Powered By Blogger

ಮಂಗಳವಾರ, ಜನವರಿ 2, 2018

-:ಗುಂಡ್ಲುಪಂಡಿತ ಶ್ರೀ ರಾಜರತ್ನ ಕೃತ ಮಹಾಕವಿ ಪುರುಷ ಸರಸ್ವತಿ ಎಂಬ ಗ್ರಂಥವು:-

Image result for g p rajaratnam
ಚಿತ್ರಕೃಪೆ: ಗೂಗಲ್

(ಇದು prekshaa.in ಅಂತರ್ಜಾಲ ಪತ್ರಿಕೆಗೆ ಬರೆದ ಲೇಖನ) 
ವಿಡಂಬನೆಯೆಂಬುದು ಸಾಹಿತ್ಯದ ಒಂದು ವಿಶಿಷ್ಟಪ್ರಕಾರವಾಗಿದೆ. ವಿಡಂಬನೆ ಅಥವಾ ಅಣಕುವಾಡು ಎಂದರೆ ಮೂಲ ಪ್ರಸಿದ್ಧವಾದ ಒಂದು ಕೃತಿಯನ್ನು ಆಶ್ರಯಿಸಿ ಅದೇ ಶೈಲಿಯನ್ನು ಅನುಕರಿಸಿಕೊಂಡು ಇನ್ನೊಂದು ಸಾಹಿತ್ಯವಿರುತ್ತದೆ. ಆದರೆ ಇಲ್ಲಿ ಯಾವುದೋ ಒಂದು ಕೃತಿಯನ್ನು ಲಘುವಾಗಿಸುವ ಉದ್ದೇಶವಿದೆ ಎಂದಲ್ಲ. ಆದರೆ ಪ್ರಸಿದ್ಧವಾದ ಮಾರ್ಗದಲ್ಲಿ ಸ್ವಲ್ಪ ಲಘುವಾದ ಹಾಸ್ಯಸಾಹಿತ್ಯವನ್ನು ತಂದಾಗ ಹುಟ್ಟುವ ಆಸ್ವಾದನೀಯತೆ ಅವರ್ಣ್ಯ! ಹೀಗೆ ಯಾವುದೋ ಒಂದು ಕೃತಿಯನ್ನು ಆಶ್ರಯಿಸಿ ಅದಕ್ಕೆ ಅಣಕುವಾಡನ್ನು ರಚಿಸುವುದು ಬಹಳ ಹಿಂದಿನಿಂದಲೂ ನಡೆದುಬಂದಿದೆ. ಕಾಳಿದಾಸನ ಮೇಘದೂತವನ್ನು ಕಂಡು ಅದರಂತೆಯೇ ಬಂದ ದೂತಕಾವ್ಯಗಳ ಪರಂಪರೆಯನ್ನು ಅವಲೋಕಿಸಿದರೆ ಸಾಕು ಅದರ ವೈಶಾಲ್ಯವನ್ನು ತಿಳಿಯಬಹುದು. ಕನ್ನಡದಲ್ಲಿ ಕೂಡ ಕ್ವಾಚಿತ್ಕವಾಗಿ ಕೆಲವೊಂದು ಬಿಡಿಯಾದ ಹಾಡುಗಳು ಕಂಡುಬರುತ್ತವೆಯಾದರೂ ಅಷ್ಟು ವಿಸ್ತೃತವಾಗಿ ರಚನೆಯಾಗಿಲ್ಲ ಎಂದೇ ಹೇಳಬಹುದು. ಆದರೆ ಜಿ.ಪಿ ರಾಜರತ್ನಂ ಅವರ "ಮಹಾಕವಿ ಪುರುಷಸರಸ್ವತಿ" ಎಂಬ ಕೃತಿ ಸಂಪೂರ್ಣವಾಗಿ ಹಲವು ಸ್ವಾರಸ್ಯವನ್ನು ಒಳಗೊಂಡ ಒಂದು ಪರಿಪೂರ್ಣವಾದ ಅಣಕುಗಬ್ಬ. ಅದರಲ್ಲಿ ಹಳಗನ್ನಡದ ಕಾವ್ಯಗಳ ಸಂಪಾದನೆಯ ವಿವಿಧ ಹಂತಗಳಿಂದ ಮೊದಲಾಗಿ ಕವಿಗಳ ಸ್ವಭಾವವನ್ನು ವರ್ಣಿಸುವ ತನಕ ಹಲವು ವಿಷಯಗಳನ್ನು ವಿಡಂಬಿಸಿ ಚಿತ್ರಿಸಿಸದ್ದಾರೆ. ಅದರಲ್ಲಿ ಮೊದಲೇ ಹೇಳುವ ಬಿನ್ನಹದ ಒಂದು ಪದ್ಯದಲ್ಲಿ ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ.
ಕನ್ನಡಿಯಂ ತೋಱಿದೊಡತ್ಯುನ್ನತಸಲ್ಲಕ್ಷಣಂಗೆ ಮುಳಿಸಾಗದು ಮ-
ತ್ತೆನ್ನದೆ ಮೂಕೊಱೆಯಂಗಾ ಕನ್ನಡಿಯಂ ತೋಱೆ ಬೈಗುಮಿಱಿಗುಂ ಕೊಲ್ಗುಂ||
ಸರಿಯಾಗಿದ್ದವರಿಗೆ ಸಲ್ಲಕ್ಷಣಗಳನ್ನು ಹೊಂದಿದವರಿಗೆ ಕನ್ನಡಿಯನ್ನು ತೋರಿಸಿದರೆ ಅವರೇನೂ ಬೇಸರಿಸಿಕೊಳ್ಳುವುದಿಲ್ಲ. ಆದರೆ ಮೂಕೊರೆಯರಿಗೆ-ಮುಖ ಸರಿಯಿಲ್ಲದವರಿಗೆ ಕನ್ನಡಿಯನ್ನು ಹಿಡಿದರೆ ಬಯ್ಯುತ್ತಾರೆ ಇರಿಯುತ್ತಾರೆ ಕೊಲ್ಲುತ್ತಾರೆ. ಹಾಗಾಗಿ ಇಂತಹ ವಿಡಂಬನಕಾವ್ಯಗಳನ್ನು ಕೇವಲ ರಸಾಸ್ವಾದನೆಯ ದೃಷ್ಟಿಯಿಂದ ನೋಡದೇ ತಮಗೇ ಅನ್ವಯಿಸಿಕೊಂಡು ಕೋಪಿಸಿಕೊಳ್ಳುವವರು ಮೂರ್ಖರಷ್ಟೇ ಆಗುತ್ತಾರೆ ಎಂಬುದು ಸ್ಪಷ್ಟ.
"ಮಹಾಕವಿಪುರುಷಸರಸ್ವತಿ"ಯಲ್ಲಿ ಆದ್ಯಂತವಾಗಿ ಮುಖಪುಟದಿಂದ ತಪ್ಪುಒಪ್ಪೋಲೆಯ ತನಕ ವಿಡಂಬನೆಯೇ ತುಂಬಿದೆ. ಮೊದಲ ಪುಟದಲ್ಲಿ "ಗುಂಡ್ಲುಪಂಡಿತ ಶ್ರೀ ರಾಜರತ್ನ ಕೃತ ಮಹಾಕವಿ ಪುರುಷಸರಸ್ವತಿ ಮಹಾಗ್ರಂಥವನ್ನು ಶ್ರೀಯುತರುಗಳಾದ................ ಇವರ ಮುನ್ನುಡಿಗಳೊಡನೆ ಬೆಂಗಳೂರಿನ ಜಿ.ಪಿ ರಾಜರತ್ನಂ ಪ್ರಕಟಿಸಿದನು" ಎಂದು ಮುನ್ನುಡಿಯನ್ನು ಬರೆದವರೆಲ್ಲರ ಹೆಸರನ್ನೂ ಸೇರಿಸಿದ್ದಾರೆ. ಇದಕ್ಕೆ ಗೋವಿಂದಪೈಗಳು. ಶಿವರಾಮ ಕಾರಂತರು ಗೋಕಾಕರು ಬೇಂದ್ರೆಯವರು ಎಸ್ ವಿ ರಂಗಣ್ಣ ಮೊದಲಾದ ಹಲವರು ಮುನ್ನುಡಿಯನ್ನು ಬರೆದಿದ್ದಾರೆ. ಆಗಿನ ಕಾಲದಲ್ಲಿ ಹಲವು ಹಿರಿಯರಿಂದ ಮುನ್ನುಡಿಯನ್ನು ಬರೆಸಿ ಅವರ ಹೆಸರನ್ನು ಮುಖಪುಟದಲ್ಲೇ ಮುದ್ರಿಸುವ ಒಂದು ಸಂಪ್ರದಾಯವನ್ನು ಇಲ್ಲಿ ಅಣಕು ಮಾಡಿದ್ದಾರೆ ಎಂಬುದು ಸ್ಪಷ್ಟ! ಒಟ್ಟಾರೆ ಕಾವ್ಯಪ್ರಪಂಚದ ಹತ್ತುಹಲವು ವಿಷಯಗಳನ್ನು ಎತ್ತಿಕೊಂಡು ಅದಕ್ಕೆ ಹಾಸ್ಯರಸದ ಲೇಪನವನ್ನು ಮಾಡಿರುವ ಜಿ.ಪಿ ರಾಜರತ್ನಂ ಅವರ ಕುಶಲತೆ ಹಾಗೂ ಸೂಕ್ಷ್ಮಚಿತ್ರಣಗಳ ಕೆಲಸವನ್ನು ಪ್ರತಿಯೊಂದು ಪದಗಳಲ್ಲಿಯೂ ಕಾಣಬಹುದು. ಈ ಕೃತಿಯು ವ್ಯರ್ಥಪದಗಳೇ ಇಲ್ಲದಂತೆ ರಚನೆಯಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ಅತಿಯಾದ ವೈಮರ್ಶಕಪ್ರಜ್ಞೆಯು ರಸಾಸ್ವಾದಕ್ಕೆ ಸಂವಾದಿಯಾಗದೇ ಹೋಗುತ್ತದೆಯೆಂಬ ಕಾರಣದಿಂದ ಪ್ರಕೃತಲೇಖನದ ಬಹುಭಾಗ ಮೂಲವನ್ನು ಅಲ್ಲಲ್ಲಿ ಪರಿಚಯಿಸುವ ಕಾರ್ಯವಷ್ಟೇ ಆಗುತ್ತದೆಯಲ್ಲದೇ ಅದರ ಕುರಿತ ಯಾವುದೇ ನಿಷ್ಠುರವೈಮರ್ಶ್ಯವ್ರತದ ಚರ್ಚೆಯಿಲ್ಲ!
ಸಂಪಾದಕ ಮಂಡಳಿ-
ಮಹಾಕವಿ ಪುರುಷಸರಸ್ವತಿಯ ಕೃತಿಗಳನ್ನು ಸಂಪಾದಿಸಿ ಪ್ರಕಟಿಸುತ್ತಿರುವವರು "ಗುಪ್ತಸಂಪಾದಕಪಂಚಕ".(ಗು.ಸಂ.ಪಂ) ಅವರು ತಮ್ಮ ಹೆಸರನ್ನು ಮರೆಮಾಚುತ್ತಿರಲು ಕಾರಣವನ್ನೂ ಹೀಗೆ ವಿವರಿಸುತ್ತಾರೆ "ದ್ರುಪದರಾಜನಂದನೆಯನ್ನು ಸಂಪಾದಿಸಲು ವಿಕ್ರಮಿಸಿದ ಪಂಚಪಾಂಡವರಂತೆ ಈ ಮಹಾಕವಿ ಪುರುಷಸರಸ್ವತಿಯ ಶತಕಾರ್ಧತ್ರಯವನ್ನು ಸಂಪಾದಿಸಲು ಸಾಹಸಗೈದಿರುವ ನಾವೈವರು ಉದ್ದೇಶಪೂರ್ವಕವಾಗಿ ನಮ್ಮ ಹೆಸರನ್ನು ಅಡಗಿಸಿದ್ದೇವೆ. “ಹೂವಿನಿಂದ ನಾರೂ ನಾರಿಯ ಮುಡಿಗೇರಿತು" ಎಂಬ ನಾಣ್ನುಡಿಯಂತೆ 'ಮಹಾಕವಿಯ ಗ್ರಂಥವನ್ನು ಸಂಪಾದಿಸುವ ವ್ಯಾಜದಿಂದ ಈ ಐವರು ಯಃಕಶ್ಚಿತುಗಳಾದ ಪಂಚಸಂಪಾದಕರು ತಾವೂ ಖ್ಯಾತರಾದರು' ಎಂಬ ಅಪವಾದಕ್ಕೆ ಪಕ್ಕಾಗಬಾರದೆಂಬುದೇ ಮೇಲೆ ನಮೂದಿಸಿದ ನಮ್ಮ ಪವಿತ್ರ ಪರಮೋದ್ದೇಶವು" ಮುಖ್ಯವಾಗಿ ನಮ್ಮದು 'ಅಳಿಲ ಸೇವೆ'; ನಾವು 'ಎಲೆಮರೆಯ ಕಾಯಿಗಳು'; 'ಬಲಗೈ ಮಾಡುವುದು ಎಡಗೈಗೆ ತಿಳಿಯಬಾರದು' ಎಂಬುದು ನಮ್ಮ ಗಾಯತ್ರಿ, ಅಲ್ಲದೇ 'ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ' ಎಂಬುದು ನಮ್ಮ ತಾರಕಮಂತ್ರ. ಅಸ್ತು ಇತ್ಯಲಂ.”
ಇಷ್ಟಾದರೂ ಗು.ಸಂ.ಪಂ.ದಲ್ಲಿ ಮಧ್ಯಮರು "ಕನ್ನಡಾಂಗ್ಲೋಭಯಭಾಷಾಚಕ್ರವರ್ತಿ" ಎಂದೆನಿಸಿದವರು ಮುಂದೆ "ಮಹಾಕವಿ ಪುರುಷಸರಸ್ವತಿಸ್ತೋತ್ರಪಂಚಕ"ವನ್ನು ರಚಿಸಿದ್ದಾರೆ ಎಂದು ಅದನ್ನೂ ಸೇರಿಸುತ್ತಾರೆ. ಹಾಗೆಯೇ ಅವರ ಪುರುಷಸರಸ್ವತಿ ಜಯಂತಿಯ ಶಾಸನಪದ್ಯವಲ್ಲರಿ ಎಂದು ಇನ್ನಷ್ಟು ಪದ್ಯಗಳೂ ಮುಂದೆ ಇವೆ. ಅವರಿಗೆ "ಬೈಲಿಂಗ್ಯುಅಲ್ ಬಿಗ್ ಭಾರತಿ" (bi- lingual big Bharati) “ಭಾಮಿನೀರಮಾರಮಣ" “ಭಾಮಿನೀ ಭಾಗ್ಯವಿಧಾತಾ" "ಅಭಿನವಾರ್ಧಪುರುಷಸರಸ್ವತಿ" ಎಂಬಂತಹ ಬಿರುದುಗಳೆಲ್ಲ ಇವೆಯಂತೆ! ಪುರುಷ ಸರಸ್ವತಿಯ ಕಾವ್ಯಗಳು ೫೦ ಪದ್ಯಗಳಿಂದ ಕೂಡಿದ್ದರೆ ಈತನದು ೨೫ಪದ್ಯಗಳಾದ ಕಾರಣ "ಅಭಿನವಾರ್ಧಪುರುಷಸರಸ್ವತಿ"ಎಂಬ ಬಿರುದು. ಆ ಬಳಿಕ ಗು.ಸಂ.ಪಂ.ದಲ್ಲಿ ಮೊದಲನೆಯವರ ಭಾಷಣವೊಂದು ಮುಂದೆ ಪ್ರಕಟವಾಗಿದೆ. ಹಾಗೆಯೇ ಪಂಚಮರ ಪರಮನವೀನ ಸ್ವಾಗತಗೀತೆಯನ್ನೂ ಸೇರಿಸಿದ್ದಾರೆ. ದ್ವಿತೀಯರ ಅದ್ವಿತೀಯ ಪ್ರಶಂಸಾಮಾಲಿಕೆಯಿದೆ. ಚತುರ್ಥರ ಚತುರ್ವಿಂಶತಿವ್ಯಾಖ್ಯಾನಮಾಲೆಯ ಪ್ರಸ್ತಾಪವೂ ಇದೆ.
ಇದೆಲ್ಲದರ ನಡುವೆ ಮೊದಲ ಕಾವ್ಯದ ಪ್ರಾರಂಭದಲ್ಲಿಯೇ ವಿಶೇಷಸೂಚನೆಯೊಂದು ಇದೆ- “ಕಾವ್ಯಕರ್ತೃವೂ ವ್ಯಾಖ್ಯಾನಕಾರನೂ "ಗುಪ್ತಸಂಪಾದಕ ಪಂಚಕ"ವೂ ಸರ್ವವೂ ಶ್ರೀಮಾನ್ ಜಿ.ಪಿ ರಾಜರತ್ನಂ ಎಂ.ಎ ಎಂಬವರೆಂದು ಈಗತಾನೆ ಈ ಕೃತಿ ಅಚ್ಚಾದ ಮೇಲೆ ತಿಳಿದುಬಂದಿದೆ" ಎಂದು. ಮುಂದೆ ಆ ಕಾವ್ಯದ ಅಂತ್ಯದಲ್ಲಿ ಗು.ಸಂ.ಪಂ.ದವರು ಈ ವಾಕ್ಯವನ್ನು ಖಂಡಿಸಿ ಲೇಖನವನ್ನೂ ಬರೆಯುತ್ತಾರೆ. ಹೀಗೆ ಸಂಪಾದಕರ ಮಂಡಳಿಯ ಒಳಹೊರಗೆ ನಡೆಯುವ ಹಲವು ವಿಷಯಗಳ ಗೊಂದಲ ಗದ್ದಲ ಚರ್ಚೆ ಭಾಷಣ ಇತ್ಯಾದಿಗಳ ಸಂಕ್ಷೇಪವಾದ ಪರಿಚಯ ನಡೆಯುತ್ತದೆ.
ಮಹಾಕವಿ ಪುರುಷಸರಸ್ವತಿಯ ಪರಿಚಯ-
ಮಹಾಕವಿ ಪುರುಷಸರಸ್ವತಿಯ ಹೆಸರು ಪುರುಷಸರಸ್ವತಿ() ಎಂದೂ ಇವನ ತವರೂರು ತಾವರೆಪುರ()ವೆಂದೂ ತಂದೆಯ ಹೆಸರು ಲಕ್ಷ್ಮೀರಮಣ()ನೆಂದೂ ಹೆಣ್ಣುಕೊಟ್ಟ ಮಾವನ ಹೆಸರು ಪರ್ವತ(ಬೆಟ್ಟದಯ್ಯ)() ಎಂದೂ ಕೆಲವು ಪದ್ಗಳಿಂದ ತಿಳಿಯುತ್ತದೆ.
ಪುರುಷನಾಗಿ ಸರಸ್ವತಿಗೆ ತಾವರೆಯ ಮನೆಯಲಿ ಜನಿಸಿ ಪಳವಾ
ತೊರೆದು ಲೋಕವ ಪೊರೆದ ಲಕ್ಷ್ಮೀರಮಣನಣುಗನೊಲು
ಪುರುಷಸರಸತಿ()ಯೆನಿಸಿ ತಾವರೆಪುರ()ದ ಬಸಿರಲಿ ಜನಿಸಿ ಪಳವಾ
ತೊರೆದು ಕಬ್ಬವ ಬರೆದ ಲಕ್ಷ್ಮೀರಮಣ() ಸುತನಾನು||
..... ಮೂರು ಹೆಸರಿನ ಮೂರು ಕಾವ್ಯದ ಆರು ಪಾದದ ಭಾಮಿನಿಯ ವಾ
ಗ್ಧಾರೆ ನುಡಿಯೊಳಗಾದ ಪರ್ವತನಳಿಯ() ನಾನಲ್ತೆ||
ಕವಿಯ ಮತ ಯಾವುದು ಎಂದೂ ತಿಳಿದು ಬಂದಿಲ್ಲ! ಏಕೆಂದರೆ ಕವಿ ತ್ರಿಮೂರ್ತಿಗಳನ್ನೂ ಒಂದೇ ಉಸುರಿನಲ್ಲಿ ಸ್ಮರಿಸುವ ಅಪೂರ್ವ ಸಂಪ್ರದಾಯವುಳ್ಳವನಾಗಿದ್ದಾನೆ. (ಈತನ ಮತವನ್ನು ನಿಶ್ಚಯಿಸಿದವರಿಗೆ ಏತನ್ಮತೀಯರು ೫೦೦೦ ರುಪಾಯಿಗಳ ಬಹುಮಾನ ಕೊಡುವುದಾಗಿ ಜಾಹೀರಾತು ಮಾಡಿದ್ದಾರೆ.)
ಈ ಕವಿಯ ಬಿರುದಗಳನ್ನು ಹೀಗೆ ವಿವರಿಸಿದ್ದಾರೆ.
.ಪ್ರಾಕ್ಕಾವ್ಯಪರಬ್ರಹ್ಮ- ಪ್ರಾಚೀನಪ್ರೌಢಪ್ರಬಂಧಪಿನಾಕಿ- ಪರಮಾಲಂಕಾರಪ್ರದರ್ಶನಪ್ರವೀಣಪದ್ಮನಾಭ- ಈ ಮೂರು ಬಿರುದುಗಳನ್ನು- ಕವಿಯು ತ್ರಿಮೂರ್ತಿಗಳನ್ನೂ ಒಟ್ಟಿಗೇ ಸ್ತುತಿಸುವುದರಿಂದ ಆಸ್ತಿಕಲೋಕವು ಕೊಟ್ಟಿರುವುದು.
.ಪುರಾತನಕವಿಕೇಸರಿ- ಪುರಾಣಕವಿತಾವಿಚಕ್ಷಣ- ಪ್ರಾಚೀನಕಾವ್ಯಶಿರೋಮಣಿ- ಪ್ರಾಕ್ಪುರಾತನಕವಿರಾಜ-ಪ್ರಪ್ರಾಚೀನಕವಿರತ್ನ- ಇವು ನಾಸ್ತಿಕಲೋಕವು ಆಸ್ತಿಕಲೋಕಕ್ಕಿಂತ ಹಿಂದುಳಿದಿಲ್ಲವೆಂದು ಜಗತೀವಳಯಕ್ಕೆ ತೋರಿಸಿಕೊಡಲು ಕೊಟ್ಟ ಬಿರುದಾವಲಿ ಪಂಚಕವು
೩ಕರ್ಣಾಟಕಕುಲಕ್ರಮಾಗತಕವಿರಾಜಮಾರ್ಗಪ್ರತಿಪನ್ನಪ್ರಚಂಡಪರಮೇಶ್ವರ- ಸಕಲಸುನಿಪುಣಸಾಹಿತ್ಯಸರ್ವಸ್ವಸಂಯುಕ್ತಸರ್ವೇಶ್ವರ- ಆತ್ಮಗೌರವಕ್ಕೆ ಮಿಗಿಲಾದುದು ಮುಗಿಲ ಕೆಳಗಿಲ್ಲ ಎಂದು ತೋರಿಸಲು ಕವಿ ತನಗೆ ತಾನೇ ಕೊಟ್ಟುಕೊಂಡ ಎರಡು ಬಿರುದುಗಳು
. ಕವಿನರಪಾಳ- ಕರ್ಣನಾಟಕಪುರಾಣದಲ್ಲಿ ಪ್ರಾಸರಕ್ಷಣೆಗೋಸ್ಕರ ಕೊಟ್ಟುಕೊಂಡ ಬಿರುದು
. ಕುಳಕಪ್ರಿಯ- ಈತನ ಕಾವ್ಯದಲ್ಲಿ ಮೇಲಿಂದ ಮೇಲೆ ತಲೆದೋರುವ ಕುಳಕವನ್ನು ಕಂಡು ಗು.ಸಂ.ಪಂ.ವು ಕೊಟ್ಟ ಬಿರುದು
. ಮಹಾಕವಿ- ನಿನ್ನೆಗಿಂತ ಹಿಂದಿನ ಕವಿಗಳೆಲ್ಲರನ್ನೂ ಮಹಾಕವಿ ಎಂದು ಕರೆಯುವ ಸಂಪ್ರದಾಯದಂತೆ ಇವನನ್ನೂ ಮಹಾಕವಿ ಎಂದು ಗು.ಸಂ.ಪಂ. ಕರೆದಿದ್ದಾರೆ.
ಈ ಕವಿಯ ಕೃತಿಗಳಿಗೆ ವ್ಯಾಖ್ಯಾನ ಬರೆದವರ ಬಗೆಗೆ ಹೀಗಿದೆ- ಶಾಸ್ತ್ರಂ ಶಸ್ತ್ರಮೆ ಶಾಸ್ತ್ರಿ ಶಸ್ತ್ರಿಕನಲಾ ರತ್ನಾಕರಾಧೀಶ್ವರಾ ಎಂಬ ಸತ್ಕವಿಯ ಸೂಕ್ತಿಯನ್ನು ಸಂಪೂರ್ಣವಾಗಿ ಸಾರ್ಥಕಗೊಳಿಸಿದ ದುಷ್ಟಬುದ್ಧಿಯೆಂಬವನ (ಈ ದುಷ್ಟಬುದ್ಧಿ ಯಾರೆಂದು ಪತ್ತೆಯಾಗಿಲ್ಲ) ದೊಡ್ಡಯ್ಯನ ದೌಹಿತ್ರನಾದ ವಿಸ್ತರವ್ಯಾಖ್ಯಾನದೊಡನೆ ಲೋಕಹಿತಾರ್ಥವಾಗಿ ಪ್ರಚುರಪಡಿಸಲ್ಪಟ್ಟಿತು.
ಪುರುಷಸರಸ್ವತಿಯ ಕಾಲನಿರ್ಣಯವನ್ನು ಕೂಡ ಒಂದು ಪದ್ಯದಿಂದ ಮಾಡಿದ್ದಾರೆ. “ಶಾಂತವಾಗಲಿ ನಮ್ಮ ಜನ..." ಎಂಬ ಪದ್ಯದಲ್ಲಿ ಶಾಂತ ಎಂದರೆ ನವರಸ- , ವಾಗಲಿ- ಮೂರಕ್ಷರ- , ನಮ್ಮ- ಎರಡಕ್ಷರ- , ಜನ- ಅನಿರ್ದಿಷ್ಟ- , ಹಾಗಾಗಿ ಶಾಂತವಾಗಲಿ ನಮ್ಮ ಜನ=೯೩೨೦, ಹೀಗೇ ಇನ್ನೊಂದು ಸಾಲಿನಿಂದ ೨೨೧೦, ಮುಂದಿನ ಸಾಲಿನಲ್ಲಿ "ಸಹ" ಎಂಬ ಶಬ್ದವಿದೆ ಅಂದರೆ ಕೂಡುವುದು ೯೩೨೦+೨೨೧೦=೧೧೫೩೦ ಹೀಗೇ ಏನೇನೋ ಲೆಕ್ಕಾಚಾರವನ್ನು ಮಾಡಿ ಕೊನೆಗೆ ೫೧೧ ಬರುತ್ತದೆ. ಹಾಗಾಗಿ ಶಕವರ್ಷ ೫೧೧ರಲ್ಲಿ ಕೃತಿ ಮುಗಿಯಿತು ಎಂದು ನಿರ್ಧಾರವಾಗುತ್ತದೆ. ಇದರಿಂದ ಒಂಭತ್ತನೇ ಶತಮಾನದ ಕವಿರಾಜಮಾರ್ಗಕ್ಕಿಂತ ಮೂರು ಶತಮಾನ ಮುಂಚಿನ ಮಹಾಕ್ಷುದ್ರಕಾವ್ಯವು ಬೆಳಕಿಗೆ ಬಂದಿದೆ, ಜೈನನಾದ ನೃಪತುಂಗನಿಗಿಂತ ಮೂರು ಶತಮಾನ ಹಿಂದಿನ ಈತ ಬೌದ್ಧನಾಗಿರಬಹುದು ಎಂಬ ಸಂಶಯವನ್ನೂ ಗು.ಸಂ.ಪಂ. ವ್ಯಕ್ತಪಡಿಸುತ್ತದೆ.
ಕೃತಿಯ ಸಂಪಾದನೆ ಹಾಗೂ ಕೃತಿಗಳ ಪರಿಚಯ-
ಈ ಕೃತಿಯನ್ನು ಸಂಪಾದಿಸುವಾಗ ಎರಡು ಪ್ರತಿಗಳನ್ನು ಆಶ್ರಯಿಸಿದ್ದಾಗಿ ಹೇಳುತ್ತಾ ಗುಪ್ತಸಂಪಾದಕ ಪಂಚಕವು ತಿಳಿಸುವುದು ಒಂದು ಪಾತಾಳದ ಪ್ರತಿ, ಇನ್ನೊಂದು ಅಟ್ಟದ ಪ್ರತಿ. ಮುಖ್ಯಪಾಠವಾಗಿ ಪಾತಾಳದ ಪ್ರತಿಯನ್ನು ಆಶ್ರಯಿಸಿದ್ದರೆ ಪಾಠಾಂತರಗಳಲ್ಲಿ ಅಟ್ಟದ ಪ್ರತಿಯನ್ನು ಕೊಡುತ್ತಾರೆ. ಹಾಗೆಯೇ ಮಹಾಕವಿ ಪುರುಷಸರಸ್ವತಿಯ ಕಾವ್ಯಗಳಿಗೆ ವಿಪರೀತಬುದ್ಧಿ ಎಂಬಾತನ ವ್ಯಾಖ್ಯಾನವೂ ಕೂಡ ಇದೆ ಎಂಬುದು ಹಿಂದೆಯೇ ಪ್ರಸ್ತಾಪಿಸಲ್ಪಟ್ಟಿತಷ್ಟೆ!
ಮಹಾಕವಿ ಪುರುಷಸರಸ್ವತಿಯ ಕೃತಿಯೆಂದರೆ "ಶತಕಾರ್ಧತ್ರಯೀ" ಎಂಬ "ತ್ರಿಲೋಕತುಲ್ಯು ಮಹಾಕ್ಷುದ್ರಕಾವ್ಯಪ್ರಪಂಚವು" ಎಂದು ಮೊದಲ ಪುಟದಲ್ಲಿ ಹೇಳುತ್ತಾ ಅದಕ್ಕೆ ಟಿಪ್ಪಣಿಯನ್ನು ಹೀಗೆ ಕೊಡುತ್ತಾರೆ. ಇವುಗಳಲ್ಲಿ ಐವತ್ತೇ ಪದ್ಯಗಳಿರುವ ಕಾರಣ ಕ್ಷುದ್ರಕಾವ್ಯಗಳಾಗಿವೆ. ಹಾಗೂ ಮಹಾಕವಿ ಬರೆದ ಕಾರಣ ಮಹಾಕ್ಷುದ್ರಕಾವ್ಯವು ಎಂದು ವಿವರಣೆಯನ್ನು ಕೊಡುತ್ತಾರೆ! ಶತಕಾರ್ಧತ್ರಯೀ ಐವತ್ತು ಪದ್ಯಗಳ ಮೂರು ಕಾವ್ಯಗಳು .
. ಕರ್ಣನಾಟಕಪುರಾಣವು ಅಥವಾ ಸಾಲಂಂಕೃತಶತಕಾರ್ಧ ಷಟ್ಪದವು- ಎಂಬ ಣತ್ವೋದ್ಧರಣಮಹಾಕ್ಷುದ್ರಕಾವ್ಯ ಪ್ರಪಂಚವು
ಈ ಐವತ್ತು ಪದ್ಯಗಳಲ್ಲಿ "ಕರ್ಣಾಟಕ"ವೇ ಅಥವಾ "ಕರ್ನಾಟಕ"ವೇ ಎಂಬ ಜಿಜ್ಞಾಸೆಯನ್ನು ಏಳು ಗತಿಗಳಲ್ಲಿ ಐವತ್ತು ಷಟ್ಪದಿಗಳಲ್ಲಿ ವಿಸ್ತರಿಸುತ್ತಾರೆ. ಸಾಮಾನ್ಯವಾಗಿ ಪುರುಷಸರಸ್ವತಿಯ ಕಾವ್ಯದ ನಾಂದಿಯ ಪದ್ಯದಲ್ಲಿ ತ್ರಿಮೂರ್ತಿಗಳ ಸ್ಮರಣೆ ಇರುತ್ತದೆ. ಆ ಬಳಿಕ ಕಾವ್ಯಕ್ಕೆ ಪೀಠಿಕೆ ಇರುತ್ತದೆ. ಅದರಲ್ಲಿ ಆತ್ಮಪ್ರಶಂಸೆ ಕುಕವಿನಿಂದೆ ಇತ್ಯಾದಿಗಳನ್ನೆಲ್ಲ ಸಾಂಪ್ರದಾಯಿಕ ಕಾವ್ಯಗಳ ಪರಂಪರೆಯಂತೆಯೇ ಮಾಡುತ್ತಾರೆ. ಅಲ್ಲಿನ ಆತ್ಮಪ್ರಶಂಸೆಯ ಒಂದು ಪದ್ಯ-
ಬೋಳುಗವಿಗಳ ಹೂಳಿಸುತೆ ಬಲುಗೋಳುಗವಿಗಳ ಸೀಳಿಸುತೆ ಮೇಣ್
ಕೋಳಿಗವಿಗಳ ಕಿರಿಚುನಾಲಿಗೆ ಹಿಡಿದು ಕೀಳಿಸುತೆ
ಹಾಳುಗವಿತೆಯ ಕುಕವಿ ಮಾರನ ಭಾಳಲೋಚನನೆನಿಸಿ ಕವಿನರ
ಪಾಳಬಿರುದಿನ ಪುರುಷಸರಸತಿ ಪೆಸರಿನವ ನಾನು||
ಇದರ ಉತ್ತರಾರ್ಧದ ಅಟ್ಟದ ಪ್ರತಿಯ ಪಾಠಾಂತರ
"ಭಾಳಲೋಚನನಂತೆ ಕುಕವಿ ಕಪಾಳವನು ಹಿಡಿದದರಲೇ ಗೋ-
ಪಾಳವೆತ್ತುವ ಪುರುಷ ಸರಸತಿ ಪೆಸರಿನವ ನಾನು||”
ವಿಪರೀತಬುದ್ಧಿಯ ವ್ಯಾಖ್ಯಾನ- ಬೋಳುಗವಿ ಎಂದರೆ ಪ್ರಾಸ ಅಲಂಕಾರ ವ್ಯಾಕರಣ ರಹಿತರಾದವರು, ಗೋಳುಗವಿಗಳು- ಕಾವ್ಯರಚನೆಯಿಂದ ದ್ರವ್ಯಸಂಪಾದನೆಯಾಗುವುದಿಲ್ಲ ಎಂದು ಗೋಳಾಡುವವರು, ಕೋಳಿಗವಿಗಳು- ಕೋಳಿಯು "ಕೊಕ್ಕೊಕ್ಕೋ ಎಂದು ಕೂಗಿದ್ದನ್ನೇ ಕೂಗುವಂತೆ ಹಾಡಿದ್ದೆ ಹಾಡೋ ಕಿಸುಬಾಯ್ದಾಸ" ಮಾಡುವವರು.
ಕರ್ಣಾಟಕಸ್ತವನವು ಎಂಬ ಎರಡನೆ ಗತಿಯಲ್ಲಿ ಒಂದು ಪದ್ಯದಲ್ಲಿ ಕರ್ಣಾಟಕ ಎಂಬ ಶಬ್ದದಲ್ಲಿ ""ತ್ವವೇ ಏಕೆ ಬರಬೇಕು ಎಂಬುದನ್ನು ತುಂಬ ಸೊಗಸಾಗಿ ಒಂದು ಭೋಗಷಟ್ಪದಿಯಲ್ಲಿ ವಿವರಿಸಿದ್ದಾರೆ.
ಪರುಷರೇಫೆ ನತ್ವ ಮುಟ್ಟಿ ಹರುಷದಿಂದ ಣತ್ವವಾಯ್ತು
ಕರುಣಿಯೋತು ಪೇಳ್ದನಲ್ತೆ ತಾತಪಾಣಿನಿ
ಮರೆತು ಮುತ್ತಿನಂಥ ಮಾತನರರೆ ನತ್ವವನ್ನು ಬಳಸಿ
ನರರು ಪಾಪಿ ಮನುಜರಯ್ಯೊ ಪೋಪರೆಲ್ಲಿಗೆ||
ಇಲ್ಲಿ ಕೇವಲ ಹಾಸ್ಯವನ್ನಷ್ಟೇ ಅಲ್ಲದೇ ಅಲ್ಲಿ ಹೇಳಿದ ವ್ಯಾಕರಣಸೂಕ್ಷ್ಮವನ್ನು ಗಮನಿಸಬಹುದು. ರೇಫವೆಂಬ ಸ್ಪರ್ಷಮಣಿಯ ಸೋಂಕಿನಿಂದ ನಕಾರವೆಂಬ ಲೋಹವು ಣಕಾರವೆಂಬ ಚಿನ್ನವಾಗುತ್ತದೆ ಎಂಬ ಸುಂದರವಾದ ರೂಪಕವನ್ನು ಕೊಡುತ್ತಾರೆ. ತಾತಪಾಣಿನಿ ಎಂದು ಪಾಣಿನಿಯನ್ನು ಉಲ್ಲೇಖಿಸಿದ್ದಕ್ಕೆ ವಿಪರೀತಬುದ್ಧಿಯು ವ್ಯಾಖ್ಯಾನದಲ್ಲಿ “ರಷಾಭ್ಯಾಂ ನೋ ಣಃ ಸಮಾನಪದೇ" ಎಂಬ ಪಾಣಿನಿಯ ಮೂಲಸೂತ್ರವನ್ನು ಉಲ್ಲೇಖಿಸುತ್ತಾನೆ.
ಹಾಗೆಯೇ ಶಾಸನಗಳಲ್ಲಿ "ಕರ್ಣ್ನಾಟಕ" “ಕರ್ಣ್ಣಾಟಕ, ಕರ್ಣಾಟಕ" ಎಂಬ ಮೂರು ರೂಪಗಳು ಕಂಡುಬರುವುದಲ್ಲದೇ "ಕರ್ನಾಟಕ" ಎಂಬ ರೂಪವಿಲ್ಲ ಎಂಬುದನ್ನೂ ಸ್ಪಷ್ಟಪಡಿಸುತ್ತಾರೆ.
ಇವುಗಳೆಲ್ಲ ಹಾಸ್ಯಮಯವಾಗಿದ್ದರೂ ಪ್ರತಿಯೊಂದು ಪದ್ಯಗಳಲ್ಲಿ ಗಂಭಿರವಾದ ವಿಷಯವೂ ಇರುವುದನ್ನು ಗಮನಿಸಬಹುದು. ಇನ್ನೊಂದು ಪದ್ಯದಲ್ಲಿ ಹೀಗಿದೆ-
ಮೀಶೆವೊತ್ತನಮೋಘವರ್ಷನರೇಶ ನೃಪತುಂಗಾಖ್ಯ ತಾನ-
ವಿನಾಶಿಯಾತನ ಮಾತಿಗೆದುರೆದ್ದಾರ್ಪರಾರುಂಟು
ಕೇಶಿರಾಜ ವ್ಯಾಕರಣದಾಕಾಶದೊಳು ಖರಕಿರಣ ಸುಡುವನು
ಲೇಶ ಸಂದೆಗವಿಲ್ಲವವನಾಡಿದುದನಲ್ಲೆನಲು||
ಇದಕ್ಕೆ ಪೂರ್ವಾರ್ಧಕ್ಕೆ ಪಾಠಾಂತರ-
"ಮೋ ಶೆವೆತ್ತನ ಮೀಘವಷ್ರನ ರೇ ಶನ ಪತಂಗಾಖ್ಯತಾನ ವಿ
ನಾಶಿಯಾತನ.......” (ಎಂದು ಅಟ್ಟದ ಪ್ರತಿ)
ವಿಪರೀತಬುದ್ಧಿಯ ವ್ಯಾಖ್ಯಾನ-(ಇದಕ್ಕೆ ಅರ್ಥವಾಗುವುದಿಲ್ಲ. ಕನ್ನಡದಂತೆ ಕಂಡರೂ ಕನ್ನಡದಂತೆ ಅರ್ಥವಾಗದ ಈ ಭಾಷೆ ಕೂಡ ಕಾವ್ಯದ ಪ್ರಾಚಿನತೆಯನ್ನು ತೋರಿಸುತ್ತದೆಯಲ್ಲವೇ?)

.ಸಂದೇಹಸಂದೋಹಸಂದೇಶವು-
ಇದೊಂದು ಸಂಪೂರ್ಣವಾದ ಅಸಂಪೂರ್ಣ ಗ್ರಂಥವೆಂದು ಟಿಪ್ಪಣಿ. ಇದರಲ್ಲಿ ಮೂರೇ ಷಟ್ಪದಿಗಳಿವೆ. ಐವತ್ತುಪದ್ಯಗಳನ್ನು ಬರೆಯುತ್ತಿದ್ದ ಕವಿಯ ಕೃತಿಯಲ್ಲಿ ಮೂರೇ ಪದ್ಯಗಳಿವೆ ಎಂದು ಎಂದು ಇದು ಅಸಂಪೂರ್ಣಗ್ರಂಥವಂತೆ! ಆದರೆ ಸಂಪೂರ್ಣ ಏಕೆಂದರೆ ಕವಿ ಮೂರನೇ ಪದ್ಯದ ಕೊನೆಯಲ್ಲಿ "ಮುಗಿಯಿತಿಲ್ಲಿಗೀ ಸಂದೇಹಸಂದೋಹಸಂದೇಶವು" ಎಂದು ಹೇಳಿದ್ದಾನೆ! ಹಾಗಾಗಿ ಇದು ಸಂಪೂರ್ಣವಾಯಿತು! ಇಲ್ಲಿ ಹಲವಾರು ಪುರಾಣದ ಕಥೆಗಳನ್ನು ಗೊಂದಲವಾಗಿಸುವಂತೆ ಉಲ್ಲೇಖಿಸಿ ಸಂದೇಹಗಳ ಸಂದೋಹವನ್ನೇ ಸೃಷ್ಟಿಸಿದ ಕಾರಣ ಇದು ಸಂದೇಹಸಂದೋಹಸಂದೇಶ!

.ಹಾರ್ಮೋನಿಯಂ ಹರಣವು (ಹಾ.)-ಅರ್ಥಾತ್ ವೆಂಕಟೇಶಹಗರಣವು-ಅಥವಾ ನಿಂಗನಿರ್ಯಾಣವು ಎಂಬ ಹಾರ್ಮೋನಿಯಮ್ಮನ್ನು ಹರಣ ಮಾಡಲು ಹೋದವನ ಹರಣವು ಹರಣವಾದ ಹ[]ರಣವು
ಇದೊಂದು ರಮಣೀಯವಾದ ಹಾಸ್ಯದ ಕಥೆ! ನಿಂಗ ಎಂಬ ವಾರಾನ್ನದ ಹುಡುಗ ಹಾರ್ಮೋನಿಯಮ್ಮನ್ನು ಕದಿಯಲು ಹೋಗಿ ಅವನ ಪ್ರಾಣವನ್ನೇ ಕಳೆದುಕೊಳ್ಳುವಂತಹ ದುರಂತಕಥೆ!. ಇದರಲ್ಲಿ ಕೂಡ ೫೦ ಭಾಮಿನಿ ಷಟ್ಪದಿಗಳಿವೆ. ಹಾಗೆಯೇ ಪ್ರಕ್ಷಿಪ್ತ ಪಾಠವಾಗಿ ಕೊನೆಯಲ್ಲಿ ಮೂರು ಪದ್ಯಗಳಿವೆ. ಈ ಕಾವ್ಯವು ಅಂತ್ಯದಲ್ಲಿ ವಿಷಾದಾಂತವಾಗಿದೆಯೆಂದು ಗು.ಸಂ.ಪಂ. ತಾವೇ ರಚಿಸಿ ಸುಖಾಂತವಾದ ಪ್ರಕ್ಷಿಪ್ತವನ್ನು ಸೇರಿಸಿದ್ದಾಗಿಯೂ ಬರೆಯುತ್ತಾರೆ! ಇದರಲ್ಲಿ ಬಹುತೇಕ ಎಲ್ಲ ಪದ್ಯಗಳೂ ಸೊಗಸಾದ ಅಲಂಕಾರಮಯವಾದ ಪದ್ಯಗಳೇ ಆಗಿವೆ. ಕವಿ ಅಲ್ಲಿ "ಪನ್ನೊಂದು ಪರಮಾಲಂಕಾರ"ಗಳನ್ನು ಪ್ರಯೋಗಿಸಿದ್ದಾಗಿ ಹೇಳುತ್ತಾರೆ. ಆ ಅಲಂಕಾರಗಳನ್ನು ಇಲ್ಲಿ ವಿವರಿಸಿದರೆ ಮುಂದೆ ಕಾವ್ಯವನ್ನು ಓದುವ ಆಸಕ್ತಿ ಬರಬಹುದು!
. ಸತಿಪತಿಸಮಾನಸ್ಥಾನಾಲಂಕಾರ- ಶಿವ ಎಂಬ ಶಬ್ದದಿಂದ ಶಿವೆ ಎಂದು ಹೇಗೆ ಪಾರ್ವತಿಗೆ ಹೆಸರು ಬರುತ್ತದೆಯೋ ಹಾಗೆಯೇ "ಗಿರಿಜೆ" ಎಂಬ ಪಾರ್ವತಿಯ ಹೆಸರಿನಿಂದ "ಗಿರಿಜ" ಎಂದು ಶಿವನ ಹೆಸರೂ ಸಿದ್ಧಿಸುತ್ತದೆ ಎಂಬುದೇ ಈ ಅಲಂಕಾರ. ಇದನ್ನು ಪಾಮರರು "ಅಮ್ಮಾವ್ರಗಂಡಾಲಂಕಾರ" ಎನ್ನುತ್ತಾರಂತೆ!
.ಟವರ್ಗಪ್ರಥಮಾಕ್ಷರದ್ವಿತ್ವಪಂಚದಶಾಲಂಕಾರ- ಟವರ್ಗದ ಪ್ರಥಮಾಕ್ಷರದ ದ್ವಿತ್ವ ಎಂದರೆ "ಟ್ಟ" ಎಂದಾಯಿತು. ಇದನ್ನು ಹದಿನೈದು ಬಾರಿ ಒಂದೇ ಪದ್ಯದಲ್ಲಿ ಬಳಸಿರುವುದೇ ಈ ಅಲಂಕಾರ "ಹುಟ್ಟಿದವಸುಳಿ ಕಟ್ಟಿ ಚಟ್ಟವ ಸುಟ್ಟರೂ ಛಟ್ಟಾಗದೆಂದವ....” ಎಂಬ ಪದ್ಯದಲ್ಲಿ ಇದನ್ನು ಗಮನಿಸಬಹುದು.
.ಸ್ತಸ್ಥಪ್ರಾಸಾಲಂಕಾರ- ಇದರಲ್ಲಿ ಸ್ತ ಮತ್ತು ಸ್ಥ ಗಳನ್ನು ಪ್ರಾಸಾಕ್ಷರವಾಗಿ ಬಳಸಿರುವುದು
. ಪರಪಂಕ್ತಿಪ್ರಾರಂಭಾಲಂಕಾರ- ಒಬ್ಬ ಕವಿಯ ಒಂದು ಪಂಕ್ತಿಯಿಂದ ಇನ್ನೊಬ್ಬ ಕವಿಯು ಪದ್ಯವನ್ನು ಪ್ರಾರಂಭಿಸುವುದು. ರಾಘವಾಂಕನ ನಡೆವರೆಡಹದೆ ಎಂಬ ಪದ್ಯದ ಪ್ರಾರಂಭದಿಂದ ಈ ಕವಿಯ ಹಾ.. ಕಾವ್ಯದಲ್ಲಿ "ನಡೆವರೆಡಹದೆ ಕುಳಿತು ಕೊಳೆವವರೆಡಹರೈ" ಎಂಬ ಪದ್ಯ ಪ್ರಾರಂಭವಾಗಿದೆ.
.ತ್ರಿತ್ರತ್ರಿತ್ರಿಪ್ರಾಸಾಲಂಕಾರ- ಇದು ಮೂರು ಪಾದಗಳಿಗೆ "ತ್ರ" ಅಕ್ಷರವನ್ನೂ ಮೂರು ಪಾದಗಳಿಗೆ "ತ್ರಿ" ಎಂಬ ಅಕ್ಷರವನ್ನೂ ಪ್ರಾಸವಾಗಿ ಬಳಸಿರುವುದು.
. ಮೌನಮಾರ್ತಾಂಡಮಹಾಲಂಕಾರ-ಕಥಾನಾಯಕಿ "ಯೆಂಕ"ಳ ತಾಯಿಯನ್ನು ಒಂದು ಪದ್ಯದಲ್ಲಿ ಮಾತ್ರ ಸ್ಮರಿಸಿ ಮುಂದೆ ಕಾವ್ಯದಲ್ಲಿ ಆಕೆಯ ವಿಷಯದಲ್ಲಿ ಮೌನವನ್ನು ಅವಲಂಬಿಸಿರುವ ಕಾರಣ ಈ ಅಲಂಕಾರ.
.ತವರ್ಗದ್ವಿತೀಯಾಕ್ಷರದ್ವಿತ್ವದಶಕಾಲಂಕಾರ- ತವರ್ಗದ್ವಿತೀಯಾಕ್ಷರ- ದಕಾರ. ದ್ವಿತ್ವ- "ದ್ದ" ಇದನ್ನು ಹತ್ತು ಬಾರಿ ಬಳಸಿದ ಕಾರಣ ಈ ಅಲಂಕಾರ-”ಮುದ್ದು ಮಗಳಿಗೆ ಕಲಿಸಬೇಕೆಂದೆದ್ದು ಪೇಟೆಯೊಳುದ್ದು ಪರಿಕಿಸಿ ಕದ್ದು ತಂದರು ಸದ್ದು ಹೆಚ್ಚಿನ ಹಾರಮೋನಿಯವ"ಎಂಬ ಪದ್ಯದಲ್ಲಿ ಗಮನಿಸಬಹುದು.
.ಏಕಜೀವದೇಹದ್ವಯನ್ಯಾಯಾಲಂಕಾರ- “ಮೈಯೆರಡು ತಾನುಸಿರೊಂದೊ" ಎಂಬಂತೆ ಗೊರಕೆ ಬಿಡುವುದು "ಏಕಜೀವ ದೇಹದ್ವಯನ್ಯಾಯ" ತನ್ನ್ಯಾಯವನ್ನು ಬಳಸಿದ ಅಲಂಕಾರವು ತನ್ನ್ಯಾಯಾಲಂಕಾರವು"
.ಊನಾಲಂಕಾರ- ಐವತ್ತು ಷಟ್ಪದಿಗಳನ್ನು ಮೀರುವುದಿಲ್ಲವೆನ್ನುವುದಕ್ಕಾಗಿ ಅದರಲ್ಲಿ ಒಂದು ಷಟ್ಪದಿಯನ್ನು ಊನ ಮಾಡಿಕೊಳ್ಳುವುದೇ ಊನಾಲಂಕಾರವು.
೧೦.ಶೂದ್ರಶ್ರೋತ್ರಿಯನ್ಯಾಯಾಲಂಕಾರ- ಅಶ್ಲೀಲವನ್ನು ಆಡಬಾರದು ಎಂದು ಬಹಿರಂಗದಲ್ಲಿ ಬೋಧಿಸುವ ಶ್ರೋತ್ರಿಯನು ಶೂದ್ರನೂ ಕೇಳಲಾರದೆ ಕಿವಿಮುಚ್ಚಿಕೊಳ್ಳುವಂತೆ ಅಶ್ಲೀಲವನ್ನು ಒಳಮನೆಯೊಳಾಡುವುದು ಶೂದ್ರಶ್ರೋತ್ರಿಯನ್ಯಾಯ. ಹಿಂದಿನಂತೆ- ತನ್ನ್ಯಾಯ>ತನ್ನ್ಯಾಯಾಲಂಕಾರ.
೧೧.ಸಂದೇಹಸಂದೋಹಾಲಂಕಾರ- ಹಿಂದಿನ ಸಂದೇಹಸಂದೋಹಸಂದೇಶದಂತೆ- ಸಂದೇಹಗಳ ಸಂದೋಹವನ್ನೇ ಇಡುವುದು ಈ ಅಲಂಕಾರ.
ಇವೆಲ್ಲವೂ ಕವಿಕಲ್ಪಿತವಾದ ಅಲಂಕಾರವಿಡಂಬನೆಗಳಾದರೆ ವಾಸ್ತವವಾಗಿ ಆಲಂಕಾರಿಕರು ಒಪ್ಪುವಂತೆ ಅಲ್ಲಲ್ಲಿ ತಕ್ಕ ರೂಪಕ-ಉಪಮೆ-ದೃಷ್ಟಾಂತಗಳು ಸಾಕಷ್ಟು ಬರುತ್ತವೆ. ಅದಕ್ಕಾಗಿ ಕೆಲವು ಉದಾಹರಣೆಗಳು- “ತಪ್ಪುಗಳಿಲಿಯ ಹುಲಿ ಮಾಡಿ" “ನಾನೆ ನಾನೆಂಬ ಬೋನು" “ಸಣ್ಣದರೊಳಗೆ ಸಿಲುಕಿದ ಬೇನೆ ಬೆನ್ನಿನ ಮುರಿಯ ಬಾಗಿದ ಗೂನು-ಜನ್ಮಾಂತರದ ಹೀನಸುಳಿ" “ಮೇವನರಸುವ ಕುರುಡುಕರುವಿನ ಗೋವಿನೋಪಾದಿಯಲಿ ಕಾಣದ ಕಾವಲನು ತಡಕಿದರು ಸಂಗೀತದ ಸಮುದ್ರದಲಿ" “ಕೀರಕಚ್ಚಿದ ಬಾಯ ಬೆಕ್ಕಿನ ಮೋರೆಗಂಡಶ್ವಾನ ತನ್ನಯ ತೋರ ಬಾಯನು ತೆರೆಯಲಾ ಸರ ಮೂರನುರೆ ಮೀರಿ ಹಾರುಮನಿಯಂ ತಂದೆ ಮಗಳುದಿರ್ ಏರು ಕೂಗಿನ ಕಿರಿಚುಗೊರಲಿನ ಸಾರಿಗಮಗಳ ಸಮರಕೋಲಾಹಲವನೇನೆಂಬೆ"
ಆದಿಶೇಷನ ಹಡೆಯ ಸಾಲಿನಲೈದನೆಯದರ ಪಕ್ಕದಲಿ ತಾ ಹಾದು ಕುಳಿತ ಫಣಾಪ್ರಪಂಚದಲಾರನೆಯದರೊಲು
ವೇದಮೂರುತಿ ವೇಂಕಟಾರ್ಯರದಾದ ಮಹಡಿಯಮನೆಯ ಬಲಭುಜ ತೇದು ನಿಂತಿತು ಸೌಧ ಗಗನಕೆ ನಿಮಿರಿ ತಲೆಯೆತ್ತಿ" “ಲಾಯದಾಳುಗಳಳೆದು ಹುರುಳಿಯ ಬೇಯಿಸುವ ವೇಳೆಯನು ಕುದುರೆ ನಿರೀಕ್ಷಿಸುವವೊಲು" “ತವಕವವನದ ನೋಡಲಾರದೆ ರವಿಯನಸ್ತಾಸುರ ಗಬಕ್ಕನೆ ಕವಳಿಸಿದ" ಎಂಬಂತಹ ಪದ್ಯಗಳ ಸಾಲುಗಳಲ್ಲಿ ತುಂಬ ಸ್ವೋಪಜ್ಞವಾದ ಕಲ್ಪನೆಯಿಂದ ಕೂಡಿದ ವಾಕ್ಯಗಳಿವೆ. ಅಲ್ಲದೇ ಸೊಗಸಾದ ಚಿತ್ರಣಗಳಿವೆ. ಲೋಕಸ್ವಭಾವವನ್ನು ಕಂಡ ಸೂಕ್ಷ್ಮದೃಷ್ಟಿಯಿದೆ. ಅದಲ್ಲದೇ ಈ ಚಿತ್ರಣಗಳು ಹಾಸ್ಯಕಾವ್ಯಕ್ಕೆ ಹೃದ್ಯವಾಗಿ ರಸಪೋಷಕವಾಗಿ ಕೋದಲ್ಪಟ್ಟಿವೆ!
. ಬೈರಿಗೇಂದ್ರಭಯನಾಕವು ಎಂಬ ಬೃಹದ್ಬೈರಿಗೇಶ್ವರ ಪುರಾಣವು-
ಈ ಕಾವ್ಯದ ಹೆಸರನ್ನು ಮಾತ್ರ ಉಲ್ಲೇಖಿಸಿದ್ದಾರೆಯಷ್ಟೇ ಅಲ್ಲದೇ ಮುಂದೆಲ್ಲೂ ಈ ಕಾವ್ಯದ ಪ್ರಸ್ತಾಪವೇ ಬರುವುದಿಲ್ಲ. ಅದಲ್ಲದೇ ಮಹಾಕವಿ ಪುರುಷಸರಸ್ವತಿಪ್ರಶಸ್ತಿ ಎಂಬ ಒಂದು ಭಾಗದಲ್ಲಿ ಪುರುಷಸರಸ್ವತಿಯ ಜಯಂತಿಯ ಕಾರ್ಯಕ್ರಮದ ಸಂಕ್ಷಿಪ್ತ ವರದಿಯನ್ನು ಕೊಡುತ್ತಾರೆ. ಅದನ್ನು "ಹಾಳೂರಿನ ಹಳದಿ ಹಾಳೆ"ಯ ಮೇಲೆ ಪ್ರಕಟಿಸಿದ್ದಾಗಿಯೂ ಹೇಳುತ್ತಾರೆ. ಅದಕ್ಕೇ "ಅಭಿನವ ಬೈರಿಗೇಂದ್ರ ಭಯಾನಕವು" ಎಂಬ ಹೆಸರನ್ನು ಕೊಡುತ್ತಾರೆ.
ಅಂದಿನ ಜಯಂತಿಯು ಐವತ್ತಾರೂ ಮುಕ್ಕಾಲು ಘಂಟೆಗಳ ಕಾಲ ಅವ್ಯಾಹತವಾಗಿ ಅವ್ಯವಚ್ಛಿನ್ನವಾಗಿ ಅಖಂಡವಾಗಿ ಅಸ್ಖಲಿತವಾಗಿ ಅನಂತರವಾಗಿ ಸಕಲ ವೈಭವ ವಿಜೃಂಭಣೆಗಳೊಡನೆ ಸಾಂಗವಾಗಿ ಜಯಪ್ರದವೆನಿಸಿ ಮುಕ್ತಾಯದೊಡನೆ ಕೊನೆಗೊಂಡಿತಂತೆ!
ಅಂದು ಶ್ರೀಯುತ ಅನಾಮಕರವರು ಹಸಿದವರಿಗೆ ಪಾನಕ ಪಣ್ಯಾರಗಳನ್ನೂ ನಿದ್ರೆಯಿಂದ ಭಾದಿತರಾದವರಿಗೆ ದಿಂಬು ಸುಪ್ಪತ್ತಿಗೆಗಳನ್ನೂ ಒದಗಿಸಿ ಪುಣ್ಯವನ್ನು ಗಳಿಸಿಕೊಂಡರಂತೆ. ಸಭೆಯು ಬರಖಾಸ್ತಾದಾಗ ಎದ್ದಲುಗಲಾರದವರಿಗೆ ಸ್ಟ್ರೆಚರುಗಳನ್ನು ಒದಗಿಸಿ ತಕ್ಕ ಸಿಬ್ಬಂದಿಯನ್ನೂ ಹೊಂದಿಸಿ ಶ್ರೀಮಾನ್ ಅನಾಮಧೇಯ ಅವರು ಮಾಡಿದ್ದ ಏರ್ಪಾಡು ಬಹುಸಮರ್ಪಕವಾಗಿತ್ತಂತೆ! ಈ ಮೂರು ಸಂಗತಿಗಳು ಪತ್ರಿಕೆಯ ವರದಿಯಲ್ಲಿ ಬಂದಿರಲಿಲ್ಲವಂತೆ!
ಆ ಬಳಿಕ ಕಾರ್ಯಕ್ರಮದ ವಿವರಣೆಗಳನ್ನು ವಿಸ್ತರಿಸುತ್ತಾರೆ. ಗುಪ್ತಸಂಪಾದಕಪಂಚಕದ(ಗು.ಸಂ.ಪಂ) ಪ್ರಥಮರ ಪ್ರಚಂಡವಾದ ಸುಪ್ರಾರಂಭದ ಭಾಷಣದ ಸಂಗ್ರಹ, ಗು.ಸಂ.ಪಂ.ದ ಪಂಚಮರ ಪರಮನವೀನ ಸ್ವಾಗತಗೀತೆ. ಗು.ಸಂ.ಪಂ.ದ ದ್ವಿತೀಯರ ಅದ್ವಿತೀಯಪ್ರಶಂಸಾಪದ್ಯಮಾಲಿಕೆ ಗು.ಸಂ.ಪಂ.ದ ಮಧ್ಯಮರ ಮಹಾಕ್ಷುದ್ರಾರ್ಥಶತಕಾರ್ಧದ ಪುರುಷಸರಸ್ವತಿಯ ಜಯಂತಿಯ ಶಾಸನಪದ್ಯವಲ್ಲರಿ ಇತ್ಯಾದಿಗಳೆಲ್ಲ ಇವೆ.
ದ್ವಿತೀಯರ ಪ್ರಶಂಸಾ ಪದ್ಯಗಳಲ್ಲಿ ಕೆಲವು-
ಪುರುಷಸರಸ್ವತಿಯನ್ನು ಪ್ರಶಂಸೆಗೆಯ್ಯುವ ಪದ್ಯಗಳಲ್ಲಿ ವಿವಿಧಚ್ಛಂದಸ್ಸುಗಳನ್ನು ಬಳಸಿದ್ದಾರೆ ಗು.ಸಂ.ಪಂ.ದ ದ್ವಿತೀಯರು. ಇದೊಂದು ಪ್ರತಿಪಾದದಲ್ಲೂ ಒಂದೇ ಅಕ್ಷರದ ಉಕ್ತೆ ಎಂಬ ವರ್ಗದ ನಾಗವರ್ಮ ಹೆಸರಿಡದ ವೃತ್ತವಂತೆ!
!
!
!
!
(ತಾತ್ಪರ್ಯ- ಪುರುಷಸರಸ್ವತಿ ಜಯಂತಿ ಬಗೆಗೆ ಕವಿ ತನ್ನ ಅಪರಿಮಿತವಾದ ಆನಂದವನ್ನು ಸೂಕ್ಷ್ಮವಾಗಿ ಸಂಕ್ಷೇಪವಾಗಿ ಹೀಗೆ ಸೂಚಿಸಿದ್ದಾನೆ!)
ಇನ್ನೊಂದು ಪದ್ಯ-
ಅದೇ ವರ್ಗದ ಶ್ರೀ ಎಂಬ ವೃತ್ತದಲ್ಲಿ
ನೀ
ನೇ
ನೀ
ನೈ
(ತಾತ್ಪರ್ಯ-ಪುರುಷಸರಸ್ವತಿಯು ಅಪ್ರತಿಮನಾದ ಕವಿಯೆಂಬುದು ಇಲ್ಲಿ ನಿರೂಪಿತವಾಗಿದೆ. ನೀನಗೆ ನೀನೇ ಸಾಟಿ ಎಂಬ ಮೂಲಕ ಅನನ್ವಯಾಲಂಕಾರವೂ ಇದೆ)
ಗು.ಸಂ.ಪಂ.ದ ಮಧ್ಯಮರ ಶಾಸನಪದ್ಯವಲ್ಲರಿಯ ಕೆಲವು ಪದ್ಯಗಳು-
ಸ್ವಸ್ತಿ ಶ್ರೀವರದಾಭಯ
ಹಸ್ತರ್ ಹರಿಯಜಪುರಾರಿಗಳ್ ದಯೆಗೆಯ್ಯಲ್
ಪುಸ್ತಕ ಗಗನಕ್ಕಾದಿ ಗ
ಭಸ್ತಿಯ ನೆರೆ ಪೊಗಳಿ ಪಾಡಿದಿನ್ಸ್ಕ್ರಿಪ್ಷನಿದಂ
(ಸ್ವಸ್ತಿ ಶ್ರೀವರದಾಭಯ ಹಸ್ತರ್ ಹರಿಯಜಪುರಾರಿಗಳ್ ದಯೆಗೆಯ್ಯಲ್ ಪುಸ್ತಕ ಗಗನಕ್ಕೆ ಆದಿ ಗಭಸ್ತಿಯ(ನ್ನು) ನೆರೆ ಪೊಗಳಿ ಪಾಡಿದ inscription ಇದಂ)
ಸ್ಟೋನ್ ಮೆಟಲಲ್ಲೀ ಶಾಸನ
ಪೇನಲ್ ಷೇಪಿನಲಿ ಕುಯ್ದು ಡಮ್ಮೈ ಪೇಪರ್
ಸ್ವಾನ್ಪೆನ್ನಿನ ಜೊತೆಯೊಳಿದ
ನ್ನಿನ್ಡಿಸ್ಟ್ರಕ್ಟಿಬಲು ಎಂದು ಸಪ್ಲೈ ಗೈದರ್||
(ಈ ಶಾಸನ stone metal ಅಲ್ಲ. Panel shape ಇನಲಿ ಕುಯ್ದ demmy paper. ಇದಂ swan pen ಇನ ಜೊತೆಯೊಳ್ indistructible ಉ ಎಂದು supply ಗೈದರ್)
ಕಳ್ಟು (cult)ಕಾವ್ಯದ ಮಸಿಯ ಕುಡಿಕೆಯ ಟಿಳ್ಟು (tilt) ಮಾಡುವ ಮೊದಲು ಹಾವಿನ
ಬೆಳ್ಟು (belt) ಹಾಕಿದ ಗಣಪನನು ಹಾಡುವುದು ನಮ್ಮವರ
ಫಾಳ್ಟು (fault) ಮೀರಿದರಿದನು ಸಿವಿಯರ್ ಜೋಳ್ಟು (sever jolt) ತಪ್ಪದು ಸತ್ಯ ಥಂಡರ್
ಬೋಳ್ಟು (thunder bolt) ಬಿದ್ದಂತೆಂದು ದೇರ್ಫೋ಼ರ್(therefore) ಗಣಪತಿಯ ನೆನೆವೆ||
ಡಸ್ಟಿನಲಿ(dust) ಗೋಲ್ಡ್ ಡಸ್ಟು (gold dust)ಮೌಂಟೆವರೆಸ್ಟು (Mount Everest)ಗಿರಿಗಳ ಗಡಣದಲಿ ಫಾ಼
ರೆಸ್ಟು (forest)ಬೀಸ್ಟು(beast)ಗಳಳೊಳಗೆ ಲಯನೆಂತಪ್ರತಿಮವಂತೆ (lion+ಎಂತು+ ಅಪ್ರತಿಮವು+ಅಂತೆ)
ವೇಸ್ಟು (waste)ಬರಿ ಮಾತೇಕೆಯೀ ಫೋ಼ರ್ ಮೋಸ್ಟು (foremost)ಪೊಯೆಟನು(poet) ನೆನೆಯೆ ತಾನೆ
ಕ್ಸಾಸ್ಟು (exhaust)ಕವಿಗಳ ಲಿಸ್ಟಿ(list)ನೊಳಗೊಬ್ಬಂಟಿ ನರವಾಣಿ(=ಪುರುಷಸರಸ್ವತಿ) ||
ಹೀಗೆ ೨೫ ಪದ್ಯಗಳು ಸಂಸ್ಕೃತ ಕನ್ನಡ ಇಂಗ್ಲಿಷ್ ಎಲ್ಲ ಭಾಷೆಗಳ ಶಬ್ದಗಳ ಮಿಶ್ರಣದೊಂದಿಗೆ ಬರುತ್ತವೆ. ಇಲ್ಲಿನ ಬಹುತೇಕ ಪದ್ಯಗಳಲ್ಲಿ ಇಂಗ್ಲಿಷ್ ಶಬ್ದಗಳನ್ನೇ ಪ್ರಾಸಾನುಪ್ರಾಸಕ್ಕಾಗಿ ಬಳಸಿಕೊಂಡಿರುವುದು ತುಂಬ ಸೊಗಸಾಗಿದೆ! ಅಷ್ಟೇ ಅಲ್ಲದೇ ರಚನೆಗೆ ತುಂಬ ಕಷ್ಟವಾಗಿಯೂ ಇದೆ ಎಂಬುದು ಸತ್ಯ! ಏಕೆಂದರೆ ಬಳಸಿದ ಛಂದಸ್ಸುಗಳು ಕನ್ನಡದ ಭಾಮಿನಿ ಷಟ್ಪದಿ ಕಂದಪದ್ಯಗಳು- ಅದರಲ್ಲಿ ಇಂಗ್ಲಿಷ್ ಪದವನ್ನು ಈ ಛಂದಸ್ಸುಗಳ ಗತಿಗೆ ಕಿಂಚಿತ್ತೂ ಲೋಪವಾಗದಂತೆ ಹಾಗೆ ಬಳಸಬೇಕು ಎಂದರೆ ಅವರಿಗೆ "ಬೈಲಿಂಗ್ಯುಅಲ್ ಭಾರತಿ/ಕನ್ನಡಾಂಗ್ಲೋಭಯ ಭಾಷಾಚಕ್ರವರ್ತಿ"ಎಂಬ ಬಿರುದುಗಳು ಸಾರ್ಥಕವೇ ಎನಿಸುತ್ತದೆ!
ಇದಾದ ಮೇಲೆ ಆ ಸಮ್ಮೇಳನದಲ್ಲಿ ನಡೆದ ಭಾಷಣಗಳ ಸಂಗ್ರಹವೆಲ್ಲ ಇದೆ. ಅದೆಷ್ಟು ಅಪ್ರಸ್ತುತವಾಗಿ ಭಾಷಣಕಾರರು ಮಾತನಾಡುತ್ತಾರೆ ಎಂಬುದನ್ನು ತೋರ್ಪಡಿಸುವಂತೆ ಈ ಭಾಷಣ ಮಾಲಿಕೆಯನ್ನು ಬರೆದಿದ್ದಾರೆ. ಅದರಲ್ಲಿ ಅಧ್ಯಕ್ಷರ ಭಾಷಣದ ಸಂಗ್ರಹವನ್ನು ನೋಡಿದರೆ ಸಾಕು. ಇದು ಪುರುಷಸರಸ್ವತಿಯ ಜಯಂತಿಯ ಕಾರ್ಯಕ್ರಮ.ಅಧ್ಯಕ್ಷರ ಭಾಷಣಗಳ ಶೀರ್ಷಿಕೆ- ಜಿರಳೆಗಳು ಜೇನುತುಪ್ಪ ಕುಡಿಯುವ ವಿಧಾನ! ಮೀಸೆ- ಮೀಶೆ-ಮೀಷೆ ಇವುಗಳ ಬೆಳವಣಿಗೆ!
ಅದಾದ ಮೇಲೆ ಕಾರ್ಯದರ್ಶಿಗಳ ಉಪಸಂಹಾರದ ಭಾಷಣ- ಅದಕ್ಕೆ ಟಿಪ್ಪಣಿ- "ಕಾರ್ಯದರ್ಶಿಗಳು ತಮ್ಮ ಸ್ವಂತ ವೆಚ್ಚದಿಂದ ತಮ್ಮ ಉಪಸಂಹಾರ ಭಾಷಣವನ್ನೂ ಕೃತಜ್ಞತೆಯ ಪಟ್ಟಿಯನ್ನೂ ಪ್ರತ್ಯೇಕವಾಗಿ ಅಚ್ಚು ಮಾಡಿಸಿ ಪುಕ್ಕಟೆಯಾಗಿ ಹಂಚಿರುವುದರಿಂದ ಅದನ್ನು ಇಲ್ಲಿ ಕೊಡುವ ಅವಶ್ಯಕತೆ ಕಂಡುಬರುವುದಿಲ್ಲ"
ಹೀಗೆ ಕೃತಿಯೊಂದರಲ್ಲಿ ಇಷ್ಟು ಹಾಸ್ಯದ ಹೂರಣವನ್ನು ಇರಿಸಿದ್ದಷ್ಟೇ ಅಲ್ಲದೇ ಕೊನೆಯಲ್ಲಿ ಒಂದು ಶುದ್ಧಾಶುದ್ಧಪತ್ರಿಕೆಯೂ ಇದೆ! ಅದರಲ್ಲಿ ಪಂಕ್ತಿಗಳನ್ನೂ ಪುಟಗಳನ್ನೂ ವಾಚಕರೇ ಹುಡುಕಿಕೊಳ್ಳಬೇಕು ಎಂದು ಸೂಚನೆ ಇದೆ. ಜೊತೆಗೆ ಅಶುದ್ಧಪದ ಮತ್ತು ಶುದ್ಧಪದಗಳನ್ನು ಕೊಟ್ಟಿದ್ದಾರೆ ಉದಾಹರಣೆಗೆ- ಸಮಸ್ತ-ಸೂರ್ಯಾಸ್ತ, ಅಂಬುಧಿ-೦ಬುಅಧಿ, ಕಬ್ಬು-ತಬ್ಬು, ಕರಿಯಣ್ಣ-ಕುರಿಯಣ್ಣ, ಕೈವಲ್ಯ-ವಾಲಖಿಲ್ಯ, ಕವಿಗಳು-ಕಪಿಗಳು, ಮಂಡೆ-ಮುಂಡೆ, ವಿಡಂಬ-ಮೊಡವೆ...ಇತ್ಯಾದಿ. ಇವುಗಳಲ್ಲಿ ಆಗಿನ ಕಾಲದಲ್ಲಿ ಮೊಳೆಯನ್ನು ಜೋಡಿಸಿ ಅಚ್ಚು ಮಾಡುವಾಗ ಆಗುತ್ತಿದ್ದ ಮುದ್ರಣದೋಷಗಳೂ ಇಂದಿನ ಕಾಲದಲ್ಲಿ ಟೈಪಿಂಗ್ ಮಾಡಿ ಆಗುವ ದೋಷಗಳೂ ನೆನಪಾಗಬಹುದು.
ಆ ಬಳಿಕ ಪು..ಮಿತ್ರ(ಪುರುಷಸರಸ್ವತಿಮಿತ್ರ)ನ ಅಪ****ಥಾವಲ್ಲರಿ (ಅಪ್ರಸಿದ್ಧಕವಿಕಥಾವಲ್ಲರಿ) ಎಂಬ ಮೊದಲನೆಯ ಮನುಸ್ಕೃಪ್ತುಗಳು. ಇದರಲ್ಲಿ ಆದ್ಯ ಆಲಂಕಾರಿಕ ಅಲ್ಲವಲ್ಲಭ, ಮಹಾಕವಿ ಕ್ಷುದ್ರಕ, ಮಹಮನೆ ಮುರುಕರು ಗುಠಾರಕುಲ ಪುಂಗವ ಘೇಂಡಾಕರ್ಣ ಘೇಂಡಾಕರ್ಣಕುಮಾರ, ನಯನಭಯಂಕರನಾಸಾಯುಧ, ಆಪ್ರಸಿದ್ಧ ಆಚಾರ್ಯ ಆರಂಭಶೂರ, ಪರಮಾನಂದಶಿಷ್ಯ ಸುರಚಾಪಮಿಶ್ರ, ಶ್ಮಶಾನಬ್ರಹ್ಮ ಹಾಲಾಹಲಯ್ಯ, ಹೃದಯಸಂಕೋಚಮತ್ತು ಮುಖೇಡಿ, ಎರಡನೆಯ ಶ್ಮಶಾನಕವಿ, ಅತ್ಯಪ್ರಸಿದ್ಧ ಅಜ್ಞಾತ ಪು..ಮಿತ್ರ ಎಂಬ ಅಪ್ರಸಿದ್ಧ ಕವಿಗಳ ಹಲವು ಕಥಾನಕಗಳಿವೆ. ಅದರಲ್ಲಿ ಕವಿಗಳ ಕುರಿತಾಗಿ ಇರುವ ದಂತಕಥೆಗಳ ವಿಡಂಬನೆಯಿದೆ. ಪ್ರತಿಯೊಬ್ಬ ಅಪ್ರಸಿದ್ಧಕವಿಗಳ ಬಗೆಗೆ ಕೂಡ ಕಥೆಗಳಿವೆ. ಅವರ ಸಾಧನೆಗಳು ಹೇಗೆ ಅವರು ಅಪ್ರಸಿದ್ಧರಾದರು ಎಂಬೆಲ್ಲ ಕಥಾನಕಗಳು.
ಅವುಗಳ ಕೊನೆಯಲ್ಲಿ ಒಂದೆರಡು ಪತ್ರವ್ಯವಹಾರ! ಇವುಗಳ ಸಂಪಾದಕರ ಜೊತೆ ನಿಜವಾದ ಸಂಪಾದಕರಾದ "ಜಿ.ಪಿ.ರಾಜರತ್ನಂ" ಅವರದ್ದು. ಗೋಬಿ ಮರುಭೂಮಿಯಿಂದ. ಇನ್ನೊಂದು "ನ್ಅನ್ ನ್ಅ - ಮ್ಉನ್ ನ್ಉಡ್ಇ". ಇಲ್ಲಿ ಕಾವ್ಯ ಸಂಪಾದಕರ ಜೊತೆ ಮೂಲ ಹಸ್ತಪ್ರತಿಗಳನ್ನು ಕಳುಹಿಸಿಕೊಟ್ಟವರ ಪತ್ರವ್ಯವಹಾರದ ವಿಡಂಬನೆಯನ್ನೂ ಕನ್ನಡ ಲಿಪಿಯನ್ನು ಸುಧಾರಿಸಬೇಕು ಎಂದು ಹೇಳಿದವರಿಗೆ ಉತ್ತರವಾಗಿ ಮಾಡಿದ ಅಣಕನ್ನೂ ಕಾಣಬಹುದು! ಇವುಗಳ ಜೊತೆ ಒಂದು ಕವಿ ಕಾವ್ಯ ಸೂಚಿ!ಕೊನೆಯಲ್ಲಿ ಅದಕ್ಕೊಂದು ತಪ್ಪು ಒಪ್ಪೋಲೆ- “ಇದೇ ಪುಸ್ತಕದ ೧೭೦ ನೇ ಪುಟವನ್ನು ನೋಡಿ" ಎಂದು ಅದರ ಕೆಳಗೆ ಅದಕ್ಕೆ ಶುದ್ಧಿ "೧೭೦ನ್ನು ೧೨೦ ಎಂದು ತಿದ್ದಿಕೊಳ್ಳಿ " ಎಂದು!
ಉಪಸಂಹಾರ-
ಕನ್ನಡದಲ್ಲಿ ಇಂತಹ ವಿಡಂಬವನೆಯ ಇಷ್ಟು ವಿಸ್ತಾರವಾದ ಕಾವ್ಯವೊಂದು ರಚನೆಯಾದದ್ದು ಇದೇ ಮೊದಲು ಅನಿಸುತ್ತದೆ. ಜಿ.ಪಿ ರಾಜರತ್ನಂ ಅವರ ಸಾಹಿತ್ಯದ ಅಧ್ಯಯನವೈಶಾಲ್ಯ ಹಾಗೂ ಹಾಸ್ಯಪ್ರಜ್ಞೆ ಎರಡೂ ಮೇಳಯಿಸಿದ ಕಾರಣವೇ ಇಂತಹ ಒಂದು ಕೃತಿ ರಚನೆಯಾಗಿದೆ. ಒಂದೆಡೆ ಗು.ಸಂ.ಪಂ ಅವರು ಇದನ್ನೆಲ್ಲ ಜಿ.ಪಿ ರಾಜರತ್ನಂ ಅವರು ಬರೆದದ್ದಲ್ಲ ಎಂದು ಸಾಧಿಸಲು ಅವರ "ರತ್ನನ ಪದಗಳು" "ಕಡಲೆ ಪುರಿ" ಮೊದಲಾದ ಕಾವ್ಯಗಳ ಕೆಲವು ಪದ್ಯಗಳನ್ನು ಉಲ್ಲೇಖಿಸಿ ಅಂತಹದ್ದನ್ನೆಲ್ಲ ಬರೆದವರಿಗೆ ಇಷ್ಟು ಉತ್ಕೃಷ್ಟವಾದ ಭಾಮಿನಿ ಷಟ್ಪದಿಗಳನ್ನೆಲ್ಲ ಬರೆಯಲು ಸಾಧ್ಯವಿದೆಯಾ ಎಂದು ಸಂಶಯದ ಮೂಲಕ ರಾಜರತ್ನಂ ಇದನ್ನು ಬರೆಯಲು ಸಾಧ್ಯವಿಲ್ಲ ಎಂದು ಸಾಧಿಸುತ್ತಾರೆ. ವಸ್ತುತಃ ಅದನ್ನೂ ಇವರೇ ಬರೆದಿದ್ದಾರಷ್ಟೇ! ಹೀಗಾಗಿ ಅವರದು ತನ್ನನ್ನೇ ತಾನು ಅಣಕು ಮಾಡಿಕೊಳ್ಳುವ ಮಟ್ಟಿಗೆ ಹಾಸ್ಯಪ್ರಜ್ಞೆ!
ಕೊನೆಯಲ್ಲಿ ಕಾವ್ಯದ ಉದ್ದೇಶವನ್ನು ಹೇಳುವ ಪುರುಷಸರಸ್ವತಿಯದೇ ಕೆಲವು ಸಾಲುಗಳಿಂದ ಲೇಖನವನ್ನು ಮುಗಿಸಬಹುದು.
ಸೋಗಿನಲಿ ಸಾಹಿತ್ಯಜೀವನದೀಗಳಿನ ವಿಕೃತಿಗಳನತಿಗಳ
ಲಾಗ ಹಾಕಿಸುವೀ ಕೃತಿಯು..... ಎಂದು ಸಾಹಿತ್ಯದ ಹೆಸರಿನಲ್ಲಿ ನಡೆಯುತ್ತಿರುವ ವಿಕೃತಿಗಳನ್ನು ವಿಡಂಬಿಸುವ ಕೆಲಸವನ್ನು ಈ ಕೃತಿಯು ಮಾಡುತ್ತದೆ ಎಂದು ಹೇಳಿದ್ದಾರೆ.
ಬಾಯ ನುಡಿಗಳ ಕೇಳಿ ಕಿವಿಯೊಳಗಾಯೆನುತ ಪರಿಣಮಿಸಿ ಹೋಹ ವಿ
ಡಾಯವಲ್ಲಿದು ಪಂಕ್ತಿ ಪಂಕ್ತಿಯ ಹಿಂದೆ ನಡುನಡುವೆ
ಕಾಯುತಿಹ ಕುಟುಕುಗಳ ನಗುವಿನುಪಾಯದುರು ಮೊಟಕುಗಳ ಸೋರುವ
ಗಾಯಕುಪ್ಪಿನ ಚಿಟಿಕೆಗಳ ತಿಳಿಯದೆಯೆ ಕಣ್ಮುಚ್ಚಿ||
ಬರಿಯ ಮಾತನ್ನು ಕೇಳಿ ಕಿವಿಯಲ್ಲಿ ಆಹಾ ಎಂದು ಪರಿಣಾಮವನ್ನು ಮಾಡಿ ಹೋಗುವ ಕೃತಿ ಇದಲ್ಲ! ಕಾಯುತ್ತಿರುವ ಕುಟುಕುಗಳಿನ, ನಗುವಿನ ಉಪಾಯದ ಮೊಟಕುಗಳ, ಸೋರುವ ಗಾಯಕೆ ಉಪ್ಪಿನ ಚಿಟಿಕೆಯಂತೆ ಈ ಕೃತಿ ಇದೆ!
ಕುರಿಗಳೋಪಾದಿಯಲಿ ಕಬ್ಬಿನ ಹಿರಿಗಣಲೆಯನು ಮೇದಕಟ ಮೆಲು
ಕಿರಿವುತಲ್ಪಸುಖಕ್ಕೆ ಸೋಲದೆ ಕಬ್ಬಿನೊಳು ರಸವ
ನೆರೆ ಸವಿವ ಗಜದಂತೆ ಚುಚ್ಚಿನ ತೆರನ ತಿಳಿದೆಚ್ಚರಲುಬೇಕೆಂ
ದರಿತವರ ಕೈಯೆಡೆಯ ಮಾಡಿದೆನೀ ವಿಡಂಬನವ
ಕಬ್ಬಿನ ಮೇಲಿನ ಹಿರಿಗಣಲೆಯನ್ನು ಕುರಿ ತಿಂದು ಮೆಲುಕು ಹಾಕುವಂತೆ ಅಲ್ಪಸುಖಕ್ಕೆ ಸೋಲದೆ ಕಬ್ಬಿನ ರಸವನ್ನೇ ಸವಿಯುವ ಆನೆಯಂತಿರಬೇಕು ಎಂದು ಸೂಚಿಸುತ್ತಾರೆ.
ಓದುವವರೋದುವರು ಸಹಿಸದೆ ಸೀದು ಸಿಡಿಮಿಡಿಗೊಂಡು ನಡುವಣ
ಬೀದಿಯಲಿ ಬೈದಿಡುವವರು ಬೈದಾಡುವರು ಬಿಡೆಲಾ.....
ಹಾಗೆಯೇ ಇದನ್ನು ಓದದೇ ಬೈದಾಡುವವರ ಬಗ್ಗೆ ದಿವ್ಯನಿರ್ಲಕ್ಷ್ಯವನ್ನು ತೋರಿಸುವಂತೆ ಹೀಗೆ ಹೇಳುತ್ತಾರೆ. ಕವಿ ಕಾವ್ಯವನ್ನು ಬರೆಯುತ್ತಾನಷ್ಟೆ1ಅದನ್ನು ಓದುವ ಜನರು ಓದಿ ಆಸ್ವಾದಿಸುತ್ತಾರೆ! ಬಯ್ಯುವವರು ಬಯ್ಯುತ್ತಾರೆ! ಅದರಿಂದ ಕವಿಗೇನೂ ತೊಂದರೆ ಇಲ್ಲವಲ್ಲ! ಕುಮಾರವ್ಯಾಸನೂ ಹೇಳಿದ್ದಾನಷ್ಟೆ -"ಚೋರ ನಿಂದಿಸಿ ಶಶಿಯ ಬೈದಡೆ, ಕ್ಷೀರವನು ಕ್ಷಯರೋಗಿ ಹಳಿದರೆ, ವಾರಣಾಸಿಯ ಹೆಳವ ನಿಂದಿಸಿ ನಕ್ಕರೇನಹುದು!”

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ