Powered By Blogger

ಗುರುವಾರ, ಮಾರ್ಚ್ 31, 2016

ಸಹೃದಯಕಾಲ ೨೨- ಕೆಳದಿಯ ಕಬ್ಬು

        ಬಹುಕಾಲದಿಂದ ಒಳ್ಳೆಯ ಪದ್ಯಗಳನ್ನು ಓದದಿರುವ ಕಾರಣಕ್ಕೋ ಅಥವಾ ಬರೆಯುವಲ್ಲಿನ ಆಲಸ್ಯಕ್ಕೋ ಇಲ್ಲಿ ಯಾವ ಪದ್ಯದ ಕುರಿತೂ ಬರೆಯಲೇ ಇಲ್ಲ. ಸಾಮಾನ್ಯವಾಗಿ ಕಾವ್ಯವೊಂದರಲ್ಲಿ ಕಥಾನಕವನ್ನಷ್ಟೇ ಹೇಳುವಂತೆ ಇದ್ದರೆ ಅಲ್ಲಿ ಸ್ವಾರಸ್ಯವೇನೂ ಕಾಣುವುದಿಲ್ಲ ಎಂದೇ ಹೇಳಬಹುದು. ಅದಕ್ಕೂ ಅಪವಾದವೆಂಬಂತೆ ಹಲವು ಕಥನಗಳಿವೆ. ಧ್ವನಿಸಿದ್ಧಾಂತದಲ್ಲಿ ಹೇಳುವ ಪ್ರಬಂಧಧ್ವನಿಯೊಂದಿದ್ದರೂ ಕಾವ್ಯ ರಸ್ಯವಾಗುತ್ತದೆ. ಇದಕ್ಕೆ  ಉದಾಹರಣೆಯಾಗಿ ಮಹಾಭಾರತದಂತಹವನ್ನು ಹೇಳುತ್ತಾರೆ  ಅದಲ್ಲದೇ ಇನ್ನೂ ಕೆಲವು ಕಾವ್ಯಗಳಲ್ಲಿ ಪ್ರಬಂಧಧ್ವನಿ ಇರದಿದ್ದರೂ ಪ್ರತಿಪದ್ಯವೂ ಧ್ವನಿಪೂರ್ಣವಾಗಿರುತ್ತದೆ. ಕೆಲವೊಂದು ಕಾವ್ಯಗಳಲ್ಲಿ ಕೆಲವು ಪದ್ಯಗಳು ಮಾತ್ರ ಧ್ವನಿಪೂರ್ಣವಾಗಿರುತ್ತದೆ. "ನಾಸ್ತ್ಯಚೋರಃಕವಿಜನಃ" ಎಂಬ ಉಕ್ತಿಯಂತೆ ಕವಿಯಾದವನು ಉಳಿದ ಕವಿಗಳ ಕಲ್ಪನೆಯನ್ನು ಕದಿಯದೇ ಹೋಗಲಾರ ಎಂಬುದಂತೂ ಸತ್ಯ. ಒಬ್ಬ ಕವಿಯ ಕೈ ಇನ್ನೊಬ್ಬನ ಕಿಸೆಯೊಳಗೆ ಎಂದು ಹೇಳಬಹುದು. ಅಂತಾದರೂ ಸ್ವಪ್ರತಿಭೆಯಿಂದ ಪರರ ವಸ್ತು ಎಂಬುದನ್ನು ಕಾಣದಂತೆ ಮರೆಮಾಚಬಲ್ಲವನೇ ನಿಜವಾದ ಕವಿ. ಕುಮಾರವ್ಯಾಸ -ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ- ಎಂದು ಹೇಳಿಕೊಂಡರೂ ಒಂದೆರಡು ಕಡೆ ಸೂಕ್ಷ್ಮಮತಿಗಳಿಗೆ ಅವನು ಬೇರೆಯ ಕವಿಯ ಮಾತನ್ನು ಬಳಸಿದ್ದು ಕಾಣುತ್ತದೆ. ಬೆಳಕಿನ ಕಿರಣ ಪಟ್ಟಕದ(prism) ಮೂಲಕ ಹಾದು ಬಂದಾಗ ಮೂಲರೂಪವನ್ನು ಬಿಟ್ಟು ಹೇಗೆ ಮನೋಹರವಾಗಿ ಕಾಣುತ್ತದೆಯೋ ಹಾಗೆ ಕುಮಾರವ್ಯಾಸ ಅನ್ಯಕವಿಗಳ ಮಾತನ್ನು ಬದಲಾಯಿಸಿ ಬಳಸುತ್ತಾನೆ. ಉಳಿದ ಹಲವು ಹಳೆಯ ಕವಿಗಳಿಗೆ ಇದು ಸಾಧ್ಯವಾಗದೇ ಮೂಲ ಕವಿಯ ಶಬ್ದಶಬ್ದವನ್ನೂ ಹಾಗೆಯೇ ಇಡುತ್ತಾರೆ. ಪಂಪ ಹಲವು ಪದ್ಯಗಳನ್ನು ಪದಪುಂಜಗಳನ್ನೂ ಸಂಸ್ಕೃತದ ಕವಿಗಳಾದ ಬಾಣಭಟ್ಟ, ಭಟ್ಟನಾರಾಯಣ ಕಾಳಿದಾಸ ಮೊದಲಾದವರಿಂದ ಕೊಳ್ಳುತ್ತಾನೆ, ರನ್ನ ನೇರವಾಗಿ ಪಂಪನ ಪದಪುಂಜಗಳನ್ನೇ ಬಳಸಿಬಿಡುತ್ತಾನೆ. ಇವೆಲ್ಲವನ್ನು ಮೀರಿಯೂ ಅವರ ಕಲ್ಪನೆಯ ಪದ್ಯಗಳು ಅಲ್ಲಲ್ಲಿ ಮೂಡಿಬಂದಾಗ ಸೊಗಸೆನಿಸುತ್ತದೆ. ರಸಿಕರಿಗೆ ಆಹ್ಲಾದವನ್ನು ನೀಡುತ್ತದೆ. 
        ಕವಿಯ ಕಾವ್ಯದ ವಸ್ತುವೂ ಕೂಡ ಕಥನಕ್ಕೆ ಮುಖ್ಯ. ಹಿಂದೆ ಹೇಳಿದ ಕಥೆಗಳನ್ನೇ ಚರ್ವಿತಚರ್ವಣ ಮಾಡುವುದರಿಂದ ಹೊಸದನ್ನು ಕೊಡಲಾಗುವುದಿಲ್ಲ. ಅಲ್ಲದೇ ಹಿಂದಿನ ಕವಿಯನ್ನು ಮೆಟ್ಟಿಕ್ಕಿ ನಿಲ್ಲುವ ಬಲ್ಮೆ ಇದ್ದರೆ ಮಾತ್ರ ಈ ಕವಿ ಬದುಕಬಲ್ಲವನಾಗುತ್ತಾನೆ. ಕಾಳಿದಾಸಂಗೆ ನಾಲ್ಮಡಿ ಅಸಗಂಗೆ ನೂರ್ಮಡಿ ಎಂದೆಲ್ಲ ಹೇಳಿಕೊಂಡ ಪೊನ್ನನ ಕಾವ್ಯವನ್ನು ಓದುವವರು ಯಾರಾದರೂ  ಇದ್ದಾರೆಯೇ ಎಂದು ಹುಡುಕಬೇಕಾದ ಪರಿಸ್ಥಿತಿ ಇದೆ. ಬರಿಯ ಬಾಯ್ಮಾತಿನಲ್ಲಿ "ಮುನ್ನಿನ ಕಬ್ಬಮನೆಲ್ಲಮಿಕ್ಕಿ ಮೆಟ್ಟಿದುವು " ಎಂದು ಹೇಳಿಕೊಂಡವನ ಕಾವ್ಯವೂ ಕೂಡ ಕವಿತ್ವಕ್ಕೆ ಬಿಟ್ಟು ಬೇರೆ ರಾಜಕೀಯಕಾರಣಗಳಿಗೆ ಉಲ್ಲೇಖಿಸಲಷ್ಟೇ ಯೋಗ್ಯವಾದಂತಾಗಿರುವುದು ವಿಪರ್ಯಾಸ! ಅಲ್ಲದೇ ಕಾಲದ ಕಟು ಸತ್ಯ! ಅಂತಹ ಕಾವ್ಯಗಳನ್ನೇ ಬಳಿಕ ಬಂದ ಕಾವ್ಯಗಳು ಮೆಟ್ಟಿಕ್ಕುತ್ತವೆಯೆಂಬುದೂ ಸತ್ಯ. ಪಂಪಭಾರತವನ್ನು ಸ್ವಲ್ಪ ವಿಭಿನ್ನವಾಗಿ ರನ್ನ ಹೇಳಿದನಾದರೂ ಅವನು ಪಂಪನಿಗೆ ಪ್ರತಿಸ್ಫರ್ಧಿಯಾಗಲಿಲ್ಲ. ಆದರೆ ಕುಮಾರವ್ಯಾಸನ ಭಾರತಕಥಾನಕ ಪಂಪನನ್ನು ದಿಗ್ದಿಗಂತಗಳ ಮೇರೆಯನ್ನು ದಾಟಿಸಿ ನೂಂಕಿಬಿಟ್ಟಿತು. ರಾಮಾಯಣದ ವಿಚಾರದಲ್ಲೂ ಅಷ್ಟೇ! ಫಣಿರಾಯ ತಿಣುಕುವಂತೆ ಕಂಡು ಬರುತ್ತಿದ್ದ ರಾಮಾಯಣಾಶ್ರಿತ ಕಾವ್ಯಗಳಲ್ಲಿ ಪಂಪರಾಮಾಯಣವನ್ನು ಕೇಳುವವರಿಲ್ಲ. ಜೈನರಾಮಾಯಣಗಳ ಪರಂಪರೆ ಹೆಸರಿಗಷ್ಟೇ ಉಳಿದಿದೆ. ಕುವೆಂಪು ಅವರ ರಾಮಾಯಣದರ್ಶನ ಅವೆಲ್ಲಕ್ಕೂ ತಿಲಾಂಜಲಿಯನ್ನಿಟ್ಟಿತೆಂದೇ ಹೇಳಬಹುದು. ಅದರ ಬಳಿಕವೂ ಮಹಾನ್ವೇಷಣೆಯ ಸಾಹಸವನ್ನು ಮಾಡಿದರೆ ರಾಮಾಯಣದರ್ಶನವನ್ನು ಮೀರಿಸುವಂತಹ ಸತ್ತ್ವವಿರಬೇಕು. ಅದಿಲ್ಲದಿರುವ ಕಾರಣಕ್ಕೆ ಯಾವ ಪುಸ್ತಕಪ್ರೇಮಿಯಲ್ಲೂ ಅನ್ವೇಷಿಸಿದರೂ ಕಾಣದಂತಾಗಿದೆ ಆ ಬಳಿಕ ಬಂದ ಇಂತಹ ಕಾವ್ಯಗಳು.
      ಹೀಗಲ್ಲದೇ ಕವಿಯೊಬ್ಬ ಸಮಕಾಲೀನ ಕಥಾನಕವನ್ನು ಕಾವ್ಯದಲ್ಲಿ ಚಿತ್ರಿಸಿದಾಗ ಅದರ ಸೊಗಸು ನೂತನವಾಗುತ್ತದೆ. ಅಲ್ಲದೇ ಅನ್ಯೋಚ್ಚಿಷ್ಠವೂ ಆಗಲಾರದು. ಇಂತಹ ಕೃತಿಗಳು ಸಂಸ್ಕೃತದ ಕಲ್ಹಣನ ರಾಜತರಂಗಿಣಿ ಮೊದಲಾದವು ಎಂದು ಕೇಳಿದ್ದಷ್ಟೆ. ಕನ್ನಡದಲ್ಲಿ ದೇವಚಂದ್ರನ ರಾಜಾವಳಿಕಥೆ ತಿರುಮಲಾರ್ಯನ ಚಿಕ್ಕದೇವರಾಯವಂಶಾವಳಿ ಮೊದಲಾದವುಗಳಿವೆ. ಅಲ್ಲದೇ  ಇನ್ನೊಂದು- ಐತಿಹಾಸಿಕವಾದ ಕಥಾನಕದ ಬಿತ್ತರ ಮಾಡುವ ಲಿಂಗಣ್ಣ ಕವಿಯ ಕೆಳದಿನೃಪವಿಜಯ. ಹನ್ನೆರಡು ಆಶ್ವಾಸಗಳ ಈ ಕಾವ್ಯ ಉತ್ತಮವಾದ ಚಂಪೂಶೈಲಿಯಲ್ಲಿದೆ. ಐತಿಹಾಸಿಕ ಸಂಶೋಧನೆಗಳಿಗೆ ಬಹುಮುಖ್ಯವಾದ ಆಕರವಾಗಿದೆ. ಪ್ರಸ್ತುತ ಇಲ್ಲಿ ಕಾವ್ಯದ ಸ್ವಾರಸ್ಯವನ್ನು ಹೇಳುತ್ತಿರುವ ಕಾರಣ- ಅದಾಗಳೇ ಮೂಗಿಗಿಂತ ಮೂಗುತಿ ಭಾರ ಎಂಬಂತೆ ಪೀಠಿಕೆಯೇ ವಿಸ್ತಾರವಾದ ಕಾರಣ- ಅವನ್ನೆಲ್ಲ ಪಕ್ಕಕ್ಕಿರಿಸಿ ಅಲ್ಲಿ ಬರುವ ಒಂದು ವರ್ಣನೆಯನ್ನು ಇಲ್ಲಿ ಉಲ್ಲೇಖಿಸುವೆ.

      ಮೊದಲ ಆಶ್ವಾಸದಲ್ಲಿಯೇ ಸಮುದ್ರವರ್ಣನೆಯಿಂದ ಕವಿ ಆರಂಭಿಸುತ್ತಾ ಕರ್ಣಾಟಕದ ವರ್ಣನೆಗೆ ಬರುತ್ತಾನೆ. ಅಲ್ಲಿನ ಕಬ್ಬಿನ ಗದ್ದೆಗಳ ವರ್ಣನೆ ಮಾಡುತ್ತಾ ಹೇಳುವ ಪದ್ಯವೊಂದು ಹೀಗಿದೆ-
ಜಲಜಜನಮರ್ದಂ ಬೆಳ್ಳಿಯ 
ಕೊಳವಿಗಳೊಳ್ ತುಂಬಿ ಗಂಟನೊಂದಿಸಿ ಗರುಡಂ 
ತಿಳಿಯದೊಲವನಿಳೆಯೊಳ್ ನೆಲೆ
ಗೊಳಿಸಿದನೆನೆ ಮೆರೆದುದಮಳಪುಂಡ್ರೇಕ್ಷುವನಂ ||೨೦||
"ಅಮಲವಾದ ಪಟ್ಟೆಪಟ್ಟೆಯ ಕಬ್ಬಿನ ಗದ್ದೆಯೆಂಬುದನ್ನು ನೋಡಿದರೆ- ಬ್ರಹ್ಮ ಅಮೃತವನ್ನು ಬೆಳ್ಳಿಯ ಕೊಳವೆಗಳಲ್ಲಿ ತುಂಬಿಸಿ ಗಂಟನ್ನೂ ಹಾಕಿ ಗರುಡನಿಗೆ ತಿಳಿಯದ ಹಾಗೆ ಭೂಮಿಯಲ್ಲಿ ನೆಲೆಗೊಳಿಸಿದಂತೆ ಕಾಣುತ್ತಿತ್ತು" ಎಂದು ಹೇಳುತ್ತಾನೆ. ಇಲ್ಲಿ ಪೌರಾಣಿಕಕಥನದ ಸಮುದ್ರಮಥನದಲ್ಲಿ ಪಡೆದ ಅಮೃತವನ್ನು ಗರುಡ ಕದಿಯಲೆಂದು ಬರುವುದನ್ನು ತೆಗೆದುಕೊಂಡು ಅದಕ್ಕಾಗಿಯೇ ಆ ಅಮೃತವನ್ನು ಬೆಳ್ಳಿಯ ಕೊಳವೆಯಲ್ಲಿ ತುಂಬಿಸಿದ ಎಂದು ಹೇಳುವಲ್ಲಿ ಕಬ್ಬಿನ ಹಾಲು ಅಮೃತದಂತಿದೆ ಎಂಬುದನ್ನೂ ಧ್ವನಿಸುತ್ತಾ ಅದರ ಗಂಟುಗಳನ್ನು ಬ್ರಹ್ಮ ಅಮೃತ ತುಂಬಿಸಿ ಹಾಕಿಟ್ಟ ಗಂಟು ಎಂದೂ ಹೇಳಿ ಉತ್ತಮವಾದ ಒಂದು ಸುಂದರಚಿತ್ರಣವನ್ನು ಕೊಡುತ್ತಾನೆ. ತುಂಬ ವಿಶಿಷ್ಟವಾದ ಈ ಕಲ್ಪನೆ ಸ್ವೋಪಜ್ಞವಾಗಿದೆ.
ಇಲ್ಲಿ ಕೆಲವು ಹೊಸಗನ್ನಡದ ಶಬ್ದಪ್ರಯೋಗಗಳಿಂದ ಭಾಷಾಶೈಥಿಲ್ಯವಿದ್ದರೂ ಪದ್ಯಕ್ಕೆ ತೊಂದರೆಯಾಗಿಲ್ಲ. ಬ್ರಹ್ಮ ಯಾಕೆ ಅಮೃತವನ್ನು ಅವಿಸಿಟ್ಟ ಎಂಬ ಪ್ರಶ್ನೆ ಎದ್ದರೂ ಕಬ್ಬಿನ ಸೃಷ್ಟಿ  ಬ್ರಹ್ಮನಿಂದಾಯ್ತಲ್ಲ ಎಂದು ಸಮಾಧಾನ ಹೇಳಬಹುದು.

 ಇದರ ಮುಂದಿನ ಪದ್ಯವೂ ಇಂತಹುದೇ ಕಲ್ಪನೆಯಲ್ಲಿಯೇ ಇದೆ. ಆಲೆಮನೆಯ ವರ್ಣನೆ-
ಹರಿಯೊರ್ಮೆಯಮರ್ದನಮರ
ರ್ಗೆರೆದೊಡೆ ನವಸುಧೆಯನೆರೆದಪೆವು ನಿಮಗನಿಶಂ
ನರರಿತ್ತ ಬನ್ನಿಮೆನುತುಂ
ಕರೆವಂತಿರೆ ಮೊರೆವುವಿಕ್ಷುಯಂತ್ರಪ್ರಚಯಂ ||೨೧||
"ಹರಿ ಮೋಹಿನಯ ಅವತಾರದಲ್ಲಿ ಅಮೃತವನ್ನು ದೇವತೆಗಳಿಗೆ ಕೊಟ್ಟುಬಿಟ್ಟ. ಹೋಗಲಿ ಬಿಡಿ. ನಿಮಗೆ ನಿತ್ಯವೂ ಹೊಸದಾದ ಅಮೃತವನ್ನು ಕೊಡುತ್ತೇವೆ. ಓ ನರರೇ ಇಲ್ಲಿ ಬನ್ನಿ ಎಂದು ಕರೆಯುತ್ತಿರುವಂತೆ ಆಲೆಮನೆಯ ಕಬ್ಬಿನ ಗಾಣಗಳು (ಇಕ್ಷುಯಂತ್ರ) ಧ್ವನಿಮಾಡುತ್ತಿದ್ದವು."
ಇಲ್ಲಿಯೂ ಕೂಡ ನವನವೀನವಾದ ಕಲ್ಪನೆಯ ಜೊತೆಗೆ ಗಾಣದ ಶಬ್ದವನ್ನು ಹೀಗೆ ಕರೆದಂತೆ ಭಾಸವಾಗುತ್ತಿತ್ತು ಎಂದು ಬರ್ಣಿಸುವುದರಲ್ಲಿ ಕವಿ ಅನನ್ಯನಾಗಿಬಿಡುತ್ತಾನೆ. ಕಬ್ಬಿನ ರಸ ಸಿಹಿಯಾಗಿ ಅಮೃತಸಮಾನವಾಗಿತ್ತು ಎಂದು ಬಣ್ಣಿಸಿ ಅಮೃತಸಮಾನವಾದ ಕಾವ್ಯರಸವನ್ನು ನಮಗೆ ಉಣಿಸುತ್ತಾನೆ. ಇವಿಷ್ಟರಲ್ಲೇ ನಿಜವಾದ ಸಹೃದಯರು ಅಮೃತವನ್ನೇ ಉಂಡುದಣಿಯಬಹುದೇನೋ! ಇಂತಹ ಮುತ್ತುಗಳನ್ನು ಕಟ್ಟಿ ಕೋದ ಪದ್ಯಮಾಲಿಕೆಯನ್ನು ನಿಜವಾಗಲೂ ನೋಡಿದರೇ ನಮ್ಮ ಕಣ್ದಣಿಯುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ