Powered By Blogger

ಗುರುವಾರ, ಆಗಸ್ಟ್ 4, 2016

ಸಹೃದಯಕಾಲ ೨೩- ಹಲ್ಲುನೋವೂ ಭುವನವಿಜಯವೂ ತೆನಾಲಿ ರಾಮನ ಪದ್ಯಗಳೂ


ಕೆಲವು ದಿನಗಳಿಂದ ಹಲ್ಲುನೋವು ಪ್ರಾರಂಭವಾಗಿತ್ತು. ದಂತವೈದ್ಯರ ಬಳಿ ಅಡ್ಡಾಡುತ್ತ ಬಾಧೆ ಪಡುತ್ತಿರುವಾಗ ಹಲ್ಲಿನ ಬಗ್ಗೆ ಇದ್ದ ಕೆಲವು ಹಾಸ್ಯಪ್ರಸಂಗಗಳ ಸಹಿತವಾದ ಪದ್ಯಗಳನ್ನು ಮೆಲುಕು ಹಾಕುತ್ತಿದ್ದೆ. ಡಿವಿಜಿ ಹಾಗೂ ರಂಗನಾಥಶರ್ಮರ ನಡುವೆ ನಡೆದ ಸಂಭಾಷಣೆಯ ನೆನಪಾಯಿತು. (ಈ ಕಥಾನಕ ಶತಾವಧಾನಿ ಗಣೇಶರು ಬರೆದ "ಬ್ರಹ್ಮಪುರಿಯ ಭಿಕ್ಷುಕ" ಪುಸ್ತಕದಲ್ಲಿದೆ.) ಒಮ್ಮೆ ಹಲ್ಲಿನ ವೈದ್ಯರ ಬಳಿ ಹೋಗುತ್ತಿದ್ದ ರಂಗನಾಥಶರ್ಮರು ಡಿವಿಜಿಯವರನ್ನು ಕಂಡು ಹೋಗೋಣವೆಂದು ಹೋದರಂತೆ. ಡಿವಿಜಿಯವರು ಏನು ಎತ್ತ ಎಂದೆಲ್ಲ ವಿಚಾರಿಸಿದರುಆ ಬಳಿಕ ಅಲ್ಲಿಯೇ ಆಶುವಾಗಿ ಎರಡು ಸಾಲು ಶ್ಲೋಕವೊಂದನ್ನು ಹೇಳಿದರಂತೆ 
"ಏಕದಂತಸ್ಸ ವೋ ಕುರ್ಯಾದದ್ಯ ವೈ ದಂತಮಂಗಲಂ"
(ಇಂದು ನಿಮಗೇಕದಂತನು ದಂತಮಂಗಳವನೆಸಗುತಿರಲಿ)*
ಅಂದು ನಕ್ಕು ತೆರಳಿದ ರಂಗನಾಥಶರ್ಮರು ಮಾರನೆಯ ದಿನ ಎರಡು ಹಲ್ಲುಗಳನ್ನು ಕೀಳಿಸಿಕೊಂಡು ಬಂದಿದ್ದರು. ಡಿವಿಜಿಯವರಿಗೆ ಹೀಗೆ ಪದ್ಯದಲ್ಲಿ  ಉತ್ತರಿಸಿದರಂತೆ -
"ಅಸೂಯಯೈವ ಪೂರ್ವೇದ್ಯುರ್ದಂತದ್ವಯಮಪಾಹರತ್"
(ಮತ್ಸರದಿನೇನೊ ಗಣಪನು ನಿನ್ನೆ ಹಲ್ಲೆರಡನೆತ್ತಿಸಿದನು).**
ಹೀಗೆ ಹಲ್ಲುನೋವಿನಲ್ಲೂ ಕಾವ್ಯವನ್ನು ಕಾಣುವ ಅವರನ್ನು ನೆನೆಯುತ್ತಾ ಇರುವಾಗ ಇನ್ನೊಂದು ಸುದೀರ್ಘಪ್ರಸಂಗವೂ ನೆನಪಾಯಿತು- ಅದಕ್ಕಷ್ಟು ಪೀಠಿಕಾಖ್ಯಾನವೂ ಸೇರಿದೆ.  ಮುಂದಿದೆ ಓದಿ-
ವಿಜಯನಗರದ ಪ್ರಸಿದ್ಧ ಅರಸನಾದ ಶ್ರೀಕೃಷ್ಣದೇವರಾಯನ ಆಸ್ಥಾನದಲ್ಲಿ ಅಷ್ಟದಿಗ್ಗಜಗಳೆಂದು ಖ್ಯಾತರಾದ ಎಂಟು ಜನ ಕವಿಗಳಿದ್ದರು. ಪ್ರತಿಯೊಬ್ಬರೂ ಅಸಾಧಾರಣ ಪ್ರತಿಭೆಯವರೇ ಆಗಿದ್ದರು. ಅವರ ಚಾಟು ಪದ್ಯಗಳು ಹಾಸ್ಯ ಪ್ರಸಂಗಗಳು ಇತ್ಯಾದಿಗಳು ತೆಲುಗು ಸಾಹಿತ್ಯಕ್ಕೆ ಒಂದು ಮಹತ್ತರವಾದ ಕೊಡುಗೆಯೇ ಆಗಿದೆ. ಅವರಲ್ಲಿ ವಿಕಟಕವಿ ಎಂದು ಖ್ಯಾತನಾದ ತೆನಾಲಿ ರಾಮನ ಬಗೆಗಂತೂ ಕನ್ನಡಿಗರೂ ಸಾಕಷ್ಟು ಕಥಾನಕಗಳನ್ನು ಕೇಳಿದ್ದಾರೆ. ಅವನ ಹಾಸ್ಯಪ್ರಜ್ಞೆಯ ಜೊತೆ ಅವನೊಳಗಿದ್ದ ಒಬ್ಬ ಕವಿಯನ್ನು ಕನ್ನಡಿಗರು ಮರೆತಿದ್ದಾರೆ. ತುಂಬ ಹಿಂದೆ ಬಂದ ಅನಂತನಾಗ್ ಅಭಿನಯದ ಚಲಚ್ಚಿತ್ರವೊಂದರಲ್ಲಿ ಇಂತಹ ಪದ್ಯಗಳನ್ನು ಕೆಲವನ್ನು ಬಳಸಿಕೊಂಡಿದ್ದಾರೆ. ಅದಾದರೂ ತೆಲುಗಿನಲ್ಲಿ ಅಕ್ಕಿನೇನಿ ನಾಗೇಶ್ವರ್ ರಾವ್ ಅಭಿನಯದ ತೆನಾಲಿ ರಾಮಕೃಷ್ಣ ಚಲನಚಿತ್ರದ ಪುನರ್ನಿರ್ಮಾಣವೇ ಆಗಿದೆ. "ಭುವನವಿಜಯಮು"ಮೊದಲಾದ ತೆಲುಗು ಸಾಹಿತ್ಯಗೋಷ್ಠಿಗಳಲ್ಲಿ ಇದನ್ನು ಅಭಿನಯಿಸುವ ಮೂಲಕ ಸಕಲರನ್ನೂ ತಲುಪುವಂತಾಗಿದೆ. ಇತ್ತೀಚೆಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿಯೂ ತೆಲುಗುಭಾಷೆಯಲ್ಲಿ ಆಯೋಜಿಸಿದ್ದರು. ಅದರಲ್ಲಿ ಹಲವು ತೆಲುಗಿನ ಪ್ರಸಿದ್ಧ ಕವಿಗಳು ಅವಧಾನಿಗಳೂ ಪಾಲ್ಗೊಂಡಿದ್ದರು. ಸಹಸ್ರಾವಧಾನಿ ಗರಿಕಪಾಟಿ ನರಸಿಂಹರಾವು ಅವರು ತೆನಾಲಿ ರಾಮಕೃಷ್ಣನ ಪಾತ್ರವನ್ನು ನಿರ್ವಹಿಸಿದ್ದರು. ಕನ್ನಡಿಗರಾದ ಬಹುಭಾಷಾ ಕವಿಗಳಾದ ಶತಾವಧಾನಿ ಆರ್ ಗಣೇಶರು ಲೊಲ್ಲ ಲಕ್ಷ್ಮೀಧರನ ಪಾತ್ರವನ್ನು ನಿರ್ವಹಿಸಿದ್ದರು. (ಇಂತಹ ಕಥಾನಕಗಳೆಲ್ಲ ನನಗೆ ತಿಳಿದು ಬಂದಿರುವುದೂ ಶತಾವಧಾನಿ ಗಣೇಶರ ಮೂಲಕವೇ ಎಂಬುದು ಇಲ್ಲಿ ಸ್ಮರಣೀಯ.)ಅದನ್ನು youtube ನಲ್ಲಿ ವೀಕ್ಷಿಸಬಹುದು. ತೆಲುಗು ಬಲ್ಲವರಾದರೆ ಸುಲಭವೇದ್ಯವಾಗುತ್ತದೆ.
ಅಂತಹ ಚಾಟು ಪದ್ಯಗಳಲ್ಲಿ ಕೆಲವನ್ನು ಕಥಾನಕ ಸಹಿತವಾಗಿ ಇಲ್ಲಿ ಹಾಕುವ ಮೂಲಕ ನಾವೂ ತೆನಾಲಿ ರಾಮನ ಪದ್ಯವನ್ನು ಸವಿಯೋಣ ಎಂದು ಅನ್ನಿಸಿತಷ್ಟೆ. ಹಾಗೆ ಕೇಳಿದ ಕಥಾನಕಗಳನ್ನು ಪ್ರಸ್ತುತಪಡಿಸುವೆ.
ತೆನಾಲಿ ರಾಮಕೃಷ್ಣ ಆಸ್ಥಾನಕ್ಕೆ ಸೇರಿಕೊಂಡ ಸಂದರ್ಭದ ಹಲವು ಕಥೆಗಳು ಪ್ರಚಲಿತದಲ್ಲಿವೆ. ಅದೆಂತೇ ಇರಲಿ ಅವನ ಹಾಸ್ಯಪ್ರಜ್ಞೆಯ ಜೊತೆ ಚಾಟುಪದ್ಯಗಳೂ ರಸಮಯವಾಗಿ ಸಹೃದಯಮನೋರಂಜಕವಾಗಿವೆಯೆಂಬುದಂತೂ ನಿಜ.
ಹೀಗೆ ಒಮ್ಮೆ ಕೃಷ್ಣದೇವರಾಯ ಕವಿಗಳ ಕಾವ್ಯವನ್ನು ಕೇಳುತ್ತಾ ಕುಳಿತಿದ್ದ. ಧೂರ್ಜಟಿ ಎಂಬ ಕವಿ "ಕಾಳಹಸ್ತೀಶ್ವರಶತಕಮು" ಎಂಬ ಕಾವ್ಯದಿಂದ ಒಂದು ಪದ್ಯವನ್ನು ಓದಿದ. ಕೃಷ್ಣದೇವರಾಯ ಅದನ್ನು ಮೆಚ್ಚಿಕೊಂಡು ಆತನ ಬಗೆಗೆ ಒಂದು ಪದ್ಯವನ್ನು ಹೇಳಬೇಕೆಂದುಕೊಂಡು ಚಂಪಕಮಾಲಾವೃತ್ತದಲ್ಲಿ ಹೀಗೆ ಪ್ರಾರಂಭಿಸಿದ-
ಸ್ತುತಮತಿಯೈನ ಆಂಧ್ರಕವಿ ಧೂರ್ಜಟಿ ಪಲ್ಕುಲಕೇಲಗಲ್ಗೆನೋ
ಅತುಲಿತಮಾಧುರೀಮಹಿಮ!
(ಸ್ತುತಮತಿಯಾದ ಆಂದ್ರಕವಿ ಧೂರ್ಜಟಿ ಮಾತಿಗದೆಂತು ದಕ್ಕಿತೋ!
ಅತುಲಿತ ಮಾಧುರೀ ಮಹಿಮೆ!)
ತತ್ಕ್ಷಣ ತೆನಾಲಿ ರಾಮಕೃಷ್ಣ ಧೂರ್ಜಟಿಕವಿ ವೇಶ್ಯಾಲೋಲ ಎಂಬುದನ್ನು ಮನದಲ್ಲಿಟ್ಟುಕೊಂಡು ಮಧ್ಯೆ ಬಾಯಿ ಹಾಕಿ ಅದೇ ಪದ್ಯವನ್ನು ಮುಂದುವರೆಸುತ್ತಾ ಹೀಗೆ ಹೇಳಿದ-
ಹಾ! ತೆಲಿಸೆನ್! ಭುವನೈಕಮೋಹನೋ-
ದ್ಧತಸುಕುಮಾರ-ವಾರವನಿತಾ-ಜನತಾ-ಘನತಾಪಹಾರಿ ಸಂ-
ತತಮಧುರಾಧರೋದಿತಸುಧಾರಸಧಾರಲ ಗ್ರೋಲುಟಂ ಜುಮೀ!
(ಹಾ! ತಿಳಿದೆಂ! ಭುವನೈಕಮೋಹನೋ-
ದ್ಧತಸುಕುಮಾರ-ವಾರವನಿತಾ-ಜನತಾ-ಘನತಾಪಹಾರಿ ಸಂ-
ತತಮಧುರಾಧರೋದಿತಸುಧಾರಸಧಾರೆಯನೀಂಟುತಿರ್ಪುದೇ!)     ***
 (ಕೃಷ್ಣದೇವರಾಯ-ಸ್ತುತ್ಯನಾದ ಆಂಧ್ರಕವಿ ಧೂರ್ಜಟಿಯ ಮಾತಿಗೆ ಇಂತಹ ಮಾಧುರ್ಯ ಹೇಗೆ ಸಿಕ್ಕಿತೋ!
ತೆನಾಲಿರಾಮ- ಹಾ! ತಿಳಿದೆ! ಭುವನಸುಂದರಿಯರಾದ, ಸುಕುಮಾರಿಯರಾದ ವಾರಾಂಗನೆಯರ ಜನತೆಯ ಘನತಾಪವನ್ನು ಅಪಹರಿಸುವ ಮಧುರವಾದ ತುಟಿಗಳಿಂದ ಉದಿಸುತ್ತಿರುವ ಅಮೃತರಸವನ್ನು ಹೀರುತ್ತಿರುವುದೇ ಅಲ್ಲವೇ!)
ಹೀಗೆ ಇತರ ಕವಿಗಳ ಕಾಲೆಳೆಯುವ ಬುದ್ಧಿ ಅಪ್ರತಿಮವಾಗಿತ್ತಲ್ಲದೇ ವಿಕಟಕವಿ ರಾಮಕೃಷ್ಣ ಸಿಕ್ಕ ಅವಕಾಶವನ್ನು ಬಿಡುತ್ತಿರಲಿಲ್ಲ. ಒಮ್ಮೆ ಅವನ ಪ್ರತಿಭೆಯನ್ನು ನೋಡೋಣ ಎಂದು ರಾಜಗುರು ತಾತಾಚಾರ್ಯರು- ದ್ವಾರಪಾಲಕನೊಬ್ಬನ ಬಳಿ ಒಂದು ಸಮಸ್ಯೆಯನ್ನು ರಾಮಕೃಷ್ಣನಿಗೆ ಕೇಳಲು ಹೇಳುತ್ತಾರೆ. ಅವನು ಕೇಳಿದ ಕಂದಪದ್ಯದ ಕೊನೆಯ ಪಾದ "ಕುಂಜರಯೂಥಂಬು ದೋಮ ಕುತ್ತುಕಜೊಚ್ಚೆನ್" ("ಆನೆಯ ಗಣವಿಲ್ಲಿ ಸೊಳ್ಳೆಬಾಯೊಳಗಾಯ್ತೇ")
ಎಂದು. ಆನೆಯ ಗಣವೆಲ್ಲಾದರೂ ಸೊಳ್ಳೆಯ ಬಾಯಿಗೆ ಸಿಲುಕುವುದಿದೆಯೇ! ರಾಮಕೃಷ್ಣ ಆ ದ್ವಾರಪಾಲಕನಿಗೆ ಹೇಳಿದ ಪದ್ಯ ಹೀಗೆ-
"ಗಂಜಾಯಿ ತ್ರಾಗಿ ತುರುಕಲ
ಸಂಜಾತಲ ಗೂಡಿ ಕಲ್ಲು ಚವಿಗೊನ್ನಾವಾ
ಲಂಜಲ ಕೊಡಕಾ ಎಕ್ಕಡ
ಕುಂಜರಯೂಥಂಬು ದೋಮ ಕುತ್ತುಕಜೊಚ್ಚೆನ್"
(ಏನೋ! ಗಾಂಜಾ ಹೊಡೆದೆಯ!
ಹೀನರ ತುರುಕರ್ಕಳೊಡನೆ ಕಳ್ಗುಡಿದೆಯೊ ಪೇಳ್
ಏನಿದು ಸೂಳೆಯ ಮಗನೇ
ಆನೆಯ ಗಣವಿಲ್ಲಿ ಸೊಳ್ಳೆಬಾಯೊಳಗಾಯ್ತೇ!) #
(ಗಾಂಜಾ ಕುಡಿದಿದ್ದೀಯೇನೋ! ತುರುಕರ ಜೊತೆ ಸೇರಿ ಕಳ್ಳು ಕುಡಿದು ಬಂದಿದ್ದೀಯಾ! ಏನೋ ಸೂಳೇಮಗನೇ! ಆನೆಯ ಗಣ ಸೊಳ್ಳೆಯ ಬಾಯ್ಗೆ ಸಿಲುಕುತ್ತಾ!)
ಎಂದು ಅವನಿಗೇ ಬಯ್ದು ಪದ್ಯಪೂರಣ ಮಾಡುತ್ತಾನೆ. ಅದು ಪರೋಕ್ಷವಾಗಿ ಈ ಪ್ರಶ್ನೆ ಕೇಳಿದ ತಾತಾಚಾರ್ಯರಿಗೂ ತಿವಿತವಲ್ಲವೇ! ಹೇಗೋ ಮಾಡಿ ಅವರು ಅದನ್ನೇ ಆ ದಿನ ಸಭೆಯಲ್ಲಿ ಕೃಷ್ಣದೇವರಾಯನೂ ಕೇಳುವಂತೆ ಮಾಡುತ್ತಾರೆ. ಬುದ್ಧಿವಂತ ವಿಕಟಕವಿ ಅದನ್ನು ಆಗ ಹೀಗೆ ಪೂರೈಸುತ್ತಾನೆ-
"ರಂಜನ ಚೆಡಿ ಪಾಂಡವುಲರಿ-
ಭಂಜನುಲೈ ವಿರಟುಗೊಲ್ವ ಪಾಲ್ಪಡಿರಕಟಾ 
ಸಂಜಯ ವಿಧಿನೇಮಂದುನು
ಕುಂಜರಯೂಥಂಬು ದೋಮಕುತ್ತಕಜೊಚ್ಚೆನ್"
(ಮಾನಿತ ವೀರರ್ ಪಾಂಡವ-
ರೇನಿಂತಿರ್ಪರ್ ವಿರಾಟನಗರದೊಳಕಟಾ
ಏನೀ ವಿಧಿಯೋ ಸಂಜಯ!
ಆನೆಯ ಗಣವಿಲ್ಲಿ ಸೊಳ್ಳೆಬಾಯೊಳಗಾಯ್ತೇ) ##
(ಇದನ್ನು ಧೃತರಾಷ್ಟ್ರ ಸಂಜಯನಿಗೆ ಹೇಳಿದಂತೆ ಪೂರೈಸುತ್ತಾನೆ- ವೀರರಾದ ಪಾಂಡವರು ಅಂತಹ ಸಣ್ಣವನಾದ ವಿರಾಟನ ನಗರದಲ್ಲಿ ಆಶ್ರಯ ಪಡೆದಿದ್ದಾರೆ! ಅಯ್ಯೋ ಇದನ್ನೇನು ಹೇಳೋಣ ಸಂಜಯ! ಸೊಳ್ಳೆಯ ಬಾಯಲ್ಲಿ ಆನೆಯ ಗುಂಪು ಸೇರಿಕೊಂಡಂತಾಯ್ತು.)
ಹೀಗೆ ಹಲವರನ್ನು ಪೀಡಿಸಿ ಕಾಡಿಸುತ್ತಿದ್ದ ತೆನಾಲಿ ರಾಮನ ಪಾಳಿಯೂ ಬರಬೇಕಲ್ಲವೇ ಒಂದಲ್ಲಾ ಒಂದು ದಿನ!
ಆ ದಿನ ಬಂದಿತ್ತು. ಅಷ್ಟದಿಗ್ಗಜಗಳಲ್ಲಿದ್ದ ತಿಮ್ಮಕವಿಯ ಮನೆಗೆ ಹೋದಾಗ ಆತ ಉಯ್ಯಾಲೆಯಲ್ಲಿ ತೂಗಿಕೊಳ್ಳುತ್ತಾ ಕುಳಿತಿರುತ್ತಾನೆ. ರಾಮಕೃಷ್ಣ ಎಲೆಯಡಿಕೆ ಬಾಯಲ್ಲಿ ಹಾಕಿಕೊಂಡು ಬಂದಿದ್ದನಿರಬೇಕು! ಅವನನ್ನು ಕಂಡು "ಊತುನಾ ತಾತಾ!" ಎಂದು ಕೇಳುತ್ತಾನೆ. ಅದಕ್ಕೆ ಎರಡು ಅರ್ಥ ಉಯ್ಯಾಲೆಯನ್ನು "ತೂಗಲೇ!" ಎಂದು ಒಂದು ಅರ್ಥ. ಇನ್ನೊಂದು "ಉಗುಳಲೇ!" ಎಂದು. ಅದಕ್ಕೆ ತಿಮ್ಮಕವಿ ಇವನು ಉಯ್ಯಾಲೆ ತೂಗಬಹುದು ಎಂದುಕೊಂಡು- "ಉಮ್ಮು" (ತೂಗು/ಉಗುಳು) ಎಂದು ಹೇಳುತ್ತಾನೆ. ತೆನಾಲಿರಾಮ ತತ್ಕ್ಷಣವೇ ಬಾಯಲ್ಲಿದ್ದ ತಾಂಬೂಲವನ್ನು ಅವನ ಮುಖದ ಮೇಲೆ ಉಗುಳಿಬಿಡುತ್ತಾನೆ! ಸಿಟ್ಟಿಗೆದ್ದ ತಿಮ್ಮಕವಿ ಉಯ್ಯಾಲೆಯಲ್ಲಿ ಜೋರಾಗಿ ಬಂದು ಇವನಿಗೆ ಒದ್ದುಬಿಡುತ್ತಾನೆ. ತೆನಾಲಿ ರಾಮನ ಮುಂದಿನ ಎರಡು ಹಲ್ಲು ಉದುರಿ ಹೋಗುತ್ತದೆ. ಇದನ್ನೆಲ್ಲ ಅಲ್ಲಿಯೇ ಇದ್ದ ಧೂರ್ಜಟಿ ನೋಡುತ್ತಿದ್ದನಷ್ಟೆ! ಬಳಿಕ ಅಲ್ಲಿಂದ ಹೊರಟು ಬಂದ ತೆನಾಲಿ ರಾಮ "ಮರ್ಯಾದೆ ಉಳಿಸಿಕೊಳ್ಳಬೇಕಲ್ಲ! ನಾಳೆ ಆಸ್ಥಾನಕ್ಕೆ ಹೀಗೇ ಹೋದರೆ ಎಲ್ಲರೆದುರು ನಗೆಪಾಟಲಿಗೀಡಾಗುತ್ತೇನೆ" ಎಂದು ಜಿಂಕೆಯ ಹಲ್ಲನ್ನು ಆ ಉದುರಿದ ಹಲ್ಲುಗಳ ಜಾಗದಲ್ಲಿ ಜೋಡಿಸಿಕೊಳ್ಳುತ್ತಾನೆ.
ಆದರೆ ಅವನ ಹಣೆಬರೆಹ! ಆ ದಿನ ಕೃಷ್ಣದೇವರಾಯ ಆಸ್ಥಾನದಲ್ಲಿ ಸಮಸ್ಯೆಯೊಂದನ್ನು ಕೊಡುತ್ತಾನೆ- ಅದರ ಅರ್ಥ- "ರವಿ ಕಾಣದ್ದನ್ನು ಕವಿ ಕಂಡನಲ್ಲವೇ" ಎಂದು
"ರವಿ ಕಾಂಚನಿಚೋ ಕವಿ ಗಾಂಚುನೇ ಕದಾ"
ಆಗ ಸಿಕ್ಕಿದ್ದೇ ಅವಕಾಶವೆಂದು ಧೂರ್ಜಟಿ ಕವಿ ಹೀಗೆ ಪೂರೈಸುತ್ತಾನೆ-
"ಆ ರವಿ ವೀರಭದ್ರು ಚರಣಾಹತಿಡುಲ್ಲಿನ ಬೋಸಿನೋಟಿಕಿನ್
ನೇರಡು, ರಾಮಲಿಂಗಕವಿ ನೇರಿಚೆಪೋ! ಮನ ಮುಕ್ಕುತಿಮ್ಮರಾಟ್-
ಕ್ರೂರಪದಾಹತಿಂ ತೆಗಿನ ಕೊಕ್ಕರಿ ಪಂಟಿಕಿ ದುಪ್ಪಿ ಕೊಮ್ಮ ಪ-
ಲ್ಗಾರಚಿಯಿಂಚಿನಾಡು ರವಿ ಕಾಂಚನಿಚೋ ಕವಿ ಗಾಂಚುನೇ ಕದಾ!"
(ಆ ರವಿ ವೀರಭದ್ರಚರಣಾಹತಿಯಿಂದುದುರಲ್ಕೆ ಜೋಡಿಸ-
ಲ್ಕಾರನೆ, ರಾಮಲಿಂಗಕವಿಯಾರ್ದಪನೈ ಗಡ ಮುಕ್ಕುತಿಮ್ಮರಾಟ್-
ಕ್ರೂರಪದಪ್ರಹಾರದಿನೆ ಪಲ್ಲಿಲಿಯಾದಪನೊಂದಿ ಜಿಂಕೆಯಿಂ
ದಾರಚಿಸಿರ್ಪನಲ್ತೆ! ರವಿ ಕಾಣದುದಂ ಕವಿ ಕಂಡನಲ್ಲವೇ!) ###
ಹಿಂದೆ ದಕ್ಷಯಜ್ಞವನ್ನು ವೀರಭದ್ರ ಧ್ವಂಸಗೊಳಿಸಿದಾಗ ಒದ್ದು ಸೂರ್ಯನ ಹಲ್ಲುಗಳೆಲ್ಲವನ್ನೂ ಉದುರಿಸಿ ಹಾಕಿರುತ್ತಾನೆ. ಅದಕ್ಕೇ ಇಂದಿಗೂ ಸೂರ್ಯನಿಗೆ ಪಾಯಸವನ್ನು ಮಾತ್ರ ನೈವೇದ್ಯಮಾಡುತ್ತಾರಂತೆ!(ಹಲ್ಲಿಲ್ಲದಿದ್ದರೂ ತಿನ್ನಬಹುದು ಎಂದು!) "ಅಂದು ವೀರಭದ್ರನ ಕಾಲೊದೆತದಿಂದ ಹಲ್ಲುದುರಿಸಿಕೊಂಡ ಸೂರ್ಯನು ಇಂದಿಗೂ ಹಲ್ಲನ್ನು ಜೋಡಿಸಿಕೊಳ್ಳಲು ಸಮರ್ಥನಾಗಲಿಲ್ಲ. ಆದರೆ ಈ ವಿಕಟಕವಿ ರಾಮಲಿಂಗ ನಮ್ಮ ತಿಮ್ಮರಾಜನ ಕ್ರೂರವಾದ ಕಾಲಿನ ಒದೆತದಿಂದ ಹಲ್ಲನ್ನು ಕಳೆದುಕೊಂಡವನು ಜಿಂಕೆಯ ಹಲ್ಲುಗಳನ್ನು ಅಂಟಿಸಿಕೊಂಡು ಬಂದಿದ್ದಾನೆ.! ಹಾಗಾಗಿ ರವಿ ಕಾಣದ್ದನ್ನು ಕವಿ ಕಂಡನಲ್ಲವೇ!" ಎಂದು ಧೂರ್ಜಟಿಯ ಪರಿಹಾರ. ತೆನಾಲಿರಾಮನೂ ಹಲ್ಲುದಿರಿಸಿಕೊಂಡಿದ್ದಲ್ಲದೇ ಮೂಗು ಮುರಿಸಿಕೊಂಡ ಎಂಬುದು ದಿಟವಾಗಿಯೂ ರಸಮಯವಾದ ಪ್ರಸಂಗವೇ ಆಗಿದೆ.


~~~~~~~~~~~~~~
(ಪದ್ಯಾನುವಾದಗಳು -
*ಬ್ರಹ್ಮಪುರಿಯ ಭಿಕ್ಷುಕದಲ್ಲಿ ಶತಾವಧಾನಿ ಗಣೇಶರ ಅನುವಾದ
**ಬ್ರಹ್ಮಪುರಿಯ ಭಿಕ್ಷುಕದಲ್ಲಿ ಶತಾವಧಾನಿ ಗಣೇಶರ ಅನುವಾದ
*** ಕಾವ್ಯಕಲ್ಪದಲ್ಲಿ ಶತಾವಧಾನಿ ಗಣೇಶರ ಅನುವಾದ
 # ನನ್ನದೇ ಅನುವಾದ
## ನನ್ನದೇ ಅನುವಾದ
###ನನ್ನದೇ ಅನುವಾದ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ