಟಿರುತ್ತವೆ. ಆ ವಿಭಾಗಗಳಲ್ಲಿ ಕೆಲವನ್ನು ಸಾಮಾನ್ಯವಾಗಿ ಎಲ್ಲ ಅವಧಾನಗಳಲ್ಲಿ ಕೂಡ ಕಾಣಬಹುದು.  ಇನ್ನು ಕೆಲವನ್ನು ಅವಧಾನಿಗಳು ತಮ್ಮ ತಮ್ಮ ಶಕ್ತಿಗೆ ತಕ್ಕಂತೆ ಇರಿಸಿಕೊಳ್ಳುವುದು. ಉದಾಹರಣೆಗೆ ಚಿತ್ರಕಾವ್ಯವಿಭಾಗವು ಬಹುವ್ಯುತ್ಪತ್ತ್ಯಪೇಕ್ಷಕವಾದ ಕಾರಣ ಅದನ್ನು ಎಲ್ಲರೂ ನಿರ್ವಹಿಸುವುದಿಲ್ಲ. ತೆಲುಗಿನಲ್ಲಿ ಚಿತ್ರಕಾವ್ಯವನ್ನು ಅವಧಾನದಲ್ಲಿ ನಿರ್ವಹಿಸಲು ಸಾಧ್ಯವೇ ಇಲ್ಲವೆಂದೂ ಹೇಳಿದ್ದಾರೆ. ಹಾಗೆಯೇ ಧಾರಣಾಪ್ರಧಾನವಾದ ವ್ಯಸ್ತಾಕ್ಷರಿ, ಧಾರಣಾಶೂಭಯಪ್ರಧಾನವಾದ ಉದ್ದಿಷ್ಟಾಕ್ಷರಿ ಇತ್ಯಾದಿಗಳನ್ನು ಕೂಡ ಎಲ್ಲರೂ ನಿರ್ವಹಿಸುವುದಿಲ್ಲ. 
ಅವಧಾನಾಂಗಗಳು-
ಅವಧಾನವೊಂದರಲ್ಲಿ ನಾಲ್ಕು ಆವರ್ತಗಳು ಪೂರಣವೆಂದೂ ಒಂದು ಆವರ್ತ ಧಾರಣೆಯೆಂದೂ ಇರುತ್ತದೆ. ಸಾಮಾನ್ಯವಾಗಿ ಎಲ್ಲ ಛಂದಸ್ಸುಗಳೂ ನಾಲ್ಕು ಪಾದದವುಗಳಾಗಿರುವ ಕಾರಣ ಒಂದೊಂದು ಆವರ್ತದಲ್ಲಿ ಒಂದೊಂದು ಪಾದವನ್ನು ಪೂರಯಿಸುವುದು ಪೂರಣದ ಆವರ್ತಗಳಲ್ಲಿ ಆದರೆ, ಧಾರಣೆಯ ಆವರ್ತದಲ್ಲಿ ಮೊದಲಿನಿಂದ ಹೇಳಿದ  ಧಾರಣಾಪ್ರಧಾನವಾದ ಅಂಗಗಳನ್ನು ಮತ್ತು ಪದ್ಯಗಳನ್ನು ಮತ್ತೆ ನೆನಪಿನಿಂದ ಹೇಳಿ ಅರ್ಥವನ್ನು ವಿವರಿಸುವುದು. ಪ್ರತಿ ಸುತ್ತಿಗೆ ಒಂದರಂತೆ ಹೇಳುವ ಆಶುಕವಿತೆಗೆ ಧಾರಣೆಯಿಂದ ಹೇಳುವುದು ಇರುವುದಿಲ್ಲ. ಪ್ರತಿ ಆವರ್ತದಲ್ಲೂ ಒಂದೊಂದು ಪಾದವನ್ನು ಹೇಳುವ ನಿಷೇಧ ಸಮಸ್ಯೆ ದತ್ತಪದಿ ಚಿತ್ರಕವಿತೆ ಮೊದಲಾದವುಗಳನ್ನು ಧಾರಣೆಯಿಂದ ಹೇಳಿ ಅರ್ಥವನ್ನು ವಿವರಿಸುವುದು ಈ ಆವರ್ತದಲ್ಲಿ ನಡೆಯುತ್ತದೆ.  ಹಾಗಾಗಿ ಅವಧಾನಿಯು ಬರವಣಿಗೆಯ ಸಾಮಗ್ರಿಗಳನ್ನು ಬಳಸದೇ ಇವೆಲ್ಲವನ್ನೂ ಮನಸ್ಸಿನಲ್ಲೇ ನಿರ್ವಹಿಸಬೇಕು ಎಂಬುದಂತೂ ಸುವೇದ್ಯ!
೧. ನಿಷೇಧಾಕ್ಷರಿ- 
ಪೃಚ್ಛಕರು ವಸ್ತು ಮತ್ತು ಛಂದಸ್ಸನ್ನು ಕೊಟ್ಟು ಅದರ ಬಗ್ಗೆ ಪದ್ಯ ರಚಿಸಲು ಹೇಳುತ್ತಾರೆ. ಅವರು   ಅವಧಾನಿಯು ಪದ್ಯ ರಚಿಸುವಾಗ ಒಂದೊಂದು ಅಕ್ಷರವನ್ನೂ ಊಹಿಸಿ ನಿಷೇಧಿಸುತ್ತಾರೆ. 
ಉದಾಹರಣೆಗೆ- ಗಣಪತಿಯ ಸ್ತುತಿ. ಮೊದಲಿಗೆ ಅವಧಾನಿ "ಗ" ಎಂದರೆ ಪೃಚ್ಛಕ-ಗಣಪತಿ ಎಂದೇನಾದರೂ ಮಾಡಬಹುದು ಎಂದು "ಣ"ಕಾರವನ್ನು ನಿಷೇಧಿಸುತ್ತಾರೆ. ಆಗ ಅವಧಾನಿಯು "ಜ" ಎಂದು ಹೇಳುತ್ತಾನೆ. ಪೃಚ್ಛಕ-"ಗಜಮುಖ" ಎಂದು ಹೇಳಬಹುದು ಎಂದು "ಮ"ಕಾರವನ್ನು ನಿಷೇಧಿಸುತ್ತಾರೆ. ಅವಧಾನಿಯು "ವ" ಎಂದು ಹೇಳುತ್ತಾನೆ. ಪೃಚ್ಛಕ-"ಗಜವದನ" ಎಂದು ಹೇಳಬಹುದು ಎಂದು "ದ"ಕಾರವನ್ನು ನಿಷೇಧಿಸುತ್ತಾರೆ. ಒಳ್ಳೆಯ ಶಬ್ದಸಂಪತ್ತಿಯಿಲ್ಲದಿದ್ದರೆ ಇಲ್ಲಿಗೆ ಅವಧಾನಿಯ ಕಥೆ ಮುಗಿದಂತೆಯೇ! ತೊಡಕಿನಲ್ಲಿ ಸಿಕ್ಕಿಕೊಂಡು ಒದ್ದಾಡುತ್ತಾನೆ! ಆದರೆ "ವದನ" ಎಂಬಂತೆ ಸಂಸ್ಕೃತದಲ್ಲಿ ಮುಖ ಎಂಬ ಅರ್ಥದಲ್ಲಿ "ವಕ್ತ್ರ" ಎಂಬ ಶಬ್ದವಿದೆ. ಹಾಗೆ- "ಗಜವಕ್ತ್ರ" ಎಂಬಂತೆ ಪದವನ್ನು ಪೂರಯಿಸಿ ಮುಂದುವರೆಯಬೇಕು. ಅಥವಾ ಪೃಚ್ಛಕರು ಹೆಚ್ಚು ವ್ಯುತ್ಪನ್ನರಾಗಿದ್ದು ಅವಧಾನಿಯು "ವ"ಕಾರವನ್ನು ಹೇಳಿದಾಗ "ಕ"ಕಾರವನ್ನೋ "ತ"ಕಾರವನ್ನೋ ನಿಷೇಧಿಸಿದರೆ ಅವಧಾನಿಯು ಬೇರೆ ಮಾರ್ಗವನ್ನೇ ಹಿಡಿಯಬೇಕಾಗುತ್ತದೆ.
ಇಲ್ಲಿನ ಕ್ಲೇಶ ಸುವೇದ್ಯ! ಪ್ರತ್ಯಕ್ಷರದಲ್ಲೂ ಯೋಚನೆ ಕವಲೊಡೆದು ಸಾಗಬೇಕು! ಪದ್ಯದಲ್ಲಿ ಪೃಚ್ಛಕರಿತ್ತ ವಸ್ತುವಿನ ವಿಷಯ ಬರಬೇಕು!
೨. ಸಮಸ್ಯಾಪೂರಣ-
ಸಮಸ್ಯಾಪೂರಣವೆಂದರೆ ಪದ್ಯದ ಕೊನೆಯ ಪಾದವೊಂದನ್ನು ಪೃಚ್ಛಕರು ಕೊಡುತ್ತಾರೆ. ಅದನ್ನು ಅವಧಾನಿಯು ಉಳಿದ ಮೂರು ಸಾಲುಗಳನ್ನು ಹೇಳಿ ಸಾರ್ಥಕವಾದ ಪದ್ಯ ಮಾಡಬೇಕು. ಪೃಚ್ಛಕರಿತ್ತ ಪಾದ ನಿರರ್ಥಕವೋ ಅಶ್ಲೀಲಾರ್ಥಕವೋ ಅಥವಾ ಇನ್ನಾವುದೋ ರೀತಿಯಲ್ಲಿರಬಹುದು. ಉದಾಹರಣೆಗೆ- ಶತಾವಧಾನಿ ಗಣೇಶರಿಗೆ ಆಂಧ್ರಸಾರಸ್ವತವಿಜ್ಞಾನಸಂಘದವರು ಆಯೋಜಿಸಿದ್ದ ೫೦ನೆಯ ವರ್ಷದ ಅವಧಾನದಲ್ಲಿ (೨೨ಜನವರಿ ೨೦೧೭) ನಾನು ಕೊಟ್ಟ ಸಮಸ್ಯೆ- "ಕುರಿಯುಂ ಸಿಂಗದಿನಂಜಲಿಲ್ಲಮಾಗಳ್"-  ಕುರಿ ಸಿಂಹಕ್ಕೆ ಆಗ ಹೆದರಲಿಲ್ಲ ಎಂದರ್ಥ! ಇದು ಔಪಚ್ಛಂದಸಿಕ ಎಂಬ ಅರ್ಧಸಮವೃತ್ತದಲ್ಲಿದೆ.  ಕುರಿ ಸಿಂಹಕ್ಕೆ ಹೆದರದಿರಲು ಸಾಧ್ಯವಿಲ್ಲ. ಅದೇ ಇಲ್ಲಿರುವ ತೊಡಕು.  ಅದಕ್ಕೆ ನನ್ನ ಪರಿಹಾರ
"ಕಿರುಗಂಬಕೆ ಪಗ್ಗಗಟ್ಟಿರಲ್ಕಂ
ತಿರೆ ವ್ಯಾಯಾಮಿಕಿಯೊಳ್ ಪ್ರದರ್ಶನಕ್ಕಂ
ಚರಿಸುತ್ತದನೇರ್ದು ಶಿಕ್ಷಿತಾತ್ಮಂ
ಕುರಿಯುಂ ಸಿಂಗದಿನಂಜಲಿಲ್ಲಮಾಗಳ್"
ತಾತ್ಪರ್ಯ-ಕಿರಿದಾದ ಕಂಬಕ್ಕೆ ಮೇಲೆ ಹಗ್ಗವನ್ನು ಕಟ್ಟಿ ಸರ್ಕಸ್ ಅಲ್ಲಿ ಪ್ರದರ್ಶನ ಮಾಡುವಾಗ ಅದನ್ನು ಏರಿ ನಡೆಯುತ್ತಿದ್ದ ಶಿಕ್ಷಣವನ್ನು ಹೊಂದಿದ ಕುರಿ ಸಿಂಹಕ್ಕೆ ಹೆದರಲಿಲ್ಲ. ಎಂದು ಪರಿಹಾರ.
ಶತಾವಧಾನಿಗಳು-  ಮೇಷಾತ್ಸಿಂಹಃ ಪಲಾಯತೇ ಎಂಬ ಪ್ರಸಿದ್ಧವಾದ ಸಂಸ್ಕೃತಸಮಸ್ಯಾಪೂರಣದ ಮಾದರಿಯಲ್ಲಿಯೇ ಅಗ್ನಿಗೆ ವಾಹನವಾದ ಕಾರಣ ಸಿಂಹಕ್ಕೆ ಮೇಷವು ಅಂಜಲಿಲ್ಲ ೆಂದು ಪೂರಣ ಮಾಡಿದರು.
ಹೀಗೆ ಸಮಸ್ಯಾ ಪೂರಣಕ್ಕೆ ಹಲವಾರು ಆಯಾಮಗಳಿರುತ್ತವೆ. ಪೃಚ್ಛಕರು ಕೊಡುವ ಪಾದದ ಮೇಲೆ ಪರಿಹಾರ ಕ್ರಮದ ಮೇಲೆ ಇವುಗಳ ಸ್ವಾರಸ್ಯ ಗೊತ್ತಾಗುತ್ತದೆ.
೩. ದತ್ತಪದಿ-
ದತ್ತಪದಿಯಲ್ಲಿ ಪೃಚ್ಛಕರು ವಸ್ತು ಛಂದಸ್ಸು ಹಾಗೂ ನಾಲ್ಕು ಪದಗಳನ್ನು ಕೊಡುತ್ತಾರೆ. ಆ ನಾಲ್ಕು ಪದಗಳು ವಸ್ತುವಿಗೆ ಹೊಂದಿಕೆ ಆಗುವಂತೆ ಇರುವುದಿಲ್ಲ. ಅಲ್ಲದೇ ಯಾವುದೋ ಅನ್ಯಭಾಷೆಯ ಪದವಾಗಿರಬಹುದು. ವಿಪರೀತಾರ್ಥವನ್ನು ಹೊಂದಿರಬಹುದು. ಅಥವಾ ಛಂದಸ್ಸಿನಲ್ಲಿ ನಿಶ್ಚಿತವಾದ ಸ್ಥಾನದಲ್ಲಿಯೇ ಬರುವ ಇನ್ನೇನೋ ತೊಡಕನ್ನು ಹೊಂದಿರಬಹುದು.  ಉದಾಹರಣೆಗೆ-  "ಕಟ್" "ಬಟ್" "ಗಟ್" "ನಟ್" ಎಂಬ ನಾಲ್ಕು ಆಂಗ್ಲಶಬ್ದಗಳನ್ನು ಬಳಸಿ ದ್ರೌಪದಿ ವಸ್ತ್ರಾಪಹರಣದ ಸಂದರ್ಭದಲ್ಲಿ ಮಾಡಿದ ಶ್ರೀಕೃಷ್ಣಸ್ತುತಿ ಮಾಡಬೇಕೆಂದು ನನ್ನ ಮೊದಲ ಅವಧಾನದಲ್ಲಿ ಶ್ರೀಧರ ಸಾಲಿಗ್ರಾಮ ಅವರು ಪ್ರಶ್ನೆಯನ್ನಿತ್ತಿದ್ದರು. ಅಂದು ಚೌಪದಿಯಲ್ಲಿ ನಾನು ಮಾಡಿದ ಪರಿಹಾರ- (ಕೆಳಗೆ ಗೆರೆ ಎಳೆದು ದತ್ತಪದಗಳನ್ನು ಸೂಚಿಸಿದೆ)
ಕಟ್ಟಿರ್ಪರಿವರಕ್ಷಿ ಪಾಶದಿಂ ನೀನೊಡಂ-
ಬಟ್ಟು ಬಾರದೆ ಪೋದೆಯೇನೊ ಕೃಷ್ಣಾ!
ಗಟ್ಟಿಗರ್ ಪಾಂಡವರ್ ಸೋಲ್ತಿರ್ಪರಿಂತಿಲ್ಲಿ
ನಟ್ಟ ನಡು ನೀರಾಯ್ತೆ ಸಭೆಯದಿಂದು।।
(ತಾತ್ಪರ್ಯ- ಇವರೆಲ್ಲ ತಮ್ಮ ಕಣ್ಣೋಟವೆಂಬ ಪಾಶದಿಂದಲೇ ನನ್ನನ್ನು ಕಟ್ಟಿಹಾಕಿದ್ದಾರೆ. ನೀನು ಒಡಂಬಟ್ಟು ಬಾರದೇ ಹೋದೆಯಾ ಕೃಷ್ಣಾ! ಗಟ್ಟಿಗರಾದ ಪಾಂಡವರೂ ಹೀಗೆ ಸೋತು ಕುಳಿತಿದ್ದಾರೆ. ಈ ಸಭೆಯೇ ನನ್ನ ಪಾಲಿಗೆ ನಟ್ಟ ನಡು ನೀರಾಯ್ತೇ! )
೪. ಚಿತ್ರಕವಿತೆ.
ಚಿತ್ರವೆಂದರೆ ಆಶ್ಚರ್ಯವನ್ನು ಹುಟ್ಟಿಸುವುದು, ಬೆರಗಳನ್ನು ಹುಟ್ಟಿಸುವುದು. ಇಲ್ಲಿ ಗತಿಚಿತ್ರ, ವರ್ಣಚಿತ್ರ, ಗೂಢಚಿತ್ರ, ಬಂಧಚಿತ್ರ ಇತ್ಯಾದಿ ಹಲವು ಪ್ರಕಾರಗಳನ್ನು ಕಾಣಬಹುದು. ಇವುಗಳನ್ನು ಅವಧಾನದಲ್ಲಿ ಮಾಡುವುದು ದೊಡ್ಡ ಸಾಹಸವೇ ಸರಿ. ಏಕೆಂದರೆ ಮನೆಯಲ್ಲಿ ಕುಳಿತು ಒಂದು ಚಿತ್ರಕವಿತೆ ಮಾಡಬೇಕೆಂದರೆ ಸಾಧಾರಣವಾಗಿ ನಿಘಂಟು ಮೊದಲಾದ ಎಲ್ಲ ಸಲಕರಣೆಗಳ ಸಹಾಯದಿಂದ ಎರಡು ಮೂರು ಗಂಟೆಗಳಷ್ಟು ಕಾಲಾವಕಾಶ ಹಿಡಿಯುತ್ತದೆ. ಮೊದಲು ಅವಧಾನಗಳಲ್ಲಿ ಚಿತ್ರಕವಿತೆಯನ್ನು ಪರಿಚಯಿಸಿದ್ದು ಶತಾವಧಾನಿ ಡಾ|| ಗಣೇಶ್ ಅವರೇ! ಆ ಬಳಿಕ ಸಂಸ್ಕೃತಾವಧಾನಿ ಡಾ|| ಆರ್ ಶಂಕರ್ ಅವರು ಚಿತ್ರಕವಿತೆಯನ್ನು ಮಾಡಬಲ್ಲವರು. ಇತ್ತೀಚೆಗೆ ಅವಧಾನ ಮಾಡಿದ ಎಚ್ ಎ ವಾಸುಕಿ ಅವರು ಕೂಡ ಅವಧಾನದಲ್ಲಿ ಚಿತ್ರಕವಿತೆಯನ್ನು ರಚನೆ ಮಾಡಿದ್ದಾರೆ. ಹಿಂದೆ ಕೆಲವು ಚಿತ್ರಕವಿತೆಗಳನ್ನು ಇದೇ ಬ್ಲಾಗಿನಲ್ಲಿ ಹಾಕಿದ್ದೆ. ಅಲ್ಲದೇ ಚಿತ್ರಕವಿತೆಯ ವಿವರಗಳನ್ನು ಬೇರೆಯದೇ ಲೇಖನದಲ್ಲಿ ಮುಂದೆ ಸಮಯವಾದಾಗ ವಿಸ್ತರಿಸುವೆ.
೫. ಆಶುಕವಿತೆ ಅಥವಾ ವರ್ಣನೆ
ಆಶುಕವಿತೆ ಎಂದರೆ ಆಶುವಾಗಿ - ವೇಗವಾಗಿ ಶೀಘ್ರದಲ್ಲಿ ಕವಿತೆಯನ್ನು ರಚಿಸಿ ಹೇಳುವುದೇ ಆಗಿದೆ. ಆಶುಕವಿಯಾಗಿರುವುದು ಅವಧಾನಿಯಾಗುವವರಿಗೆ ಬೇಕಾದ ಮೊದಲ ಅರ್ಹತೆ. ಪೃಚ್ಛಕರಿಂದ ಕೊಡಲ್ಪಟ್ಟ  ವಸ್ತು ಛಂದಸ್ಸುಗಳಿಗನುಗುಣವಾಗಿ ತತ್ಕ್ಷಣದಲ್ಲಿ ಪದ್ಯವೊಂದನ್ನು ಹೇಳುವುದು ಆಶುಕವಿತೆ. ವರ್ಣನೆಯೆಂದರೆ ಆಶುಕವಿತೆಯಂತೆಯೇ. ಆದರೆ ಒಂದೊಂದು ಆವರ್ತಕ್ಕೆ ಒಂದೊಂದು ಪಾದವನ್ನು ಹೇಳಿ ಕೊನೆಯಲ್ಲಿ ಧಾರಣೆಯಿಂದ ಪೂರ್ತಿ ಪದ್ಯವನ್ನೂ ಹೇಳಬೇಕಾಗುತ್ತದೆ.
೬. ಕಾವ್ಯವಾಚನ- ಅಥವಾ ಪುರಾಣಪಠನ
ಕಾವ್ಯವಾಚನದಲ್ಲಿ ಮಹಾಕವಿಗಳ ರಸವತ್ಪ್ರಸಂಗದಿಂದ ಆರಿಸಿದ ಪದ್ಯವನ್ನು ಪೃಚ್ಛಕರು ಗಮಕಿಸಿದರೆ ರಾಗಬದ್ಧವಾಗಿ ಹಾಡಿದರೆ ಅವಧಾನಿಯು ಆ ಪದ್ಯ ಯಾವ ಕಾವ್ಯದ್ದು ಯಾವ ಸಂದರ್ಭದ್ದು ಹಾಗೂ ಅಲ್ಲಿ ಸ್ವಾರಸ್ಯವೇನು ಎಂಬುದನ್ನು ವಿಸ್ತರಿಸಬೇಕು. ಪುರಾಣಪಠನವೆಂಬ ವಿಭಾಗವಾದರೂ ಅಷ್ಟೇ! ಇಲ್ಲಿ ಅವಧಾನಿಯು ಕಾವ್ಯರಚನೆಯಷ್ಟೇ ಅಲ್ಲದೇ ಇತರ ಕವಿಗಳ ಕಾವ್ಯವನ್ನೂ ಓದಿ ಆಸ್ವಾದಿಸಿ ಅದನ್ನು ಇತರರಿಗೂ ರಸ್ಯವಾಗುವಂತೆ ವಿಸ್ತರಿಸುವ ಸಾಮರ್ಥ್ಯವನ್ನು ಹೊಂದಿರಬೇಕೆಂಬುದೇ ತಾತ್ಪರ್ಯ.
೭. ಸಂಖ್ಯಾಬಂಧ, ಘಂಟಾಗಣನ ಅಥವಾ ಪುಷ್ಪಗಣನ
ಸಂಖ್ಯಾಬಂಧವೆಂದರೆ magic square ಎಂದು ಹೇಳುವುದೇ ಆಗಿದೆ. 5 ಅಡ್ಡಸಾಲುಗಳಲ್ಲಿ ಹಾಗೂ 5 ಕಂಬಸಾಲುಗಳಲ್ಲಿ ಸಂಖ್ಯೆಗಳನ್ನು ತುಂಬಿಸಿ ಪೃಚ್ಛಕರು ಅವಧಾನದ ಆರಂಭದಲ್ಲಿ ನೀಡಿದ ಮೊತ್ತ ಬರುವಂತೆ ಅವಧಾನಿಯು ಪೂರಣ ಮಾಡಬೇಕು. ಇಲ್ಲಿಯೂ ಕೂಡ ಯಾವುದೇ ಬರವಣಿಗೆಯ ಉಪಕರಣಗಳನ್ನಾಗಲೀ ಅಥವಾ ಕ್ಯಾಲ್ಕುಲೇಟರ್ ಮೊಬೈಲ್ ಇತ್ಯಾದಿಗಳನ್ನು ಬಳಸಬಾರದು ಎಂಬುದು ಮೂಲಭೂತ ನಿಯಮ. ಹಾಗೆ ಮನಸ್ಸಿನಲ್ಲೇ ಪೂರಣ ಮಾಡಿಕೊಂಡ ಬಂಧವನ್ನು ಪೃಚ್ಛಕರು ಕೇಳಿದಾಗ ಕೇಳಿದ ಮನೆಯ ಸಂಖ್ಯೆಗಳನ್ನು ಹೇಳುತ್ತ ಪೂರಣ ಮಾಡಬೇಕು. ಪೃಚ್ಛಕರೂ ಅವಧಾನಿಯು ಯಾವುದಾದರೂ ಬೇರೆಯ ವಿಭಾಗಕ್ಕೆ ಉತ್ತರಿಸುವಾಗ ಅವನ ಚಿಂತನೆಯ ಪ್ರವಾಹಕ್ಕೆ ತಡೆಯೊಡ್ಡಲು ಒಂದು ಸಂಖ್ಯೆಯನ್ನು ಕೇಳುತ್ತಾರೆ. ಹೀಗೆ ಉಳಿದ ವಿಭಾಗಗಳ ನಿರ್ವಹಣೆ ಮಾಡುವಾಗ ಮಧ್ಯದಲ್ಲಿ ಏಕಾಗ್ರತೆಗೆ ಭಂಗ ಪಡಿಸಲೆಂದೇ ಈ ಅಂಶಗಳು ನಿರೂಪಿತವಾಗಿವೆ. ಇದರ ಬದಲಿಗೆ ಘಂಟಾಗಣನವನ್ನೂ ಇಟ್ಟುಕೊಳ್ಳಬಹುದು. ಅದರಲ್ಲಿ ಪೃಚ್ಛಕರು ಜಾಗಟೆಯನ್ನು ಬಡಿಯುತ್ತಾರೆ. ಒಂದು ಬಾರಿಗೆ ಒಂದು "ಠಂ"ಕಾರವನ್ನು ಮಾತ್ರ ಮಾಡುತ್ತಾರೆ. ಅವಧಾನಿಯು ಕೊನೆಯಲ್ಲಿ ಒಟ್ಟೂ ಎಷ್ಟು ಬಾರಿ ಘಂಟೆಯನ್ನು ಬಾರಿಸಿದರು ಎಂದು ನೆನಪಿಟ್ಟುಕೊಂಡು ಹೇಳಬೇಕು.
ಪುಷ್ಪಗಣನವೆಂದರೆ ಕೂಡ ಘಂಟೆಯ ಶಬ್ದದ ಬದಲು ಹೂವಿನಿಂದ ಅವಧಾನಿಗೆ ಹೊಡೆಯುವುದು. ಪೃಚ್ಛಕರು ಚೆಂಡು ಹೂವನ್ನೋ ಅಥವಾ ಇನ್ನಾವುದೋ ಸ್ಪರ್ಶವೇದ್ಯವಾಗುವಂತಹ ಹೂವನ್ನು ತೆಗೆದು ಆಗೊಮ್ಮೆ ಈಗೊಮ್ಮೆ ಹೊಡೆಯುತ್ತಾರೆ. ಆ ಲೆಕ್ಕವನ್ನೂ ಇಟ್ಟುಕೊಂಡು ಕೊನೆಯಲ್ಲಿ ಎಷ್ಟಾಯಿತೆಂದು ಹೇಳಬೇಕಾದುದು ಅವಧಾನಿಯ ಕರ್ತವ್ಯ.
೮. ಅಪ್ರಸ್ತುತಪ್ರಸಂಗ
ಇದರಲ್ಲಿ ಅವಧಾನಿಯ ಯೋಚನಾಸರಣಿಗೆ ಭಂಗಪಡಿಸುವುದಕ್ಕೆ ಪೃಚ್ಛಕರು ಪ್ರಸ್ತುತವಲ್ಲದ ಪ್ರಶ್ನೆಗಳನ್ನು ಕೇಳುತ್ತಾರೆ. ಇದೂ ಕೂಡ ಸಂಖ್ಯಾಬಂಧದಂತೆಯೇ ಉಳಿದ ಪ್ರಶ್ನೆಗಳಿಗೆ ಉತ್ತರಿಸುವಾಗ ಏಕಾಗ್ರತೆಯನ್ನು ಮುರಿಯುವುದಕ್ಕೂ ಸಭಾರಂಜನೆಗೂ ಕೇಳುವುದಾಗುತ್ತದೆ. ಇಲ್ಲಿ ವಿಷಯನಿರ್ಬಂಧವಿಲ್ಲ. ಹಾಸ್ಯವೂ ಗಂಭೀರವೂ ಇರಬಹುದು. ಪ್ರಶ್ನೆಯ ಗುರುತ್ವಲಘುತ್ವಗಳಿಗನುಸಾರವಾಗಿ ಅವಧಾನಿಯು ಉತ್ತರಿಸಬೇಕು.
ಉದಾಹರಣೆಗೆ ಕೆಲವನ್ನು ಗಮನಿಸಬಹುದು-
೧. ಪೃ- ಅವಧಾನಿಗಳೇ- ಪ್ರಾಣಿಗಳೆಲ್ಲ ಸಂಸ್ಕೃತದಲ್ಲೇ ಮಾತನಾಡುತ್ತವೆ ನೋಡಿ- ಹಸು- ಅಂಬಾ ಎನ್ನುತ್ತದೆ! ಮೇಕೆ- ಮೇ ಮೇ ಅಂತ! ನಾಯಿ - ಬಭೌ ಬಭೌ ಎಂದು! ಪಕ್ಷಿಗಳಲ್ಲಿ ಕಾಗೆ- ಕಾ ಕಾ! ಎಂದು ಹೀಗೆ! ಹಾಗಾಗಿ ಸಂಸ್ಕೃತ ತುಂಬಾ ಹಳೆಯ ಭಾಷೆ ಎಂದು ಹೇಳಬಹುದೇ!
ಅ- ಹೌದು! ಆದರೆ ಕೆಲವೊಂದು ಪ್ರಾಣಿಗಳು ಬೇರೆ ಭಾಷೆಯಲ್ಲಿಯೂ ಮಾತನಾಡುತ್ತವೆ ನೋಡಿ- ಕಪ್ಪೆ- ವಾಟರ್ ವಾಟರ್ ವಾಟರ್!
೨. ಪೃ- ಅವಧಾನಿಗಳೇ "ದುಷ್ಟರಿಂದ ದೂರವಿರು" ಅಂತ ಹೇಳ್ತಾರೆ! ಎಷ್ಟು ದೂರವಿರಬೇಕು?
ಅ- "ನಿಮ್ಮಿಂದ ನಾನು ಇರುವಷ್ಟು ದೂರದಲ್ಲಿ"

ಹೀಗೆ ಅವಧಾನದ ವಿಭಾಗಗಳು ಸಾಗುತ್ತವೆ. ಈ ಅವಧಾನಕಲೆಯನ್ನು ಪ್ರತ್ಯಕ್ಷವಾಗಿ ನೋಡಿಯೇ ಆಸ್ವಾದಿಸಬೇಕಲ್ಲದೇ ಕೇವಲ ಓದುವುದರಿಂದ ಸಾಧ್ಯವಿಲ್ಲ. ಕೆಲವಷ್ಟು  ಅವಧಾನದ ದೃಶ್ಯಾವಳಿಗಳನ್ನು Youtube ಅಲ್ಲಿ ನೋಡಬಹುದು.
ಇನ್ನು ಕೆಲವೊಂದು ಅವಧಾನದ ಪದ್ಯಗಳನ್ನು ಇಲ್ಲಿ ಗಮನಿಸಬಹುದು
http://kathaakaala.blogspot.in/2014/11/blog-post.html
http://padyapaana.com/?cat=104 (ಇಲ್ಲಿ ವಿವಿಧ ಅವಧಾನದ ಪದ್ಯಗಳನ್ನು ಹಾಕಲಾಗುತ್ತದೆ.)

ಗುರುವಾರ, ಆಗಸ್ಟ್ 4, 2016

ಸಹೃದಯಕಾಲ ೨೩- ಹಲ್ಲುನೋವೂ ಭುವನವಿಜಯವೂ ತೆನಾಲಿ ರಾಮನ ಪದ್ಯಗಳೂ


ಕೆಲವು ದಿನಗಳಿಂದ ಹಲ್ಲುನೋವು ಪ್ರಾರಂಭವಾಗಿತ್ತು. ದಂತವೈದ್ಯರ ಬಳಿ ಅಡ್ಡಾಡುತ್ತ ಬಾಧೆ ಪಡುತ್ತಿರುವಾಗ ಹಲ್ಲಿನ ಬಗ್ಗೆ ಇದ್ದ ಕೆಲವು ಹಾಸ್ಯಪ್ರಸಂಗಗಳ ಸಹಿತವಾದ ಪದ್ಯಗಳನ್ನು ಮೆಲುಕು ಹಾಕುತ್ತಿದ್ದೆ. ಡಿವಿಜಿ ಹಾಗೂ ರಂಗನಾಥಶರ್ಮರ ನಡುವೆ ನಡೆದ ಸಂಭಾಷಣೆಯ ನೆನಪಾಯಿತು. (ಈ ಕಥಾನಕ ಶತಾವಧಾನಿ ಗಣೇಶರು ಬರೆದ "ಬ್ರಹ್ಮಪುರಿಯ ಭಿಕ್ಷುಕ" ಪುಸ್ತಕದಲ್ಲಿದೆ.) ಒಮ್ಮೆ ಹಲ್ಲಿನ ವೈದ್ಯರ ಬಳಿ ಹೋಗುತ್ತಿದ್ದ ರಂಗನಾಥಶರ್ಮರು ಡಿವಿಜಿಯವರನ್ನು ಕಂಡು ಹೋಗೋಣವೆಂದು ಹೋದರಂತೆ. ಡಿವಿಜಿಯವರು ಏನು ಎತ್ತ ಎಂದೆಲ್ಲ ವಿಚಾರಿಸಿದರುಆ ಬಳಿಕ ಅಲ್ಲಿಯೇ ಆಶುವಾಗಿ ಎರಡು ಸಾಲು ಶ್ಲೋಕವೊಂದನ್ನು ಹೇಳಿದರಂತೆ 
"ಏಕದಂತಸ್ಸ ವೋ ಕುರ್ಯಾದದ್ಯ ವೈ ದಂತಮಂಗಲಂ"
(ಇಂದು ನಿಮಗೇಕದಂತನು ದಂತಮಂಗಳವನೆಸಗುತಿರಲಿ)*
ಅಂದು ನಕ್ಕು ತೆರಳಿದ ರಂಗನಾಥಶರ್ಮರು ಮಾರನೆಯ ದಿನ ಎರಡು ಹಲ್ಲುಗಳನ್ನು ಕೀಳಿಸಿಕೊಂಡು ಬಂದಿದ್ದರು. ಡಿವಿಜಿಯವರಿಗೆ ಹೀಗೆ ಪದ್ಯದಲ್ಲಿ  ಉತ್ತರಿಸಿದರಂತೆ -
"ಅಸೂಯಯೈವ ಪೂರ್ವೇದ್ಯುರ್ದಂತದ್ವಯಮಪಾಹರತ್"
(ಮತ್ಸರದಿನೇನೊ ಗಣಪನು ನಿನ್ನೆ ಹಲ್ಲೆರಡನೆತ್ತಿಸಿದನು).**
ಹೀಗೆ ಹಲ್ಲುನೋವಿನಲ್ಲೂ ಕಾವ್ಯವನ್ನು ಕಾಣುವ ಅವರನ್ನು ನೆನೆಯುತ್ತಾ ಇರುವಾಗ ಇನ್ನೊಂದು ಸುದೀರ್ಘಪ್ರಸಂಗವೂ ನೆನಪಾಯಿತು- ಅದಕ್ಕಷ್ಟು ಪೀಠಿಕಾಖ್ಯಾನವೂ ಸೇರಿದೆ.  ಮುಂದಿದೆ ಓದಿ-
ವಿಜಯನಗರದ ಪ್ರಸಿದ್ಧ ಅರಸನಾದ ಶ್ರೀಕೃಷ್ಣದೇವರಾಯನ ಆಸ್ಥಾನದಲ್ಲಿ ಅಷ್ಟದಿಗ್ಗಜಗಳೆಂದು ಖ್ಯಾತರಾದ ಎಂಟು ಜನ ಕವಿಗಳಿದ್ದರು. ಪ್ರತಿಯೊಬ್ಬರೂ ಅಸಾಧಾರಣ ಪ್ರತಿಭೆಯವರೇ ಆಗಿದ್ದರು. ಅವರ ಚಾಟು ಪದ್ಯಗಳು ಹಾಸ್ಯ ಪ್ರಸಂಗಗಳು ಇತ್ಯಾದಿಗಳು ತೆಲುಗು ಸಾಹಿತ್ಯಕ್ಕೆ ಒಂದು ಮಹತ್ತರವಾದ ಕೊಡುಗೆಯೇ ಆಗಿದೆ. ಅವರಲ್ಲಿ ವಿಕಟಕವಿ ಎಂದು ಖ್ಯಾತನಾದ ತೆನಾಲಿ ರಾಮನ ಬಗೆಗಂತೂ ಕನ್ನಡಿಗರೂ ಸಾಕಷ್ಟು ಕಥಾನಕಗಳನ್ನು ಕೇಳಿದ್ದಾರೆ. ಅವನ ಹಾಸ್ಯಪ್ರಜ್ಞೆಯ ಜೊತೆ ಅವನೊಳಗಿದ್ದ ಒಬ್ಬ ಕವಿಯನ್ನು ಕನ್ನಡಿಗರು ಮರೆತಿದ್ದಾರೆ. ತುಂಬ ಹಿಂದೆ ಬಂದ ಅನಂತನಾಗ್ ಅಭಿನಯದ ಚಲಚ್ಚಿತ್ರವೊಂದರಲ್ಲಿ ಇಂತಹ ಪದ್ಯಗಳನ್ನು ಕೆಲವನ್ನು ಬಳಸಿಕೊಂಡಿದ್ದಾರೆ. ಅದಾದರೂ ತೆಲುಗಿನಲ್ಲಿ ಅಕ್ಕಿನೇನಿ ನಾಗೇಶ್ವರ್ ರಾವ್ ಅಭಿನಯದ ತೆನಾಲಿ ರಾಮಕೃಷ್ಣ ಚಲನಚಿತ್ರದ ಪುನರ್ನಿರ್ಮಾಣವೇ ಆಗಿದೆ. "ಭುವನವಿಜಯಮು"ಮೊದಲಾದ ತೆಲುಗು ಸಾಹಿತ್ಯಗೋಷ್ಠಿಗಳಲ್ಲಿ ಇದನ್ನು ಅಭಿನಯಿಸುವ ಮೂಲಕ ಸಕಲರನ್ನೂ ತಲುಪುವಂತಾಗಿದೆ. ಇತ್ತೀಚೆಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿಯೂ ತೆಲುಗುಭಾಷೆಯಲ್ಲಿ ಆಯೋಜಿಸಿದ್ದರು. ಅದರಲ್ಲಿ ಹಲವು ತೆಲುಗಿನ ಪ್ರಸಿದ್ಧ ಕವಿಗಳು ಅವಧಾನಿಗಳೂ ಪಾಲ್ಗೊಂಡಿದ್ದರು. ಸಹಸ್ರಾವಧಾನಿ ಗರಿಕಪಾಟಿ ನರಸಿಂಹರಾವು ಅವರು ತೆನಾಲಿ ರಾಮಕೃಷ್ಣನ ಪಾತ್ರವನ್ನು ನಿರ್ವಹಿಸಿದ್ದರು. ಕನ್ನಡಿಗರಾದ ಬಹುಭಾಷಾ ಕವಿಗಳಾದ ಶತಾವಧಾನಿ ಆರ್ ಗಣೇಶರು ಲೊಲ್ಲ ಲಕ್ಷ್ಮೀಧರನ ಪಾತ್ರವನ್ನು ನಿರ್ವಹಿಸಿದ್ದರು. (ಇಂತಹ ಕಥಾನಕಗಳೆಲ್ಲ ನನಗೆ ತಿಳಿದು ಬಂದಿರುವುದೂ ಶತಾವಧಾನಿ ಗಣೇಶರ ಮೂಲಕವೇ ಎಂಬುದು ಇಲ್ಲಿ ಸ್ಮರಣೀಯ.)ಅದನ್ನು youtube ನಲ್ಲಿ ವೀಕ್ಷಿಸಬಹುದು. ತೆಲುಗು ಬಲ್ಲವರಾದರೆ ಸುಲಭವೇದ್ಯವಾಗುತ್ತದೆ.
ಅಂತಹ ಚಾಟು ಪದ್ಯಗಳಲ್ಲಿ ಕೆಲವನ್ನು ಕಥಾನಕ ಸಹಿತವಾಗಿ ಇಲ್ಲಿ ಹಾಕುವ ಮೂಲಕ ನಾವೂ ತೆನಾಲಿ ರಾಮನ ಪದ್ಯವನ್ನು ಸವಿಯೋಣ ಎಂದು ಅನ್ನಿಸಿತಷ್ಟೆ. ಹಾಗೆ ಕೇಳಿದ ಕಥಾನಕಗಳನ್ನು ಪ್ರಸ್ತುತಪಡಿಸುವೆ.
ತೆನಾಲಿ ರಾಮಕೃಷ್ಣ ಆಸ್ಥಾನಕ್ಕೆ ಸೇರಿಕೊಂಡ ಸಂದರ್ಭದ ಹಲವು ಕಥೆಗಳು ಪ್ರಚಲಿತದಲ್ಲಿವೆ. ಅದೆಂತೇ ಇರಲಿ ಅವನ ಹಾಸ್ಯಪ್ರಜ್ಞೆಯ ಜೊತೆ ಚಾಟುಪದ್ಯಗಳೂ ರಸಮಯವಾಗಿ ಸಹೃದಯಮನೋರಂಜಕವಾಗಿವೆಯೆಂಬುದಂತೂ ನಿಜ.
ಹೀಗೆ ಒಮ್ಮೆ ಕೃಷ್ಣದೇವರಾಯ ಕವಿಗಳ ಕಾವ್ಯವನ್ನು ಕೇಳುತ್ತಾ ಕುಳಿತಿದ್ದ. ಧೂರ್ಜಟಿ ಎಂಬ ಕವಿ "ಕಾಳಹಸ್ತೀಶ್ವರಶತಕಮು" ಎಂಬ ಕಾವ್ಯದಿಂದ ಒಂದು ಪದ್ಯವನ್ನು ಓದಿದ. ಕೃಷ್ಣದೇವರಾಯ ಅದನ್ನು ಮೆಚ್ಚಿಕೊಂಡು ಆತನ ಬಗೆಗೆ ಒಂದು ಪದ್ಯವನ್ನು ಹೇಳಬೇಕೆಂದುಕೊಂಡು ಚಂಪಕಮಾಲಾವೃತ್ತದಲ್ಲಿ ಹೀಗೆ ಪ್ರಾರಂಭಿಸಿದ-
ಸ್ತುತಮತಿಯೈನ ಆಂಧ್ರಕವಿ ಧೂರ್ಜಟಿ ಪಲ್ಕುಲಕೇಲಗಲ್ಗೆನೋ
ಅತುಲಿತಮಾಧುರೀಮಹಿಮ!
(ಸ್ತುತಮತಿಯಾದ ಆಂದ್ರಕವಿ ಧೂರ್ಜಟಿ ಮಾತಿಗದೆಂತು ದಕ್ಕಿತೋ!
ಅತುಲಿತ ಮಾಧುರೀ ಮಹಿಮೆ!)
ತತ್ಕ್ಷಣ ತೆನಾಲಿ ರಾಮಕೃಷ್ಣ ಧೂರ್ಜಟಿಕವಿ ವೇಶ್ಯಾಲೋಲ ಎಂಬುದನ್ನು ಮನದಲ್ಲಿಟ್ಟುಕೊಂಡು ಮಧ್ಯೆ ಬಾಯಿ ಹಾಕಿ ಅದೇ ಪದ್ಯವನ್ನು ಮುಂದುವರೆಸುತ್ತಾ ಹೀಗೆ ಹೇಳಿದ-
ಹಾ! ತೆಲಿಸೆನ್! ಭುವನೈಕಮೋಹನೋ-
ದ್ಧತಸುಕುಮಾರ-ವಾರವನಿತಾ-ಜನತಾ-ಘನತಾಪಹಾರಿ ಸಂ-
ತತಮಧುರಾಧರೋದಿತಸುಧಾರಸಧಾರಲ ಗ್ರೋಲುಟಂ ಜುಮೀ!
(ಹಾ! ತಿಳಿದೆಂ! ಭುವನೈಕಮೋಹನೋ-
ದ್ಧತಸುಕುಮಾರ-ವಾರವನಿತಾ-ಜನತಾ-ಘನತಾಪಹಾರಿ ಸಂ-
ತತಮಧುರಾಧರೋದಿತಸುಧಾರಸಧಾರೆಯನೀಂಟುತಿರ್ಪುದೇ!)     ***
 (ಕೃಷ್ಣದೇವರಾಯ-ಸ್ತುತ್ಯನಾದ ಆಂಧ್ರಕವಿ ಧೂರ್ಜಟಿಯ ಮಾತಿಗೆ ಇಂತಹ ಮಾಧುರ್ಯ ಹೇಗೆ ಸಿಕ್ಕಿತೋ!
ತೆನಾಲಿರಾಮ- ಹಾ! ತಿಳಿದೆ! ಭುವನಸುಂದರಿಯರಾದ, ಸುಕುಮಾರಿಯರಾದ ವಾರಾಂಗನೆಯರ ಜನತೆಯ ಘನತಾಪವನ್ನು ಅಪಹರಿಸುವ ಮಧುರವಾದ ತುಟಿಗಳಿಂದ ಉದಿಸುತ್ತಿರುವ ಅಮೃತರಸವನ್ನು ಹೀರುತ್ತಿರುವುದೇ ಅಲ್ಲವೇ!)
ಹೀಗೆ ಇತರ ಕವಿಗಳ ಕಾಲೆಳೆಯುವ ಬುದ್ಧಿ ಅಪ್ರತಿಮವಾಗಿತ್ತಲ್ಲದೇ ವಿಕಟಕವಿ ರಾಮಕೃಷ್ಣ ಸಿಕ್ಕ ಅವಕಾಶವನ್ನು ಬಿಡುತ್ತಿರಲಿಲ್ಲ. ಒಮ್ಮೆ ಅವನ ಪ್ರತಿಭೆಯನ್ನು ನೋಡೋಣ ಎಂದು ರಾಜಗುರು ತಾತಾಚಾರ್ಯರು- ದ್ವಾರಪಾಲಕನೊಬ್ಬನ ಬಳಿ ಒಂದು ಸಮಸ್ಯೆಯನ್ನು ರಾಮಕೃಷ್ಣನಿಗೆ ಕೇಳಲು ಹೇಳುತ್ತಾರೆ. ಅವನು ಕೇಳಿದ ಕಂದಪದ್ಯದ ಕೊನೆಯ ಪಾದ "ಕುಂಜರಯೂಥಂಬು ದೋಮ ಕುತ್ತುಕಜೊಚ್ಚೆನ್" ("ಆನೆಯ ಗಣವಿಲ್ಲಿ ಸೊಳ್ಳೆಬಾಯೊಳಗಾಯ್ತೇ")
ಎಂದು. ಆನೆಯ ಗಣವೆಲ್ಲಾದರೂ ಸೊಳ್ಳೆಯ ಬಾಯಿಗೆ ಸಿಲುಕುವುದಿದೆಯೇ! ರಾಮಕೃಷ್ಣ ಆ ದ್ವಾರಪಾಲಕನಿಗೆ ಹೇಳಿದ ಪದ್ಯ ಹೀಗೆ-
"ಗಂಜಾಯಿ ತ್ರಾಗಿ ತುರುಕಲ
ಸಂಜಾತಲ ಗೂಡಿ ಕಲ್ಲು ಚವಿಗೊನ್ನಾವಾ
ಲಂಜಲ ಕೊಡಕಾ ಎಕ್ಕಡ
ಕುಂಜರಯೂಥಂಬು ದೋಮ ಕುತ್ತುಕಜೊಚ್ಚೆನ್"
(ಏನೋ! ಗಾಂಜಾ ಹೊಡೆದೆಯ!
ಹೀನರ ತುರುಕರ್ಕಳೊಡನೆ ಕಳ್ಗುಡಿದೆಯೊ ಪೇಳ್
ಏನಿದು ಸೂಳೆಯ ಮಗನೇ
ಆನೆಯ ಗಣವಿಲ್ಲಿ ಸೊಳ್ಳೆಬಾಯೊಳಗಾಯ್ತೇ!) #
(ಗಾಂಜಾ ಕುಡಿದಿದ್ದೀಯೇನೋ! ತುರುಕರ ಜೊತೆ ಸೇರಿ ಕಳ್ಳು ಕುಡಿದು ಬಂದಿದ್ದೀಯಾ! ಏನೋ ಸೂಳೇಮಗನೇ! ಆನೆಯ ಗಣ ಸೊಳ್ಳೆಯ ಬಾಯ್ಗೆ ಸಿಲುಕುತ್ತಾ!)
ಎಂದು ಅವನಿಗೇ ಬಯ್ದು ಪದ್ಯಪೂರಣ ಮಾಡುತ್ತಾನೆ. ಅದು ಪರೋಕ್ಷವಾಗಿ ಈ ಪ್ರಶ್ನೆ ಕೇಳಿದ ತಾತಾಚಾರ್ಯರಿಗೂ ತಿವಿತವಲ್ಲವೇ! ಹೇಗೋ ಮಾಡಿ ಅವರು ಅದನ್ನೇ ಆ ದಿನ ಸಭೆಯಲ್ಲಿ ಕೃಷ್ಣದೇವರಾಯನೂ ಕೇಳುವಂತೆ ಮಾಡುತ್ತಾರೆ. ಬುದ್ಧಿವಂತ ವಿಕಟಕವಿ ಅದನ್ನು ಆಗ ಹೀಗೆ ಪೂರೈಸುತ್ತಾನೆ-
"ರಂಜನ ಚೆಡಿ ಪಾಂಡವುಲರಿ-
ಭಂಜನುಲೈ ವಿರಟುಗೊಲ್ವ ಪಾಲ್ಪಡಿರಕಟಾ 
ಸಂಜಯ ವಿಧಿನೇಮಂದುನು
ಕುಂಜರಯೂಥಂಬು ದೋಮಕುತ್ತಕಜೊಚ್ಚೆನ್"
(ಮಾನಿತ ವೀರರ್ ಪಾಂಡವ-
ರೇನಿಂತಿರ್ಪರ್ ವಿರಾಟನಗರದೊಳಕಟಾ
ಏನೀ ವಿಧಿಯೋ ಸಂಜಯ!
ಆನೆಯ ಗಣವಿಲ್ಲಿ ಸೊಳ್ಳೆಬಾಯೊಳಗಾಯ್ತೇ) ##
(ಇದನ್ನು ಧೃತರಾಷ್ಟ್ರ ಸಂಜಯನಿಗೆ ಹೇಳಿದಂತೆ ಪೂರೈಸುತ್ತಾನೆ- ವೀರರಾದ ಪಾಂಡವರು ಅಂತಹ ಸಣ್ಣವನಾದ ವಿರಾಟನ ನಗರದಲ್ಲಿ ಆಶ್ರಯ ಪಡೆದಿದ್ದಾರೆ! ಅಯ್ಯೋ ಇದನ್ನೇನು ಹೇಳೋಣ ಸಂಜಯ! ಸೊಳ್ಳೆಯ ಬಾಯಲ್ಲಿ ಆನೆಯ ಗುಂಪು ಸೇರಿಕೊಂಡಂತಾಯ್ತು.)
ಹೀಗೆ ಹಲವರನ್ನು ಪೀಡಿಸಿ ಕಾಡಿಸುತ್ತಿದ್ದ ತೆನಾಲಿ ರಾಮನ ಪಾಳಿಯೂ ಬರಬೇಕಲ್ಲವೇ ಒಂದಲ್ಲಾ ಒಂದು ದಿನ!
ಆ ದಿನ ಬಂದಿತ್ತು. ಅಷ್ಟದಿಗ್ಗಜಗಳಲ್ಲಿದ್ದ ತಿಮ್ಮಕವಿಯ ಮನೆಗೆ ಹೋದಾಗ ಆತ ಉಯ್ಯಾಲೆಯಲ್ಲಿ ತೂಗಿಕೊಳ್ಳುತ್ತಾ ಕುಳಿತಿರುತ್ತಾನೆ. ರಾಮಕೃಷ್ಣ ಎಲೆಯಡಿಕೆ ಬಾಯಲ್ಲಿ ಹಾಕಿಕೊಂಡು ಬಂದಿದ್ದನಿರಬೇಕು! ಅವನನ್ನು ಕಂಡು "ಊತುನಾ ತಾತಾ!" ಎಂದು ಕೇಳುತ್ತಾನೆ. ಅದಕ್ಕೆ ಎರಡು ಅರ್ಥ ಉಯ್ಯಾಲೆಯನ್ನು "ತೂಗಲೇ!" ಎಂದು ಒಂದು ಅರ್ಥ. ಇನ್ನೊಂದು "ಉಗುಳಲೇ!" ಎಂದು. ಅದಕ್ಕೆ ತಿಮ್ಮಕವಿ ಇವನು ಉಯ್ಯಾಲೆ ತೂಗಬಹುದು ಎಂದುಕೊಂಡು- "ಉಮ್ಮು" (ತೂಗು/ಉಗುಳು) ಎಂದು ಹೇಳುತ್ತಾನೆ. ತೆನಾಲಿರಾಮ ತತ್ಕ್ಷಣವೇ ಬಾಯಲ್ಲಿದ್ದ ತಾಂಬೂಲವನ್ನು ಅವನ ಮುಖದ ಮೇಲೆ ಉಗುಳಿಬಿಡುತ್ತಾನೆ! ಸಿಟ್ಟಿಗೆದ್ದ ತಿಮ್ಮಕವಿ ಉಯ್ಯಾಲೆಯಲ್ಲಿ ಜೋರಾಗಿ ಬಂದು ಇವನಿಗೆ ಒದ್ದುಬಿಡುತ್ತಾನೆ. ತೆನಾಲಿ ರಾಮನ ಮುಂದಿನ ಎರಡು ಹಲ್ಲು ಉದುರಿ ಹೋಗುತ್ತದೆ. ಇದನ್ನೆಲ್ಲ ಅಲ್ಲಿಯೇ ಇದ್ದ ಧೂರ್ಜಟಿ ನೋಡುತ್ತಿದ್ದನಷ್ಟೆ! ಬಳಿಕ ಅಲ್ಲಿಂದ ಹೊರಟು ಬಂದ ತೆನಾಲಿ ರಾಮ "ಮರ್ಯಾದೆ ಉಳಿಸಿಕೊಳ್ಳಬೇಕಲ್ಲ! ನಾಳೆ ಆಸ್ಥಾನಕ್ಕೆ ಹೀಗೇ ಹೋದರೆ ಎಲ್ಲರೆದುರು ನಗೆಪಾಟಲಿಗೀಡಾಗುತ್ತೇನೆ" ಎಂದು ಜಿಂಕೆಯ ಹಲ್ಲನ್ನು ಆ ಉದುರಿದ ಹಲ್ಲುಗಳ ಜಾಗದಲ್ಲಿ ಜೋಡಿಸಿಕೊಳ್ಳುತ್ತಾನೆ.
ಆದರೆ ಅವನ ಹಣೆಬರೆಹ! ಆ ದಿನ ಕೃಷ್ಣದೇವರಾಯ ಆಸ್ಥಾನದಲ್ಲಿ ಸಮಸ್ಯೆಯೊಂದನ್ನು ಕೊಡುತ್ತಾನೆ- ಅದರ ಅರ್ಥ- "ರವಿ ಕಾಣದ್ದನ್ನು ಕವಿ ಕಂಡನಲ್ಲವೇ" ಎಂದು
"ರವಿ ಕಾಂಚನಿಚೋ ಕವಿ ಗಾಂಚುನೇ ಕದಾ"
ಆಗ ಸಿಕ್ಕಿದ್ದೇ ಅವಕಾಶವೆಂದು ಧೂರ್ಜಟಿ ಕವಿ ಹೀಗೆ ಪೂರೈಸುತ್ತಾನೆ-
"ಆ ರವಿ ವೀರಭದ್ರು ಚರಣಾಹತಿಡುಲ್ಲಿನ ಬೋಸಿನೋಟಿಕಿನ್
ನೇರಡು, ರಾಮಲಿಂಗಕವಿ ನೇರಿಚೆಪೋ! ಮನ ಮುಕ್ಕುತಿಮ್ಮರಾಟ್-
ಕ್ರೂರಪದಾಹತಿಂ ತೆಗಿನ ಕೊಕ್ಕರಿ ಪಂಟಿಕಿ ದುಪ್ಪಿ ಕೊಮ್ಮ ಪ-
ಲ್ಗಾರಚಿಯಿಂಚಿನಾಡು ರವಿ ಕಾಂಚನಿಚೋ ಕವಿ ಗಾಂಚುನೇ ಕದಾ!"
(ಆ ರವಿ ವೀರಭದ್ರಚರಣಾಹತಿಯಿಂದುದುರಲ್ಕೆ ಜೋಡಿಸ-
ಲ್ಕಾರನೆ, ರಾಮಲಿಂಗಕವಿಯಾರ್ದಪನೈ ಗಡ ಮುಕ್ಕುತಿಮ್ಮರಾಟ್-
ಕ್ರೂರಪದಪ್ರಹಾರದಿನೆ ಪಲ್ಲಿಲಿಯಾದಪನೊಂದಿ ಜಿಂಕೆಯಿಂ
ದಾರಚಿಸಿರ್ಪನಲ್ತೆ! ರವಿ ಕಾಣದುದಂ ಕವಿ ಕಂಡನಲ್ಲವೇ!) ###
ಹಿಂದೆ ದಕ್ಷಯಜ್ಞವನ್ನು ವೀರಭದ್ರ ಧ್ವಂಸಗೊಳಿಸಿದಾಗ ಒದ್ದು ಸೂರ್ಯನ ಹಲ್ಲುಗಳೆಲ್ಲವನ್ನೂ ಉದುರಿಸಿ ಹಾಕಿರುತ್ತಾನೆ. ಅದಕ್ಕೇ ಇಂದಿಗೂ ಸೂರ್ಯನಿಗೆ ಪಾಯಸವನ್ನು ಮಾತ್ರ ನೈವೇದ್ಯಮಾಡುತ್ತಾರಂತೆ!(ಹಲ್ಲಿಲ್ಲದಿದ್ದರೂ ತಿನ್ನಬಹುದು ಎಂದು!) "ಅಂದು ವೀರಭದ್ರನ ಕಾಲೊದೆತದಿಂದ ಹಲ್ಲುದುರಿಸಿಕೊಂಡ ಸೂರ್ಯನು ಇಂದಿಗೂ ಹಲ್ಲನ್ನು ಜೋಡಿಸಿಕೊಳ್ಳಲು ಸಮರ್ಥನಾಗಲಿಲ್ಲ. ಆದರೆ ಈ ವಿಕಟಕವಿ ರಾಮಲಿಂಗ ನಮ್ಮ ತಿಮ್ಮರಾಜನ ಕ್ರೂರವಾದ ಕಾಲಿನ ಒದೆತದಿಂದ ಹಲ್ಲನ್ನು ಕಳೆದುಕೊಂಡವನು ಜಿಂಕೆಯ ಹಲ್ಲುಗಳನ್ನು ಅಂಟಿಸಿಕೊಂಡು ಬಂದಿದ್ದಾನೆ.! ಹಾಗಾಗಿ ರವಿ ಕಾಣದ್ದನ್ನು ಕವಿ ಕಂಡನಲ್ಲವೇ!" ಎಂದು ಧೂರ್ಜಟಿಯ ಪರಿಹಾರ. ತೆನಾಲಿರಾಮನೂ ಹಲ್ಲುದಿರಿಸಿಕೊಂಡಿದ್ದಲ್ಲದೇ ಮೂಗು ಮುರಿಸಿಕೊಂಡ ಎಂಬುದು ದಿಟವಾಗಿಯೂ ರಸಮಯವಾದ ಪ್ರಸಂಗವೇ ಆಗಿದೆ.


~~~~~~~~~~~~~~
(ಪದ್ಯಾನುವಾದಗಳು -
*ಬ್ರಹ್ಮಪುರಿಯ ಭಿಕ್ಷುಕದಲ್ಲಿ ಶತಾವಧಾನಿ ಗಣೇಶರ ಅನುವಾದ
**ಬ್ರಹ್ಮಪುರಿಯ ಭಿಕ್ಷುಕದಲ್ಲಿ ಶತಾವಧಾನಿ ಗಣೇಶರ ಅನುವಾದ
*** ಕಾವ್ಯಕಲ್ಪದಲ್ಲಿ ಶತಾವಧಾನಿ ಗಣೇಶರ ಅನುವಾದ
 # ನನ್ನದೇ ಅನುವಾದ
## ನನ್ನದೇ ಅನುವಾದ
###ನನ್ನದೇ ಅನುವಾದ)

ಗುರುವಾರ, ಮಾರ್ಚ್ 31, 2016

ಸಹೃದಯಕಾಲ ೨೨- ಕೆಳದಿಯ ಕಬ್ಬು

        ಬಹುಕಾಲದಿಂದ ಒಳ್ಳೆಯ ಪದ್ಯಗಳನ್ನು ಓದದಿರುವ ಕಾರಣಕ್ಕೋ ಅಥವಾ ಬರೆಯುವಲ್ಲಿನ ಆಲಸ್ಯಕ್ಕೋ ಇಲ್ಲಿ ಯಾವ ಪದ್ಯದ ಕುರಿತೂ ಬರೆಯಲೇ ಇಲ್ಲ. ಸಾಮಾನ್ಯವಾಗಿ ಕಾವ್ಯವೊಂದರಲ್ಲಿ ಕಥಾನಕವನ್ನಷ್ಟೇ ಹೇಳುವಂತೆ ಇದ್ದರೆ ಅಲ್ಲಿ ಸ್ವಾರಸ್ಯವೇನೂ ಕಾಣುವುದಿಲ್ಲ ಎಂದೇ ಹೇಳಬಹುದು. ಅದಕ್ಕೂ ಅಪವಾದವೆಂಬಂತೆ ಹಲವು ಕಥನಗಳಿವೆ. ಧ್ವನಿಸಿದ್ಧಾಂತದಲ್ಲಿ ಹೇಳುವ ಪ್ರಬಂಧಧ್ವನಿಯೊಂದಿದ್ದರೂ ಕಾವ್ಯ ರಸ್ಯವಾಗುತ್ತದೆ. ಇದಕ್ಕೆ  ಉದಾಹರಣೆಯಾಗಿ ಮಹಾಭಾರತದಂತಹವನ್ನು ಹೇಳುತ್ತಾರೆ  ಅದಲ್ಲದೇ ಇನ್ನೂ ಕೆಲವು ಕಾವ್ಯಗಳಲ್ಲಿ ಪ್ರಬಂಧಧ್ವನಿ ಇರದಿದ್ದರೂ ಪ್ರತಿಪದ್ಯವೂ ಧ್ವನಿಪೂರ್ಣವಾಗಿರುತ್ತದೆ. ಕೆಲವೊಂದು ಕಾವ್ಯಗಳಲ್ಲಿ ಕೆಲವು ಪದ್ಯಗಳು ಮಾತ್ರ ಧ್ವನಿಪೂರ್ಣವಾಗಿರುತ್ತದೆ. "ನಾಸ್ತ್ಯಚೋರಃಕವಿಜನಃ" ಎಂಬ ಉಕ್ತಿಯಂತೆ ಕವಿಯಾದವನು ಉಳಿದ ಕವಿಗಳ ಕಲ್ಪನೆಯನ್ನು ಕದಿಯದೇ ಹೋಗಲಾರ ಎಂಬುದಂತೂ ಸತ್ಯ. ಒಬ್ಬ ಕವಿಯ ಕೈ ಇನ್ನೊಬ್ಬನ ಕಿಸೆಯೊಳಗೆ ಎಂದು ಹೇಳಬಹುದು. ಅಂತಾದರೂ ಸ್ವಪ್ರತಿಭೆಯಿಂದ ಪರರ ವಸ್ತು ಎಂಬುದನ್ನು ಕಾಣದಂತೆ ಮರೆಮಾಚಬಲ್ಲವನೇ ನಿಜವಾದ ಕವಿ. ಕುಮಾರವ್ಯಾಸ -ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ- ಎಂದು ಹೇಳಿಕೊಂಡರೂ ಒಂದೆರಡು ಕಡೆ ಸೂಕ್ಷ್ಮಮತಿಗಳಿಗೆ ಅವನು ಬೇರೆಯ ಕವಿಯ ಮಾತನ್ನು ಬಳಸಿದ್ದು ಕಾಣುತ್ತದೆ. ಬೆಳಕಿನ ಕಿರಣ ಪಟ್ಟಕದ(prism) ಮೂಲಕ ಹಾದು ಬಂದಾಗ ಮೂಲರೂಪವನ್ನು ಬಿಟ್ಟು ಹೇಗೆ ಮನೋಹರವಾಗಿ ಕಾಣುತ್ತದೆಯೋ ಹಾಗೆ ಕುಮಾರವ್ಯಾಸ ಅನ್ಯಕವಿಗಳ ಮಾತನ್ನು ಬದಲಾಯಿಸಿ ಬಳಸುತ್ತಾನೆ. ಉಳಿದ ಹಲವು ಹಳೆಯ ಕವಿಗಳಿಗೆ ಇದು ಸಾಧ್ಯವಾಗದೇ ಮೂಲ ಕವಿಯ ಶಬ್ದಶಬ್ದವನ್ನೂ ಹಾಗೆಯೇ ಇಡುತ್ತಾರೆ. ಪಂಪ ಹಲವು ಪದ್ಯಗಳನ್ನು ಪದಪುಂಜಗಳನ್ನೂ ಸಂಸ್ಕೃತದ ಕವಿಗಳಾದ ಬಾಣಭಟ್ಟ, ಭಟ್ಟನಾರಾಯಣ ಕಾಳಿದಾಸ ಮೊದಲಾದವರಿಂದ ಕೊಳ್ಳುತ್ತಾನೆ, ರನ್ನ ನೇರವಾಗಿ ಪಂಪನ ಪದಪುಂಜಗಳನ್ನೇ ಬಳಸಿಬಿಡುತ್ತಾನೆ. ಇವೆಲ್ಲವನ್ನು ಮೀರಿಯೂ ಅವರ ಕಲ್ಪನೆಯ ಪದ್ಯಗಳು ಅಲ್ಲಲ್ಲಿ ಮೂಡಿಬಂದಾಗ ಸೊಗಸೆನಿಸುತ್ತದೆ. ರಸಿಕರಿಗೆ ಆಹ್ಲಾದವನ್ನು ನೀಡುತ್ತದೆ. 
        ಕವಿಯ ಕಾವ್ಯದ ವಸ್ತುವೂ ಕೂಡ ಕಥನಕ್ಕೆ ಮುಖ್ಯ. ಹಿಂದೆ ಹೇಳಿದ ಕಥೆಗಳನ್ನೇ ಚರ್ವಿತಚರ್ವಣ ಮಾಡುವುದರಿಂದ ಹೊಸದನ್ನು ಕೊಡಲಾಗುವುದಿಲ್ಲ. ಅಲ್ಲದೇ ಹಿಂದಿನ ಕವಿಯನ್ನು ಮೆಟ್ಟಿಕ್ಕಿ ನಿಲ್ಲುವ ಬಲ್ಮೆ ಇದ್ದರೆ ಮಾತ್ರ ಈ ಕವಿ ಬದುಕಬಲ್ಲವನಾಗುತ್ತಾನೆ. ಕಾಳಿದಾಸಂಗೆ ನಾಲ್ಮಡಿ ಅಸಗಂಗೆ ನೂರ್ಮಡಿ ಎಂದೆಲ್ಲ ಹೇಳಿಕೊಂಡ ಪೊನ್ನನ ಕಾವ್ಯವನ್ನು ಓದುವವರು ಯಾರಾದರೂ  ಇದ್ದಾರೆಯೇ ಎಂದು ಹುಡುಕಬೇಕಾದ ಪರಿಸ್ಥಿತಿ ಇದೆ. ಬರಿಯ ಬಾಯ್ಮಾತಿನಲ್ಲಿ "ಮುನ್ನಿನ ಕಬ್ಬಮನೆಲ್ಲಮಿಕ್ಕಿ ಮೆಟ್ಟಿದುವು " ಎಂದು ಹೇಳಿಕೊಂಡವನ ಕಾವ್ಯವೂ ಕೂಡ ಕವಿತ್ವಕ್ಕೆ ಬಿಟ್ಟು ಬೇರೆ ರಾಜಕೀಯಕಾರಣಗಳಿಗೆ ಉಲ್ಲೇಖಿಸಲಷ್ಟೇ ಯೋಗ್ಯವಾದಂತಾಗಿರುವುದು ವಿಪರ್ಯಾಸ! ಅಲ್ಲದೇ ಕಾಲದ ಕಟು ಸತ್ಯ! ಅಂತಹ ಕಾವ್ಯಗಳನ್ನೇ ಬಳಿಕ ಬಂದ ಕಾವ್ಯಗಳು ಮೆಟ್ಟಿಕ್ಕುತ್ತವೆಯೆಂಬುದೂ ಸತ್ಯ. ಪಂಪಭಾರತವನ್ನು ಸ್ವಲ್ಪ ವಿಭಿನ್ನವಾಗಿ ರನ್ನ ಹೇಳಿದನಾದರೂ ಅವನು ಪಂಪನಿಗೆ ಪ್ರತಿಸ್ಫರ್ಧಿಯಾಗಲಿಲ್ಲ. ಆದರೆ ಕುಮಾರವ್ಯಾಸನ ಭಾರತಕಥಾನಕ ಪಂಪನನ್ನು ದಿಗ್ದಿಗಂತಗಳ ಮೇರೆಯನ್ನು ದಾಟಿಸಿ ನೂಂಕಿಬಿಟ್ಟಿತು. ರಾಮಾಯಣದ ವಿಚಾರದಲ್ಲೂ ಅಷ್ಟೇ! ಫಣಿರಾಯ ತಿಣುಕುವಂತೆ ಕಂಡು ಬರುತ್ತಿದ್ದ ರಾಮಾಯಣಾಶ್ರಿತ ಕಾವ್ಯಗಳಲ್ಲಿ ಪಂಪರಾಮಾಯಣವನ್ನು ಕೇಳುವವರಿಲ್ಲ. ಜೈನರಾಮಾಯಣಗಳ ಪರಂಪರೆ ಹೆಸರಿಗಷ್ಟೇ ಉಳಿದಿದೆ. ಕುವೆಂಪು ಅವರ ರಾಮಾಯಣದರ್ಶನ ಅವೆಲ್ಲಕ್ಕೂ ತಿಲಾಂಜಲಿಯನ್ನಿಟ್ಟಿತೆಂದೇ ಹೇಳಬಹುದು. ಅದರ ಬಳಿಕವೂ ಮಹಾನ್ವೇಷಣೆಯ ಸಾಹಸವನ್ನು ಮಾಡಿದರೆ ರಾಮಾಯಣದರ್ಶನವನ್ನು ಮೀರಿಸುವಂತಹ ಸತ್ತ್ವವಿರಬೇಕು. ಅದಿಲ್ಲದಿರುವ ಕಾರಣಕ್ಕೆ ಯಾವ ಪುಸ್ತಕಪ್ರೇಮಿಯಲ್ಲೂ ಅನ್ವೇಷಿಸಿದರೂ ಕಾಣದಂತಾಗಿದೆ ಆ ಬಳಿಕ ಬಂದ ಇಂತಹ ಕಾವ್ಯಗಳು.
      ಹೀಗಲ್ಲದೇ ಕವಿಯೊಬ್ಬ ಸಮಕಾಲೀನ ಕಥಾನಕವನ್ನು ಕಾವ್ಯದಲ್ಲಿ ಚಿತ್ರಿಸಿದಾಗ ಅದರ ಸೊಗಸು ನೂತನವಾಗುತ್ತದೆ. ಅಲ್ಲದೇ ಅನ್ಯೋಚ್ಚಿಷ್ಠವೂ ಆಗಲಾರದು. ಇಂತಹ ಕೃತಿಗಳು ಸಂಸ್ಕೃತದ ಕಲ್ಹಣನ ರಾಜತರಂಗಿಣಿ ಮೊದಲಾದವು ಎಂದು ಕೇಳಿದ್ದಷ್ಟೆ. ಕನ್ನಡದಲ್ಲಿ ದೇವಚಂದ್ರನ ರಾಜಾವಳಿಕಥೆ ತಿರುಮಲಾರ್ಯನ ಚಿಕ್ಕದೇವರಾಯವಂಶಾವಳಿ ಮೊದಲಾದವುಗಳಿವೆ. ಅಲ್ಲದೇ  ಇನ್ನೊಂದು- ಐತಿಹಾಸಿಕವಾದ ಕಥಾನಕದ ಬಿತ್ತರ ಮಾಡುವ ಲಿಂಗಣ್ಣ ಕವಿಯ ಕೆಳದಿನೃಪವಿಜಯ. ಹನ್ನೆರಡು ಆಶ್ವಾಸಗಳ ಈ ಕಾವ್ಯ ಉತ್ತಮವಾದ ಚಂಪೂಶೈಲಿಯಲ್ಲಿದೆ. ಐತಿಹಾಸಿಕ ಸಂಶೋಧನೆಗಳಿಗೆ ಬಹುಮುಖ್ಯವಾದ ಆಕರವಾಗಿದೆ. ಪ್ರಸ್ತುತ ಇಲ್ಲಿ ಕಾವ್ಯದ ಸ್ವಾರಸ್ಯವನ್ನು ಹೇಳುತ್ತಿರುವ ಕಾರಣ- ಅದಾಗಳೇ ಮೂಗಿಗಿಂತ ಮೂಗುತಿ ಭಾರ ಎಂಬಂತೆ ಪೀಠಿಕೆಯೇ ವಿಸ್ತಾರವಾದ ಕಾರಣ- ಅವನ್ನೆಲ್ಲ ಪಕ್ಕಕ್ಕಿರಿಸಿ ಅಲ್ಲಿ ಬರುವ ಒಂದು ವರ್ಣನೆಯನ್ನು ಇಲ್ಲಿ ಉಲ್ಲೇಖಿಸುವೆ.

      ಮೊದಲ ಆಶ್ವಾಸದಲ್ಲಿಯೇ ಸಮುದ್ರವರ್ಣನೆಯಿಂದ ಕವಿ ಆರಂಭಿಸುತ್ತಾ ಕರ್ಣಾಟಕದ ವರ್ಣನೆಗೆ ಬರುತ್ತಾನೆ. ಅಲ್ಲಿನ ಕಬ್ಬಿನ ಗದ್ದೆಗಳ ವರ್ಣನೆ ಮಾಡುತ್ತಾ ಹೇಳುವ ಪದ್ಯವೊಂದು ಹೀಗಿದೆ-
ಜಲಜಜನಮರ್ದಂ ಬೆಳ್ಳಿಯ 
ಕೊಳವಿಗಳೊಳ್ ತುಂಬಿ ಗಂಟನೊಂದಿಸಿ ಗರುಡಂ 
ತಿಳಿಯದೊಲವನಿಳೆಯೊಳ್ ನೆಲೆ
ಗೊಳಿಸಿದನೆನೆ ಮೆರೆದುದಮಳಪುಂಡ್ರೇಕ್ಷುವನಂ ||೨೦||
"ಅಮಲವಾದ ಪಟ್ಟೆಪಟ್ಟೆಯ ಕಬ್ಬಿನ ಗದ್ದೆಯೆಂಬುದನ್ನು ನೋಡಿದರೆ- ಬ್ರಹ್ಮ ಅಮೃತವನ್ನು ಬೆಳ್ಳಿಯ ಕೊಳವೆಗಳಲ್ಲಿ ತುಂಬಿಸಿ ಗಂಟನ್ನೂ ಹಾಕಿ ಗರುಡನಿಗೆ ತಿಳಿಯದ ಹಾಗೆ ಭೂಮಿಯಲ್ಲಿ ನೆಲೆಗೊಳಿಸಿದಂತೆ ಕಾಣುತ್ತಿತ್ತು" ಎಂದು ಹೇಳುತ್ತಾನೆ. ಇಲ್ಲಿ ಪೌರಾಣಿಕಕಥನದ ಸಮುದ್ರಮಥನದಲ್ಲಿ ಪಡೆದ ಅಮೃತವನ್ನು ಗರುಡ ಕದಿಯಲೆಂದು ಬರುವುದನ್ನು ತೆಗೆದುಕೊಂಡು ಅದಕ್ಕಾಗಿಯೇ ಆ ಅಮೃತವನ್ನು ಬೆಳ್ಳಿಯ ಕೊಳವೆಯಲ್ಲಿ ತುಂಬಿಸಿದ ಎಂದು ಹೇಳುವಲ್ಲಿ ಕಬ್ಬಿನ ಹಾಲು ಅಮೃತದಂತಿದೆ ಎಂಬುದನ್ನೂ ಧ್ವನಿಸುತ್ತಾ ಅದರ ಗಂಟುಗಳನ್ನು ಬ್ರಹ್ಮ ಅಮೃತ ತುಂಬಿಸಿ ಹಾಕಿಟ್ಟ ಗಂಟು ಎಂದೂ ಹೇಳಿ ಉತ್ತಮವಾದ ಒಂದು ಸುಂದರಚಿತ್ರಣವನ್ನು ಕೊಡುತ್ತಾನೆ. ತುಂಬ ವಿಶಿಷ್ಟವಾದ ಈ ಕಲ್ಪನೆ ಸ್ವೋಪಜ್ಞವಾಗಿದೆ.
ಇಲ್ಲಿ ಕೆಲವು ಹೊಸಗನ್ನಡದ ಶಬ್ದಪ್ರಯೋಗಗಳಿಂದ ಭಾಷಾಶೈಥಿಲ್ಯವಿದ್ದರೂ ಪದ್ಯಕ್ಕೆ ತೊಂದರೆಯಾಗಿಲ್ಲ. ಬ್ರಹ್ಮ ಯಾಕೆ ಅಮೃತವನ್ನು ಅವಿಸಿಟ್ಟ ಎಂಬ ಪ್ರಶ್ನೆ ಎದ್ದರೂ ಕಬ್ಬಿನ ಸೃಷ್ಟಿ  ಬ್ರಹ್ಮನಿಂದಾಯ್ತಲ್ಲ ಎಂದು ಸಮಾಧಾನ ಹೇಳಬಹುದು.

 ಇದರ ಮುಂದಿನ ಪದ್ಯವೂ ಇಂತಹುದೇ ಕಲ್ಪನೆಯಲ್ಲಿಯೇ ಇದೆ. ಆಲೆಮನೆಯ ವರ್ಣನೆ-
ಹರಿಯೊರ್ಮೆಯಮರ್ದನಮರ
ರ್ಗೆರೆದೊಡೆ ನವಸುಧೆಯನೆರೆದಪೆವು ನಿಮಗನಿಶಂ
ನರರಿತ್ತ ಬನ್ನಿಮೆನುತುಂ
ಕರೆವಂತಿರೆ ಮೊರೆವುವಿಕ್ಷುಯಂತ್ರಪ್ರಚಯಂ ||೨೧||
"ಹರಿ ಮೋಹಿನಯ ಅವತಾರದಲ್ಲಿ ಅಮೃತವನ್ನು ದೇವತೆಗಳಿಗೆ ಕೊಟ್ಟುಬಿಟ್ಟ. ಹೋಗಲಿ ಬಿಡಿ. ನಿಮಗೆ ನಿತ್ಯವೂ ಹೊಸದಾದ ಅಮೃತವನ್ನು ಕೊಡುತ್ತೇವೆ. ಓ ನರರೇ ಇಲ್ಲಿ ಬನ್ನಿ ಎಂದು ಕರೆಯುತ್ತಿರುವಂತೆ ಆಲೆಮನೆಯ ಕಬ್ಬಿನ ಗಾಣಗಳು (ಇಕ್ಷುಯಂತ್ರ) ಧ್ವನಿಮಾಡುತ್ತಿದ್ದವು."
ಇಲ್ಲಿಯೂ ಕೂಡ ನವನವೀನವಾದ ಕಲ್ಪನೆಯ ಜೊತೆಗೆ ಗಾಣದ ಶಬ್ದವನ್ನು ಹೀಗೆ ಕರೆದಂತೆ ಭಾಸವಾಗುತ್ತಿತ್ತು ಎಂದು ಬರ್ಣಿಸುವುದರಲ್ಲಿ ಕವಿ ಅನನ್ಯನಾಗಿಬಿಡುತ್ತಾನೆ. ಕಬ್ಬಿನ ರಸ ಸಿಹಿಯಾಗಿ ಅಮೃತಸಮಾನವಾಗಿತ್ತು ಎಂದು ಬಣ್ಣಿಸಿ ಅಮೃತಸಮಾನವಾದ ಕಾವ್ಯರಸವನ್ನು ನಮಗೆ ಉಣಿಸುತ್ತಾನೆ. ಇವಿಷ್ಟರಲ್ಲೇ ನಿಜವಾದ ಸಹೃದಯರು ಅಮೃತವನ್ನೇ ಉಂಡುದಣಿಯಬಹುದೇನೋ! ಇಂತಹ ಮುತ್ತುಗಳನ್ನು ಕಟ್ಟಿ ಕೋದ ಪದ್ಯಮಾಲಿಕೆಯನ್ನು ನಿಜವಾಗಲೂ ನೋಡಿದರೇ ನಮ್ಮ ಕಣ್ದಣಿಯುತ್ತದೆ.

ಬುಧವಾರ, ಜನವರಿ 27, 2016

ಆಂಡಯ್ಯನ ಪದಪದ್ಧತಿ-


ಪದಾರ್ಥಚಿಂತಾಮಣಿಯ ಈ ಸಾಲಿನ ಪದಸಂಸ್ಮರಣ ಸಂಚಿಕೆಯಲ್ಲಿ ಪ್ರಕಟವಾದ ಲೇಖನ-

ಕನ್ನಡದಲ್ಲಿ ಗದ್ಯಕೃತಿಯಾದ ಶಿವಕೋಟ್ಯಾಚಾರ್ಯನ “ವಡ್ಡಾರಾಧನೆ” (ಸುಮಾರು ಕ್ರಿ.ಶ ೯೨೦) ಹಾಗೂ ಕಾವ್ಯಲಕ್ಷಣವನ್ನು ವಿವರಿಸುವ ಶ್ರೀವಿಜಯನ “ಕವಿರಾಜಮಾರ್ಗಂ” (ಸುಮಾರು ಕ್ರಿಶ ೮೫೦) ಮೊದಲಾದ ಕೃತಿಗಳು ಲಭ್ಯವಿದ್ದರೂ ಪಂಪನ “ವಿಕ್ರಮಾರ್ಜುನವಿಜಯಂ” ಹಾಗೂ “ಆದಿಪುರಾಣಂ” ಕಾವ್ಯಗಳನ್ನೇ ಆದಿಮಕಾವ್ಯಗಳೆಂದು ಪರಿಗಣಿಸಿ ಪಂಪನನ್ನು ಆದಿಕವಿ ಎಂದು ಕರೆದಿದ್ದಾರೆಂಬುದು ಸರ್ವವಿದಿತ. ಪಂಪನಿಗಿಂತ ಪೂರ್ವದಲ್ಲಿ ಇದ್ದ ಹಲವು ಕವಿಗಳ ಉಲ್ಲೇಖ ಸಿಕ್ಕರೂ ಅವರ ಕಾವ್ಯಗಳು ಲಭ್ಯವಿಲ್ಲದ ಕಾರಣ ಅವರ ಕಾವ್ಯದ ಬಗೆಗಾಗಲೀ ಶೈಲಿ-ವಸ್ತುಗಳ ಬಗೆಗಾಗಲೀ ಯಾವ ಮಾಹಿತಿಯೂ ಸಿಗುವುದಿಲ್ಲ. ಹೀಗೆ ಪಂಪನಿಂದ ಮೊದಲಾಗಿ ಪೊನ್ನ, ನಾಗವರ್ಮ, ರನ್ನ, ಚಂದ್ರರಾಜ, ನಯಸೇನ, ನೇಮಿಚಂದ್ರ, ಹರಿಹರ, ರುದ್ರಭಟ್ಟ, ಷಡಕ್ಷರಿ  ಮೊದಲಾದ ಕವಿಗಳಿಂದ ರಚಿತವಾದ ಕೃತಿಗಳನ್ನು ಒಳಗೊಂಡು ಇತ್ತೀಚಿನ ಬಸವಪ್ಪಶಾಸ್ತ್ರಿಗಳಿಂದ ರಚಿತವಾಗಿರುವವರೆಗೆ ಅಸಂಖ್ಯ  ಚಂಪೂ ಕಾವ್ಯಗಳು ಸಿಗುತ್ತವೆ. ಚಂಪೂ ಎಂದರೆ ಗದ್ಯ-ಪದ್ಯಗಳ ಮಿಶ್ರಣವಿರುವಂತಹ ಕಾವ್ಯ. ಅಲ್ಲದೇ ಬರಿಯ ಪದ್ಯಕಾವ್ಯಗಳನ್ನೂ ಷಟ್ಪದಿಕಾರರಾದ ರಾಘವ,ಕುಮಾರವ್ಯಾಸ, ಲಕ್ಷ್ಮೀಶ ಚಾಮರಸ, ಕುಮಾರವಾಲ್ಮೀಕಿ ಮೊದಲಾದವರ ಅನೇಕರ ಕೃತಿಗಳಿಂದ ಕಾಣಬಹುದು. ಅಲ್ಲದೇ ಒಂದೆರಡು ಸೂಚನಾಪದ್ಯಗಳನ್ನು(ಗಾಹೆ) ಬಿಟ್ಟರೆ ವಡ್ಡಾರಾಧನೆಯೇ ಮೊದಲ ಗದ್ಯಕೃತಿಯಾಗಿ ಉಪಲಬ್ಧವಿದೆ. ಅಲ್ಲಿಂದ ಕೆಂಪುನಾರಾಯಣನ ಕೃತಿ ಕೂಡ ಗದ್ಯಕಾವ್ಯಕ್ಕೆ ಉದಾಹರಣೆಯಾಗಿ ಸಿಗುತ್ತದೆ.
ಈ ಎಲ್ಲ ಉಪಲಬ್ಧ ಕಾವ್ಯಗಳ ಅಂಕಿ-ಅಂಶಗಳನ್ನು ಗಮನಿಸಿದರೆ ಚಂಪೂಕಾವ್ಯಗಳ ಸಂಖ್ಯೆಯೇ ಅಧಿಕವಾಗಿದೆ ಎಂದು ತಿಳಿಯುತ್ತದೆ. ಚಂಪುವಿನಲ್ಲಿ ಇರುವ ಗದ್ಯ-ಪದ್ಯ ಮಿಶ್ರಣ ಸ್ವಾತಂತ್ರ್ಯದ ಕಾರಣವೋ ಏನೋ ಕವಿಗಳ ಮನಸ್ಸು ಆ ಕಡೆಗೆ ಹೆಚ್ಚು ತುಡಿದಿದೆ. ಇಂತಹ ಎಲ್ಲಾ ಚಂಪೂ ಕಾವ್ಯಗಳೂ ಹಲವು ಆಶ್ವಾಸಗಳಲ್ಲಿ ವಿಭಕ್ತವಾಗಿ ಸಾಂಪ್ರದಾಯಿಕವಾದ ಶೈಲಿಯಿಂದ ಕನ್ನಡಸಂಸ್ಕೃತಚ್ಛಂದೋವೈವಿಧ್ಯದಿಂದ ಕೂಡಿಕೊಂಡು ಬಿಗಿಯಾದ ಬಂಧಗಳಲ್ಲಿ ಅಳವಟ್ಟು, ಅಷ್ಟಾದಶವರ್ಣನೆಗಳೇ ಮೊದಲಾಗಿ ಹಲವಾರು ಲಾಕ್ಷಣಿಕರು ವಿಧಿಸಿರುವ ಲಕ್ಷಣಗಳನ್ನು ಸರಿದೂಗಿಸಿಕೊಂಡಿವೆ. ಇದರಲ್ಲಿ ಒಂದು ಹೊಸದಾದ ಪ್ರಯೋಗವನ್ನು ಮಾಡಲು ಹೊರಟಿರುವನಂತೆ ಕಾಣುವ ಕವಿಯೆಂದರೆ ಆಂಡಯ್ಯ. ಸರಳವಾದ ಮನ್ಮಥ ಶಿವನನ್ನು ಬಾಣಬಿಟ್ಟು ಸೋಲಿಸಲು ಹೋಗುವ ಪ್ರಸಂಗವನ್ನು ವರ್ಣಿಸಿ ಈತ ಬರೆದ ಕಾವ್ಯವೇ “ಕಬ್ಬಿಗರ ಕಾವಂ” ಅಥವಾ “ಕಾವನ ಗೆಲ್ಲಂ”.
ಕವಿಯ ಕಾಲ-ದೇಶ
ಕವಿ ಆಂಡಯ್ಯ ಪೂರ್ವಕವಿಪದ್ಧತಿಯಂತೆ ಪೂರ್ವಕವಿಸ್ತುತಿಯನ್ನು ಮಾಡುತ್ತಾ-
“ಎನ್ನೀ ಕಬ್ಬದೊಳೆಂದುಂ | ಸನ್ನಿದಮಾಗಿರ್ಕೆ ಕಣ್ಣಮಯ್ಯನ ಕಡುಜಾಣ್ |
ರನ್ನನ ಮೆಯ್ಸಿರಿ ಗಜಗನ | ಬಿನ್ನಣಮಗ್ಗಳನ ಕಾಣ್ಕೆ ಜನ್ನಿಗನ ಜಸಂ||೪||
ಎಂದು ಹೇಳಿದ್ದನ್ನು ಅವಲೋಕಿಸಿ ಜನ್ನನಿಗಿಂತ ಈಚಿನ ಕಾಲದವನೆಂದು ಸ್ಪಷ್ಟವಾಗುತ್ತದೆ. ಹಾಗಾಗಿ ಹದಿಮೂರನೇ ಶತಮಾನದಲ್ಲಿದ್ದ ಎಂಬುದೂ ಸ್ಪಷ್ಟವಾಗುತ್ತದೆ. ಹಲವು ವಿದ್ವಾಂಸರ ಸುಮಾರು ಕ್ರಿ.ಶ ೧೨೨೫ ರಲ್ಲಿ ಇದ್ದಿರಬೇಕು(೧) ಎಂದರೆ ಇನ್ನು ಕೆಲವರು ಕದಂಬ ಕಾಮದೇವನನ್ನು ಆಶ್ರಯಿಸಿದ್ದನೆಂಬ ಕಾರಣ ಅವನ ಕಾಲವನ್ನು ಅನ್ವಯಿಸಿ ಕ್ರಿ.ಶ ೧೧೮೦ ರಿಂದ ೧೨೧೭ರ ಅವಧಿಯಲ್ಲಿ ಇದ್ದಿರಬೇಕೆಂದು ಹೇಳುತ್ತಾರೆ.(೨) ಒಟ್ಟಾರೆಯಾಗಿ  ಆಂಡಯ್ಯನು ಹದಿಮೂರನೆಯ ಶತಮಾನದವನು ಎಂಬುದನ್ನು ನಿಶ್ಚಯಿಸಿಕೊಳ್ಳಬಹುದು.
ಇನ್ನು ಕವಿ “ಕನ್ನಡಮೆನಿಪ್ಪಾನಾಡು” ಎಂದೇ ಹೇಳಿರುವ ಕಾರಣ ಅವನದು ಯಾವ ಊರು ಎಂದು ಸ್ಪಷ್ಟವಾಗದಿದ್ದರೂ ಕೆಲವರು ಕದಂಬ ರಾಜಾಶ್ರಿತನಾಗಿದ್ದ ಕಾರಣ “ಬನವಾಸಿ” ಆಗಿರಬೇಕೆಂದು ಊಹಿಸುತ್ತಾರೆ.(೨) ಅಲ್ಲದೇ “ಪೂವಿನ ಪೊೞಲೆಂಬುದೊಂದು ಪೆಸರೆಸೆದಿರ್ಕುಂ||೨೫||” ಎಂದು ಒಂದು ಪದ್ಯದಲ್ಲಿ “ಹೂವಿನ ಹೊಳಲು” ಎಂಬ ಹೆಸರನ್ನು ಉಲ್ಲೇಖಿಸಿರುವ ಕಾರಣ ಅಲ್ಲಿ ಬೇರೆಯದೇ ಆದ ಒಂದು ಊಹೆಗೂ ಅವಕಾಶವಿದೆ.   
ಕಥಾವಸ್ತು
ಪೌರಾಣಿಕ ಕಥಾನಕಗಳಲ್ಲಿ ಬಹುಪ್ರಸಿದ್ಧವಾದ ಶಿವನನ್ನು ಮನ್ಮಥ ತನ್ನ ಬಾಣಗಳಿಂದ ಗೆಲ್ಲಲು ಹೋಗುವ ಪ್ರಸಂಗವನ್ನೇ ಕವಿ ಆಯ್ದುಕೊಂಡಿದ್ದರೂ ಹಲವು ಬದಲಾವಣೆಗಳನ್ನು ಯಥಾಚಿತ್ತವಾಗಿ ಮಾಡಿಕೊಂಡಿದ್ದಾನೆ. ಮನ್ಮಥನ ಕಡೆಯವನಾದ ಚಂದ್ರನನ್ನು ಶಿವನು ಅಪಹರಿಸಿಕೊಂಡು ಹೋಗಿದ್ದಾನೆ ಎಂದು ತಿಳಿದು ತನ್ನ ಪರಿವಾರ ಸಹಿತನಾಗಿ ಅವನ ಮೇಲೆ ದಂಡೆತ್ತಿ ಹೋಗಿ ಅವನನ್ನು ಸೋಲಿಸಿ ಶಿವನನ್ನು ಅರೆವೆಣ್ಣಾಗಿ ಮಾಡುತ್ತಾನೆ ಎಂಬುದು ಕಥಾಸಾರ. ಆದರೆ ವಸ್ತುತಃ ಪ್ರಸಿದ್ಧವಿದ್ದದ್ದು ಮನ್ಮಥನನ್ನು ಶಿವ ತನ್ನ ನೇತ್ರಾಗ್ನಿಯಿಂದ ಸುಟ್ಟು, ಕಾಲದಲ್ಲಿ ಪಾರ್ವತಿಯ ತಪಸ್ಸಿಗೆ ಮೆಚ್ಚಿ ಅವಳನ್ನು ವರಿಸಿದನೆಂಬುದು. ಅಲ್ಲದೇ ರತಿಯ ವಿಲಾಪದಿಂದಾಗಿ ಕಾಮನಿಗೆ ಅನಂಗತ್ವವನ್ನು ಕೊಟ್ಟನು ಎಂಬುದು ಮೂಲ ಕಥೆ. ಆಂಡಯ್ಯನ ಈ ಬದಲಾವಣೆಗೆ ಮೂಲ ಯಾವುದೆಂದು ತಿಳಿಯದಿದ್ದರೂ, ಅದು ಕವಿಕಲ್ಪಿತಮಾತ್ರವಲ್ಲ- ಕವಿಗೆ ಆಶ್ರಯವನ್ನಿತ್ತ ಕದಂಬ ಕಾಮದೇವನು “ಯುದ್ಧರಂಗತ್ರಿಣೇತ್ರ” ಎಂಬ ಬಿರುದನ್ನು ಹೊಂದಿದ್ದ ಹೊಯ್ಸಳರಾಜ ವೀರಬಲ್ಲಾಳನನ್ನು ಗೆದ್ದ ರಾಜಕೀಯಕಥಾನಕ ಇರಬಹುದು ಎಂದು ಇತಿಹಾಸಕಾರರೂ,ಸಂಶೋಧನಕಾರರೂ ಅಭಿಪ್ರಾಯ ಪಡುತ್ತಾರೆ. ಅದಕ್ಕೆ ಪೂರಕವಾಗಿ ರುದ್ರಭಟ್ಟನ “ಅರಿಕಾಮಧ್ವಂಸಿ……..ಯುದ್ಧರಂಗತ್ರಿಣೇತ್ರಂ||೩||” ಎಂಬ ಪದ್ಯವೂ ವೀರಬಲ್ಲಾಳ ಹಾಗೂ ಕದಂಬ ಕಾಮದೇವರ ನಡುವೆ ವೈರವಿತ್ತೆಂದು ಪುಷ್ಟೀಕರಿಸುತ್ತದೆ.(೩) ಆದರೆ ಕಥಾವಸ್ತುವಿನಲ್ಲಿ ಬದಲಾವಣೆ ಮಾಡಿಕೊಂಡ ಬಳಿಕ ಅಂತ್ಯದಲ್ಲಿ ಶಿವನು ಅರೆವೆಣ್ಣಾದರೂ ಕಾಮನಿಗೆ “ಮುಂದೆ ನಿಂತು ಹಿರಿಯರು ಎಂಬುದನ್ನು ಯೋಚಿಸದೆ ಸೊಕ್ಕಿನಿಂದ ನನ್ನ ಜೊತೆ ಕಾದಾಡಿದೆ. ಹಾಗಾಗಿ ನಿನ್ನ ಪ್ರಿಯೆಯನ್ನು ಸೇರದೆ ಬೇರೆ ಎಲ್ಲಿಯಾದರೂ ನೀನು ಕಾಮ ಎಂಬುದನ್ನು ಮರೆತು ಇರು” ಎಂದು ಶಾಪ ಕೊಡುತ್ತಾನೆ. ಇಲ್ಲಿ ಸೋತವನು ಶಾಪ ಕೊಟ್ಟರೆ ಅದು ಸಫಲವಾಗುತ್ತದೆಯೇ- ಅಥವಾ ಗೆದ್ದವನು ಸೋತವನ ಶಾಪವನ್ನು ಅಂಗೀಕರಿಸುತ್ತಾನೆಯೇ ಎಂದೆಲ್ಲ ಅವಲೋಕಿಸಿದಾಗ ಹಾಸ್ಯಾಸ್ಪದವೆನಿಸಿಬಿಡುತ್ತದೆ! ಅಲ್ಲದೇ ಬತ್ತಲೆ ಕುಳಿತ ಜೈನಸಂನ್ಯಾಸಿಯೊಬ್ಬನನ್ನು ಕಂಡು ಹೆದರಿ ಸುಮ್ಮನೆ ಬರುವ ಮನ್ಮಥ ಶಿವನನ್ನು ಸೋಲಿಸುತ್ತಾನೆ ಎಂಬುದನ್ನು ಚಿತ್ರಿಸಿರುವುದು ಕವಿ ಜೈನಪಾರಮ್ಯವನ್ನು ಹೇಳಬೇಕೆಂಬ ಸ್ವಮತರತಿಯಿಂದ ಕೂಡಿರುವುದನ್ನು ಕಾಣಬಹುದು. ಹೀಗೆ ಕಥೆ ಮೂಲನಿಷ್ಠವಾಗಿರದಿದ್ದರೂ ನವೀನಸೃಷ್ಟಿಯಾಗಿ ಸಮಕಾಲೀನ-ರಾಜಕೀಯಚಿತ್ರಣವನ್ನು ಕೊಡುವ ಉದ್ದೇಶವಿದ್ದಂತೆ ಕಂಡು ನಿಶ್ಚಿತವಾದ ಗತಿಯಿಲ್ಲದೇ ಹೊಯ್ದಾಡುವಂತಿದ್ದರೂ ಅದರಲ್ಲಿನ ದೇಶೀಶಬ್ದಪ್ರಯೋಗ ಮೊದಲಾದ ಹಲವು ವೈವಿಧ್ಯಗಳಿಂದ ಇದು ಒಂದು ವಿಶಿಷ್ಟತೆ ಇರುವ ಕಾವ್ಯವಾಗಿದೆ.
ಚಿತ್ರಕೃಪೆ-ರಾಜೇಶ್ ಶ್ರೀವತ್ಸ
ಶೈಲಿ-
ಚಂಪೂ ಶೈಲಿಯದೇ ಕಾವ್ಯವಾದರೂ ಅಧ್ಯಾಯ-ಆಶ್ವಾಸಗಳೆಂಬ ಯಾವುದೇ ವಿಭಾಗಗಳಿಲ್ಲದೇ ೨೭೨ ಪದ್ಯಗಳಿಂದ ಹಾಗೂ ಅದಕ್ಕೆ ಯುಕ್ತವಾದ ಗದ್ಯಖಂಡಗಳಿಂದ ಒಂದು ಖಂಡಕಾವ್ಯದಂತಿದೆ (ಸಣ್ಣದಾದ ಕಾವ್ಯ). ಕವಿಯೇ ಹೇಳಿಕೊಂಡಂತೆ “ಸೊಗಯಿಪ ಸಕ್ಕದಂ ಬೆರೆಸಿದಲ್ಲದೆ ಕನ್ನಡದಲ್ಲಿ ಕಬ್ಬಮಂ ಬಗೆಗೊಳೆ ಪೇೞಲಾಱರಿನಿತುಂ………||೧೫||” “ಎಂದು ತಮತಮಗೆ ಬಲ್ಲವ | ರೆಂದೊಡೆ ನಾನವರ ಬಯಕೆಯ ಸಲಿಸುವೆನಿ | ನ್ನೆಂದಚ್ಚಗನ್ನಡಂ ಬಿಗಿ | ವೊಂದಿರೆ ಕಬ್ಬಿಗರ ಕಾವನೊಲವಿಂದೊರೆದೆಂ||೧೬|| ಎಂದು “ಹಿಂದಿನ ಕವಿಗಳಿಗೆ ಯಾರಿಗೂ  ಸಂಸ್ಕೃತವನ್ನು ಬೆರೆಸದೆ ಕನ್ನಡದಲ್ಲಿ ಕಾವ್ಯವನ್ನು ಹೇಳಲು ಸಾಧ್ಯವಾಗಲಿಲ್ಲ. ಈ ಕವಿಗೆ ಇದು ಮಾತನಾಡಿದಷ್ಟು ಸುಲಭದಲ್ಲಿ ಬಲ್ಮೆ ಸೇರಿಕೊಂಡಿದೆಯಲ್ಲದೇ ಬೇರೆಯವರಲ್ಲಿ ಸಾಧ್ಯವಿಲ್ಲ” ಎಂದು  ತಮ್ಮ ತಮ್ಮಲ್ಲಿ ಬಲ್ಲವರು ಹೇಳಿಕೊಂಡಾಗ ನಾನು ಅವರ ಬಯಕೆಯನ್ನು ಸಲ್ಲಿಸುವೆ ಎಂದು ಅಚ್ಚಗನ್ನಡದ ಬಿಗಿಯಲ್ಲಿ ಕವಿಗಳ ಕಾಮನ ಒಲವಿಂದ ಕಾವ್ಯವನ್ನು ಹೇಳುವೆ” ಎಂದು ಪ್ರಾರಂಭಿಸುತ್ತಾನೆ. ಹಾಗಾಗಿ ಈ ಕವಿಯಲ್ಲಿ ನಮಗೆ ಅಚ್ಚಗನ್ನಡ ಪದಪ್ರಯೋಗಗಳೇ ಸಿಗುತ್ತವೆಯಾದರೂ ಒಂದೆರಡು ಕಡೆ ಕಣ್ದಪ್ಪಿನಿಂದ ಸಂಸ್ಕೃತಶಬ್ದಗಳು ನುಸುಳಿಕೊಂಡಿವೆ. ಉದಾಹರಣೆಗೆ ಅವನ ಈ ಅಚ್ಚಗನ್ನಡದಲ್ಲಿ ಹೇಳುವೆ ಎಂಬ ಪ್ರತಿಜ್ಞೆಯನ್ನು ಮಾಡಿದ ನಂತರದ ಗದ್ಯಖಂಡದಲ್ಲಿಯೇ “ಬನದೊಳೆಡೆಯಾಡುವ ಸಖಿಯರ” ಎಂದು ಬರೆಯುತ್ತಾನೆ. ಅಲ್ಲಿ “ಸಖಿ” ಶಬ್ದದ ಬದಲು “ಕೆಳದಿಯರ್” ಅಥವಾ “ಪೆಣ್ಗಳ್” “ಕೂರ್ತರ್” “ಓಪರ್” ಇತ್ಯಾದಿ ಶಬ್ದಗಳನ್ನು ಬಳಸಿ ಮುಂದುವರೆಯಬಹುದಿತ್ತು. ಹಾಗೆಯೇ ೩೭ನೇ ಪದ್ಯದ ನಂತರದಲ್ಲಿ “ಅವಸರಮಂ” ಎಂದು(ಪೊಳ್ತಂ ಎಂದು ಬಳಸಬಹುದಿತ್ತು), ೧೧೪ನೆಯ ಪದ್ಯದ ನಂತರದಲ್ಲಿ “ಶಿವ” (“ಸಿವ’ ಎಂದು ಬಳಸಬಹುದಿತ್ತು) ಎಂದು, ಹೀಗೆ ಕೆಲವು ಕಡೆ ಸಂಸ್ಕೃತ ಶಬ್ದಗಳು ಸಿಗುತ್ತವೆ. ಕವಿಯ ದೋಷವನ್ನೇ ಹುಡುಕಬೇಕೆಂದು ಇದನ್ನು ಪ್ರಸ್ತಾಪಿಸಿದ್ದಲ್ಲವಾದರೂ ಅವನಾಗಿಯೇ ಹಾಕಿಕೊಂಡ ನಿಯಮ- “ಅಚ್ಚಗನ್ನಡದ ಶಬ್ದವನ್ನು ಬಳಸುತ್ತೇನೆ” ಎಂಬುದು. ಹಾಗಾಗಿ ಅನಿವಾರ್ಯವಾಗಿ ಇವು ಕಣ್ಣಿಗೆ ಕಾಣುತ್ತವೆ. ಬಿಳಿಯ ಹಾಳೆಯೊಂದರಲ್ಲಿ ಹೇಗೆ ಸಣ್ಣದಾಗಿದ್ದರೂ ಕಪ್ಪು ಚುಕ್ಕೆಯೊಂದು ಎದ್ದು ಕಾಣುವಂತೆ ಎನ್ನಬಹುದು.
ಅಲ್ಲದೇ ಕವಿಗೆ ಸಂಸ್ಕೃತಶಬ್ದಗಳ ಮೇಲಿದ್ದ ರಿಪುತ್ವ ಬೇರೆ ಮೂಲದ ಶಬ್ದಗಳ ಮೇಲೆ ಇದ್ದಂತಿಲ್ಲ. ಉದಾ- “ತೇಜ್” ವೇಗ ಎಂಬರ್ಥದ ಶಬ್ದದಿಂದ “ತೇಜಿ” ವೇಗವಾಗಿ ಹೋಗುವುದು- ಕುದುರೆ ಎಂಬರ್ಥದಲ್ಲಿ ಬಳಕೆಯಲ್ಲಿದೆ. ಇದರ ಮೂಲವನ್ನು ಅವಲೋಕಿಸಿದರೆ ಪಾರಸಿಯೋ ಅಥವಾ ಇನ್ನು ಯಾವುದೋ ಎಂದು ಗೊತ್ತಾಗುತ್ತದೆ. ಅವನ ಕಾಲಕ್ಕಾಗಲೇ ಈ ಶಬ್ದಗಳೆಲ್ಲ ಬಳಕೆಯಲ್ಲಿ ಬಂದಿದ್ದ ಕಾರಣ ಕನ್ನಡದ್ದೆಂಬಂತೆ ಬಳಸುತ್ತಾನೆ.
ಗುಣ-ದೋಷವಿಮರ್ಶನ-
ಇನ್ನು ಕಾವ್ಯದ ಗುಣದೋಷಗಳನ್ನು ಆಲಂಕಾರಿಕರ ಮತದಂತೆ ವಿಮರ್ಶಿಸಲು ಹೊರಟರೆ ಸುದೀರ್ಘವಾಗುವ ಕಾರಣ ಅವುಗಳಲ್ಲಿ ಕೆಲವು ಅಂಶಗಳನ್ನು ಮಾತ್ರ ಇಲ್ಲಿ ಗಮನಿಸಬಹುದು.
ಮುಖ್ಯವಾಗಿ ಕಾವ್ಯವೊಂದನ್ನು ರಸ-ಧ್ವನಿ-ಔಚಿತ್ಯ ಇವುಗಳ ಮಾನದಿಂದ ಅಳೆಯಲಾಗುತ್ತದೆ. ಕಾವ್ಯದಲ್ಲಿ ಮುಖ್ಯವಾಗಿ ನಿರೂಪಿತವಾದ ರಸ- ಅದು ಎಷ್ಟರ ಮಟ್ಟಿಗೆ ಸಿದ್ಧವಾಗಿದೆ- ಎಂಬುದು ಒಂದು ಕಾವ್ಯದ ಗುಣವನ್ನು ತೋರಿಸುತ್ತದೆ. ಹಾಗೆಯೇ ಧ್ವನಿಯಲ್ಲಿ ಹಲವು ಪ್ರಕಾರಗಳಿದ್ದರೂ ಪ್ರಸ್ತುತದಲ್ಲಿ ಪ್ರಬಂಧಧ್ವನಿಯೊಂದನ್ನು ಗಮನಿಸಿದರೆ ಸಾಕೆನಿಸುತ್ತದೆ. ಪ್ರಬಂಧಧ್ವನಿ ಎಂದರೆ ಒಟ್ಟಂದದಲ್ಲಿ ಕಾವ್ಯವು ಏನನ್ನು ಧ್ವನಿಸಲು ಹೊರಟಿದೆ ಎಂದು. ಇದು ಕೂಡ ಕಾವ್ಯದ ಸಾಫಲ್ಯವನ್ನು ಪ್ರತಿಬಿಂಬಿಸುತ್ತದೆ. ಇನ್ನು ಔಚಿತ್ಯವಂತೂ ಇವುಗಳೆಲ್ಲವುಗಳಲ್ಲಿ ಮುಖ್ಯವಾದದ್ದು. ಕಾವ್ಯಕ್ಕೆ ಔಚಿತ್ಯವಿದ್ದರೆ ಮಾತ್ರ ಅದು ನಿಲ್ಲುತ್ತದೆ ಎಂಬುದು ಸರ್ವವಿದಿತ. ಇವೆಲ್ಲವೂ ಪೂರ್ಣ ಕಾವ್ಯಕ್ಕಷ್ಟೇ ಅಲ್ಲದೇ ಪ್ರತಿ ಮುಕ್ತಕಕ್ಕೂ ಅನ್ವಿತವಾಗುತ್ತದೆ.
ಈ “ಕಬ್ಬಿಗರ ಕಾವಂ” ಕಾವ್ಯದಲ್ಲಿ ರಸವನ್ನು ಗಮನಿಸುವುದಾದರೆ- ಕಾಮನ ಜಯವಾಗುವುದೇ ಮುಖ್ಯ ಉದ್ದೇಶವಾದ ಕಾರಣ ವೀರರಸ ಪ್ರಧಾನವೆನ್ನಬಹುದು. ಆದರೆ ಇಲ್ಲಿ ಯುದ್ಧದ ಪೂರ್ವರಂಗದಲ್ಲಿ ಕೂಡ ಬರುವಂತಹ ಅತಿಯಾದ ವಸಂತದ ವರ್ಣನೆಗಳು ಯಥೇಷ್ಟವಾಗಿ ಶೃಂಗಾರಕ್ಕೆ ಉದ್ದೀಪನವಿಭಾವಗಳಾಗುತ್ತವೆ. ತದನಂತರದಲ್ಲಿ ವಿಸ್ತರಿಸುವ ವೀರರಸಪೋಷಕವಾದ ಯುದ್ಧದ ಸನ್ನಿವೇಶಗಳು ಅಲ್ಲಿ ಬಡವಾಗಿಬಿಡುತ್ತವೆ. ಹಾಗಾಗಿ ಕಾವ್ಯಧ್ವನಿ ದುರ್ಬಲವಾಗುತ್ತದೆ. ಕಾಮ ಶಿವನನ್ನು ಗೆದ್ದ ಸಂದರ್ಭದಲ್ಲಿ ಕೂಡ ಶಿವನ ಶಾಪೋಕ್ತಿಗಳು ಪ್ರವೇಶಿಸಿ ನಾಯಕನ ಬಲ್ಮೆಯನ್ನು ಕುಗ್ಗಿಸುತ್ತವೆ. ಇಂತಹ ಹಲವು ಅನೌಚಿತ್ಯಗಳೂ ಸಹ ಅಲ್ಲಲ್ಲಿ ಎಡಯಾಗಿ ಬರುತ್ತವೆ. ಕೆಲವೊಂದು ಸಂದರ್ಭಗಳಲ್ಲಿ ಕವಿಯ ವಾಕ್ಯ ವಕ್ರತೆಯಿಲ್ಲದೇ ವಾಚ್ಯವಾಗಿಬಿಡುತ್ತದೆ. (..ಪೊಱವಾಱೊಳುಚ್ಚಳಿಪ ತೆಳ್ವದಮಿರ್ವರೊಳೊಪ್ಪೆ…||೨೫೯|| ಮೊದಲಾದ ಅನೇಕ ಪದ್ಯಗಳು ಸಿಗುತ್ತವೆ)
ಶ್ರುತಿಕಟುವಾದ ಪದಶಯ್ಯೆ (ಕಿವಿಗೆ ಕರ್ಕಶವಾಗಿ ಕೇಳುವುದು), ಅಪ್ರಯುಕ್ತ (ಕೋಶಗತವಾದ ಅರ್ಥಗಳ ಬಳಕೆ) ಪುನರುಕ್ತಿ (ಮತ್ತೆ ಮತ್ತೆ ಬಳಸಿದ ಪದವನ್ನೇ ಬಳಸುವುದು) ಅನವೀಕೃತ (ಹೊಸ ರೀತಿಯಲ್ಲದೇ ಹಳೆಯ ಜಾಡಿನಲ್ಲಿಯೇ ಹೇಳುವುದು) ಮೊದಲಾದ ಕೆಲವು ದೋಷಗಳು ಕಾಣಿಸುತ್ತವೆ.  (೪)
ಉದಾಹರಣೆಗೆ- ಮಾವಿನ ಮರವೊಂದನ್ನು ವರ್ಣಿಸುವ ಈ ಪದ್ಯ
ಕನರ್ಗೊನರಿಕ್ಕೆ ನುಣ್ದಳಿರ ಬಾೞ್ವನೆ ಕೆಂದಳಿರಿರ್ಪ ಬೀಡು ಬ
ಲ್ವನೆಯ ಪೊದಱ್ ಮುಗುಳ್ನಗೆಯ ಪೆರ್ಮನೆ ಮೊಗ್ಗೆಯ ತಾಣಮಚ್ಚವೂ
ವಿನ ನೆಲೆ ಸಣ್ಣಗಾಯ ಬಲುಗಾಯ ಪೊೞಲ್ ನಸುದೋರೆವಣ್ಣ ತಾ
ಯ್ವನೆ ಪೊಸವಣ್ಣ ಗೊತ್ತಿದೆನೆ ಕಣ್ಗೆಸೆದಿರ್ದುದದೊಂದು ಮಾಮರಂ ||೮೯||
ಇಲ್ಲಿ ಮಾವಿನ ಮರದ ವರ್ಣನೆಯಲ್ಲಿ “ಕನರ್ಗೊನರ್” ಎಂದು ಶಿಥಿಲದ್ವಿತ್ವ ಇರುವ(ಒತ್ತಕ್ಷರವಿದ್ದರೂ ಇಲ್ಲದಂತೆ ತೇಲಿಸಿ ಓದುವ) ಪದ, ಅಲ್ಲದೇ ಕಕಾರ-ಪಕಾರ-ರೇಫವೇ ಮೊದಲಾದ ಕರ್ಕಶವ್ಯಂಜನಗಳಿಂದ ಕೂಡಿರುವ ಶಬ್ದಗಳು ಹೆಚ್ಚಾಗಿವೆ.
ಇನ್ನು “….ಕಡುಮುಳಿದು ಬಿಸುಗಣ್ಣೊಳೊಗೆದ ಬೀರಂ…” ಎಂದು ಒಂದು ಶಬ್ದ ಬರುತ್ತದೆ. ಅದು “ವೀರಭದ್ರ” ಎಂದು ಅರ್ಥಯಿಸಿಕೊಳ್ಳುವಾಗ ಕಾವ್ಯಸ್ವಾರಸ್ಯಾಸ್ವಾದದ ಕಡೆಯಿಂದ ಸಹೃದಯರ ಮನಸ್ಸು ಸ್ವಲ್ಪ ವಿಚಲಿತವಾಗುತ್ತದೆ. ಇಂತಹ ಹಲವು ನಾಮಪದಗಳ ತದ್ಭವ ಮಾಡಿಕೊಂಡಾಗ ಅಥವಾ ಬೇರೆಯ ರೂಪ ಕೊಟ್ಟಾಗ ಅಪ್ರಯುಕ್ತಪದವನ್ನು ಬಳಸಿದ ದೋಷವಾಗುತ್ತದೆ. ಉದಾ- ಇಚ್ಚೆಕಾರ್ತಿ- ರತಿ, ಕೊಕ್ಕರಿಕೆ- ಹೇಸಿಗೆ, ಪೊಡೆಯಲರ- ವಿಷ್ಣು, ದಪ್ಪ- ದರ್ಪ (ಇಲ್ಲಿ ತದ್ಬವದಲ್ಲಿ ನೇಯಾರ್ಥ(ಬೇರೆಯದೇ ಅರ್ಥವನ್ನು ಕೊಡುವ ಪದ)ವಾಗುವುದನ್ನು ಗಮನಿಸಬಹುದು)  
“ಕನರ್ಗೊನರೆಲ್ಲಿಯೆಲ್ಲಿ… ನುಣ್ದಳಿರೆಲ್ಲಿಯೆಲ್ಲಿ..” ಎಂಬಲ್ಲಿ ಚಿಗುರು ಎಂಬರ್ಥದಲ್ಲಿಯೇ ಪುನರುಕ್ತಿ (ಒಂದನ್ನೇ ಮತ್ತೆ ಮತ್ತೆ ಹೇಳುವುದು) ಮಾಡಿದ್ದಾನೆ. ಇದು ಪದ್ಯದಲ್ಲಿ ಆದರೆ ಮಾವಿನ ಮರದ ವರ್ಣನೆ ದುಂಬಿಗಳ ವರ್ಣನೆ ಇವೆಲ್ಲ ಯಥೇಷ್ಟವಾಗಿ ಪೌನಃಪುನ್ಯೇನ ಅದೇ ಪದಗುಚ್ಛಗಳಿಂದ ಮತ್ತೆ ಮತ್ತೆ ಬರುತ್ತಲೇ ಇರುತ್ತವೆ. ಅಲ್ಲದೇ ಸಂಸ್ಕೃತಶಬ್ದರಾಹಿತ್ಯದಿಂದ ಉಂಟಾದ ಬಡತನ ಅಲ್ಲಿ ಕಾಣುತ್ತದೆ. ಬಹಳಷ್ಟು ಶಬ್ದಗಳಿಗೆ ಕನ್ನಡದ ಮೂಲದ ಶಬ್ದಗಳು ಬೆರಳೆಣಿಕೆಯಷ್ಟೇ ಆಗುತ್ತವೆ. ಅಲ್ಲದೇ ಕನ್ನಡದಲ್ಲಿ ಸಂಸ್ಕೃತದಂತೆ ಸುಲಲಿತವಾದ ಸಮಸ್ತಪದನಿರ್ಮಾಣ (ಸಮಾಸ) ದುಷ್ಕರ, ಕೃದಂತ-ತದ್ಧಿತಪದಗಳೂ ಕೂಡ ಕನ್ನಡದಲ್ಲಿ ದುಸ್ಸಾಧ್ಯವಾಗಿ ಕವಿಗೆ ಹಲವು ಕಡೆ ನಾಲಿಗೆ ಹಿಡಿದಂತೆ ಆಗುತ್ತದೆ. ಅವನೇ ಹೇಳುವ “ಪಲವುಂ ನಾಲಗೆಯುಳ್ಳವಂ ಬಗೆವೊಡೆಂದುಂ ಬಣ್ಣಿಸಲ್ಕಾರನಾ….” ಎಂಬ ಸಾಲಿನಂತೆ ಅವನ ಕಲ್ಪನೆಯನ್ನು ಹೇಳುವಲ್ಲಿ ಅವನಿಗೇ ಹಲವು ನಾಲಿಗೆಗಳಿದ್ದರೂ ಬಣ್ಣಿಸಲಾರ ಎನಿಸುತ್ತದೆ.
    ಇಂತಹ ದೋಷಗಳೇ ಅಲ್ಲದೇ ಹಲವು ಗುಣಗಳನ್ನೂ ನೋಡಬಹುದು. ಉದಾಹರಣೆಗೆ
ಇವು ಪಳ್ಳಿಗಳಿವು ಪಟ್ಟಣ
ಮಿವು ಕೆಱೆಗಳಿವೆಱಗಿ ನಿಂದ ಮುಗಿಲೋಳಿಗಳಿಂ
ತಿವು ಕಾಡಿವು ಪೆಸರ್ವೊಡೆದೊ
ಪ್ಪುವ ಬನಮೆಂದಱಿದು ಪೇೞ್ವುದರಿದಾ ನಾಡೊಳ್ ||೧೯||
ಇಲ್ಲಿ ಸುಲಲಿತವಾದ ಶೈಲಿಯಿದೆ, ಅಲ್ಲದೇ ಸುಲಭವಾಗಿ ಅರ್ಥವಾಗುವ ಪದಪುಂಜ. ಜೊತೆಯಲ್ಲಿ “ಇವು ಇವು” ಎಂದು ಮತ್ತೆ ಮತ್ತೆ ಬರುವ ಶಬ್ದಾಲಂಕಾರ.ಇಷ್ಟಿದ್ದರೂ “ಇವು ಕೆಱೆಗಳಿವೆರಗಿ” ಎಂಬಲ್ಲಿನ ಲಘುಬಾಹುಳ್ಯ ಸ್ವಲ್ಪಮಟ್ಟಿಗೆ ಗತಿಸುಭಗತೆಯನ್ನು ಕೊಡಲಾರದು. “ಇವು ಕೆಱೆಗಳಿವೆಱಗಿ” ಬದಲು “ಇವು ಕೆಱೆಗಳ್ ಬಾಗಿ ನಿಂದ ಮುಗಿಲ್” ಎಂದು ತಿದ್ದಿದ್ದರೆ ಗತಿಸುಭಗವಾಗಿ ಇನ್ನೂ ಚೆನ್ನಾಗಬಹುದಿತ್ತು. ಇಂತಹ ಲಘುಬಾಹುಳ್ಯವು ಹೀಗೇ ಅನೇಕ ಪದ್ಯಗಳಲ್ಲಿ ಸಿಗುತ್ತದೆ.
ಮಲ್ಲಿಗೆಯಲ್ಲದೆ ಸಂಪಗೆ
ಯಲ್ಲದೆ ದಾಳಿಂಬಮಲ್ಲದೊಪ್ಪುವ ಚೆಂದೆಂ
ಗಲ್ಲದೆ ಮಾವಲ್ಲದೆ ಕೌಂ
ಗಲ್ಲದೆ ಗಿಡುಮರಗಳೆಂಬುವಿಲ್ಲಾ ನಾಡೊಳ್|| ೨೦||
ಈ ಪದ್ಯದಲ್ಲಿ ಸುಲಭವಾಗಿ ಅರ್ಥಸ್ಪಷ್ಟತೆ ಇರುವ ಪದಗಳು, ಲಲಿತ ಶೈಲಿಯಿಂದ ನಿರ್ದುಷ್ಟವಾಗಿದೆ. ಛಂದೋಗತಿಯಲ್ಲಿ ಕೂಡ ಸೊಗಸಾಗಿದೆ.
ಕನರ್ಗೊನರಂ ಕರ್ದುಂಕಿ ದನಿದೋಱುವ ಕೋಗಿಲೆ ಮೇಳದಾಳ್ಗಳೆಂ
ದೆನೆ ಗಿಳಿವಿಂಡು ಒಂದೆಱೆ(ರೆ)ಯ ಬರ್ಪವರೆಂದೆನೆ ಪೊಣ್ಮುತಿರ್ಪ ಪೂ
ವಿನ ಪೊಸಗಂಪು  ಕತ್ತುರಿಯ ಕಂಪೆನೆ  ಪಾಡುವ ದುಂಬಿ ಗಾಣರೆಂ
ದೆನೆ ನೆನೆಯಂಬನೋಲಗದ ಸಾಲೆವೊಲಿರ್ದುವು ಬಂದ ಮಾವುಗಳ್ ||೫೨||
ಶಿಥಿಲದ್ವಿತ್ವದಿಂದ ಸ್ವಲ್ಪ ಕಾರ್ಕಶ್ಯವಿದ್ದರೂ ಚಂಪಕಮಾಲೆಯ ಈ ಪದ್ಯ ಉತ್ತಮವಾದ ಸಾವಯವ ರೂಪಕಾಲಂಕಾರದಿಂದ ಮಾವಿನ ಮರವೊಂದು ಮನ್ಮಥನ ಓಲಗದ ಶಾಲೆಯ ಹಾಗೆ ಕಾಣುತ್ತಿತ್ತು ಎಂದು ವರ್ಣಿಸುತ್ತಾನೆ.
ತಡಿಮೀಱಿ ಬಂದ ತೆಂಕಣ
ಬಡಗಣ ಕಡಲೊಂದನೊಂದು ತಾಗುವ ತೆಱದಿಂ
ಬಿಡೆ ಗಜಱಿ ಮಿಕ್ಕು ತಕ್ಕಿಂ
ಪಡೆಯೆರಡುಂ ದೆಸೆಗೆ ಮಸಗಿ ತಾಗಿದುದೆತ್ತಂ ||೨೦೫||   (೫)
ಇಲ್ಲಿ ಹಿತವಾದ ಅನುಪ್ರಾಸವಿದೆ (ನಿಯಮಿತವಾಗಿ ಕೆಲವು ವ್ಯಂಜನಗಳು ಪುನರಾವೃತ್ತಿಯಾಗುವುದು). “ತ,ಡ,ಬ,ಸ” ಮೊದಲಾದ ವ್ಯಂಜನಗಳ ಪುನರಾವೃತ್ತಿ ಕಡಲುಗಳು ಒಂದಕ್ಕೊಂದು ಹೊಡೆದುಕೊಳ್ಳುವ ಪರಿಯಂತೆ ಎರಡು ಪಡೆಗಳೂ ಹೊಡೆದಾಡಿದವು ಎಂದು ವರ್ಣಿಸುತ್ತಿರುವುದು ಇಂಪಾಗಿ ಕೇಳಿಸುತ್ತದೆ.ಇವಲ್ಲದೇ ಕವಿ ಯಮಕಚಮತ್ಕಾರವನ್ನೂ ಒಂದೆಡೆ ಮಾಡುತ್ತಾನೆ. (ಯಮಕ-ಮೂರು ವ್ಯಂಜನಗಳ ಪದವೊಂದು ನಿಯಮಿತ ಸ್ಥಾನದಲ್ಲಿ ಪುನರಾವೃತ್ತಿಯಾಗುವುದು)
ಮಾವುಗಳವು ಮಲೆವರನ
ಮ್ಮಾವುಗಳವೊಲುಱದೆ ಮುಱಿವುವೆಂದೊಡೆ ಕೇಳಾ
ಕಾವನ ಬರವಱಿದ ಬಳಿ
ಕ್ಕಾವನ ಸೊರ್ಕುಳಿಯದಿನಿಸುಮೇನಿರ್ದಪುದೋ ||೧೩೫||
ಇಲ್ಲಿ ಯಮಕವನ್ನು ಮಾಡಲು “ಮಾವುಗಳ” ಎಂಬುದನ್ನು ತರಲು “ಅಮ್ಮಾವುಗಳವೊಲ್” ಎಂಬ ಶಬ್ದ ಬಳಸುತ್ತಾನೆ. ಅಮ್ಮಾವು ಎಂದರೆ ಕಾಡುಹಸು ಎಂಬರ್ಥವಿದೆ. (೬) ಅದನ್ನು ಅಮ್ಮ+ಆವು ಎಂದು ಬಿಡಿಸಿ ಆವು ಎಂದರೆ ಹಸು ಎಂದೂ, “ಅಮ್ಮ” ಎಂದರೆ ತಾಯಿ(ಹೊಸಗನ್ನಡ) ಅಥವಾ ತಂದೆ(ಹಳಗನ್ನಡ) ಎಂಬರ್ಥವನ್ನು ಗ್ರಹಿಸದೇ ಅಣ್ಮು(ಪೌರುಷೇ)>ಅಮ್ಮು ಧಾತುವಿನ  ಕೋಶಗತವಾದ ಪೌರುಷವುಳ್ಳ ಎಂಬರ್ಥದ ಕೃದಂತರೂಪವನ್ನು ಪರಿಗ್ರಹಿಸಿ ಶಬ್ದನಿಷ್ಪತ್ತಿಯನ್ನು ಹೇಳಬಹುದು.(೭) ಹಾಗಾಗಿ ಇದು ವ್ಯಾಕರಣಶುದ್ಧಪದವಾದರೂ ಕೋಶಗತಾರ್ಥದಿಂದ ರಸದೂರವಾಗುತ್ತದೆ. ಆದರೆ “ಕಾವನ” ಎಂಬ ಶಬ್ದದಲ್ಲಿ ಯಮಕವನ್ನು ಮಾಡುವಲ್ಲಿ ಇಂತಹ ಕ್ಲಿಷ್ಟತೆ ಕಾಣುವುದಿಲ್ಲ. ಕಾವ್ಯಗಳಲ್ಲಿ ಇಂತಹ ಚಿತ್ರಕವಿತೆಗಳನ್ನು ಮಾಡುವ ಸಾಮರ್ಥ್ಯವಿದೆ ಎಂಬುದನ್ನು ತೋರಿಸಿಕೊಳ್ಳುವುದೇ ಕವಿಗೆ ಮುಖ್ಯವಾಗುವಾಗ ಕಾವ್ಯದ ರಸಭಾಗ ಶುಷ್ಕವಾಗಿಬಿಡುತ್ತದೆ ಹಾಗಾಗಿ ಆದಷ್ಟು ಯಮಕಾಲಂಕಾರವನ್ನು ಎಷ್ಟು ದೂರದಲ್ಲಿಟ್ಟಿದ್ದರೆ ಅಷ್ಟು ಕ್ಷೇಮ ಎಂದು ಆಲಂಕಾರಿಕರು ಹೇಳುತ್ತಲೇ ಬಂದಿದ್ದಾರೆ.(೮)
    ಇನ್ನು ಗದ್ಯದಲ್ಲಿ ಹಲವು ಕವಿಗಳು ತೋರುವ ಶ್ಲೇಷಮೂಲವಾದ ಪರಿಸಂಖ್ಯಾಲಂಕಾರವನ್ನು ಮಾಡುವುದರಲ್ಲಿಯೂ ಅಚ್ಚಗನ್ನಡದ ಜಾಣ್ಮೆಯನ್ನು ಮೆರೆದಿದ್ದಾನೆ. ಶ್ಲೇಷವೆಂದರೆ ಎರಡು ಅರ್ಥಗಳನ್ನು ಹೊಮ್ಮಿಸುವುದು. ಪರಿಸಂಖ್ಯಾಲಂಕಾರವೆಂದರೆ ಎರಡು ವಸ್ತುಗಳ ನಡುವೆ ಶ್ಲೇಷದಿಂದ ಹೋಲಿಕೆ ಮಾಡುವುದು. ಇದನ್ನು ೨೩ ನೆಯ ಪದ್ಯದ ನಂತರದ ಗದ್ಯಭಾಗದಲ್ಲಿ ಕಾಣಬಹುದು
“ಮತ್ತಮಾ ನಾಡೊಳ್ ಕೀೞೆಂಬುದು ಕುದುರೆಯ ಬಾಯ ಕಬ್ಬಿಣದೊಳ್, ಕವರೆಂಬುದು ಚಪ್ಪರದೊಳ್, ಬಂದಿಯೆಂಬುದು ತೊಡವಿನೊಳ್, ಏಱೆಂಬುದು ನೆಲೆವಾಡದೊಳ್, ಮಡಿಯೆಂಬುದು ಮರುಗದ ತಾಣದೊಳ್, ಮೊಱೆಯೆಂಬುದು ನಂಟರೊಳ್, ಪೊಡೆಯೆಂಬುದು ಬೆಳಗೆಯ್ಯೊಳ್ ಕಱೆಯೆಂಬುದು ತುಱುಗಾರ್ತಿಯರೊಳ್ ಪಿಡಿಯೆಂಬುದು ಪೆಣ್ಣಾನೆಯೊಳ್…”
ಇಲ್ಲೆಲ್ಲ ಆ ಶಬ್ದಗಳಿಗಿರುವ ಎರಡೆರಡು ಅರ್ಥಗಳನ್ನು ಹೊಂದಿಸಿಕೊಂಡರೆ ಸ್ವಾರಸ್ಯವು ತಿಳಿಯುತ್ತದೆ.(ಉದಾಹರಣೆ- ಕೀೞ್ ಎಂಬ ಪದಕ್ಕೆ ಕೆಟ್ಟದ್ದು  ಎಂದೂ ಹಾಗೂ ಕುದುರೆಯ ಬಾಯಿಗೆ ಹಾಕುವ ಕಬ್ಬಿಣದ ವಸ್ತುವೊಂದೂ ಎಂದು ಸೂಚಿಸುತ್ತದೆ. ಕೀಳು ನಾಡಿನಲ್ಲೆಲ್ಲೂ ಇರಲಿಲ್ಲ-ಕುದುರೆಯ ಬಾಯ ಕಬ್ಬಿಣದಲ್ಲಿ ಮಾತ್ರ ಇತ್ತು ಎಂದು ಇದರ ಅರ್ಥ) ಹಾಗೆಯೇ ವಿರೋಧಾಭಾಸವನ್ನೂ(ಎರಡು ಅರ್ಥಗಳನ್ನು ಗ್ರಹಿಸದಿದ್ದರೆ ವಾಕ್ಯದಲ್ಲಿ ವಿರೋಧ ಭಾವ ಕಾಣುವುದು) ಅಚ್ಚಗನ್ನಡ ಪದಗಳಿಂದಲೇ ಮಾಡಿದ್ದಾನೆ. ಅದನ್ನು ೪೩ನೆಯ ಪದ್ಯದ ನಂತರದ ಗದ್ಯಭಾಗದಲ್ಲಿ ಕಾಣಬಹುದು.
“ತಾವರೆಯಂತೆ ಸಿರಿಯೊಳೊಂದಿಯುಂ ಪೊಡೆಯಲರನೆನಿಸಂ ಸಿಡಿಲಂತೆ ಕಾಯ್ಪನಾಂತುಂ ಬಿಸುಗದಿರನೆನಿಸಂ..…..ಬಾನಂತೆ ಮೀನ್ಗಳಂ ತಳೆದುಂ ಮುನ್ನೀರೆನಿಸಂ ಮಾವಿನಂತೆ ಕೋಡುಗೈಯೊಂದಿಯುಂ ಸೊರ್ಕಾನೆಯೆನಿಸಂ….”
ಇಲ್ಲಿ ಕೂಡ ಈ ಶಬ್ದಗಳಿಗಿರುವ ಶ್ಲೇಷಾರ್ಥಗಳನ್ನು ಗಮನಿಸಬಹುದು. (ಉದಾಹರಣೆ-ಸಿರಿ ಎಂದರೆ ಲಕ್ಷ್ಮಿ ಇದ್ದರೂ ಕೂಡ ವಿಷ್ಣುವಲ್ಲ, ಇಲ್ಲಿ ಸಿರಿ ಎಂದರೆ ಸಂಪತ್ತು ಎಂಬರ್ಥವನ್ನು ಗ್ರಹಿಸಿದಾಗ ಅರ್ಥಸ್ಪಷ್ಟತೆ ಸಿಗುತ್ತದೆ.) ಪ್ರಾಚೀನ ಕವಿಗಳಲ್ಲಿ ಯಥೇಷ್ಟವಾಗಿ ಸಿಗುವ ಈ ಪರಿಯ ಪರಿಸಂಖ್ಯಾ-ವಿರೋಧಾಭಾಸಾಲಂಕಾರಗಳನ್ನು ಅಚ್ಚಗನ್ನಡಲ್ಲಿ ಮಾಡುವುದು ಬಹಳ ಶ್ರಮಯುತವಷ್ಟೇ ಅಲ್ಲದೆ ಪರಿಮಿತ ಕೂಡ. ಆಂಡಯ್ಯನನ್ನು ಬಿಟ್ಟರೆ ಲಕ್ಷ್ಮೀಶನಲ್ಲಿ ಒಂದೆರಡು ಕಡೆ ಮುದ್ದಣನಲ್ಲಿ ಒಂದೆರಡು ಕಡೆ ಅಲ್ಪಪ್ರಮಾಣದಲ್ಲಿ ಈ ಅಚ್ಚಗನ್ನಡದ ಶ್ಲೇಷಮೂಲಾಲಂಕಾರಗಳನ್ನು ಗಮನಿಸಬಹುದು.
ದೇಸೀ ಹಾಗೂ ತದ್ಭವಪ್ರಯೋಗಗಳ ವೈಶಿಷ್ಟ್ಯ-
ಸಂಸ್ಕೃತದ ಪದಗಳನ್ನು ಹೇಗೆ ತದ್ಭವಗಳನ್ನಾಗಿ ಮಾಡಿಕೊಳ್ಳಬಹುದು ಎಂಬುದನ್ನು ಕೇಶಿರಾಜ ಶಬ್ದಮಣಿದರ್ಪಣದಲ್ಲಿ ಅಪಭ್ರಂಶಪ್ರಕರಣದಲ್ಲಿ ವಿಸ್ತಾರವಾಗಿ ಚರ್ಚಿಸುತ್ತಾನೆ. ಅಲ್ಲಿ ಯಾವ ವ್ಯಂಜನ ತದ್ಭವದಲ್ಲಿ ಹೇಗೆ ಬದಲಾಗುತ್ತದೆ ಎಂಬುದನ್ನು ಗಮನಿಸಿಕೊಂಡರೆ ಆಂಡಯ್ಯನ ಪದಪ್ರಯೋಗಗಳ ಮೂಲ ಗೊತ್ತಾಗುತ್ತದೆ. ಇವುಗಳಲ್ಲಿ ಹಲವು ಪೂರ್ವಕವಿಗಳಿಂದ ಪ್ರಯೋಗಿಸಲ್ಪಟ್ಟವೇ ಆದರೂ ಕೆಲವೊಂದರಲ್ಲಿ ಹೊಸತನ ಕಾಣುತ್ತದೆ.
ಉದಾ- ತಿಂತಿಣಿ- ತಿಂತ್ರಿಣೀ (ಹುಣಸೆ), ಇಂದಿರ- ಇಂದ್ರ, ಗೋಸ-ಘೋಷ, ಮಾಸಾವಂತ- ಮಹಾಸಾಮಂತ, ಮಡ-ಮಠ, ತಿಸುಳಿ-ತ್ರಿಶೂಲಿ, ಅಸುಗೆ-ಅಶೋಕ, ಪ್ರತೀಹಾರಿ- ಪಡಿಯರ
ಅಲ್ಲದೇ ಹಲವು ಶಬ್ದಗಳು ಸಂಸ್ಕೃತಕ್ಕಿಂತ ಪ್ರಾಕೃತ ಭಾಷೆಗಳಲ್ಲೇ ಶ್ರುತಿಹಿತವಾಗಿ ಕೇಳಿಸುತ್ತವೆ ಎಂಬುದು ವಿದ್ವಾಂಸರ ಅಭಿಮತ ಕೂಡ ಆಗಿದೆ. ಹಳಗನ್ನಡದಲ್ಲಿ ತದ್ಭವಗಳು ಹೆಚ್ಚು ಸುಂದರವಾಗಿ ಮಾಧುರ್ಯದಿಂದ ಕೂಡಿರುತ್ತವೆ ಅಲ್ಲದೇ ಕಾವ್ಯಕ್ಕೆ ಒಳ್ಳೆಯ ಹದವನ್ನು ಕೊಡುತ್ತವೆ ಎಂಬುದೂ ಸಹ ದಿಟವೇ ಆದರೂ ಕೆಲವೊಮ್ಮೆ ಅವು ಅನ್ಯಾರ್ಥವನ್ನು ಸ್ಫುರಿಸುತ್ತದೆ. ಹಿಂದೆ ನೀಡಿದ ದರ್ಪ ಎಂಬ ಪದದ ತದ್ಭವ “ದಪ್ಪ”ವನ್ನೇ ಇದಕ್ಕೆ ಉದಾಹರಣೆಯಾಗಿ ತೆಗೆದುಕೊಳ್ಳಬಹುದು.
ಕೆಲವು ಕಡೆ ಆಡುನುಡಿಗಳ ಅಥವಾ ನುಡಿಗಟ್ಟುಗಳ ಬಳಕೆ ಕಾವ್ಯಕ್ಕೆ ಒಂದು ಸೊಬಗನ್ನು ಕೊಡುತ್ತವೆ. ಅಂತಹ ಕೆಲವು ಪ್ರಯೋಗಗಳನ್ನು ಇಲ್ಲಿ ಕಾಣಬಹುದು  “….ಕೋಡಗಗಟ್ಟಂ ಕಟ್ಟಿ ತರ್ಪೆವೇಂ ಬೆಸಸೆಂದೋ….||೧೧೦||”- “ಕೋತಿಯೊಂದನ್ನು ಕಟ್ಟಿ ತರುವಂತೆ ತರುತ್ತೇವೆ” ಎಂಬುದು, “..ಕಿರಿದೆಡೆಯುಂ ಪೋಗೆವೋಗೆ…” ಸ್ವಲ್ಪದೂರ ಹೋಗಿ ಹೋಗಿ ಎಂಬುದು ಇವೆಲ್ಲ ದೇಸಿ ನುಡಿಗಟ್ಟುಗಳ ಬಳಕೆಯ ಸೊಬಗನ್ನು ತೋರಿಸುತ್ತವೆ.
ಇನ್ನು ಕೆಲವು ಹೆಸರುಗಳನ್ನು ಅಚ್ಚಗನ್ನಡದಲ್ಲಿ ಕೊಡುವುದೂ ಇವನ ವೈಶಿಷ್ಟ್ಯ ಎನ್ನಬಹುದು. ವಿಷ್ಣುವನ್ನು ಪೊಡೆಯಲರ (ಹೊಟ್ಟೆಯಲ್ಲಿ/ನಾಭಿಯಲ್ಲಿ ಹೂವನ್ನು ಹೊಂದಿರುವವನು) ಎಂದು, ಮನ್ಮಥನನ್ನು ನೆನೆಯಂಬ- ನನೆವಿಲ್ಲ ಬಲ್ಲಹ (ಹೂವನ್ನೇ ಬಾಣವಾಗಿ ಉಳ್ಳವನು), ಕಮ್ಮಂಗೋಲ (ಸಿಹಿಯಾದ ಬಾಣವುಳ್ಳವನು), ಐಸರಲ (ಐದು ಬಾಣವುಳ್ಳವನು)  ಕರ್ವುವಿಲ್ಲ (ಕಬ್ಬನ್ನು ಬಿಲ್ಲಾಗಿ ಹೊಂದಿರುವವನು) ಇತ್ಯಾದಿ ಹೆಸರುಗಳಿಂದ, ಹಿವಗದಿರ (ಹಿಮಕಿರಣ) ಇಂಗದಿರ (ಸಿಹಿಯಾದ ಕಿರಣವುಳ್ಳವನು) ಎಂದು ಚಂದ್ರನನ್ನೂ, ಕಱೆಗೊರಲ (ಕೊರಳಲ್ಲಿ ಕಪ್ಪಿರುವವನು-ನೀಲಕಂಠ), ಎಳೆದೇರ (ಭೂಮಿಯನ್ನೇ ತೇರನ್ನಾಗಿ ಮಾಡಿಕೊಂಡವನು) ಎಂದು ಶಿವನನ್ನೂ, ಪಗಲಾಣ್ಮ (ಹಗಲಿಗೆ ಒಡೆಯ) ಬಿಸುಗದಿರ (ಬಿಸಿಯಾದ ಕಿರಣವುಳ್ಳವನು) ಎಂದು ಸೂರ್ಯನನ್ನೂ ವಾಸುಕಿಯನ್ನು ಪಲವುಂ ನಾಲಗೆಯುಳ್ಳವಂ ಎಂದೂ ಅಚ್ಚಗನ್ನಡ ಶಬ್ದಗಳಲ್ಲಿ ಕರೆಯುತ್ತಾನೆ.
ಛಂದಸ್ಸು-
ಕನ್ನಡದ ಚಂಪೂಕಾವ್ಯಗಳಲ್ಲಿ ಛಂದಸ್ಸು ಸಾಮಾನ್ಯವಾಗಿ ಉತ್ಪಲಮಾಲೆ, ಚಂಪಕಮಾಲೆ, ಶಾರ್ದೂಲವಿಕ್ರೀಡಿತ, ಮತ್ತೇಭವಿಕ್ರೀಡಿತ, ಸ್ರಗ್ಧರಾ, ಮಹಾಸ್ರಗ್ಧರಾ ಎಂಬ ಆರು ಖ್ಯಾತಕರ್ಣಾಟವೃತ್ತಗಳ ಜೊತೆ ಕಂದಪದ್ಯಗಳನ್ನು ಒಳಗೊಂಡಿರುತ್ತದೆ. ಕೆಲವೊಮ್ಮೆ ಅತಿ ಕಡಿಮೆ ಸಂಖ್ಯೆಯಲ್ಲಿ ಇತರ ವರ್ಣವೃತ್ತಗಳನ್ನೂ ಮಾತ್ರಾವೃತ್ತ-ರಗಳೆಗಳನ್ನೂ ಗೇಯಚ್ಛಂದಸ್ಸುಗಳನ್ನೂ ಅಲ್ಲಲ್ಲಿ ಬಳಸಿದ್ದಾರೆ. ಆದರೆ ಬಹುಪಾಲು ಕಂದವೃತ್ತಗಳೇ ಇರುವುದು ವೇದ್ಯ. ಆಂಡಯ್ಯನಾದರೂ ಅದೇ ಮಾರ್ಗದಲ್ಲಿಯೇ ಸಾಗುತ್ತಾನೆ.
“ಕಬ್ಬಿಗರ ಕಾವಂ”ಕಾವ್ಯದ ವೃತ್ತ ಬಾಹುಳ್ಯ ಒಂದು ಲೆಕ್ಕದಲ್ಲಿ ಗುಣದೋಷಗಳೆರಡೂ ಆಗುತ್ತದೆಯೆಂದರೆ ಅತಿಶಯೋಕ್ತಿಯಲ್ಲ. ಗುಣವೇಕೆಂದರೆ ಅಚ್ಚಗನ್ನಡದಲ್ಲಿ ವೃತ್ತನಿರ್ಮಾಣವೆಂಬುದು ಕಷ್ಟಸಾಧ್ಯ. ಅದನ್ನು ನಿರ್ವಹಣೆ ಮಾಡಿದ ಕವಿಯ ಶಕ್ತಿ ಜಾಣ್ಮೆಗಳು ಮೆಚ್ಚತಕ್ಕವೇ ಆಗಿವೆ! ಆದರೆ ಗುಣಕ್ಕಿಂತ ದೋಷವೇ ಹೆಚ್ಚಾಗುವುದು ಏಕೆಂದರೆ ಕನ್ನಡದ ಲಘುಪ್ರಚುರಮಧ್ಯಮಭಾಷಾಗತಿಗೆ ಕಂದ-ಷಟ್ಪದಿ-ರಗಳೆಗಳಂತಹವು ಹೆಚ್ಚು ಸಹಜಾಭಿವ್ಯಕ್ತಿಗಳೆಂದು ಛಂದೋವಿದ್ವಾಂಸರು ವೈಜ್ಞಾನಿಕವಾಗಿ ಪ್ರಮಾಣೀಕರಿಸಿದ್ದಾರೆ. (೯). ಅಲ್ಲದೇ ಗುರುಬಾಹುಳ್ಯವಿರುವ ಯತಿಪ್ರಬಲವಾದ ಶಾರ್ದೂಲಸ್ರಗ್ಧರಾದಿವೃತ್ತಗಳಲ್ಲಿ ಅಚ್ಚಗನ್ನಡ ಶಬ್ದಗಳು ಕರ್ಕಶವಾಗಿ ಕೇಳುತ್ತವೆ. “ಯತಿವಿಲಂಘನದಿಂದರಿದಲ್ತೆ ಕನ್ನಡಂ” ಎಂದು ಕೇಶಿರಾಜ ಹೇಳಿದ್ದರೂ ಛಂದಸ್ಸಿನ ಗತಿಗೆ ಯತಿ ಅನಿವಾರ್ಯ.(ಯತಿಯೆಂಬುದುಸಿರ್ದಾಣಂ-ಯತಿ ಉಸಿರನ್ನು ತೆಗೆದುಕೊಳ್ಳಲು ನಿಲ್ಲಿಸುವ ಸ್ಥಾನ) ಹಾಗಾಗಿ ಯತಿಪ್ರಬಲಚ್ಛಂದಸ್ಸಿನಲ್ಲಿ ಯತಿವಿಲಂಘನದಿಂದ ಕಾರ್ಕಶ್ಯಗುಣವಿನ್ನೂ ಹೆಚ್ಚುತ್ತದೆ ಎಂಬುದು ನಿಸ್ಸಂಶಯ. ಅದಕ್ಕೆ ಕನ್ನಡದಲ್ಲಿ ಸಮಸ್ತಪದಸೃಷ್ಟಿಯ ದೌರ್ಬಲ್ಯವೂ ಒಂದು ಕಾರಣವೆನ್ನಬಹುದು.
ಉದಾಹರಣೆಯಾಗಿ ಕೆಲವು ಸಾಲುಗಳನ್ನು ಗಮನಿಸಬಹುದು (“|” ಚಿಹ್ನೆಯಿರುವಲ್ಲಿ ಯತಿಯನ್ನು ಗಮನಿಸಬಹುದು)-
ಶಾ||  ಮುತ್ತುಂ ಪಚ್ಚೆವರಲ್ಗಳುಂ ಕುಳಿಸಮುಂ | ಮುಂತಾಗಿ ಕುಂದಿಲ್ಲದೊಂ|
-ಬತ್ತುಂ ರನ್ನದ ನುಣ್ಗದಿರ್ ನೆಗೆದು ನೀ|ಳ್ದೊಂದೊಂದಱೊಳ್ ಕೂಡಿ ಮ|
-ಯ್ವೆತ್ತಿಂದಿಂದಿರವಿಲ್ಲ ಪಾಂಗನೆನೆಸುಂ ಬಾಂ|ಬಟ್ಟೆಯೊಳ್ ಬೀಱಿ ಕ|
-ಣ್ಗೆತ್ತಂ ಸೋಲಮನೀವ ರನ್ನವಸರಂ | ಚೆಲ್ವಾದುದಾ ಬೀದಿಯೊಳ್ ||೩೨||

ಸ್ರ|| ತೊಂಗಲ್ಗೊಂಡಿರ್ದ ಕೆಂಪಾ|ದಸುಗೆಯ ತಳಿರಂ| ಕಂಪುದೀವಿರ್ದ ಪೂವಂ|
ಮಾಂಗಾಯಂ ಪೊಚ್ಚ ಪೊಂಬಾ|ೞೆಯ ಮರುಗಮನಿಂ|ಬಾದ ನಲ್ಬಾೞೆವಣ್ಣಂ |
ಪೊಂಗಿರ್ದಾ ನೈದಿಲೊಳ್ದಾ|ವರೆಯ ಮುಗುಳ್ಗಳಂ| ಸೊಂಪಿನಿಂ ಬೆಳ್ಪುವೆತ್ತಿ|
ರ್ದಿಂಗೋಲಂ ಪಣ್ತ ದಾಳಿಂ|ಬಗಳನೊಲವಿನಿಂ|ತೋಂಟಿಗಂ ಕೊಟ್ಟನೊರ್ವಂ ||೭೦||
ಇವುಗಳಲ್ಲಿ ಯತಿವಿಲಂಘನದಿಂದ ಆದ ತೊಡಕನ್ನು ಗಮನಿಸಬಹುದು. ಶಾರ್ದೂಲ-ಮತ್ತೇಭಗಳ ಯತಿಸ್ಥಾನವನ್ನು ಮೀರಿಯೂ ಚೆನ್ನಾದ ಪದ್ಯಗಳನ್ನು ರನ್ನ-ಪಂಪಾದಿಗಳಲ್ಲಿ ಕಾಣಬಹುದು. ಅವರಲ್ಲಿ ಅಚ್ಚಗನ್ನಡಬಳಕೆಯ ನಿಯಮ ಹಾಕಿಕೊಳ್ಳದ ಕಾರಣವೋ ಏನೋ ಪದ್ಯಗಳಂತೂ ಓಜಸ್ವಿಯಾಗಿವೆ. ಹಾಗಾಗಿ ಪೂರ್ವಚಂಪೂಮಾರ್ಗಕ್ಕೆ ಭಿನ್ನವಾಗಿ ಕನ್ನಡಕ್ಕೆ ಒಗ್ಗುವ ಮಾತ್ರಾಗತಿಯಲ್ಲಿಯೋ ಅಥವಾ ತ್ರಿಮೂರ್ತಿಗಣಘಟಿತಚ್ಛಂದಸ್ಸಿನಲ್ಲಿಯೋ ಆಂಡಯ್ಯನ ಪದ್ಯಗಳು ಇದ್ದರೆ ಇನ್ನೂ ಚೆನ್ನಾಗುತ್ತಿರಬಹುದು. ಹೇಗೆ ಅಚ್ಚಗನ್ನಡ ಶಬ್ದಗಳನ್ನು ಬಳಸುವ ನಿಯಮ ಮಾಡಿಕೊಂಡನೋ ಹಾಗೆಯೇ ಕನ್ನಡದ್ದೇ ಆದ ಸಾಂಗತ್ಯ-ತ್ರಿಪದಿಗಳಲ್ಲಿ ಬರೆದಿದ್ದರೆ ಇನ್ನೂ ಸೊಗಸೆನಿಸುತ್ತಿತ್ತು. ಉದಾಹರಣೆಯಾಗಿ ಇದೇ ಶಾರ್ದೂಲವಿಕ್ರೀಡಿತದ ಪದ್ಯದ ಭಾವವನ್ನು ಅದೇ ಶಬ್ದಗಳಲ್ಲಿ ಸೊಬಗಿನ ಸೋನೆಯಲ್ಲಿ ಹೀಗೆ ಅಡಕವಾಗಿಸಬಹುದು.  ಸೊಬಗಿನ ಸೋನೆಯೆಂಬುದು ಕನ್ನಡದ ಛಂದಸ್ಸು. ಮೊದಲ ಸಾಲಿಗೆ ನಾಲ್ಕು ವಿಷ್ಣುಗಣಗಳೂ, ಎರಡನೇ ಸಾಲಿಗೆ ಎರಡು ವಿಷ್ಣು ಹಾಗೂ ಒಂದು ರುದ್ರಗಣ (ಅಥವಾ ಎರಡು ಬ್ರಹ್ಮಗಣಗಳು) ಬರುವ ಛಂದಸ್ಸು. ಮೂರು-ನಾಲ್ಕನೇ ಸಾಲುಗಳು ಮೊದಲೆರಡರಂತೆಯೇ ಪುನಃ ಬರುತ್ತವೆ.
“ಮುತ್ತುಮಾ ಕುಳಿಸಮುಂ ಪಚ್ಚೆಯುಂ ಮುಂತಾದೊಂ|ಬತ್ತಿರ್ಪ ರನ್ನದ ನುಣ್ಗದಿರ್ಗಳ್ |
ಸುತ್ತಲುಂ ಪಸರಿಸೆ ರನ್ನವಸರದಿಂ ಕ|ಣ್ಗೆತ್ತಂ ಸೋಲಮನೀಗುಂ ಮಳೆವಿಲ್ಲಂತೆ ||”
ಹಿಂದಿನ ಕವಿಗಳು ಬಳಸಿದಂತೆ ಉತ್ಸಾಹಗತಿಯ ರಗಳೆಯನ್ನೂ ಬಳಸಿ ಶ್ರವಣಾಭಿರಾಮವಾಗುವ ಪದಶಯ್ಯೆಯಿಂದ ಕವಿ ಅಲ್ಲಿ ಗೆದ್ದಿದ್ದಾನೆ.
ಬಿಳಿಯ ನನೆಯ ಕಣೆಗೆ ನಾಡೆ ಪಗೆವರಗಿದು ಸುಗಿಯೆ ಕೂಡೆ
ನೆಲನನೊಂದೆ ಕೊಡೆಯಿನಾಳ್ದು ಮಿಸುಪ ಜಸಮೆ ನಿಮಿರಿ ಕೇಳ್ದು
ಕುಳಿರ್ವ ಪೂಗೊಳಂಗಳಲ್ಲಿ ತಳಿರ ಕಾವಣಂಗಳಲ್ಲಿ
ಪಳಿಕುವೆಸದ ಬೆಟ್ಟದಲ್ಲಿ ಪರಿವ ತೊಱೆಯ ತಡಿಗಳಲ್ಲಿ…….||೨೬೮||
ಅಲ್ಲದೇ ಲಯೋತ್ತರವೃತ್ತವೊಂದನ್ನೂ ಬಳಸಿದ್ದಾನೆ. ಅಲ್ಲಿ ಕೂಡ ಮಾತ್ರಾಗತಿಯಿರುವ ಕಾರಣ ಕರ್ಕಶತೆ ದೂರವಾಗುತ್ತದೆ
ತುಱುಗಿ ನಡೆವ ಮುಗಿಲ ನಡುವೆ ಪೊಳೆವ ಮಿಂಚಿವೆಂಬಿನಂ
ಮಿಱುಪ ತೆರೆಗಳೆಡೆಗಳೊಳಗೆ ಸುೞಿವ ಮೀನ್ಗಳಾವಗಂ
ಮೆಱೆವ ತೊಱೆಯ ತಡಿಯ ತಳಿರ ಮನೆಗಳಲ್ಲಿ ನಿಚ್ಚಮುಂ
ಬಱಿದೆ ಮುಳಿದು ತಿಳಿಪೆ ತಿಳಿದು ನೆರೆವ ಬೇಡವೆಂಡಿರಂ||೧೭೧||
ಇನ್ನು ಕಂದಪದ್ಯಗಳಲ್ಲಿ ಹಿಂದೆಯೇ ಹೇಳಿದಂತೆ ಲಘುಬಾಹುಳ್ಯದಿಂದಾದ ಕೆಲವು ದೋಷಗಳು ಒಂದೆರಡು ಕಡೆ ಕಂಡುಬಂದರೂ ಬಹುಧಾ ನಿರ್ದುಷ್ಟವಾಗಿವೆ.
    ಅದಲ್ಲದೇ ವೃತ್ತಗಳನ್ನೇ ನಿರ್ವಾಹಮಾಡುವಲ್ಲಿ ಸಂಸ್ಕೃತದ ಪದಗಳನ್ನು ಉಪಯೋಗಿಸಿದ್ದರೆ ಹೇಗೆ ಆಗಬಹುದಿತ್ತು ಎಂಬುದಕ್ಕೆ ಕೆಲವು ಉದಾಹರಣೆಗಳನ್ನು ಇಲ್ಲಿ ನೋಡಬಹುದು.
ಜವನಂ ಗೋಣ್ಮುಱಿಗೊಂಡು ಬಾಂಬೊೞಲನುರ್ಕಿಂ ಮೂಱುಮಂ ಸುಟ್ಟು ಜ-
ನ್ನವನುಣ್ಬಣ್ಣರನಾರ್ದು ಕೊಂದು ಮುಳಿಸಿಂ ಪೋರ್ದಾನೆ ಮೆಯ್ಯಾತನಾ
ತೊವಲಂ ಮೇಲ್ಪೊದೆ ಮಾಡಿ ಮೂಜಗಕೆ ಕೇಡಂ ಮಾಡುವಾ ನೆತ್ತಿಗ
ಣ್ಣವನೊಳ್ ಕಾದುವ ಬಲ್ಪು ಮೊಗ್ಗೆಗರನಿಂದಾರಯ್ದು ಮೇಲೆತ್ತುವೆಂ||೧೨೩||
ಇದನ್ನೇ ಅದೇ ಮತ್ತೇಭವಿಕ್ರೀಡಿತವೃತ್ತದಲ್ಲಿ ಮೊಗ್ಗೆಗರ್, ಬಾಂಬೊೞಲ್, ಜನ್ನವನುಣ್ಬಣ್ಣರ್ ಇತ್ಯಾದಿ ಶಬ್ದಗಳ ಬದಲು ವೀರರು, ತ್ರಿಪುರ,  ದೇವತೆಗಳು ಎಂಬಂತಹ ಸುವೇದ್ಯವಾದ ಶಬ್ದಗಳನ್ನು ಬಳಸಿ ಹೀಗೆ ಮಾಡಬಹುದು.
ಜವನಂ ಗೋಣ್ಮುಱಿಗೊಂಡನೊಳ್ ತ್ರಿಪುರದಾಹಂಗೆಯ್ದನೊಳ್ ದೇವಲೋ
-ಕವಿಘಾತಂಕೃತನೊಳ್ ಗಜಾಸುರವರತ್ವಗ್ಧಾರಿಯೊಳ್ ಕೋಪದಿಂ
ತವೆ ಪೋರಲ್ಕೆನೆ ಭಾಲನೇತ್ರನೊಳಗೀ ಲೋಕಕ್ಕೆ ಕೇಡಾದನೊಳ್
ಜವದಿಂ ವೀರರನೊಂದಿಕೊಂಡು ಸಬಲಂ ನಾಂ ಕಾಯ್ವೆನೀ ಬಲ್ಮೆಯಿಂ ||  
ಇನ್ನು ಸಂಸ್ಕೃತದಲ್ಲಿ ವಿರಳವಾದ ಲಘುಬಾಹುಳ್ಯವೇ ಆಗಿರುವ ಉತ್ಪಲಮಾಲೆ ಚಂಪಕಮಾಲೆಯ ಪದ್ಯಗಳು ಕನ್ನಡದ ಜಾಡಿಗೆ ಚೆನ್ನಾಗಿ ಒಗ್ಗಿಕೊಂಡಿರುವುದರಿಂದ ಅಲ್ಲಿಯ ವೃತ್ತ ನಿರ್ವಹಣೆ ಚೆನ್ನಾಗಿಯೇ ಆಗಿದೆ. ಕೆಲವು ಕಡೆಗಳಲ್ಲಿ ಕೋಮಲ ವೃತ್ತಗಳಾದ ಇವುಗಳಲ್ಲಿ ಪರುಷಾಕ್ಷರಗಳು ಅಷ್ಟು ಹಿತವಾಗಿ ಕೇಳದು. ಹಲವು ಸ್ರಗ್ಧರಾ-ಮಹಾಸ್ರಗ್ಧರಾ ವೃತ್ತಗಳನ್ನು ಬಿಟ್ಟರೆ ವರ್ಣವೃತ್ತಗಳಲ್ಲಿ ಒಂದು ಮಾಲಿನಿ ವೃತ್ತವನ್ನೂ ಬಳಸಿದ್ದಾನೆ.() ಮಿಕ್ಕಂತೆ ಕಂದಪದ್ಯಗಳೇ ಹೆಚ್ಚಾಗಿವೆ.
ಮುಳಿಸಿಂದಂ ಕಿೞ್ತು ಬಾಳಂ ಜಡಿದಳವಿಯನಾರಯ್ದು ಝಾರೇ ಜಝಾರೇ
ಹಳುರೇ ಹೋ ಹೋ ಮಝಾ ಎಂಬುಲಿ ನೆಗೆವಿನೆಗಂ ಬಿಟ್ಟು ಮಾಱಾಂತ ಮೇಲಾ
ಳ್ಗಳನಾಗಳ್ ತಳ್ತು ಪೊಯ್ದಾರ್ದಿೞಿಪಿ ಕುದುರೆಯಂ ಕೊಂಡು ತಮ್ಮೊಡ್ಡಿನೊಳ್ ಕ
ಣ್ಗೊಳಿಪನ್ನಂ ಪೊಕ್ಕು ಗೆಲ್ಲಂಬಡೆದರದಟಿನಿಂ ರಾಯ ರಾವುತ್ತರಾಗಳ್||೨೧೭||
ಈ ಪದ್ಯವನ್ನು ಅದೇ ಮಹಾಸ್ರಗ್ಧರಾ ವೃತ್ತದಲ್ಲಿ ಯತಿಸಹಿತವಾಗಿ  ‘ಬಾಳ್’ ಎಂಬ ಶ್ಲೇಷಾರ್ಥದ ಶಬ್ದದ ಬದಲಿಗೆ ‘ಖಡ್ಗ’ ಎಂದು, ‘ಮೇಲಾಳ್ಗಳ್’ ಬದಲಿಗೆ ‘ವೀರರ್’ ಎಂದು, ‘ತಳ್ತು ಪೊಯ್’ ಬದಲು ‘ಬೇಧಿಸು’ ಎಂಬುದನ್ನು ‘ಒಡ್ಡು’ ಬದಲಿಗೆ ‘ಸೈನ್ಯ’ ಎಂದು ‘ಗೆಲ್ಲಂಬಡೆ’ ಎಂಬುದರ ಬದಲು ‘ಗೆಲ್ದಪರ್’ ಎಂದು ಬದಲಿಸಿ “ರಾಯ ರಾವುತ್ತರ್” ಎಂಬಲ್ಲಿ ಸಮಸ್ತಪದದಂತೆ ತೋರಿದರೂ ‘ರಾಯ’ ಎಂಬುದು ಸಂಬೋಧನಾಭಾಸವಾಗುವುದರಿಂದ ಬದಲಾಯಿಸಿ ಹೀಗೆ ಮಾಡಬಹುದು-
ಮುಳಿಸಿಂದಂ ಖಡ್ಗದಿಂದಂ | ಜಡಿಯುತೆ ದನಿಯೊಳ್ | ಕೂಗಿ ಝಾರೇ ಜಝಾರೇ
ಹಳುರೇ ಹೋ ಹೋ ಮಝಾ ಪೊಯ್ | ಯೆನುವುಲಿ ನೆಗೆಯಲ್ | ವೀರರಂ ಮೇಲೆ ಬಿೞ್ದ-
ರ್ಕಳನಾಗಳ್ ಬೇಧಿಸುತ್ತುಂ | ಕೆಡಹಿ ಕುದುರೆಯಂ | ಕೊಂಡು ಸೈನ್ಯಕ್ಕೆನಲ್ ಕ-
ಣ್ಗೊಳಿಪಂದಂ ಗೆಲ್ದಪರ್ ತಾ|ಮದಟಿನೊಳಿನಿತೀ| ರಾಜನಾ ರಾವುತರ್ಕಳ್ ||
ದಿಟವೇ- ಒಬ್ಬ ಸಿದ್ಧಕವಿಯ ಪದ್ಯಗಳನ್ನು ಬದಲಾಯಿಸಿ ಅವನ ಪದಶಿಲ್ಪವನ್ನು ನಮ್ಮ ಮಾತುಗಳಿಂದ ತುಂಬಿಸುವುದು ಉದ್ಧತತನವೇ ಹೌದು. ಆದರೂ ಒಂದೇ ವಿಷಯವನ್ನು ಹೇಗೆ ಒಂದೇ ವೃತ್ತದಲ್ಲಿ ಬೇರೆ ಬೇರೆ ಶಬ್ದಗಳಿಂದ ಹೇಳಬಹುದು- ಹಾಗೂ ಅದೇ ಪದಗಳಿಂದ ಬೇರೆಯ ಛಂದಸ್ಸಿನಲ್ಲಿ ಶ್ರುತಿಸುಭಗವಾಗಿ (ಕಿವಿಗೆ ಹಿತವಾಗಿ) ಹೇಗೆ ಹೇಳಬಹುದಿತ್ತು  ಎಂಬ ಸಾಧ್ಯತೆಗಳನ್ನು ಸಹೃದಯರಿಗೆ ನಿವೇದಿಸುವ ಚಾಪಲ್ಯದಿಂದ ಈ ಕಾರ್ಯಕ್ಕೆ ತೊಡಗಬೇಕಾಯಿತಷ್ಟೆ!  
ಉಪಸಂಹಾರ-
ಆಂಡಯ್ಯನ “ಕಬ್ಬಿಗರ ಕಾವಂ” ಹೀಗೆ ಅಚ್ಚಗನ್ನಡದ ಪದಪ್ರಯೋಗಗಳಿಂದ ಕನ್ನಡಸಾಹಿತ್ಯದಲ್ಲಿ ವಿಶಿಷ್ಟತೆಯನ್ನು ಪಡೆದುಕೊಂಡಿದ್ದರೂ ಅದೇಕೆ ಜನಪ್ರಿಯತೆಯಿಂದ ದೂರವಾಯಿತೆಂದು ಅವಲೋಕಿಸಿದರೆ ಸ್ಪಷ್ಟವಾಗಿ ಗೋಚರಿಸುವುದು ಕಾವ್ಯದಲ್ಲಿ ರಸೋತ್ಪತ್ತಿಯ ಕೊರತೆಯಾದದ್ದು. ಕಥಾವಸ್ತುವಿನಲ್ಲಿ ಮಾರ್ಪಾಡು ಮಾಡಿಕೊಂಡಿದ್ದರಲ್ಲಿ ಸೊಗಸಿಲ್ಲದುದು ವಿಸ್ತೀರ್ಣವಿಲ್ಲದುದೂ ಒಂದು ಕಾರಣ. ಕಥಾವಸ್ತುವನ್ನು ಜೈನಮತಕ್ಕೆ ಪೂರಕವಾಗಿಯೂ ಮಾಡಿಕೊಂಡಿಲ್ಲ, ಮೂಲಕ್ಕೂ ನಿಷ್ಠವಾಗಿಲ್ಲ! ಕಾಮದ ಪಾರಮ್ಯವನ್ನು ಜೈನಮತವೂ ಸಮರ್ಥಿಸುವುದಿಲ್ಲವೆಂಬುದರ ಕಡೆ ಕವಿ ಜಾಣಗುರುಡನ್ನು ತೋರುವುದು ಆಶ್ಚರ್ಯ! ಹಾಗೆಯೇ ಅಚ್ಚಗನ್ನಡವೆಂದು ನಿತ್ಯೋಪಯೋಗಿಯಾದ ಭಾಷೆಗಿಂತ ದೂರದ ಭಾಷೆಯ ಬಳಕೆಯನ್ನು ಮಾಡಿದ್ದು ಇನ್ನೊಂದು ಕಾರಣವೆನ್ನಬಹುದು. ವರ್ಣನೆಗಳಲ್ಲಿ ಗಾಂಭೀರ್ಯವಿಲ್ಲದಿರುವುದು ಪುನರುಕ್ತಿಯಾಗಿರುವುದು ಇವೆಲ್ಲ “ಕಾವನ ಗೆಲ್ಲಂ” ಸೋಲುವುದಕ್ಕೆ ಕಾರಣಗಳಾದವೆನ್ನಬಹುದು. ಅಚ್ಚಗನ್ನಡವನ್ನೇ ಬಳಸಬೇಕೆಂಬ ನಿಯಮವನ್ನಿಟ್ಟುಕೊಳ್ಳದಿದ್ದ ಮುಂದಿನ ಕವಿಗಳಾದ ಕುಮಾರವ್ಯಾಸ-ಲಕ್ಷ್ಮೀಶರಲ್ಲಿ ಕೂಡ ಕೆಲವೊಂದು ಪದ್ಯಗಳು ಅಚ್ಚಗನ್ನಡ ಶಬ್ದಗಳಿಂದಲೇ ನಿರ್ಮಿತವಾಗಿ ರಸ್ಯವಾಗಿಯೂ ಇರುವಂತಹುದನ್ನು ನಾವು ಕಾಣಬಹುದು. ಇಲ್ಲಿ ಆಂಡಯ್ಯ ಛಂದಸ್ಸಿನ ಆಯ್ಕೆಯಲ್ಲಿ ಎಡವಿದನೆಂಬುದು ಸ್ಪಷ್ಟವಾಗಿ ಕಾಣುತ್ತದೆ. ಇದೇ ವೃತ್ತಗಳ ಬದಲು ತ್ರಿಮೂರ್ತಿಗಣಘಟಿತಚ್ಛಂದಸ್ಸನ್ನೋ ಮಾತ್ರಾಚ್ಛಂದಸ್ಸನ್ನೋ ಬಳಸಿದ್ದರೆ ಇನ್ನಷ್ಟು ಸುಲಲಿತವಾಗುತ್ತಿತ್ತು ಸಹೃದಯಮಾನ್ಯವಾಗುತ್ತಿತ್ತು. ಪಂಪ-ರನ್ನ-ನಾಗವರ್ಮ ಮೊದಲಾದ ಪೂರ್ವಕವಿಗಳಿಗೂ ಕನ್ನಡ-ಸಂಸ್ಕೃತ ಭಾಷಾಸಂಬಂಧದ ಅರಿವಿದ್ದ ಕಾರಣ ಅವರ ಕಾವ್ಯಗಳಲ್ಲಿ ಇಂತಹ ನಿಯಮಗಳನ್ನು ಹಾಕಿಕೊಳ್ಳಲಿಲ್ಲ.  ಮುದ್ದಣನೂ ಕೂಡ “ಕರ್ಮಣಿಯ ಸರದೊಳ್ ಚೆಂಬವಳಮಂ ಕೋದಂತೆ” ಎಂದು ಕನ್ನಡದಲ್ಲಿ ಸಂಸ್ಕೃತವನ್ನು ಬೆರೆಸಿರುವುದಕ್ಕೆ ಉಪಮೆಯನ್ನು  ಕೊಡುತ್ತಾನೆ. ಇಂತಿದ್ದರೂ ಆಂಡಯ್ಯನ “ಕಬ್ಬಿಗರ ಕಾವಂ” ಕಾವ್ಯವನ್ನು ಗಮನಿಸಿದರೆ ಕನ್ನಡದಲ್ಲಿ ತದ್ಭವಸೃಷ್ಟಿಯಾಗುವ ಪರಿಯನ್ನು ಗಮನಿಸಬಹುದು. ಗಂಭೀರವಾದ ಭಾಷಾಶಾಸ್ತ್ರದ ಅಧ್ಯಯನಕ್ಕೆ ಇದು ಪೂರಕವಾಗುತ್ತದೆ ಎಂಬುದಂತೂ ನಿಸ್ಸಂಶಯ. ಇವುಗಳೆಲ್ಲವುಗಳ ಹೊರತಾಗಿ ನಾರಿಕೇಳ ಪಾಕದ ಕಾವ್ಯಕ್ಕೆ ಉದಾಹರಣೆಯಾಗಿ ಇದನ್ನು ಹೆಸರಿಸಬಹುದಷ್ಟೆ.
ಕೊಳೆತುದೊ ನಾರಿಕೇಳದೊಳಗೇ ಸವಿಯೋ ಅದು ಕಷ್ಟವೇದ್ಯಮೈ!
______________________________________________________________________________

(ಪ್ರಸ್ತುತ ಲೇಖನದಲ್ಲಿ ಆಂಡಯ್ಯ ಸಂಸ್ಕೃತ ಶಬ್ದಗಳನ್ನು ಬಳಸಿದ್ದಾನೆ ಎಂದು ಬರೆದಿದ್ದೆ. ಆದರೆ ಅದು ನನಗೆ ದೊರೆತ ಪುಸ್ತಕದಲ್ಲಿ ಮಾತ್ರವೇ ಇರುವ ದೋಷವೆಂದು ಮಿತ್ರ ಮಂಜುನಾಥ ಹೆಗಡೆ ಇವರಿಂದ ಗೊತ್ತಾಯಿತು. ಆಂಡಯ್ಯ ಅದಕ್ಕೆ ಸಮರ್ಪಕವಾದ ಅಚ್ಚಗನ್ನಡದ ಶಬ್ದಗಳನ್ನೇ ಬಳಸಿದ್ದಾನೆ. ಸಖಿ ಎಂಬ ಶಬ್ದದ ಶುದ್ಧರೂಪ ಸಬರಿ ಎಂದು, ಅವಸರ ಎಂಬುದಕ್ಕೆ ಪಸರ ಎಂಬ ಶಬ್ದ ಶಿವ ಎಂಬ ಶಬ್ದದ ಬದಲಿಗೆ ನಾಡೆರೆಯ ಎಂಬ ಶಬ್ದವೂ ಇದೆ. ಶುದ್ಧಪ್ರತಿಗಾಗಿ ಶ್ರೀ ರಾಮಾನುಜಯ್ಯಂಗಾರ್ ಅವರಿಂದ ಸಂಪಾದಿತ ಪ್ರತಿ ಗಮನಿಸಬಹುದು. ೧೯೩೦ರ ಮುದ್ರಣ. ಮೈಸೂರು ಪಂಪಾಚಾರ್ಯ ಇಲೆಕ್ಟ್ರಿಕ್ ಪ್ರೆಸ್ ಇಂದ ಪ್ರಕಟಿತ. )
 ಟಿಪ್ಪಣಿಗಳು:-
೧.ಕನ್ನಡ ಸಾಹಿತ್ಯ ಚರಿತ್ರೆ- ಶ್ರೀ ರಂ.ಶ್ರೀ ಮುಗಳಿ- ಗೀತಾ ಬುಕ್ ಹೌಸ್ ಪ್ರಕಾಶನ ಮೈಸೂರು- ಹದಿನಾರನೆಯ ಮುದ್ರಣ(೨೦೦೯)
೨.”ಉಪೋದ್ಘಾತ” ಆಂಡಯ್ಯ ಕವಿಯ ಕಬ್ಬಿಗರ ಕಾವಂ- ಗದ್ಯಾನುವಾದ ಶ್ರೀ ಆರ್ ವಿ ಕುಲಕರ್ಣಿ- ಕನ್ನಡ ಸಾಹಿತ್ಯ ಪರಿಷತ್ತು- ಮುದ್ರಣ ೨೦೧೧
೩.ರುದ್ರಭಟ್ಟವಿರಚಿತ ಜಗನ್ನಾಥವಿಜಯಂ- ಗದ್ಯಾನುವಾದ-ಆಸ್ಥಾನವಿದ್ವಾನ್ ಯಂ.ಆರ್.ವರದಾಚಾರ್ಯ- ಕನ್ನಡ ಸಾಹಿತ್ಯ ಪರಿಷತ್ತು- ಮುದ್ರಣ ೧೯೯೯
೪. ಅಲಂಕಾರಶಾಸ್ತ್ರ- ಡಾ|| ಆರ್ ಗಣೇಶ್.-ಭವನದ ಗಾಂಧೀಕೇಂದ್ರ ಪ್ರಕಾಶನ- ಮೊದಲ ಮುದ್ರಣ-೨೦೦೨
೫. ತೀ.ನಂ ಶ್ರೀಕಂಠಯ್ಯನವರ “ಭಾರತೀಯ ಕಾವ್ಯಮೀಮಾಂಸೆ”ಯಲ್ಲಿ ೨೬೪ನೇ ಪದ್ಯ ಎಂದು ಉದ್ಧೃತವಾಗಿದೆ.(ಪುಟ ೩೫೫) ಪ್ರಸಾರಾಂಗ ಮೈಸೂರು ವಿಶ್ವವಿದ್ಯಾಲಯ-ಒಂಬತ್ತನೆಯ ಮುದ್ರಣ ೨೦೧೦
೬. ಸಂಕ್ಷಿಪ್ತ ಕನ್ನಡ ನಿಘಂಟು- ಕನ್ನಡ ಸಾಹಿತ್ಯ ಪರಿಷತ್ತು
೭.“ಧಾತುಪ್ರಕರಣಂ”- ಕೇಶಿರಾಜವಿರಚಿತ ಶಬ್ದಮಣಿದರ್ಪಣಂ- ಪರಿಷ್ಕೃತಮುದ್ರಣದ ಸಂಪಾದಕ ಡಾ||ಟಿ.ವಿ.ವೆಂಕಟಾಚಲಶಾಸ್ತ್ರೀ- ಕನ್ನಡ ಸಾಹಿತ್ಯ ಪರಿಷತ್ತು- ಮುದ್ರಣ ೨೦೧೧
೮. ಭಾರತೀಯ ಕಾವ್ಯಮೀಮಾಂಸೆ (ಪುಟ ೩೫೬)- ತೀ.ನಂ.ಶ್ರೀಕಂಠಯ್ಯ- ಪ್ರಸಾರಾಂಗ ಮೈಸೂರು ವಿಶ್ವವಿದ್ಯಾಲಯ- ಒಂಬತ್ತನೆಯ ಮುದ್ರಣ ೨೦೧೦
೯. ಭಾರತೀಯಚ್ಛಂದಶ್ಶಾಸ್ತ್ರಕ್ಕೆ ಸೇಡಿಯಾಪು ಕೊಡುಗೆ- ಹಾಸುಬೀಸು- ಡಾ|| ಆರ್ ಗಣೇಶ್- ವಸಂತಪ್ರಕಾಶನ- ಮುದ್ರಣ-೨೦೦೯
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~