Powered By Blogger

ಮಂಗಳವಾರ, ಏಪ್ರಿಲ್ 3, 2012

ಮತ್ತೆಲೆತ್ತ ಭಾಗ-2

 ಈ ಲೇಖನದ ಮೊದಲ ಭಾಗ:- ಮತ್ತೆಲೆತ್ತ ಭಾಗ-1
    ಅಂತುಮಾತಂಗೆ ವೈವಾಹಕರ್ಮಂಗಳಂ ನಿಶ್ಚಯಿಸಿ ಆತನಮ್ಮೆ ಜಾನಕಿಯೆಂಬಾಕೆಯಂ ಲಗ್ನಮಾಡಿಕೊಟ್ಟುಮಾತನ ಗೃಹಪ್ರವೇಶಮಂ ಮಾಡಿಸಿದಂ ವೈವಾಹಕರ್ಮಾದಿಗಳ್ ಕಳೆದುಮೊಂದು ವರ್ಷ ಕಾಲಸಂದಲ್ಕೆ ರಾಮಚಂದ್ರಜಾನಕಿಯರ್ಗೆ ಪುತ್ರನೊರ್ವಂ ಪುಟ್ಟಿದನಾತಂಗೆ ತಾತನುಲಿದಂತೆ ಕುಶನೆಂಬ ನಾಮವಿಟ್ಟು ಕರೆದರ್ ಮತ್ತೊಂದು ವರ್ಷಕಳೆಯಲ್ಕೆ ರಾಮಚಂದ್ರಂ ಮತ್ತೊರ್ವ ಸುತಂಗೆ ಪಿತನಾದಂ, ಯಥಾಪೂರ್ವಮಾತಂಗೆ ಲವನೆಂಬಭಿಧಾನಮನಿಟ್ಟಮಿಂತಿರಲುಂ ಕಾಲಂ ಸಾಗುತ್ತಮಿರಲೊಂದು ದೆವಸಂ ರಾಮಚಂದ್ರನಬ್ಬೆ ಪಂಚತ್ವವೊಂದಿದಳಾ ಪ್ರಸ್ತಾವದೊಳಾತಂ ಸಪತ್ನೀಕನಾಗಿ ಪುತ್ರರಿಂದೊಡಗೂಡಿಮಾ ಪಳ್ಳಿಗೈತಂದು ತಾಯ ಅಪರಕರ್ಮಂಗಳಂ ಮಾಡಿ ಕೆಲಂಕಾಲಮಂ ಕಳೆದುಂ ಮತ್ತೆ ಪಟ್ಟಣಕ್ಕೆ ಪೊರಮಟ್ಟಾಗಳ್ ಸ್ವಪತ್ನೀಪುತ್ರಸಹಿತನಾಗಿ ಪಿತಗಿಂತೆಂದಂ "ನೀವುಮೇತಕ್ಕೆಮ್ಮ ಜೊತೆ ಬರಲಾರಿರೈ? ಬೆಂಗಳೂರೊಳೆಮ್ಮ ಮನೆಯೊಂದಿರ್ಪುದಲ್ಲಿ ಎಮ್ಮೀರ್ವರ ಮಕ್ಕಳಂ ಸಲವುತ್ತಿರಲ್ಕೆ ನೀಂ ಬನ್ನಿರೌ" ಎಂದೆನಲ್ಕಾತನ ಜನಕ  ಮಾರ್ನುಡಿದಿಂತೆಂದಂ "ವತ್ಸ ಆಂ ವೃದ್ಧನಾಗಿರ್ಪೆ, ಕಾಲವಶನಾಗಲ್ಕೆ ಕಾಲಗಣನೆಯನುಂ ಮಾಡುತ್ತಿರ್ಪೆ" ಎನ್ನಂ ಸಲಹುವುದೆ ನೀವುಗಳಿಗೊಂದು ಭಾರಮಪ್ಪುದು, ಪೋಗಿಮಾನಂದದಿಂ ಜೀವನಸಾಗಿಸಿರೈ, ಆನಿಲ್ಲೇ ಸುಖದಿಂದಿರ್ಪೆ"ಮೆಂತೆನಲ್ಕೆ ಪುತ್ರ ತಾನೊಪ್ಪದೆ ಮತ್ತಂ ಮತ್ತಂ ಪೇಳಿಂ ಬೇಡಿಂ ತಾನಾತನಂ ಪಟ್ಟಣವಾಸಕೊಪ್ಪಿಸಿದಂ.

2 ಕಾಮೆಂಟ್‌ಗಳು: