ಪದಾರ್ಥಚಿಂತಾಮಣಿಯ ಈ ಸಾಲಿನ ಪದಸಂಸ್ಮರಣ ಸಂಚಿಕೆಯಲ್ಲಿ ಪ್ರಕಟವಾದ ಲೇಖನ-
ಕನ್ನಡದಲ್ಲಿ ಗದ್ಯಕೃತಿಯಾದ ಶಿವಕೋಟ್ಯಾಚಾರ್ಯನ “ವಡ್ಡಾರಾಧನೆ” (ಸುಮಾರು ಕ್ರಿ.ಶ ೯೨೦) ಹಾಗೂ ಕಾವ್ಯಲಕ್ಷಣವನ್ನು ವಿವರಿಸುವ ಶ್ರೀವಿಜಯನ “ಕವಿರಾಜಮಾರ್ಗಂ” (ಸುಮಾರು ಕ್ರಿಶ ೮೫೦) ಮೊದಲಾದ ಕೃತಿಗಳು ಲಭ್ಯವಿದ್ದರೂ ಪಂಪನ “ವಿಕ್ರಮಾರ್ಜುನವಿಜಯಂ” ಹಾಗೂ “ಆದಿಪುರಾಣಂ” ಕಾವ್ಯಗಳನ್ನೇ ಆದಿಮಕಾವ್ಯಗಳೆಂದು ಪರಿಗಣಿಸಿ ಪಂಪನನ್ನು ಆದಿಕವಿ ಎಂದು ಕರೆದಿದ್ದಾರೆಂಬುದು ಸರ್ವವಿದಿತ. ಪಂಪನಿಗಿಂತ ಪೂರ್ವದಲ್ಲಿ ಇದ್ದ ಹಲವು ಕವಿಗಳ ಉಲ್ಲೇಖ ಸಿಕ್ಕರೂ ಅವರ ಕಾವ್ಯಗಳು ಲಭ್ಯವಿಲ್ಲದ ಕಾರಣ ಅವರ ಕಾವ್ಯದ ಬಗೆಗಾಗಲೀ ಶೈಲಿ-ವಸ್ತುಗಳ ಬಗೆಗಾಗಲೀ ಯಾವ ಮಾಹಿತಿಯೂ ಸಿಗುವುದಿಲ್ಲ. ಹೀಗೆ ಪಂಪನಿಂದ ಮೊದಲಾಗಿ ಪೊನ್ನ, ನಾಗವರ್ಮ, ರನ್ನ, ಚಂದ್ರರಾಜ, ನಯಸೇನ, ನೇಮಿಚಂದ್ರ, ಹರಿಹರ, ರುದ್ರಭಟ್ಟ, ಷಡಕ್ಷರಿ ಮೊದಲಾದ ಕವಿಗಳಿಂದ ರಚಿತವಾದ ಕೃತಿಗಳನ್ನು ಒಳಗೊಂಡು ಇತ್ತೀಚಿನ ಬಸವಪ್ಪಶಾಸ್ತ್ರಿಗಳಿಂದ ರಚಿತವಾಗಿರುವವರೆಗೆ ಅಸಂಖ್ಯ ಚಂಪೂ ಕಾವ್ಯಗಳು ಸಿಗುತ್ತವೆ. ಚಂಪೂ ಎಂದರೆ ಗದ್ಯ-ಪದ್ಯಗಳ ಮಿಶ್ರಣವಿರುವಂತಹ ಕಾವ್ಯ. ಅಲ್ಲದೇ ಬರಿಯ ಪದ್ಯಕಾವ್ಯಗಳನ್ನೂ ಷಟ್ಪದಿಕಾರರಾದ ರಾಘವ,ಕುಮಾರವ್ಯಾಸ, ಲಕ್ಷ್ಮೀಶ ಚಾಮರಸ, ಕುಮಾರವಾಲ್ಮೀಕಿ ಮೊದಲಾದವರ ಅನೇಕರ ಕೃತಿಗಳಿಂದ ಕಾಣಬಹುದು. ಅಲ್ಲದೇ ಒಂದೆರಡು ಸೂಚನಾಪದ್ಯಗಳನ್ನು(ಗಾಹೆ) ಬಿಟ್ಟರೆ ವಡ್ಡಾರಾಧನೆಯೇ ಮೊದಲ ಗದ್ಯಕೃತಿಯಾಗಿ ಉಪಲಬ್ಧವಿದೆ. ಅಲ್ಲಿಂದ ಕೆಂಪುನಾರಾಯಣನ ಕೃತಿ ಕೂಡ ಗದ್ಯಕಾವ್ಯಕ್ಕೆ ಉದಾಹರಣೆಯಾಗಿ ಸಿಗುತ್ತದೆ.
ಈ ಎಲ್ಲ ಉಪಲಬ್ಧ ಕಾವ್ಯಗಳ ಅಂಕಿ-ಅಂಶಗಳನ್ನು ಗಮನಿಸಿದರೆ ಚಂಪೂಕಾವ್ಯಗಳ ಸಂಖ್ಯೆಯೇ ಅಧಿಕವಾಗಿದೆ ಎಂದು ತಿಳಿಯುತ್ತದೆ. ಚಂಪುವಿನಲ್ಲಿ ಇರುವ ಗದ್ಯ-ಪದ್ಯ ಮಿಶ್ರಣ ಸ್ವಾತಂತ್ರ್ಯದ ಕಾರಣವೋ ಏನೋ ಕವಿಗಳ ಮನಸ್ಸು ಆ ಕಡೆಗೆ ಹೆಚ್ಚು ತುಡಿದಿದೆ. ಇಂತಹ ಎಲ್ಲಾ ಚಂಪೂ ಕಾವ್ಯಗಳೂ ಹಲವು ಆಶ್ವಾಸಗಳಲ್ಲಿ ವಿಭಕ್ತವಾಗಿ ಸಾಂಪ್ರದಾಯಿಕವಾದ ಶೈಲಿಯಿಂದ ಕನ್ನಡಸಂಸ್ಕೃತಚ್ಛಂದೋವೈವಿಧ್ಯದಿಂದ ಕೂಡಿಕೊಂಡು ಬಿಗಿಯಾದ ಬಂಧಗಳಲ್ಲಿ ಅಳವಟ್ಟು, ಅಷ್ಟಾದಶವರ್ಣನೆಗಳೇ ಮೊದಲಾಗಿ ಹಲವಾರು ಲಾಕ್ಷಣಿಕರು ವಿಧಿಸಿರುವ ಲಕ್ಷಣಗಳನ್ನು ಸರಿದೂಗಿಸಿಕೊಂಡಿವೆ. ಇದರಲ್ಲಿ ಒಂದು ಹೊಸದಾದ ಪ್ರಯೋಗವನ್ನು ಮಾಡಲು ಹೊರಟಿರುವನಂತೆ ಕಾಣುವ ಕವಿಯೆಂದರೆ ಆಂಡಯ್ಯ. ಸರಳವಾದ ಮನ್ಮಥ ಶಿವನನ್ನು ಬಾಣಬಿಟ್ಟು ಸೋಲಿಸಲು ಹೋಗುವ ಪ್ರಸಂಗವನ್ನು ವರ್ಣಿಸಿ ಈತ ಬರೆದ ಕಾವ್ಯವೇ “ಕಬ್ಬಿಗರ ಕಾವಂ” ಅಥವಾ “ಕಾವನ ಗೆಲ್ಲಂ”.
ಕವಿಯ ಕಾಲ-ದೇಶ
ಕವಿ ಆಂಡಯ್ಯ ಪೂರ್ವಕವಿಪದ್ಧತಿಯಂತೆ ಪೂರ್ವಕವಿಸ್ತುತಿಯನ್ನು ಮಾಡುತ್ತಾ-
“ಎನ್ನೀ ಕಬ್ಬದೊಳೆಂದುಂ | ಸನ್ನಿದಮಾಗಿರ್ಕೆ ಕಣ್ಣಮಯ್ಯನ ಕಡುಜಾಣ್ |
ರನ್ನನ ಮೆಯ್ಸಿರಿ ಗಜಗನ | ಬಿನ್ನಣಮಗ್ಗಳನ ಕಾಣ್ಕೆ ಜನ್ನಿಗನ ಜಸಂ||೪||
ಎಂದು ಹೇಳಿದ್ದನ್ನು ಅವಲೋಕಿಸಿ ಜನ್ನನಿಗಿಂತ ಈಚಿನ ಕಾಲದವನೆಂದು ಸ್ಪಷ್ಟವಾಗುತ್ತದೆ. ಹಾಗಾಗಿ ಹದಿಮೂರನೇ ಶತಮಾನದಲ್ಲಿದ್ದ ಎಂಬುದೂ ಸ್ಪಷ್ಟವಾಗುತ್ತದೆ. ಹಲವು ವಿದ್ವಾಂಸರ ಸುಮಾರು ಕ್ರಿ.ಶ ೧೨೨೫ ರಲ್ಲಿ ಇದ್ದಿರಬೇಕು(೧) ಎಂದರೆ ಇನ್ನು ಕೆಲವರು ಕದಂಬ ಕಾಮದೇವನನ್ನು ಆಶ್ರಯಿಸಿದ್ದನೆಂಬ ಕಾರಣ ಅವನ ಕಾಲವನ್ನು ಅನ್ವಯಿಸಿ ಕ್ರಿ.ಶ ೧೧೮೦ ರಿಂದ ೧೨೧೭ರ ಅವಧಿಯಲ್ಲಿ ಇದ್ದಿರಬೇಕೆಂದು ಹೇಳುತ್ತಾರೆ.(೨) ಒಟ್ಟಾರೆಯಾಗಿ ಆಂಡಯ್ಯನು ಹದಿಮೂರನೆಯ ಶತಮಾನದವನು ಎಂಬುದನ್ನು ನಿಶ್ಚಯಿಸಿಕೊಳ್ಳಬಹುದು.
ಇನ್ನು ಕವಿ “ಕನ್ನಡಮೆನಿಪ್ಪಾನಾಡು” ಎಂದೇ ಹೇಳಿರುವ ಕಾರಣ ಅವನದು ಯಾವ ಊರು ಎಂದು ಸ್ಪಷ್ಟವಾಗದಿದ್ದರೂ ಕೆಲವರು ಕದಂಬ ರಾಜಾಶ್ರಿತನಾಗಿದ್ದ ಕಾರಣ “ಬನವಾಸಿ” ಆಗಿರಬೇಕೆಂದು ಊಹಿಸುತ್ತಾರೆ.(೨) ಅಲ್ಲದೇ “ಪೂವಿನ ಪೊೞಲೆಂಬುದೊಂದು ಪೆಸರೆಸೆದಿರ್ಕುಂ||೨೫||” ಎಂದು ಒಂದು ಪದ್ಯದಲ್ಲಿ “ಹೂವಿನ ಹೊಳಲು” ಎಂಬ ಹೆಸರನ್ನು ಉಲ್ಲೇಖಿಸಿರುವ ಕಾರಣ ಅಲ್ಲಿ ಬೇರೆಯದೇ ಆದ ಒಂದು ಊಹೆಗೂ ಅವಕಾಶವಿದೆ.
ಕಥಾವಸ್ತು
ಪೌರಾಣಿಕ ಕಥಾನಕಗಳಲ್ಲಿ ಬಹುಪ್ರಸಿದ್ಧವಾದ ಶಿವನನ್ನು ಮನ್ಮಥ ತನ್ನ ಬಾಣಗಳಿಂದ ಗೆಲ್ಲಲು ಹೋಗುವ ಪ್ರಸಂಗವನ್ನೇ ಕವಿ ಆಯ್ದುಕೊಂಡಿದ್ದರೂ ಹಲವು ಬದಲಾವಣೆಗಳನ್ನು ಯಥಾಚಿತ್ತವಾಗಿ ಮಾಡಿಕೊಂಡಿದ್ದಾನೆ. ಮನ್ಮಥನ ಕಡೆಯವನಾದ ಚಂದ್ರನನ್ನು ಶಿವನು ಅಪಹರಿಸಿಕೊಂಡು ಹೋಗಿದ್ದಾನೆ ಎಂದು ತಿಳಿದು ತನ್ನ ಪರಿವಾರ ಸಹಿತನಾಗಿ ಅವನ ಮೇಲೆ ದಂಡೆತ್ತಿ ಹೋಗಿ ಅವನನ್ನು ಸೋಲಿಸಿ ಶಿವನನ್ನು ಅರೆವೆಣ್ಣಾಗಿ ಮಾಡುತ್ತಾನೆ ಎಂಬುದು ಕಥಾಸಾರ. ಆದರೆ ವಸ್ತುತಃ ಪ್ರಸಿದ್ಧವಿದ್ದದ್ದು ಮನ್ಮಥನನ್ನು ಶಿವ ತನ್ನ ನೇತ್ರಾಗ್ನಿಯಿಂದ ಸುಟ್ಟು, ಕಾಲದಲ್ಲಿ ಪಾರ್ವತಿಯ ತಪಸ್ಸಿಗೆ ಮೆಚ್ಚಿ ಅವಳನ್ನು ವರಿಸಿದನೆಂಬುದು. ಅಲ್ಲದೇ ರತಿಯ ವಿಲಾಪದಿಂದಾಗಿ ಕಾಮನಿಗೆ ಅನಂಗತ್ವವನ್ನು ಕೊಟ್ಟನು ಎಂಬುದು ಮೂಲ ಕಥೆ. ಆಂಡಯ್ಯನ ಈ ಬದಲಾವಣೆಗೆ ಮೂಲ ಯಾವುದೆಂದು ತಿಳಿಯದಿದ್ದರೂ, ಅದು ಕವಿಕಲ್ಪಿತಮಾತ್ರವಲ್ಲ- ಕವಿಗೆ ಆಶ್ರಯವನ್ನಿತ್ತ ಕದಂಬ ಕಾಮದೇವನು “ಯುದ್ಧರಂಗತ್ರಿಣೇತ್ರ” ಎಂಬ ಬಿರುದನ್ನು ಹೊಂದಿದ್ದ ಹೊಯ್ಸಳರಾಜ ವೀರಬಲ್ಲಾಳನನ್ನು ಗೆದ್ದ ರಾಜಕೀಯಕಥಾನಕ ಇರಬಹುದು ಎಂದು ಇತಿಹಾಸಕಾರರೂ,ಸಂಶೋಧನಕಾರರೂ ಅಭಿಪ್ರಾಯ ಪಡುತ್ತಾರೆ. ಅದಕ್ಕೆ ಪೂರಕವಾಗಿ ರುದ್ರಭಟ್ಟನ “ಅರಿಕಾಮಧ್ವಂಸಿ……..ಯುದ್ಧರಂಗತ್ರಿಣೇತ್ರಂ||೩||” ಎಂಬ ಪದ್ಯವೂ ವೀರಬಲ್ಲಾಳ ಹಾಗೂ ಕದಂಬ ಕಾಮದೇವರ ನಡುವೆ ವೈರವಿತ್ತೆಂದು ಪುಷ್ಟೀಕರಿಸುತ್ತದೆ.(೩) ಆದರೆ ಕಥಾವಸ್ತುವಿನಲ್ಲಿ ಬದಲಾವಣೆ ಮಾಡಿಕೊಂಡ ಬಳಿಕ ಅಂತ್ಯದಲ್ಲಿ ಶಿವನು ಅರೆವೆಣ್ಣಾದರೂ ಕಾಮನಿಗೆ “ಮುಂದೆ ನಿಂತು ಹಿರಿಯರು ಎಂಬುದನ್ನು ಯೋಚಿಸದೆ ಸೊಕ್ಕಿನಿಂದ ನನ್ನ ಜೊತೆ ಕಾದಾಡಿದೆ. ಹಾಗಾಗಿ ನಿನ್ನ ಪ್ರಿಯೆಯನ್ನು ಸೇರದೆ ಬೇರೆ ಎಲ್ಲಿಯಾದರೂ ನೀನು ಕಾಮ ಎಂಬುದನ್ನು ಮರೆತು ಇರು” ಎಂದು ಶಾಪ ಕೊಡುತ್ತಾನೆ. ಇಲ್ಲಿ ಸೋತವನು ಶಾಪ ಕೊಟ್ಟರೆ ಅದು ಸಫಲವಾಗುತ್ತದೆಯೇ- ಅಥವಾ ಗೆದ್ದವನು ಸೋತವನ ಶಾಪವನ್ನು ಅಂಗೀಕರಿಸುತ್ತಾನೆಯೇ ಎಂದೆಲ್ಲ ಅವಲೋಕಿಸಿದಾಗ ಹಾಸ್ಯಾಸ್ಪದವೆನಿಸಿಬಿಡುತ್ತದೆ! ಅಲ್ಲದೇ ಬತ್ತಲೆ ಕುಳಿತ ಜೈನಸಂನ್ಯಾಸಿಯೊಬ್ಬನನ್ನು ಕಂಡು ಹೆದರಿ ಸುಮ್ಮನೆ ಬರುವ ಮನ್ಮಥ ಶಿವನನ್ನು ಸೋಲಿಸುತ್ತಾನೆ ಎಂಬುದನ್ನು ಚಿತ್ರಿಸಿರುವುದು ಕವಿ ಜೈನಪಾರಮ್ಯವನ್ನು ಹೇಳಬೇಕೆಂಬ ಸ್ವಮತರತಿಯಿಂದ ಕೂಡಿರುವುದನ್ನು ಕಾಣಬಹುದು. ಹೀಗೆ ಕಥೆ ಮೂಲನಿಷ್ಠವಾಗಿರದಿದ್ದರೂ ನವೀನಸೃಷ್ಟಿಯಾಗಿ ಸಮಕಾಲೀನ-ರಾಜಕೀಯಚಿತ್ರಣವನ್ನು ಕೊಡುವ ಉದ್ದೇಶವಿದ್ದಂತೆ ಕಂಡು ನಿಶ್ಚಿತವಾದ ಗತಿಯಿಲ್ಲದೇ ಹೊಯ್ದಾಡುವಂತಿದ್ದರೂ ಅದರಲ್ಲಿನ ದೇಶೀಶಬ್ದಪ್ರಯೋಗ ಮೊದಲಾದ ಹಲವು ವೈವಿಧ್ಯಗಳಿಂದ ಇದು ಒಂದು ವಿಶಿಷ್ಟತೆ ಇರುವ ಕಾವ್ಯವಾಗಿದೆ.
ಶೈಲಿ-
ಚಂಪೂ ಶೈಲಿಯದೇ ಕಾವ್ಯವಾದರೂ ಅಧ್ಯಾಯ-ಆಶ್ವಾಸಗಳೆಂಬ ಯಾವುದೇ ವಿಭಾಗಗಳಿಲ್ಲದೇ ೨೭೨ ಪದ್ಯಗಳಿಂದ ಹಾಗೂ ಅದಕ್ಕೆ ಯುಕ್ತವಾದ ಗದ್ಯಖಂಡಗಳಿಂದ ಒಂದು ಖಂಡಕಾವ್ಯದಂತಿದೆ (ಸಣ್ಣದಾದ ಕಾವ್ಯ). ಕವಿಯೇ ಹೇಳಿಕೊಂಡಂತೆ “ಸೊಗಯಿಪ ಸಕ್ಕದಂ ಬೆರೆಸಿದಲ್ಲದೆ ಕನ್ನಡದಲ್ಲಿ ಕಬ್ಬಮಂ ಬಗೆಗೊಳೆ ಪೇೞಲಾಱರಿನಿತುಂ………||೧೫||” “ಎಂದು ತಮತಮಗೆ ಬಲ್ಲವ | ರೆಂದೊಡೆ ನಾನವರ ಬಯಕೆಯ ಸಲಿಸುವೆನಿ | ನ್ನೆಂದಚ್ಚಗನ್ನಡಂ ಬಿಗಿ | ವೊಂದಿರೆ ಕಬ್ಬಿಗರ ಕಾವನೊಲವಿಂದೊರೆದೆಂ||೧೬|| ಎಂದು “ಹಿಂದಿನ ಕವಿಗಳಿಗೆ ಯಾರಿಗೂ ಸಂಸ್ಕೃತವನ್ನು ಬೆರೆಸದೆ ಕನ್ನಡದಲ್ಲಿ ಕಾವ್ಯವನ್ನು ಹೇಳಲು ಸಾಧ್ಯವಾಗಲಿಲ್ಲ. ಈ ಕವಿಗೆ ಇದು ಮಾತನಾಡಿದಷ್ಟು ಸುಲಭದಲ್ಲಿ ಬಲ್ಮೆ ಸೇರಿಕೊಂಡಿದೆಯಲ್ಲದೇ ಬೇರೆಯವರಲ್ಲಿ ಸಾಧ್ಯವಿಲ್ಲ” ಎಂದು ತಮ್ಮ ತಮ್ಮಲ್ಲಿ ಬಲ್ಲವರು ಹೇಳಿಕೊಂಡಾಗ ನಾನು ಅವರ ಬಯಕೆಯನ್ನು ಸಲ್ಲಿಸುವೆ ಎಂದು ಅಚ್ಚಗನ್ನಡದ ಬಿಗಿಯಲ್ಲಿ ಕವಿಗಳ ಕಾಮನ ಒಲವಿಂದ ಕಾವ್ಯವನ್ನು ಹೇಳುವೆ” ಎಂದು ಪ್ರಾರಂಭಿಸುತ್ತಾನೆ. ಹಾಗಾಗಿ ಈ ಕವಿಯಲ್ಲಿ ನಮಗೆ ಅಚ್ಚಗನ್ನಡ ಪದಪ್ರಯೋಗಗಳೇ ಸಿಗುತ್ತವೆಯಾದರೂ ಒಂದೆರಡು ಕಡೆ ಕಣ್ದಪ್ಪಿನಿಂದ ಸಂಸ್ಕೃತಶಬ್ದಗಳು ನುಸುಳಿಕೊಂಡಿವೆ. ಉದಾಹರಣೆಗೆ ಅವನ ಈ ಅಚ್ಚಗನ್ನಡದಲ್ಲಿ ಹೇಳುವೆ ಎಂಬ ಪ್ರತಿಜ್ಞೆಯನ್ನು ಮಾಡಿದ ನಂತರದ ಗದ್ಯಖಂಡದಲ್ಲಿಯೇ “ಬನದೊಳೆಡೆಯಾಡುವ ಸಖಿಯರ” ಎಂದು ಬರೆಯುತ್ತಾನೆ. ಅಲ್ಲಿ “ಸಖಿ” ಶಬ್ದದ ಬದಲು “ಕೆಳದಿಯರ್” ಅಥವಾ “ಪೆಣ್ಗಳ್” “ಕೂರ್ತರ್” “ಓಪರ್” ಇತ್ಯಾದಿ ಶಬ್ದಗಳನ್ನು ಬಳಸಿ ಮುಂದುವರೆಯಬಹುದಿತ್ತು. ಹಾಗೆಯೇ ೩೭ನೇ ಪದ್ಯದ ನಂತರದಲ್ಲಿ “ಅವಸರಮಂ” ಎಂದು(ಪೊಳ್ತಂ ಎಂದು ಬಳಸಬಹುದಿತ್ತು), ೧೧೪ನೆಯ ಪದ್ಯದ ನಂತರದಲ್ಲಿ “ಶಿವ” (“ಸಿವ’ ಎಂದು ಬಳಸಬಹುದಿತ್ತು) ಎಂದು, ಹೀಗೆ ಕೆಲವು ಕಡೆ ಸಂಸ್ಕೃತ ಶಬ್ದಗಳು ಸಿಗುತ್ತವೆ. ಕವಿಯ ದೋಷವನ್ನೇ ಹುಡುಕಬೇಕೆಂದು ಇದನ್ನು ಪ್ರಸ್ತಾಪಿಸಿದ್ದಲ್ಲವಾದರೂ ಅವನಾಗಿಯೇ ಹಾಕಿಕೊಂಡ ನಿಯಮ- “ಅಚ್ಚಗನ್ನಡದ ಶಬ್ದವನ್ನು ಬಳಸುತ್ತೇನೆ” ಎಂಬುದು. ಹಾಗಾಗಿ ಅನಿವಾರ್ಯವಾಗಿ ಇವು ಕಣ್ಣಿಗೆ ಕಾಣುತ್ತವೆ. ಬಿಳಿಯ ಹಾಳೆಯೊಂದರಲ್ಲಿ ಹೇಗೆ ಸಣ್ಣದಾಗಿದ್ದರೂ ಕಪ್ಪು ಚುಕ್ಕೆಯೊಂದು ಎದ್ದು ಕಾಣುವಂತೆ ಎನ್ನಬಹುದು.
ಅಲ್ಲದೇ ಕವಿಗೆ ಸಂಸ್ಕೃತಶಬ್ದಗಳ ಮೇಲಿದ್ದ ರಿಪುತ್ವ ಬೇರೆ ಮೂಲದ ಶಬ್ದಗಳ ಮೇಲೆ ಇದ್ದಂತಿಲ್ಲ. ಉದಾ- “ತೇಜ್” ವೇಗ ಎಂಬರ್ಥದ ಶಬ್ದದಿಂದ “ತೇಜಿ” ವೇಗವಾಗಿ ಹೋಗುವುದು- ಕುದುರೆ ಎಂಬರ್ಥದಲ್ಲಿ ಬಳಕೆಯಲ್ಲಿದೆ. ಇದರ ಮೂಲವನ್ನು ಅವಲೋಕಿಸಿದರೆ ಪಾರಸಿಯೋ ಅಥವಾ ಇನ್ನು ಯಾವುದೋ ಎಂದು ಗೊತ್ತಾಗುತ್ತದೆ. ಅವನ ಕಾಲಕ್ಕಾಗಲೇ ಈ ಶಬ್ದಗಳೆಲ್ಲ ಬಳಕೆಯಲ್ಲಿ ಬಂದಿದ್ದ ಕಾರಣ ಕನ್ನಡದ್ದೆಂಬಂತೆ ಬಳಸುತ್ತಾನೆ.
ಗುಣ-ದೋಷವಿಮರ್ಶನ-
ಇನ್ನು ಕಾವ್ಯದ ಗುಣದೋಷಗಳನ್ನು ಆಲಂಕಾರಿಕರ ಮತದಂತೆ ವಿಮರ್ಶಿಸಲು ಹೊರಟರೆ ಸುದೀರ್ಘವಾಗುವ ಕಾರಣ ಅವುಗಳಲ್ಲಿ ಕೆಲವು ಅಂಶಗಳನ್ನು ಮಾತ್ರ ಇಲ್ಲಿ ಗಮನಿಸಬಹುದು.
ಮುಖ್ಯವಾಗಿ ಕಾವ್ಯವೊಂದನ್ನು ರಸ-ಧ್ವನಿ-ಔಚಿತ್ಯ ಇವುಗಳ ಮಾನದಿಂದ ಅಳೆಯಲಾಗುತ್ತದೆ. ಕಾವ್ಯದಲ್ಲಿ ಮುಖ್ಯವಾಗಿ ನಿರೂಪಿತವಾದ ರಸ- ಅದು ಎಷ್ಟರ ಮಟ್ಟಿಗೆ ಸಿದ್ಧವಾಗಿದೆ- ಎಂಬುದು ಒಂದು ಕಾವ್ಯದ ಗುಣವನ್ನು ತೋರಿಸುತ್ತದೆ. ಹಾಗೆಯೇ ಧ್ವನಿಯಲ್ಲಿ ಹಲವು ಪ್ರಕಾರಗಳಿದ್ದರೂ ಪ್ರಸ್ತುತದಲ್ಲಿ ಪ್ರಬಂಧಧ್ವನಿಯೊಂದನ್ನು ಗಮನಿಸಿದರೆ ಸಾಕೆನಿಸುತ್ತದೆ. ಪ್ರಬಂಧಧ್ವನಿ ಎಂದರೆ ಒಟ್ಟಂದದಲ್ಲಿ ಕಾವ್ಯವು ಏನನ್ನು ಧ್ವನಿಸಲು ಹೊರಟಿದೆ ಎಂದು. ಇದು ಕೂಡ ಕಾವ್ಯದ ಸಾಫಲ್ಯವನ್ನು ಪ್ರತಿಬಿಂಬಿಸುತ್ತದೆ. ಇನ್ನು ಔಚಿತ್ಯವಂತೂ ಇವುಗಳೆಲ್ಲವುಗಳಲ್ಲಿ ಮುಖ್ಯವಾದದ್ದು. ಕಾವ್ಯಕ್ಕೆ ಔಚಿತ್ಯವಿದ್ದರೆ ಮಾತ್ರ ಅದು ನಿಲ್ಲುತ್ತದೆ ಎಂಬುದು ಸರ್ವವಿದಿತ. ಇವೆಲ್ಲವೂ ಪೂರ್ಣ ಕಾವ್ಯಕ್ಕಷ್ಟೇ ಅಲ್ಲದೇ ಪ್ರತಿ ಮುಕ್ತಕಕ್ಕೂ ಅನ್ವಿತವಾಗುತ್ತದೆ.
ಈ “ಕಬ್ಬಿಗರ ಕಾವಂ” ಕಾವ್ಯದಲ್ಲಿ ರಸವನ್ನು ಗಮನಿಸುವುದಾದರೆ- ಕಾಮನ ಜಯವಾಗುವುದೇ ಮುಖ್ಯ ಉದ್ದೇಶವಾದ ಕಾರಣ ವೀರರಸ ಪ್ರಧಾನವೆನ್ನಬಹುದು. ಆದರೆ ಇಲ್ಲಿ ಯುದ್ಧದ ಪೂರ್ವರಂಗದಲ್ಲಿ ಕೂಡ ಬರುವಂತಹ ಅತಿಯಾದ ವಸಂತದ ವರ್ಣನೆಗಳು ಯಥೇಷ್ಟವಾಗಿ ಶೃಂಗಾರಕ್ಕೆ ಉದ್ದೀಪನವಿಭಾವಗಳಾಗುತ್ತವೆ. ತದನಂತರದಲ್ಲಿ ವಿಸ್ತರಿಸುವ ವೀರರಸಪೋಷಕವಾದ ಯುದ್ಧದ ಸನ್ನಿವೇಶಗಳು ಅಲ್ಲಿ ಬಡವಾಗಿಬಿಡುತ್ತವೆ. ಹಾಗಾಗಿ ಕಾವ್ಯಧ್ವನಿ ದುರ್ಬಲವಾಗುತ್ತದೆ. ಕಾಮ ಶಿವನನ್ನು ಗೆದ್ದ ಸಂದರ್ಭದಲ್ಲಿ ಕೂಡ ಶಿವನ ಶಾಪೋಕ್ತಿಗಳು ಪ್ರವೇಶಿಸಿ ನಾಯಕನ ಬಲ್ಮೆಯನ್ನು ಕುಗ್ಗಿಸುತ್ತವೆ. ಇಂತಹ ಹಲವು ಅನೌಚಿತ್ಯಗಳೂ ಸಹ ಅಲ್ಲಲ್ಲಿ ಎಡಯಾಗಿ ಬರುತ್ತವೆ. ಕೆಲವೊಂದು ಸಂದರ್ಭಗಳಲ್ಲಿ ಕವಿಯ ವಾಕ್ಯ ವಕ್ರತೆಯಿಲ್ಲದೇ ವಾಚ್ಯವಾಗಿಬಿಡುತ್ತದೆ. (..ಪೊಱವಾಱೊಳುಚ್ಚಳಿಪ ತೆಳ್ವದಮಿರ್ವರೊಳೊಪ್ಪೆ…||೨೫೯|| ಮೊದಲಾದ ಅನೇಕ ಪದ್ಯಗಳು ಸಿಗುತ್ತವೆ)
ಶ್ರುತಿಕಟುವಾದ ಪದಶಯ್ಯೆ (ಕಿವಿಗೆ ಕರ್ಕಶವಾಗಿ ಕೇಳುವುದು), ಅಪ್ರಯುಕ್ತ (ಕೋಶಗತವಾದ ಅರ್ಥಗಳ ಬಳಕೆ) ಪುನರುಕ್ತಿ (ಮತ್ತೆ ಮತ್ತೆ ಬಳಸಿದ ಪದವನ್ನೇ ಬಳಸುವುದು) ಅನವೀಕೃತ (ಹೊಸ ರೀತಿಯಲ್ಲದೇ ಹಳೆಯ ಜಾಡಿನಲ್ಲಿಯೇ ಹೇಳುವುದು) ಮೊದಲಾದ ಕೆಲವು ದೋಷಗಳು ಕಾಣಿಸುತ್ತವೆ. (೪)
ಉದಾಹರಣೆಗೆ- ಮಾವಿನ ಮರವೊಂದನ್ನು ವರ್ಣಿಸುವ ಈ ಪದ್ಯ
ಕನರ್ಗೊನರಿಕ್ಕೆ ನುಣ್ದಳಿರ ಬಾೞ್ವನೆ ಕೆಂದಳಿರಿರ್ಪ ಬೀಡು ಬ
ಲ್ವನೆಯ ಪೊದಱ್ ಮುಗುಳ್ನಗೆಯ ಪೆರ್ಮನೆ ಮೊಗ್ಗೆಯ ತಾಣಮಚ್ಚವೂ
ವಿನ ನೆಲೆ ಸಣ್ಣಗಾಯ ಬಲುಗಾಯ ಪೊೞಲ್ ನಸುದೋರೆವಣ್ಣ ತಾ
ಯ್ವನೆ ಪೊಸವಣ್ಣ ಗೊತ್ತಿದೆನೆ ಕಣ್ಗೆಸೆದಿರ್ದುದದೊಂದು ಮಾಮರಂ ||೮೯||
ಇಲ್ಲಿ ಮಾವಿನ ಮರದ ವರ್ಣನೆಯಲ್ಲಿ “ಕನರ್ಗೊನರ್” ಎಂದು ಶಿಥಿಲದ್ವಿತ್ವ ಇರುವ(ಒತ್ತಕ್ಷರವಿದ್ದರೂ ಇಲ್ಲದಂತೆ ತೇಲಿಸಿ ಓದುವ) ಪದ, ಅಲ್ಲದೇ ಕಕಾರ-ಪಕಾರ-ರೇಫವೇ ಮೊದಲಾದ ಕರ್ಕಶವ್ಯಂಜನಗಳಿಂದ ಕೂಡಿರುವ ಶಬ್ದಗಳು ಹೆಚ್ಚಾಗಿವೆ.
ಇನ್ನು “….ಕಡುಮುಳಿದು ಬಿಸುಗಣ್ಣೊಳೊಗೆದ ಬೀರಂ…” ಎಂದು ಒಂದು ಶಬ್ದ ಬರುತ್ತದೆ. ಅದು “ವೀರಭದ್ರ” ಎಂದು ಅರ್ಥಯಿಸಿಕೊಳ್ಳುವಾಗ ಕಾವ್ಯಸ್ವಾರಸ್ಯಾಸ್ವಾದದ ಕಡೆಯಿಂದ ಸಹೃದಯರ ಮನಸ್ಸು ಸ್ವಲ್ಪ ವಿಚಲಿತವಾಗುತ್ತದೆ. ಇಂತಹ ಹಲವು ನಾಮಪದಗಳ ತದ್ಭವ ಮಾಡಿಕೊಂಡಾಗ ಅಥವಾ ಬೇರೆಯ ರೂಪ ಕೊಟ್ಟಾಗ ಅಪ್ರಯುಕ್ತಪದವನ್ನು ಬಳಸಿದ ದೋಷವಾಗುತ್ತದೆ. ಉದಾ- ಇಚ್ಚೆಕಾರ್ತಿ- ರತಿ, ಕೊಕ್ಕರಿಕೆ- ಹೇಸಿಗೆ, ಪೊಡೆಯಲರ- ವಿಷ್ಣು, ದಪ್ಪ- ದರ್ಪ (ಇಲ್ಲಿ ತದ್ಬವದಲ್ಲಿ ನೇಯಾರ್ಥ(ಬೇರೆಯದೇ ಅರ್ಥವನ್ನು ಕೊಡುವ ಪದ)ವಾಗುವುದನ್ನು ಗಮನಿಸಬಹುದು)
“ಕನರ್ಗೊನರೆಲ್ಲಿಯೆಲ್ಲಿ… ನುಣ್ದಳಿರೆಲ್ಲಿಯೆಲ್ಲಿ..” ಎಂಬಲ್ಲಿ ಚಿಗುರು ಎಂಬರ್ಥದಲ್ಲಿಯೇ ಪುನರುಕ್ತಿ (ಒಂದನ್ನೇ ಮತ್ತೆ ಮತ್ತೆ ಹೇಳುವುದು) ಮಾಡಿದ್ದಾನೆ. ಇದು ಪದ್ಯದಲ್ಲಿ ಆದರೆ ಮಾವಿನ ಮರದ ವರ್ಣನೆ ದುಂಬಿಗಳ ವರ್ಣನೆ ಇವೆಲ್ಲ ಯಥೇಷ್ಟವಾಗಿ ಪೌನಃಪುನ್ಯೇನ ಅದೇ ಪದಗುಚ್ಛಗಳಿಂದ ಮತ್ತೆ ಮತ್ತೆ ಬರುತ್ತಲೇ ಇರುತ್ತವೆ. ಅಲ್ಲದೇ ಸಂಸ್ಕೃತಶಬ್ದರಾಹಿತ್ಯದಿಂದ ಉಂಟಾದ ಬಡತನ ಅಲ್ಲಿ ಕಾಣುತ್ತದೆ. ಬಹಳಷ್ಟು ಶಬ್ದಗಳಿಗೆ ಕನ್ನಡದ ಮೂಲದ ಶಬ್ದಗಳು ಬೆರಳೆಣಿಕೆಯಷ್ಟೇ ಆಗುತ್ತವೆ. ಅಲ್ಲದೇ ಕನ್ನಡದಲ್ಲಿ ಸಂಸ್ಕೃತದಂತೆ ಸುಲಲಿತವಾದ ಸಮಸ್ತಪದನಿರ್ಮಾಣ (ಸಮಾಸ) ದುಷ್ಕರ, ಕೃದಂತ-ತದ್ಧಿತಪದಗಳೂ ಕೂಡ ಕನ್ನಡದಲ್ಲಿ ದುಸ್ಸಾಧ್ಯವಾಗಿ ಕವಿಗೆ ಹಲವು ಕಡೆ ನಾಲಿಗೆ ಹಿಡಿದಂತೆ ಆಗುತ್ತದೆ. ಅವನೇ ಹೇಳುವ “ಪಲವುಂ ನಾಲಗೆಯುಳ್ಳವಂ ಬಗೆವೊಡೆಂದುಂ ಬಣ್ಣಿಸಲ್ಕಾರನಾ….” ಎಂಬ ಸಾಲಿನಂತೆ ಅವನ ಕಲ್ಪನೆಯನ್ನು ಹೇಳುವಲ್ಲಿ ಅವನಿಗೇ ಹಲವು ನಾಲಿಗೆಗಳಿದ್ದರೂ ಬಣ್ಣಿಸಲಾರ ಎನಿಸುತ್ತದೆ.
ಇಂತಹ ದೋಷಗಳೇ ಅಲ್ಲದೇ ಹಲವು ಗುಣಗಳನ್ನೂ ನೋಡಬಹುದು. ಉದಾಹರಣೆಗೆ
ಇವು ಪಳ್ಳಿಗಳಿವು ಪಟ್ಟಣ
ಮಿವು ಕೆಱೆಗಳಿವೆಱಗಿ ನಿಂದ ಮುಗಿಲೋಳಿಗಳಿಂ
ತಿವು ಕಾಡಿವು ಪೆಸರ್ವೊಡೆದೊ
ಪ್ಪುವ ಬನಮೆಂದಱಿದು ಪೇೞ್ವುದರಿದಾ ನಾಡೊಳ್ ||೧೯||
ಇಲ್ಲಿ ಸುಲಲಿತವಾದ ಶೈಲಿಯಿದೆ, ಅಲ್ಲದೇ ಸುಲಭವಾಗಿ ಅರ್ಥವಾಗುವ ಪದಪುಂಜ. ಜೊತೆಯಲ್ಲಿ “ಇವು ಇವು” ಎಂದು ಮತ್ತೆ ಮತ್ತೆ ಬರುವ ಶಬ್ದಾಲಂಕಾರ.ಇಷ್ಟಿದ್ದರೂ “ಇವು ಕೆಱೆಗಳಿವೆರಗಿ” ಎಂಬಲ್ಲಿನ ಲಘುಬಾಹುಳ್ಯ ಸ್ವಲ್ಪಮಟ್ಟಿಗೆ ಗತಿಸುಭಗತೆಯನ್ನು ಕೊಡಲಾರದು. “ಇವು ಕೆಱೆಗಳಿವೆಱಗಿ” ಬದಲು “ಇವು ಕೆಱೆಗಳ್ ಬಾಗಿ ನಿಂದ ಮುಗಿಲ್” ಎಂದು ತಿದ್ದಿದ್ದರೆ ಗತಿಸುಭಗವಾಗಿ ಇನ್ನೂ ಚೆನ್ನಾಗಬಹುದಿತ್ತು. ಇಂತಹ ಲಘುಬಾಹುಳ್ಯವು ಹೀಗೇ ಅನೇಕ ಪದ್ಯಗಳಲ್ಲಿ ಸಿಗುತ್ತದೆ.
ಮಲ್ಲಿಗೆಯಲ್ಲದೆ ಸಂಪಗೆ
ಯಲ್ಲದೆ ದಾಳಿಂಬಮಲ್ಲದೊಪ್ಪುವ ಚೆಂದೆಂ
ಗಲ್ಲದೆ ಮಾವಲ್ಲದೆ ಕೌಂ
ಗಲ್ಲದೆ ಗಿಡುಮರಗಳೆಂಬುವಿಲ್ಲಾ ನಾಡೊಳ್|| ೨೦||
ಈ ಪದ್ಯದಲ್ಲಿ ಸುಲಭವಾಗಿ ಅರ್ಥಸ್ಪಷ್ಟತೆ ಇರುವ ಪದಗಳು, ಲಲಿತ ಶೈಲಿಯಿಂದ ನಿರ್ದುಷ್ಟವಾಗಿದೆ. ಛಂದೋಗತಿಯಲ್ಲಿ ಕೂಡ ಸೊಗಸಾಗಿದೆ.
ಕನರ್ಗೊನರಂ ಕರ್ದುಂಕಿ ದನಿದೋಱುವ ಕೋಗಿಲೆ ಮೇಳದಾಳ್ಗಳೆಂ
ದೆನೆ ಗಿಳಿವಿಂಡು ಒಂದೆಱೆ(ರೆ)ಯ ಬರ್ಪವರೆಂದೆನೆ ಪೊಣ್ಮುತಿರ್ಪ ಪೂ
ವಿನ ಪೊಸಗಂಪು ಕತ್ತುರಿಯ ಕಂಪೆನೆ ಪಾಡುವ ದುಂಬಿ ಗಾಣರೆಂ
ದೆನೆ ನೆನೆಯಂಬನೋಲಗದ ಸಾಲೆವೊಲಿರ್ದುವು ಬಂದ ಮಾವುಗಳ್ ||೫೨||
ಶಿಥಿಲದ್ವಿತ್ವದಿಂದ ಸ್ವಲ್ಪ ಕಾರ್ಕಶ್ಯವಿದ್ದರೂ ಚಂಪಕಮಾಲೆಯ ಈ ಪದ್ಯ ಉತ್ತಮವಾದ ಸಾವಯವ ರೂಪಕಾಲಂಕಾರದಿಂದ ಮಾವಿನ ಮರವೊಂದು ಮನ್ಮಥನ ಓಲಗದ ಶಾಲೆಯ ಹಾಗೆ ಕಾಣುತ್ತಿತ್ತು ಎಂದು ವರ್ಣಿಸುತ್ತಾನೆ.
ತಡಿಮೀಱಿ ಬಂದ ತೆಂಕಣ
ಬಡಗಣ ಕಡಲೊಂದನೊಂದು ತಾಗುವ ತೆಱದಿಂ
ಬಿಡೆ ಗಜಱಿ ಮಿಕ್ಕು ತಕ್ಕಿಂ
ಪಡೆಯೆರಡುಂ ದೆಸೆಗೆ ಮಸಗಿ ತಾಗಿದುದೆತ್ತಂ ||೨೦೫|| (೫)
ಇಲ್ಲಿ ಹಿತವಾದ ಅನುಪ್ರಾಸವಿದೆ (ನಿಯಮಿತವಾಗಿ ಕೆಲವು ವ್ಯಂಜನಗಳು ಪುನರಾವೃತ್ತಿಯಾಗುವುದು). “ತ,ಡ,ಬ,ಸ” ಮೊದಲಾದ ವ್ಯಂಜನಗಳ ಪುನರಾವೃತ್ತಿ ಕಡಲುಗಳು ಒಂದಕ್ಕೊಂದು ಹೊಡೆದುಕೊಳ್ಳುವ ಪರಿಯಂತೆ ಎರಡು ಪಡೆಗಳೂ ಹೊಡೆದಾಡಿದವು ಎಂದು ವರ್ಣಿಸುತ್ತಿರುವುದು ಇಂಪಾಗಿ ಕೇಳಿಸುತ್ತದೆ.ಇವಲ್ಲದೇ ಕವಿ ಯಮಕಚಮತ್ಕಾರವನ್ನೂ ಒಂದೆಡೆ ಮಾಡುತ್ತಾನೆ. (ಯಮಕ-ಮೂರು ವ್ಯಂಜನಗಳ ಪದವೊಂದು ನಿಯಮಿತ ಸ್ಥಾನದಲ್ಲಿ ಪುನರಾವೃತ್ತಿಯಾಗುವುದು)
ಮಾವುಗಳವು ಮಲೆವರನ
ಮ್ಮಾವುಗಳವೊಲುಱದೆ ಮುಱಿವುವೆಂದೊಡೆ ಕೇಳಾ
ಕಾವನ ಬರವಱಿದ ಬಳಿ
ಕ್ಕಾವನ ಸೊರ್ಕುಳಿಯದಿನಿಸುಮೇನಿರ್ದಪುದೋ ||೧೩೫||
ಇಲ್ಲಿ ಯಮಕವನ್ನು ಮಾಡಲು “ಮಾವುಗಳ” ಎಂಬುದನ್ನು ತರಲು “ಅಮ್ಮಾವುಗಳವೊಲ್” ಎಂಬ ಶಬ್ದ ಬಳಸುತ್ತಾನೆ. ಅಮ್ಮಾವು ಎಂದರೆ ಕಾಡುಹಸು ಎಂಬರ್ಥವಿದೆ. (೬) ಅದನ್ನು ಅಮ್ಮ+ಆವು ಎಂದು ಬಿಡಿಸಿ ಆವು ಎಂದರೆ ಹಸು ಎಂದೂ, “ಅಮ್ಮ” ಎಂದರೆ ತಾಯಿ(ಹೊಸಗನ್ನಡ) ಅಥವಾ ತಂದೆ(ಹಳಗನ್ನಡ) ಎಂಬರ್ಥವನ್ನು ಗ್ರಹಿಸದೇ ಅಣ್ಮು(ಪೌರುಷೇ)>ಅಮ್ಮು ಧಾತುವಿನ ಕೋಶಗತವಾದ ಪೌರುಷವುಳ್ಳ ಎಂಬರ್ಥದ ಕೃದಂತರೂಪವನ್ನು ಪರಿಗ್ರಹಿಸಿ ಶಬ್ದನಿಷ್ಪತ್ತಿಯನ್ನು ಹೇಳಬಹುದು.(೭) ಹಾಗಾಗಿ ಇದು ವ್ಯಾಕರಣಶುದ್ಧಪದವಾದರೂ ಕೋಶಗತಾರ್ಥದಿಂದ ರಸದೂರವಾಗುತ್ತದೆ. ಆದರೆ “ಕಾವನ” ಎಂಬ ಶಬ್ದದಲ್ಲಿ ಯಮಕವನ್ನು ಮಾಡುವಲ್ಲಿ ಇಂತಹ ಕ್ಲಿಷ್ಟತೆ ಕಾಣುವುದಿಲ್ಲ. ಕಾವ್ಯಗಳಲ್ಲಿ ಇಂತಹ ಚಿತ್ರಕವಿತೆಗಳನ್ನು ಮಾಡುವ ಸಾಮರ್ಥ್ಯವಿದೆ ಎಂಬುದನ್ನು ತೋರಿಸಿಕೊಳ್ಳುವುದೇ ಕವಿಗೆ ಮುಖ್ಯವಾಗುವಾಗ ಕಾವ್ಯದ ರಸಭಾಗ ಶುಷ್ಕವಾಗಿಬಿಡುತ್ತದೆ ಹಾಗಾಗಿ ಆದಷ್ಟು ಯಮಕಾಲಂಕಾರವನ್ನು ಎಷ್ಟು ದೂರದಲ್ಲಿಟ್ಟಿದ್ದರೆ ಅಷ್ಟು ಕ್ಷೇಮ ಎಂದು ಆಲಂಕಾರಿಕರು ಹೇಳುತ್ತಲೇ ಬಂದಿದ್ದಾರೆ.(೮)
ಇನ್ನು ಗದ್ಯದಲ್ಲಿ ಹಲವು ಕವಿಗಳು ತೋರುವ ಶ್ಲೇಷಮೂಲವಾದ ಪರಿಸಂಖ್ಯಾಲಂಕಾರವನ್ನು ಮಾಡುವುದರಲ್ಲಿಯೂ ಅಚ್ಚಗನ್ನಡದ ಜಾಣ್ಮೆಯನ್ನು ಮೆರೆದಿದ್ದಾನೆ. ಶ್ಲೇಷವೆಂದರೆ ಎರಡು ಅರ್ಥಗಳನ್ನು ಹೊಮ್ಮಿಸುವುದು. ಪರಿಸಂಖ್ಯಾಲಂಕಾರವೆಂದರೆ ಎರಡು ವಸ್ತುಗಳ ನಡುವೆ ಶ್ಲೇಷದಿಂದ ಹೋಲಿಕೆ ಮಾಡುವುದು. ಇದನ್ನು ೨೩ ನೆಯ ಪದ್ಯದ ನಂತರದ ಗದ್ಯಭಾಗದಲ್ಲಿ ಕಾಣಬಹುದು
“ಮತ್ತಮಾ ನಾಡೊಳ್ ಕೀೞೆಂಬುದು ಕುದುರೆಯ ಬಾಯ ಕಬ್ಬಿಣದೊಳ್, ಕವರೆಂಬುದು ಚಪ್ಪರದೊಳ್, ಬಂದಿಯೆಂಬುದು ತೊಡವಿನೊಳ್, ಏಱೆಂಬುದು ನೆಲೆವಾಡದೊಳ್, ಮಡಿಯೆಂಬುದು ಮರುಗದ ತಾಣದೊಳ್, ಮೊಱೆಯೆಂಬುದು ನಂಟರೊಳ್, ಪೊಡೆಯೆಂಬುದು ಬೆಳಗೆಯ್ಯೊಳ್ ಕಱೆಯೆಂಬುದು ತುಱುಗಾರ್ತಿಯರೊಳ್ ಪಿಡಿಯೆಂಬುದು ಪೆಣ್ಣಾನೆಯೊಳ್…”
ಇಲ್ಲೆಲ್ಲ ಆ ಶಬ್ದಗಳಿಗಿರುವ ಎರಡೆರಡು ಅರ್ಥಗಳನ್ನು ಹೊಂದಿಸಿಕೊಂಡರೆ ಸ್ವಾರಸ್ಯವು ತಿಳಿಯುತ್ತದೆ.(ಉದಾಹರಣೆ- ಕೀೞ್ ಎಂಬ ಪದಕ್ಕೆ ಕೆಟ್ಟದ್ದು ಎಂದೂ ಹಾಗೂ ಕುದುರೆಯ ಬಾಯಿಗೆ ಹಾಕುವ ಕಬ್ಬಿಣದ ವಸ್ತುವೊಂದೂ ಎಂದು ಸೂಚಿಸುತ್ತದೆ. ಕೀಳು ನಾಡಿನಲ್ಲೆಲ್ಲೂ ಇರಲಿಲ್ಲ-ಕುದುರೆಯ ಬಾಯ ಕಬ್ಬಿಣದಲ್ಲಿ ಮಾತ್ರ ಇತ್ತು ಎಂದು ಇದರ ಅರ್ಥ) ಹಾಗೆಯೇ ವಿರೋಧಾಭಾಸವನ್ನೂ(ಎರಡು ಅರ್ಥಗಳನ್ನು ಗ್ರಹಿಸದಿದ್ದರೆ ವಾಕ್ಯದಲ್ಲಿ ವಿರೋಧ ಭಾವ ಕಾಣುವುದು) ಅಚ್ಚಗನ್ನಡ ಪದಗಳಿಂದಲೇ ಮಾಡಿದ್ದಾನೆ. ಅದನ್ನು ೪೩ನೆಯ ಪದ್ಯದ ನಂತರದ ಗದ್ಯಭಾಗದಲ್ಲಿ ಕಾಣಬಹುದು.
“ತಾವರೆಯಂತೆ ಸಿರಿಯೊಳೊಂದಿಯುಂ ಪೊಡೆಯಲರನೆನಿಸಂ ಸಿಡಿಲಂತೆ ಕಾಯ್ಪನಾಂತುಂ ಬಿಸುಗದಿರನೆನಿಸಂ..…..ಬಾನಂತೆ ಮೀನ್ಗಳಂ ತಳೆದುಂ ಮುನ್ನೀರೆನಿಸಂ ಮಾವಿನಂತೆ ಕೋಡುಗೈಯೊಂದಿಯುಂ ಸೊರ್ಕಾನೆಯೆನಿಸಂ….”
ಇಲ್ಲಿ ಕೂಡ ಈ ಶಬ್ದಗಳಿಗಿರುವ ಶ್ಲೇಷಾರ್ಥಗಳನ್ನು ಗಮನಿಸಬಹುದು. (ಉದಾಹರಣೆ-ಸಿರಿ ಎಂದರೆ ಲಕ್ಷ್ಮಿ ಇದ್ದರೂ ಕೂಡ ವಿಷ್ಣುವಲ್ಲ, ಇಲ್ಲಿ ಸಿರಿ ಎಂದರೆ ಸಂಪತ್ತು ಎಂಬರ್ಥವನ್ನು ಗ್ರಹಿಸಿದಾಗ ಅರ್ಥಸ್ಪಷ್ಟತೆ ಸಿಗುತ್ತದೆ.) ಪ್ರಾಚೀನ ಕವಿಗಳಲ್ಲಿ ಯಥೇಷ್ಟವಾಗಿ ಸಿಗುವ ಈ ಪರಿಯ ಪರಿಸಂಖ್ಯಾ-ವಿರೋಧಾಭಾಸಾಲಂಕಾರಗಳನ್ನು ಅಚ್ಚಗನ್ನಡಲ್ಲಿ ಮಾಡುವುದು ಬಹಳ ಶ್ರಮಯುತವಷ್ಟೇ ಅಲ್ಲದೆ ಪರಿಮಿತ ಕೂಡ. ಆಂಡಯ್ಯನನ್ನು ಬಿಟ್ಟರೆ ಲಕ್ಷ್ಮೀಶನಲ್ಲಿ ಒಂದೆರಡು ಕಡೆ ಮುದ್ದಣನಲ್ಲಿ ಒಂದೆರಡು ಕಡೆ ಅಲ್ಪಪ್ರಮಾಣದಲ್ಲಿ ಈ ಅಚ್ಚಗನ್ನಡದ ಶ್ಲೇಷಮೂಲಾಲಂಕಾರಗಳನ್ನು ಗಮನಿಸಬಹುದು.
ದೇಸೀ ಹಾಗೂ ತದ್ಭವಪ್ರಯೋಗಗಳ ವೈಶಿಷ್ಟ್ಯ-
ಸಂಸ್ಕೃತದ ಪದಗಳನ್ನು ಹೇಗೆ ತದ್ಭವಗಳನ್ನಾಗಿ ಮಾಡಿಕೊಳ್ಳಬಹುದು ಎಂಬುದನ್ನು ಕೇಶಿರಾಜ ಶಬ್ದಮಣಿದರ್ಪಣದಲ್ಲಿ ಅಪಭ್ರಂಶಪ್ರಕರಣದಲ್ಲಿ ವಿಸ್ತಾರವಾಗಿ ಚರ್ಚಿಸುತ್ತಾನೆ. ಅಲ್ಲಿ ಯಾವ ವ್ಯಂಜನ ತದ್ಭವದಲ್ಲಿ ಹೇಗೆ ಬದಲಾಗುತ್ತದೆ ಎಂಬುದನ್ನು ಗಮನಿಸಿಕೊಂಡರೆ ಆಂಡಯ್ಯನ ಪದಪ್ರಯೋಗಗಳ ಮೂಲ ಗೊತ್ತಾಗುತ್ತದೆ. ಇವುಗಳಲ್ಲಿ ಹಲವು ಪೂರ್ವಕವಿಗಳಿಂದ ಪ್ರಯೋಗಿಸಲ್ಪಟ್ಟವೇ ಆದರೂ ಕೆಲವೊಂದರಲ್ಲಿ ಹೊಸತನ ಕಾಣುತ್ತದೆ.
ಉದಾ- ತಿಂತಿಣಿ- ತಿಂತ್ರಿಣೀ (ಹುಣಸೆ), ಇಂದಿರ- ಇಂದ್ರ, ಗೋಸ-ಘೋಷ, ಮಾಸಾವಂತ- ಮಹಾಸಾಮಂತ, ಮಡ-ಮಠ, ತಿಸುಳಿ-ತ್ರಿಶೂಲಿ, ಅಸುಗೆ-ಅಶೋಕ, ಪ್ರತೀಹಾರಿ- ಪಡಿಯರ
ಅಲ್ಲದೇ ಹಲವು ಶಬ್ದಗಳು ಸಂಸ್ಕೃತಕ್ಕಿಂತ ಪ್ರಾಕೃತ ಭಾಷೆಗಳಲ್ಲೇ ಶ್ರುತಿಹಿತವಾಗಿ ಕೇಳಿಸುತ್ತವೆ ಎಂಬುದು ವಿದ್ವಾಂಸರ ಅಭಿಮತ ಕೂಡ ಆಗಿದೆ. ಹಳಗನ್ನಡದಲ್ಲಿ ತದ್ಭವಗಳು ಹೆಚ್ಚು ಸುಂದರವಾಗಿ ಮಾಧುರ್ಯದಿಂದ ಕೂಡಿರುತ್ತವೆ ಅಲ್ಲದೇ ಕಾವ್ಯಕ್ಕೆ ಒಳ್ಳೆಯ ಹದವನ್ನು ಕೊಡುತ್ತವೆ ಎಂಬುದೂ ಸಹ ದಿಟವೇ ಆದರೂ ಕೆಲವೊಮ್ಮೆ ಅವು ಅನ್ಯಾರ್ಥವನ್ನು ಸ್ಫುರಿಸುತ್ತದೆ. ಹಿಂದೆ ನೀಡಿದ ದರ್ಪ ಎಂಬ ಪದದ ತದ್ಭವ “ದಪ್ಪ”ವನ್ನೇ ಇದಕ್ಕೆ ಉದಾಹರಣೆಯಾಗಿ ತೆಗೆದುಕೊಳ್ಳಬಹುದು.
ಕೆಲವು ಕಡೆ ಆಡುನುಡಿಗಳ ಅಥವಾ ನುಡಿಗಟ್ಟುಗಳ ಬಳಕೆ ಕಾವ್ಯಕ್ಕೆ ಒಂದು ಸೊಬಗನ್ನು ಕೊಡುತ್ತವೆ. ಅಂತಹ ಕೆಲವು ಪ್ರಯೋಗಗಳನ್ನು ಇಲ್ಲಿ ಕಾಣಬಹುದು “….ಕೋಡಗಗಟ್ಟಂ ಕಟ್ಟಿ ತರ್ಪೆವೇಂ ಬೆಸಸೆಂದೋ….||೧೧೦||”- “ಕೋತಿಯೊಂದನ್ನು ಕಟ್ಟಿ ತರುವಂತೆ ತರುತ್ತೇವೆ” ಎಂಬುದು, “..ಕಿರಿದೆಡೆಯುಂ ಪೋಗೆವೋಗೆ…” ಸ್ವಲ್ಪದೂರ ಹೋಗಿ ಹೋಗಿ ಎಂಬುದು ಇವೆಲ್ಲ ದೇಸಿ ನುಡಿಗಟ್ಟುಗಳ ಬಳಕೆಯ ಸೊಬಗನ್ನು ತೋರಿಸುತ್ತವೆ.
ಇನ್ನು ಕೆಲವು ಹೆಸರುಗಳನ್ನು ಅಚ್ಚಗನ್ನಡದಲ್ಲಿ ಕೊಡುವುದೂ ಇವನ ವೈಶಿಷ್ಟ್ಯ ಎನ್ನಬಹುದು. ವಿಷ್ಣುವನ್ನು ಪೊಡೆಯಲರ (ಹೊಟ್ಟೆಯಲ್ಲಿ/ನಾಭಿಯಲ್ಲಿ ಹೂವನ್ನು ಹೊಂದಿರುವವನು) ಎಂದು, ಮನ್ಮಥನನ್ನು ನೆನೆಯಂಬ- ನನೆವಿಲ್ಲ ಬಲ್ಲಹ (ಹೂವನ್ನೇ ಬಾಣವಾಗಿ ಉಳ್ಳವನು), ಕಮ್ಮಂಗೋಲ (ಸಿಹಿಯಾದ ಬಾಣವುಳ್ಳವನು), ಐಸರಲ (ಐದು ಬಾಣವುಳ್ಳವನು) ಕರ್ವುವಿಲ್ಲ (ಕಬ್ಬನ್ನು ಬಿಲ್ಲಾಗಿ ಹೊಂದಿರುವವನು) ಇತ್ಯಾದಿ ಹೆಸರುಗಳಿಂದ, ಹಿವಗದಿರ (ಹಿಮಕಿರಣ) ಇಂಗದಿರ (ಸಿಹಿಯಾದ ಕಿರಣವುಳ್ಳವನು) ಎಂದು ಚಂದ್ರನನ್ನೂ, ಕಱೆಗೊರಲ (ಕೊರಳಲ್ಲಿ ಕಪ್ಪಿರುವವನು-ನೀಲಕಂಠ), ಎಳೆದೇರ (ಭೂಮಿಯನ್ನೇ ತೇರನ್ನಾಗಿ ಮಾಡಿಕೊಂಡವನು) ಎಂದು ಶಿವನನ್ನೂ, ಪಗಲಾಣ್ಮ (ಹಗಲಿಗೆ ಒಡೆಯ) ಬಿಸುಗದಿರ (ಬಿಸಿಯಾದ ಕಿರಣವುಳ್ಳವನು) ಎಂದು ಸೂರ್ಯನನ್ನೂ ವಾಸುಕಿಯನ್ನು ಪಲವುಂ ನಾಲಗೆಯುಳ್ಳವಂ ಎಂದೂ ಅಚ್ಚಗನ್ನಡ ಶಬ್ದಗಳಲ್ಲಿ ಕರೆಯುತ್ತಾನೆ.
ಛಂದಸ್ಸು-
ಕನ್ನಡದ ಚಂಪೂಕಾವ್ಯಗಳಲ್ಲಿ ಛಂದಸ್ಸು ಸಾಮಾನ್ಯವಾಗಿ ಉತ್ಪಲಮಾಲೆ, ಚಂಪಕಮಾಲೆ, ಶಾರ್ದೂಲವಿಕ್ರೀಡಿತ, ಮತ್ತೇಭವಿಕ್ರೀಡಿತ, ಸ್ರಗ್ಧರಾ, ಮಹಾಸ್ರಗ್ಧರಾ ಎಂಬ ಆರು ಖ್ಯಾತಕರ್ಣಾಟವೃತ್ತಗಳ ಜೊತೆ ಕಂದಪದ್ಯಗಳನ್ನು ಒಳಗೊಂಡಿರುತ್ತದೆ. ಕೆಲವೊಮ್ಮೆ ಅತಿ ಕಡಿಮೆ ಸಂಖ್ಯೆಯಲ್ಲಿ ಇತರ ವರ್ಣವೃತ್ತಗಳನ್ನೂ ಮಾತ್ರಾವೃತ್ತ-ರಗಳೆಗಳನ್ನೂ ಗೇಯಚ್ಛಂದಸ್ಸುಗಳನ್ನೂ ಅಲ್ಲಲ್ಲಿ ಬಳಸಿದ್ದಾರೆ. ಆದರೆ ಬಹುಪಾಲು ಕಂದವೃತ್ತಗಳೇ ಇರುವುದು ವೇದ್ಯ. ಆಂಡಯ್ಯನಾದರೂ ಅದೇ ಮಾರ್ಗದಲ್ಲಿಯೇ ಸಾಗುತ್ತಾನೆ.
“ಕಬ್ಬಿಗರ ಕಾವಂ”ಕಾವ್ಯದ ವೃತ್ತ ಬಾಹುಳ್ಯ ಒಂದು ಲೆಕ್ಕದಲ್ಲಿ ಗುಣದೋಷಗಳೆರಡೂ ಆಗುತ್ತದೆಯೆಂದರೆ ಅತಿಶಯೋಕ್ತಿಯಲ್ಲ. ಗುಣವೇಕೆಂದರೆ ಅಚ್ಚಗನ್ನಡದಲ್ಲಿ ವೃತ್ತನಿರ್ಮಾಣವೆಂಬುದು ಕಷ್ಟಸಾಧ್ಯ. ಅದನ್ನು ನಿರ್ವಹಣೆ ಮಾಡಿದ ಕವಿಯ ಶಕ್ತಿ ಜಾಣ್ಮೆಗಳು ಮೆಚ್ಚತಕ್ಕವೇ ಆಗಿವೆ! ಆದರೆ ಗುಣಕ್ಕಿಂತ ದೋಷವೇ ಹೆಚ್ಚಾಗುವುದು ಏಕೆಂದರೆ ಕನ್ನಡದ ಲಘುಪ್ರಚುರಮಧ್ಯಮಭಾಷಾಗತಿಗೆ ಕಂದ-ಷಟ್ಪದಿ-ರಗಳೆಗಳಂತಹವು ಹೆಚ್ಚು ಸಹಜಾಭಿವ್ಯಕ್ತಿಗಳೆಂದು ಛಂದೋವಿದ್ವಾಂಸರು ವೈಜ್ಞಾನಿಕವಾಗಿ ಪ್ರಮಾಣೀಕರಿಸಿದ್ದಾರೆ. (೯). ಅಲ್ಲದೇ ಗುರುಬಾಹುಳ್ಯವಿರುವ ಯತಿಪ್ರಬಲವಾದ ಶಾರ್ದೂಲಸ್ರಗ್ಧರಾದಿವೃತ್ತಗಳಲ್ಲಿ ಅಚ್ಚಗನ್ನಡ ಶಬ್ದಗಳು ಕರ್ಕಶವಾಗಿ ಕೇಳುತ್ತವೆ. “ಯತಿವಿಲಂಘನದಿಂದರಿದಲ್ತೆ ಕನ್ನಡಂ” ಎಂದು ಕೇಶಿರಾಜ ಹೇಳಿದ್ದರೂ ಛಂದಸ್ಸಿನ ಗತಿಗೆ ಯತಿ ಅನಿವಾರ್ಯ.(ಯತಿಯೆಂಬುದುಸಿರ್ದಾಣಂ-ಯತಿ ಉಸಿರನ್ನು ತೆಗೆದುಕೊಳ್ಳಲು ನಿಲ್ಲಿಸುವ ಸ್ಥಾನ) ಹಾಗಾಗಿ ಯತಿಪ್ರಬಲಚ್ಛಂದಸ್ಸಿನಲ್ಲಿ ಯತಿವಿಲಂಘನದಿಂದ ಕಾರ್ಕಶ್ಯಗುಣವಿನ್ನೂ ಹೆಚ್ಚುತ್ತದೆ ಎಂಬುದು ನಿಸ್ಸಂಶಯ. ಅದಕ್ಕೆ ಕನ್ನಡದಲ್ಲಿ ಸಮಸ್ತಪದಸೃಷ್ಟಿಯ ದೌರ್ಬಲ್ಯವೂ ಒಂದು ಕಾರಣವೆನ್ನಬಹುದು.
ಉದಾಹರಣೆಯಾಗಿ ಕೆಲವು ಸಾಲುಗಳನ್ನು ಗಮನಿಸಬಹುದು (“|” ಚಿಹ್ನೆಯಿರುವಲ್ಲಿ ಯತಿಯನ್ನು ಗಮನಿಸಬಹುದು)-
ಶಾ|| ಮುತ್ತುಂ ಪಚ್ಚೆವರಲ್ಗಳುಂ ಕುಳಿಸಮುಂ | ಮುಂತಾಗಿ ಕುಂದಿಲ್ಲದೊಂ|
-ಬತ್ತುಂ ರನ್ನದ ನುಣ್ಗದಿರ್ ನೆಗೆದು ನೀ|ಳ್ದೊಂದೊಂದಱೊಳ್ ಕೂಡಿ ಮ|
-ಯ್ವೆತ್ತಿಂದಿಂದಿರವಿಲ್ಲ ಪಾಂಗನೆನೆಸುಂ ಬಾಂ|ಬಟ್ಟೆಯೊಳ್ ಬೀಱಿ ಕ|
-ಣ್ಗೆತ್ತಂ ಸೋಲಮನೀವ ರನ್ನವಸರಂ | ಚೆಲ್ವಾದುದಾ ಬೀದಿಯೊಳ್ ||೩೨||
ಸ್ರ|| ತೊಂಗಲ್ಗೊಂಡಿರ್ದ ಕೆಂಪಾ|ದಸುಗೆಯ ತಳಿರಂ| ಕಂಪುದೀವಿರ್ದ ಪೂವಂ|
ಮಾಂಗಾಯಂ ಪೊಚ್ಚ ಪೊಂಬಾ|ೞೆಯ ಮರುಗಮನಿಂ|ಬಾದ ನಲ್ಬಾೞೆವಣ್ಣಂ |
ಪೊಂಗಿರ್ದಾ ನೈದಿಲೊಳ್ದಾ|ವರೆಯ ಮುಗುಳ್ಗಳಂ| ಸೊಂಪಿನಿಂ ಬೆಳ್ಪುವೆತ್ತಿ|
ರ್ದಿಂಗೋಲಂ ಪಣ್ತ ದಾಳಿಂ|ಬಗಳನೊಲವಿನಿಂ|ತೋಂಟಿಗಂ ಕೊಟ್ಟನೊರ್ವಂ ||೭೦||
ಇವುಗಳಲ್ಲಿ ಯತಿವಿಲಂಘನದಿಂದ ಆದ ತೊಡಕನ್ನು ಗಮನಿಸಬಹುದು. ಶಾರ್ದೂಲ-ಮತ್ತೇಭಗಳ ಯತಿಸ್ಥಾನವನ್ನು ಮೀರಿಯೂ ಚೆನ್ನಾದ ಪದ್ಯಗಳನ್ನು ರನ್ನ-ಪಂಪಾದಿಗಳಲ್ಲಿ ಕಾಣಬಹುದು. ಅವರಲ್ಲಿ ಅಚ್ಚಗನ್ನಡಬಳಕೆಯ ನಿಯಮ ಹಾಕಿಕೊಳ್ಳದ ಕಾರಣವೋ ಏನೋ ಪದ್ಯಗಳಂತೂ ಓಜಸ್ವಿಯಾಗಿವೆ. ಹಾಗಾಗಿ ಪೂರ್ವಚಂಪೂಮಾರ್ಗಕ್ಕೆ ಭಿನ್ನವಾಗಿ ಕನ್ನಡಕ್ಕೆ ಒಗ್ಗುವ ಮಾತ್ರಾಗತಿಯಲ್ಲಿಯೋ ಅಥವಾ ತ್ರಿಮೂರ್ತಿಗಣಘಟಿತಚ್ಛಂದಸ್ಸಿನಲ್ಲಿಯೋ ಆಂಡಯ್ಯನ ಪದ್ಯಗಳು ಇದ್ದರೆ ಇನ್ನೂ ಚೆನ್ನಾಗುತ್ತಿರಬಹುದು. ಹೇಗೆ ಅಚ್ಚಗನ್ನಡ ಶಬ್ದಗಳನ್ನು ಬಳಸುವ ನಿಯಮ ಮಾಡಿಕೊಂಡನೋ ಹಾಗೆಯೇ ಕನ್ನಡದ್ದೇ ಆದ ಸಾಂಗತ್ಯ-ತ್ರಿಪದಿಗಳಲ್ಲಿ ಬರೆದಿದ್ದರೆ ಇನ್ನೂ ಸೊಗಸೆನಿಸುತ್ತಿತ್ತು. ಉದಾಹರಣೆಯಾಗಿ ಇದೇ ಶಾರ್ದೂಲವಿಕ್ರೀಡಿತದ ಪದ್ಯದ ಭಾವವನ್ನು ಅದೇ ಶಬ್ದಗಳಲ್ಲಿ ಸೊಬಗಿನ ಸೋನೆಯಲ್ಲಿ ಹೀಗೆ ಅಡಕವಾಗಿಸಬಹುದು. ಸೊಬಗಿನ ಸೋನೆಯೆಂಬುದು ಕನ್ನಡದ ಛಂದಸ್ಸು. ಮೊದಲ ಸಾಲಿಗೆ ನಾಲ್ಕು ವಿಷ್ಣುಗಣಗಳೂ, ಎರಡನೇ ಸಾಲಿಗೆ ಎರಡು ವಿಷ್ಣು ಹಾಗೂ ಒಂದು ರುದ್ರಗಣ (ಅಥವಾ ಎರಡು ಬ್ರಹ್ಮಗಣಗಳು) ಬರುವ ಛಂದಸ್ಸು. ಮೂರು-ನಾಲ್ಕನೇ ಸಾಲುಗಳು ಮೊದಲೆರಡರಂತೆಯೇ ಪುನಃ ಬರುತ್ತವೆ.
“ಮುತ್ತುಮಾ ಕುಳಿಸಮುಂ ಪಚ್ಚೆಯುಂ ಮುಂತಾದೊಂ|ಬತ್ತಿರ್ಪ ರನ್ನದ ನುಣ್ಗದಿರ್ಗಳ್ |
ಸುತ್ತಲುಂ ಪಸರಿಸೆ ರನ್ನವಸರದಿಂ ಕ|ಣ್ಗೆತ್ತಂ ಸೋಲಮನೀಗುಂ ಮಳೆವಿಲ್ಲಂತೆ ||”
ಹಿಂದಿನ ಕವಿಗಳು ಬಳಸಿದಂತೆ ಉತ್ಸಾಹಗತಿಯ ರಗಳೆಯನ್ನೂ ಬಳಸಿ ಶ್ರವಣಾಭಿರಾಮವಾಗುವ ಪದಶಯ್ಯೆಯಿಂದ ಕವಿ ಅಲ್ಲಿ ಗೆದ್ದಿದ್ದಾನೆ.
ಬಿಳಿಯ ನನೆಯ ಕಣೆಗೆ ನಾಡೆ ಪಗೆವರಗಿದು ಸುಗಿಯೆ ಕೂಡೆ
ನೆಲನನೊಂದೆ ಕೊಡೆಯಿನಾಳ್ದು ಮಿಸುಪ ಜಸಮೆ ನಿಮಿರಿ ಕೇಳ್ದು
ಕುಳಿರ್ವ ಪೂಗೊಳಂಗಳಲ್ಲಿ ತಳಿರ ಕಾವಣಂಗಳಲ್ಲಿ
ಪಳಿಕುವೆಸದ ಬೆಟ್ಟದಲ್ಲಿ ಪರಿವ ತೊಱೆಯ ತಡಿಗಳಲ್ಲಿ…….||೨೬೮||
ಅಲ್ಲದೇ ಲಯೋತ್ತರವೃತ್ತವೊಂದನ್ನೂ ಬಳಸಿದ್ದಾನೆ. ಅಲ್ಲಿ ಕೂಡ ಮಾತ್ರಾಗತಿಯಿರುವ ಕಾರಣ ಕರ್ಕಶತೆ ದೂರವಾಗುತ್ತದೆ
ತುಱುಗಿ ನಡೆವ ಮುಗಿಲ ನಡುವೆ ಪೊಳೆವ ಮಿಂಚಿವೆಂಬಿನಂ
ಮಿಱುಪ ತೆರೆಗಳೆಡೆಗಳೊಳಗೆ ಸುೞಿವ ಮೀನ್ಗಳಾವಗಂ
ಮೆಱೆವ ತೊಱೆಯ ತಡಿಯ ತಳಿರ ಮನೆಗಳಲ್ಲಿ ನಿಚ್ಚಮುಂ
ಬಱಿದೆ ಮುಳಿದು ತಿಳಿಪೆ ತಿಳಿದು ನೆರೆವ ಬೇಡವೆಂಡಿರಂ||೧೭೧||
ಇನ್ನು ಕಂದಪದ್ಯಗಳಲ್ಲಿ ಹಿಂದೆಯೇ ಹೇಳಿದಂತೆ ಲಘುಬಾಹುಳ್ಯದಿಂದಾದ ಕೆಲವು ದೋಷಗಳು ಒಂದೆರಡು ಕಡೆ ಕಂಡುಬಂದರೂ ಬಹುಧಾ ನಿರ್ದುಷ್ಟವಾಗಿವೆ.
ಅದಲ್ಲದೇ ವೃತ್ತಗಳನ್ನೇ ನಿರ್ವಾಹಮಾಡುವಲ್ಲಿ ಸಂಸ್ಕೃತದ ಪದಗಳನ್ನು ಉಪಯೋಗಿಸಿದ್ದರೆ ಹೇಗೆ ಆಗಬಹುದಿತ್ತು ಎಂಬುದಕ್ಕೆ ಕೆಲವು ಉದಾಹರಣೆಗಳನ್ನು ಇಲ್ಲಿ ನೋಡಬಹುದು.
ಜವನಂ ಗೋಣ್ಮುಱಿಗೊಂಡು ಬಾಂಬೊೞಲನುರ್ಕಿಂ ಮೂಱುಮಂ ಸುಟ್ಟು ಜ-
ನ್ನವನುಣ್ಬಣ್ಣರನಾರ್ದು ಕೊಂದು ಮುಳಿಸಿಂ ಪೋರ್ದಾನೆ ಮೆಯ್ಯಾತನಾ
ತೊವಲಂ ಮೇಲ್ಪೊದೆ ಮಾಡಿ ಮೂಜಗಕೆ ಕೇಡಂ ಮಾಡುವಾ ನೆತ್ತಿಗ
ಣ್ಣವನೊಳ್ ಕಾದುವ ಬಲ್ಪು ಮೊಗ್ಗೆಗರನಿಂದಾರಯ್ದು ಮೇಲೆತ್ತುವೆಂ||೧೨೩||
ಇದನ್ನೇ ಅದೇ ಮತ್ತೇಭವಿಕ್ರೀಡಿತವೃತ್ತದಲ್ಲಿ ಮೊಗ್ಗೆಗರ್, ಬಾಂಬೊೞಲ್, ಜನ್ನವನುಣ್ಬಣ್ಣರ್ ಇತ್ಯಾದಿ ಶಬ್ದಗಳ ಬದಲು ವೀರರು, ತ್ರಿಪುರ, ದೇವತೆಗಳು ಎಂಬಂತಹ ಸುವೇದ್ಯವಾದ ಶಬ್ದಗಳನ್ನು ಬಳಸಿ ಹೀಗೆ ಮಾಡಬಹುದು.
ಜವನಂ ಗೋಣ್ಮುಱಿಗೊಂಡನೊಳ್ ತ್ರಿಪುರದಾಹಂಗೆಯ್ದನೊಳ್ ದೇವಲೋ
-ಕವಿಘಾತಂಕೃತನೊಳ್ ಗಜಾಸುರವರತ್ವಗ್ಧಾರಿಯೊಳ್ ಕೋಪದಿಂ
ತವೆ ಪೋರಲ್ಕೆನೆ ಭಾಲನೇತ್ರನೊಳಗೀ ಲೋಕಕ್ಕೆ ಕೇಡಾದನೊಳ್
ಜವದಿಂ ವೀರರನೊಂದಿಕೊಂಡು ಸಬಲಂ ನಾಂ ಕಾಯ್ವೆನೀ ಬಲ್ಮೆಯಿಂ ||
ಇನ್ನು ಸಂಸ್ಕೃತದಲ್ಲಿ ವಿರಳವಾದ ಲಘುಬಾಹುಳ್ಯವೇ ಆಗಿರುವ ಉತ್ಪಲಮಾಲೆ ಚಂಪಕಮಾಲೆಯ ಪದ್ಯಗಳು ಕನ್ನಡದ ಜಾಡಿಗೆ ಚೆನ್ನಾಗಿ ಒಗ್ಗಿಕೊಂಡಿರುವುದರಿಂದ ಅಲ್ಲಿಯ ವೃತ್ತ ನಿರ್ವಹಣೆ ಚೆನ್ನಾಗಿಯೇ ಆಗಿದೆ. ಕೆಲವು ಕಡೆಗಳಲ್ಲಿ ಕೋಮಲ ವೃತ್ತಗಳಾದ ಇವುಗಳಲ್ಲಿ ಪರುಷಾಕ್ಷರಗಳು ಅಷ್ಟು ಹಿತವಾಗಿ ಕೇಳದು. ಹಲವು ಸ್ರಗ್ಧರಾ-ಮಹಾಸ್ರಗ್ಧರಾ ವೃತ್ತಗಳನ್ನು ಬಿಟ್ಟರೆ ವರ್ಣವೃತ್ತಗಳಲ್ಲಿ ಒಂದು ಮಾಲಿನಿ ವೃತ್ತವನ್ನೂ ಬಳಸಿದ್ದಾನೆ.(೧೮೨) ಮಿಕ್ಕಂತೆ ಕಂದಪದ್ಯಗಳೇ ಹೆಚ್ಚಾಗಿವೆ.
ಮುಳಿಸಿಂದಂ ಕಿೞ್ತು ಬಾಳಂ ಜಡಿದಳವಿಯನಾರಯ್ದು ಝಾರೇ ಜಝಾರೇ
ಹಳುರೇ ಹೋ ಹೋ ಮಝಾ ಎಂಬುಲಿ ನೆಗೆವಿನೆಗಂ ಬಿಟ್ಟು ಮಾಱಾಂತ ಮೇಲಾ
ಳ್ಗಳನಾಗಳ್ ತಳ್ತು ಪೊಯ್ದಾರ್ದಿೞಿಪಿ ಕುದುರೆಯಂ ಕೊಂಡು ತಮ್ಮೊಡ್ಡಿನೊಳ್ ಕ
ಣ್ಗೊಳಿಪನ್ನಂ ಪೊಕ್ಕು ಗೆಲ್ಲಂಬಡೆದರದಟಿನಿಂ ರಾಯ ರಾವುತ್ತರಾಗಳ್||೨೧೭||
ಈ ಪದ್ಯವನ್ನು ಅದೇ ಮಹಾಸ್ರಗ್ಧರಾ ವೃತ್ತದಲ್ಲಿ ಯತಿಸಹಿತವಾಗಿ ‘ಬಾಳ್’ ಎಂಬ ಶ್ಲೇಷಾರ್ಥದ ಶಬ್ದದ ಬದಲಿಗೆ ‘ಖಡ್ಗ’ ಎಂದು, ‘ಮೇಲಾಳ್ಗಳ್’ ಬದಲಿಗೆ ‘ವೀರರ್’ ಎಂದು, ‘ತಳ್ತು ಪೊಯ್’ ಬದಲು ‘ಬೇಧಿಸು’ ಎಂಬುದನ್ನು ‘ಒಡ್ಡು’ ಬದಲಿಗೆ ‘ಸೈನ್ಯ’ ಎಂದು ‘ಗೆಲ್ಲಂಬಡೆ’ ಎಂಬುದರ ಬದಲು ‘ಗೆಲ್ದಪರ್’ ಎಂದು ಬದಲಿಸಿ “ರಾಯ ರಾವುತ್ತರ್” ಎಂಬಲ್ಲಿ ಸಮಸ್ತಪದದಂತೆ ತೋರಿದರೂ ‘ರಾಯ’ ಎಂಬುದು ಸಂಬೋಧನಾಭಾಸವಾಗುವುದರಿಂದ ಬದಲಾಯಿಸಿ ಹೀಗೆ ಮಾಡಬಹುದು-
ಮುಳಿಸಿಂದಂ ಖಡ್ಗದಿಂದಂ | ಜಡಿಯುತೆ ದನಿಯೊಳ್ | ಕೂಗಿ ಝಾರೇ ಜಝಾರೇ
ಹಳುರೇ ಹೋ ಹೋ ಮಝಾ ಪೊಯ್ | ಯೆನುವುಲಿ ನೆಗೆಯಲ್ | ವೀರರಂ ಮೇಲೆ ಬಿೞ್ದ-
ರ್ಕಳನಾಗಳ್ ಬೇಧಿಸುತ್ತುಂ | ಕೆಡಹಿ ಕುದುರೆಯಂ | ಕೊಂಡು ಸೈನ್ಯಕ್ಕೆನಲ್ ಕ-
ಣ್ಗೊಳಿಪಂದಂ ಗೆಲ್ದಪರ್ ತಾ|ಮದಟಿನೊಳಿನಿತೀ| ರಾಜನಾ ರಾವುತರ್ಕಳ್ ||
ದಿಟವೇ- ಒಬ್ಬ ಸಿದ್ಧಕವಿಯ ಪದ್ಯಗಳನ್ನು ಬದಲಾಯಿಸಿ ಅವನ ಪದಶಿಲ್ಪವನ್ನು ನಮ್ಮ ಮಾತುಗಳಿಂದ ತುಂಬಿಸುವುದು ಉದ್ಧತತನವೇ ಹೌದು. ಆದರೂ ಒಂದೇ ವಿಷಯವನ್ನು ಹೇಗೆ ಒಂದೇ ವೃತ್ತದಲ್ಲಿ ಬೇರೆ ಬೇರೆ ಶಬ್ದಗಳಿಂದ ಹೇಳಬಹುದು- ಹಾಗೂ ಅದೇ ಪದಗಳಿಂದ ಬೇರೆಯ ಛಂದಸ್ಸಿನಲ್ಲಿ ಶ್ರುತಿಸುಭಗವಾಗಿ (ಕಿವಿಗೆ ಹಿತವಾಗಿ) ಹೇಗೆ ಹೇಳಬಹುದಿತ್ತು ಎಂಬ ಸಾಧ್ಯತೆಗಳನ್ನು ಸಹೃದಯರಿಗೆ ನಿವೇದಿಸುವ ಚಾಪಲ್ಯದಿಂದ ಈ ಕಾರ್ಯಕ್ಕೆ ತೊಡಗಬೇಕಾಯಿತಷ್ಟೆ!
ಉಪಸಂಹಾರ-
ಆಂಡಯ್ಯನ “ಕಬ್ಬಿಗರ ಕಾವಂ” ಹೀಗೆ ಅಚ್ಚಗನ್ನಡದ ಪದಪ್ರಯೋಗಗಳಿಂದ ಕನ್ನಡಸಾಹಿತ್ಯದಲ್ಲಿ ವಿಶಿಷ್ಟತೆಯನ್ನು ಪಡೆದುಕೊಂಡಿದ್ದರೂ ಅದೇಕೆ ಜನಪ್ರಿಯತೆಯಿಂದ ದೂರವಾಯಿತೆಂದು ಅವಲೋಕಿಸಿದರೆ ಸ್ಪಷ್ಟವಾಗಿ ಗೋಚರಿಸುವುದು ಕಾವ್ಯದಲ್ಲಿ ರಸೋತ್ಪತ್ತಿಯ ಕೊರತೆಯಾದದ್ದು. ಕಥಾವಸ್ತುವಿನಲ್ಲಿ ಮಾರ್ಪಾಡು ಮಾಡಿಕೊಂಡಿದ್ದರಲ್ಲಿ ಸೊಗಸಿಲ್ಲದುದು ವಿಸ್ತೀರ್ಣವಿಲ್ಲದುದೂ ಒಂದು ಕಾರಣ. ಕಥಾವಸ್ತುವನ್ನು ಜೈನಮತಕ್ಕೆ ಪೂರಕವಾಗಿಯೂ ಮಾಡಿಕೊಂಡಿಲ್ಲ, ಮೂಲಕ್ಕೂ ನಿಷ್ಠವಾಗಿಲ್ಲ! ಕಾಮದ ಪಾರಮ್ಯವನ್ನು ಜೈನಮತವೂ ಸಮರ್ಥಿಸುವುದಿಲ್ಲವೆಂಬುದರ ಕಡೆ ಕವಿ ಜಾಣಗುರುಡನ್ನು ತೋರುವುದು ಆಶ್ಚರ್ಯ! ಹಾಗೆಯೇ ಅಚ್ಚಗನ್ನಡವೆಂದು ನಿತ್ಯೋಪಯೋಗಿಯಾದ ಭಾಷೆಗಿಂತ ದೂರದ ಭಾಷೆಯ ಬಳಕೆಯನ್ನು ಮಾಡಿದ್ದು ಇನ್ನೊಂದು ಕಾರಣವೆನ್ನಬಹುದು. ವರ್ಣನೆಗಳಲ್ಲಿ ಗಾಂಭೀರ್ಯವಿಲ್ಲದಿರುವುದು ಪುನರುಕ್ತಿಯಾಗಿರುವುದು ಇವೆಲ್ಲ “ಕಾವನ ಗೆಲ್ಲಂ” ಸೋಲುವುದಕ್ಕೆ ಕಾರಣಗಳಾದವೆನ್ನಬಹುದು. ಅಚ್ಚಗನ್ನಡವನ್ನೇ ಬಳಸಬೇಕೆಂಬ ನಿಯಮವನ್ನಿಟ್ಟುಕೊಳ್ಳದಿದ್ದ ಮುಂದಿನ ಕವಿಗಳಾದ ಕುಮಾರವ್ಯಾಸ-ಲಕ್ಷ್ಮೀಶರಲ್ಲಿ ಕೂಡ ಕೆಲವೊಂದು ಪದ್ಯಗಳು ಅಚ್ಚಗನ್ನಡ ಶಬ್ದಗಳಿಂದಲೇ ನಿರ್ಮಿತವಾಗಿ ರಸ್ಯವಾಗಿಯೂ ಇರುವಂತಹುದನ್ನು ನಾವು ಕಾಣಬಹುದು. ಇಲ್ಲಿ ಆಂಡಯ್ಯ ಛಂದಸ್ಸಿನ ಆಯ್ಕೆಯಲ್ಲಿ ಎಡವಿದನೆಂಬುದು ಸ್ಪಷ್ಟವಾಗಿ ಕಾಣುತ್ತದೆ. ಇದೇ ವೃತ್ತಗಳ ಬದಲು ತ್ರಿಮೂರ್ತಿಗಣಘಟಿತಚ್ಛಂದಸ್ಸನ್ನೋ ಮಾತ್ರಾಚ್ಛಂದಸ್ಸನ್ನೋ ಬಳಸಿದ್ದರೆ ಇನ್ನಷ್ಟು ಸುಲಲಿತವಾಗುತ್ತಿತ್ತು ಸಹೃದಯಮಾನ್ಯವಾಗುತ್ತಿತ್ತು. ಪಂಪ-ರನ್ನ-ನಾಗವರ್ಮ ಮೊದಲಾದ ಪೂರ್ವಕವಿಗಳಿಗೂ ಕನ್ನಡ-ಸಂಸ್ಕೃತ ಭಾಷಾಸಂಬಂಧದ ಅರಿವಿದ್ದ ಕಾರಣ ಅವರ ಕಾವ್ಯಗಳಲ್ಲಿ ಇಂತಹ ನಿಯಮಗಳನ್ನು ಹಾಕಿಕೊಳ್ಳಲಿಲ್ಲ. ಮುದ್ದಣನೂ ಕೂಡ “ಕರ್ಮಣಿಯ ಸರದೊಳ್ ಚೆಂಬವಳಮಂ ಕೋದಂತೆ” ಎಂದು ಕನ್ನಡದಲ್ಲಿ ಸಂಸ್ಕೃತವನ್ನು ಬೆರೆಸಿರುವುದಕ್ಕೆ ಉಪಮೆಯನ್ನು ಕೊಡುತ್ತಾನೆ. ಇಂತಿದ್ದರೂ ಆಂಡಯ್ಯನ “ಕಬ್ಬಿಗರ ಕಾವಂ” ಕಾವ್ಯವನ್ನು ಗಮನಿಸಿದರೆ ಕನ್ನಡದಲ್ಲಿ ತದ್ಭವಸೃಷ್ಟಿಯಾಗುವ ಪರಿಯನ್ನು ಗಮನಿಸಬಹುದು. ಗಂಭೀರವಾದ ಭಾಷಾಶಾಸ್ತ್ರದ ಅಧ್ಯಯನಕ್ಕೆ ಇದು ಪೂರಕವಾಗುತ್ತದೆ ಎಂಬುದಂತೂ ನಿಸ್ಸಂಶಯ. ಇವುಗಳೆಲ್ಲವುಗಳ ಹೊರತಾಗಿ ನಾರಿಕೇಳ ಪಾಕದ ಕಾವ್ಯಕ್ಕೆ ಉದಾಹರಣೆಯಾಗಿ ಇದನ್ನು ಹೆಸರಿಸಬಹುದಷ್ಟೆ.
ಕೊಳೆತುದೊ ನಾರಿಕೇಳದೊಳಗೇ ಸವಿಯೋ ಅದು ಕಷ್ಟವೇದ್ಯಮೈ!
______________________________________________________________________________
(ಪ್ರಸ್ತುತ ಲೇಖನದಲ್ಲಿ ಆಂಡಯ್ಯ ಸಂಸ್ಕೃತ ಶಬ್ದಗಳನ್ನು ಬಳಸಿದ್ದಾನೆ ಎಂದು ಬರೆದಿದ್ದೆ. ಆದರೆ ಅದು ನನಗೆ ದೊರೆತ ಪುಸ್ತಕದಲ್ಲಿ ಮಾತ್ರವೇ ಇರುವ ದೋಷವೆಂದು ಮಿತ್ರ ಮಂಜುನಾಥ ಹೆಗಡೆ ಇವರಿಂದ ಗೊತ್ತಾಯಿತು. ಆಂಡಯ್ಯ ಅದಕ್ಕೆ ಸಮರ್ಪಕವಾದ ಅಚ್ಚಗನ್ನಡದ ಶಬ್ದಗಳನ್ನೇ ಬಳಸಿದ್ದಾನೆ. ಸಖಿ ಎಂಬ ಶಬ್ದದ ಶುದ್ಧರೂಪ ಸಬರಿ ಎಂದು, ಅವಸರ ಎಂಬುದಕ್ಕೆ ಪಸರ ಎಂಬ ಶಬ್ದ ಶಿವ ಎಂಬ ಶಬ್ದದ ಬದಲಿಗೆ ನಾಡೆರೆಯ ಎಂಬ ಶಬ್ದವೂ ಇದೆ. ಶುದ್ಧಪ್ರತಿಗಾಗಿ ಶ್ರೀ ರಾಮಾನುಜಯ್ಯಂಗಾರ್ ಅವರಿಂದ ಸಂಪಾದಿತ ಪ್ರತಿ ಗಮನಿಸಬಹುದು. ೧೯೩೦ರ ಮುದ್ರಣ. ಮೈಸೂರು ಪಂಪಾಚಾರ್ಯ ಇಲೆಕ್ಟ್ರಿಕ್ ಪ್ರೆಸ್ ಇಂದ ಪ್ರಕಟಿತ. )
ಟಿಪ್ಪಣಿಗಳು:-
೧.ಕನ್ನಡ ಸಾಹಿತ್ಯ ಚರಿತ್ರೆ- ಶ್ರೀ ರಂ.ಶ್ರೀ ಮುಗಳಿ- ಗೀತಾ ಬುಕ್ ಹೌಸ್ ಪ್ರಕಾಶನ ಮೈಸೂರು- ಹದಿನಾರನೆಯ ಮುದ್ರಣ(೨೦೦೯)
೨.”ಉಪೋದ್ಘಾತ” ಆಂಡಯ್ಯ ಕವಿಯ ಕಬ್ಬಿಗರ ಕಾವಂ- ಗದ್ಯಾನುವಾದ ಶ್ರೀ ಆರ್ ವಿ ಕುಲಕರ್ಣಿ- ಕನ್ನಡ ಸಾಹಿತ್ಯ ಪರಿಷತ್ತು- ಮುದ್ರಣ ೨೦೧೧
೩.ರುದ್ರಭಟ್ಟವಿರಚಿತ ಜಗನ್ನಾಥವಿಜಯಂ- ಗದ್ಯಾನುವಾದ-ಆಸ್ಥಾನವಿದ್ವಾನ್ ಯಂ.ಆರ್.ವರದಾಚಾರ್ಯ- ಕನ್ನಡ ಸಾಹಿತ್ಯ ಪರಿಷತ್ತು- ಮುದ್ರಣ ೧೯೯೯
೪. ಅಲಂಕಾರಶಾಸ್ತ್ರ- ಡಾ|| ಆರ್ ಗಣೇಶ್.-ಭವನದ ಗಾಂಧೀಕೇಂದ್ರ ಪ್ರಕಾಶನ- ಮೊದಲ ಮುದ್ರಣ-೨೦೦೨
೫. ತೀ.ನಂ ಶ್ರೀಕಂಠಯ್ಯನವರ “ಭಾರತೀಯ ಕಾವ್ಯಮೀಮಾಂಸೆ”ಯಲ್ಲಿ ೨೬೪ನೇ ಪದ್ಯ ಎಂದು ಉದ್ಧೃತವಾಗಿದೆ.(ಪುಟ ೩೫೫) ಪ್ರಸಾರಾಂಗ ಮೈಸೂರು ವಿಶ್ವವಿದ್ಯಾಲಯ-ಒಂಬತ್ತನೆಯ ಮುದ್ರಣ ೨೦೧೦
೬. ಸಂಕ್ಷಿಪ್ತ ಕನ್ನಡ ನಿಘಂಟು- ಕನ್ನಡ ಸಾಹಿತ್ಯ ಪರಿಷತ್ತು
೭.“ಧಾತುಪ್ರಕರಣಂ”- ಕೇಶಿರಾಜವಿರಚಿತ ಶಬ್ದಮಣಿದರ್ಪಣಂ- ಪರಿಷ್ಕೃತಮುದ್ರಣದ ಸಂಪಾದಕ ಡಾ||ಟಿ.ವಿ.ವೆಂಕಟಾಚಲಶಾಸ್ತ್ರೀ- ಕನ್ನಡ ಸಾಹಿತ್ಯ ಪರಿಷತ್ತು- ಮುದ್ರಣ ೨೦೧೧
೮. ಭಾರತೀಯ ಕಾವ್ಯಮೀಮಾಂಸೆ (ಪುಟ ೩೫೬)- ತೀ.ನಂ.ಶ್ರೀಕಂಠಯ್ಯ- ಪ್ರಸಾರಾಂಗ ಮೈಸೂರು ವಿಶ್ವವಿದ್ಯಾಲಯ- ಒಂಬತ್ತನೆಯ ಮುದ್ರಣ ೨೦೧೦
೯. ಭಾರತೀಯಚ್ಛಂದಶ್ಶಾಸ್ತ್ರಕ್ಕೆ ಸೇಡಿಯಾಪು ಕೊಡುಗೆ- ಹಾಸುಬೀಸು- ಡಾ|| ಆರ್ ಗಣೇಶ್- ವಸಂತಪ್ರಕಾಶನ- ಮುದ್ರಣ-೨೦೦೯
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~