ಬುಧವಾರ, ಏಪ್ರಿಲ್ 11, 2012

ಭೂಕಂಪನ

ಚಿತ್ರಕೃಪೆ ಪದ್ಯಪಾನ(ನನ್ನ ಚೊಚ್ಚಲ ಸೀಸ ಪದ್ಯ- ಭಾಷೆಯಲ್ಲಿ ಹಳೆ-ಹೊಸಗನ್ನಡಗಳೆಲ್ಲ ಸೇರಿ ಅಡುಗೆಯ ಹೊಸರುಚಿಪ್ರಯೋಗದಂತೆ ಆಗಿದೆ.) (ಇಂದು ಪದ್ಯ ಬರೆಯಲು ಪ್ರಾರಂಭಿಸಿದ ವೇಳೆಗೇ ಸುಮಾತ್ರದಲ್ಲಿ ಕಾಕತಾಳೀಯವಾಗಿ ಭೂಕಂಪನವಾದದ್ದು ವಿಷಾದನೀಯ:-( )

ಭೂದೇವಿ ಭಾರದಿಂ ರೋಸಿಹಳು ಮೇಣ್ ವಿಷ್ಣು -
ವಿರಹದಿಂ ತಪ್ತಳೆಂತೆಂಬವೋಲೇ |
ಶ್ರೀದೇವಿಯೊಡನಿರ್ಪ ಮಚ್ಚರದಿ ಕೊನರಿ ತಾ
ಪೊರಮಟ್ಟು ನಿಂತಳೈ ಹರಿಯ ಕಡೆಗೆ |
ಕಾದು ಸೂರ್ಯನ ಬಿಸಿಗೆ ಕುದಿದು ಬಡಬಾನಲಕೆ
ಕಂಪಿಸಿರ್ಪಳು ಜನರ ಕ್ರೂರ ನಡೆಯಿಂ |
ಗುಡುಗಿ ತಾ ಕೊಡವಿದಳು ಸೌಧಗಳನರೆ ಕ್ಷಣದಿ
ಜಠರಾಗ್ನಿಗಾಹುತಿಯನಿಕ್ಕುತಿರ್ಪಳ್ ||

ಕಾಲವಶವಾಗಿರಲು ಬಂಧುಜೀವಿಗಳೆಲ್ಲವೂ
ರೋದಿಸುವರಿತ್ತಕಡೆ ಬದುಕಿರ್ಪ ಬಾಂಧವರ್ಗಳ್|
ಏನೀ ವಿಪರ್ಯಾಸ ? ಮಾಳ್ಪ ತಪ್ಪಿಗೆ ಪಡೆದುದಂ
ಕಂಡು ದುಃಖವ ಪೊಂದಿ, ವಿಧಿಯ ನಿಂದಿಸುವುದಲ್ತೇ?
 -ಗಣೇಶ ಕೊಪ್ಪಲತೋಟ