Powered By Blogger

ಭಾನುವಾರ, ಜನವರಿ 17, 2016

ಸಹೃದಯಕಾಲ೨೧- ಪಂಚಪಾಷಾಣ

    ರುದ್ರಭಟ್ಟನ ಜಗನ್ನಾಥವಿಜಯಂ ಕಾವ್ಯದ ಮೊದಲ ಐದು ಪ್ರಾರ್ಥನಾಪದ್ಯಗಳನ್ನು ವಿದ್ವಾಂಸರು ಪಂಚಪಾಷಾಣ ಎಂದು ಕರೆದಿದ್ದಾರೆ. ಅವುಗಳಿಗೆ ಸಂಸ್ಕೃತದಲ್ಲಿ ಕೂಡ ವ್ಯಾಖ್ಯಾನವನ್ನು ಬರೆದಿದ್ದಾರಂತೆ. ತನ್ನ ಇಷ್ಟದೈವವಾದ ಶ್ರೀಕೃಷ್ಣನನ್ನು ಸ್ತುತಿಸುವ ಜೊತೆಯಲ್ಲಿ ಆಶ್ರಯದಾತನಾದ ಬಲ್ಲಾಳರಾಯನನ್ನೂ ಸ್ತುತಿಸುವಂತೆ ಎರಡೆರಡು ಅರ್ಥಗಳು ಬರುವಂತೆ ಮೊದಲ ಪದ್ಯಗಳಿದ್ದರೆ ಮುಂದಿನ ಪದ್ಯಗಳಲ್ಲಿ ಕ್ರಮವಾಗಿ ಬ್ರಹ್ಮ, ಶಿವ, ಸೂರ್ಯ, ಗಣಪತಿ ಇವರ ಸ್ತುತಿಯನ್ನೂ ಅದರೊಡನೆ ಆಶ್ರಯದಾತನಾದ ಬಲ್ಲಾಳ ರಾಜನ ಪರವಾಗಿ ಹಾಗೂ ಇಷ್ಟದೈವ-ಶ್ರೀಕೃಷ್ಣನ ಪರವಾಗಿ ಕೂಡ ಅರ್ಥಗಳು ಬರುವಂತೆ ಮೂರು ಅರ್ಥಗಳುಳ್ಳ ಪದ್ಯಗಳನ್ನು ಬರೆದಿದ್ದಾನೆ. ಇವುಗಳನ್ನು ಹಿಂದೊಮ್ಮೆ facebook ಅಲ್ಲಿ ಬರೆದಿದ್ದೆನಾದರೂ ಸಂಕಲಿಸಿ ಹಾಕಿರಲಿಲ್ಲ. ಬಿಡಿ ಬಿಡಿಯಾದ ಪದ್ಯಾರ್ಥಗಳಾಗಿ ಅಲ್ಲಲ್ಲಿ ಕಿತ್ತ ಹಾರದ ಹೂಗಳಂತೆ ಚೆದುರಿ ಹೋಗಿದ್ದವು. ಮತ್ತದನ್ನೇ ಮುತ್ತು ಕಟ್ಟುವಂತೆ ಕೋದು ಇಲ್ಲಿ ಹಾಕುತ್ತಿದ್ದೇನಷ್ಟೆ. ಸ್ವಲ್ಪ ದೀರ್ಘವಾದರೂ ರುದ್ರಭಟ್ಟನ ಕ್ಲೇಶಕ್ಕೆ ಇಷ್ಟು ವಿಸ್ತಾರ ಬೇಕಷ್ಟೇ! 
   ಇಂತಹ ಪದ್ಯಗಳಲ್ಲಿ ರಸವೆಂಬುದು ಕಡಿಮೆಯೇ! ಪಾಷಾಣದಿಂದೆಂತು ರಸಮೊಸರುವುದು!! ಆದರೆ ಕವಿಯ ಪಾಂಡಿತ್ಯ ವ್ಯುತ್ಪತ್ತಿಗಳಿಗೆಲ್ಲ ನಿಕಷವಾಗಿ ತೋರುವ ಇಂತಹ ಪದ್ಯಗಳೂ ಕನ್ನಡಕಾವ್ಯಗಳಲ್ಲಿ ಸಂಸ್ಕೃತಪಂಡಿತರನ್ನೂ ಬೆಚ್ಚಿಬೀಳಿಸುವಂತೆ ಅಲ್ಲಲ್ಲಿ ಅಡಗಿವೆ ಎಂದರೆ ಅತಿಶಯೋಕ್ತಿಯಾಗಲಾರದು. ಹಾಗಾಗಿ ಅವುಗಳ ಕಡೆಗೂ ಸಹೃದಯರ ಕೃಪಾಕಟಾಕ್ಷ ಬೀಳಲಿ ಎಂಬ ಇಚ್ಛೆಯೊಡನೆ  ಪದನ್ಯಾಸ ಮಾಡುವೆ-

ಶಾ||
ಶ್ರೀರಾಮಾನಟಿ ಕೌಸ್ತುಭದ್ಯುತಿಕಿರತ್ಪುಷ್ಪಾಂಜಲಿಕ್ಷೇಪವ-

ಕ್ಷೋರಂಗಸ್ಥಿತೆಯಾದ ಪಾದನಖರೋಚಿರ್ಗಂಗೆ ಪೃಥ್ವೀಶಕೋ-
ಟೀರವ್ಯಾಪ್ತಿಗೆ ಸಂದ ಚಕ್ರರವಿ ದೈತ್ಯಧ್ವಾಂತಮಂ ಗೆಲ್ದ ಭೂ-
ಭಾರಚ್ಛೇದವಿನೋದಿ ಕೃಷ್ಣನೆಮಗೀಗಾನಂದ ಸಂದೋಹಮಂ ||೧||
(ಕೃಷ್ಣನ ಪರವಾದ ಅರ್ಥ- ಲಕ್ಷ್ಮಿಯು ನಟಿಯಂತೆ ಪುಷ್ಪಾಂಜಲಿಯನ್ನೆರಚಲು ಅದು ಯಾರ ಎದೆಯ ರಂಗದ ಮೇಲೆ ಕೌಸ್ತುಭಮಣಿಯ ಬೆಳಕಿನಂತಿದೆಯೋ, ಯಾರ ಕಾಲ ಉಗುರಿನ ಕಾಂತಿಯಂತಿರುವ ಗಂಗೆ ಭೂಮಿಯ ಈಶನ ಕಿರೀಟದ ವ್ಯಾಪ್ತಿಗೆ ಬಂದಿರುವುದೋ, ಯಾರ ಚಕ್ರವೆಂಬ ಸೂರ್ಯ ದೈತ್ಯರೆಂಬ ಕತ್ತಲೆಯನ್ನು ಸೋಲಿಸಿತೊ, ಆ ಭೂಭಾರವನ್ನು ಛೇದಿಸುವುದರಲ್ಲಿ ವಿನೋದಿಸುತ್ತಿರುವ ಕೃಷ್ಣನು ನಮಗೆ ಸಂತೋಷವನ್ನು ನೀಡಲಿ)
(ಆಶ್ರಯದಾತನಾದ ಬಲ್ಲಾಳರಾಯನ ಪರವಾದ ಅರ್ಥ- ಸಂಪತ್ತು ಎಂಬ ನಟಿ ಕೌಸ್ತುಭಮಣಿಯ ಕಾಂತಿಯಂತೆ ಯಾರ ಎದೆಯೆಂಬ ರಂಗದ ಮೇಲೆ ಪುಷ್ಪಾಂಜಲಿಯನ್ನು ಕ್ಷೇಪಿಸುತ್ತಿದ್ದಾಳೋ, ಯಾರ ಕಾಲುಗುರಿನ ಕಾಂತಿಯ ಗಂಗೆ ಉಳಿದ ರಾಜರ ಕಿರೀಟದಲ್ಲಿ ವ್ಯಾಪಿಸುವುದೋ ಯಾರ ಸೈನ್ಯವೆಂಬ ಸೂರ್ಯ ದೈತ್ಯರೆಂಬ ಕತ್ತಲೆಯ ನಾಶವನ್ನು ಮಾಡುತ್ತಿರುವುದೋ, ಭೂಭಾರವನ್ನು ಛೇದಿಸುವ ಕೃಷ್ಣನಲ್ಲಿ ಭಕ್ತನಾದ ಆ ಬಲ್ಲಾಳನು ನಮಗೆ ಆನಂದವನ್ನು ನೀಡಲಿ)

ಚಂ||
ಜನನುತರಾಜಹಂಸನಯನಂ ಕಮಲಾವಸಥಂ ಕಳಾನಿಕೇ
ತನನೆನಿಸಿರ್ದ ಪೆಂಪುಪಮೆವೆತ್ತೊಡಮೇನೊ ಹಿರಣ್ಯಗರ್ಭನೆಂ

ದೆನಿಸಿಯುದಾರನಾಗಿ ರಜಮೊಂದಿಯೆ ಸತ್ತ್ವನಿಧಾನನೆಂಬ ಪೆಂ
ಪನುಗುಣಮಾದ ಲೋಕಪಿತನೊಲ್ದು ಚತುರ್ಮುಖನೀಗೆ ರಾಗಮಂ||೨||
(ಬ್ರಹ್ಮಪರವಾದ ಅರ್ಥ-ಜನರಿಂದ ಸ್ತುತಿಸಲ್ಪಟ್ಟ ರಾಜಹಂಸವನ್ನು ವಾಹನವಾಗಿ ಉಳ್ಳ ಕಮಲದಲ್ಲಿ ವಾಸವಾಗಿರುವ, ಕಲೆಗಳಿಗೆ ಆಶ್ರಯನೆಂಬ ಗರಿಮೆಯನ್ನು ಹೊತ್ತವನೂ ಹಿರಣ್ಯಗರ್ಭ ಎಂದೆನಿಸಿ ಉದಾರನಾಗಿರುವ ರಜಸ್ಸಿನಲ್ಲಿದ್ದರೂ ಸತ್ತ್ವನಿಧಾನ ಎಂಬ ಮಹನೀಯತೆಯನ್ನು ಹೊಂದಿದ ಲೋಕಪಿತನಾದ ನಾಲ್ಕು ಮುಖವುಳ್ಳ ಬ್ರಹ್ಮನು ಒಲಿದು ರಾಗವನ್ನು ನೀಡಲಿ)
(ಕೃಷ್ಣಪರವಾದ ಅರ್ಥ- ಜನರಿಂದ ಸಂಸ್ತುತರಾದ ಚಂದ್ರಸೂರ್ಯರನ್ನೇ ಕಣ್ಣುಗಳನ್ನಾಗಿ ಹೊಂದಿದ/ ಜನರಿಂದ ಸಂಸ್ತುತರಾದ ರಾಜಹಂಸ-ಯೋಗಿಗಳನ್ನು ಪರಮಪದಕ್ಕೊಯ್ಯುವ, ಲಕ್ಷ್ಮಿಯ ಆವಾಸವಾಗಿರುವ ಕಳಾನಿ(ಗರುಡ)ಯ ಧ್ವಜವನ್ನು ಹೊಂದಿರುವವನೂ, ಹಿರಣ್ಯಗರ್ಭ ಎಂದೆನಿಸಿ ಉದಾರನಾಗಿರುವ ರಾಜಸಗುಣವಿದ್ದರೂ ಸತ್ತ್ವಕ್ಕೆ ನೆಲೆಯೆಂಬ ಮಹಿಮೆಯನ್ನು ಹೊಂದಿರುವ ಲೋಕಕ್ಕೇ ಪಿತೃವಾದ ಚತುರ್ಯುಗಮುಖ್ಯನಾದ ಕೃಷ್ಣನು ನಮಗೆ ತೋಷವನ್ನು ನೀಡಲಿ)
(ರಾಜ ಬಲ್ಲಾಳನ ಪರವಾದ ಅರ್ಥ- ಜನರಿಂದ ಸ್ತುತರಾದ ಶ್ರೇಷ್ಠರಾಜರ ನಾಯಕನಾದ, ಐಶ್ವರ್ಯಕ್ಕೆ ನಿವಾಸನಾದ, ಕಲೆಗಳಿಗೆ ಆಶ್ರಯವನ್ನು ನೀಡಿದ, ಚಿನ್ನದ ನಿಧಿಯಾದ, ಉದಾರಿಯಾದ, ರಾಜಸ ಗುಣದಿಂದ(ರಾಜನಾಗಿ) ಇದ್ದರೂ ಸತ್ತ್ವನಿಧಾನನಾಗಿರುವ ಮಹಿಮೆಯನ್ನು ಹೊಂದಿದ, ಲೋಕವನ್ನು ತಂದೆಯಂತೆ ಕಾಪಾಡುವ ಚತುರಂಗಬಲದಲ್ಲಿ/ ಉಪಾಯಚತುಷ್ಕದಲ್ಲಿ ದೃಷ್ಟಿಯುಳ್ಳ ರಾಜನು ನಮಗೆ ಸಂತಸವನ್ನು ಕೊಡಲಿ)
 ಮ.ವಿ||
ಅರಿಕಾಮಧ್ವಂಸಿ ನಾಗವ್ರಜಮಯಕಟಕಂ ರಾಜರಾಜಪ್ರತಿಷ್ಠಾ-
ನಿರತಂ ಲೀಲಾಕ್ರಮೋಂದಚಿತ ನಿರವಧಿ ಗಾಂಗೇಯಕಂ ದ್ವಿಟ್ಪುರಧ್ವಂ-
ಸರತಕ್ರೋಧಂ ವೃಷಾಂಕಂ ವಿಬುಧನುತನುಮಾಕಾಮಿನೀ ಜೀವಿತೇಶಂ
ಪರಮೈಶ್ವರ್ಯಾಸ್ಪದಂ ರಕ್ಷಿಸುಗೆ ವಸುಧೆಯಂ ಯುದ್ಧರಂಗತ್ರಿಣೇತ್ರಂ||೩||

(ಶಿವನ ಪರವಾದ ಅರ್ಥ- ಶತ್ರುವಾದ ಕಾಮನನ್ನು ನಾಶಪಡಿಸಿದವನು, ಸರ್ಪಕುಲವನ್ನೇ ಆಭರಣಗಳನ್ನಾಗಿ ಉಳ್ಳವನು ಕುಬೇರನನ್ನು ಪ್ರತಿಷ್ಠಾಪಿಸಲು ನಿರತನಾದವನು, ಲೀಲೆಯೆಂಬಂತೆ ಗಂಗೆಯನ್ನು ಉದ್ಧರಿಸಿದವನು, ಶತ್ರುಗಳಾದ ತ್ರಿಪುರಾಸುರಸಂಹಾರದ ಕ್ರೋಧವುಳ್ಳವನು, ಎತ್ತನ್ನು ಧ್ವಜವಾಗಿ ಉಳ್ಳವನು, ವಿದ್ವಾಂಸರಿಂದ ಸ್ತುತಿಸಲ್ಪಟ್ಟವನು, ಉಮಾ-ಪಾರ್ವತಿಯ ಪ್ರಾಣಕಾಂತನು, ಪರಮ ಐಶ್ವರ್ಯಗಳನ್ನು ಹೊಂದಿದ ಯುದ್ಧರಂಗದಲ್ಲಿ ಮೂರುಕಣ್ಣುಳ್ಳವನಾದ ಶಿವನು ಭೂಮಿಯನ್ನು ರಕ್ಷಿಸಲಿ.)
(ಕೃಷ್ಣನ ಪರವಾದ ಅರ್ಥ- ಶತ್ರುಗಳ ಕಾಮವನ್ನು ಧ್ವಂಸಮಾಡಿದವನು, ಕಪಿಸಮೂಹವನ್ನು ಸೈನ್ಯವಾಗಿ ಹೊಂದಿದವನು, ಧರ್ಮರಾಜನ ರಾಹ್ಯಪ್ರತಿಷ್ಠಾಪನೆಯಲ್ಲಿ ನಿರತನಾದವನು, ಲೀಲೆಯಿಂದ ವೃದ್ಧನಾದ ಭೀಷ್ಮನಿಂದಲೂ ಸ್ತುತಿಸಲ್ಪಟ್ಟವನು, ಶತ್ರುಗಳ ಪುರವನ್ನು ನಾಶಮಾಡುವ ಕೋಪವುಳ್ಳವನು, ಧರ್ಮದಲ್ಲಿ ನಡೆಯುವವನು, ವಿದ್ವಾಂಸರಿಂದ ಸ್ತುತಿಸಲ್ಪಟ್ಟವನೂ ಆ ಲಕ್ಷ್ಮಿಯ ಪ್ರಾಣಕಾಂತನು, ಪರಮ ಐಶ್ವರ್ಯಗಳಿಗೆ ಆಶ್ರಯವಾದ ಯುದ್ಧರಂಗದಲ್ಲಿ ತ್ರಿಣೇತ್ರ ಎನಿಸಿಕೊಂಡವನಾದ ಕೃಷ್ಣನು ಭೂಮಿಯನ್ನು ಕಾಪಾಡಲಿ.)
(ಬಲ್ಲಾಳ ರಾಜನ ಪರವಾದ ಅರ್ಥ- ಶತ್ರುವಾದ ಕದಂಬ ಕಾಮದೇವನನ್ನು ಧ್ವಂಸಮಾಡಿದವನು, ಗಜಸೈನ್ಯವನ್ನು ಹೊಂದಿರುವವನು, ಚೋಳರಾಜನಾದ ರಾಜರಾಜನ ಪ್ರತಿಷ್ಠೆಯಲ್ಲಿ ನಿರತನಾದವನು, ಲೀಲೆಯಿಂದ ಸುವರ್ಣಭಂಡಾರವನ್ನು ಹೊಂದಿದವನು, ಶತ್ರುಗಳ ಪುರವನ್ನು ನಾಶಮಾಡುವುದರಲ್ಲಿ ಉಂಟಾದ ಕೋಪವುಳ್ಳವನು, ಧರ್ಮದ ನೆಲೆಯೂ, ವಿಬುಧರಿಂದ ಸ್ತುತಿಸಲ್ಪಟ್ಟವನೂ ಆಗಿ, ಉಮಾ ಎಂಬ ಹೆಸರಿನ ರಾಜ್ಞಿಯ ಪ್ರಾಣಕಾಂತನೂ ಪರಮೈಶ್ವರ್ಯವುಳ್ಳವನೂ ಆದ "ಯುದ್ಧರಂಗತ್ರಿಣೇತ್ರ" ಎಂಬ ಬಿರುದನ್ನೂ ಹೊಂದಿದ ಬಲ್ಲಾಳರಾಯನು ಭೂಮಿಯನ್ನು ರಕ್ಷಿಸಲಿ. (ಆಂಡಯ್ಯನ ಕಬ್ಬಿಗರ ಕಾವದಲ್ಲಿ ಕೂಡ ಈತನೊಡನೆ ಕದಂಬ ಕಾಮದೇವನ ವಿದ್ವೇಷವಿದ್ದುದಕ್ಕೆ ಸಾಕ್ಷಿಯಾಗಿ ಪದ್ಯಗಳು ಸಿಗುತ್ತವೆ) )
ಮ.ವಿ||
ಜನಚಿತ್ತಾಹ್ಲಾದಪಾದಂ ಸಕಲಧರಣಿಭೃನ್ಮಸ್ತಕನ್ಯಸ್ತಮಾಗಿ-
ರ್ಪಿನಮುಚ್ಚಂಡಪ್ರತಾಪೋದಯಮರಿಕುಮುದಾಭೋಗವಿಧ್ವಂಸಿಯಾಗಿ-
ರ್ಪಿನಮುದ್ಯನ್ಮಂಡಲಾಗ್ರಂ ಸಲೆ ಘನಪದವೀಶೋಭೆಯಂ ಪೆರ್ಚಿಸುತ್ತಿ-
ರ್ಪಿನಮೊಳ್ಪಂ ಪೆತ್ತುದಾತ್ತಂ ಬೆಳಗುಗೆ ಜಗಮಂ ಗೋಪಮಾರ್ತಂಡದೇವಂ||೪||

(ಸೂರ್ಯನ ಪರವಾದ ಅರ್ಥ- ಜನರ ಮನಸ್ಸಿಗೆ ಆನಂದವನ್ನು ತರುವ ಕಿರಣಗಳನ್ನು ಹೊಂದಿರುವ, ಎಲ್ಲಾ ಪರ್ವತಾಗ್ರಗಳಲ್ಲಿಯೂ ಕಿರಣಗಳನ್ನು ಪಸರಿಸುತ್ತಿರುವಲ್ಲಿಗೆ, ಪ್ರಚಂಡವಾದ ತಾಪವನ್ನು ಹೊಂದಿರುವ ಉದಯದಿಂದ ಶತ್ರುಗಳಾದ ಕೆನ್ನೆಯ್ದಿಲೆ ಹೂಗಳ ಸೊಬಗನ್ನು ಮುದುಡಿಸುತ್ತಿರುವಲ್ಲಿಗೆ, ಉತ್ಕೃಷ್ಟವಾದ ಮಂಡಲದಿಂದ ಮೋಡಗಳು ಹೋಗುವ ಮಾರ್ಗವಾದ ಆಕಾಶದ ಶೋಭೆಯನ್ನು ಹೆಚ್ಚಿಸುತ್ತಿರುವಲ್ಲಿಗೆ, ಒಳ್ಳಿತನ್ನು ಹೆತ್ತು ಉದಾತ್ತನಾದ ಗೋಪಮಾರ್ತಂಡದೇವ(ಸೂರ್ಯ) ಜಗತ್ತನ್ನು ಬೆಳಗಲಿ)
(ಕೃಷ್ಣನ ಪರವಾದ ಅರ್ಥ- ಜನರ ಮನಸ್ಸಿಗೆ ಯಾರ ಪಾದಗಳು ಸಂತೋಷವನ್ನು ಕೊಡುತ್ತವೆಯೋ, ಇಡೀ ಭೂಮಂಡಲದ ರಾಜನಾದ ಬಲಿಯ ತಲೆಯ ಮೇಲೆ ಯಾರ ಪಾದಗಳು ಇಡಲ್ಪಟ್ಟವೋ, ಯಾರ ಪ್ರಚಂಡಪ್ರತಾಪದ ಉದಯದಿಂದ ಶತ್ರುರಾಜರ ಕೆಟ್ಟ ಸಂತೋಷದ ಆಭೋಗದ ವಿಧ್ವಂಸನವಾಗುತ್ತಿದೆಯೋ, ಯಾರ ಖಡ್ಗದಿಂದ ಘನಪದವಿ(ಆಕಾಶ/ ದೊಡ್ಡ ಸ್ಥಾನಗಳು)ಯ ಶೋಭೆಯನ್ನು ಹೆಚ್ಚಿಸುತ್ತಿವೆಯೋ, ಒಳ್ಳಿತನ್ನು ಹೆತ್ತ ಉದಾತ್ತನಾದ ಆ ಗೋಪಾಲಕ-ಮಾರ್ತಂಡ ಕೃಷ್ಣನು ಜಗತ್ತನ್ನು ಬೆಳಗಲಿ)
(ಬಲ್ಲಾಳರಾಯನ ಪರವಾದ ಅರ್ಥ- ಜನರಿಗೆ ಸಂತೋಷವನ್ನು ಕೊಡುವ ಪಾದಗಳುಳ್ಳ, ಸಕಲ ರಾಜರೂ ಯಾರ ಪಾದಗಳನ್ನು ತಲೆಯಲ್ಲಿ ತಳೆಯುವರೋ, ಯಾರ ಪ್ರತಾಪದಿಂದ ಅರಿರಾಜರ ಕೆಟ್ಟ ಸಂತೋಷನಾಶವಾಗುತ್ತವೆಯೋ, ಯಾರ ಹೊಳೆಯುವ ಖಡ್ಗದಿಂದ ಅವನ ಉನ್ನತ ಮಾರ್ಗದ ಶೋಭೆ ಹೆಚ್ಚುತ್ತಿದೆಯೋ ಆ ಒಳ್ಳಿತನ್ನು ಹೊಂದಿರುವ ಉದಾತ್ತನಾದ ಗೋಪಮಾರ್ತಂಡದೇವನಾದ ಬಲ್ಲಾಳರಾಯನು ಜಗತ್ತನ್ನು ಬೆಳಗಲಿ)

ಮ.ವಿ||
Image result for ರುದ್ರಭಟ್ಟ ಜಗನ್ನಾಥ
ಚಿತ್ರಕೃಪೆ-ಅಂತರ್ಜಾಲ
ಅರಿರೌದ್ರಂ ಕರದೈರ್ಘ್ಯಮುಲ್ಲಸದಹೀನಾಲಂಕೃತಂ ಮೂರ್ತಿ ಸಾ-
ಕ್ಷರಸೇವ್ಯಂ ನಿಜವಿದ್ಯೆ ವಿಶ್ವವಿನುತಂ ಪಾದಂ ಸದಾಳಿಪ್ರಿಯಂ
ವರದಾನಂ ನತಭದ್ರಲಕ್ಷಣಪದಂ ಪದ್ಮಾನುಷಂಗಿತ್ವಮಾ
ಗಿರೆ ಪೆಂಪಚ್ಚರಿಯಾಗೆ ದೇವಗಣಪಂ ರಕ್ಷಿಕ್ಕೆ ಭೂಚಕ್ರಮಂ||೫||
(ಗಣಪತಿಯ ಪರವಾದ ಅರ್ಥ- ಶತ್ರುಗಳಿಗೆ ಭುಂಕರವಾದ ದೀರ್ಘವಾದ ಸೊಂಡಿಲುಳ್ಳವನು, ಉಲ್ಲಸಿತವಾದ ನಾಗರಾಜನನ್ನು ಅಲಂಕಾರವಾಗಿ ಹೊಂದಿದವ ಮೂರ್ತಿ, ವಿದ್ವಾಂಸರಿಂದ ಸೇವಿತನಾದವನು, ಸಹಜವಾದ ವಿದ್ಯೆಯುಳ್ಳ ವಿಶ್ವವಿನುತವಾದ ಪಾದಗಳುಳ್ಳ, ಸದಾ ದುಂಬಿಗಳಿಗೆ ಪ್ರಿಯವಾದ ಮದಧಾರೆಯನ್ನು ಹೊಂದುಲಿರುವ, ನಮಸ್ಕರಿಸುವವರಿಗೆ ಮಂಗಳವನ್ನುಂಟುಮಾಡುವ, ಕಮಲವನ್ನು ಧರಿಸಿರುವ, ಅಚ್ಚರಿಯನ್ನುಂಟುಮಾಡುವ ಮಹಿಮೆಯುಳ್ಳ ದೇವನಾದ ಗಣಪನು ಭೂಮಿಯನ್ನು ರಕ್ಷಿಸಲಿ)
(ಕೃಷ್ಣನ ಪರವಾದ ಅರ್ಥ- ಶತ್ರುಗಳಿಗೆ ಭಯಂಕರವಾಗಿರುವ, ದೀರ್ಘವಾದ ಬಾಹುಗಳುಳ್ಳ, ಒಳ್ಳೆಯ ಅಲಂಕಾರಗಳನ್ನು ಹೊಂದಿರುವ, ಯೋಗಿಗಳಿಂದ ಸೇವಿತನಾದ,ವಿಶ್ವಸ್ತುತವಾದ ವಿದ್ಯೆಯಾದ, ಸದಾ ಸಜ್ಜನರಿಗೆ ಪ್ರಿಯವಾದ ಪಾದಗಳುಳ್ಳ, ವರದಾನ ಮಾಡುವ, ಭಕ್ತರಿಗೆ ಒಳ್ಳೆಯ ಸ್ಥಾನವನ್ನು ಕಲ್ಪಿಸುವ, ಲಕ್ಷ್ಮೀಸಮೇತನಾದ, ಆಶ್ಚರ್ಯವನ್ನು ಹುಟ್ಟಿಸುವಂತಹ ಮಹಿಮೆಯುಳ್ಳ, ದೇವಗಣಕ್ಕೆ ಒಡೆಯನಾದ ವಿಷ್ಣು ಭೂಮಂಡಲವನ್ನು ರಕ್ಷಿಸಲಿ.)
(ಬಲ್ಲಾಳರಾಯನ ಪರವಾದ ಅರ್ಥ- ಶತ್ರುಗಳಿಗೆ ರುದ್ರಸ್ವರೂಪನಾದ, ದೀರ್ಘವಾದ ಕರಗಳುಳ್ಳ, ಹೀನವಲ್ಲದ ಅಲಂಕಾರಗಲನ್ನು ಹೊಂದಿರುವ, ವಿದ್ವಜ್ಜನರಿಂದ ಸೇವ್ಯನಾದ, ವಿಶ್ವಸ್ತುತವಾದ ವಿದ್ಯೆಯುಳ್ಳ, ಸದಾ ಸಜ್ಜನರಿಗೆ ಪ್ರಿಯವಾದ ಪಾದವುಳ್ಳ, ವರದಾತನಾಗಿರುವ, ಆನತ ಜನರಿಗೆ ಮಂಗಳವನ್ನುಂಟುನಾಡುವ ಸ್ಥಾನದಲ್ಲಿರುವ, ಸಂಪತ್ತಿನಿಂದ ಕೂಡಿರುವ, ಆಶ್ಚರ್ಯವಾದ ಮಹಿಮೆಯುಳ್ಳ ದೇವಗಣಗಳಿಗೂ ಒಡೆಯನಾದ ಬಲ್ಲಾಳರಾಯನು ಭೂಮಿಯನ್ನು ರಕ್ಷಿಸಲಿ)


ಹಲವು ಕಾಲದಿಂದ ಡ್ರಾಫ್ಟನಲ್ಲಿದ್ದ ಈ ಲೇಖನಕ್ಕೆ ಮುಕ್ತಿ ಸಿಕ್ಕ ಕಾರಣ ಹೊಸದಾಗಿ ಶೀಘ್ರದಲ್ಲಿ ರಸಮಯವಾದ ಪದ್ಯಗಳನ್ನು ಮತ್ತೆ ಹಂಚಿಕೊಳ್ಳಲು ಪ್ರಾರಂಭಿಸುವೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ